Monday, January 20, 2025

ಶ್ರೀಕೃಷ್ಣನ ಕುದುರೆಗಳ "ಓವರ್ ಟೈಮ್" ಪ್ರಸಂಗ


ಕೆಲಸ, ಕೆಲಸ, ಕೆಲಸ. ಬಿಡುವಿಲ್ಲದ ಕೆಲಸ. ಸಾಕಪ್ಪಾ, ಸಾಕು ಎನ್ನುವಷ್ಟು ಕೆಲಸ. ಇನ್ನು ಮಾಡಲಾರೆನಪ್ಪಾ ಎನ್ನುವಷ್ಟು ಕೆಲಸ. ಬಿಡುವು ಸಿಕ್ಕಿದರೆ ಸಾಕಪ್ಪಾ ಎನ್ನಿಸುವಷ್ಟು ಕೆಲಸ. ಹಗಲು ರಾತ್ರಿ ಕೆಲಸ. ಮಾಡಿದಷ್ಟೂ ಬೆಳೆಯುತ್ತಿರುವ ಕೆಲಸ. ಇದು ಮುಗಿಯಲಾರದ ಕೆಲಸ ಎನ್ನಿಸುವಷ್ಟು ಕೆಲಸ. ಈ ಕೆಲಸ ಯಾಕಪ್ಪ ಹಿಡಿದೆ ಎನ್ನಿಸುವಂಥ ಕೆಲಸ. ಕಡೆಗೆ ಎಂದು ಮುಗಿದೀತು ಎಂದು ಕಾಯುತ್ತಾ  ಮಾಡುತ್ತಿರುವ ಕೆಲಸ!

ಒಬ್ಬರ ಮೇಲೆ ಒಬ್ಬರು ಬಿದ್ದು, ಹಠ ಹಿಡಿದು ಗಿಟ್ಟಿಸಿದ ಕೆಲಸ. ಈ ಕೆಲಸ ಬಿಟ್ಟರೆ ನಮ್ಮ ಸರೀಕರಿಗಿಂತ ನಾವು ಹಿಂದೆ ಬೀಳುತ್ತೇವೆನ್ನುವ ಭಯ. ಒಮ್ಮೆ ಹಿಂದೆ ಬಿದ್ದರೆ ಆಯಿತು. ಎಂದೆಂದೂ ಹಿಂದೆಯೇ ಉಳಿಯುತ್ತೇವೆ ಎನ್ನುವ ದಿಗಿಲು. ಹೋದ ವರುಷ ಮಾಡಿದ ಸಂಪಾದನೆಗಿಂತ ಈ ವರ್ಷ ಸ್ವಲ್ಪವಾದರೂ ಹೆಚ್ಚು ಸಂಪಾದನೆ ಮಾಡಲೇಬೇಕಾದ ಅನಿವಾರ್ಯತೆ. ಈ ವೇಗವಾಗಿ ಓಡುತ್ತಿರುವ ಪ್ರಪಂಚದಲ್ಲಿ ನಮ್ಮ ಪ್ರತಿಸ್ಪರ್ಧಿಗಳಿಗಿಂತ ಮುಂದಿರಲೇಬೇಕಾದ ಅವಶ್ಯಕತೆ. ಹಾಗಾಗಿ ಹೇಗಾದರೂ ಮಾಡಿ ಕೆಲಸ ಸಂಪಾದಿಸುವುದು ಮೊದಲ ಕೆಲಸ. ನಂತರ ಸಾಧ್ಯವಾದಷ್ಟೂ ಖರ್ಚು ಕಡಿಮೆಮಾಡಿ, ಆದಷ್ಟೂ ಬೇಗ ಕೆಲಸ ಮುಗಿಸಿ, ಗ್ರಾಹಕರ ಪ್ರೀತಿ ಸಂಪಾದಿಸಿ, ಹಣ ಗಳಿಸಿ, ಮತ್ತಷ್ಟು ಕೆಲಸ ಗಿಟ್ಟಿಸಬೇಕಾದ ಪರಿಸ್ಥಿತಿ. 

