Wednesday, September 16, 2026

ತಂತಿಯಲ್ಲಿ ಹರಿಯುವ ವಿದ್ಯುತ್ತು


ಅದೊಂದು ಸುಸಜ್ಜಿತ ಆಧುನಿಕ ಮನೆ. ಇಡೀ ಮನೆಯ ತುಂಬಾ ಸಮಸ್ತ ರೀತಿಯ, ಎಲ್ಲಾ ನಮೂನೆಯ ಉಪಕರಣಗಳು-ಸಲಕರಣೆಗಳು ಆಯಕಟ್ಟಿನ ಜಾಗಗಳಲ್ಲಿ ಹರಡಿಕೊಂಡು ಉಪಯೋಗಕ್ಕೆ ತಯಾರಾಗಿ ನಿಂತಿವೆ. ಹವಾನಿಯಂತ್ರಣ ಚೆನ್ನಾಗಿದೆ. ಮಿಕ್ಸರ್-ಗ್ರೈಂಡರ್ ಬೇಕಾದಾಗ ಸುಗಮವಾಗಿ ನಡೆಯುತ್ತಿವೆ. ರಾತ್ರಿಯೂ ಹಗಲಿನಂತೆ ಇರುವಂತೆ ಬೆಳಕು ಸದಾಕಾಲವೂ ಪಸರಿಸಿದೆ. ಏನು ಬೇಕಾದರೂ ಒಂದು ಬಟನ್ ಒತ್ತಿದರೆ ಸಾಕು. ಕೆಲವಕ್ಕಂತೂ ಅದೂ ಸಹ ಬೇಡ. ರಿಮೋಟ್ ಕಂಟ್ರೋಲ್ ಉಂಟು. ಕೆಲವು ಕಡೆ ರಿಮೋಟ್ ಕೂಡ ಬೇಕಿಲ್ಲ. ಕೈ ಬೀಸಿದರೆ ಕೆಲಸ ನಡೆಯುತ್ತದೆ. ಏನಾದರೂ ವಿಷಯ ತಿಳಿಯಲು ಪುಸ್ತಕ ಅಥವಾ ಇಂಟರ್ನೆಟ್ ಬೇಕಿಲ್ಲ. ಅಮೆಜಾನ್ ಅಲೆಕ್ಸಾ ಇದ್ದಾಳೆ. ಕೇಳಿದ್ದನ್ನು ಥಟ್ ಎಂದು ಹೇಳುತ್ತಾಳೆ. ದೈನಂದಿನ ಜೀವನ ಸೊಗಸಾಗಿ ನಡೆದಿದೆ. ಯಾವುದೇ ರೀತಿಯ ತೊಂದರೆಗಳಿಲ್ಲ. ಒಟ್ಟಿನಲ್ಲಿ ಸ್ವರ್ಗವೇ ಧರೆಗೆ ಇಳಿದು ಬಂದಂತಿದೆ. ಸ್ವರ್ಗ ನೋಡಿದವರಿಲ್ಲ. ಆದರೆ ಸ್ವರ್ಗ ಎಂದರೆ ಇದೇ ರೀತಿ ಇರಬೇಕು ಎನ್ನುವ ಅಭಿಪ್ರಾಯ ಮೂಡಲು ಯಾವುದೇ ಅನುಮಾನವಿಲ್ಲ. 

