Monday, December 1, 2025

ತಳೋದರಿಯ ಮಾತುಳನ ಮಾವನ...




ಹಿಂದಿನ ಸಂಚಿಕೆಯಲ್ಲಿ ಸಹೋದರಿ, ತಳೋದರಿ, ಮತ್ತು ಮಂಡೋದರಿ ಪದಗಳ ಸಾಮ್ಯ ಮತ್ತು ಭೇದಗಳ ಸ್ವಲ್ಪಮಟ್ಟಿನ ವಿವರಣೆ ನೋಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. ವಿಶೇಷವಾಗಿ "ತಳೋದರಿ" ಅನ್ನುವ ಪದದ ಹಿನ್ನೆಲೆ ಮತ್ತು ಸೊಬಗು ಏನು ಎನ್ನುವುದನ್ನು ನೋಡಿದೆವು. 

ಎಲಿಜಬೆತ್ ಟೇಲರ್ ಅನ್ನುವ ಪ್ರಸಿದ್ಧ ಆಂಗ್ಲ ಚಲನಚಿತ್ರಗಳ ನಟಿ "ಕ್ಲಿಯೋಪಾತ್ರ" ಚಿತ್ರೀಕರಣದ ವೇಳೆಯಲ್ಲಿ ಇಪ್ಪತ್ತೊಂದು ಅಂಗುಲದ ನಡು ಹೊಂದಿದ್ದಳು ಎನ್ನುವುದು ಇತಿಹಾಸದಲ್ಲಿ ದಾಖಲಾಗಿದೆ.  1963ರ ಚಲನಚಿತ್ರದಲ್ಲಿ ರೋಮ್ ನಗರಕ್ಕೆ ಅವಳು ಬರುವ ದೃಶ್ಯದ ಚಿತ್ರೀಕರಣ ಈಗಲೂ ನೋಡುಗರನ್ನು ಆಕರ್ಷಿಸುತ್ತದೆ. AI ಮೊದಲಾದ ಸಾಧನಗಳಿಲ್ಲದ ಕಾಲದ ಅಂತಹ ದೃಶ್ಯದ ಚಿತ್ರೀಕರಣ ಒಂದು ವಿಸ್ಮಯವೇ ಸರಿ. "ಕೃಶಾಂಗಿ" ಎನ್ನುವ ಪದಕ್ಕೆ ಮುಖ್ಯವಾದ ಲಕ್ಷಣ ಹೀಗೆ ಸಣ್ಣ ನಡುವಿರುವುದು. 

ಅನೇಕ ಸಾಹಿತ್ಯ ಕೃತಿಗಳಲ್ಲಿ ಸ್ತ್ರೀಯರ ವರ್ಣನೆಗಳಲ್ಲಿ ಈ ನಡುವಿನ ಸೂಕ್ಷ್ಮತೆ ಬಗ್ಗೆ ವಿವರಣೆಗಳಿವೆ. ಹಸೆಗೆ ಕರೆಯುವ ಹಾಡುಗಳಲ್ಲಿ "ಬಡ ನಡುವಿನ ಬಾಲೆಯರು" ಎಂದು ಸಂಬೋಧನೆಗಳಿವೆ. ಪುರುಷರಿಗೇ ಆಗಲಿ, ಸ್ತ್ರೀಯರಿಗಗೇ ಆಗಲಿ, ಕೆಲವು ಅಂಗಗಳು ಹ್ರಸ್ವವಾಗಿರಬೇಕು. ಕೆಲವು ದೀರ್ಘವಾಗಿರಬೇಕು. (ಕೈ ಮೊಟುಕಾಗಿದ್ದು ಮೂಗು ಬಲು ಉದ್ದವಿದ್ದರೆ ಹೇಗೆ?).  ಕೆಲವು ಸಣ್ಣ ಇರಬೇಕು. ಕೆಲವು ದೊಡ್ಡವಿರಬೇಕು. (ಕೈ-ಕಾಲು ಸಣ್ಣ; ಹೊಟ್ಟೆ ಡುಬ್ಬಣ್ಣ ಅನ್ನುವುದು ಕೇಳಿದ್ದೆವಲ್ಲ!). ಕೆಲವು ಅವಕ್ಕೆ ಅನುಗುಣವಾದ ಬಣ್ಣ ಹೊಂದಿರಬೇಕು. ಹೀಗೆ ಸೌಂದರ್ಯ ಶಾಸ್ತ್ರಗಳ ನಿಯಮಗಳು ಉಂಟು. 

