Showing posts with label Tuppa. Show all posts
Showing posts with label Tuppa. Show all posts

Sunday, June 8, 2025

ತುಪ್ಪದ ಬಿಂದಿಗೆ


ಈ ಹಿಂದಿನ ಸಂಚಿಕೆಯಲ್ಲಿ, "ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎನ್ನುವ ಶೀರ್ಷಿಕೆಯಡಿ, ಶ್ರೀ ಪುರಂದರದಾಸರ ಇದೇ ಸಾಲಿನಿಂದ ಪ್ರಾರಂಭವಾಗುವ ಹಾಡಿನ ಬಗ್ಗೆ ವಿಚಾರ ಮಾಡಿದ್ದೆವು. ಚರ್ಚೆ ಸ್ವಲ್ಪ ದೀರ್ಘವಾಯಿತೇನೋ ಎನ್ನುವ ಅನುಮಾನವಿತ್ತು, ಕೆಲವು ವೇಳೆ ವಿಷಯಗಳ ವಿವರಣೆ ಕೊಡುವ ಕಾಲದಲ್ಲಿ, ಓದುಗರಿಗೆ ಅಥವಾ ಎದುರು ಕುಳಿತಿರುವವರಿಗೆ ಹೇಳುತ್ತಿರುವ ವಿಷಯ ಅರ್ಥವಾಗಿದ್ದರೂ ಅದನ್ನೇ ಇನ್ನಷ್ಟು ಮುಂದುವರೆಸುವುದು ಲೇಖಕರ ಅಥವಾ ಹೇಳುವವರ ದೋಷಗಳಲ್ಲಿ ಒಂದು ಎಂದು ಗುರುತಿಸುತ್ತಾರೆ. ಅನೇಕ ಓದುಗರ ಪ್ರತಿಕ್ರಿಯೆಯಿಂದ ಅಲ್ಲಿನ ವಿವರಣೆ ದೀರ್ಘವೇನೂ ಆಲ್ಲವೆಂದು ಸಾಂತ್ವನ ದೊರೆತಿದೆ. ಇದಲ್ಲದೆ, "ತುಪ್ಪದ ಬಿಂದಿಗೆ" ಮತ್ತು  "ಆಗ ನೆನೆಯಲಿಲ್ಲ" ಎನ್ನುವ ಎರಡು ಉಕ್ತಿಗಳ ಬಗ್ಗೆ ಇನ್ನೂ ಸ್ವಲ್ಪ ವಿವರ ಬೇಕೆಂದು ಮಿತ್ರರೊಬ್ಬರು ಕೇಳಿದ್ದಾರೆ. ("ಮಾಡು ಸಿಕ್ಕದಲ್ಲಾ, ಮಾಡಿಗೆ ಗೂಡು ಸಿಕ್ಕದಲ್ಲಾ" ಎನ್ನುವ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.) ಅದು ತುಪ್ಪದ ಬಿಂದಿಗೆ ಏಕಾಯಿತು? ಅಕ್ಕಿಯ ಮೂಟೆ ಏಕಾಗಲಿಲ್ಲ? "ಆಗ ನೆನೆಯಲಿಲ್ಲ" ಎಂದು ಈಗ ಹೇಳುವುದಾದರೂ ಏಕೆ? 

ದಾಸರು "ತುಪ್ಪದ ಬಿಂದಿಗೆ" ಮತ್ತು "ಆಗ ನೆನೆಯಲಿಲ್ಲ" ಎನ್ನುವ ಎರಡೂ ಉಕ್ತಿಗಳನ್ನು ಸಾಂಕೇತಿಕವಾಗಿ ಉಪಯೋಗಿಸಿದ್ದಾರೆ. "ತುಪ್ಪದ ಬಿಂದಿಗೆ" ಅನ್ನುವುದು ಈ ಮನುಷ್ಯ ಜನ್ಮ ಮತ್ತು ಶರೀರವನ್ನು ನಿರ್ದೇಶಿಸಿ ಹೇಳಿರುವುದು. "ಆಗ ನೆನೆಯಲಿಲ್ಲ" ಎನ್ನುವುದು ಈ ಜನ್ಮದ ಕಾಲಮಾನದ ದೃಷ್ಟಿಯಿಂದ ಹೇಳಿರುವಂಥದು. ಈ ಕೃತಿ ರಚನೆ ಮಾಡುವಾಗ ದಾಸರು ಜೀವನದ ಬಹುಕಾಲ ಕಳೆದುಹೋಗಿದ್ದರೂ ಸಹ ಇನ್ನೂ ಲೌಕಿಕದ ತೊಳಲಾಟದಲ್ಲಿ ಮುಳುಗಿರುವವರನ್ನು ನೋಡಿ ರಚಿಸಿದ್ದಾರೆಂದು ಊಹಿಸುವುದು ಸಾಧುವಾದುದು. ಇವೆರಡರ ಪ್ರಯೋಗದ ಔಚಿತ್ಯದ ಬಗ್ಗೆ ಸ್ವಲ್ಪ ವಿವರವಾಗಿ ನೋಡುವುದು ಯೋಗ್ಯವೇ. 
*****

ಅಡಿಗೆ ಮನೆಯಲ್ಲಿ ಅಥವಾ ಅದಕ್ಕೆ ಹೊಂದಿಕೊಂಡಂತೆ ಇರುವ ಉಗ್ರಾಣ ಕೋಣೆಯಲ್ಲಿ ಅನೇಕ ವಸ್ತುಗಳಿವೆ. ಬಗೆಬಗೆಯ ಗಾತ್ರ, ಆಕಾರ, ಬಣ್ಣ, ಗುಣಗಳುಳ್ಳ ಪಾತ್ರೆಗಳಿವೆ. ಪ್ರತಿಯೊಂದಕ್ಕೂ ಅದರದರ ಉಪಯೋಗ ಉಂಟು. ಅವುಗಳಲ್ಲಿ ಯಾವುದೋ ಒಂದು ಇಲ್ಲದಿದ್ದರೆ, ಅಥವಾ ಇದ್ದೂ ಕೈಗೆ ಸಿಗದಿದ್ದರೆ, ಅಡಿಗೆ ಮಾಡುವವರಿಗೆ ಕೈ ಮುರಿದಂತೆ ಭಾಸವಾಗುತ್ತದೆ. ಬೇಕಾಗುವ ಎಲ್ಲವೂ ಅಲ್ಲಿ ಇದ್ದರೆ  ಸುಸೂತ್ರ. ಇಲ್ಲದಿದ್ದರೆ ಮತ್ತೊಬ್ಬರಿಂದ ಎರವಲು ತಂದಾದರೂ ಕೆಲಸ ತೂಗಿಸಬೇಕು. ಅದೇ ರೀತಿ ಅನೇಕ ಪದಾರ್ಥಗಳೂ ಇವೆ. ಹೆಚ್ಚಾಗಿ ಉಪಯೋಗಿಸುವ ಅಕ್ಕಿ, ಬೇಳೆ ಮುಂತಾದುವುಗಳಿಂದ ಹಿಡಿದು ಕೇವಲ ಚಿಟಿಕೆಯಷ್ಟು ಅಥವಾ ಅದಕ್ಕಿಂತ ಕಡಿಮೆ ಉಪಯೋಗಿಸುವ ಕೇಸರಿಯವರೆಗೆ. ಅದರಲ್ಲಿ ಯಾವುದಾದರೂ ಒಂದು ಇಲ್ಲದಿದ್ದರೆ, ಅಥವಾ ಮುಗಿದು  ಹೋಗಿದ್ದರೆ, ಅಂದುಕೊಂಡ ಪದಾರ್ಥ ತಯಾರಿಸಲಾಗದು. 

ಇಂತಹ ಅನೇಕ ಪದಾರ್ಥಗಳಲ್ಲಿ ತುಪ್ಪವೂ ಒಂದು. ಪ್ರತಿ ಪದಾರ್ಥಕ್ಕೂ ಒಂದು ಬೆಲೆ ಉಂಟು. ಹಾಗೆಯೇ, ಅದರದರ ಪ್ರಾಮುಖ್ಯತೆಯೂ ಉಂಟು. ಕಡಿಮೆ ಬೆಲೆಯ ಉಪ್ಪು ಇಲ್ಲದಿದ್ದರೆ ಅನೇಕ ವ್ಯಂಜನಗಳನ್ನು ಮಾಡಲಾಗುವುದಿಲ್ಲ. ಹೆಚ್ಚು ಬೆಲೆಯ ಗೋಡಂಬಿ, ಬಾದಾಮಿಗಳೂ ಉಂಟು. ಆದರೆ ಅವುಗಳಿಂದಲೇ ಅಡಿಗೆ ಆಗುವುದಿಲ್ಲ. ಒಂದು ಸಮರ್ಪಕವಾದ ಅಡಿಗೆ ಆಗಬೇಕಾದರೆ ಇವೆಲ್ಲವೂ ಬೇಕು. ಆದರೆ ತುಪ್ಪವು ನಮ್ಮ ಅಡಿಗೆ, ಆಚಾರ ವಿಚಾರಗಳ ಸಂದರ್ಭದಲ್ಲಿ ಬಹಳ ಮುಖ್ಯ. ಅದೇನು ತುಪ್ಪಕ್ಕೆ ಅಂತಹ ಪ್ರಾಮುಖ್ಯತೆ? "ದೇವರಿಗೆ ತುಪ್ಪದ ದೀಪ ಹೆಚ್ಚು" ಅನ್ನುತ್ತಾರೆ. ಏಕೆ? ಎಣ್ಣೆಯಯಿಂದಲೂ ದೀಪ ಉರಿಯುತ್ತದಲ್ಲ. ಎರಡು ದೀಪಗಳೂ ಬೆಳಕು ಕೊಟ್ಟರೂ ತುಪ್ಪದ ದೀಪಕ್ಕೆ ಹೆಚ್ಚಿನ ಗೌರವ. ತುಪ್ಪದ ದೀಪದಿಂದ ಅನೇಕ ಲಾಭಗಳಿವೆ ಎನ್ನುತ್ತಾರೆ. ಕೆಲವು ಪದಾರ್ಥಗಳು ಅಡಿಗೆಗೆ ಬೇಕು. ಮತ್ತೆ ಕೆಲವು ಸಮಾರಂಭದ ಕಾರ್ಯಗಳಿಗೆ ಬೇಕು. ಈ ತುಪ್ಪವಾದರೋ ಎರಡಕ್ಕೂ ಬೇಕೇ ಬೇಕು. 

