Showing posts with label sri Krishna. Show all posts
Showing posts with label sri Krishna. Show all posts

Sunday, September 6, 2026

ರುಕ್ಮಿಣೀಶ ವಿಜಯದಲ್ಲಿ ಶ್ರೀಕೃಷ್ಣ ಜಯಂತಿ


ಹಿಂದಿನ ಸಂಚಿಕೆಯಲ್ಲಿ, "ವಾದಿರಾಜರ ರುಕ್ಮಿಣೀಶ ವಿಜಯ" ಎನ್ನುವ ಶೀರ್ಷಿಕೆಯಡಿ, ಉಡುಪಿಯ ಹೆಸರಾಂತ ಅಷ್ಟ ಮಠಗಳಲ್ಲಿ ಒಂದಾದ ಸೋದೆ ಮಠ ಪರಂಪರೆಯಲ್ಲಿ ಹದಿನಾರನೆಯ ಶತಮಾನದಲ್ಲಿ ಪೀಠಾಧಿಪತಿಗಳಾಗಿದ್ದ ಶ್ರೀ ವಾದಿರಾಜ ತೀರ್ಥರ "ರುಕ್ಮಿಣೀಶ ವಿಜಯ" ಕೃತಿ ರಚನೆ ಸಂದರ್ಭದ ವಿಶೇಷಗಳನ್ನು ನೋಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು.

ಆ ಸಂಚಿಕೆಯಲ್ಲಿ, ಶ್ರೀ ವಾದಿರಾಜರ ದಿನಂಪ್ರತಿ ಪಾಠ-ಪ್ರವಚನಗಳಲ್ಲಿ ಇರುತ್ತಿದ್ದ ಶ್ರೀಮದ್ ಭಾಗವತ ದಶಮ ಸ್ಕಂದದಲ್ಲಿ ಬಂದಿರುವ ವಿವರಗಳನ್ನು ಮಹಾಕಾವ್ಯ ಲಕ್ಷಣಗಳಿಗೆ ಹೊಂದುವ ರೀತಿಯಲ್ಲಿ ಪರಿವರ್ತಿಸಿದರು, ಮತ್ತು ಇದಕ್ಕಾಗಿ ಅವರಿಗೆ ಕಥಾವಸ್ತು ಹುಡುಕುವ ಅಗತ್ಯವಿರಲಿಲ್ಲ ಎಂದು ಹೇಳಿತ್ತು. ಈ ರೀತಿಯ ವಿವರಗಳನ್ನು ಪ್ರತಿದಿನ ಒಂದೊಂದು ಸರ್ಗ ಲೆಕ್ಕದ ರೀತಿಯಲ್ಲಿ, ಹತ್ತೊಂಬತ್ತು ದಿನಗಳಲ್ಲಿ ಹತ್ತೊಂಬತ್ತು ಸರ್ಗ ವಿಸ್ತಾರದ ಮಹಾಕಾವ್ಯವಾಗಿ ರಚನೆ ಮಾಡಿ ಶಿಷ್ಯರಿಗೆ ಹೇಳಿದರು, ಮತ್ತು ಅವರು ಬರೆದಿಟ್ಟುಕೊಂಡು ಗ್ರಂಥ ಸಿದ್ಧವಾಯಿತು ಎಂದಿದ್ದೆವು. 

ಸಂಸ್ಕೃತದಲ್ಲಿ ಸರ್ಗ ಅಂದರೆ ಸೃಷ್ಟಿ ಎಂದು ಅರ್ಥ. ಸೃಷ್ಟಿ-ಸ್ಥಿತಿ-ಲಯಗಳನ್ನು ಸರ್ಗ-ಸ್ಥಿತಿ-ಪ್ರಳಯ ಎಂದು ಹೇಳುತ್ತಾರೆ.

ಸಂಚಿಕೆಯ ಕೊನೆಯಲ್ಲಿ ಈ ಮಹಾಕಾವ್ಯದ ಕೆಲವು ಸಂಗತಿಗಳನ್ನು ಮತ್ತೊಮ್ಮೆ ನೋಡೋಣ ಎಂದುಕೊಂಡಿದ್ದೆವು. ಕಳೆದ ಎರಡು-ಮೂರು ದಿನಗಳಲ್ಲಿ ಎಲ್ಲೆಲ್ಲಿಯೂ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಬಲು ಸಂಭ್ರಮದ ವಾತಾವರಣ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ತಿಳಿದಿರುವ ವಿವರಗಳು ಮತ್ತು ಅವನ್ನು ಶ್ರೀ ವಾದಿರಾಜರು ಮಹಕಾವ್ಯದಲ್ಲಿ ಹೇಗೆ ಅಳವಡಿಸಿದ್ದಾರೆ ಅನ್ನುವುದನ್ನು ನೋಡೋಣ.

******

ಎಲ್ಲರಿಗೂ ತಿಳಿದಿರುವಂತೆ ಶ್ರೀಮದ್ಭಾಗವತಾದಿ ಗ್ರಂಥಗಳಲ್ಲಿ ಇರುವ ಕೃಷ್ಣನ ಅವತಾರ ಸಮಯದ ವಿವರಣೆಯ ಅಂಶಗಳು ಏನು? ಅವುಗಳನ್ನು ಸಂಕ್ಷೇಪವಾಗಿ ಹೀಗೆ ಹೇಳಬಹುದು:
  • ದುಷ್ಟರ ಉಪಟಳ ಹೆಚ್ಚಿದುದರಿಂದ ಭೂದೇವಿಯ ಪ್ರಾರ್ಥನೆಯ ಕಾರಣ ದೇವತೆಗಳು ಚತುರ್ಮುಖ ಬ್ರಹ್ಮರ ನೇತೃತ್ವದಲ್ಲಿ ಕ್ಷೀರಸಮುದ್ರ ತಲುಪಿ ಶೇಷಶಾಯಿಯಾದ ಶ್ರೀಮನ್ನಾರಾಯನನ್ನು ಭೂಭಾರ ಹರಣ ಮಾಡುವಂತೆ ಕೋರುತ್ತಾರೆ. 
  • ಶ್ರೀಮನ್ನಾರಾಯಣನು ಅವರೆಲ್ಲರ ಕೋರಿಕೆಯಂತೆ ಯದುವಂಶದಲ್ಲಿ ವಸುದೇವ-ದೇವಕಿಯರ ಮಗನಾಗಿ ಜನಿಸಿ ಮುಂದಿನ ಕ್ರಮ ನಡೆಸುವುದಾಗಿ ಅಭಯ ಕೊಡುತ್ತಾನೆ.
  • ದೇವಕಿ ಕಂಸನ ತಂಗಿ. ಅವಳ ಎಂಟನೆಯ ಮಗು ತನ್ನ ಮರಣಕ್ಕೆ ಕಾರಣ ಎಂಬ ಅಶರೀರವಾಣಿ ಕೇಳಿ ಕಂಸ ವಸುದೇವ-ದೇವಕಿಯರನ್ನು ಬಂದಿಖಾನೆಯಲ್ಲಿ ಸೆರೆ ಇಟ್ಟಿರುತ್ತಾನೆ.
  • ವಸುದೇವ-ದೇವಕಿಯರು ಮೂಲತಃ ಕಶ್ಯಪ-ಅದಿತಿ ದಂಪತಿಗಳು.
  • ಈ ದಂಪತಿಗಳಿಗೆ ಶ್ರೀಮನ್ನಾರಾಯಣನು ಶಂಖ-ಚಕ್ರಾದಿ ಲಾಂಛನಗಳನ್ನು ಧರಿಸಿ ದರ್ಶನ ಕೊಟ್ಟು, ಅವರ ಎಂಟನೆಯ ಮಗನಾಗಿ ಅವತರಿಸುತ್ತಾನೆ.
  • ಶ್ರೀಕೃಷ್ಣನ ಅವತಾರದ ಮೊದಲು ಆದಿಶೇಷ ಬಲರಾಮನಾಗಿ ಅವತರಿಸಿದನು.
  • ದೇವಕಿಯ ಗರ್ಭ ಪ್ರವೇಶಿಸಿದ ಶಿಶು ರೂಪಿ ಶ್ರೀಕೃಷ್ಣನನ್ನು ಚತುರ್ಮುಖ ಬ್ರಹ್ಮನ ನೇತೃತ್ವದಲ್ಲಿ ದೇವತೆಗಳು ಸ್ತುತಿಸುತ್ತಾರೆ. ಭಾಗವತದಲ್ಲಿ ಇದನ್ನು "ಗರ್ಭ ಸ್ತುತಿ" ಎಂದು ಹೇಳುತ್ತಾರೆ.
  • ಶ್ರೀಕೃಷ್ಣ ಜನಿಸಿದ ದಿನ ಕೃಷ್ಣ ಪಕ್ಷದ ಅಷ್ಟಮಿ. ಅರ್ಧ ಚಂದ್ರ ಆಕಾಶದಲ್ಲಿದ್ದಾನೆ. ಮಧ್ಯ ರಾತ್ರಿ ಮಗುವಿನ ಜನನ. ರೋಹಿಣಿ ನಕ್ಷತ್ರ. ರವಿಯು ಸಿಂಹರಾಶಿಯಲ್ಲಿ ಸ್ವಸ್ಥಾನದಲ್ಲಿ ಇದ್ದಾನೆ. 
  • ಶ್ರಾವಣ ಮಾಸ. ಮಳೆಗಾಲ. ಮೋಡ ಕವಿದ ವಾತಾವರಣ. ಶ್ರೀಮನ್ನಾರಾಯಣನು ವಸುದೇವ-ದೇವಕಿಯರಿಗೆ ಕಾಣುವಂತೆ ಪ್ರಕಟನಾದಾಗ ಸ್ವಲ್ಪ ಕಾಲ ಶುಭ್ರವಾದ ಆಕಾಶ. ವಸುದೇವನು ಶ್ರೀಕೃಷ್ಣನನ್ನು ಗೋಕುಲಕ್ಕೆ ತೆಗೆದುಕೊಂಡು ಹೋಗುವಾಗ ಮತ್ತೆ ಮೋಡಗಳು ತುಂಬಿಕೊಂಡು ಭಾರಿ ಮಳೆ ಉಂಟಾಗುತ್ತದೆ.
  • ಶ್ರೀ ಕೃಷ್ಣನ ಜನನವಾದಾಗ ಗಂಧರ್ವರು ಹಾಡುತ್ತಾರೆ. ಅಪ್ಸರೆಯರು ನರ್ತನ ಮಾಡುತ್ತಾರೆ. 
  • ದೇವತೆಗಳು ಪಾರಿಜಾತ ಮೊದಲಾದ ಪುಷ್ಪ ವೃಷ್ಟಿ ಮಾಡುತ್ತಾರೆ.
  • ದೇವದುಂಧುಭಿಗಳು ತಾವೇತಾವಾಗಿ ಮೊಳಗುತ್ತವೆ.
  • ವಸುದೇವನ ಅನೇಕ ಹೆಸರುಗಳಲ್ಲಿ ಆನಕ ದುಂಧುಭಿ ಅನ್ನುವುದು ಒಂದು ಹೆಸರು.
  • ಶ್ರಾವಣ ಮಾಸ ಆದುದರಿಂದ ಸರೋವರಗಳು ನೀರಿನಿಂದ ತುಂಬಿದ್ದವು.
  • ಜನನದ ಸಮಯದಲ್ಲಿ ಮೋಡಗಳು ಮರೆಯಾದಾಗ ಮಿಂಚಿದ ನಕ್ಷತ್ರಗಳು ಮತ್ತೆ ಮೋಡ ತುಂಬಿಕೊಂಡಾಗ ಮರೆಯಾದವು.
  • ಜನನದ ಸಮಯದಲ್ಲಿ ತಂದೆ-ತಾಯಿಯರ ಬೇಡಿಗಳು ಕಳಚಿಕೊಂಡವು.
ಈ ಎಲ್ಲ ವಾಸ್ತವ ಅಂಶಗಳನ್ನು ಶ್ರೀ ವಾದಿರಾಜರು ಕಾವ್ಯಮಯವಾಗಿ ಉಪಯೋಗಿಸಿಕೊಂಡು ಶ್ರೀ ರುಕ್ಮಿಣೀಶ ವಿಜಯದಲ್ಲಿ ಚಿತ್ರಿಸಿದ್ದಾರೆ. 
*****

