ಕಾಮಧೇನು ಮತ್ತು ಕಲ್ಪವೃಕ್ಷಗಳು ದೇವರಾಜನಾದ ಇಂದ್ರನ ಅಧೀನದಲ್ಲಿ ಸ್ವರ್ಗದಲ್ಲಿರುತ್ತವೆ ಎಂದು ನಂಬಿಕೆ. ತಮ್ಮನ್ನು ಆರಾಧಿಸಿ ಬೇಡುವವರಿಗೆ ಕೇಳಿದ್ದನ್ನು ಕೊಡುತ್ತವೆ ಎಂದು ಪ್ರತೀತಿ.
ಇವು ಎರಡರಲ್ಲಿ ಮುಖ್ಯ ವ್ಯತ್ಯಾಸ ಏನು? ನಾವು ಅವನ್ನು ಕಂಡವರಲ್ಲ. ಅಲ್ಲಿ ಇಲ್ಲಿ ಓದಿ-ಕೇಳಿ ತಿಳಿದದ್ದು. ಕಲ್ಪವೃಕ್ಷವು ಈಗ ನಮ್ಮ ಸುತ್ತ-ಮುತ್ತ ಇರುವ ಎಟಿಎಂ ಇದ್ದಂತೆ. ಅದು ಒಂದು ದಿವ್ಯವಾದ ಮರ. ಒಂದು ಕಡೆ ನೆಟ್ಟು ಬೆಳಿಸಿದಂತೆ. ನಮ್ಮ ಸುತ್ತಲಿನ ಎಟಿಎಂಗಳು ನಗದು ರೂಪದಲ್ಲಿ ಹಣ ಕೊಡುತ್ತವೆ. (ಈಗ ಇಡ್ಲಿ-ವಡೆ ಮುಂತಾದುವನ್ನು ಕೊಡುವ ಎಟಿಎಂಗಳು ಕೂಡ ಬಂದಿವೆಯಂತೆ. ಅವನ್ನು ಇಲ್ಲಿ ಸೇರಿಸುವುದು ಬೇಡ). ಆದರೆ ಅದು ಇರುವಲ್ಲಿಗೆ ಹೋಗಬೇಕು. ಕಾಮಧೇನು ಒಂದು ದಿವ್ಯವಾದ ಹಸು. ಅದು ಓಡಾಡಬಹುದು. ಆದ್ದರಿಂದ ಕಾಮಧೇನು ಒಂದು ಮೊಬೈಲ್ಎಟಿಎಂ ಇದ್ದಂತೆ. ಅದು ನಾವಿರುವಲ್ಲಿಗೇ ಬಂದು ಕೇಳಿದ್ದನ್ನು ಕೊಡುತ್ತದೆ.
ಹೀಗೆ ಅಲ್ಲಿ ಇಲ್ಲಿ ಓಡಾಡುತ್ತಿದ್ದ ಕಾಮಧೇನು ನಮ್ಮ ಮನೆ ಬೀದಿಯಲ್ಲಿ ಬಂದಿದೆ. ಈಗ ನಮ್ಮ ಮನೆಯ ಮುಂದೆಯೇ ನಿಂತಿದೆ. ಏನು ಕೇಳಿದರೂ ಕೊಡುವ ಕಾಮಧೇನು. ಅದರ ಬಳಿ ಹೋಗಿ ಕೇಳಿಕೊಳ್ಳಬೇಕು. ಅಷ್ಟೇ.
