Wednesday, October 8, 2025

ಚರ್ಮಾ೦ಬರ

Best 50+ Lord Shiva Images | God Shiva HD Pictures | Hindu ...

ಅರವತ್ತು  ವರುಷಗಳಿಗೂ ಹಿಂದಿನ ಮಾತು. 

ಅದೊಂದು ಅವಿಭಕ್ತ ಕುಟುಂಬ. ತುಂಬಿದ ಮನೆಗೆ ಒಂದು ಉತ್ತಮ ಉದಾಹರಣೆ. ಹಿರಿಯ ವಯಸ್ಸಿನ ತಾಯಿಯ ಜೊತೆಯಲ್ಲಿ ಅರವತ್ತು ವರುಷಗಳ ಆಸು-ಪಾಸಿನ ಅಣ್ಣ-ತಮ್ಮಂದಿರು. ಅವರ ಹೆಂಡತಿ-ಮಕ್ಕಳು-ಸೊಸೆಯರು-ಮೊಮ್ಮಕ್ಕಳು. ಎಲ್ಲರೂ ಒಟ್ಟಾಗಿ ಒಂದು ಸೂರಿನ ಕೆಳಗೆ ಜೀವನ ನಡೆಸುವ ಸುಯೋಗ. ಈಗ ಅಂತಹ ಸಂಸಾರಗಳು ಕಾಣುವುದು ಕಷ್ಟ. ಅವರ ಮನೆಗೆ ಬಂದು ಹೋಗುವ ನಮ್ಮಂತಹ ಮಕ್ಕಳಿಗೆ ಅದೊಂದು ಪೂರ್ತಿಯಾಗಿ ಅರ್ಥವಾಗದ ವ್ಯವಸ್ಥೆ. ಮೊದಮೊದಲಿಗೆ ಯಾರು ಯಾರ ಮಕ್ಕಳು ಅನ್ನುವುದೂ ಸರಿಯಾಗಿ ಗೊತ್ತಾಗದು. ಹೀಗೆ ಆಗಾಗ ಬಂದು ಹೋಗುವ ನಮ್ಮ ಮೇಲೆ ಆ ಕುಟುಂಬದ ಎಲ್ಲರ ಪ್ರೀತಿ ಒಂದೇ ಸಮ. ಮನೆಗೆ ಬಂದು ನಾಲ್ಕಾರು ದಿನವಿದ್ದರೂ ಹೊರಡುವ ದಿನ "ಈಗೇನು ಅವಸರ. ಇನ್ನೂ ಒಂದೆರಡು ದಿನ ಇದ್ದು ಹೋಗಬಹುದಲ್ಲ" ಎನ್ನುವ ಮಾತು. ಯಾವ ಸಮಯ, ಸಂದರ್ಭದಲ್ಲೂ ಮನಸ್ಸಿಗೆ ದುಗುಡ ಉಂಟುಮಾಡುವ ಪರಿಸ್ಥಿತಿ ಇಲ್ಲ. ಅಂತಹ ಸುಂದರ ವಾತಾವರಣ. 

ನಾವು ಬೆಳಿಗ್ಗೆ ಸರಿಯಾಗಿ ಕಣ್ಣು ಬಿಡುವ ಸಮಯಕ್ಕಾಗಲೇ ಕೆಲಸಕ್ಕೆ ಹೋಗಿರುವವರು ಕೆಲವರು. ತಯಾರಾಗಿ ಶಾಲೆಗಳಿಗೆ ಹೊರಟಿರುವ ಮಕ್ಕಳು. ಅಡಿಗೆ ಮನೆಯಲ್ಲಿ ಸದಾ ಉರಿಯುತ್ತಿರುವ ಒಲೆಗಳು. ಯಾರು ಯಾರ ಉಪಚಾರ, ಯಾಗಕ್ಷೇಮ ನೋಡುತ್ತಿದ್ದಾರೆ ಎನ್ನುವುದು ತಿಳಿಯದು. ಒಟ್ಟಿನಲ್ಲಿ ಎಲ್ಲರೂ ಹಂಚಿಕೊಂಡು ಕೆಲಸಗಳನ್ನು ತೂಗಿಸುವವರು. ಒಬ್ಬರ ಕಾರ್ಯಕ್ರಮ ಇನ್ನೊಬ್ಬರಿಗೆ ಗೊತ್ತು. ಸರತಿಯಂತೆ ಸ್ನಾನದ ಕೋಣೆಯ ಉಪಯೋಗ. ಯಾರೋ ಬಾವಿಯಿಂದ ನೀರು ಸೇದಿ ತುಂಬುವರು. ಮತ್ಯಾರೋ ಉರುವಲು ಕಟ್ಟಿಗೆ ಜೋಡಿಸಿಡುವವರು. ಬೇಯಿಸುವವರೊಬ್ಬರು. ತೋಡಿ ಬಡಿಸುವವರೊಬ್ಬರು. ತಾಟು ತೆಗೆದು ಸಾರಿಸುವವರೊಬ್ಬರು. ಹೀಗೆ ನಡೆಯುವುದು. ಪ್ರತಿದಿನ. 

