"ಗುರು ಪೂರ್ಣಿಮಾ" ಸಂದರ್ಭಗಳಲ್ಲಿ ಕಂಡುಬಂದ ಅನೇಕ ವಿಚಾರಗಳ ಹಿನ್ನೆಲೆಯಲ್ಲಿ ಆಸಕ್ತರು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. "ಒಬ್ಬ ಗುರುವು ತನ್ನ ಶಿಷ್ಯನಾಗಲು ಯೋಗ್ಯನಾದವನನ್ನು ಹೇಗೆ ಗುರುತಿಸುತ್ತಾನೆ? ಅಥವಾ ತನ್ನ ಬಳಿ ಬಂದವರನ್ನು ಹೇಗೆ ಪರೀಕ್ಷಿಸಿ, ಶೊಧಿಸಿ, ನಂತರ ಶಿಷ್ಯರನ್ನಾಗಿ ಸ್ವೀಕರಿಸುತ್ತಾನೆ?" ಎನ್ನುವುದು ಇದರಲ್ಲಿ ಒಂದು. ಮತ್ತನೇಕ ಪ್ರಶ್ನೆಗಳು ಇದೊಂದು ದೊಡ್ಡ ಪ್ರಶ್ನೆಯಲ್ಲಿ ಅಡಕವಾಗಿವೆ. ಇಂತಹ ಪ್ರಶ್ನೆಗಳಿಗೆ ಚೆನ್ನಾಗಿ ತಿಳಿದವರು ಮಾತ್ರ ಉತ್ತರ ಕೊಡಲು ಶಕ್ತರು. ಆದರೂ, ನಮ್ಮಮಟ್ಟಿಗೆ ಮತ್ತು ನಮ್ಮ ಪರಿಧಿಯಲ್ಲಿ ಇದರ ಬಗ್ಗೆ ಸ್ವಲ್ಪ ವಿಚಾರ ಮಾಡುವುದು ತಪ್ಪೇನೂ ಅಲ್ಲ. ಆದುದರಿಂದ ಈ ಪ್ರಶ್ನೆಯ ಅನೇಕ ಮಜಲುಗಳಲ್ಲಿ ಕೆಲವನ್ನು ಈಗ ನೋಡೋಣ.
******
ಗುರು ಮತ್ತು ಶಿಷ್ಯ ಅನ್ನುವ ಪದಗಳ ಉಗಮ ಪ್ರಾಯಶ: ವೈದಿಕ ವಾಂಗ್ಮಯದ ಕೊಡುಗೆ. ಅಲ್ಲಿನ ಗುರು-ಶಿಷ್ಯರ ಸಂಬಂಧ ಇಂದಿನ ಶಿಕ್ಷಕ-ವಿದ್ಯಾರ್ಥಿ ಸಂಬಂಧಗಳಿಗಿಂತ ಬಹಳ ಆಳವಾದದ್ದು. ಶಿಕ್ಷಕ ಮಾಡುವುದು ಒಂದು ಉದ್ಯೋಗ. ಜೀವನ ನಿರ್ವಹಣೆಗೆ ಅದೊಂದು ದಾರಿ. ವಿದ್ಯಾರ್ಥಿಯೂ ಹೀಗೆಯೇ. ಕಲಿಯಲು ಒಂದು ವ್ಯವಸ್ಥೆ ಇದೆ. ಅಲ್ಲಿ ಹೋಗಿ ಸೇರಿಕೊಂಡರೆ ವ್ಯವಸ್ಥೆಯೇ ಮುಂದಿನ ಕಲಿಕೆ ನೀಡುತ್ತದೆ. ಈ ವ್ಯವಸ್ಥೆಯಲ್ಲಿ ಶಿಕ್ಷಕನೂ ವಿದ್ಯಾರ್ಥಿಗಳನ್ನು ಆರಿಸುವುದಿಲ್ಲ. ವಿದ್ಯಾರ್ಥಿಯೂ ಗುರುವನ್ನು ಹುಡುಕಿಕೊಂಡು ಹೋಗುವುದಿಲ್ಲ. ತನ್ನ ತರಗತಿಗಳಲ್ಲಿ ಯಾವ ವಿದ್ಯಾರ್ಥಿಗಳು ಬಂದು ಕೂಡುತ್ತಾರೆ ಎನ್ನುವುದು ಶಿಕ್ಷಕನ ಅಂಕೆಯಲಿಲ್ಲ. ಅಂತೆಯೇ, ಯಾವ ಶಿಕ್ಷಕನು ತನಗೆ ಪಾಠ ಹೇಳುತ್ತಾನೆ ಎನ್ನುವುದು ವಿದ್ಯಾರ್ಥಿಗೂ ಗೊತ್ತಿಲ್ಲ.
