Sunday, November 5, 2023

"ವೃದ್ಧಾಪ್ಯ"ದಲ್ಲಿ "ಜೀವನ"ದ "ಆನಂದ"


ಪಾಪ, ಪುಣ್ಯ ಮತ್ತು ವೃದ್ಧಾಪ್ಯ:

ಮನುಷ್ಯನಿಗೆ ಒಂದು ಹಣ್ಣು ಬೇಕಾದರೆ ಅದರ ಸಸಿಯನ್ನು ನೆಟ್ಟು, ಮರವಾಗಿ ಬೆಳೆಸಿ, ಫಲಾಗಮನದ ಸಮಯ ಕಾದು ಅದರ ಹಣ್ಣು ಪಡೆಯಬೇಕು. ನೆನೆಸಿದ ತಕ್ಷಣ ಅದು ಸಿಗುವುದಿಲ್ಲ. ಈಗಲೇ ಹಣ್ಣು ಬೇಕಾದರೆ ಹಿಂದೆಂದೋ ನೆಟ್ಟು ಬೆಳೆಸಿದ ಮರದಿಂದ ಪಡೆಯಬಹುದು. ಅದೂ ಹಿಂದೆಂದೋ ಮರ ಬೆಳೆಸಿದ್ದರೆ ಮಾತ್ರ. ಇಲ್ಲದಿದ್ದರೆ ಇಲ್ಲ. ಅಂತೆಯೇ ಒಂದು ಮರವನ್ನು ನೆಟ್ಟು ಬೆಳೆಸಿದರೆ ಅದು ಹಣ್ಣನ್ನು ಕೊಟ್ಟೇ ಕೊಡುತ್ತದೆ. ಕೆಲವಂತೂ ಹೆಚ್ಚು ಆರೈಕೆ ಇಲ್ಲದಿದ್ದರೂ ಧಾರಾಳವಾಗಿ ಹಣ್ಣು ಕೊಡುತ್ತವೆ. ಮರ ಬೆಳಸಿಯಾದ ಮೇಲೆ ಹಣ್ಣು ಬರಬಾರದು ಎನ್ನುವಂತಿಲ್ಲ. ಹಣ್ಣು ಕೊಡುವುದು ಅದರ ಸಹಜ ವೃತ್ತಿ. ಅದರ ಕೆಲಸ ಅದು ಮಾಡುತ್ತದೆ. 

ಪಾಪ ಮತ್ತು ಪುಣ್ಯಗಳು ಒಂದು ರೀತಿಯಲ್ಲಿ ಮರಗಳಿದ್ದಂತೆ. ಮರಗಳನ್ನು ನೆಟ್ಟು ಬೆಳಸಬೇಕು. ಪಾಪ ಮತ್ತು ಪುಣ್ಯ ಎಂಬ ಎರಡು ಮರಗಳು ಮನುಷ್ಯನ ಜೊತೆಯಲ್ಲಿಯೇ ಹುಟ್ಟುತ್ತವೆ.  ನಮ್ಮ ಪ್ರತಿಯೊಂದು ಕ್ರಿಯೆಯೂ ಅವುಗಳ ಗೊಬ್ಬರ, ನೀರಾಗಿ ಅವನ್ನು ಬೆಳೆಸುತ್ತವೆ. ನಮ್ಮ ಪ್ರಯತ್ನ ಏನೂ ಬೇಕಿಲ್ಲ. ಕೆಲಸ ಮಾಡಿದವನಿಗೆ ಕೂಲಿ ಸಿಕ್ಕಂತೆ ಪ್ರತಿಫಲವೂ ಸಿಕ್ಕಿಯೇ ಸಿಗುತ್ತದೆ. ಕೆಲಸ ಮಾಡಿ ಕೂಲಿ ಕೊಡುವುದರ ಮುಂಚೆ ಓಡಿಹೋಗಬಹುದು. ಆದರೆ ಇಲ್ಲಿ ಅದೂ ಸಾಧ್ಯವಿಲ್ಲ. ಕೆಲಸಗಾರನನ್ನು ಅಟ್ಟಿಸಿಕೊಂಡು ಬಂದು ಕೂಲಿ ಸೇರುತ್ತದೆ! 

ಬೇರೆ ಹಣ್ಣುಗಳಿಗೂ ಪಾಪ, ಪುಣ್ಯಗಳಿಗೂ ಒಂದು ಮುಖ್ಯ ವ್ಯತ್ಯಾಸ ಉಂಟು. ನಮಗೆ ಯಾವುದೋ ಹಣ್ಣು ಬೇಕಾದಾಗ ಬೆಳದವರಿಂದಲೋ, ಆಂಗಡಿಯಿಂದಲೋ ಪಡೆಯಬಹುದು. ನಮ್ಮಲ್ಲಿ ಹಣ್ಣು ಹೆಚ್ಚಿದ್ದಾಗ ಬೇರೆಯವರಿಗೆ ಕೊಡಬಹುದು. ಆದರೆ ಪಾಪ, ಪುಣ್ಯಗಳ ಹಣ್ಣುಗಳ ವಿಷಯದಲ್ಲಿ ಇದು ಸಾಧ್ಯವಿಲ್ಲ. ನಾವು ಕೃಷಿ ಮಾಡಿದ ಹಣ್ಣುಗಳನ್ನು ಬೇರೆಯವರಿಗೆ ಕೊಡುವಹಾಗಿಲ್ಲ. ಬೇರೆಯವರ ಸಾಗುವಳಿಯ ಪದಾರ್ಥ ನಾವು ಪಡೆಯುವಹಾಗಿಲ್ಲ. ಅವರವರ ಬೆಳೆಯ ಫಸಲನ್ನು ಅವರವರೇ ತಿನ್ನಬೇಕು. ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. 

ಈ ಹಿನ್ನೆಲೆಯಲ್ಲಿ ಮನುಷ್ಯನಿಗೆ ಏನು ಬೇಕು, ಏನು ಬೇಡ ಎನ್ನುವುದರ ಬಗ್ಗೆ ಮಹಾಭಾರತದಲ್ಲಿ ಒಂದು ಸೊಗಸಾದ ಶ್ಲೋಕವಿದೆ:

ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನ ಇಚ್ಛಂತಿ ಮಾನವಾ:।   ನ ಪಾಪ ಫಲಮಿಚ್ಛ೦ತಿ  ಪಾಪಂ ಕುರ್ವoತಿ ಯತ್ನತಃ ।।

"ಮನುಷ್ಯರಿಗೆ ಪುಣ್ಯ ಎನ್ನುವ ಮರ ಬೇಡ. ಆ ಮರವನ್ನು ಬೆಳೆಸುವುದಿಲ್ಲ. ಆದರೆ ಆ ಮರದ ಹಣ್ಣು ಬೇಕು. ಪಾಪ ಎನ್ನುವ ಮರದ ಹಣ್ಣು ಖಂಡಿತಾ ಬೇಡ. ಆದರೆ ಬಹಳ ಕಷ್ಟ ಪಟ್ಟು ಪಾಪದ ಮರವನ್ನು ಬೆಳೆಸುತ್ತಾರೆ!"

