Showing posts with label Hannu. Show all posts
Showing posts with label Hannu. Show all posts

Tuesday, July 1, 2025

ಏಕಾದಶಿಯ ದಿನ ಹಾಲು-ಹಣ್ಣು ಸೇವಿಸಿ


ಹಿಂದಿನ ಸಂಚಿಕೆಯಲ್ಲಿ, "ಮನವ ಕಬ್ಬಿಣ ಮಾಡು, ಹೇ ಮೃಡನೇ!" ಎಂಬ ಶೀರ್ಷಿಕೆಯ ಅಡಿಯಲ್ಲಿ, "ಸಂದರ್ಭ ನೋಡಿ ಮಾತುಗಳಿಗೆ ಅರ್ಥ ಮಾಡಬೇಕು" ಎನ್ನುವ ವಿಷಯವನ್ನು ಎರಡು ಬಾರಿ ನೋಡಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಸಂದರ್ಭ ನೋಡಿ ಮಾತುಗಳಿಗೆ ಅರ್ಥ ಮಾಡಬೇಕು ಎನ್ನುವುದು ಎಲ್ಲ ಕಾಲಗಳಿಗೂ ಒಪ್ಪುವ, ತಪ್ಪಿಸಲಾಗದ, ತಪ್ಪಿಸಬಾರದಾದ ಅವಶ್ಯಕತೆ. ಯಾವುದೇ ಒಂದು ಸಂದರ್ಭದ ಅರ್ಥದ ತಿಳುವಳಿಕೆಗೆ ಆಯಾ ಗ್ರಂಥದ ಎಲ್ಲ ಭಾಗಗಳನ್ನೂ ಪೂರ್ತಿಯಾಗಿ ಓದಿ, ಹಿಂದು ಮುಂದಿನ ಭಾಗಗಳನ್ನು ಸಮನ್ವಯ ಮಾಡಿ, ನಂತರ ಅರ್ಥಗಳನ್ನು ಗ್ರಹಿಸಬೇಕು. ಯಾವುದೋ ಗ್ರಂಥದ ಒಂದು ಅಧ್ಯಾಯ ಓದಿ, ಅದರ ಹಿಂದೆ ಮುಂದೆ ತಿಳಿಯದೆ, ಸಂದರ್ಭಗಳ ಅರ್ಥ ತಿಳಿಯುವುದು ಬಹಳ ಅಪಾರ್ಥಕ್ಕೆ ದಾರಿ ಮಾಡುತ್ತದೆ. ಇದು ಕೃತಿಗಳನ್ನು ಓದದೇ ಇರುವುದಕ್ಕಿಂತಲೂ ಹೆಚ್ಚು ಅಪಾಯಕಾರಿ. ತುಂಬಾ ಆಳವಾದ ವಿಷಯಗಳಲ್ಲಂತೂ ಕೇವಲ ಆ ಒಂದು ಗ್ರಂತಹವನ್ನಲ್ಲ; ಅದಕ್ಕೆ ಸಂಬಂಧಿಸಿದಂತಹ ಇತರೆ ವಾಂಗ್ಮಯವನ್ನೂ ಅವಲೋಕಿಸಿ ಅರ್ಥಗಳನ್ನು ತಿಳಿಯುವ ಅವಶ್ಯಕತೆ ಇರುತ್ತದೆ. ಇಲ್ಲದಿದ್ದರೆ "ಎತ್ತು ಈಯಿತು ಅಂದರೆ ಕರು ಕೊಟ್ಟಿಗೆಯಲ್ಲಿ ಕಟ್ಟು" ಎನ್ನುವ ಗಾದೆಯಂತೆ ಅಪಾರ್ಥಕ್ಕೆ ಎಡೆಗೊಡುತ್ತದೆ. ಎತ್ತು ಕರು ಹಾಕುವುದಿಲ್ಲ ಎಂದು ತಿಳುವಳಿಕೆ ಇರುವವನು "ಎತ್ತು ಈಯಿತು" ಅಂದ ತಕ್ಷಣ ನಕ್ಕು ಸುಮ್ಮನಾಗುತ್ತಾನೆ. ಕರುವಿನ ಬಗ್ಗೆ ಯೋಚಿಸುವ ಪ್ರಸಂಗವೇ ಬರುವುದಿಲ್ಲ. 

ಈ ಸೂತ್ರವನ್ನು ಚೆನ್ನಾಗಿ ಅರಿಯಲು ಒಂದು ಉದಾಹರಣೆಯನ್ನು ನೋಡೋಣ. 

*****

ಸಾಮಾನ್ಯವಾಗಿ ನಮ್ಮ ಸಂಪ್ರದಾಯಗಳನ್ನು ಸ್ವಲ್ಪಮಟ್ಟಿಗೆ ತಿಳಿದ ಎಲ್ಲರಿಗೂ "ಏಕಾದಶಿ" ಅಂದ ತಕ್ಷಣ ನೆನಪಿಗೆ ಬರುವುದು "ಉಪವಾಸ". ಅನೇಕರು ಏಕಾದಶಿ ಉಪವಾಸ ಅಂದರೆ "ಪಕ್ಕದ್ಮನೆ ಸುಬ್ಬಮ್ಮನಿಗೆ ಇಂದು ಏಕಾದಶಿ ಉಪವಾಸ" ಹಾಡನ್ನು ಜ್ಞಾಪಿಸಿಕೊಂಡು, ಅಲ್ಲಿ ಬರುವ ತಿಂಡಿಗಳ ಪಟ್ಟಿಯನ್ನು ನೋಡಿ, ಪ್ರತಿದಿನ ಏಕಾದಶಿ ಯಾಕೆ ಆಗಬಾರದು ಎಂದು ಆತಂಕ ಪಡಬಹುದು. ಕೆಲವರು ಏಕಾದಶಿ ಉಪವಾಸ ಮಾಡುತ್ತಾರೆ. ಇನ್ನು ಕೆಲವರು ಆ ರೀತಿ ಉಪವಾಸ ಮಾಡುವವರನ್ನು ಅಪಹಾಸ್ಯ ಮಾಡುತ್ತಾರೆ. ತಮಾಷೆಯ ಸಂಗತಿಯೆಂದರೆ ಅನೇಕರಿಗೆ ಇದು ಒಂದು ವ್ರತ ಎಂದು ಗೊತ್ತಿಲ್ಲ. ಗೊತ್ತಿದ್ದವರಿಗೂ ಅದರ ಪೂರ್ತಿ ಆಚರಣೆ ಗೊತ್ತಿಲ್ಲ. 

ಯಾವುದಾದರೂ ರೆಸ್ಟೋರೆಂಟ್ ಬಳಿ ಸಂಜೆ ಎಂಟರ ನಂತರ ಹೋದವರಿಗೆ ಅಲ್ಲಿ ನಡೆಯುವ ಚಟುವಟಿಕೆಗಳ ಪರಿಚಯ ಇರುತ್ತದೆ. ಬೆಳಗ್ಗಿನಿಂದ ನಿಲ್ಲದ ಚಟುವಟಿಕೆ ಆದ ನಂತರ, ಗ್ರಾಹಕರ ಸೇವೆ ಮುಗಿದ ಮೇಲೆ, ಅಂದಿನ ದಿನ ಬಾಗಿಲು ಮುಚ್ಚುವ ಮುಂಚೆ ಕೆಲವು ದೈನಿಕ ಕೆಲಸಗಳಿರುತ್ತವೆ. ಅಡಿಗೆ ಮನೆಯವರಿಗೆ ಮಿಕ್ಕ ಪದಾರ್ಥಗಳನ್ನು ಕೆಡದಂತೆ ಎತ್ತಿಟ್ಟು, ಪಾತ್ರೆಗಳನ್ನು ಶುಚಿ ಮಾಡಿ ಒರೆಸಿಟ್ಟು, ಮಾರನೆಯ ದಿನದ ಅಡಿಗೆಗೆ ನೆನೆಹಾಕುವ ಪದಾರ್ಥಗಳ ಕೆಲಸ ಮುಗಿಸಿ, ಎಲ್ಲ ತಯಾರಿ  ಮಾಡಿದಮೇಲೆ ವಿಶ್ರಾಂತಿ. ಸರ್ವರ್ ಮತ್ತು ಕ್ಲೀನರುಗಳಿಗೆ ಮೇಜಿನ ಮೇಲೆ ಕುರ್ಚಿಗಳನ್ನು ಮಗುಚಿಹಾಕಿ, ಎಲ್ಲ ಸಂದಿಗಳನ್ನೂ ಗುಡಿಸಿ, ನೀರಿನಿಂದ ತೊಳೆದು, ಜಾಗ ಒಣಗಿಸಿ, ಮಾರನೆಯ ದಿನಕ್ಕೆ ಗ್ರಾಹಕರನ್ನು ಎದುರುಗೊಳ್ಳಲು ಸಿದ್ಧ ಮಾಡಿಡಬೇಕು. ಬೆಳಗ್ಗೆ ಆರು ಗಂಟೆಗೆ ಮೊದಲ ಗ್ರಾಹಕ ಬರುವ ವೇಳೆಗೆ ಎಲ್ಲಾ ತಯಾರಾಗಿರಬೇಕು. 

