Showing posts with label Sahitya. Show all posts
Showing posts with label Sahitya. Show all posts

Wednesday, December 18, 2024

ಪಠಣ - ಮನನ - ಮಂಥನ


ಶ್ರೀ ಪುರಂದರದಾಸರ "ಹೂವ ತರುವರ ಮನೆಗೆ ಹುಲ್ಲ ತರುವ" ಪದದ ವಿಶೇಷಾರ್ಥಗಳ ವಿವರಗಳನ್ನು ನೋಡುತ್ತಾ ಕಳೆದ ಸಂಚಿಕೆಯಲ್ಲಿ "ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಎನ್ನುವ ಶೀರ್ಷಿಕೆಯಡಿ ಪರಮಾತ್ಮನು  ತನ್ನ ನಂಬಿದವರ ರಕ್ಷಣೆಗಾಗಿ ಹೇಗೆ ಅವರ ತೊಂಡನಾಗಿ, ಅವರ ಸೇವಕನಂತೆ ಚಾಕರಿಯನ್ನೂ ಮಾಡುತ್ತಾನೆ ಎಂಬುದನ್ನು ನೋಡಿದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಈಗ ಇಲ್ಲಿಯವರೆಗೆ ನಡೆದ, ನಡೆಸಿದ ಚರ್ಚೆಯ ಅವಶ್ಯಕತೆ ಮತ್ತು ಅವುಗಳ ಉಪಯುಕ್ತತೆ ಬಗ್ಗೆ ಸ್ವಲ್ಪ ನೋಡೋಣ. 

ಎಲ್ಲಾ ದೇವರನಾಮಗಳಂತೆ ಇದೂ ಒಂದು ದೇವರನಾಮ. ಎಲ್ಲ ಪದ್ಯ ಅಥವಾ ಕವನಗಳಂತೆ ಇದೂ ಒಂದು. ಇದರ ಬಗ್ಗೆ ಇಷ್ಟು ಚರ್ಚೆ ಅವಶ್ಯಕವೇ? ಇದರಿಂದ ಏನು ಉಪಯೋಗ? ಸಮಯ ವ್ಯರ್ಥವಲ್ಲವೇ? ಈ ಪ್ರಶ್ನೆಗಳು ಏಳಬಹುದು. ಇವು ಸಾಧುವಾದ ಪ್ರಶ್ನೆಗಳೇ. 

ನಮ್ಮ ಭಾರತೀಯ ದರ್ಶನಗಳಲ್ಲಿ ಅನೇಕ ರೀತಿಯ ದೃಷ್ಟಿಕೋಣಗಳಿಗೆ ಸ್ಥಾನವಿದೆ. ಸಮಾನಾಂತರವಾಗಿ ದರ್ಶನಗಳ ಜೊತೆ ಜೊತೆಯಲ್ಲಿ ಸಾಹಿತ್ಯವೂ ಬೆಳೆದಿದೆ. ಕನ್ನಡ ಸಾಹಿತ್ಯದಲ್ಲಿಯೇ ವಿಪುಲವಾದ ಜೈನ ಸಾಹಿತ್ಯ, ಬೌದ್ಧ (ಬೋಧಿಸತ್ವ ಮುಂತಾದದ್ದು) ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ಜನಪದ ಸಾಹಿತ್ಯ, ಮುಂತಾದವು ದರ್ಶನಗಳ ಬೆಳವಣಿಗೆಯಂತೆಯೇ ಸಾಹಿತ್ಯದ ಬೆಳವಣಿಗೆಗೂ ದಾರಿ ಮಾಡಿವೆ. ನಿರೀಶ್ವರವಾದದಿಂದ ಹಿಡಿದು, ಏಕವಾದ, ಜೀವ-ಬ್ರಹ್ಮ ಐಕ್ಯ, ಜೀವ-ಬ್ರಹ್ಮ ಭೇದ, ಸ್ವಲ್ಪ ಅದು-ಸ್ವಲ್ಪ ಇದು, ಇತ್ಯಾದಿ ಅನೇಕ ರೀತಿಯ ತಾರ್ಕಿಕ ನಿಲುವುಗಳು ಉಂಟು. ಹಾಗೆಯೇ ಹಳಗನ್ನಡ, ನಡುಗನ್ನಡ, ಹೊಸಗನ್ನಡ, ನವೋದಯ, ನವ್ಯ, ಬಂಡಾಯ, ನವನವೀನ, ಮತ್ತನೇಕ ಬೇರೆ ಬೇರೆ ಕಾಲಮಾನದ ಸಾಹಿತ್ಯದ ಬೆಳವಣಿಗೆಯನ್ನು ನೋಡಬಹುದು. ವಿದ್ವಾಂಸರು ಈ ವಿಷಯಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲರು. ಕ್ರಮವಾಗಿ ಅಭ್ಯಾಸ ಮಾಡದ ನಮ್ಮಂತಹ ಜನಸಾಮಾನ್ಯರಿಗೆ ಈ ವಿಷಯಗಳ ಬಗ್ಗೆ ಹೆಚ್ಚು ಹೇಳುವುದು ಕಷ್ಟ. ಆದರೂ ದರ್ಶನಗಳು ಮತ್ತು ಸಾಹಿತ್ಯ ಎಲ್ಲರಿಗೂ ಸೇರಿದುದರಿಂದ ನಾವುಗಳೂ ನಮ್ಮ ನಮ್ಮ ಅಭಿಪ್ರಾಯಗಳನ್ನು ಹೊಂದಿರಲು ಸಾಧ್ಯ. ಅಭಿಪ್ರಾಯ ಭೇದ ಅವಶ್ಯಕವಾಗಿ ಇದ್ದೇ ಇರುತ್ತದೆ.

ನಮ್ಮ ಭಾಷೆಯಂತೆಯೇ ಇತರ ಭಾರತೀಯ ಭಾಷೆಗಳಲ್ಲಿಯೂ ಇಂತಹ ವಿಶಾಲವಾದ ಸಾಹಿತ್ಯ ಅನೇಕ ಶತಮಾನಗಳಿಂದ ಸೃಷ್ಟಿ ಆಗಿದೆ. ಇದರ ಜೊತೆಗೆ ನಮಗೆ ಅನೇಕ ಪಾಶ್ಚಿಮಾತ್ಯ ಭಾಷೆಗಳ ಸಾಹಿತ್ಯವೂ ಅವುಗಳ ಮೂಲದಿಂದ ಮತ್ತು ಅದಕ್ಕೂ ಹೆಚ್ಚಾಗಿ ತರ್ಜುಮೆಗಳಿಂದ ಒದಗಿಬಂದಿದೆ. ಹೀಗಾಗಿ ಅನೇಕ ಚಿಂತನೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸಾಹಿತ್ಯ ಈಗ ನಮ್ಮ ಮುಂದಿದೆ. 

