Thursday, December 4, 2025

ಶ್ರೀಕೃಷ್ಣ ಅಂದರೆ ಯಾರು?


ಶ್ರೀಕೃಷ್ಣ ಅಂದರೆ ಯಾರು? ಹೀಗೆ ಯಾರಾದರೂ ನಮ್ಮನ್ನು ಪ್ರಶ್ನೆ ಮಾಡಿದರೆ ನಮ್ಮಲ್ಲಿ ಬಹುತೇಕರು ಪ್ರಶ್ನೆಗೆ ಉತ್ತರ ಕೊಡುವ ಬದಲು ಪ್ರಶ್ನೆ ಕೇಳಿದವರ ಮುಖವನ್ನು ದಿಟ್ಟಿಸಿ ನೋಡುವುದು ಸಹಜ. ಇದೇನು, ಇಂತಹ ಪ್ರಶ್ನೆ ಕೇಳುವುದೇ? ನಮ್ಮಲ್ಲಿ ರಾಮ, ಕೃಷ್ಣರನ್ನು ತಿಳಿಯದ ಮಂದಿ ಇದ್ದಾರೆಯೇ? ವಾಮನ, ತ್ರಿವಿಕ್ರಮ ನೆನಪಿಲ್ಲದಿರಬಹುದು. ವರಾಹ, ಸಂಕರ್ಷಣ ಯಾರೆಂದು ಗೊತ್ತಿಲ್ಲದಿರಬಹುದು. ದಾಮೋದರ ಮತ್ತು ಪ್ರದ್ಯುಮ್ನ ತಿಳಿದಿಲ್ಲದಿರಬಹುದು. ಆದರೆ ರಾಮ, ಕೃಷ್ಣ ಗೊತ್ತಿಲ್ಲವೇ? ಗಣಪ, ಹನುಮ, ಶಿವ, ರಾಮ, ಕೃಷ್ಣ, ಇವರು ಚಿಕ್ಕ ಮಕ್ಕಳಿಗೂ ಗೊತ್ತು. ಅಷ್ಟೇ ಅಲ್ಲ. ಇದು ಚಿಕ್ಕ ಮಕ್ಕಳಿಗೂ ಗೊತ್ತು ಎನ್ನುವುದು ಕೂಡ ಎಲ್ಲರಿಗೂ ಗೊತ್ತು. ಹೀಗಿರುವಾಗ, ಇದೆಂಥ ಪ್ರಶ್ನೆ? 

ಇಂತಹ ಪ್ರಶ್ನೆ ಸುಮ್ಮನೆ ಮಾಡಿದುದಲ್ಲ. ಅದಕ್ಕೆ ಕಾರಣಗಳಿವೆ. ಏನು ಕಾರಣಗಳು ಎನ್ನುವುದನ್ನು ಸ್ವಲ್ಪ ನೋಡೋಣ. 
*****

ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಅಂಚೆಯ ಪೆಟ್ಟಿಗೆ (ಪೋಸ್ಟ್ ಬಾಕ್ಸ್) ಅನ್ನುವ ಒಂದು ವಸ್ತು ಹೆಚ್ಚು ಕಡಿಮೆ ಮರೆತೇಹೋಗಿದೆ. ಕೊರಿಯರ್ ಸೇವೆ ಬಂದು ಹರಡಿದ ನಂತರ ಪೋಸ್ಟ್ ಆಫೀಸಿಗೆ ಹೋಗುವ ಸಂದರ್ಭಗಳು ಬಹಳ ಕಡಿಮೆ ಆದವು. ಸುಮಾರು ನಲವತ್ತು ವರುಷಗಳ ಹಿಂದೆ ಪೋಸ್ಟ್ ಕಾರ್ಡು, ಅಂಚೆ ಚೀಟಿ, ಅಂಚೆ ಡಬ್ಬ, ಅಂಚೆ ಕಚೇರಿ, ಇವೆಲ್ಲ ಪ್ರತಿದಿನ ನೋಡುತ್ತಿದ್ದ, ಆಗಾಗ ಉಪಯೋಗಿಸುತ್ತಿದ್ದ ಸೇವೆಗಳು. ಯಾವುದೋ ಸಂದರ್ಭಗಳಲ್ಲಿ ಪೋಸ್ಟ್ ಮ್ಯಾನ್ ಆಗಮನ ನಿರೀಕ್ಷಿಸಿ ಮನೆಯ ಬಾಗಿಲ ಬಳಿ ಕಾಯುತ್ತಿದ್ದುದೂ ಇರುತ್ತಿತ್ತು. ಕೆಲವು ಅಂಗಡಿಗಳಲ್ಲಿ ಒಂದು ಸಣ್ಣ ಡಬ್ಬಿಯಲ್ಲಿ ಅಂಚೆ ಚೀಟಿಗಳನ್ನು ಇಟ್ಟುಕೊಂಡು ಐದು ಪೈಸೆ ಚೀಟಿಯನ್ನು ಆರು ಪೈಸೆಗೆ ಮಾರುತ್ತಿದ್ದುದೂ ಉಂಟು. ಅಂಚೆ ಕಚೇರಿ ದಿನದ ವಹಿವಾಟು ಮುಗಿಸಿ ಮುಚ್ಚಿದ ನಂತರ ಅಥವಾ ರಜಾ ದಿನಗಳಲ್ಲಿ ಇವುಗಳ ಸೇವೆ ಅಮೂಲ್ಯವಾಗಿಯೂ ಇತ್ತು. 