ಹವನ-ಹೋಮಾದಿಗಳಿಗೆ ಮೊದಲು ಬೇಕಾದದ್ದು ತುಪ್ಪ. ಎಲ್ಲಾ ಇದ್ದೂ ತುಪ್ಪ ಇಲ್ಲ ಅಂದರೆ ಹೋಮ ಇಲ್ಲ. ಏನೋ ಒಂದು ಬೇಯಿಸಿಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ತುಪ್ಪ ಬೇಕಿಲ್ಲ. ಆದರೆ ನಮ್ಮ ಪ್ರಾಚೀನ ಪದ್ಧತಿಯಂತೆ ಕ್ರಮವಾಗಿ ಮಾಡಿದ ಅಡಿಗೆ ಬಡಿಸಬೇಕಾದರೂ ಪ್ರಾರಂಭ ತುಪ್ಪದಿಂದಲೇ. ಶುದ್ಧವಾದ ಬಾಳೆ ಎಲೆ ಹಾಕಿ ಮೊದಲು ಅದರ ಮೇಲೆ ಸ್ವಲ್ಪ ತುಪ್ಪ ಸಿಂಪಡಿಸಿ ನಂತರ ಬಡಿಸುವುದು ಪ್ರಾರಂಭ. (ಇದಕ್ಕೆ "ಪಾತ್ರಾಭಿಗಾರ" ಎನ್ನುತ್ತಾರೆ. ಇಲ್ಲಿ ತಿನ್ನುವ ಪಾತ್ರೆ ಎಂದು. ಅದು ಬಾಳೆ ಎಲೆ ಆದರೂ, ಅಥವಾ ದೇವಾಲಯ ಮತ್ತು ಮಠಾದಿಗಳಲ್ಲಿ ಉಪಯೋಗಿಸುವ ಚಿನ್ನದ  ಇಲ್ಲವೇ ಬೆಳ್ಳಿಯ ಹರಿವಾಣವಾದರೂ, ಈ ಸಂಕೇತಕ್ಕೆ ಪಾತ್ರೆ ಎಂದು ಸಂಬೋಧನೆ). ಎಲ್ಲ ಬಡಿಸಿದ ಮೇಲೆ ಕೊನೆಗೆ ಮತ್ತೊಮ್ಮೆ ತುಪ್ಪ ಬರುತ್ತದೆ. ಬಡಿಸಿದ ಎಲ್ಲ ಪದಾರ್ಥಗಳೂ ತುಪ್ಪ ಬಿದ್ದಮೇಲೇ "ಗೋವಿಂದ" ಬಂದು  ಸೇವಿಸಲು ಅನುಮತಿ ಸಿಗುತ್ತದೆ.  

ಕೇವಲ ಬಡಿಸುವ ಮೊದಲು ಮತ್ತು  ಭೋಜನದ ಪ್ರಾರಂಭದಲ್ಲಿ ಮಾತ್ರವಲ್ಲ; ತುಪ್ಪವು ಮುಂದೆಯೂ ಬೇಕು. ಖಾರದ ಪದಾರ್ಥದ ಖಾರ ಕಡಿಮೆಮಾಡಲು ಅದು ಬೇಕು. ಸಿಹಿಯ ಪದಾರ್ಥದ ಸಿಹಿ ಹೆಚ್ಚಿಸಲೂ, ರುಚಿ ಹೆಚ್ಚಿಸಲೂ ಅದು ಬೇಕು. ಒಟ್ಟಿನಲ್ಲಿ ಮೊದಲಿಂದ ಕಡೆಯವರೆಗೆ ಅದು ಇರಬೇಕು. ಅದರ ಮಹತ್ವ ಅಷ್ಟು. 

ಈ ತುಪ್ಪ ಹೇಗೆ ಬಂತು? ಅದೇನೂ ಸುಲಭವಾಗಿ ಬಂದದ್ದಲ್ಲ. ಮೊದಲು ಹಸುವಿನ ಹಾಲು ಬೇಕು. ನಂತರ ಅದನ್ನು ಉಕ್ಕುವಂತೆ ಕಾಯಿಸಿ, ಕಾದಮೇಲೆ ಆರಿಸಿ, ಆಮೇಲೆ ಹೆಪ್ಪು ಹಾಕಬೇಕು. ಮೊಸರಾದಮೇಲೆ ಅದು ಹಾಳಾಗುವಮುನ್ನ ಅದನ್ನು ಹದವಾಗಿ ಕಡೆಯಬೇಕು. ಕಡೆದಾಗ ಬಂದ ಬೆಣ್ಣೆಯನ್ನು ತೆಗೆದು ಇಟ್ಟುಕೊಳ್ಳಬೇಕು. ನಂತರ ಆ ಬೆಣ್ಣೆಯನ್ನು ಕೆಡುವ ಮುಂಚೆ ಹದವಾಗಿ, ಸೀದುಹೋಗದಂತೆ ಕಾಯಿಸಬೇಕು. ಈಗ ಬಂದ ತುಪ್ಪವನ್ನು ಜಾಗ್ರತೆಯಾಗಿ ತೆಗೆದಿಡಬೇಕು. ಇಲಿ-ಬೆಕ್ಕುಗಳಿಗೆ ಸಿಗಬಾರದು. ಒಂದು ತೊಟ್ಟು ತುಪ್ಪ ಪಾತ್ರೆಯಮೇಲೆ ಬಿದ್ದಿದ್ದರೂ ಹಿಡಿದಾಗ ಕೈಜಾರಿ ಬೀಳುತ್ತದೆ. ಎಚ್ಚರದಿಂದ ಬಳಸಬೇಕು. 

*****

ಈ ಮನುಷ್ಯ ಜೀವನ ಹೇಗೆ ಬಂತು? ಅದೂ ಸುಲಭವಾಗಿ ಬಂದದ್ದಲ್ಲ. ಒಟ್ಟಿನಲ್ಲಿ ಸೃಷ್ಟಿಯಲ್ಲಿ ಎಂಭತ್ತನಾಲ್ಕು ಲಕ್ಷ ಕೋಟಿ ವಿಧದ ಜೀವರಾಶಿಗಳಿವೆಯಂತೆ. ಪ್ರತಿಜೀವಿಗೆ ಹೀಗೆ ಯಾವುದೋ ಒಂದು ಪ್ರಾಣಿಯಾಗಿ ಜನ್ಮ ಬರುತ್ತದೆ. (ಜನ್ಮ ಕ್ರಮವಾಗಿ ಬರಬೇಕೆಂದೇನೂ ಇಲ್ಲ. ಜೀವಿಯ ಕರ್ಮಗಳಿಗನುಸಾರ ಬರುತ್ತದೆ ಎಂದು ನಂಬಿಕೆ). ದಾಸರು ಇನ್ನೊಂದು ಹಾಡಿನಲ್ಲಿ "ಏಸು ಕಾಯಂಗಳ ಕಳೆದು ಎಂಭತ್ತನಾಲ್ಕೂ ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ; ಈ ದೇಹ ತಾನಲ್ಲ, ತನ್ನದಲ್ಲ. ಆಸೆ ತರವಲ್ಲ" ಎಂದು ದೇಹ ನಮ್ಮದೂ ಅಲ್ಲ, ಅದರ ಮೇಲೆ ಹೆಚ್ಚಿನ ಮೋಹ ಸರಿಯೂ ಅಲ್ಲ ಎಂದು ಹೇಳುತ್ತಾರೆ. ಅದಕ್ಕೇ ಇನ್ನೊಂದು ಕಡೆ "ಮಾನವ ಜನ್ಮ ದೊಡ್ಡದು; ಇದನು ಹಾನಿ ಮಾಡಿಕೊಳ್ಳಲಿಬೇಡಿ ಹುಚ್ಚಪ್ಪಗಳಿರಾ!" ಎಂದೂ ಎಚ್ಚರಿಸಿದ್ದಾರೆ. ತಿರುಪತಿಯಲ್ಲಿ ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ, ಕಾದಿದ್ದು ಗರ್ಭಗುಡಿ ತಲುಪಿ ಶ್ರೀನಿವಾಸನ ಎದುರು ನಿಂತಿದ್ದಾಗ ಕಣ್ಣುಮುಚ್ಚಿಕೊಂಡಂತೆ ಈ ಮನುಷ್ಯ ಜನ್ಮ ಹಾಳುಮಾಡಿಕೊಂಡರೆ. (ಕೆಲವರು ಗರ್ಭಗುಡಿಯಲ್ಲಿ ಮೂರ್ತಿಯನ್ನು ನೋಡಿದ ತಕ್ಷಣ ಕಣ್ಣು ಮುಚ್ಚಿಕೊಂಡು ಕೆನ್ನೆ ಬಡಿದುಕೊಳ್ಳುತ್ತಾರೆ. ಸಾಧ್ಯವಿದ್ದಷ್ಟೂ "ಜರಗಂಡಿ" ಎಂದು ತಳ್ಳಿಸಿಕೊಳ್ಳುವ ಮುಂಚೆ ಕಣ್ಣರಳಿಸಿ ನೋಡಿ, ಹೊರಗೆ ಬಂದ ಮೇಲೆ ಕಣ್ಣು ಮುಚ್ಚಿದರೆ ಆ ಮೂರ್ತಿ ಮನಸ್ಸಿನಲ್ಲಿ ನಿಲ್ಲುವಂತೆ ಮಾಡಬೇಕಲ್ಲವೇ?)

