Showing posts with label Vadiraja. Show all posts
Showing posts with label Vadiraja. Show all posts

Monday, September 28, 2026

ನಾಲ್ಕು ಜಡೆಗಳ ಸುಂದರಿ


ಹಿಂದಿನ ಒಂದು ಸಂಚಿಕೆಯಲ್ಲಿ, "ಶ್ರೀಕೃಷ್ಣನಿಂದ ಅಮೃತತ್ವದ ಕಡೆಗೆ" ಎಂಬ ಶೀರ್ಷಿಕೆಯ ಅಡಿಯಲ್ಲಿ, ಸೋದೆ ಮಠಾಧೀಶರಾಗಿದ್ದ ಶ್ರೀ ವಾದಿರಾಜರು ಕ್ಷೀರ ಸಮುದ್ರ ಮಥನದ ಅಂಶಗಳನ್ನು ಕೇಂದ್ರವಾಗಿಟ್ಟುಕೊಂಡು ಅವನ್ನು ಹೇಗೆ ತಮ್ಮ "ಶ್ರೀರುಕ್ಮಿಣೀಶ ವಿಜಯ" ಮಹಾಕಾವ್ಯದ ಮಂಗಳಾಚರಣೆ ಶ್ಲೋಕವಾಗಿ ಪರಿವರ್ತಿಸಿದ್ದಾರೆ ಎನ್ನುವುದನ್ನು ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಇದರ ಮುಂದಿನ ಸಂಚಿಕೆಯಲ್ಲಿ, "ಸಮ ಮತ್ತು ಸಮನಾ" ಎಂಬ ಶೀರ್ಷಿಕೆಯ ಅಡಿಯಲ್ಲಿ, ಶ್ರೀಕೃಷ್ಣ ಮತ್ತು ರುಕ್ಮಿಣಿ ದೇವಿಯರ (ಸಮಾನಾಂತರವಾಗಿ ಶ್ರೀ ನಾರಾಯಣ ಮತ್ತು ಮಹಾಲಕ್ಷ್ಮಿ ದೇವಿಯರ) ಬಾಂಧವ್ಯದ ವಿಶೇಷ ಏನು ಎನ್ನುವುದನ್ನು ಸ್ವಲ್ಪ ಮಟ್ಟಿಗೆ ಚರ್ಚಿಸಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಇವುಗಳ ಹಿನ್ನೆಲಿಯಲ್ಲಿ ಶ್ರೀ ವಾದಿರಾಜರು ತಮ್ಮ ಮಹಾಕಾವ್ಯದಲ್ಲಿ ಶ್ರೀಕೃಷ್ಣ ಮತ್ತು ಹಯಗ್ರೀವ ರೂಪದ ನಂತರ ಮಾಡಿರುವ ರುಕ್ಮಿಣಿ ದೇವಿ ಕುರಿತಾದ ಪ್ರಾರ್ಥನೆ ಬಗ್ಗೆ ಸ್ವಲ್ಪ ನೋಡೋಣ.

******

ಸೀತಾದೇವಿ, ರುಕ್ಮಿಣಿ ಮೊದಲಾದ ರೂಪಗಳು ಶ್ರೀ ಮಹಾಲಕ್ಷ್ಮಿ ದೇವಿಯ ಅವತಾರ ರೂಪಗಳು. ಮಹಾವಿಷ್ಣುವಿನ ಶ್ರೀರಾಮ, ಶ್ರೀಕೃಷ್ಣ ಮುಂತಾದ ರೂಪಗಳ ರೀತಿಯಲ್ಲಿ. ಮೂಲ ರೂಪ ಮತ್ತು ಅವತಾರ ರೂಪಗಳ ಗುಣಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಇದೊಂದು ಪ್ರಮೇಯ. ಗಣಿತದಲ್ಲಿ ಜ್ಯಾಮಿತಿ (Geometry) ಕಲಿಯುವಾಗ ದತ್ತ (Given Data) ಎನ್ನುವಂತೆ. ಅಲ್ಲಿಂದ ಮುಂದಿನ ಲೆಕ್ಕ. ಹೀಗೆ. ಮಹಾಲಕ್ಷ್ಮಿಗೆ ಸಂಸಾರ, ಹುಟ್ಟು-ಸಾವು, ಸುಖ-ದುಃಖ ಮೊದಲಾದ ವೈಪರೀತ್ಯಗಳಿಲ್ಲ. ಅವಳು ಪರಮಾತ್ಮನ ಎಲ್ಲ ರೂಪಗಳ ಜೊತೆಯಲ್ಲಿಯೂ, ಎಲ್ಲ ದೇಶ-ಕಾಲಗಳಲ್ಲಿಯೂ ಸಮ-ಸಮವಾಗಿ ಇರುತ್ತಾಳೆ. ಇಬ್ಬರ ನಡುವೆ ಇರುವ ವ್ಯತ್ಯಾಸ ಏನು ಎನ್ನುವುದನ್ನು ಹಿಂದಿನ "ಸಮ ಮತ್ತು ಸಮನಾ" ಎನ್ನುವ ಸಂಚಿಕೆಯಲ್ಲಿ ನೋಡಿದ್ದೇವೆ. 

ಈ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿದೇವಿಯ ಬಗ್ಗೆ ನಮಗೆ ಗೊತ್ತಿರುವುದುದೇನು? ಅವಳ ರೂಪ ಹೇಗಿದೆ? ನಾವು ಕಾಣುವ ಮಹಾಲಕ್ಷ್ಮಿಯ ಚಿತ್ರಗಳಲ್ಲಿ (ಫೋಟೋಗಳು) ಇರುವ ವಿವರಗಳು ಅವಳ ಬಗ್ಗೆ ಶ್ರೀಸೂಕ್ತ ಮತ್ತು ಇತರ ವೈದಿಕ ವಾಂಗ್ಮಯ ಕೊಡುವ ವಿವರಗಳ ಅನುಸಾರ ಇರುತ್ತವೆ. ಮುಖ್ಯವಾಗಿ "ಯಾ ಸಾ ಪದ್ಮಾಸನಸ್ಥಾ ....." ಎಂದು ವರ್ಣಿಸುವ ಶ್ಲೋಕದಿಂದ ಬಂದವು. ಇದೇ ರೀತಿ ಅವಳ ರೂಪದ ಅಂಶಗಳ ವರ್ಣನೆಗಳು ವೈದಿಕ ವಾಂಗ್ಮಯದಲ್ಲಿ ಬೇರೆಡೆಗಳಲ್ಲಿ ಕಂಡುಬರುತ್ತವೆ. ಅವು ಹೇಳುವ ವಿವರಗಳೇನು?
  • ಅವಳು ಗುಂಗುರು ಕೂದಲ ಸುಂದರಿ. ವೆಂಕಟರಮಣನ ಬಿಂಕದ ರಾಣಿ!
  • ಕಾಲಂದಿಗೆಗಳಿಂದ (ಗೆಜ್ಜೆಗಳು) ಶೋಭಿಸುವ ಪಾದಗಳು. (ಗೆಜ್ಜೆ ಕಾಲ್ಗಳ ನಾದ!)
  • ಅವಳ ಪಾದಗಳು ಬಣ್ಣದಲ್ಲಿ ಕಮಲದಂತೆ ಮತ್ತು ಮೃದು. 
  • ಸದಾ ನಗು ಮುಖದ ದೇವಿ. ಹಸನ್ಮುಖದ ರೂಪ.
  • ಶ್ರೀಸೂಕ್ತ ಹೇಳುವಂತೆ "ವಿಪುಲ ಕಟಿ ತಟೀ". ಸಣ್ಣ ನಡು ಉಳ್ಳವಳು.  
  • "ಪದ್ಮಪತ್ರಯತಾಕ್ಷಿ". ಪಂಕಜ ಲೋಚನೆ. (ಕಮಲದ ಎಲೆಯಂತೆ ಕಣ್ಣುಗಳು). 
  • "ಶುಭ್ರ ವಸ್ತ್ರೋತ್ತರೀಯಾ". ಒಳ್ಳೆಯ ವಸ್ತ್ರಗಳನ್ನು ಧರಿಸಿರುವವಳು.
  • ಬೇಡಿದವರಿಗೆ ಅಂಕೆಯಿಲ್ಲದ ಭಾಗ್ಯ ರಾಶಿಯನ್ನೇ ಕೊಡುವವಳು.
  • ಕಂಕಣ (ಧರಿಸಿದ) ಕೈಗಳ ತಿರುವುತ್ತಾ ಬರುವವಳು.
  • ಒಟ್ಟಿನಲ್ಲಿ ಸಕಲ ಸನ್ಮಂಗಳಗಳನ್ನೂ ಕೊಡುವ ದೇವಿ. 
ಈ ಲಕ್ಷಣಗಳನ್ನು ಶ್ರೀ ವಾದಿರಾಜರು ತಮ್ಮ ಮಹಾಕಾವ್ಯದ ಕಥಾನಾಯಕಿ ರುಕ್ಮಿಣಿ ದೇವಿಯ ಸ್ತುತಿಯಲ್ಲಿ ಪ್ರಯೋಗಿಸಿದ್ದಾರೆ.
******

ಪರಮಪುರುಷನು ಅತ್ಯಂತ ಸುಂದರನು. ಅವನಿಗಿಂತ ಸುಂದರ ಇನ್ನೊಬ್ಬನಿಲ್ಲ. ಇವಳು ಅವನ ಮಡದಿ ಸುಂದರಿ. "ಸುಂದರಿ" ಅನ್ನುವ ಪದವನ್ನು ಕಂಡ ಕಂಡವರಿಗೆಲ್ಲಾ ಅನ್ವಯಿಸಿ ಹೇಳುವ ಅಭ್ಯಾಸ ನಮಗೆ ಉಂಟು. "ಸುಂದರ" ಅನ್ನುವ ಪದಕ್ಕೂ ಹಾಗೆಯೇ! ಲೋಕದಲ್ಲಿ ಸ್ತ್ರೀಯರಿಗೆ ಪುರುಷರೂ, ಪುರುಷರಿಗೆ ಸ್ತ್ರೀಯರೂ ಚೆನ್ನಾಗಿ ಕಾಣುವುದು ಸ್ವಾಭಾವಿಕ. ಆದರೆ ನಾವುಗಳು ಶ್ರೀಹರಿಯನ್ನು ನಮಸ್ಕರಿಸುವಾಗ ಹೇಳುವುದೇನು? "ಪುಂಸಾಂ ಮೋಹನ ರೂಪಾಯ, ಪುಣ್ಯ ಶ್ಲೋಕಾಯ ಮಂಗಳಂ". ಗಂಡಸರಿಗೂ ಮೋಹ ತರಿಸುವ ರೂಪ ಅವನದು. ಅವನ ಸ್ತ್ರೀರೂಪವಾದ "ಮೋಹಿನಿ ರೂಪ" ಸಹ ಅಷ್ಟೇ. ಸಮುದ್ರ ಮಥನ ಕಾಲದಲ್ಲಿ ದುಷ್ಟರಾದ ದೈತ್ಯರು ಅಮೃತದ ಗಡಿಗೆ ಒಯ್ದು ಓಡಿಹೋದಾಗ ಮೋಹಿನಿ ರೂಪ ಕಾಣಿಸಿಕೊಂಡಿತು. ಆಗ ಅವರಾಗಿ ಅಮೃತದ ಗಡಿಗೆ ತಂದು ಮೋಹಿನಿಗೆ ಒಪ್ಪಿಸಿದರು! ದೇವ-ದಾನವರೆಲ್ಲರೂ ಅಮೃತವನ್ನು ಮರೆತು ಆ ದಿವ್ಯ ರೂಪ ನೋಡುತ್ತಾ ಮೈಮರೆತರು. ಮಹಾಲಕ್ಷ್ಮಿಯೂ ಆ ರೂಪ ನೋಡಿ ಬೆರಗಾದಳಂತೆ! "ಇದೇನು ನನ್ನ ಗಂಡನ ರೂಪ? ಸದಾ ಅವನ ಜೊತೆ ಇದ್ದರೂ ನನಗೇ ಇನ್ನೂ ಅರ್ಥವಾಗಿಲ್ಲವಲ್ಲ!" ಎಂದು ಆಶ್ಚರ್ಯಚಕಿತಳಾದಳಂತೆ. ಶ್ರೀವಾದಿರಾಜರ "ದಶಾವತಾರ ಸ್ತುತಿ" ಕೃತಿಯಲ್ಲಿ ಈ ವರ್ಣನೆ ಕಾಣಬಹದುದು. ಅಂತಹ ಸುಂದರ ಅವನು. ಅವನಿಗೆ ತಕ್ಕ ಸುಂದರಿ ಇವಳು. ಆದ್ದರಿಂದ "ಅಂಬಾo ತಾಂ ಪ್ರಣತೋಸ್ಮಿ".

ಸಾಮಾನ್ಯವಾಗಿ "ನಮಸ್ಕಾರ ಮಾಡುತ್ತೇನೆ" ಎಂದು ಹೇಳುವಾಗ "ನತೋಸ್ಮಿ" ಅನ್ನಬೇಕು. "ಪ್ರ" ಏಕೆ ಸೇರಿತು? ಇದು ಸುಮ್ಮನೆ ಮಾಡುವ ನಮಸ್ಕಾರವಲ್ಲ. ಅತಿ ಹೆಚ್ಚು ಗೌರವದಿಂದ ಮಾಡುವ ನಮಸ್ಕಾರ. ಆದ್ದರಿಂದ "ಪ್ರಣತೋಸ್ಮಿ". ಬರೀ ಕಾಟಾಚಾರಕ್ಕೆ ಅಥವಾ ಅವರಿವರು ಹೇಳಿದರೆಂದು "ಅಡ್ಡಬಿದ್ದೆ" ಎಂದಲ್ಲ. "ನಾನು ಇಷ್ಟಪಟ್ಟು ಬಾಗಿ (ಮೈ ಬಗ್ಗಿಸಿ) ಅಡ್ಡಬಿದ್ದೆ" ಎಂದು ಅರ್ಥ.

ಈಗ ನಮಸ್ಕರಿಸುತ್ತಿರುವುದು ಶ್ರೀಕೃಷ್ಣನ ಜೊತೆಯಲ್ಲಿರುವ ರುಕ್ಮಿಣೀ ರೂಪಕ್ಕೆ. ಆದ ಕಾರಣ "ಕೃಷ್ಣ ರಮಣೀo". "ರುಗ್ಮ" ಅಂದರೆ ಬಂಗಾರ. ದೇವಿಯ ಮೈಬಣ್ಣ ಬಂಗಾರದ್ದು. ಆದ್ದರಿಂದ "ರುಗ್ಮಿಣೀ" ಅಥವಾ "ರುಕ್ಮಿಣೀ" ಎಂದು ಹೆಸರು. (ಶ್ರೀ ಸೂಕ್ತ "ಹಿರಣ್ಯವರ್ಣಾo ಹರಿಣೀo" ಎಂದು ಹೇಳುತ್ತದೆ).

ಶ್ರೀಕೃಷ್ಣನು "ಕುಟಿಲ ಕುಂತಲಂ, ಕುವಲಯ ದಳ ನೀಲಂ". ಗುಂಗುರು ಕೂದಲ ಸುಂದರ. ಇವಳು ಗುಂಗುರು ಕೂದಲ ಸುಂದರಿ. ಕುಟಿಲ ಅಂದರೆ ನೇರ ಇಲ್ಲದ್ದು. (ಕುಟಿಲ ನೀತಿ ಅನ್ನುತ್ತಾರೆ. ಅದು ನಾವೆಣಿಸಿದಂತೆ ಪದಗಳು ಹೇಳುವ ನೇರ ಅರ್ಥ ಬರುವಂತಲ್ಲ. ಸುತ್ತಿಕೊಂಡು ಹೋಗುವ ರೀತಿ. ಇಲ್ಲಿ ತೋರಿಸಿ, ಅಲ್ಲಿ ಹೊಡೆಯುವಂತಹುದು). ಆದ್ದರಿಂದ ಗುಂಗುರು ಕೂದಲು. ಅಷ್ಟು ಮಾತ್ರ ಅಲ್ಲ. ಕೆಲವರಿಗೆ ಕೂದಲೇನೋ ಉದ್ದ ಇರುತ್ತದೆ. ಆದರೆ ತೆಳುವಾದ ಕೂದಲು. ಕೆಲವರಿಗೆ ಒಂದು ದಪ್ಪ ಜಡೆ ಹಾಕಬಹುದು. ಮತ್ತೆ ಕೆಲವರಿಗೆ ಸುಮಾರಾಗಿ ಎರಡು ಜಡೆ. ರುಕ್ಮಿಣಿಗೆ ಹಾಗಲ್ಲ. ನಾಲ್ಕು ಜಡೆ ಹಾಕುವಷ್ಟಕ್ಕೆ ಬೇಕಾದ ದಟ್ಟವಾದ ಕೂದಲು! ಆದ್ದರಿಂದ ಅವಳು ಬರೀ ಸುಂದರಿಯಲ್ಲ. "ಲಂಬಾಲಕಾಂ" ಸುಂದರಿ. 

