Friday, August 23, 2024

"ಮುಕುಂದಮಾಲಾ" ಎಂಬ "ಸಕ್ಕರೆಯ ಸರ"


ಅದೊಂದು ಸೊಗಸಾದ ಸರ. ಎಲ್ಲರಿಗೂ ಕಾಣುವಂತೆಯೇ ಇದೆ. ಆ ಸರದಲ್ಲಿ ಸಿಹಿ ಸಿಹಿಯಾದ ನಲವತ್ತು ಸಕ್ಕರೆಯ ಮಣಿಗಳಿವೆ. ಒಂದೊಂದು ಮಣಿಯೂ ಒಂದೊಂದು ಸಕ್ಕರೆಯ ಘನವಾದ ಉಂಡೆ. ಅನೇಕರಿಗೆ ಎದುರಿಗೆ ಇದ್ದರೂ ಆ ಸರವೇ ಕಾಣಿಸುವುದಿಲ್ಲ. ಕೆಲವರಿಗೆ ಸರ ಕಂಡರೂ ಅದರಲ್ಲಿ ಮಣಿಗಳಿವೆ ಎಂದು ತಿಳಿಯುವುದಿಲ್ಲ. ಮತ್ತೆ ಕೆಲವರಿಗೆ ಉಂಡೆಗಳಿವೆ ಎಂದು ಗೊತ್ತಾದರೂ ಅವು ಸಕ್ಕರೆಯವು ಎಂದು ಅರ್ಥವಾಗುವುದಿಲ್ಲ. ಎಲ್ಲೋ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಇವು ಸಕ್ಕರೆಯ ಉಂಡೆಗಳು ಎಂದು ಜ್ಞಾತವಾಗುತ್ತದೆ. 

ಆಯಿತು. ಕೆಲವೇ ಮಂದಿಗೆ ಇವು ಸಕ್ಕರೆಯ ಉಂಡೆಗಳಿಂದ ಮಾಡಿದ ಸರ ಎಂದು ಅರ್ಥವಾಯಿತು. ಅವರಲ್ಲಿಯೂ ಕೆಲವರು ವಿಷಯವನ್ನು ಅಲ್ಲಿಗೇ ಬಿಡುತ್ತಾರೆ. ಸ್ವಲ್ಪ ಮಂದಿಗೆ ಮಾತ್ರ ಆ ಸವಿಯಾದ ಉಂಡೆಗಳ ಸಿಹಿಯನ್ನು ಅನುಭವಿಸುವ ಆಸೆ ಆಗುತ್ತದೆ. ಈ ಸಣ್ಣ ಪ್ರಮಾಣದ ಗುಂಪಿನಲ್ಲಿಯೂ ಮೂರು ಭೇದಗಳು. ಮೊದಲನೆಯದು ಒಂದೊಂದು ಉಂಡೆಯನ್ನೂ ಬಾಯಿಗೆ ಹಾಕಿಕೊಂಡು ಕಹಿ ಗುಳಿಗೆ ನುಂಗಿದಂತೆ ನುಂಗುವವರದು. ಸಕ್ಕರೆ ಹೊಟ್ಟೆಯ ಒಳಗೆ ಹೋದಿದ್ದಷ್ಟೇ ಭಾಗ್ಯ. ಬಾಯಿಗೆ, ನಾಲಿಗೆಗೆ ಸಿಹಿಯ ಅನುಭವೇ ಆಗಲಿಲ್ಲ! ಎರಡನೆಯ ಗುಂಪು ಅಷ್ಟು ಆತುರ ತೋರುವುದಿಲ್ಲ. ಬಾಯಿಯಲ್ಲಿ ಸಕ್ಕರೆಯ ಸ್ವಲ್ಪ ಸವಿ ಅನುಭವಿಸಿ ನುಂಗುತ್ತಾರೆ. ಅಷ್ಟೋ ಇಷ್ಟೋ ಸಿಹಿಯ ಅನುಭವವಾಗಿ ಸಂತೋಷ ಪಡೆದರು. ಮೂರನೆಯ ಗುಂಪು ಆತುರದ ಗುಂಪಲ್ಲ. ಸಾವಕಾಶವಾಗಿ ಒಂದೊಂದು ಸಕ್ಕರೆಯ ಉಂಡೆಯನ್ನೂ ಬಾಯಲ್ಲಿ ತುಂಬಿಕೊಂಡು ನಿಧಾನವಾಗಿ ಚೀಪುತ್ತಾ ಅದರ ಸವಿಯನ್ನು ಬಹಳ ಕಾಲ ಅನುಭವಿಸುತ್ತಾರೆ. ಇವರಿಗೆ ಆ ಸಕ್ಕರೆಯ ಹಾರದ ಸಿಹಿ ಸಿಹಿ ಮಣಿಗಳ ಸಂಪೂರ್ಣ ಪ್ರಯೋಜನ ಸಿಕ್ಕಿತು!