ಬೇರೆಡೆಗೆ ಕಳುಹಿಸಬೇಕಾದ ಪತ್ರಗಳನ್ನು ಅಂಚೆಯ ಡಬ್ಬದಲ್ಲಿ ಹಾಕುವುದು ಆಗ ಒಂದು ಮುಖ್ಯ ಕೆಲಸ ಆಗಿರುತ್ತಿತ್ತು. ಅಲ್ಲಲ್ಲಿ ಸಣ್ಣ ಕೆಂಪು ಬಣ್ಣದ ಪೋಸ್ಟ್ ಡಬ್ಬಗಳಿರುತ್ತಿದ್ದುವು. ಅವುಗಳ ಮೇಲೆ "Next Clearance" ಎಂದು ಸಮಯ ತೋರಿಸುವ ಬಿಲ್ಲೆಗಳನ್ನು ಹಾಕಿರುತ್ತಿದ್ದರು. ಪ್ರತಿಯೊಂದು ಡಬ್ಬಕ್ಕೂ ಕಾಗದ-ಲಕೋಟೆಗಳನ್ನು ಹಾಕಲು ಒಂದು ಕಿಂಡಿ ಇರುತ್ತಿತ್ತು. ಮುಖ್ಯ ಅಂಚೆ ಕಚೇರಿಗಳ ಮುಂದೆ ದೊಡ್ಡ ಕೆಂಪು ಬಣ್ಣದ ಪೋಸ್ಟ್ ಬಾಕ್ಸುಗಳು. ಅವುಗಳಿಗೆ ಎರಡು ಕಡೆ ಕಿಂಡಿಗಳು. ಒಂದೇ ಸಮಯದಲ್ಲಿ ಇಬ್ಬರು ಪತ್ರಗಳನ್ನು ಅವುಗಳಲ್ಲಿ ಹಾಕುವ ಅನುಕೂಲತೆಗೆ. ಯಾವ ಕಿಂಡಿಯಲ್ಲಿ ಹಾಕಿದರೂ ಅವು ಬೀಳುತ್ತಿದ್ದುದು ಆ ಬಾಕ್ಸುಗಳ ಒಂದೇ ದೊಡ್ಡ ಹೊಟ್ಟೆಗೆ. 

ಬೆಂಗಳೂರಿನಲ್ಲಿ ವಿಧಾನಸೌಧ ಮತ್ತು ಆಗ ಇದ್ದ ಟ್ರಂಕ್ ಟೆಲಿಫೋನ್ ಎಕ್ಸ್ಚೇಂಜ್ ಕಟ್ಟಡದ ಮಧ್ಯೆ ಇದ್ದ ಹಳೆಯ ಜಿ. ಪಿ. ಓ. ಕಟ್ಟಡದ ಮುಂದೆ (ಈಗ ಅಲ್ಲಿ ಒಂದು ಸೌಧದಂತಹ ಜಿ.ಪಿ.ಓ. ಕಟ್ಟಡ ಬಂದಿದೆ) ಒಂದು ಬಲು ದೊಡ್ಡ ಪೋಸ್ಟ್ ಬಾಕ್ಸ್ ಇತ್ತು. ಅದಕ್ಕೆ ಆರು ಕಿಂಡಿಗಳು! ಅದೂ ಸಹ ದೊಡ್ಡ ದೊಡ್ಡ ಕಿಂಡಿಗಳು. ಒಂದೇ ಸಮಯದಲ್ಲಿ ಆರು ಮಂದಿ ದಪ್ಪ ಕಾಗದ-ಪಾತ್ರಗಳನ್ನು ಅಲ್ಲಿ ತುರುಕಬಹುದಾಗಿತ್ತು. ಎಲ್ಲಿ ತುರುಕಿದರೂ ಅವೆಲ್ಲಾ ತಲುಪುತ್ತಿದ್ದುದು ಆ ಅತಿ ದೊಡ್ಡ ಬಾಕ್ಸಿನ ಒಂದೇ ಬಕಾಸುರ ಹೊಟ್ಟೆಗೆ. ಹೀಗಿದ್ದರೂ ಸಂಜೆಯ ಹೊತ್ತಿನಲ್ಲಿ ಅಲ್ಲಿ ಹೆಚ್ಚಿನ ಜನ ಪತ್ರಗಳನ್ನು ಪೋಸ್ಟ್ ಮಾಡಲು ಬಂದಿರುತ್ತಿದ್ದರು. ಹಳೆಯ ತಲೆಮಾರಿನ ಜನ ಇದನ್ನು ನೆನೆಪಿಸಿಕೊಳ್ಳಬಹುದು. ಆತುರಾತುರದಲ್ಲಿ ಸಂಜೆ ಅಲ್ಲಿಗೆ ಹೋಗಿ, ಡಬ್ಬದಲ್ಲಿ ಪತ್ರ-ಲಕೋಟೆಗಳನ್ನು ಹಾಕಿ, ಕೈ ಮುಗಿದು ಬಂದಿರುವ ಉದಾಹರಣೆಗಳು ಅನೇಕ. 
*****

