ಈ ಹಿಂದಿನ ಸಂಚಿಕೆಯಲ್ಲಿ, "ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎನ್ನುವ ಶೀರ್ಷಿಕೆಯಡಿ, ಶ್ರೀ ಪುರಂದರದಾಸರ ಇದೇ ಸಾಲಿನಿಂದ ಪ್ರಾರಂಭವಾಗುವ ಹಾಡಿನ ಬಗ್ಗೆ ವಿಚಾರ ಮಾಡಿದ್ದೆವು. ಚರ್ಚೆ ಸ್ವಲ್ಪ ದೀರ್ಘವಾಯಿತೇನೋ ಎನ್ನುವ ಅನುಮಾನವಿತ್ತು, ಕೆಲವು ವೇಳೆ ವಿಷಯಗಳ ವಿವರಣೆ ಕೊಡುವ ಕಾಲದಲ್ಲಿ, ಓದುಗರಿಗೆ ಅಥವಾ ಎದುರು ಕುಳಿತಿರುವವರಿಗೆ ಹೇಳುತ್ತಿರುವ ವಿಷಯ ಅರ್ಥವಾಗಿದ್ದರೂ ಅದನ್ನೇ ಇನ್ನಷ್ಟು ಮುಂದುವರೆಸುವುದು ಲೇಖಕರ ಅಥವಾ ಹೇಳುವವರ ದೋಷಗಳಲ್ಲಿ ಒಂದು ಎಂದು ಗುರುತಿಸುತ್ತಾರೆ. ಅನೇಕ ಓದುಗರ ಪ್ರತಿಕ್ರಿಯೆಯಿಂದ ಅಲ್ಲಿನ ವಿವರಣೆ ದೀರ್ಘವೇನೂ ಆಲ್ಲವೆಂದು ಸಾಂತ್ವನ ದೊರೆತಿದೆ. ಇದಲ್ಲದೆ, "ತುಪ್ಪದ ಬಿಂದಿಗೆ" ಮತ್ತು "ಆಗ ನೆನೆಯಲಿಲ್ಲ" ಎನ್ನುವ ಎರಡು ಉಕ್ತಿಗಳ ಬಗ್ಗೆ ಇನ್ನೂ ಸ್ವಲ್ಪ ವಿವರ ಬೇಕೆಂದು ಮಿತ್ರರೊಬ್ಬರು ಕೇಳಿದ್ದಾರೆ. ("ಮಾಡು ಸಿಕ್ಕದಲ್ಲಾ, ಮಾಡಿಗೆ ಗೂಡು ಸಿಕ್ಕದಲ್ಲಾ" ಎನ್ನುವ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.) ಅದು ತುಪ್ಪದ ಬಿಂದಿಗೆ ಏಕಾಯಿತು? ಅಕ್ಕಿಯ ಮೂಟೆ ಏಕಾಗಲಿಲ್ಲ? "ಆಗ ನೆನೆಯಲಿಲ್ಲ" ಎಂದು ಈಗ ಹೇಳುವುದಾದರೂ ಏಕೆ?
ದಾಸರು "ತುಪ್ಪದ ಬಿಂದಿಗೆ" ಮತ್ತು "ಆಗ ನೆನೆಯಲಿಲ್ಲ" ಎನ್ನುವ ಎರಡೂ ಉಕ್ತಿಗಳನ್ನು ಸಾಂಕೇತಿಕವಾಗಿ ಉಪಯೋಗಿಸಿದ್ದಾರೆ. "ತುಪ್ಪದ ಬಿಂದಿಗೆ" ಅನ್ನುವುದು ಈ ಮನುಷ್ಯ ಜನ್ಮ ಮತ್ತು ಶರೀರವನ್ನು ನಿರ್ದೇಶಿಸಿ ಹೇಳಿರುವುದು. "ಆಗ ನೆನೆಯಲಿಲ್ಲ" ಎನ್ನುವುದು ಈ ಜನ್ಮದ ಕಾಲಮಾನದ ದೃಷ್ಟಿಯಿಂದ ಹೇಳಿರುವಂಥದು. ಈ ಕೃತಿ ರಚನೆ ಮಾಡುವಾಗ ದಾಸರು ಜೀವನದ ಬಹುಕಾಲ ಕಳೆದುಹೋಗಿದ್ದರೂ ಸಹ ಇನ್ನೂ ಲೌಕಿಕದ ತೊಳಲಾಟದಲ್ಲಿ ಮುಳುಗಿರುವವರನ್ನು ನೋಡಿ ರಚಿಸಿದ್ದಾರೆಂದು ಊಹಿಸುವುದು ಸಾಧುವಾದುದು. ಇವೆರಡರ ಪ್ರಯೋಗದ ಔಚಿತ್ಯದ ಬಗ್ಗೆ ಸ್ವಲ್ಪ ವಿವರವಾಗಿ ನೋಡುವುದು ಯೋಗ್ಯವೇ.
