Showing posts with label Paayasa. Show all posts
Showing posts with label Paayasa. Show all posts

Monday, June 16, 2025

ಚಂದ್ರ, ಸೂರ್ಯ ಮತ್ತು ಬೆಲ್ಲದ ಪಾಯಸ


ಹೊಲದಲ್ಲಿ ಕಬ್ಬು ಬೆಳೆಯುವ ರೈತ ಆ ಕಬ್ಬನ್ನು  ಮೂರು ರೀತಿಯಲ್ಲಿ ಮಾರಿ ಹಣ ಗಳಿಸಬಹುದು. ಮೊದಲನೆಯದಾಗಿ, ಬೆಳೆ ಕಟಾವು ಮಾಡಿದ ಕೂಡಲೇ ಆ ಕಬ್ಬಿನ ಜಲ್ಲೆಗಳನ್ನು ಕಬ್ಬಿನ ರಸ ತೆಗೆದು ಮಾರುವ ಅಂಗಡಿಗಳಿಗೆ ಕೊಟ್ಟು ಹಣ ಪಡೆಯಬಹುದು. ಎರಡನೆಯದು, ಆ ಕಬ್ಬನ ರಾಶಿಯನ್ನು ಗಾಡಿ ಅಥವಾ ಟ್ರ್ಯಾಕ್ಟರುಗಳಲ್ಲಿ, ಇಲ್ಲವೇ ಲಾರಿಗಳಲ್ಲಿ ಸಾಗಿಸಿ ಹತ್ತಿರದ ಸಕ್ಕರೆ ಕಾರ್ಖಾನೆಗೆ ಮಾರಬಹುದು. ಮೂರನೆಯದಾಗಿ, ತನ್ನ ಹೊಲದಲ್ಲೇ ಆಲೆಮನೆ ಹಾಕಿ, ಬೆಲ್ಲ ಮಾಡಿ, ಆ ಬೆಲ್ಲವನ್ನು ಮಾರಬಹುದು. ಈ ರೀತಿ ಬೆಲ್ಲ ಮಾಡುವ ಕಡೆ ಅದರ ಸುಗಂಧ ಸ್ವಲ್ಪ ದೂರದವರೆಗೂ ಹರಡುತ್ತದೆ. ದೊಡ್ಡ ದೊಡ್ಡ ಕಡಾಯಿಗಳಲ್ಲಿ ಕಬ್ಬಿನ ಹಾಲನ್ನು ಕಾಯಿಸಿ ಮರದ ಅಚ್ಚುಗಳಲ್ಲಿ ಸುರಿದು ಗಟ್ಟಿಯಾದ ಮೇಲೆ ಆ ಅಚ್ಚುಗಳನ್ನು ಪಿಂಡಿಗಳೆಂಬ ಸಣ್ಣ ಸಣ್ಣ ಗಂಟುಗಳಾಗಿ ಮಾಡಿ ಮಾರುತ್ತಾರೆ. ಕೆಲವೆಡೆ ಉಂಡೆ ಬೆಲ್ಲ ಮಾಡುವುದೂ ಉಂಟು. 

ಹೀಗೆ ಹಾಕಿದ್ದ ಒಂದು ಬೆಲ್ಲ ಮಾಡುವ ಆಲೆಮನೆಗೆ ಇಬ್ಬರು ಬಂದು ಹೊಸ ಬೆಲ್ಲದ ಅಚ್ಚುಗಳನ್ನು ಕೊಂಡು ಅವರವರ ಮನೆಗೆ ತೆಗೆದುಕೊಂಡುಹೋದರು. ಮೊದಲನೆಯ ಮನೆಯಲ್ಲಿ ಆ ಬೆಲ್ಲವನ್ನು ಉಪಯೋಗಿಸಿ ಸೊಗಸಾದ ಗಸಗಸೆ ಪಾಯಸ ಮಾಡಿದರು. ಎರಡನೆಯ ಮನೆಯಲ್ಲಿ ಅದೇ ಆಲೆಮನೆಯಿಂದ ಬಂದ ಬೆಲ್ಲವನ್ನು ಬಳಸಿಕೊಂಡು ಆಕ್ಕಿ-ಕಡಲೆಬೇಳೆ ಪಾಯಸ ಮಾಡಿದರು. ಎರಡು ಮನೆಯವರೂ ಪಾಯಸ ಸೇವಿಸಿದರು. ಬೆಲ್ಲದಲ್ಲಿದ್ದ ಪೋಷಕಾಂಶಗಳ ಲಾಭ ಎರಡು ಮನೆಯವರಿಗೂ ಸಿಕ್ಕಿತು. ಎರಡೂ ಸಿಹಿಯಾಗಿತ್ತು. ಆದರೆ ತಯಾರಿಸಿದ ರೀತಿ ಬೇರೆ ಆಗಿತ್ತು. ರುಚಿಯೂ ಸ್ವಲ್ಪ ಭಿನ್ನ. ಕೊನೆಯ ಪ್ರಯೋಜನ ಮಾತ್ರ ಹೆಚ್ಚು-ಕಡಿಮೆ ಒಂದೇ ಎನ್ನಬಹುದು. 

*****

ಒಬ್ಬ ಬಹಳ ದೊಡ್ಡ ಸಾಹುಕಾರ ಇದ್ದಾನೆ. ಅವನಿಗೆ ಅನೇಕ ಪಟ್ಟಣಗಳಲ್ಲಿ, ಅನೇಕ ದೇಶಗಳಲ್ಲಿ, ಕೆಲವಾರು ಮನೆಗಳಿವೆ. ಈ ಪ್ರತಿಯೊಂದು ಮನೆಯೂ ಸುಸಜ್ಜಿತವಾಗಿವೆ. ಅವನಲ್ಲಿ ಅನೇಕ ವಾಹನಗಳಿವೆ. ಅವುಗಳಲ್ಲಿ ನಮ್ಮ ಊರಿನಲ್ಲಿರುವ ಕಾರೂ ಒಂದು. ಈ ಕಾರು ನಮ್ಮ ಮುಂದೆಯೇ ಒಡಾಡುತ್ತಿದೆ. ಇದನ್ನು ನಾವು ಪ್ರತಿ ದಿನವೂ ನೋಡುತ್ತೇವೆ. ಕೆಲವೊಮ್ಮೆ ತುಂಬಾ ಹತ್ತಿರದಲ್ಲಿ, ಚೆನ್ನಾಗಿ ಕಾಣುತ್ತದೆ. ಮತ್ತೆ ಕೆಲವು ವೇಳೆ ಎಲ್ಲೋ ದೂರದಲ್ಲಿ ಚಿಕ್ಕದ್ದಾಗಿ ಕಾಣುತ್ತದೆ. ಎಂದೋ ಒಂದು ದಿನ ಕಾಣಿಸದಿರುವಂತೆಯೂ ಉಂಟು. ಆದರೆ ಅದು ಇದ್ದೇ ಇದೆ. 

ಅವನ ಬೇರೆ ಪಟ್ಟಣಗಳಲ್ಲಿ, ಬೇರೆ ದೇಶಗಳಲ್ಲಿ ಇರುವ ಮನೆಗಳನ್ನೂ, ಕಾರುಗಳನ್ನೂ ನಾವು ನೋಡಿಲ್ಲ. ಆದರೆ ಅವು ಇವೆ ಎಂದು ಕೇಳಿದ್ದೇವೆ. ಅವನಬಳಿ ಇಷ್ಟೆಲ್ಲಾ ಇದ್ದರೂ ಅವನು ಎಲ್ಲಿಯೋ ದೂರದಲ್ಲಿರುವ ಮನೆಯಲ್ಲಿ ವಾಸವಾಗಿದ್ದನಂತೆ. ಆದರೆ ಇಷ್ಟೆಲ್ಲಾ ಮನೆಗಳೂ ವಾಹನಗಳೂ ಅವನ ಅಧೀನವಂತೆ. ಅವನು ಹೇಳಿದಂತೆ ಕೇಳುತ್ತವಂತೆ. ಅವನ್ನು ಎಲ್ಲವನ್ನೂ ಒಟ್ಟಿಗೆ ಅಥವಾ ಕ್ರಮವಾಗಿ ನೋಡುವ ಶಕ್ತಿ ನಮಗಿಲ್ಲ. ಆದರೆ ಅವೆಲ್ಲಾ ಇದ್ದೇ ಇವೆಯಂತೆ. ಹೀಗೆ ತಿಳಿದವರು ಹೇಳುವುದನ್ನು ಕೇಳಿದ್ದೇವೆ. 

ಇಷ್ಟೆಲ್ಲಾ ಇರುವ ಈ ಸಾಹುಕಾರನು ಅವನಿಗಿಂತ ದೊಡ್ಡ ಯಜಮಾನನ ಸೇವಕನಂತೆ. ಇವನ ಮಟ್ಟಿಗೆ ಅವನು ಸ್ವತಂತ್ರನಾದರೂ, ಆ ದೊಡ್ಡ ಯಜಮಾನ ಇವನ ನಿಯಾಮಕ. ಆ ನಿಯಾಮಕನ ನಿಯಮಗಳಂತೆ ಈ ಸಾಹುಕಾರನ ಇರವು ಮತ್ತು ಕೆಲಸ. ತನ್ನ ಪರಿಧಿಯಲ್ಲಿ ಇವನು ಸ್ವತಂತ್ರ. ಆದರೆ ಈ ದೊಡ್ಡ ಯಜಮಾನನ ಅಂಕೆಯಲ್ಲಿಯೇ ಇರಬೇಕು. ಆ ದೊಡ್ಡ ಯಜಮಾನನಿಗೆ ಮಾತ್ರ ಇನ್ನೊಬ್ಬ ಯಜಮಾನ ಅನ್ನುವವನು ಇಲ್ಲ. ಅವನು ಸರ್ವತಂತ್ರ ಸ್ವತಂತ್ರ. 

*****

ನಾವು ಪ್ರತಿದಿನವೂ ನೋಡುವ ಚಂದ್ರ ಎನ್ನುವ ವಸ್ತು ಒಂದು ಜಡ ಪದಾರ್ಥ. ಅದರ ಕರ್ತ ಒಬ್ಬ ಇದ್ದಾನೆ. ಹಿಂದಿನ ಒಂದು ಸಂಚಿಕೆಯಲ್ಲಿ ಲೇಖನಿ ಮತ್ತು ಅದನ್ನು ಹಿಡಿದ ಲೇಖಕನ ಬಗ್ಗೆ ಚರ್ಚಿಸಿದ್ದೇವೆ. ಲೇಖನಿ ಮೇಜಿನ ಮೇಲೆ ಬಿದ್ದಿರುತ್ತದೆ. ತಾನೇ ಸ್ವತಃ ಅದು ಏನನ್ನೂ ಬರೆಯಲಾಗದು. ಅದರ ಯಜಮಾನನಾದ ಲೇಖಕ ಉಪಯೋಗಿಸಿದಂತೆ ಅದರ ಕೆಲಸ. ಯಜಮಾನನ ಬಳಿ ಅನೇಕ ಲೇಖನಿಗಳು ಇವೆ. ಅವನು ಚೇತನ. ಇದು ಜಡ. ಲೇಖನ ಓದಿದ ನಾವು ಬರೆದವನು ಯಾರು ಎನ್ನುವುದನ್ನು ಅರಿಯುತ್ತೇವೆ. ನಾವು ಪ್ರತಿದಿನ ನೋಡುವ ಚಂದ್ರನೆಂಬ ಜಡ ವಸ್ತುವಿಗೆ ಒಬ್ಬ ಅಭಿಮಾನಿ ದೇವತೆ ಇದ್ದಾನೆ, ಅವನು ನಿಜವಾದ ಚಂದ್ರ. ಚಂದ್ರದೇವನು ನಮ್ಮ ಕಿವಿಗಳಲ್ಲಿಯೂ ಅಭಿಮಾನಿ ದೇವತೆಯಾಗಿದ್ದಾನೆ. ಅವನ ಕೆಲಸದಿಂದಲೇ ನಮಗೆ ಶಬ್ದಗಳು ಕೇಳಿಸುವುದು. ಅವನು ಕೆಲಸಮಾಡದಿದ್ದರೆ ನಾವು ಕಿವುಡು. ದೇವತೆಗಳು ಅನೇಕ ರೂಪಗಳಲ್ಲಿ, ಅನೇಕ ಸ್ಥಾನಗಳಲ್ಲಿ , ಒಂದೇ ಕಾಲದಲ್ಲಿ ಅನೇಕ ಕೆಲಸಗಳನ್ನು ನಿರ್ವಹಿಸಲು ಶಕ್ತರು. 

