Tuesday, October 11, 2016

In memory of Shobha G RajKumar

ಶೋಭಾ ಜಿ. ರಾಜ ಕುಮಾರ 
(07.07,1939 - 05.10.2016)


ದಿವಂಗತ ರಾಜಾಮಣಿ ಮತ್ತು ಸಿ. ಕೆ. ನಾಗರಾಜ ರಾವ್ ದಂಪತಿಗಳ ಮೊದಲ ಪ್ರೇಮದ ಪುತ್ರಿಯಾಗಿ 1939ನೇ ಇಸವಿ ಜುಲೈ ತಿಂಗಳ ಏಳನೇ ದಿನಾಂಕ ಸೂರ್ಯೋದಯದ ಸಮಯದಲ್ಲಿ ಜನಿಸಿದ ಮಗುವಿಗೆ ಬೆಳಗಿನ ಸೂಚಕವಾದ ಶೋಭಾ ಎಂದು ನಾಮಕರಣ. ತಾಯಿ-ತಂದೆಯರ ಚೊಚ್ಚಲ ಮಗಳು. ಅಜ್ಜಿ-ತಾತ ದಿವಂಗತ ಪುಟ್ಟಮ್ಮ ಮತ್ತು ಸಿ. ಯಸ್. ಕೃಷ್ಣಮೂರ್ತಿರಾವ್ ದಂಪತಿಗಳಿಗೆ ಪ್ರೀತಿಪಾತ್ರ ಮೊದಲ ಮೊಮ್ಮಗಳು.  ತಾತನ ಪಾಲಿಗಂತೂ ಬಲು ಪ್ರೀತಿಯ "ಶೋಭಣ್ಣ". ತನ್ನ ನಂತರ ಜನಿಸಿದ ಐದು ತಂಗಿಯರಿಗೆ ಮತ್ತು ಇಬ್ಬರು ತಮ್ಮಂದಿರಿಗೆ "ಹಿರಿಯಕ್ಕ". ಮುಂದೆ ಕುಟುಂಬಕ್ಕೆ ಸೇರಿದ ಮೈದುನ-ನಾದಿನಿಯರಿಗೆ ಅಚ್ಚುಮೆಚ್ಚಿನ "ಅತ್ತಿಗೆ".  ದೊಡ್ಡ ಕುಟುಂಬವರ್ಗಕ್ಕೆ ಪ್ರೀತಿಯ "ಶೋಭಾ". 

ಚಿಕ್ಕಂದಿನಿಂದಲೂ ಶೋಭಾ ಬಲು ಚೂಟಿ. ಸದಾ ಚಟುವಟಿಕೆಯ ಸ್ವಭಾವ. ಸೋಮಾರಿತನದ ಸುಳಿವೂ ಇಲ್ಲದ ಜೀವನ. ಅನೇಕ ವಿಧದ ಕಲಿಕೆಯಲ್ಲಿ ಆಸಕ್ತಿ. ಶಾಲೆಯ ವಿದ್ಯಾಭ್ಯಾಸದ ಜೊತೆಯಲ್ಲಿ ಹಾಡು-ಹಸೆ, ಕಸೂತಿ, ರಂಗೋಲಿ, ಬೊಂಬೆ ಅಲಂಕಾರ, ಅಡುಗೆ ಕೆಲಸ ಇವುಗಳಲ್ಲಿ ಎತ್ತಿದ ಕೈ. ಶಾಲೆಯ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳು. ಹೊಸದನ್ನು ಬೇಗ ಕಲಿಯುವ ಹುಮ್ಮಸ್ಸು. ತಂದೆ-ತಾಯಿಯರಿಂದ ಬಳುವಳಿಯಾಗಿ ಬಂದ ಸಾಹಿತ್ಯ-ಸಂಗೀತಗಳ ಒಲವು. ಸಣ್ಣ ವಯಸ್ಸಿನಲ್ಲೇ ಕವನ-ಕತೆ ಬರೆಯುವ ಹವ್ಯಾಸ. ಗ್ರಂಥಗಳ ಅಧ್ಯಯನ. ನಾಡಿನ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಮತ್ತು ಹೆಮ್ಮೆ. 

ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಟೈಪಿಂಗ್ ಮತ್ತು ಶಾರ್ಟ್ ಹ್ಯಾಂಡ್ ಅಭ್ಯಾಸ. ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲೇ ಕೆಲಸ ಮಾಡುವ ಉತ್ಸಾಹ. ಕೆಲಸದ ಜೊತೆಗೇ ಮುಂದಿನ ಕಲಿಕೆಯ ಕಡೆಗೂ ಗಮನ. ವಾಯು ಸೇನೆಯಲ್ಲಿ ಕೆಲಸಕ್ಕೆ ಸೇರುವ ಮುನ್ನ ಅನೇಕ ಕಡೆಗಳಲ್ಲಿ ವೃತ್ತಿ ಸೇವೆ. ಅವುಗಲ್ಲಿ ಕುಮಾರನ್ಸ್ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳುವ ಅಧ್ಯಾಪಕಿ (Teacher) ಕೆಲಸವೂ ಒಂದು.  

1968ನೇ ಅಕ್ಟೋಬರ 11ರಂದು ಮೆಚ್ಚಿದ ವರ ಗಿರಿರಾಜಕುಮಾರ ಶ್ರೀವಾಸ್ತವ ಜೊತೆ ವಿವಾಹ. ವಾಯುಸೇನೆಯ ಶಿಸ್ತಿನ ಜೀವನಕ್ಕೆ ಸುಗಮ ಪ್ರವೇಶ. ಪತಿಯ ಕುಟುಂಬದ ಹಿನ್ನೆಲೆಯಾಗಿ ಮಧ್ಯ ಪ್ರದೇಶದ ಜನಜೀವನದ ತಿಳುವಳಿಕೆ. ಅಲ್ಲಿನ ದೇಶ-ಭಾಷೆಯ ಅಧ್ಯಯನ. ಹೊಸ ಪರಿಸರದಲ್ಲೂ ಸೈಎನ್ನಿಸಿಕೊಂಡ ಸಾಧನೆ. ಸೇರಿದ ಕುಟಂಬಕ್ಕೆ ಮೆಚ್ಚಿನ ಸೊಸೆ. ಉತ್ತರ ಭಾರತದ ತಿಂಡಿ ತಿನಿಸು ಮಾಡುವುದರಲ್ಲಿಯೂ ಕೈ ಮುಂದು. ಮುಂದೆ ಜೀವನದುದ್ದಕ್ಕೂ ಹುಟ್ಟಿದ-ಸೇರಿದ ಮನೆಗಳೆರಡಕ್ಕೂ ಬೆಸುಗೆಯ ಕೊಂಡಿ. ಮನೆಯ ಆಚಾರ-ವಿಚಾರಗಲ್ಲಿ  ಎರಡೂ ಪದ್ಧತಿಯ ಸಮನ್ವಯ. ದಿನನಿತ್ಯದ ಬದುಕಿನಲ್ಲಿ, ಹಬ್ಬ ಹರಿದಿನಗಳ ಆಚರಣೆಯಲ್ಲಿ, ಇತರೆ ವಿಷಯಗಳಲ್ಲಿ, ಎಲ್ಲಿಯೂ ಘರ್ಷಣೆಯ ಸಂದರ್ಭ ಬರದಂತೆ ನಿಭಾಯಿಸುವ ಚಾಲೂಕು. 

"ವಿವಾಹಂ ವಿದ್ಯನಾಶಾಯ" ಎನ್ನುವ ನಾಣ್ನುಡಿ ವಿರುದ್ಧವಾದ ದಾಂಪತ್ಯ. ಮದುವೆಯಾದ ನಂತರವೂ ಪತಿ-ಪತ್ನಿಯರಿಬ್ಬರ ವ್ಯಾಸಂಗ ಜೊತೆ-ಜೊತೆಯಲ್ಲಿಯೇ ಮುಂದುವರಿಕೆ. ಸೋಷಿಯಾಲೊಜಿಯಲ್ಲಿ ಸ್ನಾತಕೋತ್ತರ (ಎಂ. ಎ.) ಪದವಿ.  ಹಿಂದಿ ಭಾಷೆಯಲ್ಲಿ "ವಿಶಾರದೆ".  "ಲೈಬ್ರರಿ ಸೈನ್ಸ್" ನಲ್ಲಿ  ಪದವಿ. ವಾಯುಸೇನೆಯ ಸಿವಿಲ್ ವಿಭಾಗದಲ್ಲಿ ದೇಶದ ಅನೇಕ ಪ್ರದೇಶಗಳಲ್ಲಿ ಬಹಳ ವರ್ಷಗಳ  ಸೇವೆ. ಜೊತೆಯಲ್ಲಿ ಕೆಲಸ ಮಾಡಿದ ಎಲ್ಲ ಸ್ತರದ ಅಧಿಕಾರಿ ಮತ್ತು ಸಿಬ್ಬಂದಿಗಳ ಜೊತೆ ಸುಮಧುರ ಒಡನಾಟ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಅನೇಕ ಕವನ ಮತ್ತು ಲೇಖನಗಳ ರಚನೆ. ಕಛೇರಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯಾವಾಗಲೂ ಮುಂದು. 