*****
ಅಡಿಗೆ ಮನೆಯಲ್ಲಿ ಅಥವಾ ಅದಕ್ಕೆ ಹೊಂದಿಕೊಂಡಂತೆ ಇರುವ ಉಗ್ರಾಣ ಕೋಣೆಯಲ್ಲಿ ಅನೇಕ ವಸ್ತುಗಳಿವೆ. ಬಗೆಬಗೆಯ ಗಾತ್ರ, ಆಕಾರ, ಬಣ್ಣ, ಗುಣಗಳುಳ್ಳ ಪಾತ್ರೆಗಳಿವೆ. ಪ್ರತಿಯೊಂದಕ್ಕೂ ಅದರದರ ಉಪಯೋಗ ಉಂಟು. ಅವುಗಳಲ್ಲಿ ಯಾವುದೋ ಒಂದು ಇಲ್ಲದಿದ್ದರೆ, ಅಥವಾ ಇದ್ದೂ ಕೈಗೆ ಸಿಗದಿದ್ದರೆ, ಅಡಿಗೆ ಮಾಡುವವರಿಗೆ ಕೈ ಮುರಿದಂತೆ ಭಾಸವಾಗುತ್ತದೆ. ಬೇಕಾಗುವ ಎಲ್ಲವೂ ಅಲ್ಲಿ ಇದ್ದರೆ ಸುಸೂತ್ರ. ಇಲ್ಲದಿದ್ದರೆ ಮತ್ತೊಬ್ಬರಿಂದ ಎರವಲು ತಂದಾದರೂ ಕೆಲಸ ತೂಗಿಸಬೇಕು. ಅದೇ ರೀತಿ ಅನೇಕ ಪದಾರ್ಥಗಳೂ ಇವೆ. ಹೆಚ್ಚಾಗಿ ಉಪಯೋಗಿಸುವ ಅಕ್ಕಿ, ಬೇಳೆ ಮುಂತಾದುವುಗಳಿಂದ ಹಿಡಿದು ಕೇವಲ ಚಿಟಿಕೆಯಷ್ಟು ಅಥವಾ ಅದಕ್ಕಿಂತ ಕಡಿಮೆ ಉಪಯೋಗಿಸುವ ಕೇಸರಿಯವರೆಗೆ. ಅದರಲ್ಲಿ ಯಾವುದಾದರೂ ಒಂದು ಇಲ್ಲದಿದ್ದರೆ, ಅಥವಾ ಮುಗಿದು ಹೋಗಿದ್ದರೆ, ಅಂದುಕೊಂಡ ಪದಾರ್ಥ ತಯಾರಿಸಲಾಗದು.