ಈ ಚಂದ್ರನೆಂಬುವ ದೇವತೆ ಇರುವುದು ಎಲ್ಲಿಯೋ ದೂರದಲ್ಲಿರುವ "ಚಂದ್ರಮಂಡಲ" ಎಂಬಲ್ಲಿ. ಆ ಚಂದ್ರಮಂಡಲದಲ್ಲಿರುವ ಚಂದ್ರನ ಅಧೀನದಲ್ಲಿ ನಾವು ನೋಡುವ ಚಂದ್ರ ಎನ್ನುವ ಪದಾರ್ಥ ಇದೆ. ಇದೇ ರೀತಿ ಅನಂತ ವಿಶ್ವದಲ್ಲಿ ಅನೇಕ ಚಂದ್ರನೆಂಬ ಪದಾರ್ಥಗಳಿವೆ. ಅವುಗಳೆಲ್ಲಕ್ಕೂ ಚಂದ್ರನೆಂಬ ದೇವತೆ ಅಭಿಮಾನಿಯಾಗಿ ಕಾರ್ಯ ನಿರ್ವಹಿಸುತ್ತಾನೆ. ಈ ಚಂದ್ರಮಂಡಲದಲ್ಲಿರುವ ಚಂದ್ರದೇವನ ಅಂತರ್ಯಾಮಿಯಾಗಿ ಆ ಪರಮಪುರುಷನು ಕುಳಿತಿದ್ದಾನೆ. ಪುರುಷ ಸೂಕ್ತ ಹೇಳುವಂತೆ ಈ ಚಂದ್ರ ಪರಮಪುರುಷನ ಮನಸ್ಸಿನಿಂದ ಹುಟ್ಟಿದವನು. ಅದಕ್ಕೇ "ಚಂದ್ರಮಾ ಮನಸೋ ಜಾತಃ" ಎನ್ನುವುದು. ಚಂದ್ರನ ಹುಣ್ಣಿಮೆ ಅಮಾವಾಸ್ಯೆಗಳು ನಮ್ಮ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಮನಶಾಸ್ತ್ರ ಹೇಳುತ್ತದೆ. ಚಂದ್ರಮಂಡಲದಲ್ಲಿರುವ ಆ "ಪುರುಷಸೂಕ್ತ" ಪ್ರತಿಪಾದ್ಯ ಪರಮಪುರುಷನಿಗೆ "ಧನ್ವಂತರಿ" ಎಂದು ಹೆಸರು.  ನಾವು ಚಂದ್ರನನ್ನು ಆರಾಅಧಿಸುವಾಗ ಆ ಚಂದ್ರಮಂಡಲದಲ್ಲಿರುವ ಚಂದ್ರನನ್ನೂ, ಅವನ ಅಂತರ್ಯಾಮಿಯಾದ ಧನ್ವಂತರಿಯನ್ನು  ಪೂಜಿಸುತ್ತೇವೆ. 

ಈ ಧನ್ವಂತರಿಯು ಸಮುದ್ರ ಮಥನ ಕಾಲದಲ್ಲಿ ಅಮೃತ ಕಲಶವನ್ನು ಹಿಡಿದು ಬಂದು ದೇವತೆಗಳಿಗೆ ಅಮೃತ ಕೊಟ್ಟವನು. ಅವನಿಂದ ಸದಾಕಾಲವೂ ಅಮೃತ ಕಿರಣಗಳು ಹೊರಬರುತ್ತಿವೆ. ಆಯುರ್ವೇದ ಎನ್ನುವ ಆರೋಗ್ಯಶಾಸ್ತ್ರ ಅವನಿಂದ ಹುಟ್ಟಿತು. 

*****

ಇದೆ ರೀತಿ ನಾವು ಪ್ರತಿದಿನ ನೋಡುವ ಸೂರ್ಯ ಎನ್ನುವ ಜಡ ವಸ್ತು ಉಂಟು. ಅದು ನಮಗೆ ಪ್ರತಿದಿನ ಕಾಣುತ್ತದೆ. (ಭೂಮಿಯ ಕೆಲವು ಭಾಗಗಳಲ್ಲಿ, (ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲಿ) ಕೆಲವು ದಿನಗಳು ಕಾಣುವುದಿಲ್ಲವಂತೆ). ಇಂತಹ ಅನೇಕ ಸೂರ್ಯರು ವಿಶಾಲ ವಿಶ್ವದಲ್ಲಿ ಇದ್ದಾರೆ. ಅವರೆಲ್ಲರ ಅಭಿಮಾನಿ ದೇವತೆಯಾಗಿ, ನಿಯಾಮಕನಾಗಿ, ಸೂರ್ಯದೇವ ಇದ್ದಾನೆ. ಅವನು ಇರುವುದು ಸೂರ್ಯಮಂಡಲದಲ್ಲಿ. ಸೂರ್ಯಮಂಡಲದಲ್ಲಿನ ಸೂರ್ಯದೇವನ ಅಂತರ್ಯಾಮಿಯಾಗಿ ಪರಮಪುರುಷನಾದ "ಸೂರ್ಯನಾರಾಯಣ" ಇದ್ದಾನೆ. ಈ ಸೂರ್ಯನು ಪುರುಷ ಸೂಕ್ತ ಹೇಳುವಂತೆ ಆ ಪರಮಪುರುಷನ ಕಣ್ಣಿನಿಂದ ಹುಟ್ಟಿದವನು. ಆದ್ದರಿಂದಲೇ "ಚಕ್ಷೋ: ಸೂರ್ಯೋ ಅಜಾಯತ". ಸೂರ್ಯನನ್ನು ಆರಾಧಿಸುವಾಗ ನಾವು ಈ ಸೂರ್ಯದೇವನನ್ನೂ, ಅವನ ಅಂತರ್ಗತನಾದ ಸೂರ್ಯನಾರಾಯಣನನ್ನೂ ಆರಾಧಿಸುತ್ತೇವೆ. 

ಈ ಸೂರ್ಯನಾರಾಯಣನು ನಮ್ಮ ಬುದ್ಧಿಯನ್ನು ಪ್ರಚೋದಿಸುವವನು. ಆದ್ದರಿಂದ ಅವನನ್ನು ಗಾಯತ್ರಿ ಮಂತ್ರ ಜಪದ ಮೂಲಕವಾಗಿ ವಿಶೇಷವಾಗಿ ಆರಾಧಿಸುತ್ತೇವೆ. 

*****

ಪುರುಷಸೂಕ್ತವು ನಿರ್ದೇಶಿಸುವ ಆ ಪರಮಪುರುಷನು ಎಲ್ಲ ಕಡೆಯೂ ವ್ಯಾಪಿಸಿದ್ದಾನೆ. ಅವನು ಇಡೀ ವಿಶ್ವವನ್ನು ಸೃಷ್ಟಿಸಿ ಅದರ ಒಳಗಡೆ ಪ್ರವೇಶಿಸಿದನು. ಒಳಗಡೆ ಪ್ರವೇಶಿಸುವುದರ ಜೊತೆ ಹೊರಗಡೆಯೂ ಉಳಿದನು. ಇದು ನಾವು ಮಾಡಬಹುದಾದ ಕೆಲಸವಲ್ಲ. ನಾವು ಒಳಗಿದ್ದರೆ ಹೊರಗಿಲ್ಲ. ಹೊರಗಿದ್ದರೆ ಒಳಗಿಲ್ಲ. ಸ್ವಲ್ಪ ಕಾಲಾನಂತರ ನಾವು ಎಲ್ಲೂ ಇಲ್ಲ. ಇನ್ನೂ ಸ್ವಲ್ಪ ಕಾಲಾನಂತರ ನಾವು ಇದ್ದೆವು ಅನ್ನುವ ನೆನಪೂ ಇರುವುದಿಲ್ಲ. ಅವನು ಹಾಗಲ್ಲ. ಅವನ ಲಕ್ಷಣ ಏನು? "ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ". ಆದ್ದರಿಂದ ಅವನಿಗೆ ಗೋವಿಂದ ಎಂದು ಹೆಸರು. 

ಅವನು ಎಲ್ಲ ಕಡೆಯೂ ಇದ್ದರೂ ನಾವು ದೇವಸ್ಥಾನಗಳಿಗೆ ಹೋಗುತ್ತೇವೆ. ಅಲ್ಲಿ ಅವನ ಅಭಿವ್ಯಕ್ತಿ ಹೆಚ್ಚಿನ ಮಟ್ಟದ್ದು. ಎಲ್ಲ ವಿದ್ಯುತ್ ತಂತಿಗಳಲ್ಲಿ ವಿದ್ಯುತ್ ಹರಿದರೂ ಹೈ ಟೆನ್ಶನ್ ವೈರಿನಲ್ಲಿ ಹೆಚ್ಚು ಪ್ರಖರ. ಆ ರೀತಿ. ಭಗವದ್ಗೀತೆಯಲ್ಲಿ ಹತ್ತನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನು ತನ್ನ ವಿಭೂತಿರೂಪಗಳನ್ನು ಹೇಳುತ್ತಾನೆ. ಎಲ್ಲ ಕಡೆಯೂ ತಾನಿದ್ದರೂ ಕೆಲವು ಕಡೆಗಳಲ್ಲಿ ಅವನ ವಿಶೇಷ ಅಭಿವ್ಯಕ್ತಿ ಇದೆ. ಅವೇ ವಿಭೂತಿ ರೂಪಗಳು. 

"ಆದಿತ್ಯಾನಾಮ್ ಅಹಂ ವಿಷ್ಣು:" ಅನ್ನುವುದಕ್ಕೆ "ಸೂರ್ಯರಲ್ಲಿ ನಾನು ವಿಷ್ಣು" ಎಂದು ಅರ್ಥಮಾಡುತ್ತಾರೆ. "ದ್ವಾದಶ ಆದಿತ್ಯರು" ಅಂದರೆ ಹನ್ನೆರಡು ಸೂರ್ಯರು ಎಂದು ಅರ್ಥ ಮಾಡಿ ಅವರಲ್ಲಿ ವಿಷ್ಣು ಎಂಬುವವನು ಎಂದು ಅರ್ಥ ಮಾಡುತ್ತಾರೆ. ಇರುವುದು ಒಬ್ಬನೇ ಸೂರ್ಯ. ಅವನು ಅನಂತ ವಿಶ್ವದ ಅನೇಕ ಸೂರ್ಯರಿಗೆ ಅಭಿಮಾನಿ ದೇವತೆ. ಆದಿತ್ಯರು ಎನ್ನುವ ಹನ್ನೆರಡು ಅದಿತಿಯ ಮಕ್ಕಳು "ದ್ವಾದಶ ಆದಿತ್ಯರು". ಈ ಹನ್ನೆರಡು ಜನರಿಗೆ ಸೃಷ್ಟಿಯಲ್ಲಿ ಅವರದೇ ಆದ ವಿಶೇಷ ಕಾರ್ಯಗಳು೦ಟು. ಈ ಹನ್ನೆರಡು ಜನರಲ್ಲಿ ಒಬ್ಬನ ಹೆಸರು ವಿಷ್ಣು. "ಅವರಲ್ಲಿ (ಆದಿತ್ಯರಲ್ಲಿ) ನಾನು ವಿಷ್ಣು "ಎಂದು ಶ್ರೀಕೃಷ್ಣನು ಹೇಳುವುದು ಈ ವಿಷ್ಣುವನ್ನು . 

"ನಕ್ಷತ್ರಾಣಂ ಅಹಂ ಶಶಿ" ಅನ್ನುವುದೂ ಹೀಗೆಯೇ. ಅಲ್ಲಿ ಚಂದ್ರ ಅಂದರೆ ನಾವು ಕಾಣುವ ಜಡ ವಸ್ತು ಚಂದ್ರನಲ್ಲ. ಚಂದ್ರಮಂಡಲದಲ್ಲಿರುವ ಚಂದ್ರ. "ನಾವು ಕಾಣುವ ಚಂದ್ರ ನಕ್ಷತ್ರವಲ್ಲ. ಅವನು ಗ್ರಹವಲ್ಲ. ಉಪಗ್ರಹ", ಹೀಗೆನ್ನುವ ಇಂದಿನ ವಿಜ್ನ್ಯಾನದ ಅರ್ಥ ವಿಭೂತಿಯೋಗದ ಅರ್ಥವಲ್ಲ. 

*****

ಎಲ್ಲ ಮಂತ್ರ ಜಪಗಳ ಮೊದಲು ಒಳ್ಳೆಯ ಆಸನದ ಮೇಲೆ ಕುಳಿತು, ಮನಸ್ಸನ್ನು ಗಟ್ಟಿಮಾಡಿ ನಿಲ್ಲಿ,ಸಿ, ಅಂಗನ್ಯಾಸ, ಕರನ್ಯಾಸಗಳನ್ನು ಮಾಡಿ ಒಂದು "ಧ್ಯಾನ ಶ್ಲೋಕ" ಹೇಳಿಕೊಳ್ಳುತ್ತಾರೆ. ಧ್ಯಾನಶ್ಲೋಕದಲ್ಲಿ ತಾವು ಯಾವ ಮಂತ್ರ ಜಪಿಸುತ್ತಾರೋ ಆ ಆರಾಧ್ಯ ಮೂರ್ತಿಯನ್ನು ವರ್ಣಿಸುವ ಶ್ಲೋಕದ ಮೂಲಕ ಆ ಮೂರ್ತಿಯನ್ನು ತಮ್ಮ ಮನಸ್ಸಿನಲ್ಲಿ ಚಿಂತಿಸುತ್ತ, ಆ ದೇವರ/ದೇವತೆಯ ಮಂತ್ರವನ್ನು ಜಪಿಸುತ್ತಾರೆ. 

