Showing posts with label Bhaskara. Show all posts
Showing posts with label Bhaskara. Show all posts

Tuesday, July 8, 2025

ಮಲಗಿಲ್ಲದವನನ್ನು ಎಬ್ಬಿಸುವುದು!


ಈಗ ಎಲ್ಲೆಲ್ಲೂ ಶಯನೀ ಏಕಾದಶಿಯ ಆಚರಣೆ ವೈಭವ. ಆಷಾಢ ಶುದ್ಧ ಏಕಾದಶಿ "ಶಯನೀ ಏಕಾದಶಿ" ಎಂದು ಪ್ರಸಿದ್ಧಿ. ಅಂದು ದೇಶದ ಎಲ್ಲೆಡೆ ವೈಷ್ಣವ ದೇವಾಲಯಗಳಲ್ಲಿ ಭಕ್ತರ ದಂಡು. ಫಂಡರಾಪುರದ ವಿಠಲ ಮತ್ತು ಶ್ರೀರಂಗದ ರಂಗನಾಥರ ದರ್ಶನಕ್ಕೆ ಸಾಲು ಸಾಲು ಜನ ಸಮೂಹ. ತಿರುಪತಿಯಲ್ಲಂತೂ ಕೇಳುವುದೂ ಬೇಡ. ಎಲ್ಲೆಲ್ಲೂ "ಗೋವಿಂದ" ನಾಮ ಸಂಕೀರ್ತನೆ. 

ಮುಂದೆ, ನಾಲ್ಕು ತಿಂಗಳ ನಂತರ ಬರುವ ಕಾರ್ತೀಕ ಶುದ್ಧ ಏಕಾದಶಿ "ಪ್ರಬೋಧಿನಿ ಏಕಾದಶಿ" ಎಂದು ಪ್ರಸಿದ್ಧಿ. "ಶಯನೀ ಏಕಾದಶಿ"ಯಲ್ಲಿ ಕ್ಷೀರಸಾಗರದಲ್ಲಿ ಪವಡಿಸಿದ ಲಕ್ಷ್ಮೀನಾರಾಯಣನು "ಪ್ರಬೋಧಿನಿ ಏಕಾದಶಿ"ಯಂದು ಏಳುತ್ತಾನಂತೆ. ನಾಲ್ಕು ತಿಂಗಳ ಕಾಲದ ದೀರ್ಘ ನಿದ್ರೆ. ಮಲಗಲೂ ಅವನಿಗೆ ಹಾಲಿನ ಸಮುದ್ರವೇ ಬೇಕು. ಈ ಮಧ್ಯದ ನಾಲ್ಕು ತಿಂಗಳು "ಚಾತುರ್ಮಾಸ ವ್ರತ" ಎಂದು ಆಚರಣೆ. ಏಕಾದಶಿಯ ಆಚರಣೆ ಮತ್ತು ನಾಲ್ಕು ತಿಂಗಳುಗಲ್ಲಿ ಕ್ರಮವಾಗಿ ಶಾಕ (ತರಕಾರಿಗಳು), ದಧಿ (ಮೊಸರು), ಕ್ಷೀರ (ಹಾಲು), ಮತ್ತು ದ್ವಿದಳ (ಬೇಳೆ-ಕಾಳುಗಳು) ಸೇವಿಸುವುದು ಕೂಡದು. ಹಾಲಿನ ಕಡಲಲ್ಲಿ ಮಲಗಿದಂತೆ ನಟಿಸುವವನಿಗೆ ಮುದಕೊಡಲು ಹಾಲು ಮತ್ತು ಅದರಿಂದಾದ ಮೊಸರು ಬಿಡುವ ವ್ರತಗಳು! ಏಕಾದಶಿ ಆಚರಣೆ ಮತ್ತು ಇವುಗಳ ವಿವರವನ್ನು "ಏಕಾದಶಿಯ ದಿನ ಹಾಲು-ಹಣ್ಣು ಸೇವಿಸಿ" ಎನ್ನುವ ಹಿಂದಿನ ಒಂದು ಸಂಚಿಕೆಯಲ್ಲಿ ನೋಡಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಹಸಿವು, ನಿದ್ರೆ, ಬಾಯಾರಿಕೆ, ಬಸವಳಿಕೆ, ಜನನ, ಮರಣ, ಹಿಂದು, ಮುಂದು, ಮುಂತಾದುವು ಇಲ್ಲದ ಮಹಾಶಯನನಿಗೆ ದೀರ್ಘ ನಿದ್ರೆ ಬರಿಸಿ, ಆ ಕಾಲದಲ್ಲಿ ಈ ಪದಾರ್ಥಗಳಿಲ್ಲದ ಆಹಾರ ಸೇವಿಸಿ, ವ್ರತಾದಿಗಳನ್ನು ಮಾಡಿ ಅವನನ್ನು ಪ್ರೀತನನ್ನಾಗಿಸಿ, ನಂತರ ತಾನು ಕೇಳಿದ್ದು ಸಂಪಾದಿಸುವನು ಈ ಮನುಷ್ಯ. ನಿದ್ದೆ ಮಾಡದವನನ್ನು ಮೊದಲು ಮಲಗಿಸುವುದು. ನಂತರ ಮಲಗಿರದಿದ್ದವನ್ನು ಎಬ್ಬಿಸುವುದು. ಇದೊಂದು ಬಹಳ ವಿಚಿತ್ರದ ವಿನೋದ!