ಸುಖನಿದ್ರೆಯಲ್ಲಿ ಮಲಗಿದ್ದವರಿಗೆ ಥಟ್ ಎಂದು ಎಚ್ಚರವಾಯಿತು. ಎಲ್ಲಿಲ್ಲದ ಸೆಖೆಯ ಅನುಭವ. ಬೆವೆತು ನೀರಾಗುವಂತಹ ಬಿಸಿ. ಹೆಚ್ಚಿನ ಬೆಳಕಿಗೆ ಗುಂಡಿ ಒತ್ತಿದರೆ ಅದು ಕೆಲಸ ಮಾಡದು. ಎದ್ದು ನೋಡಿದಾಗ ಗೊತ್ತಾಯಿತು. ಅಪರೂಪಕ್ಕೆ ವಿದ್ಯುತ್ ವೈಫಲ್ಯ ಉಂಟಾಗಿದೆ. ಈ ಕಾರಣ ಯಾವ ಉಪಕರಣಗಳೂ ಕೆಲಸ ಮಾಡವು. ಅವು ಇದ್ದೂ ಇಲ್ಲ ಅನ್ನುವಂತಿವೆ. ಎಲ್ಲವೂ ಇವೆ. ಆದರೆ ಯಾವುದೂ ಕೆಲಸಕ್ಕೆ ಬಾರದ ರೀತಿಯಲ್ಲಿ ನಿಂತಿವೆ. ಅವುಗಳ ತಂತಿಗಳಲ್ಲಿ ವಿದ್ಯುತ್ ಹರಿಯುತ್ತಿಲ್ಲ. ವಿದ್ಯುತ್ ಹರಿಯದೆ ಈ ಎಲ್ಲ ಉಪಕರಣಗಳಿಂದ ಏನೂ ಪ್ರಯೋಜನವಿಲ್ಲ. UPS ಎಂದು ಒಂದುಂಟು. ಅದರಲ್ಲೂ ವಿದ್ಯುತ್ ಇಲ್ಲ. ಹಿಡಿದಿಟ್ಟದ್ದು ಖಾಲಿಯಾಗಿದೆ. ಮತ್ತೆ ತಂತಿಗಳಲ್ಲಿ ವಿದ್ಯುತ್ ಹರಿಯುವವರೆಗೂ ಕಾಯದೇ ವಿಧಿಯಿಲ್ಲ.

****** 

ಎಲ್ಲ ರೀತಿಯ ಸವಲತ್ತುಗಳೂ ಪಟ್ಟಣವಾಸಿಗಳಿಗೇ ಸಿಗುತ್ತವೆ ಎನ್ನುವುದು ಹಳ್ಳಿವಾಸಿಗಳ ಅಳಲು. ವಿದ್ಯುತ್ ಪೂರೈಕೆ ಸಹ ಅಷ್ಟೇ. ಹಗಲೆಲ್ಲಾ ಪಟ್ಟಣಗಳಿಗೆ ಪೂರೈಕೆ. ಏಕೆಂದರೆ ಅಲ್ಲಿ ಹಗಲಲ್ಲಿ ವಿದ್ಯುತ್ ಬೇಡಿಕೆ ಹೆಚ್ಚು ಎಂದು ಉತ್ತರ. ಹಳ್ಳಿಗಳಿಗೆ ವಿದ್ಯುತ್ ಸಿಗುವುದು ರಾತ್ರಿ ವೇಳೆಯೇ. ರೈತನು ತನ್ನ ಹೊಲಗಳ ಬಾವಿಗಳ ಪಕ್ಕದ ಪಂಪ್ ಸೆಟ್ಟಿನಿಂದ ಬೆಳೆದು ನಿಂತ ತರಕಾರಿ, ಹೂವಿನ ಹೊಲಗಳಿಗೆ ನೀರುಣಿಸಬೇಕು. ಕಾಯುತ್ತಾ ಕುಳಿತಿದ್ದಾನೆ. ವಿದ್ಯುತ್ ಪೂರೈಕೆ ಇಲ್ಲ. ಸಂಜೆ ನಿಧಾನವಾಗಿ ಕಳೆಯಿತು. ಒಹೋ! ವಿದ್ಯುತ್ ಬಂದಿತು. ಆದರೆ ಪೂರ್ತಿ ಪ್ರಮಾಣದಲ್ಲಿ ಬಂದಿಲ್ಲ. ಹಳ್ಳಿ ಭಾಷೆಯಲ್ಲಿ "ಹಾಫ್ ಕರೆಂಟ್" ನಡೆದಿದೆ. ಬಲ್ಬುಗಳು ಅರ್ಧ ಪ್ರಕಾಶದಲ್ಲಿ ಮಿಣುಕುತ್ತಿವೆ. ಪಂಪ್ ಸೆಟ್ ನೀರು ಎತ್ತುವುದಿಲ್ಲ. ಕರೆಂಟ್ ಇದ್ದೂ ಇಲ್ಲ. ಪೂರ್ತಿ ಪವರ್ ಬರುವವರೆಗೆ ಕಾಯದೆ ದಾರಿಯಿಲ್ಲ.