ಇದು ಇಂದಿನ ಜಗತ್ತಿನಲ್ಲಿ ಎಲ್ಲ ವಾಣಿಜ್ಯ ಘಟಕಗಳ ಪರಿಸ್ಥಿತಿ. ಮಾರಾಟ ವಿಭಾಗದವರಿಗೆ (ಸೇಲ್ಸ್  ಟೀಮ್) ಏನಾದರೂ ಮಾಡಿ ಆದೇಶ (ಆರ್ಡರ್) ತರಬೇಕಾದ ಅವಶ್ಯಕತೆ. ಅಲ್ಲಿಗೆ ಅವರ ಕೆಲಸ ಮುಗಿಯಿತು. ನಂತರದ ಸರದಿ ತಯಾರು ಮಾಡುವ (ಮ್ಯಾನುಫ್ಯಾಕ್ಟರಿಂಗ್ ಅಥವಾ ಪ್ರೊಡಕ್ಷನ್) ತಂಡದ ಹಣೆಬರಹ. ಒಪ್ಪಿಕೊಂಡ ಅವಧಿಯಲ್ಲಿ ಸರಿಯಾದ ಪದಾರ್ಥ ಅಥವಾ ತಲುಪಿಸಬೇಕಾದ ವಿಷಯವನ್ನು ಗ್ರಾಹಕನಿಗೆ ತಲುಪಿಸಬೇಕು. ಅದು ಅವರ ಜವಾಬ್ದಾರಿ. ಹಣಕಾಸಿನ ಖಾತೆಯವರಿಗೆ ಗೊತ್ತಾದ ಹಣ ಬರಬೇಕು. ಇವರೆಲ್ಲರ ಮೇಲಿನ ಯಜಮಾನರಿಗೆ ದೊಡ್ಡ ಮೊತ್ತದ ಲಾಭ ಬಂದರೆ ಸರಿ. ಎಲ್ಲ ಸರಿಯಾಗಿ ಆದಂತೆ ಆಯಿತು.. 

ಇದರ ಮಧ್ಯೆ ದುಡಿಯುವವರ ಕಥೆ ಏನು? ಒಪ್ಪಿಕೊಂಡವರು ಒಬ್ಬರು. ಬೇಕು ಎಂದು ತಗಾದೆ ಮಾಡುವವರು ಇನ್ನೊಬ್ಬರು. ಇವೆರಡನ್ನು ಹೊಂದಿಸಿ ಮಾಡಿಕೊಡಬೇಕಾದವರು ಕೆಲಸಗಾರರು. ಅವರನ್ನು ನೋಡುವವರು ಯಾರು? ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕು? ವಾರಕ್ಕೆ ಎಷ್ಟು ಗಂಟೆ ಕೆಲಸ? ಸಂಪನ್ಮೂಲದ ಸ್ಥಿತಿ ಏನು? ಅವರ ಕಷ್ಟ ಕೇಳುವವರು ಯಾರು? ಇದೊಂದು ಯಕ್ಷ ಪ್ರಶ್ನೆ. 

ಈಗ ಕೆಲವು ತಿಂಗಳುಗಳಿಂದ ಇದರ ಚರ್ಚೆ ಬಹಳ ನಡೆಯುತ್ತಿದೆ. ವಾರಕ್ಕೆ ಎಪ್ಪತ್ತು ಗಂಟೆ ಕೆಲಸ ಮಾಡಬೇಕೆಂದು ಒಬ್ಬರು. ತೊಂಬತ್ತು ಗಂಟೆ ಕೆಲಸ ಮಾಡಬೇಕು  ಎಂದು ಇನ್ನೊಬ್ಬರು. "ಭಾನುವಾರ ಮನೆಯಲ್ಲಿ ಕುಳಿತುಕೊಂಡು ಏನು ಮಾಡುತ್ತೀರಿ? ಹೆಂಡತಿಯ ಮುಖ ಎಷ್ಟು ನೋಡುತ್ತೀರಿ? ಅಂದೂ ಕೆಲಸ ಮಾಡಿದರೆ ಒಳ್ಳೆಯದಲ್ಲವೇ?"  ಎಂದು ಇನ್ನೊಬ್ಬರು. "ಗಂಟೆಯ ಲೆಕ್ಕ ಬೇಡ. ಒಟ್ಟಿನಲ್ಲಿ ನಾವು ಹೇಳಿದ ಕೆಲಸ ಮಾಡಿ ಕೊಡಿ" ಎಂದು ಮತ್ತೊಬ್ಬರು. ಇದರ ಬಗ್ಗೆ ಹೆಚ್ಚು ತಿಳೀತಲೂ ಇಲ್ಲಿ ಕ್ಲಿಕ್ ಮಾಡಿ. ಒಟ್ಟಿನಲ್ಲಿ ದುಡಿಯುವವರ ಪರಿಸ್ಥಿತಿ ಕೇಳುವವರು ಯಾರು?

ಇದು ಇಂದು ನಿನ್ನೆಯ ಸಮಾಚಾರವಲ್ಲ. ಮಹಾಭಾರತದ ಕಾಲದಿಂದಲೂ ಇದ್ದದ್ದೇ! ಅದರ ಹಿಂದೆಯೂ ಇದ್ದಿರಬೇಕು. ಕುರುಕ್ಷೇತ್ರ ಯುದ್ಧದ ಹದಿನಾಲ್ಕನೆಯ ದಿನ ಇಂಥದೇ ಪ್ರಸಂಗ ನಡೆದದ್ದು ಚೆನ್ನಾಗಿ ವರ್ಣಿತವಾಗಿದೆ ಅಲ್ಲಿ. ಅರ್ಜುನ ಮಾಡಿದ್ದು ಈಗಿನ ಆಡಳಿತಗಾರರು ಮಾಡುವ ಕೆಲಸವೇ. ಶ್ರೀಕೃಷ್ಣ ಆಗ ಏನು ಮಾಡಿದ? ಅದರ ವಿವರ ಸ್ವಲ್ಪ ನೋಡೋಣ. 
*****

