ಕೋಶಗಳಲ್ಲಿ ಕೋಶಕಾರರು ಸಮಾನಾರ್ಥಕ ಪದಗಳನ್ನು ಕೊಡುತ್ತಾರೆ. ಅವು ಒಂದೇ ಅರ್ಥ ಕೊಡುವ ಪದಗಳಾದರೂ ಪದ-ಪದಗಳಲ್ಲಿ ಸೂಕ್ಷ್ಮವಾದ ಅರ್ಥ ಭೇದ ಇರುತ್ತದೆ ಎನ್ನುವುದನ್ನು "ಅಳಿಯ ಅಲ್ಲ; ಮಗಳ ಗಂಡ" ಎನ್ನುವ ಶೀರ್ಷಿಕೆಯಡಿ ನೋಡಿದೆವು. ಕೋಶದಲ್ಲಿ ನೋಡಿದರೆ "ಅಳಿಯ" ಅನ್ನುವ ಪದಕ್ಕೆ ಕೊಟ್ಟಿರುವ ಸಮಾನಾರ್ಥಕ ಪದಗಳಲ್ಲಿ "ಮಗಳ ಗಂಡ" ಅನ್ನುವುದೂ ಒಂದು. ಆದರೆ ಅಳಿಯ ಮತ್ತು ಮಗಳ ಗಂಡ ಎನ್ನುವ ಎರಡು ಪ್ರಯೋಗಗಳ ಸಂದರ್ಭ ಮತ್ತು ಸೂಕ್ಷ್ಮ ವ್ಯತ್ಯಾಸಗಳನ್ನು ನೋಡಿಯಾಯಿತು.
"ಮಗಳ ಗಂಡ" ಎನ್ನುವ ಪದದಂತೆ "ಮಗನ ಹೆಂಡತಿ" ಎನ್ನುವ ಪದ ಪ್ರಯೋಗ ಏಕಿಲ್ಲ ಎಂದು ಕೆಲವು ಸ್ನೇಹಿತರು ಕೇಳಿರುತ್ತಾರೆ. ಒಂದು ವ್ಯಕ್ತಿಯನ್ನು ನಿರ್ದೇಶಿಸುವಾಗ "ಅವನು" ಎಂದು ಹೇಳುತ್ತಾರೆ. ಇಂಗ್ಲೀಷಿನಲ್ಲಿ ಹೇಳುವಂತೆ "He includes She" ರೀತಿ, ಮಗನ ಹೆಂಡತಿ ಪ್ರಾಯಶಃ ಮಗಳ ಗಂಡ ಅನ್ನುವುದರಲ್ಲೇ ಸೇರಿ ಹೋಗಿರಬೇಕು!
"ಕೆಲವರು ಪದಗಳನ್ನು ಅಥವಾ ಪದಪುಂಜಗಳನ್ನು ತಪ್ಪಾಗಿ ಪ್ರಯೋಗಿಸಿ, ಅದನ್ನೇ ಮತ್ತನೇಕರು ಮುಂದುವರೆಸಿ, ಮುಂದೆ ಆ ತಪ್ಪೇ ಸರಿ ಎಂದು ಎಲ್ಲರೂ ತಿಳಿದು, ಆ ತಪ್ಪು ಪ್ರಯೋಗವೇ ಶಾಶ್ವತವಾಗಿ ಉಳಿಯಬಹುದು" ಎಂದು ಹಿಂದೆ ಹೇಳಲಾಗಿತ್ತು. ಅದರಲ್ಲಿಯೂ ಯಾರಾದರೂ ಹೆಸರು ಪಡೆದ ಜನ ಅಥವಾ ಪ್ರಭಾವಶಾಲಿಗಳು ಹೀಗೆ ಉಪಯೋಗಿಸಿದರೆ ಅದೇ ಭದ್ರವಾಗಿ ನಿಲ್ಲುತ್ತದೆ. "ಗತಾನುಗತಿಕೋ ಲೋಕಃ" ಅನ್ನುವಂತೆ ಒಬ್ಬರ ಹಿಂದೆ ಇನ್ನೊಬ್ಬರು. ಅಂತಹ ತಪ್ಪು ಪ್ರಯೋಗವೇ ಶಾಶ್ವತವಾಗಿ ನಿಂತಿರುವುದಕ್ಕೆ ಒಂದು ಅತ್ಯಂತ ಸುಂದರ ಉದಾಹರಣೆ "ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ" ಎನ್ನುವ ಇನ್ನೊಂದು ಪ್ರಸಿದ್ಧ ಗಾದೆ.