ಸಾಲ-ಸೋಲ ಮಾಡಿ ಪಂಪ್ ಸೆಟ್ ಹಾಕಿಸಿದ್ದಾಯಿತು. ಸಾಲದ ಕಂತು ಮತ್ತು ಬಡ್ಡಿ ಕಟ್ಟಬೇಕು. ಅದಕ್ಕೆ ಬೆಳೆದ ತರಕಾರಿ-ಹೂವು ಮಾರಾಟಕ್ಕೆ ಅಣಿಯಾಗುವವರೆಗೆ ಕಾದು ಕಟಾವು ಮಾಡಬೇಕು. ಈಗ ಗಿಡಗಳಿಗೆ ನೀರುಣಿಸುವುದು ಬಲು ಮುಖ್ಯ. ನೀರಿಲ್ಲದಿದ್ದರೆ ಗಿಡಗಳು ಒಣಗುತ್ತವೆ. "ಕೈಗೆ ಬಂದ ತುತ್ತು ಬಾಯಿಗಿಲ್ಲ" ಎನ್ನುವಂತೆ ಆಗುತ್ತದೆ. ನೀರುಣಿಸಲು ವಿದ್ಯುತ್ ಪೂರ್ಣ ಪ್ರಮಾಣದಲ್ಲಿ ಬರುತ್ತಿಲ್ಲ. ಮನೆಗೆ ಹೋಗಿ ರಾತ್ರಿ ಸುಖನಿದ್ರೆ ಮಾಡುವಂತಿಲ್ಲ. ಕಾದು ಕುಳಿತು ವಿದ್ಯುತ್ ಸರಿಯಾಗಿ ಹರಿಯುವ ಸಮಯದಲ್ಲಿ ಪಂಪ್ ಸೆಟ್ ಮೂಲಕ ನೀರು ಹರಿಸಬೇಕು. ತಂತಿಗಳಲ್ಲಿ ಬೇಕಾದ ಪ್ರಮಾಣದಲ್ಲಿ ವಿದ್ಯುತ್ ಹರಿಯುವವರೆಗೂ ಕಾಯದೆ ವಿಧಿಯಿಲ್ಲ. ಎಲ್ಲಾ ಅನುಕೂಲ ಇದ್ದೂ ಇಲ್ಲದಂತಾಗಿದೆ.
******

ಚತುರ್ಮುಖ ಬ್ರಹ್ಮದೇವರ ಒಂದು ದಿನದಲ್ಲಿ ಹದಿನಾಲ್ಕು ಮನ್ವಂತರಗಳು. ಪ್ರತಿಯೊಂದು ಮನ್ವಂತರಕ್ಕೂ ಒಬ್ಬೊಬ್ಬ ಅಧಿಪತಿಯುಂಟು. ಹದಿನಾಲ್ಕು ಮನುಗಳಲ್ಲಿ ಮೊದಲಿನವನು ಸ್ವಾಯಂಭುವ ಮನು. (ಈಗ ಏಳನೆಯ ಮನುವಾದ ವೈವಸ್ವತ ಮನು ಆಡಳಿತ ಕಾಲ ನಡೆಯುತ್ತಿದೆ). ಸ್ವಾಯಂಭುವ ಮನುವಿನ ಹೆಂಡತಿ ಶತಾರೂಪಾದೇವಿ. ಇವರ ಇಬ್ಬರು ಮಕ್ಕಳು ಸತ್ಯವ್ರತ ಮತ್ತು ಉತ್ತಾನಪಾದ. ಉತ್ತಾನಪಾದ ರಾಜ್ಯವಾಳುವ ವೇಳೆಗೆ ಅವನಿಗೆ ಇಬ್ಬರು ಹೆಂಡತಿಯರು. ದೊಡ್ಡವಳು ಸುನೀತಿ. ಚಿಕ್ಕವಳು ಸುರುಚಿ. ಉತ್ತಾನಪಾದ ಬಹು ಒಳ್ಳೆಯ ರಾಜ. ಈಗಲೂ ಮಂಗಳಾಷ್ಟಕದಲ್ಲಿ ಅವನ ಹೆಸರು ಹೇಳುತ್ತೇವೆ. 

