Showing posts with label Kannada. Show all posts
Showing posts with label Kannada. Show all posts

Saturday, June 13, 2026

ಸಂಸ್ಕೃತಿ ಪ್ರಸಾರ


ದೇಶದ ಅನೇಕ ಕಡೆಗಳಲ್ಲಿ ಈಚೆಗೆ ಪ್ರತಿದಿನ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ದಿಗ್ಬ್ರಮೆ ಉಂಟಾಗುತ್ತದೆ. ನಮ್ಮನ್ನು ಆಳುತ್ತಿರುವವರು ದಿನದಿಂದ ದಿನಕ್ಕೆ ನಡೆಯುತ್ತಿರುವ ದಾರಿಗಳು ನಮ್ಮನ್ನು ಯಾವ ದಿಕ್ಕುಗಳಿಗೆ ಒಯ್ಯುತ್ತವೆ ಎಂದು ಹೇಳಲು ಬರುವುದಿಲ್ಲ. ಚುನಾವಣೆಗಳು ನಡೆದ ನಂತರ ಜನರು ಕೊಡುವ ತೀರ್ಪನ್ನು ಒಪ್ಪಿಕೊಳ್ಳದ ನಾಯಕರುಗಳು ಒಂದು ಕಡೆ. ತಾವು ಗೆದ್ದಾಗ ಮಾತ್ರ ಚುನಾವಣೆಗಳು ಸರಿಯಾಗಿ ನಡೆದುವು ಎನ್ನುವ ಗುಂಪುಗಳು ಇನ್ನೊಂದು ಕಡೆ. ಬೇಕಿದ್ದಾಗ ಪಕ್ಷ ಬದಲಿಸಿ ಅಧಿಕಾರಕ್ಕೆ ಜೋತುಬೀಳುವ ಹಂಬಲವಂತೂ ಎಲ್ಲ ಕಡೆ. ಮಂತ್ರಿಮಂಡಲದಲ್ಲಿ ಸ್ಥಾನ ಪಡೆಯಲು ಪರಿತಪಿಸುವ ಪ್ರತಿನಿಧಿಗಳು. ಜಾತಿ ಮತ್ತು ಪ್ರಾದೇಶಿಕ ಪ್ರಾತಿನಿಧ್ಯಗಳ ಕೂಗುಗಳ ಅತಿರೇಕಗಳು. ಅಧಿಕಾರ ಸಿಕ್ಕಿದ ನಂತರ ಖಾತೆಗಳ ಹಂಚಿಕೆಯಲ್ಲಿ ಗುದ್ದಾಟ. ಶಪಥಗ್ರಹಣ ನಡೆದ ನಂತರ ವಾರಗಳು ಕಳೆದರೂ ಬೇಕಿದ್ದ ಖಾತೆ ಸಿಗಲಿಲ್ಲವೆಂದು ಅಧಿಕಾರಗ್ರಹಣ ಮಾಡದ ಮಂತ್ರಿಗಳು. ಹೊಸ ವಾಹನಗಳು, ದೊಡ್ಡ ಆಫೀಸುಗಳು ಮತ್ತು ನಿವಾಸಗಳು ಮುಂತಾದುವಕ್ಕೆ ಕೊನೆಯಿಲ್ಲದ ಹಪಾಹಪಿ. ಒಟ್ಟಿನಲ್ಲಿ ದಿಕ್ಕು ದೆಸೆಯಿಲ್ಲದ ರಾಜಕೀಯ. 

ಸ್ವಾತಂತ್ರ್ಯಾನಂತರ ನಡೆದ ಮೊದಲ ಚುನಾವಣೆಗಳ ಬಳಿಕ 1952ರಲ್ಲಿ ನಮ್ಮ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ಶ್ರೀ ಕೆಂಗಲ್ ಹನುಮಂತಯ್ಯನವರ ಮಂತ್ರಿಮಂಡಲದಲ್ಲಿ ಇದ್ದದ್ದು ಎಂಟು ಜನ ಮಂತ್ರಿಗಳು ಮಾತ್ರ. ಅದು ಮೈಸೂರು ರಾಜ್ಯ. ಇನ್ನೂ "ಕರ್ನಾಟಕ ಏಕೀಕರಣ" ಆಗಿರಲಿಲ್ಲ. ರಾಜ್ಯವೇನೋ ಗಾತ್ರದಲ್ಲಿ ಈಗಿಗಿಂತ ಚಿಕ್ಕದೇ. ಮಂತ್ರಿಮಂಡಲವೂ ಚಿಕ್ಕದೇ. ಬ್ರಿಟಿಷರ ಆಡಳಿತದಿಂದ ಹೊರಬಂದ ಮೇಲೆ ನಮ್ಮ ನಾಡಿನ ಭವ್ಯವಾದ ಸಂಸ್ಕೃತಿ ಎಲ್ಲೆಡೆ ವಿಜೃಂಭಿಸಲಿ ಎನ್ನುವ ಆಸೆಯಿಂದ ಸರ್ಕಾರ "ಸಂಸ್ಕೃತಿ ಪ್ರಸಾರ" ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಅದರ ಅಂಗವಾಗಿ ಅಮೂಲ್ಯ ಕೃತಿಗಳ ಮುದ್ರಣ-ಪ್ರಕಾಶನ, ರಾಜ್ಯದ ಮೂಲೆಮೂಲೆಗಳಲ್ಲಿ ವಿದುಷಿ-ವಿದ್ವಾಂಸರಿಂದ ಸಾಹಿತ್ಯ-ಸಂಗೀತ-ಗಮಕ ಮುಂತಾದ ಕಾರ್ಯಕ್ರಮಗಳು, ಉಪನ್ಯಾಸಗಳು, ಮುಂತಾದುವು ಈ ಸಂಸ್ಕೃತಿ ಪ್ರಸಾರದ ಮೂಲಕ ನಡೆದವು. 