ಯಾವುದೇ ಪೂಜೆ-ಪುನಸ್ಕಾರ, ಹವನ-ಹೋಮ, ವ್ರತ-ನಿಯಮಗಳನ್ನು ಆಚರಿಸಿದಮೇಲೆ ಕಡೆಯಲ್ಲಿ ಇದೆಲ್ಲ ಪರಮಪುರುಷನಿಗೆ ಸೇರಲಿ ಎಂದು ಭಾವಿಸಿ "ಶ್ರೀಕೃಷ್ಣಾರ್ಪಣಮಸ್ತು" ಎಂದು ಹೇಳುವುದು ವಾಡಿಕೆ. ಜಪ-ತಪ, ದಾನ-ಧರ್ಮಗಳನ್ನು ಮಾಡಿದ್ದು ಕೂಡ ಕಡೆಗೆ ಹೀಗೆಯೇ ವಿನಿಯೋಗ. ಅಷ್ಟೇ ಏಕೆ? ದಾಸರು "ಕೈ ಮೀರಿ ಹೋದದ್ದೇ ಕೃಷ್ಣಾರ್ಪಣ" ಅಂದುಬಿಟ್ಟರು. ಇದನ್ನು ನಾವು ಕೊಡಬೇಕೆಂದು ಕೊಟ್ಟದ್ದಲ್ಲ. ಕೈತಪ್ಪಿ ಜಾರಿರಬಹುದು. ಯಾರೋ ಕಿತ್ತುಕೊಂಡು ಹೋಗಿರಬಹುದು. ಇಲ್ಲವೇ ಕುತಂತ್ರ, ಮೋಸಗಳಿಗೆ ಸಿಕ್ಕಿ ಕಳೆದುಕೊಂಡಿರಬಹುದು. ಹೀಗಿದ್ದರೂ ಸಹ, ಅಂತಹವುಗಳೆಲ್ಲದರ ಗತಿಯೂ ಕಡೆಯ ವಿನಿಯೋಗವನ್ನು  ಮಾಡುವುದು "ಶ್ರೀಕೃಷ್ಣಾರ್ಪಣಮಸ್ತು" ಎಂದು ಹೇಳಿಯೇ. ಕೆಲವರು "ಪರಮೇಶ್ವರಾರ್ಪಣಮಸ್ತು" ಅನ್ನಬಹುದು. ಆದರೂ ಈ ಸಂದರ್ಭಗಳಲ್ಲಿ ಶ್ರೀಕೃಷ್ಣನನ್ನು ನೆನೆಸಿಕೊಳ್ಳುವುದೇ ಹೆಚ್ಚು ವ್ಯಾಪಕ. 

ಈ ಕೃಷ್ಣ ಯಾರು? 

ಕೃಷ್ಣ ಯಾರು ಅಂದರೆ? ಅವನೇ. ಮಥುರೆಯ ಕಂಸನ ಕಾರಾಗೃಹದಲ್ಲಿ ಹುಟ್ಟಿದವನು. ಕಂಸನ ತಂಗಿ ದೇವಕಿಯ ಮಗ. ದೇವಕಿ-ವಸುದೇವರ ಮಗ. ಅವರ ಎಂಟನೆಯ ಕೂಸು. ಹುಟ್ಟಿದ ತಕ್ಷಣ ಅವರಪ್ಪ ಅವನನ್ನು ಎತ್ತಿಕೊಂಡು ತುಂಬಿ ಹರಿಯುತ್ತಿದ್ದ ಯಮುನೆಯನ್ನು ದಾಟಿ, ಗೋಕುಲ ತಲುಪಿ, ಅಲ್ಲಿನ ನಂದಗೋಪನ ಹೆಂಡತಿ ಯಶೋದೆ ಪಕ್ಕ ಮಲಗಿಸಿ, ಅಲ್ಲಿದ್ದ ಹೆಣ್ಣು ಮಗುವನ್ನು ಹೊತ್ತುಕೊಂಡು ಬರಲಿಲ್ಲವೇ? ಅವನೇ. ಪೂತನಿಯಿಂದ ಪ್ರಾರಂಭಿಸಿ, ಅದೆಷ್ಟೋ ರಕ್ಕಸರನ್ನು ಕೊಂದು, ಕಾಳೀಯನನ್ನು ಮರ್ದಿಸಿ, ಗೋವರ್ಧನ ಎಬ್ಬಿಸಿ, ಗೋಪಿಯರ ಮನೆಯ ಹಾಲು-ಮೊಸರು-ಬೆಣ್ಣೆ ಕದ್ದು ಕುಡಿದು-ತಿಂದು-ತೇಗಿ, ಹೆಣ್ಣುಮಕ್ಕಳ ಸೀರೆ-ವಸ್ತ್ರಗಳನ್ನು ಅಪಹರಿಸಿ, ಜಲಕ್ರೀಡೆ-ರಾಸಕ್ರೀಡೆ ಆಡಿ-ಆಡಿಸಿ, ಇನ್ನೂ ಏನೇನೂ ಮಾಡಿದನಲ್ಲ. ಅವನೇ. 