ಗಾಯತ್ರಿ ಮಂತ್ರ ಜಪಿಸುವ ವೇಳೆ ಕೆಲವರು ಆ ಪರಮಪುರುಷನ ಐದು ತಲೆಗಳುಳ್ಳ (ಮುಕ್ತಾ, ವಿದ್ರುಮ, ಹೇಮ, ನೀಲ, ಧವಳ) ಸ್ತ್ರೀರೂಪವನ್ನು ನೆನೆಸಿಕೊಂಡು ಜಪಿಸುತ್ತಾರೆ. (ಪಂಡಿತೋತ್ತಮರಾದ ದೇವುಡು ನರಸಿಂಹ ಶಾಸ್ತ್ರಿಗಳು ತಮ್ಮ "ಮಹಾ ಬ್ರಾಹ್ಮಣ" ಎನ್ನುವ ಕಾದಂಬರಿಯಲ್ಲಿ ಇದರ ವಿವರಗಳನ್ನು ಕೊಟ್ಟಿದ್ದಾರೆ). ಇವಳೇ ಗಾಯತ್ರಿ ಮಾತೆ. ಮತ್ತೆ ಕೆಲವರು ಕೇಯೂರ, ಮಕರ ಕುಂಡಲ, ಕಿರೀಟಗಳನ್ನು ಧರಿಸಿದ ಪರಮಪುರುಷನ ಪುರುಷ ರೂಪವನ್ನು ನೆನೆದು (ಧ್ಯಾಯೇತ್ ಸದಾ ಸವಿತೃ ಮಂಡಲ ಮಧ್ಯವರ್ತೀ ನಾರಾಯಣಃ) ಎಂದು ಅದೇ ಪರಮಪುರುಷನ ಪುರುಷ ರೂಪವನ್ನು ಆರಾಧಿಸುತ್ತಾರೆ.  ಇವನೇ "ಸೂರ್ಯನಾರಾಯಣ".  ಒಂದೇ ಆಲದ ಮನೆಯ ಬೆಲ್ಲದ ಎರಡು ಪಾಯಸ ಎರಡು ಮನೆಯವರಿಗೆ ಸಿಕ್ಕಿದಂತೆ. ಬೆಲ್ಲ ಒಂದೇ. ಮಾಡಿದ ಕ್ರಮ ಬೇರೆ ಆದ್ದರಿಂದ ಪಾಯಸ ಬೇರೆ ಬೇರೆ. 

ಪರಮಪುರುಷನು ನಮ್ಮ ದೇಹಗಳಲ್ಲಿ ಅನೇಕ ರೂಪಗಳಿಂದ ಇರುತ್ತಾನೆ. ಪ್ರತಿ ಮನುಷ್ಯ ದೇಹದಲ್ಲಿ (ಗಂಡು ದೇಹ, ಹೆಣ್ಣು ದೇಹ ಎನ್ನುವ ಭೇದವಿಲ್ಲದೆ) 72,000 ನಾಡಿಗಳಿವೆಯಂತೆ. ಬಲಗಡೆ 36,000 ಪುರುಷ ನಾಡಿ. ಎಡಗಡೆ 36,000 ಸ್ತ್ರೀ ನಾಡಿ. ಹೀಗೆಯೇ ಅವನ ಪ್ರತಿ ಪುರುಷ ರೂಪಕ್ಕೂ ಹೊಂದುವ ಸ್ತ್ರೀ ರೂಪಗಳಿವೆ ಎಂದು ಹೇಳುತ್ತಾರೆ. ಹೀಗೆ ಇರುವುದರಿಂದ ಪ್ರಾಯಶಃ ಪರಮಪುರುಷನನ್ನು ಹೇಗೆ ಗಾಯತ್ರಿ ಮಂತ್ರದಿಂದ ಸ್ತ್ರೀ ಮತ್ತು ಪುರುಷ ರೂಪಗಳೆರಡರಲ್ಲೂ ಆರಾಧಿಸುವುದು ಬಂದಿರಬಹುದು. "ಬೃಹತೀಸಹಸ್ರ" ಉಪಾಸನೆಯಲ್ಲಿ ಹೀಗೆ ಹೇಳುತ್ತಾರೆ. 

ಗಾಯತ್ರಿ ಅನ್ನುವುದು ಇಪ್ಪತ್ತನಾಲ್ಕು ಅಕ್ಷರಗಳ ಒಂದು ಛಂದಸ್ಸು. ಗಾಯತ್ರಿ ಮಂತ್ರ ಜಪಿಸುವಾಗ ಆ ಮಂತ್ರಕ್ಕೆ "ಗಾಯತ್ರಿ ಛಂದಃ" ಎಂದೇ ಹೇಳುವುದು. ಬೃಹತೀ ಅನ್ನುವುದು ಹೀಗೆಯೇ ಮೂವತ್ತಾರು ಅಕ್ಷರಗಳ ಛಂದಸ್ಸು. ಒಂಭತ್ತು ಅಕ್ಷರಗಳ ಒಂದು ಪಾದ. ಹೀಗೆ ನಾಲ್ಕು ಪಾದಗಳಾದರೆ ಮೂವತ್ತಾರು ಅಕ್ಷರಗಳು. ಇವು ಒಂದು ಸಾವಿರವಾದರೆ ಒಂದು ಬೃಹತೀ ಸಹಸ್ರ. ಹೀಗೆ ಲೆಕ್ಕ. ಸಂಖ್ಯಾಶಾಸ್ತ್ರದ ಪ್ರಕಾರ ಹೀಗೆ ವಿವರಣೆ. 

*****

ನಮ್ಮ ವೈದಿಕ ವಾಙ್ಮಯದಲ್ಲಿ ಅನೇಕ ಸಮನ್ವಯಗಳು ಮಾಡಬೇಕಾಗುತ್ತವೆ. "ಏಕಂ ಸತ್. ವಿಪ್ರಾ: ಬಹುಧಾ ವದಂತಿ" ಅನ್ನುವ ನಾಣ್ನುಡಿಯಂತೆ ಅನೇಕ ಮಂದಿ ತಿಳಿದವರು ಅನೇಕ ರೀತಿಯ ವಿವರಣೆಗಳನ್ನು ಕೊಡುತ್ತಾರೆ. ನಮ್ಮ ಪುರಾತನ ಕಲಿಕೆಯ ಮೂಲ ಮಂತ್ರ "ಎಲ್ಲವನ್ನೂ ತಿಳಿ. ಕಡೆಗೆ ನಿನಗೆ ನಿನ್ನ ಅನುಭವದಲ್ಲಿ ಸರಿ ಎಂದದ್ದು ಅನುಸರಿಸು" ಎಂದು. ಯಾವುದನ್ನು ಒಪ್ಪಬೇಕು, ಯಾವುದನ್ನು ಆಚರಿಸಬೇಕು ಅನ್ನುವುದು ಅವರವರ ಆಯ್ಕೆಗೆ ಬಿಟ್ಟದ್ದು. 

ಅಧ್ಯಯನ ಕಾಲದಲ್ಲಿ ಜಿಜ್ಞಾಸುವಿಗೆ ಅನೇಕ ಸಂದೇಹಗಳು ಬರುವುದು ಸಹಜ. ಯಾವುದೋ ಪ್ರಶ್ನೆಯ ಬೀಗಕ್ಕೆ ಮತ್ತೆಲ್ಲೋ ಕೀಲಿಕೈ ಇರುತ್ತದೆ. ಇವೆರಡನ್ನೂ ಸಮನ್ವಯ ಮಾಡಿದಾಗ ಆ ಸಂದೇಹ ಪರಿಹಾರವಾಗುತ್ತದೆ. ಅಧ್ಯಯನ ಮುಂದುವರೆದಂತೆ ಸಂದೇಹಗಳು  ಪರಿಹಾರವಾಗುತ್ತ, ಹೊಸ ಹೊಸ ಬೆಳಕು ಕಾಣುತ್ತದೆ. 

Wednesday, June 4, 2025

ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ


ಸಾಮಾನ್ಯವಾಗಿ ಕುಟುಂಬಗಳಲ್ಲಿ ಸಂಜೆಯ ಹೊತ್ತು ಮನೆಮಂದಿಯೆಲ್ಲ ಒಟ್ಟಾಗಿ ಸೇರಿ, ಒಂದೆಡೆ ಕುಳಿತು ಸುಖ-ದುಃಖಗಳನ್ನು ಹಂಚಿಕೊಳ್ಳುವುದು, ಅಂದಿನ ಆಗು-ಹೋಗುಗಳನ್ನು ಚರ್ಚಿಸುವುದು ನಡೆಯುತ್ತದೆ. ಕೆಲಸ-ಕಾರ್ಯಗಳಲ್ಲಿ ನಿರತರಾದ ಕುಟುಂಬದ ಸದಸ್ಯರು ಪರಸ್ಪರ ಸಿಗುವುದು ಸಂಜೆಯ ವೇಳೆಯಲ್ಲಿಯೇ ಎನ್ನುವ ಕಾಲವೊಂದಿತ್ತು. ಈಗ ಖಚಿತವಾಗಿ ಹಾಗೆ ಹೇಳಲು ಬರುವುದಿಲ್ಲ. ಟೆಲಿವಿಶನ್ ಸೆಟ್ಟುಗಳು ಮನೆಯ ದಿವಾನಖಾನೆಯನ್ನು ಅಲಂಕರಿಸಲು ಪ್ರಾರಂಭಿಸಿದಾಗಿನಿಂದ ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಅನೇಕ ಬದಲಾವಣೆಗಳಾಗಿವೆ. ನೆಲದಮೇಲೆ ಚಾಪೆ ಅಥವಾ ಜಮುಖಾನ ಹಾಸಿ ಕುಳಿತುಕೊಳ್ಳುವುದು ಮರೆತೇಹೋಗಿದೆ. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದು ಕಡಿಮೆಯಾಗಿದೆ. ಟೆಲಿವಿಶನ್ ಜೊತೆಯಲ್ಲಿ ಬಂದಿರುವ ಸೋಫಾಗಳ ಮೇಲೆ ಕುಳಿತು ಕೈನಲ್ಲಿ ತಟ್ಟೆ ಹಿಡಿದು ತಿನ್ನುವುದು ಅಭ್ಯಾಸವಾಗಿದೆ. ಅನೇಕ ವೇಳೆ ಏನು ತಿನ್ನುತ್ತಿದ್ದೇವೆ ಅನ್ನುವುದು ಗೊತ್ತೂ ಆಗದಂತೆ ವಾತಾವರಣ ಇರುತ್ತದೆ. ಅಡುಗೆ ಮಾಡುವವರಿಗೆ ಇದು ಬಹಳ ಒಳ್ಳೆಯದು.  ಉಪ್ಪು-ಖಾರ  ಹೆಚ್ಚು-ಕಡಿಮೆ ಆದರೂ ಯಾರ ಗಮನಕ್ಕೂ ಬರುವುದಿಲ್ಲ. 

ಮೊದಲು ಒಂದು ಮನೆಗೆ ಒಂದು ಟೆಲಿವಿಶನ್ ಸೆಟ್ ಇರುತ್ತಿತ್ತು. ಈಗ ಕೋಣೆಗೊಂದರಂತೆ ಅವು ಬಂದು ಕೂತಿವೆ. ಆದರೂ ಮನೆಮಂದಿ ಎಲ್ಲರೂ ಒಟ್ಟಾಗಿ ನೋಡುವ ಕೆಲವು ಧಾರಾವಾಹಿಗಳು ಇರುತ್ತವೆ. ಕನ್ನಡದಲ್ಲಿಯೂ ಹಾಗೆ ಉಂಟು. ಶ್ರೀ ಟಿ. ಏನ್. ಸೀತಾರಾಮ್ ಅವರ ಧಾರಾವಾಹಿಗಳು ಅಂತಹವು. ಈಚೆಗೆ "ಮಾಡು ಸಿಕ್ಕದಲ್ಲ" ಎನ್ನುವ ಧಾರಾವಾಹಿ ಪ್ರಸಾರವಾಗುತ್ತಿದೆಯಂತೆ. ಸೀತಾರಾಮ್ ಅವರ ಬೇರೆ ಧಾರಾವಾಹಿಗಳಂತೆ ಇದೂ ಜನಪ್ರಿಯವಾಗುವುದರಲ್ಲಿ ಅನುಮಾನವಿಲ್ಲ. 

ಇಂದಿನ ಯುವ ಜನಾಂಗಕ್ಕೆ ಅನೇಕ ಕನ್ನಡ ಪದಗಳು ಅಪರಿಚಿತವಾಗುತ್ತಿವೆ. ಪಟ್ಟಣಗಳಲ್ಲಿ ಹುಟ್ಟಿ ಬೆಳೆದವರಿಗಂತೂ ಈ ಸಮಸ್ಯೆ (ಇದೊಂದು ಸಮಸ್ಯೆ ಎಂದು ತಿಳಿದರೆ) ಇನ್ನೂ ಹೆಚ್ಚು. "ಮಾಡು" ಅನ್ನುವುದು ಒಂದು ಕ್ರಿಯಾಪದವಾಗಿ, ಇಂಗ್ಲೀಷಿನಲ್ಲಿ "ಡು" ಎನ್ನುವುದಕ್ಕೆ ಸಮಾನವಾಗಿ, ಅವರಿಗೆ ಗೊತ್ತು. "ಗೂಡು" ಅನ್ನುವುದರದು ಇನ್ನೂ ಕಡಿಮೆ ಪರಿಚಯ. ಆ ಪದಕ್ಕೆ "ಮನೆ" ಎಂದು ಕೆಲವರಿಗೆ ಅರ್ಥ ಆಗುತ್ತದೆ. ಅದೂ ಒಂದು ಅರ್ಥವೇ. "ಹಕ್ಕಿಗಳ ಗೂಡು" ಎನ್ನುವಂತೆ ಮನುಷ್ಯರ ಗೂಡು ಅಂದರೆ ಮನೆ. ಅದು ಸರಿಯೇ. 