ಕುರುಕ್ಷೇತ್ರ ಯುದ್ಧ ಪ್ರಾರಂಭವಾಯಿತು. ಒಂದು ಕಡೆ ಭೀಷ್ಮರ ಸೇನಾಧಿಪತ್ಯದಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯ. ಮತ್ತೊಂದೆಡೆ ದೃಷ್ಟದ್ಯುಮ್ನನ ಸೇನಾಧಿಪತ್ಯದಲ್ಲಿ ಏಳು ಅಕ್ಷೋಹಿಣಿ ಸೈನ್ಯ. ಭೀಷ್ಮರು ಹಾಕಿಟ್ಟ ಧರ್ಮ ಯುದ್ಧದ ಕರಾರುಗಳಿಗೆ ಎರಡೂ ಕಡೆಯ ಮುಖಂಡರು ಒಪ್ಪಿದರು. ಕರ್ಣ ಭೀಷ್ಮರ ನೇತೃತ್ವದಲ್ಲಿ ಯುದ್ಧದಿಂದ ಹೊರಗುಳಿದ. ಹತ್ತು ದಿನ ಭೀಷ್ಮರು ಘೋರ ಯುದ್ಧ ಮಾಡಿ ಕಡೆಗೆ ಶರಶಯ್ಯೆಯಲ್ಲಿ ಮಲಗಿದರು. ದ್ರೋಣಾಚಾರ್ಯರು ಸೇನೆಯ ನೇತೃತ್ವ ವಹಿಸಿದರು. ಕರ್ಣ ಯುದ್ಧದಲ್ಲಿ ಭಾಗವಹಿಸಲು ಬಂದು ಸೇರಿದ. 

ದುರ್ಯೋಧನಿಗೆ ಭೀಷ್ಮರು ಪಾಂಡವ ಪಕ್ಷಪಾತಿಗಳೆಂದು ಕೋಪವಿತ್ತು. ಅವರ ಕಾಲ ಕಳೆಯಿತು. ಈಗ ಗುರು ದ್ರೋಣರು. ಅವರೂ ಪಾಂಡವ ಪಕ್ಷಪಾತಿಗಳೇ! ಹನ್ನೊಂದನೆಯ ದಿನ ಯುದ್ಧ ಮುಗಿದ ಮೇಲೆ ದುರ್ಯೋಧನ ಅವರ ಬಳಿ ಬಂದು ಗೋಳಾಡಿದ. "ಚಿಂತೆಬೇಡ. ನಾಳೆ ಯುಧಿಷ್ಠಿರನನ್ನು ಸೆರೆ ಹಿಡಿದು ಕೊಡುತ್ತೇನೆ. ಅಲ್ಲಿಗೆ ಯುದ್ಧ ಮುಗಿದಹಾಗೆಯೇ" ಎಂದರು ಗುರುಗಳು. ಹನ್ನೆರಡನೆಯ ದಿನದ ಯುದ್ಧ ಹಾಗೆಯೇ ನಡೆಯಿತು. ಇನ್ನೇನು ಧರ್ಮರಾಯ ಸೆರೆ ಸಿಕ್ಕ ಅನ್ನುವಷ್ಟರಲ್ಲಿ ಕೃಷ್ಣಾರ್ಜುನರು ಬಂದರು. ಅರ್ಜುನ ಅಣ್ಣನನ್ನು ಸುರಕ್ಷಿತವಾಗಿ ಸೆಳೆದುಕೊಂಡು ಹೋದ. ಮತ್ತೆ ಸಂಜೆ ದುರ್ಯೋಧನನು ಗುರುಗಳನ್ನು ಆಕ್ಷೇಪಿಸಿದ. "ಅರ್ಜುನನು ಹತ್ತಿರ ಇರುವವರೆಗೆ ಇದು ಆಗದ ಕೆಲಸ. ಹೇಗಾದರೂ ಮಾಡಿ ಅವನನ್ನು ಯುದ್ಧರಂಗದ ಬೇರೆಡೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡು. ಆಗ ಚಕ್ರವ್ಯೂಹ ರಚಿಸಿ ಧರ್ಮರಾಯನನ್ನು ಬಂದಿ ಮಾಡುತ್ತೇನೆ" ಅಂದರು ಅವರು. ದುರ್ಯೋಧನ ಸುಶರ್ಮಾದಿ ಸಂಶಪ್ತಕರನ್ನು ಒಪ್ಪಿಸಿ ಮಾರನೆಯ ದಿನ ಅರ್ಜುನನನ್ನು ಬೇರೆಡೆ ಯುದ್ಧಕ್ಕೆ ಕರೆದುಕೊಂಡು ಹೋಗುವ ಹಾಗೆ ಮಾಡಿದ.  ಹಾಗೆಯೇ ನಡೆಯಿತು. 