ಪಾಪದ ಮರ ಬೆಳೆಸಿದ ಮೇಲೆ ಅದು ಅದರ ಕೆಲಸ ಮಾಡಿ ಪಾಪದ ಹಣ್ಣು ಕೊಟ್ಟೇ ಕೊಡುತ್ತದೆ. ಆ ಹಣ್ಣನ್ನು ಸೇವಿಸಲೇ ಬೇಕು. ಬೇರೆಯವರಿಗೆ ಕೊಟ್ಟು ಕೈ ತೊಳೆದುಕೊಳ್ಳಲಾಗುವುದಿಲ್ಲ. ಮತ್ತೊಂದು ಕಡೆ, ಪುಣ್ಯದ ಮರ ಬೆಳೆಸಲಿಲ್ಲ.  ಆದರೆ ಪುಣ್ಯದ ಹಣ್ಣು ಬೇಕು! ಇದೊಂದು ವಿಚಿತ್ರ ವಿಪರ್ಯಾಸ. ಗೊತ್ತಿಲ್ಲದೇ ಪೇಚಿಗೆ ಸಿಕ್ಕಿಕೊಂಡ ಪರಿಸ್ಥಿತಿಯೂ ಅಲ್ಲ. ಇರುಳು ಕಂಡ ಭಾವಿಯಲ್ಲಿ ಹಗಲು ಬಿದ್ದಂತೆ!

ಪಾಪ ಮತ್ತು ಪುಣ್ಯದ ಪರಿಭಾಷೆಯನ್ನು ತಿಳಿಯುವುದು ತುಂಬಾ ಅವಶ್ಯಕ. ಪುಣ್ಯವೆಂದರೆ ಒದ್ದೆ ಬಟ್ಟೆ, ಮಂತ್ರ, ತಂತ್ರ, ಅಷ್ಟೇ ಎಂದು ತಿಳಿಯಬಾರದು. "ಕೊರಳೊಳು ಜಪಮಣಿ, ಬಾಯೊಳು ಮಂತ್ರವು, ಅರಿವೆಯ ಮೋರೆಗೆ ಮುಸುಕು ಹಾಕಿ...." ಮುಂತಾಗಿ ಉದರ ವೈರಾಗ್ಯವನ್ನು ಶ್ರೀ ಪುರಂದರ ದಾಸರು ಹಾಸ್ಯ ಮಾಡುತ್ತಾರೆ. "ಪರೋಪಕಾರಂ ಪುಣ್ಯಾಯ, ಪಾಪಾಯ ಪರ ಪೀಡನಮ್" ಎಂದು ಭಗವಾನ್ ವೇದ ವ್ಯಾಸರು ಹೇಳಿದಂತೆ ಸಮಾಜಕ್ಕೆ ಉಪಯೋಗವಾಗುವ ಯಾವುದೇ ಕೆಲಸ ಪುಣ್ಯದ್ದು. ಇನ್ನೊಬ್ಬರರಿಗೆ ವೃಥಾ ತೊಂದರೆ ಕೊಡುವ ಯಾವ ಕೆಲಸವೂ ಪಾಪದ್ದು. ಈ ಸ್ಥೂಲ ತಿಳುವಳಿಕೆ ಎಲ್ಲ ಸಮಯದಲ್ಲೂ ನಮ್ಮಲ್ಲಿ ಇರಬೇಕು. 

ಅಶಕ್ತರ, ಶಿಶುಗಳ, ವೃದ್ಧರ ಮತ್ತು ಆಂಗಹೀನರ ಸೇವೆ ಅತ್ಯಂತ ಪುಣ್ಯದ ಕೆಲಸ. ಇವು ದೇವರ ಪೂಜೆಯ ಅತ್ಯಂತ ಶ್ರೇಷ್ಠ ರೂಪ ಎಂದು ನಮ್ಮ ಮುಖ್ಯ ಗ್ರಂಥಗಳಲ್ಲಿ ಅನೇಕ ಕಡೆ ಕಾಣುತ್ತ್ತೇವೆ. ಸಂತ ಏಕನಾಥರ ಪ್ರವಚನಗಳಲ್ಲಿ ಒಂದು ಕಥೆ ಬರುತ್ತದೆ. ಒಂದು ಸಂತರ ಗುಂಪು ಕಾಶಿ ಯಾತ್ರೆ ಮುಗಿಸಿ ಥಾಲಿಗಳಲ್ಲಿ ಗಂಗೆಯನ್ನು ತುಂಬಿಸಿಕೊಂಡು ರಾಮೇಶ್ವರನಿಗೆ ಆ ಗಂಗಾಜಲದಲ್ಲಿ ಅಭಿಷೇಕ ಮಾಡುವ ಆಸೆ ಹೊತ್ತು ರಾಮೇಶ್ವರದ ಕಡೆ ಹೊರಟಿದ್ದರು. ನಡೆದೇ ಹೋಗಬೇಕಾದ ಕಾಲವದು. ದಾರಿಯಲ್ಲಿ ಮರುಭೂಮಿಯಲ್ಲಿ ಒಂಟೆಯೊಂದು ನೀರಿಲ್ಲದೆ ಬಾಯಾರಿ ಸಾಯುವ ಸ್ಥಿತಿಯಲ್ಲಿ ಕಾಣಸಿಗುತ್ತದೆ. ಎಲ್ಲರ ಬಳಿಯಲ್ಲಿಯೂ ನೀರುಂಟು. ಆದರೆ ಗಂಗಾಜಲ. ಒಂಟೆಗೆ ಕುಡಿಯಲು ಕೊಟ್ಟರೆ ರಾಮೇಶ್ವರನಿಗೆ ಅಭಿಷೇಕವಿಲ್ಲ. ಎಲ್ಲರೂ ಹಿಂದೆ ಮುಂದೆ ನೋಡುತ್ತಾರೆ. ಒಬ್ಬ ಸಂತ  ಮಾತ್ರ ತನ್ನ ಥಾಲಿಯ ಗಂಗೆಯ ನೀರನ್ನು ಒಂಟೆಗೆ ಕುಡಿಸುತ್ತಾನೆ. ಉಳಿದ ಎಲ್ಲರೂ ರಾಮೇಶ್ವರ ತಲುಪಿ ಅಭಿಷೇಕ ಮಾಡುತ್ತಾರೆ. ಆದರೆ ಅವರಿಗೆಲ್ಲ ಬಂದ ಪುಣ್ಯಕ್ಕಿಂತಲೂ ಹೆಚ್ಚು ಒಂಟೆಗೆ ನೀರು ಕುದಿಸಿದ ಸಂತನಿಗೆ ಸಿಗುತ್ತದೆ!