ಶ್ರೀ ವಾದಿರಾಜರು ಈ ಸಂಗತಿಗಳನ್ನೇ ಕಾವ್ಯದಲ್ಲಿ ಅಳವಡಿಸಿರುವ ರೀತಿ:
  • ಚತುರ್ಮುಖ ಬ್ರಹ್ಮದೇವರು ಎಲ್ಲಾ ದೇವತೆಗಳು ಮತ್ತು ಭೂದೇವಿಯಿಂದ ಕೂಡಿದವರಾಗಿ ಶ್ರೀಮನ್ನಾರಾಯಣನನ್ನು "ಪುರುಷ ಸೂಕ್ತ" ಮಂತ್ರಗಳಿಂದ ಸ್ತೋತ್ರ ಮಾಡಿದರು. "ನಮ್ಮ ಬೇಡಿಕೆಗಳು ಅನೇಕ. ಇತರರಿಗೆ ಒಮ್ಮೆಗೆ ಒಂದು ಕೆಲಸ ಮಾತ್ರ ಮಾಡಿಕೊಡಲು ಸಾಧ್ಯ. ನಮ್ಮ ಅನೇಕ ಕೋರಿಕೆಗಳನ್ನು ಒಂದೇ ಅವತಾರದಲ್ಲಿ ಸಾರ್ಥಕ ಮಾಡಿಕೊಡಲು ಸಹಸ್ರ (ಅನಂತ) ತಲೆಗಳು, ಸಹಸ್ರ ಕಣ್ಣುಗಳು, ಸಹಸ್ರ ಅಂಗಾಂಗಗಳುಳ್ಳ ಪರಮಪುರುಷನಾದ ನೀನೇ ಸಮರ್ಥನು" ಎನ್ನುವುದನ್ನು ಸೂಚಿಸುವುದಕ್ಕಾಗಿ ಅನೇಕ ಸ್ತೋತ್ರಗಳ ನಡುವೆ ಪುರುಷ ಸೂಕ್ತವನ್ನು ಆರಿಸಿಕೊಂಡು ಸ್ತೋತ್ರ ಮಾಡಿದರು. (ಸರ್ಗ 1, ಶ್ಲೋಕ 21)
  • ಯಾರಾದರೂ ಹಿರಿಯ ಅಧಿಕಾರಿಗಳು ಅಥವಾ ಮಂತ್ರಿಗಳು ಪ್ರವಾಸ ಬರುವಾಗ ಅವರು ತಕ್ಷಣ ನೇರವಾಗಿ ಬರುವುದಿಲ್ಲ. ಅವರು ಬರುವ ಮೊದಲು ಸಂಬಂಧಿಸಿದ ಪರಿವಾರದವರು ಬಂದು ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಾರೆ. ಯಾರೋ ಇಂದು ಇದ್ದು, ನಾಳೆ ಹೋಗುವ ಅಧಿಕಾರಿ ಅಥವಾ ಮಂತ್ರಿಗಳಿಗೇ ಹೀಗಿರುವಾಗ, ಹದಿನಾಲ್ಕು ಲೋಕಗಳ ಒಡೆಯ, ಅನಾದಿ ಕಾಲದಿಂದ ಅನಂತ ಕಾಲದವರೆಗೆ ಇರುವ ಪ್ರಭುವಿನ ವ್ಯವಸ್ಥೆ ಹೇಗೆ? ಅದಕ್ಕೇ ಸ್ವಯಂ ಆದಿಶೇಷ ಭೂಮಿಗೆ ಬಲರಾಮನಾಗಿ ಬಂದು ಎಲ್ಲ ವ್ಯವಸ್ಥೆ ಮಾಡಲು ತಾನೇ ಮೊದಲು ನಿಂತನು. (ಸಾವಿರ ಹೆಡೆಗಳುಳ್ಳ ಆದಿಶೇಷನು ಎಲ್ಲಾ ಕಡೆ ಒಂದೇ ಸಮಯದಲ್ಲಿ ಗಮನವಿಟ್ಟು ತಯಾರು ಮಾಡಲು ಶಕ್ತನು ಎಂದು ಭಾವ). (ಸರ್ಗ 1 ಶ್ಲೋಕ 26)
  • ಶ್ರೀಕೃಷ್ಣನು ವಸುದೇವ-ದೇವಕಿಯರಿಗೆ ಎಲ್ಲ ಲಾಂಛನ ಸಹಿತ ಹದಿನಾರು ವರ್ಷದ ಯುವಕನಾಗಿ ಕಾಣಿಸಿಕೊಂಡನು. ನಂತರ ಮಗುವಾಗಿ ಅಲ್ಲಿ ತೋರಿಸಿಕೊಂಡನು. ಅವನಿಗೆ ಗರ್ಭವಾಸಾದಿ ದುಃಖಗಳಿಲ್ಲ. ಅವನು ಅವತಾರ ಮಾಡುವಾಗ ಎಲ್ಲರಂತೆ ಅಳುತ್ತಾ ಹುಟ್ಟುವ ಕೂಸಲ್ಲ. ಸದಾಕಾಲ ನಗುನಗುತ್ತಾ ಇರುವವನು. ಎಲ್ಲರಂತೆ ಏರು-ಪೇರುಗಳಿಲ್ಲ. "ನಿನಗೆ ಗರ್ಭವಾಸ ಇಲ್ಲದಿರುವಂತೆ ನಮಗೂ ಮುಂದೆ ಅದು ಇಲ್ಲದಂತೆ ಮಾಡು" ಎಂದು ಕೇಳಿಕೊಳ್ಳಲು "ಗರ್ಭ ಸ್ತುತಿ" ಮಾಡಿದರು. ಇಂತಹ ಬೇಡಿಕೆ ಅವನು ಗರ್ಭದಲ್ಲಿ ಇದ್ದಂತೆ ತೋರಿಸಿದಾಗ ತಾನೇ ಮಾಡಬೇಕು? (ಕಚೇರಿಯ ಕೆಲಸ ಆಗಬೇಕಾದರೆ ಅಲ್ಲಿ ಹೋಗಿ ಕೇಳಬೇಕು. ಶಾಲೆಯ ಕೆಲಸ ಆಗಬೇಕಾದರೆ ಅಲ್ಲಿಗೆ ಹೋಗಬೇಕು. ಗರ್ಭವಾಸ ತಪ್ಪಬೇಕಾದರೆ ಅವನು ಗರ್ಭದಲ್ಲಿರುವಾಗ ಕೇಳಬೇಕು ಎಂದು ಭಾವ). (ಸರ್ಗ 1 ಶ್ಲೋಕ 30)
ಈ ರೀತಿ ಕೃಷ್ಣಾವತಾರದ ಮೊದಲಿನ ಪ್ರತಿಯೊಂದು ಘಟನೆಗೂ ವಿಶೇಷ ಅರ್ಥ ಕೊಟ್ಟು ಕಾವ್ಯಮಯ ರೀತಿಗೆ ಉಪಯೋಗಿಸಿಕೊಂಡಿದ್ದಾರೆ.

******

ಕೃಷ್ಣ ಜಯಂತಿಯ ದಿನದ ವಿವರಣೆ ಹೇಗೆ ಅನ್ನುವುದನ್ನು ಸ್ವಲ್ಪ ನೋಡೋಣ:
  • ಅವತಾರದ ಮೂಲ ಕಾರಣ ರಾಕ್ಷಸರ ಸಂಹಾರ. ಅವರು ನಿಶಾಚರರು. ರಾತ್ರಿ ಓಡಾಡಿಕೊಂಡಿರುವವರು. ಅವರನ್ನು ಹಿಡಿಯಲು ರಾತ್ರಿಯೇ ಆಗಬೇಕು. ಅದಕ್ಕೇ ಮಧ್ಯರಾತ್ರಿ ಹುಟ್ಟಿದನು! ರಾಕ್ಷಸರು ಎಲ್ಲಿದ್ದಾರೆ? ಎಂಟು ದಿಕ್ಕುಗಳು ತುಂಬಿಕೊಂಡು ಇದ್ದಾರೆ. ಅದಕ್ಕೇ ಶ್ರೀಕೃಷ್ಣನು ಹದಿನೈದು ದಿನಗಳಲ್ಲಿ ಅಷ್ಟಮಿ (ಎಂಟನೆಯ ದಿನ) ಆರಿಸಿಕೊಂಡನು! (ಸರ್ಗ 1 ಶ್ಲೋಕ 31)
  • ಶ್ರೀಕೃಷ್ಣನಿಗೆ ಮೂವರು ತಾಯಂದಿರು. ಹೆತ್ತವಳು ದೇವಕಿ. ಸಾಕಿದವಳು ಯಶೋದೆ. ಇನ್ನೊಬ್ಬಳು (ವಸುದೇವನ ಇನ್ನೊಬ್ಬಳು ಮಡದಿಯಾದ) ದೊಡ್ಡಮ್ಮ ರೋಹಿಣಿ. ಹೆತ್ತವಳು ಮತ್ತು ಸಲಹಿದವಳು ಸಂತೋಷಪಟ್ಟು ಮತ್ತೊಬ್ಬಳು ಬೇಸರ ಮಾಡಿಕೊಳ್ಳಬಾರದಲ್ಲ! ಆ ಕಾರಣಕ್ಕಾಗಿ ಶ್ರೀಕೃಷ್ಣನು ರೋಹಿಣಿ ನಕ್ಷತ್ರ ಆರಿಸಿಕೊಂಡನು. ಇದರಿಂದ ಮೂರು ಮಂದಿ ತಾಯಂದಿರು ಒಟ್ಟಿಗೆ ಸಂತೋಷಪಟ್ಟರು. (ಶ್ರೀಕೃಷ್ಣನನ್ನು ನೆನೆಸಿಕೊಂಡಾಗಲೆಲ್ಲಾ ರೋಹಿಣಿಯನ್ನು ನೆನಪು ಮಾಡಿಕೊಳ್ಳುವುದರಿಂದ ಅವಳಿಗೂ ಸಂತೋಷ ಆಯಿತು ಎಂದು ಭಾವ). (ಸರ್ಗ 1 ಶ್ಲೋಕ 32)
  • ಶ್ರೀ ಕೃಷ್ಣ ಅವತಾರ ಮಾಡಿದಾಗ ಚಂದ್ರನ ಸ್ಥಿತಿ ಏನು? ಮೊದಲಿಗೆ ಅವನಿಗೆ ಸಂತೋಷ ಆಯಿತು. ಶ್ರೀರಾಮನು ಸೂರ್ಯವಂಶದಲ್ಲಿ ಹುಟ್ಟಿದನು. ಈಗ ಶ್ರೀಕೃಷ್ಣನು ಚಂದ್ರವಂಶ ಆರಿಸಿಕೊಂಡು ಹುಟ್ಟಿದುದರಿಂದ ತನ್ನ ಸ್ಥಾನ ಮೇಲೇರಿತು. ಹೀಗಾಗಿ ಈ ಲಾಭದಿಂದ ಚಂದ್ರನು ಹಿಗ್ಗಿದನು. ಆದರೆ ಇದರಿಂದ ಅವನಿಗೆ ನಷ್ಟ ಸಹ ಆಯಿತು. ಮೊದಲಿಗೆ ಎಲ್ಲರೂ ಚಂದ್ರನನ್ನು ನೋಡಿ ಹೊಗಳುತ್ತಿದ್ದರು. ಆದರೆ ಈಗ ಎಲ್ಲರ ಗಮನ ತನಗಿಂತ ಎಷ್ಟೋ ಆಕರ್ಷಕನಾದ ಶ್ರೀಕೃಷ್ಣನ ಕಡೆ ಹೊರಳಿದ್ದರಿಂದ ಚಂದ್ರನನ್ನು ನೋಡುವವರೇ ಇಲ್ಲವಾದರು! ಆಗ ನಷ್ಟದಿಂದ ಕುಗ್ಗಿದನು. ಹೀಗಾಗಿ ಚಂದ್ರನು ಲಾಭ-ನಷ್ಟ ಸಮ-ಸಮ ಹೊಂದಿದ ವರ್ತಕನಂತೆ ಆದನು. ಆ ಕಾರಣ ಎರಡರ ಮಧ್ಯೆ ಅರ್ಧಚಂದ್ರ (ಅಷ್ಟಮಿಯಂದು ಅರ್ಧ ಚಂದ್ರ ದರ್ಶನ) ಆಗಿ ಉಳಿದನು. (ಸರ್ಗ 1 ಶ್ಲೋಕ 33)
ಶ್ರೀಕೃಷ್ಣಾವತಾರದ ದಿನ ಮತ್ತು ಸಮಯ ಇವುಗಳ ವಿವರಣೆ ಹೀಗೆ ಕಾವ್ಯವಾಯಿತು.

