Monday, March 4, 2024

ಸಿನಿಮಾ ಮತ್ತು ಜೂಜಿನ ಹಾಡುಗಳಲ್ಲಿ ಹಾಸ್ಯ ಸಾಹಿತ್ಯ


ಸಾಹಿತ್ಯ ರಸಾಸ್ವಾದನೆಗೆ ದೊಡ್ಡ ದೊಡ್ಡ ಗ್ರಂಥಗಳನ್ನೇ ಹುಡುಕಿಕೊಂಡು ಹೋಗಬೇಕಾಗಿಲ್ಲ. ನಮ್ಮ ದಿನನಿತ್ಯದ ಬದುಕಿನಲ್ಲೇ ಅಲ್ಲಲ್ಲಿ ಸೊಗಸಾದ ಸಾಹಿತ್ಯವನ್ನು ಕಾಣಬಹದು. ಹತ್ತನೆಯ ಶತಮಾನದ ಬಹು ಖ್ಯಾತಿಯ ದಾರ್ಶನಿಕ ಆಚಾರ್ಯ ಅಭಿನವ ಗುಪ್ತನ ಗುರುಗಳೊಲ್ಲೊಬ್ಬನಾದ ಭಟ್ಟ ತೌತ (ಭಟ್ಟ  ತಾತ) ತನ್ನ "ಕಾವ್ಯ ಕೌತುಕ" ಗ್ರಂಥದಲ್ಲಿ "ಪ್ರತಿಭೆ" (Talent) ಎನ್ನುವ ಪದಕ್ಕೆ ಒಂದು ಸೊಗಸಾದ ಅರ್ಥ ಕೊಟ್ಟಿದ್ದಾನೆ. "ಪ್ರಜ್ಞಾ ನವನವೋಲ್ಲೇಖಶಾಲಿನೀ ಪ್ರತಿಭಾ ಮತಾ, ತದನುಪ್ರಾಣನಾಜೀವದ್ ವರ್ಣನಾ ನಿಪುಣಃ ಕವಿ" ಎಂದು ಪ್ರತಿಭೆಯನ್ನೂ ಕವಿಯನ್ನೂ ಜೋಡಿಸುತ್ತಾನೆ. ಪ್ರತಿಭೆ ಎಂದರೆ ಅನುಕರಣೆ ಅಲ್ಲ. ಹೊಸದನ್ನು ಮತ್ತೆ ಮತ್ತೆ ತಕ್ಷಣದಲ್ಲೇ ಹೊಸೆಯುವ ಸಾಮರ್ಥ್ಯಕ್ಕೆ "ಪ್ರತಿಭೆ" ಎಂದು ಹೆಸರು. ಅದರ ಆಧಾರದ ಮೇಲೆ ಕೃತಿ ರಚನೆ ಮಾಡಬಲ್ಲವನು ಕವಿ. ಇಂತಹ ಆ ಗಳಿಗೆಯಲ್ಲಿ ತಯಾರಿಸಿದ ವಸ್ತುವೇ ಒಂದು ರೀತಿಯ ಕವನ ಅಥವಾ ಕಾವ್ಯ. ಅಂದಮಾತ್ರಕ್ಕೆ ಬೇರೆ ರೀತಿಯ ಕೃತಿ ಕವನ ಅಥವಾ ಕಾವ್ಯ ಅಲ್ಲವೆಂದಲ್ಲ. ಒಟ್ಟಿನಲ್ಲಿ ಕಾವ್ಯ ಪ್ರತಿಭೆ ಕಾರಂಜಿಯಂತೆ ಮತ್ತೆ ಮತ್ತೆ ಪುಟಿದೇಳುತ್ತಿರಬೇಕೆನ್ನುವುದು ಮುಖ್ಯ. ಅದು ಎಂದೋ ಒಮ್ಮೆ ಬರುವದಲ್ಲ. ಕವಿಗೆ ಇಂತಹ ಕರ್ತೃತ್ವ ಶಕ್ತಿ ಸದಾಕಾಲವೂ ಇರಬೇಕು. 