ಈ ದಿನ ಯಾಕೋ ಪ್ರತಿದಿನ ಬೆಳಿಗ್ಗೆ ನಮ್ಮ ಮನೆಗೆ ಹಾಲು ತಂದು ಕೊಡುವ ಹುಡುಗ ಬಂದಿಲ್ಲ. ಬೆಳಗಾಗಿ ಎದ್ದು ಕಾಫಿ ಕುಡಿಯುವ ಅಭ್ಯಾಸ. ಕಾಫಿ ಸ್ವಲ್ಪ ತಡವಾದರೆ ಬುದ್ಧಿಯೇ ಓದುವುದಿಲ್ಲ. ಹೇಗೂ ಕಾಮಧೇನು ಮನೆಮುಂದೆ ಬಂದು ನಿಂತಿದೆ. ಹತ್ತಿರ ಹೋಗಿ "ಒಂದು ಅರ್ಧ ಲೀಟರ್ ಹಾಲು ಕೊಡು ತಾಯಿ" ಎಂದು ಕೇಳಿದೆವು. ಆಹಾ! ಕೊಟ್ಟಿತು! ಏನು ಸಂತೋಷ! ಎಂಥ ಉತ್ಸಾಹ!
*****
ಏನಾದರೂ ಒಳ್ಳೆಯ ಕೆಲಸ ಮಾಡಬೇಕಾದರೆ ಏನು ಮಾಡಬೇಕು? ಮಾಡಬೇಕು. ಅಷ್ಟೇ. "ಮಂತ್ರಿಸಿದರೆ ಮಾವಿನಕಾಯಿ ಬೀಳುವುದಿಲ್ಲ. ಅದು ಬೀಳಬೇಕಾದರೆ ಕಲ್ಲು ಹೊಡೆಯಬೇಕು. ಇಲ್ಲವೇ, ಮರ ಹತ್ತಿ ಕೀಳಬೇಕು". ಹೀಗೊಂದು ಪಾಠವಿತ್ತು, ನಾವು ಶಾಲೆಯಲ್ಲಿ ಓದುತ್ತಿದ್ದಾಗ. ಕೆಲಸ ಆಗಬೇಕಾದರೆ ಮೀನ-ಮೇಷ ಎಣಿಸುವುದಲ್ಲ. ಕೆಲಸ ಪ್ರಾರಂಭ ಮಾಡಬೇಕು. ಆದರೆ ನಮ್ಮಲ್ಲಿ ಒಂದು ಒಳ್ಳೆಯ ದಿನ, ಸರಿಯಾದ ಸಮಯ ನೋಡಿ ಪ್ರಾರಂಭ ಮಾಡಬೇಕು ಎನ್ನುವ ಒಂದು ಪದ್ಧತಿ. ಒಳ್ಳೆಯ ದಿನ ನೋಡಿದೆವು. ಸರಿಯಾದ ಸಮಯಕ್ಕೇ ಪ್ರಾರಂಭಿಸಿದೆವು. ಕೆಲಸವಾಗುತ್ತದೆಯೇ? ಸರಿಯಾಗಿ ಪರಿಶ್ರಮ ಪಟ್ಟು ಮಾಡಿದರೆ ಆಗುತ್ತದೆ. ಸುಮ್ಮನೆ ಒಳ್ಳೆಯ ದಿನ, ಸರಿಯಾದ ಸಮಯದಲ್ಲಿ ಪ್ರಾರಂಭ ಮಾಡಿದರೆ ಕೆಲಸ ಆಗುವುದಿಲ್ಲ. "ಪುರುಷ ಪ್ರಯತ್ನ" ಬೇಕೇ ಬೇಕು. "ದೈವದಿಂದ ಆಗುತ್ತದೆ" ಎನ್ನುವವರು ಕೆಲವರು. "ಪುರುಷ ಪ್ರಯತ್ನದಿಂದಲೇ ಆಗುವುದು" ಎನ್ನುವರು ಇನ್ನು ಕೆಲವರು. "ಪುರುಷ ಪ್ರಯತ್ನಕ್ಕೆ ದೈವ ಸಹಾಯವೂ ಸೇರಬೇಕು" ಎನ್ನುವುದು ಇನ್ನೊಂದು ಮಾರ್ಗ.