ಅನೇಕರಿಗೆ ಬೆಳಿಗ್ಗೆ ಸ್ನಾನಾದಿಗಳ ನಂತರ ಯಾವುದಾದರೂ ಸ್ತೋತ್ರ ಪಾರಾಯಣ ಮಾಡುವ ಪದ್ಧತಿ ಇದೆ. ಪುಣ್ಯಕ್ಕೆ ನಮ್ಮಲ್ಲಿ ಸ್ತೋತ್ರಗಳ ಕೊರತೆ ಇಲ್ಲ. ಕೇವಲ ನಾಲ್ಕು ಪದ್ಯಗಳಿಂದ ಹಿಡಿದು ಸಹಸ್ರನಾಮದವರೆಗೆ ಉಂಟು. ಇನ್ನೂ ಮಾಡಬೇಕೆಂದರೆ ಮತ್ತೊಂದು ಸ್ತೋತ್ರ. ಎಲ್ಲವೂ ಉಂಟು. ಇಲ್ಲದಿರುವುದು ಸಮಯಾವಕಾಶ ಒಂದೇ. 

ಅನೇಕವೇಳೆ ಸ್ತೋತ್ರ ಪ್ರಾರಂಭ ಮಾಡುವುದರ ಮೂಲ ಉದ್ದೇಶ ಅದನ್ನು ಹೇಳಿ ಮುಗಿಸುವುದೇ ಆಗಿರುತ್ತದೆ. ಮುಗಿದ ತಕ್ಷಣ "ಸದ್ಯ, ಮುಗಿಯಿತಲ್ಲ!" ಎಂಬ ಧನ್ಯತಾ ಭಾವ. "ಬೆಳಗ್ಗೆ ಎದ್ದು ಏನೋ ಮಾಡುತ್ತಾರೆ. ಬೇಗ ಕಾಫಿ ಕೊಡುವುದಿಲ್ಲ. ಸ್ನಾನ ಆಗುವ ವೇಳೆಗೆ ಒಂಭತ್ತೂವರೆ ಘಂಟೆ ಆಯಿತು. ಹತ್ತು ಘಂಟೆಗೆ ಕ್ರಿಕೆಟ್ ಪಂದ್ಯ ಇದೆ. ಮೊದಲ ಚೆಂಡು ಅಂಗಳದಲ್ಲಿ ಪುಟಿದೇಳುವ ಮೊದಲು ಸ್ತೋತ್ರ ಮುಗಿದರೆ ಸಾಕು." ಹೀಗೆನ್ನುವ ಮನಸ್ಥಿತಿ ಅನೇಕ ವೇಳೆ. ಇದು ಸಕ್ಕರೆಯ ಉಂಡೆಯನ್ನು ಕಹಿ ಗುಳಿಗೆ ನುಂಗಿದಂತೆ ಹೇಳುವ ಸ್ತೋತ್ರ. 

ಸ್ತೋತ್ರದ ಅರ್ಥ ಗೊತ್ತಿಲ್ಲ. ಗೊತ್ತು ಮಾಡಿಕೊಳ್ಳಬೇಕೆಂಬ ಹಂಬಲವೂ ಇಲ್ಲ. ಅದಕ್ಕಾಗಿ ಪ್ರಯತ್ನವಂತೂ ಮೊದಲೇ ಇಲ್ಲ. ಆದರೆ ಅತಿ ಆತುರವಿಲ್ಲದೆ ಹೇಳುವುದು. ಇದು ಎರಡನೇ ಗುಂಪು. 

ಸ್ತೋತ್ರದ ಹಿನ್ನೆಲೆ ತಿಳಿದು, ಅದರ ಅರ್ಥವನ್ನು ಅರಿತು, ಪ್ರತಿಯೊಂದು ಪದ-ಪದವನ್ನೂ ಅನುಭವಿಸಿ ಮಾಡುವ ಸ್ತೋತ್ರ ಆ ಸಕ್ಕರೆಯ ಉಂಡೆಯ ಪದರ-ಪದರವನ್ನು ಅನುಭವಿಸಿ ಆನಂದಿಸುವ ಪಾರಾಯಣ. ಮುಕುಂದಮಾಲಾ ಸ್ತೋತ್ರದ ನಲವತ್ತು ಮಣಿಗಳ ಸವಿ ಈ ರೀತಿ ಅನುಭವಿಸಿದವರಿಗೇ ಗೊತ್ತು. 

*****

ಮುಕುಂದಮಾಲಾ ಸ್ತೋತ್ರದ ಮೊದಲನೇ ಪದ್ಯವನ್ನೇ ನೋಡೋಣ:

ಶ್ರೀವಲ್ಲಭೇತಿ ವರದೇತಿ ದಯಾಪರೇತಿ 

ಭಕ್ತಪ್ರಿಯೇತಿ ಭವಲುಂಠನ ಕೋವಿದೇತಿ 

ನಾಥೇತಿ ನಾಗಶಯನೇತಿ ಜಗನ್ನಿವಾಸೇತಿ 

ಆಲಾಪಿನಂ ಪ್ರತಿದಿನಂ ಕುರುಮಾಂ ಮುಕುಂದ!