ದೇಹದಲ್ಲಿ ಕೆಲವು ಅಂಗಗಳು ಚಿಕ್ಕವಾಗಿರಬೇಕು. ಕೆಲವು ದೊಡ್ಡದಿರಬೇಕು. ಹೀಗೆ ಹೀಗೆ ಇರಬೇಕು ಎಂದು ಲಕ್ಷಣ ಶಾಸ್ತ್ರ ಹೇಳುತ್ತದೆ. ಒಟ್ಟಿನಲ್ಲಿ ಮೂವತ್ತೆರಡು ಲಕ್ಷಣಗಳು. ಇಪ್ಪತ್ನಾಲ್ಕು-ಇಪ್ಪತ್ತೈದು ಲಕ್ಷಣಗಳಿದ್ದವರು ಮಿಸ್ ಯೂನಿವರ್ಸ್ ಅಥವಾ ಮಿಸ್ ವರ್ಲ್ಡ್ ಆಗುತ್ತಾರೆ. ಈ ದೇವಿಯಾದರೋ ಎಲ್ಲ ಮೂವತ್ತೆರಡು ಒಳ್ಳೆಯ ಲ್ಲಕ್ಷಣಗಳನ್ನು ಹೊಂದಿರುವ ದೇವಿ. ಆದ್ದರಿಂದ ಅವಳು "ಕುಚಭಾರಭೀರುವಿಲಾಸನ್ಮಧ್ಯಾo". ಸಣ್ಣ ನಡು. ಆ ನಡುವಿನಲ್ಲಿ ಸಣ್ಣ ಡಾಬು. ಸೊಂಟದ ಮೇಲೆ ಮತ್ತು ಕೆಳಗೆ ಮಾಟವಾದ ದೇಹ ಸೌಷ್ಠವ.  

******

ಎಲ್ಲರಿಗೂ ಕೇಳಿದ ಆಭರಣಗಳನ್ನು ಕೊಡುವ ದೇವಿ ತಾನು ಸ್ವತಃ ಎಂತಹ ಆಭರಣಗಳನ್ನು ಧರಿಸಿರಬೇಕು? ನಾವು ಕಂಡಂತೆ ಯಾವುದೋ "Hallmark" ರೀತಿಯ ಲೋಕಲ್ ಚಿನ್ನದ ಆಭರಣಗಳಲ್ಲ. "ಜಾಂಬೂನ" ಬಂಗಾರದಿಂದ ಮಾಡಿದ ಒಡವೆಗಳು. ಇದನ್ನು ಡೂಪ್ಲಿಕೇಟ್ ಮಾಡಲು ಬರುವುದಿಲ್ಲ.

ಮೇರು ಪರ್ವತ ಚಿನ್ನದ ಪರ್ವತವಂತೆ. ಎಲ್ಲಾ ಬೆಟ್ಟ, ಗುಡ್ಡ, ಪರ್ವತಗಳಂತೆ ಕಲ್ಲು-ಮಣ್ಣು-ಹಿಮ ಇವುಗಳಿಂದ ಮಾಡಿದ ಪರ್ವತವಲ್ಲ. ಅದು ಐದು ಶಿಖರಗಳ ಪರ್ವತ. ಇಡೀ ಪ್ರಪಂಚ ಅದರ ಸುತ್ತ ಸುತ್ತಿಕೊಂಡಿದೆ. ಈ ಮೇರು ಪರ್ವತದ ಶಿಖರದ ಮೇಲೆ ಒಂದು ನೇರಿಳೆ ಮರ ಇದೆ. ಜಂಬೂ ಫಲ ಅಂದರೆ ನೇರಿಳೆ ಹಣ್ಣು. ಅದು ನಾವು ಕಾಣುವಂತೆ ಹೆಬ್ಬೆಟ್ಟು ಗಾತ್ರದ ನೇರಿಳೆ ಹಣ್ಣುಗಳನ್ನು ಕೊಡುವ ಮರವಲ್ಲ. ಒಂದೊಂದು ನೇರಿಳೆ ಹಣ್ಣು ಒಂದೊಂದು ಕಲ್ಲಂಗಡಿ ಹಣ್ಣಿನ ಗಾತ್ರದ್ದು. ಮರದ ತುಂಬಾ ಜೋತುಬಿದ್ದಿರುವ ಹಣ್ಣುಗಳು. ಪಕ್ವವಾಗಿ ಈ ಹಣ್ಣುಗಳು ಮರದಿಂದ ಬೇರ್ಪಟ್ಟು ಕೆಳಗೆ ಬೀಳುತ್ತವೆ. ಹೀಗೆ ಬಿದ್ದಾಗ ಆ ಹಣ್ಣುಗಳು ಒಡೆದು ಅವುಗಳ ರಸ ಕಾಲುವೆಯಂತೆ ಹರಿದು ಬರುತ್ತದೆ. ಮರದ ಕೆಳಗಿನ ಬಂಗಾರ ಹೀಗೆ ಹರಿಯುತ್ತಿರುವ ನೇರಿಳೆ ರಸ ಸೇರಿ "ನೇರಿಳೆ ಬಣ್ಣದ ಬಂಗಾರ" ಆಗುತ್ತದೆ. ಈ ಬಂಗಾರಕ್ಕೆ "ಜಾಂಬೂನದಾ" ಬಂಗಾರ ಎಂದು ಹೆಸರು. 

ದೇವಿಯ ಒಡವೆಗಳು ಈ ಬಗೆಯ ಬಂಗಾರದಿಂದ ಮಾಡಿದುವು. ಅತಿ ಶುದ್ಧ, ದೈವಿಕ ಚಿನ್ನ ಅದು. ಆದರಿಂದ ಅವಳು "ಜಾಂಬೂನದಾಲಂಕೃತಾಂ".  

ಇಂತಹ ಹೊಳೆಯುತ್ತಿರುವ ಜಾಂಬೂನ ಬಂಗಾರದ ಗೆಜ್ಜೆಗಳು ಅವಳ ಕಮಲದಂತಹ ಮೃದುವಾದ, ಮಾಟವಾದ ಪಾದಗಳ ಸುತ್ತ ಕುಳಿತು ಸದಾ ಸುಮಧುರ ಶಬ್ದ ಮಾಡುತ್ತಿರುತ್ತವೆ. (ಹೀಗೆ ಯಾಕೆ? ಅವಳು ಸುಮ್ಮನೆ ಕುಳಿತಿರುವವಳಲ್ಲ. ಯಾವಾಗಲೂ ಕೆಲಸ ಮಾಡುತ್ತಾ ಓಡಾಡುತ್ತಿರುತ್ತಾಳೆ. ಎಂತಹ ಕೆಲಸಗಳು? ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ). ಆದ್ದರಿಂದ "ಸಿಂಜನ್ನೂಪುರ ಶೋಭಿಪಾದಕಮಲಾಂ".

ಕಮಲದಂತಹ ಅರಳಿದ ಕಣ್ಣಿರುವುದರಿಂದ "ಕಂಜಾಕ್ಷೀ". ಅವಳು ಯಾವಾಗಲೂ ನಗೆಮೊಗದ ಸುಂದರಿ. ಒಮ್ಮೆಯೂ ಮುಖ ಗಂಟು ಹಾಕಿಕೊಂಡವಳಲ್ಲ. ಸದಾಕಾಲವೂ ನಗುನಗುತ್ತಿರುವವಳು. ಈ ಕಾರಣದಿಂದ "ಮಂದಸ್ಮಿತೋದ್ಯುನ್ಮುಖೀಮ್". ಅವಳ ಕೈನಲ್ಲಿರುವ ಕಂಕಣಗಳು ಒಂದು ಕಡೆ ಹೊಳೆಯುತ್ತವೆ. ಮತ್ತೆ ಒಂದಕ್ಕೊಂದು ತಾಕುವಾಗ ಸುಮಧುರ ಶಬ್ದ ಮಾಡುತ್ತವೆ. ಆದ್ದರಿಂದ "ಕಣತ್ಕಂಕಣಾಮ್". ಇವೆಲ್ಲಕ್ಕೆ ಹೊಂದುವಂತೆ ತಕ್ಕ ವಸ್ತ್ರಗಳನ್ನು ಧರಿಸಿದ್ದಾಳೆ. ಶುಭ್ರ ವಸ್ತ್ರೋತ್ತರೀಯಾ. ಹೀಗಿರುವುದರಿಂದ "ಸುವಾಸನಾo". 

ಮಗನಾದ ಚತುರ್ಮುಖ ಬ್ರಹ್ಮನಿಂದ ಪ್ರಾರಂಭಿಸಿ ಸಮಸ್ತ ದೇವತೆಗಳೂ ದೇವಿಯು ನಮ್ಮ ಕಡೆ ನೋಡಲಿ ಎಂದು ಕಾಯುತ್ತಿದ್ದಾರೆ. ಕೆಲಸ ಏನಾದರೂ ಹೇಳಲಿ ಎಂದು ಹಾತೊರೆಯುತ್ತಾರೆ. ಹೀಗಿರುವುದರಿಂದ "ಶಂಭಾದೈ: ಪರಿಸೇವಿತಾಂ".

******

ಹೀಗೆ ಮೇಲೆ ಹೇಳಿದ ಎಲ್ಲ ಗುಣ-ಲಕ್ಷಣಗಳನ್ನೂ ಒಂದೆಡೆ ಒಟ್ಟಿಗೆ ಸೇರಿಸಿ "ಶಾರ್ದೂಲವಿಕ್ರೀಡಿತ" ವೃತ್ತದಲ್ಲಿ ಶ್ರೀವಾದಿರಾಜರು ದೇವಿ ರುಕ್ಮಿಣಿಯ ವಂದನೆಯ ಈ ಶ್ಲೋಕವನ್ನು ತಮ್ಮ "ಶ್ರೀರುಕ್ಮಿಣೀಶ ವಿಜಯ" ಮಹಾಕಾವ್ಯದಲ್ಲಿ ರಚಿಸಿದ್ದಾರೆ:

ಸಿಂಜನ್ನೂಪುರಶೋಭಿಪಾದಕಮಲಾಂ ಮಂದಸ್ಮಿತೋದ್ಯನ್ಮುಖೀo 
ಕಂಜಾಕ್ಷೀo ಕುಚಭಾರಭೀರುವಿಲಸನ್ಮಧ್ಯಾo ಕ್ಕಣತ್ಕoಕಣಾo 
ಶಂಭ್ವಾದೈ: ಪರಿಸೇವಿತಾಂ ಸುವಸನಾo ಜಾಂಬೂನದಾಲಂಕೃತಾಂ
ಅಂಬಾo ತಾಂ ಪ್ರಣತೋಸ್ಮಿ ಕೃಷ್ಣರಮಣೀo ಲಂಬಾಲಕಾಂ ರುಕ್ಮಿಣೀo  

ಪ್ರತಿಯೊಂದು ಪದಪುಂಜಕ್ಕೂ ಮೇಲಿನ ವಿವರಣೆಯಲ್ಲಿ ಹಿನ್ನೆಲೆ ಮತ್ತು ಅರ್ಥ ಕೊಟ್ಟಿರುವುದರಿಂದ ಮತ್ತೆ ಶ್ಲೋಕದ ಸಾರಾಂಶ ಕೊಡಬೇಕಾಗಿಲ್ಲ. 

ತಾಯಿ (ಮಹಾಲಕ್ಷ್ಮಿ) ರುಕ್ಮಿಣಿದೇವಿ ಈ ರೀತಿ ಇರುವಳೆಂದು ಕಲ್ಪಿಸಿಕೊಂಡು ಶ್ಲೋಕವನ್ನು ಹೇಳಿದರೆ ಅದರ ಅನುಭವವೇ ಬೇರೆ ರೀತಿಯದು. ಅನೇಕರು ಈ ಶ್ಲೋಕವನ್ನು ಪ್ರತಿನಿತ್ಯ ಪಾರಾಯಣಕ್ಕೆ ಉಪಯೋಗಿಸಿಕೊಳ್ಳುತ್ತಾರೆ.

******

ಹೆಚ್ಚಿನ ಅಭ್ಯಾಸ ಮತ್ತು ಸಾಧನೆ ಮಾಡಿದವರಿಗೆ ಇನ್ನೂ ಅನೇಕ ವಿಶೇಷಾರ್ಥಗಳು ಹೊಳೆದರೆ ಅದರಲ್ಲಿ ಆಶ್ಚರ್ಯ ಪಡುವುದು ಏನೂ ಇಲ್ಲ. ಅಧ್ಯಯನ ಬಲಿತಂತೆ ಹೊಸ ಹೊಳಹುಗಳು ತಾವಾಗಿಯೇ ಮನಸ್ಸಿನಲ್ಲಿ ಮೂಡುತ್ತವೆ. ವಿಶೇಷ ಆನಂದದ ಅನುಭವ ಆಗುತ್ತದೆ.

