Showing posts with label Durmarana. Show all posts
Showing posts with label Durmarana. Show all posts

Saturday, June 14, 2025

ಸುಖ ಮರಣ, ಅಕಾಲ ಮರಣ ಮತ್ತು ಅಪಮೃತ್ಯು


ಪರಮಾತ್ಮನ ಸೃಷ್ಟಿಯಲ್ಲಿ ಅನೇಕ ಮರ-ಗಿಡಗಳಿವೆ. ಈ ಅನಂತ ವಿಶ್ವದ ಲೆಕ್ಕವಿಲ್ಲದ ವಿಸ್ಮಯಗಳಲ್ಲಿ ಸಸ್ಯಲೋಕದ ಅನೇಕ ವಿಚಿತ್ರಗಳೂ ಸೇರಿವೆ. ಕೆಲವನ್ನು ನಾವು ಪ್ರತಿದಿನ ಗಮನಿಸುತ್ತೇವೆ. ಕೆಲವನ್ನು ಆಗೊಮ್ಮೆ-ಈಗೊಮ್ಮೆ ಗುರುತಿಸುತ್ತೇವೆ. ಮತ್ತನೇಕ ವಿಷಯಗಳು ನಮ್ಮ ನೋಟಕ್ಕೆ ಸಿಲುಕುವುದೇ ಇಲ್ಲ. ಈ ಸಸ್ಯಲೋಕವಿಲ್ಲದೇ ನಮ್ಮ ಜೀವನವಿಲ್ಲ. ನಮ್ಮ ಉಸಿರಾಟದ ಮೂಲಾಧಾರವಾದ ಪ್ರಾಣವಾಯು (ಆಕ್ಸಿಜನ್) ವಾತಾವರಣಕ್ಕೆ ಬಿಡುಗಡೆಯಾಗುವುದರಲ್ಲಿ ಮರ-ಗಿಡಗಳ ಪಾತ್ರ ಬಲು ದೊಡ್ಡದು ಎಂದು ವಿಜ್ಞಾನದ ತರಗತಿಗಳಲ್ಲಿ ಓದಿದ್ದೇವೆ. ಆದರೂ ನಮ್ಮ ಸುಖ ಜೀವನಕ್ಕೆ ಬೇಕಾದ ಪೀಠೋಪಕರಣ, ಗೃಹ ನಿರ್ಮಾಣ, ಇತ್ಯಾಗಳನ್ನು ಮಾಡಲು ಮತ್ತು ವಾಸಯೋಗ್ಯ ಸ್ಥಳ ಪಡೆದುಕೊಳ್ಳಲು ಸಸ್ಯರಾಶಿಯ ನಿರ್ಮೂಲನಕ್ಕೆ ಯಥಾಶಕ್ತಿ ಪ್ರತಿದಿನ ದುಡಿಯುತ್ತಲೇ ಇದ್ದೇವೆ!  