ಏನಿದರ ಅರ್ಥ? ಮೇಲುನೋಟಕ್ಕೆ ಸುಲಭವಾಗಿ ಗೊತ್ತಾಗುತ್ತದೆ. "ಹೇ ಮುಕುಂದ! ಲಕ್ಷ್ಮೀಪತಿ, ವರದ. ದಯಾಳು, ಭಕ್ತಪ್ರಿಯ, ಭವವನ್ನು ದಾಟಿಸುವವ, ಒಡೆಯ, (ಶೇಷನಮೇಲೆ ಮಲಗಿದ) ಶೇಷಶಾಯಿ, ಜಗನ್ನಾಥ, ಇತ್ಯಾದಿ ಪದಗಳಿಂದ ಪ್ರತಿದಿನ ನಿನ್ನನ್ನು ಕರೆಯುವಂತೆ ನನ್ನನ್ನು ಮಾಡು" ಎಂದು ಇದರ ಅರ್ಥ. ಇಲ್ಲಿ ಮೂರು ಮುಖ್ಯ ವಿಷಯಗಳು ಇವೆ. ಪರಮಾತ್ಮನ ಅನೇಕ ಹೆಸರುಗಳು ಇರುವಾಗ ಮುಕುಂದ ಎಂಬ ಹೆಸರಿನಿಂದಲೇ ಏಕೆ ಕರೆದರು? ಮುಕುಂದನಿಗೆ ನೀಡಿರುವ ಈ ವಿಶೇಷಣ ರೂಪಕ ಹೆಸರುಗಳಲ್ಲಿ ಏನಾದರೂ ಹೆಚ್ಚಿನದು ಇದೆಯೇ? ಮುಕುಂದನನ್ನು ಕೂಗಬೇಕಾದರೆ ನಾವೇ ಕೂಗಬಹುದು. ಕರೆಯುವಂತೆ ಮಾಡು ಎಂದು ಅವನನ್ನು ಏಕೆ ಕೇಳಬೇಕು?

ಪರಮಾತ್ಮನ ಲೆಕ್ಕವಿಲ್ಲದ ರೂಪಗಳನ್ನು ತಿಳಿಸುವ ಅನಂತ ಹೆಸರುಗಳಲ್ಲಿ ಅವನನ್ನು ಯಾವ ಹೆಸರಿನಿಂದಾದರೂ ಕರೆಯಬಹುದು. ಆದರೆ ಈ ಸ್ತೋತ್ರದ ಮೂಲ ಉದ್ದೇಶ್ಯ ಏನು? ಯಾವುದೋ ಒಂದು ವರವನ್ನು ಬೇಡುವುದಕ್ಕಲ್ಲ. "ಜನನ-ಮರಣ ಚಕ್ರದಿಂದ ಬಿಡುಗಡೆ ಮಾಡಿ ಪರಮ ಪದವನ್ನು ಕೊಡು; ಮತ್ತೆ ಹುಟ್ಟದಂತೆ ಮಾಡು" ಎಂದು ವಿನಂತಿಸುವುದೇ ಏಕಮೇವ ಗುರಿ.  ಈ ಭವಚಕ್ರದಿಂದ ಪಾರುಮಾಡುವವರು ಯಾರು? ಸರ್ವಶಕ್ತನಾದ ಅವನಿಗೆ ಯಾವ ರೂಪದಲ್ಲಾದರೂ ಈ ಬಿಡುಗಡೆಯನ್ನು ಕೊಡುವ ಶಕ್ತಿಯೇನೋ ಉಂಟು. ಆದರೆ ಅನೇಕ ರೂಪಗಳಿದ್ದರೂ ಮುಕ್ತಿ ಕೊಡುವ ರೂಪ ಮುಕುಂದ ಎನ್ನುವ ರೂಪ ಎಂಬುದು ಬಲವಾದ ನಂಬಿಕೆ. "ಭವಲುಂಠನ ಕೋವಿದೇತಿ" ಎನ್ನುವ ವಿಶೇಷಣವೂ ಇದನ್ನೇ ಸೂಚಿಸುತ್ತದೆ. ಈ ಮನವಿ ಆ ಮುಕ್ತಿ ಕೊಡುವ ಮುಕುಂದನಿಗೆ. ಕೇವಲ ಇದು ಒಂದು ಶ್ಲೋಕದಲ್ಲಿ ಮಾತ್ರವಲ್ಲ. ಇಡಿಯ ಕೃತಿಯ ಪರಮ ಗುರಿ ಸಂಸಾರದಿಂದ ಮುಕ್ತಿ ಪಡೆಯುವುದೇ ಆಗಿದೆ. ಆದ್ದರಿಂದ ಮುಕುಂದನಲ್ಲಿ ಪ್ರಾರ್ಥನೆ. ಇದೇ ಕಾರಣಕ್ಕೆ ಕೃತಿಗೆ "ಮುಕುಂದಮಾಲಾ ಸ್ತೋತ್ರ" ಎಂದು ಹೆಸರು. 