"ನಾವೇನು ಮಾಡುವುದು? ದೇವರು ಅಂಗಾಂಗ ಕೊಟ್ಟಂತಿದ್ದೇವೆ" ಎಂದು ದೇವರ ತಲೆಯಮೇಲೆ ಹೇರುವುದುಂಟು. ಆಯಿತು. ನಮ್ಮ ವಿಷಯಗಳಲ್ಲಿ ಅದು ಸರಿ ಇರಬಹುದು. ಹಾಗಿದ್ದರೂ, ಸೌಂದರ್ಯ ವರ್ಧನೆ ಮಾಡಲು ಎಲ್ಲರೂ ಪಡುವ ಪಾಡು ಅಷ್ಟಿಷ್ಟಲ್ಲ. ಬೊಕ್ಕತಲೆಗೆ ಕೂದಲು ಕಸಿ ಮಾಡುವುದರಿಂದ ಹಿಡಿದು ವಾರಕ್ಕೊಮ್ಮೆ ಮುಖ ತಿದ್ದುವ-ತೀಡುವ ಅಂಗಡಿಗಳ ಮುಂದೆ ಇರುವ ಸರತಿಯ ಸಾಲು ಕಂಡಿದ್ದೆವಲ್ಲ. ನಮ್ಮ ಕಥೆ-ಕವನಗಳ ಪಾತ್ರಗಳಲ್ಲಿ ಹೀಗೆ ಚೆನ್ನಾಗಿರುವುದು ವಿವರಿಸುವುದಕ್ಕೆ ಏನಡ್ಡಿ? ಹೀಗೆ ಚೆನ್ನಾಗಿರುವವರೂ ಅನೇಕರು ಇದ್ದಾರಲ್ಲವೆ? ರಾಕ್ಷಸರನ್ನು ಚಿತ್ರಿಸುವಾಗ ಇವಕ್ಕೆ ವಿರುದ್ಧವಾದ ವರ್ಣನೆಗಳೂ ಉಂಟಲ್ಲ! 

"ತಳೋದರಿ" ಪದವನ್ನು ಕೇವಲ ಒಂದು ಸಾರಿ ಮಾತ್ರ ಉಪಯೋಗಿಸಿ ಅದನ್ನು ವಿಶ್ವ ವಿಖ್ಯಾತ ಮಾಡಿದ ಶ್ರೇಯಸ್ಸು ನಮ್ಮ ಹೆಮ್ಮೆಯ ಕವಿ "ಕುಮಾರವ್ಯಾಸ" ಬಿರುದಿನ ಗದುಗಿನ ನಾರಾಣಪ್ಪನಿಗೆ ಸೇರಬೇಕು ಎಂದು ಸಂಚಿಕೆಯ ಕೊನೆಯಲ್ಲಿ ಹೇಳಿದ್ದೆವು. ಅದು ಏಕೆ ಎಂದು ಈಗ ನೋಡೋಣ. 

*****

ಮನೆಗೆ ಬಂದ ಅತಿಥಿ-ಅಭ್ಯಾಗತರನ್ನು ತೃಪ್ತಿ ಪಡಿಸಲು ಗೃಹಿಣಿ ಮಾಡುವ ಕಸರತ್ತುಗಳಿಗೂ ಕವಿ ತನ್ನ ಕಾವ್ಯ ರಚನೆಯಲ್ಲಿ ಕಾಣುವ ಕಷ್ಟಗಳಿಗೂ ಏನೋ ಒಂದು ವಿಧವಾದ ಸಾದೃಶ್ಯವಿದೆ. ಹಿಂದೆ ಮಾಡಿದ ಅಡಿಗೆ ಪುನರಾವರ್ತನೆ ಆಗಬಾರದು. ಕವಿಗೆ ಹಿಂದೆ ಮಾಡಿದ ವರ್ಣನೆ ಮತ್ತೆ ಬಂದಿರಬಾರದು. ಉಗ್ರಾಣದಲ್ಲಿ ಇರುವ ಪದಾರ್ಥಗಳಿಂದಲೇ ಅಡಿಗೆ ತಯಾರಾಗಬೇಕು. ಕವಿಯ ಪದಸಂಪತ್ತಿನಿಂದಲೇ ಕಾವ್ಯ ಮೂಡಬೇಕು. ಕೆಲವಾದರೂ ಮಾಡಿದ ಪದಾರ್ಥ ಮಕ್ಕಳಿಗೂ ಹಿಡಿಸಬೇಕು. ಹೆಚ್ಚು ತಿಳಿಯದ ಓದುಗರಿಗೂ ಸ್ವಲ್ಪವಾದರೂ ಅರ್ಥ ಆಗುವಂತಿರಬೇಕು. ದೊಡ್ಡವರಿಗೂ ಇಷ್ಟವಾಗುವ ಉಪ್ಪು-ಹುಳಿ-ಖಾರ  ಇರಬೇಕು. ತಿಳಿದ ಓದುಗರಿಗೂ ರಂಜಿಸುವ ರೀತಿ ಕಾವ್ಯ ಇರಬೇಕು. 