ವೃದ್ಧಾಪ್ಯ ಬೇಡ; ಆದರೆ ಬಂದೇ ಬರುತ್ತದೆ!

ಇನ್ನು ವೃದ್ಧಾಪ್ಯದ ಕಡೆಗೆ ದೃಷ್ಟಿ ಹರಿಸೋಣ. ವೃದ್ಧಾಪ್ಯದ ಮರದ ಕಥೆ ಏನು? ಇದು ಇನ್ನೂ ವಿಚಿತ್ರದ ವಿಷಯ. ವೃಧಾಪ್ಯದ ಮರವೂ ಮನುಷ್ಯನ ಹುಟ್ಟಿನೊಂದಿಗೇ ಹುಟ್ಟುತ್ತದೆ. ಮನುಷ್ಯನೊಡನೆ ಸಮ ಸಮವಾಗಿ ಬೆಳಿಯುತ್ತದೆ. ಅದರ ಸಮಯಕ್ಕೆ ಸರಿಯಾಗಿ ಹಣ್ಣು ಕೊಡುತ್ತದೆ. ಕೆಲವರಿಗೆ ಆ ಮರ ಹಣ್ಣು ಕೊಡುವುದರೊಳಗೆ ಮರಣ ಬರಬಹುದು. ಆಗ ವೃದ್ಧಾಪ್ಯದ ಸುಖವೂ ಇಲ್ಲ, ದುಃಖವೂ ಇಲ್ಲ. ಆ ಮರ ಹಣ್ಣು ಕೊಡುವ ವೇಳೆಯವರೆಗೆ ಬದುಕಿದ್ದಾದರೆ ಆ ಹಣ್ಣನ್ನು ಅನುಭವಿಸಲೇ ಬೇಕು. 

ವೃದ್ಧಾಪ್ಯ ವರವೋ, ಶಾಪವೋ?

ವೃದ್ಧಾಪ್ಯ ವರವೆಂದು ಹೇಳುವವರು ಯಾರೂ ಕಾಣರು. ವೃದ್ಧಾಪ್ಯ ಶಾಪವೆಂದು ಹೇಳುವವರು ಬಹಳ ಮಂದಿ. ತಮಾಷೆಯ ವಿಷಯವೆಂದರೆ ಎಲ್ಲರಿಗೂ ದೀರ್ಘಾಯಸ್ಸು ಬೇಕು. ಆದರೆ ವೃದ್ಧಾಪ್ಯ ಬೇಡ. ತಿಳುವಳಿಕೆ  ಬಂದನಂತರ (ಅಥವಾ ತಿಳುವಳಿಕೆ ಬರುವ ವಯಸ್ಸು ಬಂದ ಮೇಲೆ. ಏಕೆಂದರೆ ಎಲ್ಲರಿಗೂ ತಿಳುವಳಿಕೆ ಬಂದೇ ಬರುತ್ತದೆ ಎಂದು ಹೇಳುವ ಹಾಗಿಲ್ಲ.) ಮನುಷ್ಯನನ್ನು ಕಾಡುವ ಎರಡು ಆಶೆಗಳು ಉಂಟು- ಧನದಾಶೆ ಮತ್ತು ಜೀವಿತದ ಆಶೆ (ಧನಾಶಾ ಜೀವಿತಾಶಾ ಚ). ಹಣ ಸಂಪಾದನೆ ಮಾಡುವ ಆಸೆ ಮತ್ತು ಚಿರಕಾಲ ಬದುಕುವ ಆಸೆ. ತುಂಬಾ ದಿನ ಬದುಕಿರಬೇಕು. ವೃದ್ಧಾಪ್ಯ ಬರಬಾರದು! ಚಿರಂಜೀವಿಯಾದರೆ ಇನ್ನೂ ಒಳ್ಳೆಯದು. ಆದರೆ ಅದು ಸಾಧ್ಯವಿಲ್ಲವಲ್ಲ! 

ವೃದ್ಧಾಪ್ಯದ ಚರ್ಚೆ ಬಂದಾಗ ಯಯಾತಿ ಮತ್ತು ಅವನ ಮಗ ಪುರು ಇವರನ್ನು ನೆನಪಿಸಿಕೊಳ್ಳಲೇಬೇಕು. ಈ ಕಥೆ ಎಲ್ಲರಿಗೂ ಗೊತ್ತಿರುವುದೇ. ಶುಕ್ರಾಚಾರ್ಯರ ಶಾಪದಿಂದ ಬಂದ ಅಕಾಲಿಕ ವೃದ್ಧಾಪ್ಯವನ್ನು ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದು ಯಯಾತಿಯ ಪ್ರಯತ್ನ. ಕಷ್ಟವಾದರೂ ಸರಿ, ತಂದೆಗೆ ಇಚ್ಛೆ ಪೂರ್ತಿಯಾಗಲಿ ಎಂದು ತ್ಯಾಗ ಮಗನಾದ ಪುರುವಿನದು. ಮಹಾಭಾರತದ ಈ ಕಥೆಯನ್ನು ಈ ಕಾಲಮಾನದ ಇಬ್ಬರು ಸಾಹಿತಿಗಳಾದ ವಿ ಎಸ್ ಖಾಂಡೇಕರ್ ಮತ್ತು  ಗಿರೀಶ್ ಕಾರ್ನಾಡ್ ತಮ್ಮದೇ ದೃಷ್ಟಿ ಕೋಣದಿಂದ ನೋಡಿದ್ದಾರೆ. ಮಗನ ಯೌವನವನ್ನು ಪಡೆದ ಯಯಾತಿ ತನ್ನ ಪತ್ನಿಯ ಬಳಿ ಹೋದಾಗ "ನೀನು ಈಗ ನನ್ನ ಮಗ" ಎನ್ನುತ್ತಾಳೆ ಅವಳು.  ಇದು ಖಾಂಡೇಕರ್ ಒತ್ತು ಕೊಟ್ಟ ನೋಟ. ಕಾರ್ನಾಡರ ಯಯಾತಿಯ ಬಳಿ ಬಂದ ಸೊಸೆ "ಈಗ ನೀನೇ ನನ್ನ ಗಂಡ" ಎನ್ನುತ್ತಾಳೆ. ಇದು ಇನ್ನೊಂದು ದೃಷ್ಟಿ. ವಿ. ಎಸ್. ಖಾಂಡೇಕರ್ ಮರಾಠಿ ಭಾಷೆಯ ಪ್ರಸಿದ್ಧ ಸಾಹಿತಿ. ಅವರ "ಯಯಾತಿ" ಕಾದಂಬರಿಗೆ ಸಾಹಿತ್ಯ ಆಕಾಡೆಮಿ ಪ್ರಶಸ್ತಿ (೧೯೬೦) ಸಿಕ್ಕಿತು. ಮತ್ತೆ ಮುಂದೆ ೧೯೭೪ರಲ್ಲಿ "ಭಾರತೀಯ ಜ್ಞಾನಪೀಠ" ಪ್ರಶಸ್ತಿ ಕೂಡ ಲಭಿಸಿತು. ನಮ್ಮ ಕನ್ನಡದ ಪ್ರಖ್ಯಾತ ಸಾಹಿತಿ, ಕಲಾವಿದ ಗಿರೀಶ್ ಕಾರ್ನಾಡ್ ಅವರ "ಯಯಾತಿ" ಒಂದು ನಾಟಕ. ಅವರ ಯಯಾತಿ ನಾಟಕ ೧೯೬೧ರಲ್ಲಿ ಪ್ರಕಟವಾಯಿತು. ಭಾರತೀಯ ಜ್ಞಾನಪೀಠ ಪ್ರಾರಂಭದ ವರ್ಷಗಳಲ್ಲಿ ಒಂದು ಕೃತಿಯ ರಚಯಿತರಿಗೆ ಪ್ರಶಸ್ತಿ ಕೊಡುತ್ತಿತ್ತು. ನಂತರದ ವರ್ಷಗಲ್ಲಿ ಒಂದು ಕೃತಿಯ ಬದಲು ಒಬ್ಬ ಸಾಹಿತಿಯ ಒಟ್ಟಾರೆ ಸಾಹಿತ್ಯ ಸೇವೆಗೆ ಪ್ರಶಸ್ತಿ ಕೊಡಲಾರಂಭಿಸಿತು. (ಶಿವರಾಮ ಕಾರಂತರ "ಮೂಕಜ್ಜಿಯ ಕನಸು" ಕೃತಿಗೆ ಪ್ರಶಸ್ತಿ ಕೊಟ್ಟಾಗ ಬಹಳ ಚರ್ಚೆ ಆಯಿತು. ಪ್ರಶಸ್ತಿ ಕೊಟ್ಟಿದ್ದು ಸರಿ; ಆದರೆ ಕೃತಿಯ ಆಯ್ಕೆ ಸರಿಯಿಲ್ಲ ಎಂದು ಬಹಳ ಅಭಿಪ್ರಾಯಗಳು ಬಂದವು. ಈ ರೀತಿ ಸಮಸ್ಯೆ ತಪ್ಪಿಸಲು ಒಂದು ಕೃತಿಯ ಬದಲು ಒಟ್ಟಾರೆ ಸಾಹಿತ್ಯ ಸೇವೆಗೆ ಪ್ರಶಸ್ತಿ ಎನ್ನುವ ಕ್ರಮ ಜಾರಿಗೆ ಬಂತು ಎಂದು ಒಂದು ಅಭಿಪ್ರಾಯ). ಕಾರ್ನಾಡರಿಗೆ ಒಟ್ಟಾರೆ ಸಾಹಿತ್ಯ ಸೇವೆಗೆ ೧೯೯೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿತು. 