ಪ್ರತಿ ಮನೆಯಲ್ಲಿಯೂ ಗೃಹಿಣಿ ಅಥವಾ ಅಡಿಗೆ ಮನೆ ನೋಡಿಕೊಳ್ಳುವವರು ಈ ಕೆಲಸ ಪ್ರತಿದಿನ ಮಾಡುತ್ತಾರೆ. ಸ್ವಲ್ಪ ಪಾಲುಮಾಲಿಕೆ ಪಟ್ಟರೂ (ಈ ಪದ ಈಗ ಮರೆತೇಹೋಗಿದೆ) ಸಹ ಮನೆಮಂದಿಯ ಆರೋಗ್ಯದ ಮೇಲೆ ನೇರ  ಪರಿಣಾಮ ಆಗುತ್ತದೆ. ಜೊತೆಗೆ ಅಡಿಗೆ ಪದಾರ್ಥಗಳ ಅಪವ್ಯಯವಾಗಿ ಮನೆಯ ಆಯ-ವ್ಯಯ ಏರುಪೇರಾಗುತ್ತದೆ. ಮಾರನೆಯ ದಿನ ಬೆಳಿಗ್ಗೆ ಕೆಲಸ ಮಾಡುವಾಗ ಎಡಚೆಡಚು (ತಾಳ-ಮೇಳ ತಪ್ಪುವುದು) ಆಗುತ್ತದೆ. 

ನಮ್ಮ ದೇಹದಲ್ಲೂ ಇದೇ ರೀತಿಯ ವ್ಯವಸ್ಥೆ ಉಂಟು. ಜಠರ, ಸಣ್ಣ ಕರುಳು, ದೊಡ್ಡ ಕರುಳು ಮೊದಲಾದ ಜೀರ್ಣಾಂಗಗಳಿಗೂ ಆಗಾಗ ಸ್ವಲ್ಪ ವಿಶ್ರಾಂತಿ ಬೇಕು. ಭಾನುವಾರ ದಣಿದ ದೇಹಕ್ಕೆ ವಿಶ್ರಾಂತಿ ಬೇಕು ಎಂದು ಜಗಳವಾಡುವವರೂ ಹೊಟ್ಟೆಗೆ ವಿಶ್ರಾಂತಿ ಕೊಡಲು ತಯಾರಿರುವುದಿಲ್ಲ. ಕ್ರಮವಾದ ಉಪವಾಸ ಜೇರ್ಣೇ೦ದ್ರಿಯಗಳಿಗೆ ಈ ರೀತಿಯ ವಿಶ್ರಾಂತಿ ಕೊಡುತ್ತದೆ. ಏಕಾದಶಿ ಉಪವಾಸ ಈ ಕೆಲಸ ಮಾಡುತ್ತದೆ. ಈಗಿನ ತಲೆಮಾರಿನವರು ಇದನ್ನು ಬಿಟ್ಟು "ಇಂಟರ್ಮಿಟೆಂಟ್ ಫಾಸ್ಟಿಂಗ್" ಮತ್ತು "ಡಬ್ಬಿಯ ಆಹಾರ" ಮೊರೆ ಹೋಗುತ್ತಿರುವುದು ಒಂದು ವಿಪರ್ಯಾಸ. 

*****

ಏಕಾದಶಿ ಉಪವಾಸ ಒಂದು ದಿನದ ಕಟ್ಟಲೆಯಲ್ಲ. ಅದು ಮೂರು ದಿನದ ಒಂದು ವ್ರತ. ನವಮಿ ಎರಡು ಹೊತ್ತು ಊಟ ಮಾಡಬಹುದು. ಏಕಾದಶಿಯ ಹಿಂದಿನ ದಿನ, ದಶಮಿಯಂದು ಒಂದೇ ಹೊತ್ತಿನ ಊಟ. ರಾತ್ರಿ ಏನೂ ತಿನ್ನುವ ಹಾಗಿಲ್ಲ. (ಇದಕ್ಕೆ "ದಶಮಿ ಏಕಭುಕ್ತ" ಅನ್ನುತ್ತಾರೆ). ಎರಡನೆಯ ದಿನ ಏಕಾದಶಿಯಂದು ಪೂರ್ತಿ ಉಪವಾಸ. ಉಪವಾಸ ಎಂದರೆ ಉಪವಾಸವೇ. ನೀರನ್ನೂ ಕುಡಿಯುವಹಾಗಿಲ್ಲ. (ಇದಕ್ಕೆ "ನಿರ್ಜಲ ಏಕಾದಶಿ" ಅನ್ನುತ್ತಾರೆ). ಮೂರ್ನಾಲ್ಕು ತರಹ ತಿಂಡಿಗಳನ್ನೋ, ಎರಡು-ಮೂರು ಲೀಟರು ಹಾಲನ್ನೋ, ಮೂರು-ನಾಲ್ಕು ಕೆಜಿ ಹಣ್ಣನ್ನೋ ಸೇವಿಸುವುದಲ್ಲ. (ಎಂದೋ ಮಾಡಿಟ್ಟ ಚಕ್ಕುಲಿ-ಕೋಡುಬಳೆ-ರವೆಉಂಡೆ ಮುಂತಾದುವನ್ನು ನೋಡಲೇಬಾರದು). ಮೂರನೆಯ ದಿನ ದ್ವಾದಶಿ ಬೆಳಿಗ್ಗೆ ಬೇಗನೆ ಗೊತ್ತಾದ ಹೊತ್ತಲ್ಲಿ (ಸೂರ್ಯೋದಯದ ವೇಳೆಯಲ್ಲಿ) ಊಟ ಮಾಡುವುದು. ಇದಕ್ಕೆ "ಪಾರಣೆ" ಎನ್ನುತ್ತರೆ. ಹೀಗೆ ದ್ವಾದಶಿ ಪಾರಣೆ ಮಾಡಿದಮೇಲೆ ರಾತ್ರಿ ಊಟವಿಲ್ಲ. ಮತ್ತೆ ಮಾರನೆಯ ದಿನ (ತ್ರಯೋದಶಿ) ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡಬಹುದು. 

