Saturday, June 27, 2026

ಯಾರು ಮೊದಲು ಪ್ರಯಾಣ?


ಎಂಭತ್ತು ವರುಷದ ಅಣ್ಣ. ಒಂದೈದು ಆರು ವರುಷಗಳು ಕಡಿಮೆ ಇರುವ ತಮ್ಮ. ಇಬ್ಬರೂ ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದು ನಿವೃತ್ತರಾದವರು. ಅಣ್ಣ ವಂಶಪಾರಂಪರ್ಯವಾಗಿ ಬಂದಿದ್ದ ಮನೆತನದ ಹುಟ್ಟೂರಿನ ದೈವ ಶ್ರೀರಾಮಚಂದ್ರನ ಆರಾಧಕರು. ತಮ್ಮ ಅವರ ದೊಡ್ಡಪ್ಪ ಅದೇ ಊರಿನಲ್ಲಿ ಸ್ಥಾಪಿಸಿದ ಮಂದಿರದ ಅಧಿದೈವ ಶ್ರೀ ದತ್ತಾತ್ರೇಯರ ಉಪಾಸಕರು. 

ತಂದೆಯ ಕಡೆಯಿಂದ ಬಂದಿದ್ದ ಜ್ಯೋತಿಷ್ಯದ ಬಗ್ಗೆ ಇಬ್ಬರಿಗೂ ಆಸಕ್ತಿ. ಒಂದೇ ವಿಷಯವಾದರೂ ಇಬ್ಬರ ವಿಧಾನಗಳು ಸ್ವಲ್ಪ ಬೇರೆ ಬೇರೆ. ಅಣ್ಣನ ಲೆಕ್ಕಾಚಾರ ಹೆಚ್ಚಾಗಿ ಮನಸ್ಸಿನಲ್ಲಿ. ಪೆನ್ನು, ಪುಸ್ತಕ ಹಿಡಿದು ಲೆಕ್ಕ ಮಾಡುವುದು ಕಡಿಮೆ. ಬೇಕಿದ್ದಾಗ ಹಾಗೆ ಮಾಡುವುದೂ ಉಂಟು. ತಮ್ಮ ಮಾತ್ರ ಖಚಿತ ಲೆಕ್ಕಾಚಾರ. ಪ್ರತಿಯೊಂದಕ್ಕೂ ವಿವರವಾಗಿ ನೋಡಿ, ಆಳ-ಅಗಲ ಸೋಸಿ, ಬರೆದಿಡುವುದು ಅಭ್ಯಾಸ. 

ಅಣ್ಣನ ವಾಸ ದಕ್ಷಿಣ ಬೆಂಗಳೂರಿನಲ್ಲಿ. ತಮ್ಮನದು ಉತ್ತರ ಬೆಂಗಳೂರು. ಆಗಲೋ ಈಗಲೋ ಪರಸ್ಪರ ಭೇಟಿ. ಇಬ್ಬರೇ ಇದ್ದಾಗ ಈ ವಿಷಯದಲ್ಲಿ ಚರ್ಚೆ. ಜ್ಯೋತಿಷ್ಯದಲ್ಲಿ ಪ್ರವೇಶ ಇದ್ದವರಿಗೆ ಅವರ ಸಂವಾದ ಅಲ್ಪ-ಸ್ವಲ್ಪ ಅರ್ಥ ಆಗುವುದು. ಇತರರಿಗೆ ಇಬ್ಬರೂ ಜಗಳ ಆಡುತ್ತಿದ್ದಾರೆ ಅನ್ನಿಸಿದರೂ ಆಶ್ಚರ್ಯವಿಲ್ಲ. ಅವರ ಸಂವಾದದ ಸಮಯದಲ್ಲಿ ಯಾರೂ ಮಧ್ಯೆ ಪ್ರವೇಶಿಸುತ್ತಿರಲಿಲ್ಲ. 

*****

ಒಂದು ದಿನ ಅಣ್ಣ ಮನೆಯಲ್ಲಿದ್ದ ತಮ್ಮ ಮಗನನ್ನು ಹತ್ತಿರ ಕರೆದರು. ಭಾನುವಾರದ ಕಾರಣ ಮಗನಿಗೆ ಕೆಲಸಕ್ಕೆ ರಜೆ. ಮನೆಯಲ್ಲಿಯೇ ಇದ್ದ. 