ಯಾವುದಾದರೂ ಗೇಯಗುಣವುಳ್ಳ (ಹಾಡಬಹುದಾದ) ಕೃತಿಯನ್ನು ಓದಿದಾಗ, ಹಾಡಿದಾಗ, ಅಥವಾ ಯಾರಾದರೂ ಹಾಡಿದ್ದನ್ನು ನಾವು ಕೇಳಿದಾಗ ಒಂದು ರೀತಿಯ ವಿಶೇಷ ಅನುಭವ ಆಗುತ್ತದೆ. ಇಂತಹ ಕೃತಿಗಳು ಓದು, ಬರಹ ಬಾರದ ಜನರಿಗೂ ಮನ ಮುಟ್ಟುತ್ತವೆ. ಓದು ಬರಹ ಬಂದರೂ ಆ ಕೃತಿ ರಚನೆಯಾದ ಭಾಷೆ ಬರದಿದ್ದರೆ ಅದರ ಅನುಭವ ಅದನ್ನು ಕೇಳಿ ತಾನೇ ಆಗುವುದು. ಇದು ಪಠಣ ಕ್ರಿಯೆ. ನೇರವಾಗಿ ಓದಿರಬಹುದು ಅಥವಾ ಯಾರೋ ಓದಿದಾಗ ಅಥವಾ ಹಾಡಿದಾಗ ಕೇಳಿರಬಹುದು. ಅನೇಕ ಸಿನಿಮಾ ಗೀತೆಗಳು ಎಲ್ಲರಿಗೂ ಗೊತ್ತು. ಆದರೆ ಅವುಗಳ ಭಾಷೆ ಅನೇಕರಿಗೆ ಗೊತ್ತಿಲ್ಲ. ಆ ದೃಶ್ಯವನ್ನು ಪರದೆಯ ಮೇಲೆ ನೋಡಿದಾಗ ಆ ಭಾಷೆ ಬರದಿದ್ದರೂ ನೋಡುಗನಿಗೆ ತನಗೆ ತಾನೇ ಅಷ್ಟಿಷ್ಟಾದರೂ ಅರ್ಥ ಆಗುತ್ತದೆ. ಇದು ಸಾಹಿತ್ಯದ ಮತ್ತು ಸಂಗೀತದ ಅಗಾಧ ಶಕ್ತಿಗೆ ಒಂದು ಕುರುಹು. 

ನಮಗೆ ರುಚಿಯಿಲ್ಲದ ವಿಷಯ ಯಾವ ಭಾಷೆಯಲ್ಲಿ ಹೇಳಿದರೂ ಗೊತ್ತಾಗುವುದಿಲ್ಲ. ಯಾರು ಹೇಳಿದರೂ  ಅರ್ಥವಾಗುವುದಿಲ್ಲ. ನಮ್ಮ ಭಾಷೆಯಲ್ಲಿ ಹೇಳಿದರೂ ತಿಳಿಯುವುದಿಲ್ಲ. ನಮ್ಮ ಮನಸ್ಸು ಮಿಡಿಸುವ ವಿಷಯ ಯಾವ ಭಾಷೆಯಲ್ಲಿಯೇ ಇದ್ದರೂ ಒಂದು ಹಂತ ಕೆಳ ಮಟ್ಟದವರೆಗಾದರೂ ಗೊತ್ತಾಗುತ್ತದೆ. ಮನಸ್ಸಿನ ಬೇಕು-ಬೇಡಗಳ ಸೆಳೆತ ಆ ರೀತಿ. 

ಹೀಗೆ ಓದಿದ, ಕೇಳಿದ ಅಥವಾ ಹಾಡಿದ ಕೃತಿ ಮನಸ್ಸಿನಲ್ಲಿ ಬಹಳ ಕಾಲ ನಿಂತರೆ, ಮತ್ತು ಮತ್ತೆ ಮತ್ತೆ ಕೇಳಿದರೆ, ಅದನ್ನು ಮನನ ಮಾಡಿದಂತೆ ಆಗುತ್ತದೆ. ಅದೇ ಗುಂಗಿನಲ್ಲಿ ಮುಂದಕ್ಕೆ ಯೋಚನೆ ಮಾಡಿದಾಗ ಮನಸ್ಸಿನಲ್ಲೇ ಕಡೆದು, ಕಡೆದು ಹೆಚ್ಚಿನ ತಿಳುವಳಿಕೆಗೆ ಮನಸ್ಸು ಹಾತೊರೆಯುತ್ತದೆ. ಆ ಸಮಯಾಕ್ಕೆ ಸರಿಯಾಗಿ ತಿಳಿದವರೊಡನೆ ಒಡನಾಟ ಸಿಕ್ಕರೆ ಅದು ಮಂಥನ ಕ್ರಿಯೆಗೆ ದಾರಿ ಮಾಡಿಕೊಡುತ್ತದೆ. 

ಹೊರಗಿನಿಂದ ತಿಳಿಯುವುದು ಅನುಭವ. ಒಳಗಿನಿಂದ ತಿಳಿಯುವುದು ಅನುಭಾವ. ನಿಧಾನವಾಗಿ ಹೊರಗಿನ ಅನುಭವ ಒಳಗೆ ಇಳಿದು ಮಂಥನವಾದಾಗ ಅನುಭಾವ ಆಗುತ್ತದೆ.  ಈ ರೀತಿ ಅನುಭವ-ಅನುಭಾವಗಳ ದ್ವಂದ್ವ ಕ್ರಿಯೆ ನಮ್ಮ ಮನಸ್ಸಿಗೆ ಬೇಕಾದ ವಿಷಯದಲ್ಲಿ ಹೆಚ್ಚಿನ ಮಟ್ಟದ ತಿಳುವಳಿಕೆ ಕೇಳುತ್ತದೆ. ಆಗಲೇ ಇಂತಹ ಚರ್ಚೆ ನಡೆಯುವುದು. ಯಾರಿಗೆ ಅಂತಹ ಹೆಚ್ಚಿನ ವಿಷಯಗಳು ಬೇಡ, ಅವರಿಗೆ ಅದು ಸಮಯ ವ್ಯರ್ಥ ಮಾಡಿಸುವ ಕೆಲಸ. ಆ ವಿಷಯದಲ್ಲಿ ಮುಂದೆ ತಿಳಿಯುವ ಕಾತರ ಇರುವವರಿಗೆ ಅದು ಸಮಯದ ಬಹಳ ಹೆಚ್ಚಿನ ಸದುಪಯೋಗ. ಇಂತಹ ಚರ್ಚೆಯ ಉಪಯುಕ್ತತೆ ವಾಸ್ತವವಾಗಿ ಓದುಗನ ಮನಸ್ಥಿತಿಯ ಮೇಲೆ ಅವಲಂಬಿಸುತ್ತದೆ. 