ನಮ್ಮ ಸುತ್ತ ಇರುವ ಅನೇಕರಿಗೆ ಇಂತಹ ಪ್ರತಿಭೆ ಇರುವುದನ್ನು ನಾವು ಕಾಣುತ್ತೇವೆ. ಕೆಲವು ಸಾರ್ಥಕವಾಗುತ್ತವೆ. ಕೆಲವು ಅನ್ಯಾಯವಾಗಿ ಸೋರಿಹೋಗುತ್ತವೆ. ಅದೇ ಕ್ಷಣದಲ್ಲಿ ಹೊಸೆದ ಕೆಲವು ತಮಾಶೆಯಾದ ಕವನಗಳನ್ನು ನೋಡೋಣ. 

ಐವತ್ತು, ಅರವತ್ತು, ಎಪ್ಪತ್ತರ ದಶಕದಲ್ಲಿ ಸದಭಿರುಚಿಯ ಸಿನಿಮಾ ಚಿತ್ರಗಳು ಹೇರಳವಾಗಿ ಬರುತ್ತಿದ್ದವು. ಸಿನಿಮಾ ಮತ್ತು ನಾಟಕಗಳಿಗೆ ಕಥೆ, ಗೀತೆ ಮತ್ತು ಸಂಭಾಷಣೆ ಬರೆಯುತ್ತಿದ್ದವರು ಬಹುತೇಕ ಸಾಹಿತಿಗಳೂ, ವಿದ್ವಾಂಸರೂ ಆಗಿರುತ್ತಿದ್ದರು. ನಟರು ಮತ್ತು ನಿರ್ದೇಶಕರು ಸಾಹಿತ್ಯ-ಸಂಗೀತಗಳ ಉತ್ತಮ ಪರಿಚಯವುಳ್ಳ ಕಲಾವಿದರಾಗಿರುತ್ತಿದ್ದರು. ಈ ಕಾರಣದಿಂದ ಸಿನಿಮಾ ಗೀತೆಗಳು ಮತ್ತು ಸಂಭಾಷಣೆಗಳು ಉತ್ತಮ ದರ್ಜೆಯ ಸಾಹಿತ್ಯವೇ ಆಗಿರುತ್ತಿತ್ತು. ಇವುಗಳ ಬಗ್ಗೆ ಸಮಾಜದಲ್ಲಿ ಅತ್ಯಂತ ಗೌರವ ಇರುತ್ತಿತ್ತು. ಕೆಳಗೆ ಕೊಟ್ಟಿರುವ ಸಂದರ್ಭಗಳು ಕೇವಲ ಲಲಿತ ಹಾಸ್ಯ ತೋರಿಸುವ ಉದಾಹರಣೆಗಳೇ ಹೊರತು ನಾಟಕ ಮತ್ತು ಸಿನಿಮಾ ಸಾಹಿತ್ಯದ ವಿಶ್ಲೇಷಣೆ ಅಲ್ಲವೇ ಅಲ್ಲ. 