ಅಣ್ಣ ಬಲರಾಮನೊಡನೆ ಅಕ್ರೂರನ ಜೊತೆ ಮಧುರೆಗೆ ಹೋಗಿ, ಚಾಣೂರ-ಮುಷ್ಟಿಕ-ಕುವಲಯಾಪೀಡ ಆನೆ, ಇವೆಲ್ಲ ಕೊಂದು, ಕಡೆಗೆ ಕಂಸನಿಗೂ ಒಂದು ಗತಿ ಕಾಣಿಸಿ, ಅಪ್ಪ-ಅಮ್ಮನನ್ನು ಸೆರೆಯಿಂದ ಬಿಡಿಸಿದನಲ್ಲ.  ಅವನೇ. ಭೀಮಸೇನನಿಂದ ಜರಾಸಂಧನನ್ನು ಕೊಲ್ಲಿಸಿ, ಕುರುಕ್ಷೇತ ಯುದ್ಧ ಮಾಡಿಸಿ, ಕೌರವರನ್ನು ಕೊನೆಗಾಣಿಸಿ, ಪಾಂಡವರಿಗೆ ರಾಜ್ಯ ಕೊಡಿಸಿದವನು. ಹದಿನಾರು ಸಾವಿರದ ನೂರಾ ಎಂಟು ಹೆಣ್ಣುಗಳನ್ನು ಮದುವೆ ಮಾಡಿಕೊಂಡವನು. ದ್ವಾರಕಾವತಿ ನಿರ್ಮಿಸಿ, ಯಾದವರನ್ನೆಲ್ಲ ಅಲ್ಲಿಗೆ ಸೇರಿಸಿದವನು. ಹೀಗೆ ಬೇರೆ ಇನ್ನೂ ಏನೇನೋ ಮಾಡಿದವನು. ಅವನೇ. ತಲೆಗೆ ನವಿಲುಗರಿ ಸಿಕ್ಕಿಸಿಕೊಂಡು ಕೊಳಲು ನುಡಿಸುತ್ತಿರುವ ಮುರಳೀಧರ. ದನಗಳನ್ನು ಕಾಯುವ ಗೋಪಾಲ. ಅವನೇ ಶ್ರೀಕೃಷ್ಣ. 

ಕಪ್ಪು ಬಣ್ಣದವನಾದ್ದರಿಂದ ಕೃಷ್ಣ. ವಸುದೇವನ ಮಗ ಆದುದರಿಂದ ವಾಸುದೇವ. ಅವನೇ ವಾಸುದೇವ ಶ್ರೀಕೃಷ್ಣ. ಹೀಗೆ ಸಾಮಾನ್ಯವಾಗಿ ಹೇಳುವುದು. 

*****

ಸರಿ ಹಾಗಿದ್ದರೆ. ಶ್ರೀಕೃಷ್ಣನು ದೇವಕಿ-ವಸುದೇವರ ಎಂಟನೆಯ ಮಗ. ದ್ವಾಪರಯುಗದಲ್ಲಿ ಹುಟ್ಟಿದವನು. ಅವನು ಶ್ರೀವಿಷ್ಣುವಿನ ಒಂದು ಅವತಾರರೂಪ. ಅವನೇ ಅರ್ಜುನನಿಗೆ ಭಗವದ್ಗೀತೆಯನ್ನು ಉದಪದೇಶಿಸಿದವನು. "ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್, ಯತ್ತಪಸ್ಯಸಿ ಕೌಂತೇಯ ತತ್ಕುರುಶ್ವ ಮದರ್ಪಣಂ" ಎಂದವನು. "ನೀನು ಮಾಡಿದ್ದನ್ನೆಲ್ಲ, ನೀನು ಸೇವಿಸಿದ್ದನ್ನೆಲ್ಲ, ಹೋಮಾದಿಗಳಲ್ಲಿ ಹಾಕಿದ್ದನ್ನು, ದಾನಾದಿಗಳಲ್ಲಿ ಕೊಟ್ಟಿದ್ದನ್ನು, ಜಪ-ತಪಗಳಲ್ಲಿ ಪಡೆದದ್ದನ್ನು, ಎಲ್ಲವನ್ನೂ ನನಗೆ ಅರ್ಪಿಸು" ಎಂದು ಭಗವದ್ಗೀತೆಯಲ್ಲಿ ಹೇಳಿದವನು. ಅದಕ್ಕೇ ಅವನಿಗೆ ಅರ್ಪಿಸಲು ಎಂದು ಉದ್ದೇಶಿಸಿ "ಶ್ರೀಕೃಷ್ಣಾರ್ಪಣಮಸ್ತು" ಅನ್ನುತ್ತೇವೆ. 