ವಾಚಕನ ಮನಸ್ಸು ಸಂಸ್ಕಾರಹೊಂದಿ, ಅವನಿಗೆ ಧರ್ಮಾಧರ್ಮಗಳ ಪರಿಜ್ಞಾನ ಒದಗಿ, ಸನ್ಮಾರ್ಗದಲ್ಲಿ ನಡೆಯಬೇಕೆಂಬ ಪ್ರವೃತ್ತಿ ಉಂಟಾಗುವುದೇ ಸಾಹಿತ್ಯದ ಪರಮ ಪ್ರಯೋಜನ. ಇದನ್ನೇ ಪ್ರಾತಃ ಸ್ಮರಣೀಯರಾಯಾದ ಪ್ರಾಚಾರ್ಯ ತಿ. ನಂ. ಶ್ರೀಕಂಠಯ್ಯ ಅವರು "ಸತ್ಪ್ರೇರಣೆ" ಎಂದು ಕರೆದಿದ್ದಾರೆ. ಓದುವಾಗ ರಸಾಸ್ವಾದವೇ ಮುಖ್ಯವಾದರೂ, ಅದರಿಂದ ಒದಗುವ ಆನಂದವೇ ಪ್ರಿಯವಾದರೂ, ಅಂತ್ಯ ಪ್ರಯೋಜನ ಅದರಿಂದ ಒದಗುವ ಸಂಸ್ಕಾರ. ಇಂತಹ ಸಂಸ್ಕಾರ ಬೆಳೆಯಲು ಭಾರತೀಯ ದರ್ಶನಗಳ ವಿವಿಧ ಶಾಖೆಗಳ ಸ್ವಲ್ಪಮಟ್ಟಿನ ಪರಿಚಯವಾದರೂ ಇದ್ದರೆ ಹೆಚ್ಚಿನ ಲಾಭ ಸಿಗುವುದು. ಇದರಿಂದ, ನಮ್ಮ ವೈಯುಕ್ತಿಕ ಒಲವು ಏನೇ ಇದ್ದರೂ, ಕೃತಿ ರಚನಾಕಾರನ ಓಟ ಎತ್ತ ವಾಲಿದೆ ಎಂದು ತಿಳಿಯಬೇಕಾಗುತ್ತದೆ. ಅದಕ್ಕೆ ಈ ರೀತಿ ಚರ್ಚೆ ಸಹಕಾರಿ. ಆದ್ದರಿಂದ ಅದು ಸಮಯದ ಸದುಪಯೋಗವೇ ಸರಿ. 

*****

ಸೃಷ್ಟಿಯಲ್ಲಿ ಅನೇಕ ತರಕಾರಿಗಳಿವೆ. ಹಣ್ಣುಗಳಿವೆ. ನಮ್ಮ ಸುತ್ತ-ಮುತ್ತ ಬೆಳೆದಿರುವ ಹಣ್ಣು, ತರಕಾರಿಗಳನ್ನು ನಾವು ನೋಡುತ್ತೇವೆ; ಉಪಯೋಗಿಸುತ್ತೇವೆ. ಕಾಣದ ನಾಡುಗಳಿಗೆ ಹೋದಾಗ ಅಲ್ಲಿ ನಾವು ಹಿಂದೆಂದೂ ಕಾಣದ ಹಣ್ಣು, ತರಕಾರಿಗಳನ್ನು ಕಾಣುತ್ತೇವೆ. ನಮ್ಮ ಪರಿಸರದಲ್ಲಿ ಇರುವ ಅನೇಕ ಹಣ್ಣು, ತರಕಾರಿಗಳಲ್ಲಿ ನಾವು ಕೆಲವನ್ನು ಉಪಯೋಗಿಸುವುದೇ ಇಲ್ಲ. ಕೆಲವನ್ನು ಹೆಚ್ಚು ಉಪಯೋಗಿಸುತ್ತೇವೆ. ಕೆಲವನ್ನು "ಇದೇನು ತರಕಾರಿ ಅಂತ ಉಪಯೋಗಿಸುತ್ತಾರಪ್ಪ!" ಎಂದು ಬೇಸರಿಸುತ್ತೇವೆ. ನಾವು ಶಾಲೆಗಳಲ್ಲಿ ಓದುತ್ತಿದ್ದಾಗ ತೊಂಡೆಕಾಯಿಯ ಬಳ್ಳಿಗಳು ಹೊಲಗಳ ಬೇಲಿಯಲ್ಲಿ ತಾನೇತಾನಾಗಿ ಬೆಳೆಯುತ್ತಿದ್ದವು. ಅದನ್ನು ಯಾರೂ ಬೆಳೆಸುತ್ತಿರಲಿಲ್ಲ. ನಾವುಗಳು ಉಪಯೋಗಿಸುತ್ತಿದ್ದ ಸ್ಲೇಟುಗಳಿಗೆ ಬಳಪದಲ್ಲಿ ಬರೆದರೆ ಚೆನ್ನಾಗಿ ಕಾಣಲೆಂದು ಅದರ ಎಲೆಗಳ ರಸ ಹಚ್ಚುತ್ತಿದ್ದೆವು. ನಮ್ಮ ಸುತ್ತಲಿನ ಪ್ರದೇಶದಲ್ಲಿ ಅದು ತರಕಾರಿ ಎಂದು ಬಳಕೆ ಇರಲಿಲ್ಲ. (ಅದನ್ನು ಹೆಚ್ಚಿ ಬೇಯಿಸಿದಾಗ ಜಿರಲೆಯಂತೆ ಕಾಣುತ್ತದೆ ಎನ್ನುವುದು ಕಾರಣ). ಬೇಲಿಯಲ್ಲಿ ಬೆಳೆದು ಹಣ್ಣಾಗಿದ್ದನ್ನು ಯಾರಾದರೂ ಹುಡುಗರು ತಿನ್ನುವುದು ಕಂಡರೆ ದೊಡ್ಡವರು ಬೈಯುತ್ತಿದ್ದರು!. ಈಗ ದುಬಾರಿ ಬೆಲೆ ಕೊಟ್ಟು ಅದನ್ನು ತಂದು, ಪಲ್ಯ ಮಾಡಿ ತಿನ್ನುತ್ತಾರೆ. ನಮಗೆ ಬೇಡ ಎಂದಮಾತ್ರಕ್ಕೆ ಬೇರೆಯವರು ಅದನ್ನು ಉಪಯೋಗಿಸಬಾರದೇ? ದರ್ಶನಗಳೂ ಅಂತೆಯೇ. ನಮಗೆ ಅದು ಪ್ರಿಯವಲ್ಲದಿರಬಹುದು. ಅದು ವೈಯುಕ್ತಿಕ ಬೇಕು-ಬೇಡ ಅನ್ನುವ ವಿಚಾರ. ಆದರೆ ಎಲ್ಲ ದರ್ಶನಗಳ ಸ್ವಲ್ಪ ಪರಿಚಯ ಇಲ್ಲದೆ ನಮ್ಮ ಜ್ನ್ಯಾನ ಪೂರ್ಣವಾಗುವುದಿಲ್ಲ. 

ದೇವರು ಇದ್ದನೋ ಇಲ್ಲವೋ, ಅವನನ್ನು ನಂಬಬೇಕೋ, ಬೇಡವೋ, ಇದು ಅವರವರಿಗೆ ಸೇರಿದ ವಿಚಾರ. ಆದರೆ ಸಾಹಿತ್ಯ ರಸಾಸ್ವಾದನೆಯ ದೃಷ್ಟಿಯಿಂದಲಾದರೂ ಇಂತಹ ಚರ್ಚೆ ಅತ್ಯಂತ ಅವಶ್ಯಕ ಎನಿಸುತ್ತದೆ. 