ಇಂತಹ ಅನೇಕ ಪದಾರ್ಥಗಳಲ್ಲಿ ತುಪ್ಪವೂ ಒಂದು. ಪ್ರತಿ ಪದಾರ್ಥಕ್ಕೂ ಒಂದು ಬೆಲೆ ಉಂಟು. ಹಾಗೆಯೇ, ಅದರದರ ಪ್ರಾಮುಖ್ಯತೆಯೂ ಉಂಟು. ಕಡಿಮೆ ಬೆಲೆಯ ಉಪ್ಪು ಇಲ್ಲದಿದ್ದರೆ ಅನೇಕ ವ್ಯಂಜನಗಳನ್ನು ಮಾಡಲಾಗುವುದಿಲ್ಲ. ಹೆಚ್ಚು ಬೆಲೆಯ ಗೋಡಂಬಿ, ಬಾದಾಮಿಗಳೂ ಉಂಟು. ಆದರೆ ಅವುಗಳಿಂದಲೇ ಅಡಿಗೆ ಆಗುವುದಿಲ್ಲ. ಒಂದು ಸಮರ್ಪಕವಾದ ಅಡಿಗೆ ಆಗಬೇಕಾದರೆ ಇವೆಲ್ಲವೂ ಬೇಕು. ಆದರೆ ತುಪ್ಪವು ನಮ್ಮ ಅಡಿಗೆ, ಆಚಾರ ವಿಚಾರಗಳ ಸಂದರ್ಭದಲ್ಲಿ ಬಹಳ ಮುಖ್ಯ. ಅದೇನು ತುಪ್ಪಕ್ಕೆ ಅಂತಹ ಪ್ರಾಮುಖ್ಯತೆ? "ದೇವರಿಗೆ ತುಪ್ಪದ ದೀಪ ಹೆಚ್ಚು" ಅನ್ನುತ್ತಾರೆ. ಏಕೆ? ಎಣ್ಣೆಯಯಿಂದಲೂ ದೀಪ ಉರಿಯುತ್ತದಲ್ಲ. ಎರಡು ದೀಪಗಳೂ ಬೆಳಕು ಕೊಟ್ಟರೂ ತುಪ್ಪದ ದೀಪಕ್ಕೆ ಹೆಚ್ಚಿನ ಗೌರವ. ತುಪ್ಪದ ದೀಪದಿಂದ ಅನೇಕ ಲಾಭಗಳಿವೆ ಎನ್ನುತ್ತಾರೆ. ಕೆಲವು ಪದಾರ್ಥಗಳು ಅಡಿಗೆಗೆ ಬೇಕು. ಮತ್ತೆ ಕೆಲವು ಸಮಾರಂಭದ ಕಾರ್ಯಗಳಿಗೆ ಬೇಕು. ಈ ತುಪ್ಪವಾದರೋ ಎರಡಕ್ಕೂ ಬೇಕೇ ಬೇಕು.
ಹವನ-ಹೋಮಾದಿಗಳಿಗೆ ಮೊದಲು ಬೇಕಾದದ್ದು ತುಪ್ಪ. ಎಲ್ಲಾ ಇದ್ದೂ ತುಪ್ಪ ಇಲ್ಲ ಅಂದರೆ ಹೋಮ ಇಲ್ಲ. ಏನೋ ಒಂದು ಬೇಯಿಸಿಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ತುಪ್ಪ ಬೇಕಿಲ್ಲ. ಆದರೆ ನಮ್ಮ ಪ್ರಾಚೀನ ಪದ್ಧತಿಯಂತೆ ಕ್ರಮವಾಗಿ ಮಾಡಿದ ಅಡಿಗೆ ಬಡಿಸಬೇಕಾದರೂ ಪ್ರಾರಂಭ ತುಪ್ಪದಿಂದಲೇ. ಶುದ್ಧವಾದ ಬಾಳೆ ಎಲೆ ಹಾಕಿ ಮೊದಲು ಅದರ ಮೇಲೆ ಸ್ವಲ್ಪ ತುಪ್ಪ ಸಿಂಪಡಿಸಿ ನಂತರ ಬಡಿಸುವುದು ಪ್ರಾರಂಭ. (ಇದಕ್ಕೆ "ಪಾತ್ರಾಭಿಗಾರ" ಎನ್ನುತ್ತಾರೆ. ಇಲ್ಲಿ ತಿನ್ನುವ ಪಾತ್ರೆ ಎಂದು. ಅದು ಬಾಳೆ ಎಲೆ ಆದರೂ, ಅಥವಾ ದೇವಾಲಯ ಮತ್ತು ಮಠಾದಿಗಳಲ್ಲಿ ಉಪಯೋಗಿಸುವ ಚಿನ್ನದ ಇಲ್ಲವೇ ಬೆಳ್ಳಿಯ ಹರಿವಾಣವಾದರೂ, ಈ ಸಂಕೇತಕ್ಕೆ ಪಾತ್ರೆ ಎಂದು ಸಂಬೋಧನೆ). ಎಲ್ಲ ಬಡಿಸಿದ ಮೇಲೆ ಕೊನೆಗೆ ಮತ್ತೊಮ್ಮೆ ತುಪ್ಪ ಬರುತ್ತದೆ. ಬಡಿಸಿದ ಎಲ್ಲ ಪದಾರ್ಥಗಳೂ ತುಪ್ಪ ಬಿದ್ದಮೇಲೇ "ಗೋವಿಂದ" ಬಂದು ಸೇವಿಸಲು ಅನುಮತಿ ಸಿಗುತ್ತದೆ.