*****
ಅವರವರ ಸಂಪ್ರದಾಯದಂತೆ, ತಾವು ಅನುಸರಿಸುವ ಆರಾಧನಾ ಕ್ರಮದಂತೆ ದೇವರ ಚಿಹ್ನೆಗಳನ್ನು ದೇಹದ ಮೇಲೆ ಧರಿಸುವುದು ಪ್ರಪಂಚದ ಎಲ್ಲಾ ಕಡೆ ಇರುವ ಪದ್ಧತಿ. ಅನೇಕ ಬಗೆಯ ಹಲವು ಬಣ್ಣ ಮತ್ತು ಆಕಾರದ ನಾಮಗಳು, ವಿಭೂತಿ, ಆಂಗಾರ ಮತ್ತು ಅಕ್ಷತೆ, ಕುಂಕುಮ-ಕೇಸರಿ, ಶಿಲುಬೆ, ಚಂದ್ರ ಮತ್ತು ನಕ್ಷತ್ರ ಇತ್ಯಾದಿ ಸಂಕೇತಗಳನ್ನು ಅನೇಕ ಜನರು ಧರಿಸುವುದನ್ನು ನಾವು ನೋಡಿದ್ದೇವೆ. ಈಚೆಗೆ ಇದು ಕಡಿಮೆ ಆಗಿದ್ದರೂ ಈಗಲೂ ಅನೇಕರು ಈ ರೀತಿ ಧರಿಸುತ್ತಾರೆ. ಕೆಲವು ವೈದಿಕರು ಜನಿವಾರ, ಪವಿತ್ರದುಂಗುರ ತೊಡುತ್ತಾರೆ. ಅಂತೆಯೇ ಅನೇಕ ಶಿವಾರಾಧಕರು ಒಂದು ಸಣ್ಣ ಶಿವಲಿಂಗವನ್ನು ತಮ್ಮ ಕೊರಳಲ್ಲಿ ಧರಿಸುತ್ತಾರೆ. ಕೆಲವರು ಒಂದು ಬಟ್ಟೆಯಲ್ಲಿ ಲಿಂಗವನ್ನು ಸುತ್ತಿ ಕುತ್ತಿಗೆಗೆ ಕಟ್ಟಿಕೊಳ್ಳಬಹುದು. ಮತ್ತೆ ಕೆಲವರು ಶಿವಲಿಂಗವನ್ನು ಅದಕ್ಕಾಗಿಯೇ ಮಾಡಿದ ಲೋಹದ ಸಂಪುಷ್ಟದಲ್ಲಿ ಇಟ್ಟು ದಾರದಿಂದ ಇಳಿಬಿಟ್ಟು ಕುತ್ತಿಗೆಗೆ ಧರಿಸಬಹುದು. ಈ ರೀತಿಯ ಸಂಪುಷ್ಟಕ್ಕೆ "ಕರಡಿಗೆ" ಎಂದು ಕರೆಯುತ್ತಾರೆ.