ಒಪ್ಪೋಣ. ಹಾಗಿದ್ದರೆ ಮಹಾಭಾರತ ನಡೆಯುವುದಕ್ಕೆ ಮುನ್ನ, ದ್ವಾಪರ ಯುಗಕ್ಕೆ ಮುಂಚೆ, ಈ ಕೃಷ್ಣ ಹುಟ್ಟುವ ಮುಂಚೆ, ಏನು ಮಾಡುತ್ತಿದ್ದರು? ಹೇಗೆ ಅರ್ಪಣೆ ನಡೆಯುತ್ತಿತ್ತು? ಇದೊಂದು ಪ್ರಶ್ನೆ ಉಳಿಯಿತು. ಅಲ್ಲವೇ?

ಕೇಶವಾದಿ (ಚತುರ್ವಿಂಶತಿ) ಇಪ್ಪತ್ತನಾಲ್ಕು ನಾಮಗಳು ಎನ್ನುತ್ತೇವೆ. ಕೇಶವನಿಂದ ಹಿಡಿದು, ನಾರಾಯಣ, ಮಾಧವ ಮುಂತಾದ ಇಪ್ಪತ್ತನಾಲ್ಕು ಹೆಸರುಗಳು ಉಂಟು. ಅದರಲ್ಲಿ ಕಡೆಯದು ಶ್ರೀಕೃಷ್ಣ. ಹದಿನಾಲ್ಕನೆಯವನು ವಾಸುದೇವ. ಹತ್ತೊಂಭತ್ತನೆಯವನು ಒಬ್ಬ ನರಸಿಂಹನೂ ಇದ್ದಾನೆ. ಇದು ಎಂದಿನಿಂದಲೂ ಉಂಟು. ಸೃಷ್ಟಿಯ ಮೊದಲಿನಿಂದಲೂ ಇದೆ. ಈ ಕೃಷ್ಣ ಯಾರು? ಈ ಇಪ್ಪತ್ತನಾಲ್ಕರಲ್ಲಿ ಹದಿನಾಲ್ಕನೆಯವನು ವಾಸುದೇವ. ಈ ವಾಸುದೇವ ಯಾರು? ದ್ವಾಪರದ ಕೃಷ್ಣ ಹುಟ್ಟುವ ಮುಂಚೆ ಇವರು ಹೇಗೆ ಇದ್ದರು?

*****

ಗೀತೋಪದೇಶ ಕಾಲದಲ್ಲಿ, ಕಡೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಒಮ್ಮೆ ತನ್ನ ವಿರಾಟ್ ರೂಪ ತೋರಿಸುತ್ತಾನೆ. ಅರ್ಜುನನಂತಹವನೂ ಅದನ್ನು ನೋಡಲಾರ. "ಸ್ವಾಮಿ, ಇದನ್ನು ಮರೆ ಮಾಡು. ನನ್ನ ಮೈ ಸುಡುತ್ತಿದೆ. ಮೊದಲಿನ ಸೌಮ್ಯ ರೂಪ ತೋರಿಸು" ಎಂದು ಅಂಗಲಾಚಾಚುತ್ತಾನೆ. ಪರಮಪುರುಷನ ವಿರಾಟ್ ರೂಪವನ್ನು ನಾವು ಕಲ್ಪಿಸಿಕೊಳ್ಳುವುದೂ ಕಷ್ಟ. ಅವನ ಆಯುಧಗಳು ಮೂರು ಅವನ ಜೊತೆಯಲ್ಲಿಯೇ ಇರುತ್ತವೆ. ಸುದರ್ಶನ ಚಕ್ರ, ಪಾಂಚಜನ್ಯ ಶಂಖ ಮತ್ತು ಕೌಮೋದಕಿ ಗದೆ. ಒಂದು ಅಭಯ ಹಸ್ತವೋ, ಕಮಲದ ಕೈಯ್ಯೋ ಬೇಕು. ಅದಕ್ಕೆ ನಾಲ್ಕು ಕೈಗಳ ಶ್ರೀಹರಿಯನ್ನು ಚಿಂತಿಸುವುದು. ಈ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ, ಪದ್ಮ. ಇವುಗಳನ್ನು ಹೇಗೆ ಹಿಡಿದುಕೊಳ್ಳಬೇಕು? ಇದು ಇಪ್ಪತ್ತುನಾಲ್ಕು ರೀತಿ ಸಾಧ್ಯ. ಆದ್ದರಿಂದ ಇಪ್ಪತ್ತುನಾಲ್ಕು ರೂಪಗಳು. ಅವುಗಳಿಗೆ ಕೇಶವನಿಂದ ಶ್ರೀಕೃಷ್ಣನವರೆಗೆ ಇಪ್ಪತ್ತುನಾಲ್ಕು ಮೂಲ ಹೆಸರುಗಳು. 