ಮುಕುಂದನ ಅನೇಕ ಗುಣಗಳಲ್ಲಿ ಕೆಲವನ್ನು ಹೇಳುವ ಮೇಲಿನ ಸಂಬೋಧನೆಗಳಲ್ಲಿ ಒಂದೊಂದರಲ್ಲೂ ಅನೇಕ ಅರ್ಥಗಳು ಅಡಗಿವೆ. ಒಂದು ಸಣ್ಣ ಉದಾಹರಣೆ ತೆಗೆದುಕೊಳ್ಳೋಣ. ವರದೇತಿ ಎನ್ನುವ ಸಣ್ಣ ಪದ. ವರದ ಎಂದರೆ ಏನು? ವರವನ್ನು ಕೊಡುವವನು ಎಂದು. ಎಲ್ಲರಿಗೂ ಗೊತ್ತಿರುವ ಅರ್ಥ ಇದು. ಹಾಗಾದರೆ ಮುಕುಂದ ಒಬ್ಬನೇ ವರವನ್ನು ಕೊಡುವವನೇ? ಬೇರೆಯವರು ಯಾರೂ ಇಲ್ಲವೇ? ವರ ಕೊಡುವ ಅನೇಕ ದೇವತೆಗಳು ಇದ್ದಾರಲ್ಲ. ನಾವು ಅವರೆಲ್ಲರನ್ನೂ ಪೂಜಿಸುತ್ತೇವಲ್ಲ. ಹೌದು. ವರ ಕೊಡುವವರು ಬೇರೆಯವರಿದ್ದರೂ ಅವರೆಲ್ಲರಿಗೂ ಪ್ರೇರಕನಾಗಿ ಅಂತಃಶಕ್ತಿಯಾಗಿ ವರ ಕೊಡುವವನು ಅವನೇ! ಅಷ್ಟು ಮಾತ್ರವಲ್ಲ. ಅವನು ವರದ ಅಷ್ಟೇ ಅಲ್ಲ. ಅವನು ವರದರಾಜ. ವರಗಳನ್ನು ಕೊಡುವವರಿಗೆಲ್ಲ ಅವನು ಚಕ್ರವರ್ತಿ. ಅವನಿಗಿಂತ ಹೆಚ್ಚು ಕೊಡುವರು ಯಾರೂ ಇಲ್ಲ. 