ಇದಲ್ಲದೆ, ದೇವರ ನೈವೇದ್ಯವಲ್ಲದ ಯಾವ ಪದಾರ್ಥವನ್ನೂ ತಿನ್ನುವಹಾಗಿಲ್ಲ. ಊಟಗಳ ಮಧ್ಯೆ (ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ ಅನ್ನುವಂತೆ) ಸ್ವಲ್ಪ ಸ್ವಲ್ಪ ಅದು-ಇದು ಎಂದು ತಿನ್ನುವ-ಕುಡಿಯುವ ಹಾಗಿಲ್ಲ. ಪಾರಣೆಯಂದು (ಪೂರ್ತಿ ಏಕಾದಶಿ ವ್ರತ ಕಾಲದಲ್ಲಿಯೂ) ಈರುಳ್ಳಿ-ಆಲೂಗಡ್ಡೆ-ಬದನೇಕಾಯಿ, ಜೊತೆಗೆ ಒಂದಷ್ಟು ಹಲಸಂದೆಕಾಳು ಸೇರಿಸಿ, ಹುಳಿ ಮಾಡಿಸಿ ಹೊಡೆಯುವಹಾಗಿಲ್ಲ. ವರುಷಕ್ಕೆ ನಾಲ್ಕು ತಿಂಗಳು "ಚಾತುರ್ಮಾಸ" ಕಾಲದಲ್ಲಿ ಆ ವ್ರತದ ನಿಯಮ ಕೂಡ ಪಾಲಿಸಬೇಕು. ಒಂದು ತಿಂಗಳು ಹಾಲು ಏಪಯೋಗಿಸಬಾರದು. ಒಂದು ತಿಂಗಳು ಮೊಸರಿಲ್ಲ. (ಮಜ್ಜಿಗೆ ಆಗಬಹುದು!). ಒಂದು ತಿಂಗಳು ತರಕಾರಿಗಳಿಲ್ಲ. (ತರಕಾರಿ ಇಲ್ಲದ ತಿಂಗಳಲ್ಲಿ ಮೆಣಸಿನಕಾಯಿ ಉಪಯೋಗ ಇಲ್ಲ. ಖಾರಕ್ಕೆ ಬರೀ ಮೆಣಸು).  ಒಂದು ತಿಂಗಳು ಬೇಳೆ-ಕಾಳು ಇಲ್ಲ. (ವಡೆ-ಆಂಬೊಡೆ ಮಾಡುವಂತಿಲ್ಲ. ಮಾಡಲೇಬೇಕಾದರೆ ಅಕ್ಕಿ ವಡೆ ಮಾಡಬಹುದು). ಏಕಾದಶಿ ವ್ರತದ ಕ್ರಮ ಹೀಗೆ. ಕೆಲವೊಮ್ಮೆ ಎರಡೆರಡು ಏಕಾದಶಿ ಬರುವುದುಂಟು. ಹೆದರಬೇಕಿಲ್ಲ. ಇದು ಸುಮಾರು ಮೂರು ವರುಷಗಳಿಗೆ ಒಂದು ಬಾರಿ ಮಾತ್ರ. 

"ಏಕಾದಶಿ ಮನೆಗೆ ಶಿವರಾತ್ರಿ ಬಂದಂತೆ" ಎಂದು ಒಂದು ಗಾದೆ. "ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತೆ" ಎಂದು ಮತ್ತೊಂದು ಗಾದೆ. ಮೊದಲೇ ಖರ್ಚಿಗೆ ಕಾಸಿಲ್ಲದಿದ್ದಾಗ ಹೆಚ್ಚಿನ ವೆಚ್ಚದ ಬಾಬ್ತು ಬಂದಾಗ ಈ ಗಾದೆಗಳನ್ನು ಹೇಳುತ್ತಾರೆ. "ದುರ್ಭಿಕ್ಷದ ಅಧಿಕ ಮಾಸದ ಎರಡು ಏಕಾದಶಿಯಲ್ಲಿ ಶಿವರಾತ್ರಿ ಬಂದಂತೆ" ಎಂದು ಸದ್ಯ ಗಾದೆಯಿಲ್ಲ. (ಶಿವರಾತ್ರಿ ಏಕಾದಶಿಯಂದು ಬರುವುದು ಗಾದೆಯಲ್ಲಿ ಮಾತ್ರ. ನಿಜ ಜೀವನದಲ್ಲಿ ಇದು ಆಗುವುದಿಲ್ಲ). 
*****

ಮುಕುಂದರಾಯರು ದೊಡ್ಡ ಅಧಿಕಾರದ ಹುದ್ದೆಯಲ್ಲಿದ್ದು ನಿವೃತ್ತರಾದರು. ಬಹಳ ಪ್ರಯತ್ನ ಪಟ್ಟರೂ ಎಲ್ಲಿಯೂ ಎರಡನೇ ಕೆಲಸ ಸಿಗಲಿಲ್ಲ. ವಿಧಿಯಿಲ್ಲದೇ ದೇವರ ಬೆನ್ನುಹತ್ತಿದರು. ಯಾರೋ ಬಂಧುಗಳು ಸಂಜೆ ದೇವಸ್ಥಾನದಲ್ಲಿ ಏಳು ಗಂಟೆಯಿಂದ ಎಂಟು ಗಂಟೆವರೆಗೆ ನಡೆಯುವ "ಪುರಾಣ" ಬಹಳ ಒಳ್ಳೆಯದು ಎಂದು ಹೇಳಿದರು. ಮುಕುಂದರಾಯರು ಹೊರಡಲು ತಯಾರಾದರು. ಕೆಲಸದಲ್ಲಿದ್ದಾಗ ಕಾರಿತ್ತು. ಈಗ ಸಿಟಿ ಬಸ್ಸಿನಲ್ಲಿ ಹೋಗಬೇಕು. ಮೊದಲ ದಿನ ಪುರಾಣಕ್ಕೆ ಹೊರಟು ಬಸ್ಸು ಹಿಡಿದು ದೇವಸ್ಥಾನ ತಲುಪುವುದರಲ್ಲಿ ಏಳು ಮುಕ್ಕಾಲು ಗಂಟೆ ಆಯಿತು. ಕಡೆಗೆ ಕೂಡಲು ಜಾಗ ಸಿಗದೇ ಒಂದೆಡೆ ನಿಂತುಕೊಂಡೇ ಕಡೆಯ ಹದಿನೈದು ನಿಮಿಷದ ಪುರಾಣ ಕೇಳಿದರು. 

ಪುರಾಣೀಕರು ಮಾರನೆಯ ದಿನ ವೈಕುಂಠ ಏಕಾದಶಿಯ ಕಾರಣ ಏನು ಮಾಡಬೇಕೆಂದು ವಿವರಿಸುತ್ತಿದ್ದರು. "ನಾಳೆ ವೈಕುಂಠ ಏಕಾದಶಿ ಒಂದು ಪರ್ವಕಾಲ. ನಾನು ವಿವರಿಸಿದಂತೆ ಉಪವಾಸವಿದ್ದು, ಹಾಲು-ಹಣ್ಣು ಚೆನ್ನಾಗಿ ಸೇವಿಸಿ, ದೇವರನಾಮ-ಸ್ತೋತ್ರಾದಿಗಳನ್ನು ಹೇಳಿಕೊಂಡು ಕಾಲ ಕಳೆಯಬೇಕು. ಭೋಜನ ಮಾಡಬಾರದು ಎಂದು ಬೇರೆ ಹೇಳಬೇಕಿಲ್ಲ. ಅವಕಾಶವಿದ್ದವರು ದೇವಾಲಯಗಳಿಗೆ ಅವಶ್ಯ ಹೋಗಿ ದೇವರ ದರ್ಶನ ಪಡೆಯಬೇಕು. ನಾಳೆ ಎಂದಿನಂತೆ ಏಳು ಘಂಟೆಯಿಂದ ಎಂಟು ಘಂಟೆವರೆಗೆ ಇಲ್ಲಿಯೂ ಹಾಲು-ಹಣ್ಣಿಗೆ ವ್ಯವಸ್ಥೆ ಮಾಡಿದೆ. ತಪ್ಪದೇ ಬಂದು ಭಾಗವಹಿಸಿ" ಎಂದು ಹೇಳಿ ಅಂದಿನ ಪ್ರವಚನ ಮುಗಿಸಿದರು. ರಾಯರು ಮನೆಗೆ ಬಂದರು. 