ಒಳ್ಳೆಯ ದಿನ, ಸರಿಯಾದ ಸಮಯ ಅಂದರೆ ಏನು? ಅದು ಹೇಗೆ ಸಿಗುತ್ತದೆ? ಇದು ಒಂದು ಮುಖ್ಯ ಪ್ರಶ್ನೆ. ನಂಬಿಕೆ ಇದ್ದವರು ಜೋಯಿಸರ ಬಳಿ ಹೋಗಿ ಕೇಳಬಹುದು. ಈಗಿನ ಕಂಪ್ಯೂಟರ್ ಪರಿಣತರು ಯಾವುದೋ ಸಾಫ್ಟ್ ವೇರ್ ಸಹಾಯದಿಂದ ಅದನ್ನು ಹಿಡಿಯಬಹುದು. ಮೊಬೈಲ್ ಕೈಗೇ ಅಂಟಿಕೊಂಡಿರುವವರು ಅದಕ್ಕೊಂದು "ಅಪ್ಪ" ಹುಡುಕಿ ಅದರಲ್ಲಿ ತೆಗೆಯಬಹುದು. ಇದಕ್ಕೆ ಇಷ್ಟೆಲ್ಲಾ ಮಾಡದೆ ಏನಾದರೂ ಸುಲಭ ಉಪಾಯ ಇದೆಯೇ?
"ಸಾಡೆತೀನ್ ಮುಹೂರ್ತ" ಎಂದು ಹಿರಿಯರು ಹೇಳುತ್ತಿದ್ದರು. ಮೂರು ದಿನಗಳು ಮತ್ತು ಅದರ ಮೇಲೆ ಅರ್ಧ ದಿನ. "ಈ ದಿನಗಳು ಸ್ವಯಂಸಿದ್ಧ ಮಹೂರ್ತಗಳು. ಈ ದಿನಗಳಲ್ಲಿ ಯಾವುದೇ ಕೆಲಸ ಪ್ರಾರಂಭ ಮಾಡಬಹುದು. ಈ ದಿನಗಳಲ್ಲಿ ಆದರೆ ಅದಕ್ಕೆ ಒಳ್ಳೆ ದಿನ, ಸರಿಯಾದ ಸಮಯ ನೋಡಬೇಕಿಲ್ಲ" ಎಂದು ಬಲವಾದ ನಂಬಿಕೆ. ಯಾವುವು ಈ ದಿನಗಳು?
ಮೊದಲನೆಯದು ಉಗಾದಿ. ಎರಡನೆಯದು ಅಕ್ಷಯ ತೃತೀಯ. ಮೂರನೆಯದು ವಿಜಯದಶಮಿ. ಇವುಗಳ ಜೊತೆಗೆ ಬಲಿಪಾಡ್ಯಮಿಯಲ್ಲಿ ಮೊದಲ ಅರ್ಧ ದಿನ. ಮೂರೂವರೆ ದಿನ ಆಯಿತಲ್ಲ?
*****
ಇದರಲ್ಲಿ "ಅಕ್ಷಯ ತೃತೀಯ" ವಿಶೇಷವೇನು? ಚತುರ್ಮುಖ ಬ್ರಹ್ಮದೇವರು ತಮ್ಮ ಸೃಷ್ಟಿಕಾರ್ಯ ಪ್ರಾರಂಭಿಸಿದ ದಿನ ಇದು. ಅವರ ಸೃಷ್ಟಿ ಕಾರ್ಯಕ್ಕಿಂತ ದೊಡ್ಡ ಕೆಲಸ ಮತ್ತೊಂದಿಲ್ಲ. ಅದು ಪ್ರಾರಂಭವಾದದ್ದು ಚೆನ್ನಾಗಿ ನಡೆದೇ ಇದೆ. ನಾವು ಏನೇ ಕೆಲಸ ಹೊಸದಾಗಿ ನಡೆಸಿದರೂ ಅದು ಸೃಷ್ಟಿಯ ಮಿತಿಯಲ್ಲಿ ತಾನೇ ಆಗುವುದು? ಆದ್ದರಿಂದ ಇದೊಂದು ಸ್ವಯಂಸಿದ್ಧ ಮಹೂರ್ತ.