ಯುವ ಮಿತ್ರರೊಬ್ಬರು ಇದರ ಬಗ್ಗೆ ವಿವರಣೆ ಕೇಳಿದ್ದಾರೆ. ಇದು ಒಂದು ಹಾಡಿನ ಮೊದಲ ಸಾಲು ಎಂದು ಕೆಲವರಿಗೆ ಗೊತ್ತು. ಆದರೆ ಪೂರ್ತಿ ಹಾಡು ಅನೇಕರಿಗೆ ಗೊತ್ತಿಲ್ಲ. ಹಾಡು ಗೊತ್ತಿದ್ದವರಿಗೆ ಅದರ ಅರ್ಥ ಗೊತ್ತಿಲ್ಲ. "ಬಾಹ್ಯಾರ್ಥ - ಗೂಡಾರ್ಥ - ಅಂತರಾರ್ಥ" ಎನ್ನುವ ಹಿಂದಿನ ಒಂದು ಸಂಚಿಕೆಯಲ್ಲಿ ಈ ಮೂರು ಅರ್ಥಗಳ ಬಗ್ಗೆ ಸ್ವಲ್ಪ ಚರ್ಚೆ ಮಾಡಿದ್ದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ)  "ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎನ್ನುವುದು ಶ್ರೀ ಪುರಂದರದಾಸರ ಒಂದು ಕೃತಿ. ಅದನ್ನು ಓದಿದರೆ ಅಥವಾ ಕೇಳಿದರೆ ಅರ್ಥವೇನೋ ಆಗುತ್ತದೆ. ಆದರೆ ಈ ಕೀರ್ತನೆ ಅನೇಕ ಗಹನವಾದ ಪ್ರಮೇಯಗಳನ್ನು ಒಳಗೊಂಡ ಕೃತಿ. ಪ್ರತಿಯೊಂದು ಪದದ ಹಿನ್ನೆಲೆ ಮತ್ತು ಅಂತರಾರ್ಥ ಗೊತ್ತಿಲ್ಲದಿದ್ದರೆ ಅದೊಂದು ಒಗಟಿನಂತೆ ಆಗುತ್ತದೆ. ಇದರ ಸ್ವಲ್ಪ ವಿವರಣೆ ಈಗ ನೋಡೋಣ. 

*****

"ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎನ್ನುವ ಹಾಡು ಮೂರು ನುಡಿಗಳನ್ನು ಒಳಗೊಂಡಿದೆ. ಎರಡು ಸಾಲುಗಳ ಒಂದು ನುಡಿ, ಇಂತಹ ಮೂರು ನುಡಿಗಳುಳ್ಳ ಒಂದು ಹಾಡು. ಅವುಗಳ ಮೊದಲಿಗೆ ಎರಡು ಸಾಲುಗಳ ಮುಖ್ಯ ಪ್ರಮೇಯ. ನಂತರದ ಮೂರು ನುಡಿಗಳು ಆ ಪ್ರಮೇಯವನ್ನು ವಿಸ್ತರಿಸುವ ವಿವರಣೆ. 

ಮೊದಲಿಗೆ ಈ ಹಾಡಿನ ಪೂರ್ತಿ ಪಾಠವನ್ನು ತಿಳಿಯೋಣ. ಅದು ಹೀಗಿದೆ:

ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ 
ಜೋಡಿ ಹೆಂಡಿರಿಗಂಜಿ ಓಡಿಹೋಗುವಾಗ, ಗೋಡೆ ಬಿದ್ದು ಬಯಲಾಯಿತಲ್ಲಾ 

ಎಚ್ಚರಗೊಳಲಿಲ್ಲ, ಮನವೇ  ಹುಚ್ಚನಾದೆನಲ್ಲಾ 
ಅಚ್ಚಿನೊಳಗೆ ಮೆಚ್ಚು, ಮೆಚ್ಚಿನೊಳಗೆ ಅಚ್ಚು, ಕಿಚ್ಚೆದ್ದು ಹೋಯಿತಲ್ಲಾ 

ಮುಪ್ಪು ಬಂದಿತಲ್ಲಾ, ಪಾಯಸ ತಪ್ಪದೆ ಉಣಲಿಲ್ಲಾ 
ತುಪ್ಪದ ಬಿಂದಿಗೆ ತಿಪ್ಪೆಯಮೇಲೆ ಧೊಪ್ಪನೆ ಬಿತ್ತಲ್ಲಾ 

ಯೋಗವು ಬಂತಲ್ಲಾ, ಬದುಕು ವಿಭಾಗವಾಯಿತಲ್ಲಾ 
ಭೋಗಿಶಯನ ಶ್ರೀ ಪುರಂದರವಿಠಲನ ಆಗ ನೆನೆಯಲಿಲ್ಲಾ  

ಎಲ್ಲ ಕಡೆಯೂ "ಲ್ಲಾ" ಅನ್ನುವುದು ದೀರ್ಘವೇ. "ಎಚ್ಚರಗೊಳಲಿಲ್ಲ" ಎನ್ನುವುದನ್ನು ಬಿಟ್ಟು.  ಏನಾದರೂ ಕಳೆದು ಹೋದರೆ "ಹೋಯಿತಲ್ಲ" ಎನ್ನುತ್ತೇವೆ. ತುಂಬಾ ಪ್ರಿಯವಾದದ್ದು ಕಳೆದು ಹೋದರೆ ಹಲಬುತ್ತೇವೆ. ಆಗ "ಹೋಯಿತಲ್ಲ" ಅನ್ನುವುದಿಲ್ಲ. "ಹೋಯಿತಲ್ಲಾ" ಎಂದು ಕೂಗುತ್ತೇವೆ. ದಾಸರೂ ಹೀಗೆ ಆರ್ತರಾಗಿ ಹೇಳುವಾಗ ಹೋಯಿತಲ್ಲಾ, ಸಿಕ್ಕದಲ್ಲಾ, ಮುಂತಾಗಿ ಹೇಳುತ್ತಾರೆ. ಇದನ್ನು ಗಮನಿಸಬೇಕು. ಧಾರಾವಾಹಿಯಲ್ಲಿ ತೋರಿಸುವಂತೆ ಅದು "ಮಾಡು ಸಿಕ್ಕದಲ್ಲ"  ಎಂದಲ್ಲ. ವಾಸ್ತವವಾಗಿ "ಮಾಡು ಸಿಕ್ಕದಲ್ಲಾ" ಎಂದು. 

*****

ಆರ್. ಸಿ. ಸಿ. ಮನೆಗಳು ಇಲ್ಲದಿದ್ದ ಕಾಲ. ಮಣ್ಣಿನ ಹೆಂಚು ಛಾವಣಿಗೆ ಹೊದ್ದಿಸಿದ ಮನೆಗಳೇ ಇದ್ದ ಕಾಲ. ಬಯಲು ಸೀಮೆಯಲ್ಲಿ ನಾಡಹೆಂಚುಗಳ ಮನೆಗಳು. ಕೆಲವೆಡೆ "ಮಂಗಳೂರು ಹೆಂಚು" ಹೊದಿಸಿದ ಮನೆಗಳು. ಮೇಲೆ ಕೊಟ್ಟಿರುವ ಚಿತ್ರ ನೋಡಿ. ಛಾವಣಿಗೆ ^ ಆಕಾರ ಇರುತ್ತಿತ್ತು. ಮಳೆಯ ನೀರು ಸುಲಭವಾಗಿ ಹರಿದು ಹೋಗಲು ಈ ವ್ಯವಸ್ಥೆ. ಚಾವಣಿಯ ಮೇಲಿನ ಭಾಗ ದಿನನಿತ್ಯದ ವಾಸಕ್ಕೆ ಅಷ್ಟು ಯೋಗ್ಯವಲ್ಲ. ಆದುದರಿಂದ ಅಲ್ಲಿ "ಮಾಡು" ಎಂದು ಕರೆಯುವ ಜಾಗದ ವ್ಯವಸ್ಥೆ ಮಾಡುತ್ತಿದ್ದರು. ಅದನ್ನು "ಅಟ್ಟ" ಎಂತಲೂ ಕರೆಯುತ್ತಿದ್ದರು. ಇಂಗ್ಲೀಷಿನಲ್ಲಿ Attic ಅನ್ನುತ್ತಾರೆ. ಮನೆಗಳಲ್ಲಿ ಹೆಚ್ಚಿನ ಪೀಠೋಪಕರಣಗಳು, ಕಪಾಟು ಮುಂತಾದುವುಗಳು ಇರುತ್ತಿರಲಿಲ್ಲ. ದಿನನಿತ್ಯ ಉಪಯೋಗಿಸುವ ಪದಾರ್ಥಗಳು ಕೆಳಗೆ ನೆಲದ ಮೇಲೆ ಇರುತ್ತಿದ್ದವು. ಆಗೊಮ್ಮೆ-ಈಗೊಮ್ಮೆ ಉಪಯೋಗಿಸುವ ಪದಾರ್ಥಗಳನ್ನು ಅಟ್ಟದ ಮೇಲೆ ಇಡುತ್ತಿದ್ದರು. ಈ ಕಾರಣಕ್ಕಾಗಿ ಕೆಲವು ಗೂಡುಗಳನ್ನು ಮಾಡಿರುತ್ತಿದ್ದರು. ಇಂತಹ ಗೂಡುಗಲ್ಲಿ ಇಟ್ಟ ಪದಾರ್ಥಗಳನ್ನು ಬೇಕಾದಾಗ ಹೊರತೆಗೆದು ಉಪಯೋಗಿಸಲು ಅಟ್ಟ ಹತ್ತಿ, ಅಲ್ಲಿನ ಗೂಡಿನಿಂದ  ಹೊರತೆಗೆಯಬೇಕಾಗುತ್ತಿತ್ತು. ಇದಕ್ಕೆ ಹೆಚ್ಚಿನ ಪ್ರಯತ್ನ ಬೇಕಿತ್ತು. "ಮಾಡು" ಮತ್ತು  "ಗೂಡು" ಅನ್ನುವ ಪದಗಳಿಗೆ ಈ ಹಿನ್ನೆಲೆ. 

ಮೇಲಿನದು ಹೊರ ಅರ್ಥ. ಶ್ರೀ ಪುರಂದರದಾಸರು ವೈಷ್ಣವ ಸಿದ್ಧಾಂತದ ಪ್ರತಿಪಾದಕರು. ನಾವು ಈಗ ಬದುಕಿರುವುದು ಭೂಲೋಕ. ಅದು ಕೆಳಗಿದೆ ಎಂದು ನಂಬಿಕೆ. ಶ್ರೀವೈಕುಂಠ ಇದರ ಮೇಲಿನ ಲೋಕ. ಆದ್ದರಿಂದ ಅದು ನಮಗೆ ಮಾಡು. ಅದರಲ್ಲಿನ ಗೂಡು ಎಂದರೆ ಆ ವೈಕುಂಠದಲ್ಲಿ ನಾವು ಪಡೆಯಬಹುದಾದ ಸ್ಥಾನ. ಒಟ್ಟಿನಲ್ಲಿ ಈ ಜೀವನ-ಮರಣ ಚಕ್ರದಿಂದ ಹೊರಬಂದು ದುಃಖವಿಲ್ಲದ, ಒಂದು ಶಾಶ್ವತವಾದ ಸ್ಥಾನ ಹೊಂದುವುದು. "ಮಾಡು ಸಿಕ್ಕದಲ್ಲಾ, ಮಾಡಿನ ಗೂಡು ಸಿಕ್ಕದಲ್ಲಾ" ಎಂದರೆ ಸರಿಯಾಗಿ ಪ್ರಯತ್ನ ಮಾಡದೇ ಇರುವುದರಿಂದ "ಆ ವೈಕುಂಠ ಸಿಗಲಿಲ್ಲ. ಅಲ್ಲಿ ನನ್ನ ವಾಸದ ಜಾಗ ಸಿಗಲಿಲ್ಲ " ಎಂದು ಪ್ರಲಾಪಿಸುವುದು. ಇದು ಅಂತರಾರ್ಥ. 

ಈ ಹೇಳಿಕೆಯಲ್ಲಿ ಒಂದು ಗೂಡಾರ್ಥವೂ ಇದೆ. ನಮ್ಮ ಶರೀರವೇ ಒಂದು ಮನೆ. ಸರಿಯಾಗಿ ನೋಡಿದರೆ ಕಾಲು, ಸೊಂಟ, ಹೊಟ್ಟೆ ಮುಂತಾದುವು ಮನೆಯ ಕೆಳಭಾಗಗಳು. ಹೊಟ್ಟೆಯ ಮೇಲಿನ ಭಾಗ ಈ ದೇಹವೆಂಬ ಮನೆಯ ಮಾಡು. ಹೃದಯ ಈ ದೇಹವೆಂಬ ಮನೆಯ ಮಾಡಿನ ಭಾಗದಲ್ಲಿರುವ ಒಂದು ಗೂಡು. ಈ ಮನೆಯ ಮೇಲ್ಭಾಗದ ಮಾಡಿನ ಹೃದಯವೆಂಬ ಗೂಡಿನಲ್ಲಿ ಪರಮಾತ್ಮನೆಂಬ ದಿವ್ಯ ವಸ್ತು ಇದೆ. ಅವನು ಅಲ್ಲಿ ನೆಲೆಸಿದ್ದಾನೆ. ಮಾಡು ಹತ್ತಿ ಆ ಗೂಡಿನಲ್ಲಿರುವ ವಸ್ತುವನ್ನು ನಾವು ಪಡೆಯಲು ಪ್ರಯತ್ನಿಸಲೇ ಇಲ್ಲ. ಮನೆಯ ಕೆಳಗಿರುವ ಹೊಟ್ಟೆ ಹೊರೆಯುವ ಪ್ರಯತ್ನದಲ್ಲೇ ಜೀವನವೆಲ್ಲ ಕಳೆಯಿತು! ಯಾವುದು ಸುಖವೇ ಅಲ್ಲವೋ ಅದರ ಹಿಂದೆ ಬಿದ್ದು ನಿಜವಾದ ಸುಖ ಪಡೆಯುವ ಪ್ರಯತ್ನವನ್ನೇ ಮಾಡಲಿಲ್ಲ. ಈಗ, ಜೀವನದ ಕೊನೆಯಲ್ಲಿ, ಮಾಡಿನ ಗೂಡಿನಲ್ಲಿರುವ ಆ ಮುಖ್ಯ ವಸ್ತು ಸಿಗಲಿಲ್ಲ ಎನ್ನುವ ಕೊರಗು. 