ಈ ಸಸ್ಯರಾಶಿಯಲ್ಲಿ ನಮ್ಮ ಜೀವನ ಯಾತ್ರೆಗೆ ಇಂಬು ಕೊಡುವ ಅನೇಕ ದವಸ-ಧಾನ್ಯ ಬೆಳೆದುಕೊಡುವ ಗಿಡಗಳೂ, ಹಣ್ಣು-ಹಂಪಲು ಕೊಡುವ ಸಸ್ಯಗಳೂ ಉಂಟು. ಕೆಲವು ಹಣ್ಣು ಕೊಡುವ ಮರಗಳು ಪ್ರಕೃತಿಯಲ್ಲಿ ತಾವೇತಾವಾಗಿ ಬೆಳೆಯುತ್ತವೆ. ಹುಣಿಸೆ, ಬೇಲದ ಮತ್ತು ನೇರಿಳೆ ಮರಗಳನ್ನು ಯಾರೂ ಕೃಷಿ ಮಾಡಿ ಬೆಳೆಸುತ್ತಿರಲಿಲ್ಲ. ಕೆಲವು ಹಣ್ಣು ಕೊಡುವ ಮರಗಳನ್ನು ಬೇಸಾಯದಲ್ಲಿ ಬೆಳೆಸಿ ಫಸಲು ಕಟಾವು ಮಾಡುತ್ತಾರೆ. ಈ ರೀತಿ ಬೆಳೆಸುವ ಒಂದು ಹಣ್ಣಿನ ಮರವನ್ನು ತೆಗೆದುಕೊಳ್ಳೋಣ. ಮಾವಿನ ಮರ ಎನ್ನಿ. ವರುಷಕ್ಕೊಮ್ಮೆ ಮಾವಿನ ಫಸಲು ಬರುತ್ತದೆ. ಮನುಷ್ಯ ಸಮಯ ಕಾದು, ಹಣ್ಣಾಗಲು ತಯಾರಿರುವ ಕಾಯಿಗಳನ್ನು ಕಿತ್ತು, ಹಣ್ಣು ಮಾಡಿ ಉಪಯೋಗಿಸುತ್ತಾನೆ. ಕೆಲವೊಂದು ಮಾವಿನಕಾಯಿಗಳನ್ನು ಉಪ್ಪಿನಕಾಯಿ ಮಾಡಲು, ಇಲ್ಲವೇ ಚಿತ್ರಾನ್ನ ಮಾಡಿಕೊಂಡು ಬಾಯಿ ಚಪ್ಪರಿಸಲು, ಹಣ್ಣಾಗುವ ಸಮಯ ಬರುವುದರ ಮೊದಲೇ, ಬೇರೆ ಬೇರೆ ಕಾಲದಲ್ಲಿ, ಕೇಳುತ್ತಾನೆ. ತೀರಾ ಎಳೆಯ ಮಿಡಿಯೂ ಬೇಕು ಅವನಿಗೆ. ಬಲಿತ ಕಾಯಿಗಳೂ ಹೀಗೆ ಉಪ್ಪಿನಕಾಯಿಗೆ, ಚಿತ್ರಾನ್ನಕ್ಕೆ ಬೇಕು. ಹಣ್ಣಾದರಂತೂ ಕೇಳುವುದೇ ಬೇಡ. 

ಎಲ್ಲೋ ಒಂದು ಮರದಲ್ಲಿ, ಎಲೆಗಳ ಹಿಂದೆ ಒಂದು ಕಾಯಿ ಅವಿತು ಕುಳಿತಿದೆ. ಮನುಷ್ಯನ ಕಣ್ಣಿಗೆ ಬೀಳಲಿಲ್ಲ. ಸ್ವಾಭಾವಿಕವಾಗಿ ಮರದಲ್ಲೇ ಹಣ್ಣಾಯಿತು. ಆಗ ಮರ ಅದನ್ನು ತನ್ನ ಬಳಿ ಇಟ್ಟುಕೊಳ್ಳುವುದಿಲ್ಲ. ಒಂದು ದಿನ "ಇನ್ನು ನೀನು ಹೋಗು" ಎನ್ನುವಂತೆ ಆ ಹಣ್ಣನ್ನು ತಳ್ಳುತ್ತದೆ. ಹಣ್ಣೂ ಸಹ "ಇನ್ನು ನಾನು ಹೋಗಬೇಕು" ಎನ್ನುವಂತೆ ಮರದಿಂದ ಬೇರ್ಪಟ್ಟು ಕೆಳಗೆ ಬೀಳುತ್ತದೆ. ಹೀಗೆ ಬಿದ್ದಾಗ ಮರದಲ್ಲಿ ಹಣ್ಣು ಹುಟ್ಟಿದ ತೊಟ್ಟಿನ ಜಾಗದಲ್ಲಿ ಏನೂ ಗುರುತಿರುವುದಿಲ್ಲ. ಒದ್ದೆ ಇರುವುದಿಲ್ಲ. ರಸ ಸೋರುವುದಿಲ್ಲ. ಹಣ್ಣಿನ ತೊಟ್ಟಿನಲ್ಲೂ ದ್ರವ ಇಲ್ಲ. ಒಣಗಿದ ತೊಟ್ಟು. ಮರಕ್ಕೂ, ಹಣ್ಣಿಗೂ, ಎರಡಕ್ಕೂ ಒಂದು ನಿರ್ವಿಕಾರ ಭಾವ ಇದ್ದಂತೆ! ಬೇರೆ ಆಗುವ ಕಾಲ ಬಂದಿತು. ಬೇರೆಯಾದವು. ಒಂದು ದಿನ ಹಣ್ಣು ಬೀಳಲೇಬೇಕು. ಇಲ್ಲದಿದ್ದರೆ ಮುಂದಿನ ವರುಷ ಹೊಸ ಹಣ್ಣಿನ ಆಗಮನಕ್ಕೆ ದಾರಿಯೆಲ್ಲಿ?