ಸರ್ಕಾರದ ಆರ್ಥಿಕ ಸಹಾಯದ ಮೂಲಕ ಮೊದಲ ವರ್ಷ ಪ್ರಕಟವಾದ "ಕುಮಾರವ್ಯಾಸ ಭಾರತ" ಪುಸ್ತಕಕ್ಕೆ ಕೇವಲ ಎರಡು ರೂಪಾಯಿ ಬೆಲೆ. ಈ ಗ್ರಂಥಕ್ಕೆ ಕನ್ನಡದ ಹೆಮ್ಮೆಯ ಕುವೆಂಪು ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಂಪಾದಕರು. ಈ ಕೃತಿಗೆ ಕುವೆಂಪು ಅವರ "ತೋರಣ ನಾಂದಿ". ಈಗಲೂ ಆಗಾಗ ಓದಬೇಕೆಂದು ಅನಿಸುವ, ಅವರೇ ಹೇಳುವಂತೆ ಸಹೃದಯ ವಿಮರ್ಶೆ. ಅನೇಕ ಮನೆಗಳಲ್ಲಿ ಈಗಲೂ ಈ ಪುಸ್ತಕ ಇದೆ. 
*****

ಎ. ಜಿ. ರಾಮಚಂದ್ರ ರಾವ್ ನಮ್ಮ ರಾಜ್ಯದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದು ದೊಡ್ಡ ಹೆಸರು. ಹಾಸನ ಜಿಲ್ಲೆಯ ಅರಕಲಗೂಡಿನ ಅವರು ಅದೇ ಊರಿನ "ಕಾದಂಬರಿ ಸಾರ್ವಭೌಮ" ಆ. ನ. ಕೃಷ್ಣರಾಯರ ಸಮಕಾಲೀನರು. 1942ರ "ಕ್ವಿಟ್ ಇಂಡಿಯಾ" ಚಳುವಳಿಯಲ್ಲಿ ಸಕ್ರಿಯವಾಗಿದ್ದವರು. ಚಳುವಳಿಯ ಮುಂಚೂಣಿಯ ನಾಯಕರಾಗಿದ್ದ ಅವರನ್ನು ಹಿಡಿದು ಬಂದಿಖಾನೆಗೆ ಹಾಕಲು ಪೊಲೀಸರು ಕಾಯುತ್ತಿದ್ದರು. ಚಳುವಳಿಯನ್ನು ಯಶಸ್ವಿಯಾಗಿ ಮುನ್ನಡೆಸಲು ರಾಮಚಂದ್ರ ರಾಯರು ಪೋಲೀಸರ ಕಣ್ಣು ತಪ್ಪಿಸಿ ಕೆಲಕಾಲ ಭೂಗತರಾದರು. ಹೀಗೆ ಪೊಲೀಸರಿಗೆ ಸಿಗದಂತೆ ಓಡಾಡಿ ಚಳುವಳಿ ಸಂಘಟಿಸುವ ನಾಯಕರಿಗೆ ಸಹಕಾರ ಕೊಡಲು ಇತರೆ ಚಳುವಳಿಕಾರರ ತಂಡಗಳು ಇದ್ದವು. ಭೂಗತರಾದವರು ಒಂದೇ ಕಡೆ ಇರುವಂತಿಲ್ಲ. ಮನೆಯಿಂದ ಮನೆಗೆ ಗುಪ್ತವಾಗಿ ಓಡಾಟ. ಹೀಗೆ ಚಳುವಳಿ ನಡೆಯುತ್ತಿತ್ತು,

ಒಂದು ದಿನ ರಾತ್ರಿ ಶ್ರೀ ಹೆಚ್. ಎಸ್ ಸೀತಾರಾಮ್ (ಮುಂದೆ 1954-55ರಲ್ಲಿ ಬೆಂಗಳೂರಿನ ಮೇಯರ್ ಆದವರು. ಸ್ವಾತಂತ್ರ್ಯ ಯೋಧ ಶತಾಯುಷಿ ಶ್ರೀ ಹೆಚ್. ಎಸ್. ದೊರೆಸ್ವಾಮಿ ಅವರ ಅಣ್ಣ) ಅವರ ಕಾರಿನಲ್ಲಿ ಶ್ರೀ ರಾಮಚಂದ್ರ ರಾಯರನ್ನು ಅವರು ಅಡಗಿಕೊಂಡಿದ್ದ ಯಲಹಂಕದ ತಮ್ಮ ಸ್ನೇಹಿತರ ಮನೆಯಿಂದ ಕರೆತಂದು ನರಸಿಂಹರಾಜ ಕಾಲೋನಿಯಲ್ಲಿನ ಶ್ರೀ ಸಿ. ಕೆ. ನಾಗರಾಜ ರಾವ್ ಅವರ ಮನೆಯಲ್ಲಿ ಸೇರಿಸಿದರು. ಆಗ ನಾಗರಾಜ ರಾವ್ ಕನ್ನಡದ ಉದಯೋನ್ಮುಖ ಲೇಖಕ. ಕೆಲ ದಿನ ರಾಮಚಂದ್ರ ರಾಯರ ರಕ್ಷಣೆಯ ಜವಾಬ್ದಾರಿ ಅವರಿಗೆ ವರ್ಗಾವಣೆ ಆಯಿತು.