ಅತಿಥಿ-ಅಭ್ಯಾಗತರಲ್ಲಿ ಅಡಿಗೆ ಮಾಡುವುದರಲ್ಲಿ ನುರಿತವರು ಇರುತ್ತಾರೆ. ಅವರನ್ನೂ ಮೆಚ್ಚಿಸಬೇಕು. ಕವಿಗೂ ಪಂಡಿತ ವಿಮರ್ಶಕ ಜನರ ಮನ ಗೆಲ್ಲಬೇಕು. ಮುಂದೊಂದು ದಿನ ಇನ್ನೆಲ್ಲೋ ಸಿಕ್ಕಾಗ "ಆಹಾ, ಅಂದು ನಿಮ್ಮ ಮನೆಯ ಊಟ ಈಗಲೂ ನೆನೆಸಿಕೊಳ್ಳುತ್ತೇವೆ" ಎಂದು ಊಟ ಮಾಡಿದವರು ಹೇಳಬೇಕು. ಕವಿಗೆ ತನ್ನ ಕೃತಿ ಬಹು ಕಾಲದವರೆಗೆ ನಿಲ್ಲುವಂತೆ ಆಗಬೇಕು. ಅಡಿಗೆ ಶುಚಿ-ರುಚಿಯಾಗಿ ಇರಬೇಕು. ಕವಿಯ ಕೃತಿ ಸತ್ವಯುತವಾಗಿ ಒಂದು ಮಾದರಿಯಾಗಿ ಉಳಿಯಬೇಕು. ಹೀಗೆ ಆಸೆಗಳು. 

ಕುಮಾರವ್ಯಾಸನ "ಕರ್ಣಾಟ ಭಾರತ ಕಥಾಮಂಜರಿ" ಈ ಎಲ್ಲ ಮಾನದಂಡಗಳಲ್ಲಿಯೂ ಗೆದ್ದು ನಿಂತು ಶತಮಾನಗಳ ನಂತರ ಈಗಲೂ ಜನಪ್ರಿಯವಾಗಿರುವ ಕೃತಿ. ಅವನೇ ಹೇಳುವಂತೆ "ಅರಸುಗಳಿಗಿದು ವೀರ, ದ್ವಿಜರಿಗೆ ಪರಮ ವೇದದ ಸಾರ, ಯೋಗ್ಗೀಶ್ವರರ ತತ್ವ ವಿಚಾರ, ಮಂತ್ರಿ ಜನಕೆ ಬುದ್ಧಿಗುಣ" ಮುಂತಾದ ಯೋಗ್ಯತೆಯುಳ್ಳದ್ದು. ವಿರಹಿಗಳ ಶೃಂಗಾರವೂ ಹೌದು. ವಿದ್ಯಾಪರಿಣಿತರ ಅಲಂಕಾರವೂ ಸರಿಯೇ. ಒಟ್ಟಿನಲ್ಲಿ "ಕಾವ್ಯಕೆ ಗುರು" ಆ ಕೃತಿ.  