ಅದೇ ಮಿಡಿ ಅಥವಾ ಕಾಯಿ ಕಿತ್ತ ಜಾಗ ನೋಡಿ. ಮರದಲ್ಲಿಯೂ ಹಸಿ ಹಸಿ; ಒಂದು ರೀತಿಯ ಸ್ರಾವ. ಮಿಡಿಯಲ್ಲಿಯೂ ಅಥವಾ ಕಾಯಿಯಲ್ಲಿಯೂ ಅದೇ ರೀತಿಯ ಅಂಟು ಸುರಿಯುತ್ತಿದೆ. ಎರಡಕ್ಕೂ ತಾಯಿ-ಮಗುವನ್ನು ಬಲವಂತದಿಂದ ಬೇರ್ಪಡಿಸಿದ ದುಃಖ. ಇದೊಂದು ಅಕಾಲ ವಿರಹ. ಇದು ಮನುಷ್ಯನಿಗೆ ಬೇಕಾದರೂ ಮರಕ್ಕೆ-ಕಾಯಿಗೆ ಬೇಡವಾದದ್ದು. 

ಭೂಮಿಯ ಮೇಲೆ ಮನುಷ್ಯನಿಗೂ ಪ್ರಕೃತಿಗೂ ಪ್ರಾಯಶಃ ಇದೆ ರೀತಿಯ ಸಂಬಂಧ. ಪೂರ್ತಿ ಜೀವನ ನಡೆಸಿ ಯಾರಾದರೂ ಸತ್ತರೆ ಸಮಾಜವೂ ಅದನ್ನು ಸಹಜವಾಗಿ ಸ್ವೀಕರಿಸುತ್ತದೆ. "ಪೂರ್ಣ ಜೀವನ ನಡೆಸಿದರು. ಬಿಡುಗಡೆ ಆಯಿತು. ಬದುಕಿಕೊಂಡರು" ಅನ್ನುತ್ತಾರೆ ಸುತ್ತಮುತ್ತಲು ಇರುವ ಜನ. ಅರೇ, ಇದೇನಿದು! ಸತ್ತವರನ್ನು ಬದುಕಿಕೊಂಡರು ಅನ್ನುತ್ತಾರಲ್ಲ. ಅದೇ ಪ್ರಪಂಚ. ಆದರೆ ಯಾರಾದರೂ ಅಕಾಲದಲ್ಲಿ ಸತ್ತರೆ ಅದರ ವ್ಯವಹಾರ ಬೇರೆ ರೀತಿಯದು. 

*****

ನಮ್ಮ ಬಾಲ್ಯಕಾಲದಲ್ಲಿ ನಮ್ಮ ಹಿರಿಯರು ಸಂಜೆಯ ಹೊತ್ತು  ಅವರಿಗೆ ತಿಳಿದ ಸ್ತೋತ್ರಗಳನ್ನೋ, ಹಾಡುಗಳನ್ನೋ ಹೇಳಿಕೊಂಡು, ಕೊನೆಯಲ್ಲಿ ಈ ರೀತಿ ಒಂದು ಶ್ಲೋಕ ಹೇಳುತ್ತಿದ್ದರು: 