ಹದಿಮೂರನೆಯ ದಿನ ದ್ರೋಣಾಚಾರ್ಯರ ಚಕ್ರವ್ಯೂಹ. ವ್ಯೂಹ ಭೇದಿಸಲು ಪಾಂಡವರ ಕಡೆ ಅರ್ಜುನನನ್ನು ಬಿಟ್ಟು ಬೇರೆ ಯಾರಿಗೂ ಬರದು. ವಿಧಿಯಿಲ್ಲದೆ ಪಾಂಡವರು ಅಭಿಮನ್ಯುವನ್ನು ಮುಂದೆ ಮಾಡಿದರು. ಅಭಿಮನ್ಯು ಭೇದಿಸಿದ ದಾರಿಯಲ್ಲಿ ಮತ್ತೆಲ್ಲರೂ ನುಗ್ಗಿ ಹೊಡೆಯುವುದು ಎಂದು ತೀರ್ಮಾನವಾಯಿತು. ಆದರೆ ಒಂದು ದಿನದ ಮಟ್ಟಿಗೆ ಅರ್ಜುನನ್ನು ಹೊರೆತುಪಡಿಸಿ ಮಿಕ್ಕ ಪಾಂಡವರನ್ನು ತಡೆಯಯುವ ಪರಶಿವನ ವರವನ್ನು ಜಯದ್ರಥ ಬಳೆಸಿಕೊಂಡ. ಅವರನ್ನು ತಡೆದು ನಿಲ್ಲಿಸಿದ. ವ್ಯೂಹದ ಒಳಗೆ ನುಗ್ಗಿದ ಅಭಿಮನ್ಯು ಹೊರಗೆ ಬರಲಾರದೆ ಸಿಕ್ಕಿ ಹಾಕಿಕೊಂಡ. ಅವನ ಪ್ರತಾಪ ತಡಿಯಲಾರದೆ ಆರು ಮಂದಿ ಮಹಾರಥಿಗಳು ಸುತ್ತುವರಿದು, ಯುದ್ಧದ ಎಲ್ಲ ಕರಾರುಗಳನ್ನು ಧಿಕ್ಕರಿಸಿ ಅಭಿಮನ್ಯುವನ್ನು ಕೊಂದರು. 

*****

ಇತ್ತ ಸುಶರ್ಮಾದಿಗಳನ್ನು ಹದಿಮೂರನೆಯ ದಿನದ ಯುದ್ಧದಲ್ಲಿ ಮುಗಿಸಿ ಅರ್ಜುನ ಶ್ರೀಕೃಷ್ಣನೊಡನೆ ಶಿಬಿರಕ್ಕೆ ಹಿಂದಿರುಗಿದ. ಪ್ರತಿದಿನ ಸಂಜೆ ಕೃಷ್ಣಾರ್ಜುನರು ಯುದ್ಧದಿಂದ ಹಿಂದಿರುಗಿ ಬಂದ ತಕ್ಷಣ ಅವನನ್ನು ಮೊದಲು ಎದುರುಗೊಳ್ಳುತ್ತಿದ್ದವನು ಅಭಿಮನ್ಯುವೇ. ಇಂದು ಅವನು ಅಪ್ಪನನ್ನು ಎದುರುಗೊಳ್ಳಲು ಬರಲೇ ಇಲ್ಲ. ಇಡೀ ಶಿಬಿರವೇ ಹಾಳು ಸುರಿಯುತ್ತಿದೆ. ಸ್ಮಶಾನ ಮೌನ. ಶಿಬಿರದ ಒಳಗೆ ಹೋದರೆ ಅಣ್ಣ ತಮ್ಮಂದಿರು ತಲೆ ಕೆಳಗೆ ಹಾಕಿ ಕುಳಿತಿದ್ದಾರೆ. ಯಾರೂ ಮಾತಾಡುತ್ತಿಲ್ಲ. ಕೇಳಿದ ಪ್ರಶ್ನೆಗಳಿಗೆ ಉತ್ತರವಿಲ್ಲ. ಕಡೆಗೆ ನಿಧಾನವಾಗಿ ಅಭಿಮನ್ಯುವಿನ ಸಾವಿನ ವಿವರ ತಿಳಿಯಿತು. ಶ್ರೀಕೃಷ್ಣನ ಗೀತೋಪದೇಶವೂ ಪೂರ್ಣವಾಗಿ ಮಾಡದ ಕೆಲಸ ಮಗನ ಸಾವು ಮಾಡಿತು. ಗುರು ದ್ರೋಣಾಚಾರ್ಯರ ಮೇಲೆ ಮನಸ್ಸಿಟ್ಟು ಯುದ್ಧ ಮಾಡಲು ಹಿಂಜರಿಯುತ್ತಿದ್ದ ಅರ್ಜುನನಿಗೆ ರೋಷ ಉಕ್ಕಿ ಬಂತು. ಜಯದ್ರಥನ ಪಾತ್ರ ಕೇಳಿ ತಡೆಯಲಾಗದ ಕೋಪ ಆವರಿಸಿತು. "ನಾಳೆ ಸಂಜೆ ಸೂರ್ಯಾಸ್ತದ ಒಳಗೆ ಜಯದ್ರಥನ ತಲೆ ತೆಗೆಯುತ್ತೇನೆ! ಇದು ಆಗದಿದ್ದರೆ ನಾನೇ ಬೆಂಕಿಯಲ್ಲಿ ಬಿದ್ದು ಸಾಯುತ್ತೇನೆ. ಇದು ನನ್ನ ಪ್ರತಿಜ್ಞೆ" ಎಂದು ಘೋಷಿಸಿದ. 