ವೃದ್ಧಾಪ್ಯ  ಯಾವಾಗ?

ನಮ್ಮ ಚಿಕ್ಕ ವಯಸ್ಸಿನಲ್ಲಿ ತಲೆ ಕೂದಲು ಬೆಳ್ಳಗಾಗುವುದು ಮತ್ತು ಕೂದಲು ತುಂಬಿದ ತಲೆ ಬೊಕ್ಕತಲೆ ಆಗುವುದು ವೃದ್ಧಾಪ್ಯದ ಕುರುಹು ಎಂದು ನಂಬುತ್ತಿದ್ದೆವು. ಚಿಕ್ಕ ವಯಸ್ಸಿನವರಿಗೆ ಬಿಳಿ ಕೂದಲು ಬಂದರೆ "ಬಾಲ ನೆರೆ" ಎಂದು ಹಾಸ್ಯ ಮಾಡುತ್ತಿದ್ದುದೂ ಉಂಟು. ಕೂದಲಿಗೆ ಬಣ್ಣ ಬಳಿಯುವ ಮತ್ತು ಕೃತಕ ಅಂಗಾಂಗಗಳ ಕಾಲ ಬಂದಿರುವ ಈಗ ಹಾಗೆ ಹೇಳಲಾಗುವುದಿಲ್ಲ. 

ಸರಕಾರಗಳಂತೂ ವೃದ್ಧಾಪ್ಯಕ್ಕೆ ೬೦ ವರ್ಷಗಳ ಗೆರೆ ನಿಗದಿ ಪಡಿಸಿವೆ. "ಹಿರಿಯ ನಾಗರಿಕ" (Senior Citizen) ಎಂದು ನಾಮಕರಣ ಸಹ ಮಾಡಿವೆ. ವಯಸ್ಸು ೮೦ ಆದರೆ "ಅತಿ ವೃದ್ಧ". ಸೃಷ್ಟಿಯ ದೃಷ್ಟಿಯಲ್ಲಿ ಯಂತ್ರ ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ ಅದು ಹಳೆಯ ಯಂತ್ರವೇ.  ಪಂಚಭೂತಗಳಿಂದಾದ ದೇಹಕ್ಕೆ ಅದರದೇ ಆದ ಇತಿ ಮಿತಿಗಳಿವೆ. ಅದನ್ನು ದಾಟುವುದು ಆಗದ ಮಾತು. ಎಲ್ಲೋ ಒಬ್ಬ ಚ್ಯವನ ಋಷಿಯಂತವರು ಅದನ್ನು ಗೆದ್ದರು ಎಂದು ಕೇಳುತ್ತೇವೆ. ಕೇಳುತ್ತೇವೆ, ಅಷ್ಟೇ. ನೋಡಿಲ್ಲ. 

ವೃದ್ಧಾಪ್ಯದಲ್ಲಿ ಮೂರು ಮಜಲುಗಳು; ದೈಹಿಕ, ಬೌದ್ಧಿಕ ಮತ್ತು ಮಾನಸಿಕ. ಮೊದಲನೆಯದು ನಮ್ಮ ಕೈ ಮೀರಿದುದು. ಎರಡನೆಯದು ಮತ್ತು ಮೂರನೆಯದನ್ನು ಪ್ರಯತ್ನಪೂರ್ವಕವಾಗಿ ಎಳೆಯದಾಗಿ ಇಟ್ಟುಕೊಳ್ಳುವುದು ನಮ್ಮ ವಶದಲ್ಲೇ ಇದೆ. ಆದರೆ ಇದಕ್ಕೆ ಪ್ರಬಲವಾದ ಮತ್ತು ಸತತ ಪ್ರಯತ್ನ ಬೇಕು. ಸ್ವಲ್ಪ ಉದಾಸೀನ ಮಾಡಿದರೂ ಇವೆರಡು ನಾಯಿಯ ಬಾಲದಂತೆ ತಮ್ಮ ಚಾಳಿಯನ್ನು ತಕ್ಷಣ ತೋರಿಸುತ್ತವೆ. 