ಅನಾಯೇಸೇನ ಮರಣಂ ವಿನಾ ದೈನ್ಯೇನ ಜೀವನ೦
ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿ೦ ಅಚಂಚಲಂ 

ಈ ಶ್ಲೋಕದಲ್ಲಿ ಅನೇಕ ಪಾಠಾ೦ತರಗಳೂ ಇದ್ದವು. ಕೆಲವರು "ಶಂಭೋ" ಎನ್ನುವ ಬದಲು "ಗೋವಿಂದ" ಎನ್ನುತ್ತಿದ್ದರು. "ವಿನಾ ದೈನ್ಯೇನ ಜೀವನಮ್" ಅನ್ನುವ ಕಡೆ ಅಥವಾ ಮತ್ತೊಂದು ಸಾಲಿನಲ್ಲಿ "ಮಾತೃ ಹಸ್ತೇನ ಭೋಜನಂ" ಎಂದೂ, "ವಿಪ್ರ ಹಸ್ತೇನ ಅಕ್ಷತಾ೦" ಎಂದೂ ಆನ್ನುವವರಿದ್ದರು. ಕೆಲವರು "ಸದಾ ರಾಜಿತ ಗೋವಿಂದಂ" ಅನ್ನುತ್ತಿದ್ದರು. ಒಟ್ಟಿನಲ್ಲಿ "ಇವನ್ನು ಕೊಡು" ಎಂದು ಕೇಳುವ ಒಂದು ಪ್ರಾರ್ಥನೆ. ಇನ್ನೊಬ್ಬರ ಬಳಿ ಯಾಚಿಸುವ, ದೈನ್ಯದ, ಭಿಕಾರಿಭಾವದ ಜೀವನ ಬೇಡ. ತಾಯಿಯ ಕೈಯ ಊಟ ಇರಲಿ. ತಿಳಿದವರ ಸಂಗವಿರಲಿ. ನಿನ್ನಲ್ಲಿ ಧೃಢವಾದ ಭಕ್ತಿ ಇರಲಿ. ಹೀಗೆ ಕೇಳುವುದು. 

ಎಲ್ಲಿಯವರೆಗೆ ತಾಯಿಯ ಕೈಯ ಅನ್ನ ಸಾಧ್ಯ? ತಾಯಿಯೂ ಒಂದು ದಿನ ಹೋಗಲೇಬೇಕಲ್ಲವೇ? ಹಾಗಿದ್ದರೆ ಅವಳ ಸ್ಥಾನದಲ್ಲಿ ತಾಯಿಯಂತಿರುವ ಇನ್ಯಾರೋ ಇರಬಹುದು. ಸಪ್ತಪದಿಯಲ್ಲಿ ಹೇಳುವಂತೆ "ಹತ್ತು ಮಕ್ಕಳನ್ನು ಹೆತ್ತು, ಗಂಡನನ್ನು ಹನ್ನೊಂದನೆಯವನೆಂದು ತಿಳಿ" ಎನ್ನುವಂತೆ ಕಾಪಾಡುವ ಹೆಂಡತಿಯಿರಬಹುದು. ತನ್ನ ಮಕ್ಕಳ ಜೊತೆ ಇನ್ನೊಂದು ಮಗು ಎಂದು ರಕ್ಷಿಸುವ ಮಗಳೋ, ಸೊಸೆಯೋ, ಸೋದರಿಯೋ ಇರಬಹುದು.  ಮಿಕ್ಕ ಭಾಗಗಳು, ಮನವಿಗಳು ಏನಾದರೂ ಇರಲಿ. ಎಲ್ಲಕ್ಕೂ ಮೊದಲಿಗೆ ಬೇಡುವುದು ಅನಾಯಾಸವಾದ ಮರಣ. ಅಂದರೆ ಒದ್ದಾಡಿ, ಹಿಂಸೆ ಅನುಭವಿಸಿ, ಇನ್ನೊಬ್ಬರಿಗೆ ಕಷ್ಟ ಕೊಟ್ಟು, ತಾವೂ ದುಃಖ ಅನುಭವಿಸುವಂತಹ ಸಾವು ಬೇಡ. ಫಟ್ಟಂತ ಪ್ರಾಣ ಹೋಗಲಿ ಎಂದು ಕೋರಿಕೆ. 