******

ನಂತರ ನಡೆದ ಘಟನೆಗಳು ಹೇಗೆ? ಅವನ್ನು ನೋಡೋಣ:
  • ಸಿಂಹ ಮಾಸ. ರವಿಯು ಸ್ವಸ್ಥಾನದಲ್ಲಿ ಇದ್ದಾನೆ. ಇನ್ನೊಂದು ಕಡೆ ಶ್ರಾವಣ ಮಾಸ. ಮಧ್ಯ ರಾತ್ರಿ. ಎಲ್ಲರಿಗೂ ಘಾಡ ನಿದ್ರೆಯ ಸಮಯ. ಗಂಧರ್ವರು ಸಂತೋಷದಿಂದ ಹಾಡಿದರು. ಅಪ್ಸರೆಯರು ನರ್ತಿಸಿದರು. ಗಂಧರ್ವರಿಗೆ ಮತ್ತು ಅಪ್ಸರೆಯರಿಗೆ ಶ್ರೀಕೃಷ್ಣನನ್ನು ಮೆಚ್ಚಿಸುವ ತವಕ. ಅವನು ಈಗ ಸಣ್ಣ ಮಗು. ಮಕ್ಕಳನ್ನು ಮೆಚ್ಚಿಸುವುದು ದೊಡ್ಡವರನ್ನು ತೃಪ್ತಿಪಡಿಸುವುದಕ್ಕಿಂತ ಸುಲಭ. ಆದ್ದರಿಂದ ಇದೇ ಸುಸಮಯ! ಮಕ್ಕಳಿಗೆ ಅತ್ಯಂತ ಪ್ರಿಯವಾದದ್ದು ಯಾವುದು? ಹಾಡು ಮತ್ತು ನೃತ್ಯ. ಅದಕ್ಕೇ ಗಂಧರ್ವರು ಮನತುಂಬಿ ಹಾಡಿದರು. ತಿಲೋತ್ತಮೆ ಮೊದಲಾದ ಅಪ್ಸರೆಯರು ಮೈಮರೆತು ಕುಣಿದರು. (ಸರ್ಗ 1 ಶ್ಲೋಕ 34)
  • ದೇವತೆಗಳು ಆನಂದದಿಂದ ತಮ್ಮ (ದೇವ)ಲೋಕದ ಪಾರಿಜಾತ ಮೊದಲಾದ ಹೂವುಗಳ ಪುಷ್ಪವೃಷ್ಟಿ ಮಾಡಿದರು. ಇದರಿಂದ ಶ್ರೀಕೃಷ್ಣನಿಗೆ ನರಕಾಸುರನ ವಧೆಯ ನಂತರ ಸತ್ಯಭಾಮಾದೇವಿಗಾಗಿ ಪಾರಿಜಾತ ವೃಕ್ಷ ತೆಗೆದುಕೊಂಡು ಹೋಗಲು ನೆನಪಿಸಿದಂತೆ ಆಯಿತು! ಮುಂದೆ ದೇವೇಂದ್ರನು ಮಾಡುವ ತಪ್ಪಿಗೆ ಮೊದಲೇ ಕ್ಷಮೆ ಯಾಚಿಸಿದಂತೆಯೂ ಆಯಿತು. (ಸರ್ಗ 1 ಶ್ಲೋಕ 36)
  • ದೇವ ದುಂದುಭಿಗಳು ಮೊಳಗಿದುವು. (ವಸುದೇವನಿಗೆ ಆನಕ ದುಂದುಭಿ ಎಂದೂ ಒಂದು ಹೆಸರು. ಅನೇಕ ನಗಾರಿ, ದುಂದುಭಿ ಮೊದಲಾದ ವಾದ್ಯಗಳು ಅವನ ಬಳಿ ಇದ್ದುವಂತೆ.) ಶ್ರೀಕೃಷ್ಣನು ನಮ್ಮವನು ಎಂದು ಹೇಳಿಕೊಳ್ಳುವ ಹರ್ಷದಲ್ಲಿ ಈ ಆನಕ, ದುಂದುಭಿ (ಬೇರೆ ಬೇರೆ ಗಾತ್ರ ಮತ್ತು ಆಕೃತಿಯ ನಗಾರಿ, ಡೋಲು ಮುಂತಾದುವು) ಮೊದಲಾದ ವಾದ್ಯಗಳು ಮೊಳಗಿದುವು. (ಸರ್ಗ 1 ಶ್ಲೋಕ 36)
  • ವಸುಗಳು (ಎಂಟು ಮಂದಿ ವಸುಗಳು ಅಷ್ಟವಸುಗಳು ಎಂದು ಹೆಸರುಳ್ಳವರು) ಮತ್ತು ದೇವತೆಗಳು ಈ ಕೃಷ್ಣನು ಮುಂದೆ ವಾಸುದೇವ ಎಂದು ಹೆಸರಾಗುತ್ತಾನೆ ಎಂದು ಸಂತೋಷ ಪಟ್ಟು ಸ್ತುತಿಸಿದರು. (ಮಗುವು ನಮ್ಮ ಹೆಸರಿನಿಂದ ಪ್ರಖ್ಯಾತನಾಗುತ್ತಾನೆ ಎಂದು ಭಾವವು). ವಸುದೇವನ ಮಗನಾದುದರಿಂದ ವಾಸುದೇವ ಎಂದು ಹೇಳುವುದು ಸಾಮಾನ್ಯವಾದ ಲೋಕಾರೂಢಿಯ ಅರ್ಥ. "ಸರ್ವತ್ರ ವಾಸಯತಿ ಇತಿ ವಾಸುದೇವಃ" ಅನ್ನುವುದು ನಿಜವಾದ ಅರ್ಥ. (ಎಲ್ಲಕಡೆಯೂ ವಾಸಿಸುವುದರಿಂದ (ವ್ಯಾಪಿಸಿರುವುದರಿಂದ) ವಾಸುದೇವ ಅನ್ನುವುದು ಸರಿಯಾದ ಅರ್ಥ. ಈ ಹೆಸರು ಪರಮಾತ್ಮನಿಗೆ ಅನಾದಿ ಕಾಲದಿಂದಲೂ ಇದೆ). (ಸರ್ಗ 1 ಶ್ಲೋಕ 37)
ಯಾರಾದರೂ ದೊಡ್ಡವರ ಸಮಾಚಾರ ಬಂದರೆ "ಅವರು ನಮ್ಮವರು" ಎಂದು ಹೇಳಿಕೊಳ್ಳಲು ಎಲ್ಲರೂ ಇಷ್ಟಪಡುತ್ತಾರೆ. ಇದನ್ನೇ ವಿಡಂಬನಾತ್ಮಕವಾಗಿ ವಾದಿರಾಜರು ಇಲ್ಲಿ ಬಳಸಿಕೊಂಡಿದ್ದಾರೆ.

******

ಆಯಿತು. ಶ್ರೀಕೃಷ್ಣ ಶಿಶುರೂಪದಲ್ಲಿ ದೇವಕಿ-ವಾಸುದೇವರ ಮುಂದೆ ಮಲಗಿದ. ಮುಂದೆ ಏನಾಯಿತು?
  • ಮೋಡಗಳಿಗೆ ತಮ್ಮ ನೀಲಿಯ ಬಣ್ಣದ ಮೇಲೆ (ನೀಲ ಮೇಘ ಶ್ಯಾಮ) ಬಹಳ ಅಹಂಕಾರ ಇದ್ದಿತು. ಈಗ ಶ್ರೀಕೃಷ್ಣನು ಅವುಗಳಿಗಿಂತ ಸುಂದರವಾದ ಬಣ್ಣದಲ್ಲಿ ಬಂದು ಮಲಗಿದ್ದಾನೆ. ಅವನು ಪ್ರಕಟನಾಗಿದ್ದಾನೆ; ಹುಟ್ಟಲಿಲ್ಲ. ಯಾರೂ ಮೋಡಗಳ ನೀಲಿಯ ಬಣ್ಣ ಗಮನಿಸುತ್ತಿಲ್ಲ. ಈಗ ನೀಲ ಮೇಘ ಶ್ಯಾಮ ಅಂದರೆ ಶ್ರೀಕೃಷ್ಣನೇ ಎಂದು ಎಲ್ಲರೂ ತಿಳಿಯುತ್ತಿದ್ದಾರೆ. ಇದರಿಂದ ಕೋಪಗೊಂಡ ಮೇಘಗಳು (ಪಂದ್ಯದಲ್ಲಿ ಸೋತವರು ಕೋಪಗೊಂಡು ಮಾಡುವಂತೆ) ದೂರ ಹೊರಟುಹೋದುವು. ಸಮುದ್ರದ ಮೇಲೆ ಕಿರಿಚಾಡುತ್ತಾ ನೀರು ಸುರಿಸಿದವು. (ಗುಡುಗು-ಸಿಡಿಲು ಸಹಿತ ಮಳೆ ಬಂದಿತು). ಸಮುದ್ರ ಜಡವಾದುದರಿಂದ ಅದು ಪ್ರತಿಕ್ರಿಯಿಸಲಿಲ್ಲ. (ಕೈಲಾಗದವನು ಮೈ ಪರಚಿಕೊಂಡ ಎನ್ನುವಂತೆ ಮೋಡಗಳು ವರ್ತಿಸಿದವು). (ಸರ್ಗ 1 ಶ್ಲೋಕ 38)
  • ಸರೋವರಗಳು ಸಂತೋಷದಿಂದ ತುಂಬಿ ತುಳುಕಿದವು. (ಶ್ರಾವಣ ಮಾಸವಾದುದರಿಂದ ನೀರಿನಿಂದ ತುಂಬಿದ್ದವು). ನಮ್ಮಲ್ಲಿ ಇಲ್ಲಿಯವರೆಗೆ ಕಮಲಗಳು ಮಾತ್ರ ತುಂಬಿದ್ದವು. ಇನ್ನು ಮುಂದೆ ಕಮಲನಾಭನು ತನ್ನ ಪಾದಕಮಲಗಳಿಂದ, ಕಮಲದಂತಿರುವ ಮುಖವುಳ್ಳ ಸುಂದರಿಯರ ಸಹಿತ ನಮ್ಮಲ್ಲಿ ಬಂದು ಆಟವಾಡುತ್ತಾನೆ ಎಂದು ಬೀಗಿದವು. (ಮುಂದೆ ಗೋಪಿಯರ ಜೊತೆಯಲ್ಲಿ ಜಲಕ್ರೀಡೆ ಆಡುವನು ಎಂಬುದರ ಸೂಚನೆ). (ಸರ್ಗ 1 ಶ್ಲೋಕ 39)
  • ನಕ್ಷತ್ರಗಳು ಕೂಡ ಬಹಳ ಆನಂದಪಟ್ಟವು. ಎಲ್ಲೆಡೆಯೂ ತುಂಬಿರುವ ದೇವನು ಈಗ ಇಷ್ಟು ಚಿಕ್ಕ ಆಕೃತಿಯಲ್ಲಿ ಮಲಗಿದ್ದಾನೆ! ಈ ಸಂತೋಷದಲ್ಲಿ ಅವು ತಾವೇ ಒಂದು ಹಾರದಂತೆ ಅವನ ಸುತ್ತ ಇರುವಂತೆ ಕಂಗೊಳಿಸಿದವು. (ಸರ್ಗ 1 ಶ್ಲೋಕ 40)
ಮೊದಲ ಸರ್ಗದಲ್ಲಿ 67 ಶ್ಲೋಕಗಳಿವೆ. ಇಲ್ಲಿ 13 ಶ್ಲೋಕಗಳ ಸಾರಾಂಶ ಮಾತ್ರ ಕೊಟ್ಟಿದೆ. ಮೂಲ ಗ್ರಂಥ ಓದಿದಾಗ ಅದರ ಪೂರ್ಣ ಅನುಭವ ಆಗುವುದು. ಉಪಮೆ, ಉತ್ಪ್ರೇಕ್ಷೆ, ಶ್ಲೇಷೆ ಮುಂತಾದ ಅರ್ಥಲಂಕಾರ-ಶಬ್ದಾಲಂಕಾರ ಮೊದಲಾದುವುಗಳನ್ನು ಕಾಣಬಹುದು.