ಈ ವಿಷಯವನ್ನು ೨೮ನೆಯ ಶ್ಲೋಕದಲ್ಲಿ ಇನ್ನೂ ವಿವರವಾಗಿ ಕೊಟ್ಟಿದ್ದಾರೆ. ನಮಗೆ ಏನಾದರೂ ಬೇಕಿದ್ದರೆ ಯಾರನ್ನು ಬೇಡಬೇಕು? ಹಣ್ಣಿನ ಅಂಗಡಿಯಲ್ಲಿ ಹೂವು ಸಿಗುವುದಿಲ್ಲ. ಎಣ್ಣೆಯಂಗಡಿಯಲ್ಲಿ ಬಟ್ಟೆ ಸಿಗುವುದಿಲ್ಲ. ಹಾಗೆಯೇ ಬೇರೆ ದೇವತೆಗಳ ಬಳಿ ಯಾವುದಾದರೂ ಒಂದು ರೀತಿಯ ವರ ಸಿಗಬಹುದು. ಎಲ್ಲ ರೀತಿಯ ಪದಾರ್ಥಗಳೂ ಒಂದೇ ಕಡೆ ಸಿಗಬೇಕು ಎಂದರೆ ಸೂಪರ್ ಮಾರ್ಕೆಟ್ ಎನ್ನುವ ದೊಡ್ಡ ಸ್ಥಳಕ್ಕೆ ಹೋಗಬೇಕು. ಎಲ್ಲ ರೀತಿಯ ವರಗಳೂ ಸಿಗುವ ಸೂಪರ್ ಮಾರ್ಕೆಟ್ ಆ ಪರಮಾತ್ಮನೇ. ಯಾರು ಕೊಟ್ಟರೂ ತಮ್ಮಲ್ಲಿರುವುದರಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಕೊಡಬಲ್ಲರು. ತಮ್ಮಲ್ಲಿರುವುದಕ್ಕಿಂತ ಹೆಚ್ಚು ಕೊಡಲು ಅವರಿಗೆ ಸಾಧ್ಯವಿಲ್ಲ. ಆದರೆ ಆ ಪರಮಪುರುಷ ಹಾಗಲ್ಲ. ಅವನು ಏನನ್ನಾದರೂ ಕೊಡಬಲ್ಲ. ಬೇರೆಯವರು ಕೊಟ್ಟಿದ್ದು ಕಾಲಕ್ರಮದಲ್ಲಿ ಹಾಳಾಗಬಹುದು. ಆದರೆ ಅವನ ಬಳಿ ಹಾಗಲ್ಲ. ಕೊಟ್ಟಿದ್ದು ಅನಂತ ಕಾಲದವರೆಗೂ ಹಾಗೆಯೇ ಇರುತ್ತದೆ. ಹೆಚ್ಚೇನು ಹೇಳುವುದು? "ಸ್ವಸ್ಯ ಪದಸ್ಯ  ದಾತರಿ ಸುರೇ ನಾರಾಯಣೇ ತಿಷ್ಠತಿ" ಎನ್ನುತ್ತಾರೆ. ಕೇಳಿದರೆ ತನ್ನ ಸ್ಥಾನವನ್ನೇ ಕೊಡಲು ಹಿಂದೂ ಮುಂದೆ ನೋಡದವ ಅವನು. ಯೋಗ್ಯ ಭಕ್ತ ಅದನ್ನು ಕೇಳುವುದಿಲ್ಲ ಎನ್ನುವುದು ಬೇರೆ ಮಾತು. ಯಾರ ಮನೆಗಾದರೂ ಹೋಗಿ "ನಿಮ್ಮ ಮನೆಯನ್ನು ನನಗೆ ಕೊಟ್ಟುಬಿಡಿ. ನೀವು ಹೊರಗೆ ಹೋಗಿ" ಎಂದರೆ ಮುಂದೆ ಮಾತನಾಡದಂತೆ ನಮ್ಮನ್ನು ಆ ಕ್ಷಣ ಹೊರಗೆ ಹಾಕುತ್ತಾರೆ. ಅವನಾದರೋ ತನ್ನ ಸ್ಥಾನವನ್ನೇ ಬಿಟ್ಟುಕೊಡಲು ತಯಾರು. ಆದ್ದರಿಂದ ಅವನು ವರದ. ವರದ ಮಾತ್ರವಲ್ಲ, ವರದರಾಜ. 

ಇನ್ನು ಮೂರನೆಯ ಪ್ರಶ್ನೆ. "ನಿನ್ನನ್ನು ಕೂಗುವಂತೆ ಮಾಡು, ಮುಕುಂದ" ಎಂದು ಅವನನ್ನು ಏಕೆ ಕೇಳಬೇಕು? ನಾವೇ ಕೂಗಿದರೆ ಆಗದೇ ಎನ್ನುವ ಸಮಾಚಾರ. ಒಬ್ಬನಿಗೆ ಏನೋ ಒಂದು ಪದಾರ್ಥ ಅಥವಾ ತಿಂಡಿ-ತಿನಿಸು ಬೇಕು ಎಂದು ಎನಿಸಿತು. ತಯಾರು ಮಾಡಿಟ್ಟ. ತಯಾರು ಮಾಡಿಟ್ಟ ನಂತರ ಹಾಗೇ ಕುಳಿತಿದ್ದ. ಏಕೆ ತಿನ್ನಲಿಲ್ಲ ಎಂದು ಮತ್ತೊಬ್ಬರು ಕೇಳಿದರು. ಈಗ ತಿನ್ನುವ ಮನಸ್ಸಿಲ್ಲ ಎಂದ. ಇನ್ನೊಂದು ಸಂದರ್ಭದಲ್ಲಿ ತಟ್ಟೆಯಲ್ಲಿ ಪದಾರ್ಥ ಇದೆ. ಆದರೆ ತಿನ್ನಲು ಆಗುತ್ತಿಲ್ಲ. ಕೈ ಬಾಯಿಯವರೆಗೆ ಹೋಗುತ್ತಲೇ ಇಲ್ಲ. ನಿನ್ನೆಯವರೆಗೆ ಸರಿಯಾಗಿತ್ತು. ಇಂದು ಏಕೋ ಕೈ ಹಿಡಿದುಕೊಂಡಿದೆ ಎನ್ನುತ್ತಾನೆ. ಬಾಯಿಯಲ್ಲಿ ಹೇಗೋ ಹಾಕಿಕೊಂಡ ಮೇಲೆ ನುಂಗಲು ಆಗುತ್ತಿಲ್ಲ. ಇದೇನು ವಿಚಿತ್ರ? ಯಾವುದೂ ನಮ್ಮ ಕೈಯಲ್ಲಿ ಇಲ್ಲವಲ್ಲ? 