Saturday, September 19, 2026

ಶ್ರೀಕೃಷ್ಣನಿಂದ ಅಮೃತತ್ವದ ಕಡೆಗೆ


ಮಹಾಕಾವ್ಯಗಳ ಸಂದರ್ಭದಲ್ಲಿ ಕೆಲವು ವಿಚಾರಗಳನ್ನು ಹಿಂದಿನ ಸಂಚಿಕೆಗಳಲ್ಲಿ ನೋಡಿದೆವು. "ವಾದಿರಾಜರ ರುಕ್ಮಿಣೀಶ ವಿಜಯ" ಎನ್ನುವ ಶೀರ್ಷಿಕೆಯ ಸಂಚಿಕೆಯಲ್ಲಿ ಶ್ರೀಕೃಷ್ಣನ ಜೀವನ ಕಾಲದ ಘಟನೆಗಳನ್ನು ಆಧರಿಸಿ ರಚಿತವಾಗಿರುವ ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯ" ಮತ್ತು ಶ್ರೀ ವಾದಿರಾಜರ "ಶ್ರೀ ರುಕ್ಮಿಣೀಶ ವಿಜಯ" ಕೃತಿಗಳ ಬಗ್ಗೆ ಸ್ವಲ್ಪ ವಿಚಾರ ಮಾಡಿದ್ದೆವು. "ವಾದಿರಾಜರ ರುಕ್ಮಿಣೀಶ ವಿಜಯ" ಎಂಬ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಉಡುಪಿಯಲ್ಲಿರುವ ತಮ್ಮ ಗ್ರಂಥವನ್ನು ಇಪ್ಪತ್ತು ದಿನಗಳ ಅವಧಿಯಲ್ಲಿ ಪುಣೆಗೆ ತರಿಸಿಕೊಂಡು, ಅಲ್ಲಿನ ವಿದ್ವನ್ಮಂಡಳಿ ಮುಂದೆ ಪರಿಶೀಲನೆಗೆ ಕೊಡುವುದಾಗಿ ಪೇಶ್ವೆಯವರಿಗೆ ಮಾತುಕೊಟ್ಟು, ದಿನಕ್ಕೊಂದು ಸರ್ಗದಂತೆ ಹತ್ತೊಂಬತ್ತು ದಿನಗಳಲ್ಲಿ ಗ್ರಂಥ ರಚನೆ ಮಾಡಿದರೆಂದು ಹೇಳಿತ್ತು. ಪ್ರತಿನಿತ್ಯ ತಮ್ಮ ಪಾಠ-ಪ್ರವಚನದ ಅಂಗವಾದ ಶ್ರೀಮದ್ಭಾಗವತದ ಘಟನೆಗಳನ್ನು ಹೇಗೆ ತಮ್ಮ ಕಾವ್ಯದಲ್ಲಿ ಅಳವಡಿಸಿಕೊಂಡರು ಎನ್ನುವುದಕ್ಕೆ ಒಂದು ಉದಾಹರಣೆಯಾಗಿ ಶ್ರೀಕೃಷ್ಣನ ಜಯಂತಿಯ ಸಂದರ್ಭವನ್ನು "ರುಕ್ಮಿಣೀಶ ವಿಜಯದಲ್ಲಿ ಶ್ರೀಕೃಷ್ಣ ಜಯಂತಿ" ಎಂಬ ಶೀರ್ಷಿಕೆಯ ಸಂಚಿಕೆಯಲ್ಲಿ ನೋಡಿದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

******

ಪ್ರಾಚೀನ ಗ್ರಂಥ ರಚನಾಕಾರರು ತಮ್ಮ ಗ್ರಂಥಗಳ ಪ್ರಾರಂಭದಲ್ಲಿ ತಮ್ಮ ಕುಲದೈವ ಅಥವಾ ಇಷ್ಟದೈವವನ್ನು ಪ್ರಾರ್ಥಿಸುವ ಶ್ಲೋಕಗಳನ್ನು ರಚಿಸಿ, ನಂತರ ಮುಂದಿನ ಕಥಾ ಭಾಗಗಳನ್ನು ನಿರೂಪಿಸುವುದು ನಡೆದು ಬಂದಿರುವ ಪದ್ಧತಿ. ಇದನ್ನು "ಮಂಗಳಾಚರಣೆ" ಎಂದು ಕರೆಯುವುದು ರೂಢಿ. ಶ್ರೀ ವಾದಿರಾಜರು ಇದೇ ರೀತಿಯಲ್ಲಿ "ಶ್ರೀ ರುಕ್ಮಿಣೀಶ ವಿಜಯ" ಗ್ರಂಥದ ಪ್ರಾರಂಭದಲ್ಲಿ ಮೊದಲಿಗೆ ಕಥಾನಾಯಕನಾದ ಶ್ರೀಕೃಷ್ಣ, ತಮ್ಮ ಇಷ್ಟ ದೈವವಾದ ಶ್ರೀ ಹಯವದನನ, ನಂತರ ಕಥಾನಾಯಕಿಯಾದ ರುಕ್ಮಿಣಿ (ಸೀತೆ, ರುಕ್ಮಿಣಿ ಮೊದಲಾದವರು ವಾಸ್ತವವಾಗಿ ಲಕ್ಷ್ಮೀದೇವಿಯೇ ಎಂದು ಪ್ರಮೇಯ) ಇವರನ್ನು ಪ್ರಾರ್ಥಿಸಿ ಶ್ಲೋಕಗಳನ್ನು ರಚಿಸಿದ್ದಾರೆ. ಇಲ್ಲಿಯೂ ಸಹ ಎಲ್ಲರಿಗೂ ಗೊತ್ತಿರುವ ಮತ್ತು ಶ್ರೀಮದ್ಭಗವತಾದಿ ಗ್ರಂಥಗಳಲ್ಲಿ ತಿಳಿಸಿರುವ ಅಂಶಗಳನ್ನೇ ಕಾವ್ಯಕ್ಕೆ ಹೊಂದುವ ರೀತಿಯಲ್ಲಿ ರೂಪಾಂತರಗೊಳಿಸಿ ಪ್ರಯೋಗಿಸಿದ್ದಾರೆ.

ಸಾಮಾನ್ಯವಾಗಿ ಕಾವ್ಯಗಳಲ್ಲಿ ಮಂಗಳಾಚರಣೆ ಮಾಡುವಾಗ ಕವಿಯ ಕುಲದೈವ ಅಥವಾ ಇಷ್ಟದೈವಕ್ಕೂ, ಮತ್ತು ನಂತರ ಬರುವ ಕಾವ್ಯದ ಕಥೆಗೂ ಸಂಬಂಧ ಇರುವುದಿಲ್ಲ. ಆದರೆ ಶ್ರೀ ರುಕ್ಮಿಣೀಶ ವಿಜಯದಲ್ಲಿ ಶ್ರೀಕೃಷ್ಣ-ರುಕ್ಮಿಣಿಯರು ಕಥಾನಾಯಕ ಮತ್ತು ಕಥಾನಾಯಕಿ ಆಗಿರುವುದು ಒಂದು ಗಮನಿಸಬೇಕಾದ ಅಂಶ.   

ಈ ರೂಪಾಂತರ ಪ್ರಯೋಗವನ್ನು ಯಾವ ರೀತಿ ಮಾಡಿದ್ದಾರೆ? ಈಗ ಇರುವ ಮತ್ತು ಎಲ್ಲರಿಗೂ ತಿಳಿದಿರುವ ಅಂಶಗಳನ್ನು ಹೇಗೆ ಬೇರೆಯ ಅರ್ಥ ಕೊಟ್ಟು ಉಪಯೋಗಿಸಿಕೊಂಡಿದ್ದಾರೆ? ಇವಲ್ಲದೇ ಇನ್ನೇನಾದರೂ ವಿಶೇಷಗಳಿವೆಯೇ? ರಚನೆಯ ಸಂದರ್ಭದಲ್ಲಿ ತಿಳಿದಿದ್ದ ಅಂಶಗಳನ್ನು ಹೇಗೆ ಇನ್ನೂ ಸ್ವಾರಸ್ಯಕರವಾಗಿ ಪರಿವರ್ತಿಸಿದರು? ಈ ವಿಷಯಗಳನ್ನು ಗಮನಿಸಲು ಶ್ರೀಕೃಷ್ಣನ ಪ್ರಾರ್ಥನೆಯ ರೂಪದ ಕಾವ್ಯದ ಮೊದಲ ಶ್ಲೋಕವನ್ನು ಸ್ವಲ್ಪ ವಿವರವಾಗಿ ಈಗ ನೋಡೋಣ. 

******

ರಕ್ಕಸರ ಹೊಡೆತದಿಂದ ಝರ್ಜರಿತರಾದ ದೇವತೆಗಳು ಮುಂದಿನ ಕದನಗಳಲ್ಲಿ ಸಾವು ಬರದಂತೆ ಇರಲು ಅಮೃತ ಸೇವನೆ ದಾರಿ ಎಂದು ಕಂಡುಕೊಂಡರು. ನಂತರ ಕ್ಷೀರ ಸಮುದ್ರ (ಹಾಲಿನ ಕಡಲು) ಮಥನ ಮಾಡಿದುದರಿಂದ ದೇವತೆಗಳಿಗೆ ಅಮೃತ ಸಿಕ್ಕಿತು. ಅಮೃತ ಸೇವನೆಯಿಂದ ಮುಂದೆ ಅವರಿಗೆ ಸಾವಿಲ್ಲದಂತಾಯಿತು. ಈ ಕಾರಣದಿಂದ ಅವರು ಆ-ಮರ (ಮರಣವಿಲ್ಲದವರು) ಆದರು. ಈ ಸಮುದ್ರ ಮಥನಕ್ಕೆ ಬೇಕಾದ ಪದಾರ್ಥಗಳು ಮತ್ತು ಅದನ್ನು ಮಾಡಿದ ಕೆಲಸ, ಇವುಗಳ ವಿವಗಳೇನು? ಅವನ್ನು ಹೀಗೆ ಸಂಗ್ರಹಿಸಬಹುದು:
  • ಮೊದಲಿಗೆ ಕ್ಷೀರ ಸಮುದ್ರ ಬೇಕು. ಅದನ್ನು ಒಂದೇ ಸಮನೆ ಕಡೆದ ಮೇಲೆ ಕೊನೆಯಲ್ಲಿ ಅಮೃತ ಸಿಗುತ್ತದೆ.
  • ಕ್ಷೀರ ಸಮುದ್ರಕ್ಕೆ ಅನೇಕ ದಿವ್ಯವಾದ ಓಷಧಿ, ವನಸ್ಪತಿಗಳನ್ನು ಹಾಕಿ, ನಂತರ ಕಡೆದರು. 
  • ಹಾಲಿನ ಸಮುದ್ರ ಕಡೆಯಲು ಒಂದು ದೊಡ್ಡ ಕಡೆಗೋಲು (ಮಂತು) ಬೇಕಲ್ಲ. ಮಂದರ ಪರ್ವತವನ್ನು ಕಡೆಗೋಲು ಮಾಡಿದರು.
  • ಕಡೆಗೋಲಿಗೆ ಸುತ್ತಲು ಒಂದು ದೊಡ್ಡ ಹಗ್ಗ ಬೇಕಾಯಿತು. ವಾಸುಕಿ ಸರ್ಪವನ್ನು ಹಗ್ಗ ಮಾಡಿಕೊಂಡರು.
  • ಕಡೆಯಲು ಎರಡು ತಂಡಗಳು. ಒಂದು ಕಡೆ ರಾಕ್ಷಸರು. ಇನ್ನೊಂದು ಕಡೆ ದೇವತೆಗಳು. (ಯಾವುದನ್ನಾದರೂ ಎರಡು ಭಾಗ ಮಾಡಿದಾಗ ಮೊದಲನೆಯದು ಪೂರ್ವ ಪಕ್ಷ ಮತ್ತು ಎರಡನೆಯದು ಉತ್ತರ ಪಕ್ಷ ಎಂದು ಹಿಂದಿನ ಒಂದು ಸಂಚಿಕೆಯಲ್ಲಿ ನೋಡಿದ್ದೇವೆ).
  • ವಾಸುಕಿಯು (ಸರ್ಪವು) ಗಾಳಿ ಕುಡಿದು ಜೀವಿಸುವುದು. ಅದು ವಿಷವನ್ನು ಕಾರಿಕೊಳ್ಳಲು ಅಮೃತಕ್ಕಿಂತ ಮೊದಲು ಕಾರ್ಕೋಟಕ ವಿಷ ಹೊರಬಂದಿತು. ಸುತ್ತಲಿನ ವಾತಾವರಣ ಕಲುಷಿತವಾಯಿತು.
  • ಹೀಗೆ ಅಮೃತ ಬಂದರೂ ಅದು ಎಲ್ಲರಿಗೂ ಸಿಗಲಿಲ್ಲ. ದೇವತೆಗಳ ಜೊತೆಯಲ್ಲಿ ಕಡೆದ ರಾಕ್ಷಸರಿಗೇ ಸಿಗಲಿಲ್ಲ. 
  • ಮೋಹಿನಿ ರೂಪದ ಮಹಾವಿಷ್ಣುವು ಕೊಟ್ಟವರಿಗೆ ಮಾತ್ರ ಅಮೃತ ಸಿಕ್ಕಿತು.
ಈ ಎಲ್ಲ ಅಂಶಗಳನ್ನು ಶ್ರೀವಾದಿರಾಜರು ಶ್ರೀಕೃಷ್ಣನಿಗೆ ಅನ್ವಯಿಸಿಕೊಂಡು ಪ್ರಾರ್ಥನಾ ಶ್ಲೋಕ ಮಾಡಿದರು. ಹೇಗೆ ಅನ್ವಯಿಸಿದರು ಅನ್ನುವುದರ ವಿವರವನ್ನು ನೋಡೋಣ.

******

ಈಗ ನಮ್ಮಗಳ ಪರಿಸ್ಥಿತಿ ಏನು? ನಮಗೆ ಏನು ಬೇಕು? ನಮಗೆ ಅಮೃತ ಸಾಕೆ? ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟುಕೊಳ್ಳುತ್ತಾ, ಹಾಗೆಯೇ ದೇವತೆಗಳು ಮಾಡಿದಂತೆ ನಮಗೆ ಬೇಕಾದುದು ಸಿಗಬೇಕಾದರೆ ನಾವು ಏನು ಮಾಡಬೇಕು?