ಭಾರತ ಸರ್ಕಾರದ ಒಂದು ವಿಚಿತ್ರ ವಿವರಣೆಯನ್ನು ಇಲ್ಲಿ ನೆನೆಸಿಕೊಳ್ಳಬೇಕು. ಹಿರಿಯ ನಾಗರಿಕರಿಗೆ ಬ್ಯಾಂಕುಗಳ ಠೇವಣಿ ಹಣಕ್ಕೆ ಅರ್ಧ ಪ್ರತಿಶತ ಹೆಚ್ಚು ಬಡ್ಡಿ ಕೊಡುತ್ತಾರೆ. ಬ್ಯಾಂಕುಗಲ್ಲಿ ಸೇವೆ ಮಾಡಿ ನಿವೃತ್ತರಾದವರಿಗೆ ಒಂದು ಪ್ರತಿಶತ ಹೆಚ್ಚು ಬಡ್ಡಿ ಕೊಡುತ್ತಾರೆ. ಆದರೆ ಅವರು "ಅನಿವಾಸಿ" (NRI) ಆದ ತಕ್ಷಣ ಈ ಎರಡೂ ಸೌಲಭ್ಯಗಳು ಖೋತಾ! ಸರಕಾರದ ದೃಷ್ಟಿಯಲ್ಲಿ ಅವರಿಗೆ ತಾರುಣ್ಯ ಮರಳಿ ಬಂದಂತೆ. 

ವೃದ್ಧಾಪ್ಯ ವರವಾಗಲು ಏನು ಮಾಡಬೇಕು?

ವೃದ್ಧಾಪ್ಯ ವರವೋ ಶಾಪವೋ ಆಗುವುದು ವೃದ್ಧಾಪ್ಯದಲ್ಲಿ ನಿರ್ಧಾರ ಆಗುವ ವಿಷಯ ಅಲ್ಲ. ಆದು ವೃದ್ಧಾಪ್ಯದಲ್ಲಿ ಪ್ರಕಟ ಆಗುವ ಫಲಿತಾಂಶ ಮಾತ್ರ. ಜೀವನದ ಹಿಂದಿನ ದಿನಗಳ ಪ್ರತಿಯೊಂದು ಕ್ರಿಯೆಯೂ ಒಂದೊಂದು ಕಣವಾಗಿ ವೃದ್ಧಾಪ್ಯದಲ್ಲಿ ರೂಪ ತಾಳುತ್ತವೆ. ಸರಿಯಾದ ಕ್ರಮದಲ್ಲಿ ಜೀವನ ನಡೆಸಿದ ವ್ಯಕ್ತಿಗೆ ವೃದ್ಧಾಪ್ಯ ವರವಾಗುವ ಸಾಧ್ಯತೆ ಉಂಟು. ಇಲ್ಲದಿದ್ದರೆ ಅದು ಶಾಪವಾಗುವ ಸಂಭವವೇ ಹೆಚ್ಚು. ಇದರಲ್ಲಿ ಅದೃಷ್ಟದ ಆಟವೂ, ಕಾಣದ ಕೈ ಪ್ರಭಾವಗಳೂ ಕೆಲಸ ಮಾಡುತ್ತವೆ. ಅಡಿಗರು ಹೇಳುವಂತೆ "ಯಾರ ಲೀಲೆಗೋ ಯಾರೋ ಏನೋ ಗುರಿಯಿಡದೆ ಬಿಟ್ಟ ಬಾಣ" ಚುಚ್ಚುವುದೂ ಉಂಟು. ಆಟಕ್ಕೆ ಯಾರೋ ಬಾಣವೊಂದನ್ನು ಬಿಟ್ಟರು. ಆದರೆ ಆ ಬಾಣ ತನ್ನ ಕೆಲಸ ಮಾಡಿತು. ತಾಕಿದವನಿಗೆ ಅದರ ನೋವು ತಿನ್ನುವ ಭಾಗ್ಯ. ಬಾಣ ಬಿಟ್ಟವನು "ನನಗೆ ಆ ಅಭಿಪ್ರಾಯ ಇರಲಿಲ್ಲ" ಎಂದು ಹೇಳಿ ಕೈ ಚೆಲ್ಲಬಹುದು. ಆದರೆ ಏಟು ತಿಂದವನಿಗೆ ಅದು ಏನೂ ಸುಖ ಕೊಡದು. ಉನ್ಮತ್ತರಾದ ಯಾರೋ ಯುವಕರು ಚೇಷ್ಟೆಗಾಗಿ ಓಡಿಸಿದ ವಾಹನದ ಕೆಳಗೆ ಸಿಕ್ಕಿ ಕೈ ಕಾಲು ಮುರಿದುಕೊಂಡ ವ್ಯಕ್ತಿಗೆ ಸರಿಯಾದ ಜೀವನ ಕ್ರಮದಲ್ಲಿ ನಡೆದಿದ್ದರೂ ವೃದ್ಧಾಪ್ಯ ಶಾಪವೇ!

ಒಟ್ಟಿನಲ್ಲಿ ವೃದ್ಧಾಪ್ಯ ವರವಾಗಬೇಕಾದರೆ ಆರೋಗ್ಯ ಚೆನ್ನಾಗಿರಬೇಕು. ಜೊತೆಗೆ ಸ್ವಲ್ಪವಾದರೂ ಧನಬಲ ಇರಲೇಬೇಕು. ಪ್ರೀತಿಯಿಂದ ಕಾಣುವ ಕುಟುಂಬ ವರ್ಗ ಮೂರನೆಯ ಭಾಗ್ಯ. ಇವೇ ರೊಟ್ಟಿ, ಅನ್ನ, ಪಲ್ಯ. ಒಳ್ಳೆಯ ಸ್ನೇಹಿತರು, ಶುಚಿ-ರುಚಿಯಾದ ಹವ್ಯಾಸಗಳು, ಈಗ ಪ್ರಯೋಜನಕ್ಕೆ ಬರುವ ಹಿಂದೆ ಶೇಖರಿಸಿದ ಪದಾರ್ಥಗಳು ಒಗ್ಗರಣೆ, ಉಪ್ಪಿನಕಾಯಿ, ಹಪ್ಪಳ ಇದ್ದಂತೆ. ರೊಟ್ಟಿ, ಅನ್ನ, ಪಲ್ಯದಿಂದ ಊಟ ಆಗಬಹುದು. ಸ್ವಲ್ಪ ನೀರಸ ಇರಬಹುದು. ಆದರೆ ಉಪ್ಪಿನಕಾಯಿ ಮತ್ತು ಹಪ್ಪಳದಿಂದ ಊಟ ಆಗುವುದಿಲ್ಲ!