*****

ಅರವತ್ತು-ಎಪ್ಪತ್ತರ ದಶಕದ ಸಂಧಿಕಾಲ. ದೂರದ ಹಳ್ಳಿ ವಾಸಿ ದಂಪತಿಗಳು ತಮ್ಮ ಮಗನನ್ನು ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ವಿದ್ಯಾಪೀಠವೊಂದಕ್ಕೆ ಕರೆದು ತಂದು ಸೇರಿಸಿದರು. ಹತ್ತು ವಯಸ್ಸಿನ ಹುಡುಗ ಬಹಳ ಚೂಟಿಯಾಗಿದ್ದ. ಎರಡೇ ದಿನದಲ್ಲಿ ಗುರುಗಳ ಪ್ರೀತಿ ಸಂಪಾದಿಸಿದ. ಗುರುಕುಲವಾದ್ದರಿಂದ ಊಟ, ವಸತಿ ಅಲ್ಲಿಯೇ. ಬೆಳಗ್ಗೆ ಎಂಟರಿಂದ ಮಧ್ಯಾಹ್ನ ಹನ್ನೆರಡರವರೆಗೆ ಪಾಠ. ಹನ್ನೆರಡರಿಂದ ಎರಡು ಘಂಟೆಯವರೆಗೆ ಬಿಡುವು. ಆಗ ಮಧ್ಯಾಹ್ನ ಒಂದು ಗಂಟೆಗೆ ಎಲ್ಲರಿಗೂ ಸೊಗಸಾದ ಊಟ. ಮಧ್ಯಾಹ್ನ ಎರಡರಿಂದ ಸಂಜೆ ಐದು ಗಂಟೆಯವರೆಗೆ ಮತ್ತೆ ಪಾಠ. ನಂತರ ಬಿಡುವು. ರಾತ್ರಿ ಊಟದ ನಂತರ ಸ್ವಂತ ವಿದ್ಯಾಭ್ಯಾಸ. ಹೀಗಿತ್ತು ದಿನಚರಿ. 

ಬೆಳಗಿನ ಪಾಠದಲ್ಲಿ ಈ ವಿದ್ಯಾರ್ಥಿ ಎಲ್ಲರಿಗಿಂತ ಮುಂದು. ಚೆನ್ನಾಗಿ ಊಟ ಹೊಡೆಯುತ್ತಿದ್ದ ಸಹ. ಆದರೆ ಮಧ್ಯಾನ್ಹದ ಪಾಠದ ಸಮಯದಲ್ಲಿ ಆಗಾಗ ಕೆಲವು ದಿನ ಅವನ ಪತ್ತೆ ಇಲ್ಲ. ಊಟದ ನಂತರ ಎಲ್ಲಿ ಹೋಗುತ್ತಾನೆ ಎಂದು ಯಾರಿಗೂ ಗೊತ್ತಿಲ್ಲ. ಬರಬರುತ್ತ ಮಧ್ಯಾಹ್ನ ಅವನು ಪಾಠಕ್ಕೆ ಬರುವುದೇ ನಿಂತುಹೋಯಿತು. ಗುರುಗಳಿಗೆ ಮೊದಲು ಕಸಿವಿಸಿ. ನಂತರ ಬಹಳ ಕೋಪ ಬಂತು. ಒಂದು ದಿನ ಕೊಟ್ಟ ವಿಷಯದ ಮೇಲೆ ಕವನ ಕಟ್ಟುವ ರೀತಿಯ ಬಗ್ಗೆ ಬೆಳಿಗ್ಗೆ ಪಾಠವಾಯಿತು. ಮಧ್ಯಾನ್ಹದ ಪಾಠಕ್ಕೆ ಈ ಹುಡುಗ ಗೈರು. ಗುರುಗಳು ಕಾದಿದ್ದು ಅವನು ಸಂಜೆ ಗುರುಕುಲಕ್ಕೆ ಬಂದಾಗ ಹಿಡಿದರು. "ಎಲ್ಲಿ ಹೋಗಿದ್ದೆಯೋ, ಭಡವ!" ಎಂದು ಜಬರಿಸಿ ಕೇಳಿದರು. ಮೊದಲು ಹುಡುಗ ಏನೂ ಹೇಳಲಿಲ್ಲ. ಬಲವಂತ ಮಾಡಿದಾಗ ಹೇಳಿದ:

ಗರಗರನೆ ತಿರುಗಿ ಹಿಮಗಿರಿಗೆ ಎರಗಿ 
ಉಮೆಯನ್ನು ಕಂಡು ಬಂದೆ
ಸ್ವಪ್ನದಲಿ ಊರ್ವಶಿ ಮೇನಕೆಯ ನರ್ತನವ 
ಕಂಡು ಆನಂದ ನಂದ ಎಂದೆ