ಮೇಲಿನ ವಿವರಗಳ ಜೊತೆಯಲ್ಲಿ ತಾಳೆ ಹಾಕುತ್ತಾ, ನಮ್ಮಲ್ಲಿ ಇರುವ ಸಾಧನಗಳನ್ನು ಜೊತೆ ಮಾಡಿಕೊಂಡು, ನಮಗೆ ಬೇಕಾದುದನ್ನು ಹೀಗೆ ಸಂಗ್ರಹಿಸಬಹುದು:
  • ನಮ್ಮಲ್ಲಿ ಕ್ಷೀರ ಸಮುದ್ರ ಇಲ್ಲ. ಆದರೆ ನಮ್ಮ ಹೃದಯ ಕಮಲ ಮಧ್ಯದಲ್ಲಿ ಶ್ರೀಕೃಷ್ಣ ಎನ್ನುವ ಹಾಲಿನ ಸಮುದ್ರ ಇದೆ.  ಇದೇ "ಕೃಷ್ಣ ದುಗ್ದಾಂಬುಧಿ".  ಅವನು ಎಂಥವನು? ಹಾಲು ಹಾಗೆಯೇ ಇಟ್ಟರೆ ಸ್ವಲ್ಪ ಸಮಯದ ನಂತರ ಕೆಡುತ್ತದೆ. ಹಾಲು ಕಾಯಿಸಿ, ಕಾಯಿಸಿದ ಹಾಲಿನಿಂದ ಮೊಸರು ಮಾಡಬೇಕು. ನಂತರ ಕಡೆದು ಬೆಣ್ಣೆ ತೆಗೆಯಬೇಕು. ಆಮೇಲೆ ಆ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಬೇಕು. ಆದರೆ ಶ್ರೀಕೃಷ್ಣನೆಂಬ ಹಾಲು ಎಂದೂ ಕೆಡುವ ಹಾಲಲ್ಲ. ಶ್ರೀಕೃಷ್ಣನ ಬಳಿ ಈ ರೀತಿ ಒಂದಾದ ಮೇಲೆ ಇನ್ನೊಂದು ಬರುವುದು ಎಂದಿಲ್ಲ. ಅವನು ಹಾಲಿನಿಂದ ಕೇವಲ ತುಪ್ಪ ಮಾತ್ರವಲ್ಲ; ನೇರ ನಮಗೆ ಬೇಕಾದುದನ್ನು ಕೊಡಬಲ್ಲ.  
  • ದೇವತೆಗಳಿಗೆ ಅಮೃತವೇನೋ ಸಿಕ್ಕಿತು. ಅಮೃತ ಸೇವನೆಯಿಂದ ಸಾವೂ ಇಲ್ಲ. ಆದರೆ ಅದಕ್ಕೂ ಒಂದು ಮಿತಿ ಉಂಟು. ಮಹಾಪ್ರಳಯದ ನಂತರ ಅವರ ಪದವಿಯೂ ಕೊನೆಗೊಳ್ಳುತ್ತದೆ. ಈಗ ಇರುವ ದೇವೇಂದ್ರ ಹೋಗಿ ಮತ್ತೊಬ್ಬ ದೇವೇಂದ್ರ ಬರುತ್ತಾನೆ. (ಬಲಿ ಚಕ್ರವರ್ತಿಯು ಮುಂದಿನ ಮನ್ವಂತರದಲ್ಲಿ ದೇವೇಂದ್ರನಾಗಲು ಕಾದು ಕುಳಿತಿದ್ದಾನೆ!). ನಮಗೆ ಅದಕ್ಕಿಂತ ಹೆಚ್ಚಿನದಾದ ಜನನ-ಮರಣ ಚಕ್ರದಿಂದ ಬಿಡುಗಡೆ ಕೊಡುವ ಮುಕ್ತಿ ಬೇಕು. ಅದನ್ನು ಶ್ರೀಕೃಷ್ಣನೇ ಕೊಡಬೇಕು. ಮತ್ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಈ ಶ್ರೀಕೃಷ್ಣ ಎಂಬ ನಮ್ಮ ಹೃದಯದಲ್ಲಿರುವ ಹಾಲಿನ ಕಡಲನ್ನು ಕಡೆಯಬೇಕು. 
  • ಈ ಶ್ರೀಕೃಷ್ಣನೆಂಬ ಸಮುದ್ರ ಕಡೆಯುವ ಮೊದಲು ಯಾವುದೇ ಓಷಧಿ, ವನಸ್ಪತಿಗಳು ಹಾಕಬೇಕಿಲ್ಲ. ಏಕೆಂದರೆ ಶ್ರೀಕೃಷ್ಣನಲ್ಲಿ ಸಮಸ್ತವೂ ಈಗಲೇ ಅಡಗಿವೆ. ಈ ಪದಾರ್ಥಗಳ ಗುಣಗಳೆಲ್ಲಾ ಅವನಲ್ಲಿ ತುಂಬಿವೆ ಎಂದು ತಿಳಿದು ಕಡೆದರೆ ಸಾಕು. ಅದಕ್ಕೆ ಅವನನ್ನು "ಸಮಸ್ತ ಗುಣಪೂರ್ಣ" ಎಂದು ತಿಳಿದು ಕಡೆಯಬೇಕು (ನೆನೆಯಬೇಕು). ಸಮುದ್ರದಲ್ಲಿ ಅನೇಕ ಮುತ್ತು, ರತ್ನ, ಮುಂತಾದ ಅನೇಕ ಬೆಲೆಬಾಳುವ ಮಣಿಗಳಿವೆ. ಸಮುದ್ರಕ್ಕೆ "ರತ್ನಾಕರ" ಎನ್ನುವ ಹೆಸರು ಇದೇ ಕಾರಣಕ್ಕೆ. ಶ್ರೀಕೃಷ್ಣನೋ ಇಂತಹ ಸಮುದ್ರಗಳನ್ನೇ ತನ್ನ ಒಳಗೆ ಇಟ್ಟುಕೊಂಡಿರುವವನು. ಆದ್ದರಿಂದ ಅವನು "ಗುಣೋದ್ಯನ್ಮಣಿ". ಹೀಗೆಂದು ಶ್ರೀಕೃಷ್ಣ ಸಮುದ್ರವನ್ನು ಕಡೆಯಬೇಕು. ಕಡೆಯುವುದನ್ನು "ಮಥನ" ಎನ್ನುತ್ತಾರೆ. ಮತ್ತೆ ಮತ್ತೆ ಅದನ್ನೇ ಚಿಂತಿಸುವುದು ಮನಸ್ಸಿನಲ್ಲಿ ಮಾಡುವ ಮಥನ.
  • ಶ್ರೀಕೃಷ್ಣ ಸಮುದ್ರವನ್ನು ಕಡೆಯುವ "ಕಡಗೋಲು" ಯಾವುದು? "ಶ್ರೀವೇದಾಂತ" ಎಂಬ ಮಹಾಪರ್ವತ. ಅವನನ್ನು ಪೂರ್ತಿಯಾಗಿ ತಿಳಿಯುವುದು ಸಾಧ್ಯವಿಲ್ಲ. ಆದರೆ ಅಷ್ಟಿಷ್ಟಾದರೂ ತಿಳಿಯಲು ವೇದಗಳು, ಉಪನಿಷತ್ತುಗಳು ಮುಂತಾದುವನ್ನು ಒಳಗೊಂಡ ವೇದಾಂತ ಎನ್ನುವ ಪರ್ವತವನ್ನು ಕಡಗೋಲಾಗಿ ಉಪಯೋಗಿಸಬೇಕು. ಸರಿ. ಶ್ರೀವೇದಾಂತ ಎಂದು ಏಕೆ? ಪರ್ವತವು ಜಡ ವಸ್ತು. ಸಮಸ್ತ ಜಡ ಪ್ರಕೃತಿಗೆ (Static eternity) ಅಭಿಮಾನಿ ದೇವತೆ ಮಹಾಲಕ್ಷ್ಮಿ ದೇವಿ. ಆದ್ದರಿಂದ "ಶ್ರೀವೇದಾಂತ ಮಹಾಚಲಂ" ಎಂದಾಯಿತು. 
  • ಕಡಗೋಲು ಸಿಕ್ಕಿತು. ಈಗ ಒಂದು ಹಗ್ಗ ಬೇಕು. ವೇದ, ವೇದಾಂಗಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೂತ್ರಗಳ ಮೊರೆ ಹೋಗಬೇಕು. ಅವೇ ಬ್ರಹ್ಮಸೂತ್ರಗಳು. (ಸೂತ್ರ ಅನ್ನುವ ಪದಕ್ಕೆ ದಾರ ಅಥವಾ ಹಗ್ಗ ಅನ್ನುವುದರ ಜೊತೆಗೆ ನಿಯಮ (Formula) ಅನ್ನುವ ಅರ್ಥವೂ ಇದೆ). ವೇದಗಳ ಸರಿಯಾದ ಅರ್ಥ ತಿಳಿಯಲು ಈ ಬ್ರಹ್ಮಸೂತ್ರಗಳು ಸಹಾಯಕ. ಆದ್ದರಿಂದ ಶ್ರೀವೇದಾಂತಮಹಾಚಲ ಎನ್ನುವ ಕಡೆಗೋಲಿಗೆ ಬ್ರಹ್ಮಸೂತ್ರಗಳು ಎನ್ನುವ ಹಗ್ಗವನ್ನು ಬಿಗಿಯಬೇಕು.
  • ಎಲ್ಲಾ ಸಿದ್ಧ ಆಯಿತು. ಸಮುದ್ರ ಕಡೆಯಲು ಎರಡು ತಂಡಗಳು ಬೇಕಲ್ಲ. ವಾಕ್ಯಾರ್ಥ ಮಾಡಲು ಎರಡು ತಂಡಗಳು. ಒಂದು ಪೂರ್ವ ಪಕ್ಷ. ಇನ್ನೊಂದು ಉತ್ತರ ಪಕ್ಷ. ನಮ್ಮ ಮನಸ್ಸಿನಲ್ಲಿಯೇ ಎರಡು ರೀತಿಯ ದ್ವಂದ್ವ ಇವೆ. ಒಮ್ಮೊಮ್ಮೆ ನನ್ನನ್ನು ಬಿಟ್ಟರೆ ಇನ್ನೊಬ್ಬನಿಲ್ಲ ಅನ್ನುವ ಆಸುರೀ ಭಾವ. ದೇವರಿಲ್ಲ, ಅಥವಾ ನಾನೇ ದೇವರು (ಹಿರಣ್ಯ ಕಷಿಪುವಿನ ರೀತಿ) ಎನ್ನುವುದು ಒಂದು ರೀತಿಯ ಯೋಚನಾಲಹರಿ. ದೇವರು ಇದ್ದರೂ ಅವನಿಗೆ ಹುಟ್ಟು-ಸಾವುಗಳಿವೆ ಮತ್ತು ಅವನಲ್ಲಿ ದೋಷಗಳಿವೆ ಎನ್ನುವ ಮಿಥ್ಯಾಜ್ಞಾನ ಒಂದು ಕಡೆ. ಇದು ಪೂರ್ವ ಪಕ್ಷ. ಆದ್ದರಿಂದ ಪೂರ್ವಪಕ್ಷಾಸುರರು. ಇನ್ನೊಮ್ಮೆ ನಮ್ಮ ಕೈಲಿ ಏನೂ ಇಲ್ಲ. ಎಲ್ಲಾ ಆ ಪರಮಪುರುಷನ ಪ್ರೇರಣೆಯಿಂದ ನಡೆಯುವುದು ಎನ್ನುವ ಸುಜ್ಞಾನ.  ಇದು ಉತ್ತರ ಪಕ್ಷ. ಈ ಕಾರಣದಿಂದ "ಸಿದ್ಧಾಂತೋಕ್ತಿ ಸುರೇಶ್ವರರು". ಇವೇ ನಮ್ಮ ಹೃದಯದಲ್ಲಿರುವ ಶ್ರೀಕೃಷ್ಣ ಸಮುದ್ರ ಕಡೆಯುವ ಎರಡು ಪಕ್ಷಗಳು. 
  • ಕಡೆಯುವ ಹಗ್ಗ ಕಡಗೋಲಿಗೆ ಸರಿಯಾಗಿ ಸುತ್ತಿಕೊಂಡು ಕೆಲಸ ಮಾಡಬೇಕು. ಇಲ್ಲದಿದ್ದರೆ ಕಡೆಯುವ ಕೆಲಸ ಸುಗಮವಾಗುವುದಿಲ್ಲ. ಈ ಕಾರಣದಿಂದ "ಪರಿತಃ ಸಂಯೋಜ್ಯ ಸೂತ್ರಾಹಿಪಂ". ಕಡೆಗೋಲು ಮತ್ತು ಅದಕ್ಕೆ ಸುತ್ತಿದ ಹಗ್ಗಕ್ಕೆ ಸರಿಯಾದ ತಾಳ-ಮೇಳ ಬೇಕು. ಅಂದರೆ ಬ್ರಹ್ಮಸೂತ್ರಗಳಿಗೆ ಸರಿಯಾದ ಅರ್ಥ ತಿಳಿದು ಉಪಯೋಗಿಸಬೇಕು ಎಂದು ಭಾವ.
  • ಹೀಗೆ ಹೃದಯ ಸಮುದ್ರ ಕಡೆಯುವಾಗ ಹೃದಯದಲ್ಲಿನ ವಾತಾವರಣ ತಿಳಿಯಾಗಿರಬೇಕು. ಅಲ್ಲಿ ಹಗ್ಗವಾಗಿ ಉಪಯೋಗಿಸಿದ ವಾಸುಕಿ ಒಂದು ಸರ್ಪ. ಹಾವುಗಳು ಗಾಳಿ ಸೇವಿಸಿ ಬದುಕುವುವು. ಆ ಗಾಳಿ ಒಳ್ಳೆಯದಿರಬೇಕು. ಒಳ್ಳೆಯ ಗಾಳಿ ಅಂದರೆ (ಸದ್-ವಾತ) "ಸದ್ವಾತ". ಶ್ರೀವಾದಿರಾಜರು ಶ್ರೀ ಮಧ್ವಾಚಾರ್ಯರ ದ್ವೈತ ಸಿದ್ಧಾಂತ ಸಂತತಿಯವರು. ಮಧ್ವಮತಕ್ಕೆ "ಪವನಮತ" ಎಂದೂ ಹೆಸರು. ಶ್ರೀಮದಾಚಾರ್ಯರು ವಾಯುಪುತ್ರರು ಎಂದು ನಂಬಿಕೆ. ಈ ಕಾರಣದಿಂದ "ಸದ್ವಾತಾಗಮ ಪೋಷಿತಾತ್ಮಹೃದಯಂ".
  • ಅಲ್ಲಿ ಅಮೃತ ಬಂದಿತು. ಇಲ್ಲಿ ಅಮೃತತ್ವ (ಮುಕ್ತಿ) ಬರಬೇಕು. ಅಲ್ಲಿ ಮೋಹಿನಿ ರೂಪದ ಮಹಾವಿಷ್ಣುವು ಯೋಗ್ಯರಾದ ದೇವತೆಗಳಿಗೆ ಮಾತ್ರ ಅಮೃತ ಕೊಟ್ಟನು. ಲೋಕಕಂಟಕರಾದ ಅಸುರರಿಗೆ ಕೊಡಲಿಲ್ಲ. ಇಲ್ಲಿ ಶ್ರೀಕೃಷ್ಣನು ಯೋಗ್ಯರಿಗೆ ಮಾತ್ರ ಮುಕ್ತಿ ಕೊಡುವವನು. ಆದಕಾರಣ "ಸ್ವೀಯಾನಂ ಅಮೃತಂ ಪ್ರಯಚ್ಛತಿ".
  • ಯೋಗ್ಯರಿಗೆ ಅಮೃತತ್ವ ಕೊಡುವ, ಸರ್ವ ಗುಣಗಳ ಗಣಿಯಾದ ಶ್ರೀಕೃಷ್ಣನು ನನ್ನನ್ನು ಕಾಪಾಡಲಿ ಅನ್ನುವುದು ಮುಖ್ಯ ಕೋರಿಕೆ. ಆದ್ದರಿಂದ "ಸ ಮಾಂ ಪಾಯಾತ್". ಗುಣೋದ್ಯನ್ಮಣಿ ಅನ್ನುವುದನ್ನು ಹಿಂದೆ ನೋಡಿದ್ದೇವೆ.
*******

ಹೀಗೆ ಶ್ರೀಕೃಷ್ಣ ಸ್ತುತಿಯ ಎಲ್ಲ ಪರಿಕರಗಳನ್ನೂ ಸೇರಿಸಿ ಶ್ರೀವಾದಿರಾಜರು ತಮ್ಮ "ಶ್ರೀ ರುಕ್ಮಿಣೀಶ ವಿಜಯ" ಮಹಾಕಾವ್ಯದ ಮಂಗಳಾಚರಣೆಯ ಮೊದಲ ಶ್ಲೋಕವನ್ನು "ಶಾರ್ದೂಲವಿಕ್ರೀಡಿತವೃತ್ತ" ಎನ್ನುವ ಛಂದಸ್ಸಿನಲ್ಲಿ ಹೀಗೆ ರಚಿಸಿದ್ದಾರೆ:

ಶ್ರೀವೇದಾಂತಮಹಾಚಲಂ ಹಿ ಪರಿತಃ ಸಂಯೋಜ್ಯ ಸೂತ್ರಾಹಿಪಂ 
ಸದ್ವಾತಾಗಮ ಪೋಷಿತಾತ್ಮಹೃದಯಂ ತತ್ಪೂರ್ವಪಕ್ಷಾಸುರೈ:
ಸಿದ್ಧಾಂತೋಕ್ತಿಸುರೈಶ್ವರೈಶ್ಚ ಮಥಿತೋ ಯಃ ಕೃಷ್ಣ ದುಗ್ದಾoಬುಧಿ:
ಸ್ವೀಯಾನಮಮೃತಂ ಪ್ರಯಚ್ಛತಿ ಸ ಮಾಂ ಪಾಯತ್ಗುಣೋದ್ಯನ್ಮಣಿ:   

ಭಾಷೆ-ವೇದಾಂತಗಳಲ್ಲಿ ಹೆಚ್ಚಿನ ಪರಿಶ್ರಮ ಇರುವವರು ಇನ್ನೂ ಅನೇಕ ವಿಶೇಷಾರ್ಥಗಳನ್ನು ಕಂಡುಕೊಳ್ಳಬಹುದು.

ಇಷ್ಟೆಲ್ಲಾ ಏಕೆ ಬೇಕು? ಇದೊಂದು ಒಳ್ಳೆಯ ಪ್ರಶ್ನೆ. ತೆಂಗಿನಕಾಯಿ ಅಥವಾ ಹಲಸಿನ ಹಣ್ಣು ಗಟ್ಟಿ, ಬಿಡಿಸುವುದು ಸುಲಭವಲ್ಲ ಎಂದು ಬಿಟ್ಟುಬಿಡಬಹುದು. ಇಲ್ಲವೇ, ಅದರ ರುಚಿ ಹೆಚ್ಚಿನದು ಎಂದು ಬಿಡಿಸಿ ಸವಿಯಲೂಬಹುದು!

Sunday, September 6, 2026

ರುಕ್ಮಿಣೀಶ ವಿಜಯದಲ್ಲಿ ಶ್ರೀಕೃಷ್ಣ ಜಯಂತಿ


ಹಿಂದಿನ ಸಂಚಿಕೆಯಲ್ಲಿ, "ವಾದಿರಾಜರ ರುಕ್ಮಿಣೀಶ ವಿಜಯ" ಎನ್ನುವ ಶೀರ್ಷಿಕೆಯಡಿ, ಉಡುಪಿಯ ಹೆಸರಾಂತ ಅಷ್ಟ ಮಠಗಳಲ್ಲಿ ಒಂದಾದ ಸೋದೆ ಮಠ ಪರಂಪರೆಯಲ್ಲಿ ಹದಿನಾರನೆಯ ಶತಮಾನದಲ್ಲಿ ಪೀಠಾಧಿಪತಿಗಳಾಗಿದ್ದ ಶ್ರೀ ವಾದಿರಾಜ ತೀರ್ಥರ "ರುಕ್ಮಿಣೀಶ ವಿಜಯ" ಕೃತಿ ರಚನೆ ಸಂದರ್ಭದ ವಿಶೇಷಗಳನ್ನು ನೋಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು.