******

ಈ ಸಂಚಿಕೆ ಸ್ವಲ್ಪ ದೀರ್ಘ ಅನ್ನಿಸಬಹುದು. ಶ್ರೀ ವಾದಿರಾಜರು ಇರುವ ವಾಸ್ತವಾಂಶಗಳನ್ನು ಹೇಗೆ ಕಾವ್ಯವಾಗಿ ಪರಿವರ್ತಿಸಿದ್ದಾರೆ ಎನ್ನುವುದನ್ನು ತೋರಿಸುವ ಪ್ರಯತ್ನ ಇದಷ್ಟೇ. ತಾಳ್ಮೆಯಿಂದ ನೋಡಿದಾಗ ಇನ್ನೂ ಅನೇಕ ಅಂಶಗಳು ಹೊಳೆಯಬಹುದು. ನಮಗೆ ತಿಳಿಯುವ ಅಂಶಗಳು ಕಡಿಮೆಯೇ. 

ಶ್ರೀಕೃಷ್ಣನು ಕಾಣಿಸಿಕೊಂಡಾಗ ವಸುದೇವ-ದೇವಕಿಯರ ಬೇಡಿಗಳು ತಾವಾಗಿಯೇ ಕಳಚಿಕೊಂಡವು. ಅವನನ್ನು ವಸುದೇವ ಗೋಕುಲದಲ್ಲಿ ಬಿಟ್ಟು ಬಂದ ತಕ್ಷಣ ಬೇಡಿಗಳು ಮತ್ತೆ ಕೂಡಿಕೊಂಡವು. 

ಪರಮಾತ್ಮನನ್ನು ನೆನೆದಾಗ ಸಂಸಾರದಿಂದ ಮುಕ್ತಿ. ಅವನನ್ನು ಮರೆತ ತಕ್ಷಣ ಸಂಸಾರ ಬಂಧನ. ನಂಬಿದವರಿಗೆ ಇದೇ ಜ್ಞಾನ!

Wednesday, September 2, 2026

ವಾದಿರಾಜರ ರುಕ್ಮಿಣೀಶ ವಿಜಯ


ಮಹಾಕಾವ್ಯಗಳ ಸಂದರ್ಭದಲ್ಲಿ ಮಾಘ ಕವಿಯ ಬಹು ಮಾನ್ಯ ಕೃತಿ "ಶಿಶುಪಾಲ ವಧ" ಮತ್ತು ಅದಕ್ಕೆ ಸಂಬಂಧಿಸಿದಂತೆ ಶ್ರೀ ವೇದಾಂತ ದೇಶಿಕರ "ಯಾದವಾಭ್ಯುದಯ" ಕೃತಿಯ ಬಗ್ಗೆ ಸ್ವಲ್ಪ ವಿಚಾರವನ್ನು ಹಿಂದಿನ ಒಂದು ಸಂಚಿಕೆಯಲ್ಲಿ ಮಾಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಯನ್ನು ಓದಬಹುದು. ಶ್ರೀ ವಾದಿರಾಜರ "ರುಕ್ಮಿಣೀಶ ವಿಜಯ" ಕೃತಿ ಸಹ ಇದೇ ಕಥಾವಸ್ತು ಒಳಗೊಂಡದ್ದು. 

"ಕವಿಕುಲಗುರು" ಎಂದು ಗೌರವ ಪಡೆದಿರುವ ಕಾಳಿದಾಸ ಮಹಾಕವಿಯ "ರಘುವಂಶ" ಮತ್ತು "ಕುಮಾರಸಂಭವ", ಭಾರವಿ ಕವಿಯ "ಕಿರಾತಾರ್ಜುನೀಯಂ", ಮಾಘ ಕವಿಯ "ಶಿಶುಪಾಲ ವಧ" ಮತ್ತು ಶ್ರೀಹರ್ಷ ಕವಿಯ "ನೈಷಧೀಯ ಚರಿತ", ಈ ಐದು ಕಾವ್ಯಗಳು ಸಂಸ್ಕೃತದ "ಪಂಚ ಮಹಾಕಾವ್ಯಗಳು" ಎಂದು ಪ್ರಸಿದ್ಧವಾಗಿವೆ. ಸಂಸ್ಕೃತ ಕಲಿಯುವ ವಿದ್ಯಾರ್ಥಿಗಳಿಗೆ ಈ ಐದು ಕಾವ್ಯಗಳಲ್ಲಿ ಯಾವುದಾದರೂ ಒಂದನ್ನು ಓದಲೇಬೇಕೆಂಬ ಅಲಿಖಿತ ನಿಯಮ ಉಂಟು. ಒಂದಕ್ಕಿಂತ ಹೆಚ್ಚು ಓದಿದರೆ ಒಳ್ಳೆಯದು. ಎಲ್ಲವನ್ನೂ ಓದಿದರೆ ಬಹಳ ಒಳ್ಳೆಯದು. ಕೆಳಗಿನ ದರ್ಜೆ ತರಗತಿಗಳಿಗೆ ಇವುಗಳ ಯಾವುದಾದರೂ ಒಂದು ಭಾಗವನ್ನಾದರೂ ಪಠ್ಯ ಕ್ರಮದಲ್ಲಿ ಸೇರಿಸಿರುತ್ತಾರೆ. 

ಕಾಳಿದಾಸ ಕವಿಯ ಕಾಲದ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿವೆ. ಕ್ರಿಸ್ತಪೂರ್ವ ಕಾಲದಿಂದ ಕ್ರಿಸ್ತಶಕ ನಾಲ್ಕು-ಐದನೆಯ ಶತಮಾನದವರೆಗೂ ಅವನ ಕಾಲವನ್ನು ಎಳೆದಾಡುತ್ತಾರೆ. ಭಾರವಿಯು ಆರನೆಯ ಶತಮಾನದ ಕವಿ. ಮಾಘನು ಅವನ ನಂತರ, ಅಂದರೆ ಏಳನೆಯ ಶತಮಾನದವನು. ಶ್ರೀಹರ್ಷನು ಹನ್ನೆರಡನೆಯ ಶತಮಾನದ ಕವಿ. ವೇದಾಂತ ದೇಶಿಕರು ಹದಿಮೂರು-ಹದಿನಾಲ್ಕನೆಯ ಶತಮಾನದವರು. ವಾದಿರಾಜರು ಹದಿನಾರನೆಯ ಶತಮಾನದವರು. ನೂರಾರು ವರ್ಷಗಳು ಕಳೆದರೂ ಈ ಕೃತಿಗಳು ಇನ್ನೂ ಜನಪ್ರಿಯವಾಗಿ ಮಾನ್ಯವಾಗಿವೆ.

ಮಾಘನ "ಶಿಶುಪಾಲ ವಧ" ಶ್ರೀಕೃಷ್ಣನ ಕಥೆಗೆ ಸಂಬಂಧಿಸಿದುದು. ವೇದಾಂತ ದೇಶಿಕರ "ಯಾದವಾಭ್ಯುದಯ' ಮತ್ತು ವಾದಿರಾಜರ "ರುಕ್ಮಿಣೀಶ ವಿಜಯ" ಕೂಡ ಹೀಗೆಯೇ ಶ್ರೀ ಕೃಷ್ಣನ ಕಥೆಯೇ. ಮೇಲೆ ಹೇಳಿದ ಸಂಚಿಕೆಯಲ್ಲಿ "ಯಾದವಾಭ್ಯುದಯ" ಬಗೆಗೆ ನೋಡಿದೆವು. ಈಗ ವಾದಿರಾಜರ "ರುಕ್ಮಿಣೀಶ ವಿಜಯ" ಕೃತಿಯ ಬಗ್ಗೆ ನೋಡೋಣ.

******

ಶ್ರೀ ವಾದಿರಾಜ ತೀರ್ಥರು (1481-1600) ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಸೋದೆ ಮಠದ ಪೀಠಾಧಿಪತಿಗಳಾಗಿದ್ದವರು. ಒಂದು ನೂರಾ ಇಪ್ಪತ್ತು ವರ್ಷಗಳ ದೀರ್ಘ ಜೀವನ ನಡೆಸಿದವರು. ಶ್ರೀ ವಾಗೀಶ ತೀರ್ಥರ ಬಳಿ ವಿದ್ಯಾಭ್ಯಾಸ ಮಾಡಿದವರು. ಉಡುಪಿಯ ಶ್ರೀಕೃಷ್ಣನ ಪೂಜೆಗೆ ಹಿಂದೆ ಇದ್ದ ಅಷ್ಟ ಮಠಗಳ ಎರಡೆರಡು ತಿಂಗಳ ಸರಣಿಯನ್ನು ಎರಡೆರಡು ವರ್ಷ ಪರ್ಯಾಯ ಎಂದು ಮಾಡಿದವರು ಇವರು. ಎರಡೆರಡು ವರುಷಗಳ ಪರ್ಯಾಯ ಇದ್ದರೆ ಪರ್ಯಾಯ ಪೀಠಾಧಿಪತಿಗಳು ಹೆಚ್ಚಿನ ಧಾರ್ಮಿಕ ಕೆಲಸಗಳನ್ನು ನಡೆಸಲು ಅನುಕೂಲ ಆಗುವುದು, ಮತ್ತು ಇತರ ಪೀಠಾಧಿಪತಿಗಳು ದೀರ್ಘ ದೇಶ ಸಂಚಾರ ಮಾಡಬಹುದು ಎನ್ನುವ ಕಾರಣಕ್ಕೆ ಹೀಗೆ ಬದಲಾವಣೆ ಮಾಡಿದರು ಎಂದು ಹೇಳುತ್ತಾರೆ. ಕಾಲು ನಡಿಗೆಯಲ್ಲಿ ಸಂಚಾರ ಮಾಡಬೇಕಿದ್ದ ಸಮಯದ ಬದಲಾವಣೆ ಇದು. 