ರಾಮಚಂದ್ರ ರಾಯರ ಬೆನ್ನು ಹತ್ತಿದ್ದ ಪೊಲೀಸರಿಗೆ ಹೇಗೋ ಈ ಸುಳಿವು ಸಿಕ್ಕಿತು. ಸರ್ಚ್ ವಾರಂಟ್ ಹಿಡಿದುಕೊಂಡು ತಡರಾತ್ರಿ ಪೊಲೀಸರು ನಾಗರಾಜರಾಯರ ಮನೆ ಬಾಗಿಲು ಬಡಿದರು. ಮನೆಯಲ್ಲಿ ತಂದೆ-ತಾಯಿ, ಹೆಂಡತಿ-ಮಕ್ಕಳ ಜೊತೆ ನಾಗರಾಜರಾಯರ ವಾಸ. ಆ ದಿನ ಅವರ ಪತ್ನಿ ಮನೆಯಲ್ಲಿರಲಿಲ್ಲ. ಬಾಗಿಲು ತೆಗೆದರೆ ಪೊಲೀಸು ಅಧಿಕಾರಿಯ ಜೊತೆ ಒಬ್ಬ ಕನಿಷ್ಟಬಿಲ್ಲೆ. ಒಳಗೆ ಬಂದ ಅಧಿಕಾರಿಯನ್ನು ಕೂಡಿಸಿ ರಾಯರು ತಾಯಿಗೆ ಕಾಫಿ ಮಾಡಲು ಹೇಳಿದರು. ಸರ್ಚ್ ವಾರಂಟ್ ತೋರಿಸಿ ಅಧಿಕಾರಿ ತಪಾಸಣೆ ಮಾಡಿದರು. ರಾಯರ ಕೋಣೆಯಲ್ಲಿ ಒಂದು ವ್ಯಕ್ತಿ ಚಾಪೆಯಮೇಲೆ ಪೂರ್ತಿ ಕಂಬಳಿಯಿಂದ ಮುಸುಕು ಹೊದ್ದು ಮಲಗಿದ್ದುದು ಅಧಿಕಾರಿಗೆ ಕಂಡಿತು. 

"ಯಾರು ಅಲ್ಲಿ ಮಲಗಿರುವುದು?"
"ಇನ್ಯಾರು ಇಲ್ಲಿ ಬರುತ್ತಾರೆ? ಅದು ನನ್ನ ಹೆಂಡತಿ"
"ಹಾಗೆ ಯಾಕೆ ದೂರ ಮೂಲೆಯಲ್ಲಿ ಮಲಗಿದ್ದಾರೆ?"
"ಅದಕ್ಕೇನು ಹೇಳುವುದು? ತಿಂಗಳಿಗೆ ಮೂರು ದಿನ ದೂರ ಇರುವ ಪದ್ಧತಿ ಇದೆಯಲ್ಲ. ಅದಕ್ಕೆ"

ಅಧಿಕಾರಿಗೆ ನಂಬಿಕೆ ಬರಲಿಲ್ಲ. 

"ಗಾಢ ನಿದ್ರೆಯಲ್ಲಿದ್ದಾಳೆ. ಬೇಕಿದ್ದರೆ ಎಬ್ಬಿಸುತ್ತೇನೆ"

ಅಧಿಕಾರಿಗೆ ಎಬ್ಬಿಸಲು ಹೇಳುವಂತೆ ಮನಸ್ಸಾಗಲಿಲ್ಲ. ಅಷ್ಟರಲ್ಲಿ ನಾಗರಾಜರಾಯರ ತಾಯಿ ಕಾಫಿ ತಂದರು. ಸಹಾಯಕನ ಜೊತೆ ಒಳ್ಳೆಯ ಕಾಫಿ ಕುಡಿದು ಇಬ್ಬರೂ ಹೊರಟುಹೋದರು. ರಾಮಚಂದ್ರರಾಯರು ಅಂದು ಪಾರಾದರು. 
*****

ಸ್ವಾತಂತ್ರ್ಯ ಬಂದ ನಂತರ ಮೈಸೂರು ರಾಜ್ಯಕ್ಕೆ ಶ್ರೀ ಕೆ. ಚಂಗಲರಾಯ ರೆಡ್ಡಿ ಅವರು ಮುಖ್ಯಮಂತ್ರಿ ಆಗಿ ನಾಮನಿರ್ದೇಶಿತ ಸರ್ಕಾರ ಅಧಿಕಾರ ವಹಿಸಿಕೊಂಡಿತು. ಕೆ.ಸಿ. ರೆಡ್ಡಿ ಅವರ ನೇತೃತ್ವದಲ್ಲಿ ಮೊದಲ ಚುನಾವಣೆಗಳು 1952ರಲ್ಲಿ ನಡೆದುವು. 

ಎ. ಜಿ. ರಾಮಚಂದ್ರರಾಯರು ಹೊಳೆನರಸೀಪುರ ಕ್ಷೇತ್ರದಿಂದ ಎಂ.ಎಲ್.ಎ ಆಗಿ ಚುನಾಯಿತರಾದರು. ಶ್ರೀ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿ ಆಗಿ ಮೊದಲ ಜನಪ್ರಿಯ ಸರ್ಕಾರ ಮೈಸೂರು ರಾಜ್ಯಕ್ಕೆ ಬಂದಿತು. ಹನುಮಂತಯ್ಯನವರ ಸರ್ಕಾರದ ಏಳು ಮಂತ್ರಿಗಳಲ್ಲಿ (ಆವರನ್ನು ಸೇರಿಸಿ ಎಂಟು ಜನ) ಶ್ರೀ ಕಡಿದಾಳ್ ಮಂಜಪ್ಪ ಮತ್ತು ಶ್ರೀ ಎ. ಜಿ. ರಾಮಚಂದ್ರ ರಾವ್ ಸೇರಿದರು. 