ಶ್ರೀಕೃಷ್ಣಾರ್ಪಣಮಸ್ತು ಎನ್ನುವಾಗ ವಾಸ್ತವವಾಗಿ ನೆನೆಯುವುದು ಈ ಇಪ್ಪತ್ನಾಲ್ಕು ಮೂಲ ರೂಪಗಳ ಕಡೆಯವನಾದ ಶ್ರೀಕೃಷ್ಣನನ್ನು. ಮೇಲಿನ ಚಿತ್ರದಲ್ಲಿರುವುದು ಶ್ರೀಕೃಷ್ಣ ರೂಪ. ಅವನು ಕ್ರಮವಾಗಿ ಗದೆ, ಪದ್ಮ, ಚಕ್ರ ಮತ್ತು ಶಂಖಗಳನ್ನು ಹಿಡಿದಿದ್ದಾನೆ. ಹದಿನಾಲ್ಕನೆಯವನು ವಾಸುದೇವ. "ಸರ್ವತ್ರ ವಾಸಯತಿ ಇತಿ ವಾಸುದೇವಃ". "ಎಲ್ಲ ಕಡೆಯೂ ವಾಸವಾಗಿ ಇದ್ದಾನೆ. ಆದ್ದರಿಂದ ಅವನಿಗೆ ವಾಸುದೇವ ಎಂದು ಹೆಸರು". ದ್ವಾಪರದ ವಸುದೇವ ಹುಟ್ಟುವ ಮೊದಲೂ ಈ ವಾಸುದೇವ ಮತ್ತು ಶ್ರೀಕೃಷ್ಣರು ಇದ್ದೇ ಇದ್ದರು. ಅನಾದಿ ಕಾಲದಿಂದ ಇದ್ದಾರೆ. ಅನಂತ ಕಾಲದವರೆಗೆ ಇರುತ್ತಾರೆ. 

ಇಪ್ಪತ್ತುನಾಲ್ಕು ಜನರು ಸಾಲಾಗಿ ನಿಂತಿದ್ದಾರೆ. ಹೇಗೆ ಕರೆಯಬೇಕು? ಈ ಕಡೆಯಿಂದ ಕರೆದರೆ "ಕೇಶವಾದಿಗಳೇ, ಬನ್ನಿ" ಎನ್ನಬೇಕು. ಆ ಕಡೆಯಿಂದ ಕೊಟ್ಟರೆ "ಶ್ರೀಕೃಷ್ಣಾದಿಗಳೇ, ತೆಗೆದುಕೊಳ್ಳಿ" ಆನ್ನಬೇಕು. ಆದ್ದರಿಂದ ಸಮರ್ಪಣೆ ಮಾಡುವಾಗ (ಇಪ್ಪತ್ತನಾಲ್ಕರಲ್ಲಿ) ಕಡೆಯ ರೂಪ ಶ್ರೀಕೃಷ್ಣ ಆದುದರಿಂದ "ಶ್ರೀಕೃಷ್ಣಾರ್ಪಣಮಸ್ತು" ಅನ್ನುವುದು.. 

***** 

ಹಾಗಿದ್ದರೆ, ನಾವು ಪ್ರತಿದಿನ ಮಾಡುತ್ತಿರುವುದು ತಪ್ಪೇ? ನಾವು ನವಿಲುಗರಿಯ, ದನಕಾಯುವ, ಬೆಣ್ಣೆ ಕದಿಯುವ, (ಅಥವಾ ಬಿ. ಆರ್. ಛೋಪ್ರಾ ಮಹಾಭಾರತ ಧಾರಾವಾಹಿಯ ನಿತೀಶ್ ಭಾರದ್ವಾಜನನ್ನು) ಇಲ್ಲವೆಂದರೆ ಗೀತೋಪದೇಶ ಮಾಡುತ್ತಿರುವ ಪಾರ್ಥಸಾರಥಿಯನ್ನು ನೆನೆಯುತ್ತೆವಲ್ಲ! ಅದು ಸರಿಯೇ?

