Showing posts with label Charvita. Show all posts
Showing posts with label Charvita. Show all posts

Monday, April 14, 2025

ಚರ್ವಿತ ಚರ್ವಣ


ಕೆಲವು ದಶಕಗಳ ಹಿಂದೆ ಮಾವಿನ ಫಸಲು ಬರುವ ಕಾಲದಲ್ಲಿ (ಸುಮಾರು ಏಪ್ರಿಲ್, ಮೇ, ಜೂನ್ ತಿಂಗಳುಗಳು) ಮಾವು ಬೆಳೆವ ಹಳ್ಳಿಗಳಲ್ಲಿ ಮಾವಿನಹಣ್ಣು ಸಿಗುವುದು ಕಷ್ಟವೇನೂ ಇರಲಿಲ್ಲ. ಸಿಗುವುದು ಅಂದರೆ ಅಂಗಡಿಗಳಲ್ಲಿ ಅಲ್ಲ. ಅಲ್ಲಿ ಈಗಲೂ ಸಿಗುತ್ತವೆ. ಮಾವು ಬೆಳೆಯುವ ಪ್ರದೇಶಗಳಲ್ಲಿ ಅಲ್ಲಲ್ಲಿ ಮಾವಿನ ಮರಗಳಿದ್ದವು. ಅನೇಕರ ಮನೆಯ ಹಿತ್ತಿಲಲ್ಲಿ ಮಾವಿನ ಮರಗಳಿರುತ್ತಿದ್ದವು. ಈಗಿನಂತೆ ದೂರದ ಪ್ರದೇಶಗಳಿಗೆ ಶೀಘ್ರದಲ್ಲಿ ಹಣ್ಣುಗಳನ್ನು ಸರಬರಾಜು ಮಾಡುವ ವ್ಯವಸ್ಥೆ ಇರಲಿಲ್ಲ. ಹಣ್ಣು ಬೆಳೆದವರು ಇತರರೊಂದಿಗೆ ಹಂಚಿಕೊಂಡು ಬಾಳುತ್ತಿದ್ದರು. 

ಮಾವನ್ನು "ಫಲಗಳ ರಾಜ" ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ವಸಂತದ ಮೊದಲ ಮಳೆ ಬರುವವರೆಗೆ ಮಾವಿನಹಣ್ಣು ತಿನ್ನಬಾರದು ಎಂಬ ಅಲಿಖಿತ ನಿಯಮ ಕೆಲವರು ಪಾಲಿಸುತ್ತಿದ್ದರು. ಮಳೆ ಬರುವ ಮುನ್ನ ಅದನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಅಭಿಪ್ರಾಯವಿತ್ತು. ಅದರಲ್ಲೂ ಮಕ್ಕಳು ಆರೋಗ್ಯದ ದೃಷ್ಟಿಯಿಂದ ಇದನ್ನು ಮಿತವಾಗಿ ಸೇವಿಸಬೇಕೆಂದೂ, ಇಲ್ಲದಿದ್ದರೆ ಉಷ್ಣದಿಂದ ಆರೋಗ್ಯದ ಮೇಲೆ ಪರಿಣಾಮ ಆಗುತ್ತದೆ ಎಂದೂ ಹೇಳುತ್ತಿದ್ದರು. ಮಾವಿನಹಣ್ಣು ಹೆಚ್ಚು ತಿಂದರೆ ಅದರ ಜೊತೆ ಹಾಲು ಕುಡಿಯಬೇಕೆಂಬ ಸಲಹೆಯೂ ಇತ್ತು. 