ರಾಮಚಂದ್ರರಾವ್ ಕಾನೂನು ಮತ್ತು ವಿದ್ಯಾ ಇಲಾಖೆ ಮಂತ್ರಿಗಳಾದರು. ನಾಗರಾಜರಾಯರ ಮನೆಯಲ್ಲಿ ನೆಲದ ಮೇಲೆ ಮಲಗಿದ್ದುದು ಮಾತ್ರವಲ್ಲ. ಸರ್ಕಾರ ಕೊಟ್ಟ ನಿವಾಸದ ಕೋಣೆಯ ಮಂಚದ ಮೇಲೂ ಅವರು ಮಲಗಲಿಲ್ಲ. ಮಂಚವನ್ನು ದೇವರ ಪೀಠವಾಗಿ ಉಪಯೋಗಿಸಿ ನೆಲದಮೇಲೇ ಮಲಗುತ್ತಿದ್ದರು ಎಂದು ಅವರನ್ನು ಹತ್ತಿರದಿಂದ ಕಂಡವರು ಹೇಳುತ್ತಿದ್ದರು. ಅಧಿಕಾರ ಮತ್ತು ಸವಲತ್ತುಗಳಿಗೆ ಆಸೆಪಡದ ಸ್ವಾತಂತ್ರ್ಯ ಯೋಧರ ಸಂತತಿಯವರು ಅವರು. 

1957ರಲ್ಲಿ ಹೊಳೆನರಸೀಪುರದಿಂದ ಪ್ರಜಾ ಸೋಷಲಿಸ್ಟ್ ಪಕ್ಷದ ಶ್ರೀ ವೈ. ವೀರಪ್ಪನವರು ಎಂ.ಎಲ್.ಎ ಆದರು. ನಂತರ 1962ರಿಂದ ಸತತ ಆರು ಬಾರಿ ಗೆದ್ದು ಬಂದ, ರಾಜ್ಯದ ಮುಖ್ಯ ಮಂತ್ರಿಗಳು ಮಾತ್ರವಲ್ಲದೆ ದೇಶದ ಪ್ರಧಾನ ಮಂತ್ರಿಗಳೂ ಆದ ಶ್ರೀ ಹೆಚ್. ಡಿ. ದೇವೇಗೌಡ ಅವರು ತಾವು ಎ. ಜಿ. ರಾಮಚಂದ್ರ ರಾಯರ ಗರಡಿಯಲ್ಲಿ ಬೆಳೆದವರು ಎಂದು ಕೃತಜ್ಞತೆಯಿಂದ ನೆನೆಸಿಕೊಳ್ಳುತ್ತಾರೆ. 

*****

ಈಗ ಸಂಸ್ಕೃತಿ ಬೆಳೆಸಲು "ಕನ್ನಡ ಮತ್ತು ಸಂಸ್ಕೃತಿ ಇಲಾಖೆ" ದೊಡ್ಡದಾಗಿ ಬೆಳೆದಿದೆ. "ಕನ್ನಡ ಅಭಿವೃದ್ಧಿ ಪ್ರಾಧಿಕಾರ" ಸಹ ಅಸ್ತಿತ್ವಕ್ಕೆ ಬಂದಿದೆ. ಮಂತ್ರಿಮಂಡಲಗಳೂ ದೊಡ್ಡವಾಗಿ ಬೆಳೆದಿವೆ. 

ಅದೇ ಕೆಂಗಲ್ ಹನುಮಂತಯ್ಯ ಅವರು ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ದೇಶದ "ಆಡಳಿತ ಸುಧಾರಣಾ ಸಂಸ್ಥೆ" (Administrative Reforms Commission) ಹಾಕಿರುವ ಮಿತಿಯಂತೆ ಶಾಸಕಾಂಗದ ಒಟ್ಟು ಸದಸ್ಯರ ಸಂಖ್ಯೆಯ ಶೇಕಡಾ ಹದಿನೈದರಷ್ಟು ಮಾತ್ರ ಮಂತ್ರಿಮಂಡಲದಲ್ಲಿ ಮಂತ್ರಿಗಳಾಗಿರಬಹುದು. ಈ ಮಿತಿ ಹಾಕಿರದಿದ್ದರೆ ಅನಿಮಿತ ಸಂಖ್ಯೆಯ ಮಂತ್ರಿಗಳನ್ನು ಮಾಡಿಟ್ಟು  ಈ ಜಗಳಗಳನ್ನು ಸ್ವಲ್ಪ ಮಟ್ಟಿಗಾದರೂ ತಪ್ಪಿಸಬಹುದಿತ್ತು!

ಸಂಸ್ಕೃತಿ ಪ್ರಚಾರ ಹೇಗೆ ನಡೆಯುತ್ತಿದೆ ಅನ್ನುವ ಚರ್ಚೆ ಒತ್ತಟ್ಟಿಗಿರಲಿ. ಆಡಳಿತ ಮತ್ತು ರಾಜಕೀಯ ನಾಯಕರ ಸಂಸ್ಕೃತಿಯಂತೂ ಹೇಗೆ ದಿಕ್ಕು ತಪ್ಪಿದೆ ಅನ್ನುವುದು ಯೋಚಿಸಬೇಕಾದ ವಿಷಯವೇ. ಇಂತಹ ಸಂಸ್ಕೃತಿಯ ಪ್ರಚಾರವಂತೂ ಬಹಳ ಚೆನ್ನಾಗಿಯೇ ಆಗುತ್ತಿದೆ. 