ರಾಯರಿಗೆ ಹಾಲು-ಹಣ್ಣಿನಲ್ಲಿ ದಿನ ಕಳೆದು ಗೊತ್ತಿಲ್ಲ. ಆದರೂ ಅದನ್ನು ಪಾಲಿಸಬೇಕೆಂದು ತೀರ್ಮಾನಿಸಿದರು. ಮನೆಯಲ್ಲಿ ಎಲ್ಲರೂ ಪರ ಊರಿಗೆ ಹೋಗಿ ಅವರು ಒಬ್ಬರೇ ಉಳಿದಿದ್ದರು. ಬೆಳಗ್ಗೆ ಹಾಲಿನಂಗಡಿಗೆ ಹೋದಾಗ ಅಂಗಡಿಯವನು "ಸ್ವಾಮಿ, ಇಂದು ಹಾಲಿಗೆ ಬಹಳ ಬೇಡಿಕೆ. ಎಲ್ಲಾ ಖರ್ಚಾಗಿದೆ. ಐದು ಲೀಟರಿನ ಒಂದು ಪ್ಯಾಕೆಟ್ ಮಾತ್ರ ಇದೆ" ಅಂದ. ರಾಯರು ಅದನ್ನು ಕೊಂಡರು. ಹಣ್ಣಿನ ಅಂಗಡಿಯಲ್ಲಿಯೂ ಎಲ್ಲಾ ಖಾಲಿ ಖಾಲಿ. ಕಡೆಗೆ ಒಂದು ಹಲಸಿನ ಹಣ್ಣು, ಒಂದು ಕಲ್ಲಂಗರೇ ಹಣ್ಣು, ಸ್ವಲ್ಪ  ಮೂಸಂಬಿ, ಬಾಳೆಹಣ್ಣು ಸಿಕ್ಕಿತು. ಅವರ ಹೆಂಡತಿ ಯಾವಾಗಲೋ "ಐದು ತರಹದ ಹಣ್ಣು" ಎಂದು ಹೇಳಿದ್ದುದು ನೆನಪಿಗೆ ಬಂತು. ಕಷ್ಟಪಟ್ಟು ಇನ್ನೊಂದು ಅಂಗಡಿಯಲ್ಲಿ ಒಂದು ಚಕ್ಕೋತ ಕೊಂಡರು. ಇವುಗಳ ಭಾರವನ್ನು ಹೊತ್ತು ಮನೆಗೆ ಬಂದರು.

ಸ್ನಾನ ಮಾಡಿ ಹಲಸಿನ ಹಣ್ಣು ಹೆಚ್ಚಿದರು. ಹಾಲು ದೊಡ್ಡ ಪಾತ್ರೆಯಲ್ಲಿ ಜಾಗರೂಕರಾಗಿ ಉಕ್ಕದಂತೆ  ಕಾಯಿಸಿದರು. ಬಾಳೆಯ ಹಣ್ಣಿನ ಜೊತೆ ಹಲಸಿನ ಹಣ್ಣು ಸೇರಿಸಿ ತಿಂದರು. ಸ್ವಲ್ಪ ಹಾಲೂ ಸೇರಿತು. ವಿಶ್ರಾಂತಿಯ ನಂತರ ಚಕ್ಕೋತ ಹಣ್ಣು ಮತ್ತು ಹಾಲು ನಡೆಯಿತು. ಸಂಜೆಯ ವೇಳೆ ಬೇರೆ ಹಣ್ಣುಗಳು ಮತ್ತು ಮತ್ತಷ್ಟು ಹಾಲು ಹೊಟ್ಟೆ ಸೇರಿತು. ದೇವಸ್ಥಾನದಲ್ಲಿ ಪುರಾಣೀಕರು ಹೇಳಿದ್ದು ನೆನಪಿಗೆ ಬಂತು. "ಅಲ್ಲಿ ಹಣ್ಣು-ಹಾಲಿನ ವಿತರಣೆ ವ್ಯವಸ್ಥೆ ಇದೆ. ಹೋಗಬೇಕು" ಎಂದು ನೆನಪಾಯಿತು. ಬೇಗ ಹೊರಟು ಏಳು ಗಂಟೆಯ ಮುಂಚೆ ಅಲ್ಲಿ ಸೇರಿದರು. 

ಏಳಕ್ಕೆ ಪ್ರಾಂಭವಾದ ಪುರಾಣದಲ್ಲಿ ಭಗವದ್ಗೀತೆ ಮತ್ತು ಭಾಗವತದ ಕೆಲವು ಭಾಗಗಳ ಶ್ಲೋಕಗಳು ಮತ್ತು ಅವುಗಳ ವಿವರಣೆ ನಡೆಯಿತು. ಹಾಲು ಮತ್ತು ಹಣ್ಣುಗಳ ಸುಳಿವೇ ಇಲ್ಲ. ಇರಲಿ, ಪುರಾಣದ ನಂತರ ವಿತರಣೆ ಆಗಬಹುದು ಎಂದು ರಾಯರು ಕಾದರು. ಎಂಟು ಗಂಟೆಗೆ ಪುರಾಣ ಮುಗಿಯುತ್ತಿದ್ದಂತೆಯೇ ಎಲ್ಲರೂ ಅವಸರವಸರವಾಗಿ ಅವರವ ಮನೆಗೆ ಹೊರಟರು. ಒಬ್ಬರು ವಯಸ್ಸಾದ ಯಜಮಾನರು ಮಾತ್ರ ನಿಧಾನವಾಗಿ ಹೋಗುತ್ತಿದ್ದರು. ಮಕುಂದರಾಯರು  ಅವರ ಜೊತೆ ಹೆಜ್ಜೆ ಹಾಕುತ್ತ ಹಾಲು-ಹಣ್ಣಿನ ಬಗ್ಗೆ ಕೇಳಿದರು. 

"ಇದೇನು, ಹೀಗೆ ಕೇಳುತ್ತೀರಿ. ಒಂದು ಗಂಟೆ ಹಾಲು-ಹಣ್ಣೇ ಆಯಿತಲ್ಲ?" ಅಂದರು ಆ ಹಿರಿಯರು. "ಎಲ್ಲಿ ಆಯಿತು? ಬರೀ ಭಗವದ್ಗೀತೆ ಮತ್ತು ಭಾಗವತದ ಕೆಲವು ಭಾಗ ಹೇಳಿದರು, ಅಷ್ಟೇ" ಅಂದರು ರಾಯರು. "ಅದೇ ಸ್ವಾಮಿ. ಹಾಲು ಅಂದರೆ ಭಗವದ್ಗೀತೆ. ಹಣ್ಣು ಅಂದರೆ ಭಾಗವತ" ಅಂದರು ಯಜಮಾನರು. "ಅದು ಹೇಗೆ?" ಎಂದು ರಾಯರು ಕೇಳಿದರು. "ನಿನ್ನೆ ಪುರಾಣದಲ್ಲಿ ಹೇಳಿದ್ದು ನೀವು ಕೇಳಲಿಲ್ಲವೇ? "ದುಗ್ಧಮ್ ಗೀತಾಮೃತಮ್ ಮಹತ್".  ಭಗವದ್ಗೀತೆ ಎಂಬುದೇ ಹಾಲು. ಮತ್ತೆ  "ನಿಗಮಕಲ್ಪ ತರೋರ್ಗಲಿತಂ ಫಲಂ".  ಶ್ರೀಮದ್ಭಾಗವತವೇ ಹಣ್ಣು. ಏಕಾದಶಿಯ ದಿನ ಈ ಹಾಲು-ಹಣ್ಣು ಸೇವಿಸಿ ಎಂದೇ ಪುರಾಣೀಕರು ನಿನ್ನೆ ಹೇಳಿದ್ದು. ಇವತ್ತು ಅದೇ ವಿತರಣೆ ಆಯಿತಲ್ಲ. ಏಕಾದಶಿಯಂದು ಬೇರೆ ಹಣ್ಣು-ಹಾಲು ಯಾರು ಸೇವಿಸುತ್ತಾರೆ?" ಎಂದರು ಆ ಹಿರಿಯರು. 