ಕೇವಲ ಬಡಿಸುವ ಮೊದಲು ಮತ್ತು ಭೋಜನದ ಪ್ರಾರಂಭದಲ್ಲಿ ಮಾತ್ರವಲ್ಲ; ತುಪ್ಪವು ಮುಂದೆಯೂ ಬೇಕು. ಖಾರದ ಪದಾರ್ಥದ ಖಾರ ಕಡಿಮೆಮಾಡಲು ಅದು ಬೇಕು. ಸಿಹಿಯ ಪದಾರ್ಥದ ಸಿಹಿ ಹೆಚ್ಚಿಸಲೂ, ರುಚಿ ಹೆಚ್ಚಿಸಲೂ ಅದು ಬೇಕು. ಒಟ್ಟಿನಲ್ಲಿ ಮೊದಲಿಂದ ಕಡೆಯವರೆಗೆ ಅದು ಇರಬೇಕು. ಅದರ ಮಹತ್ವ ಅಷ್ಟು.
ಈ ತುಪ್ಪ ಹೇಗೆ ಬಂತು? ಅದೇನೂ ಸುಲಭವಾಗಿ ಬಂದದ್ದಲ್ಲ. ಮೊದಲು ಹಸುವಿನ ಹಾಲು ಬೇಕು. ನಂತರ ಅದನ್ನು ಉಕ್ಕುವಂತೆ ಕಾಯಿಸಿ, ಕಾದಮೇಲೆ ಆರಿಸಿ, ಆಮೇಲೆ ಹೆಪ್ಪು ಹಾಕಬೇಕು. ಮೊಸರಾದಮೇಲೆ ಅದು ಹಾಳಾಗುವಮುನ್ನ ಅದನ್ನು ಹದವಾಗಿ ಕಡೆಯಬೇಕು. ಕಡೆದಾಗ ಬಂದ ಬೆಣ್ಣೆಯನ್ನು ತೆಗೆದು ಇಟ್ಟುಕೊಳ್ಳಬೇಕು. ನಂತರ ಆ ಬೆಣ್ಣೆಯನ್ನು ಕೆಡುವ ಮುಂಚೆ ಹದವಾಗಿ, ಸೀದುಹೋಗದಂತೆ ಕಾಯಿಸಬೇಕು. ಈಗ ಬಂದ ತುಪ್ಪವನ್ನು ಜಾಗ್ರತೆಯಾಗಿ ತೆಗೆದಿಡಬೇಕು. ಇಲಿ-ಬೆಕ್ಕುಗಳಿಗೆ ಸಿಗಬಾರದು. ಒಂದು ತೊಟ್ಟು ತುಪ್ಪ ಪಾತ್ರೆಯಮೇಲೆ ಬಿದ್ದಿದ್ದರೂ ಹಿಡಿದಾಗ ಕೈಜಾರಿ ಬೀಳುತ್ತದೆ. ಎಚ್ಚರದಿಂದ ಬಳಸಬೇಕು.