ಅನೇಕ ಪದಾರ್ಥಗಲ್ಲಿ ತುಪ್ಪಕ್ಕೆ ವಿಶೇಷ ಬೆಲೆ. ಸಿಕ್ಕ ಜನುಮಗಳಲ್ಲಿ ಮನುಷ್ಯ ಜನ್ಮಕ್ಕೆ ವಿಶೇಷ ಬೆಲೆ. ಸಾಧನೆಗೆ ದಾರಿ ಆಗಲೇ. ತುಪ್ಪದಂತೆ ಮಾನವ ದೇಹಕ್ಕೆ ಅನೇಕ ಉಪಯೋಗಗಳು. ಅನೇಕ ಹಂತಗಳು ಪರಿಷ್ಕರಿಸಿದ ಮೇಲೆ ಬಂದ ತುಪ್ಪದಂತೆ ಮನುಷ್ಯ ಜನ್ಮವೂ ಕಷ್ಟದಲ್ಲಿ ಪಡೆದದ್ದು. ಇದು ಒಂದು ಸಣ್ಣ ಮಿಳ್ಳೆ, ಥಾಲಿ ಅಥವಾ ತಂಬಿಗೆಯಲ್ಲಿರುವುದಲ್ಲ. ಬಿಂದಿಗೆಯಷ್ಟು. ತುಪ್ಪದ ಬಿಂದಿಗೆಯಂತೆ ಈ ಜನ್ಮವನ್ನೂ ಅಷ್ಟೇ ಜತನದಿಂದ ಕಾಪಾಡಿಕೊಳ್ಳಬೇಕು. ವ್ಯರ್ಥವಾಗಬಾರದು. 

ತಿಪ್ಪೆಯ ಮೇಲೆ ಬಿದ್ದದ್ದು ಎನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ದೇಹ ಹಾಸಿಗೆಯಲ್ಲಿ ಪ್ರತಿದಿನ ನಮ್ಮ ಪ್ರಯತ್ನದಿಂದ ವಿಶ್ರಾಂತಿ ಪಡೆಯುತ್ತದೆ. ಆಗ ಅದು ಹಾಸಿಗೆ. ದೇಹ ನಮ್ಮ ನಿಯಂತ್ರಣ ತಪ್ಪಿ ಮತ್ತೊಬ್ಬರು ತಂದು ಅದರಮೇಲೆ ಹಾಕಿದಾಗ ಅದು ತಿಪ್ಪೆಯ ಮೇಲೆ ಬಿದ್ದಂತೆ. ವ್ಯಕ್ತಿಯ ನಿಯಂತ್ರಣ ಇಲ್ಲದ ಪರಾವಲಂಬಿ ದೇಹ ಆ ಹಾಸಿಗೆಯನ್ನೇ ತಿಪ್ಪೆ ಮಾಡುತ್ತದೆ. ಇದು ನಮಗೆ ಪರಾನುಭವದಿಂದ ತಿಳಿದುಬಂದಿರುವ ಸತ್ಯ. 

ಈ ಎಲ್ಲ ಕಾರಣಗಳಿಂದ "ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ ಧೊಪ್ಪನೆ ಬಿತ್ತಲ್ಲಾ" ಎನ್ನುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. 
*****

ಕೆಲವು ದಿನಗಳಲ್ಲಿ "ವಿಂಬಲ್ಡನ್" ಟೆನಿಸ್ ಟೂರ್ನಮೆಂಟ್ ಬರುತ್ತದೆ. ಅಲ್ಲಿ ಗೆದ್ದು ಹೊಳೆಯುವ ಕಪ್ ಪಡೆಯಬೇಕಾದರೆ ಒಂದೇಸಮನೆ ಏಳು ಪಂದ್ಯಗಳನ್ನು ಗೆಲ್ಲಬೇಕು. ಪ್ರತಿಯೊಂದೂ ಕನಿಷ್ಠ ಆರು ಗೇಮುಗಳುಳ್ಳ ಐದು ಸೆಟ್ಟುಗಳದು. ಮೂರು ಸೆಟ್ಟು ಒಂದೇಸಮನೆ ಗೆದ್ದರೆ ಆ ಪಂದ್ಯ ಗೆದ್ದಂತೆ. ನಂತರ ಮುಂದಿನದು. ಹೀಗೆ. ಆದರೆ ಮೂರು ಸೆಟ್ಟು ಒಂದೇ ಸಮನೆ ಗೆಲ್ಲುವುದು ಅಷ್ಟು ಸುಲಭವಲ್ಲ. ಸುಮಾರು ಶೇಕಡಾ ಎಪ್ಪತ್ತು ಭಾಗ ಪಂದ್ಯಗಳನ್ನು ಮೂರು ಸೆಟ್ಟುಗಳು ಗೆದ್ದು ಮುಗಿಸುತ್ತಾರೆ. ಮತ್ತೆ ಶೇಕಡಾ ಇಪ್ಪತ್ತು ಭಾಗ ಪಂದ್ಯಗಳು ನಾಲ್ಕನೇ ಸೆಟ್ಟಿನವರೆಗೆ ಹೋಗುತ್ತವೆ. ಕೇವಲ ಶೇಕಡಾ ಹತ್ತು ಭಾಗ ಪಂದ್ಯಗಳು ಐದನೆಯ ಸೆಟ್ಟಿನವರೆಗೆ ಹೋಗುತ್ತವೆ. 

ಒಬ್ಬ ಆಟಗಾರನನ್ನು ತೆಗೆದುಕೊಳ್ಳೋಣ. ಸ್ವಲ್ಪ ಉಡಾಫೆಯವನು ಅವನು. ಹೇಗೂ ಐದರಲ್ಲಿ ಮೂರು ಸೆಟ್ಟು ಗೆಲ್ಲಬೇಕು ತಾನೇ. ಮೂರು, ನಾಲ್ಕು ಮತ್ತು ಐದನೆಯದನ್ನು ಗೆಲ್ಲುತ್ತೇನೆ ಎಂದು ಆಡುತ್ತಾನೆ. ಮೊದಲೆರಡು ಲೆಕ್ಕವಿಲ್ಲ ಅವನಿಗೆ. ನಾವು ಅನೇಕ ಪಂದ್ಯಗಳನ್ನು ನೋಡಿದ್ದೇವೆ. ಕೆಲವು ವೇಳೆ ಆಟಗಾರನೊಬ್ಬ ಏನಾಗುತ್ತಿದೆ ಎಂದು ತಿಳಿಯುವ ವೇಳೆ ಎದುರಾಳಿ ಒಂದು ಸೆಟ್ಟು ಗೆದ್ದೇಬಿಟ್ಟಿರುತ್ತಾನೆ. ಎರಡನೆಯ ಸೆಟ್ಟಿನಲ್ಲಿ ಸ್ವಲ್ಪ ಉಡಾಫೆ ಮಾಡಿದರೆ ಮುಗಿಯಿತು. ಎದುರಾಳಿ ನಾಲ್ಕು, ಐದಕ್ಕೆ ಅವಕಾಶವನ್ನೇ ಕೊಡನು. ಮುಗಿದೇಹೋಯಿತು ಪಂದ್ಯ. 

ನಮ್ಮ ಜೀವನದಲ್ಲಿ ಹೀಗೆ ಇಪ್ಪತ್ತು ವರುಷಗಳ ಐದು ಸೆಟ್ಟುಗಳು. ಮೊದಲು ಬಾಲ್ಯ ಮತ್ತು ವಿದ್ಯಾಭ್ಯಾಸ. ನಂತರ ನೌಕರಿ ಅಥವಾ ವ್ಯವಹಾರ, ವಿವಾಹ, ಮನೆಕಟ್ಟುವುದು, ಮಕ್ಕಳು ಮುಂತಾದುವು. ಮೂರನೆಯದು ಜವಾಬ್ದಾರಿ ಕಳೆದುಕೊಳ್ಳುವುದು ಮತ್ತು ಸಾಲ ತೀರಿಸುವುದು. ಉಳಿತಾಯ ಮಾಡಿ ಮುಂದಿನ ಜೀವನ ಹಸನು ಮಾಡಿಕೊಳ್ಳುವುದು. ಏಕೆ ಹುಟ್ಟಿದೆವು, ಏನು ಸಾಧನೆ ಮಾಡಬೇಕು ಎಂದು ಯೋಚಿಸುವುದು ಅರುವತ್ತು ದಾಟಿದ  ಮೇಲೆ. ನಿವೃತ್ತಿಯಾದ ನಂತರ ಚೆನ್ನಾಗಿ ಸಾಧನೆ ಮಾಡುವುದು. ಆಗ ಬೇರೆ ಏನೂ ಚಿಂತೆ ಇಲ್ಲವಲ್ಲ. ಹೀಗೆ ಲೆಕ್ಕಾಚಾರ. 