*****

ಹಲಸಿನ ಹಣ್ಣು, ಕಲ್ಲಂಗಡಿ ಹಣ್ಣು, ಮೂಸಂಬಿ, ಚಕ್ಕೋತ, ಬಾಳೆಹಣ್ಣು ಮತ್ತು ಹಾಲಿನ ಕೊಳಗ ರಾಯರ  ತಲೆಯಸುತ್ತ ಸುತ್ತುವಂತೆ ಅವರಿಗೆ ಭಾಸವಾಯಿತು.  ಹಿರಿಯರು ಅವರ  ಮುಖ ನೋಡಿದರು. ಅವರಿಗೆ ಅರ್ಥ ಆಯಿತು. "ನಾಳೆ ಸ್ವಲ್ಪ ಬೇಗ ಬನ್ನಿ. ಪುರಾಣ ಪ್ರಾರಂಭವಾಗುವುದರ ಮುಂಚೆ ಇದನ್ನು ವಿವರಿಸುತ್ತೇನೆ" ಎಂದು ಹೇಳಿ ಅವರ ಮನೆ ಗಲ್ಲಿಯಲ್ಲಿ ತಿರುಗಿದರು ಆ ವೃದ್ಧರು. 

Saturday, May 3, 2025

ಒನ್- ಬೈ- ಟು ಮತ್ತು ಟೂ- ಬೈ-ತ್ರೀ



ನಾವು ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ವ್ಯವಹಾರ ಜ್ಞಾನ ಬರಲಿ ಎಂಬ ದೃಷ್ಟಿಯಿಂದ ನಮ್ಮ ಮನೆಯ ಹಿರಿಯರು ನಮ್ಮನ್ನು ದಿನಬಳಕೆಗೆ ಬೇಕಾದ ಪದಾರ್ಥಗಳನ್ನು ತರಲು ಅಂಗಡಿಗಳಿಗೆ ಕಳಿಸುತ್ತಿದ್ದರು. ಆಗ ಈಗಿನಂತೆ ಮನೆ ಬಾಗಿಲಿಗೆ ಸಾಮಾನು-ಸರಂಜಾಮು ತಂದು ಕೊಡುವ ವ್ಯವಸ್ಥೆ ಇರಲಿಲ್ಲ. ರೆಫ್ರಿಜಿರೇಟರ್ಗಳು ಇನ್ನೂ ಬಂದಿರಲಿಲ್ಲ. ಪ್ರತಿದಿನ ತರಕಾರಿ ಕೊಂಡು ತರಬೇಕಾಗಿತ್ತು. ಮನೆಯ ಹಿತ್ತಿಲಿನಲ್ಲಿ ಕೆಲವನ್ನು ಬೆಳೆದರೂ ಪೇಟೆಯಿಂದ ಮತ್ತೆ ಕೆಲವು ಕೊಂಡು ತರಬೇಕಾಗಿತ್ತು. ಯಾವ ತರಕಾರಿ ಎಳೆಯದಿರಬೇಕು, ಯಾವುದು ಬಲಿತಿರಬೇಕು, ಕೊಡುವ ಹಣದ ಲೆಕ್ಕ ಮತ್ತು ತರುವ ಪದಾರ್ಥಗಳ ಲೆಕ್ಕ ಮುಂತಾದುವನ್ನು ಹೀಗೆ ಕಲಿಯುತ್ತಿದ್ದೆವು.

ಪೇಟೆಯಲ್ಲಿ ಕೆಲವು ತರಕಾರಿ ಅಂಗಡಿಗಳಿದ್ದವು. ಸುತ್ತ-ಮುತ್ತಲಿನ ಹಳ್ಳಿಗಳ ಜನರು ತಾವು ಬೆಳೆದ ತರಕಾರಿ, ಸೊಪ್ಪು, ಹಣ್ಣುಗಳು ಮುಂತಾದುವನ್ನು ಬೆಳಿಗ್ಗೆ  ಬೇಗನೆ ತಲೆಯ ಮೇಲೆ ಹೊತ್ತುಕೊಂಡು ಹತ್ತಿರದ ಪಟ್ಟಣಗಳಿಗೆ ಬರುತ್ತಿದ್ದರು. ರಸ್ತೆಯ ಪಕ್ಕದಲ್ಲಿ ಗೋಣಿಚೀಲ ಅಥವಾ ಚಾಪೆ ಹಾಸಿಕೊಂಡು ತಂದ ಸರಕನ್ನು ಇಟ್ಟು ಮಾರುತ್ತಿದ್ದರು. ಎಂಟು-ಒಂಬತ್ತು ಗಂಟೆಗಲ್ಲಾ ಅವನ್ನು ಮಾರಿ ಮುಗಿಸಿ ತಮಗೆ ಬೇಕಾದ ಪದಾರ್ಥಗಳನ್ನು ಕೊಂಡುಕೊಂಡು ಹಳ್ಳಿಗಳಿಗೆ ಹಿಂತಿರುಗುತ್ತಿದ್ದರು. ಅವರು ವರ್ತಕರಲ್ಲದುದರಿಂದ ಅವರ ಬಳಿ ತಕ್ಕಡಿಗಳು ಇರುತ್ತಿರಲಿಲ್ಲ. ತರಕಾರಿಗಳನ್ನು ಸಣ್ಣ ಸಣ್ಣ ಗುಡ್ಡೆಗಳಾಗಿ ಇಟ್ಟು ಮಾರುತ್ತಿದ್ದರು. ಈಗಿನಂತೆ ಆಗ ಅಂಗಡಿಗಳ ಒಳಗೆ ಹೋಗಿ ಬೇಕಾದ ತರಕಾರಿ ಆರಿಸುವಂತಿರಲಿಲ್ಲ. ಅಂಗಡಿಯವರು ಕೊಟ್ಟಿದ್ದನ್ನು ತರಬೇಕಿತ್ತು. ಅಂಗಡಿಯವರು ಕೆಲವರು ಮಕ್ಕಳು ಕೊಳ್ಳಲು ಹೋದಾಗ ತೂಕದಲ್ಲಿ ವ್ಯತ್ಯಾಸ ಸಹ ಮಾಡುತ್ತಿದ್ದರು. ಗುಡ್ಡೆಗಳಲ್ಲಿ ಹೆಚ್ಚು ತರಕಾರಿ ಇರುವ ಗುಡ್ಡೆ ಆರಿಸಿ ತರುವುದರಲ್ಲಿ ಒಂದು ಆನಂದವಿರುತ್ತಿತ್ತು. ಈ ಕಾರಣಗಳಿಗೆ ನಾವು ರಸ್ತೆ ಬದಿಯ ಗುಡ್ಡೆ ತರಕಾರಿಗಳನ್ನು ಕೊಳ್ಳಲು ಇಷ್ಟ ಪಡುತ್ತಿದ್ದೆವು. 

ಆಗ ರೆಸ್ಟೋರಂಟುಗಳು ಬಹಳ ಕಡಿಮೆ. ಹೈಸ್ಕೂಲು ಮತ್ತು ಕಾಲೇಜು ಓದು ತಲುಪುವವರೆಗೂ ಹೋಟೆಲು ತಿಂಡಿ ಅಪರೂಪವೇ. ಇಬ್ಬರು ಸ್ನೇಹಿತರು ಜೊತೆಯಾಗಿ ಹೋಗಿ ಜೇಬಿನಲ್ಲಿದ್ದ ಹಣವನ್ನು ಕೂಡಿಸಿ ಅವಾಗೊಮ್ಮೆ, ಇವಾಗೊಮ್ಮೆ ತಿಂಡಿ ತಿನ್ನುವುದು ಒಂದು ಸಾಧನೆಯಂತೆ. ಕಾಫಿ ಅಥವಾ ಟೀ ಕುಡಿಯುತ್ತಿರಲಿಲ್ಲ. ಕುಡಿದರೂ ಒಂದನ್ನು ಇಬ್ಬರು ಹಂಚಿಕೊಂಡು ಕುಡಿಯುವುದು. ಮಾಣಿಗೆ "ಒನ್-ಬೈ-ಟು" ಕಾಫಿ ಎಂದು ಹೇಳುವುದರಲ್ಲಿ ಒಂದು ಖುಷಿ. ಮೂವರು ಹೋದರೆ "ಟು-ಬೈ-ತ್ರೀ" ಆಗುತ್ತಿತ್ತು. ಮಾಣಿ ಸಾಮಾನ್ಯವಾಗಿ ಎರಡು ಕಾಫಿ ಮತ್ತು ಒಂದು ಖಾಲಿ ಲೋಟ ತರುತ್ತಿದ್ದ. ನಾವೇ ಹಂಚಿಕೊಳ್ಳುವುದು. ಅದು ಎಲ್ಲರಿಗೂ ಸಮವಾಗಿ ಬರುವಂತೆ ಹಂಚಿಕೊಳ್ಳುವುದು ಒಂದು ಉತ್ಸಾಹದ ಆಟ ಆಗಿರುತ್ತಿತ್ತು. 