ಚಿಕ್ಕ ವಯಸ್ಸಿನಲ್ಲಿ ನನ್ನ ಸಮ ಯಾರಿಲ್ಲ ಎನ್ನುವ ಅಹಂಕಾರ ಮನೆ ಮಾಡಿರುತ್ತದೆ. ಕಾಲ ಕಳೆದಂತೆ, ಜೀವನದಲ್ಲಿ ಮಾಗಿದಂತೆ, ರಟ್ಟೆಯಲ್ಲಿ ಶಕ್ತಿ ಕಡಿಮೆಯಾದಂತೆ "ನಮ್ಮ ಕೈಲಿ ಏನೂ ಇಲ್ಲ" ಎನ್ನುವ ಜ್ನ್ಯಾನ ಬರುತ್ತದೆ. ಏನಾದರೂ ಮಾಡುವ ಮೊದಲು ಆ ಕಾರ್ಯ ಮಾಡಲು ಅವನು ಮನಸ್ಸು ಕೊಡಬೇಕು. ಮನಸ್ಸಿನ ನಂತರ ಆ ಕಡೆ ಕೆಲಸ ಮಾಡುವಂತೆ ಪ್ರೇರಣೆ ಕೊಡಬೇಕು. ಆ ಕೆಲಸ ಮಾಡಲು ಶಕ್ತಿ ಕೊಡಬೇಕು. ಕಡೆಗೆ ಆ ಕೆಲಸದ ಫಲವನ್ನೂ ಅವನೇ ಕೊಡಬೇಕು. ಅಂದರೆ ಯಾವುದೇ ಕಾರ್ಯ ಮಾಡಲು ಪ್ರೇರಣೆಯಿಂದ ಅದರ ಫಲ ಕೊಡುವವರೆಗೂ ಅವನನ್ನೇ ಕೇಳಬೇಕು. ಆದ್ದರಿಂದ ಪ್ರತಿದಿನ ಹೀಗೆ ಕೂಗಿ ಕರೆಯುವಂತೆ ಮಾಡು ಎಂದು ಅವನನ್ನೇ ಕೇಳುವುದು. 

*****

ನಮ್ಮಲ್ಲಿ ಒಬ್ಬ ಆಳು ಕೆಲಸ ಮಾಡಿಕೊಂಡಿದ್ದಾನೆ. ನಾವು ಹೇಳಿದಂತೆ ಅವನು ಕೇಳಬೇಕು. ಕರೆದಾಗ ಬರಬೇಕು. ಹೋಗು ಎಂದು ಹೇಳಿದಾಗ ಸುಮ್ಮನೆ ಹೋಗಬೇಕು. ಕೆಲವೊಮ್ಮೆ ಕರೆದಾಗ ಆ ಆಳೂ ಬರುವುದಿಲ್ಲ. ಅವನಿಗೆ ಕೇಳಿಸದೇ ಇರಬಹುದು. ಅಥವಾ ಬೇರೆ ಕೆಲಸದ ಮೇಲೆ ಇನ್ನೆಲ್ಲೋ ಹೋಗಿರಬಹುದು. ಅಲ್ಲೇ ಇದ್ದರೂ ಮತ್ತೆ ಮತ್ತೆ ಕರೆಯುತ್ತಾರೆ ಎಂದು ಉಪೇಕ್ಷೆಯಿಂದ ಬಾರದೆಯೂ ಇರಬಹುದು. ನಾವು ನೇಮಕ ಮಾಡಿ, ಸಂಬಳ ಕೊಟ್ಟು, ಊಳಿಗಕ್ಕಿಟ್ಟುಕೊಂಡ ಆಳು ಹೀಗೆ ಮಾಡುವಾಗ ನಾವು ಸುಮ್ಮನೆ ಒಂದು ಸಾರಿ ಕರೆದರೆ ಆ ಪರಮಾತ್ಮ ಏಕೆ ಬಂದಾನು? 

ಮಗು ಆಡುತ್ತಿದೆ. ತಾಯಿ ಅಲ್ಲಿಯೇ ಸುತ್ತಮುತ್ತ ಓಡಾಡಿಕೊಂಡಿದ್ದಾಳೆ. ಸುಮ್ಮನೆ ಮಗುವಿನ ಬಳಿ ಬರುವುದಿಲ್ಲ. ಮಗುವಿಗೆ ಅಮ್ಮ ಬೇಕು. ಮಾತು ಬರುವುದಿಲ್ಲ. ಅಳುತ್ತದೆ. ಮಗು ಅಳುತ್ತಿರುವುದು ತಾಯಿಗೆ ಗೊತ್ತು. ಸ್ವಲ್ಪ ಅತ್ತು ಸುಮ್ಮನಾಗಬಹುದು ಎಂದು ನೋಡುತ್ತಾಳೆ. ಮಗು ಸುಮ್ಮನಾದರೆ ಕೆಲಸ ಮುಗಿಯಿತು. ಇಲ್ಲ, ಮಗು ಮತ್ತಷ್ಟು ಅಳುತ್ತದೆ. ಅಳಲಿ ಎಂದು ತಾಯಿ ಸುಮ್ಮನಿರುತ್ತದೆ. "ಬಾಲಾನಾಂ ರೋದನಂ ಬಲಂ" ಎಂದು ಅವಳಿಗೆ ಗೊತ್ತು. ಅಷ್ಟು ಚಿಕ್ಕ ಮಗುವಿಗೆ ಅಳುವೇ ವ್ಯಾಯಾಮ. ಮಗು ಮತ್ತಷ್ಟು ಅತ್ತು ರಚ್ಚೆ ಹಿಡಿಯುತ್ತದೆ. ಆಗ ಅಮ್ಮ ಬಂದು ಮಗುವನ್ನು ಎತ್ತಿಕೊಳ್ಳುತ್ತಾಳೆ. 