ಮಾವಿನಹಣ್ಣು ತಿನ್ನಬೇಕೆಂದು ಎಲ್ಲರಿಗೂ ಆಸೆಯೇ. ಅದರಲ್ಲೂ ಸಣ್ಣ ಮಕ್ಕಳಿಗೆ ಬಲು ಆಸೆ. ಏನು ಮಾಡುವುದು? ತಾಯಂದಿರು ಅದಕ್ಕೆ ಒಂದು ಸುಲಭ ಉಪಾಯ ಕಂಡಿದ್ದರು. ಒಂದು ದೊಡ್ಡ ಹಣ್ಣನ್ನು ಮೂರು ಭಾಗ ಮಾಡುವುದು. ಮಧ್ಯದ ಭಾಗದಲ್ಲಿ ಮಾವಿನ ಓಟೆ. ಅದರ ಪಕ್ಕದ ಎರಡು ಭಾಗ ಕೆನ್ನೆಗಳು. ಹೀಗೆ ವಿಭಾಗ. "ನಿನಗೆ ಕೆನ್ನೆ ಬೇಕೋ ಅಥವಾ ಓಟೆ ಬೇಕೋ?" ಎಂದು ಮಕ್ಕಳನ್ನು ಕೇಳುವುದು. ಅವರಿಗೆ ಒಂದು ಆಯ್ಕೆ ಅವಕಾಶ ಕೊಟ್ಟಂತೆಯೂ ಆಯಿತು. ಒಂದು ಹಣ್ಣು ಮೂರು ಮಕ್ಕಳಿಗೆ ಕೊಟ್ಟಂತೆಯೂ ಆಯಿತು!  ಕೇಳಿದ್ದು ಸಿಕ್ಕಿದಾಗ ಅದು ಎಷ್ಟೇ ಸಿಕ್ಕಿದರೂ ಮಕ್ಕಳಿಗೆ ಸಂತೋಷವೇ! 

ಕೆನ್ನೆಯಲ್ಲಿ ಹಣ್ಣು ಹೆಚ್ಚು ಇರುತ್ತದೆ ಎಂದು ಕೆಲವರಿಗೆ ಆಸೆ. ಆದರೆ ಓಟೆಯ ಮಜವೇ ಬೇರೆ. ಕೆನ್ನೆ ಭಾಗ ಪಡೆದವರು ತಿಂದು ಮುಗಿಸಿ ಕೈ ತೊಳೆದುಕೊಂಡು ಬಂದರೂ ಓಟೆ ಭಾಗದವನು ಇನ್ನೂ ತಿನ್ನುತ್ತಲೇ ಇರಬಹುದು. ಆದರೆ ಅದರಲ್ಲಿ ಇರುವ ರಸ ಎಷ್ಟೋ ಅಷ್ಟೇ. ಚೀಪಿದ ಓಟೆಯನ್ನೇ ಚೀಪುತ್ತಿರುವುದು. ಅಷ್ಟೇ.

*****

ಸಂಕ್ರಾಂತಿ ಸಮಯದಲ್ಲಿ ಎಳ್ಳು-ಬೆಲ್ಲಗಳ ಜೊತೆಯಲ್ಲಿ ಕಬ್ಬು-ಬಾಳೆಹಣ್ಣು ಕೊಡುವ ಸಂಪ್ರದಾಯ ಬಹಳ ಹಿಂದಿನಿಂದಲೂ ಬಂದಿದೆ. ಸಕ್ಕರೆ ಕಾರ್ಖಾನೆಗಳು ಇಲ್ಲದಿದ್ದ ಕಾಲದಲ್ಲಿ, ಮತ್ತು ಅವು ಬಂದಮೇಲೂ ಈಗಿನಷ್ಟು ಸಂಖ್ಯೆಯಲ್ಲಿ ಇಲ್ಲದಿದ್ದ ಕಾಲದಲ್ಲಿ, ಕಬ್ಬಿನಿಂದ ಬೆಲ್ಲ ಮಾಡುವುದು ಹಳ್ಳಿಗಳಲ್ಲಿ ಸಾಮಾನ್ಯವಾಗಿತ್ತು. ಈಗಲೂ ಅನೇಕ ಕಡೆಗಳಲ್ಲಿ ಬೆಲ್ಲ ಮಾಡುತ್ತಾರೆ. ಸಂಕ್ರಾಂತಿ ಸಮಯದಲ್ಲಿ ಕಬ್ಬಿನ ಜಲ್ಲೆಗಳನ್ನು ಸಣ್ಣ ತುಂಡುಗಳಾಗಿ ಮಾಡಿ ಬಾಗಿನದಲ್ಲಿ ಸೇರಿಸುತ್ತಾರೆ. ಬಿಳಿ ಎಳ್ಳು, ಹುರಿಗಡಲೆ, ಹುರಿದ ಕಡಲೆಕಾಯಿ ಬೀಜಗಳು, ಬೆಲ್ಲದ ಚೂರುಗಳು, ಕೊಬ್ಬರಿ ತುಂಡುಗಳು, ಇವುಗಳ ಮಿಶ್ರಣದ ಜೊತೆ ಸಕ್ಕರೆ ಅಚ್ಚಿನ ಬೊಂಬೆಗಳು, ಕಬ್ಬಿಣ ಜಲ್ಲೆಯ ತುಂಡು ಮತ್ತು ಬಾಳೆಯ ಹಣ್ಣು ಸೇರಿಸಿ ಬಂಧು-ಮಿತ್ರರಿಗೆ ಕೊಡುವುದು ಹಬ್ಬದ ಸಂಭ್ರಮದ ಒಂದು ಅವಿಭಾಜ್ಯ ಭಾಗ. "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು" ಎಂದು ಹೇಳುವುದೂ ಒಂದು ಪರಿಪಾಠ. 