ಆದರೆ ನಾವು ಆಡುತ್ತಿರುವುದು ನೆಟ್ಟಿನ ಆ ಕಡೆ ನಿಂತಿರುವ "ಕಾಲರಾಯ" ಎನ್ನುವ ಆಟಗಾರನ ವಿರುದ್ಧ. ಆಡಾಡುತ್ತಿರುವಂತೆಯೇ ಮೊದಲ ಇಪ್ಪತ್ತು ವರುಷ ಅವನು ತಿಂದುಹಾಕಿ ಮೊದಲ ಸೆಟ್ಟು ಮುಗಿಸಿದ್ದಾನೆ. ಎರಡು, ಮೂರು ಪರರ ಸೇವೆಯಲ್ಲಿ ಕಳೆಯಿತು. ಕಾಲರಾಯ ಅನೇಕ ವೇಳೆ ಅಷ್ಟರಲ್ಲೇ ಪಂದ್ಯ ಮುಗಿಸಿಬಿಟ್ಟಿರುತ್ತಾನೆ. ಏನೋ ಪುಣ್ಯವಶಾತ್, ನಾಲ್ಕನೆಯ ಸೆಟ್ಟಿಗೆ ತಲುಪಿದೆವು ಅನ್ನೋಣ. ಉದ್ಯೋಗ-ವ್ಯವಹಾರದಲ್ಲಿ ಇದ್ದಾಗ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿ ಬಿಟ್ಟಿದ್ದಾರೆ. ಶಕ್ತಿ ಕುಂದಿದೆ. ಕಣ್ಣು-ಕಿವಿ ಕಾಣಿಸದು-ಕೇಳಿಸದು. ಅದಕ್ಕೇ ಅವರು ನಿವೃತ್ತಿ ಕೊಟ್ಟಿದ್ದಾರೆ. ಕೆಲವರಿಗೆ ಆಗ ಇನ್ನೊಂದು ಕೆಲಸ ಹುಡುಕುವ ಹುಮ್ಮಸ್ಸು. ಅದು ಸಿಕ್ಕಿದರಂತೂ ಹಿಗ್ಗೋ ಹಿಗ್ಗು. ಎದುರಿನ ಕಾಲರಾಯ ನಗುತ್ತಿದ್ದಾನೆ. ಅವನು ಕೆಲವರನ್ನು ಆಟದ ಮಧ್ಯದಲ್ಲೇ ರಿಟೈರ್ ಮಾಡಿಸುವ ಧೀರ. ಹಾಗೂ ಮಾಡಿಯಾನು. ಅವನಿಗೆ ಆಟ ಸಾಕು ಎನ್ನಿಸಿದಾಗ. "ಕಸ್ತೂರಿ ನಿವಾಸ" ಚಿತ್ರದ "ಆಡಿಸುವಾತ ಬೇಸರವಾಗಿ ಆಟ ಮುಗಿಸಿದ" ಎನ್ನುವಂತೆ. 

ಮೊದಲ ಮೂರು ಸೆಟ್ಟುಗಳಲ್ಲಿ ಸಾಧನೆ ಮಾಡಲಿಲ್ಲ. ಈಗ ಮಾಡಬೇಕೆಂದರೂ ಆಗುತ್ತಿಲ್ಲ. ಇದಕ್ಕಿಂತ ಹೆಚ್ಚಾಗಿ ಯಾವಾಗ ಪಂದ್ಯ ಮುಗಿಸಿ ಕಾಲರಾಯ ಆಟದ ಅಂಗಳದಿಂದ ಹೊರ ತಳ್ಳುತ್ತಾನೋ, ಗೊತ್ತಿಲ್ಲ. 

ಪಂದ್ಯ ಇನ್ನೇನು ಸೋಲಬೇಕು ಎನ್ನುವಾಗ "ಅಯ್ಯೋ, ಮೊದಲಿಂದ ಗಮನವಿಟ್ಟು ಆಡಬೇಕಿತ್ತು" ಎಂದು ಪರಿತಪಿಸುವ ಆಟಗಾರನಂತೆ ಜೇವನ. ಇದನ್ನೇ ದಾಸರು "ಆಗ ನೆನೆಯಲಿಲ್ಲ" ಎಂದು ಹೇಳಿದ್ದು. 
***** 

"ಅಯ್ಯೋ, ಇದನ್ನೆಲ್ಲಾ ಯಾರು ನಂಬುವವರು? ಇರುವಷ್ಟು ದಿನ ಸುಖಪಡೋಣ. ಇನ್ನೊಂದು ಜನ್ಮ ಇದೆ ಎಂದು ಯಾರೂ ಬಂದು ಹೇಳಿಲ್ಲ. ಇದ್ದರೆ, ಅದು ಬಂದಾಗ ನೋಡೋಣ" ಅನ್ನಬಹುದು. ಅದೂ ತಪ್ಪಲ್ಲ. ಆದರೆ ಅದೊಂದು ಅಂತ ಇದ್ದರೆ, ಆಗ? 

ಇದೆಲ್ಲಾ ಅವರವರ ತೀರ್ಮಾನಕ್ಕೆ ಬಿಟ್ಟ ವಿಷಯ. ಜೀವನದಲ್ಲಿ ನೆಮ್ಮದಿ ಹೇಗೆ ಹುಡುಕಬೇಕು ಎಂದು ಯಾರೂ ಬಲವಂತ ಮಾಡುವಹಾಗಿಲ್ಲವಲ್ಲ. 

Wednesday, June 4, 2025

ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ


ಸಾಮಾನ್ಯವಾಗಿ ಕುಟುಂಬಗಳಲ್ಲಿ ಸಂಜೆಯ ಹೊತ್ತು ಮನೆಮಂದಿಯೆಲ್ಲ ಒಟ್ಟಾಗಿ ಸೇರಿ, ಒಂದೆಡೆ ಕುಳಿತು ಸುಖ-ದುಃಖಗಳನ್ನು ಹಂಚಿಕೊಳ್ಳುವುದು, ಅಂದಿನ ಆಗು-ಹೋಗುಗಳನ್ನು ಚರ್ಚಿಸುವುದು ನಡೆಯುತ್ತದೆ. ಕೆಲಸ-ಕಾರ್ಯಗಳಲ್ಲಿ ನಿರತರಾದ ಕುಟುಂಬದ ಸದಸ್ಯರು ಪರಸ್ಪರ ಸಿಗುವುದು ಸಂಜೆಯ ವೇಳೆಯಲ್ಲಿಯೇ ಎನ್ನುವ ಕಾಲವೊಂದಿತ್ತು. ಈಗ ಖಚಿತವಾಗಿ ಹಾಗೆ ಹೇಳಲು ಬರುವುದಿಲ್ಲ. ಟೆಲಿವಿಶನ್ ಸೆಟ್ಟುಗಳು ಮನೆಯ ದಿವಾನಖಾನೆಯನ್ನು ಅಲಂಕರಿಸಲು ಪ್ರಾರಂಭಿಸಿದಾಗಿನಿಂದ ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಅನೇಕ ಬದಲಾವಣೆಗಳಾಗಿವೆ. ನೆಲದಮೇಲೆ ಚಾಪೆ ಅಥವಾ ಜಮುಖಾನ ಹಾಸಿ ಕುಳಿತುಕೊಳ್ಳುವುದು ಮರೆತೇಹೋಗಿದೆ. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದು ಕಡಿಮೆಯಾಗಿದೆ. ಟೆಲಿವಿಶನ್ ಜೊತೆಯಲ್ಲಿ ಬಂದಿರುವ ಸೋಫಾಗಳ ಮೇಲೆ ಕುಳಿತು ಕೈನಲ್ಲಿ ತಟ್ಟೆ ಹಿಡಿದು ತಿನ್ನುವುದು ಅಭ್ಯಾಸವಾಗಿದೆ. ಅನೇಕ ವೇಳೆ ಏನು ತಿನ್ನುತ್ತಿದ್ದೇವೆ ಅನ್ನುವುದು ಗೊತ್ತೂ ಆಗದಂತೆ ವಾತಾವರಣ ಇರುತ್ತದೆ. ಅಡುಗೆ ಮಾಡುವವರಿಗೆ ಇದು ಬಹಳ ಒಳ್ಳೆಯದು.  ಉಪ್ಪು-ಖಾರ  ಹೆಚ್ಚು-ಕಡಿಮೆ ಆದರೂ ಯಾರ ಗಮನಕ್ಕೂ ಬರುವುದಿಲ್ಲ. 

ಮೊದಲು ಒಂದು ಮನೆಗೆ ಒಂದು ಟೆಲಿವಿಶನ್ ಸೆಟ್ ಇರುತ್ತಿತ್ತು. ಈಗ ಕೋಣೆಗೊಂದರಂತೆ ಅವು ಬಂದು ಕೂತಿವೆ. ಆದರೂ ಮನೆಮಂದಿ ಎಲ್ಲರೂ ಒಟ್ಟಾಗಿ ನೋಡುವ ಕೆಲವು ಧಾರಾವಾಹಿಗಳು ಇರುತ್ತವೆ. ಕನ್ನಡದಲ್ಲಿಯೂ ಹಾಗೆ ಉಂಟು. ಶ್ರೀ ಟಿ. ಏನ್. ಸೀತಾರಾಮ್ ಅವರ ಧಾರಾವಾಹಿಗಳು ಅಂತಹವು. ಈಚೆಗೆ "ಮಾಡು ಸಿಕ್ಕದಲ್ಲ" ಎನ್ನುವ ಧಾರಾವಾಹಿ ಪ್ರಸಾರವಾಗುತ್ತಿದೆಯಂತೆ. ಸೀತಾರಾಮ್ ಅವರ ಬೇರೆ ಧಾರಾವಾಹಿಗಳಂತೆ ಇದೂ ಜನಪ್ರಿಯವಾಗುವುದರಲ್ಲಿ ಅನುಮಾನವಿಲ್ಲ. 