ಉತ್ತಾನಪಾದನಿಗೆ ಇಬ್ಬರು ಗಂಡು ಮಕ್ಕಳು. ಸುನೀತಿಯ ಮಗ ಧ್ರುವ. ಸುರುಚಿಯ ಮಗ ಉತ್ತಮ. ಇಬ್ಬರೂ ಸಣ್ಣವರು. ಧ್ರುವನಿಗೆ ಕೇವಲ ಐದು ವರ್ಷ ವಯಸ್ಸು. ಉತ್ತಮನು ಅವನಿಗಿಂತ ತುಸು ಕಿರಿಯ. ಉತ್ತಾನಪಾದನಿಗೆ ಕಿರಿಯ ಹೆಂಡತಿಯ ಮೇಲೆ ಪ್ರೀತಿ ಹೆಚ್ಚಾಯಿತು. (ನೀತಿಗಿಂತ ರುಚಿಯ ಮೇಲೆ ಎಲ್ಲರಿಗೂ ಹೆಚ್ಚು ಪ್ರೀತಿ ಆಗುವಂತೆ ಎಂದು ಹೇಳಬಹುದು!). ಅವಳ ಮಗ ಆದದ್ದರಿಂದ ಉತ್ತಮನ ಮೇಲೂ ತುಸು ಜಾಸ್ತಿ. ಮಕ್ಕಳು ತಂದೆಯ ತೊಡೆ ಮೇಲೆ ಏರಿ ಕುಳಿತುಕೊಳ್ಳಲು ಆಸೆ ಪಡುವುದು ಸ್ವಾಭಾವಿಕ. ಅದು ಅವರ ಹಕ್ಕೂ ಸಹ. 

ಒಂದು ದಿನ ಉತ್ತಾನಪಾದ ಸುರುಚಿಯ ಜೊತೆಯಲ್ಲಿ ಇದ್ದ. ಅವಳ ಮಗ ಉತ್ತಮ ಅಪ್ಪನ ತೊಡೆಯಮೇಲೆ ಕುಳಿತಿದ್ದ. ಧ್ರುವ ಅಲ್ಲಿಗೆ ಹೋದ. ಅವನಿಗೂ ಅಪ್ಪನ ತೊಡೆಯಮೇಲೆ ಕುಳಿತುಕೊಳ್ಳಲು ಆಸೆ ಆಯಿತು. ಅಪ್ಪನ ತೊಡೆ ಹತ್ತಲು ಹೋದ. ಚಿಕ್ಕಮ್ಮ ಅವನನ್ನು ತಳ್ಳಿಬಿಟ್ಟಳು. ಅವಳು ಅಲ್ಲಿಗೇ ಬಿಡಲಿಲ್ಲ. "ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿದವನಲ್ಲ. ನೀನು ನಿಮ್ಮ ಅಪ್ಪನ ತೊಡೆ ಏರಬೇಕಾದರೆ ನನ್ನ ಹೊಟ್ಟೆಯಲ್ಲಿ ಮತ್ತೆ ಹುಟ್ಟಿಬರಬೇಕು" ಅಂದಳು. ಧ್ರುವ ಅಪ್ಪನ ಕಡೆ ನೋಡಿದ. ಅಪ್ಪ ಮಾತಾಡಲಿಲ್ಲ. 

******

ನಡೆದ ವಿದ್ಯಮಾನದಿಂದ ಬೇಸತ್ತ ಧ್ರುವ ನೇರವಾಗಿ ತಾಯಿ ಸುನೀತಿಯ ಬಳಿಗೆ ಹೋದ. ಅವಳೊಡನೆ ತನಗಾದ ದುಗುಡ ಹೇಳಿಕೊಂಡ. ಸುನೀತಿ ಬಹಳ ಒಳ್ಳೆಯವಳು. ಧ್ರುವನ ಮನಸ್ಸು ಕಹಿ ಮಾಡುವ ಪ್ರಯತ್ನ ಮಾಡಲಿಲ್ಲ. "ಈಗ ನೀನು ನನ್ನ ಮಗ. ನಾನು ನಿನಗೆ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ. ನಿನಗೆ ಆ ಪರಮಪುರುಷನೇ ದಿಕ್ಕು" ಎಂದಳು. ಧ್ರುವನ ಮನಸ್ಸಿಗೆ ಅದು ನಾಟಿತು.