ಶ್ರೀಪುರಂದರದಾಸರಂತಹ ವರಕವಿಗಳು ಸೃಷ್ಟಿ ಮಾಡಿರುವ ಸಾಹಿತ್ಯದ ಗಾತ್ರ ಮತ್ತು ಸತ್ವ ನೋಡಿದರೆ ವಿಸ್ಮಯವಾಗುತ್ತದೆ. ಅನೇಕ ಶತಮಾನಗಳು ಕಳೆದರೂ ಅವು ಇನ್ನೂ ಜನಪ್ರಿಯವಾಗಿವೆ. ಆದಕಾರಣ ಅವುಗಳ ಆಳ ತಿಳಿಯುವ ಪ್ರಯತ್ನ ಬೇಕು. ದೈಹಿಕವಾಗಿ ಚೆನ್ನಾಗಿ ಕಾಣಬೇಕು ಎಂದು ನಾವು ಎಷ್ಟು ಕಸರತ್ತು ಮಾಡುತ್ತೇವೆ! ಬೌದ್ಧಿಕವಾಗಿ ಬೆಳೆಯಲೂ, ಚೆನ್ನಾಗಿ ತೋರಲೂ ಸ್ವಲ್ಪ ಪ್ರಯತ್ನ ಪಡಲೇಬೇಕಲ್ಲವೇ? 

ಬುದ್ಧಿವಂತರಿಗೆ ಕಾವ್ಯ, ಶಾಸ್ತ್ರ ವಿಷಯಗಳ ಚರ್ಚೆ, ವಿನೋದಗಳಿಂದ ಕಾಲ ಕಳೆಯುತ್ತದೆ. ಮೂರ್ಖರಿಗೆ ಜೂಜು-ಕುಡಿತ ಮೊದಲಾದ ವ್ಯಸನಗಳಿಂದ, ನಿದ್ರೆಯಿಂದ, ಇಲ್ಲವೇ ಜಗಳದಿಂದ ಕಾಲ ಹರಣವಾಗುತ್ತದೆ. ಹೀಗೆಂದು ಒಂದು ಜನಪ್ರಿಯ ಸುಭಾಷಿತ ಹೇಳುತ್ತದೆ. 

ಕಡೆಗೆ ಪ್ರತಿಯೊಬ್ಬನೂ ತನಗೆ ವಿಹಿತವಾದುದನ್ನೇ ಆಯ್ದುಕೊಳ್ಳುತ್ತಾನೆ. ಆ ಸ್ವಾತಂತ್ರ್ಯ ಎಲ್ಲರಿಗೂ ಉಂಟು. ಅಂತಹ ಸ್ವಾತಂತ್ರ್ಯ ಸಮಾಜಘಾತಕವಾಗದಿದ್ದರೆ ಸರಿ. 

*****

ಅನೇಕ ಜ್ಞಾನ ಪ್ರಕಾರಗಲ್ಲಿ ಆಳವಾದ ಪಾಂಡಿತ್ಯ ಪಡೆದು, ಸಾವಿರಾರು ಶಿಷ್ಯರನ್ನು ತಯಾರು ಮಾಡಿ, ಅವರುಗಳು ಗುರುಗಳಾಗುವುದನ್ನೂ ಕಂಡು, ಇನ್ನೂ ಜ್ಞಾನಪ್ರಸಾರ ಮಾಡುತ್ತಾ ಸಮಾಜದ ಹೆಚ್ಚಿನ ಮನ್ನಣೆಗೆ ಪಾತ್ರರಾದ ಹಿರಿಯ ಸ್ನೇಹಿತರೊಬ್ಬರು "ಹೂವೀಳ್ಯ" ಬಗ್ಗೆ ಕೇಳಿದ ಪ್ರಶ್ನೆಯೊಂದು "ಎಣ್ಣೆ-ಅರಿಶಿನದಿಂದ ಹೂವೀಳ್ಯದವರೆಗೆ" ಎಂದು ಪ್ರಾರಂಭವಾದ ಈ ಸಂಚಿಕೆಗಳು ಇಲ್ಲಿಯವರೆಗೆ ಬರಲು ಪ್ರೇರಣೆ ನೀಡಿತು. ಅವರಿಗೆ ಅನಂತ ಕೃತಜ್ಞತೆಗಳು. 

Monday, March 4, 2024

ಸಿನಿಮಾ ಮತ್ತು ಜೂಜಿನ ಹಾಡುಗಳಲ್ಲಿ ಹಾಸ್ಯ ಸಾಹಿತ್ಯ


ಸಾಹಿತ್ಯ ರಸಾಸ್ವಾದನೆಗೆ ದೊಡ್ಡ ದೊಡ್ಡ ಗ್ರಂಥಗಳನ್ನೇ ಹುಡುಕಿಕೊಂಡು ಹೋಗಬೇಕಾಗಿಲ್ಲ. ನಮ್ಮ ದಿನನಿತ್ಯದ ಬದುಕಿನಲ್ಲೇ ಅಲ್ಲಲ್ಲಿ ಸೊಗಸಾದ ಸಾಹಿತ್ಯವನ್ನು ಕಾಣಬಹದು. ಹತ್ತನೆಯ ಶತಮಾನದ ಬಹು ಖ್ಯಾತಿಯ ದಾರ್ಶನಿಕ ಆಚಾರ್ಯ ಅಭಿನವ ಗುಪ್ತನ ಗುರುಗಳೊಲ್ಲೊಬ್ಬನಾದ ಭಟ್ಟ ತೌತ (ಭಟ್ಟ  ತಾತ) ತನ್ನ "ಕಾವ್ಯ ಕೌತುಕ" ಗ್ರಂಥದಲ್ಲಿ "ಪ್ರತಿಭೆ" (Talent) ಎನ್ನುವ ಪದಕ್ಕೆ ಒಂದು ಸೊಗಸಾದ ಅರ್ಥ ಕೊಟ್ಟಿದ್ದಾನೆ. "ಪ್ರಜ್ಞಾ ನವನವೋಲ್ಲೇಖಶಾಲಿನೀ ಪ್ರತಿಭಾ ಮತಾ, ತದನುಪ್ರಾಣನಾಜೀವದ್ ವರ್ಣನಾ ನಿಪುಣಃ ಕವಿ" ಎಂದು ಪ್ರತಿಭೆಯನ್ನೂ ಕವಿಯನ್ನೂ ಜೋಡಿಸುತ್ತಾನೆ. ಪ್ರತಿಭೆ ಎಂದರೆ ಅನುಕರಣೆ ಅಲ್ಲ. ಹೊಸದನ್ನು ಮತ್ತೆ ಮತ್ತೆ ತಕ್ಷಣದಲ್ಲೇ ಹೊಸೆಯುವ ಸಾಮರ್ಥ್ಯಕ್ಕೆ "ಪ್ರತಿಭೆ" ಎಂದು ಹೆಸರು. ಅದರ ಆಧಾರದ ಮೇಲೆ ಕೃತಿ ರಚನೆ ಮಾಡಬಲ್ಲವನು ಕವಿ. ಇಂತಹ ಆ ಗಳಿಗೆಯಲ್ಲಿ ತಯಾರಿಸಿದ ವಸ್ತುವೇ ಒಂದು ರೀತಿಯ ಕವನ ಅಥವಾ ಕಾವ್ಯ. ಅಂದಮಾತ್ರಕ್ಕೆ ಬೇರೆ ರೀತಿಯ ಕೃತಿ ಕವನ ಅಥವಾ ಕಾವ್ಯ ಅಲ್ಲವೆಂದಲ್ಲ. ಒಟ್ಟಿನಲ್ಲಿ ಕಾವ್ಯ ಪ್ರತಿಭೆ ಕಾರಂಜಿಯಂತೆ ಮತ್ತೆ ಮತ್ತೆ ಪುಟಿದೇಳುತ್ತಿರಬೇಕೆನ್ನುವುದು ಮುಖ್ಯ. ಅದು ಎಂದೋ ಒಮ್ಮೆ ಬರುವದಲ್ಲ. ಕವಿಗೆ ಇಂತಹ ಕರ್ತೃತ್ವ ಶಕ್ತಿ ಸದಾಕಾಲವೂ ಇರಬೇಕು. 