*****
ಈ ಮನುಷ್ಯ ಜೀವನ ಹೇಗೆ ಬಂತು? ಅದೂ ಸುಲಭವಾಗಿ ಬಂದದ್ದಲ್ಲ. ಒಟ್ಟಿನಲ್ಲಿ ಸೃಷ್ಟಿಯಲ್ಲಿ ಎಂಭತ್ತನಾಲ್ಕು ಲಕ್ಷ ಕೋಟಿ ವಿಧದ ಜೀವರಾಶಿಗಳಿವೆಯಂತೆ. ಪ್ರತಿಜೀವಿಗೆ ಹೀಗೆ ಯಾವುದೋ ಒಂದು ಪ್ರಾಣಿಯಾಗಿ ಜನ್ಮ ಬರುತ್ತದೆ. (ಜನ್ಮ ಕ್ರಮವಾಗಿ ಬರಬೇಕೆಂದೇನೂ ಇಲ್ಲ. ಜೀವಿಯ ಕರ್ಮಗಳಿಗನುಸಾರ ಬರುತ್ತದೆ ಎಂದು ನಂಬಿಕೆ). ದಾಸರು ಇನ್ನೊಂದು ಹಾಡಿನಲ್ಲಿ "ಏಸು ಕಾಯಂಗಳ ಕಳೆದು ಎಂಭತ್ತನಾಲ್ಕೂ ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ; ಈ ದೇಹ ತಾನಲ್ಲ, ತನ್ನದಲ್ಲ. ಆಸೆ ತರವಲ್ಲ" ಎಂದು ದೇಹ ನಮ್ಮದೂ ಅಲ್ಲ, ಅದರ ಮೇಲೆ ಹೆಚ್ಚಿನ ಮೋಹ ಸರಿಯೂ ಅಲ್ಲ ಎಂದು ಹೇಳುತ್ತಾರೆ. ಅದಕ್ಕೇ ಇನ್ನೊಂದು ಕಡೆ "ಮಾನವ ಜನ್ಮ ದೊಡ್ಡದು; ಇದನು ಹಾನಿ ಮಾಡಿಕೊಳ್ಳಲಿಬೇಡಿ ಹುಚ್ಚಪ್ಪಗಳಿರಾ!" ಎಂದೂ ಎಚ್ಚರಿಸಿದ್ದಾರೆ. ತಿರುಪತಿಯಲ್ಲಿ ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ, ಕಾದಿದ್ದು ಗರ್ಭಗುಡಿ ತಲುಪಿ ಶ್ರೀನಿವಾಸನ ಎದುರು ನಿಂತಿದ್ದಾಗ ಕಣ್ಣುಮುಚ್ಚಿಕೊಂಡಂತೆ ಈ ಮನುಷ್ಯ ಜನ್ಮ ಹಾಳುಮಾಡಿಕೊಂಡರೆ. (ಕೆಲವರು ಗರ್ಭಗುಡಿಯಲ್ಲಿ ಮೂರ್ತಿಯನ್ನು ನೋಡಿದ ತಕ್ಷಣ ಕಣ್ಣು ಮುಚ್ಚಿಕೊಂಡು ಕೆನ್ನೆ ಬಡಿದುಕೊಳ್ಳುತ್ತಾರೆ. ಸಾಧ್ಯವಿದ್ದಷ್ಟೂ "ಜರಗಂಡಿ" ಎಂದು ತಳ್ಳಿಸಿಕೊಳ್ಳುವ ಮುಂಚೆ ಕಣ್ಣರಳಿಸಿ ನೋಡಿ, ಹೊರಗೆ ಬಂದ ಮೇಲೆ ಕಣ್ಣು ಮುಚ್ಚಿದರೆ ಆ ಮೂರ್ತಿ ಮನಸ್ಸಿನಲ್ಲಿ ನಿಲ್ಲುವಂತೆ ಮಾಡಬೇಕಲ್ಲವೇ?)
ಅನೇಕ ಪದಾರ್ಥಗಲ್ಲಿ ತುಪ್ಪಕ್ಕೆ ವಿಶೇಷ ಬೆಲೆ. ಸಿಕ್ಕ ಜನುಮಗಳಲ್ಲಿ ಮನುಷ್ಯ ಜನ್ಮಕ್ಕೆ ವಿಶೇಷ ಬೆಲೆ. ಸಾಧನೆಗೆ ದಾರಿ ಆಗಲೇ. ತುಪ್ಪದಂತೆ ಮಾನವ ದೇಹಕ್ಕೆ ಅನೇಕ ಉಪಯೋಗಗಳು. ಅನೇಕ ಹಂತಗಳು ಪರಿಷ್ಕರಿಸಿದ ಮೇಲೆ ಬಂದ ತುಪ್ಪದಂತೆ ಮನುಷ್ಯ ಜನ್ಮವೂ ಕಷ್ಟದಲ್ಲಿ ಪಡೆದದ್ದು. ಇದು ಒಂದು ಸಣ್ಣ ಮಿಳ್ಳೆ, ಥಾಲಿ ಅಥವಾ ತಂಬಿಗೆಯಲ್ಲಿರುವುದಲ್ಲ. ಬಿಂದಿಗೆಯಷ್ಟು. ತುಪ್ಪದ ಬಿಂದಿಗೆಯಂತೆ ಈ ಜನ್ಮವನ್ನೂ ಅಷ್ಟೇ ಜತನದಿಂದ ಕಾಪಾಡಿಕೊಳ್ಳಬೇಕು. ವ್ಯರ್ಥವಾಗಬಾರದು.