ಇಂದಿನ ಯುವ ಜನಾಂಗಕ್ಕೆ ಅನೇಕ ಕನ್ನಡ ಪದಗಳು ಅಪರಿಚಿತವಾಗುತ್ತಿವೆ. ಪಟ್ಟಣಗಳಲ್ಲಿ ಹುಟ್ಟಿ ಬೆಳೆದವರಿಗಂತೂ ಈ ಸಮಸ್ಯೆ (ಇದೊಂದು ಸಮಸ್ಯೆ ಎಂದು ತಿಳಿದರೆ) ಇನ್ನೂ ಹೆಚ್ಚು. "ಮಾಡು" ಅನ್ನುವುದು ಒಂದು ಕ್ರಿಯಾಪದವಾಗಿ, ಇಂಗ್ಲೀಷಿನಲ್ಲಿ "ಡು" ಎನ್ನುವುದಕ್ಕೆ ಸಮಾನವಾಗಿ, ಅವರಿಗೆ ಗೊತ್ತು. "ಗೂಡು" ಅನ್ನುವುದರದು ಇನ್ನೂ ಕಡಿಮೆ ಪರಿಚಯ. ಆ ಪದಕ್ಕೆ "ಮನೆ" ಎಂದು ಕೆಲವರಿಗೆ ಅರ್ಥ ಆಗುತ್ತದೆ. ಅದೂ ಒಂದು ಅರ್ಥವೇ. "ಹಕ್ಕಿಗಳ ಗೂಡು" ಎನ್ನುವಂತೆ ಮನುಷ್ಯರ ಗೂಡು ಅಂದರೆ ಮನೆ. ಅದು ಸರಿಯೇ. 

ಯುವ ಮಿತ್ರರೊಬ್ಬರು ಇದರ ಬಗ್ಗೆ ವಿವರಣೆ ಕೇಳಿದ್ದಾರೆ. ಇದು ಒಂದು ಹಾಡಿನ ಮೊದಲ ಸಾಲು ಎಂದು ಕೆಲವರಿಗೆ ಗೊತ್ತು. ಆದರೆ ಪೂರ್ತಿ ಹಾಡು ಅನೇಕರಿಗೆ ಗೊತ್ತಿಲ್ಲ. ಹಾಡು ಗೊತ್ತಿದ್ದವರಿಗೆ ಅದರ ಅರ್ಥ ಗೊತ್ತಿಲ್ಲ. "ಬಾಹ್ಯಾರ್ಥ - ಗೂಡಾರ್ಥ - ಅಂತರಾರ್ಥ" ಎನ್ನುವ ಹಿಂದಿನ ಒಂದು ಸಂಚಿಕೆಯಲ್ಲಿ ಈ ಮೂರು ಅರ್ಥಗಳ ಬಗ್ಗೆ ಸ್ವಲ್ಪ ಚರ್ಚೆ ಮಾಡಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ)  "ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎನ್ನುವುದು ಶ್ರೀ ಪುರಂದರದಾಸರ ಒಂದು ಕೃತಿ. ಅದನ್ನು ಓದಿದರೆ ಅಥವಾ ಕೇಳಿದರೆ ಅರ್ಥವೇನೋ ಆಗುತ್ತದೆ. ಆದರೆ ಈ ಕೀರ್ತನೆ ಅನೇಕ ಗಹನವಾದ ಪ್ರಮೇಯಗಳನ್ನು ಒಳಗೊಂಡ ಕೃತಿ. ಪ್ರತಿಯೊಂದು ಪದದ ಹಿನ್ನೆಲೆ ಮತ್ತು ಅಂತರಾರ್ಥ ಗೊತ್ತಿಲ್ಲದಿದ್ದರೆ ಅದೊಂದು ಒಗಟಿನಂತೆ ಆಗುತ್ತದೆ. ಇದರ ಸ್ವಲ್ಪ ವಿವರಣೆ ಈಗ ನೋಡೋಣ. 

*****

"ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎನ್ನುವ ಹಾಡು ಮೂರು ನುಡಿಗಳನ್ನು ಒಳಗೊಂಡಿದೆ. ಎರಡು ಸಾಲುಗಳ ಒಂದು ನುಡಿ, ಇಂತಹ ಮೂರು ನುಡಿಗಳುಳ್ಳ ಒಂದು ಹಾಡು. ಅವುಗಳ ಮೊದಲಿಗೆ ಎರಡು ಸಾಲುಗಳ ಮುಖ್ಯ ಪ್ರಮೇಯ. ನಂತರದ ಮೂರು ನುಡಿಗಳು ಆ ಪ್ರಮೇಯವನ್ನು ವಿಸ್ತರಿಸುವ ವಿವರಣೆ. 

ಮೊದಲಿಗೆ ಈ ಹಾಡಿನ ಪೂರ್ತಿ ಪಾಠವನ್ನು ತಿಳಿಯೋಣ. ಅದು ಹೀಗಿದೆ:

ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ 
ಜೋಡಿ ಹೆಂಡಿರಿಗಂಜಿ ಓಡಿಹೋಗುವಾಗ, ಗೋಡೆ ಬಿದ್ದು ಬಯಲಾಯಿತಲ್ಲಾ 

ಎಚ್ಚರಗೊಳಲಿಲ್ಲ, ಮನವೇ  ಹುಚ್ಚನಾದೆನಲ್ಲಾ 
ಅಚ್ಚಿನೊಳಗೆ ಮೆಚ್ಚು, ಮೆಚ್ಚಿನೊಳಗೆ ಅಚ್ಚು, ಕಿಚ್ಚೆದ್ದು ಹೋಯಿತಲ್ಲಾ 

ಮುಪ್ಪು ಬಂದಿತಲ್ಲಾ, ಪಾಯಸ ತಪ್ಪದೆ ಉಣಲಿಲ್ಲಾ 
ತುಪ್ಪದ ಬಿಂದಿಗೆ ತಿಪ್ಪೆಯಮೇಲೆ ಧೊಪ್ಪನೆ ಬಿತ್ತಲ್ಲಾ 

ಯೋಗವು ಬಂತಲ್ಲಾ, ಬದುಕು ವಿಭಾಗವಾಯಿತಲ್ಲಾ 
ಭೋಗಿಶಯನ ಶ್ರೀ ಪುರಂದರವಿಠಲನ ಆಗ ನೆನೆಯಲಿಲ್ಲಾ  

ಎಲ್ಲ ಕಡೆಯೂ "ಲ್ಲಾ" ಅನ್ನುವುದು ದೀರ್ಘವೇ. "ಎಚ್ಚರಗೊಳಲಿಲ್ಲ" ಎನ್ನುವುದನ್ನು ಬಿಟ್ಟು.  ಏನಾದರೂ ಕಳೆದು ಹೋದರೆ "ಹೋಯಿತಲ್ಲ" ಎನ್ನುತ್ತೇವೆ. ತುಂಬಾ ಪ್ರಿಯವಾದದ್ದು ಕಳೆದು ಹೋದರೆ ಹಲಬುತ್ತೇವೆ. ಆಗ "ಹೋಯಿತಲ್ಲ" ಅನ್ನುವುದಿಲ್ಲ. "ಹೋಯಿತಲ್ಲಾ" ಎಂದು ಕೂಗುತ್ತೇವೆ. ದಾಸರೂ ಹೀಗೆ ಆರ್ತರಾಗಿ ಹೇಳುವಾಗ ಹೋಯಿತಲ್ಲಾ, ಸಿಕ್ಕದಲ್ಲಾ, ಮುಂತಾಗಿ ಹೇಳುತ್ತಾರೆ. ಇದನ್ನು ಗಮನಿಸಬೇಕು. ಧಾರಾವಾಹಿಯಲ್ಲಿ ತೋರಿಸುವಂತೆ ಅದು "ಮಾಡು ಸಿಕ್ಕದಲ್ಲ"  ಎಂದಲ್ಲ. ವಾಸ್ತವವಾಗಿ "ಮಾಡು ಸಿಕ್ಕದಲ್ಲಾ" ಎಂದು. 