"ಏನು, ಕರೆದಿರಿ"
"ನಿಮ್ಮ ಚಿಕ್ಕಪ್ಪನಿಗೆ ಅನಾರೋಗ್ಯವಂತೆ. ಆಸ್ಪತ್ರೆಗೆ ಸೇರಿಸಿದ್ದಾರಂತೆ"
"ಫೋನ್ ಮಾಡಿ ವಿಚಾರಿಸೋಣವೇ?"
"ಇಲ್ಲ. ಹೋಗಿ ನೋಡಬೇಕು. ಮಧ್ಯಾನ್ಹ ಕರೆದುಕೊಂಡು ಹೋಗು"
"ಯಾವ ಆಸ್ಪತ್ರೆ?"
"ಮತ್ತೀಕೆರೆಯಲ್ಲಿ ಸುಬ್ಬಯ್ಯ ಆಸ್ಪತ್ರೆ ಅಂತೆ. ಅವರ ಮನೆ ಹತ್ತಿರ"
"ಆಯಿತು. ಸಂಜೆ ಸಂದರ್ಶನದ ವೇಳೆ ಇರುತ್ತದೆ. ಹೋಗೋಣ"

ಸಂಜೆ ಇಬ್ಬರೂ ಅಲ್ಲಿಗೆ ಹೋದರು. ಸಂದರ್ಶನದ ವೇಳೆ. ಕೊಠಡಿಗೆ ಹೋಗಿ ಭೇಟಿ ಮಾಡಿದರು. ಅಣ್ಣ-ತಮ್ಮ ಮಾತುಕತೆ ಪ್ರಾರಂಭಿಸಿದರು. 
*****

"ಏನು? ಇಲ್ಲಿಗೆ ಯಾವಾಗ ಬಂದಿ?"
"ಎರಡು ದಿನವಾಯಿತು"
"ಈಗ ಹೇಗಿದ್ದೀ? ಚೇತರಿಕೆ ಕಂಡಿದೆಯೇ?"
"ಸ್ವಲ್ಪ ಪರವಾಗಿಲ್ಲ. ಡಾಕ್ಟರು ಉತ್ತಮವಾಗಿದೆ ಅನ್ನುತ್ತಾರೆ"
"ಯಾವನಾದರೂ ಡಾಕ್ಟರು ಪೇಷಂಟ್ ಬಳಿ "ಉತ್ತಮವಾಗಿಲ್ಲ" ಅಂದಿದ್ದು ಕೇಳಿದ್ದೀಯಾ?"
"ಮತ್ತೆ ಏನು ಮಾಡುವುದು? ಅವರು ಹೇಳಿದ್ದು ತಾನೇ ನಂಬಬೇಕು?"
"ಮನೆಯವರಲ್ಲಿ ಒಬ್ಬರನ್ನು ಪಕ್ಕಕ್ಕೆ ಕರೆದು ಅವರ ಬಳಿ ಸಹಜ ಸ್ಥಿತಿ ಹೇಳುತ್ತಾರೆ"
"ಹೌದು. ಅದು ಅವರ ಅಭ್ಯಾಸ"