ಪರಮಾತ್ಮನೆಂಬ ದಿವ್ಯ ವಸ್ತುವನ್ನು ನಾವು ದಿನಬಳಕೆಗಾಗಿಯೇ ಇಟ್ಟುಕೊಳ್ಳಬೇಕಿತ್ತು. ಆದರೆ ಬೇರೆ ವಸ್ತುಗಳ ಮೋಹದಿಂದ ಇಂತಹ ಮುಖ್ಯ ವಸ್ತುವನ್ನು ಮಾಡಿನ ಮೇಲಿನ ಗೂಡಿನಲ್ಲಿ ಭದ್ರವಾಗಿಟ್ಟೆವು. ಮುಂದೆ ಎಂದೋ, ವೃದ್ಧಾಪ್ಯದಲ್ಲಿ, ಉಪಯೋಗಿಸುವ ಎನ್ನುವ ಅಭಿಲಾಷೆ. ಆದರೆ ಮುದಿತನದಲ್ಲಿ ಮೇಲೆ ಹತ್ತಿ ಆ ಪದಾರ್ಥವನ್ನು ಪಡೆಯುವ ಶಕ್ತಿ ಕುಂದಿದೆ. 

*****

"ಜೋಡಿ ಹೆಂಡಿರಿಗಂಜಿ ಓಡಿಹೋಗುವಾಗ" ಎನ್ನುವುದು ಈ ಹಾಡಿನ ಜೀವಾಳ. (ನಮ್ಮ ಉಗುರು ಮತ್ತು ಬೆಟ್ಟುಗಳ ಚರ್ಮದ ಮಧ್ಯೆ ಇರುವ ದಾರದಂತಹ ವಸ್ತುವಿಗೆ "ಜೀವಾಳ" ಎನ್ನುತ್ತಾರೆ. ಈ ಜೀವಾಳ ಉಗುರನ್ನು ದೇಹಕ್ಕೆ ಬಂಧಿಸಿಟ್ಟಿದೆ. ಅದು ಇಲ್ಲದಿದ್ದರೆ ಉಗುರೂ ಸಹ ಹಲ್ಲಿನಂತೆ ಬಿದ್ದುಹೋಗಬಹುದು. ಒಮ್ಮೊಮ್ಮೆ ಉಗುರು ಕತ್ತರಿಸುವಾಗ ಈ ಜೀವಾಳದ ಸ್ವಲ್ಪ ಭಾಗ ಕತ್ತರಿಸುವುದೂ ಉಂಟು. ಆಗ ಬಹಳ ನೋವಾಗುತ್ತದೆ. ಅದನ್ನು ಅನುಭವಿಸಿದವರಿಗೆ ಗೊತ್ತು). ಈ ಜೋಡಿ ಹೆಂಡಿರು ಯಾರು? ಅವರು ಗಂಡಸರಿಗೆ ಮಾತ್ರವೇ ಸಂಬಂಧಿಸಿದವರೇ? ಹಾಗಿದ್ದರೆ ಈ ಹಾಡಿಗೂ ಸ್ತ್ರೀಯರಿಗೂ ಏನೂ ಸಂಬಂಧವಿಲ್ಲವೇ? ಒಬ್ಬಳೇ ಹೆಂಡತಿ ಇರುವ ಗಂಡಸಿಗೂ ಇದು ಬೇಕಾಗಿಲ್ಲ, ಅಲ್ಲವೇ? ಇವೆಲ್ಲವೂ ಸಾಧುವಾದ ಪ್ರಶ್ನೆಗಳೇ. 

ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಶ್ರೀಮದ್ ಭಾಗವತದ "ಪುರಂಜನೋಪಾಖ್ಯಾನ" ನೋಡಬೇಕು. ಅದರ ವಿವರಗಳನ್ನು ಮತ್ತೊಮ್ಮೆ ವಿವರವಾಗಿ ನೋಡೋಣ. ಈಗ ಸೂಕ್ಷ್ಮವಾಗಿ ಇಷ್ಟು ಹೇಳಿದರೆ ಸಾಕು. "ಪುರ" ಅಂದರೆ ಈ ದೇಹ ಅನ್ನುವ ಪಟ್ಟಣ. ಈ ದೇಹವೆಂಬ ಮನೆಯಲ್ಲಿ ಯಜಮಾನನಾಗಿ ವಾಸಿಸುವವನೇ "ಪುರುಷ" ಎಂಬ ಪರಮಾತ್ಮ. ಆ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುವವನೇ ಜೀವ. ಈ ಜೀವ ಗಂಡು ದೇಹದಲ್ಲಾದರೂ ಇರಬಹುದು; ಹೆಣ್ಣು ದೇಹದಲ್ಲಾದರೂ ಇರಬಹುದು. ಆದ್ದರಿಂದ ಇಲ್ಲಿ ಹೇಳಿದ ಎರಡು ಹೆಂಡಿರು ಸ್ತ್ರೀಯರಿಗೂ ಮತ್ತು ಪುರುಷರಿಗೂ ಸಮಾನವಾಗಿ ಅನ್ವಯ ಆಗುತ್ತದೆ. ಇಲ್ಲಿ ಹೆಂಡಿರು ಅಂದರೆ ನಮ್ಮ ವ್ಯಾವಹಾರಿಕ ಜೀವನದಲ್ಲಿ ನಿರ್ದೇಶಿಸುವ ಹೊಂಡತಿ ಅಲ್ಲ. ಆದ್ದರಿಂದ ಇದು ಎಲ್ಲರಿಗೂ ಸಮಾನವಾಗಿ ಅನ್ವಯ. 

ಪುರಂಜನೋಪಾಖ್ಯಾನದಲ್ಲಿ "ಬುದ್ಧೀತು ಪ್ರಮದಾಮ್ ವಿದ್ಧಿ" ಎಂದು ಹೇಳಿದ್ದಾರೆ. ಅಂದರೆ "ಬುದ್ಧಿ ಅನ್ನುವುದು ಒಂದು ಸ್ತ್ರೀಯಂತೆ. ಅದನ್ನು ಜೀವನು ಹೆಂಡತಿ ಎನ್ನುವಂತೆ ತಿಳಿಯಬೇಕು" ಎಂದು ಅರ್ಥ. ಹೆಂಡತಿ (ಅಥವಾ ಗಂಡ) ಸಾಂಸಾರಿಕ ಜೀವನದಲ್ಲಿ ಬಹಳ ಮುಖ್ಯ. ಸುಖಜೀವನಕ್ಕೆ ಹೇಗೆ ಹೆಂಡತಿ (ಅಥವಾ ಗಂಡ) ಸಹಕಾರಿಯಾಗಬಹುದೋ ಹಾಗೆಯೇ ಜೀವನ ದುರ್ಭರ ಆಗಲೂ ಕಾರಣ ಆಗಬಹುದು. ಬುದ್ಧಿ ಒಂದು ಹೆಂಡತಿ ಆದರೆ ಎರಡನೆಯ ಹೆಂಡತಿ ಯಾರು? ಅದು "ಮನಸ್ಸು". ಬುದ್ಧಿ ಮತ್ತು ಮನಸ್ಸು ಪ್ರತಿಯೊಬ್ಬರಿಗೂ (ಹೆಣ್ಣು ಗಂಡು ಎಂಬ ಭೇದವಿಲ್ಲದೆ} ಇರುವ ಇಬ್ಬರು ಹೆಂಡತಿಯರು. 

ಈ ಇಬ್ಬರು ಹೆಂಡತಿಯರು ನಮಗೆ ಸಹಕಾರಿಯಾಗಿರುವಂತೆ ನೋಡಿಕೊಳ್ಳಲಾಗದೆ ಅವರ ಭಯಕ್ಕೆ ಶರಣಾಗುವುದು "ಜೋಡಿ ಹೆಂಡರಿಗಂಜಿ ಓಡಿಹೋಗುವುದು". "ಏನು ಮಾಡಲಿ? ನನ್ನ ಮನಸ್ಸು ನನ್ನ ಮಾತು ಕೇಳುವುದಿಲ್ಲ. ಬುದ್ಧಿ ನನ್ನ ಸ್ಥಿಮಿತದಲ್ಲಿಲ್ಲ" ಎಂದು ಕೈಚೆಲ್ಲುವುದೇ ಈ ಇಬ್ಬರು ಹೆಂಡಿರಿಗಂಜಿ ಓಡಿಹೋಗುವುದು. ಪ್ರಯತ್ನಪೂರ್ವಕವಾಗಿ ಇವೆರಡನ್ನೂ ನಮ್ಮ ಗುರಿ ಸಾಧನೆಗೆ ಅನುಕೂಲ ಮಾಡಿಕೊಳ್ಳುವುದೇ ಅವರ ಜೊತೆ ಹೊಡೆದಾಡಿ ಗೆಲ್ಲುವುದು. ಹೀಗೆ ಗೆದ್ದರೆ ಓಡಿಹೋಗಬೇಕಾಗಿಲ್ಲ. ಹೀಗೆ ಹೋರಾಡಿ ಗೆಲ್ಲದೇ ಹೆದರಿ ಓಡಿಹೋಗುವಾಗ "ಗೋಡೆ ಬಿದ್ದು ಬಯಲಾಯಿತು". ಬಯಲಾಯಿತಲ್ಲ ಎಂದರೆ ಹೊಡೆದಾಟದಲ್ಲಿ ಕಾಲಚಕ್ರ ಓಡಿ ವೃದ್ಧಾಪ್ಯ ಬರುವುದು. ಮುಪ್ಪಿನಲ್ಲಿ ಕೈ-ಕಾಲುಗಳ, ದೇಹದ, ಶಕ್ತಿ ಕುಂದಿ ಗೋಡೆ ಬಿದ್ದ ಮನೆಯಂತೆ ಆಗುತ್ತದೆ. ಗೋಡೆ ಬಿದ್ದರೆ ಮನೆ ಇದ್ದೂ ಇಲ್ಲ. ಶಕ್ತಿ ಕುಂದಿದಮೇಲೆ ಬದುಕಿದ್ದೂ ಸಾಧನೆ ಮಾಡಲಾಗದು. ಪಾಳು ಬಿದ್ದ ಮನೆ ಅನ್ಯರ ಪಾಲು. ಜೂಜು ಆಡುವವರು, ಕುಡುಕರು ಇಂತಹವರ ಬೀಡು ಆ ಮನೆ. ದೇಹದಲ್ಲಾದರೋ, ರೋಗ-ರುಜಿನಗಳಿಗೆ ಹೇರಳವಾದ ಅವಕಾಶ. ಅಂತಹ ದೇಹದಿಂದ ಏನೂ ಪ್ರಯೋಜನವಿಲ್ಲ. ಇದು ಗೂಡಾರ್ಥ. 

*****

ಸಮಯ ಚೆನ್ನಾಗಿದ್ದಾಗ ಎಚ್ಚರದಿಂದ ಸಾಧನೆ ಮಾಡಲಿಲ್ಲ. ಆಗ ಮತ್ತನಾಗಿ ನಿಡ್ರೆ ಮಾಡಿದಂತೆ ಜೀವನ ನಡೆಸಿದ್ದಾಯಿತು. ಬುದ್ಧಿ ಸ್ಥಿಮಿತದಲ್ಲಿ ಇಟ್ಟುಕೊಳ್ಳದೆ ಬುದ್ಧಿಭ್ರಮಣೆ ಆದ ಹುಚ್ಚನಂತೆ ಜೀವನ ಕಳೆಯಿತು. ಹಣ ಸಂಪಾದಿಸುವುದೇ ಜೀವನದ ಗುರಿಯಾಯಿತು. ಸಂಸಾರದ ಸಿಹಿ ಅನ್ನುವ ಬೆಲ್ಲದ ಅಥವಾ ಸಕ್ಕರೆಯ ಅಚ್ಚಿನಲ್ಲಿ ಮನಸ್ಸು ಮುಳುಗಿತು. ಅಚ್ಚು ಅನ್ನುವ ಪದಕ್ಕೆ "ಠಸ್ಸೆ" ಅಥವಾ "ಸೀಲ್" ಎಂದೂ ಅರ್ಥವುಂಟು. ಈ ಸಂಸಾರವೆಂಬ ಅಚ್ಚಿನ ರುಚಿಯಲ್ಲಿ ಜೀವನದ ಉದ್ದೇಶ ಸೀಲ್ ಆಯಿತು. ಆದ್ದರಿಂದ "ಅಚ್ಚಿನೊಳಗೆ ಮೆಚ್ಚು; ಮೆಚ್ಚಿನೊಳಗೆ ಅಚ್ಚು". ಬೆಂಕಿ ಬಿದ್ದಾಗ ಬೆಲ್ಲದ ಅಥವಾ ಸಕ್ಕರೆ ಅಚ್ಚು ಕರಗಿ ಹೋಗುತ್ತದೆ. ಮುಪ್ಪಿನ ಬೆಂಕಿ ಬಿದ್ದಾಗ ಜೀವನವೆಂಬ ಪ್ರೀತಿಯಿಂದ ಕಾಯ್ದುಕೊಂಡಿದ್ದ ಅಚ್ಚು ಕರಗಿಹೋಯಿತು ಎಂದು ಈಗ ಪ್ರಲಾಪ. 