ಹೀಗೆ ಎರಡು ವರುಷಗಳ ಅವಧಿ ಒಂದು ಪರ್ಯಾಯ ಮಾಡಿದುದರಿಂದ ಒಂದು ಮಠಕ್ಕೆ ಹದಿನಾಲ್ಕು ವರುಷಗಳಿಗೆ ಒಮ್ಮೆ ಶ್ರೀಕೃಷ್ಣನ ಪೂಜಾ ಸರದಿ ಸಿಗುತ್ತದೆ. ಹೀಗೆ ಎರಡು ವರುಷಗಳಿಗೆ ಒಮ್ಮೆ ಪರ್ಯಾಯ ಬದಲಾವಣೆ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯುವುದನ್ನು ನಾವು ಈಗಲೂ ನೋಡುತ್ತೇವೆ. ಮೂರು ಬಾರಿ ಎರಡು ತಿಂಗಳ ಪರ್ಯಾಯಗಳ ನಂತರ, ಹದಿನಾಲ್ಕು ವರ್ಷಗಳ ದೀರ್ಘ ಅವಧಿ ಆದರೂ ಐದು ಬಾರಿ ತಾವೇ ಎರಡು ವರ್ಷಗಳ ಪರ್ಯಾಯ ಪೀಠಾಧೀಶರಾಗಿದ್ದುದು ಶ್ರೀ ವಾದಿರಾಜರ ಹೆಗ್ಗಳಿಕೆ. ನೂರಾ ಇಪ್ಪತ್ತು ವರುಷ ಜೀವನ ನಡೆಸಿದುದರಿಂದ ಇದು ಸಾಧ್ಯ ಆಯಿತು. ಕೆಳದಿ ಮತ್ತು ಸೋದೆ ಸಂಸ್ಥಾನಗಳ ಅರಸರು ಇವರನ್ನು ರಾಜಗುರುಗಳಾಗಿ ನಡೆಸಿಕೊಂಡು ಅನೇಕ ಜಹಗೀರುಗಳನ್ನು ಕೊಟ್ಟಿದ್ದರು. 

ಶ್ರೀ ವಾದಿರಾಜರು ಕುಂದಾಪುರ ಬಳಿಯ ಹೂವಿನಕೆರೆ ಗ್ರಾಮದಲ್ಲಿ ಜನಿಸಿದವರು. ದ್ವೈತ ಪರಂಪರೆಯಲ್ಲಿ ಪೀಠಾಧಿಪತಿಗಳಾಗಿ ಅನೇಕ ಸ್ವತಂತ್ರ ಕೃತಿಗಳನ್ನೂ, ಹಿಂದಿನ ಅನೇಕ ಗ್ರಂಥಗಳಿಗೆ ಟೀಕೆ-ಟಿಪ್ಪಣಿಗಳನ್ನೂ ರಚಿಸಿದ್ದಾರೆ. ಸಂಸ್ಕೃತ ಭಾಷೆ ಮಾತ್ರವಲ್ಲದೆ ಕನ್ನಡ ಮತ್ತು ತುಳು ಭಾಷೆಯಲ್ಲಿ ಅನೇಕ ದೇವರನಾಮ ಮತ್ತು ದೀರ್ಘ ಗೇಯಕವನ ರಚಿಸಿದ್ದಾರೆ. "ಯುಕ್ತಿಮಾಲಿಕಾ", "ವೈಕುಂಠ ವರ್ಣನೆ", "ಲಕ್ಷ್ಮಿ ಶೋಭಾನೆ" ಮುಂತಾದುವು ಜನಪ್ರಿಯ ಕೃತಿಗಳು. ತಮ್ಮ ದೇಶ ಸಂಚಾರದ ಕಾಲದಲ್ಲಿ ಕಂಡ ಕ್ಷೇತ್ರಗಳ ವಿವರಣೆಯನ್ನು "ತೀರ್ಥ ಪ್ರಭಂಧ" ಎಂಬ ಗ್ರಂಥದಲ್ಲಿ ಕೊಟ್ಟಿದ್ದಾರೆ. "ಹಯವದನ" ಎನ್ನುವ ತಮ್ಮ ಆರಾಧ್ಯ ದೈವದ ಅಂಕಿತದಲ್ಲಿ ಅನೇಕ ಕನ್ನಡ ದೇವರನಾಮಗಳನ್ನು ರಚಿಸಿದ್ದಾರೆ. ಈಗಲೂ ಇವು ಜನಪ್ರಿಯವಾಗಿ ಪ್ರತಿನಿತ್ಯ ಮನೆಮನೆಗಳಲ್ಲಿ ಹಾಡಲ್ಪಡುತ್ತಿವೆ.
******

ಹೀಗೆ ಒಮ್ಮೆ ದೀರ್ಘಕಾಲದ ದೇಶ ಸಂಚಾರದಲ್ಲಿದ್ದ ಸಮಯದಲ್ಲಿ ಶ್ರೀ ವಾದಿರಾಜರು ಪುಣ್ಯಪಟ್ಟಣ ತಲುಪಿದರು. ಪುಣ್ಯಪಟ್ಟಣ ಅನ್ನುವುದು ಈಗಿನ ಪೂನಾ ಅಥವಾ ಪುಣೆ ನಗರದ ಹಿಂದಿನ ಹೆಸರು. ಆಗ ಅಲ್ಲಿ ಪೇಶ್ವೆಯವರ ಆಡಳಿತ ಕಾಲ. ಪೇಶ್ವೆ ಅನ್ನುವುದು ಒಂದು ಹುದ್ದೆ. ಹೆಚ್ಚಿನ ಜನ ತಿಳಿದಿರುವಂತೆ ಅದು ಮರಾಠ ರಾಜರ ಕಾಲದಲ್ಲಿ ಬಂದ ಹುದ್ದೆ ಅಲ್ಲ. ಅದೊಂದು ಪರ್ಷಿಯನ್ ಭಾಷೆಯ ಪದ. ಅದರ ಅರ್ಥ "ನಾಯಕ" ಅಥವಾ "ಅಗ್ರೇಸರ" ಎಂದು. ಮೊದಲು ಈ ಪದವನ್ನು ಹದಿನಾಲ್ಕು-ಹದಿನೈದನೆಯ ಶತಮಾನದಲ್ಲಿ ಬಳಕೆಗೆ ತಂದವರು ಬಹಮನಿ ಸುಲ್ತಾನರು. ಸುಲ್ತಾನರ ನಂತರದ ಅಧಿಕಾರಿಗಳಲ್ಲಿ ಪೇಶ್ವೆ ಅತ್ಯಂತ ಎತ್ತರದವರು. ಮರಾಠ ರಾಜರ ಕಾಲದಲ್ಲಿ ಶಿವಾಜಿ ಮಹಾರಾಜರು ಮೋರೋಪಂತ ಪಿಂಗಳೆ ಅವರನ್ನು ಮೊದಲ ಮರಾಠ ಪೇಶ್ವೆ ಆಗಿ ನೇಮಕ ಮಾಡಿದರು. ಪೇಶ್ವೆ ಪದಕ್ಕೆ ಸಮಾನಾಂತರವಾಗಿ "ಪಂತ ಪ್ರಧಾನ" (ಪ್ರಧಾನ ಮಂತ್ರಿ) ಎನ್ನುವ ಪದ ಬಳಕೆ ಆಯಿತು. ಪಂತ ಪ್ರಧಾನ ಅನ್ನುವ ಪದ ಮರಾಠಿ ಭಾಷೆಯಲ್ಲಿ ಈಗಲೂ ಬಳಕೆಯಲ್ಲಿ ಉಂಟು. ಆದರೂ ಪೇಶ್ವೆ ಅನ್ನುವ ಪದದ ಬಳಕೆ ಜನಸಾಮಾನ್ಯರಲ್ಲಿ ಮುಂದುವರೆಯಿತು. "ತಹಸೀಲ್ದಾರ್" ಅನ್ನುವ ಪದ ಬಂದರೂ ನಮ್ಮ ಜನ "ಅಮಲ್ದಾರ್" ಪದ ಬಳಸುತ್ತಿದ್ದ ರೀತಿಯಲ್ಲಿ.

ಪುಣೆಯ ನಗರದ ಪೇಶ್ವೆಗಳು ಸಾಹತ್ಯ-ಸಂಸ್ಕೃತಿಗಳ ಪೋಷಕರು ಆಗಿದ್ದರು. ಶ್ರೀ ವಾದಿರಾಜರು ಅಲ್ಲಿದ್ದ ಕಾಲದಲ್ಲಿ ಪೇಶ್ವೆಗಳು ಒಂದು ವಿದ್ವನ್ಮಂಡಳಿ ಏರ್ಪಡಿಸಿ, ಸಂಸ್ಕೃತ ಕಾವ್ಯಗಳ ತೌಲನಿಕ ಅಧ್ಯಯನ ಏರ್ಪಡಿಸಿದ್ದರು. ಈ ಅಧ್ಯಯನದಲ್ಲಿ ಮಾಘ ಕವಿಯ "ಶಿಶುಪಾಲ ವಧ" ಶ್ರೇಷ್ಠ ಕಾವ್ಯ ಎಂದು ತೀರ್ಮಾನಿಸಿದರು. ಕಾವ್ಯವನ್ನು ಆನೆಯ ಮೇಲಿನ ಅಂಬಾರಿಯಲ್ಲಿ ಇಟ್ಟು, ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗೌರವ ಅರ್ಪಿಸಿದರು. ಈ ಸಂಭ್ರಮ ಶ್ರೀ ವಾದಿರಾಜರಿಗೆ ತಿಳಿಯಿತು. ಕಾವ್ಯದ ಹೆಸರು ಅವರಿಗೆ ರುಚಿಸಲಿಲ್ಲ. ಖಳನಾಯಕನಾದ ಶಿಶುಪಾಲನಿಗೆ ಗ್ರಂಥದ ಹೆಸರಿನಲ್ಲಿ ಪ್ರಾಮುಖ್ಯತೆ ಕೊಟ್ಟು ಕಥಾನಾಯಕನಾದ ಶ್ರೀಕೃಷ್ಣನನ್ನು ಕೈಬಿಟ್ಟುದುದು ಅವರಿಗೆ ಸರಿ ಬರಲಿಲ್ಲ. 

ಶ್ರೀ ವಾದಿರಾಜರು ನಂತರ ಪೇಶ್ವೆಯವರನ್ನು ಭೇಟಿ ಮಾಡಿದರು. "ಇದೇ ಕಥಾವಸ್ತುವಿನ ಮೇಲೆ ನಾವೂ ಒಂದು ಕಾವ್ಯ ರಚಿಸಿದ್ದೇವೆ. "ಶ್ರೀ ರುಕ್ಮಿಣೀಶ ವಿಜಯ" ಎಂದು ಅದರ ಹೆಸರು. ಅದು ನಮ್ಮ ಮೂಲ ಸ್ಥಾನವಾದ ಉಡುಪಿ ನಗರದಲ್ಲಿದೆ. ಅದನ್ನು ತರಿಸಲು ನಮಗೆ ಇಪ್ಪತ್ತು ದಿನಗಳು ಕಾಲಾವಕಾಶ ಬೇಕು. ಅಲ್ಲಿಂದ ತರಿಸುತ್ತೇವೆ. ಅದನ್ನೂ ನಿಮ್ಮ ವಿದ್ವನ್ಮಂಡಳಿ ಪರಿಶೀಲಿಸಬೇಕು ಎಂದು ನಮ್ಮ ಅಭಿಲಾಷೆ" ಎಂದರು. ಪೇಶ್ವೆಯವರು ಅದಕ್ಕೆ ಒಪ್ಪಿದರು. 