ಪರಮಾತ್ಮನೂ ಹಾಗೆಯೇ. ಒಮ್ಮೆ ಕರೆದರೆ ಅವನು ಬರುವುದಿಲ್ಲ. ಮತ್ತೆ ಮತ್ತೆ ಕರೆದರೂ ಬರುವುದಿಲ್ಲ. ಭಕ್ತ ರಚ್ಚೆ ಹಿಡಿಯಬೇಕು. ಚಂಡಿ ಹಿಡಿಯಬೇಕು. ಉತ್ತರ ಕರ್ನಾಟಕದ ಭಾಷೆಯಲ್ಲಿ ಹೇಳುವುದಾದರೆ "ಒಂದೇ ಸಮನೆ ಹೊಯ್ಕೊಳಲಿಕ್ಕೆ ಹತ್ಯಾನೆ" ಎನ್ನುವ ಮಟ್ಟದವರೆಗೆ ಹೋಗಬೇಕು. ಇದು ಒಂದು ದಿನದ ಕಥೆಯಲ್ಲ. ದಿನಂಪ್ರತಿ ನಡೆಯಬೇಕು. ಹಾಗೆ ಭಕ್ತ ಚಂಡಿ ಹಿಡಿದಾಗ ಎಂದೋ ಒಮ್ಮೆ ಪರಮಾತ್ಮ ಬರುತ್ತಾನೆ. ಅದಕ್ಕೇ "ಆಲಾಪಿನಂ ಪ್ರತಿದಿನಂ ಕುರು ಮೇ ಮುಕುಂದ" ಎನ್ನುತ್ತಾರೆ. 

*****

ಕುಲಶೇಖರರು ಮಹಾನುಭಾವರು. ಕೇರಳದ ಚೇರ ವಂಶದ ರಾಜರಾಗಿದ್ದವರು. ಜೀವನದಲ್ಲಿ ತಕ್ಕಮಟ್ಟಿಗೆ ಸುಖ-ಸಾಧನಗಳು ಇದ್ದವರೇ ಲೌಕಿಕದಲ್ಲಿ ಮೈಮರೆತು ಸುಖ-ಭೋಗಗಳಲ್ಲಿ ಮುಳುಗಿ ಹೋಗುತ್ತಾರೆ. ಆದರೆ ಕುಲಶೇಖರ ಅಲ್ವಾರ್ ಅಂತಹ ಸ್ಥಿತಿಯಲ್ಲಿಯೂ ಭಕ್ತಿಯ ಪರಾಕಾಷ್ಠತೆ ಮುಟ್ಟಿದ ದೈವ ಭಕ್ತರು. "ಘುಷ್ಯತೇ ಯಸ್ಯ ನಗರೇ ರಂಗಯಾತ್ರಾ ದಿನೇ ದಿನೇ, ತಮಹಂ ಶಿರಸಾ ವಂದೇ ರಾಜಾನಂ ಕುಲಶೇಕರಮ್" ಎಂದು ಮೊದಲು ಅವರ ಸ್ಮರಣೆ ಮಾಡಿಯೇ ಮುಕುಂದಮಾಲಾ ಸ್ತೋತ್ರವನ್ನು ಪಾರಾಯಣ ಮಾಡುತ್ತಾರೆ. 

ಅಂತಹ ಪಕ್ವ ಮನಸ್ಸಿನ ಆಲ್ವಾರರ ಕೃತಿಯ ಸಕ್ಕರೆಯನ್ನು ನಾವೇನು ಬಲ್ಲೆವು? ಕುಲಶೇಖರರು ಈ ಕಲ್ಲುಸಕ್ಕರೆಯ ಹಾರ ತಯಾರಿಸಿದವರು. ಅದರಲ್ಲೇ ಲೀನವಾದವರು. ಅವರ ಅನುಭವದ ಆಳ-ಅಗಲ ಎಷ್ಟಿರಬೇಡ?