ಯಾರಾದರೂ ದೀರ್ಘ ಆಯುಸ್ಸು ಕೇಳುವುದು ಸಹಜ. ಆದರೆ ಸಾವು ಕೇಳಿಕೊಳ್ಳುತ್ತಾರೆಯೇ? ಅದು ಬಂದೇ ಬರುವುದು ಮತ್ತು ಅನಿವಾರ್ಯ ಎಂದಾಗ ಆದಷ್ಟೂ ಕಡಿಮೆ ಕಷ್ಟ ಇರಲಿ ಎಂಬ ಇಚ್ಛೆ. ಎದುರಿನವನು ಹೊಡೆದೇ ಹೊಡೆಯುತ್ತಾನೆ ಅಂದಾಗ ಮೆತ್ತಗೆ ಹೊಡೆಯಲಿ ಎಂದು ಆಶಿಸುವಂತೆ. ಮನುಷ್ಯನ ದೇಹದಿಂದ ಪ್ರಾಣ ಹೊರಗೆ ಹೋಗುವಾಗ ಒಮ್ಮೆಲೇ ಸಾವಿರ ಚೇಳುಗಳು ಕಡಿದಾಗ ಆಗುವಷ್ಟು ನೋವು ಉಂಟಾಗುತ್ತದೆ ಎಂದು "ಗರುಡ ಪುರಾಣ" ಹೇಳುತ್ತದೆ. ಅಂಥದರಲ್ಲಿ ಹೆಚ್ಚು ಕಾಲ ಅದರ ಪ್ರಕ್ರಿಯೆಯಲ್ಲೇ ಕಷ್ಟ ಪಟ್ಟರೆ ಹೇಗೆ? ಅಂತಹ ಹಿಂಸೆ ಉದ್ದವಾಗುವುದು ಬೇಡ ಎಂದು ಈ ರೀತಿ ಕೇಳಿಕೊಳ್ಳುವುದು. 

*****

ಈಗ್ಗೆ ಕೆಲವು ದಿನಗಳಲ್ಲಿ ಎರಡು ವಿಡಿಯೋಗಳು ಎಲ್ಲ ಕಡೆ ಸುತ್ತುತ್ತಿವೆ. ಒಂದರಲ್ಲಿ ಗುಜರಾತಿನ ಒಂದು ಅಂಗಡಿಯಲ್ಲಿ ಕುರ್ಚಿಯಲ್ಲಿ ಕುಳಿತು ಜೊತೆಯವರೊಂದಿಗೆ ಮಾತನಾಡುತ್ತಾ ಕುಳಿತಿರುವಾಗ ನೀರಿನ ಬಾಟಲ್ ತೆಗೆದುಕೊಳ್ಳಲು ಕೈ ಚಾಚಿದ ಯುವಕನೊಬ್ಬ ಬಾಟಲ್ ಕೈ ಜಾರಿ ಕುಳಿತಲ್ಲಿಯೇ ಅಸು ನೀಗುವುದು ಸಿ ಸಿ ಟಿವಿಯಲ್ಲಿ ಕಾಣುವುದು. ಮತ್ತೊಂದು, ಹೃದಯ ವಿದ್ರಾವಕವಾದ ವಿಮಾನ ದುರ್ಘಟನೆಯಲ್ಲಿ 11A ಸೀಟಿನಲ್ಲಿ ಕುಳಿತಿದ್ದ ವಿಶ್ವಾಸ್ ಕುಮಾರ್ ದುರ್ಘಟನೆಯಲ್ಲಿ ಬದುಕುಳಿದ ಏಕಮಾತ್ರ ವ್ಯಕ್ತಿಯಾಗಿ ನಡೆದು ಬಂದು ಆಂಬುಲೆನ್ಸ್ ಏರುತ್ತಿರುವುದು. ಒಂದು ಸಾವು. ಇನ್ನೊಂದು ಸಾವಿನ ದವಡೆಯಿಂದ ಅಧ್ಭುತವಾಗಿ ತಪ್ಪಿಸಿಕೊಂಡು ಬಂದ ಸನ್ನಿವೇಶ. 