"ಅದಿರಲಿ. ನಿನ್ನ ವಿಷಯ ಹೇಳು. ಮೊಮ್ಮಗನಿಗೆ ಮಗ ಹುಟ್ಟಿದನಂತೆ"
"ಹೌದು. "ಪ್ರಪೌತ್ರ ದರ್ಶನ" ಆಗುತ್ತಿದೆ"
"ಅಂತೂ ಅಪರೂಪದ ಚಾನ್ಸು ಹೊಡೆದೆ"
"ಹೌದು. ಅಪರೂಪವೇ. ಅದೇನು ಎಲ್ಲರಿಗೂ ಆಗುವುದಲ್ಲವಲ್ಲ"
"ಕನಕಾಭಿಷೇಕ ಮಾಡಿಸಿಕೊಳ್ಳುತ್ತೀಯೋ?"
"ನನಗೇನು? ಮಾಡಿದರೆ ಮಾಡಿಸಿಕೊಳ್ಳುವುದು"
"ಯಾವಾಗ ಮಾಡುತ್ತಾರಂತೆ?"
"ಮಗ ಬಂದಿದ್ದ. "ಮಗು ಸ್ವಲ್ಪ ದೊಡ್ಡದಾಗಲಿ. ವರುಷದ ಮೇಲೆ ಮಾಡೋಣ" ಅಂದ"
"ಯಾಕಂತೆ ತಡ?"
"ಮಗು ದೊಡ್ಡದಾದರೆ ಕೈಯಲ್ಲಿ ಬಂಗಾರದ ಹೂವು ಹಿಡಿದು ಚೆನ್ನಾಗಿ ಮಾಡುತ್ತೆ ಅಂತ"
"ಅವರ ಅಭಿಪ್ರಾಯ ಸರಿ. ನಿನ್ನ ಲೆಕ್ಕಾಚಾರ ಏನು?"
"ಅವರು ಬೇಕಾದಾಗ ಮಾಡಲಿ. ಆದರೆ ಆಯಿತು. ಇಲ್ಲದಿದ್ದರೆ ಇಲ್ಲ"
"ಅದೇಕೆ ಹಾಗೆ ಹೇಳುತ್ತೀಯೆ?"
"ನಿನಗೇ ಗೊತ್ತಲ್ಲ ಕಾರಣಗಳು. ನೀನು ಗುಣಿಸಿ ನೋಡಿಲ್ಲವೇ?"

*****

ಕುಳಿತು ಕೇಳುತ್ತಿದ್ದವನಿಗೆ ಸ್ವಲ್ಪ ಸಂದೇಹ ಬಂತು. ಕನಕಾಭಿಷೇಕ ಮಾಡುವವರು ಅವರು. ಮಾಡಿಸಿಕೊಳ್ಳುವವರು ಇವರು. ಇದರಲ್ಲಿ ಗುಣಿಸುವುದು ಏನು ಬಂತು? ಸ್ವಲ್ಪ ಯೋಚಿಸಿದಮೇಲೆ ಅರ್ಥ ಆಯಿತು.

"ನನ್ನನ್ನು ಏಕೆ ಕೇಳುತ್ತೀಯೆ? ನೀನು ಲೆಕ್ಕ ಮಾಡಿಲ್ಲವೇ?"
"ಮಾಡಿದ್ದೇನೆ. ನೀನೂ ಮಾಡಿದ್ದೀ ಅಂತಾನೂ ನನಗೆ ಗೊತ್ತು"
"ಸರಿ. ನಿನ್ನ ಅಭಿಪ್ರಾಯವೇನು?'
"ಪ್ರಯಾಣ ಹೋರಾಡಬೇಕಲ್ಲಪ್ಪ. ಅವರು ಮಾಡುವ ದಿನದವರೆಗೆ ನಾನು ಇಲ್ಲಿರಬೇಕಲ್ಲ"
"ನೀನು ಇಲ್ಲಿಯೇ ಇರುತ್ತೇನೆ ಅಂದರೆ ಯಾರ ಅಡ್ಡಿ?"
"ಕೆಂಪಣ್ಣ ಬಿಡಬೇಕಲ್ಲ. ಕಾದು ಕುಳಿತಿದ್ದಾನೆ"
"ಕನಕಾಭಿಷೇಕಕ್ಕೆ ನನ್ನನ್ನು ಕರೆಯುತ್ತೀಯೋ?"
"ಕರೆದರೆ ಬರುತ್ತೀಯೋ?"
"ಬರಬೇಕು. ನನ್ನದೂ ಪ್ರಯಾಣವಿದೆಯಲ್ಲ"
"ಖಂಡಿತ ಬಾ. ಆಮೇಲೆ ನಾವು ಒಬ್ಬರಿಗೊಬ್ಬರು ಸಿಗುವುದು ಕಷ್ಟ" 
"ಆದರೆ ರವಿಯಣ್ಣ ಬರಲು ಬಿಡಬೇಕಲ್ಲ"
"ಹೌದು. ಪ್ರಯಾಣಗಳನ್ನು ಮುಂದೂಡುವಂತಿಲ್ಲವಲ್ಲ"
"ನೋಡೋಣ. ಯಾರು ಮೊದಲು ಪ್ರಯಾಣ?"
"ಒಬ್ಬ ಮುಂದೆ. ಇನ್ನೊಬ್ಬ ಹಿಂದೆ. ಮೊದಲು ಬಂದವನು ಮೊದಲು ಹೋಗುವುದು ನ್ಯಾಯ"