ಪರಮಪುರುಷನ ಪೂರ್ಣ ರೂಪ ನಮ್ಮ ಕಲ್ಪನೆಗೆ ನಿಲುಕದ್ದು. ಆದ್ದರಿಂದ ಅವನು ನಮಗೆ ಬಲು ಸುಲಭ ಮಾಡಿಕೊಟ್ಟಿದ್ದಾನೆ. ನಾವು ಹೇಗೆ ಕಲ್ಪಿಸಿಕೊಳ್ಳುತ್ತೇವೆಯೋ, ಹಾಗೆ ತೋರುತ್ತಾನೆ. ಅದಕ್ಕೆ ಅವನೇನು ವೇಷ ಹಾಕಬೇಕಾಗಿಲ್ಲ. ಮೇಕಪ್ ಬೇಕಿಲ್ಲ. ಎಲ್ಲೆಡೆ ವ್ಯಾಪಿಸಿ ನಿಂತಿದ್ದಾನೆ. ಆ ಕೃಷ್ಣನನ್ನು ನೆನೆದು ಕರೆದರೆ ಹಾಗೆ ಬರುತ್ತಾನೆ. ಈ ಕೃಷ್ಣನನ್ನು ನೆನೆದು ಕರೆದರೆ ಹೀಗೆ ಬರುತ್ತಾನೆ. ಅಷ್ಟೇ. 

ಜಿ. ಪಿ. ಓ. ಮುಂದೆ ಇರುವ ಅಂಚೆ ಡಬ್ಬಿಯ ಆರು ಕಿಂಡಿಗಳಲ್ಲಿ ಯಾವ ಕಿಂಡಿಯಲ್ಲಿ ಪತ್ರ ಹಾಕಿದರೂ ಆ ಡಬ್ಬಿಯ ದೊಡ್ಡ ಹೊಟ್ಟೆಯನ್ನೇ ಸೇರುತ್ತದೆ. "ಅಯ್ಯೋ, ಆ ಕಿಂಡಿಯಲ್ಲಿ ಹಾಕಬೇಕಿತ್ತು. ಇದರಲ್ಲಿ ಹಾಕಿಬಿಟ್ಟೆನಲ್ಲ" ಎಂದು ಚಿಂತಿಸಬೇಕಿಲ್ಲ. ಈ ಕೃಷ್ಣನು ತೆಗೆದುಕೊಂಡರೂ ಒಂದೇ. ಆ ಕೃಷ್ಣನು ತೆಗೆದುಕೊಂಡರೂ ಒಂದೇ. ಇಪ್ಪತ್ತುನಾಲ್ಕು ಮೂಲ ರೂಪಗಳಲ್ಲಿ ಕಡೆಯವನು ಶ್ರೀಕೃಷ್ಣ (ಮೇಲೆ ತೋರಿಸಿರುವ ಚಿತ್ರದಂತೆ) ಎಂದು ಗೊತ್ತಿದ್ದರೆ ಒಳ್ಳೆಯದು. ಅಷ್ಟೇ. 

ಇನ್ನೊಂದು ವಿಶೇಷವುಂಟು. ಅಂಚೆ ಡಬ್ಬಿಯ ಪತ್ರಗಳಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು. ಎಲ್ಲೋ ಒಂದು ಕಳೆದುಹೋಗಬಹುದು. ಕಾಗದಗಳ ಗಂಟುಗಳನ್ನು ತೆಗೆದುಕೊಂಡು ಹೋಗುತ್ತಿರುವ ವಾಹನವೋ, ವಿಮಾನವೋ, ಅಪಘಾತಕ್ಕೆ ಈಡಾಗಿ ಸುಟ್ಟು ಹೋಗಬಹುದು. ಮಳೆಯಲ್ಲಿ ನೆನೆದುಹೋಗಬಹುದು. ಬೆಂಗಳೂರಿನ ಜಯನಗರದ ಪಾಪಣ್ಣನ ಪತ್ರ ನೇಪಾಳದ ಗಡಿಯಲ್ಲಿರುವ ಬಿಹಾರದ ಜಯನಗರದ ಪಾಪಣ್ಣನಿಗೆ ರಾಂಗ್ ಡೆಲಿವರಿ ಆಗಬಹುದು. ಕೆಲವೊಮ್ಮೆ ಹತ್ತು ಹನ್ನೆರಡು ವರುಷಗಳ ನಂತರ ಸಿಗಬಹುದು. "ಶ್ರೀಕೃಷ್ಣಾರ್ಪಣಮಸ್ತು" ಡಬ್ಬಿಯಲ್ಲಿ ಹಾಕಿದ ಯಾವ ವಸ್ತುವೂ ಕಳೆದುಹೋಗುವುದಿಲ್ಲ. ತಪ್ಪು ವಿಳಾಸಕ್ಕೆ ಸೇರುವುದಿಲ್ಲ. ಅವನಿಗೇ ಹೋಗಿ ತಲಪುತ್ತದೆ. ಮತ್ತೆ ಅಷ್ಟೇ ಅಲ್ಲ. ಒಂದಕ್ಕೆ ಎರಡಾಗಿ, ನಾಲ್ಕಾಗಿ, ಅನಂತವಾಗಿ, ಹಿಂದಿರುಗಿ ಕೊಡುವ (ಅನಂತಮಡಿಮಾಡಿ ಹಿಂದಿರುಗಿ ಕೊಡುವ) ರೀತಿ ಅವನಿಗೆ ಚೆನ್ನಾಗಿ ಗೊತ್ತು. 