ಆ ಸಂಚಿಕೆಯಲ್ಲಿ, ಶ್ರೀ ವಾದಿರಾಜರ ದಿನಂಪ್ರತಿ ಪಾಠ-ಪ್ರವಚನಗಳಲ್ಲಿ ಇರುತ್ತಿದ್ದ ಶ್ರೀಮದ್ ಭಾಗವತ ದಶಮ ಸ್ಕಂದದಲ್ಲಿ ಬಂದಿರುವ ವಿವರಗಳನ್ನು ಮಹಾಕಾವ್ಯ ಲಕ್ಷಣಗಳಿಗೆ ಹೊಂದುವ ರೀತಿಯಲ್ಲಿ ಪರಿವರ್ತಿಸಿದರು, ಮತ್ತು ಇದಕ್ಕಾಗಿ ಅವರಿಗೆ ಕಥಾವಸ್ತು ಹುಡುಕುವ ಅಗತ್ಯವಿರಲಿಲ್ಲ ಎಂದು ಹೇಳಿತ್ತು. ಈ ರೀತಿಯ ವಿವರಗಳನ್ನು ಪ್ರತಿದಿನ ಒಂದೊಂದು ಸರ್ಗ ಲೆಕ್ಕದ ರೀತಿಯಲ್ಲಿ, ಹತ್ತೊಂಬತ್ತು ದಿನಗಳಲ್ಲಿ ಹತ್ತೊಂಬತ್ತು ಸರ್ಗ ವಿಸ್ತಾರದ ಮಹಾಕಾವ್ಯವಾಗಿ ರಚನೆ ಮಾಡಿ ಶಿಷ್ಯರಿಗೆ ಹೇಳಿದರು, ಮತ್ತು ಅವರು ಬರೆದಿಟ್ಟುಕೊಂಡು ಗ್ರಂಥ ಸಿದ್ಧವಾಯಿತು ಎಂದಿದ್ದೆವು. 

ಸಂಸ್ಕೃತದಲ್ಲಿ ಸರ್ಗ ಅಂದರೆ ಸೃಷ್ಟಿ ಎಂದು ಅರ್ಥ. ಸೃಷ್ಟಿ-ಸ್ಥಿತಿ-ಲಯಗಳನ್ನು ಸರ್ಗ-ಸ್ಥಿತಿ-ಪ್ರಳಯ ಎಂದು ಹೇಳುತ್ತಾರೆ.

ಸಂಚಿಕೆಯ ಕೊನೆಯಲ್ಲಿ ಈ ಮಹಾಕಾವ್ಯದ ಕೆಲವು ಸಂಗತಿಗಳನ್ನು ಮತ್ತೊಮ್ಮೆ ನೋಡೋಣ ಎಂದುಕೊಂಡಿದ್ದೆವು. ಕಳೆದ ಎರಡು-ಮೂರು ದಿನಗಳಲ್ಲಿ ಎಲ್ಲೆಲ್ಲಿಯೂ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಬಲು ಸಂಭ್ರಮದ ವಾತಾವರಣ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ತಿಳಿದಿರುವ ವಿವರಗಳು ಮತ್ತು ಅವನ್ನು ಶ್ರೀ ವಾದಿರಾಜರು ಮಹಕಾವ್ಯದಲ್ಲಿ ಹೇಗೆ ಅಳವಡಿಸಿದ್ದಾರೆ ಅನ್ನುವುದನ್ನು ನೋಡೋಣ.

******

ಎಲ್ಲರಿಗೂ ತಿಳಿದಿರುವಂತೆ ಶ್ರೀಮದ್ಭಾಗವತಾದಿ ಗ್ರಂಥಗಳಲ್ಲಿ ಇರುವ ಕೃಷ್ಣನ ಅವತಾರ ಸಮಯದ ವಿವರಣೆಯ ಅಂಶಗಳು ಏನು? ಅವುಗಳನ್ನು ಸಂಕ್ಷೇಪವಾಗಿ ಹೀಗೆ ಹೇಳಬಹುದು:
  • ದುಷ್ಟರ ಉಪಟಳ ಹೆಚ್ಚಿದುದರಿಂದ ಭೂದೇವಿಯ ಪ್ರಾರ್ಥನೆಯ ಕಾರಣ ದೇವತೆಗಳು ಚತುರ್ಮುಖ ಬ್ರಹ್ಮರ ನೇತೃತ್ವದಲ್ಲಿ ಕ್ಷೀರಸಮುದ್ರ ತಲುಪಿ ಶೇಷಶಾಯಿಯಾದ ಶ್ರೀಮನ್ನಾರಾಯನನ್ನು ಭೂಭಾರ ಹರಣ ಮಾಡುವಂತೆ ಕೋರುತ್ತಾರೆ. 
  • ಶ್ರೀಮನ್ನಾರಾಯಣನು ಅವರೆಲ್ಲರ ಕೋರಿಕೆಯಂತೆ ಯದುವಂಶದಲ್ಲಿ ವಸುದೇವ-ದೇವಕಿಯರ ಮಗನಾಗಿ ಜನಿಸಿ ಮುಂದಿನ ಕ್ರಮ ನಡೆಸುವುದಾಗಿ ಅಭಯ ಕೊಡುತ್ತಾನೆ.
  • ದೇವಕಿ ಕಂಸನ ತಂಗಿ. ಅವಳ ಎಂಟನೆಯ ಮಗು ತನ್ನ ಮರಣಕ್ಕೆ ಕಾರಣ ಎಂಬ ಅಶರೀರವಾಣಿ ಕೇಳಿ ಕಂಸ ವಸುದೇವ-ದೇವಕಿಯರನ್ನು ಬಂದಿಖಾನೆಯಲ್ಲಿ ಸೆರೆ ಇಟ್ಟಿರುತ್ತಾನೆ.
  • ವಸುದೇವ-ದೇವಕಿಯರು ಮೂಲತಃ ಕಶ್ಯಪ-ಅದಿತಿ ದಂಪತಿಗಳು.
  • ಈ ದಂಪತಿಗಳಿಗೆ ಶ್ರೀಮನ್ನಾರಾಯಣನು ಶಂಖ-ಚಕ್ರಾದಿ ಲಾಂಛನಗಳನ್ನು ಧರಿಸಿ ದರ್ಶನ ಕೊಟ್ಟು, ಅವರ ಎಂಟನೆಯ ಮಗನಾಗಿ ಅವತರಿಸುತ್ತಾನೆ.
  • ಶ್ರೀಕೃಷ್ಣನ ಅವತಾರದ ಮೊದಲು ಆದಿಶೇಷ ಬಲರಾಮನಾಗಿ ಅವತರಿಸಿದನು.
  • ದೇವಕಿಯ ಗರ್ಭ ಪ್ರವೇಶಿಸಿದ ಶಿಶು ರೂಪಿ ಶ್ರೀಕೃಷ್ಣನನ್ನು ಚತುರ್ಮುಖ ಬ್ರಹ್ಮನ ನೇತೃತ್ವದಲ್ಲಿ ದೇವತೆಗಳು ಸ್ತುತಿಸುತ್ತಾರೆ. ಭಾಗವತದಲ್ಲಿ ಇದನ್ನು "ಗರ್ಭ ಸ್ತುತಿ" ಎಂದು ಹೇಳುತ್ತಾರೆ.
  • ಶ್ರೀಕೃಷ್ಣ ಜನಿಸಿದ ದಿನ ಕೃಷ್ಣ ಪಕ್ಷದ ಅಷ್ಟಮಿ. ಅರ್ಧ ಚಂದ್ರ ಆಕಾಶದಲ್ಲಿದ್ದಾನೆ. ಮಧ್ಯ ರಾತ್ರಿ ಮಗುವಿನ ಜನನ. ರೋಹಿಣಿ ನಕ್ಷತ್ರ. ರವಿಯು ಸಿಂಹರಾಶಿಯಲ್ಲಿ ಸ್ವಸ್ಥಾನದಲ್ಲಿ ಇದ್ದಾನೆ. 
  • ಶ್ರಾವಣ ಮಾಸ. ಮಳೆಗಾಲ. ಮೋಡ ಕವಿದ ವಾತಾವರಣ. ಶ್ರೀಮನ್ನಾರಾಯಣನು ವಸುದೇವ-ದೇವಕಿಯರಿಗೆ ಕಾಣುವಂತೆ ಪ್ರಕಟನಾದಾಗ ಸ್ವಲ್ಪ ಕಾಲ ಶುಭ್ರವಾದ ಆಕಾಶ. ವಸುದೇವನು ಶ್ರೀಕೃಷ್ಣನನ್ನು ಗೋಕುಲಕ್ಕೆ ತೆಗೆದುಕೊಂಡು ಹೋಗುವಾಗ ಮತ್ತೆ ಮೋಡಗಳು ತುಂಬಿಕೊಂಡು ಭಾರಿ ಮಳೆ ಉಂಟಾಗುತ್ತದೆ.
  • ಶ್ರೀ ಕೃಷ್ಣನ ಜನನವಾದಾಗ ಗಂಧರ್ವರು ಹಾಡುತ್ತಾರೆ. ಅಪ್ಸರೆಯರು ನರ್ತನ ಮಾಡುತ್ತಾರೆ. 
  • ದೇವತೆಗಳು ಪಾರಿಜಾತ ಮೊದಲಾದ ಪುಷ್ಪ ವೃಷ್ಟಿ ಮಾಡುತ್ತಾರೆ.
  • ದೇವದುಂಧುಭಿಗಳು ತಾವೇತಾವಾಗಿ ಮೊಳಗುತ್ತವೆ.
  • ವಸುದೇವನ ಅನೇಕ ಹೆಸರುಗಳಲ್ಲಿ ಆನಕ ದುಂಧುಭಿ ಅನ್ನುವುದು ಒಂದು ಹೆಸರು.
  • ಶ್ರಾವಣ ಮಾಸ ಆದುದರಿಂದ ಸರೋವರಗಳು ನೀರಿನಿಂದ ತುಂಬಿದ್ದವು.
  • ಜನನದ ಸಮಯದಲ್ಲಿ ಮೋಡಗಳು ಮರೆಯಾದಾಗ ಮಿಂಚಿದ ನಕ್ಷತ್ರಗಳು ಮತ್ತೆ ಮೋಡ ತುಂಬಿಕೊಂಡಾಗ ಮರೆಯಾದವು.
  • ಜನನದ ಸಮಯದಲ್ಲಿ ತಂದೆ-ತಾಯಿಯರ ಬೇಡಿಗಳು ಕಳಚಿಕೊಂಡವು.
ಈ ಎಲ್ಲ ವಾಸ್ತವ ಅಂಶಗಳನ್ನು ಶ್ರೀ ವಾದಿರಾಜರು ಕಾವ್ಯಮಯವಾಗಿ ಉಪಯೋಗಿಸಿಕೊಂಡು ಶ್ರೀ ರುಕ್ಮಿಣೀಶ ವಿಜಯದಲ್ಲಿ ಚಿತ್ರಿಸಿದ್ದಾರೆ. 
*****

ಶ್ರೀ ವಾದಿರಾಜರು ಈ ಸಂಗತಿಗಳನ್ನೇ ಕಾವ್ಯದಲ್ಲಿ ಅಳವಡಿಸಿರುವ ರೀತಿ:
  • ಚತುರ್ಮುಖ ಬ್ರಹ್ಮದೇವರು ಎಲ್ಲಾ ದೇವತೆಗಳು ಮತ್ತು ಭೂದೇವಿಯಿಂದ ಕೂಡಿದವರಾಗಿ ಶ್ರೀಮನ್ನಾರಾಯಣನನ್ನು "ಪುರುಷ ಸೂಕ್ತ" ಮಂತ್ರಗಳಿಂದ ಸ್ತೋತ್ರ ಮಾಡಿದರು. "ನಮ್ಮ ಬೇಡಿಕೆಗಳು ಅನೇಕ. ಇತರರಿಗೆ ಒಮ್ಮೆಗೆ ಒಂದು ಕೆಲಸ ಮಾತ್ರ ಮಾಡಿಕೊಡಲು ಸಾಧ್ಯ. ನಮ್ಮ ಅನೇಕ ಕೋರಿಕೆಗಳನ್ನು ಒಂದೇ ಅವತಾರದಲ್ಲಿ ಸಾರ್ಥಕ ಮಾಡಿಕೊಡಲು ಸಹಸ್ರ (ಅನಂತ) ತಲೆಗಳು, ಸಹಸ್ರ ಕಣ್ಣುಗಳು, ಸಹಸ್ರ ಅಂಗಾಂಗಗಳುಳ್ಳ ಪರಮಪುರುಷನಾದ ನೀನೇ ಸಮರ್ಥನು" ಎನ್ನುವುದನ್ನು ಸೂಚಿಸುವುದಕ್ಕಾಗಿ ಅನೇಕ ಸ್ತೋತ್ರಗಳ ನಡುವೆ ಪುರುಷ ಸೂಕ್ತವನ್ನು ಆರಿಸಿಕೊಂಡು ಸ್ತೋತ್ರ ಮಾಡಿದರು. (ಸರ್ಗ 1, ಶ್ಲೋಕ 21)
  • ಯಾರಾದರೂ ಹಿರಿಯ ಅಧಿಕಾರಿಗಳು ಅಥವಾ ಮಂತ್ರಿಗಳು ಪ್ರವಾಸ ಬರುವಾಗ ಅವರು ತಕ್ಷಣ ನೇರವಾಗಿ ಬರುವುದಿಲ್ಲ. ಅವರು ಬರುವ ಮೊದಲು ಸಂಬಂಧಿಸಿದ ಪರಿವಾರದವರು ಬಂದು ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಾರೆ. ಯಾರೋ ಇಂದು ಇದ್ದು, ನಾಳೆ ಹೋಗುವ ಅಧಿಕಾರಿ ಅಥವಾ ಮಂತ್ರಿಗಳಿಗೇ ಹೀಗಿರುವಾಗ, ಹದಿನಾಲ್ಕು ಲೋಕಗಳ ಒಡೆಯ, ಅನಾದಿ ಕಾಲದಿಂದ ಅನಂತ ಕಾಲದವರೆಗೆ ಇರುವ ಪ್ರಭುವಿನ ವ್ಯವಸ್ಥೆ ಹೇಗೆ? ಅದಕ್ಕೇ ಸ್ವಯಂ ಆದಿಶೇಷ ಭೂಮಿಗೆ ಬಲರಾಮನಾಗಿ ಬಂದು ಎಲ್ಲ ವ್ಯವಸ್ಥೆ ಮಾಡಲು ತಾನೇ ಮೊದಲು ನಿಂತನು. (ಸಾವಿರ ಹೆಡೆಗಳುಳ್ಳ ಆದಿಶೇಷನು ಎಲ್ಲಾ ಕಡೆ ಒಂದೇ ಸಮಯದಲ್ಲಿ ಗಮನವಿಟ್ಟು ತಯಾರು ಮಾಡಲು ಶಕ್ತನು ಎಂದು ಭಾವ). (ಸರ್ಗ 1 ಶ್ಲೋಕ 26)
  • ಶ್ರೀಕೃಷ್ಣನು ವಸುದೇವ-ದೇವಕಿಯರಿಗೆ ಎಲ್ಲ ಲಾಂಛನ ಸಹಿತ ಹದಿನಾರು ವರ್ಷದ ಯುವಕನಾಗಿ ಕಾಣಿಸಿಕೊಂಡನು. ನಂತರ ಮಗುವಾಗಿ ಅಲ್ಲಿ ತೋರಿಸಿಕೊಂಡನು. ಅವನಿಗೆ ಗರ್ಭವಾಸಾದಿ ದುಃಖಗಳಿಲ್ಲ. ಅವನು ಅವತಾರ ಮಾಡುವಾಗ ಎಲ್ಲರಂತೆ ಅಳುತ್ತಾ ಹುಟ್ಟುವ ಕೂಸಲ್ಲ. ಸದಾಕಾಲ ನಗುನಗುತ್ತಾ ಇರುವವನು. ಎಲ್ಲರಂತೆ ಏರು-ಪೇರುಗಳಿಲ್ಲ. "ನಿನಗೆ ಗರ್ಭವಾಸ ಇಲ್ಲದಿರುವಂತೆ ನಮಗೂ ಮುಂದೆ ಅದು ಇಲ್ಲದಂತೆ ಮಾಡು" ಎಂದು ಕೇಳಿಕೊಳ್ಳಲು "ಗರ್ಭ ಸ್ತುತಿ" ಮಾಡಿದರು. ಇಂತಹ ಬೇಡಿಕೆ ಅವನು ಗರ್ಭದಲ್ಲಿ ಇದ್ದಂತೆ ತೋರಿಸಿದಾಗ ತಾನೇ ಮಾಡಬೇಕು? (ಕಚೇರಿಯ ಕೆಲಸ ಆಗಬೇಕಾದರೆ ಅಲ್ಲಿ ಹೋಗಿ ಕೇಳಬೇಕು. ಶಾಲೆಯ ಕೆಲಸ ಆಗಬೇಕಾದರೆ ಅಲ್ಲಿಗೆ ಹೋಗಬೇಕು. ಗರ್ಭವಾಸ ತಪ್ಪಬೇಕಾದರೆ ಅವನು ಗರ್ಭದಲ್ಲಿರುವಾಗ ಕೇಳಬೇಕು ಎಂದು ಭಾವ). (ಸರ್ಗ 1 ಶ್ಲೋಕ 30)
ಈ ರೀತಿ ಕೃಷ್ಣಾವತಾರದ ಮೊದಲಿನ ಪ್ರತಿಯೊಂದು ಘಟನೆಗೂ ವಿಶೇಷ ಅರ್ಥ ಕೊಟ್ಟು ಕಾವ್ಯಮಯ ರೀತಿಗೆ ಉಪಯೋಗಿಸಿಕೊಂಡಿದ್ದಾರೆ.