*****

ಅಣ್ಣ ಆ ವೇಳೆಗಾಗಲೇ ಲೌಕಿಕದಿಂದ ಅರ್ಧ ನಿವೃತ್ತ. ಸರಕಾರೀ ಕೆಲಸವೆಂದಲ್ಲ. ಒಟ್ಟಿನಲ್ಲಿ ಲೌಕಿಕದಿಂದ ವಿಮುಖ. ಕೃಷಿ ಭೂಮಿಯಿಂದ ಬಂದ ಬೆಳೆ, ಆದಾಯದಿಂದ ಜೀವನ. ಮತ್ತೆ ಅಲ್ಲಲ್ಲಿ ಸ್ವಲ್ಪ ಆದಾಯ. ಮಕ್ಕಳು ವಿದ್ಯಾವಂತರಾಗಿ ಉದ್ಯೋಗ ಹಿಡಿದಮೇಲೆ ಒಂದಷ್ಟು ಒತ್ತಾಸೆ. ಹೀಗೆ ಜೀವನ ನಿರ್ವಹಣೆ. ಅರ್ಧ ವಿರಕ್ತರಾದ ಮೇಲೆ ಗಮನ ಮುಂದಿನ ಸಾಧನೆಯ ಕಡೆಗೆ. ಬೆಳಗಿನ ಅರ್ಧ ಭಾಗ ಪೂಜೆ-ಪುನಸ್ಕಾರಗಳಿಗೆ ಮೀಸಲು. ನಂತರದ ಸಮಯ ಸುತ್ತ-ಮುತ್ತಲಿನ ಅವಿದ್ಯಾವಂತ ರೈತಾಪಿ ಜನರ ಕೆಲಸ-ಕಾರ್ಯಗಳಲ್ಲಿ ಸಹಯೋಗ. ಸಂಜೆಯ ಸಮಯ ಕುಟುಂಬದ ಪರಂಪರೆಯಿಂದ ಬಂದ ಗ್ರಂಥಗಳ ವಾಚನ ಮತ್ತು ಅಧ್ಯಯನ. ರಾತ್ರಿ ಅಲ್ಪ ಉಪಹಾರಕ್ಕೆ ಮೊದಲು ಒಂದು ಸಣ್ಣ ಪೂಜೆ. ದೊಡ್ಡ ಪಾರಾಯಣ. ನಂತರ ರಾತ್ರಿಯ ವಿಶ್ರಾಂತಿ. ಹೀಗೆ ದಿನಚರಿ. 