ಶ್ರೀವೈಷ್ಣವ ಸಿದ್ಧಾಂತವನ್ನು ಕ್ರಮವಾಗಿ ಅಭ್ಯಾಸ ಮಾಡಿದ, ಶರಣಾಗತಿಯ ಪರಮ ರಹಸ್ಯವನ್ನು ಬಲ್ಲವರಿಗೆ ಈ ಕಲ್ಲು ಸಕ್ಕರೆಯ ಸರದ ನಿಜವಾದ ಪರಿಚಯ ಚೆನ್ನಾಗಿ ಆದೀತು. "ಪಂಡಿತರಾಜ" ಎಂದು ಕರೆಸಿಕೊಂಡ ಏನ್. ಟಿ. ಶ್ರೀನಿವಾಸ ಐಯ್ಯಂಗಾರ್ಯರು ಅಥವಾ ನಮ್ಮ ಊರಿನವರು (ಕನಕಪುರದವರು) ಎಂದು ನಾವು ಹೆಮ್ಮೆ ಪಡುವ ಕೆ. ಎಸ್ . ನಾರಾಯಣಾಚಾರ್ಯರು ಮುಂತಾದ ವಿದ್ವನ್ಮಣಿಗಳು ನೀಡುತ್ತಿದ್ದ ಉಪನ್ಯಾಸಗಳ ಮೂಲಕ ನಮಗೆ ಅಲ್ಪ ಸ್ವಲ್ಪ ಪರಿಚಯ. ಐವತ್ತು-ಅರವತ್ತು ವರುಷಗಳ ಹಿಂದೆ ಅವರು ನಡೆಸಿದ ಉಪನ್ಯಾಸಗಳು ಈಗಲೂ ಚಿತ್ತದಲ್ಲಿ ಗುಯ್ಗುಡುತ್ತವೆ. 

ಈ ಹಾದಿಯ ಪರಿಚಯವಿದ್ದವರಿಗೆ ಕಲ್ಲು ಸಕ್ಕರೆಯನ್ನು ಪದರ-ಪದರವಾಗಿ ನಿಧಾನವಾಗಿ ಸವಿಯುವ ಅವಕಾಶ! 

8 comments:

  1. Erudite and appealing.

    ReplyDelete
  2. ನಿಮ್ಮ ಲೇಖನ ಕಲ್ಲು ಸಕ್ಕರೆ ಸವಿದಷ್ಟೇ ಚೆನ್ನಾಗಿದೆ

    ReplyDelete
  3. Dr Rao was a great personality scholar in scholar in Sanskrit and English who has highlighted Mahabharata in his own unique style to enrich readers to relish his writing

    ReplyDelete
  4. ಪರಮಾತ್ಮ ತನ್ನ ಸ್ಥಾನವನ್ನೇ ಬಿಟ್ಟುಕೊಡಲು ತಯಾರು ಎಂಬುದನ್ನು ಸಂತ ತ್ಯಾಗರಾಜರು ತಮ್ಮ ಸರಸ ಸಾಮ ದಾನ ಭೇದ ದಂಡ ಚತುರ ಎಂಬ ಕೀರ್ತನೆ ಯಲ್ಲಿ ಹೇಳಿದ್ದಾರೆ.ರಾವಣನಿಗೆ ಸಾಮೋಪಾಯದಲ್ಲಿ ಹಿತವಚನ ಹೇಳುತ್ತಾನೆ. ದಾನೋಪಾಯ ದಲ್ಲಿ ಸ್ವಸ್ಥಾನವಾದ ಅಯೋಧ್ಯೆ ಯನ್ನೇ ಕೊಡುತ್ತೇನೆ ಎನ್ನುವನು. ಭೇದೋಪಾಯವಾಗಿ ತಮ್ಮನಾದ ವಿಭೀಷಣನನ್ನು ರಾಜನನ್ನಾಗಿ ಮಾಡುವನು. ಯಾವುದಕ್ಕೂ ಬಗ್ಗದ ರಾವಣನನ್ನು ವಿಧಿಯಿಲ್ಲದೆ ದಂಡೋಪಾಯ ಪ್ರಯೋಗಿಸಿ ಕೊಲ್ಲ ಬೇಕಾಯಿತು!
    ಕುಲಶೇಖರ ಆಳ್ವಾರ್ ಅವರೂ ಪರಮಾತ್ಮನನ್ನು ಅರಿತ ಮಹಾತ್ಮ ರಲ್ಲವೇ?
    ಎಂದರೋ ಮಹಾನುಭಾವುಲು ಅಂದರಿಕಿ ವಂದನ ಮುಲು!
    ತೇನವಿನಾ ತೃಣಾಮಪಿ ನ ಚಲತಿ ಲೇಖನಕ್ಕೆ ವಂದನೆಗಳು

    ReplyDelete
  5. Yes. Mukundha Mala is a beautiful Mala.
    Your article is Great!!

    ReplyDelete
  6. ಲೇಖನ ತುಂಬಾ ಸವಿಯಾಗಿದೆ. ಕಲ್ಲು ಸಕ್ಕರೆ ಚಪ್ಪರಿಸಿ ತಿಂದಂತಾಯಿತು.

    ReplyDelete