ಹಿಂದೆ ತುಂಬಾ ಬಳಕೆಯಲ್ಲಿ ಇದ್ದ ಪದಗಳಲ್ಲಿ "ಕರಂಡಕ" ಅನ್ನುವುದೂ ಒಂದು. ಈ ಪದಕ್ಕೆ "ಬಟ್ಟಲು" ಅಥವಾ ಕಪ್ ಎಂದು ಅರ್ಥ. ಈ ಕರಂಡಕದಿಂದ ಹುಟ್ಟಿದ ಪದ ಕರಡಿಕೆ. ಬಟ್ಟಲಿನಂತಹ ಒಂದು ಸಂಪುಷ್ಟದಲ್ಲಿ ಸಣ್ಣ ಶಿವಲಿಂಗವನ್ನು ಇಟ್ಟು ತಿರುಪಿನ ಮುಚ್ಚಳದಿಂದ ಮುಚ್ಚುವಂತೆ ಮಾಡುತ್ತಾರೆ. ಅದರ ಅನೇಕ ರೂಪಾಂತರಗಳೂ ಉಂಟು. ಮೇಲೆ ಚಿತ್ರದಲ್ಲಿ ತೋರಿಸಿರುವ ಕರಡಿಕೆ ಹೆಚ್ಚು ಬಳಕೆಯಲ್ಲಿ ಇರುತ್ತದೆ. ಇದಕ್ಕೆ ಎರಡು ಕಡೆ ದಾರ ಪೋಣಿಸುವ ರೀತಿ ಮಾಡಿ ಪದಕದಂತೆ ಕೊರಳಲ್ಲಿ ಧರಿಸಬಹುದು. ಪಂಚಲೋಹದ, ಬೆಳ್ಳಿಯ ಅಥವಾ ಹೆಚ್ಚು ಅನುಕೂಲವಂತರು ಬಂಗಾರದಲ್ಲಿ ಮಾಡಿಸಿಕೊಂಡು ಕೊರಳಿಗೆ ಆಭರಣದ ರೀತಿ ಕಟ್ಟಿಕೊಳ್ಳುತ್ತಾರೆ.
ನಾವು ಆಹಾರವಾಗಿ ಸೇವಿಸುವ ಯಾವ ಪದಾರ್ಥವಾದರೂ ಅದನ್ನು ಮೊದಲು ಪರಮಾತ್ಮನಿಗೆ ಅರ್ಪಿಸಿ (ನೈವೇದ್ಯ ಮಾಡಿ) ನಂತರ ಸೇವಿಸಬೇಕು ಎನ್ನುವುದು ಶ್ರದ್ಧಾಳುಗಳು ಪಾಲಿಸುವ ಸಂಪ್ರದಾಯ. ಜನಿವಾರ ಅಥವಾ ಯಜ್ನೋಪವೀತ ಧರಿಸಿದವರು ಊಟಕ್ಕೆ ಮೊದಲು ತಮ್ಮಲ್ಲೇ ಇರುವ ಪಂಚ ಪ್ರಾಣರೂಪಿ ಅಂತರ್ಗತನಾದ ಪರಬ್ರಹ್ಮನಿಗೆ ಮೊದಲು ಸಮರ್ಪಿಸಿ ನಂತರ ಊಟ ಮಾಡುತ್ತಾರೆ. ಅದೇ ರೀತಿ ಕರಡಿಗೆಯಲ್ಲಿ ಶಿವಲಿಂಗವನ್ನು ಧರಿಸಿದ ಶ್ರದ್ಧಾಳುಗಳು ಅದರಲ್ಲಿನ ಶಿವಲಿಂಗವನ್ನು ಅಂಗೈನಲ್ಲಿ ಹಿಡಿದು ಅದಕ್ಕೆ ಅರ್ಪಿಸಿ ನಂತರ ಭೋಜನ ಮಾಡುತ್ತಾರೆ. ಈ ರೀತಿ ನಿವೇದನ ಮಾಡುತ್ತಿರುವ ಅನೇಕ ಚಿತ್ರಗಳನ್ನು ನೋಡಬಹುದು. ಕೊರಳಲ್ಲಿ ಕರಡಿಗೆಯಲ್ಲಿ ಶಿವಲಿಂಗವನ್ನು ಧರಿಸುವುದಕ್ಕೆ ಬಹಳ ಗೌರವ ಉಂಟು. ಸಾಮಾನ್ಯವಾಗಿ ಒಂದು ಸಮಾರಂಭದಲ್ಲಿ ಗುರುಗಳು ಉಪದೇಶ ಮಾಡಿ ಆರಾಧನೆಯ ರೀತಿಯನ್ನು ವಿವರಿಸಿ ಈ ರೀತಿಯ ಶಿವಪೂಜೆ ದಾರಿಯನ್ನು ತಿಳಿಸುತ್ತಾರೆ. ಇದು ಒಂದು ಸಂಕೇತವಾಗಿ ಪರಶಿವನು ಧರಿಸಿದವರ ಆಚಾರ-ವಿಚಾರ ಶುದ್ಧವಾಗಿರಲು ಅನುಗ್ರಹಿಸುತ್ತಾನೆ ಎಂದು ನಂಬಿಕೆ.