ಇದೇ ದಿನ "ಪರುಶುರಾಮ ಜಯಂತಿ". ಜೈನರ ಮೊದಲ ತೀರ್ಥಂಕರನಾದ ಋಷಭದೇವನು ತನ್ನ ಮರಿಮಗನಿಂದ ಆಹಾರ ಪಡೆದು ನಾಲ್ಕು ನೂರು ದಿನದ ಉಪವಾಸಡಾ ಕೊನೆ ಮಾಡಿದನೆಂದು ಇನ್ನೊಂದು ವಿಶೇಷ, ಹೀಗೆ ಮತ್ತೆ ಕೆಲವು.
ಇದರಲ್ಲಿ "ಅಕ್ಷಯ" ಅನ್ನುವುದರ ವಿಶೇಷ ಏನು?
ಕಾಲವು ಎಂದೂ ನಿಲ್ಲದು. ಅದು ಚಲಿಸುತ್ತಲೇ ಇರುತ್ತದೆ. ಆದರೆ ಕೆಲವು ಪ್ರಕೃತಿ ವಿಶೇಷಗಳ ಕಾರಣ ಈ ಚಲಿಸುತ್ತಲೇ ಇರುವ ಸಮಯದಲ್ಲಿ ಕೆಲವು ಸಂಧಿಕಾಲಗಳು, ವಿಶೇಷ ಸಂದರ್ಭಗಳು ಒದಗುತ್ತವೆ. ಹುಣ್ಣಿಮೆ ಒಂದು ವಿಶೇಷ. ಅಂದು ಪೂರ್ಣ ಚಂದ್ರನಿದ್ದಾನೆ. ಅಮಾವಾಸ್ಯೆ ಒಂದು ವಿಶೇಷ. ಮಕರ ಸಂಕ್ರಾಂತಿ, ಕರ್ಕಾಟಕ ಸಂಕ್ರಾಂತಿ ವಿಶೇಷ ಕಾಲಗಳು. ಶ್ರಾದ್ಧಗಳ ದೃಷ್ಟಿಯಿಂದ "ಪಕ್ಷ ಮಾಸ' ಒಂದು ಪರ್ವ ಕಾಲ. ಇವೆಲ್ಲ ಸಾರ್ವತ್ರಿಕ ಪರ್ವ ಕಾಲಗಳು.
ಇನ್ನು ಕೆಲವು ಪರ್ವ ಕಾಲಗಳು ವ್ಯಕ್ತಿಗತ. ನಾವು ಕಾಶಿಗೆ ಹೋದೆವು. ಬದರಿನಾಥಕ್ಕೆ ಹೋದೆವು. ರಾಮೇಶ್ವರಕ್ಕೆ ಹೋದೆವು. ಗಯಾದಲ್ಲಿ ಗದಾಧರನ ದರ್ಶನ ಮಾಡಲು ಹೋದೆವು. ಈ ರೀತಿ ಕ್ಷೇತ್ರಗಳ ದರ್ಶನಕ್ಕೆ ಹೋದದ್ದು. ಇದೇನು ನಾವು ಬೇಕೆಂದಾಗ್ಗೆ ಹೋಗುವಂಥದಲ್ಲ. ಆದ್ದರಿಂದ ನಮ್ಮ ಮಟ್ಟಿಗೆ ಇದು ಪರ್ವ ಕಾಲವೇ. ಆದ್ದರಿಂದ "ಕ್ಷೇತ್ರ ಶ್ರಾದ್ದ" ಎಂದು ಒಂದು ಪದ್ಧತಿ ಇದೆ. ಇಂತಹ ಕ್ಷೇತ್ರಗಳಿಗೆ ಹೋದಾಗ ಅಂದು ಪಿತೃ ಶ್ರಾದ್ಧ ಮಾಡಬಹುದು. ಅದು ಯಾವ ದಿನವಾದರೂ ಪರವಾಗಿಲ್ಲ. ಹೀಗೆ.