ಸುಖ ಮರಣ, ಅಕಾಲ ಮರಣ, ದುರ್ಮರಣ, ಅಪಮೃತ್ಯು, ವೀರಮರಣ, ಇಚ್ಚಾಮರಣ, ಸ್ವಾಭಾವಿಕ ಮರಣ ಅನಾಯಾಸ ಮರಣ ಎನ್ನುವ ಪದಗಳನ್ನು ಮತ್ತೆ ಮತ್ತೆ ಉಪಯೋಗಿಸುತ್ತೇವೆ. ಯಾವುದು ಸರಿ? ಯಾವುದು ತಪ್ಪು? ಮನುಷ್ಯನೇ ಹೋದಮೇಲೆ ಯಾವ ಪದ ಪ್ರಯೋಗಿಸಿದರೆ ಏನು? ಅದಕ್ಯಾಕೆ ಚಿಂತಿಸಬೇಕು? ಹೀಗೆ ಹೇಳಬಹುದು. ಆದರೆ, ಸಾಧ್ಯವಾದಷ್ಟೂ ನಾವು ಸರಿಯಾದ ಪದ ಉಪಯೋಗಿಸಬೇಕಲ್ಲವೇ?

  • ಮೇಲೆ ಚರ್ಚಿಸಿದ ಮಾವಿನ ಮರದಿಂದ ಬಿದ್ದ ಹಣ್ಣಿನಂತೆ ಬಂದ ಮರಣ ಸ್ವಾಭಾವಿಕ ಮರಣ. ಇದು ಆಗಲೇಬೇಕಾಗಿತ್ತು. ಆಯಿತು. ಎಲ್ಲರಿಗೂ ಗೊತ್ತಿತ್ತು. ಹೆಚ್ಚಿನ ವಿಷಾದವಿಲ್ಲ. 
  • ಆಕಸ್ಮಿಕವಾದ ದುರ್ಘಟನೆಯಲ್ಲಿ  ಸಾವು ಬಂದರೆ ದುರ್ಮರಣ. ಅತ್ಯಂತ ಅನಿರೀಕ್ಷಿತ. 
  • ಎಲ್ಲರಂತೆ ರಾತ್ರಿ ಮಲಗಿದರು. ಬೆಳಗ್ಗೆ ಏಳಲಿಲ್ಲ. ತುಂಬು ಜೀವನ ನಡೆಸಿದ ಸಜ್ಜನ. ಇದು ಸ್ವಾಭಾವಿಕವಾದ ಅನಾಯಾಸ ಮರಣ. 
  • ಚೆನ್ನಾಗಿಯೇ ಇದ್ದರು. ಒಂದೇ ಕ್ಷಣದಲ್ಲಿ ಹೋದರು. ಗೊತ್ತೇ ಆಗಲಿಲ್ಲ. ಖಾಯಿಲೆ-ಕಸಾಲೆ ಇಲ್ಲ. ಪೂರ್ತಿ ಜೀವನ ನಡೆಸಿದರು. ಹಿಂಸೆ ಅನುಭವಿಸಲಿಲ್ಲ. ಇದು ಸುಖ ಮರಣ. 
  • ದೇಶಕ್ಕಾಗಿ, ಸಮಾಜಕ್ಕಾಗಿ ಹೋರಾಡುತ್ತ ಜೀವ ತೆತ್ತರು. ಇನ್ನೊಬ್ಬರ ರಕ್ಷಣೆಗಾಗಿ ಪ್ರಾಣ ಪಣವಾಗಿಟ್ಟವರು. ಇದು ವೀರಮರಣ. "ಹುತಾತ್ಮ" ಎಂದು ಹೇಳಲು ಯೋಗ್ಯವಾದದ್ದು. 
  • ಇನ್ನೂ ಬದುಕಿ ಬಾಳಬೇಕಾದ ವಯಸ್ಸು. ಸಾವು ಬಂದಿತು. ಹೆಚ್ಚಿನ ನೋವಿನ ಸಂಗತಿ. ಇದು ಅಕಾಲಿಕ ಮರಣ. 
  • ಎಲ್ಲ ದೃಷ್ಟಿಯಿಂದ ನೋಡಿದರೂ ಈ ಸಾವು ಬರಬಾರದಿತ್ತು. ಬಂದುಬಿಟ್ಟಿತು. ಇದು ಅಪಮೃತ್ಯು. ಅಕಾಲ ಮರಣ. 
  • ತಾವು ಹುಟ್ಟಿ ಬಂದು ಸಾಧಿಸಬೇಕಾದ ಕೆಲಸವಾಯಿತು. ಇನ್ನು ಬದುಕು ಸಾಕು. ಹೀಗೆಂದು ಸಾವನ್ನಪ್ಪಿದವರು ಇಚ್ಚಾಮರಣಿಗಳು. ಯಾವಾಗ ದೇಹ ಬಿಡಬೇಕೆಂದು ಅವರೇ ನಿರ್ಧರಿಸುವ ಮಹಾನುಭಾವರು. 
ಇನ್ಯಾವುದಾದರೂ ಸಾವಿನವರ್ಗವಿದ್ದರೆ ಸೇರಿಸಿಕೊಳ್ಳಬಹುದು. 