ನಮ್ಮ ಸುತ್ತ ಇರುವ ಅನೇಕರಿಗೆ ಇಂತಹ ಪ್ರತಿಭೆ ಇರುವುದನ್ನು ನಾವು ಕಾಣುತ್ತೇವೆ. ಕೆಲವು ಸಾರ್ಥಕವಾಗುತ್ತವೆ. ಕೆಲವು ಅನ್ಯಾಯವಾಗಿ ಸೋರಿಹೋಗುತ್ತವೆ. ಅದೇ ಕ್ಷಣದಲ್ಲಿ ಹೊಸೆದ ಕೆಲವು ತಮಾಶೆಯಾದ ಕವನಗಳನ್ನು ನೋಡೋಣ. 

ಐವತ್ತು, ಅರವತ್ತು, ಎಪ್ಪತ್ತರ ದಶಕದಲ್ಲಿ ಸದಭಿರುಚಿಯ ಸಿನಿಮಾ ಚಿತ್ರಗಳು ಹೇರಳವಾಗಿ ಬರುತ್ತಿದ್ದವು. ಸಿನಿಮಾ ಮತ್ತು ನಾಟಕಗಳಿಗೆ ಕಥೆ, ಗೀತೆ ಮತ್ತು ಸಂಭಾಷಣೆ ಬರೆಯುತ್ತಿದ್ದವರು ಬಹುತೇಕ ಸಾಹಿತಿಗಳೂ, ವಿದ್ವಾಂಸರೂ ಆಗಿರುತ್ತಿದ್ದರು. ನಟರು ಮತ್ತು ನಿರ್ದೇಶಕರು ಸಾಹಿತ್ಯ-ಸಂಗೀತಗಳ ಉತ್ತಮ ಪರಿಚಯವುಳ್ಳ ಕಲಾವಿದರಾಗಿರುತ್ತಿದ್ದರು. ಈ ಕಾರಣದಿಂದ ಸಿನಿಮಾ ಗೀತೆಗಳು ಮತ್ತು ಸಂಭಾಷಣೆಗಳು ಉತ್ತಮ ದರ್ಜೆಯ ಸಾಹಿತ್ಯವೇ ಆಗಿರುತ್ತಿತ್ತು. ಇವುಗಳ ಬಗ್ಗೆ ಸಮಾಜದಲ್ಲಿ ಅತ್ಯಂತ ಗೌರವ ಇರುತ್ತಿತ್ತು. ಕೆಳಗೆ ಕೊಟ್ಟಿರುವ ಸಂದರ್ಭಗಳು ಕೇವಲ ಲಲಿತ ಹಾಸ್ಯ ತೋರಿಸುವ ಉದಾಹರಣೆಗಳೇ ಹೊರತು ನಾಟಕ ಮತ್ತು ಸಿನಿಮಾ ಸಾಹಿತ್ಯದ ವಿಶ್ಲೇಷಣೆ ಅಲ್ಲವೇ ಅಲ್ಲ. 

*****

ಅರವತ್ತು-ಎಪ್ಪತ್ತರ ದಶಕದ ಸಂಧಿಕಾಲ. ದೂರದ ಹಳ್ಳಿ ವಾಸಿ ದಂಪತಿಗಳು ತಮ್ಮ ಮಗನನ್ನು ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ವಿದ್ಯಾಪೀಠವೊಂದಕ್ಕೆ ಕರೆದು ತಂದು ಸೇರಿಸಿದರು. ಹತ್ತು ವಯಸ್ಸಿನ ಹುಡುಗ ಬಹಳ ಚೂಟಿಯಾಗಿದ್ದ. ಎರಡೇ ದಿನದಲ್ಲಿ ಗುರುಗಳ ಪ್ರೀತಿ ಸಂಪಾದಿಸಿದ. ಗುರುಕುಲವಾದ್ದರಿಂದ ಊಟ, ವಸತಿ ಅಲ್ಲಿಯೇ. ಬೆಳಗ್ಗೆ ಎಂಟರಿಂದ ಮಧ್ಯಾಹ್ನ ಹನ್ನೆರಡರವರೆಗೆ ಪಾಠ. ಹನ್ನೆರಡರಿಂದ ಎರಡು ಘಂಟೆಯವರೆಗೆ ಬಿಡುವು. ಆಗ ಮಧ್ಯಾಹ್ನ ಒಂದು ಗಂಟೆಗೆ ಎಲ್ಲರಿಗೂ ಸೊಗಸಾದ ಊಟ. ಮಧ್ಯಾಹ್ನ ಎರಡರಿಂದ ಸಂಜೆ ಐದು ಗಂಟೆಯವರೆಗೆ ಮತ್ತೆ ಪಾಠ. ನಂತರ ಬಿಡುವು. ರಾತ್ರಿ ಊಟದ ನಂತರ ಸ್ವಂತ ವಿದ್ಯಾಭ್ಯಾಸ. ಹೀಗಿತ್ತು ದಿನಚರಿ. 