ತಿಪ್ಪೆಯ ಮೇಲೆ ಬಿದ್ದದ್ದು ಎನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ದೇಹ ಹಾಸಿಗೆಯಲ್ಲಿ ಪ್ರತಿದಿನ ನಮ್ಮ ಪ್ರಯತ್ನದಿಂದ ವಿಶ್ರಾಂತಿ ಪಡೆಯುತ್ತದೆ. ಆಗ ಅದು ಹಾಸಿಗೆ. ದೇಹ ನಮ್ಮ ನಿಯಂತ್ರಣ ತಪ್ಪಿ ಮತ್ತೊಬ್ಬರು ತಂದು ಅದರಮೇಲೆ ಹಾಕಿದಾಗ ಅದು ತಿಪ್ಪೆಯ ಮೇಲೆ ಬಿದ್ದಂತೆ. ವ್ಯಕ್ತಿಯ ನಿಯಂತ್ರಣ ಇಲ್ಲದ ಪರಾವಲಂಬಿ ದೇಹ ಆ ಹಾಸಿಗೆಯನ್ನೇ ತಿಪ್ಪೆ ಮಾಡುತ್ತದೆ. ಇದು ನಮಗೆ ಪರಾನುಭವದಿಂದ ತಿಳಿದುಬಂದಿರುವ ಸತ್ಯ.
ಈ ಎಲ್ಲ ಕಾರಣಗಳಿಂದ "ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ ಧೊಪ್ಪನೆ ಬಿತ್ತಲ್ಲಾ" ಎನ್ನುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ.
*****
ಕೆಲವು ದಿನಗಳಲ್ಲಿ "ವಿಂಬಲ್ಡನ್" ಟೆನಿಸ್ ಟೂರ್ನಮೆಂಟ್ ಬರುತ್ತದೆ. ಅಲ್ಲಿ ಗೆದ್ದು ಹೊಳೆಯುವ ಕಪ್ ಪಡೆಯಬೇಕಾದರೆ ಒಂದೇಸಮನೆ ಏಳು ಪಂದ್ಯಗಳನ್ನು ಗೆಲ್ಲಬೇಕು. ಪ್ರತಿಯೊಂದೂ ಕನಿಷ್ಠ ಆರು ಗೇಮುಗಳುಳ್ಳ ಐದು ಸೆಟ್ಟುಗಳದು. ಮೂರು ಸೆಟ್ಟು ಒಂದೇಸಮನೆ ಗೆದ್ದರೆ ಆ ಪಂದ್ಯ ಗೆದ್ದಂತೆ. ನಂತರ ಮುಂದಿನದು. ಹೀಗೆ. ಆದರೆ ಮೂರು ಸೆಟ್ಟು ಒಂದೇ ಸಮನೆ ಗೆಲ್ಲುವುದು ಅಷ್ಟು ಸುಲಭವಲ್ಲ. ಸುಮಾರು ಶೇಕಡಾ ಎಪ್ಪತ್ತು ಭಾಗ ಪಂದ್ಯಗಳನ್ನು ಮೂರು ಸೆಟ್ಟುಗಳು ಗೆದ್ದು ಮುಗಿಸುತ್ತಾರೆ. ಮತ್ತೆ ಶೇಕಡಾ ಇಪ್ಪತ್ತು ಭಾಗ ಪಂದ್ಯಗಳು ನಾಲ್ಕನೇ ಸೆಟ್ಟಿನವರೆಗೆ ಹೋಗುತ್ತವೆ. ಕೇವಲ ಶೇಕಡಾ ಹತ್ತು ಭಾಗ ಪಂದ್ಯಗಳು ಐದನೆಯ ಸೆಟ್ಟಿನವರೆಗೆ ಹೋಗುತ್ತವೆ.