ಈಗಿನ ಶಿಕ್ಷಕ-ವಿದ್ಯಾರ್ಥಿ ಸಂಬಂಧಗಳಲ್ಲಿ ಗುರು-ಶಿಷ್ಯ ಸಂಬಂಧ ಇಲ್ಲ ಎಂದು ಹೇಳುವಹಾಗಿಲ್ಲ. ಈಗಲೂ ಇಂತಹ ವ್ಯಾವಹಾರಿಕ ಸಂಬಂಧಗಳ ಮಧ್ಯೆ ಅಲ್ಲೊಂದು-ಇಲ್ಲೊಂದು ಗುರು-ಶಿಷ್ಯ ಬಾಂಧವ್ಯ ಹುಟ್ಟಿಕೊಳ್ಳುವುದೂ ಉಂಟು. ಆದರೆ ಅದು ಮೊಸರು ಕಡೆದಾಗ ಬರುವ ಮಜ್ಜಿಗೆಯಂತೆಯೇ ಹೊರತು ಹೆಚ್ಚಿನ ಅಪೇಕ್ಷೆಯ ಬೆಣ್ಣೆಯಂತೆ ಎಂದು ಹೇಳುವಂತಿಲ್ಲ.
ಗುರುಕುಲ ಪದ್ದತಿಯಲ್ಲಿ ಜಿಜ್ಞಾಸು ತಾನು ಕಲಿಯಬೇಕೆನ್ನುವ ವಿಷಯದಲ್ಲಿ ಪ್ರಾವೀಣ್ಯತೆ ಸಾಧಿಸಿದ ಗುರುವನ್ನು ಹುಡುಕಿಕೊಂಡು ಹೋಗುತ್ತಿದ್ದ. ಇಂದಿನ ದಿನಗಳಂತೆ ಒಂದು ನಿಯಮಿತ ಸಮಯದಲ್ಲಿ ಕಲಿಯುವಂತೆ ವ್ಯವಸ್ಥೆ ಇರಲಿಲ್ಲ. ಒಮ್ಮೆ ಶಿಷ್ಯನೆಂದು ಗುರುವು ಸ್ವೀಕರಿಸಿದ ಮೇಲೆ ಅವನ ಸಕಲ ಜವಾಬ್ದಾರಿಗಳೂ ಗುರುವಿನ ಮೇಲೆಯೇ. ಅಲ್ಲಿ ಸಂಬಳ-ಸಾರಿಗೆ ಅಥವಾ ಫೀಸು-ಭತ್ಯಗಳ ಲೆಕ್ಕವಿರಲಿಲ್ಲ. ಅಲ್ಲಿ ಪ್ರಾಯಶಃ ಪ್ರಾರಂಭದಲ್ಲಿ ಅನೇಕ ಮಂದಿ ಸಹಪಾಠಿಗಳು ಕೆಲಮಟ್ಟಿಗೆ ಒಟ್ಟಾಗಿ ಕಲಿಯುವಂತಿದ್ದರೂ, ದಿನ ಕಳೆದಂತೆ ಪ್ರತಿ ಶಿಷ್ಯನೂ ಗುರುಗಳಿಂದ ನೇರ ಕಲಿಯುವಂತಿತ್ತು. ಎಲ್ಲಾ ಕಲಿಕೆ ಮುಗಿದ ನಂತರ ಶಿಷ್ಯನು "ಗುರುದಕ್ಷಿಣೆ" ಕೊಡುತ್ತಿದ್ದ. ಅವರು ಏನು ಕೇಳಿದರು, ಇವನು ಏನು ಕೊಟ್ಟ ಎನ್ನುವುದು ಅವರಿಬ್ಬರಿಗೇ ಗೊತ್ತು.