ಬೆಳಗಿನ ಪಾಠದಲ್ಲಿ ಈ ವಿದ್ಯಾರ್ಥಿ ಎಲ್ಲರಿಗಿಂತ ಮುಂದು. ಚೆನ್ನಾಗಿ ಊಟ ಹೊಡೆಯುತ್ತಿದ್ದ ಸಹ. ಆದರೆ ಮಧ್ಯಾನ್ಹದ ಪಾಠದ ಸಮಯದಲ್ಲಿ ಆಗಾಗ ಕೆಲವು ದಿನ ಅವನ ಪತ್ತೆ ಇಲ್ಲ. ಊಟದ ನಂತರ ಎಲ್ಲಿ ಹೋಗುತ್ತಾನೆ ಎಂದು ಯಾರಿಗೂ ಗೊತ್ತಿಲ್ಲ. ಬರಬರುತ್ತ ಮಧ್ಯಾಹ್ನ ಅವನು ಪಾಠಕ್ಕೆ ಬರುವುದೇ ನಿಂತುಹೋಯಿತು. ಗುರುಗಳಿಗೆ ಮೊದಲು ಕಸಿವಿಸಿ. ನಂತರ ಬಹಳ ಕೋಪ ಬಂತು. ಒಂದು ದಿನ ಕೊಟ್ಟ ವಿಷಯದ ಮೇಲೆ ಕವನ ಕಟ್ಟುವ ರೀತಿಯ ಬಗ್ಗೆ ಬೆಳಿಗ್ಗೆ ಪಾಠವಾಯಿತು. ಮಧ್ಯಾನ್ಹದ ಪಾಠಕ್ಕೆ ಈ ಹುಡುಗ ಗೈರು. ಗುರುಗಳು ಕಾದಿದ್ದು ಅವನು ಸಂಜೆ ಗುರುಕುಲಕ್ಕೆ ಬಂದಾಗ ಹಿಡಿದರು. "ಎಲ್ಲಿ ಹೋಗಿದ್ದೆಯೋ, ಭಡವ!" ಎಂದು ಜಬರಿಸಿ ಕೇಳಿದರು. ಮೊದಲು ಹುಡುಗ ಏನೂ ಹೇಳಲಿಲ್ಲ. ಬಲವಂತ ಮಾಡಿದಾಗ ಹೇಳಿದ:

ಗರಗರನೆ ತಿರುಗಿ ಹಿಮಗಿರಿಗೆ ಎರಗಿ 
ಉಮೆಯನ್ನು ಕಂಡು ಬಂದೆ
ಸ್ವಪ್ನದಲಿ ಊರ್ವಶಿ ಮೇನಕೆಯ ನರ್ತನವ 
ಕಂಡು ಆನಂದ ನಂದ ಎಂದೆ

ನಟರಾಜನಿಗೆ ಸಂಪಿಗೆಯ ಗೀತಾಂಜಲಿಯ 
ಕೊಟ್ಟು ಸಂತೋಷದಿಂದ ಬಂದೆ 
ಶಿವಾಜಿ ಕಂಡ ಭಾರತದ ಕಲ್ಪನೆಯ ನೋಡಿ 
ಸಾಗರದಿ ಮಿಂದೆ ಎಂದೆ  

ಪ್ರಭಾತದಲಿ ಲಕ್ಷ್ಮಿಯನು ಕಂಡು ಜೈಕಾರ ಹಾಕಿ 
ಕಪಾಲೀಶ್ವರನ ದರುಶನವ ಮಾಡಿ 
ಅಲಂಕಾರ ಸಂಗಮದ ಸೊಗಸನ್ನು ಕಂಡು 
ಕೆಂಪಗಿಲ್ಲಿ ಬಂದು ನಿಂತೆ!

ಹುಡುಗನಿಗೆ ಚಿಕ್ಕ ವಯಸ್ಸು. ಸಿನಿಮಾ ನೋಡುವ ಹುಚ್ಚು. ಮಧ್ಯಾನ್ಹ ಊಟದ ನಂತರ ಪಾಠಕ್ಕೆ ಚಕ್ಕರ್ ಹಾಕಿ ಮ್ಯಾಟಿನಿ ಶೋ ನೋಡಲು ಹೋಗುತ್ತಿದ್ದ. ಗುರುಗಳು ಕೇಳಿದಾಗ ಬೆಳಗಿನ ಪಾಠದ ಪ್ರಭಾವದಿಂದ ಸಿನಿಮಾ ಮಂದಿರಗಳ ಹೆಸರಿನಲ್ಲೇ ಕವಿತೆ ಮಾಡಿದ!

ಹಿಮಾಲಯ (ಹಿಮಗಿರಿ), ಉಮ, ಸಪ್ನಾ, ಊರ್ವಶಿ, ಮೇನಕಾ, ನರ್ತಕಿ, ಆನಂದ, ನಂದಾ, ನಟರಾಜ, ಸಂಪಿಗೆ, ಗೀತಾಂಜಲಿ, ಸಂತೋಷ್, ಶಿವಾಜಿ, ಭಾರತ್, ಕಲ್ಪನ, ಸಾಗರ್, ಪ್ರಭಾತ್, ಲಕ್ಷ್ಮಿ, ಜೈಹಿಂದ್ (ಅಥವಾ ಜಯಶ್ರೀ), ಕಪಾಲಿ, ಅಲಂಕಾರ್, ಸಂಗಮ್, ಇವು ಆಗ ಇದ್ದ ಕೆಲವು ಚಿತ್ರಮಂದಿರಗಳ ಹೆಸರುಗಳು.  ಕೆಲವು ಈಗ ಇಲ್ಲ. ಮೊದಲಲ್ಲಿ "ಹಿಮಗಿರಿಗೆ ಎರಗಿ ಉಮೆಯನ್ನು ಕಂಡು ಬಂದೆ" ಎಂದಾಗ ಎರಡು ಚಿತ್ರಮಂದಿರದ ಜೊತೆಗೆ ಹಿಮವಂತನ ಮಗಳು ಪಾರ್ವತೀ (ಉಮಾ) ಎನ್ನುವ ಧ್ವನಿ. ಕೊನೆಯಲ್ಲಿ "ಕೆಂಪಗಿಲ್ಲಿ ಬಂದು ನಿಂತೆ" ಅನ್ನುವುದು ಕೆಂಪೇಗೌಡ ಚಿತ್ರಮಂದಿರವೂ ಆಗಬಹುದು; ಅಥವಾ ಬಿಸಿಲಲ್ಲಿ ಅಲೆದು ಮುಖ ಕೆಂಪಗಾಯಿತು ಎಂದೂ ಇರಬಹುದು!  

ಗುರುಗಳು ಕಷ್ಟಪಟ್ಟು ಅವನು ಪಾಠ ತಪ್ಪಿಸಿ ಸಿನಿಮಾ ನೋಡುವುದನ್ನು ಬಿಡಿಸಿದರಂತೆ! ಮುಂದೆ ಅವನ ಪ್ರತಿಭೆ ವಿದ್ಯಾಭಾಸದ ಕಡೆ ಪೂರ್ತಿ ತಿರುಗಿ ಹೆಸರಾಂತ ವಿದ್ವಾಂಸ ಆದನಂತೆ.  