******

ಹೀಗೆ ನಡೆದಾಗ ಗ್ರಂಥ ಇನ್ನೂ ರಚನೆ ಆಗಿರಲಿಲ್ಲ. ಮಾರನೆಯ ದಿನದಿಂದ ಶ್ರೀ ವಾದಿರಾಜರು ತಮ್ಮ ಸಂಸ್ಥಾನ ಪೂಜೆಯ ನಂತರ, ಭಿಕ್ಷಾ ಸ್ವೀಕರ ಮಾಡುವ ಮೊದಲು, ಈ ನಡುವಿನ ವೇಳೆಯಲ್ಲಿ ಪ್ರತಿದಿನ ಒಂದೊಂದು ಸರ್ಗದಂತೆ ತಮ್ಮ ಶಿಷ್ಯರಿಗೆ ಹೇಳುತ್ತಾ ಹೋದರು. ಶಿಷ್ಯರು ಬರೆದಿಟ್ಟುಕೊಂಡರು. ಒಟ್ಟು ಗ್ರಂಥ 19 ಸರ್ಗಗಳಲ್ಲಿ 1241 ಶ್ಲೋಕಗಳನ್ನು ಒಳಗೊಂಡಿದೆ. ಹತ್ತೊಂಬತ್ತು ದಿನಗಳಲ್ಲಿ ಗ್ರಂಥ ಪೂರ್ಣವಾಯಿತು. ಪ್ರತಿದಿನ ಸುಮಾರು ಅರವತ್ತು-ಎಪ್ಪತ್ತು ಶ್ಲೋಕಗಳು. ಹೀಗೆ ರಚನೆ. ಸತತ ಶ್ರೀಮದ್ಭಾಗವತ ಪಾಠ-ಪ್ರವಚನ ಮಾಡುತ್ತಿದ್ದ ಅವರಿಗೆ ವಿಷಯದ ಹುಡುಕಾಟ ಇರಲಿಲ್ಲ. ಗೊತ್ತಿದ್ದ ವಿಷಯವನ್ನೇ ಕಾವ್ಯವಾಗಿ ಪರಿವರ್ತಿಸಬೇಕಿತ್ತು. ಶ್ರೀಮದ್ಭಾಗವತದ ಹತ್ತನೆಯ ಸ್ಕಂದದ ಶ್ರೀಕೃಷ್ಣನ ಅವತಾರದಿಂದ ರುಕ್ಮಿಣಿ ಸ್ವಯಂವರ ನಡೆಯುವವರೆಗಿನ ಕಥೆ. ಅದಾಯಿತು. 

ಇಪ್ಪತ್ತನೆಯ ದಿನ ಪೂರ್ಣವಾದ ಕಾವ್ಯದ ವಾಚನವಾಯಿತು. ಇಪ್ಪತ್ತೊಂದನೆಯ ದಿನ ಗ್ರಂಥವನ್ನು ವಿದ್ವನ್ಮಂಡಳಿ ಮುಂದೆ ಪರಿಶೀಲನೆಗೆ ಇಡಲಾಯಿತು. ಮಂಡಳಿ ತನ್ನ ಅವಗಾಹನೆಯ ನಂತರ ಗ್ರಂಥ ಉತ್ತಮ ಕಾವ್ಯ ಗುಣಗಳಿಂದ ಕೂಡಿದ ತೂಕದ ಕೃತಿ ಎಂದು ತೀರ್ಮಾನಿಸಿತು. ಪೇಶ್ವೆಯವರು ಈ ಗ್ರಂಥವನ್ನೂ ಆನೆಯ ಮೇಲೆ ಅಂಬಾರಿಯಲ್ಲಿಟ್ಟು ಪುಣೆ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿದರು. 

ಶ್ರೀ ರುಕ್ಮಿಣೀಶ ವಿಜಯ ರಚನೆಯ ಸಂದರ್ಭ ಕುರಿತು ಜನಜನಿತವಾಗಿರುವ ಸಂಗತಿ ಇದು. ಶ್ರೀ ವಾದಿರಾಜರು ಸೋದೆಗೆ ಹಿಂದಿರುಗಿದ ನಂತರ ಸೋದೆಯ ಅರಸರು ಸಹ ತಮ್ಮ ರಾಜಧಾನಿಯಲ್ಲಿ ಪುಣೆಯಲ್ಲಿ ನಡೆದಂತೆಯೇ ಈ ಗ್ರಂಥದ ಮೆರವಣಿಗೆ ಮಾಡಿಸಿದರು. 

ಶ್ರೀ ರುಕ್ಮಿಣೀಶ ವಿಜಯ ಗ್ರಂಥದ ಒಂದೆರಡು ಸಂಗತಿಗಳನ್ನು ಮತ್ತೊಮ್ಮೆ ನೋಡೋಣ.

******

ನಮ್ಮಲ್ಲಿ ಉಪಲಬ್ಧವಿರುವ ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಉತ್ತಮ ಕಾವ್ಯ ಗುಣಗಳು ತುಂಬಿರುವ ಅನೇಕ ಕೃತಿಗಳಿವೆ. ಈಗಾಗಲೇ ಪರಕೀಯರ ಧಾಳಿಗಳಲ್ಲಿ ಅನೇಕ ಬಹುಮೂಲ್ಯ ಗ್ರಂಥಗಳು ನಷ್ಟವಾಗಿ ನಮಗೆ ಉಳಿದಿರುವುದು ಬಹಳ ಅಲ್ಪ. ಭಾರತೀಯ ತತ್ವ ಶಾಸ್ತ್ರದ ಯಾವುದೇ ಶಾಖೆಯಿರಲಿ, ಅದರ ಪ್ರವರ್ತಕರು ಮತ್ತು ಮುಂದೆ ಅವನ್ನು ಬಲಪಡಿಸಿದ ಮಹನೀಯರುಗಳು ಅಪ್ರತಿಮ ವಿದ್ವಾಂಸರುಗಳು. ಹೀಗಿಲ್ಲದಿದ್ದ ಪಕ್ಷದಲ್ಲಿ ಈ ಕೃತಿಗಳು ನೂರಾರು-ಸಾವಿರಾರು ವರುಷಗಳು ಉಳಿದುಕೊಂಡು ಬಂದು ಪ್ರಚಲಿತ ಇರುತ್ತಿರಲಿಲ್ಲ. ದುರದೃಷ್ಟವಶಾತ್ ಇಂತಹ ಕೃತಿಗಳನ್ನು ನಿರ್ವಿಕಾರ ಭಾವದಿಂದ ನೋಡುವ ಮನಸ್ಥಿತಿ ಅನೇಕ ಜನರಿಗಿಲ್ಲ. ಈ ಕಾರಣದಿಂದಾಗಿ ಈ ಗ್ರಂಥಗಳು ಕೇವಲ ಅವರವರ ಮತಗಳ ಚೌಕಟ್ಟಿನಲ್ಲಿಯೇ ಬಂದಿಯಾಗಿವೆ. 

ನಮ್ಮ ತೋಟದ ಹಣ್ಣು ನಮಗೆ ಚೆನ್ನ. ಸರಿ. ಹಾಗೆಂದು ಬೇರೆ ತೋಟದ ಹಣ್ಣುಗಳು ನಮಗೆ ಬೇಡವೇ ಬೇಡ ಅನ್ನುವುದು ಎಷ್ಟು ಸರಿ? ಹಾಗೆ ಅಭಿಪ್ರಾಯಪಟ್ಟಲ್ಲಿ ನಷ್ಟ ನಮಗೇ ಅಲ್ಲವೇ?

Monday, December 1, 2025

ತಳೋದರಿಯ ಮಾತುಳನ ಮಾವನ...




ಹಿಂದಿನ ಸಂಚಿಕೆಯಲ್ಲಿ ಸಹೋದರಿ, ತಳೋದರಿ, ಮತ್ತು ಮಂಡೋದರಿ ಪದಗಳ ಸಾಮ್ಯ ಮತ್ತು ಭೇದಗಳ ಸ್ವಲ್ಪಮಟ್ಟಿನ ವಿವರಣೆ ನೋಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ವಿಶೇಷವಾಗಿ "ತಳೋದರಿ" ಅನ್ನುವ ಪದದ ಹಿನ್ನೆಲೆ ಮತ್ತು ಸೊಬಗು ಏನು ಎನ್ನುವುದನ್ನು ನೋಡಿದೆವು. 

ಎಲಿಜಬೆತ್ ಟೇಲರ್ ಅನ್ನುವ ಪ್ರಸಿದ್ಧ ಆಂಗ್ಲ ಚಲನಚಿತ್ರಗಳ ನಟಿ "ಕ್ಲಿಯೋಪಾತ್ರ" ಚಿತ್ರೀಕರಣದ ವೇಳೆಯಲ್ಲಿ ಇಪ್ಪತ್ತೊಂದು ಅಂಗುಲದ ನಡು ಹೊಂದಿದ್ದಳು ಎನ್ನುವುದು ಇತಿಹಾಸದಲ್ಲಿ ದಾಖಲಾಗಿದೆ.  1963ರ ಚಲನಚಿತ್ರದಲ್ಲಿ ರೋಮ್ ನಗರಕ್ಕೆ ಅವಳು ಬರುವ ದೃಶ್ಯದ ಚಿತ್ರೀಕರಣ ಈಗಲೂ ನೋಡುಗರನ್ನು ಆಕರ್ಷಿಸುತ್ತದೆ. AI ಮೊದಲಾದ ಸಾಧನಗಳಿಲ್ಲದ ಕಾಲದ ಅಂತಹ ದೃಶ್ಯದ ಚಿತ್ರೀಕರಣ ಒಂದು ವಿಸ್ಮಯವೇ ಸರಿ. "ಕೃಶಾಂಗಿ" ಎನ್ನುವ ಪದಕ್ಕೆ ಮುಖ್ಯವಾದ ಲಕ್ಷಣ ಹೀಗೆ ಸಣ್ಣ ನಡುವಿರುವುದು. 

ಅನೇಕ ಸಾಹಿತ್ಯ ಕೃತಿಗಳಲ್ಲಿ ಸ್ತ್ರೀಯರ ವರ್ಣನೆಗಳಲ್ಲಿ ಈ ನಡುವಿನ ಸೂಕ್ಷ್ಮತೆ ಬಗ್ಗೆ ವಿವರಣೆಗಳಿವೆ. ಹಸೆಗೆ ಕರೆಯುವ ಹಾಡುಗಳಲ್ಲಿ "ಬಡ ನಡುವಿನ ಬಾಲೆಯರು" ಎಂದು ಸಂಬೋಧನೆಗಳಿವೆ. ಪುರುಷರಿಗೇ ಆಗಲಿ, ಸ್ತ್ರೀಯರಿಗಗೇ ಆಗಲಿ, ಕೆಲವು ಅಂಗಗಳು ಹ್ರಸ್ವವಾಗಿರಬೇಕು. ಕೆಲವು ದೀರ್ಘವಾಗಿರಬೇಕು. (ಕೈ ಮೊಟುಕಾಗಿದ್ದು ಮೂಗು ಬಲು ಉದ್ದವಿದ್ದರೆ ಹೇಗೆ?).  ಕೆಲವು ಸಣ್ಣ ಇರಬೇಕು. ಕೆಲವು ದೊಡ್ಡವಿರಬೇಕು. (ಕೈ-ಕಾಲು ಸಣ್ಣ; ಹೊಟ್ಟೆ ಡುಬ್ಬಣ್ಣ ಅನ್ನುವುದು ಕೇಳಿದ್ದೆವಲ್ಲ!). ಕೆಲವು ಅವಕ್ಕೆ ಅನುಗುಣವಾದ ಬಣ್ಣ ಹೊಂದಿರಬೇಕು. ಹೀಗೆ ಸೌಂದರ್ಯ ಶಾಸ್ತ್ರಗಳ ನಿಯಮಗಳು ಉಂಟು. 

"ನಾವೇನು ಮಾಡುವುದು? ದೇವರು ಅಂಗಾಂಗ ಕೊಟ್ಟಂತಿದ್ದೇವೆ" ಎಂದು ದೇವರ ತಲೆಯಮೇಲೆ ಹೇರುವುದುಂಟು. ಆಯಿತು. ನಮ್ಮ ವಿಷಯಗಳಲ್ಲಿ ಅದು ಸರಿ ಇರಬಹುದು. ಹಾಗಿದ್ದರೂ, ಸೌಂದರ್ಯ ವರ್ಧನೆ ಮಾಡಲು ಎಲ್ಲರೂ ಪಡುವ ಪಾಡು ಅಷ್ಟಿಷ್ಟಲ್ಲ. ಬೊಕ್ಕತಲೆಗೆ ಕೂದಲು ಕಸಿ ಮಾಡುವುದರಿಂದ ಹಿಡಿದು ವಾರಕ್ಕೊಮ್ಮೆ ಮುಖ ತಿದ್ದುವ-ತೀಡುವ ಅಂಗಡಿಗಳ ಮುಂದೆ ಇರುವ ಸರತಿಯ ಸಾಲು ಕಂಡಿದ್ದೆವಲ್ಲ. ನಮ್ಮ ಕಥೆ-ಕವನಗಳ ಪಾತ್ರಗಳಲ್ಲಿ ಹೀಗೆ ಚೆನ್ನಾಗಿರುವುದು ವಿವರಿಸುವುದಕ್ಕೆ ಏನಡ್ಡಿ? ಹೀಗೆ ಚೆನ್ನಾಗಿರುವವರೂ ಅನೇಕರು ಇದ್ದಾರಲ್ಲವೆ? ರಾಕ್ಷಸರನ್ನು ಚಿತ್ರಿಸುವಾಗ ಇವಕ್ಕೆ ವಿರುದ್ಧವಾದ ವರ್ಣನೆಗಳೂ ಉಂಟಲ್ಲ! 