ಕೆಲವರಿಗೆ ಪಾಯಸ ಅಂದರೆ ಅಷ್ಟಕ್ಕಷ್ಟೇ. ಅದನ್ನು ತಿನ್ನುವುದೇ ಇಲ್ಲ. ತಿಂದರೂ ಆಗೊಮ್ಮೆ-ಈಗೊಮ್ಮೆ ಬಹಳ ಸ್ವಲ್ಪ ಪ್ರಮಾಣದಲ್ಲಿ. ಚಿಕ್ಕ ವಯಸ್ಸಿನಲ್ಲಿ ಪಾಯಸ ತಿನ್ನಲಿಲ್ಲ. ಈಗ ಮುಪ್ಪಿನಲ್ಲಿ ಪಾಯಸ  ತಿನ್ನುವಹಾಗಿಲ್ಲ! ಇಲ್ಲಿ ಪಾಯಸ ಅಂದರೆ "ರಾಮನಾಮ" ಮುಂತಾದ ಪಾಯಸ. "ರಾಮನಾಮ ಪಾಯಸಕೆ ಕೃಷ್ಣನಾಮ ಸಕ್ಕರೆ., ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೋ"ಎನ್ನುವ ಹಾಡಿನಲ್ಲಿ ಪಾಯಸ ಎಂದರೆ ಏನು ಎನ್ನುವುದನ್ನು ದಾಸರು ಹೇಳಿದ್ದಾರೆ. "ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ ಧೊಪ್ಪನೆ ಬಿತ್ತಲ್ಲ" ಅನ್ನುವುದು ಮುಪ್ಪಿನಲ್ಲಿ ದೇಹ ಹಾಸಿಗೆ ಹಿಡಿದದ್ದನ್ನು ತೋರಿಸುತ್ತದೆ. ತುಪ್ಪದ ಪಾತ್ರೆ ಕೈಜಾರಿ ತುಪ್ಪ ಕೆಳಗೆ ಬಿದ್ದರೆ, ಆ ಜಾಗ ಶುದ್ಧವಾಗಿದ್ದರೆ ಬಾಚಿಕೊಳ್ಳಬಹುದು. ಆದರೆ ಅದು ತಿಪ್ಪೆಯ ಮೇಲೆ ಬಿದ್ದರೆ?  ಪೂರ್ತಿ ಹಾಳು. ಮತ್ತೆ ಮೇಲೆ ಏಳದಂತೆ ಹಾಸಿಗೆ ಹಿಡಿದಂತೆ ಜೀವನ ಆಯಿತು ಎನ್ನುವಂತೆ. 

"ಯೋಗವು ಬಂತಲ್ಲಾ, ಬದುಕು ವಿಭಾಗವಾಯಿತಲ್ಲಾ" ಎನ್ನುವುದು ಬಂದ ಅವಕಾಶ ಕಳೆದುಕೊಂಡು ಜೀವನ ಅಲ್ಲಿ-ಇಲ್ಲಿ ಹರಿದು ಹಂಚಿ ಹೋದಂತೆ ಆಯಿತು ಎನ್ನುವುದನ್ನು ಸೂಚಿಸುತ್ತದೆ. ಭೋಗೀಶಯನನಾದ, ಆದಿಶೇಷನ ಮೇಲೆ ಮಲಗಿರುವ ಶ್ರೀಹರಿಯನ್ನು ಆಗ (ಚಿಕ್ಕವಯಸ್ಸಿನಲ್ಲಿ, ಶಕ್ತಿ, ಆರೋಗ್ಯಗಳು ಇದ್ದಾಗ} ನೆನೆಯಲಿಲ್ಲ. ಈಗ ನೆನೆಯಬೇಕೆಂದರೆ ಆಗುವುದಿಲ್ಲ. ಸಾಧನೆ ಸಾಧ್ಯವಿದ್ದಾಗ ಮಾಡದೇ, ಈಗ ಸಾಧ್ಯವಿಲ್ಲದಿದ್ದಾಗ ಗೋಳಾಡುವಂತೆ ಆಯಿತಲ್ಲ ಎಂದು ವ್ಯಥೆ. 

ಮೊದಲ ಎರಡು ಸಾಲುಗಳ ಪ್ರಮೇಯವನ್ನು ಹೀಗೆ ಮುಂದಿನ ಮೂರು ನುಡಿಗಳಲ್ಲಿ ವಿಸ್ತರಿಸಿ ದಾಸರು ಹೇಳಿದ್ದಾರೆ. ಇದನ್ನು ಅವರು ತಮಗೇ ಹೇಳಿಕೊಂಡಿದ್ದಾರೆ ಎಂದು ತಪ್ಪಾಗಿ ತಿಳಿಯಬಾರದು. "ನವಕೋಟಿ  ನಾರಾಯಣ" ಎನ್ನುವ ಬಿರುದು ಹೊಂದಿದ್ದು, ಎಲ್ಲವನ್ನೂ ಬಿಟ್ಟು ಬಂದು "ಹೆಂಡತಿ ಸಂತತಿ ಸಾವಿರವಾಗಲಿ, ದಂಡಿಗೆ ಬೆತ್ತ ಹಿಡಿಸಿದಳಯ್ಯಾ" ಎಂದವರು ಅವರು. ಸಾಮಾನ್ಯರಾದ ನಮ್ಮಂತಹವರ ಸ್ಥಿತಿಯನ್ನು ಹೇಳುವ ಹಾಡು ಇದು. 

*****

ಕಳೆದ ಶತಮಾನದ ಐವತ್ತು-ಅರವತ್ತರ ದಶಕದಲ್ಲಿ ಕನ್ನಡದ ಭಾವಗೀತೆಗಳ ಮೊದಲ ಗಾಯಕ ಹರಿಕಾರರಲ್ಲೊಬ್ಬರಾದ ಮಾನ್ಯ ಪಿ. ಕಾಳಿಂಗರಾಯರು ತಮ್ಮ ಗೋಷ್ಠಿಗಳಲ್ಲಿ ಈ ಹಾಡನ್ನು ಸೊಗಸಾಗಿ ಹಾಡುತ್ತಿದ್ದರು. ಆರ್ತರಾಗಿ ಕೂಗುವಂತಹುದು ಅವರ ಹಾಡಿನಲ್ಲಿ ಚೆನ್ನಾಗಿ ಧ್ವನಿತವಾಗಿದೆ. ಪುಣ್ಯಕ್ಕೆ ಅದರ ಧ್ವನಿಮುದ್ರಿಕೆ ಯೂಟ್ಯೂಬಿನಲ್ಲಿ ಸುಲಭವಾಗಿ ಲಭ್ಯವಿದೆ. ಅದರ ಲಿಂಕ್ ಕೆಳಗೆ ಕೊಟ್ಟಿದೆ. ಆಸಕ್ತರು ಕೇಳಬಹುದು:


https://www.youtube.com/watch?v=e-yowKKUL1k

*****

ವಿವರಣೆ ಸ್ವಲ್ಪ ದೀರ್ಘವಾಯಿತು ಎನ್ನಿಸಬಹುದು. ಆದರೆ ವಿಧಿಯಿಲ್ಲ. ಹಾಡಿನ ಮೇಲುನೋಟದ  ಅರ್ಥಕ್ಕೂ, ಅಂತರಾರ್ಥ, ಗೂಡಾರ್ಥಗಳಿಗೂ ಬಹಳ ಅಂತರ ಉಂಟು. ಆಳವಾಗಿ ಯೋಚಿಸಿದಷ್ಟೂ, ಅಧ್ಯಯನ ಮಾಡಿದಷ್ಟೂ ವಿಶೇಷ ಅರ್ಥಗಳು  ಹೊಳೆಯುತ್ತವೆ,

"ಬುದ್ಧಿ ಮತ್ತು ಮನಸ್ಸು" ಮತ್ತು "ಪುರಂಜನೋಪಾಖ್ಯಾನ" ಇವುಗಳ ಬಗ್ಗೆ ಹೆಚ್ಚಿನ ವಿವರಣೆಯನ್ನು  ಮತ್ತೆ ಎಂದಾದರೂ ಅವಕಾಶ ಆದಾಗ ನೋಡೋಣ!

Saturday, May 3, 2025

ಒನ್- ಬೈ- ಟು ಮತ್ತು ಟೂ- ಬೈ-ತ್ರೀ



ನಾವು ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ವ್ಯವಹಾರ ಜ್ಞಾನ ಬರಲಿ ಎಂಬ ದೃಷ್ಟಿಯಿಂದ ನಮ್ಮ ಮನೆಯ ಹಿರಿಯರು ನಮ್ಮನ್ನು ದಿನಬಳಕೆಗೆ ಬೇಕಾದ ಪದಾರ್ಥಗಳನ್ನು ತರಲು ಅಂಗಡಿಗಳಿಗೆ ಕಳಿಸುತ್ತಿದ್ದರು. ಆಗ ಈಗಿನಂತೆ ಮನೆ ಬಾಗಿಲಿಗೆ ಸಾಮಾನು-ಸರಂಜಾಮು ತಂದು ಕೊಡುವ ವ್ಯವಸ್ಥೆ ಇರಲಿಲ್ಲ. ರೆಫ್ರಿಜಿರೇಟರ್ಗಳು ಇನ್ನೂ ಬಂದಿರಲಿಲ್ಲ. ಪ್ರತಿದಿನ ತರಕಾರಿ ಕೊಂಡು ತರಬೇಕಾಗಿತ್ತು. ಮನೆಯ ಹಿತ್ತಿಲಿನಲ್ಲಿ ಕೆಲವನ್ನು ಬೆಳೆದರೂ ಪೇಟೆಯಿಂದ ಮತ್ತೆ ಕೆಲವು ಕೊಂಡು ತರಬೇಕಾಗಿತ್ತು. ಯಾವ ತರಕಾರಿ ಎಳೆಯದಿರಬೇಕು, ಯಾವುದು ಬಲಿತಿರಬೇಕು, ಕೊಡುವ ಹಣದ ಲೆಕ್ಕ ಮತ್ತು ತರುವ ಪದಾರ್ಥಗಳ ಲೆಕ್ಕ ಮುಂತಾದುವನ್ನು ಹೀಗೆ ಕಲಿಯುತ್ತಿದ್ದೆವು.

ಪೇಟೆಯಲ್ಲಿ ಕೆಲವು ತರಕಾರಿ ಅಂಗಡಿಗಳಿದ್ದವು. ಸುತ್ತ-ಮುತ್ತಲಿನ ಹಳ್ಳಿಗಳ ಜನರು ತಾವು ಬೆಳೆದ ತರಕಾರಿ, ಸೊಪ್ಪು, ಹಣ್ಣುಗಳು ಮುಂತಾದುವನ್ನು ಬೆಳಿಗ್ಗೆ  ಬೇಗನೆ ತಲೆಯ ಮೇಲೆ ಹೊತ್ತುಕೊಂಡು ಹತ್ತಿರದ ಪಟ್ಟಣಗಳಿಗೆ ಬರುತ್ತಿದ್ದರು. ರಸ್ತೆಯ ಪಕ್ಕದಲ್ಲಿ ಗೋಣಿಚೀಲ ಅಥವಾ ಚಾಪೆ ಹಾಸಿಕೊಂಡು ತಂದ ಸರಕನ್ನು ಇಟ್ಟು ಮಾರುತ್ತಿದ್ದರು. ಎಂಟು-ಒಂಬತ್ತು ಗಂಟೆಗಲ್ಲಾ ಅವನ್ನು ಮಾರಿ ಮುಗಿಸಿ ತಮಗೆ ಬೇಕಾದ ಪದಾರ್ಥಗಳನ್ನು ಕೊಂಡುಕೊಂಡು ಹಳ್ಳಿಗಳಿಗೆ ಹಿಂತಿರುಗುತ್ತಿದ್ದರು. ಅವರು ವರ್ತಕರಲ್ಲದುದರಿಂದ ಅವರ ಬಳಿ ತಕ್ಕಡಿಗಳು ಇರುತ್ತಿರಲಿಲ್ಲ. ತರಕಾರಿಗಳನ್ನು ಸಣ್ಣ ಸಣ್ಣ ಗುಡ್ಡೆಗಳಾಗಿ ಇಟ್ಟು ಮಾರುತ್ತಿದ್ದರು. ಈಗಿನಂತೆ ಆಗ ಅಂಗಡಿಗಳ ಒಳಗೆ ಹೋಗಿ ಬೇಕಾದ ತರಕಾರಿ ಆರಿಸುವಂತಿರಲಿಲ್ಲ. ಅಂಗಡಿಯವರು ಕೊಟ್ಟಿದ್ದನ್ನು ತರಬೇಕಿತ್ತು. ಅಂಗಡಿಯವರು ಕೆಲವರು ಮಕ್ಕಳು ಕೊಳ್ಳಲು ಹೋದಾಗ ತೂಕದಲ್ಲಿ ವ್ಯತ್ಯಾಸ ಸಹ ಮಾಡುತ್ತಿದ್ದರು. ಗುಡ್ಡೆಗಳಲ್ಲಿ ಹೆಚ್ಚು ತರಕಾರಿ ಇರುವ ಗುಡ್ಡೆ ಆರಿಸಿ ತರುವುದರಲ್ಲಿ ಒಂದು ಆನಂದವಿರುತ್ತಿತ್ತು. ಈ ಕಾರಣಗಳಿಗೆ ನಾವು ರಸ್ತೆ ಬದಿಯ ಗುಡ್ಡೆ ತರಕಾರಿಗಳನ್ನು ಕೊಳ್ಳಲು ಇಷ್ಟ ಪಡುತ್ತಿದ್ದೆವು. 

