
ಲೋಭ: ಪಾಪಶ್ಚ ಬೀಜಂಹಿ ಮೋಹೋ ಮೂಲ೦ಚ ತಸ್ಯಹಿಅಸತ್ಯಂ ತಸ್ಯವೈ ಸ್ಕಂಧಃ ಮಾಯಾ ಶಾಖಾ ಸುವಿಸ್ತರಃದಂಭ ಕೌಟಿಲ್ಯ ಪತ್ರಾಣಿ ಕುಬುಧ್ಯಾ ಪುಷ್ಪಿತಃ ಸದಾಅನೃತಂ ತಸ್ಯವೈ ಸೌಗಂಧ: ಫಲಾ ಅಜ್ನ್ಯಾನಮೇವ ಚ
"ಪಾಪ" ಅನ್ನುವ ಹೆಮ್ಮರಕ್ಕೆ ಈ "ಲೋಭ" ಅನ್ನುವುದೇ ಬೀಜರೂಪವು. ಈ ಲೋಭವು ಮನಸ್ಸು ಎಂಬ ಮಣ್ಣಿನಲ್ಲಿ ಬಿದ್ದ ತಕ್ಷಣ ಬೇರು ಬಿಡಲಾರಂಭಿಸುತ್ತದೆ. ಲೋಭವು ಹೆಚ್ಚಿದಷ್ಟೂ ಬೇರುಗಳು ಆಳ ಮತ್ತು ವಿಶಾಲ ಆಗುತ್ತವೆ. "ಮೋಹ" ಎನ್ನುವುದೇ ಅದರ ಬೇರು. ಈ ಮರಕ್ಕೆ "ಅಸತ್ಯ" ಎನ್ನುವ ಒಂದು ದೊಡ್ಡದಾದ ಕಾಂಡವಿದೆ. "ಕಪಟತನ" (ಮಾಯಾ) ಅನ್ನುವುದು ಈ ಅಸತ್ಯ ಎನ್ನುವ ಭಾರಿ ಕಾಂಡದಿಂದ ಹೊರಡುವ ಅನೇಕ ಕೊಂಬೆಗಳು. "ದಂಭ" ಮತ್ತು "ಕುಟಿಲತೆ" ಅನ್ನುವುವು ಈ ಅಸತ್ಯವೆಂಬ ಕೊಂಬೆಗಳಲ್ಲಿ ಬೆಳೆಯುವ ಅಸಂಖ್ಯಾತ ಎಲೆಗಳು. ಆ ಅನೇಕ ಕೊಂಬೆಗಳ ಮೇಲೆ, ಎಲೆಗಳ ನಡುವೆ, "ಕುಬುದ್ಧಿ" ಎನ್ನುವ ಹೂವು ಸದಾ ಬಿಡುತ್ತದೆ. ಹೂವುಗಳಲ್ಲಿ ಸಾಮಾನ್ಯವಾಗಿ ಸುವಾಸನೆ ಇದ್ದರೆ ಈ ಕುಬುದ್ಧಿ ಅನ್ನುವ ಹೂವಿನಲ್ಲಿ "ಸುಳ್ಳು ಮಾತುಗಳು" ಎನ್ನುವ ಅನೇಕ ರೀತಿಯ ದುರ್ವಾಸನೆಗಳು ಹರಡಲು ತಯಾರು. ಒಂದು ಮರದಲ್ಲಿ ಇಷ್ಟೆಲ್ಲಾ ಇರುವಾಗ ಕಡೆಗೆ ಅದರಲ್ಲಿ ಹಣ್ಣುಗಳು ಬಲೇಬೇಕಲ್ಲ? ಈ ಪಾಪವೆಂಬ ಮರಕ್ಕೆ "ಅಜ್ಞಾನ" ಎನ್ನುವುದೇ ಹಣ್ಣುಗಳಾಗಿ ತೋರುತ್ತವೆ. ಇಂತಹ ಮರದಲ್ಲಿ ಈ ಅಜ್ಞಾನ ಅನ್ನುವ ಹಣ್ಣಿನ ಆಸೆಯಿಂದ ಕಪಟತನ, ಪಾಖಂಡತನ, ಕ್ರೌರ್ಯ, ಅಸೂಯೆ, ಮುಂತಾದ ಇತರ "ದುರ್ಗುಣ" ರೂಪಗಳ ಹಕ್ಕಿಗಳು ಬಂದು ಸೇರುತ್ತವೆ!