ಎಳ್ಳು-ಬೆಲ್ಲ ಇತ್ಯಾದಿಗಳ ಮಿಶ್ರಣ ಕೆಲವು ದಿನ ಇಡಬಹುದು. ಬಾಳೆಹಣ್ಣು ಹಾಗಲ್ಲ. ಕೆಡುವುದರ ಮುಂಚೆ ತಿಂದು ಮುಗಿಸಬೇಕು. ಕಬ್ಬಿನ ವಿಷಯವೇನು? ಅದೂ ಅಷ್ಟೇ. ರಸ ಒಣಗಿ ಕಬ್ಬು ಕಟ್ಟಿಗೆ ಆಗುವುದರ ಒಳಗೆ ತಿನ್ನಬೇಕು. ದಿನದಿಂದ ದಿನಕ್ಕೆ ಅದು ಒಣಗುತ್ತ ಹೋಗಿ ರಸ ಕಡಿಮೆ ಆಗುತ್ತದೆ. ಕೆಲವರು ಮಚ್ಚಿನಿಂದ ಕಬ್ಬಿನ ಹೊರಗಿನ ಗಟ್ಟಿ ಹೊದಿಕೆ ಕತ್ತರಿಸಿ ಆಮೇಲೆ ತಿನ್ನುತ್ತಿದ್ದರು. ಹರೆಯದ ಮಕ್ಕಳು ತಮ್ಮ ಹಲ್ಲಿನಿಂದಲೇ ಅದನ್ನು ಸಿಗಿದು, ಕಬ್ಬು ಜಗಿದು ರಸ ಹೀರುತ್ತಿದ್ದರು. ಈಗ ಕಾಲ ಬದಲಾಗಿದೆ. ಹಾಗೆ ರಸ ಸೋರಿಸಿಕೊಂಡು ತಿನ್ನುವುದು ನಾಗರಿಕತೆ ಅಲ್ಲ ಅನ್ನುವ ಭಾವನೆಯ ಪ್ರಪಂಚ ಇದು. ಚಿಕ್ಕ ಚಿಕ್ಕ ತುಂಡು ಮಾಡಿ ಫೋರ್ಕಿನಲ್ಲಿ ಚುಚ್ಚಿ ತಿನ್ನುವ ಕಾಲ ಈಗ. 

ಇಂತಹ ಒಂದು ಸಣ್ಣ ಕಬ್ಬಿನ ತುಂಡನ್ನೇ ತೆಗೆದುಕೊಳ್ಳೋಣ. ಮೊದಲ ಸರಿ ಜಗಿದಾಗ ಸ್ವಲ್ಪ ರಸ ಬರಬಹುದು. ಎರಡನೆಯ ಸಲ ಚೆನ್ನಾಗಿ ರಸ ಬರುತ್ತದೆ. ಮೂರನೆಯ ಸಲ ಅದಕ್ಕಿಂತ ಸ್ವಲ್ಪ ಕಡಿಮೆ. ನಾಲ್ಕು ಐದನೆಯ ಸಲ ಮತ್ತೂ ಕಡಿಮೆ. ಅದರ ನಂತರ ಎಷ್ಟು ಜಗಿದರೂ ಏನೂ ರಸ ಸಿಗದು. ಜಗಿದು ಜಗಿದೂ ವಸಡು ನೋವು ಬಂದದ್ದಷ್ಟೇ ಲಾಭ. ಕಬ್ಬಿನ ರಸ ಹೋಗಿ ಎಷ್ಟೋ ಸಮಯವಾಯಿತು. ವ್ಯರ್ಥ ಪ್ರಯತ್ನ. ವೃಥಾ ಶ್ರಮ. ಏನೂ ಪ್ರಯೋಜನವಿಲ್ಲದ ಕೆಲಸ. 