ತೊರವೆಯ ರಾಮಾಯಣ, ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಶ್ರೀಮದ್ಭಾಗವತ ಮುಂತಾದ ಗ್ರಂಥಗಳ ಭಾಗಗಳ ವಾಚನ ಮತ್ತು ವ್ಯಾಖ್ಯಾನ ಸಂಜೆಯ ಹೊತ್ತು ನಡೆಯುವುದು. ಸುತ್ತ-ಮುತ್ತಲ ಹತ್ತಾರು ಜನರು ಆ ಸಮಯಕ್ಕೆ ತಪ್ಪದೇ ಬರುವರು. ಎಲ್ಲವೂ ಕ್ರಮವಾಗಿ ನಡೆಯಬೇಕು. ಪ್ರತಿಯೊಂದು ಗ್ರಂಥ ವಾಚನ ಪೂರ್ತಿಯಾದ ಮೇಲೆ ಅದಕ್ಕೊಂದು "ಮಂಗಳ" ಕಾರ್ಯಕ್ರಮ. ಸಮಾರಂಭ ಮತ್ತು ಸಂತರ್ಪಣೆ. ಕೆಲವೊಮ್ಮೆ ಅವುಗಳಲ್ಲಿ ಭಾಗವಹಿಸಲು ಬಾಲಕರಾದ ನಮಗೂ ಅವಕಾಶ. ಹಬ್ಬದ ವಾತಾವರಣ. ಅವುಗಳ ಪೂರ್ತಿ ಅರ್ಥವ್ಯಾಪ್ತಿ ನಮಗೆ ಗೊತ್ತಾಗದಿದ್ದರೂ ಏನೋ ಒಂದು ವಿಶಿಷ್ಟ ಅನುಭವ. 

ತಮ್ಮ ಇದಕ್ಕೆ ವಿರುದ್ಧ. ಲೌಕಿಕದಲ್ಲಿ ಮಗ್ನ. ಎಲ್ಲರೂ ವಿರಕ್ತರಾಗಿ ಕುಳಿತರೆ ಜೀವನ ನಡೆಯಬೇಕಲ್ಲ. ಕೃಷಿ ಚಟುವಟಿಕೆ ಮತ್ತು ಸುತ್ತಲಿನ ಜನರ ಕೆಲಸ-ಕಾರ್ಯಗಳಿಗೆ ಸಹಕಾರ. ಮನೆಯ ಇತರ ಕಾರ್ಯಕ್ರಮಗಳಿಗೆ ಪೂರ್ತಿ ಬೆಂಬಲವಿದ್ದರೂ ಹೆಚ್ಚಿನ ಸಮಯ ಹೊರಗಡೆ ವ್ಯವಹಾರಗಲ್ಲಿ ಕಳೆಯುವುದು. ಸ್ವತಃ ಅಧ್ಯಯನ-ವಾಚನಗಳಲ್ಲಿ ಹೆಚ್ಚು ಸಮಯ ಕಳೆಯದಿದ್ದರೂ ಅನೇಕ ಗಹನ ವಿಚಾರಗಳಲ್ಲಿ ಆಳವಾದ ಪಾಂಡಿತ್ಯ. ಅವುಗಳ ವಿಷಯದಲ್ಲಿ ಮಾತಿಗೆ ಸಿಕ್ಕರೆ ಅಪರೂಪದ ಸಂಗತಿಗಳನ್ನು ಹೊರತಂದು ಇತರರನ್ನು ಚಕಿತರನ್ನಾಗಿಸುವ ಚತುರತೆ. 

***** 

ದೊಡ್ಡವರಿಂದ ತೊರವೆ ರಾಮಾಯಣ ವಾಚನ-ವ್ಯಾಖ್ಯಾನ ಸರಣಿ ಪೂರ್ತಿಯಾದ ನಂತರ ಒಂದು "ಮಂಗಳ ಕಾರ್ಯಕ್ರಮ". ದಸರೆಯ ರಜೆಯ ನಿಮಿತ್ತ ನಮಗೂ ಶಾಲೆಯಿಂದ ಬಿಡುವಿನ ಕಾರಣ ಆ ಮಂಗಳ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ. ಮೂರು ದಿನದ ಬಿಡಾರ ಅವರ ಮನೆಯಲ್ಲಿ. ಮೊದಲನೆಯ ದಿನ ಭಾನುವಾರ. ಬೆಳಿಗ್ಗೆ ರಾಮಾಯಣದ ಕಡೆಯ ಭಾಗದ ವಾಚನದಿಂದ ಕಾರ್ಯಕ್ರಮ ಕೊನೆಯಾಯಿತು. ನಂತರ ಮಂಗಳದ ಪೂಜೆ ಮುಂತಾದುವಗಳ ನಂತರ ಸಂತರ್ಪಣೆ. ಸಂಜೆ ಏನೂ ಇಲ್ಲದೆ ಸುಮ್ಮನೆ ಇರುವಂತಿಲ್ಲ. ವೃಥಾ ಕಾಲಹರಣ ಸಲ್ಲದು. ಆದ್ದರಿಂದ "ಕುಮಾರವ್ಯಾಸ ಭಾರತ ಕಥಾಮಂಜರಿ" ವಾಚನ ಪ್ರಾರಂಭ!