ಪಾರ್ಥನ ಪ್ರತಿಜ್ಞೆಯ ಸುದ್ದಿ ಕೌರವರ ಪಾಳೆಯಕ್ಕೆ ತಲುಪಿತು. ಸಿಂಧುರಾಜ ಜಯದ್ರಥ ನೂರು ಮಂದಿ ಕೌರವರ ತಂಗಿ ದುಃಶಲೆಯ ಪತಿ. ಅವನು ಬಹಳ ಎತ್ತರದ ಆಳು. ಜಯದ್ರಥ ಸಿಂಧುರಾಜ ಆದದ್ದರಿಂದ ಸೈ೦ಧವ ಎಂದೂ ಕರೆಸಿಕೊಳ್ಳುತ್ತಿದ್ದ. (ಅದಕ್ಕೆ ಎತ್ತರದ ವ್ಯಕ್ತಿಗಳನ್ನು ಸೈ೦ಧವ ಎಂದು ಕರೆಯುವ ರೀತಿ ಬಂತು). "ನಾಳೆ ಸಂಜೆವರೆಗೆ ಜಯದ್ರಥನನ್ನು ಕಾಪಾಡಿದರೆ ಅರ್ಜುನ ಬದುಕಿರಲಾರ. ಅಲ್ಲಿಗೆ ಯುದ್ಧ ಮುಗಿದಂತೆಯೇ. ಎಲ್ಲ ಕೌರವ ಸೈನ್ಯದ ವೀರರಿಗೂ ನಾಳೆ ಒಂದೇ ಕೆಲಸ. ಹೇಗಾದರೂ ಮಾಡಿ ನಾಳೆ ಸೂರ್ಯ ಮುಳುಗುವವರೆಗೆ ಅರ್ಜುನನನ್ನು ಜಯದ್ರಥನ ಬಳಿ ಬರದಂತೆ ತಡೆಯಬೇಕು. ಇದೇ ನಮ್ಮ ಗುರಿ" ಎಂದರು. ಹದಿನಾಲ್ಕನೆಯ ದಿನ ಯುದ್ಧ ಆರಂಭವಾಯಿತು. ಯುದ್ಧರಂಗದ ಮಧ್ಯದಲ್ಲಿ ಒಂದು ಹೊಂಡ (ಗುಂಡಿ) ಮಾಡಿ ಅದರಲ್ಲಿ ಅವನನ್ನು ನಿಲ್ಲಿಸಿದರು. ಸುತ್ತ ಬೇರೆ ವೀರರು ಸೇರಿದರು.

ಅರ್ಜುನನಿಗೆ ಒಂದೇ ಗುರಿ. ಜಯದ್ರಥನ ತಲೆ. ಆದರೆ ಅವನು ಕಾಣಲೊಲ್ಲ. ಕೃಷ್ಣನಿಗೆ ರಥ ಬೇಗ ಓಡಿಸುವಂತೆ ಮತ್ತೆ ಮತ್ತೆ ಹೇಳಿದ. ಎಲ್ಲಿ ರಥ ಹೋದರೂ ಕೌರವ ವೀರರು. ಒಬ್ಬರ ನಂತರ ಇನ್ನೊಬ್ಬರು. ಸಂಜೆಯಾಗುತ್ತಾ ಬಂತು. ಪಾರ್ಥನಿಗೋ ಉಗ್ರ ಕೋಪ ಮತ್ತು ತೀರದ ಆತುರ. ಆದರೆ ಜಯದ್ರಥ ಎಲ್ಲಿಯೂ ಕಾಣನು. ಮಧ್ಯಾಹ್ನವಾದ ನಂತರ ಒಂದು ಕಡೆ ರಥ ನಿಂತಿತು. "ಕೃಷ್ಣಾ, ಇದೇನಿದು? ರಥ ಮುಂದೆ ಓಡಿಸು. ಸೂರ್ಯಾಸ್ತ ಆಗುವ ಮುಂಚೆ ಕೆಲಸವಾಗಬೇಕು. ನನ್ನ ಪ್ರತಿಜ್ಞೆ ಮರೆತೆಯಾ? ಹೀಗೇಕೆ?" ಎಂದು ಕೇಳಿದ. 