*****

ಮಾನ್ವಿ ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ ಒಂದು ಪಟ್ಟಣ. ಹರಿದಾಸ ಪಂಥದ ಶ್ರೇಷ್ಠ ದಾಸರಾದ ಜಗನ್ನಾಥ ದಾಸರ ಸ್ಥಳ. ಈಗಲೂ ಹರಿದಾಸ ಪಂಥದ ಅನೇಕರು ಅಲ್ಲಿ ವಾಸವಾಗಿದ್ದಾರೆ. ನಿಷ್ಠರಾದ ಕೆಲವು ಮಿತ್ರರಿಗೆ ಇಸ್ಪೀಟ್ ಆಡುವ ಹುಚ್ಚು ಅಂಟಿಕೊಂಡಿತ್ತು. ಅತಿಯಾಗಿ ಕುಡಿದರೆ ಪಂಚಾಮೃತವೂ ಕೆಟ್ಟದೇ. ಅಂತಹದರಲ್ಲಿ ಜೂಜಿನ ವಿಷಯ ಹೇಳುವುದೇ ಬೇಡ. ಬಾಕಿಯಂತೆ ಒಳ್ಳೆಯವರೂ, ತಿಳಿದವರೂ ಆದರೂ ಇಸ್ಪೀಟಿನ ಎಲೆಯ ಆಟದ ಖಯಾಲಿ ಕಾರಣ ಸ್ನೇಹಿತರು ಪ್ರತಿದಿನ ಸೇರಿ ಆಟ ಆಡುವುದು. ಹಣ ಕಟ್ಟಿ ಆಡುವಾಗ ಕಳೆದುಕೊಳ್ಳುವುದೇ ಹೆಚ್ಚು.  

ಕೆಲವು ದಶಕಗಳ ಹಿಂದೆ ಅಲ್ಲಿ ವಾಸವಿದ್ದ ಇಸ್ಪೀಟ್ ಸ್ನೇಹಿತರು ಒಂದು ದಿನ ಆಡಲು ಶುರು ಮಾಡಿದರು. ಮಾನ್ವಿ ಗೋವಿಂದ ದಾಸರೆಂಬುವರು ಒಂದು ಆಟ ಸೋತರು. ಪಕ್ಕದಲ್ಲಿದ್ದವರು 'ದಾಸರೇ, ಆಟ ಸೋತಿರಲ್ಲ!" ಎಂದರು. "ಏನು ಮಾಡುವುದು? ರಾಣಿ ಕೈ ಕೊಟ್ಟಳು!" ಎಂದರು ಅವರು. ಇಸ್ಪೀಟ್ ರಾಣಿ ಎಲೆಗಾಗಿ ಕಾದಿದ್ದು, ಆ ಎಲೆ ಬರದೇ ಸೋತೆ ಎಂದರು. ಇದರ ಮೇಲೆ ಒಂದು ಹಾಡು ಮಾಡಿ ಎಂದರು ಮತ್ತೊಬ್ಬರು. ಮಾನ್ವಿ ಶಾಮಸುಂದರ ದಾಸರು ತಾಯಿ ಮಹಾಲಕ್ಷ್ಮಿಯನ್ನು ಸಂಬೋಧಿಸಿ ಒಂದು ಸೊಗಸಾದ ದೇವರನಾಮವನ್ನೇ ಮಾಡಿ ಹೀಗೆ ಹಾಡಿದರು:

ಜಾಣೆ ನಂಬಿದೆ ಇಸ್ಪೀಟ್ ರಾಣೀ ನೀ ಒಲಿದೆನ್ನ 
ಪಾಣಿಯೊಳಗೆ ಬಂದು ಕಾಣಿಸಮ್ಮ 
ವಾಣಿ ಶ್ರೀಲಕುಮೀಶ ರುದ್ರಾಣಿಯರಿಗಿಂತ 
ಕ್ಷೋಣಿಯೊಳಗೆ ಬಹು ಮಾನ್ವಿತೆ ನೀನಮ್ಮ 

ಜನಕನು ಗಳಿಸಿದ ಧನವೆಲ್ಲ ಕಳಕೊಂಡೆ 
ದನಕರು ಹೊಲ-ಮನೆಯನು ಮಾರಿದೆ 
ಜನರೊಳಗಪಹಾಸ್ಯಕ್ಕೊಳಗಾದೆ ಕೇಳಮ್ಮ 
ಮಡದಿ ಮಕ್ಕಳ ಕೈಗೆ ಕೊನೆಗೆ ಪರಕೆ ಕೊಟ್ಟೆ 

ಉಣಲು ಅನ್ನವ ಕಾಣೆ ಉಡಲು ವಸ್ತ್ರವ ಕಾಣೆ 
ಕಡುಕಷ್ಟ ಕಡಲೊಳು ಮುಳುಗಿದೆನಮ್ಮ 
ಪೊಡವಿಯೊಳ್ ನಿನ್ ಹೊರತು ಕಡೆಹಾಯಿಸುವಂಥ 
ಒಡೆಯರ ಕಾಣೆ ಕೈಪಿಡಿದು ರಕ್ಷಿಸಮ್ಮ 

ಎಷ್ಟಂತ ಹೇಳಲಿ ಮಡದಿಯ ಗೋಳಾಟ 
ತಾಳಿ ಹೊರತು ಎಲ್ಲ ಹಾಳಾಯಿತು 
ಸಾಲ ಬಹಳಾಯ್ತು ಜೋಳಿಗೆ ಬಂದಿತು 
ಕೂಳಿಗೆ ಮನೆಮನೆ ಚಾಲುವರಿದೆನಮ್ಮ 

ಅಕ್ಕರದಲ್ಲಿ ಎರಡೆಕ್ಕದೊಳಗೆ ಬಂದು 
ಫಕ್ಕನೆ ನೀ ಎನ್ನ ಕರದೊಳು ಬಾರಮ್ಮ 
ಮುಕ್ಕಣ್ಣ ಸಖ ತನ್ನ ಬೊಕ್ಕಸದೊಳಗಿನ 
ರೊಕ್ಕ ಹಾಕಲು ಅವನ ಲೆಕ್ಕಿಸೆ ನಾನಮ್ಮ 

ಕಾಮಿತದಾಯಿನಿ ಕಾಮಿನಿ ಶಿರೋಮಣಿ 
ಶಾಮಸುಂದರ ಸಾರ್ವಭೌಮನ ರಾಣಿ 
ಶ್ರೀಮಂತ ಜೋಕರನ ಪ್ರೇಮದ ಭಗಿನಿಯೆ 
ನಾ ಮೊರೆ ಹೊಕ್ಕೆನು ನೀ ದಯ ಮಾಡು ತಾಯೆ 

ಜೂಜಿನ ನಷ್ಟಕ್ಕೆ ಸಿಲುಕಿ ಮನೆ, ಹೊಲ, ಪಶು ಸಂಪತ್ತು, ಚಿನ್ನ-ಬೆಳ್ಳಿ ಎಲ್ಲ ಮಾರಿ ಕಳಕೊಂಡು, ಹೆಂಡತಿ ಮಕ್ಕಳ ಹೀನಾಯ ಸ್ಥಿತಿಗೆ ಕಾರಣನಾದೆ. ಸಾಲಗಾರನಾಗಿ ಮನೆ ಮನೆ ತಿರುಗಿ ಭಿಕ್ಷೆ ಬೇಡುವ ಸ್ಥಿತಿ ಬಂತು. ಹೀಗಿದೆ ನನ್ನ ಸ್ಥಿತಿ. ನನ್ನ ಕಾಪಾಡಲು ಯಾರಿಗೂ ಸಾಧ್ಯವಿಲ್ಲ. ನೀನೇ ನನಗೆ ಆಟದಲ್ಲಿ ಬೇಕಾದ ಎಲೆಯಾಗಿ ಬಂದು, ಕೈಯಲ್ಲಿ ಕುಳಿತು, ಗೆಲ್ಲಿಸಿ, ಈ ಕಷ್ಟಗಳಿಂದ ಪಾರು ಮಾಡು ಎಂದು ಮೊರೆ ಇಡುತ್ತಾರೆ. 