*****
ಶಿವಪೂಜೆ ಮಾಡಲು ಏನೇನು ಸಾಧನಗಳು ಬೇಕು? ಶಿವನು ಅಭಿಷೇಕ ಪ್ರಿಯನು ಎಂದು ನಂಬಿಕೆ. ಅದಕ್ಕೆ ಮೋದಲಿಗೆ ಶುದ್ಧವಾದ ನೀರು ಬೇಕು. ಶಿವನಿಗೆ ಬಿಲ್ವಪತ್ರೆ ಅತಿ ಪ್ರಿಯ. ಆ ಪತ್ರೆ ಬೇಕು. ಇನ್ನೂ ಮುಂದೆ ಹಾಲು, ಮೊಸರು, ಜೇನು ತುಪ್ಪ, ತುಪ್ಪ, ಎಳನೀರು, ಸಕ್ಕರೆ, ಹೂವುಗಳು, ಧೂಪ, ದೀಪ, ಊದುಬತ್ತಿ, ಕರ್ಪೂರ, ನೈವೇದ್ಯಕ್ಕೆ ಪದಾರ್ಥಗಳು ಇತ್ಯಾದಿ. ಆದರೆ ಯಾವುದು ಇಲ್ಲದಿದ್ದರೂ ನೀರು, ಬಿಲ್ವ ಪತ್ರೆ, ಮತ್ತು ಏನಿಲ್ಲದಿದ್ದರೂ ನೈವೇದ್ಯಕ್ಕೆ ಒಂದು ಬೆಲ್ಲದ ತುಂಡು ಅಥವಾ ಕಲ್ಲು ಸಕ್ಕರೆಯೋ ಇತ್ಯಾದಿ ಶಿವ ಕೊಟ್ಟಿದ್ದು. ಈ ಪದಾರ್ಥಗಳಿದ್ದರೆ ಶ್ರದ್ದಾಭಕ್ತಿಗಳಿದ್ದರೆ ಶಿವಪೂಜೆ ಆಯಿತು. ಮಿಕ್ಕಿದ್ದಲ್ಲ ಇದ್ದರೂ ಇಲ್ಲದಿದ್ದರೂ ಪರವಾಗಿಲ್ಲ. ಶಿವನು ಯಾವ ಆಡಂಬರವನ್ನೂ ಕೇಳುವವನಲ್ಲ.
ಆಯಿತು. ಮೇಲೆ ಹೇಳಿದ ಎಲ್ಲವೂ ತಯಾರಾಯಿತು. ಸಮಸ್ತವೂ ಉಂಟು. ಆದರೆ ಕರಡಿಗೆಯೇ ಇಲ್ಲ. ಕರಡಿಗೆ ಇಲ್ಲ ಅಂದರೆ ಶಿವಲಿಂಗ ಇಲ್ಲ. ಶಿವಲಿಂಗವೇ ಇಲ್ಲ ಅಂದರೆ ಎಲ್ಲಿಯ ಶಿವಪೂಜೆ? ಎಲ್ಲ ವಸ್ತುಗಳಿಗಿಂತಲೂ ಅತ್ಯಂತ ಮುಖ್ಯ ಬೇಕಾದದ್ದು ಶಿವಲಿಂಗ. ಅದು ಕರಡಿಗೆಯಲ್ಲಿ ಇದೆ. ಅದನ್ನೇ ಮರೆತರೆ ಹೇಗೆ?
ಯಾವುದಾದರೂ ಸಂದರ್ಭದಲ್ಲಿ ಅತಿ ಮುಖ್ಯವಾದದ್ದನ್ನು ತರುವುದು ಮರೆತು ಬಿಟ್ಟರೆ ಶಿವಪೂಜೆಯಲ್ಲಿ ಕರಡಿಗೆಯನ್ನು ಬಿಟ್ಟಂತೆ ಎಂದು ಹೇಳುವ ರೀತಿ ಇದರಿಂದ ಬಂತು. ಮುಂದೆ ಅದರಿಂದಲೇ "ಶಿವಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ" ಎಂದು ಹೇಳುವ ಗಾದೆ ಬಂತು!