ಒಳ್ಳೆಯ ಕೆಲಸ ಯಾವಾಗ ಮಾಡಿದರೂ ಪುಣ್ಯ ಸಂಪಾದನೆಗೆ ದಾರಿ. ಪರ್ವ ಕಾಲಗಳಲ್ಲಿ ಮಾಡಿದರೆ ಅದಕ್ಕೆ ಅಧಿಕ ಪುಣ್ಯ. ತಿಂಗಳಿಗೊಮ್ಮೆ ಬರುವ ಪರ್ವ ಕಾಲದಲ್ಲಿ ಹೆಚ್ಚು ಪುಣ್ಯ. ಆರು ತಿಂಗಳಿಗೊಮ್ಮೆ ಬರುವ ಪರ್ವಕಾಲದಲ್ಲಿ ಅದಕ್ಕಿಂತ ಹೆಚ್ಚು ಪುಣ್ಯ. ವರ್ಷಕ್ಕೊಮ್ಮೆ ಬರುವ ದಿನವಾದರೆ? ಗ್ರಹಣ-ಸಂಕ್ರಮಣಗಳಾದರೆ? ಇನ್ನೂ ಹೆಚ್ಚು ಪುಣ್ಯ. ಹೀಗೆ ನಂಬಿಕೆ.
ಚತುರ್ಮುಖ ಬ್ರಹ್ಮ ದೇವರು ಸೃಷ್ಟಿ ಕಾರ್ಯ ಪ್ರಾರಂಭ ಮಾಡಿದ ದಿನ ಒಂದು ದೊಡ್ಡ ವಿಶೇಷ. ಆದ್ದರಿಂದ ಅಂದು ಮಾಡಿದ ಪುಣ್ಯ ಕಾರ್ಯಗಳಿಗೆ, ದಾನ-ಧರ್ಮಗಳಿಗೆ, ಪರೋಪಕಾರಗಳಿಗೆ, ಅಶಕ್ತರು-ವೃದ್ಧರಿಗೆ ಮಾಡಿದ ಸಹಾಯ-ಒತ್ತಾಸೆಗೆ ಹೇಳಲಾಗದಷ್ಟು, ಅಕ್ಷಯ ಅನ್ನುವಷ್ಟು, ಕ್ಷಯವಾಗದಷ್ಟು, ಪುಣ್ಯ. ಆದ್ದರಿಂದ ಅಕ್ಷಯ ತೃತೀಯ ಬಹಳ ಶ್ರದ್ಧೆ-ಭಕ್ತಿಗಳಿಂದ ದಾನ ಮಾಡಬೇಕೆಂದು ವಿಶೇಷವಾಗಿ ಕಟ್ಟಲೆ.
*****
"ನ ಕರ್ಮಣಾ, ನ ಪ್ರಜಾಯಾ, ನ ಧನೇನ, ತ್ಯಾಗೇನೈಕೇನ ಅಮೃತತ್ವಮಾನಶು:" ಎನ್ನುವುದು ಒಂದು ಶ್ರುತಿವಚನ. ಜೀವನ-ಮರಣ ಚಕ್ರದಿಂದ ಬಿಡುಗಡೆ ಸಿಗಬೇಕಾದರೆ ಕಾಮ್ಯಕರ್ಮಗಳಿಂದಲ್ಲ (ನಮಗೆ ಇವು ಬೇಕು ಎಂದು ಮಾಡುವ ಕೆಲಸಗಳು ಕಾಮ್ಯಕರ್ಮಗಳು), ಮಕ್ಕಳು ಮುಂತಾದ ಸಂತತಿಯಿಂದಲ್ಲ, ಧನ-ಕನಕಗಳಿಂದಲ್ಲ, ತ್ಯಾಗದಿಂದ ಮಾತ್ರ ಮುಕ್ತಿ ಸಿಗುತ್ತದೆ ಎಂದು ಇದರ ಅರ್ಥ. ನಮ್ಮ ಸಂಸ್ಕೃತಿಯಲ್ಲಿ ಪಡೆಯುವುದಕ್ಕಿಂತ ಕೊಡುವುದಕ್ಕೆ ಹೆಚ್ಚು ಬೆಲೆ. ದೊಡ್ಡ ಪುರಸ್ಕಾರ. "ಇದ್ದುದರಲ್ಲಿ ಜೀವನ ಮಾಡು. ಅಷ್ಟೇ ಅಲ್ಲ. ಇರುವುದರಲ್ಲಿಯೇ ಸ್ವಲ್ಪವನ್ನಾದರೂ ಬೇರೆಯವರಿಗೆ ಕೊಡು" ಅನ್ನುವುದು ಮೂಲಭೂತ ಸಿದ್ಧಾಂತ.