ಶ್ರೀಕೃಷ್ಣ ನಕ್ಕ. "ಅರ್ಜುನಾ, ಪ್ರತಿಜ್ಞೆ ಮಾಡಿದವನು ನೀನು. ಆತುರ ನಿನಗೆ. ಸೂರ್ಯನಿಗೂ ಅದಕ್ಕೂ ಸಂಬಂಧವಿಲ್ಲ. ಅವನ ಕೆಲಸ ಅವನು ಮಾಡುತ್ತಿದ್ದಾನೆ. ಯಾವಾಗಲೂ ಏನು ಮಾಡಬೇಕಾದರೂ ನನ್ನನ್ನು ಕೇಳಿ ಮಾಡುವ ನೀನು ನನ್ನನ್ನೂ ಕೇಳದೆ ಈ ಪ್ರತಿಜ್ಞೆ ಮಾಡಿದೆ. ಯುದ್ಧ ಗೆದ್ದರೆ ನಿಮ್ಮಣ್ಣ ಚಕ್ರವರ್ತಿ ಆಗುತ್ತಾನೆ. ನಿಮಗೆ ರಾಜ್ಯ ಸಿಗುತ್ತದೆ. ಈ ಕುದುರಗಳಿಗೆ ಏನು ಸಿಗುತ್ತದೆ? ಅದೇ ಹುಲ್ಲು. ಅದೇ ಹುರಳಿ. ಅದೇ ನೀರು! ನಿನ್ನ ಪ್ರತಿಜ್ಞೆಗೆ ಇವು ಹೊಣೆಯೇ? ಈ ಕುದುರೆಗಳನ್ನು ನೋಡು. ಯುದ್ಧ ಪ್ರಾಂಭವಾಗಿ ಇಂದಿಗೆ ಹದಿನಾಲ್ಕು ದಿನಗಳು ಆಯಿತು. ಇವುಗಳ ಜೊತೆ ಯುದ್ಧಕ್ಕೆ ಬಂದ ಅನೇಕ ಕುದುರೆಗಳು ಎಂದೋ ಸಾವಿಗೀಡಾದುವು. ಕೆಲವು ಗಾಯಗೊಂಡಿವೆ. ಈ ರಥವಾದರೋ ಅಗ್ನಿ ದೇವನು ನಮಗೆ ಖಾಂಡವ ವನ ದಹನ ಕಾಲದಲ್ಲಿ ಕೊಟ್ಟಿದ್ದು. ಈ ಗಾಂಡೀವವೂ ಅಷ್ಟೇ. ನನ್ನ ಚಾಕಚಕ್ಯತೆಯಿಂದ ಮತ್ತು ಗಾಂಡೀವಧಾರಿಯಾದ ನಿನ್ನ ಕೈಚಳಕದಿಂದ ಇವು ಇನ್ನೂ ಬದುಕುಳಿದಿವೆ. ಈ ದಿನ ಬೆಳಗಿನಿಂದ ನಿನ್ನ ಆತುರಕ್ಕೆ ಅವು ಒಂದೇ ಸಮನೆ ಓಡಿ ದಣಿದಿವೆ. ಒಂದು ದಿನದ ಯುದ್ಧ ಕಾಲದಲ್ಲಿ ಎಷ್ಟು ಓಡಬೇಕೋ ಅದು ಯಾವಾಗಲೋ ಮೀರಿತು. ಈಗ ಸಮಯ ಮೀರಿದ ಓಟ (ಓವರ್ ಟೈಮ್ ಓಟ!). ಅವು ದಣಿದು ಬಾಯಾರಿ ನಿಂತಿವೆ. ಇನ್ನು ಓಡಲಾರವು. ಮೊದಲು ಅವುಗಳಿಗೆ ಒಂದಷ್ಟು ನೀರು ಕುಡಿಸು. ನಂತರ ಮುಂದಿನ ಮಾತು" ಅಂದನು ಶ್ರೀಕೃಷ್ಣ. 