*****

ಕವಿ ನಾರಾಣಪ್ಪನು ತನ್ನ ಮಂಗಳಾಚರಣೆ ಮಾಡುವಾಗ "ಪೀಠಿಕಾ ಸಂಧಿ" ಭಾಗವಾಗಿ ಇಪ್ಪತ್ತಮೂರು ಪದ್ಯಗಳಲ್ಲಿ ದೇವನ, ದೇವತೆಗಳ ಸ್ತುತಿ ಮಾಡುತ್ತಾನೆ. "ಇಳೆಯ ಜಾಣರು ಮೆಚ್ಚುವಂತೆ" ರಚಿಸಲು ಪಣ ತೊಡುತ್ತಾನೆ. ಅವನಲ್ಲಿ ಅಹಂಕಾರ ಭಾವವಿಲ್ಲ. ಆದರೆ ವೀರನ ಗತ್ತು ಇದೆ. "ವೀರ ನಾರಾಯಣನೆ ಕವಿ, ಕುಮಾರವ್ಯಾಸ ಲಿಪಿಕಾರ" ಎಂದು ವಿನಯದಿಂದ ಹೇಳಿದರೂ "ಪದವಿಟ್ಟಳುಪದೊಂದಗ್ಗಳಿಕೆ" ಅವನದು. ಒಮ್ಮೆ ಬರೆದರೆ ಮುಗಿಯಿತು. ಮತ್ತೆ ಅಳಿಸಿ, ತಿದ್ದಿ, ಒದ್ದಾಡುವಂತಿಲ್ಲ. ಹೀಗೆ ಶಪಥ ಹೂಡಿ ಮುಂದುವರೆಯುತ್ತಾನೆ. 

ಕೃತಿ "ಭಾಮಿನಿ ಷಟ್ಪದಿ" ರಚನೆ. ಪ್ರತಿ ಪದ್ಯವೂ ಆರು ಸಾಲುಗಳು ಇರಬೇಕು. ಮೊದಲ ಸಾಲು ಏಳು ಮತ್ತು ಏಳು, ಒಟ್ಟು ಹದಿನಾಲ್ಕು ಮಾತ್ರೆಗಳು. ಎರಡನೆಯ ಸಾಲೂ ಹೀಗೆಯೇ ಹದಿನಾಲ್ಕು ಮಾತ್ರೆಗಳು. ಮೂರನೆಯದು ಏಳು, ಏಳು, ಎಂಟು, ಒಟ್ಟು ಇಪ್ಪತ್ತೆರಡು ಮಾತ್ರೆಗಳು. ಮೊದಲ ಅರ್ಧ ಪದ್ಯ ಒಟ್ಟು ಐವತ್ತು ಮಾತ್ರೆಗಳು. ಎರಡನೇ ಅರ್ಧ ಪದ್ಯವೂ ಒಟ್ಟು ಹೀಗೆ ಐವತ್ತು ಮಾತ್ರೆಗಳು. ಒಂದು ಪದ್ಯಕ್ಕೆ ಸರಿಯಾಗಿ ಒಂದು ನೂರು ಮಾತ್ರೆಗಳು. ಹೆಚ್ಚು-ಕಡಿಮೆ ಆಗುವಂತಿಲ್ಲ. ಅಷ್ಟು ಕಾಲ ಹಿಡಿಯುವಂತೆ ಪದಗಳ ಜೋಡಣೆ ಇರಬೇಕು.  

ಪ್ರತಿ ಪದ್ಯವೂ ಒಂದು ದೊಡ್ಡ ಹಾರದ ಮುತ್ತೊಂದರಂತೆ ಇರಬೇಕು. ಹಿಂದು-ಮುಂದಕ್ಕೆ ಕೊಂಡಿಯಂತಿರಬೇಕು. ಕಥೆಯ ಒಟ್ಟು ಓಟಕ್ಕೆ ಸರಿಯಾಗಿ ಕೂಡಿಕೊಂಡಿರಬೇಕು. ಬೇಕಾದ ರಸ-ಭಾವಗಳಿಗೆ ಪೂರಕವಾಗಿರಬೇಕು. ಒಂದು ಪದ್ಯವೂ ಊಟದ ಮಧ್ಯೆ ಸಣ್ಣ ಕಲ್ಲಿನ ಚೂರು ಸಿಕ್ಕಂತೆ ಇರಬಾರದು. ಇವು ಅವನ ಮುಂದಿರುವ ಅನೇಕ ಸವಾಲುಗಳಲ್ಲಿ ಕೆಲವು ಮಾತ್ರ. 