ನಟರಾಜನಿಗೆ ಸಂಪಿಗೆಯ ಗೀತಾಂಜಲಿಯ 
ಕೊಟ್ಟು ಸಂತೋಷದಿಂದ ಬಂದೆ 
ಶಿವಾಜಿ ಕಂಡ ಭಾರತದ ಕಲ್ಪನೆಯ ನೋಡಿ 
ಸಾಗರದಿ ಮಿಂದೆ ಎಂದೆ  

ಪ್ರಭಾತದಲಿ ಲಕ್ಷ್ಮಿಯನು ಕಂಡು ಜೈಕಾರ ಹಾಕಿ 
ಕಪಾಲೀಶ್ವರನ ದರುಶನವ ಮಾಡಿ 
ಅಲಂಕಾರ ಸಂಗಮದ ಸೊಗಸನ್ನು ಕಂಡು 
ಕೆಂಪಗಿಲ್ಲಿ ಬಂದು ನಿಂತೆ!

ಹುಡುಗನಿಗೆ ಚಿಕ್ಕ ವಯಸ್ಸು. ಸಿನಿಮಾ ನೋಡುವ ಹುಚ್ಚು. ಮಧ್ಯಾನ್ಹ ಊಟದ ನಂತರ ಪಾಠಕ್ಕೆ ಚಕ್ಕರ್ ಹಾಕಿ ಮ್ಯಾಟಿನಿ ಶೋ ನೋಡಲು ಹೋಗುತ್ತಿದ್ದ. ಗುರುಗಳು ಕೇಳಿದಾಗ ಬೆಳಗಿನ ಪಾಠದ ಪ್ರಭಾವದಿಂದ ಸಿನಿಮಾ ಮಂದಿರಗಳ ಹೆಸರಿನಲ್ಲೇ ಕವಿತೆ ಮಾಡಿದ!

ಹಿಮಾಲಯ (ಹಿಮಗಿರಿ), ಉಮ, ಸಪ್ನಾ, ಊರ್ವಶಿ, ಮೇನಕಾ, ನರ್ತಕಿ, ಆನಂದ, ನಂದಾ, ನಟರಾಜ, ಸಂಪಿಗೆ, ಗೀತಾಂಜಲಿ, ಸಂತೋಷ್, ಶಿವಾಜಿ, ಭಾರತ್, ಕಲ್ಪನ, ಸಾಗರ್, ಪ್ರಭಾತ್, ಲಕ್ಷ್ಮಿ, ಜೈಹಿಂದ್ (ಅಥವಾ ಜಯಶ್ರೀ), ಕಪಾಲಿ, ಅಲಂಕಾರ್, ಸಂಗಮ್, ಇವು ಆಗ ಇದ್ದ ಕೆಲವು ಚಿತ್ರಮಂದಿರಗಳ ಹೆಸರುಗಳು.  ಕೆಲವು ಈಗ ಇಲ್ಲ. ಮೊದಲಲ್ಲಿ "ಹಿಮಗಿರಿಗೆ ಎರಗಿ ಉಮೆಯನ್ನು ಕಂಡು ಬಂದೆ" ಎಂದಾಗ ಎರಡು ಚಿತ್ರಮಂದಿರದ ಜೊತೆಗೆ ಹಿಮವಂತನ ಮಗಳು ಪಾರ್ವತೀ (ಉಮಾ) ಎನ್ನುವ ಧ್ವನಿ. ಕೊನೆಯಲ್ಲಿ "ಕೆಂಪಗಿಲ್ಲಿ ಬಂದು ನಿಂತೆ" ಅನ್ನುವುದು ಕೆಂಪೇಗೌಡ ಚಿತ್ರಮಂದಿರವೂ ಆಗಬಹುದು; ಅಥವಾ ಬಿಸಿಲಲ್ಲಿ ಅಲೆದು ಮುಖ ಕೆಂಪಗಾಯಿತು ಎಂದೂ ಇರಬಹುದು!  