"ಈ ಯುದ್ಧಭೂಮಿಯಲ್ಲಿ ನೀರು ಎಲ್ಲಿ ಬರಬೇಕು? ಹೇಗೆ ತರಲಿ?" ಎಂದ ಅರ್ಜುನ. "ನನಗೆ ಗೊತ್ತು. ಅದಕ್ಕೇ ರಥವನ್ನು ಒಂದೇ ಕಡೆ ತಿರುಗಿಸಿ ಧೂಳಿನಿಂದ ಮುಚ್ಚಿದ್ದೇನೆ. ನಾವು ಈ ಧೂಳಿನ ಮಧ್ಯೆ ಇರುವುದು ಯಾರಿಗೂ ಕಾಣದು. ಇಲ್ಲಿ ನೋಡು. ಈ ಜಾಗದಲ್ಲಿ ಭೂಮಿಯಲ್ಲಿ ಜಲವಿದೆ. ನಿನ್ನ ಬಾಣದಿಂದ ನೆಲವನ್ನು ಭೇದಿಸು. ತಂಪು ನೀರಿನ ಕೊಳ ನಿರ್ಮಾಣ ಆಗುತ್ತದೆ. ಕುದುರೆಗಳು ನೀರು ಕುಡಿದು ದಣಿವಾರಿಸಿಕೊಳ್ಳಲಿ. ನಂತರ ಮುಂದಿನ ಮಾತು" ಅಂದ ಶ್ರೀಕೃಷ್ಣ. ಅರ್ಜುನ ಹಾಗೆಯೇ ಮಾಡಿದ. ಅಲ್ಲಿಯೇ ತಂಪು ನೀರಿನ ಕೆರೆ ಆಯಿತು. ಕುದುರೆಗಳು ನೀರು ಕುಡಿದು ಆಯಾಸ ಪರಿಹರಿಸಿಕೊಂಡವು. ಅಷ್ಟರಲ್ಲಿ ಧೂಳಿನ ತೆರೆಯೂ ಸರಿಯಿತು. ಯುದ್ಧ  ಮುಂದುವರೆಯಿತು. 

ಇನ್ನೂ ಸ್ವಲ್ಪ ಯುದ್ಧ ನಡೆದ ನಂತರ ಸೂರ್ಯ ಮುಳುಗಿದಂತೆ ಆಯಿತು. ಆಡಿದ ಮಾತಿನಂತೆ ಅರ್ಜುನನು ಕಟ್ಟಿಗೆ ಪೇರಿಸಿ ಚಿತೆ ಸಿದ್ಧ ಮಾಡಿದ. ಬೆಂಕಿಗೆ ಬೀಳಬೇಕು. ಜಯದ್ರಥನಿಗೆ ಸುದ್ದಿ ಹೋಯಿತು. ಸಂತೋಷದಿಂದ ಅರ್ಜುನನ ಕೊನೆ ಕಾಣಲು ಹೊಂಡದಿಂದ ಹೊರಬಂದ. "ಅರ್ಜುನಾ, ನೋಡಲ್ಲಿ ಸೂರ್ಯ ಇನ್ನೂ ಇದ್ದಾನೆ! ಅಲ್ಲಿ ರವಿಯುಂಟು. ಇಲ್ಲಿ ಜಯದ್ರಥನ ತಲೆ ಉಂಟು. ನಿನ್ನ ಗಾಂಡೀವ ಬಾಣಗಳು ಇಲ್ಲುಂಟು. ಬೇಗ! ಬೇಗ!" ಎಂದು ಕೃಷ್ಣ ಮೆಲ್ಲನೆ ಕೂಗಿದ. "ತಲೆ ನೆಲಕ್ಕೆ ಬೀಳುವ ಮೊದಲು ಮತ್ತೊಂದು ಅಸ್ತ್ರ ಹೂಡು. ತಲೆ ಜಯದ್ರಥನ ತಂದೆ ವೃದ್ಧಕ್ಷತ್ರನ ಕೈಗಳಲ್ಲಿ ಬೀಳಬೇಕು. ಶೀಘ್ರ!" ಎಂದು ಎಚ್ಚರಿಸಿದ. ಜಯದ್ರಥನ ವಧೆಯಾಗಿ ವೃದ್ಧಕ್ಷತ್ರನ ತಲೆಯೂ ಸಾವಿರ ಹೋಳಾಯಿತು. ಮಗನಿಗೆ ವರ ಕೊಟ್ಟ ತಂದೆ ಅದಕ್ಕೆ ತಾನೇ ಬಲಿಯಾದ. ಜಯದ್ರಥನ ವಧೆ ಅವನ ತಂದೆ ಸಂಜೆ ಅರ್ಘ್ಯ ಕೊಡುವ ಕಾಲಕ್ಕೆ ಆಗಬೇಕಿತ್ತು. ಅದಕ್ಕೆ ಮೊದಲಲ್ಲ.  ಒಂದು ಕ್ಷಣದಲ್ಲಿ ಅರ್ಜುನ ಎರಡು ಸಾರಿ ಬದುಕುಳಿದ. 

