ಅನಾಯೇಸೇನ ಮರಣಂ ವಿನಾ ದೈನ್ಯೇನ ಜೀವನ೦ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿ೦ ಅಚಂಚಲಂ
ಈ ಶ್ಲೋಕದಲ್ಲಿ ಅನೇಕ ಪಾಠಾ೦ತರಗಳೂ ಇದ್ದವು. ಕೆಲವರು "ಶಂಭೋ" ಎನ್ನುವ ಬದಲು "ಗೋವಿಂದ" ಎನ್ನುತ್ತಿದ್ದರು. "ವಿನಾ ದೈನ್ಯೇನ ಜೀವನಮ್" ಅನ್ನುವ ಕಡೆ ಅಥವಾ ಮತ್ತೊಂದು ಸಾಲಿನಲ್ಲಿ "ಮಾತೃ ಹಸ್ತೇನ ಭೋಜನಂ" ಎಂದೂ, "ವಿಪ್ರ ಹಸ್ತೇನ ಅಕ್ಷತಾ೦" ಎಂದೂ ಆನ್ನುವವರಿದ್ದರು. ಕೆಲವರು "ಸದಾ ರಾಜಿತ ಗೋವಿಂದಂ" ಅನ್ನುತ್ತಿದ್ದರು. ಒಟ್ಟಿನಲ್ಲಿ "ಇವನ್ನು ಕೊಡು" ಎಂದು ಕೇಳುವ ಒಂದು ಪ್ರಾರ್ಥನೆ. ಇನ್ನೊಬ್ಬರ ಬಳಿ ಯಾಚಿಸುವ, ದೈನ್ಯದ, ಭಿಕಾರಿಭಾವದ ಜೀವನ ಬೇಡ. ತಾಯಿಯ ಕೈಯ ಊಟ ಇರಲಿ. ತಿಳಿದವರ ಸಂಗವಿರಲಿ. ನಿನ್ನಲ್ಲಿ ಧೃಢವಾದ ಭಕ್ತಿ ಇರಲಿ. ಹೀಗೆ ಕೇಳುವುದು.
ಎಲ್ಲಿಯವರೆಗೆ ತಾಯಿಯ ಕೈಯ ಅನ್ನ ಸಾಧ್ಯ? ತಾಯಿಯೂ ಒಂದು ದಿನ ಹೋಗಲೇಬೇಕಲ್ಲವೇ? ಹಾಗಿದ್ದರೆ ಅವಳ ಸ್ಥಾನದಲ್ಲಿ ತಾಯಿಯಂತಿರುವ ಇನ್ಯಾರೋ ಇರಬಹುದು. ಸಪ್ತಪದಿಯಲ್ಲಿ ಹೇಳುವಂತೆ "ಹತ್ತು ಮಕ್ಕಳನ್ನು ಹೆತ್ತು, ಗಂಡನನ್ನು ಹನ್ನೊಂದನೆಯವನೆಂದು ತಿಳಿ" ಎನ್ನುವಂತೆ ಕಾಪಾಡುವ ಹೆಂಡತಿಯಿರಬಹುದು. ತನ್ನ ಮಕ್ಕಳ ಜೊತೆ ಇನ್ನೊಂದು ಮಗು ಎಂದು ರಕ್ಷಿಸುವ ಮಗಳೋ, ಸೊಸೆಯೋ, ಸೋದರಿಯೋ ಇರಬಹುದು. ಮಿಕ್ಕ ಭಾಗಗಳು, ಮನವಿಗಳು ಏನಾದರೂ ಇರಲಿ. ಎಲ್ಲಕ್ಕೂ ಮೊದಲಿಗೆ ಬೇಡುವುದು ಅನಾಯಾಸವಾದ ಮರಣ. ಅಂದರೆ ಒದ್ದಾಡಿ, ಹಿಂಸೆ ಅನುಭವಿಸಿ, ಇನ್ನೊಬ್ಬರಿಗೆ ಕಷ್ಟ ಕೊಟ್ಟು, ತಾವೂ ದುಃಖ ಅನುಭವಿಸುವಂತಹ ಸಾವು ಬೇಡ. ಫಟ್ಟಂತ ಪ್ರಾಣ ಹೋಗಲಿ ಎಂದು ಕೋರಿಕೆ.