*****

ಒಬ್ಬ ದೊಡ್ಡ ಶ್ರೀಮಂತ. ಜೊತೆಗೆ ಅಷ್ಟೇ ದೊಡ್ಡ ಅಧಿಕಾರವುಂಟು. ನೂರಾರು ಜನರಿಗೆ ಅವನಿಂದ ಸಾವಿರಾರು ಕೆಲಸಗಳು ದಿನ ದಿನವೂ ಆಗಬೇಕು. ಅವನನ್ನು ನೋಡಲು ಕೆಲವರು ಪ್ರತಿದಿನ ಬರುತ್ತಾರೆ. ಬೇರೆ ಕೆಲವರು ಕೆಲಸವಿದ್ದಾಗ ಮಾತ್ರ ಬರುತ್ತಾರೆ. ಮತ್ತೆ ಕೆಲವರು ಅವರ ಕೆಲಸಗಳು ಆಗುವವರೆಗೂ ಬರುತ್ತಿರುತ್ತಾರೆ. ಹಲವರು ದಿನಂಪ್ರತಿ ಹೊಸ ಹೊಸ ಕೆಲಸಗಳನ್ನು ಹೂಡಿಕೊಂಡು ಅವನನ್ನು ನೋಡಲು ಬರುತ್ತಾರೆ. ಒಂದು ಗುಂಪಿನ ಜನರಿಗಂತೂ ಅವನನ್ನು ತಪ್ಪಷ್ಟೇ ದಿನವೂ ನೋಡುವುದೇ ಒಂದು ಉದ್ಯೋಗ. ಹೀಗೆ ಅವನ ಮನೆಯ ಮುಂದೆ ಬೆಳಗಿನಿಂದಲೇ ಜನಜಂಗುಳಿ. 