ಹೊಸತನ್ನು ಕಲಿಯುವುದರಲ್ಲಿ ಬರಿಯ ಆಸಕ್ತಿ ಅಷ್ಟೇ ಅಲ್ಲ. ಅವುಗಳ ಮೇಲೆ ಪ್ರಭುತ್ವ ಪಡೆಯುವ ಹಂಬಲವೂ ಕೂಡ. ತೆಲುಗು, ತಮಿಳು ಮತ್ತು ಬಂಗಾಳಿ ಭಾಷೆಯನ್ನೂ ಕಲಿತು ರಬಿಂದ್ರ ಸಂಗೀತದಲ್ಲಿ ಹಾಡುಗಳ ಕಲಿಕೆ. ನಿವೃತ್ತಿಯ ನಂತರವೂ ಸಮಯ ವ್ಯರ್ಥ ಮಾಡುವ ರೀತಿಯಿಲ್ಲ. ಸುಗಂಧ ದ್ರವ್ಯದ (perfumery) ಕಾರ್ಖಾನೆಯಲ್ಲಿ ಲೆಕ್ಕಿಗಳ (Accountant) ಕೆಲಸ. ನಂತರ ಬೆಂಗಳೂರು ಹೋಸ್ಪಿಟಲ್ನಲ್ಲಿ ಲೈಬ್ರರಿಯನ್ ಕೆಲಸ. ಸುಭಾಷಿತಗಳ ಸಂಗ್ರಹ ಮಾಡಿ ಪ್ರತಿದಿನ ಆಸ್ಪತ್ರೆಯ ಹಲಗೆಯ ಮೇಲೆ ಒಂದು ಸುಭಾಷಿತ ಬರೆಯುವ ಅಭ್ಯಾಸ. ರೋಗಿಗಳ ಸುಖ-ದುಃಖ ವಿಚಾರಿಸುವ ಕಳಕಳಿ. 

ಎರಡು ಮುದ್ದು ಹೆಣ್ಣುಮಕ್ಕಳ ಪ್ರೀತಿಯ ತಾಯಿ. ತಂಗಿಯರ ಮಕ್ಕಳಿಗೆ ಅತ್ಯಂತ ಪ್ರೀತಿಪಾತ್ರ "ದೊಡ್ಡಮ್ಮ". ತಮ್ಮಂದಿರ ಮಕ್ಕಳಿಗೆ ಅತಿ ಹತ್ತಿರದ "ಅತ್ತೆ". ಭಾವಂದಿರ ಮತ್ತು ನಾದಿನಿಯರ ಮಕ್ಕಳ ಪ್ರೀತಿಯ "ಕಾಕಿ". ಪ್ರೀತಿಭಾವದಲ್ಲಿ ಎಲ್ಲ ಮಕ್ಕಳೂ ಸಮ. ಭೇದಭಾವ ಸಲ್ಲ. ಯಾರೊಬ್ಬರು  ಮನೆಗೆ ಬಂದರೂ ಅವರ ಆದರ-ಆತಿಥ್ಯಕ್ಕೆ ಕೊರತೆಯಿಲ್ಲ. ಪ್ರತಿಯೊಬ್ಬರ ಇಷ್ಟಾನಿಷ್ಟಗಳ ತಿಳುವಳಿಕೆ. ಅದರಿಂದ ಅಥಿತಿ-ಅಭ್ಯಾಗತರ ಸೇವೆಯಲ್ಲಿ ಎಲ್ಲವನ್ನೂ ಸರಿದೂಗಿಸುವ ಜಾಣ್ಮೆ. ಮನೆಗೆ ಬಂದವರ ಸತ್ಕಾರದಲ್ಲಿ ತಾಯಿಗೆ ತಕ್ಕ ಮಗಳು. ಮಕ್ಕಳಿಗೂ ಅದೇ ರೀತಿಯ ತರಬೇತಿ. ಪ್ರತಿವರ್ಷ ದೀಪಾವಳಿ ಅಮಾವಾಸ್ಯೆಯ ವಿಶೇಷ "ಲಕ್ಷ್ಮೀಪೂಜೆ"ಯ ವೈಭವ. ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳ ಮೇಲೂ ಮಹತ್ತರ ಪ್ರೀತಿ-ಕರುಣೆ. "ಭೂತದಯೆ"ಗೆ ಒಳ್ಳೆಯ ಉದಾಹರಣೆ. "ಸರ್ವೇ ಜನಾಃ ಸುಖಿನೋ ಭವಂತು" ಎನ್ನುವುದರ ನಿತ್ಯ ಜಪ.