ಐದು ವರುಷದ ಪುಟ್ಟ ಬಾಲಕ ಧ್ರುವ ನಗರದಿಂದ ಹೊರ ನಡೆದ. ಕಾಡಿನ ದಾರಿ ಹಿಡಿದ. ಏನು ಮಾಡಬೇಕು, ಹೇಗೆ ಮಾಡಬೇಕೆಂದು ಗೊತ್ತಿಲ್ಲ. ಆದರೆ ಪರಮಪುರುಷನನ್ನು ಮೆಚ್ಚಿಸಿ ಅಪ್ಪನ ತೊಡೆ ಏರುವ ಹಕ್ಕು ಪಡೆಯಬೇಕೆಂದು ಹಠ. ದೇವರ್ಷಿ ನಾರದರು ನೋಡಿದರು. ಅವನ ಮುಂದೆ ಬಂದರು. ಪರಮಪುರುಷನನ್ನು ಮೆಚ್ಚಿಸುವುದು ಸುಲಭವಲ್ಲ ಅಂದರು. ಅನೇಕ ಯೋಗಿ-ಮುನಿಗಳಿಗೇ ಆಗಲಿಲ್ಲ ಅಂದರು. ಹಿಂದೆ ನಗರಕ್ಕೆ ಹೋಗುವಂತೆ ಹೇಳಿದರು. ಧ್ರುವ ಅವರ ಪರೀಕ್ಷೆಯಲ್ಲಿ ಗೆದ್ದ. ಹಿಂದೆ ಹೋಗಲು ಒಪ್ಪಲಿಲ್ಲ. ನಾರದರು ಅವನಿಗೆ ಮಂತ್ರೋಪದೇಶ ಮಾಡಿದರು. ಪುಟ್ಟ ಮಗು ಎಂದು ಚಿಕ್ಕ ಮಂತ್ರ ಹೇಳಲಿಲ್ಲ. ಹನ್ನೆರಡು ಅಕ್ಷರದ ಶ್ರೀವಾಸುದೇವ ಮಂತ್ರ. "ಓಂ ನಮೋ ಭಗವತೇ ವಾಸುದೇವಾಯ". ಎಲ್ಲ ಕಡೆ ವ್ಯಾಪಿಸಿ ನಿಂತಿರುವ ಪರಮಪುರುಷನ ಹೃದಯ ಮಂತ್ರ.

ಧ್ರುವ ನೇರವಾಗಿ ಯಮುನಾ ನದಿಯ ತಟದ "ಮಧುವನ" ಎನ್ನುವ ಸ್ಥಳಕ್ಕೆ ಬಂದು ನಿಂತ. ತಪಸ್ಸಿಗೆ ಪ್ರಾರಂಭಿಸಿದ. ಅವನು ತಪಸ್ಸು ಹೇಗೆ ಮಾಡಿದ ಅನ್ನುವುದನ್ನು ಶ್ರೀಮದ್ಭಾಗವತ ನಾಲ್ಕನೆಯ ಸ್ಕಂದ, ಎಂಟನೆಯ ಅಧ್ಯಾಯ, ಶ್ಲೋಕ 72ರಿಂದ 76 ಹೀಗೆ ಹೇಳುತ್ತದೆ: 
  • ಮೊದಲ ತಿಂಗಳು ಮೂರು ದಿನಕ್ಕೊಮ್ಮೆ ಹಣ್ಣುಗಳ ಆಹಾರ.
  • ಎರಡನೆಯ ತಿಂಗಳು ಆರು ದಿನಕ್ಕೊಮ್ಮೆ ಒಣಗಿದ ಹುಲ್ಲು ಮತ್ತು ತರಗೆಲೆಗಳ ಆಹಾರ.
  • ಮೂರನೆಯ ತಿಂಗಳು ಒಂಭತ್ತು ದಿನಕ್ಕೊಮ್ಮೆ ನೀರು ಸೇವನೆ.
  • ನಾಲ್ಕನೆಯ ತಿಂಗಳಲ್ಲಿ ಹನ್ನೆರಡು ದಿನಕ್ಕೊಮ್ಮೆ ಗಾಳಿ ಸೇವನೆ.
  • ಐದನೆಯ ತಿಂಗಳಲ್ಲಿ ಪೂರ್ಣ ಶ್ವಾಸ ನಿಯಂತ್ರಣ ಸಾಧಿಸಿ ಒಂದು ಕಾಲ ಮೇಲೆ ನಿಂತು ತಪಸ್ಸು.
ಆರನೆಯ ತಿಂಗಳು ಮುಗಿಯುವ ವೇಳೆಗೆ ಧ್ರುವನ ಭಾರಕ್ಕೆ ಭೂಮಿ ಸಮತೋಲನ ತಪ್ಪಿತಂತೆ. ವಾಸುದೇವನು ಇನ್ನು ಧ್ರುವನನ್ನು ಕಾಯಿಸುವಂತಿಲ್ಲ. ಎಲ್ಲ ಪರೀಕ್ಷೆಗಳೂ ಮುಗಿದುಹೋದವು.