ಒಬ್ಬ ಆಟಗಾರನನ್ನು ತೆಗೆದುಕೊಳ್ಳೋಣ. ಸ್ವಲ್ಪ ಉಡಾಫೆಯವನು ಅವನು. ಹೇಗೂ ಐದರಲ್ಲಿ ಮೂರು ಸೆಟ್ಟು ಗೆಲ್ಲಬೇಕು ತಾನೇ. ಮೂರು, ನಾಲ್ಕು ಮತ್ತು ಐದನೆಯದನ್ನು ಗೆಲ್ಲುತ್ತೇನೆ ಎಂದು ಆಡುತ್ತಾನೆ. ಮೊದಲೆರಡು ಲೆಕ್ಕವಿಲ್ಲ ಅವನಿಗೆ. ನಾವು ಅನೇಕ ಪಂದ್ಯಗಳನ್ನು ನೋಡಿದ್ದೇವೆ. ಕೆಲವು ವೇಳೆ ಆಟಗಾರನೊಬ್ಬ ಏನಾಗುತ್ತಿದೆ ಎಂದು ತಿಳಿಯುವ ವೇಳೆ ಎದುರಾಳಿ ಒಂದು ಸೆಟ್ಟು ಗೆದ್ದೇಬಿಟ್ಟಿರುತ್ತಾನೆ. ಎರಡನೆಯ ಸೆಟ್ಟಿನಲ್ಲಿ ಸ್ವಲ್ಪ ಉಡಾಫೆ ಮಾಡಿದರೆ ಮುಗಿಯಿತು. ಎದುರಾಳಿ ನಾಲ್ಕು, ಐದಕ್ಕೆ ಅವಕಾಶವನ್ನೇ ಕೊಡನು. ಮುಗಿದೇಹೋಯಿತು ಪಂದ್ಯ.
ನಮ್ಮ ಜೀವನದಲ್ಲಿ ಹೀಗೆ ಇಪ್ಪತ್ತು ವರುಷಗಳ ಐದು ಸೆಟ್ಟುಗಳು. ಮೊದಲು ಬಾಲ್ಯ ಮತ್ತು ವಿದ್ಯಾಭ್ಯಾಸ. ನಂತರ ನೌಕರಿ ಅಥವಾ ವ್ಯವಹಾರ, ವಿವಾಹ, ಮನೆಕಟ್ಟುವುದು, ಮಕ್ಕಳು ಮುಂತಾದುವು. ಮೂರನೆಯದು ಜವಾಬ್ದಾರಿ ಕಳೆದುಕೊಳ್ಳುವುದು ಮತ್ತು ಸಾಲ ತೀರಿಸುವುದು. ಉಳಿತಾಯ ಮಾಡಿ ಮುಂದಿನ ಜೀವನ ಹಸನು ಮಾಡಿಕೊಳ್ಳುವುದು. ಏಕೆ ಹುಟ್ಟಿದೆವು, ಏನು ಸಾಧನೆ ಮಾಡಬೇಕು ಎಂದು ಯೋಚಿಸುವುದು ಅರುವತ್ತು ದಾಟಿದ ಮೇಲೆ. ನಿವೃತ್ತಿಯಾದ ನಂತರ ಚೆನ್ನಾಗಿ ಸಾಧನೆ ಮಾಡುವುದು. ಆಗ ಬೇರೆ ಏನೂ ಚಿಂತೆ ಇಲ್ಲವಲ್ಲ. ಹೀಗೆ ಲೆಕ್ಕಾಚಾರ.
