Showing posts with label C K Nagaraja Rao. Show all posts
Showing posts with label C K Nagaraja Rao. Show all posts

Monday, June 15, 2026

ನಾಳೆಯೂ ಕಾರ್ಯಕ್ರಮ ಇರುತ್ತದೆ!


ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳು, ತೀವ್ರ ಅಧಿಕಾರದಾಹ ಹುಟ್ಟಿಸುತ್ತಿರುವ ಕದನಗಳು, ಬಿಗಿತಪ್ಪುತ್ತಿರುವ ಆಡಳಿತ, ಮತ್ತು ಇಂತಹ ಸಂದರ್ಭದಲ್ಲಿ ಗೊತ್ತು-ಗುರಿ ಇಲ್ಲದೆ ಓಡುತ್ತಿರುವ ಸಮಾಜದ ಬಗ್ಗೆ ಕೆಲವು ವಿಷಯಗಳನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ನಮ್ಮ ಸುತ್ತಮುತ್ತಲೇ ಇದ್ದು ಹೆಣಗಾಡಿದ ಕೆಲವರು ಸ್ವಾತಂತ್ರ್ಯ ಸೇನಾನಿಗಳ ಬಗೆಗೂ ತಿಳಿದಂತಾಯಿತು. "ಸಂಸ್ಕೃತಿ ಪ್ರಸಾರ" ಎಂಬ ಶೀರ್ಷಿಕೆಯ ಈ ಹಿಂದಿನ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಕರ್ನಾಟಕ ಏಕೀಕರಣ ಆಗುವ ಮುನ್ನಿನ, ಆಗಿನ ಮೈಸೂರು ರಾಜ್ಯದ ಮೊದಲ ಚುನಾಯಿತ ಸರ್ಕಾರದ ಮುಖ್ಯಮಂತ್ರಿಗಳಾದ ಶ್ರೀ ಕೆಂಗಲ್ ಹನುಮಂತಯ್ಯನವರ ಆಸೆಯ ಕೂಸಾಗಿ "ಸಂಸ್ಕೃತಿ ಪ್ರಸಾರ" ಸರಣಿಯ ಅಡಿಯಲ್ಲಿ ಅನೇಕ ಕಾರ್ಯಕ್ರಮಗಳು ರಾಜ್ಯಾದ್ಯಂತ ನಡೆದವು. ಇದರ ಜೊತೆಜೊತೆಯಾಗಿ ಕೇಂದ್ರ ಸರ್ಕಾರದ "ವಾರ್ತಾ ಮತ್ತು ಪ್ರಸಾರ ಇಲಾಖೆ" ಸಹ ತನ್ನ "Song and Drama" ವಿಭಾಗದ ವತಿಯಿಂದ ಅನೇಕ ಕಡೆ "ರಸಸಂಜೆ" ಕಾರ್ಯಕ್ರಮಗಳನ್ನು ನಡೆಸುತ್ತಿತ್ತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ್ಯ "ಕುಟುಂಬ ಯೋಜನೆ" ಮತ್ತು ಅದರಲ್ಲಿಯೂ ಮುಖ್ಯವಾಗಿ "ಮಿತ ಸಂತಾನ" ಕಾರ್ಯಕ್ರಮದ ಪ್ರಚಾರವೇ ಆಗಿದ್ದಿತು. 