ಒಂದು ಸಣ್ಣ ಪತ್ರ ಬರೆಯಬೇಕಾದರೆ ಹೇಗೆ ಪ್ರಾರಂಭ ಮಾಡಬೇಕು, ಯಾವ ಪದ ಉಪಯೋಗಿಸಬೇಕು, ಎಂದು ತಿಣುಕಾಡಿ, ಹತ್ತು ಬಾರಿ ಬದಲಾಯಿಸಿ, ಹೊಡೆದುಹಾಕಿ, ತಿದ್ದಿ-ತೀಡಿ, ಒದ್ದಾಡುವ ಪರಿಸ್ಥಿತಿಯ ಮುಂದೆ ಇವನ್ನು ಗಮನಿಸಬೇಕು. ಎಲ್ಲ ಬರೆದು ಮುಗಿಸಿದ ಮೇಲೆ "ಅಯ್ಯೋ, ಇದು ಸೇರಿಸುವುದು ಬಿಟ್ಟೆ ಹೋಯಿತಲ್ಲ!" ಎಂದು ಗೋಳಾಡುವುದು ಕೂಡದು. 

*****

ಇಷ್ಟೆಲ್ಲಾ ಕಠಿಣ ಚೌಕಟ್ಟಿನ ಸಂದರ್ಭದಲ್ಲಿ ಪೀಠಿಕಾ ಸಂಧಿಯ ಇಪ್ಪತ್ತಮೂರನೆಯ ಮತ್ತು ಕಡೆಯ ಪದ್ಯದಲ್ಲಿ ಕವಿ ಒಂದು ಸುಂದರ ಒಗಟು ಇಟ್ಟಿದ್ದಾನೆ. ಬಹಳ ಜನಪ್ರಿಯವಾಗಿರುವ ಆ ಪದ್ಯ ಹೀಗಿದೆ:

ವೇದಪುರುಷನ ಸುತನಸುತನ ಸ 
ಹೋದರನ ಮೊಮ್ಮಗನ ಮಗನ ತ
ಳೋದರಿಯ ಮಾತುಳನ ರೂಪನನತುಳ ಭುಜಬಲದಿ 
ಕಾದಿ ಗೆಲಿದನ ಅಣ್ಣ ನವ್ವೆಯ 
ನಾದಿನಿಯ ಜಠರದಲಿ ಜನಿಸಿದ 
ನಾದಿ ಮೂರತಿ ಸಲಹೊ ಗದುಗಿನ ವೀರನಾರಯಣ 

ಮೇಲೆ ಕೊಟ್ಟಿರುವ ಚಿತ್ರವನ್ನು ನೋಡಿಕೊಂಡು ಈ ಪದ್ಯವನ್ನು ಓದಿಕೊಂಡರೆ ಒಗಟನ್ನು ಸುಲಭವಾಗಿ ಬಿಡಿಸಿಕೊಳ್ಳಬಹುದು.  

  • ವೇದಪುರುಷನ - ಶ್ರೀಮನ್ನಾರಾಯಣನ  
  • ಸುತನ (ಮಗ) - ಚತುರ್ಮುಖ ಬ್ರಹ್ಮನ  
  • ಸುತನ (ಮಗ) - ನಾರದನ  
  • ಸಹೋದರನ - ಮರೀಚಿಯ 
  • ಮೊಮ್ಮಗನ - ಮಗ ಕಶ್ಯಪನ ಮಗನಾದ ಇಂದ್ರನ 
  • ಮಗನ - ಅರ್ಜುನನ
  • ತಳೋದರಿಯ - ಹೆಂಡತಿಯಾದ ಸುಭದ್ರೆಯ 
  • ಮಾತುಳನ - ಸೋದರಮಾವನಾದ ಕಂಸನ 
  • ಮಾವನ - ಕಂಸನಿಗೆ ಹೆಣ್ಣುಕೊಟ್ಟ ಮಾವ ಜರಾಸಂಧನನ್ನು 
  • ಅತುಲ ಭುಜಬಲದಿ ಕಾದು ಗೆಲಿದನ - ಭೀಮಸೇನನ 
  • ಅಣ್ಣನ - ಧರ್ಮರಾಯನ 
  • ಅವ್ವೆಯ - ತಾಯಿ ಕುಂತಿಯ 
  • ನಾದಿನಿಯ - ದೇವಕಿಯ 
  • ಜಠರದಲಿ ಜನಿಸಿದ ಅನಾದಿ ಮೂರುತಿ - ಶ್ರೀಕೃಷ್ಣ 
ಶ್ರೀಮನ್ನಾರಾಯಣನಿಂದ ಪ್ರಾರಂಭಿಸಿ ಹದಿಮೂರು ಜನರ ನಂತರ ಅವನ ಇನ್ನೊಂದು ರೂಪನಾದ ಶ್ರೀಕೃಷ್ಣನೇ ಬಂದು ನಿಂತ. ಅವನು ನಮ್ಮನ್ನು ಸಲಹಲಿ ಎಂದು ಪ್ರಾರ್ಥನೆ. ಒಂದು ಹದಿಮೂರು ಮುತ್ತುಗಳ ಹಾರ. ಶ್ರೀಮನ್ನಾರಾಯಣನ ಅವತಾರಿ ಶ್ರೀಕೃಷ್ಣನೇ ಆ ಹಾರದ ಪದಕ. 