******

ಕೃಷ್ಣ ಜಯಂತಿಯ ದಿನದ ವಿವರಣೆ ಹೇಗೆ ಅನ್ನುವುದನ್ನು ಸ್ವಲ್ಪ ನೋಡೋಣ:
  • ಅವತಾರದ ಮೂಲ ಕಾರಣ ರಾಕ್ಷಸರ ಸಂಹಾರ. ಅವರು ನಿಶಾಚರರು. ರಾತ್ರಿ ಓಡಾಡಿಕೊಂಡಿರುವವರು. ಅವರನ್ನು ಹಿಡಿಯಲು ರಾತ್ರಿಯೇ ಆಗಬೇಕು. ಅದಕ್ಕೇ ಮಧ್ಯರಾತ್ರಿ ಹುಟ್ಟಿದನು! ರಾಕ್ಷಸರು ಎಲ್ಲಿದ್ದಾರೆ? ಎಂಟು ದಿಕ್ಕುಗಳು ತುಂಬಿಕೊಂಡು ಇದ್ದಾರೆ. ಅದಕ್ಕೇ ಶ್ರೀಕೃಷ್ಣನು ಹದಿನೈದು ದಿನಗಳಲ್ಲಿ ಅಷ್ಟಮಿ (ಎಂಟನೆಯ ದಿನ) ಆರಿಸಿಕೊಂಡನು! (ಸರ್ಗ 1 ಶ್ಲೋಕ 31)
  • ಶ್ರೀಕೃಷ್ಣನಿಗೆ ಮೂವರು ತಾಯಂದಿರು. ಹೆತ್ತವಳು ದೇವಕಿ. ಸಾಕಿದವಳು ಯಶೋದೆ. ಇನ್ನೊಬ್ಬಳು (ವಸುದೇವನ ಇನ್ನೊಬ್ಬಳು ಮಡದಿಯಾದ) ದೊಡ್ಡಮ್ಮ ರೋಹಿಣಿ. ಹೆತ್ತವಳು ಮತ್ತು ಸಲಹಿದವಳು ಸಂತೋಷಪಟ್ಟು ಮತ್ತೊಬ್ಬಳು ಬೇಸರ ಮಾಡಿಕೊಳ್ಳಬಾರದಲ್ಲ! ಆ ಕಾರಣಕ್ಕಾಗಿ ಶ್ರೀಕೃಷ್ಣನು ರೋಹಿಣಿ ನಕ್ಷತ್ರ ಆರಿಸಿಕೊಂಡನು. ಇದರಿಂದ ಮೂರು ಮಂದಿ ತಾಯಂದಿರು ಒಟ್ಟಿಗೆ ಸಂತೋಷಪಟ್ಟರು. (ಶ್ರೀಕೃಷ್ಣನನ್ನು ನೆನೆಸಿಕೊಂಡಾಗಲೆಲ್ಲಾ ರೋಹಿಣಿಯನ್ನು ನೆನಪು ಮಾಡಿಕೊಳ್ಳುವುದರಿಂದ ಅವಳಿಗೂ ಸಂತೋಷ ಆಯಿತು ಎಂದು ಭಾವ). (ಸರ್ಗ 1 ಶ್ಲೋಕ 32)
  • ಶ್ರೀ ಕೃಷ್ಣ ಅವತಾರ ಮಾಡಿದಾಗ ಚಂದ್ರನ ಸ್ಥಿತಿ ಏನು? ಮೊದಲಿಗೆ ಅವನಿಗೆ ಸಂತೋಷ ಆಯಿತು. ಶ್ರೀರಾಮನು ಸೂರ್ಯವಂಶದಲ್ಲಿ ಹುಟ್ಟಿದನು. ಈಗ ಶ್ರೀಕೃಷ್ಣನು ಚಂದ್ರವಂಶ ಆರಿಸಿಕೊಂಡು ಹುಟ್ಟಿದುದರಿಂದ ತನ್ನ ಸ್ಥಾನ ಮೇಲೇರಿತು. ಹೀಗಾಗಿ ಈ ಲಾಭದಿಂದ ಚಂದ್ರನು ಹಿಗ್ಗಿದನು. ಆದರೆ ಇದರಿಂದ ಅವನಿಗೆ ನಷ್ಟ ಸಹ ಆಯಿತು. ಮೊದಲಿಗೆ ಎಲ್ಲರೂ ಚಂದ್ರನನ್ನು ನೋಡಿ ಹೊಗಳುತ್ತಿದ್ದರು. ಆದರೆ ಈಗ ಎಲ್ಲರ ಗಮನ ತನಗಿಂತ ಎಷ್ಟೋ ಆಕರ್ಷಕನಾದ ಶ್ರೀಕೃಷ್ಣನ ಕಡೆ ಹೊರಳಿದ್ದರಿಂದ ಚಂದ್ರನನ್ನು ನೋಡುವವರೇ ಇಲ್ಲವಾದರು! ಆಗ ನಷ್ಟದಿಂದ ಕುಗ್ಗಿದನು. ಹೀಗಾಗಿ ಚಂದ್ರನು ಲಾಭ-ನಷ್ಟ ಸಮ-ಸಮ ಹೊಂದಿದ ವರ್ತಕನಂತೆ ಆದನು. ಆ ಕಾರಣ ಎರಡರ ಮಧ್ಯೆ ಅರ್ಧಚಂದ್ರ (ಅಷ್ಟಮಿಯಂದು ಅರ್ಧ ಚಂದ್ರ ದರ್ಶನ) ಆಗಿ ಉಳಿದನು. (ಸರ್ಗ 1 ಶ್ಲೋಕ 33)
ಶ್ರೀಕೃಷ್ಣಾವತಾರದ ದಿನ ಮತ್ತು ಸಮಯ ಇವುಗಳ ವಿವರಣೆ ಹೀಗೆ ಕಾವ್ಯವಾಯಿತು.

******

ನಂತರ ನಡೆದ ಘಟನೆಗಳು ಹೇಗೆ? ಅವನ್ನು ನೋಡೋಣ:
  • ಸಿಂಹ ಮಾಸ. ರವಿಯು ಸ್ವಸ್ಥಾನದಲ್ಲಿ ಇದ್ದಾನೆ. ಇನ್ನೊಂದು ಕಡೆ ಶ್ರಾವಣ ಮಾಸ. ಮಧ್ಯ ರಾತ್ರಿ. ಎಲ್ಲರಿಗೂ ಘಾಡ ನಿದ್ರೆಯ ಸಮಯ. ಗಂಧರ್ವರು ಸಂತೋಷದಿಂದ ಹಾಡಿದರು. ಅಪ್ಸರೆಯರು ನರ್ತಿಸಿದರು. ಗಂಧರ್ವರಿಗೆ ಮತ್ತು ಅಪ್ಸರೆಯರಿಗೆ ಶ್ರೀಕೃಷ್ಣನನ್ನು ಮೆಚ್ಚಿಸುವ ತವಕ. ಅವನು ಈಗ ಸಣ್ಣ ಮಗು. ಮಕ್ಕಳನ್ನು ಮೆಚ್ಚಿಸುವುದು ದೊಡ್ಡವರನ್ನು ತೃಪ್ತಿಪಡಿಸುವುದಕ್ಕಿಂತ ಸುಲಭ. ಆದ್ದರಿಂದ ಇದೇ ಸುಸಮಯ! ಮಕ್ಕಳಿಗೆ ಅತ್ಯಂತ ಪ್ರಿಯವಾದದ್ದು ಯಾವುದು? ಹಾಡು ಮತ್ತು ನೃತ್ಯ. ಅದಕ್ಕೇ ಗಂಧರ್ವರು ಮನತುಂಬಿ ಹಾಡಿದರು. ತಿಲೋತ್ತಮೆ ಮೊದಲಾದ ಅಪ್ಸರೆಯರು ಮೈಮರೆತು ಕುಣಿದರು. (ಸರ್ಗ 1 ಶ್ಲೋಕ 34)
  • ದೇವತೆಗಳು ಆನಂದದಿಂದ ತಮ್ಮ (ದೇವ)ಲೋಕದ ಪಾರಿಜಾತ ಮೊದಲಾದ ಹೂವುಗಳ ಪುಷ್ಪವೃಷ್ಟಿ ಮಾಡಿದರು. ಇದರಿಂದ ಶ್ರೀಕೃಷ್ಣನಿಗೆ ನರಕಾಸುರನ ವಧೆಯ ನಂತರ ಸತ್ಯಭಾಮಾದೇವಿಗಾಗಿ ಪಾರಿಜಾತ ವೃಕ್ಷ ತೆಗೆದುಕೊಂಡು ಹೋಗಲು ನೆನಪಿಸಿದಂತೆ ಆಯಿತು! ಮುಂದೆ ದೇವೇಂದ್ರನು ಮಾಡುವ ತಪ್ಪಿಗೆ ಮೊದಲೇ ಕ್ಷಮೆ ಯಾಚಿಸಿದಂತೆಯೂ ಆಯಿತು. (ಸರ್ಗ 1 ಶ್ಲೋಕ 36)
  • ದೇವ ದುಂದುಭಿಗಳು ಮೊಳಗಿದುವು. (ವಸುದೇವನಿಗೆ ಆನಕ ದುಂದುಭಿ ಎಂದೂ ಒಂದು ಹೆಸರು. ಅನೇಕ ನಗಾರಿ, ದುಂದುಭಿ ಮೊದಲಾದ ವಾದ್ಯಗಳು ಅವನ ಬಳಿ ಇದ್ದುವಂತೆ.) ಶ್ರೀಕೃಷ್ಣನು ನಮ್ಮವನು ಎಂದು ಹೇಳಿಕೊಳ್ಳುವ ಹರ್ಷದಲ್ಲಿ ಈ ಆನಕ, ದುಂದುಭಿ (ಬೇರೆ ಬೇರೆ ಗಾತ್ರ ಮತ್ತು ಆಕೃತಿಯ ನಗಾರಿ, ಡೋಲು ಮುಂತಾದುವು) ಮೊದಲಾದ ವಾದ್ಯಗಳು ಮೊಳಗಿದುವು. (ಸರ್ಗ 1 ಶ್ಲೋಕ 36)
  • ವಸುಗಳು (ಎಂಟು ಮಂದಿ ವಸುಗಳು ಅಷ್ಟವಸುಗಳು ಎಂದು ಹೆಸರುಳ್ಳವರು) ಮತ್ತು ದೇವತೆಗಳು ಈ ಕೃಷ್ಣನು ಮುಂದೆ ವಾಸುದೇವ ಎಂದು ಹೆಸರಾಗುತ್ತಾನೆ ಎಂದು ಸಂತೋಷ ಪಟ್ಟು ಸ್ತುತಿಸಿದರು. (ಮಗುವು ನಮ್ಮ ಹೆಸರಿನಿಂದ ಪ್ರಖ್ಯಾತನಾಗುತ್ತಾನೆ ಎಂದು ಭಾವವು). ವಸುದೇವನ ಮಗನಾದುದರಿಂದ ವಾಸುದೇವ ಎಂದು ಹೇಳುವುದು ಸಾಮಾನ್ಯವಾದ ಲೋಕಾರೂಢಿಯ ಅರ್ಥ. "ಸರ್ವತ್ರ ವಾಸಯತಿ ಇತಿ ವಾಸುದೇವಃ" ಅನ್ನುವುದು ನಿಜವಾದ ಅರ್ಥ. (ಎಲ್ಲಕಡೆಯೂ ವಾಸಿಸುವುದರಿಂದ (ವ್ಯಾಪಿಸಿರುವುದರಿಂದ) ವಾಸುದೇವ ಅನ್ನುವುದು ಸರಿಯಾದ ಅರ್ಥ. ಈ ಹೆಸರು ಪರಮಾತ್ಮನಿಗೆ ಅನಾದಿ ಕಾಲದಿಂದಲೂ ಇದೆ). (ಸರ್ಗ 1 ಶ್ಲೋಕ 37)
ಯಾರಾದರೂ ದೊಡ್ಡವರ ಸಮಾಚಾರ ಬಂದರೆ "ಅವರು ನಮ್ಮವರು" ಎಂದು ಹೇಳಿಕೊಳ್ಳಲು ಎಲ್ಲರೂ ಇಷ್ಟಪಡುತ್ತಾರೆ. ಇದನ್ನೇ ವಿಡಂಬನಾತ್ಮಕವಾಗಿ ವಾದಿರಾಜರು ಇಲ್ಲಿ ಬಳಸಿಕೊಂಡಿದ್ದಾರೆ.