ಗುರುಗಳು ಕಷ್ಟಪಟ್ಟು ಅವನು ಪಾಠ ತಪ್ಪಿಸಿ ಸಿನಿಮಾ ನೋಡುವುದನ್ನು ಬಿಡಿಸಿದರಂತೆ! ಮುಂದೆ ಅವನ ಪ್ರತಿಭೆ ವಿದ್ಯಾಭಾಸದ ಕಡೆ ಪೂರ್ತಿ ತಿರುಗಿ ಹೆಸರಾಂತ ವಿದ್ವಾಂಸ ಆದನಂತೆ.  

*****

ಮಾನ್ವಿ ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ ಒಂದು ಪಟ್ಟಣ. ಹರಿದಾಸ ಪಂಥದ ಶ್ರೇಷ್ಠ ದಾಸರಾದ ಜಗನ್ನಾಥ ದಾಸರ ಸ್ಥಳ. ಈಗಲೂ ಹರಿದಾಸ ಪಂಥದ ಅನೇಕರು ಅಲ್ಲಿ ವಾಸವಾಗಿದ್ದಾರೆ. ನಿಷ್ಠರಾದ ಕೆಲವು ಮಿತ್ರರಿಗೆ ಇಸ್ಪೀಟ್ ಆಡುವ ಹುಚ್ಚು ಅಂಟಿಕೊಂಡಿತ್ತು. ಅತಿಯಾಗಿ ಕುಡಿದರೆ ಪಂಚಾಮೃತವೂ ಕೆಟ್ಟದೇ. ಅಂತಹದರಲ್ಲಿ ಜೂಜಿನ ವಿಷಯ ಹೇಳುವುದೇ ಬೇಡ. ಬಾಕಿಯಂತೆ ಒಳ್ಳೆಯವರೂ, ತಿಳಿದವರೂ ಆದರೂ ಇಸ್ಪೀಟಿನ ಎಲೆಯ ಆಟದ ಖಯಾಲಿ ಕಾರಣ ಸ್ನೇಹಿತರು ಪ್ರತಿದಿನ ಸೇರಿ ಆಟ ಆಡುವುದು. ಹಣ ಕಟ್ಟಿ ಆಡುವಾಗ ಕಳೆದುಕೊಳ್ಳುವುದೇ ಹೆಚ್ಚು.  

ಕೆಲವು ದಶಕಗಳ ಹಿಂದೆ ಅಲ್ಲಿ ವಾಸವಿದ್ದ ಇಸ್ಪೀಟ್ ಸ್ನೇಹಿತರು ಒಂದು ದಿನ ಆಡಲು ಶುರು ಮಾಡಿದರು. ಮಾನ್ವಿ ಗೋವಿಂದ ದಾಸರೆಂಬುವರು ಒಂದು ಆಟ ಸೋತರು. ಪಕ್ಕದಲ್ಲಿದ್ದವರು 'ದಾಸರೇ, ಆಟ ಸೋತಿರಲ್ಲ!" ಎಂದರು. "ಏನು ಮಾಡುವುದು? ರಾಣಿ ಕೈ ಕೊಟ್ಟಳು!" ಎಂದರು ಅವರು. ಇಸ್ಪೀಟ್ ರಾಣಿ ಎಲೆಗಾಗಿ ಕಾದಿದ್ದು, ಆ ಎಲೆ ಬರದೇ ಸೋತೆ ಎಂದರು. ಇದರ ಮೇಲೆ ಒಂದು ಹಾಡು ಮಾಡಿ ಎಂದರು ಮತ್ತೊಬ್ಬರು. ಮಾನ್ವಿ ಶಾಮಸುಂದರ ದಾಸರು ತಾಯಿ ಮಹಾಲಕ್ಷ್ಮಿಯನ್ನು ಸಂಬೋಧಿಸಿ ಒಂದು ಸೊಗಸಾದ ದೇವರನಾಮವನ್ನೇ ಮಾಡಿ ಹೀಗೆ ಹಾಡಿದರು:

ಜಾಣೆ ನಂಬಿದೆ ಇಸ್ಪೀಟ್ ರಾಣೀ ನೀ ಒಲಿದೆನ್ನ 
ಪಾಣಿಯೊಳಗೆ ಬಂದು ಕಾಣಿಸಮ್ಮ 
ವಾಣಿ ಶ್ರೀಲಕುಮೀಶ ರುದ್ರಾಣಿಯರಿಗಿಂತ 
ಕ್ಷೋಣಿಯೊಳಗೆ ಬಹು ಮಾನ್ವಿತೆ ನೀನಮ್ಮ 

ಜನಕನು ಗಳಿಸಿದ ಧನವೆಲ್ಲ ಕಳಕೊಂಡೆ 
ದನಕರು ಹೊಲ-ಮನೆಯನು ಮಾರಿದೆ 
ಜನರೊಳಗಪಹಾಸ್ಯಕ್ಕೊಳಗಾದೆ ಕೇಳಮ್ಮ 
ಮಡದಿ ಮಕ್ಕಳ ಕೈಗೆ ಕೊನೆಗೆ ಪರಕೆ ಕೊಟ್ಟೆ 

ಉಣಲು ಅನ್ನವ ಕಾಣೆ ಉಡಲು ವಸ್ತ್ರವ ಕಾಣೆ 
ಕಡುಕಷ್ಟ ಕಡಲೊಳು ಮುಳುಗಿದೆನಮ್ಮ 
ಪೊಡವಿಯೊಳ್ ನಿನ್ ಹೊರತು ಕಡೆಹಾಯಿಸುವಂಥ 
ಒಡೆಯರ ಕಾಣೆ ಕೈಪಿಡಿದು ರಕ್ಷಿಸಮ್ಮ 

ಎಷ್ಟಂತ ಹೇಳಲಿ ಮಡದಿಯ ಗೋಳಾಟ 
ತಾಳಿ ಹೊರತು ಎಲ್ಲ ಹಾಳಾಯಿತು 
ಸಾಲ ಬಹಳಾಯ್ತು ಜೋಳಿಗೆ ಬಂದಿತು 
ಕೂಳಿಗೆ ಮನೆಮನೆ ಚಾಲುವರಿದೆನಮ್ಮ 

ಅಕ್ಕರದಲ್ಲಿ ಎರಡೆಕ್ಕದೊಳಗೆ ಬಂದು 
ಫಕ್ಕನೆ ನೀ ಎನ್ನ ಕರದೊಳು ಬಾರಮ್ಮ 
ಮುಕ್ಕಣ್ಣ ಸಖ ತನ್ನ ಬೊಕ್ಕಸದೊಳಗಿನ 
ರೊಕ್ಕ ಹಾಕಲು ಅವನ ಲೆಕ್ಕಿಸೆ ನಾನಮ್ಮ 

ಕಾಮಿತದಾಯಿನಿ ಕಾಮಿನಿ ಶಿರೋಮಣಿ 
ಶಾಮಸುಂದರ ಸಾರ್ವಭೌಮನ ರಾಣಿ 
ಶ್ರೀಮಂತ ಜೋಕರನ ಪ್ರೇಮದ ಭಗಿನಿಯೆ 
ನಾ ಮೊರೆ ಹೊಕ್ಕೆನು ನೀ ದಯ ಮಾಡು ತಾಯೆ 