*****

 ಈ ಪದ್ಯದಲ್ಲಿ ಅಡಗಿದ ಬೇರೆ ವಿಶೇಷಗಳು ಏನುಂಟು?

  • ಕವಿಯ ಇಷ್ಟ ದೈವ ವೀರ ನಾರಾಯಣ. ಪದ್ಯದ ಪ್ರಾರಂಭ ನಾರಾಯಣನಿಂದ. ಕಡೆಯಾದದ್ದು ಶ್ರೀಕೃಷ್ಣನಿಂದ. ಇದು ಕೌರವ-ಪಾಂಡವರ ಕಥೆ ಎಂದು ಮೇಲು ನೋಟಕ್ಕೆ ಕಂಡರೂ, ಇದರ ಕಥಾನಾಯಕ ಶ್ರೀಕೃಷ್ಣನೇ. ಇದನ್ನು ಕವಿ ಹೀಗೆ ಸೂಚಿಸಿದ್ದಾನೆ.
  • ನಾರಾಯಣನೇ ಅವತರಿಸಿ ಶ್ರೀಕೃಷ್ಣನಾದ ಎಂದು ಹೇಳಿದಂತಾಯಿತು. 
  • ಕೆಲವು ಮುಖ್ಯ ಪಾತ್ರಧಾರಿಗಳನ್ನು (ಅರ್ಜುನ, ಭೀಮ, ಧರ್ಮಜ, ಕುಂತಿ, ಇಂದ್ರ, ಶ್ರೀಕೃಷ್ಣ, ಸುಭದ್ರೆ) ಪರಿಚಯಿಸಿದ್ದಾಯಿತು. (ಬೇರೆಯವರು ಯಾಕಿಲ್ಲ ಎಂದು ಕೇಳಬಹುದು. ನೂರು ಮಾತ್ರೆಗಳ ನೆನಪಿಡಬೇಕು). 
  • ಪಾಂಡವರ-ಯಾದವರ ಕೊಂಡಿ ಇಲ್ಲಿ ಸಿಕ್ಕಿತು. 
ಇನ್ನು ಕೆಲವು ಸಂಗತಿಗಳು:
  • ಮಹಾನಾರಾಯಣೋಪನಿಷತ್ತು ಮುಂತಾದುವು ಹೇಳುವಂತೆ ನಾರಾಯಣನು ವೇದಪ್ರತಿಪಾದ್ಯನಾದ ವೇದಪುರುಷನು. 
  • ನಾರಾಯನಿಗೆ ಅನೇಕ ನೇರ ಮಕ್ಕಳಿದ್ದರೂ ಬ್ರಹ್ಮನೇ ಮೊದಲಿಗನು. ಅಲ್ಲಿಂದ ಸೃಷ್ಟಿ ಪ್ರಾರಂಭ. 
  • ಚತುರ್ಮುಖನಿಗೆ ಅನೇಕ ಮಾನಸ ಪುತ್ರರಿದ್ದಾರೆ. ಅವರಲ್ಲಿ ಯಾರನ್ನಾದರೂ ತೆಗೆದುಕೊಳ್ಳಬಹುದು. ನಾರದರು ಎಲ್ಲರಿಗೂ ಪರಿಚಿತರು. ಹೀಗಾಗಿ ಅವರನ್ನು ತೆಗೆದುಕೊಳ್ಳುವುದು ವಾಡಿಕೆ. 
  • ಮಾನಸ ಪುತ್ರರೆಲ್ಲರೂ ಬ್ರಹ್ಮನಿಂದ ನೇರ ಹುಟ್ಟಿದವರಾದದ್ದರಿಂದ ಅವನೇ ತಾಯಿ ಮತ್ತು ತಂದೆ. ಹೀಗೆ ಹುಟ್ಟಿದವರೆಲ್ಲರೂ ಸಹೋದರರು. 
  • ಅರ್ಜುನನು ಇಂದ್ರನ ವರಪ್ರಸಾದದಿಂದ ಹುಟ್ಟಿದವನು. ಹೀಗಾಗಿ ಮಗನು. 