*****

ಭಕ್ತ ಕನಕದಾಸರು ಭಾಮಿನಿ ಷಟ್ಪದಿಯ ತಮ್ಮ "ಹರಿಭಕ್ತಿಸಾರ" ಕೃತಿಯ ಮೂವತ್ತೆಂಟನೇಯ ಪದ್ಯದಲ್ಲಿ ಈ ಪ್ರಸಂಗವನ್ನು ಸೊಗಸಾಗಿ ಸಂಗ್ರಹಿಸಿ ಕೊಟ್ಟ್ಟಿದ್ದಾರೆ:

ನರಗೆ ಸಾರಥಿಯಾಗಿ ರಣದೊಳು 
ತುರಂಗ ನೀರಡಿಸಿದರೆ ವಾರಿಯ 
ಸರಸಿಯನು ನಿರ್ಮಿಸಿ ಕಿರೀಟಿಯ ಕೈಲಿ ಸೈ೦ಧವನ 
ಶಿರವ ಕೆಡಹಿಸಿ ಅವನ ತಂದೆಯ 
ಕರತಳಕೆ ನೀಡಿಸಿದೆ ಹರಹರಾ 
ಪರಮ ಸಾಹಸಿ ನೀನು, ರಕ್ಷಿಸು ನಮ್ಮನನವರತ 

ಹರಿಯಾಣ ರಾಜ್ಯದ ಕುರುಕ್ಷೇತ್ರಕ್ಕೆ ಹೋದರೆ ಈಗಲೂ ಯುದ್ಧ ನಡೆದ ವಿಶಾಲ ಸ್ಥಳಕ್ಕೆ ಕರೆದುಕೊಂಡು ಹೋಗಿ ಅನೇಕ ವಿಶೇಷ ಜಾಗಗಳನ್ನು ತೋರಿಸುತ್ತಾರೆ. ಕೆರೆಯೊಂದನ್ನು ತೋರಿಸಿ ಈ ಸಂದರ್ಭ ಹೇಳುತ್ತಾರೆ. ಅದಲ್ಲದೆ ಇನ್ನೂ ಅನೇಕ ನೋಡಬೇಕಾದ ಜಾಗಗಳಿವೆ. "ಜ್ಯೋತಿಸರಸ್" ಎಂಬ ಜಲಾಶಯವೂ ಅದರಬಳಿಯ ಆಲದ ಮರವೂ ಉಂಟು. "ಗೀತೋಪದೇಶ" ಅಲ್ಲಿ ಆದದ್ದೆಂದು ಒಂದು ಗೀತೋಪದೇಶದ ಪುತ್ಥಳಿ ನಿರ್ಮಾಣ ಕೂಡ ಮಾಡಿದ್ದಾರೆ. ದೆಹಲಿಯಿಂದ ಕೇವಲ ಮೂರು ಗಂಟೆಗಳ ವಾಹನದ ಪ್ರಯಾಣ. ಬೆಳಗು ಹೋಗಿ ಸಂಜೆ ಹಿಂದಿರುಗಬಹುದು. ಆಸಕ್ತರು ನೋಡಬಹುದು. 

*****

ಇಂದಿನ ಅಪರಿಸ್ಥಿತಿಯಲ್ಲೂ ಈ ಶ್ರೀಕೃಷ್ಣನ ಕುದುರೆಗಳ ಓವರ್ ಟೈಮ್ ಪ್ರಸಂಗದಂತೆಯೇ ನಡೆಯುತ್ತಿದೆ. ಟಾರ್ಗೆಟ್ ನಿರ್ಧರಿಸಿ ಅದಕ್ಕೆ ಸಮಯದ ಮಿತಿಯನ್ನೂ (ಟೈಮ್ ಲೈನ್) ನಿಗದಿ ಪಡಿಸುವವರು ದೊಡ್ಡವರು. ಹಿಂದೆ ಅದಕ್ಕೆ "ಡೆಡ್ ಲೈನ್" ಎನ್ನುತ್ತಿದ್ದರು. ಈಗ ಎಲ್ಲ ಪದಗಳನ್ನೂ ಆಧುನಿಕ ಮಾಡುವಂತೆ ಇದನ್ನೂ ಬದಲಾಯಿಸಿದ್ದಾರೆ. ಇದರಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.  ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಬೇಕಾದ ಜವಾಬ್ದಾರಿ ಕೆಳಗಿನ ಕೆಲಸಗಾರರಿಗೆ. ವಾರಕ್ಕೆ ಎಪ್ಪತ್ತು, ಎಂಭತ್ತು, ತೊಂಬತ್ತು ಗಂಟೆ ಕೆಲಸ ಮಾಡಿ ಎಂದು ತಾಕೀತು. "ಭಾನುವಾರ ಹೆಂಡತಿ ಮುಖ ಎಷ್ಟು ಹೊತ್ತು ನೋಡುತ್ತೀರಿ?" ಎಂದು ಬೇರೆ ಕಿತಾಪತಿ. ಇತ್ಯಾದಿ.....    

2 comments:

  1. In olden days slaves were not paid. If at all payment is made, it used to be negligible.
    The employers concern should be about fitness of employees.
    The slavery is back with modification, that is the slaves will be paid hefty amount.
    What is the use of good salary if an employee does not get time to spend it.
    Doctors are benefitted directly due to large number slaves with money falling sick frequently
    CR Ramesh Babu

    ReplyDelete
  2. Interesting nuggets of history and mythology.

    ReplyDelete