ಯಾರಾದರೂ ದೀರ್ಘ ಆಯುಸ್ಸು ಕೇಳುವುದು ಸಹಜ. ಆದರೆ ಸಾವು ಕೇಳಿಕೊಳ್ಳುತ್ತಾರೆಯೇ? ಅದು ಬಂದೇ ಬರುವುದು ಮತ್ತು ಅನಿವಾರ್ಯ ಎಂದಾಗ ಆದಷ್ಟೂ ಕಡಿಮೆ ಕಷ್ಟ ಇರಲಿ ಎಂಬ ಇಚ್ಛೆ. ಎದುರಿನವನು ಹೊಡೆದೇ ಹೊಡೆಯುತ್ತಾನೆ ಅಂದಾಗ ಮೆತ್ತಗೆ ಹೊಡೆಯಲಿ ಎಂದು ಆಶಿಸುವಂತೆ. ಮನುಷ್ಯನ ದೇಹದಿಂದ ಪ್ರಾಣ ಹೊರಗೆ ಹೋಗುವಾಗ ಒಮ್ಮೆಲೇ ಸಾವಿರ ಚೇಳುಗಳು ಕಡಿದಾಗ ಆಗುವಷ್ಟು ನೋವು ಉಂಟಾಗುತ್ತದೆ ಎಂದು "ಗರುಡ ಪುರಾಣ" ಹೇಳುತ್ತದೆ. ಅಂಥದರಲ್ಲಿ ಹೆಚ್ಚು ಕಾಲ ಅದರ ಪ್ರಕ್ರಿಯೆಯಲ್ಲೇ ಕಷ್ಟ ಪಟ್ಟರೆ ಹೇಗೆ? ಅಂತಹ ಹಿಂಸೆ ಉದ್ದವಾಗುವುದು ಬೇಡ ಎಂದು ಈ ರೀತಿ ಕೇಳಿಕೊಳ್ಳುವುದು.
*****
ಈಗ್ಗೆ ಕೆಲವು ದಿನಗಳಲ್ಲಿ ಎರಡು ವಿಡಿಯೋಗಳು ಎಲ್ಲ ಕಡೆ ಸುತ್ತುತ್ತಿವೆ. ಒಂದರಲ್ಲಿ ಗುಜರಾತಿನ ಒಂದು ಅಂಗಡಿಯಲ್ಲಿ ಕುರ್ಚಿಯಲ್ಲಿ ಕುಳಿತು ಜೊತೆಯವರೊಂದಿಗೆ ಮಾತನಾಡುತ್ತಾ ಕುಳಿತಿರುವಾಗ ನೀರಿನ ಬಾಟಲ್ ತೆಗೆದುಕೊಳ್ಳಲು ಕೈ ಚಾಚಿದ ಯುವಕನೊಬ್ಬ ಬಾಟಲ್ ಕೈ ಜಾರಿ ಕುಳಿತಲ್ಲಿಯೇ ಅಸು ನೀಗುವುದು ಸಿ ಸಿ ಟಿವಿಯಲ್ಲಿ ಕಾಣುವುದು. ಮತ್ತೊಂದು, ಹೃದಯ ವಿದ್ರಾವಕವಾದ ವಿಮಾನ ದುರ್ಘಟನೆಯಲ್ಲಿ 11A ಸೀಟಿನಲ್ಲಿ ಕುಳಿತಿದ್ದ ವಿಶ್ವಾಸ್ ಕುಮಾರ್ ದುರ್ಘಟನೆಯಲ್ಲಿ ಬದುಕುಳಿದ ಏಕಮಾತ್ರ ವ್ಯಕ್ತಿಯಾಗಿ ನಡೆದು ಬಂದು ಆಂಬುಲೆನ್ಸ್ ಏರುತ್ತಿರುವುದು. ಒಂದು ಸಾವು. ಇನ್ನೊಂದು ಸಾವಿನ ದವಡೆಯಿಂದ ಅಧ್ಭುತವಾಗಿ ತಪ್ಪಿಸಿಕೊಂಡು ಬಂದ ಸನ್ನಿವೇಶ.