ಅವನು ಅನೇಕ ವಾಹನಗಳ ಧಣಿಯಾಗಿದ್ದರೂ ಒಂದು ವಿಶೇಷವಾದ ವಾಹನ ಅವನಿಗೇ ಮೀಸಲಾಗಿದೆ. ಅವನು ಅದನ್ನು ಉಪಯೋಗಿಸಲಿ, ಇಲ್ಲದಿರಲಿ, ಪ್ರತಿದಿನ ಅದರ ಚಾಲಕ  ಬೇಗನೆ ಬಂದು ಅದನ್ನು ತಯಾರಿ ಮಾಡುತ್ತಾನೆ. ಅದರ ಮರಮ್ಮತ್ತು ಮಾಡಿ, ತೊಳೆದು, ಒರಸಿ, ಅದರ ಪಕ್ಕದಲ್ಲಿ  ಕಾದು ನಿಂತಿರುತ್ತಾನೆ.  ಅವನಿಗೆ ಇಡೀ ದಿನ ಕೆಲಸವಿಲ್ಲದಿರಬಹುದು. ಯಜಮಾನನು ವಾಹನವನ್ನು ಉಪಯೋಗಿಸದೇ ಬಿಡಬಹುದು. ಆದರೂ ಚಾಲಕನು ಅವನ ಕೆಲಸವನ್ನು ಅವನು ಮಾಡುತ್ತಾನೆ! ಹಾಗೆಂದು, ಬಂದವನು ಯಜಮಾನನು ಮಲಗಿರುವಲ್ಲಿ ಹೋಗಿ ಕೂಗುವುದಿಲ್ಲ. ಬಾಗಿಲ ಹೊರಗೆ ನಿಂತಿರುತ್ತಾನೆ ಅಷ್ಟೇ. ಮನೆಯ ಮಂದಿ ಯಜಮಾನನಿಗೆ ಚಾಲಕ ಬಂದು ನಿಂದಿರುವುದು ಹೇಳಬೇಕು. ಇದೇ ವ್ಯವಸ್ಥೆ. 

ಬೆಳಗಿನ ವಾತಾವರಣ ಹೇಗಿರುತ್ತದೆ? ಹಕ್ಕಿ-ಪಕ್ಷಿಗಳು ಚಿಲ್ಲಿ-ಪಿಲಿಗುಟ್ಟುತ್ತಾ ಅಂದಿನ ಆಹಾರ ಅರಸುತ್ತಾ, ಆಗಸದಲ್ಲಿ ಹಾರಾಡುತ್ತವೆ. ಮೊದಲು ಬೆಟ್ಟಗಳ ಮೇಲೆ ಅರುಣೋದಯವಾಗುತ್ತದೆ. ಶುಭ್ರವಾದ ಆಕಾಶ ಬಣ್ಣಗಳಿಂದ ಬೆಳಗುತ್ತದೆ. ನಂತರ ಸೂರ್ಯದೇವನು ಕೆಂಪಗೆ, ಮೆಲ್ಲಗೆ ಬಂದು ತನ್ನ ಕಿರಣಗಳನ್ನು ಹರಡುತ್ತಾನೆ. ಮೈಮೇಲೆ ಪ್ರಜ್ಞೆ ಅನ್ನುವ ಜ್ಞಾನ ಇರುವ ಯಾವನೂ ಸೂರ್ಯನು ಉದಯಿಸುವ ನಂತರ ನಿದ್ರಿಸಬಾರದು ಎನ್ನುವುದು ಒಂದು ನಿಯಮ. ಪ್ರತಿದಿನ ದೊಡ್ಡವರನ್ನು ನೋಡುವ ಕ್ರಮ ಇಟ್ಟುಕೊಂಡವರು ಆ ಸಮಯಕ್ಕೆ ಬಂದು ನಿಂತು, ನೋಡುವ ಅವಕಾಶಕ್ಕೆ ಕಾದಿರುತ್ತಾರೆ. 

ಆಳುವ ಪ್ರಭುಗಳನ್ನು ಹೊಗಳಲು ವಂದಿ-ಮಾಗಧರು ಎನ್ನುವ ಗುಂಪುಗಳಿರುತ್ತಿದ್ದವು. ಅವರ ಕೆಲಸವೇ ಸುಸ್ವರವಾಗಿ, ರಾಗವಾಗಿ, ಗಟ್ಟಿಯಾಗಿ, ಎಲ್ಲರಿಗೂ ಕೇಳುವಂತೆ ಯಜಮಾನನ ಗುಣಗಳನ್ನು ಕೂಗುವುದು. ಅನೇಕರಿಗೆ ಬೆಳಗಿನ ಕೆಲಸಗಳನ್ನು ಮಾಡುತ್ತಿರುವಾಗ ತಮಗೆ ಪ್ರಿಯವಾದ ಹಾಡುಗಳನ್ನು ಹೇಳುತ್ತಾ ಕೆಲಸಗಳನ್ನು ಮಾಡುವುದು ಅಭ್ಯಾಸ. ಒಂದು ಕಡೆ ಹಾಡು ಹಾಡಿದ ಅನುಭವ. ಮತ್ತೊಂದು ಕಡೆ ಕೆಲಸಗಳೂ ಸಲೀಸಾಗಿ ನಡೆದುವು. ಉಭಯ ರೀತಿಯಲ್ಲಿಯೂ ಅನುಕೂಲ. ಎಲ್ಲೋ ದೂರದಲ್ಲಿರುವವರು ಬೆಳ್ಳಂಬೆಳಿಗ್ಗೆ ತಮ್ಮ ಪ್ರಿಯಜನರ ನೆನಪು ಮಾಡಿಕೊಳ್ಳುವುದೂ ಉಂಟು, 