ಈಗಲೂ ಕೆಲವು ಸಂದರ್ಭಗಳಲ್ಲಿ ಒಂದು ವಿಷಯದಲ್ಲಿ ಪರಿಣತಿ ಪಡೆಯುವ ಆಸೆಯುಳ್ಳ ವಿದ್ಯಾರ್ಥಿಗಳು ಕೆಲವು ಶಿಕ್ಷಣ ಸಂಸ್ಥೆಗಳನ್ನು ವಿಶೇಷವಾಗಿ ಹುಡುಕಿಕೊಂಡು ಹೋಗುವುದು ಉಂಟು. ಅಲ್ಲಿ ಅವಕಾಶ ಸಿಗದಿದ್ದರೆ ಮತ್ತೆ ಅದಕ್ಕಿಂತ ಸ್ವಲ್ಪ ಕೆಳಗಿನ ಶ್ರೇಣಿಯ ಸಂಸ್ಥೆ. ಹೀಗೆ. ವೈಯುಕ್ತಿಕವಾಗಿ ಒಬ್ಬ ವಿದ್ಯಾರ್ಥಿ ಗುರುವನ್ನು ಹುಡುಕಿಕೊಂಡು ಹೋಗಿ ಕಲಿಯುವ ವ್ಯವಸ್ಥೆ ಲಲಿತಕಲೆಗಳ ಸಂದರ್ಭದಲ್ಲಿ ಈಗಲೂ ಉಂಟು. ನಾಟ್ಯ, ಸಂಗೀತ, ಶಿಲ್ಪ, ಚಿತ್ರಕಲೆ, ಗಮಕ ಮುಂತಾದವುಗಳಲ್ಲಿ ಇದು ಈಗಲೂ ಮುಂದುವರೆದಿರುವುದನ್ನು ಕಾಣಾಬಹುದು.
"ಸಂಧ್ಯಾರಾಗ' ಕನ್ನಡ ಚಲನ ಚಿತ್ರದಲ್ಲಿ ಸಂಗೀತವೇ ಜೀವನವೆಂದು ನಂಬಿದ ಲಕ್ಷ್ಮಣ ಎನ್ನುವ ಯುವಕ (ರಾಜಕುಮಾರ್) ಮುಳುಬಾಗಿಲು ಚನ್ನಪ್ಪ ಎನ್ನುವ ಅಪರೂಪದ ಸಂಗೀತಗಾರರು ಎಲ್ಲಿದ್ದಾರೆ ಎನ್ನುವುದು ಪತ್ತೆಯಾಗದುದರಿಂದ ತಂಜಾವೂರು ಕೃಷ್ಣ ಅಯ್ಯರ್ ಅನ್ನುವವರ ಬಳಿ ಕಲಿಯಲು ಹೋಗುವ ಸುಂದರವಾದ ಚಿತ್ರಣವಿದೆ. "ದೀನ ನಾ ಬಂದಿರುವೆ, ಬಾಗಿಲಲಿ ನಿಂದಿರುವೆ" ಎನ್ನುವ ಹಾಡಿನ ಮೂಲಕ ಕಲಿಯುವ ತುಡಿತದ ಶಿಷ್ಯ ಮತ್ತು ಕಲಿಸಬೇಕೆಂಬ ಬಲವಾದ ಇಚ್ಛೆ ಇರುವ ಗುರುವಿನ ಪರಸ್ಪರ ಹುಡುಕಾಟದ ಕೊನೆ ಹೇಗಿರಬಹುದು ಎನ್ನುವ ಒಂದು ಉದಾಹರಣೆ ಇಲ್ಲಿ ಕಾಣಬಹುದು. ಇದೇ ರೀತಿ "ಹಂಸಗೀತೆ" ಚಲನ ಚಿತ್ರದಲ್ಲಿ ಯುವಕ ವೆಂಕಟಸುಬ್ಬಯ್ಯ (ಅನಂತನಾಗ್) ಅವಧೂತನೊಬ್ಬನ (ಬಿ. ವಿ. ಕಾರಂತ್) ಹಿಂದೆ ಬಿದ್ದು ಸಂಗೀತ ಕಲಿತು ಮುಂದೆ ಚಿತ್ರದುರ್ಗದ ಮದಕರಿ ನಾಯಕನ ಆಡಳಿತದಲ್ಲಿ "ಆಸ್ಥಾನ ವಿದ್ವಾನ್ ಭೈರವಿ ವೆಂಕಟಸುಬ್ಬಯ್ಯ" ಎಂದು ಪ್ರಖ್ಯಾತನಾಗುವುದನ್ನು ಕಾಣಬಹುದು.