******

ಧ್ರುವನು ತಪಸ್ಸು ಪ್ರಾರಂಭಿಸಿದಾಗ ವಾಸುದೇವ ಮೂರ್ತಿಯ ರೂಪದ ವರ್ಣನೆಯ ಧ್ಯಾನ ಶ್ಲೋಕ ಹೇಳುವ ವಿವರಣೆಯಂತೆ ಮನಸ್ಸಿನಲ್ಲಿ ನೆನೆಸಿಕೊಂಡು ಮುಂದುವರೆದ. ಕಾಲ ಕಳೆಯುತ್ತಿದ್ದ ಹಾಗೆ ಆ ರೂಪ ಘನವಾಗುತ್ತಾ ಹೋಯಿತು. ಹೀಗೆ ಗಟ್ಟಿಯಾದ ರೂಪ ಹೃದಯದಲ್ಲಿ ನೆಲೆ ನಿಂತಿತು. ಇನ್ನೂ ಮುಂದಿನ ದಿನಗಳಲ್ಲಿ ಆ ರೂಪ ಮತ್ತಷ್ಟು ಸ್ಫುಟ (ಸ್ಪಷ್ಟ) ಆಯಿತು. ಕಡೆಯಲ್ಲಿ ವಾಸುದೇವನ ನಿರ್ಮಲ ರೂಪ ನಿಂತಿತು. ಈಗ ಅವನಿಗೆ ಹಸಿವೆ, ನಿದ್ದೆ, ಬಾಯಾರಿಕೆಗಳಿಲ್ಲ. ಹೃದಯದಲ್ಲಿ ಆ ಮೂರ್ತಿಯ ನೋಟದಲ್ಲಿ ದಿವ್ಯವಾದ ಆನಂದ ಅನುಭವಿಸುತ್ತಾ ಇದ್ದಾನೆ. ಶ್ರೀವಾಸುದೇವ ಸಾಕ್ಷಾತ್ತಾಗಿ ಅವನ ಮುಂದೆ ಬಂದು ನಿಂತ. 

ಧ್ರುವನಿಗೆ ಇದರ ಪರಿವೆಯೇ ಇಲ್ಲ. ಹೃದಯದಲ್ಲಿರುವ ಬಿಂಬ ಮೂರ್ತಿ ನೋಡುತ್ತಾ ಮೈಮರೆತಿದ್ದಾನೆ. ವಾಸುದೇವ ಅಲ್ಲಿದ್ದ ತನ್ನ ಮೂರ್ತಿಯನ್ನು ಮರೆ ಮಾಡಿಬಿಟ್ಟ.

ಹೃದಯದಲ್ಲಿದ್ದ ಮೂರ್ತಿ ಮರೆಯಾಗುತ್ತಿದ್ದಂತೆ ಧ್ರುವ ನಿದ್ರೆಯಿಂದ ಎಚ್ಚೆತ್ತವನಂತೆ ಎದ್ದ. ಎಡರುಗಡೆ ಅದೇ ದಿವ್ಯ ಮೂರ್ತಿ ಪೂರ್ಣಾಕಾರದಲ್ಲಿ ನಿಂತಿದೆ! ತಕ್ಷಣ ಅಡ್ಡ ಬಿದ್ದ.

ವಾಸುದೇವನ ಸ್ತೋತ್ರ ಮಾಡಬೇಕೆಂದು ಮನಸ್ಸಿನಲ್ಲಿ ಇಚ್ಛೆ. ಆದರೆ ಅವನ ಯಾವ ಅಂಗವೂ ಕೆಲಸ ಮಾಡುತ್ತಿಲ್ಲ. ವಿದ್ಯುತ್ ಹರಿಯದ ಯಂತ್ರದಂತೆ, ಒಂದು ಬೊಂಬೆಯಂತೆ, ಧ್ರುವ ನಿಂತುಬಿಟ್ಟ!