ಅವರ ವಾಚನ ಕಾರ್ಯಕ್ರಮದಲ್ಲಿ ಒಂದು ವಿಶೇಷತೆ. ಪ್ರತಿ ಪದ್ಯದ ಓದುವಿಕೆಯ ನಂತರ ಅವರೇ ಕೆಲಕಾಲ ಅದರ ಅರ್ಥವ್ಯಾಪ್ತಿ ಮತ್ತು ಸಂಬಂಧಿಸಿದ ವಿಷಯಗಳ ವಿವರಣೆ ಮಾಡುವರು. ನಂತರ ಅಲ್ಲಿದ್ದ ಕೇಳುಗರಿಗೆ ಪ್ರಶ್ನೆ ಕೇಳುವ ಅವಕಾಶ. ಆಗ ಅವರೋ, ಅಲ್ಲಿರುವ ಬೇರೆ ಯಾರೋ ಉತ್ತರ ಹೇಳಬಹುದು. ಹೀಗಾಗಿ ಅನೇಕರ ತಿಳುವಳಿಕೆಯ ವಿನಿಮಯಕ್ಕೆ ಅವಕಾಶ. ಸ್ವತಃ ಕ್ರಮವಾಗಿ ವಿದ್ಯಾಭ್ಯಾಸ ಮಾಡದಿದ್ದರೂ ಸಭಾಸದರ ಮಾತುಗಳು ಅಚ್ಚರಿ ಮೂಡಿಸುವಂತೆ ಇರುವುವು. 'ಕವಿರಾಜಮಾರ್ಗ" ಕರ್ತೃವಿನ "ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್" ಎನ್ನುವ ಉದ್ಗಾರದ ಪ್ರತ್ಯಕ್ಷ ಅನುಭವ. 

ಕುಮಾರವ್ಯಾಸ ಭಾರತ ವಾಚನದ ಮೊದಲ ದಿನ. ಆದಿ ಪರ್ವದ "ಪೀಠಿಕಾ ಸಂಧಿ" ವಾಚನ. ಎರಡನೆಯ ಪದ್ಯ ಪಾರ್ವತೀರಮಣನಾದ ಪರಶಿವನ ಸ್ತುತಿ. ಆ ಪದ್ಯ ಹೀಗುಂಟು:

ಶರಣಸಂಗವ್ಯಸನ ಭುಜಗಾ 
ಭರಣನಮರ ಕಿರೀಟಮಂಡಿತ 
ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರ 
ಕರಣರ್ನಿರ್ಮಲ ಭಜಕರಘ ಸಂ 
ಹರಣ ದಂತಿ ಚಮೂರು ಚರ್ಮಾ೦
ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ 