ಪ್ರಪಂಚದಲ್ಲಿ ಎಲ್ಲರಿಗಿಂತ ಶ್ರೀಮಂತ ಶಿವನ ಮಿತ್ರನಾದ ಕುಬೇರ. ಅವನೇ ಆಟಕ್ಕೆ ಬಂದು ತನ್ನ ಖಜಾನೆಯಲ್ಲಿ ಇರುವ ಎಲ್ಲ ಹಣವನ್ನೂ ಪಣಕ್ಕಿಡುತ್ತಾ ಹೋಗಲಿ. ನಿನ್ನ ಕರುಣೆ ಇದ್ದರೆ, ನೀನು ಬೇಕಾದ ಎಲೆಯಾಗಿ ನನ್ನ ಕಯ್ಯಲ್ಲಿ ಬಂದು ಕೂಡುತ್ತಿದ್ದರೆ, ನಾನು ಕುಬೇರನನ್ನೂ ಲೆಕ್ಕಿಸದೆ ಗೆಲ್ಲುತ್ತ ಹೋಗುತ್ತೇನೆ ಎನ್ನುತ್ತಾರೆ.!

ಕೊನೆಯ ನುಡಿಯಲ್ಲಿ ಅವರ ಮತದ ವಿಶೇಷ ಪ್ರಮೇಯ ಒಂದನ್ನು ಹೇಳುತ್ತಾರೆ. ಮಹಾಲಕ್ಷ್ಮಿ ಕೇಳಿದ್ದನ್ನು ಕೊಡುವ ಶಕ್ತಿಯುಳ್ಳ ಕಾಮಿತದಾಯಿನಿ. ಮೂರು ಲೋಕಗಲ್ಲಿಯೂ ಅತಿ ಶ್ರೇಷ್ಠ ಮಹಿಳೆ. ಶಾಮಸುಂದರನಾದ ಶ್ರೀ ಮಹಾವಿಷ್ಣುವಿನ ಮಹಾರಾಣಿ. ಹೀಗೆಂದು ಹೇಳಿದಮೇಲೆ ಅವಳನ್ನು ಶ್ರೀಮಂತ ಜೋಕರನ ಸೋದರಿ ಎಂದು ಸಂಬೋಧಿಸುತ್ತಾರೆ. ಲಕ್ಷ್ಮಿ ಹೇಗೆ ಸೋದರಿ ಆದಾಳು? 

ಮಹಾಲಕ್ಷ್ಮಿಗೆ ಶ್ರೀ, ಭೂ, ದುರ್ಗಾ ಎಂದು ಮೂರು ರೂಪಗಳು. ಶ್ರೀ ಕೃಷ್ಣ ಇಸ್ಪೀಟ್ ಆಟದ ಜೋಕರ್ ಇದ್ದಂತೆ. ಅವನು ಮಹಾಭಾರತದಲ್ಲಿ, ಭಾಗವತದಲ್ಲಿ ಮಾಡದಿದ್ದ ಕೆಲಸವೇ ಇಲ್ಲ. "ಪಾಂಡವರ ಮನೆಯಲ್ಲಿ ಕುದುರೆಗಳ ತಾ ತೊಳೆದು ಪುಂಡರೀಕಾಕ್ಷ ತಾ ಹುಲ್ಲನು ತಿನಿಸಿದ". ಪಾರ್ಥನಿಗೆ ಸಾರಥಿಯಾಗಿ "ಪಾರ್ಥಸಾರಥಿ" ಸಹ ಆದ. ರಾಜಸೂಯ ಯಾಗದಲ್ಲಿ ಎಲ್ಲ ಅತಿಥಿಗಳು ಊಟ ಮಾಡಿದ ಎಂಜಲು ಎಲೆಯನ್ನೂ ಎತ್ತಿದ. ಕಡೆಗೆ ಅದೇ ಯಾಗದಲ್ಲಿ ಆಗ್ರ ಪೂಜೆಯನ್ನೂ ಸ್ವೀಕರಿಸಿದ! ಆದ್ದರಿಂದ ಆಳಿನಿಂದ ಹಿಡಿದು ಅರಸನ ವರೆಗೆ ಎಲ್ಲ ಪಾತ್ರಗಳನ್ನೂ ನಿಭಾಯಿಸಿದ. ಇಸ್ಪೀಟ್ ಆಟದಲ್ಲಿ ಜೋಕರನೂ ಹಾಗೇ ಅಲ್ಲವೇ? ಅದರಿಂದ ಅವನು ಮಹಾಲಕ್ಷ್ಮಿಯ ಗಂಡನಾದ ಶ್ರೀಮಂತ ಜೋಕರ. ಮಹಾಲಕ್ಷ್ಮಿಯು ದುರ್ಗಾ ರೂಪದಿಂದ ದೇವಕಿಯ ಏಳನೇ ಗರ್ಭವನ್ನು ವಸುದೇವನ ಇನ್ನೊಬ್ಬ ಹೆಂಡತಿ ರೋಹಿಣಿಯಲ್ಲಿ ಸೇರಿಸಿ ತಾನೇ ದುರ್ಗಾ ರೂಪದಿಂದ ಕಂಸನಿಗೆ ಬೇಕೆಂದೇ ಸಿಕ್ಕಳು. ಆದರೆ ಅವನಿಗೆ ದಕ್ಕದೆ ತಪ್ಪಿಸಿಕೊಂಡಳು. ನಂತರ ಶ್ರೀಕೃಷ್ಣನ ಜನನವಾಯಿತು. ಆದ್ದರಿಂದ ಅವಳು ಕೃಷ್ಣನ ಪ್ರೇಮದ ಭಗಿನಿಯಾದಳು! ಇದನ್ನೇ ನಿರ್ದೇಶಿಸುತ್ತಾರೆ ಕೊನೆಯ ನುಡಿಯಲ್ಲಿ. 

ಈ ಹಾಡು ಯು ಟ್ಯೂಬಿನಲ್ಲಿ ಲಭ್ಯವಿದೆ. ಈ ಕೆಳಕಂಡ ಲಿಂಕ್ ನಲ್ಲಿ ಕೇಳಬಹುದು:

 https://www.youtube.com/watch?v=DcZCBS8L0fI

ಲಿಂಕ್ ಕಾಪಿ ಪೇಸ್ಟ್ ಮಾಡಿ ಕೇಳಿ ನೋಡಿ.