ಬೆಂಗಳೂರಿನಲ್ಲಿ, ಅದಕ್ಕಿಂತ ಹೆಚ್ಚಾಗಿ ಮೈಸೂರಿನಲ್ಲಿ, ಹೊಟೇಲುಗಳಲ್ಲಿ ಸೆಟ್ ಮಸಾಲೆ ದೋಸೆ ಸಿಗುತ್ತಿತ್ತು. (ಸೆಟ್ ದೋಸೆ ಈಗಲೂ ಎಲ್ಲ ಕಡೆ ಸಿಗುತ್ತದೆ). ಸೆಟ್ ಮಾಸಾಲೆಯಲ್ಲಿ ಎರಡು ಮಸಾಲೆ ದೋಸೆಗಳು ಇರುತ್ತಿದ್ದವು. ಮಾಮೂಲಿ ಮಸಾಲೆ ದೋಸೆಗಿಂತ ಸ್ವಲ್ಪ ಸಣ್ಣವಾದರೂ ಎರಡು ಸೇರಿದರೆ ಒಂದು ಮಾಮೂಲಿ ಮಸಾಲೆ ದೋಸೆಗಿಂತ ಹೆಚ್ಚಾಗುತ್ತಿತ್ತು. ಆದ್ದರಿಂದ ಅದು "ಟೂ-ಬೈ-ಒನ್" ಎಂದು ಒಬ್ಬರಿಗೊಬ್ಬರು ತಮಾಷೆ ಮಾಡಿಕೊಳ್ಳುತ್ತಿದ್ದೆವು. ಇಂತಹ ಕೆಲವು ರೆಸ್ಟೋರಂಟುಗಳಲ್ಲಿ "ನೋ ಒನ್-ಬೈ-ಟೂ ಸರ್ವಿಸ್" ಎಂದು ಬೋರ್ಡ್ ಕೂಡ ಹಾಕಿರುತ್ತಿದ್ದರು. ಕೆಲವು ಕಡೆ "ಸ್ಪೆಷಲ್ ರೂಮ್" ಇರುತ್ತಿತ್ತು. (ಎಸಿ ರೂಮುಗಳು ಇನ್ನೂ ಬಂದಿರಲಿಲ್ಲ). ಅಲ್ಲಿ ಒಬ್ಬರಿಗೆ  ಐದು ಪೈಸೆ ಹೆಚ್ಚು  ಕೊಡಬೇಕಿತ್ತು. ಹೀಗೆಂದು ಬೋರ್ಡ್ ಬರೆದಿರುತ್ತಿದ್ದರು. ಆ ರೂಮಿನಲ್ಲಿ ಕಪ್ಪು-ಸಾಸರಿನಲ್ಲಿ ಕಾಫಿ ಕೊಡುತ್ತಿದ್ದರು. ಅದರ ಹೊರಗಡೆ ಗಾಜಿನ ಲೋಟದಲ್ಲಿ. ಸ್ಪೆಷಲ್ ರೂಮಿನಲ್ಲಿ ತಿಂಡಿ ತಿಂದರೆ ಅಲ್ಲೇ ಬಿಲ್ ಪಾವತಿಸಬಹುದಿತ್ತು. ಹೊರಗಡೆ ತಿಂದರೆ ಬಿಲ್ ತೆಗೆದುಕೊಂಡು ಹೋಗಿ ಕ್ಯಾಷಿಯರ್ ಬಳಿ ಪಾವತಿ ಮಾಡಬೇಕಿತ್ತು. 

ಈ "ಒನ್-ಬೈ-ಟು" ಆಥವಾ "ಟೂ-ಬೈ-ತ್ರೀ" ಎಂದು ಹೇಳುವುದು ಇಂಗ್ಲಿಷ್ ಕಲಿತಮೇಲೆ ಬಂದದ್ದು. ಆದರೆ ಒಂದನ್ನು ಎರಡು, ಎರಡನ್ನು ಮೂರು, ಅಥವಾ ಎರಡನ್ನು ಒಂದು ಮಾಡುವುದು ಹೊಸದೇನೂ ಅಲ್ಲ. ಅದು ತಲೆತಲಾಂತರದಿಂದ ಬಂದದ್ದೇ. ರಾಮಾಯಣ, ಮಹಾಭಾರತ ಕಾಲಗಳಿಂದಲೂ ಇವು ಇದ್ದೇ ಇವೆ. ಅದು ಹೇಗೆ? ಸ್ವಲ್ಪ ಮುಂದೆ ನೋಡೋಣ. ಹಿಂದಿನ "ರಾಹುಕಾಲ ಮತ್ತು ಬಲಿ ಪಾಡ್ಯಮಿ" ಎಂಬ ಸಂಚಿಕೆಯಲ್ಲಿ ರಾಹುಕಾಲ ಹೇಗೆ "ಸೆವೆನ್-ಬೈ-ಯೈಟ್" ಆಯಿತು ಅನ್ನುವುದನ್ನು ನೋಡಿದ್ದೆವಲ್ಲ! ಅದನ್ನು ಓದಬೇಕಾದರೆ ಇಲ್ಲಿ ಕ್ಲಿಕ್ ಮಾಡಿ.  

*****  

ಕೌರವರು ಮತ್ತು ಪಾಂಡವರು ಇನ್ನೂ ಹುಟ್ಟುವುದರ  ಮುಂಚಿನ ಸಮಾಚಾರ ಇದು. ಮಗಧದ ರಾಜನಾಗಿದ್ದ ಬೃಹದ್ರಥ ರಾಜ್ಯಭಾರ ಮಾಡುತ್ತಿದ್ದ ಕಾಲ. ಅವನು ಕಾಶೀರಾಜನ ಅವಳಿ ಹೆಣ್ಣುಮಕ್ಕಳನ್ನು ವಿವಾಹವಾಗಿದ್ದನು. ಸಂತಾನವಿಲ್ಲದೆ ಚಿಂತಿತನಾಗಿದ್ದನು. ಒಮ್ಮೆ ಮಹಾತಪಸ್ವಿ ಒಬ್ಬರು ಅವನ ಆಸ್ಥಾನಕ್ಕೆ ಬಂದು ಅವನಿಗೆ ಅನುಗ್ರಹಿಸಿ ಒಂದು ಹಣ್ಣನ್ನು ಕೊಟ್ಟರು. ಇದನ್ನು ನಿನ್ನ ಪತ್ನಿ ಸೇವಿಸಿದರೆ ಸಂತಾನ ಆಗುವುದು ಎಂದು ಹೇಳಿದರು. ಬೃಹದ್ರಥನಿಗೆ ಒಬ್ಬಳಿಗೆ ಹಣ್ಣು ಕೊಟ್ಟು ಮತ್ತೊಬ್ಬಳ ಜೊತೆ ಮನಸ್ತಾಪ ಆಗುವುದು ಇಷ್ಟವಿರಲಿಲ್ಲ. ಅವರು ಹೋದ ನಂತರ ಬೃಹದ್ರಥನು ಆ ಹಣ್ಣನ್ನು ಒನ್-ಬೈ-ಟು ಮಾಡಿ ತನ್ನ ಇಬ್ಬರು ಹೆಂಡತಿಯರಿಗೂ ಕೊಟ್ಟನು. ಕಾಲಕ್ರಮದಲ್ಲಿ ಅವರಿಬ್ಬರೂ ಗರ್ಭವತಿಯರಾದರು. ಸಮಯ ಕಳೆದ ಮೇಲೆ ಅವರಿಬ್ಬರೂ ಒಂದೇ ದಿನ ಅರ್ಧ ಅರ್ಧ ಶಿಶುವನ್ನು ಹಡೆದರು. ನೋಡಲು ಭೀಕರವಾಗಿದ್ದ ಆ ಎರಡು ಶಿಶು ಹೋಳುಗಳನ್ನು ನಗರದ ಹೊರಗಡೆ ಬಿಸಾಡುವಂತೆ ರಾಜನು ತನ್ನ ನೌಕರರಿಗೆ ಆಜ್ಞಾಪಿಸಿದನು. ಅದರಂತೆ ಅವರು ತಮ್ಮ ಕೆಲಸ ಮಾಡಿದರು. 