ಆರೋಗ್ಯ ಚೆನ್ನಾಗಿರಬೇಕು ಎಂದು ಎಲ್ಲರೂ ಒಪ್ಪುತ್ತಾರೆ. ಆದರೆ ಅದೂ ವೃದ್ಧರ ಕೈಯಲ್ಲಿ ಇರುವುದಿಲ್ಲ. "ಕಾಣದ ಕೈ" ವಿಚಿತ್ರವಾದ ವ್ಯಾಧಿಗಳನ್ನು ಕರುಣಿಸಬಹುದು. ಎಲ್ಲ ಸಮಯಗಳಲ್ಲಿಯೂ ಎದೆಗುಂದದೆ ಎದುರಿಸುವ ಮನಸ್ಥಿತಿ ಬಹಳ ಮುಖ್ಯ. ಜೊತೆಗೆ ಔಷಧ-ಉಪಚಾರಗಳು ಸುಲಭವಾಗಿ ಮತ್ತು ಶೀಘ್ರವಾಗಿ ಸಿಗುವ ವ್ಯವಸ್ಥೆಯನ್ನೂ ಮಾಡಿಕೊಳ್ಳಬೇಕು. ಸೋಮಾರಿತನವಿಲ್ಲದೆ ಕಾಲಕಾಲಕ್ಕೆ ವೈದ್ಯರು ನೀಡಿರುವ ಮದ್ದುಗಳನ್ನು ತೆಗೆದುಕೊಳ್ಳಬೇಕಾದ್ದು ಅತ್ಯಂತ ಅವಶ್ಯಕ. ಸ್ವಂತ ಬುದ್ಧಿಯಿಂದ ತಾನೇ ಮದ್ದು ತೆಗೆದುಕೊಳ್ಳುವುದು ಅಪಾಯಕಾರಿಯೇ. 

ಹಣ-ಕಾಸಿನ ವಿಷಯದಲ್ಲಿ ಜಾಗರೂಕತೆ ಇರಬೇಕು. ನಾನು ಯಾರನ್ನೂ ನಂಬುವುದಿಲ್ಲ ಎನ್ನುವವರಿಗೆ ಯಾರನ್ನಾದರೂ ಯೋಗ್ಯರನ್ನು ನಂಬುವವರಿಗಿಂತ ಹೆಚ್ಚು ಅಪಾಯ ಕಟ್ಟಿಟ್ಟ ಬುತ್ತಿ. ವೃದ್ಧಾಪ್ಯ ಹೊಸ ಕನಸುಗಳನ್ನು ಕಟ್ಟುವ ಕಾಲವಲ್ಲ. ಆರ್ಥಿಕ ವಿಷಯಗಳಲ್ಲಿ ಇದನ್ನು ಇನ್ನೂ ಹೆಚ್ಚಾಗಿ ಅನುಸರಿಸಬೇಕು. 

ಹಿಂದಿನ ಜೀವನದಲ್ಲಿ ಬಹಳ ಮುಖ್ಯ ಎಂದುಕೊಂಡಿದ್ದ ಅನೇಕ ವಿಷಯಗಳ ಅನುಪಯುಕ್ತತೆಯನ್ನು ವೃದ್ಧಾಪ್ಯದಲ್ಲಿ ಕಾಣಬಹುದು. ಅಯ್ಯೋ, ಇಷ್ಟು ಸಣ್ಣ ವಿಷಯಕ್ಕೆ ಎಷ್ಟು ಪರದಾಡಿದೆ ಎಂದು ಈಗ ಪೇಚಾಡುವ ಸಮಯ! ಉದ್ವೇಗ ಉಂಟುಮಾಡುವ ವಿಷಯಗಳನ್ನು ಬಿಡುವುದೇ ವಾಸಿ. 

"ನಾನು ಯಾರನ್ನೂ ಲೆಕ್ಕಕ್ಕಿಡುವುದಿಲ್ಲ. ನಾನು ನೇರ, ನಿರ್ಭೀತ. ನನಗೆ ದಯಾ, ದಾಕ್ಷಿಣ್ಯ ಇಲ್ಲ." ಎಂದು ಹೇಳುವ ಅನೇಕರನ್ನು ನಾವು ಕಾಣುತ್ತೇವೆ. ವಿಶಾಲ ಸೃಷ್ಟಿಯಲ್ಲಿ ಯಾವುದೇ ಲೆಕ್ಕಕ್ಕೂ ಬಾರದ ಅತಿ ಸಣ್ಣ ಕಣ ನಾವು ಎನ್ನುವ ಅರಿವು ಇರುವವನಿಗೆ ದಯಾ ದಾಕ್ಷಿಣ್ಯ ಇರಲೇ ಬೇಕು. ಭರ್ತೃಹರಿಯು ಇದನ್ನೇ "ದ್ದಾಕ್ಷಿಣ್ಯಮ್ ಸ್ವಜನೇ, ದಯಾ ಪರಿಜನೇ... " ಮುಂತಾಗಿ ಹೇಳಿದ್ದು. ಪುರಂದರದಾಸರು ಸೊಗಸಾಗಿ ಹೇಳುತ್ತಾರೆ:

ಕಲ್ಲಾಗಿ ಇರಬೇಕು ಕಠಿಣ ಭವ ತೊರೆಯೊಳಗೆ 
ಬಿಲ್ಲಾಗಿ ಇರಬೇಕು ಬಲ್ಲವರೊಳಗೆ 
ಬೆಲ್ಲವಾಗಿರಬೇಕು ಬಂಧು ಜನದೊಳಗೆ  

"ನಾನು ಅದು ಮಾಡುತ್ತೇನೆ. ಹೀಗೆ ಮಾಡುತ್ತೇನೆ" ಎಂದು ಹಾರಾಡುವುದು ಮೊದಲು ನಿಲ್ಲಿಸಬೇಕು. "ಇದು ಬಾಳು ನೋಡು, ನಾ ತಿಳಿದೆನೆಂದರೂ ತಿಳಿದ ಧೀರನಿಲ್ಲ" ಎನ್ನುತ್ತಾರೆ ಅಡಿಗರು. ಪ್ರಕೃತಿಯ ನಿಯಮಗಳಿಗೆ ನಮ್ಮನ್ನು ಒಪ್ಪಿಸಿಕೊಂಡು ಆನಂದ ಕಂಡುಕೊಳ್ಳಬೇಕು. "ಜಗಕೆ ಸಂತಸವೀವ ಘನನು ತಾನೆಂತೆಂಬ ವಿಪರೀತ ಮತಿಯನಳಿದು" ಎನ್ನುವ ಕವಿವಾಣಿಯನ್ನು ದಿನಾ ಮೂರು ಬಾರಿ ಹೇಳಿಕೊಳ್ಳುವುದು ಒಳ್ಳೆಯದು. ಜೀವನದ ಕಾವ್ಯದಲ್ಲಿ ನಾವು ಅನೇಕ ಕಸರತ್ತು ಮಾಡಬಹುದು. ಕೆಲವದರಲ್ಲಿ ಗೆಲ್ಲಬಹುದು. ಅನೇಕದರಲ್ಲಿ ಬೀಳಬಹುದು. ಆದರೆ ಜೀವನ ಕಾವ್ಯದ ಪೂರ್ಣ ವಿರಾಮ (full stop) ಹಾಕುವ ಅಧಿಕಾರವನ್ನು ಅವನು ಇನ್ನೂ ತನ್ನಲ್ಲಿಯೇ ಇಟ್ಟುಕೊಂಡಿದ್ದಾನೆ. ಇದನ್ನು ಮರೆಯದೆ ಬುಲಾವು ಬಂದಾಗ ಹೊರಡಲು ತಯಾರಿದ್ದವನಿಗೆ ವೃದ್ಧಾಪ್ಯದಲ್ಲಿ ಏನು ಕಂಡಿತೋ ಅದರಲ್ಲಿ ಆನಂದ ಅನುಭವಿಸುವ ಕಲೆ ಸಿದ್ಧಿಸುತ್ತದೆ. 