ಹತ್ತಿರ ಹತ್ತಿರ 48 ವರ್ಷಗಳ ದೀರ್ಘ ದಾಂಪತ್ಯ. ಜೀವನದಸಿಹಿ-ಕಹಿಗಲ್ಲಿ ಸಮ ದೃಷ್ಟಿಯ ತಾಳ್ಮೆ ಮತ್ತು ಸಂಯಮ. ಪತಿ-ಪತ್ನಿಯರದು ಯಾವಾಗಲೂ ಒಂದೇ ದೃಷ್ಟಿಕೋನ. ಹಿತವಾದ ತಾಳ-ಮೇಳ. ಕಡೆಯ ವರ್ಷಗಳ ಅನಾರೋಗ್ಯದಲ್ಲಿಯೂ ಚಟುವಟಿಕೆ. ಅಂತಿಮ ವರುಷಗಳಲ್ಲಿ ಪತಿಯಿಂದ ಅತ್ಯಂತ ಆದರದ ಶುಶ್ರೂಷೆ. ಅದನ್ನು ಹತ್ತಿರದಿಂದ ಕಂಡವರಿಗೆ ಅದೊಂದು ದೈವೀಕ ಅನುಭವ. ಎಲ್ಲೂ ಕಾಣದ ಬಲು ಅಪರೂಪದ ಅನುಭಂದ. 

ಕಳೆದ ಐದನೆಯ ತಾರೀಖು ಅಂತಿಮ ಪ್ರಯಾಣ. ಪತಿ-ಮಕ್ಕಳು-ಅಳಿಯಂದಿರು-ಮೊಮ್ಮಕ್ಕಳು, ಬಂಧು-ಬಾಂಧವರು, ಸ್ನೇಹಿತರು, ಅಕ್ಕ-ಪಕ್ಕದವರಿಂದ ಭಾವಪೂರ್ಣ ಕಂಬನಿಯ ವಿದಾಯ. ಶೋಭಾ ರಾಜಕುಮಾರ ಇನ್ನು ನೆನಪು ಮಾತ್ರ. ಎಲ್ಲರ ಜೀವನದಲ್ಲಿ ಅದೊಂದು ಸವಿ ನೆನಪು. ಇದೊಂದು ಪ್ರೀತಿಯ  ಶಬ್ದಾ೦ಜಲಿ- ಶ್ರದ್ದಾ೦ಜಲಿ.   

5 comments:

 1. A lovely tribute to my dear sister Thank SAhri K Murthy

  ReplyDelete
 2. Such a nice person.Quiet,talented,cheerful and talented.We will all miss her.

  N.S.Subbanna

  ReplyDelete
 3. Great soul! So humble, never use to hurt anyone,Thank you very much Keshav, lovely tribute.

  ReplyDelete
 4. Shobha Rajkumar, extremely cordial, very intelligent n always ready to help people. Very aptly described, keshavmurthy sir, may her soul rest in peace

  ReplyDelete