ಪ್ರಪಂಚದ ಅತಿ ಕಷ್ಟದ ಕೆಲಸಗಳಲ್ಲಿ ಮಲಗಿರುವವರನ್ನು ಎಬ್ಬಿಸುವುದೂ ಒಂದು. ಎಚ್ಚರವಿದ್ದರೂ ಮಲಗಿದಂತೆ ಇರುವವರನ್ನು ಎಬ್ಬಿಸುವುದಂತೂ ಮತ್ತೂ ಕಷ್ಟದ ಕೆಲಸವೇ ಸರಿ. ಒಂದು, ಎರಡು, ಮೂರು ಬಾರಿ ತಾಳ್ಮೆಯಿಂದ ಎಬ್ಬಿಸುವುದು. ನಾಲ್ಕನೆಯ ಬಾರಿ ಧ್ವನಿ ಸ್ವಲ್ಪ ಗಡಸು ಆಗುವುದು ಸಾಮಾನ್ಯ. ಐದನೆಯ ಬಾರಿಯಂತೂ "ಇನ್ನು ಏಳಪ್ಪ! ಎಬ್ಬಿಸಿ, ಎಬ್ಬಿಸಿ, ಸಾಕಾಯಿತು" ಎಂದು ಜೋರಾಗಿ ಕೂಗುವುದು ಆಗಲೇಬೇಕು.  
*****

"ನವಕೋಟಿ ನಾರಾಯಣ" ಎನ್ನುವ ಬಿರುದು ಹೊಂದಿದ್ದ ಶ್ರೀನಿವಾಸ ನಾಯಕರು ಎಲ್ಲವನ್ನೂ ಬಿಟ್ಟು ಹರಿದಾಸರಾದ ಮೇಲೆ ದೇಶದ ಮೂಲೆ ಮೂಲೆ ತಿರುಗಿ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿದರು. ಹೀಗೆ ಕಂಡ ಒಂದೊಂದು ದಿವ್ಯ ಮೂರ್ತಿಯ ಮುಂದೆಯೂ ಮೈಮರೆತು ಹಾಡಿ ಕುಣಿದರು. ಈ ರೀತಿ ಸಂಚರಿಸುತ್ತಿದ್ದಾಗ ಒಮ್ಮೆ ಶ್ರೀರಂಗಕ್ಕೆ ಬಂದು ರಂಗನಾಥನನ್ನು ನೋಡಿದರು. ಮಲಗಿದಂತೆ ಇರುವ ಸ್ವಾಮಿಯನ್ನು ಮೇಲಿನ ಎಲ್ಲ ಅಂಶಗಳನ್ನೂ ಸೇರಿಸಿ, ಮಹಾಲಕ್ಷ್ಮಿ ದೇವಿಯು ಅವನನ್ನು ಎಬ್ಬಿಸುತ್ತಿರುವಂತೆ ಒಂದು ಕೃತಿ ರಚಿಸಿ ಹಾಡಿದರು. ಅದೇ "ರಂಗನಾಯಕ, ರಾಜೀವಲೋಚನ, ರಮಣನೇ ಬೆಳಗಾಯ್ತು , ಎಳೆನ್ನುತ" ಎಂಬ ಕೃತಿ. 