*****

ಅನೇಕ ಸಂಸ್ಕೃತಿ ಪ್ರಸಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಶ್ರೀ ಸಿ. ಕೆ. ನಾಗರಾಜರಾವ್ ಮತ್ತು ಅವರ ಶ್ರೀಮತಿ ರಾಜಮಣಿ ನಾಗರಾಜರಾವ್ ಅವರ ಒಂದು ಸುಂದರ ಅನುಭವದ ಸೊಗಸನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Monday, November 3, 2025

ಅಣ್ಣನು ಹಾವು ತಿಂದನು


ಅಂದು ಸಂಜೆ ಕಾರ್ಯಾಲಯದಿಂದ ಹಿಂದಿರುಗಿದ ತಂದೆಗೆ ಪ್ರತಿದಿನ ತನ್ನ ಬರವನ್ನು ನಿರೀಕ್ಷಿಸುತ್ತಾ ಕಾಯುತ್ತಿದ್ದ ಮಕ್ಕಳು ಮನೆಯಲ್ಲಿ ಕಾಣಿಸಲಿಲ್ಲ. ಮಕ್ಕಳು ಇಲ್ಲದಿದ್ದರೂ ಅವರು ಅಲ್ಲಿಯೇ ಸುತ್ತ-ಮುತ್ತ ಇದ್ದ ಕುರುಹುಗಳು ಕಾಣುತ್ತಿದ್ದವು. ಶಾಲೆಯ ಚೀಲಗಳು, ಪುಸ್ತಕಗಳು ಅಲ್ಲಲ್ಲಿ ಹರಡಿದ್ದವು. ತೆರೆದಿದ್ದ ಪುಸ್ತಕದಲ್ಲಿ ಅರ್ಧ ವಾಕ್ಯ ಬರೆದು, ಅದನ್ನು ಪೂರ್ತಿ ಮಾಡುವ ಮೊದಲೇ ಎಲ್ಲೋ ಓಡಿಹೋಗಿದ್ದುದು ಕಾಣುತ್ತಿತ್ತು. ಮಕ್ಕಳಿಗೆ ಆಟದ ಸೆಳೆತ ಅಂತಹುದು. ಎಲ್ಲ ಎತ್ತಿಟ್ಟು ಒಪ್ಪ-ಓರಣ ಮಾಡಿ ಹೋದರೆ ಅವರನ್ನು ಮಕ್ಕಳು ಎಂದೇಕೆ ಕರೆಯಬೇಕು? ಹಿರಿಯರಿಗೇ ಇಲ್ಲದ ಶಿಸ್ತನ್ನು ಮಕ್ಕಳ ಮೇಲೆ ಏಕೆ ಹೇರಬೇಕು? 

ಮಗಳು ಈಗ ತಾನೇ ಕನ್ನಡ ಕಲಿಯಲು ಪ್ರಾರಂಭಿಸಿದ್ದಾಳೆ. ಏನೋ ಬರೆಯುತ್ತಿದ್ದಾಳೆ. ಏನೆಂದು ನೋಡೋಣ ಅನ್ನಿಸಿತು. ನೋಟ್ ಪುಸ್ತಕವನ್ನು ಹಿಡಿದು ಅಲ್ಲೇ ಕುರ್ಚಿಯ ಮೇಲೆ ಕುಳಿತ. ಒಂದು ವಾಕ್ಯ ಪೂರ್ತಿಯಾಗಿದೆ. ಎರಡನೆಯದು ಪ್ರಾರಂಭವಾಗಿದೆ. ಓದಿದ. 

"ಅಣ್ಣನು ಹಾವು ತಿಂದನು. ಅದನ್ನು" ಅಷ್ಟು ಬರೆಯುವಲ್ಲಿ ಆಟದ ಮೇಲೆ ಗಮನ ತಿರುಗಿರಬೇಕು. ಅರ್ಧಕ್ಕೇ ಬಿಟ್ಟು ಓಡಿಹೋಗಿದ್ದಾಳೆ. 

ಇದೇನು, ಹೀಗಿದೆ? ಮೊನ್ನೆ ಗೋಕುಲಾಷ್ಟಮಿಗೆ ಅಜ್ಜಿ ಮಾಡಿಟ್ಟಿದ್ದ ಚಕ್ಕುಲಿ, ಕೋಡುಬಳೆ, ತೇಂಗೊಳಲು, ಸಿಹಿ ಉಂಡೆ, ಇವನ್ನು ಕೊಟ್ಟರೂ ತಿನ್ನುವುದಿಲ್ಲ. ಹಾವನ್ನು ತಿಂದನೇ? ಅನುಮಾನವಾಯಿತು. ಅದೂ ಎಂಥ ಹಾವೋ, ಏನೋ. 

ಒಹೋ, ಇದು ಅವಳ ಅಣ್ಣನ ಸಮಾಚಾರವಲ್ಲ. ಶಾಲೆಯ ಪಾಠದ ಪುಸ್ತಕದ ಸಾಲು. ನಗು ಬಂತು. ಅಷ್ಟರಲ್ಲಿ ಆಟ ಮುಗಿಸಿ ಮಗಳು ಓಡಿ ಬಂದಳು. 

"ಇದೇನು, ಹೀಗೆ ಬರೆದಿದ್ದಿ? ನಿಮಗೆ ಚೀನಾ ದೇಶದ ಕತೆಯ ಪಾಠ ಇದೆಯೇ?"
"ಇಲ್ಲಪ್ಪ"
"ಮತ್ತೆ ಅಣ್ಣ ಹಾವು ತಿಂದಿದ್ದಾನೆ ಅಂತ ಬರೆದಿದ್ದೀಯೆ. ಎಲ್ಲಿ, ಪಾಠ ತೋರಿಸು"

ಮಗಳು ಪುಸ್ತಕದಲ್ಲಿದ್ದ ಪಾಠ ತೋರಿಸಿದಳು. 