"ತಳೋದರಿ" ಪದವನ್ನು ಕೇವಲ ಒಂದು ಸಾರಿ ಮಾತ್ರ ಉಪಯೋಗಿಸಿ ಅದನ್ನು ವಿಶ್ವ ವಿಖ್ಯಾತ ಮಾಡಿದ ಶ್ರೇಯಸ್ಸು ನಮ್ಮ ಹೆಮ್ಮೆಯ ಕವಿ "ಕುಮಾರವ್ಯಾಸ" ಬಿರುದಿನ ಗದುಗಿನ ನಾರಾಣಪ್ಪನಿಗೆ ಸೇರಬೇಕು ಎಂದು ಸಂಚಿಕೆಯ ಕೊನೆಯಲ್ಲಿ ಹೇಳಿದ್ದೆವು. ಅದು ಏಕೆ ಎಂದು ಈಗ ನೋಡೋಣ. 

*****

ಮನೆಗೆ ಬಂದ ಅತಿಥಿ-ಅಭ್ಯಾಗತರನ್ನು ತೃಪ್ತಿ ಪಡಿಸಲು ಗೃಹಿಣಿ ಮಾಡುವ ಕಸರತ್ತುಗಳಿಗೂ ಕವಿ ತನ್ನ ಕಾವ್ಯ ರಚನೆಯಲ್ಲಿ ಕಾಣುವ ಕಷ್ಟಗಳಿಗೂ ಏನೋ ಒಂದು ವಿಧವಾದ ಸಾದೃಶ್ಯವಿದೆ. ಹಿಂದೆ ಮಾಡಿದ ಅಡಿಗೆ ಪುನರಾವರ್ತನೆ ಆಗಬಾರದು. ಕವಿಗೆ ಹಿಂದೆ ಮಾಡಿದ ವರ್ಣನೆ ಮತ್ತೆ ಬಂದಿರಬಾರದು. ಉಗ್ರಾಣದಲ್ಲಿ ಇರುವ ಪದಾರ್ಥಗಳಿಂದಲೇ ಅಡಿಗೆ ತಯಾರಾಗಬೇಕು. ಕವಿಯ ಪದಸಂಪತ್ತಿನಿಂದಲೇ ಕಾವ್ಯ ಮೂಡಬೇಕು. ಕೆಲವಾದರೂ ಮಾಡಿದ ಪದಾರ್ಥ ಮಕ್ಕಳಿಗೂ ಹಿಡಿಸಬೇಕು. ಹೆಚ್ಚು ತಿಳಿಯದ ಓದುಗರಿಗೂ ಸ್ವಲ್ಪವಾದರೂ ಅರ್ಥ ಆಗುವಂತಿರಬೇಕು. ದೊಡ್ಡವರಿಗೂ ಇಷ್ಟವಾಗುವ ಉಪ್ಪು-ಹುಳಿ-ಖಾರ  ಇರಬೇಕು. ತಿಳಿದ ಓದುಗರಿಗೂ ರಂಜಿಸುವ ರೀತಿ ಕಾವ್ಯ ಇರಬೇಕು. 

ಅತಿಥಿ-ಅಭ್ಯಾಗತರಲ್ಲಿ ಅಡಿಗೆ ಮಾಡುವುದರಲ್ಲಿ ನುರಿತವರು ಇರುತ್ತಾರೆ. ಅವರನ್ನೂ ಮೆಚ್ಚಿಸಬೇಕು. ಕವಿಗೂ ಪಂಡಿತ ವಿಮರ್ಶಕ ಜನರ ಮನ ಗೆಲ್ಲಬೇಕು. ಮುಂದೊಂದು ದಿನ ಇನ್ನೆಲ್ಲೋ ಸಿಕ್ಕಾಗ "ಆಹಾ, ಅಂದು ನಿಮ್ಮ ಮನೆಯ ಊಟ ಈಗಲೂ ನೆನೆಸಿಕೊಳ್ಳುತ್ತೇವೆ" ಎಂದು ಊಟ ಮಾಡಿದವರು ಹೇಳಬೇಕು. ಕವಿಗೆ ತನ್ನ ಕೃತಿ ಬಹು ಕಾಲದವರೆಗೆ ನಿಲ್ಲುವಂತೆ ಆಗಬೇಕು. ಅಡಿಗೆ ಶುಚಿ-ರುಚಿಯಾಗಿ ಇರಬೇಕು. ಕವಿಯ ಕೃತಿ ಸತ್ವಯುತವಾಗಿ ಒಂದು ಮಾದರಿಯಾಗಿ ಉಳಿಯಬೇಕು. ಹೀಗೆ ಆಸೆಗಳು. 

ಕುಮಾರವ್ಯಾಸನ "ಕರ್ಣಾಟ ಭಾರತ ಕಥಾಮಂಜರಿ" ಈ ಎಲ್ಲ ಮಾನದಂಡಗಳಲ್ಲಿಯೂ ಗೆದ್ದು ನಿಂತು ಶತಮಾನಗಳ ನಂತರ ಈಗಲೂ ಜನಪ್ರಿಯವಾಗಿರುವ ಕೃತಿ. ಅವನೇ ಹೇಳುವಂತೆ "ಅರಸುಗಳಿಗಿದು ವೀರ, ದ್ವಿಜರಿಗೆ ಪರಮ ವೇದದ ಸಾರ, ಯೋಗ್ಗೀಶ್ವರರ ತತ್ವ ವಿಚಾರ, ಮಂತ್ರಿ ಜನಕೆ ಬುದ್ಧಿಗುಣ" ಮುಂತಾದ ಯೋಗ್ಯತೆಯುಳ್ಳದ್ದು. ವಿರಹಿಗಳ ಶೃಂಗಾರವೂ ಹೌದು. ವಿದ್ಯಾಪರಿಣಿತರ ಅಲಂಕಾರವೂ ಸರಿಯೇ. ಒಟ್ಟಿನಲ್ಲಿ "ಕಾವ್ಯಕೆ ಗುರು" ಆ ಕೃತಿ.  

*****

ಕವಿ ನಾರಾಣಪ್ಪನು ತನ್ನ ಮಂಗಳಾಚರಣೆ ಮಾಡುವಾಗ "ಪೀಠಿಕಾ ಸಂಧಿ" ಭಾಗವಾಗಿ ಇಪ್ಪತ್ತಮೂರು ಪದ್ಯಗಳಲ್ಲಿ ದೇವನ, ದೇವತೆಗಳ ಸ್ತುತಿ ಮಾಡುತ್ತಾನೆ. "ಇಳೆಯ ಜಾಣರು ಮೆಚ್ಚುವಂತೆ" ರಚಿಸಲು ಪಣ ತೊಡುತ್ತಾನೆ. ಅವನಲ್ಲಿ ಅಹಂಕಾರ ಭಾವವಿಲ್ಲ. ಆದರೆ ವೀರನ ಗತ್ತು ಇದೆ. "ವೀರ ನಾರಾಯಣನೆ ಕವಿ, ಕುಮಾರವ್ಯಾಸ ಲಿಪಿಕಾರ" ಎಂದು ವಿನಯದಿಂದ ಹೇಳಿದರೂ "ಪದವಿಟ್ಟಳುಪದೊಂದಗ್ಗಳಿಕೆ" ಅವನದು. ಒಮ್ಮೆ ಬರೆದರೆ ಮುಗಿಯಿತು. ಮತ್ತೆ ಅಳಿಸಿ, ತಿದ್ದಿ, ಒದ್ದಾಡುವಂತಿಲ್ಲ. ಹೀಗೆ ಶಪಥ ಹೂಡಿ ಮುಂದುವರೆಯುತ್ತಾನೆ. 

ಕೃತಿ "ಭಾಮಿನಿ ಷಟ್ಪದಿ" ರಚನೆ. ಪ್ರತಿ ಪದ್ಯವೂ ಆರು ಸಾಲುಗಳು ಇರಬೇಕು. ಮೊದಲ ಸಾಲು ಏಳು ಮತ್ತು ಏಳು, ಒಟ್ಟು ಹದಿನಾಲ್ಕು ಮಾತ್ರೆಗಳು. ಎರಡನೆಯ ಸಾಲೂ ಹೀಗೆಯೇ ಹದಿನಾಲ್ಕು ಮಾತ್ರೆಗಳು. ಮೂರನೆಯದು ಏಳು, ಏಳು, ಎಂಟು, ಒಟ್ಟು ಇಪ್ಪತ್ತೆರಡು ಮಾತ್ರೆಗಳು. ಮೊದಲ ಅರ್ಧ ಪದ್ಯ ಒಟ್ಟು ಐವತ್ತು ಮಾತ್ರೆಗಳು. ಎರಡನೇ ಅರ್ಧ ಪದ್ಯವೂ ಒಟ್ಟು ಹೀಗೆ ಐವತ್ತು ಮಾತ್ರೆಗಳು. ಒಂದು ಪದ್ಯಕ್ಕೆ ಸರಿಯಾಗಿ ಒಂದು ನೂರು ಮಾತ್ರೆಗಳು. ಹೆಚ್ಚು-ಕಡಿಮೆ ಆಗುವಂತಿಲ್ಲ. ಅಷ್ಟು ಕಾಲ ಹಿಡಿಯುವಂತೆ ಪದಗಳ ಜೋಡಣೆ ಇರಬೇಕು.  

ಪ್ರತಿ ಪದ್ಯವೂ ಒಂದು ದೊಡ್ಡ ಹಾರದ ಮುತ್ತೊಂದರಂತೆ ಇರಬೇಕು. ಹಿಂದು-ಮುಂದಕ್ಕೆ ಕೊಂಡಿಯಂತಿರಬೇಕು. ಕಥೆಯ ಒಟ್ಟು ಓಟಕ್ಕೆ ಸರಿಯಾಗಿ ಕೂಡಿಕೊಂಡಿರಬೇಕು. ಬೇಕಾದ ರಸ-ಭಾವಗಳಿಗೆ ಪೂರಕವಾಗಿರಬೇಕು. ಒಂದು ಪದ್ಯವೂ ಊಟದ ಮಧ್ಯೆ ಸಣ್ಣ ಕಲ್ಲಿನ ಚೂರು ಸಿಕ್ಕಂತೆ ಇರಬಾರದು. ಇವು ಅವನ ಮುಂದಿರುವ ಅನೇಕ ಸವಾಲುಗಳಲ್ಲಿ ಕೆಲವು ಮಾತ್ರ. 

ಒಂದು ಸಣ್ಣ ಪತ್ರ ಬರೆಯಬೇಕಾದರೆ ಹೇಗೆ ಪ್ರಾರಂಭ ಮಾಡಬೇಕು, ಯಾವ ಪದ ಉಪಯೋಗಿಸಬೇಕು, ಎಂದು ತಿಣುಕಾಡಿ, ಹತ್ತು ಬಾರಿ ಬದಲಾಯಿಸಿ, ಹೊಡೆದುಹಾಕಿ, ತಿದ್ದಿ-ತೀಡಿ, ಒದ್ದಾಡುವ ಪರಿಸ್ಥಿತಿಯ ಮುಂದೆ ಇವನ್ನು ಗಮನಿಸಬೇಕು. ಎಲ್ಲ ಬರೆದು ಮುಗಿಸಿದ ಮೇಲೆ "ಅಯ್ಯೋ, ಇದು ಸೇರಿಸುವುದು ಬಿಟ್ಟೆ ಹೋಯಿತಲ್ಲ!" ಎಂದು ಗೋಳಾಡುವುದು ಕೂಡದು. 