ಶಂಭುವೋ ಎಲ್ಲರಿಗೂ ಪ್ರಿಯನು. "ಚರ್ಮಾ೦ಬರ" ಎನ್ನುವುದರ ಬಗ್ಗೆ ಒಬ್ಬರು ಪ್ರಶ್ನೆ ಎತ್ತಿದರು. ಅದರ ಹಿಂದೆ ಇರುವ "ದಂತಿ" ಮತ್ತು "ಚಮೂರು" ಪದಗಳ ಚರ್ಚೆಯಾಯಿತು. ದಂತಿ ಎಂದರೆ ಸಂಸ್ಕೃತದಲ್ಲಿ ಆನೆ ಎಂದು. ದಂತವುಳ್ಳದ್ದು ದಂತಿ. ಆನೆಯ ದಂತಗಳು ಎಲ್ಲರಿಗೆ ಗೊತ್ತು. ಗಜಾಸುರ ಎನ್ನುವ ರಾಕ್ಷಸ ಆನೆಯ ರೂಪದಲ್ಲಿ ಸಜ್ಜನರಿಗೆ ತೊಂದರೆ ಕೊಡುತ್ತಿದ್ದ. ಶಂಕರನು ಅವನನ್ನು ಕೊಂದು ಅವನ ಚರ್ಮವನ್ನು ಸುಲಿದು ಮೈಗೆ ಸುತ್ತಿಕೊಂಡ ಎಂದು ಕಥೆ. ಚಮೂರು ಅನ್ನುವುದು ಹಿಮಾಲಯದಂತಹ ಪ್ರದೇಶಗಳಲ್ಲಿ ಕಂಡುಬರುವ ಜಿಂಕೆಯ ರೀತಿಯ ಒಂದು ಮೃಗ. "ಚಮರೀ ಮೃಗ" ಅನ್ನುತ್ತಾರೆ ("ಯಾಕ್" ಮೃಗ). ಅದರ ಚರ್ಮವೂ ಅವನಿಗೆ ಆಗಬಹುದು. ಪಟ್ಟೆ-ಪೀತಾಂಬರಗಳ ಹವ್ಯಾಸವಿಲ್ಲ. ಶ್ರೀಹರಿಯಂತೆ 'ಸಪೀತವಸ್ತ್ರ" ಅಥವಾ "ಕನಕಾಂಬರಧಾರಿ" ಅಲ್ಲ. ಹೀಗೆ ಅರ್ಥವ್ಯಾಪ್ತಿ. ಸದಾಶಿವನು ವೈರಾಗ್ಯ ಮೂರ್ತಿ. ಬೂದಿಯೇ ಆಭರಣ. ಉಡುಗೆ-ತೊಡುಗೆಗಳಲ್ಲಿ ಆಸಕ್ತಿ ಇಲ್ಲ. ಹೀಗೆ ಚರ್ಚೆ ನಡೆಯಿತು. 

ಮೊದಲ ಎರಡು ಪದ್ಯಗಳ ವಾಚನ-ಚರ್ಚೆಯಲ್ಲಿ ಅಂದಿನ ಕಾರ್ಯಕ್ರಮ ಮುಗಿಯಿತು. 

*****

ಮಾರನೆಯ ದಿನ ಸೋಮವಾರ. ಬೆಳಿಗ್ಗೆ ಎದ್ದಾಗ ಅಪರೂಪಕ್ಕೆ ಚಿಕ್ಕವರು (ತಮ್ಮ) ಸಿಕ್ಕರು.  ಸೋಮವಾರ ಪರಶಿವನ ದಿನ. ಅವಧೂತರೊಬ್ಬರು ಪಕ್ಕದ ಗುಡ್ಡದ ಮೇಲೆ ಒಂದು ಆಶ್ರಮ ಕಟ್ಟಿಕೊಂಡು ವಾಸಿಸುತ್ತಿದ್ದರು. ಅವರದು ಸೋಮವಾರ ವಿಶೇಷ ಪೂಜೆ. ಇವರು ಹೊರಟಿದ್ದರು. ನನ್ನನ್ನು ಕಂಡು ನಿಂತರು. 

"ಈದಿನ ಬೆಳಿಗ್ಗೆ ಏನು ನಿನ್ನ ಕಾರ್ಯಕ್ರಮ?'

"ಏನಿಲ್ಲ. ಸುಮ್ಮನೆ ಕಾಲ ಕಳೆಯುವುದು. ಸಂಜೆಯ ವಾಚನದವರೆಗೆ"

"ಗುಡ್ಡದ ಅವಧೂತರ ಕಾರ್ಯಕ್ರಮಕ್ಕೆ ಬರಬಹುದಲ್ಲ?"