ಅನುಮಾನವಿದ್ದರೆ ಸುದಾಮನನ್ನು (ಕುಚೇಲನನ್ನು) ಕೇಳಬಹುದು. ಕೊಟ್ಟಿದ್ದು ಮೂರು ಹಿಡಿ ಒಣ ಅವಲಕ್ಕಿ. ಅದಕ್ಕೇನು ಕಡಲೆ, ಕಡಲೆಕಾಯಿ ಬೀಜ, ಗೋಡಂಬಿ, ಕರಿಬೇವು, ಒಗ್ಗರಣೆ, ಹಾಕಿರಲೂ ಇಲ್ಲ. ಅವನಿಗೆ ಹಿಂತಿರುಗಿ ಸಿಕ್ಕಿದ್ದು ಶ್ರೀಕೃಷ್ಣನ ಎಂಟು ಹೆಂಡಿರು ಸಾಲಾಗಿ ಬಡಿಸಿದ ಮೃಷ್ಟಾನ್ನ ಭೋಜನ. ದ್ವಾರಾವತಿಯ ಶ್ರೀಕೃಷ್ಣನ ಅರಮನೆಗೆ ಮಿಗಿಲಾದ ಅರಮನೆ. ಅನಂತ ಐಶ್ವರ್ಯ. ಕಡೆಗೆ ಮತ್ತೆ ಹುಟ್ಟುವ ಅವಶ್ಯಕತೆ ಇಲ್ಲದ "ಸಾಯುಜ್ಯ" ಎನ್ನುವ ಮೋಕ್ಷ ಸಾಮ್ರಾಜ್ಯ!

6 comments:

  1. ಅಂಚೆಡಬ್ಬವೂ, ಶ್ರೀಕೃಷ್ಣನೂ - ಉಪಮೆ ಚೆನ್ನಾಗಿದೆ. ಸರ್ವಂ ಶ್ರೀಕೃಷ್ಣಾರ್ಪಣಮಸ್ತು

    ReplyDelete
  2. ಶ್ರೀ ಕೃೃಷ್ಣನ ಹಿಸರು ಯಾವಾಗ ಹೇಗೇಹೇಳಲಿ ಕೀಳಲ್ ಚೆನ್ನವೇ

    ReplyDelete
  3. The simili is beautiful and progression of narrative ls heart soothing. Good sir 👏 👌 👍 🙏

    ReplyDelete
  4. ಅರ್ಥ ಆಗಲಿ ಎಂದು ಅಂಚೆ ಡಬ್ಬಿ ಉದಾಹರಣೆ ಕೊಟ್ಟಿದ್ದು ವಿಶೇಷವಾಗಿತ್ತು.
    ಬ್ರಹ್ಮಣ್ಯಚಾರ್ ಹೇಳುತ್ತಾರೆ, ನಮ್ಮ ಒಂದೊಂದು ಉಸಿರು ಶ್ರೀಕೃಷ್ಣ ನನ್ನು ನೆನಪಿಸಿ ಕೃತಜ್ಞರಾಗಿರಬೇಕು.
    ಶ್ರೀಕೃಷ್ಣ ಯಾರು ಎಂಬುದು ನಿಮ್ಮ ಲೇಖನ ಓದಿದ ಮೇಲೆ ಯಾವಾಗಲೂ ನಮ್ಮ ಮನದಲ್ಲಿ ಉಳಿಯುತ್ತದೆ. ಅದ್ಭುತ ವಾಗಿ ವಿವರಿಸಿದ್ದೀರಿ.
    Thanks for giving us wonderful article on Shri Krishna.
    CzR Ramesh Babu

    ReplyDelete
  5. Yes, did not know why they say Krishna arpanamastu! Thanks for the beautiful write up!! Sheela

    ReplyDelete
  6. ಶ್ರೀ ಕೃಷ್ಣ ಎಂಬ ನಾಮವೇ ಮಧುರ
    ಇಹ ಪರಗಳ ಸಾಧನೆಗೆ ಅವನ ಸ್ಮರಣೆಯೇ ಸಾಕು
    ಭುವಿಯ ಭವಿಗಳ ಉದ್ಧಾರಕ್ಕೆಂದೇ ಅವತರಿಸಿಹ
    ದೇವಕೀಸುತ.ಜಗನ್ನಾತ🙏🙏🙏🙏🙏

    ReplyDelete