ವಾಸುದೇವ ಮೂರ್ತಿ ನಸುನಕ್ಕು ತನ್ನ ಕೈಯ್ಯಲ್ಲಿ ಹಿಡಿದಿದ್ದ ಶಂಖದಿಂದ ಧ್ರುವನ ಹಾಲುಗೆನ್ನೆ ಮುಟ್ಟಿದ. ಧ್ರುವನ ದೇಹದಲ್ಲಿ ವಿದ್ಯುತ್ ಸಂಚಾರವಾಯಿತು. 

******

ಎದುರಿಗೆ ನಿಂತ ಪರಮಪುರುಷ ವಾಸುದೇವನನ್ನು ಕಂಡು ಈಗ ಧ್ರುವ ಹೀಗೆ ಹೇಳುತ್ತಾನೆ:
(ಶ್ರೀಮದ್ ಭಾಗವತ 4.9.6)

ಯೋoತಃ ಪ್ರವಿಶ್ಯ ಮಮ ವಾಚಮಿಮಾಂ ಪ್ರಸುಪ್ತಾಮ್  
ಸಂಜೀವಯತ್ಯಖಿಲ ಶಕ್ತಿಧರಃ ಸ್ವಧಾಮ್ನಾ 
ಅನ್ಯಾoಶ್ಚ ಹಸ್ತ ಚರಣ ಶ್ರವಣ ತ್ವಗಾದೀನ್ 
ಪ್ರಾಣಾನ್ ನಮೋ ಭಗವತೇ ಪುರುಷಾಯ ತುಭ್ಯಮ್ 

ಪರಮಪುರುಷನೇ, ನೀನು ನನ್ನೊಳಗೆ ಪ್ರವೇಶ ಮಾಡಿ, ಮಲಗಿದಂತೆ ನಿಷ್ಕ್ರಿಯವಾಗಿದ್ದ ನನ್ನ ಎಲ್ಲ ಅಂಗಾಗಗಳಿಗೆ ಚೈತನ್ಯ ನೀಡಿದೆ. (ನೀನು ನನ್ನಲ್ಲಿ ಇಲ್ಲದಿರಲು ಮಾತು ಬಾರದು. ಕಣ್ಣು ಕಾಣದು. ಕಿವಿ ಕೇಳಿಸದು. ಚರ್ಮಕ್ಕೆ ಸ್ಪರ್ಶ ಜ್ಞಾನವಿಲ್ಲ. ನೀನು ಪ್ರವೇಶ ಮಾಡಿದ ತಕ್ಷಣ ನನ್ನ ಎಲ್ಲಾ ಅವಯವಗಳೂ ಕೆಲಸ ಮಾಡಿದವು). ನೀನು ಎಲ್ಲ ಶಕ್ತಿಗಳ ಕೇಂದ್ರವು. (ನೀನಿದ್ದರೆ ಎಲ್ಲ ಉಂಟು. ನೀನಿಲ್ಲದಿದ್ದರೆ ಏನೂ ಇಲ್ಲ). ಪುರುಷ ಸೂಕ್ತ ವಾಚ್ಯನಾದ ಹೇ ಪರಮಪುರುಷನೇ, ನಿನಗೆ ನಮಸ್ಕಾರ!

ಮುಂದಿನ ಕಥೆ ಎಲ್ಲರಿಗೂ ಗೊತ್ತು. ಈಗ ಧ್ರುವನಿಗೆ ಅಪ್ಪನ ತೊಡೆಯ ಮೇಲೆ ಕೂಡುವುದು ಬೇಡ. "ನನಗೆ ಏನೂ ಬೇಡ. ನಿನ್ನ ಜೊತೆ ಬರುತ್ತೇನೆ. ಕರೆದುಕೊಂಡು ಹೋಗು" ಎಂದು ಕೇಳುತ್ತಾ ನಿಂತ. ವಾಸುದೇವ ಅವನನ್ನು ಸಮಾಧಾನ ಪಡಿಸಿ, ನಗರಕ್ಕೆ ಕಳಿಸಿದ. ಮುಂದೆ ಧ್ರುವ ಧ್ರುವರಾಜ ಆದ. ಸಹಸ್ರಾರು ವರುಷ ರಾಜ್ಯವಾಳಿದ. ಕಡೆಗೆ "ಧ್ರುವ ನಕ್ಷತ್ರ" ಆಗಿ ಶಾಶ್ವತವಾಗಿ ನಿಂತ. 