*****

ಒಬ್ಬ ದೊಡ್ಡ ರಾಜಕೀಯ ನಾಯಕರು. ಬಹುಕಾಲ ಅಧಿಕಾರದಲ್ಲಿದ್ದವರು. ಆ ಸಮಯದಲ್ಲಿ ಲೂಟಿ ಹೊಡೆದು ಏಳು ತಲೆಮಾರಿಗೆ ಸಾಕಾಗುವಷ್ಟು ಆಸ್ತಿ ಮಾಡಿದರು. ಎಲ್ಲರನ್ನೂ ಗೋಳು ಹೊಯ್ದುಕೊಂಡು ದರ್ಪದಿಂದ ಮೆರೆದವರು. ಮೂರು ವರುಷ ಹಾಸಿಗೆ ಹಿಡಿದಿದ್ದರು. ಕಡೆಗೆ ಸತ್ತರು. ಪುಣ್ಯಕ್ಕೆ ಇನ್ನು ಮುಂದೆ ಯಾರಿಗೂ ತೊಂದರೆ ಮಾಡಲಾಗದು. 

ಸುದ್ದಿ ಕೇಳಿದ ಕೂಡಲೇ ಇತರ ರಾಜಕೀಯ ನಾಯಕರು, ಅವರ ಭಟ್ಟಂಗಿಗಳು ತಮ್ಮ ತಮ್ಮ ಹೇಳಿಕೆ ಕೊಟ್ಟರು. "ತುಂಬಲಾರದ ನಷ್ಟ" ಅಂದರು ಒಬ್ಬರು. "ಸಮಾಜ ಬಡವಾಯಿತು" ಅಂದರು ಇನ್ನೊಬ್ಬರು. "ನಾವು ಪರದೇಶಿಗಳಾದೆವು" ಎಂದು ಹೇಳಿದರು ಮಗದೊಬ್ಬರು. ಹೀಗೆ ಸಂತಾಪ ಸೂಚಕ ಸಂದೇಶಗಳ ಸುರಿಮಳೆ. 

ಇದು ಯಾವ ರೀತಿಯ ಮರಣ? ಯಾವ ರೀತಿಯದು ಎಂದು ಹೇಳದಿರುವುದೇ ಒಳ್ಳೆಯದು. ಆದರೆ ಮನಸ್ಸಿನಲ್ಲಿಯೇ ಸಂತಾಪ ಸೂಚಕ ಸಂದೇಶಗಳ ಹಿನ್ನೆಲೆಯಲ್ಲಿ "ವಿಚಿತ್ರ ಮರಣ" ಎಂದುಕೊಳ್ಳಬಹುದು.