*****
ಕಾಲಕ್ರಮದಲ್ಲಿ ಯಾರೋ ಒಬ್ಬರು "ಕರಡಿಗೆ" ಪದದಲ್ಲಿನ "ಗೆ" ಬಿಟ್ಟರು! ಕರಡಿಗೆಯ ಬದಲು ಕರಡಿ ಎಂದು ಪ್ರಯೋಗವಾಯಿತು. ಶಿವಪೂಜೆಯಲ್ಲಿ ಕರಡಿ ಬಂದರೆ ಏನಾಗುತ್ತದೆ? ಅದನ್ನು ನೋಡಿದವರು ಚೆಲ್ಲಾಪಿಲ್ಲಿಯಾಗಿ ಓಡುತ್ತಾರೆ. ಅದಕ್ಕೆ ಸ್ವಾತಂತ್ರ್ಯ ಸಿಕ್ಕರೆ ಎಲ್ಲೆಂದರಲ್ಲಿ ನುಗ್ಗಿ ಎಲ್ಲವನ್ನೂ ಧ್ವಂಸ ಮಾಡುತ್ತದೆ. ಒಟ್ಟಿನಲ್ಲಿ, ಸುಖಮಯವಾಗಿ ನಡೆಯುತ್ತಿದ್ದ ಕಾರ್ಯಕ್ರಮ ಹಾಳಾಗುತ್ತದೆ. ಇದು ಶಿವಪೂಜೆಯಲ್ಲಿ ಕರಡಿ ಬಿಟ್ಟರೆ ಆಗುವ ಪರಿಣಾಮ.
ವಿಚಿತ್ರವೆಂದರೆ, ಕರಡಿಗೆ ಬಹಳ ಜನರಿಗೆ ಗೊತ್ತಿಲ್ಲ. ಆದರೆ ಕರಡಿ ಎಲ್ಲರಿಗೂ ಗೊತ್ತು. ಕರಡಿಗೆ ಬಿಟ್ಟಂತೆ ಎಂದರೆ ಅನೇಕರಿಗೆ ಅರ್ಥ ಆಗುವುದಿಲ್ಲ. ಕರಡಿ ಬಿಟ್ಟರು ಅಂದರೆ ಎಲ್ಲರಿಗೂ ಗೊತ್ತು. ಕರಡಿ ಬಿಡುವುದು ಮನಸ್ಸಿಗೆ ರಂಜಕವೂ ಹೌದು. ಈ ಕಾರಣಗಳಿಂದ "ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ" ಎನ್ನುವುದು ತಪ್ಪು ಪ್ರಯೋಗವಾದರೂ ಬಹಳ ಜನಪ್ರಿಯವಾಯಿತು. ಒಂದು ಒಳ್ಳೆಯ ಕೆಲಸ ನಡೆಯುವಾಗ ಯಾರೋ ಅಥವಾ ಏನೋ ಬಂದು ಆ ಒಳ್ಳೆಯ ಕೆಲಸ ಹಾಳಾಗುವುದನ್ನು ನಿರ್ದೇಶಿಸುವುದಕ್ಕೆ ಈ ರೂಪಾಂತರಿತ ಗಾದೆ ಉಪಯೋಗವಾಯಿತು.
ಕೊನೆಗೆ "ಶಿವಪೂಜೆಯಲ್ಲಿ ಕರಡಿಗೆ ಬಿಟ್ಟರು" ಮರೆತುಹೋಗಿ, "ಶಿವಪೂಜೆಯಲ್ಲಿ ಕರಡಿ ಬಿಟ್ಟರು" ಉಳಿದುಕೊಂಡಿತು.
ಒಬ್ಬರು ತಪ್ಪು ಪ್ರಯೋಗಿಸಿ, ಅದನ್ನೇ ಮತ್ತನೇಕರು ಮುಂದುವರೆಸಿ, ಮುಂದೆ ಆ ತಪ್ಪೇ ಸರಿ ಎಂದು ಎಲ್ಲರೂ ತಿಳಿದು, ಆ ತಪ್ಪು ಪ್ರಯೋಗವೇ ಶಾಶ್ವತವಾಗಿ ಉಳಿಯಿತು!