ಸುಖ ಮರಣ, ಅಕಾಲ ಮರಣ, ದುರ್ಮರಣ, ಅಪಮೃತ್ಯು, ವೀರಮರಣ, ಇಚ್ಚಾಮರಣ, ಸ್ವಾಭಾವಿಕ ಮರಣ ಅನಾಯಾಸ ಮರಣ ಎನ್ನುವ ಪದಗಳನ್ನು ಮತ್ತೆ ಮತ್ತೆ ಉಪಯೋಗಿಸುತ್ತೇವೆ. ಯಾವುದು ಸರಿ? ಯಾವುದು ತಪ್ಪು? ಮನುಷ್ಯನೇ ಹೋದಮೇಲೆ ಯಾವ ಪದ ಪ್ರಯೋಗಿಸಿದರೆ ಏನು? ಅದಕ್ಯಾಕೆ ಚಿಂತಿಸಬೇಕು? ಹೀಗೆ ಹೇಳಬಹುದು. ಆದರೆ, ಸಾಧ್ಯವಾದಷ್ಟೂ ನಾವು ಸರಿಯಾದ ಪದ ಉಪಯೋಗಿಸಬೇಕಲ್ಲವೇ?
- ಮೇಲೆ ಚರ್ಚಿಸಿದ ಮಾವಿನ ಮರದಿಂದ ಬಿದ್ದ ಹಣ್ಣಿನಂತೆ ಬಂದ ಮರಣ ಸ್ವಾಭಾವಿಕ ಮರಣ. ಇದು ಆಗಲೇಬೇಕಾಗಿತ್ತು. ಆಯಿತು. ಎಲ್ಲರಿಗೂ ಗೊತ್ತಿತ್ತು. ಹೆಚ್ಚಿನ ವಿಷಾದವಿಲ್ಲ.
- ಆಕಸ್ಮಿಕವಾದ ದುರ್ಘಟನೆಯಲ್ಲಿ ಸಾವು ಬಂದರೆ ದುರ್ಮರಣ. ಅತ್ಯಂತ ಅನಿರೀಕ್ಷಿತ.
- ಎಲ್ಲರಂತೆ ರಾತ್ರಿ ಮಲಗಿದರು. ಬೆಳಗ್ಗೆ ಏಳಲಿಲ್ಲ. ತುಂಬು ಜೀವನ ನಡೆಸಿದ ಸಜ್ಜನ. ಇದು ಸ್ವಾಭಾವಿಕವಾದ ಅನಾಯಾಸ ಮರಣ.
- ಚೆನ್ನಾಗಿಯೇ ಇದ್ದರು. ಒಂದೇ ಕ್ಷಣದಲ್ಲಿ ಹೋದರು. ಗೊತ್ತೇ ಆಗಲಿಲ್ಲ. ಖಾಯಿಲೆ-ಕಸಾಲೆ ಇಲ್ಲ. ಪೂರ್ತಿ ಜೀವನ ನಡೆಸಿದರು. ಹಿಂಸೆ ಅನುಭವಿಸಲಿಲ್ಲ. ಇದು ಸುಖ ಮರಣ.
- ದೇಶಕ್ಕಾಗಿ, ಸಮಾಜಕ್ಕಾಗಿ ಹೋರಾಡುತ್ತ ಜೀವ ತೆತ್ತರು. ಇನ್ನೊಬ್ಬರ ರಕ್ಷಣೆಗಾಗಿ ಪ್ರಾಣ ಪಣವಾಗಿಟ್ಟವರು. ಇದು ವೀರಮರಣ. "ಹುತಾತ್ಮ" ಎಂದು ಹೇಳಲು ಯೋಗ್ಯವಾದದ್ದು.