******

ಆಯಿತು. ಶ್ರೀಕೃಷ್ಣ ಶಿಶುರೂಪದಲ್ಲಿ ದೇವಕಿ-ವಾಸುದೇವರ ಮುಂದೆ ಮಲಗಿದ. ಮುಂದೆ ಏನಾಯಿತು?
  • ಮೋಡಗಳಿಗೆ ತಮ್ಮ ನೀಲಿಯ ಬಣ್ಣದ ಮೇಲೆ (ನೀಲ ಮೇಘ ಶ್ಯಾಮ) ಬಹಳ ಅಹಂಕಾರ ಇದ್ದಿತು. ಈಗ ಶ್ರೀಕೃಷ್ಣನು ಅವುಗಳಿಗಿಂತ ಸುಂದರವಾದ ಬಣ್ಣದಲ್ಲಿ ಬಂದು ಮಲಗಿದ್ದಾನೆ. ಅವನು ಪ್ರಕಟನಾಗಿದ್ದಾನೆ; ಹುಟ್ಟಲಿಲ್ಲ. ಯಾರೂ ಮೋಡಗಳ ನೀಲಿಯ ಬಣ್ಣ ಗಮನಿಸುತ್ತಿಲ್ಲ. ಈಗ ನೀಲ ಮೇಘ ಶ್ಯಾಮ ಅಂದರೆ ಶ್ರೀಕೃಷ್ಣನೇ ಎಂದು ಎಲ್ಲರೂ ತಿಳಿಯುತ್ತಿದ್ದಾರೆ. ಇದರಿಂದ ಕೋಪಗೊಂಡ ಮೇಘಗಳು (ಪಂದ್ಯದಲ್ಲಿ ಸೋತವರು ಕೋಪಗೊಂಡು ಮಾಡುವಂತೆ) ದೂರ ಹೊರಟುಹೋದುವು. ಸಮುದ್ರದ ಮೇಲೆ ಕಿರಿಚಾಡುತ್ತಾ ನೀರು ಸುರಿಸಿದವು. (ಗುಡುಗು-ಸಿಡಿಲು ಸಹಿತ ಮಳೆ ಬಂದಿತು). ಸಮುದ್ರ ಜಡವಾದುದರಿಂದ ಅದು ಪ್ರತಿಕ್ರಿಯಿಸಲಿಲ್ಲ. (ಕೈಲಾಗದವನು ಮೈ ಪರಚಿಕೊಂಡ ಎನ್ನುವಂತೆ ಮೋಡಗಳು ವರ್ತಿಸಿದವು). (ಸರ್ಗ 1 ಶ್ಲೋಕ 38)
  • ಸರೋವರಗಳು ಸಂತೋಷದಿಂದ ತುಂಬಿ ತುಳುಕಿದವು. (ಶ್ರಾವಣ ಮಾಸವಾದುದರಿಂದ ನೀರಿನಿಂದ ತುಂಬಿದ್ದವು). ನಮ್ಮಲ್ಲಿ ಇಲ್ಲಿಯವರೆಗೆ ಕಮಲಗಳು ಮಾತ್ರ ತುಂಬಿದ್ದವು. ಇನ್ನು ಮುಂದೆ ಕಮಲನಾಭನು ತನ್ನ ಪಾದಕಮಲಗಳಿಂದ, ಕಮಲದಂತಿರುವ ಮುಖವುಳ್ಳ ಸುಂದರಿಯರ ಸಹಿತ ನಮ್ಮಲ್ಲಿ ಬಂದು ಆಟವಾಡುತ್ತಾನೆ ಎಂದು ಬೀಗಿದವು. (ಮುಂದೆ ಗೋಪಿಯರ ಜೊತೆಯಲ್ಲಿ ಜಲಕ್ರೀಡೆ ಆಡುವನು ಎಂಬುದರ ಸೂಚನೆ). (ಸರ್ಗ 1 ಶ್ಲೋಕ 39)
  • ನಕ್ಷತ್ರಗಳು ಕೂಡ ಬಹಳ ಆನಂದಪಟ್ಟವು. ಎಲ್ಲೆಡೆಯೂ ತುಂಬಿರುವ ದೇವನು ಈಗ ಇಷ್ಟು ಚಿಕ್ಕ ಆಕೃತಿಯಲ್ಲಿ ಮಲಗಿದ್ದಾನೆ! ಈ ಸಂತೋಷದಲ್ಲಿ ಅವು ತಾವೇ ಒಂದು ಹಾರದಂತೆ ಅವನ ಸುತ್ತ ಇರುವಂತೆ ಕಂಗೊಳಿಸಿದವು. (ಸರ್ಗ 1 ಶ್ಲೋಕ 40)
ಮೊದಲ ಸರ್ಗದಲ್ಲಿ 67 ಶ್ಲೋಕಗಳಿವೆ. ಇಲ್ಲಿ 13 ಶ್ಲೋಕಗಳ ಸಾರಾಂಶ ಮಾತ್ರ ಕೊಟ್ಟಿದೆ. ಮೂಲ ಗ್ರಂಥ ಓದಿದಾಗ ಅದರ ಪೂರ್ಣ ಅನುಭವ ಆಗುವುದು. ಉಪಮೆ, ಉತ್ಪ್ರೇಕ್ಷೆ, ಶ್ಲೇಷೆ ಮುಂತಾದ ಅರ್ಥಲಂಕಾರ-ಶಬ್ದಾಲಂಕಾರ ಮೊದಲಾದುವುಗಳನ್ನು ಕಾಣಬಹುದು.

******

ಈ ಸಂಚಿಕೆ ಸ್ವಲ್ಪ ದೀರ್ಘ ಅನ್ನಿಸಬಹುದು. ಶ್ರೀ ವಾದಿರಾಜರು ಇರುವ ವಾಸ್ತವಾಂಶಗಳನ್ನು ಹೇಗೆ ಕಾವ್ಯವಾಗಿ ಪರಿವರ್ತಿಸಿದ್ದಾರೆ ಎನ್ನುವುದನ್ನು ತೋರಿಸುವ ಪ್ರಯತ್ನ ಇದಷ್ಟೇ. ತಾಳ್ಮೆಯಿಂದ ನೋಡಿದಾಗ ಇನ್ನೂ ಅನೇಕ ಅಂಶಗಳು ಹೊಳೆಯಬಹುದು. ನಮಗೆ ತಿಳಿಯುವ ಅಂಶಗಳು ಕಡಿಮೆಯೇ. 

ಶ್ರೀಕೃಷ್ಣನು ಕಾಣಿಸಿಕೊಂಡಾಗ ವಸುದೇವ-ದೇವಕಿಯರ ಬೇಡಿಗಳು ತಾವಾಗಿಯೇ ಕಳಚಿಕೊಂಡವು. ಅವನನ್ನು ವಸುದೇವ ಗೋಕುಲದಲ್ಲಿ ಬಿಟ್ಟು ಬಂದ ತಕ್ಷಣ ಬೇಡಿಗಳು ಮತ್ತೆ ಕೂಡಿಕೊಂಡವು. 

ಪರಮಾತ್ಮನನ್ನು ನೆನೆದಾಗ ಸಂಸಾರದಿಂದ ಮುಕ್ತಿ. ಅವನನ್ನು ಮರೆತ ತಕ್ಷಣ ಸಂಸಾರ ಬಂಧನ. ನಂಬಿದವರಿಗೆ ಇದೇ ಜ್ಞಾನ!

Wednesday, September 2, 2026

ವಾದಿರಾಜರ ರುಕ್ಮಿಣೀಶ ವಿಜಯ


ಮಹಾಕಾವ್ಯಗಳ ಸಂದರ್ಭದಲ್ಲಿ ಮಾಘ ಕವಿಯ ಬಹು ಮಾನ್ಯ ಕೃತಿ "ಶಿಶುಪಾಲ ವಧ" ಮತ್ತು ಅದಕ್ಕೆ ಸಂಬಂಧಿಸಿದಂತೆ ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯ" ಕೃತಿಯ ಬಗ್ಗೆ ಸ್ವಲ್ಪ ವಿಚಾರವನ್ನು ಹಿಂದಿನ ಒಂದು ಸಂಚಿಕೆಯಲ್ಲಿ ಮಾಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು. ಶ್ರೀ ವಾದಿರಾಜರ "ರುಕ್ಮಿಣೀಶ ವಿಜಯ" ಕೃತಿ ಸಹ ಇದೇ ಕಥಾವಸ್ತು ಒಳಗೊಂಡದ್ದು. 

"ಕವಿಕುಲಗುರು" ಎಂದು ಗೌರವ ಪಡೆದಿರುವ ಕಾಳಿದಾಸ ಮಹಾಕವಿಯ "ರಘುವಂಶ" ಮತ್ತು "ಕುಮಾರಸಂಭವ", ಭಾರವಿ ಕವಿಯ "ಕಿರಾತಾರ್ಜುನೀಯಂ", ಮಾಘ ಕವಿಯ "ಶಿಶುಪಾಲ ವಧ" ಮತ್ತು ಶ್ರೀಹರ್ಷ ಕವಿಯ "ನೈಷಧೀಯ ಚರಿತ", ಈ ಐದು ಕಾವ್ಯಗಳು ಸಂಸ್ಕೃತದ "ಪಂಚ ಮಹಾಕಾವ್ಯಗಳು" ಎಂದು ಪ್ರಸಿದ್ಧವಾಗಿವೆ. ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳಿಗೆ ಈ ಐದು ಕಾವ್ಯಗಳಲ್ಲಿ ಯಾವುದಾದರೂ ಒಂದನ್ನು ಓದಲೇಬೇಕೆಂಬ ಅಲಿಖಿತ ನಿಯಮ ಉಂಟು. ಒಂದಕ್ಕಿಂತ ಹೆಚ್ಚು ಓದಿದರೆ ಒಳ್ಳೆಯದು. ಎಲ್ಲವನ್ನೂ ಓದಿದರೆ ಬಹಳ ಒಳ್ಳೆಯದು. ಕೆಳಗಿನ ದರ್ಜೆ ತರಗತಿಗಳಿಗೆ ಇವುಗಳ ಯಾವುದಾದರೂ ಒಂದು ಭಾಗವನ್ನಾದರೂ ಪಠ್ಯ ಕ್ರಮದಲ್ಲಿ ಸೇರಿಸಿರುತ್ತಾರೆ. 

ಕಾಳಿದಾಸ ಕವಿಯ ಕಾಲದ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿವೆ. ಕ್ರಿಸ್ತಪೂರ್ವ ಕಾಲದಿಂದ ಕ್ರಿಸ್ತಶಕ ನಾಲ್ಕು-ಐದನೆಯ ಶತಮಾನದವರೆಗೂ ಅವನ ಕಾಲವನ್ನು ಎಳೆದಾಡುತ್ತಾರೆ. ಭಾರವಿಯು ಆರನೆಯ ಶತಮಾನದ ಕವಿ. ಮಾಘನು ಅವನ ನಂತರ, ಅಂದರೆ ಏಳನೆಯ ಶತಮಾನದವನು. ಶ್ರೀಹರ್ಷನು ಹನ್ನೆರಡನೆಯ ಶತಮಾನದ ಕವಿ. ವೇದಾಂತ ದೇಶಿಕರು ಹದಿಮೂರು-ಹದಿನಾಲ್ಕನೆಯ ಶತಮಾನದವರು. ವಾದಿರಾಜರು ಹದಿನಾರನೆಯ ಶತಮಾನದವರು. ನೂರಾರು ವರ್ಷಗಳು ಕಳೆದರೂ ಈ ಕೃತಿಗಳು ಇನ್ನೂ ಜನಪ್ರಿಯವಾಗಿ ಮಾನ್ಯವಾಗಿವೆ.

ಮಾಘನ "ಶಿಶುಪಾಲ ವಧ" ಶ್ರೀಕೃಷ್ಣನ ಕಥೆಗೆ ಸಂಬಂಧಿಸಿದುದು. ವೇದಾಂತ ದೇಶಿಕರ "ಯಾದವಾಭ್ಯುದಯ' ಮತ್ತು ವಾದಿರಾಜರ "ರುಕ್ಮಿಣೀಶ ವಿಜಯ" ಕೂಡ ಹೀಗೆಯೇ ಶ್ರೀ ಕೃಷ್ಣನ ಕಥೆಯೇ. ಮೇಲೆ ಹೇಳಿದ ಸಂಚಿಕೆಯಲ್ಲಿ "ಯಾದವಾಭ್ಯುದಯ" ಬಗೆಗೆ ನೋಡಿದೆವು. ಈಗ ವಾದಿರಾಜರ "ರುಕ್ಮಿಣೀಶ ವಿಜಯ" ಕೃತಿಯ ಬಗ್ಗೆ ನೋಡೋಣ.

******

ಶ್ರೀ ವಾದಿರಾಜ ತೀರ್ಥರು (1481-1600) ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಸೋದೆ ಮಠದ ಪೀಠಾಧಿಪತಿಗಳಾಗಿದ್ದವರು. ಒಂದು ನೂರಾ ಇಪ್ಪತ್ತು ವರ್ಷಗಳ ದೀರ್ಘ ಜೀವನ ನಡೆಸಿದವರು. ಶ್ರೀ ವಾಗೀಶ ತೀರ್ಥರ ಬಳಿ ವಿದ್ಯಾಭ್ಯಾಸ ಮಾಡಿದವರು. ಉಡುಪಿಯ ಶ್ರೀಕೃಷ್ಣನ ಪೂಜೆಗೆ ಹಿಂದೆ ಇದ್ದ ಅಷ್ಟ ಮಠಗಳ ಎರಡೆರಡು ತಿಂಗಳ ಸರಣಿಯನ್ನು ಎರಡೆರಡು ವರ್ಷ ಪರ್ಯಾಯ ಎಂದು ಮಾಡಿದವರು ಇವರು. ಎರಡೆರಡು ವರುಷಗಳ ಪರ್ಯಾಯ ಇದ್ದರೆ ಪರ್ಯಾಯ ಪೀಠಾಧಿಪತಿಗಳು ಹೆಚ್ಚಿನ ಧಾರ್ಮಿಕ ಕೆಲಸಗಳನ್ನು ನಡೆಸಲು ಅನುಕೂಲ ಆಗುವುದು, ಮತ್ತು ಇತರ ಪೀಠಾಧಿಪತಿಗಳು ದೀರ್ಘ ದೇಶ ಸಂಚಾರ ಮಾಡಬಹುದು ಎನ್ನುವ ಕಾರಣಕ್ಕೆ ಹೀಗೆ ಬದಲಾವಣೆ ಮಾಡಿದರು ಎಂದು ಹೇಳುತ್ತಾರೆ. ಕಾಲು ನಡಿಗೆಯಲ್ಲಿ ಸಂಚಾರ ಮಾಡಬೇಕಿದ್ದ ಸಮಯದ ಬದಲಾವಣೆ ಇದು. 

ಹೀಗೆ ಎರಡು ವರುಷಗಳ ಅವಧಿ ಒಂದು ಪರ್ಯಾಯ ಮಾಡಿದುದರಿಂದ ಒಂದು ಮಠಕ್ಕೆ ಹದಿನಾಲ್ಕು ವರುಷಗಳಿಗೆ ಒಮ್ಮೆ ಶ್ರೀಕೃಷ್ಣನ ಪೂಜಾ ಸರದಿ ಸಿಗುತ್ತದೆ. ಹೀಗೆ ಎರಡು ವರುಷಗಳಿಗೆ ಒಮ್ಮೆ ಪರ್ಯಾಯ ಬದಲಾವಣೆ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯುವುದನ್ನು ನಾವು ಈಗಲೂ ನೋಡುತ್ತೇವೆ. ಮೂರು ಬಾರಿ ಎರಡು ತಿಂಗಳ ಪರ್ಯಾಯಗಳ ನಂತರ, ಹದಿನಾಲ್ಕು ವರ್ಷಗಳ ದೀರ್ಘ ಅವಧಿ ಆದರೂ ಐದು ಬಾರಿ ತಾವೇ ಎರಡು ವರ್ಷಗಳ ಪರ್ಯಾಯ ಪೀಠಾಧೀಶರಾಗಿದ್ದುದು ಶ್ರೀ ವಾದಿರಾಜರ ಹೆಗ್ಗಳಿಕೆ. ನೂರಾ ಇಪ್ಪತ್ತು ವರುಷ ಜೀವನ ನಡೆಸಿದುದರಿಂದ ಇದು ಸಾಧ್ಯ ಆಯಿತು. ಕೆಳದಿ ಮತ್ತು ಸೋದೆ ಸಂಸ್ಥಾನಗಳ ಅರಸರು ಇವರನ್ನು ರಾಜಗುರುಗಳಾಗಿ ನಡೆಸಿಕೊಂಡು ಅನೇಕ ಜಹಗೀರುಗಳನ್ನು ಕೊಟ್ಟಿದ್ದರು. 