ಇದರ ಐದು ನುಡಿಗಳಲ್ಲಿ ಮೇಲೆ ನಾವು ಬೆಳಗಿನಲ್ಲಿ ಕಾಣುವ ಶ್ರೀಮಂತ, ಅಧಿಕಾರಿಯ ಮನೆಯ ಮುಂದಿನ ದೃಶ್ಯವನ್ನು ಕಾಣಬಹುದು. ಶ್ರೀರಂಗದಲ್ಲಿ ಮಲಗಿರುವವನು ಸಾಮಾನ್ಯ ಶ್ರೀಮಂತನಲ್ಲ. ಅವಂತಹ ಶ್ರೀಮಂತ ಇನ್ನೊಬ್ಬನಿಲ್ಲ. ಅವನು ಅಂತಿಂತಹ ಅಧಿಕಾರಿಯಲ್ಲ. ಅವನಿಗಿರುವ ಅಧಿಕಾರ ಬೇರೆ ಯಾರಿಗೂ ಇಲ್ಲ. ಎಬ್ಬಿಸುವವಳೂ ಜಗದಾಂಬೆಯಾದ ಮಹಾಲಕ್ಷ್ಮಿ ದೇವಿ. 

  1. ಮೊದಲನೆಯ ನುಡಿಯಲ್ಲಿ ವಾಹನನಾದ ಗರುಡನ ಬರವು, ದ್ವಾರದಲ್ಲಿ ಅವನ ನಿರೀಕ್ಷೆ, ಮತ್ತು ಹಕ್ಕಿ-ಪಕ್ಷಿಗಳ ಕಲರವ ರೂಪದ ಪ್ರಾರ್ಥನೆ. ಸೃಷ್ಟಿಯಲ್ಲಿಯ ಸಕಲ ಶಬ್ದಗಳೂ ಪರಮಾತ್ಮನ ಕುರಿತೇ ಹೇಳುತ್ತವೆ ಎನ್ನುವ ಪ್ರಮೇಯದ ನಿರೂಪಣೆ. 
  2. ಎರಡನೆಯ ನುಡಿಯಲ್ಲಿ ಅವನ ದರ್ಶನ ಮಾಡಲು ಪ್ರತಿ ದಿನ ಆಗಮಿಸುವ ಸನಕ, ಸನಂದನ, ಸನತ್ಸುಜಾತ, ಸನತ್ಕುಮಾರರ ಬರವು, ಪರಮಾತ್ಮನ ಕುರಿತು ವಿಶೇಷ ಕೃತಿ ರಚನೆ ಮಾಡಿದ ವ್ಯಾಸ-ವಾಲ್ಮೀಕಿಗಳು, ಮತ್ತು ಅವನ್ನು ಹಾಡಿ-ಹೇಳುತ್ತಾ ಪ್ರಚುರಪಡಿಸಿದ ಶುಕ-ಶೌನಕರ ನೆನಪು. 
  3. ಮೂರನೆಯ ನುಡಿಯಲ್ಲಿ ದೇವತೆಗಳು, ಕಿನ್ನರರು, ಕಿಂಪುರುಷರು, ಉರಗರು ಮೊದಲಾದ ಗುಂಪುಗಳ ಸದಸ್ಯರು ಅವನ ಗುಣಗಳನ್ನು ಹೊಗಳುವ ಪರಿ. ಅರುಣೋದಯ ಮತ್ತು ಬಾಲ ಸೂರ್ಯನ ಕಿರಣಗಳ ಪಸರಿಸುವ ವಿವರಣೆ. 
  4. ನಾಲ್ಕನೆಯ ನುಡಿಯಲ್ಲಿ ವೈಕುಂಠದವರೆಗೂ ಬರಲಾಗದ, ಆದರೆ ಅವರಿದ್ದ ಕಡೆಯೇ ಉದಯರಾಗ ಹಾಡುತ್ತ ತಮ್ಮ ಮನೆ ಕೆಲಸಗಳನ್ನು ಮಾಡುವ ಗೃಹಿಣಿಯರು. ಅವನನ್ನು ಕುರಿತು ಹಾಡುವಾಗ ಮೊಸರು ಕಡೆದರೆ, ಹಾಡು ಮುಗಿಯುವ ವೇಳೆಗೆ ಬೆಣ್ಣೆಯೂ ಬಂತು. 
  5. ಐದನೆಯ ನುಡಿಯಲ್ಲಿ ಪರಿಪರಿಯಿಂದ ಹಾಡುತ್ತಾ ದರ್ಶನ ಬೇಡುವ ಅಸಂಖ್ಯಾತ ಭಕ್ತರ ಆರ್ತನಾದ. ಲೌಕಿಕದಲ್ಲಿ ಮಲಗಿದವರನ್ನು ಎಬ್ಬಿಸುವವರ ತಾಳ್ಮೆ ಕಳೆದುಕೊಳ್ಳುವ ಸೂಚನೆ. "ಪುರಂದರ ವಿಠಲ, ನೀನೇಳೋ!" ಎನ್ನುವ ಗಡಸು ಧ್ವನಿ!
ಶ್ರೀಮತಿ ಸಾಧ್ವಿನಿ ಕೊಪ್ಪ ಅವರು ಹೆಚ್ಚಿನ ವಾದ್ಯಗಳ ಆಡಂಬರವಿಲ್ಲದೆ ಈ ಎಲ್ಲ ಅಂಶಗಳನ್ನು ಗಮನಿಸಬಹುದಾದ ರೀತಿಯಲ್ಲಿ ಹಾಡಿರುವ ಈ ಕೃತಿಯನ್ನು ಇಲ್ಲಿ ಕೇಳಬಹುದು:


ನಮ್ಮ ಹೆಮ್ಮೆಯ ಯಕ್ಷಗಾನ ಕಲಾವಿದರು ಈ ಕೃತಿಯನ್ನು (ರಾತ್ರಿಯೆಲ್ಲ ಯಕ್ಷಗಾನ ಪ್ರಸಂಗ ನಡೆದ ನಂತರ ಬೆಳಗಾಗುತ್ತಿದ್ದಂತೆ ಮುಗಿವ ಸಮಯದಲ್ಲಿ) ಮಂಗಳ ಪದ್ಯವಾಗಿ ಸೊಗಸಾಗಿ ಉಪಯೋಗಿಸುತ್ತಾರೆ. ಇದರಲ್ಲಿ ಅವರ ವಿಶಿಷ್ಟ ಸಂಗೀತ, ಅಭಿನಯ, ಎರಡನ್ನೂ ನೋಡಬಹುದು. ಹಾಡಿನ ಕೇವಲ ಒಂದೇ ಒಂದು ನುಡಿ ಉಪಯೋಗಿಸಿಕೊಂಡರೂ ಸೊಗಸಾದ ಅನುಭವ ಕೊಡುತ್ತದೆ:


ಈ ಹಾಡಿನ ಜೊತೆಗೆ ಅವರ ಕಾರ್ಯಕ್ರಮದ ಭರತವಾಕ್ಯ ಕೂಡ ಸೇರಿಸಿ ಮಂಗಳ ಹಾಡುತ್ತಾರೆ. ಸಾಹಿತ್ಯ, ಸಂಗೀತ, ಅಭಿನಯಗಳ ಅಪೂರ್ವ ರಸಾಯನ. 

*****

ಶ್ರೀ ಪುರಂದರದಾರ ಕೃತಿಗಳು ಕೇವಲ ಭಕ್ತಿ ಪ್ರಧಾನವಾಗಿರದೆ ತಮ್ಮ ಸುತ್ತ-ಮುತ್ತಲ ಪ್ರಾಪಂಚಿಕ ವಿವರಗಳನ್ನೂ ಹೇಗೆ ಒಳಗೊಂಡಿರುತ್ತವೆ ಎನ್ನುವುದಕ್ಕೆ ಇದೊಂದು ಸೊಗಸಾದ ಉದಾಹರಣೆ.