- ಇನ್ನೂ ಬದುಕಿ ಬಾಳಬೇಕಾದ ವಯಸ್ಸು. ಸಾವು ಬಂದಿತು. ಹೆಚ್ಚಿನ ನೋವಿನ ಸಂಗತಿ. ಇದು ಅಕಾಲಿಕ ಮರಣ.
- ಎಲ್ಲ ದೃಷ್ಟಿಯಿಂದ ನೋಡಿದರೂ ಈ ಸಾವು ಬರಬಾರದಿತ್ತು. ಬಂದುಬಿಟ್ಟಿತು. ಇದು ಅಪಮೃತ್ಯು. ಅಕಾಲ ಮರಣ.
- ತಾವು ಹುಟ್ಟಿ ಬಂದು ಸಾಧಿಸಬೇಕಾದ ಕೆಲಸವಾಯಿತು. ಇನ್ನು ಬದುಕು ಸಾಕು. ಹೀಗೆಂದು ಸಾವನ್ನಪ್ಪಿದವರು ಇಚ್ಚಾಮರಣಿಗಳು. ಯಾವಾಗ ದೇಹ ಬಿಡಬೇಕೆಂದು ಅವರೇ ನಿರ್ಧರಿಸುವ ಮಹಾನುಭಾವರು.
*****
ಒಬ್ಬ ದೊಡ್ಡ ರಾಜಕೀಯ ನಾಯಕರು. ಬಹುಕಾಲ ಅಧಿಕಾರದಲ್ಲಿದ್ದವರು. ಆ ಸಮಯದಲ್ಲಿ ಲೂಟಿ ಹೊಡೆದು ಏಳು ತಲೆಮಾರಿಗೆ ಸಾಕಾಗುವಷ್ಟು ಆಸ್ತಿ ಮಾಡಿದರು. ಎಲ್ಲರನ್ನೂ ಗೋಳು ಹೊಯ್ದುಕೊಂಡು ದರ್ಪದಿಂದ ಮೆರೆದವರು. ಮೂರು ವರುಷ ಹಾಸಿಗೆ ಹಿಡಿದಿದ್ದರು. ಕಡೆಗೆ ಸತ್ತರು. ಪುಣ್ಯಕ್ಕೆ ಇನ್ನು ಮುಂದೆ ಯಾರಿಗೂ ತೊಂದರೆ ಮಾಡಲಾಗದು.
ಸುದ್ದಿ ಕೇಳಿದ ಕೂಡಲೇ ಇತರ ರಾಜಕೀಯ ನಾಯಕರು, ಅವರ ಭಟ್ಟಂಗಿಗಳು ತಮ್ಮ ತಮ್ಮ ಹೇಳಿಕೆ ಕೊಟ್ಟರು. "ತುಂಬಲಾರದ ನಷ್ಟ" ಅಂದರು ಒಬ್ಬರು. "ಸಮಾಜ ಬಡವಾಯಿತು" ಅಂದರು ಇನ್ನೊಬ್ಬರು. "ನಾವು ಪರದೇಶಿಗಳಾದೆವು" ಎಂದು ಹೇಳಿದರು ಮಗದೊಬ್ಬರು. ಹೀಗೆ ಸಂತಾಪ ಸೂಚಕ ಸಂದೇಶಗಳ ಸುರಿಮಳೆ.
ಇದು ಯಾವ ರೀತಿಯ ಮರಣ? ಯಾವ ರೀತಿಯದು ಎಂದು ಹೇಳದಿರುವುದೇ ಒಳ್ಳೆಯದು. ಆದರೆ ಮನಸ್ಸಿನಲ್ಲಿಯೇ ಸಂತಾಪ ಸೂಚಕ ಸಂದೇಶಗಳ ಹಿನ್ನೆಲೆಯಲ್ಲಿ "ವಿಚಿತ್ರ ಮರಣ" ಎಂದುಕೊಳ್ಳಬಹುದು.