"ಅಣ್ಣನು ಹೂವು ತಂದನು. ಅದನ್ನು ಅಮ್ಮನಿಗೆ ಕೊಟ್ಟನು" ಎಂದಿತ್ತು ಪುಸ್ತಕದಲ್ಲಿ. ಮಗು ಕಾಗುಣಿತ ಕಲಿಯುವ ಕಷ್ಟದಲ್ಲಿ ಹೂವು ಹಾವಾಗಿತ್ತು. ತಂದದ್ದು ತಿಂದಾಗಿತ್ತು. 

*****

ಕನ್ನಡ ರಾಜ್ಯೋತ್ಸವ ಬಂದಿದೆ. ಈ ಸಂದರ್ಭದಲ್ಲಿ ಎಲ್ಲೆಡೆಯೂ ಒಂದು ಸಂಭ್ರಮದ ವಾತಾವರಣ. ವಾಟ್ಸಪ್ಪನಲ್ಲಂತೂ ಶುಭಾಶಯಗಳ ಮಹಾಪೂರ. 

ಸ್ವಾತಂತ್ರ್ಯಾನಂತರ ಭಾಷಾವಾರು ಪ್ರಾಂತಗಳ ರಚನೆಗೆ ಬಹಳ ಬೇಡಿಕೆ ಇದ್ದ ಕಾಲ. "ಕರ್ನಾಟಕ ಕುಲ ಪುರೋಹಿತ" ಎಂದೇ ಖ್ಯಾತರಾದ ಆಲೂರು ವೆಂಕಟ ರಾಯರು, ಹುಯಿಲುಗೋಳ ನಾರಾಯಣ ರಾಯರು, ಅ. ನ. ಕೃಷ್ಣ ರಾಯರು ಇನ್ನೂ ಮುಂತಾದ ಅನೇಕ ಮಹನೀಯರು "ಕರ್ನಾಟಕ ಏಕೀಕರಣ" ಆಗಬೇಕೆಂದು ಹೋರಾಡುತ್ತಿದ್ದ ಕಾಲ. ಇದೇ ರೀತಿ ಎಲ್ಲ ತೆಲುಗು ಮಾತನಾಡುವ ಪ್ರದೇಶವು "ವಿಶಾಲಾಂಧ್ರ" ಎಂದು ಒಂದಾಗಬೇಕೆಂದು ತೆಲುಗರೂ ಹೊಡೆದಾಡುತ್ತಿದ್ದರು. "ಪೊಟ್ಟಿ ಶ್ರೀರಾಮುಲು" ಅನ್ನುವವರು ಆಮರಣಾಂತ ಉಪವಾಸ ಸತ್ಯಾಗ್ರಹ ಇದಕ್ಕಾಗಿ ಮಾಡಿದರು. (ಇದರ ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು) 56 ದಿನಗಳ ಅಖಂಡ ಉಪವಾಸದ ನಂತರ ಶ್ರೀರಾಮುಲು ಅಮರರಾದರು. ತದನಂತರ ಭಾಷಾವಾರು ಪ್ರಾಂತಗಳ ರಚನೆಗೆ ಇನ್ನೂ ಹೆಚ್ಚಿನ ಬಲ ಬಂದು ಕಡೆಗೆ ಆ ಕೆಲಸವಾಯಿತು. 1956ನೆಯ ಇಸವಿ ನವೆಂಬರ್ ಒಂದರಂದು "ವಿಶಾಲ ಮೈಸೂರು ರಾಜ್ಯ" ರೂಪುಗೊಂಡಿತು. ಅದರ ನೆನಪಿನಲ್ಲಿ "ಕನ್ನಡ ರಾಜ್ಯೋತ್ಸವ" ಆಚರಿಸುತ್ತ ಬಂದಿದ್ದೇವೆ. ಐವತ್ತು ವರುಷಗಳ ಕನ್ನಡಿಗರ ಕನಸು ಅಂದು ನನಸಾಯಿತು. ಹೀಗೆಯೇ ವಿಶಾಲಾಂಧ್ರ ಸಹ ಅಸ್ತಿತ್ವಕ್ಕೆ ಬಂದಿತು. ನವೆಂಬರ್ ಮೊದಲ ದಿನ ಎರಡು ರಾಜ್ಯಗಳಲ್ಲೂ ಸರ್ಕಾರೀ ರಜಾದಿನವಾಗಿ ಸಮಾರಂಭಗಳು ನಡೆಯುವ ಸಂಪ್ರದಾಯ ಪ್ರಾರಂಭವಾಯಿತು. 

ನಂತರ ರಾಜ್ಯಕ್ಕೆ ಹೆಸರು ಬದಲಾವಣೆ ಮಾಡುವ ಬೇಡಿಕೆ ಬಂದಿತು. "ಕನ್ನಡನಾಡು", "ಕರ್ಣಾಟಕ" ಅಥವಾ "ಕರ್ನಾಟಕ" ಎಂದು ಪರ-ವಿರೋಧ ಚರ್ಚೆ ನಡೆದು ಕಡೆಗೆ 1973, ನವೆಂಬರ್ ಒಂದರಂದು "ಕರ್ನಾಟಕ" ಎಂದು ಮರುನಾಮಕರಣ ಆಯಿತು. ಹುಯಿಲುಗೋಳ ನಾರಾಯಣ ರಾಯರ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಬದಲಾಯಿಸಿ "ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು" ಎಂದು ಕೆಲವರು ಹಾಡಿದ್ದೂ ಉಂಟು. 