*****

ಈ ವ್ಯರ್ಥ ಪ್ರಯತ್ನ ಕೇವಲ ಮಾವಿನ ಓಟೆ ಚೀಪುವುದು ಅಥವಾ ಕಬ್ಬಿನ ತುಂಡು ಜಗಿಯುವುದಕ್ಕೆ ಮಾತ್ರ ಸೀಮಿತವಲ್ಲ. ಇವೆರಡು ಕೆಲಸಕ್ಕೂ ಉಪಯೋಗಿಸುವ ಅದೇ ನಾಲಿಗೆ ಮಾತಾಡುವುದಕ್ಕೂ ಉಪಯೋಗವಾಗುತ್ತದೆ. ಆಡಿದ ಮಾತನ್ನೇ ಮತ್ತೆ ಮತ್ತೆ ಆಡುತ್ತಿದ್ದರೆ ಅದೂ ವ್ಯರ್ಥವೇ. ಕೆಲವರು ಮಾತನಾಡುವಾಗ ಕೇಳುಗರಿಗೆ ಒಂದು ಹಿತವಿರುತ್ತದೆ. ಇನ್ನಷ್ಟು ಕೇಳೋಣ ಎನಿಸುತ್ತದೆ. ಮತ್ತೆ ಕೆಲವರು ಮಾತಾಡುವಾಗ "ನಾವು ಕಿವುಡರಾಗಿದ್ದರೆ ಎಷ್ಟೋ ಚೆನ್ನವಿತ್ತಲ್ಲ!" ಅನ್ನುವ ಭಾವನೆ ಬರುತ್ತದೆ. ಹೇಳಿದ್ದನ್ನೇ ಹೇಳಿದರೆ ಜಗಿದದ್ದನ್ನೇ ಮತ್ತೆ ಮತ್ತೆ ರಸ ಬರದಿದ್ದರೂ ಜಗಿದಂತೆ ವೃಥಾ ಶ್ರಮವೇ. 

ಈ ಕಾರಣದಿಂದ "ಚರ್ವಿತ ಚರ್ವಣ" ಅನ್ನುವ ಪದಪುಂಜದ ಪ್ರಯೋಗ ಬಂದಿದೆ. ಚರ್ವಣ ಅಂದರೆ ಅಗಿಯುವುದು. ಚರ್ವಿತ ಅಂದರೆ ಈಗಾಗಲೇ ಚೆನ್ನಾಗಿ ಆಗಿದಿರುವ ವಸ್ತು. ಅಂತಹ ವಸ್ತುವನ್ನು ಮತ್ತೆ ಮತ್ತೆ ಅಗಿಯುವುದೇ ಚರ್ವಿತ ಚರ್ವಣ. ಸಂಸ್ಕೃತದ ಪ್ರಯೋಗವಾದರೆ "ಚರ್ವಿತ ಚರ್ವಣ". ಕನ್ನಡದಲ್ಲಿ ಹೇಳಿದರೆ "ಹಾಡಿದ್ದೇ ಹಾಡಿದ ಕಿಸುಬಾಯಿ ದಾಸ". ಅನೇಕ ವಿಷಯಗಳನ್ನು, ಕೆಲಬಗೆಯ ಹಾಡುಗಳನ್ನು, ಕೆಲವು ಗ್ರಂಥಗಳನ್ನು ಮತ್ತೆ ಮತ್ತೆ ಹೇಳಿದರೂ, ಹಾಡಿದರೂ, ಓದಿದರೂ ಬೇಜಾರಾಗುವುದಿಲ್ಲ. ಇನ್ನೊಮ್ಮೆ, ಮತ್ತೊಮ್ಮೆ ಕೇಳಿದಾಗ ಹೊಸ ಅನುಭವಾಗುತ್ತದೆ.  ಹೊಸ ಹೊಸ ಅರ್ಥಗಳ ಸ್ಫುರಣ ಆಗುತ್ತದೆ. ಆದರೆ ಕೆಲಸಕ್ಕೆ ಬಾರದ ವಿಷಯಗಳನ್ನು ಮತ್ತೆ ಮತ್ತೆ ಹೇಳಿದಾಗ ಅದು ಚರ್ವಿತ ಚರ್ವಣವೇ ಆಗುತ್ತದೆ. 