*****

"ಭಾರತೀಯ ಜೀವನ್ ಬಿಮಾ ನಿಗಮ" (Life Insurance Corporation of India) ಜೀವನದ ಆನಂದವನ್ನು ನೋಡುವ ರೀತಿಯೇ ಬೇರೆ. ಅದರ ಅನೇಕ ಪಾಲಿಸಿಗಳಲ್ಲಿ ಜೀವನ್ ಆನಂದ್ ಪಾಲಿಸಿಯೂ ಒಂದು. ಇದು ಒಂದು ರೀತಿಯ ಬಹೂಪಯೋಗಿ ಪಾಲಿಸಿ. ಈ ರೀತಿಯ ಪಾಲಿಸಿಯೊಂದನ್ನು ಪಡೆದುಕೊಂಡ ಸ್ನೇಹಿತನೊಬ್ಬನ ಕಥೆಯೊಂದನ್ನು ಅವನ ಭಾಷೆಯಲ್ಲಿಯೇ ಕೇಳುವುದು ಅಥವಾ ಓದುವುದು ಬಹಳ ಚೆಂದ. 

"ನಾನು ಸಂಪಾದನೆ ಮಾಡಲು ಪ್ರಾಂಭಿಸಿದಾಗಿನಿಂದಲೂ ಜೀವ ವಿಮೆ ಮಾಡಿಸುತ್ತಿದ್ದೆ. ನನ್ನ ಮೊದಲ ಸರಿಯಾದ ಕೆಲಸ ಕೊಡುತ್ತಿದ್ದ ತಿಂಗಳ ಸಂಬಳ ಮೂರು ನೂರು ರೂಪಾಯಿ ಮಾತ್ರ. ಈ ಉದ್ಯೋಗಕ್ಕೆ ಮುಂಚೆ ಸಣ್ಣ ಕೆಲಸಗಳು ಇದ್ದರೂ ವಿಮೆ ಮಾಡಿಸುವ ಧೈರ್ಯ ಇರಲಿಲ್ಲ. ಈ ಉದ್ಯೋಗ ಸೇರಿದಾಗ ಒಂದು ಶನಿವಾರ ಸಹೋದ್ಯೋಗಿಯೊಬ್ಬ ಸಂಜೆ ಅವರ ಮನೆಗೆ ಚಹಾ ಸೇವನೆಗೆ ಕರೆದ. ನಾನೂ ನನ್ನಂತೆ ಇನ್ನಿಬ್ಬರು ಸಹೋದ್ಯೋಗಿಗಳೂ ಹೋದೆವು. ಸ್ವಾಗತಿಸಿ ಕೂಡಿಸಿದ ನಂತರ ಸೊಗಸಾದ ಚೂಡಾ, ಬೋಂಡಾದ ಜೊತೆ ಚಹಾ ಬಂತು. ಆ ಗುಂಗಿನಲ್ಲೇ ಇದ್ದಾಗ ಹಿರಿಯರೊಬ್ಬರು ಜೀವದ ಬೆಲೆ, ವಿಮೆಯ ಪ್ರಾಮುಖ್ಯತೆ ಇತ್ಯಾದಿಗಳ ಬಗ್ಗೆ ಪುಟ್ಟ ಭಾಷಣ ಕೊಟ್ಟರು. ಎಲ್ಲರ ಕೈಯ್ಯಲ್ಲೂ ಒಂದೊಂದು ಫಾರಂ ಇಟ್ಟರು. ಕಡೆಗೆ ಅದು ವಿಮೆ ಪಾಲಿಸಿ ಕೊಳ್ಳುವ ಫಾರಂ ಎಂದು ತಿಳಿಯಿತು. ಬೇಡ ಎನ್ನುವ ಮೊದಲೇ ಹದಿನಾಲ್ಕು ರೂಪಾಯಿ ಮಾಸಿಕ ಕಂತಿನ ಐದು ಸಾವಿರ ರೂಪಾಯಿಯ ಪಾಲಿಸಿಗೆ ಸಹಿ ಮಾಡಿಸಿದರು. ಬೋಂಡಾ, ಚಹಾ ನೀಡಿ ಹುಡುಗಿ ಗಂಟು ಹಾಕುವುದು ಕೇಳಿದ್ದೆ. ಇಲ್ಲಿ ಪಾಲಿಸಿ ಗಂಟುಬಿತ್ತು. ನೀವು ಏನೂ ಚಿಂತೆ ಮಾಡಬೇಡಿ. ನಿಮ್ಮ ಸಂಬಳದಿಂದ ಅದಾಗದೇ ವಿಮೆಯ ಕಂತು ಹೋಗುತ್ತದೆ. ನೀವೇನೂ ಕಟ್ಟಬೇಕಾಗಿಲ್ಲ ಎಂದು ಅವರೇ ಹಣ ನೀಡುವ ರೀತಿ ಅಭಯವನ್ನೂ ನೀಡಿದರು. ಹೀಗೆ ಸಂಬಳ ಹೆಚ್ಚುತ್ತಿದ್ದಂತೆ ಬೇರೆ ಬೇರೆ ಪಾಲಿಸಿ ಕೊಂಡೆ". 

"ಇಪ್ಪತ್ತೈದು ವರ್ಷದ ನಂತರ ಮೊದಲ ಪಾಲಿಸಿ ಹಣ ಬಂತು. ಏಳು ಸಾವಿರದ ಐದು ನೂರು ರೂಪಾಯಿ. ಅದು ಆಗ ಬರುತ್ತಿದ್ದ ಒಂದು ತಿಂಗಳ ಸಂಬಳ! ಇಪ್ಪತ್ತೈದು ವರ್ಷ ಪ್ರತಿ ತಿಂಗಳೂ ಕಂತು ಕಟ್ಟಿದ್ದರ ಪ್ರತಿಫಲ. ಹೀಗೆ ಎಲ್ಲ ಪಾಲಿಸಿಗಳೂ ಮುಗಿದು ವಿಮೆಯೇ ಇಲ್ಲದಂತಾಯಿತು."