ಜೂಜಿನ ನಷ್ಟಕ್ಕೆ ಸಿಲುಕಿ ಮನೆ, ಹೊಲ, ಪಶು ಸಂಪತ್ತು, ಚಿನ್ನ-ಬೆಳ್ಳಿ ಎಲ್ಲ ಮಾರಿ ಕಳಕೊಂಡು, ಹೆಂಡತಿ ಮಕ್ಕಳ ಹೀನಾಯ ಸ್ಥಿತಿಗೆ ಕಾರಣನಾದೆ. ಸಾಲಗಾರನಾಗಿ ಮನೆ ಮನೆ ತಿರುಗಿ ಭಿಕ್ಷೆ ಬೇಡುವ ಸ್ಥಿತಿ ಬಂತು. ಹೀಗಿದೆ ನನ್ನ ಸ್ಥಿತಿ. ನನ್ನ ಕಾಪಾಡಲು ಯಾರಿಗೂ ಸಾಧ್ಯವಿಲ್ಲ. ನೀನೇ ನನಗೆ ಆಟದಲ್ಲಿ ಬೇಕಾದ ಎಲೆಯಾಗಿ ಬಂದು, ಕೈಯಲ್ಲಿ ಕುಳಿತು, ಗೆಲ್ಲಿಸಿ, ಈ ಕಷ್ಟಗಳಿಂದ ಪಾರು ಮಾಡು ಎಂದು ಮೊರೆ ಇಡುತ್ತಾರೆ. 

ಪ್ರಪಂಚದಲ್ಲಿ ಎಲ್ಲರಿಗಿಂತ ಶ್ರೀಮಂತ ಶಿವನ ಮಿತ್ರನಾದ ಕುಬೇರ. ಅವನೇ ಆಟಕ್ಕೆ ಬಂದು ತನ್ನ ಖಜಾನೆಯಲ್ಲಿ ಇರುವ ಎಲ್ಲ ಹಣವನ್ನೂ ಪಣಕ್ಕಿಡುತ್ತಾ ಹೋಗಲಿ. ನಿನ್ನ ಕರುಣೆ ಇದ್ದರೆ, ನೀನು ಬೇಕಾದ ಎಲೆಯಾಗಿ ನನ್ನ ಕಯ್ಯಲ್ಲಿ ಬಂದು ಕೂಡುತ್ತಿದ್ದರೆ, ನಾನು ಕುಬೇರನನ್ನೂ ಲೆಕ್ಕಿಸದೆ ಗೆಲ್ಲುತ್ತ ಹೋಗುತ್ತೇನೆ ಎನ್ನುತ್ತಾರೆ.!

ಕೊನೆಯ ನುಡಿಯಲ್ಲಿ ಅವರ ಮತದ ವಿಶೇಷ ಪ್ರಮೇಯ ಒಂದನ್ನು ಹೇಳುತ್ತಾರೆ. ಮಹಾಲಕ್ಷ್ಮಿ ಕೇಳಿದ್ದನ್ನು ಕೊಡುವ ಶಕ್ತಿಯುಳ್ಳ ಕಾಮಿತದಾಯಿನಿ. ಮೂರು ಲೋಕಗಲ್ಲಿಯೂ ಅತಿ ಶ್ರೇಷ್ಠ ಮಹಿಳೆ. ಶಾಮಸುಂದರನಾದ ಶ್ರೀ ಮಹಾವಿಷ್ಣುವಿನ ಮಹಾರಾಣಿ. ಹೀಗೆಂದು ಹೇಳಿದಮೇಲೆ ಅವಳನ್ನು ಶ್ರೀಮಂತ ಜೋಕರನ ಸೋದರಿ ಎಂದು ಸಂಬೋಧಿಸುತ್ತಾರೆ. ಲಕ್ಷ್ಮಿ ಹೇಗೆ ಸೋದರಿ ಆದಾಳು? 