ಆಗ ರೆಸ್ಟೋರಂಟುಗಳು ಬಹಳ ಕಡಿಮೆ. ಹೈಸ್ಕೂಲು ಮತ್ತು ಕಾಲೇಜು ಓದು ತಲುಪುವವರೆಗೂ ಹೋಟೆಲು ತಿಂಡಿ ಅಪರೂಪವೇ. ಇಬ್ಬರು ಸ್ನೇಹಿತರು ಜೊತೆಯಾಗಿ ಹೋಗಿ ಜೇಬಿನಲ್ಲಿದ್ದ ಹಣವನ್ನು ಕೂಡಿಸಿ ಅವಾಗೊಮ್ಮೆ, ಇವಾಗೊಮ್ಮೆ ತಿಂಡಿ ತಿನ್ನುವುದು ಒಂದು ಸಾಧನೆಯಂತೆ. ಕಾಫಿ ಅಥವಾ ಟೀ ಕುಡಿಯುತ್ತಿರಲಿಲ್ಲ. ಕುಡಿದರೂ ಒಂದನ್ನು ಇಬ್ಬರು ಹಂಚಿಕೊಂಡು ಕುಡಿಯುವುದು. ಮಾಣಿಗೆ "ಒನ್-ಬೈ-ಟು" ಕಾಫಿ ಎಂದು ಹೇಳುವುದರಲ್ಲಿ ಒಂದು ಖುಷಿ. ಮೂವರು ಹೋದರೆ "ಟು-ಬೈ-ತ್ರೀ" ಆಗುತ್ತಿತ್ತು. ಮಾಣಿ ಸಾಮಾನ್ಯವಾಗಿ ಎರಡು ಕಾಫಿ ಮತ್ತು ಒಂದು ಖಾಲಿ ಲೋಟ ತರುತ್ತಿದ್ದ. ನಾವೇ ಹಂಚಿಕೊಳ್ಳುವುದು. ಅದು ಎಲ್ಲರಿಗೂ ಸಮವಾಗಿ ಬರುವಂತೆ ಹಂಚಿಕೊಳ್ಳುವುದು ಒಂದು ಉತ್ಸಾಹದ ಆಟ ಆಗಿರುತ್ತಿತ್ತು. 

ಬೆಂಗಳೂರಿನಲ್ಲಿ, ಅದಕ್ಕಿಂತ ಹೆಚ್ಚಾಗಿ ಮೈಸೂರಿನಲ್ಲಿ, ಹೊಟೇಲುಗಳಲ್ಲಿ ಸೆಟ್ ಮಸಾಲೆ ದೋಸೆ ಸಿಗುತ್ತಿತ್ತು. (ಸೆಟ್ ದೋಸೆ ಈಗಲೂ ಎಲ್ಲ ಕಡೆ ಸಿಗುತ್ತದೆ). ಸೆಟ್ ಮಾಸಾಲೆಯಲ್ಲಿ ಎರಡು ಮಸಾಲೆ ದೋಸೆಗಳು ಇರುತ್ತಿದ್ದವು. ಮಾಮೂಲಿ ಮಸಾಲೆ ದೋಸೆಗಿಂತ ಸ್ವಲ್ಪ ಸಣ್ಣವಾದರೂ ಎರಡು ಸೇರಿದರೆ ಒಂದು ಮಾಮೂಲಿ ಮಸಾಲೆ ದೋಸೆಗಿಂತ ಹೆಚ್ಚಾಗುತ್ತಿತ್ತು. ಆದ್ದರಿಂದ ಅದು "ಟೂ-ಬೈ-ಒನ್" ಎಂದು ಒಬ್ಬರಿಗೊಬ್ಬರು ತಮಾಷೆ ಮಾಡಿಕೊಳ್ಳುತ್ತಿದ್ದೆವು. ಇಂತಹ ಕೆಲವು ರೆಸ್ಟೋರಂಟುಗಳಲ್ಲಿ "ನೋ ಒನ್-ಬೈ-ಟೂ ಸರ್ವಿಸ್" ಎಂದು ಬೋರ್ಡ್ ಕೂಡ ಹಾಕಿರುತ್ತಿದ್ದರು. ಕೆಲವು ಕಡೆ "ಸ್ಪೆಷಲ್ ರೂಮ್" ಇರುತ್ತಿತ್ತು. (ಎಸಿ ರೂಮುಗಳು ಇನ್ನೂ ಬಂದಿರಲಿಲ್ಲ). ಅಲ್ಲಿ ಒಬ್ಬರಿಗೆ  ಐದು ಪೈಸೆ ಹೆಚ್ಚು  ಕೊಡಬೇಕಿತ್ತು. ಹೀಗೆಂದು ಬೋರ್ಡ್ ಬರೆದಿರುತ್ತಿದ್ದರು. ಆ ರೂಮಿನಲ್ಲಿ ಕಪ್ಪು-ಸಾಸರಿನಲ್ಲಿ ಕಾಫಿ ಕೊಡುತ್ತಿದ್ದರು. ಅದರ ಹೊರಗಡೆ ಗಾಜಿನ ಲೋಟದಲ್ಲಿ. ಸ್ಪೆಷಲ್ ರೂಮಿನಲ್ಲಿ ತಿಂಡಿ ತಿಂದರೆ ಅಲ್ಲೇ ಬಿಲ್ ಪಾವತಿಸಬಹುದಿತ್ತು. ಹೊರಗಡೆ ತಿಂದರೆ ಬಿಲ್ ತೆಗೆದುಕೊಂಡು ಹೋಗಿ ಕ್ಯಾಷಿಯರ್ ಬಳಿ ಪಾವತಿ ಮಾಡಬೇಕಿತ್ತು. 

ಈ "ಒನ್-ಬೈ-ಟು" ಆಥವಾ "ಟೂ-ಬೈ-ತ್ರೀ" ಎಂದು ಹೇಳುವುದು ಇಂಗ್ಲಿಷ್ ಕಲಿತಮೇಲೆ ಬಂದದ್ದು. ಆದರೆ ಒಂದನ್ನು ಎರಡು, ಎರಡನ್ನು ಮೂರು, ಅಥವಾ ಎರಡನ್ನು ಒಂದು ಮಾಡುವುದು ಹೊಸದೇನೂ ಅಲ್ಲ. ಅದು ತಲೆತಲಾಂತರದಿಂದ ಬಂದದ್ದೇ. ರಾಮಾಯಣ, ಮಹಾಭಾರತ ಕಾಲಗಳಿಂದಲೂ ಇವು ಇದ್ದೇ ಇವೆ. ಅದು ಹೇಗೆ? ಸ್ವಲ್ಪ ಮುಂದೆ ನೋಡೋಣ. ಹಿಂದಿನ "ರಾಹುಕಾಲ ಮತ್ತು ಬಲಿ ಪಾಡ್ಯಮಿ" ಎಂಬ ಸಂಚಿಕೆಯಲ್ಲಿ ರಾಹುಕಾಲ ಹೇಗೆ "ಸೆವೆನ್-ಬೈ-ಯೈಟ್" ಆಯಿತು ಅನ್ನುವುದನ್ನು ನೋಡಿದ್ದೆವಲ್ಲ! ಅದನ್ನು ಓದಬೇಕಾದರೆ ಇಲ್ಲಿ ಕ್ಲಿಕ್ ಮಾಡಿ.  

*****  

ಕೌರವರು ಮತ್ತು ಪಾಂಡವರು ಇನ್ನೂ ಹುಟ್ಟುವುದರ  ಮುಂಚಿನ ಸಮಾಚಾರ ಇದು. ಮಗಧದ ರಾಜನಾಗಿದ್ದ ಬೃಹದ್ರಥ ರಾಜ್ಯಭಾರ ಮಾಡುತ್ತಿದ್ದ ಕಾಲ. ಅವನು ಕಾಶೀರಾಜನ ಅವಳಿ ಹೆಣ್ಣುಮಕ್ಕಳನ್ನು ವಿವಾಹವಾಗಿದ್ದನು. ಸಂತಾನವಿಲ್ಲದೆ ಚಿಂತಿತನಾಗಿದ್ದನು. ಒಮ್ಮೆ ಮಹಾತಪಸ್ವಿ ಒಬ್ಬರು ಅವನ ಆಸ್ಥಾನಕ್ಕೆ ಬಂದು ಅವನಿಗೆ ಅನುಗ್ರಹಿಸಿ ಒಂದು ಹಣ್ಣನ್ನು ಕೊಟ್ಟರು. ಇದನ್ನು ನಿನ್ನ ಪತ್ನಿ ಸೇವಿಸಿದರೆ ಸಂತಾನ ಆಗುವುದು ಎಂದು ಹೇಳಿದರು. ಬೃಹದ್ರಥನಿಗೆ ಒಬ್ಬಳಿಗೆ ಹಣ್ಣು ಕೊಟ್ಟು ಮತ್ತೊಬ್ಬಳ ಜೊತೆ ಮನಸ್ತಾಪ ಆಗುವುದು ಇಷ್ಟವಿರಲಿಲ್ಲ. ಅವರು ಹೋದ ನಂತರ ಬೃಹದ್ರಥನು ಆ ಹಣ್ಣನ್ನು ಒನ್-ಬೈ-ಟು ಮಾಡಿ ತನ್ನ ಇಬ್ಬರು ಹೆಂಡತಿಯರಿಗೂ ಕೊಟ್ಟನು. ಕಾಲಕ್ರಮದಲ್ಲಿ ಅವರಿಬ್ಬರೂ ಗರ್ಭವತಿಯರಾದರು. ಸಮಯ ಕಳೆದ ಮೇಲೆ ಅವರಿಬ್ಬರೂ ಒಂದೇ ದಿನ ಅರ್ಧ ಅರ್ಧ ಶಿಶುವನ್ನು ಹಡೆದರು. ನೋಡಲು ಭೀಕರವಾಗಿದ್ದ ಆ ಎರಡು ಶಿಶು ಹೋಳುಗಳನ್ನು ನಗರದ ಹೊರಗಡೆ ಬಿಸಾಡುವಂತೆ ರಾಜನು ತನ್ನ ನೌಕರರಿಗೆ ಆಜ್ಞಾಪಿಸಿದನು. ಅದರಂತೆ ಅವರು ತಮ್ಮ ಕೆಲಸ ಮಾಡಿದರು. 

ಸ್ವಲ್ಪ ಸಮಯದ ನಂತರ ಜರೆ ಎಂಬ ಹೆಸರಿನ ರಕ್ಕಸಿಯೊಬ್ಬಳು ಹಸಿವಿನಿಂದ ಬಳಲುತ್ತಾ ಆಹಾರ ಹುಡುಕುತ್ತ ಅಲ್ಲಿ ಬಂದಳು. ಕಂಡ ಎರಡು ಶಿಶು ಹೋಳುಗಳನ್ನು ಎರಡು ಕೈಗಳಲ್ಲಿ ತೆಗೆದುಕೊಂಡು ತಿನ್ನಲು ನೋಡಿದಳು. ಆಗ ಎರಡು ಹೋಳುಗಳೂ ವಿಧಿವಶಾತ್ ಒಂದಾದವು. ಎರಡು ಭಾಗಗಳು ಸೇರಿಕೊಂಡ ತಕ್ಷಣ ಆ ಶಿಶುವಿಗೆ ಜೀವ ಬಂದು ಉಸಿರಾಡುತ್ತಾ ಬಹಳ ಜೋರಾದ ಶಬ್ದದಿಂದ ಅಳಲು ಪ್ರಾರಂಭಿಸಿತು. ಆ ಮಗುವನ್ನು ತಿನ್ನಲು ಮನಸ್ಸು ಬರದೆ ಜರೆಯು ಮಗುವನ್ನು ರಾಜನಿಗೆ ತಂದು ಕೊಟ್ಟಳು. ರಾಜನು ಸಂತೋಷ ಪಟ್ಟು ಆ ಮಗುವಿಗೆ "ಜರಾಸಂಧ" ಎಂದು ಅವಳ ಹೆಸರು ನೆನಪಿರುವಂತೆ ನಾಮಕರಣ ಮಾಡಿದನು. ಬೃಹದ್ರಥನ ನಂತರ ಜರಾಸಂಧನು ಮಗಧದ ರಾಜ ಆದನು. 