*****

ಇಷ್ಟೆಲ್ಲಾ ಕಠಿಣ ಚೌಕಟ್ಟಿನ ಸಂದರ್ಭದಲ್ಲಿ ಪೀಠಿಕಾ ಸಂಧಿಯ ಇಪ್ಪತ್ತಮೂರನೆಯ ಮತ್ತು ಕಡೆಯ ಪದ್ಯದಲ್ಲಿ ಕವಿ ಒಂದು ಸುಂದರ ಒಗಟು ಇಟ್ಟಿದ್ದಾನೆ. ಬಹಳ ಜನಪ್ರಿಯವಾಗಿರುವ ಆ ಪದ್ಯ ಹೀಗಿದೆ:

ವೇದಪುರುಷನ ಸುತನಸುತನ ಸ 
ಹೋದರನ ಮೊಮ್ಮಗನ ಮಗನ ತ
ಳೋದರಿಯ ಮಾತುಳನ ರೂಪನನತುಳ ಭುಜಬಲದಿ 
ಕಾದಿ ಗೆಲಿದನ ಅಣ್ಣ ನವ್ವೆಯ 
ನಾದಿನಿಯ ಜಠರದಲಿ ಜನಿಸಿದ 
ನಾದಿ ಮೂರತಿ ಸಲಹೊ ಗದುಗಿನ ವೀರನಾರಯಣ 

ಮೇಲೆ ಕೊಟ್ಟಿರುವ ಚಿತ್ರವನ್ನು ನೋಡಿಕೊಂಡು ಈ ಪದ್ಯವನ್ನು ಓದಿಕೊಂಡರೆ ಒಗಟನ್ನು ಸುಲಭವಾಗಿ ಬಿಡಿಸಿಕೊಳ್ಳಬಹುದು.  

  • ವೇದಪುರುಷನ - ಶ್ರೀಮನ್ನಾರಾಯಣನ  
  • ಸುತನ (ಮಗ) - ಚತುರ್ಮುಖ ಬ್ರಹ್ಮನ  
  • ಸುತನ (ಮಗ) - ನಾರದನ  
  • ಸಹೋದರನ - ಮರೀಚಿಯ 
  • ಮೊಮ್ಮಗನ - ಮಗ ಕಶ್ಯಪನ ಮಗನಾದ ಇಂದ್ರನ 
  • ಮಗನ - ಅರ್ಜುನನ
  • ತಳೋದರಿಯ - ಹೆಂಡತಿಯಾದ ಸುಭದ್ರೆಯ 
  • ಮಾತುಳನ - ಸೋದರಮಾವನಾದ ಕಂಸನ 
  • ಮಾವನ - ಕಂಸನಿಗೆ ಹೆಣ್ಣುಕೊಟ್ಟ ಮಾವ ಜರಾಸಂಧನನ್ನು 
  • ಅತುಲ ಭುಜಬಲದಿ ಕಾದು ಗೆಲಿದನ - ಭೀಮಸೇನನ 
  • ಅಣ್ಣನ - ಧರ್ಮರಾಯನ 
  • ಅವ್ವೆಯ - ತಾಯಿ ಕುಂತಿಯ 
  • ನಾದಿನಿಯ - ದೇವಕಿಯ 
  • ಜಠರದಲಿ ಜನಿಸಿದ ಅನಾದಿ ಮೂರುತಿ - ಶ್ರೀಕೃಷ್ಣ 
ಶ್ರೀಮನ್ನಾರಾಯಣನಿಂದ ಪ್ರಾರಂಭಿಸಿ ಹದಿಮೂರು ಜನರ ನಂತರ ಅವನ ಇನ್ನೊಂದು ರೂಪನಾದ ಶ್ರೀಕೃಷ್ಣನೇ ಬಂದು ನಿಂತ. ಅವನು ನಮ್ಮನ್ನು ಸಲಹಲಿ ಎಂದು ಪ್ರಾರ್ಥನೆ. ಒಂದು ಹದಿಮೂರು ಮುತ್ತುಗಳ ಹಾರ. ಶ್ರೀಮನ್ನಾರಾಯಣನ ಅವತಾರಿ ಶ್ರೀಕೃಷ್ಣನೇ ಆ ಹಾರದ ಪದಕ. 

*****

 ಈ ಪದ್ಯದಲ್ಲಿ ಅಡಗಿದ ಬೇರೆ ವಿಶೇಷಗಳು ಏನುಂಟು?

  • ಕವಿಯ ಇಷ್ಟ ದೈವ ವೀರ ನಾರಾಯಣ. ಪದ್ಯದ ಪ್ರಾರಂಭ ನಾರಾಯಣನಿಂದ. ಕಡೆಯಾದದ್ದು ಶ್ರೀಕೃಷ್ಣನಿಂದ. ಇದು ಕೌರವ-ಪಾಂಡವರ ಕಥೆ ಎಂದು ಮೇಲು ನೋಟಕ್ಕೆ ಕಂಡರೂ, ಇದರ ಕಥಾನಾಯಕ ಶ್ರೀಕೃಷ್ಣನೇ. ಇದನ್ನು ಕವಿ ಹೀಗೆ ಸೂಚಿಸಿದ್ದಾನೆ.
  • ನಾರಾಯಣನೇ ಅವತರಿಸಿ ಶ್ರೀಕೃಷ್ಣನಾದ ಎಂದು ಹೇಳಿದಂತಾಯಿತು. 
  • ಕೆಲವು ಮುಖ್ಯ ಪಾತ್ರಧಾರಿಗಳನ್ನು (ಅರ್ಜುನ, ಭೀಮ, ಧರ್ಮಜ, ಕುಂತಿ, ಇಂದ್ರ, ಶ್ರೀಕೃಷ್ಣ, ಸುಭದ್ರೆ) ಪರಿಚಯಿಸಿದ್ದಾಯಿತು. (ಬೇರೆಯವರು ಯಾಕಿಲ್ಲ ಎಂದು ಕೇಳಬಹುದು. ನೂರು ಮಾತ್ರೆಗಳ ನೆನಪಿಡಬೇಕು). 
  • ಪಾಂಡವರ-ಯಾದವರ ಕೊಂಡಿ ಇಲ್ಲಿ ಸಿಕ್ಕಿತು. 
ಇನ್ನು ಕೆಲವು ಸಂಗತಿಗಳು:
  • ಮಹಾನಾರಾಯಣೋಪನಿಷತ್ತು ಮುಂತಾದುವು ಹೇಳುವಂತೆ ನಾರಾಯಣನು ವೇದಪ್ರತಿಪಾದ್ಯನಾದ ವೇದಪುರುಷನು. 
  • ನಾರಾಯನಿಗೆ ಅನೇಕ ನೇರ ಮಕ್ಕಳಿದ್ದರೂ ಬ್ರಹ್ಮನೇ ಮೊದಲಿಗನು. ಅಲ್ಲಿಂದ ಸೃಷ್ಟಿ ಪ್ರಾರಂಭ. 
  • ಚತುರ್ಮುಖನಿಗೆ ಅನೇಕ ಮಾನಸ ಪುತ್ರರಿದ್ದಾರೆ. ಅವರಲ್ಲಿ ಯಾರನ್ನಾದರೂ ತೆಗೆದುಕೊಳ್ಳಬಹುದು. ನಾರದರು ಎಲ್ಲರಿಗೂ ಪರಿಚಿತರು. ಹೀಗಾಗಿ ಅವರನ್ನು ತೆಗೆದುಕೊಳ್ಳುವುದು ವಾಡಿಕೆ. 
  • ಮಾನಸ ಪುತ್ರರೆಲ್ಲರೂ ಬ್ರಹ್ಮನಿಂದ ನೇರ ಹುಟ್ಟಿದವರಾದದ್ದರಿಂದ ಅವನೇ ತಾಯಿ ಮತ್ತು ತಂದೆ. ಹೀಗೆ ಹುಟ್ಟಿದವರೆಲ್ಲರೂ ಸಹೋದರರು. 
  • ಅರ್ಜುನನು ಇಂದ್ರನ ವರಪ್ರಸಾದದಿಂದ ಹುಟ್ಟಿದವನು. ಹೀಗಾಗಿ ಮಗನು. 
  • ಅರ್ಜುನನಿಗೆ ಅನೇಕ ಹೆಂಡತಿಯರಿದ್ದರೂ, ಪಾಂಡವ-ಯಾದವ ಕುಲಗಳ ಕೊಂಡಿ ಸುಭದ್ರೆ. 
  • ಶ್ರೀಕೃಷ್ಣ-ಬಲರಾಮರಂತೆ ಕಂಸನು ಸುಭದ್ರೆಗೂ ಸೋದರಮಾವ. ದೇವಕಿಯ ಅಣ್ಣ. 
  • ಕಂಸನು ಜರಾಸಂಧನ ಇಬ್ಬರು ಹೆಣ್ಣು ಮಕ್ಕಳಾದ ಆಸ್ತಿ-ಪ್ರಾಪ್ತಿಯರನ್ನು ಮದುವೆಯಾಗಿದ್ದನು. ಆದ್ದರಿಂದ ಜರಾಸಂಧನು ಕಂಸನಿಗೆ ಹೆಣ್ಣು ಕೊಟ್ಟ ಮಾವ. 
  • ಭೀಮನ ಅವ್ವೆ ಕುಂತಿಯಾದರೂ ಧರ್ಮರಾಯ ಎಲ್ಲರಿಗೂ ಹಿರಿಯ. ಆದ್ದರಿಂದ ಮುಖ್ಯ. ಅಲ್ಲದೆ ಒಂದು ನೂರು ಮಾತ್ರೆಗಳ ಪದಗಳನ್ನು ಕೂಡಿಸಬೇಕಲ್ಲ!
  • ಕುಂತಿಯು ವಸುದೇವನ ಸಹೋದರಿ. ಇಬ್ಬರೂ ಯಾದವ ಶೂರಸೇನನ ಮಕ್ಕಳು. ಅವಳ ಹುಟ್ಟು ಹೆಸರು ಪೃಥಾ. ಶೂರಸೇನನ ತಮ್ಮ ಕುಂತಿಭೋಜನು ಮಕ್ಕಳಿಲ್ಲದ್ದರಿಂದ ಅವಳನ್ನು ದತ್ತು ತೆಗೆದುಕೊಂಡ. ಆಗ ಅವಳ ಹೆಸರು ಕುಂತಿ ಎಂದಾಯಿತು. 
  • ಕುಂತಿ ಮತ್ತು ವಸುದೇವನ ಹೆಂಡತಿ ದೇವಕಿ ಈ ಕಾರಣದಿಂದ ಅತ್ತಿಗೆ-ನಾದಿನಿಯರು. ಶ್ರೀಕೃಷ್ಣನಿಗೆ ಕುಂತಿ ಸೋದರತ್ತೆ. 
*****

ಮಂಗಳಾಚರಣೆಯ ಈ ಕೊನೆಯ ಪದ್ಯದ ಮೂಲಕ ಕವಿ ತನ್ನ ಇಷ್ಟದೈವ ಗದುಗಿನ ವೀರನಾರಾಯಣನಿಂದ ಕಥಾನಾಯಕ ಶ್ರೀಕೃಷ್ಣವರೆಗೆ ಒಂದು ದೊಡ್ಡ ಮಂಗಳಾರತಿ ಮಾಡಿ ಪ್ರಾರಂಭಿಸಿದ್ದಾನೆ. ಇಲ್ಲಿ ಬಳಸಿದ "ತಳೋದರಿ" ಪದವೂ ಹೀಗೆ ವಿಶ್ವ ವಿಖ್ಯಾತ ಆಯಿತು!