ಕೆಂಪಣ್ಣ ಅಂದರೆ ಕುಜ ಗ್ರಹ. ಕುಜ (ಅಂಗಾರಕ) ಕೆಂಪು ಗ್ರಹ. ಅದಕ್ಕೇ ಕೆಂಪಣ್ಣ ಆದ. ಅವನು ಕೆಂಪಣ್ಣ ಆದ್ದರಿಂದ ಇವನು ರವಿಯಣ್ಣ ಆದ. ಕುಜ ಅವರಿಗೆ ಮಾರಕ. ರವಿ ಇವರಿಗೆ ಮಾರಕ. 

"ನಾನು ಹೇಳುವುದು ಹೇಳಿದ್ದೇನೆ. ಮುಂದಿನ ತಿಂಗಳು ದಿನ ನಿಷ್ಕರ್ಷೆ ಮಾಡಿ ಅಂದೇ ಆಗಬೇಕು ಅಂದಿದ್ದೇನೆ. ಇಷ್ಟರ ಮೇಲೆ ಅವರಿಷ್ಟ"
"ನೀನು ಹಾಗೆ ಖಂಡಿತವಾಗಿ ಹೇಳಿದ ಮೇಲೆ ಅವರು ಮಾಡೇ ಮಾಡುತ್ತಾರೆ. ನಾನೂ ಬರುತ್ತೇನೆ"

ಇವರ ಮಾತಿನ ಧಾಟಿ, ಏರು ಮಾತಿನ ಶಬ್ದ ಅಲ್ಲಿದ್ದವರಿಗೆ ಸ್ವಲ್ಪ ಮೋಜೆನಿಸಿತು. ಕೆಲವರು ವಾರ್ಡಬಾಯ್, ಮತ್ತು ನರ್ಸುಗಳು ಬಾಗಿಲಲ್ಲಿ ಗುಂಪುಗಟ್ಟಿದರು. ರೌಂಡ್ಸ್ ಬಂದ ಡಾಕ್ಟರ್ ಗುಂಪು ನೋಡಿ ಗದರಿದರು.

*****

ಕುಳಿತು ಕೇಳಿಸಿಕೊಳ್ಳುತ್ತಿದ್ದವ ಹೊರಗೆ ಬಂದ. ನಿಂತಿದ್ದವರು ಇಬ್ಬರು ಬಂದು ಅವನನ್ನು ಕೇಳಿದರು.

"ಯಾವ ಊರಿಗೆ ಹೋಗುವ ವಿಚಾರ ಅವರು ಮಾತಾಡುತ್ತಿರುವುದು" 
"ಊರಿಗಲ್ಲ. ಪರಲೋಕಕ್ಕೆ"
"ಅಂತಹ ವಿಷಯ ಇಷ್ಟು ಸುಲಭವಾಗಿ ಮಾತಾಡುತ್ತಾರೆಯೇ?"
"ನೀವೇ ಕೇಳುತ್ತಿದ್ದೀರಲ್ಲ"
"ಮತ್ತೆ ಇಬ್ಬರೂ ನಗುನಗುತ್ತಲೇ ಮಾತಾಡುತ್ತಿದ್ದರಲ್ಲ"
"ಅವರಿಬ್ಬರೂ ಹಾಗೇ. ಅವರ ಸ್ವಭಾವ"
*****

ಅವರು ಹೇಳಿದ್ದ ದಿನವೇ "ಕನಕಾಭಿಷೇಕ" ಆಯಿತು. ಕುಜ ಮೇಲೆ ಹೇಳಿದಂತೆ ಕೆಂಪು ಗ್ರಹ. ವಿಜ್ಞಾನಿಗಳೂ ಅದನ್ನೇ ಹೇಳುತ್ತಾರೆ. ಕುಜ ಮಾರಕ ಆದರೆ ರಕ್ತಗಾಯ ಆಗಿ ಕೊನೆ. ಕಾಲಿನಲ್ಲಿ ಆದ ಗಾಯ ನೆಪವಾಗಿ ಅದೇ ತಿಂಗಳ ಅಮಾವಾಸ್ಯೆ ಕೆಂಪಣ್ಣ ತನ್ನ ಕೆಲಸ ಮಾಡಿದ.