*****
ನಮ್ಮ ವೈದಿಕ ವಾಂಗ್ಮಯದಲ್ಲಿ, ಅದರಲ್ಲೂ ವಿಶೇಷವಾಗಿ ಉಪನಿಷತ್ತುಗಳಲ್ಲಿ ಗುರು-ಶಿಷ್ಯ ಸಂಬಂಧದ ಗಾಢವಾದ ವಿಶೇಷತೆಗಳನ್ನು ಕಾಣಬಹುದು. ಯಾಜ್ಞವಲ್ಕ್ಯ- ಉಶಸ್ಥ ಚಾಕರಾಯಣ ಸಂವಾದ, ಷಟ್ ಪ್ರಶ್ನೋಪನಿಷತ್ತಿನಲ್ಲಿ ಬರುವ ಆರು ಪ್ರಶ್ನೆಗಳನ್ನು ಕೇಳುವ ಜಿಜ್ಞಾಸುಗಳ ಹಿನ್ನೆಲೆ, ಇವು ಉದಾಹರಣೆಗಳಾಗಿ ನೋಡಬಹುದು. ತನ್ನ ಬಳಿ ಜ್ಞಾನ ದಾಹದಿಂದ ಬಂದ ಶಿಷ್ಯನನ್ನು ಗುರುವು ಸ್ವೀಕರಿಸುವ ದಾರಿ ಹೀಗೆ ಇತ್ತು ಎಂದು ತಿಳಿಯಬಹುದು:
- ಮೊದಲಿಗೆ ಬಂದವನನ್ನು ಈಗ ಸಾಧ್ಯವಿಲ್ಲ ಎಂದು ಹಿಂದೆ ಕಳಿಸುವುದಿತ್ತು. ಕಲಿಕೆಯ ದಾಹ ತೀವ್ರವಾಗಿಲ್ಲದಿದ್ದಲ್ಲಿ, ಅವನು ಸೋಮಾರಿಯಾಗಿದ್ದಲ್ಲಿ, ಹಾಗೆ ಹಿಂದೆ ಹೋದವನು ಮತ್ತೆ ಮರಳಿ ಬರುತ್ತಿರಲಿಲ್ಲ. ಕೆಲವೊಮ್ಮೆ ಅವನಿಗೆ ಮತ್ಯಾರೋ ಗುರುಗಳು ಸಿಕ್ಕಬಹುದು. ಹೀಗೆ ಒಂದು ರೀತಿಯ ಸೋಸುವ ಕೆಲಸ ನಡೆಯುತ್ತಿತ್ತು.