ಈ "ಚರ್ವಿತ ಚರ್ವಣ" ಸಾಹಿತ್ಯಪರ ಚರ್ಚೆಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಮಾತಾಡುವಾಗ ಅವಾಗವಾಗ ಕೇಳಿಬರುವ ಪದಪುಂಜ. ಇದರ ಮೂಲ ಎಲ್ಲಿ? ಇದೊಂದು ಮೂಲಭೂತ ಪ್ರಶ್ನೆ. 

*****

ಹಿರಣ್ಯ ಕಷಿಪು ಮತ್ತು ಅವನ ಮಗ ಪ್ರಹ್ಲಾದನ ಕಥೆ ಅನೇಕ ಕಡೆಗಳಲ್ಲಿ ಹೇಳಲ್ಪಟ್ಟಿದೆ. ಶ್ರೀಮದ್ಭಾಗವತದ ಏಳನೆಯ ಸ್ಕಂಧದಲ್ಲಿ ಈ ವೃತ್ತಾಂತ ಬಹಳ ವಿವರವಾಗಿ ಚರ್ಚಿತವಾಗಿದೆ. ದೈತ್ಯ ಗುರು ಶ್ರೀ ಶುಕ್ರಾಚಾರ್ಯರ ಮಕ್ಕಳಾದ ಶಂಡ ಮತ್ತು ಅಮರ್ಕ (ಶಂಡಾಮರ್ಕರು ಎಂದು ಒಟ್ಟಿಗೆ ಹೇಳುವುದು ರೂಢಿ) ಆಚಾರ್ಯರ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಗನನ್ನು ಹಿರಣ್ಯ ಕಷಿಪು ಕರೆಸುತ್ತಾನೆ. ಅವನ ವಿದ್ಯಾಭ್ಯಾಸದ ಪ್ರಗತಿ ವಿಚಾರಿಸುವ ಸಲುವಾಗಿ. ಅಪ್ಪ ನಿರೀಕ್ಷಿಸಿದ್ದಕ್ಕೂ ಮಗ ಕಲಿತದ್ದನ್ನು ಒಪ್ಪಿಸುವುದಕ್ಕೂ ಏನೂ ಸಂಬಂಧವಿಲ್ಲ. ಈ ಸಂದರ್ಭದಲ್ಲಿ ಪ್ರಹ್ಲಾದ ಕೇವಲ ಐದಾರು ವರುಷದ ಬಾಲಕನಾಗಿದ್ದರೂ ಜೀವನ್ಮರಣ ಚಕ್ರದ ಬಗ್ಗೆ ಅದ್ಭುತ ಮಾತುಗಳನ್ನು ಹೇಳುತ್ತಾನೆ:

"ಜೀವಿಗಳು ಪಂಚೇಂದ್ರಿಯಗಳ ಸೆಳೆತಕ್ಕೆ ಸಿಕ್ಕಿ, ಅವನ್ನು ನಿಯಂತ್ರಿಸಲಾರದೆ ಐಹಿಕ (ಈ ಪ್ರಪಂಚದ) ಸುಖಗಳ ಹಿಂದೆ ಬೀಳುತ್ತಾರೆ. ಈ ಕಾರಣದಿಂದ ಮತ್ತೆ ಮತ್ತೆ ಅದೇ ಜನನ-ಮರಣ (ಹುಟ್ಟು-ಸಾವು) ಚಕ್ರದಲ್ಲಿ ಸಿಕ್ಕಿ ಒದ್ದಾಡುತ್ತಾರೆ. ಪ್ರಾಪಂಚಿಕ ಸುಖಗಳು ಅಗಿದ ಪದಾರ್ಥವನ್ನು ಮತ್ತೆ ಮತ್ತೆ ಅಗಿದಂತೆ, ಚರ್ವಿತ ಚರ್ವಣದಂತೆ, ಇದ್ದರೂ ಅದರಲ್ಲೇ ಮುಳುಗುತ್ತಾರೆ. ಇವುಗಳಲ್ಲಿ ರಸವಿಲ್ಲವೆಂದು ತಿಳಿಯದೆ ಅಗಿದು ಬಿಟ್ಟಿದ್ದನ್ನು ಮತ್ತೆ ಮತ್ತೆ ಅಗಿಯುತ್ತಾ ಸಂತೋಷ ಪಡುತ್ತಿದ್ದೇವೆ ಅನ್ನುವ ಭ್ರಮೆಯಲ್ಲಿ ಬದುಕುತ್ತಾರೆ. ಅವರಿಗೆ ಪರಮಾರ್ಥ ವಿಷಯಗಳಲ್ಲಿ ಆಸಕ್ತಿ ಬರುವುದೇ ಇಲ್ಲ. ತಮ್ಮ ಪ್ರಯತ್ನದಿಂದಲೂ ಇಲ್ಲ. ಇನ್ನೊಬ್ಬರ ಹೇಳಿಕೆಯ ಮೂಲಕವಾಗಿಯೂ ಇಲ್ಲ. ಅಥವಾ ಇವೆರಡೂ ಸ್ವಲ್ಪ ಸ್ವಲ್ಪ ಸೇರಿದ್ದರಿಂದಲೂ ಇಲ್ಲ. ಯಮನ ಪಾಶಕ್ಕೆ ಸಿಕ್ಕಿ ನರಕದ ದಾರಿ ಹಿಡಿದಾರೆಯೇ ಹೊರತು ಈ ಜನನ-ಮರಣ ಚಕ್ರದಿಂದ ಹೊರಗೆ ಬರುವುದೇ ಇಲ್ಲ" 

ಶ್ರೀಮದ್ಭಾಗವತ ಏಳನೆಯ ಸ್ಕಂಧ, ಐದನೆಯ ಅಧ್ಯಾಯ ಮೂವತ್ತನೆಯ (7.5.30) ಶ್ಲೋಕ ಹೀಗಿದೆ:
ಮತಿರ್ನ ಕೃಷ್ಣೇ ಪರತಃ ಸ್ವತೋ ವಾ 
ಮಿಥೋಭಿಪದ್ಯೇತ ಗೃಹವತಾನಾಂ 
ಆದಾಂತಕೋಭಿರ್ವಿಶತಾಂ ತಮಿಸ್ರ೦
ಪುನಃ ಪುನಃ ಚರ್ವಿತ ಚರ್ವಣಾನಾಂ 

ಚರ್ವಿತ ಚರ್ವಣ ಅನ್ನುವುದರ ಮೊದಲ ಪ್ರಯೋಗ ಆಗಿದ್ದು ಹೀಗೆ. ಜೀವಿಗಳು ಹೇಗೆ ಅದೇ ಸಂಸಾರ ಚಕ್ರದಲ್ಲಿ ಮತ್ತೆ ಮತ್ತೆ ಸುತ್ತುತ್ತಾರೆ ಅನ್ನುವುದನ್ನು ವಿವರಿಸುವ ಸಲುವಾಗಿ ಭಗವಾನ್ ವೇದವ್ಯಾಸರು ಹೇಳಿದ್ದು. 
*****

"ವ್ಯಾಸೋಚ್ಛಿಷ್ಟಮ್ ಜಗತ್ ಸರ್ವಂ" ಎಂದು ಒಂದು ಹೇಳಿಕೆ ಉಂಟು. "ಈ ಪ್ರಪಂಚದಲ್ಲಿರುವ ಸಾಹಿತ್ಯವೆಲ್ಲ ವ್ಯಾಸರು ಹೇಳಿಬಿಟ್ಟದ್ದು" ಎಂದು ಅದರ ಭಾವ. ಉಚ್ಚಿಷ್ಟ ಅನ್ನುವ ಪದಕ್ಕೆ ಸಾಮಾನ್ಯವಾಗಿ "ತಿಂದು ಬಿಟ್ಟದ್ದು" ಅಥವಾ "ಎಂಜಲು" ಎಂಬುದು ಸಾಮಾನ್ಯ ಅರ್ಥ. ಇದಕ್ಕೆ ಏನಾದರೂ ವಿಶೇಷ ಅರ್ಥ ಇದೆಯೇ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.