ಶ್ರೀ ವಾದಿರಾಜರು ಕುಂದಾಪುರ ಬಳಿಯ ಹೂವಿನಕೆರೆ ಗ್ರಾಮದಲ್ಲಿ ಜನಿಸಿದವರು. ದ್ವೈತ ಪರಂಪರೆಯಲ್ಲಿ ಪೀಠಾಧಿಪತಿಗಳಾಗಿ ಅನೇಕ ಸ್ವತಂತ್ರ ಕೃತಿಗಳನ್ನೂ, ಹಿಂದಿನ ಅನೇಕ ಗ್ರಂಥಗಳಿಗೆ ಟೀಕೆ-ಟಿಪ್ಪಣಿಗಳನ್ನೂ ರಚಿಸಿದ್ದಾರೆ. ಸಂಸ್ಕೃತ ಭಾಷೆ ಮಾತ್ರವಲ್ಲದೆ ಕನ್ನಡ ಮತ್ತು ತುಳು ಭಾಷೆಯಲ್ಲಿ ಅನೇಕ ದೇವರನಾಮ ಮತ್ತು ದೀರ್ಘ ಗೇಯಕವನ ರಚಿಸಿದ್ದಾರೆ. "ಯುಕ್ತಿಮಾಲಿಕಾ", "ವೈಕುಂಠ ವರ್ಣನೆ", "ಲಕ್ಷ್ಮಿ ಶೋಭಾನೆ" ಮುಂತಾದುವು ಜನಪ್ರಿಯ ಕೃತಿಗಳು. ತಮ್ಮ ದೇಶ ಸಂಚಾರದ ಕಾಲದಲ್ಲಿ ಕಂಡ ಕ್ಷೇತ್ರಗಳ ವಿವರಣೆಯನ್ನು "ತೀರ್ಥ ಪ್ರಭಂಧ" ಎಂಬ ಗ್ರಂಥದಲ್ಲಿ ಕೊಟ್ಟಿದ್ದಾರೆ. "ಹಯವದನ" ಎನ್ನುವ ತಮ್ಮ ಆರಾಧ್ಯ ದೈವದ ಅಂಕಿತದಲ್ಲಿ ಅನೇಕ ಕನ್ನಡ ದೇವರನಾಮಗಳನ್ನು ರಚಿಸಿದ್ದಾರೆ. ಈಗಲೂ ಇವು ಜನಪ್ರಿಯವಾಗಿ ಪ್ರತಿನಿತ್ಯ ಮನೆಮನೆಗಳಲ್ಲಿ ಹಾಡಲ್ಪಡುತ್ತಿವೆ.
******

ಹೀಗೆ ಒಮ್ಮೆ ದೀರ್ಘಕಾಲದ ದೇಶ ಸಂಚಾರದಲ್ಲಿದ್ದ ಸಮಯದಲ್ಲಿ ಶ್ರೀ ವಾದಿರಾಜರು ಪುಣ್ಯಪಟ್ಟಣ ತಲುಪಿದರು. ಪುಣ್ಯಪಟ್ಟಣ ಅನ್ನುವುದು ಈಗಿನ ಪೂನಾ ಅಥವಾ ಪುಣೆ ನಗರದ ಹಿಂದಿನ ಹೆಸರು. ಆಗ ಅಲ್ಲಿ ಪೇಶ್ವೆಯವರ ಆಡಳಿತ ಕಾಲ. ಪೇಶ್ವೆ ಅನ್ನುವುದು ಒಂದು ಹುದ್ದೆ. ಹೆಚ್ಚಿನ ಜನ ತಿಳಿದಿರುವಂತೆ ಅದು ಮರಾಠ ರಾಜರ ಕಾಲದಲ್ಲಿ ಬಂದ ಹುದ್ದೆ ಅಲ್ಲ. ಅದೊಂದು ಪರ್ಷಿಯನ್ ಭಾಷೆಯ ಪದ. ಅದರ ಅರ್ಥ "ನಾಯಕ" ಅಥವಾ "ಅಗ್ರೇಸರ" ಎಂದು. ಮೊದಲು ಈ ಪದವನ್ನು ಹದಿನಾಲ್ಕು-ಹದಿನೈದನೆಯ ಶತಮಾನದಲ್ಲಿ ಬಳಕೆಗೆ ತಂದವರು ಬಹಮನಿ ಸುಲ್ತಾನರು. ಸುಲ್ತಾನರ ನಂತರದ ಅಧಿಕಾರಿಗಳಲ್ಲಿ ಪೇಶ್ವೆ ಅತ್ಯಂತ ಎತ್ತರದವರು. ಮರಾಠ ರಾಜರ ಕಾಲದಲ್ಲಿ ಶಿವಾಜಿ ಮಹಾರಾಜರು ಮೋರೋಪಂತ ಪಿಂಗಳೆ ಅವರನ್ನು ಮೊದಲ ಮರಾಠ ಪೇಶ್ವೆ ಆಗಿ ನೇಮಕ ಮಾಡಿದರು. ಪೇಶ್ವೆ ಪದಕ್ಕೆ ಸಮಾನಾಂತರವಾಗಿ "ಪಂತ ಪ್ರಧಾನ" (ಪ್ರಧಾನ ಮಂತ್ರಿ) ಎನ್ನುವ ಪದ ಬಳಕೆ ಆಯಿತು. ಪಂತ ಪ್ರಧಾನ ಅನ್ನುವ ಪದ ಮರಾಠಿ ಭಾಷೆಯಲ್ಲಿ ಈಗಲೂ ಬಳಕೆಯಲ್ಲಿ ಉಂಟು. ಆದರೂ ಪೇಶ್ವೆ ಅನ್ನುವ ಪದದ ಬಳಕೆ ಜನಸಾಮಾನ್ಯರಲ್ಲಿ ಮುಂದುವರೆಯಿತು. "ತಹಸೀಲ್ದಾರ್" ಅನ್ನುವ ಪದ ಬಂದರೂ ನಮ್ಮ ಜನ "ಅಮಲ್ದಾರ್" ಪದ ಬಳಸುತ್ತಿದ್ದ ರೀತಿಯಲ್ಲಿ.

ಪುಣೆಯ ನಗರದ ಪೇಶ್ವೆಗಳು ಸಾಹತ್ಯ-ಸಂಸ್ಕೃತಿಗಳ ಪೋಷಕರು ಆಗಿದ್ದರು. ಶ್ರೀ ವಾದಿರಾಜರು ಅಲ್ಲಿದ್ದ ಕಾಲದಲ್ಲಿ ಪೇಶ್ವೆಗಳು ಒಂದು ವಿದ್ವನ್ಮಂಡಳಿ ಏರ್ಪಡಿಸಿ, ಸಂಸ್ಕೃತ ಕಾವ್ಯಗಳ ತೌಲನಿಕ ಅಧ್ಯಯನ ಏರ್ಪಡಿಸಿದ್ದರು. ಈ ಅಧ್ಯಯನದಲ್ಲಿ ಮಾಘ ಕವಿಯ "ಶಿಶುಪಾಲ ವಧ" ಶ್ರೇಷ್ಠ ಕಾವ್ಯ ಎಂದು ತೀರ್ಮಾನಿಸಿದರು. ಕಾವ್ಯವನ್ನು ಆನೆಯ ಮೇಲಿನ ಅಂಬಾರಿಯಲ್ಲಿ ಇಟ್ಟು, ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗೌರವ ಅರ್ಪಿಸಿದರು. ಈ ಸಂಭ್ರಮ ಶ್ರೀ ವಾದಿರಾಜರಿಗೆ ತಿಳಿಯಿತು. ಕಾವ್ಯದ ಹೆಸರು ಅವರಿಗೆ ರುಚಿಸಲಿಲ್ಲ. ಖಳನಾಯಕನಾದ ಶಿಶುಪಾಲನಿಗೆ ಗ್ರಂಥದ ಹೆಸರಿನಲ್ಲಿ ಪ್ರಾಮುಖ್ಯತೆ ಕೊಟ್ಟು ಕಥಾನಾಯಕನಾದ ಶ್ರೀಕೃಷ್ಣನನ್ನು ಕೈಬಿಟ್ಟುದುದು ಅವರಿಗೆ ಸರಿ ಬರಲಿಲ್ಲ. 

ಶ್ರೀ ವಾದಿರಾಜರು ನಂತರ ಪೇಶ್ವೆಯವರನ್ನು ಭೇಟಿ ಮಾಡಿದರು. "ಇದೇ ಕಥಾವಸ್ತುವಿನ ಮೇಲೆ ನಾವೂ ಒಂದು ಕಾವ್ಯ ರಚಿಸಿದ್ದೇವೆ. "ಶ್ರೀ ರುಕ್ಮಿಣೀಶ ವಿಜಯ" ಎಂದು ಅದರ ಹೆಸರು. ಅದು ನಮ್ಮ ಮೂಲ ಸ್ಥಾನವಾದ ಉಡುಪಿ ನಗರದಲ್ಲಿದೆ. ಅದನ್ನು ತರಿಸಲು ನಮಗೆ ಇಪ್ಪತ್ತು ದಿನಗಳು ಕಾಲಾವಕಾಶ ಬೇಕು. ಅಲ್ಲಿಂದ ತರಿಸುತ್ತೇವೆ. ಅದನ್ನೂ ನಿಮ್ಮ ವಿದ್ವನ್ಮಂಡಳಿ ಪರಿಶೀಲಿಸಬೇಕು ಎಂದು ನಮ್ಮ ಅಭಿಲಾಷೆ" ಎಂದರು. ಪೇಶ್ವೆಯವರು ಅದಕ್ಕೆ ಒಪ್ಪಿದರು. 

******

ಹೀಗೆ ನಡೆದಾಗ ಗ್ರಂಥ ಇನ್ನೂ ರಚನೆ ಆಗಿರಲಿಲ್ಲ. ಮಾರನೆಯ ದಿನದಿಂದ ಶ್ರೀ ವಾದಿರಾಜರು ತಮ್ಮ ಸಂಸ್ಥಾನ ಪೂಜೆಯ ನಂತರ, ಭಿಕ್ಷಾ ಸ್ವೀಕರ ಮಾಡುವ ಮೊದಲು, ಈ ನಡುವಿನ ವೇಳೆಯಲ್ಲಿ ಪ್ರತಿದಿನ ಒಂದೊಂದು ಸರ್ಗದಂತೆ ತಮ್ಮ ಶಿಷ್ಯರಿಗೆ ಹೇಳುತ್ತಾ ಹೋದರು. ಶಿಷ್ಯರು ಬರೆದಿಟ್ಟುಕೊಂಡರು. ಒಟ್ಟು ಗ್ರಂಥ 19 ಸರ್ಗಗಳಲ್ಲಿ 1241 ಶ್ಲೋಕಗಳನ್ನು ಒಳಗೊಂಡಿದೆ. ಹತ್ತೊಂಬತ್ತು ದಿನಗಳಲ್ಲಿ ಗ್ರಂಥ ಪೂರ್ಣವಾಯಿತು. ಪ್ರತಿದಿನ ಸುಮಾರು ಅರವತ್ತು-ಎಪ್ಪತ್ತು ಶ್ಲೋಕಗಳು. ಹೀಗೆ ರಚನೆ. ಸತತ ಶ್ರೀಮದ್ಭಾಗವತ ಪಾಠ-ಪ್ರವಚನ ಮಾಡುತ್ತಿದ್ದ ಅವರಿಗೆ ವಿಷಯದ ಹುಡುಕಾಟ ಇರಲಿಲ್ಲ. ಗೊತ್ತಿದ್ದ ವಿಷಯವನ್ನೇ ಕಾವ್ಯವಾಗಿ ಪರಿವರ್ತಿಸಬೇಕಿತ್ತು. ಶ್ರೀಮದ್ಭಾಗವತದ ಹತ್ತನೆಯ ಸ್ಕಂದದ ಶ್ರೀಕೃಷ್ಣನ ಅವತಾರದಿಂದ ರುಕ್ಮಿಣಿ ಸ್ವಯಂವರ ನಡೆಯುವವರೆಗಿನ ಕಥೆ. ಅದಾಯಿತು. 

ಇಪ್ಪತ್ತನೆಯ ದಿನ ಪೂರ್ಣವಾದ ಕಾವ್ಯದ ವಾಚನವಾಯಿತು. ಇಪ್ಪತ್ತೊಂದನೆಯ ದಿನ ಗ್ರಂಥವನ್ನು ವಿದ್ವನ್ಮಂಡಳಿ ಮುಂದೆ ಪರಿಶೀಲನೆಗೆ ಇಡಲಾಯಿತು. ಮಂಡಳಿ ತನ್ನ ಅವಗಾಹನೆಯ ನಂತರ ಗ್ರಂಥ ಉತ್ತಮ ಕಾವ್ಯ ಗುಣಗಳಿಂದ ಕೂಡಿದ ತೂಕದ ಕೃತಿ ಎಂದು ತೀರ್ಮಾನಿಸಿತು. ಪೇಶ್ವೆಯವರು ಈ ಗ್ರಂಥವನ್ನೂ ಆನೆಯ ಮೇಲೆ ಅಂಬಾರಿಯಲ್ಲಿಟ್ಟು ಪುಣೆ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿದರು. 

ಶ್ರೀ ರುಕ್ಮಿಣೀಶ ವಿಜಯ ರಚನೆಯ ಸಂದರ್ಭ ಕುರಿತು ಜನಜನಿತವಾಗಿರುವ ಸಂಗತಿ ಇದು. ಶ್ರೀ ವಾದಿರಾಜರು ಸೋದೆಗೆ ಹಿಂದಿರುಗಿದ ನಂತರ ಸೋದೆಯ ಅರಸರು ಸಹ ತಮ್ಮ ರಾಜಧಾನಿಯಲ್ಲಿ ಪುಣೆಯಲ್ಲಿ ನಡೆದಂತೆಯೇ ಈ ಗ್ರಂಥದ ಮೆರವಣಿಗೆ ಮಾಡಿಸಿದರು. 

ಶ್ರೀ ರುಕ್ಮಿಣೀಶ ವಿಜಯ ಗ್ರಂಥದ ಒಂದೆರಡು ಸಂಗತಿಗಳನ್ನು ಮತ್ತೊಮ್ಮೆ ನೋಡೋಣ.

******

ನಮ್ಮಲ್ಲಿ ಉಪಲಬ್ಧವಿರುವ ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಉತ್ತಮ ಕಾವ್ಯ ಗುಣಗಳು ತುಂಬಿರುವ ಅನೇಕ ಕೃತಿಗಳಿವೆ. ಈಗಾಗಲೇ ಪರಕೀಯರ ಧಾಳಿಗಳಲ್ಲಿ ಅನೇಕ ಬಹುಮೂಲ್ಯ ಗ್ರಂಥಗಳು ನಷ್ಟವಾಗಿ ನಮಗೆ ಉಳಿದಿರುವುದು ಬಹಳ ಅಲ್ಪ. ಭಾರತೀಯ ತತ್ವ ಶಾಸ್ತ್ರದ ಯಾವುದೇ ಶಾಖೆಯಿರಲಿ, ಅದರ ಪ್ರವರ್ತಕರು ಮತ್ತು ಮುಂದೆ ಅವನ್ನು ಬಲಪಡಿಸಿದ ಮಹನೀಯರುಗಳು ಅಪ್ರತಿಮ ವಿದ್ವಾಂಸರುಗಳು. ಹೀಗಿಲ್ಲದಿದ್ದ ಪಕ್ಷದಲ್ಲಿ ಈ ಕೃತಿಗಳು ನೂರಾರು-ಸಾವಿರಾರು ವರುಷಗಳು ಉಳಿದುಕೊಂಡು ಬಂದು ಪ್ರಚಲಿತ ಇರುತ್ತಿರಲಿಲ್ಲ. ದುರದೃಷ್ಟವಶಾತ್ ಇಂತಹ ಕೃತಿಗಳನ್ನು ನಿರ್ವಿಕಾರ ಭಾವದಿಂದ ನೋಡುವ ಮನಸ್ಥಿತಿ ಅನೇಕ ಜನರಿಗಿಲ್ಲ. ಈ ಕಾರಣದಿಂದಾಗಿ ಈ ಗ್ರಂಥಗಳು ಕೇವಲ ಅವರವರ ಮತಗಳ ಚೌಕಟ್ಟಿನಲ್ಲಿಯೇ ಬಂದಿಯಾಗಿವೆ. 

ನಮ್ಮ ತೋಟದ ಹಣ್ಣು ನಮಗೆ ಚೆನ್ನ. ಸರಿ. ಹಾಗೆಂದು ಬೇರೆ ತೋಟದ ಹಣ್ಣುಗಳು ನಮಗೆ ಬೇಡವೇ ಬೇಡ ಅನ್ನುವುದು ಎಷ್ಟು ಸರಿ? ಹಾಗೆ ಅಭಿಪ್ರಾಯಪಟ್ಟಲ್ಲಿ ನಷ್ಟ ನಮಗೇ ಅಲ್ಲವೇ?