- ಮತ್ತೆ ಮತ್ತೆ ಹಿಂದೆ ಕಳಿಸಿದರೂ ಎಡಬಿಡದೆ ಬರುವ ಜ್ಞಾನದಾಹಿ ಜಿಜ್ಞಾಸು ಈಗ ಶಿಷ್ಯನಾಗಲು ಸ್ವಲ್ಪಮಟ್ಟಿಗೆ ಯೋಗ್ಯನಾದ. ಇಂತಹವನನ್ನು ಗುರುವು ಗುರುಕುಲದಲ್ಲಿ ಇರಲು ಬಿಡುತ್ತಿದ್ದರು. ಅಂದಮಾತ್ರಕ್ಕೆ ಮಾರನೆಯ ದಿನದಿಂದ ಪಾಠ ಶುರುವಾಯಿತೆಂದಲ್ಲ. ಕೆಲವು ಕಾಲ, ಪ್ರಾಯಶಃ ಒಂದು ವರ್ಷ (ಇಷ್ಟೇ ಇರಬೇಕೆಂಬ ನಿಯಮವಿಲ್ಲ), ಗುರುಕುಲದ ಸಕಲ ಕೆಲಸಗಳನ್ನೂ ಮಾಡಿಕೊಂಡಿರಬೇಕಿತ್ತು. ಹೀಗೆ ಕೆಲಸ ಮಾಡಲು ಇಷ್ಟವಿಲ್ಲದವನು ಒಂದು ದಿನ ಹೋಗಬಹುದು. ಇವನು ಈಗ ಒಂದು ಹದಕ್ಕೆ ಬಂದಿದ್ದಾನೆ ಎನ್ನುವುದು ಗುರುವಿಗೆ ಮನವರಿಕೆ ಆಗಬೇಕು. ಅಲ್ಲಿಯವರೆಗೂ ಹೀಗೆ.
- ಈ ರೀತಿ ಇರಲು ಮನಸ್ಸಿಲ್ಲದವನು ಒಂದು ದಿನ ಬಿಟ್ಟು ಹೋಗಬಹುದು. ಅಂತಹವರಿಗೆ ಬಂದ ಕೆಲಸ ಅಲ್ಲಿಗೇ ಮುಗಿಯಿತು.
- ಹೀಗೆ ಒಂದು ಕಾಲದವರೆಗೆ ನಿರೀಕ್ಷೆಯಲ್ಲಿಯೇ ಕಾಲ ಕಳೆಯುವಾಗ, ವಿದ್ಯಾರ್ಥಿಗೆ ತಾನು ಕಲಿಯಲು ಬಂದ ವಿಷಯದ ಮೇಲೆ ಚಿಂತಿಸುತ್ತಾ ಇರುವಾಗ, ಬಂದ ಉದ್ದೇಶ್ಯ ಇನ್ನಷ್ಟು ಸ್ಪುಟ (ಕ್ಲಿಯರ್) ಆಗುವುದು. ಮನಸ್ಸಿನಲ್ಲಿ ಇದ್ದ ಕೆಲವು ಗೊಂದಲಗಳಿಗೆ ಅವನೇ ಉತ್ತರ ಕಂಡುಕೊಳ್ಳಬಹುದು. ಮೊದಲು ಬಂದಾಗ ಕೇಳಬೇಕು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮಟ್ಟದ ಪ್ರಶ್ನೆಗಳು ಈಗ ಹೊಳೆಯಬಹುದು. ಇದು ಒಂದು ಹಂತದ ಪೂರ್ವಭಾವಿ ಕಲಿಕೆಯೇ ಆಯಿತು!
- ಈಗ "ಏನನ್ನು ಕೇಳಬೇಕು? ಏನನ್ನು ಕಲಿಯಬೇಕು?" ಎನ್ನುವುದು ಅವನಿಗೆ ಖಚಿತವಾಯಿತು. ಕೇಳಬೇಕಾದ ಪ್ರಶ್ನೆ ಸರಿಯಾದ ಶಬ್ದಗಳಲ್ಲಿ, ಕ್ರಮವಾಗಿ, ಹಂತ-ಹಂತಗಳಲ್ಲಿ, ಕೇಳುವ ಕೌಶಲ್ಯ ಬಂದಿತು.