ಸ್ವಲ್ಪ ಸಮಯದ ನಂತರ ಜರೆ ಎಂಬ ಹೆಸರಿನ ರಕ್ಕಸಿಯೊಬ್ಬಳು ಹಸಿವಿನಿಂದ ಬಳಲುತ್ತಾ ಆಹಾರ ಹುಡುಕುತ್ತ ಅಲ್ಲಿ ಬಂದಳು. ಕಂಡ ಎರಡು ಶಿಶು ಹೋಳುಗಳನ್ನು ಎರಡು ಕೈಗಳಲ್ಲಿ ತೆಗೆದುಕೊಂಡು ತಿನ್ನಲು ನೋಡಿದಳು. ಆಗ ಎರಡು ಹೋಳುಗಳೂ ವಿಧಿವಶಾತ್ ಒಂದಾದವು. ಎರಡು ಭಾಗಗಳು ಸೇರಿಕೊಂಡ ತಕ್ಷಣ ಆ ಶಿಶುವಿಗೆ ಜೀವ ಬಂದು ಉಸಿರಾಡುತ್ತಾ ಬಹಳ ಜೋರಾದ ಶಬ್ದದಿಂದ ಅಳಲು ಪ್ರಾರಂಭಿಸಿತು. ಆ ಮಗುವನ್ನು ತಿನ್ನಲು ಮನಸ್ಸು ಬರದೆ ಜರೆಯು ಮಗುವನ್ನು ರಾಜನಿಗೆ ತಂದು ಕೊಟ್ಟಳು. ರಾಜನು ಸಂತೋಷ ಪಟ್ಟು ಆ ಮಗುವಿಗೆ "ಜರಾಸಂಧ" ಎಂದು ಅವಳ ಹೆಸರು ನೆನಪಿರುವಂತೆ ನಾಮಕರಣ ಮಾಡಿದನು. ಬೃಹದ್ರಥನ ನಂತರ ಜರಾಸಂಧನು ಮಗಧದ ರಾಜ ಆದನು. 

ಜರಾಸಂಧನಿಗೆ ಅಸ್ತಿ ಮತ್ತು ಪ್ರಾಪ್ತಿ ಎಂದು ಎರಡು ಹೆಣ್ಣು ಮಕ್ಕಳಿದ್ದರು. ಮಥುರೆಯ ಉಗ್ರಸೇನ ರಾಜನ ಮಗ ಕಂಸನು ತಂದೆಯನ್ನು ಸಿಂಹಾಸನದಿಂದ ಕೆಳಗಿಳಿಸಿ ತಾನು ರಾಜನಾದನು. ಜರಾಸಂಧನು ತನ್ನ ಎರಡೂ ಹೆಣ್ಣು ಮಕ್ಕಳನ್ನು ಅವನಿಗೆ ಕೊಟ್ಟು ಮಡುವೆ ಮಾಡಿ ಟೂ-ಇನ್-ಒನ್ ಸಿಸ್ಟಮ್ಮಿನಲ್ಲಿ ಅಳಿಯನನ್ನಾಗಿ ಮಾಡಿಕೊಂಡನು. ಮುಂದೆ ಕಂಸನ ತಂಗಿ ದೇವಕಿಯನ್ನು ವಸುದೇವನು ಮದುವೆಯಾದದ್ದು, ಬಲರಾಮ-ಕೃಷ್ಣರು ಜನಿಸಿದ್ದು, ಕೃಷ್ಣನು ಕಂಸನನ್ನು ಕೊಂಡಿದ್ದು, ಜರಾಸಂಧ-ಕೃಷ್ಣರ ಅನೇಕ ಯುದ್ಧಗಳು, ಜರಾಸಂಧನ ಉಪಟಳ ತಾಳಲಾರದೆ ಕೃಷ್ಣನು ಯಾದವರನ್ನು ಮಥುರೆಯಿಂದ ದ್ವಾರಕೆಗೆ ಸ್ಥಳಾಂತರಿಸಿದ್ದು ಇವೆಲ್ಲ ನಡೆದುವು. ರಾಜಸೂಯ ಯಾಗಕ್ಕೆ ಮುಂಚೆ ಕೃಷ್ಣನು ಭೀಮಾರ್ಜುನರ ಜೊತೆ ಮಗಧಕ್ಕೆ ಹೋಗಿ ಜರಾಸಂಧನನ್ನು ಭೀಮನಿಂದ ಕುಸ್ತಿ ಕಾಳಗದಲ್ಲಿ ಸಿಕ್ಕಿಸಿದನು. ಕೃಷ್ಣನ ಸೂಚನೆಯಂತೆ ಭೀಮಸೇನನು ಜರಾಸಂಧನನ್ನು ಮತ್ತೆ ಒನ್-ಬೈ-ಟೂ ಮಾಡಿ ಕೊಂದನು. 
*****

ಮಹಾಭಾರತದ ಕಾಲಕ್ಕಿಂತ ಹಿಂದೆ ಹೋಗೋಣ. ದಶರಥನು ರಾಜ್ಯಭಾರ ಮಾಡುತ್ತಾ ಅಯೋಧ್ಯೆಯನ್ನು ಆಳುತ್ತಿದ್ದ ಕಾಲ. ಕೌಸಲ್ಯೆ, ಸುಮಿತ್ರೆ, ಕೈಕೇಯಿ ಎಂಬ ಮೂರು ರಾಣಿಯರಿದ್ದರೂ ದಶರಥನಿಗೆ ಮಕ್ಕಳಿರಲಿಲ್ಲ. ದಶರಥನು ಬಹಳ ಚಿಂತಿತನಾಗಿದ್ದನು. ಒಮ್ಮೆ ಬೇಟೆಗೆಂದು ಕಾಡಿಗೆ ಹೋಗಿದ್ದಾಗ ಪ್ರಮಾದವಶಾತ್ ಶ್ರವಣ ಕುಮಾರನನ್ನು ಆನೆಯೆಂದು ತಿಳಿದು ಶಬ್ದವೇಧಿ ಬಾಣ ಪ್ರಯೋಗಿಸಿ ಕೊಂದನು. "ನಿನ್ನ ಕೊನೆಯ ಕಾಲದಲ್ಲಿ ನಿನಗೂ ಪುತ್ರ ವಿಯೋಗವಾಗಲಿ" ಎಂದು ಶಪಿಸಿ ಶ್ರವಣನ ತಂದೆ-ತಾಯಿಯರು ದೇಹ ತ್ಯಾಗ ಮಾಡಿದರು. ರಾಜಧಾನಿಗೆ ಬಂದ ದಶರಥನು ವಿಷಾದದಿಂದ ರಾಜಗುರು ವಸಿಷ್ಠರಿಗೆ ವಿಷಯ ತಿಳಿಸಿದನು. "ಚಿಂತಿಸಬೇಡ. ಮೊದಲು ಮಕ್ಕಳಾಗಲಿ" ಎಂದು ವಸಿಷ್ಠರು ಸಮಾಧಾನ ಮಾಡಿದರು. 