*****


ಮೈಸೂರು ರಾಜ್ಯ "ವಿಶಾಲ ಮೈಸೂರು ರಾಜ್ಯ" ಎಂದಾಗಿ ನಂತರ "ಕರ್ನಾಟಕ" ಕೂಡ ಆಗಿದೆ. ವಿಶಾಲಾಂಧ್ರ ಈಗ ಎರಡಾಗಿ "ತೆಲಂಗಾಣ" ಮತ್ತು "ಸೀಮಾಂಧ್ರ" (ಆಂಧ್ರ ಪ್ರದೇಶ ಎಂದು ಕರೆಯುವುದು) ಆಗಿವೆ. ಕರ್ನಾಟಕದಲ್ಲೂ ಆಗಾಗ್ಗೆ "ಕಲ್ಯಾಣ ಕರ್ನಾಟಕ" ಬೇರೆ ಆಗಬೇಕೆಂಬ ಕೂಗು ಕೇಳಿ ಬರುತ್ತದೆ. "ಹೆಸರಾಯಿತು ಕರ್ನಾಟಕ; ಉಸಿರಾಗಲಿ ಕನ್ನಡ" ಎನ್ನುವುದು ಒಂದು ಆಶಯವಾಗಿಯೇ ಉಳಿದಿದೆ. 

ಅನೇಕ ರಾಜಕೀಯ ಕಾರಣಗಳಿಂದ ಏಕೀಕೃತ ಕರ್ನಾಟಕದ ವಿಭಜನೆಯ ಕೂಗು ಆಗಾಗ ಕೇಳಿಬರುತ್ತಿದ್ದರೂ ಆಂಧ್ರದ ರೀತಿ ವಿಭಜನೆಯ ಲಕ್ಷಣಗಳು ವಿಪರೀತವಾಗಿ ಕಾಣಿಸುತ್ತಿಲ್ಲ. ಎಲ್ಲ ಬೆಳವಣಿಗೆ ಕೆಲಸಗಳೂ ಬೆಂಗಳೂರಿನಲ್ಲಿ ಆಗುತ್ತಿವೆ ಎನ್ನುವುದು ಒಂದು ಉತ್ತರ ಕರ್ನಾಟಕದ ಕೂಗಾಗಿದೆ. ಸಮಾಧಾನ ಪಡಿಸಲು ಬೆಳಗಾವಿಯಲ್ಲಿ ಒಂದು ವಿಧಾನ ಸೌಧ ರಚನೆಯಾಗಿ ಆಗಾಗ ಅಲ್ಲಿ ಅಧಿವೇಶನಗಳೂ ನಡೆಯುತ್ತಿವೆ. ಆದರೆ ಎಲ್ಲ ಸರಿಯಾಗಿದೆ ಎಂದು ಹೇಳುವ ಸ್ಥಿತಿ ಇದೆ ಅನ್ನುವಂತಿಲ್ಲ. 

ಕೇಂದ್ರ ಸರಕಾರ ಯಾರೇ ನಡೆಸಲಿ, ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಹಿಂದಿ ಭಾಷೆಯ ಹೇರಿಕೆ ಅವ್ಯಾಹತವಾಗಿ ನಡೆದಿದೆ. ತಮಿಳುನಾಡಿನಂತೆ ಅರವತ್ತರ ದಶಕದಲ್ಲಿ ಕನ್ನಡ ಭಾಷಿಕರು ಬಲವಾಗಿ ನಿಲ್ಲದಿದ್ದುದಕ್ಕೆ ತೆರುತ್ತಿರುವ ಬೆಲೆ ಇದು. 

*****

ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ಕಥೆ ಒಂದು ದೊಡ್ಡ ವ್ಯಥೆಯೇ ಆಗಿದೆ. ಹೊರರಾಜ್ಯಗಳಿಂದ ಬಂದವರು ತಾವಾಗಿ ಕನ್ನಡ ಕಲಿಯುವುದಿಲ್ಲ. ದಶಕಗಳೇ ಕಳೆದರೂ ಬೇರೆಯೇ ಆಗಿ ಉಳಿಯುತ್ತಾರೆ. ಕಲಿಸುವ ಪ್ರಯತ್ನ ಕನ್ನಡಿಗರು ಮಾಡುವುದಿಲ್ಲ. "ಕನ್ನಡ ಕಲಿಯಿರಿ" ಎಂದು ಹೇಳುವುದು ಒಂದು ರೀತಿಯ ಗೂಂಡಾಗಿರಿ ಎನ್ನುವಂತೆ ಮೀಡಿಯಾದಲ್ಲಿ ಪ್ರತಿಬಿಂಬಿತ ಆಗುತ್ತಿದೆ. ಈಗ ಬೆಂಗಳೂರಿನ ಒಟ್ಟಾರೆ ಜನಸಂಖ್ಯೆಯಲ್ಲಿ ಶೇಕಡಾ ಕೇವಲ ಮೂವತ್ತೈದರಷ್ಟು ಕನ್ನಡಿಗರು ಉಳಿದಿದ್ದಾರೆ. "ಒಂದು ಸಂಸ್ಕೃತಿ ನಾಶ ಮಾಡಬೇಕಾದರೆ ಅತ್ಯಂತ ಸುಲಭ ಉಪಾಯ ಅಲ್ಲಿನ ಭಾಷೆ ಹಾಳುಮಾಡುವುದು" ಎಂದು ಒಂದು ಹೇಳಿಕೆಯಿದೆ. ಇದರ ಪ್ರಯೋಗಶಾಲೆ ಕರ್ನಾಟಕವೇ ಆಗಿರುವುದು ನಮ್ಮ ದೌರ್ಭಾಗ್ಯ. 