- ಪ್ರಶ್ನೆ ಸರಿಯಾದ ರೂಪದಲ್ಲಿ ಬಂದರೆ ಅದಕ್ಕೆ ಉತ್ತರವೂ ಸರಿಯಾಗಿ ಸಿಗುವುದು! ಈಗ ನಿಜವಾದ ಆಳದ ಕಲಿಕೆ ಸಾಧ್ಯ.
- ಗುರು-ಶಿಷ್ಯ ಸಂಬಂಧದ ಕಲಿಕೆ ಒಂದು ಕಬ್ಬಿಣದ ಚೌಕಟ್ಟಿನಲ್ಲಿ ಇರುವುದಿಲ್ಲ. ಅದು "ಗುರು ಹೇಳಿದ-ಶಿಷ್ಯ ಕೇಳಿದ" ಎನ್ನುವಂತೆ ಇರುವುದಿಲ್ಲ. ಅದು ಒಂದು ಸಂವಾದ. ವಾದದಲ್ಲಿ ಸೋಲು-ಗೆಲವು ಎನ್ನುವ ಫಲಿತಾಂಶದ ಮೇಲೆ ಗಮನ. ಸಂವಾದ-ವಿವಾದಗಳಲ್ಲಿ ಹೀಗಲ್ಲ. ಅದೊಂದು ಪರಸ್ಪರ ಕೊಡು-ಕೊಳ್ಳುವ, ಆದರೆ ವ್ಯವಹಾರದಂತಲ್ಲದ, ವಿನಿಮಯ.
- ಇಲ್ಲಿ ಒಬ್ಬರು ಇನ್ನೊಬ್ಬರಿಂದ ಕಲಿಯುತ್ತಾರೆ. ದೊಡ್ಡವನು-ಚಿಕ್ಕವನು ಎನ್ನುವ ಭೇದವಿಲ್ಲ. ಪರಸ್ಪರ ಗೌರವ-ಆದರ ಉಂಟು. ಒಂದು ಕಡೆ ಗುರುಭಕ್ತಿ. ಇನ್ನೊಂದು ಕಡೆ ಶಿಷ್ಯ ವಾತ್ಸಲ್ಯ. ಹೀಗುಂಟು.
- ಜ್ಞಾನದ ವಿಕಾಸ ಹೇಗೆ ಬಂದರೂ ಅದು ಸೋಲಲ್ಲ. ಆದ್ದರಿಂದ ಗುರು-ಶಿಷ್ಯ ಇಬ್ಬರೂ ಬೆಳೆಯಬಹುದು. ಇದು ಒಮ್ಮುಖದ ಕಲಿಕೆ ಅಲ್ಲ.
- ತಿಳಿಸಿಕೊಡುವನು ಗುರು. ತಿಳಿಯುತ್ತಿರುವವನು ಶಿಷ್ಯ. ಶಿಷ್ಯ ಪೂರ್ತಿ ತಿಳಿದ ಮೇಲೆ ಇಬ್ಬರೂ ಶಿಷ್ಟರು. ಪ್ರಶ್ನೆ ಕೇಳುವುದು ಶಿಷ್ಯನ ಹಕ್ಕು. ಉತ್ತರ ಗೊತ್ತಿದರೆ ಕೊಡಬೇಕಾದದ್ದು ಗುರುವಿನ ಕರ್ತವ್ಯ.
- ಶಿಷ್ಯನಿಗೆ ಉತ್ತರ ಗೊತ್ತಿಲ್ಲ. ಆದದ್ದರಿಂದ ಪ್ರಶ್ನೆ ಕೇಳುತ್ತಾನೆ. ಗುರುವಿಗೆ ಉತ್ತರ ಗೊತ್ತಿದ್ದರೆ ಹೇಳುತ್ತಾನೆ. ಅವನಿಗೂ ಗೊತ್ತಿಲ್ಲದಿದ್ದರೆ ಇಬ್ಬರೂ ಸೇರಿ ಉತ್ತರ ಹುಡುಕುತ್ತಾರೆ. ಇಲ್ಲಿ ಸೋಲು-ಗೆಲವುಗಳ ಜಂಜಾಟವಿಲ್ಲ.