ಅಕ್ಷಯ ತೃತೀಯ ಪರ್ವಕಾಲದಲ್ಲಿಯೂ ಅಷ್ಟೇ. ಕೊಡುವುದಕ್ಕೆ ಇದು ಅತ್ಯಂತ ಪ್ರಶಸ್ತವಾದ ಕಾಲ. ಇಂತಹ ಕಾಲ ಬರಲಿ ಎಂದು ಕಾತುರದಿಂದ ಕಾದುಕೊಂಡು ಕೊಡಬೇಕು. ಅದೇ ಅಕ್ಷಯ ತೃತೀಯದ ವೈಶಿಷ್ಟ್ಯ.
*****
ಇದು "ಸೇಲ್ಸ್ ಮತ್ತು ಮಾರ್ಕೆಟಿಂಗ್" ಕಾಲ. ಪೀಟರ್ ಡ್ರಕರ್ ಎನ್ನುವ ಮ್ಯಾನೇಜ್ಮೆಂಟ್ ಗುರು ಹೇಳುತ್ತಾನೆ: "ಇನ್ನೋವೇಷನ್ ಮತ್ತು ಮಾರ್ಕೆಟಿಂಗ್" ಅನ್ನುವುದು ಯಾವುದೇ ವ್ಯವಹಾರ (ಬಿಸನೆಸ್ಸ್} ಸಫಲವಾಗಲು ಮೂಲ ಕಾರಣಗಳು ಎನ್ನುವ ಮಂತ್ರ. ಪ್ರತಿಯೊಂದಕ್ಕೂ ಒಂದು ಮಾರಾಟದ ತಂತ್ರ. ವರುಷದ ಪ್ರತಿ ದಿನವೂ ಒಂದೊಂದು ಆಚರಣೆ. ತಾಯಿಗೆ ಒಂದು ದಿನ. ತಂದೆಗೆ ಒಂದು ದಿನ. ಪ್ರೇಯಸಿಗೆ ಅಥವಾ ಪ್ರಿಯಕರನಿಗೆ ಒಂದು ದಿನ. ಕಂಡರೆ ಆಗದವರಿಗೆ ಒಂದು ದಿನ. (ಇದು ಇದೆ ಎಂದು ನಂಬಿಕೆ). ಹೀಗೆ.