ಆದರೆ ನಾವು ಆಡುತ್ತಿರುವುದು ನೆಟ್ಟಿನ ಆ ಕಡೆ ನಿಂತಿರುವ "ಕಾಲರಾಯ" ಎನ್ನುವ ಆಟಗಾರನ ವಿರುದ್ಧ. ಆಡಾಡುತ್ತಿರುವಂತೆಯೇ ಮೊದಲ ಇಪ್ಪತ್ತು ವರುಷ ಅವನು ತಿಂದುಹಾಕಿ ಮೊದಲ ಸೆಟ್ಟು ಮುಗಿಸಿದ್ದಾನೆ. ಎರಡು, ಮೂರು ಪರರ ಸೇವೆಯಲ್ಲಿ ಕಳೆಯಿತು. ಕಾಲರಾಯ ಅನೇಕ ವೇಳೆ ಅಷ್ಟರಲ್ಲೇ ಪಂದ್ಯ ಮುಗಿಸಿಬಿಟ್ಟಿರುತ್ತಾನೆ. ಏನೋ ಪುಣ್ಯವಶಾತ್, ನಾಲ್ಕನೆಯ ಸೆಟ್ಟಿಗೆ ತಲುಪಿದೆವು ಅನ್ನೋಣ. ಉದ್ಯೋಗ-ವ್ಯವಹಾರದಲ್ಲಿ ಇದ್ದಾಗ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿ ಬಿಟ್ಟಿದ್ದಾರೆ. ಶಕ್ತಿ ಕುಂದಿದೆ. ಕಣ್ಣು-ಕಿವಿ ಕಾಣಿಸದು-ಕೇಳಿಸದು. ಅದಕ್ಕೇ ಅವರು ನಿವೃತ್ತಿ ಕೊಟ್ಟಿದ್ದಾರೆ. ಕೆಲವರಿಗೆ ಆಗ ಇನ್ನೊಂದು ಕೆಲಸ ಹುಡುಕುವ ಹುಮ್ಮಸ್ಸು. ಅದು ಸಿಕ್ಕಿದರಂತೂ ಹಿಗ್ಗೋ ಹಿಗ್ಗು. ಎದುರಿನ ಕಾಲರಾಯ ನಗುತ್ತಿದ್ದಾನೆ. ಅವನು ಕೆಲವರನ್ನು ಆಟದ ಮಧ್ಯದಲ್ಲೇ ರಿಟೈರ್ ಮಾಡಿಸುವ ಧೀರ. ಹಾಗೂ ಮಾಡಿಯಾನು. ಅವನಿಗೆ ಆಟ ಸಾಕು ಎನ್ನಿಸಿದಾಗ. "ಕಸ್ತೂರಿ ನಿವಾಸ" ಚಿತ್ರದ "ಆಡಿಸುವಾತ ಬೇಸರವಾಗಿ ಆಟ ಮುಗಿಸಿದ" ಎನ್ನುವಂತೆ.
ಮೊದಲ ಮೂರು ಸೆಟ್ಟುಗಳಲ್ಲಿ ಸಾಧನೆ ಮಾಡಲಿಲ್ಲ. ಈಗ ಮಾಡಬೇಕೆಂದರೂ ಆಗುತ್ತಿಲ್ಲ. ಇದಕ್ಕಿಂತ ಹೆಚ್ಚಾಗಿ ಯಾವಾಗ ಪಂದ್ಯ ಮುಗಿಸಿ ಕಾಲರಾಯ ಆಟದ ಅಂಗಳದಿಂದ ಹೊರ ತಳ್ಳುತ್ತಾನೋ, ಗೊತ್ತಿಲ್ಲ.
ಪಂದ್ಯ ಇನ್ನೇನು ಸೋಲಬೇಕು ಎನ್ನುವಾಗ "ಅಯ್ಯೋ, ಮೊದಲಿಂದ ಗಮನವಿಟ್ಟು ಆಡಬೇಕಿತ್ತು" ಎಂದು ಪರಿತಪಿಸುವ ಆಟಗಾರನಂತೆ ಜೇವನ. ಇದನ್ನೇ ದಾಸರು "ಆಗ ನೆನೆಯಲಿಲ್ಲ" ಎಂದು ಹೇಳಿದ್ದು.
*****
"ಅಯ್ಯೋ, ಇದನ್ನೆಲ್ಲಾ ಯಾರು ನಂಬುವವರು? ಇರುವಷ್ಟು ದಿನ ಸುಖಪಡೋಣ. ಇನ್ನೊಂದು ಜನ್ಮ ಇದೆ ಎಂದು ಯಾರೂ ಬಂದು ಹೇಳಿಲ್ಲ. ಇದ್ದರೆ, ಅದು ಬಂದಾಗ ನೋಡೋಣ" ಅನ್ನಬಹುದು. ಅದೂ ತಪ್ಪಲ್ಲ. ಆದರೆ ಅದೊಂದು ಅಂತ ಇದ್ದರೆ, ಆಗ?
ಇದೆಲ್ಲಾ ಅವರವರ ತೀರ್ಮಾನಕ್ಕೆ ಬಿಟ್ಟ ವಿಷಯ. ಜೀವನದಲ್ಲಿ ನೆಮ್ಮದಿ ಹೇಗೆ ಹುಡುಕಬೇಕು ಎಂದು ಯಾರೂ ಬಲವಂತ ಮಾಡುವಹಾಗಿಲ್ಲವಲ್ಲ.