ಗುರು-ಶಿಷ್ಯರ ಸಂಬಂಧ ಇನ್ನಷ್ಟು ಗಾಢವಾಯಿತು. ಅದು ಒಂದು ದೃಷ್ಟಿಯಲ್ಲಿ ತಂದೆ-ಮಕ್ಕಳ ಸಂಬಂಧಕ್ಕಿಂತ ಮಿಗಿಲಾಯಿತು. ಇದು ಈಗ "ಜ್ಞಾನ ಸಂತಾನ" ಎಂದಾಯಿತು. "ಯಾವ ಗುರುಗಳ ಶಿಷ್ಯ?" ಎನ್ನುವುದರಿಂದ ಶಿಷ್ಯನಿಗೆ ಗೌರವ. "ಇಂತಹವನ ಗುರು" ಎಂದು ಗುರುವಿಗೆ ಮಾನ್ಯತೆ. ಒಟ್ಟಿನಲ್ಲಿ ಜ್ಞಾನದ ವಿಕಾಸ ಎರಡೂ ಕಡೆಗಳಿಂದ ಸಾಧ್ಯವಾಯಿತು.
*****
ಇಂಗ್ಲೀಷಿನಲ್ಲಿ "ಮೆಂಟರ್" ಅನ್ನುವ ಪದ ಇಂತಹ ಸಂದರ್ಭಗಳಲ್ಲಿ ಬಳಸುತ್ತಾರೆ. ಕನ್ನಡದಲ್ಲಿ "ಮಾರ್ಗದರ್ಶಕ" ಎನ್ನಬಹುದು. ಈ "ಮೆಂಟರ್-ಮೆಂಟೀ" ಸಂಬಂಧವೂ ಒಂದು ರೀತಿಯ "ಗುರು-ಶಿಷ್ಯ" ಸಂಬಂಧವೇ. ಈ ಮೆಂಟರ್ ಪದ ಹೇಗೆ ಹುಟ್ಟಿತು, ಮತ್ತು ಅದರ ಬಗ್ಗೆ ಕೆಲವು ವಿಚಾರಗಳನ್ನು ಇಂಗ್ಲೀಷಿನಲ್ಲಿರುವ ಬ್ಲಾಗ್ ಪೋಸ್ಟಿನಲ್ಲಿ ಇಲ್ಲಿ ಕ್ಲಿಕ್ ಮಾಡಿ ಓದಬಹುದು.
ಗುರು-ಶಿಷ್ಯ ಸಂಬಂಧದ ಮತ್ತೆ ಕೆಲವು ಪದರಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
ಎಂದಿನಂತೆ, ಉತ್ತಮವಾದ ಲೇಖನ.
ReplyDeleteಇಲ್ಲಿ ಹೇಳಿರುವ ಹಾಗೆ, ಶಿಕ್ಷಕ ಮಾಡುವುದು ತನ್ನ ಜೀವನ ನಿರ್ವಹಣೆಗಾಗಿ. ಫೀ ಕೂಟ್ಟರೆ, ಪಾಠ
ಇಲ್ಲದ್ದಿದರೆ ಇಲ್ಲ.
ಗುರುವು ಶಿಷ್ಯನನ್ನು ಸ್ವೀಕರಿಸುವ ದಾರಿಯ ವಿವರಣೆ, ಅರ್ಥಪೂರ್ಣವಾಗಿದೆ. ಶಿಷ್ಯನನ್ನ ಆರಿಸುವ ಮುನ್ನ, ಅವನ ತಾಳ್ಮೆಯನ್ನು ಪರೀಕ್ಷಿಸಿಸುತ್ತಾರೆ
ಗುರು ಕುಲ ಪದ್ದತಿ ಈಗ ಕಡಿಮೆಯಾಗಿದೆ.
ದಾಸರು ಹೇಳಿರುವಂತೆ
ಗುರುವಿನ ಗುಲಾಮನಾಗುವ ತನಕ ದೂರೆಯದಣ್ಣ ಮುಕುತಿ.