"ಬರಬಹುದಾದರೆ ಬರುತ್ತೇನೆ"

"ಬೇಗ ತಯಾರಾಗಿ ಬಾ"

ಅಲಂಕಾರ ಮಾಡಿಕೊಳ್ಳುವ ಅವಶ್ಯಕತೆಯಿರಲಿಲ್ಲ. ತಕ್ಷಣ ಹೊರಟೆ. ಅವರೊಡನೆ ಮಾತಾಡುತ್ತಿದು ಬಹಳ ಕಡಿಮೆ. ದೊಡ್ಡವರಂತೆ ಸಲಿಗೆ ಇರಲಿಲ್ಲ. ಸ್ವಲ್ಪ ಸಂಕೋಚವೇ. ಗುಡ್ಡಕ್ಕೆ ಸುಮಾರು ಇಪ್ಪತ್ತು ನಿಮಿಷಗಳ ನಡಿಗೆ. ಹೆಜ್ಜೆ ಹಾಕಿದೆವು. 

"ನಿನ್ನಿನ ವಾಚನದಲ್ಲಿ ಏನು ವಿಶೇಷ?"

"ಮುಖ್ಯವಾಗಿ "ಚರ್ಮಾ೦ಬರ" ಎನ್ನುವುದರ ಬಗ್ಗೆ ಚರ್ಚೆ ನಡೆಯಿತು"

"ಚರ್ಮಾ೦ಬರ" ಎನ್ನುವುದರಲ್ಲಿ ಇನ್ನೂ ಏನಾದರೂ ವಿಶೇಷವಿದೆಯೋ?"

"ಅಂದರೆ ಅರ್ಥವಾಗಲಿಲ್ಲ"

"ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಚೇತನ ಎಂದು ಕೇಳಿದ್ದೆಯಲ್ಲ?"

"ಕೇಳಿದ್ದೇನೆ"

"ಬುದ್ಧಿ ಇರುವುದು ಎಲ್ಲಿ?"

"ತಲೆಯಲ್ಲಿ. ಮೆದುಳಿನಲ್ಲಿ"

"ಮನಸ್ಸು ಇರುವುದು ಎಲ್ಲಿ?"

ಉತ್ತರ ಗೊತ್ತಿರಲಿಲ್ಲ. ಸುಮ್ಮನಾದೆ. 

"ನನ್ನ ಮನಸ್ಸು ಅನ್ನುತ್ತೇವೆ. ಅದು ನಮ್ಮ ಬಳಿಯೇ ಇರಬೇಕಲ್ಲ?"

"ಹೌದು"

"ಹಾಗಿದ್ದರೆ, ಅದಕ್ಕೆ ನಮ್ಮ ದೇಹದಲ್ಲಿ ಎಲ್ಲಿ ಜಾಗ? ಹೃದಯ ಎದೆ ಗೂಡಿನ ಎಡದಲ್ಲಿದೆ ಅನ್ನುತ್ತೇವೆ. ಮಾತು ನಾಲಗೆಯಲ್ಲಿ ಅನ್ನಬಹುದು. ಬುದ್ಧಿ ಮೆದುಳಿನಲ್ಲಿದೆ. ಅದು ತಲೆಯಲ್ಲಿದೆ ಅನ್ನುತ್ತೇವೆ. ಮನಸ್ಸಿಗೆ ಎಲ್ಲಿ ಜಾಗ?"

"ಅದೂ ತಲೆಯಲ್ಲಿಲ್ಲವೇ?'

"ಮನಸ್ಸು ಒಂದು ಕಡೆ ಸುಮ್ಮನೆ ಕೂಡುವುದಲ್ಲ. ಮನಸ್ಸು ಸರ್ವವ್ಯಾಪಿ. ಅದು ದೇಹದಲ್ಲೆಲ್ಲಾ ಆವರಿಸಿದೆ"

"ಸರಿ ಅನ್ನಿಸುತ್ತದೆ"

"ಮಹಾರುದ್ರದೇವರು ಮನೋಭಿಮಾನಿ. ಮನಸ್ಸನ್ನು ನಿಯಂತ್ರಿಸುವವರು. ಆದ್ದರಿಂದ ಅವರು ಮನಸ್ಸು ಇರುವ ಎಲ್ಲೆಡೆ, ಅಂದರೆ ನಮ್ಮ ದೇಹದ ಎಲ್ಲ ಕಡೆಗಳಲ್ಲಿಯೂ ವ್ಯಾಪಿಸಿದ್ದಾರೆ"

"............... "

"ದೇಹದ ಎಲ್ಲೆಡೆ ಅವರು ವ್ಯಾಪಿಸಿರುವುದರಿಂದ ಅವರ ಹೊರಗಡೆ ಇರುವುದು ಏನು?"