  • ಅರ್ಜುನನಿಗೆ ಅನೇಕ ಹೆಂಡತಿಯರಿದ್ದರೂ, ಪಾಂಡವ-ಯಾದವ ಕುಲಗಳ ಕೊಂಡಿ ಸುಭದ್ರೆ. 
  • ಶ್ರೀಕೃಷ್ಣ-ಬಲರಾಮರಂತೆ ಕಂಸನು ಸುಭದ್ರೆಗೂ ಸೋದರಮಾವ. ದೇವಕಿಯ ಅಣ್ಣ. 
  • ಕಂಸನು ಜರಾಸಂಧನ ಇಬ್ಬರು ಹೆಣ್ಣು ಮಕ್ಕಳಾದ ಆಸ್ತಿ-ಪ್ರಾಪ್ತಿಯರನ್ನು ಮದುವೆಯಾಗಿದ್ದನು. ಆದ್ದರಿಂದ ಜರಾಸಂಧನು ಕಂಸನಿಗೆ ಹೆಣ್ಣು ಕೊಟ್ಟ ಮಾವ. 
  • ಭೀಮನ ಅವ್ವೆ ಕುಂತಿಯಾದರೂ ಧರ್ಮರಾಯ ಎಲ್ಲರಿಗೂ ಹಿರಿಯ. ಆದ್ದರಿಂದ ಮುಖ್ಯ. ಅಲ್ಲದೆ ಒಂದು ನೂರು ಮಾತ್ರೆಗಳ ಪದಗಳನ್ನು ಕೂಡಿಸಬೇಕಲ್ಲ!
  • ಕುಂತಿಯು ವಸುದೇವನ ಸಹೋದರಿ. ಇಬ್ಬರೂ ಯಾದವ ಶೂರಸೇನನ ಮಕ್ಕಳು. ಅವಳ ಹುಟ್ಟು ಹೆಸರು ಪೃಥಾ. ಶೂರಸೇನನ ತಮ್ಮ ಕುಂತಿಭೋಜನು ಮಕ್ಕಳಿಲ್ಲದ್ದರಿಂದ ಅವಳನ್ನು ದತ್ತು ತೆಗೆದುಕೊಂಡ. ಆಗ ಅವಳ ಹೆಸರು ಕುಂತಿ ಎಂದಾಯಿತು. 
  • ಕುಂತಿ ಮತ್ತು ವಸುದೇವನ ಹೆಂಡತಿ ದೇವಕಿ ಈ ಕಾರಣದಿಂದ ಅತ್ತಿಗೆ-ನಾದಿನಿಯರು. ಶ್ರೀಕೃಷ್ಣನಿಗೆ ಕುಂತಿ ಸೋದರತ್ತೆ. 
*****

ಮಂಗಳಾಚರಣೆಯ ಈ ಕೊನೆಯ ಪದ್ಯದ ಮೂಲಕ ಕವಿ ತನ್ನ ಇಷ್ಟದೈವ ಗದುಗಿನ ವೀರನಾರಾಯಣನಿಂದ ಕಥಾನಾಯಕ ಶ್ರೀಕೃಷ್ಣವರೆಗೆ ಒಂದು ದೊಡ್ಡ ಮಂಗಳಾರತಿ ಮಾಡಿ ಪ್ರಾರಂಭಿಸಿದ್ದಾನೆ. ಇಲ್ಲಿ ಬಳಸಿದ "ತಳೋದರಿ" ಪದವೂ ಹೀಗೆ ವಿಶ್ವ ವಿಖ್ಯಾತ ಆಯಿತು! 

1 comment:

  1. Great job byNaranappa I meet so many clauses to see that the composition meets all critical requirements indeed

    ReplyDelete