ಮುಂದೆ ಮೂರೇ ವಾರಗಳಲ್ಲಿ ರವಿಯಣ್ಣನೂ ತನ್ನ ಕೆಲಸ ಮುಗಿಸಿದ.

ಈಗ ಇಬ್ಬರೂ ಪರವೂರಿನಲ್ಲಿ ಮತ್ತೊಂದು ವಿಷಯದ ಬಗ್ಗೆ ಚರ್ಚೆ ನಡೆಸಿರಬೇಕು!

9 comments:

  1. Sadananda Murthy K MJune 27, 2026 at 3:23 AM

    ನಡೆಸಲಿ ಅನುದಿನ ಲೆಕ್ಕಾಚಾರ.ಇದೆಲ್ಲಾ ಪರಲೋಕದಲ್ಲಿ ನಡೆಯದು.ಏನಿದಗದರೂ ಇಲ್ಲೇ ತೀರಿಸಿಕೊಳ್ಳಬೇಕು
    ಕನಕ ಜಾಸ್ತಿ ಇದ್ದರೆ, ಆಸೆ ಅದರ ಮೇಲೆ,ಜೀವ ಅಷ್ಟು ಸುಲಭದಲ್ಲಿ ಹೋಗದು, ಗಾಯ ವಾಸಿಯಾಗಿಬಿಡುತ್ತದೆ,ಅಲ್ಲವೆ!

    ReplyDelete
  2. ಮಾತು ಕೊನೆಯ ಕ್ಷಣಗಳ ಬಗ್ಗೆಯಾದರೂ ಬಹಳ ಆಪ್ತವಾದ ಸಂಭಾಷಣೆ.

    ReplyDelete
  3. ಚೆನ್ನಾಗಿದೆ

    ReplyDelete
  4. ಅಣ್ಣ ತಮ್ಮರ ಅಭಿರುಚಿ ಒಂದೇ ಇದ್ದರೆ, 'ಪಯಣ" ದ ಬಗ್ಗೆ ಚರ್ಚೆ ಸಾಧ್ಯ ಎಂಬುದರ ಚಿತ್ರಣ ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಬರವಣಿಗೆ ಹಾಗೂ ಚಿಂತನೆಗಳಿಗೆ ಮತ್ತೊಮ್ಮೆ ಅಭಿನಂದನೆಗಳು. ಇಂತಹ ಅವಕಾಶಗಳು ಹೀಗೆಯೇ ಮುಂದುವರೆಯಲಿ.

    ReplyDelete
  5. ಅಬ್ಬಾ, ಕೊನೆಯ ಕ್ಷಣಗಳ ಬಗ್ಗೆ ಇಷ್ಟು ತಣ್ಣಗೆ ಮಾತನಾಡಿದ ರೀತಿ ನಿಜಕ್ಕೂ ಬಹಳ ಆಶ್ಚರ್ಯಕರ. ಹಾಗೆಯೇ ನಿಖರವಾಗಿ ಲೆಕ್ಕಿಸಿ, ಒಬ್ಬರನ್ನೊಬ್ಬರು ಹಿಂಬಾಲಿಸಿ ಪರಲೋಕ ಸೇರಿದ ವಿಷಯವಂತೂ ಇನ್ನೂ ಆಶ್ಚರ್ಯದ ವಿಷಯ. ಪುಣ್ಯವಂತ ಸಹೋದರರು 🙏 - ಭಾನುಮತಿ

    ReplyDelete
  6. The understanding between the two brothers having the same knowledge is written beautifully in the form of conversation. Both knew about how they both depart from this world and they want it to let it happen in its own time. I am intrigued by this story. Beautiful as well as emotionally charged one. 👌
    UR……

    ReplyDelete
  7. ನಾಳೆಗಳನ್ನು ನೋಡಿದವರ ಸಂಭಾಷಣೆ ಅಮೋಘ. ಇಂತಹ ಸ್ಥಿತಪ್ರಜ್ಞತೆ ಸಾಧಿಸಿದರೆ ಜೀವನ ಎಷ್ಟು ಪ್ರಶಾಂತ ಅಲ್ಲವೇ?

    ReplyDelete