ಮರಗಿಡಗಳಿಗೆ ಸಾಮಾನ್ಯವಾಗಿ ವರ್ಷದಲ್ಲಿ ಕೆಲವು ತಿಂಗಳುಗಳು ಹೂವು ಮತ್ತು ಹಣ್ಣು ಬಿಡುವ ಕಾಲ. ಆದರೆ ಈ ಪಾಪವೆಂಬ ಮರದಲ್ಲಿ ವರುಷಕ್ಕೆ ಹನ್ನೆರಡು ತಿಂಗಳೂ ಕುಬುದ್ಧಿ ಎನ್ನುವ ಹೂವು ಅರಳುತ್ತದೆ! ಸದಾಕಾಲವೂ ಅಜ್ಞಾನವೆಂಬ ಹಣ್ಣು ತುಂಬಿರುತ್ತದೆ.
"ಜಂಭ" ಮತ್ತು "ದಂಭ" ಇವುಗಳಿಗೆ ವ್ಯತ್ಯಾಸವಿದೆ. ಇರುವುದನ್ನು ಹೆಚ್ಚಾಗಿ ಹೇಳಿಕೊಳ್ಳುವುದು ಜಂಭ. ಇಲ್ಲದೆ ಇರುವುದನ್ನು ಹೇಳಿಕೊಳ್ಳುವುದು ದಂಭ. ಉದಾಹರಣೆಗೆ: ಒಬ್ಬನ ಜೇಬಿನಲ್ಲಿ ಒಂದು ಸಾವಿರ ರೂಪಾಯಿ ಇದೆ. ಅವನು ಹತ್ತು ಸಾವಿರ ರೂಪಾಯಿ ಇದೆ ಎಂದು ಹೇಳಿದರೆ ಅದು ಜಂಭ ಕೊಚ್ಚಿಕೊಳ್ಳುವುದು. ಇನ್ನೊಬ್ಬನ ಜೇಬಿನಲ್ಲಿ ಒಂದು ರೂಪಾಯಿಯೂ ಇಲ್ಲ. ಅವನು ತನ್ನ ಜೇಬಿನಲ್ಲಿ ಒಂದು ಸಾವಿರ ರೂಪಾಯಿ ಇದೆ ಎಂದು ಹೇಳಿದರೆ ಅದು ದಂಭ.
"ಕುಟಿಲ" ಅಂದರೆ "ನೆಟ್ಟಗಿಲ್ಲದ್ದು" ಎಂದು ಅರ್ಥ. ಸೊಟ್ಟಗಿದೆ ಎನ್ನಬಹುದು. ಶ್ರೀಕೃಷ್ಣನ ವರ್ಣನೆಯಲ್ಲಿ "ಕುಟಿಲ ಕುಂತಲಂ ಕುವಲಯ ದಳ ನೀಲಂ" ಎನ್ನುತ್ತೇವೆ. ಇಲ್ಲಿ ಕುಟಿಲ ಕುಂತಲಂ ಅಂದರೆ "ಗುಂಗುರು ಕೂದಲು" ಎಂದು ಅರ್ಥ. ಕೆಲವರಿಗೆ, ಅದರಲ್ಲೂ ಮಕ್ಕಳಿಗೆ, ಗುಂಗುರು ಕೂದಲು ಇದ್ದರೆ ಸುಂದರ. ಆದರೆ ನಡೆ-ನುಡಿ ನೇರವಾಗಿರಬೇಕು. ವಕ್ರವಾಗಿರಬಾರದು. ಹೇಳುವುದು, ತೋರಿಸುವುದು ಒಂದು ರೀತಿ. ಆದರೆ ಅದರ ಅರ್ಥ, ಆಚರಣೆ ಇನ್ನೊಂದು ರೀತಿ. ಹೀಗಿದ್ದರೆ ಇದನ್ನೇ "ಕುಟಿಲ ನೀತಿ" ಅನ್ನುವುದು. ಕುಟಿಲ ಸ್ವಭಾವ ಇರುವವರನ್ನು ನಂಬಬಾರದು. ಮಹಾಭಾರತದ ಶಕುನಿ ಇದಕ್ಕೆ ಅತ್ಯುತ್ತಮ ಉದಾಹರಣೆ.