*****

ಆರ್. ಸಿ. ಸಿ. ಮನೆಗಳು ಇಲ್ಲದಿದ್ದ ಕಾಲ. ಮಣ್ಣಿನ ಹೆಂಚು ಛಾವಣಿಗೆ ಹೊದ್ದಿಸಿದ ಮನೆಗಳೇ ಇದ್ದ ಕಾಲ. ಬಯಲು ಸೀಮೆಯಲ್ಲಿ ನಾಡಹೆಂಚುಗಳ ಮನೆಗಳು. ಕೆಲವೆಡೆ "ಮಂಗಳೂರು ಹೆಂಚು" ಹೊದಿಸಿದ ಮನೆಗಳು. ಮೇಲೆ ಕೊಟ್ಟಿರುವ ಚಿತ್ರ ನೋಡಿ. ಛಾವಣಿಗೆ ^ ಆಕಾರ ಇರುತ್ತಿತ್ತು. ಮಳೆಯ ನೀರು ಸುಲಭವಾಗಿ ಹರಿದು ಹೋಗಲು ಈ ವ್ಯವಸ್ಥೆ. ಚಾವಣಿಯ ಮೇಲಿನ ಭಾಗ ದಿನನಿತ್ಯದ ವಾಸಕ್ಕೆ ಅಷ್ಟು ಯೋಗ್ಯವಲ್ಲ. ಆದುದರಿಂದ ಅಲ್ಲಿ "ಮಾಡು" ಎಂದು ಕರೆಯುವ ಜಾಗದ ವ್ಯವಸ್ಥೆ ಮಾಡುತ್ತಿದ್ದರು. ಅದನ್ನು "ಅಟ್ಟ" ಎಂತಲೂ ಕರೆಯುತ್ತಿದ್ದರು. ಇಂಗ್ಲೀಷಿನಲ್ಲಿ Attic ಅನ್ನುತ್ತಾರೆ. ಮನೆಗಳಲ್ಲಿ ಹೆಚ್ಚಿನ ಪೀಠೋಪಕರಣಗಳು, ಕಪಾಟು ಮುಂತಾದುವುಗಳು ಇರುತ್ತಿರಲಿಲ್ಲ. ದಿನನಿತ್ಯ ಉಪಯೋಗಿಸುವ ಪದಾರ್ಥಗಳು ಕೆಳಗೆ ನೆಲದ ಮೇಲೆ ಇರುತ್ತಿದ್ದವು. ಆಗೊಮ್ಮೆ-ಈಗೊಮ್ಮೆ ಉಪಯೋಗಿಸುವ ಪದಾರ್ಥಗಳನ್ನು ಅಟ್ಟದ ಮೇಲೆ ಇಡುತ್ತಿದ್ದರು. ಈ ಕಾರಣಕ್ಕಾಗಿ ಕೆಲವು ಗೂಡುಗಳನ್ನು ಮಾಡಿರುತ್ತಿದ್ದರು. ಇಂತಹ ಗೂಡುಗಲ್ಲಿ ಇಟ್ಟ ಪದಾರ್ಥಗಳನ್ನು ಬೇಕಾದಾಗ ಹೊರತೆಗೆದು ಉಪಯೋಗಿಸಲು ಅಟ್ಟ ಹತ್ತಿ, ಅಲ್ಲಿನ ಗೂಡಿನಿಂದ  ಹೊರತೆಗೆಯಬೇಕಾಗುತ್ತಿತ್ತು. ಇದಕ್ಕೆ ಹೆಚ್ಚಿನ ಪ್ರಯತ್ನ ಬೇಕಿತ್ತು. "ಮಾಡು" ಮತ್ತು  "ಗೂಡು" ಅನ್ನುವ ಪದಗಳಿಗೆ ಈ ಹಿನ್ನೆಲೆ. 

ಮೇಲಿನದು ಹೊರ ಅರ್ಥ. ಶ್ರೀ ಪುರಂದರದಾಸರು ವೈಷ್ಣವ ಸಿದ್ಧಾಂತದ ಪ್ರತಿಪಾದಕರು. ನಾವು ಈಗ ಬದುಕಿರುವುದು ಭೂಲೋಕ. ಅದು ಕೆಳಗಿದೆ ಎಂದು ನಂಬಿಕೆ. ಶ್ರೀವೈಕುಂಠ ಇದರ ಮೇಲಿನ ಲೋಕ. ಆದ್ದರಿಂದ ಅದು ನಮಗೆ ಮಾಡು. ಅದರಲ್ಲಿನ ಗೂಡು ಎಂದರೆ ಆ ವೈಕುಂಠದಲ್ಲಿ ನಾವು ಪಡೆಯಬಹುದಾದ ಸ್ಥಾನ. ಒಟ್ಟಿನಲ್ಲಿ ಈ ಜೀವನ-ಮರಣ ಚಕ್ರದಿಂದ ಹೊರಬಂದು ದುಃಖವಿಲ್ಲದ, ಒಂದು ಶಾಶ್ವತವಾದ ಸ್ಥಾನ ಹೊಂದುವುದು. "ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎಂದರೆ ಸರಿಯಾಗಿ ಪ್ರಯತ್ನ ಮಾಡದೇ ಇರುವುದರಿಂದ "ಆ ವೈಕುಂಠ ಸಿಗಲಿಲ್ಲ. ಅಲ್ಲಿ ನನ್ನ ವಾಸದ ಜಾಗ ಸಿಗಲಿಲ್ಲ " ಎಂದು ಪ್ರಲಾಪಿಸುವುದು. ಇದು ಅಂತರಾರ್ಥ. 

ಈ ಹೇಳಿಕೆಯಲ್ಲಿ ಒಂದು ಗೂಡಾರ್ಥವೂ ಇದೆ. ನಮ್ಮ ಶರೀರವೇ ಒಂದು ಮನೆ. ಸರಿಯಾಗಿ ನೋಡಿದರೆ ಕಾಲು, ಸೊಂಟ, ಹೊಟ್ಟೆ ಮುಂತಾದುವು ಮನೆಯ ಕೆಳಭಾಗಗಳು. ಹೊಟ್ಟೆಯ ಮೇಲಿನ ಭಾಗ ಈ ದೇಹವೆಂಬ ಮನೆಯ ಮಾಡು. ಹೃದಯ ಈ ದೇಹವೆಂಬ ಮನೆಯ ಮಾಡಿನ ಭಾಗದಲ್ಲಿರುವ ಒಂದು ಗೂಡು. ಈ ಮನೆಯ ಮೇಲ್ಭಾಗದ ಮಾಡಿನ ಹೃದಯವೆಂಬ ಗೂಡಿನಲ್ಲಿ ಪರಮಾತ್ಮನೆಂಬ ದಿವ್ಯ ವಸ್ತು ಇದೆ. ಅವನು ಅಲ್ಲಿ ನೆಲೆಸಿದ್ದಾನೆ. ಮಾಡು ಹತ್ತಿ ಆ ಗೂಡಿನಲ್ಲಿರುವ ವಸ್ತುವನ್ನು ನಾವು ಪಡೆಯಲು ಪ್ರಯತ್ನಿಸಲೇ ಇಲ್ಲ. ಮನೆಯ ಕೆಳಗಿರುವ ಹೊಟ್ಟೆ ಹೊರೆಯುವ ಪ್ರಯತ್ನದಲ್ಲೇ ಜೀವನವೆಲ್ಲ ಕಳೆಯಿತು! ಯಾವುದು ಸುಖವೇ ಅಲ್ಲವೋ ಅದರ ಹಿಂದೆ ಬಿದ್ದು ನಿಜವಾದ ಸುಖ ಪಡೆಯುವ ಪ್ರಯತ್ನವನ್ನೇ ಮಾಡಲಿಲ್ಲ. ಈಗ, ಜೀವನದ ಕೊನೆಯಲ್ಲಿ, ಮಾಡಿನ ಗೂಡಿನಲ್ಲಿರುವ ಆ ಮುಖ್ಯ ವಸ್ತು ಸಿಗಲಿಲ್ಲ ಎನ್ನುವ ಕೊರಗು. 

ಪರಮಾತ್ಮನೆಂಬ ದಿವ್ಯ ವಸ್ತುವನ್ನು ನಾವು ದಿನಬಳಕೆಗಾಗಿಯೇ ಇಟ್ಟುಕೊಳ್ಳಬೇಕಿತ್ತು. ಆದರೆ ಬೇರೆ ವಸ್ತುಗಳ ಮೋಹದಿಂದ ಇಂತಹ ಮುಖ್ಯ ವಸ್ತುವನ್ನು ಮಾಡಿನ ಮೇಲಿನ ಗೂಡಿನಲ್ಲಿ ಭದ್ರವಾಗಿಟ್ಟೆವು. ಮುಂದೆ ಎಂದೋ, ವೃದ್ಧಾಪ್ಯದಲ್ಲಿ, ಉಪಯೋಗಿಸುವ ಎನ್ನುವ ಅಭಿಲಾಷೆ. ಆದರೆ ಮುದಿತನದಲ್ಲಿ ಮೇಲೆ ಹತ್ತಿ ಆ ಪದಾರ್ಥವನ್ನು ಪಡೆಯುವ ಶಕ್ತಿ ಕುಂದಿದೆ. 

*****

"ಜೋಡಿ ಹೆಂಡಿರಿಗಂಜಿ ಓಡಿಹೋಗುವಾಗ" ಎನ್ನುವುದು ಈ ಹಾಡಿನ ಜೀವಾಳ. (ನಮ್ಮ ಉಗುರು ಮತ್ತು ಬೆಟ್ಟುಗಳ ಚರ್ಮದ ಮಧ್ಯೆ ಇರುವ ದಾರದಂತಹ ವಸ್ತುವಿಗೆ "ಜೀವಾಳ" ಎನ್ನುತ್ತಾರೆ. ಈ ಜೀವಾಳ ಉಗುರನ್ನು ದೇಹಕ್ಕೆ ಬಂಧಿಸಿಟ್ಟಿದೆ. ಅದು ಇಲ್ಲದಿದ್ದರೆ ಉಗುರೂ ಸಹ ಹಲ್ಲಿನಂತೆ ಬಿದ್ದುಹೋಗಬಹುದು. ಒಮ್ಮೊಮ್ಮೆ ಉಗುರು ಕತ್ತರಿಸುವಾಗ ಈ ಜೀವಾಳದ ಸ್ವಲ್ಪ ಭಾಗ ಕತ್ತರಿಸುವುದೂ ಉಂಟು. ಆಗ ಬಹಳ ನೋವಾಗುತ್ತದೆ. ಅದನ್ನು ಅನುಭವಿಸಿದವರಿಗೆ ಗೊತ್ತು). ಈ ಜೋಡಿ ಹೆಂಡಿರು ಯಾರು? ಅವರು ಗಂಡಸರಿಗೆ ಮಾತ್ರವೇ ಸಂಬಂಧಿಸಿದವರೇ? ಹಾಗಿದ್ದರೆ ಈ ಹಾಡಿಗೂ ಸ್ತ್ರೀಯರಿಗೂ ಏನೂ ಸಂಬಂಧವಿಲ್ಲವೇ? ಒಬ್ಬಳೇ ಹೆಂಡತಿ ಇರುವ ಗಂಡಸಿಗೂ ಇದು ಬೇಕಾಗಿಲ್ಲ, ಅಲ್ಲವೇ? ಇವೆಲ್ಲವೂ ಸಾಧುವಾದ ಪ್ರಶ್ನೆಗಳೇ. 

ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಶ್ರೀಮದ್ ಭಾಗವತದ "ಪುರಂಜನೋಪಾಖ್ಯಾನ" ನೋಡಬೇಕು. ಅದರ ವಿವರಗಳನ್ನು ಮತ್ತೊಮ್ಮೆ ವಿವರವಾಗಿ ನೋಡೋಣ. ಈಗ ಸೂಕ್ಷ್ಮವಾಗಿ ಇಷ್ಟು ಹೇಳಿದರೆ ಸಾಕು. "ಪುರ" ಅಂದರೆ ಈ ದೇಹ ಅನ್ನುವ ಪಟ್ಟಣ. ಈ ದೇಹವೆಂಬ ಮನೆಯಲ್ಲಿ ಯಜಮಾನನಾಗಿ ವಾಸಿಸುವವನೇ "ಪುರುಷ" ಎಂಬ ಪರಮಾತ್ಮ. ಆ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುವವನೇ ಜೀವ. ಈ ಜೀವ ಗಂಡು ದೇಹದಲ್ಲಾದರೂ ಇರಬಹುದು; ಹೆಣ್ಣು ದೇಹದಲ್ಲಾದರೂ ಇರಬಹುದು. ಆದ್ದರಿಂದ ಇಲ್ಲಿ ಹೇಳಿದ ಎರಡು ಹೆಂಡಿರು ಸ್ತ್ರೀಯರಿಗೂ ಮತ್ತು ಪುರುಷರಿಗೂ ಸಮಾನವಾಗಿ ಅನ್ವಯ ಆಗುತ್ತದೆ. ಇಲ್ಲಿ ಹೆಂಡಿರು ಅಂದರೆ ನಮ್ಮ ವ್ಯಾವಹಾರಿಕ ಜೀವನದಲ್ಲಿ ನಿರ್ದೇಶಿಸುವ ಹೊಂಡತಿ ಅಲ್ಲ. ಆದ್ದರಿಂದ ಇದು ಎಲ್ಲರಿಗೂ ಸಮಾನವಾಗಿ ಅನ್ವಯ. 

ಪುರಂಜನೋಪಾಖ್ಯಾನದಲ್ಲಿ "ಬುದ್ಧೀತು ಪ್ರಮದಾಮ್ ವಿದ್ಧಿ" ಎಂದು ಹೇಳಿದ್ದಾರೆ. ಅಂದರೆ "ಬುದ್ಧಿ ಅನ್ನುವುದು ಒಂದು ಸ್ತ್ರೀಯಂತೆ. ಅದನ್ನು ಜೀವನು ಹೆಂಡತಿ ಎನ್ನುವಂತೆ ತಿಳಿಯಬೇಕು" ಎಂದು ಅರ್ಥ. ಹೆಂಡತಿ (ಅಥವಾ ಗಂಡ) ಸಾಂಸಾರಿಕ ಜೀವನದಲ್ಲಿ ಬಹಳ ಮುಖ್ಯ. ಸುಖಜೀವನಕ್ಕೆ ಹೇಗೆ ಹೆಂಡತಿ (ಅಥವಾ ಗಂಡ) ಸಹಕಾರಿಯಾಗಬಹುದೋ ಹಾಗೆಯೇ ಜೀವನ ದುರ್ಭರ ಆಗಲೂ ಕಾರಣ ಆಗಬಹುದು. ಬುದ್ಧಿ ಒಂದು ಹೆಂಡತಿ ಆದರೆ ಎರಡನೆಯ ಹೆಂಡತಿ ಯಾರು? ಅದು "ಮನಸ್ಸು". ಬುದ್ಧಿ ಮತ್ತು ಮನಸ್ಸು ಪ್ರತಿಯೊಬ್ಬರಿಗೂ (ಹೆಣ್ಣು ಗಂಡು ಎಂಬ ಭೇದವಿಲ್ಲದೆ} ಇರುವ ಇಬ್ಬರು ಹೆಂಡತಿಯರು. 

ಈ ಇಬ್ಬರು ಹೆಂಡತಿಯರು ನಮಗೆ ಸಹಕಾರಿಯಾಗಿರುವಂತೆ ನೋಡಿಕೊಳ್ಳಲಾಗದೆ ಅವರ ಭಯಕ್ಕೆ ಶರಣಾಗುವುದು "ಜೋಡಿ ಹೆಂಡರಿಗಂಜಿ ಓಡಿಹೋಗುವುದು". "ಏನು ಮಾಡಲಿ? ನನ್ನ ಮನಸ್ಸು ನನ್ನ ಮಾತು ಕೇಳುವುದಿಲ್ಲ. ಬುದ್ಧಿ ನನ್ನ ಸ್ಥಿಮಿತದಲ್ಲಿಲ್ಲ" ಎಂದು ಕೈಚೆಲ್ಲುವುದೇ ಈ ಇಬ್ಬರು ಹೆಂಡಿರಿಗಂಜಿ ಓಡಿಹೋಗುವುದು. ಪ್ರಯತ್ನಪೂರ್ವಕವಾಗಿ ಇವೆರಡನ್ನೂ ನಮ್ಮ ಗುರಿ ಸಾಧನೆಗೆ ಅನುಕೂಲ ಮಾಡಿಕೊಳ್ಳುವುದೇ ಅವರ ಜೊತೆ ಹೊಡೆದಾಡಿ ಗೆಲ್ಲುವುದು. ಹೀಗೆ ಗೆದ್ದರೆ ಓಡಿಹೋಗಬೇಕಾಗಿಲ್ಲ. ಹೀಗೆ ಹೋರಾಡಿ ಗೆಲ್ಲದೇ ಹೆದರಿ ಓಡಿಹೋಗುವಾಗ "ಗೋಡೆ ಬಿದ್ದು ಬಯಲಾಯಿತು". ಬಯಲಾಯಿತಲ್ಲ ಎಂದರೆ ಹೊಡೆದಾಟದಲ್ಲಿ ಕಾಲಚಕ್ರ ಓಡಿ ವೃದ್ಧಾಪ್ಯ ಬರುವುದು. ಮುಪ್ಪಿನಲ್ಲಿ ಕೈ-ಕಾಲುಗಳ, ದೇಹದ, ಶಕ್ತಿ ಕುಂದಿ ಗೋಡೆ ಬಿದ್ದ ಮನೆಯಂತೆ ಆಗುತ್ತದೆ. ಗೋಡೆ ಬಿದ್ದರೆ ಮನೆ ಇದ್ದೂ ಇಲ್ಲ. ಶಕ್ತಿ ಕುಂದಿದಮೇಲೆ ಬದುಕಿದ್ದೂ ಸಾಧನೆ ಮಾಡಲಾಗದು. ಪಾಳು ಬಿದ್ದ ಮನೆ ಅನ್ಯರ ಪಾಲು. ಜೂಜು ಆಡುವವರು, ಕುಡುಕರು ಇಂತಹವರ ಬೀಡು ಆ ಮನೆ. ದೇಹದಲ್ಲಾದರೋ, ರೋಗ-ರುಜಿನಗಳಿಗೆ ಹೇರಳವಾದ ಅವಕಾಶ. ಅಂತಹ ದೇಹದಿಂದ ಏನೂ ಪ್ರಯೋಜನವಿಲ್ಲ. ಇದು ಗೂಡಾರ್ಥ. 