ಜರಾಸಂಧನಿಗೆ ಅಸ್ತಿ ಮತ್ತು ಪ್ರಾಪ್ತಿ ಎಂದು ಎರಡು ಹೆಣ್ಣು ಮಕ್ಕಳಿದ್ದರು. ಮಥುರೆಯ ಉಗ್ರಸೇನ ರಾಜನ ಮಗ ಕಂಸನು ತಂದೆಯನ್ನು ಸಿಂಹಾಸನದಿಂದ ಕೆಳಗಿಳಿಸಿ ತಾನು ರಾಜನಾದನು. ಜರಾಸಂಧನು ತನ್ನ ಎರಡೂ ಹೆಣ್ಣು ಮಕ್ಕಳನ್ನು ಅವನಿಗೆ ಕೊಟ್ಟು ಮಡುವೆ ಮಾಡಿ ಟೂ-ಇನ್-ಒನ್ ಸಿಸ್ಟಮ್ಮಿನಲ್ಲಿ ಅಳಿಯನನ್ನಾಗಿ ಮಾಡಿಕೊಂಡನು. ಮುಂದೆ ಕಂಸನ ತಂಗಿ ದೇವಕಿಯನ್ನು ವಸುದೇವನು ಮದುವೆಯಾದದ್ದು, ಬಲರಾಮ-ಕೃಷ್ಣರು ಜನಿಸಿದ್ದು, ಕೃಷ್ಣನು ಕಂಸನನ್ನು ಕೊಂಡಿದ್ದು, ಜರಾಸಂಧ-ಕೃಷ್ಣರ ಅನೇಕ ಯುದ್ಧಗಳು, ಜರಾಸಂಧನ ಉಪಟಳ ತಾಳಲಾರದೆ ಕೃಷ್ಣನು ಯಾದವರನ್ನು ಮಥುರೆಯಿಂದ ದ್ವಾರಕೆಗೆ ಸ್ಥಳಾಂತರಿಸಿದ್ದು ಇವೆಲ್ಲ ನಡೆದುವು. ರಾಜಸೂಯ ಯಾಗಕ್ಕೆ ಮುಂಚೆ ಕೃಷ್ಣನು ಭೀಮಾರ್ಜುನರ ಜೊತೆ ಮಗಧಕ್ಕೆ ಹೋಗಿ ಜರಾಸಂಧನನ್ನು ಭೀಮನಿಂದ ಕುಸ್ತಿ ಕಾಳಗದಲ್ಲಿ ಸಿಕ್ಕಿಸಿದನು. ಕೃಷ್ಣನ ಸೂಚನೆಯಂತೆ ಭೀಮಸೇನನು ಜರಾಸಂಧನನ್ನು ಮತ್ತೆ ಒನ್-ಬೈ-ಟೂ ಮಾಡಿ ಕೊಂದನು. 
*****

ಮಹಾಭಾರತದ ಕಾಲಕ್ಕಿಂತ ಹಿಂದೆ ಹೋಗೋಣ. ದಶರಥನು ರಾಜ್ಯಭಾರ ಮಾಡುತ್ತಾ ಅಯೋಧ್ಯೆಯನ್ನು ಆಳುತ್ತಿದ್ದ ಕಾಲ. ಕೌಸಲ್ಯೆ, ಸುಮಿತ್ರೆ, ಕೈಕೇಯಿ ಎಂಬ ಮೂರು ರಾಣಿಯರಿದ್ದರೂ ದಶರಥನಿಗೆ ಮಕ್ಕಳಿರಲಿಲ್ಲ. ದಶರಥನು ಬಹಳ ಚಿಂತಿತನಾಗಿದ್ದನು. ಒಮ್ಮೆ ಬೇಟೆಗೆಂದು ಕಾಡಿಗೆ ಹೋಗಿದ್ದಾಗ ಪ್ರಮಾದವಶಾತ್ ಶ್ರವಣ ಕುಮಾರನನ್ನು ಆನೆಯೆಂದು ತಿಳಿದು ಶಬ್ದವೇಧಿ ಬಾಣ ಪ್ರಯೋಗಿಸಿ ಕೊಂದನು. "ನಿನ್ನ ಕೊನೆಯ ಕಾಲದಲ್ಲಿ ನಿನಗೂ ಪುತ್ರ ವಿಯೋಗವಾಗಲಿ" ಎಂದು ಶಪಿಸಿ ಶ್ರವಣನ ತಂದೆ-ತಾಯಿಯರು ದೇಹ ತ್ಯಾಗ ಮಾಡಿದರು. ರಾಜಧಾನಿಗೆ ಬಂದ ದಶರಥನು ವಿಷಾದದಿಂದ ರಾಜಗುರು ವಸಿಷ್ಠರಿಗೆ ವಿಷಯ ತಿಳಿಸಿದನು. "ಚಿಂತಿಸಬೇಡ. ಮೊದಲು ಮಕ್ಕಳಾಗಲಿ" ಎಂದು ವಸಿಷ್ಠರು ಸಮಾಧಾನ ಮಾಡಿದರು. 

ವಸಿಷ್ಟರು ದಶರಥನಿಂದ ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸಿದರು. ಯಜ್ಞಪುರುಷನು ಹೋಮಕುಂಡದಿಂದ ಹೊರಬಂದು ಒಂದು ದಿವ್ಯವಾದ ಪಾತ್ರೆಯಲ್ಲಿ ಸಂತಾನ ಕಾರಕ ಪಾಯಸವನ್ನು ಕೊಟ್ಟನು. ಕೌಸಲ್ಯೆಯು ಪಟ್ಟದರಾಣಿ. ಕೈಕೇಯಿ ಇಷ್ಟದ ರಾಣಿ. ಸುಮಿತ್ರೆ ಯಾವಾಗಲೂ ಇವರ ಹಿಂದಿರುವವಳು. ಅವಳಿಗೆ ಅದೇ ಅಭ್ಯಾಸ. ದಶರಥನು ಪಾಯಸವನ್ನು ಒನ್-ಬೈ-ಟೂ ಸಿಸ್ಟಮ್ಮಿನಲ್ಲಿ ಎರಡು ಭಾಗ ಮಾಡಿ ಕೌಸಲ್ಯೆ ಮತ್ತು ಕೈಕೆಯರಿಗೆ ಕೊಟ್ಟನು. ನಂತರ ಹಿಂದೆ ನೋಡಿದರೆ ಸುಮಿತ್ರೆ ನಿಂತಿದ್ದಾಳೆ. ಈಗೇನು ಮಾಡುವುದು? ಆಗ ಸವತಿಯರಲ್ಲಿ ತುಂಬಾ ವಿಸ್ವಾಸವಿತ್ತು. ಇನ್ನೂ ಮಂಥರೆಯ ಉಪದೇಶಗಳು ಪ್ರಭಾವ ಬೀರಿರಲಿಲ್ಲ. ಕೌಸಲ್ಯೆಯು ತನ್ನ ಪಾಲಿನ ಪಾಯಸದಲ್ಲಿ ಅರ್ಧವನ್ನು ಸುಮಿತ್ರೆಗೆ ಕೊಟ್ಟಳು. ಕೈಕೇಯಿಯೂ ಹಾಗೆಯೇ ಮಾಡಿದಳು. ಈಗ ಮೊದಲು ಒನ್-ಬೈ-ಟೂ ಇದ್ದದ್ದು ಟೂ-ಬೈ-ಫೋರ್ ಆಯಿತು. ಎರಡು ಪಾಲು ಸಿಕ್ಕಿದ್ದರಿಂದ ಸುಮಿತ್ರೆಗೆ ಇಬ್ಬರು ಮಕ್ಕಳು ಜನಿಸಿದರು. ಕೌಸಲ್ಯೆ ಮತ್ತು ಕೈಕೇಯಿಗೆ ಒಬ್ಬೊಬ್ಬ ಮಗ. ಒಟ್ಟಿನಲ್ಲಿ ನಾಲ್ಕು. ಹೀಗೆ ನಡೆಯಿತು. 

ಲಕ್ಷ್ಮಣ-ಶತ್ರುಘ್ನರು ಒಂದೇ ತಾಯಿಯ ಮಕ್ಕಳಾದರೂ ಅಷ್ಟಾಗಿ ಜೊತೆಯಲ್ಲಿ ಇರಲಿಲ್ಲ. ಲಕ್ಷ್ಮಣನು ಎಂದೂ ರಾಮನ ಜೊತೆ. ಶತ್ರುಘ್ನನು ಯಾವಾಗಲೂ ಭರತನ ಜೊತೆ. ಏಕೆ ಹೀಗೆ? ತಿಳಿದವರು ಇದು ಪಾಯಸದ ನಂಟು ಅಂದರು. ಕೌಸಲ್ಯೆ ಕೊಟ್ಟ ಪಾಯಸದ ಕೂಸು ಲಕ್ಷ್ಮಣ ಅವಳ ಮಗ ರಾಮನ ಜೊತೆ. ಕೈಕೇಯಿ ಕೊಟ್ಟ ಪಾಯಸದ ಕೂಸು ಶತ್ರುಘ್ನ ಅವಳ ಕೂಸು ಭರತನ ಜೊತೆ. ಹೀಗಂತೆ. 

ಒಟ್ಟಿನಲ್ಲಿ ಇಲ್ಲಿ ಒನ್-ಬ್ಯೆ-ಟೂ, ಟೂ-ಬ್ಯೆ-ತ್ರೀ, ಟೂ-ಬ್ಯೆ-ಫೋರ್ ಎಲ್ಲವೂ ಆದವು. ಮುಂದೆ ರಾಮಾಯಣ ನಡೆಯಿತು. ಅದು ಎಲ್ಲರಿಗೂ ಗೊತ್ತಿದ್ದದ್ದೇ. 

*****

ಕೆಲವರಿಗೆ ಈಗ ಒಂದು ಸಮಸ್ಯೆ ಬರಬಹುದು. ರಾಮಾಯಣದ ಕಾಲದಲ್ಲಿ ನಡೆದಿದ್ದಕ್ಕೂ ಮಹಾಭಾರತದ ಕಾಲದಲ್ಲಿ ನಡೆದಿದ್ದಕ್ಕೂ ಏಕೆ ವ್ಯತ್ಯಾಸ? ಅಲ್ಲಿ ನಾಲ್ಕು ಪೂರ್ಣ ಶಿಶುಗಳು. ಇಲ್ಲಿ ಎರಡು ಅರ್ಧ ಶಿಶುಗಳು. ಇದೇಕೆ ಈ ಗೋಜಲು? 

ಇದಕ್ಕೆ ಉತ್ತರ ಪಾಯಸದಲ್ಲಿ ಮತ್ತು ಹಣ್ಣಿನಲ್ಲಿ ಅಡಗಿದೆ. ಪಾಯಸ ಭಾಗವಾದರೂ ಪಾಯಸವೇ. ಹಣ್ಣು ಭಾಗವಾದರೆ ಹಣ್ಣಾಗಿ ಉಳಿಯುವುದಿಲ್ಲ. ಹಣ್ಣಿನ ಹೋಳಾಗುತ್ತದೆ. ಅಷ್ಟೇ. 

ಒಂದು ಕೆಲಸ ಮಾಡಿ. ಹತ್ತು ಲೀಟರು ಸೊಗಸಾದ ಪಾಯಸ ತಯಾರಿಸಿ. ಎರಡು ಭಾಗ ಮಾಡಿ. ಐದು ಲೀಟರು ಪಾಯಸ ಬಲಗಡೆ ಮನೆಯವರಿಗೆ ಕೊಡಿ. ಇನ್ನೈದು ಲೀಟರು ಪಾಯಸ ಎಡಗಡೆ ಮನೆಯವರಿಗೆ ಕೊಡಿ. ಅವರಿಬ್ಬರೂ ಮತ್ತೆ ಎರಡು ಭಾಗ ಮಾಡಿ, ಒಂದನ್ನು ಅವರೇ ಇಟ್ಟುಕೊಂಡು ಮತ್ತೆ ಒಂದು ಭಾಗವನ್ನು ಅವರ ಪಕ್ಕದ ಮನೆಯವರಿಗೆ ಕೊಡಲಿ. ಈಗ ಎಲ್ಲರೂ ನಮಗೆ ಪಾಯಸ ಸಿಕ್ಕಿತು ಅನ್ನುತ್ತಾರೆ. ಪಾಯಸದ ಹೋಳು ಅನ್ನುವುದಿಲ್ಲ. 

ಇದೇ ಪ್ರಯೋಗ ಒಂದು ಹಣ್ಣಿನಲ್ಲಿ ಮಾಡಿ. ನಮಗೆ ಒಂದು ಹಣ್ಣು ಕೊಟ್ಟರು ಎಂದು ಯಾರೂ ಹೇಳುವುದಿಲ್ಲ. ಹಣ್ಣಿನ ಹೋಳು ಸಿಕ್ಕಿತು ಎಂದೇ ಹೇಳುತ್ತಾರೆ. 

*****

ಮುಂದೆ ಯಾರಾದರೂ ತಪಸ್ವಿಗಳು ನಿಮಗೆ ಸಂತಾನಕ್ಕಾಗಿ ಪಾಯಸವನ್ನೋ ಅಥವಾ ಹಣ್ಣನ್ನೋ ಕೊಟ್ಟರೆ ಈ ಎರಡು ಪ್ರಸಂಗಗಳನ್ನು ನೆನಪಿಟ್ಟುಕೊಳ್ಳಿ. ಇಲ್ಲದಿದ್ದರೆ ಏನಾಗುತ್ತದೆ ಎಂದು ನಿಮಗೇ ಗೊತ್ತು!