******

ನಮ್ಮ ದೇಹವೂ ಮೊದಲು ಹೇಳಿದ ಸುಸಜ್ಜಿತ ಮನೆ ಇದ್ದಂತೆ. ಆದರೆ ಪರಮಪುರುಷನ ಓಡಾಟ ಇಲ್ಲದಿದ್ದರೆ ವಿದ್ಯುತ್ ಹರಿಯದ ತಂತಿಗಳಂತೆ. ಎಲ್ಲ ಇದ್ದರೂ ಏನೂ ಇಲ್ಲ. ಒಂದೊಂದು ದಿನ "ಹಾಫ್ ಕರೆಂಟ್" ಇರುವಂತೆ. ಏನೋ ನಿರುತ್ಸಾಹ. ಕೈ ಕಾಲುಗಳು ನಮ್ಮ ಮಾತು ಕೇಳವು. ಏಳಬೇಕು ಎಂದು ಮನಸ್ಸು. ದೇಹ ಏಳಲಾರದು. ಹೀಗೆ. ಯಃ ಅಂತಃ ಪ್ರವಿಶ್ಯ. ಯಾರು ಒಳಗೆ ಸೇರಿದನೋ (ಆ ಪರಮ ಪುರುಷ) ಅವನು ತಂತಿಯಲ್ಲಿ ಹರಿಯುವ ವಿದ್ಯುತ್ ಇದ್ದಂತೆ, ಮುಂದಿನ ಕೆಲಸ ಮಾಡಿಸುವವನು.

ನನಗೇನು ಕಮ್ಮಿ? ನಾನು ಬೇಕಿದ್ದು ಮಾಡುತ್ತೇನೆ. ಹೀಗೆ ಅಹಂಕಾರ ನಮ್ಮಲ್ಲಿ ತಾನೇತಾನಾಗಿ ಮೆರೆದಾಡುತ್ತದೆ. ನಮ್ಮ ಕೆಲಸಗಳನ್ನು ಸದಾಕಾಲವೂ ನಾವೇ ಮಾಡಿಕೊಳ್ಳುತ್ತೇವೆ ಎನ್ನುವ ಭ್ರಮೆ ಕೂಡ ಕಾಡುತ್ತದೆ. "ಯಾರ ಹಂಗೂ ನಮಗಿಲ್ಲ" ಎಂದು ಕುಣಿದಾಡುತ್ತೇವೆ. ಸ್ವಲ್ಪ ಶಕ್ತಿ ಕುಂದಿದಂತೆ, ಅನುಭವ ಕುದುರಿದಂತೆ, ಅನೇಕ ವಿಷಯಗಳು ಅರ್ಥವಾಗುತ್ತಾ ಹೋಗುತ್ತವೆ.

******

ಮೇಲೆ ಹೇಳಿದ ಭಾಗವತದ ಶ್ಲೋಕ (4.9.6) ಅನೇಕರು ಸ್ನಾನಾನಂತರ ಹೇಳಿಕೊಳ್ಳುವುದು ಕೇಳಿದ್ದೇವೆ. ಅನೇಕರಿಗೆ ಇದರ ಮೂಲ ಮತ್ತು ಹಿನ್ನೆಲೆ ಗೊತ್ತಿಲ್ಲ. ಸಕ್ಕರೆ ಎಲ್ಲಿಂದ ಬಂದಿದೆ ಎಂದು ಗೊತ್ತಿಲ್ಲದಿದ್ದರೂ ಅದು ಸಿಹಿಯೇ. ಆದರೂ ಶ್ಲೋಕದ ಅರ್ಥ ಗೊತ್ತಿದ್ದು ಅದನ್ನು ಹೇಳಿಕೊಳ್ಳುವುದು ಬೇರೆಯೇ ಅನುಭವ ಕೊಡುತ್ತದೆ. ಒಂದು ಬೋರ್ಡಿನಲ್ಲಿ ದೊಡ್ಡದಾಗಿ ಬರೆದು ಮನೆಯಲ್ಲಿ ತೂಗುಹಾಕಲು ಯೋಗ್ಯವಾದ ಶ್ಲೋಕ ಇದು. ಇದಕ್ಕಾಗಿ ನಾವು ಭಗವಾನ್ ವೇದವ್ಯಾಸರಿಗೆ ಕೃತಜ್ಞರಾಗಿರಬೇಕು.  

No comments:

Post a Comment