ವಸಿಷ್ಟರು ದಶರಥನಿಂದ ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸಿದರು. ಯಜ್ಞಪುರುಷನು ಹೋಮಕುಂಡದಿಂದ ಹೊರಬಂದು ಒಂದು ದಿವ್ಯವಾದ ಪಾತ್ರೆಯಲ್ಲಿ ಸಂತಾನ ಕಾರಕ ಪಾಯಸವನ್ನು ಕೊಟ್ಟನು. ಕೌಸಲ್ಯೆಯು ಪಟ್ಟದರಾಣಿ. ಕೈಕೇಯಿ ಇಷ್ಟದ ರಾಣಿ. ಸುಮಿತ್ರೆ ಯಾವಾಗಲೂ ಇವರ ಹಿಂದಿರುವವಳು. ಅವಳಿಗೆ ಅದೇ ಅಭ್ಯಾಸ. ದಶರಥನು ಪಾಯಸವನ್ನು ಒನ್-ಬೈ-ಟೂ ಸಿಸ್ಟಮ್ಮಿನಲ್ಲಿ ಎರಡು ಭಾಗ ಮಾಡಿ ಕೌಸಲ್ಯೆ ಮತ್ತು ಕೈಕೆಯರಿಗೆ ಕೊಟ್ಟನು. ನಂತರ ಹಿಂದೆ ನೋಡಿದರೆ ಸುಮಿತ್ರೆ ನಿಂತಿದ್ದಾಳೆ. ಈಗೇನು ಮಾಡುವುದು? ಆಗ ಸವತಿಯರಲ್ಲಿ ತುಂಬಾ ವಿಸ್ವಾಸವಿತ್ತು. ಇನ್ನೂ ಮಂಥರೆಯ ಉಪದೇಶಗಳು ಪ್ರಭಾವ ಬೀರಿರಲಿಲ್ಲ. ಕೌಸಲ್ಯೆಯು ತನ್ನ ಪಾಲಿನ ಪಾಯಸದಲ್ಲಿ ಅರ್ಧವನ್ನು ಸುಮಿತ್ರೆಗೆ ಕೊಟ್ಟಳು. ಕೈಕೇಯಿಯೂ ಹಾಗೆಯೇ ಮಾಡಿದಳು. ಈಗ ಮೊದಲು ಒನ್-ಬೈ-ಟೂ ಇದ್ದದ್ದು ಟೂ-ಬೈ-ಫೋರ್ ಆಯಿತು. ಎರಡು ಪಾಲು ಸಿಕ್ಕಿದ್ದರಿಂದ ಸುಮಿತ್ರೆಗೆ ಇಬ್ಬರು ಮಕ್ಕಳು ಜನಿಸಿದರು. ಕೌಸಲ್ಯೆ ಮತ್ತು ಕೈಕೇಯಿಗೆ ಒಬ್ಬೊಬ್ಬ ಮಗ. ಒಟ್ಟಿನಲ್ಲಿ ನಾಲ್ಕು. ಹೀಗೆ ನಡೆಯಿತು. 

ಲಕ್ಷ್ಮಣ-ಶತ್ರುಘ್ನರು ಒಂದೇ ತಾಯಿಯ ಮಕ್ಕಳಾದರೂ ಅಷ್ಟಾಗಿ ಜೊತೆಯಲ್ಲಿ ಇರಲಿಲ್ಲ. ಲಕ್ಷ್ಮಣನು ಎಂದೂ ರಾಮನ ಜೊತೆ. ಶತ್ರುಘ್ನನು ಯಾವಾಗಲೂ ಭರತನ ಜೊತೆ. ಏಕೆ ಹೀಗೆ? ತಿಳಿದವರು ಇದು ಪಾಯಸದ ನಂಟು ಅಂದರು. ಕೌಸಲ್ಯೆ ಕೊಟ್ಟ ಪಾಯಸದ ಕೂಸು ಲಕ್ಷ್ಮಣ ಅವಳ ಮಗ ರಾಮನ ಜೊತೆ. ಕೈಕೇಯಿ ಕೊಟ್ಟ ಪಾಯಸದ ಕೂಸು ಶತ್ರುಘ್ನ ಅವಳ ಕೂಸು ಭರತನ ಜೊತೆ. ಹೀಗಂತೆ. 

ಒಟ್ಟಿನಲ್ಲಿ ಇಲ್ಲಿ ಒನ್-ಬ್ಯೆ-ಟೂ, ಟೂ-ಬ್ಯೆ-ತ್ರೀ, ಟೂ-ಬ್ಯೆ-ಫೋರ್ ಎಲ್ಲವೂ ಆದವು. ಮುಂದೆ ರಾಮಾಯಣ ನಡೆಯಿತು. ಅದು ಎಲ್ಲರಿಗೂ ಗೊತ್ತಿದ್ದದ್ದೇ. 

*****

ಕೆಲವರಿಗೆ ಈಗ ಒಂದು ಸಮಸ್ಯೆ ಬರಬಹುದು. ರಾಮಾಯಣದ ಕಾಲದಲ್ಲಿ ನಡೆದಿದ್ದಕ್ಕೂ ಮಹಾಭಾರತದ ಕಾಲದಲ್ಲಿ ನಡೆದಿದ್ದಕ್ಕೂ ಏಕೆ ವ್ಯತ್ಯಾಸ? ಅಲ್ಲಿ ನಾಲ್ಕು ಪೂರ್ಣ ಶಿಶುಗಳು. ಇಲ್ಲಿ ಎರಡು ಅರ್ಧ ಶಿಶುಗಳು. ಇದೇಕೆ ಈ ಗೋಜಲು? 

ಇದಕ್ಕೆ ಉತ್ತರ ಪಾಯಸದಲ್ಲಿ ಮತ್ತು ಹಣ್ಣಿನಲ್ಲಿ ಅಡಗಿದೆ. ಪಾಯಸ ಭಾಗವಾದರೂ ಪಾಯಸವೇ. ಹಣ್ಣು ಭಾಗವಾದರೆ ಹಣ್ಣಾಗಿ ಉಳಿಯುವುದಿಲ್ಲ. ಹಣ್ಣಿನ ಹೋಳಾಗುತ್ತದೆ. ಅಷ್ಟೇ. 

ಒಂದು ಕೆಲಸ ಮಾಡಿ. ಹತ್ತು ಲೀಟರು ಸೊಗಸಾದ ಪಾಯಸ ತಯಾರಿಸಿ. ಎರಡು ಭಾಗ ಮಾಡಿ. ಐದು ಲೀಟರು ಪಾಯಸ ಬಲಗಡೆ ಮನೆಯವರಿಗೆ ಕೊಡಿ. ಇನ್ನೈದು ಲೀಟರು ಪಾಯಸ ಎಡಗಡೆ ಮನೆಯವರಿಗೆ ಕೊಡಿ. ಅವರಿಬ್ಬರೂ ಮತ್ತೆ ಎರಡು ಭಾಗ ಮಾಡಿ, ಒಂದನ್ನು ಅವರೇ ಇಟ್ಟುಕೊಂಡು ಮತ್ತೆ ಒಂದು ಭಾಗವನ್ನು ಅವರ ಪಕ್ಕದ ಮನೆಯವರಿಗೆ ಕೊಡಲಿ. ಈಗ ಎಲ್ಲರೂ ನಮಗೆ ಪಾಯಸ ಸಿಕ್ಕಿತು ಅನ್ನುತ್ತಾರೆ. ಪಾಯಸದ ಹೋಳು ಅನ್ನುವುದಿಲ್ಲ. 

ಇದೇ ಪ್ರಯೋಗ ಒಂದು ಹಣ್ಣಿನಲ್ಲಿ ಮಾಡಿ. ನಮಗೆ ಒಂದು ಹಣ್ಣು ಕೊಟ್ಟರು ಎಂದು ಯಾರೂ ಹೇಳುವುದಿಲ್ಲ. ಹಣ್ಣಿನ ಹೋಳು ಸಿಕ್ಕಿತು ಎಂದೇ ಹೇಳುತ್ತಾರೆ. 

*****

ಮುಂದೆ ಯಾರಾದರೂ ತಪಸ್ವಿಗಳು ನಿಮಗೆ ಸಂತಾನಕ್ಕಾಗಿ ಪಾಯಸವನ್ನೋ ಅಥವಾ ಹಣ್ಣನ್ನೋ ಕೊಟ್ಟರೆ ಈ ಎರಡು ಪ್ರಸಂಗಗಳನ್ನು ನೆನಪಿಟ್ಟುಕೊಳ್ಳಿ. ಇಲ್ಲದಿದ್ದರೆ ಏನಾಗುತ್ತದೆ ಎಂದು ನಿಮಗೇ ಗೊತ್ತು!