"ನಮ್ಮ ದೇಹದ ಹೊರಗಡೆ, ಎಲ್ಲಕಡೆ ನಮ್ಮ ಚರ್ಮವಿದೆ"

"ಅಂದರೆ ಅವರು ಧರಿಸಿರುವುದು ನಮ್ಮ ಚರ್ಮವೇ ಅನ್ನಬಹುದೇ?"

"ಹಾಗೆ ಹೇಳಬಹುದು"

"ಆದ್ದರಿಂದ ಮನೋಭಿಮಾನಿ ರುದ್ರ ದೇವರು "ಚರ್ಮಾ೦ಬರ" ಅಲ್ಲವೇ?"

"ಹೌದು. ಇದು ನನಗೆ ಹೊಳದೇ ಇರಲಿಲ್ಲ"

"ಸಾಮಾನ್ಯವಾಗಿ ಹೊಳೆಯುವುದಿಲ್ಲ. ಒಮ್ಮೆ ಅವಧೂತರು ನನಗೆ ಹೀಗೆ ಹೇಳಿದರು"

"ಹಾಗಿದ್ದರೆ ನಿನ್ನೆ ಮಾಡಿದ ಚರ್ಚೆ ಅರ್ಥ ತಪ್ಪೇ?"

"ಖಂಡಿತವಾಗಿಯೂ ತಪ್ಪಲ್ಲ. ಆದರೆ, ಅದು ಹೊರಗಿನ, ಅಂದರೆ ಬ್ರಹ್ಮಾಂಡದ ದೃಷ್ಟಿಯ ಅರ್ಥ. ಇದು ಒಳಗಿನ, ಅಂದರೆ ಪಿಂಡಾಂಡದ ದೃಷ್ಟಿಯ ಅರ್ಥ"

"ಬಲು ಚಮತ್ಕಾರಿಕವಾಗಿದೆ"

"ಮೊದಲು ಹಾಗೆನ್ನಿಸುವುದು. ತಿಳಿದವರ ಜೊತೆ ಸಂಗ ಮಾಡಿದಾಗ ಅನೇಕ ಒಳ ಅರ್ಥಗಳು ತೆರೆದುಕೊಳ್ಳುತ್ತವೆ"

ಅವಧೂತರ ಆಶ್ರಮ ಬಂದಿತು. ಒಳಗೆ ಹೋದೆವು. 

*****

ಯಾರಾದರೂ "ಕುಮಾರವ್ಯಾಸ ಭಾರತ ಓದಿದ್ದೀರಾ?" ಎಂದು ಕೇಳಿದರೆ "ಒಹೋ, ನಾಲ್ಕು ಬಾರಿ ಓದಿದ್ದೇನೆ" ಎನ್ನುತ್ತೇವೆ. ಓದಿರಬಹುದು. ನಿಜ. ಎಷ್ಟು ಅರ್ಥವಾಯಿತು? ಒಂದು ಪದ್ಯದ ಒಂದು ಪದಕ್ಕೆ ಇಷ್ಟು ವ್ಯಾಖ್ಯಾನ ತಿಳಿದವರು ಮಾಡುತ್ತಾರೆ. ನಿಜವಾಗಿ ನಮಗೇನು ಗೊತ್ತು? ಎಷ್ಟು ಗೊತ್ತು? 

ಅಧ್ಯಯನ ಹೆಚ್ಚಿದಂತೆಲ್ಲಾ ಅರಿವು ಬೆಳೆದು ಅಹಂಕಾರ ಕ್ರಮೇಣ ಕರಗವುದು. ತಿಳಿದಿರುವುದು ಗುಲಗಂಜಿಯಷ್ಟು. ಎದುರಿಗಿರುವುದೋ ಹಿಮಾಲಯ!

No comments:

Post a Comment