ಈಗಿನ ತಲೆಮಾರಿನ ಅನೇಕ ಕನ್ನಡಿಗರಿಗೆ ಕನ್ನಡ ಮಾತನಾಡುವುದು ಗೊತ್ತು. ಓದಲು ಕಷ್ಟ. ಬರೆಯಲು ಬರದು. ಅಕಸ್ಮಾತ್ ಬರೆದರೂ "ಹೂವು" ಹಾವು" ಆಗಬಹುದು. "ತಂದು" ಅನ್ನುವುದು "ತಿಂದು" ಆಗಬಹುದು. ಅಂದು ಆ ಮನೆಯಲ್ಲಿ ಆಗಿದ್ದು ಕಲಿಯುವ ಮಗುವಿನ ತಪ್ಪು. ಇಂದು ಎಲ್ಲೆಡೆ ಆಗುತ್ತಿರುವುದು ನಮ್ಮ ಉದಾಸೀನದಿಂದ ಆಗುತ್ತಿರುವ ಪ್ರಮಾದ. 

ಕನ್ನಡದ ಕೆಲಸಕ್ಕೆ ಎಂದು ಸ್ಥಾಪಿತವಾದ ಸಂಸ್ಥೆ "ಕನ್ನಡ ಸಾಹಿತ್ಯ ಪರಿಷತ್ತು". ಆ ಸಂಸ್ಥೆಯ ಮುಖ್ಯ ಕಚೇರಿ "ಪರಿಷನ್ಮಂದಿರ" ಇರುವ ರಸ್ತೆಗೆ ಕನ್ನಡದ "ಆದಿಕವಿ" ಪಂಪನ ನೆನಪಾಗಿ "ಪಂಪ ಮಹಾಕವಿ ರಸ್ತೆ" ಎಂದು ಹೆಸರಿದೆ. ಇದನ್ನೂ ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸುದ್ದಿ. ಪಂಪನ ಕೃತಿಗಳನ್ನು ಓದುವುದು ಅತ್ತ ಇರಲಿ. ಅವನ ಹೆಸರೂ ನಮಗೆ ಬೇಡವಾಗಿದೆ.  

ಹಳಗನ್ನಡ ಎಂದೋ ಮರೆತುಹೋಯಿತು. ನಡುಗನ್ನಡ ನಡುವಿನಲ್ಲಿ ಬಿಟ್ಟುಹೋಯಿತು. ನವೋದಯ ಕನ್ನಡ ರಾಜ್ಯೋತ್ಸವದ ಕಾಲದಲ್ಲಿ ಮಾತ್ರ ನೆನಪಿಗೆ ಬರುತ್ತಿದೆ. "ನೀವು ಇಂಗ್ಲೀಷಿನಲ್ಲಿ ಬರೆದರೆ ತಕ್ಷಣ ಓದುತ್ತೇವೆ. ಕನ್ನಡ ಆದರೆ ಕಷ್ಟ" ಎಂದು ಐವತ್ತು ದಾಟಿದವರೇ ಹೇಳುತ್ತಾರೆ. ಅವರಿಗಿಂತ ಚಿಕ್ಕವರಿಗೆ ಇದು ಕನ್ನಡ ಎನ್ನುವುದು ಗೊತ್ತಾಗುವುದೂ ಶ್ರಮವೇ. 

ಐವತ್ತು-ಅರವತ್ತರ ದಶಕದಲ್ಲಿ ಕನ್ನಡ ಚಲನಚಿತ್ರಗಳು ಕನ್ನಡ ಭಾಷೆಯ ರಾಯಭಾರಿಗಳಾಗಿ ಕೆಲಸ ಮಾಡುತ್ತಿದ್ದವು. ಏಕೀಕರಣದ ಕಾಲದಲ್ಲಿ ಚಿತ್ರರಂಗ ದೊಡ್ಡ ಕಾಣಿಕೆ ನೀಡಿತು. ಇಂದು ಅನೇಕ ಕನ್ನಡ ಚಲನಚಿತ್ರಗಳಲ್ಲಿ ಕನ್ನಡ ಎಲ್ಲಿದೆ ಎಂದು ಹುಡುಕಬೇಕಾಗಿದೆ. 

*****

ದೈನಂದಿನ ಕಾರ್ಯಕ್ರಮದಲ್ಲಿ ಒಂದು ಪುಟವೋ, ಅರ್ಧ ಪುಟವೋ ಕನ್ನಡ ಬರೆಯುವುದು, ಬರೆದಿರುವುದನ್ನು ಓದುವುದು, ನಮ್ಮ-ನಮ್ಮಲ್ಲಿ ಕನ್ನಡ ಮಾತನಾಡುವುದು, ಅಕ್ಕ-ಪಕ್ಕದವರಿಗೆ ಕನ್ನಡ ಕಲಿಸುವುದು, ಕನ್ನಡದ ವಿಷಯದಲ್ಲಿ ರಾಜಕೀಯವಾಗಿ ಗಟ್ಟಿ ನಿಲುವುಗಳನ್ನು ಪಕ್ಷಭೇದ ಇಲ್ಲದೆ ತೆಗೆದುಕೊಳ್ಳುವುದು, ಕನ್ನಡಿಗರು ಒಟ್ಟಾಗಿ ಒಗ್ಗಟ್ಟಿನಿಂದ ಇರುವುದು ಈಗ ರಾಜ್ಯೋತ್ಸವ ಆಚರಿಸುವ ಮುಖ್ಯ ಅಂಗವಾಗಬೇಕು. 

ಇಲ್ಲದಿದ್ದರೆ "ಹೂವು ಹಾವಾಗುವುದು" ಮತ್ತು "ತರುವುದು ತಿನ್ನುವುದು" ಆಗುವುದು ಮಕ್ಕಳ ಕಾಗುಣಿತದ ತಪ್ಪಿನಿಂದಲ್ಲ; ನಮ್ಮ ಪ್ರಮಾದದಿಂದಲೇ ನಡೆದು ನಮ್ಮ ಎದುರೇ ಭೂತಾಕಾರವಾಗಿ ಬಂದು ನಿಲ್ಲುತ್ತದೆ.