"ಇನ್ನೊಬ್ಬ ಹಿತೈಷಿ(?) ಮಿತ್ರರು ಈ ಪರಿಸ್ಥಿತಿ ನೋಡಿ ಬಹಳ ಸಂಕಟ ಪಟ್ಟರು. ಐವತ್ತು ವಯಸ್ಸಿಗೆ ವಿಮೆಯೇ ಇಲ್ಲ ಎಂದರೆ ಏನು? ಬಹಳ ತಪ್ಪು. ಹೊಸ "ಜೀವನ್ ಆನಂದ್" ಬಂದಿದೆ. ಪಾಲಿಸಿ ತಗೊಳ್ಳಿ. ಹತ್ತು ವರ್ಷ ಕಂತು ಕಟ್ಟಿ. ನಿಮ್ಮ ನಿವೃತ್ತಿಯ ವೇಳೆಗೆ ಪಾಲಿಸಿ ಹಣ ಬರುತ್ತದೆ. ಅಷ್ಟೇ ಅಲ್ಲ. ಮುಂದೆ ಕಂತು ಕಟ್ಟದಿದ್ದರೂ ವಿಮೆಯ ಅಭಯ ಛತ್ರ ನಿಮ್ಮ ತಲೆಯ ಮೇಲೆ ಇರುತ್ತದೆ. ನಿಮ್ಮ ಮರಣದ ನಂತರ ಪಾಲಿಸಿಯ ಅಷ್ಟೇ ಹಣ ನಿಮಗೆ {!) ಸಿಗುತ್ತದೆ." ಎಂದು ಬಹಳ ಕಳಕಳಿಯಿಂದ ಹೇಳಿದರು. ಸರಿ, ಆಯಿತು, ಪಾಲಿಸಿ ಬಾಂಡ್ ಬಂತು."

"ಪಾಲಿಸಿ ಬಾಂಡ್ ಹಿಡಿದು ಏನನ್ನೋ ಸಾಧಿಸಿದಂತೆ ಮನೆಗೆ ಹೋದೆ. ಹೆಂಡತಿಯ ಕೈಯಲ್ಲಿ ಬಾಂಡ್ ಇಟ್ಟು "ಜೀವನದ ಆನಂದ" ವಿವರಿಸಿದೆ. "ನಿಮ್ಮ ದರಿದ್ರ ಬಾಂಡ್ ನೀವೇ ಇಟ್ಟುಕೊಳ್ಳಿ. ನಿಮ್ಮ ಸಾವಿನ ನಂತರ ಬರುವ ಆನಂದ ನಮಗೆ ಬೇಡ" ಎಂದು ಪಾಲಿಸಿ ನನ್ನ ಕೈಗೇ ತಳ್ಳಿದಳು." 

"ಹತ್ತು ವರುಷದ ನಂತರ ಪಾಲಿಸಿ ಹಣ ಬಂತು. ಖರ್ಚೂ ಆಯಿತು. ಬಾಂಡ್ ಮಾತ್ರ ನನ್ನ ಮರಣದ ನಿರೀಕ್ಷೆಯಲ್ಲಿ ಕಪಾಟಿನಲ್ಲಿ ಕುಳಿತಿತ್ತು."

"ಮತ್ತೆ ಹತ್ತು ವರುಷದ ನಂತರ ಮತ್ತೊಬ್ಬ ಹಿತೈಷಿ "ಜೀವನದ ಆನಂದ"ದ ವಿಷಯ ಮಾತಾಡುವಾಗ ಹೊಸ ವಿಷಯ ಹೇಳಿದರು. ಈ ಬಾಂಡ್ ಸಹವಾಸ ಸಾಕು ಎಂದರೆ ವಿಮಾ ನಿಗಮಕ್ಕೆ ಹಿಂತಿರುಗಿಸಿ ಸ್ವಲ್ಪ ಕಡಿಮೆ ಆದರೂ ನೀವು ಬದುಕಿದ್ದಾಗಲೇ ಹಣ ಪಡೆಯಬಹುದು. ಹಾಗೆ ಮಾಡಿ. ಸಂಸಾರದಲ್ಲಿ ಮನಸ್ತಾಪ ಯಾಕೆ?" ಎಂದು ಸಲಹೆ ಕೊಟ್ಟರು."

"ಹಾಗೆಯೇ ಮಾಡಿದೆ. ಸ್ವಲ್ಪ ಹಣವೂ ಬಂತು. ಹೆಂಡತಿಯ ಮುಖವೂ ಸ್ವಲ್ಪ ಅರಳಿತು. ಎದೆಯಲ್ಲಿ ಚುಚ್ಚಿಕೊಂಡಿದ್ದ ಮುಳ್ಳು ಹೊರ ಬಂದಂತೆ ನಿರಾಳವಾಯಿತು. ಮರಣದ ನಂತರ ಬರುವ ಆನಂದವನ್ನೂ ಬದುಕಿರುವಾಗಲೇ ಕಂಡೆ!"
*****
ಆನಂದ ಅನುಭವಿಸುವುದಕ್ಕೂ ವಿಷಾದ ಪಡುವುದಕ್ಕೂ ಪ್ರತಿನಿತ್ಯ ನೂರು ಕಾರಣಗಳು ಸಿಗುತ್ತವೆ. ಆಯ್ಕೆ ಅವರವರಿಗೆ ಬಿಟ್ಟಿದ್ದು. 

4 comments:

  1. Very good analysis. Lot of information about 'old age'. An article very useful to elders.

    ReplyDelete
  2. ಸೊಗಸಾದ article. ಓದುಗರನ್ನು ನಾನಾ ಕಡೆ ಕರೆದುಕೊಂಡು ಹೋಗುತ್ತೀರಿ.
    LIC, plantation, bank, yayati, chuvana, Girish karnad, vedavyasa, ಇನ್ನು ಹಲವಾರು connection ಮಾಡಿದ್ದೀರಿ. ಒಂದು connection ಬಹಳ ನಿರೀಕ್ಷೆಯಿಂದ article ಓದುತ್ತಿದ್ದ.ಅದು ಪೂರ್ವ ಜನ್ಮದ ಪಾಪ ಮತ್ತು ಪುಣ್ಯ ದ ನಿದರ್ಶನಗಳು. ಪಾಪದ ಮರ ಬೆಳೆಸುವವನು ಮುಂದಿನ ಜನ್ಮದಲ್ಲಿ ಹೀನ ಯೋನಿಯಲ್ಲಿ ಹುಟ್ಟುತ್ತಾನೆ ಎಂಬ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಲು ಬಯಸಿದ್ದೆ. ಇದೇ ವಿಷಯ ದ ಮೇಲೆ ಇನ್ನೊಂದ article ಬರೀತೀರೇನೊ ಎಂಬ ನಿರೀಕ್ಷೆ ಇದೆ.

    ReplyDelete
  3. Yes, generally we react like that for Life Insurance policy, but how many families it must have saved, after sudden death and medical emergencies, well written, like always you have made it interesting to read, thank you!

    ReplyDelete
  4. very informative and analytical. You have quoted many people with your intensive study on the subject. Difficult to write in your style. Look forward for more such articles. Regards.

    ReplyDelete