ಮಹಾಲಕ್ಷ್ಮಿಗೆ ಶ್ರೀ, ಭೂ, ದುರ್ಗಾ ಎಂದು ಮೂರು ರೂಪಗಳು. ಶ್ರೀ ಕೃಷ್ಣ ಇಸ್ಪೀಟ್ ಆಟದ ಜೋಕರ್ ಇದ್ದಂತೆ. ಅವನು ಮಹಾಭಾರತದಲ್ಲಿ, ಭಾಗವತದಲ್ಲಿ ಮಾಡದಿದ್ದ ಕೆಲಸವೇ ಇಲ್ಲ. "ಪಾಂಡವರ ಮನೆಯಲ್ಲಿ ಕುದುರೆಗಳ ತಾ ತೊಳೆದು ಪುಂಡರೀಕಾಕ್ಷ ತಾ ಹುಲ್ಲನು ತಿನಿಸಿದ". ಪಾರ್ಥನಿಗೆ ಸಾರಥಿಯಾಗಿ "ಪಾರ್ಥಸಾರಥಿ" ಸಹ ಆದ. ರಾಜಸೂಯ ಯಾಗದಲ್ಲಿ ಎಲ್ಲ ಅತಿಥಿಗಳು ಊಟ ಮಾಡಿದ ಎಂಜಲು ಎಲೆಯನ್ನೂ ಎತ್ತಿದ. ಕಡೆಗೆ ಅದೇ ಯಾಗದಲ್ಲಿ ಆಗ್ರ ಪೂಜೆಯನ್ನೂ ಸ್ವೀಕರಿಸಿದ! ಆದ್ದರಿಂದ ಆಳಿನಿಂದ ಹಿಡಿದು ಅರಸನ ವರೆಗೆ ಎಲ್ಲ ಪಾತ್ರಗಳನ್ನೂ ನಿಭಾಯಿಸಿದ. ಇಸ್ಪೀಟ್ ಆಟದಲ್ಲಿ ಜೋಕರನೂ ಹಾಗೇ ಅಲ್ಲವೇ? ಅದರಿಂದ ಅವನು ಮಹಾಲಕ್ಷ್ಮಿಯ ಗಂಡನಾದ ಶ್ರೀಮಂತ ಜೋಕರ. ಮಹಾಲಕ್ಷ್ಮಿಯು ದುರ್ಗಾ ರೂಪದಿಂದ ದೇವಕಿಯ ಏಳನೇ ಗರ್ಭವನ್ನು ವಸುದೇವನ ಇನ್ನೊಬ್ಬ ಹೆಂಡತಿ ರೋಹಿಣಿಯಲ್ಲಿ ಸೇರಿಸಿ ತಾನೇ ದುರ್ಗಾ ರೂಪದಿಂದ ಕಂಸನಿಗೆ ಬೇಕೆಂದೇ ಸಿಕ್ಕಳು. ಆದರೆ ಅವನಿಗೆ ದಕ್ಕದೆ ತಪ್ಪಿಸಿಕೊಂಡಳು. ನಂತರ ಶ್ರೀಕೃಷ್ಣನ ಜನನವಾಯಿತು. ಆದ್ದರಿಂದ ಅವಳು ಕೃಷ್ಣನ ಪ್ರೇಮದ ಭಗಿನಿಯಾದಳು! ಇದನ್ನೇ ನಿರ್ದೇಶಿಸುತ್ತಾರೆ ಕೊನೆಯ ನುಡಿಯಲ್ಲಿ. 

ಈ ಹಾಡು ಯು ಟ್ಯೂಬಿನಲ್ಲಿ ಲಭ್ಯವಿದೆ. ಈ ಕೆಳಕಂಡ ಲಿಂಕ್ ನಲ್ಲಿ ಕೇಳಬಹುದು:

 https://www.youtube.com/watch?v=DcZCBS8L0fI

ಲಿಂಕ್ ಕಾಪಿ ಪೇಸ್ಟ್ ಮಾಡಿ ಕೇಳಿ ನೋಡಿ.

4 comments:

  1. I wonder whether the composer of these extremely funny lyrics knows your fancy thru his area subject of your interest to be put in media like this
    But my appreciation for your sense of humour being of so hi fy that you are bringing to enjoyment of special circle you have developed in this circle pl keep it up and posting to enhance our information with lot of humour

    ReplyDelete
  2. Wonder who that boy is

    ReplyDelete
  3. Great. ಇಷ್ಟೊಂದು ವಿಷಯಗಳು ನಿಮಗೆ ಎಲ್ಲಿಂದ ಸಿಗುತ್ತೆ ಸ್ವಾಮಿ?

    ReplyDelete