ಈಗಿನ ಮಾರಾಟಗಾರರು, ಅದರಲ್ಲೂ ಚಿನ್ನ-ವಜ್ರ ಮುಂತಾದುವುಗಳ ಮಾರಾಟಗಾರರು "ಅಕ್ಷಯ ತೃತೀಯ" ಪರ್ವಕಾಲವನ್ನು "ಹೈಜಾಕ್" ಮಾಡಿದ್ದಾರೆ. ಕೊಡುವುದರ ಬದಲು ಕೊಳ್ಳುವುದು ಮುಖ್ಯ ಮಾಡಿದ್ದಾರೆ. ಕೊಡುವುದು ಹಿಂದೆ ಉಳಿಯಿತು. ಈಗ ಕೊಳ್ಳುವುದು ಮುಖ್ಯ. ಅದರಲ್ಲೂ ಬೆಲೆ ಹೆಚ್ಚಿರುವ ಪದಾರ್ಥಗಳು. ಒಡವೆ-ಆಭರಣಗಳು. ಇತ್ಯಾದಿ. ಮೊದಲೇ ಹುಡುಕಿ, ಆರಿಸಿಟ್ಟು, ಬಿಲ್ ಮಾಡಿಸಿ, ದುಡ್ಡು ತೆತ್ತು ಈ ದಿನ ಮನೆಗೆ ತಂದರೆ ಅದು ಅಕ್ಷಯವಾಗುತ್ತದೆ ಅನ್ನುವ ಪ್ರಚಾರ. ತಂದ ಪದಾರ್ಥ ಮೈಮೇಲೆ ಧರಿಸುವಹಾಗಿಲ್ಲ. ಹಾಕಿಕೊಂಡರೆ ಜೀವಭಯ. ಪೆಟ್ಟಿಗೆಯಲ್ಲಿಟ್ಟರೆ ಕಳ್ಳ-ಕಾಕರ ಭಯ. ಅದಕ್ಕೆ ಬ್ಯಾಂಕಿನಲ್ಲಿ ಒಂದು ಲಾಕರ್. ಅದಕ್ಕೆ ವರ್ಷಕ್ಕೆ ಬಾಡಿಗೆ. ಅದರ ಬೀಗದಕೈ ಕೈಲಿ ಹಿಡಿದು ಸಂಭ್ರಮ!
ಮಗುವಿನ ಜಾತಕ ಚೆನ್ನಾಗಿರಲಿ ಎಂದು ಗ್ರಹಗತಿ ಶೋಧಿಸಿ, ನೋಡಿಸಿ, ಮೊದಲೇ ಜನನದ ದಿನ, ಸಮಯ ನಿರ್ಧರಿಸಿ ಸಿಸೇರಿಯನ್ ಹೆರಿಗೆ ಮಾಡಿಸಿದಂತೆ.
*****
ಕೊಡಬೇಕು ಅನ್ನುವ "ನ ಕರ್ಮಣಾ, ನ ಪ್ರಜಾಯಾ, ನ ಧನೇನ, ತ್ಯಾಗೇನೈಕೇನ ಅಮೃತತ್ವಮಾನಶು:" ಹಿಂದೆ ಹೋಯಿತು. ತರಬೇಕು ಅನ್ನುವ "ಇನ್ನೋವೇಷನ್ ಮತ್ತು ಮಾರ್ಕೆಟಿಂಗ್" ಮುಂದೆ ಬಂತು.
ಭತ್ತ ಬೆಳೆಯುವವನಿಗೆ ಹುಲ್ಲು ತಾನಾಗಿಯೇ ಸಿಕ್ಕುತ್ತದೆ. ಕೇವಲ ಹುಲ್ಲು ಬೆಳೆಯುವವನಿಗೆ ಭತ್ತ ಸಿಗುವುದಿಲ್ಲ. ಮೋಕ್ಷ ಸಾಧಿಸುವವನಿಗೆ ಅರ್ಥ, ಕಾಮಗಳು ತಾವಾಗಿಯೇ ಸಿಗುತ್ತವೆ. ಈಗಿನ ಮಾರಾಟ ತಂತ್ರ ಇದನ್ನು ಪೂರ್ತಿ ಮರೆಸಿತು.
ಮನೆಯಮುಂದೆ ಬಂದಿರುವ ಕಾಮಧೇನು ಬಳಿ ಅರ್ಧ ಲೀಟರ್ ಹಾಲು ಕೇಳಿದಂತಾಯಿತು.
ಒಟ್ಟಿನಲ್ಲಿ "ಅಕ್ಷಯ ತೃತೀಯಾ" ದಿನದ ವಿಶೇಷತೆ ಹಿಂದು-ಮುಂದಾಯಿತು.