*****

ಸಮಯ ಚೆನ್ನಾಗಿದ್ದಾಗ ಎಚ್ಚರದಿಂದ ಸಾಧನೆ ಮಾಡಲಿಲ್ಲ. ಆಗ ಮತ್ತನಾಗಿ ನಿಡ್ರೆ ಮಾಡಿದಂತೆ ಜೀವನ ನಡೆಸಿದ್ದಾಯಿತು. ಬುದ್ಧಿ ಸ್ಥಿಮಿತದಲ್ಲಿ ಇಟ್ಟುಕೊಳ್ಳದೆ ಬುದ್ಧಿಭ್ರಮಣೆ ಆದ ಹುಚ್ಚನಂತೆ ಜೀವನ ಕಳೆಯಿತು. ಹಣ ಸಂಪಾದಿಸುವುದೇ ಜೀವನದ ಗುರಿಯಾಯಿತು. ಸಂಸಾರದ ಸಿಹಿ ಅನ್ನುವ ಬೆಲ್ಲದ ಅಥವಾ ಸಕ್ಕರೆಯ ಅಚ್ಚಿನಲ್ಲಿ ಮನಸ್ಸು ಮುಳುಗಿತು. ಅಚ್ಚು ಅನ್ನುವ ಪದಕ್ಕೆ "ಠಸ್ಸೆ" ಅಥವಾ "ಸೀಲ್" ಎಂದೂ ಅರ್ಥವುಂಟು. ಈ ಸಂಸಾರವೆಂಬ ಅಚ್ಚಿನ ರುಚಿಯಲ್ಲಿ ಜೀವನದ ಉದ್ದೇಶ ಸೀಲ್ ಆಯಿತು. ಆದ್ದರಿಂದ "ಅಚ್ಚಿನೊಳಗೆ ಮೆಚ್ಚು; ಮೆಚ್ಚಿನೊಳಗೆ ಅಚ್ಚು". ಬೆಂಕಿ ಬಿದ್ದಾಗ ಬೆಲ್ಲದ ಅಥವಾ ಸಕ್ಕರೆ ಅಚ್ಚು ಕರಗಿ ಹೋಗುತ್ತದೆ. ಮುಪ್ಪಿನ ಬೆಂಕಿ ಬಿದ್ದಾಗ ಜೀವನವೆಂಬ ಪ್ರೀತಿಯಿಂದ ಕಾಯ್ದುಕೊಂಡಿದ್ದ ಅಚ್ಚು ಕರಗಿಹೋಯಿತು ಎಂದು ಈಗ ಪ್ರಲಾಪ. 

ಕೆಲವರಿಗೆ ಪಾಯಸ ಅಂದರೆ ಅಷ್ಟಕ್ಕಷ್ಟೇ. ಅದನ್ನು ತಿನ್ನುವುದೇ ಇಲ್ಲ. ತಿಂದರೂ ಆಗೊಮ್ಮೆ-ಈಗೊಮ್ಮೆ ಬಹಳ ಸ್ವಲ್ಪ ಪ್ರಮಾಣದಲ್ಲಿ. ಚಿಕ್ಕ ವಯಸ್ಸಿನಲ್ಲಿ ಪಾಯಸ ತಿನ್ನಲಿಲ್ಲ. ಈಗ ಮುಪ್ಪಿನಲ್ಲಿ ಪಾಯಸ  ತಿನ್ನುವಹಾಗಿಲ್ಲ! ಇಲ್ಲಿ ಪಾಯಸ ಅಂದರೆ "ರಾಮನಾಮ" ಮುಂತಾದ ಪಾಯಸ. "ರಾಮನಾಮ ಪಾಯಸಕೆ ಕೃಷ್ಣನಾಮ ಸಕ್ಕರೆ., ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೋ"ಎನ್ನುವ ಹಾಡಿನಲ್ಲಿ ಪಾಯಸ ಎಂದರೆ ಏನು ಎನ್ನುವುದನ್ನು ದಾಸರು ಹೇಳಿದ್ದಾರೆ. "ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ ಧೊಪ್ಪನೆ ಬಿತ್ತಲ್ಲ" ಅನ್ನುವುದು ಮುಪ್ಪಿನಲ್ಲಿ ದೇಹ ಹಾಸಿಗೆ ಹಿಡಿದದ್ದನ್ನು ತೋರಿಸುತ್ತದೆ. ತುಪ್ಪದ ಪಾತ್ರೆ ಕೈಜಾರಿ ತುಪ್ಪ ಕೆಳಗೆ ಬಿದ್ದರೆ, ಆ ಜಾಗ ಶುದ್ಧವಾಗಿದ್ದರೆ ಬಾಚಿಕೊಳ್ಳಬಹುದು. ಆದರೆ ಅದು ತಿಪ್ಪೆಯ ಮೇಲೆ ಬಿದ್ದರೆ?  ಪೂರ್ತಿ ಹಾಳು. ಮತ್ತೆ ಮೇಲೆ ಏಳದಂತೆ ಹಾಸಿಗೆ ಹಿಡಿದಂತೆ ಜೀವನ ಆಯಿತು ಎನ್ನುವಂತೆ. 

"ಯೋಗವು ಬಂತಲ್ಲಾ, ಬದುಕು ವಿಭಾಗವಾಯಿತಲ್ಲಾ" ಎನ್ನುವುದು ಬಂದ ಅವಕಾಶ ಕಳೆದುಕೊಂಡು ಜೀವನ ಅಲ್ಲಿ-ಇಲ್ಲಿ ಹರಿದು ಹಂಚಿ ಹೋದಂತೆ ಆಯಿತು ಎನ್ನುವುದನ್ನು ಸೂಚಿಸುತ್ತದೆ. ಭೋಗೀಶಯನನಾದ, ಆದಿಶೇಷನ ಮೇಲೆ ಮಲಗಿರುವ ಶ್ರೀಹರಿಯನ್ನು ಆಗ (ಚಿಕ್ಕವಯಸ್ಸಿನಲ್ಲಿ, ಶಕ್ತಿ, ಆರೋಗ್ಯಗಳು ಇದ್ದಾಗ} ನೆನೆಯಲಿಲ್ಲ. ಈಗ ನೆನೆಯಬೇಕೆಂದರೆ ಆಗುವುದಿಲ್ಲ. ಸಾಧನೆ ಸಾಧ್ಯವಿದ್ದಾಗ ಮಾಡದೇ, ಈಗ ಸಾಧ್ಯವಿಲ್ಲದಿದ್ದಾಗ ಗೋಳಾಡುವಂತೆ ಆಯಿತಲ್ಲ ಎಂದು ವ್ಯಥೆ. 

ಮೊದಲ ಎರಡು ಸಾಲುಗಳ ಪ್ರಮೇಯವನ್ನು ಹೀಗೆ ಮುಂದಿನ ಮೂರು ನುಡಿಗಳಲ್ಲಿ ವಿಸ್ತರಿಸಿ ದಾಸರು ಹೇಳಿದ್ದಾರೆ. ಇದನ್ನು ಅವರು ತಮಗೇ ಹೇಳಿಕೊಂಡಿದ್ದಾರೆ ಎಂದು ತಪ್ಪಾಗಿ ತಿಳಿಯಬಾರದು. "ನವಕೋಟಿ  ನಾರಾಯಣ" ಎನ್ನುವ ಬಿರುದು ಹೊಂದಿದ್ದು, ಎಲ್ಲವನ್ನೂ ಬಿಟ್ಟು ಬಂದು "ಹೆಂಡತಿ ಸಂತತಿ ಸಾವಿರವಾಗಲಿ, ದಂಡಿಗೆ ಬೆತ್ತ ಹಿಡಿಸಿದಳಯ್ಯಾ" ಎಂದವರು ಅವರು. ಸಾಮಾನ್ಯರಾದ ನಮ್ಮಂತಹವರ ಸ್ಥಿತಿಯನ್ನು ಹೇಳುವ ಹಾಡು ಇದು. 

*****

ಕಳೆದ ಶತಮಾನದ ಐವತ್ತು-ಅರವತ್ತರ ದಶಕದಲ್ಲಿ ಕನ್ನಡದ ಭಾವಗೀತೆಗಳ ಮೊದಲ ಗಾಯಕ ಹರಿಕಾರರಲ್ಲೊಬ್ಬರಾದ ಮಾನ್ಯ ಪಿ. ಕಾಳಿಂಗರಾಯರು ತಮ್ಮ ಗೋಷ್ಠಿಗಳಲ್ಲಿ ಈ ಹಾಡನ್ನು ಸೊಗಸಾಗಿ ಹಾಡುತ್ತಿದ್ದರು. ಆರ್ತರಾಗಿ ಕೂಗುವಂತಹುದು ಅವರ ಹಾಡಿನಲ್ಲಿ ಚೆನ್ನಾಗಿ ಧ್ವನಿತವಾಗಿದೆ. ಪುಣ್ಯಕ್ಕೆ ಅದರ ಧ್ವನಿಮುದ್ರಿಕೆ ಯೂಟ್ಯೂಬಿನಲ್ಲಿ ಸುಲಭವಾಗಿ ಲಭ್ಯವಿದೆ. ಅದರ ಲಿಂಕ್ ಕೆಳಗೆ ಕೊಟ್ಟಿದೆ. ಆಸಕ್ತರು ಕೇಳಬಹುದು:


https://www.youtube.com/watch?v=e-yowKKUL1k

*****

ವಿವರಣೆ ಸ್ವಲ್ಪ ದೀರ್ಘವಾಯಿತು ಎನ್ನಿಸಬಹುದು. ಆದರೆ ವಿಧಿಯಿಲ್ಲ. ಹಾಡಿನ ಮೇಲುನೋಟದ  ಅರ್ಥಕ್ಕೂ, ಅಂತರಾರ್ಥ, ಗೂಡಾರ್ಥಗಳಿಗೂ ಬಹಳ ಅಂತರ ಉಂಟು. ಆಳವಾಗಿ ಯೋಚಿಸಿದಷ್ಟೂ, ಅಧ್ಯಯನ ಮಾಡಿದಷ್ಟೂ ವಿಶೇಷ ಅರ್ಥಗಳು  ಹೊಳೆಯುತ್ತವೆ,

"ಬುದ್ಧಿ ಮತ್ತು ಮನಸ್ಸು" ಮತ್ತು "ಪುರಂಜನೋಪಾಖ್ಯಾನ" ಇವುಗಳ ಬಗ್ಗೆ ಹೆಚ್ಚಿನ ವಿವರಣೆಯನ್ನು  ಮತ್ತೆ ಎಂದಾದರೂ ಅವಕಾಶ ಆದಾಗ ನೋಡೋಣ!