*****
ಸುಮನಾ ಹೇಳಿರುವ ಮೇಲಿನ ಪಾಪ ಎಂಬ ಮರದ ವಿವರಗಳು ಬಹಳ ಅರ್ಥವತ್ತಾಗಿದ್ದು ಮೊದಲ ನೋಟದಲ್ಲಿ ಅಷ್ಟು ಸುಲಭವಾಗಿ ಗೊತ್ತಾಗುವುದಿಲ್ಲ. ಆದರೆ ನಿಧಾನವಾಗಿ ಓದಿ, ನಮ್ಮ ನಮ್ಮ ಅನುಭವದ ಹಿನ್ನೆಲಿಯಲ್ಲಿ ಮೆಲಕು ಹಾಕಿದಾಗ ಅದರ ಸತ್ಯವು ನಿಚ್ಚಳವಾಗಿ ಗೋಚರಿಸುತ್ತದೆ.
"ಪದ್ಮ ಪುರಾಣ" ಸುಮಾರು ಐವತ್ತೈದು ಸಾವಿರ (55,000) ಶ್ಲೋಕಗಳಿರುವ ಒಂದು ಗ್ರಂಥ. ಏಳು (7) ಖಂಡಗಳ ಏಳು ನೂರ ಮೂರು (703) ಅಧ್ಯಾಯಗಳಲ್ಲಿ ಹರಡಿಕೊಂಡಿದೆ. ಶ್ರೀಮದ್ ಭಾಗವತಕ್ಕಿಂತ ಗಾತ್ರದಲ್ಲಿ ಮೂರುಪಟ್ಟು ದೊಡ್ಡದು. ಇಷ್ಟು ವಿಶಾಲ ಗ್ರಂಥದಲ್ಲಿರುವ ವಿಷಯಗಳ ಹರವನ್ನು ನೋಡಿದರೆ ವಿಸ್ಮಯವಾಗುತ್ತದೆ.
ಭಗವಾನ್ ವೇದವ್ಯಾಸರು ನಮಗೆ ಕೊಟ್ಟಿರುವ ಗ್ರಂಥ ಲೋಕವನ್ನು ನಮ್ಮ ಜೀವನ ಕಾಲದಲ್ಲಿ ಒಮ್ಮೆ ಸರಿಯಾಗಿ ಓದಿ ಮನನ ಮಾಡುವುದೂ ಒಂದು ದೊಡ್ಡ ಸಾಧನೆಯೇ ಆಗುತ್ತದೆ. ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಂತೂ ಇನ್ನೂ ದೂರದ ಮಾತು. ಆಚರಣೆಯಲ್ಲಿ ತರುವುದು ಒಂದು ತಪಸ್ಸೇ ಸರಿ. ಇಷ್ಟು ಕೃತಿರಚನೆ ಹೇಗಾಯಿತು ಎನ್ನುವುದು ನೋಡಿ ಕೇವಲ ಕೈ ಮುಗಿಯಬಹುದು. ಅಷ್ಟೇ. "ವ್ಯಾಸ ಪೂರ್ಣಿಮಾ" ಸಂದರ್ಭದಲ್ಲಿ ಇಂತಹ ಅನೇಕ ಗ್ರಂಥಗಳ ಕರ್ತೃವಾದ ಭಗವಾನ್ ವೇದ ವ್ಯಾಸರಿಗೆ ನಮ್ಮ ಅತ್ಯಂತ ಕೃತಜ್ಞತಾ ಪೂರ್ವಕವಾದ ಗೌರವಾದರ, ನಮನಗಳು ಸಲ್ಲಬೇಕು.