ಅನೇಕ ಕಲಾವಿದರು ಈ ಎರಡೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇಂತಹ ಸಂಜೆ ನಡೆಯುವ ಕೂಟಗಳಲ್ಲಿ ಬಂದ ಜನತೆಗೆ ಮನರಂಜನೆ ಮತ್ತು ಕೆಲವು ರೀತಿಯ ಜ್ಞಾನಪ್ರಸಾರ ಸಹ ಮಾಡಿದರು. ಶ್ರೀಯುತ ಪಿ. ಕಾಳಿಂಗ ರಾಯರು ನಡೆಸಿಕೊಡುವ ಕಾರ್ಯಕ್ರಮಗಳು ಬಹಳ ಜನಪ್ರಿಯವಾದವು. ಅವರು "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಗೀತೆಯಿಂದ ಪ್ರಾರಂಭಿಸಿ ಕೊನೆಯಲ್ಲಿ "ಬಾನಿಗೊಬ್ಬ ರವಿಯಿರಬೇಕು, ಬಾಳಿಗೊಬ್ಬ ಮಗನಿರಬೇಕು, ತಂಪುಕೊಡುವ ಚಂದ್ರಿಕೆಯಂಥ ಚೆಲುವೆಯಾದ ಮಗಳಿರಬೇಕು" ಎಂದು ಮಿತ ಸಂತಾನದ ಪರವಾದ ಗೀತೆಯಿಂದ ಮುಗಿಸುತ್ತಿದ್ದರು. 

ಶ್ರೀ ಹನುಮಂತಯ್ಯನವರ ಸರ್ಕಾರ ಇದ್ದಾಗ ಸ್ವಾತಂತ್ರ್ಯ ಬಂದ ಹೊಸದು. ಮೊದಲನೇ ಪಂಚವಾರ್ಷಿಕ ಯೋಜನೆಯ ಮೂಲ ಗುರಿ ಕೃಷಿಗೆ ಉತ್ತೇಜನ ಕೊಡುವುದೇ ಆಗಿತ್ತು. ಆಗ ಅನೇಕ ಹಳ್ಳಿಗಳಲ್ಲಿ ಶಾಲೆಗಳಿರಲಿಲ್ಲ. ಒಟ್ಟಾರೆ ಜನಸಂಖ್ಯೆಯಲ್ಲಿ ಅನಕ್ಷರಸ್ಥರ ಸಂಖ್ಯೆ ಬಲು ದೊಡ್ಡದಿತ್ತು. ಅನೇಕ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ರಸ್ತೆಗಳೂ ಬಸ್ ಪ್ರಯಾಣದ ವ್ಯವಸ್ಥೆಯೂ ಇರಲಿಲ್ಲ. ನೀರಾವರಿ ಅನುಕೂಲಗಳು ಈಗಿನಂತೆ ಇರದೇ ಬಹುಪಾಲು ರೈತರು ಮಳೆಯನ್ನೇ ಅವಲಂಬಿಸಿಕೊಂಡು ಬೆಳೆ ತೆಗೆಯುವುದರಲ್ಲಿ ನಿರತರಾಗಿದ್ದರು. 

ಸಂಸ್ಕೃತಿ ಪ್ರಸಾರ ಕಾರ್ಯಕ್ರಮವನ್ನು ಮತ್ತು ಅದರ ಅನುಷ್ಠಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಈ ಹಿನ್ನೆಲೆ ಮತ್ತು ಹಿಂದಿನ ಸಂಚಿಕೆ ವಿವರಗಳು ತಿಳಿದಿರುವುದು ಅವಶ್ಯಕ. 

*****

1952ರಲ್ಲಿ ಚುನಾಯಿತ ಸರ್ಕಾರ ಅಧಿಕಾರ ವಹಿಸಿಕೊಂಡು ಹೊಸ ಕಾರ್ಯಕ್ರಮಗಳ ರೂಪು-ರೇಷೆ ಸಿದ್ಧಪಡಿಸಿ, ಹಣ-ಕಾಸಿನ ವ್ಯವಸ್ಥೆ ಮಾಡಿ ಸಂಬಂಧಿಸಿದ ಚಟುವಟಿಕೆಗಳು ಪೂರ್ಣವಾಗಿ ರೂಪುಗೊಳ್ಳಲು ಸುಮಾರು ಎರಡು ವರುಷಗಳು ಹಿಡಿದವು. ನಂತರ ವ್ಯವಸ್ಥಿತವಾಗಿ ಕಾರ್ಯಕ್ರಮಗಳು ನಡೆಯಲಾರಂಭಿಸಿದವು. ಅನೇಕ ವಿದ್ವಾಂಸರು, ಗಮಕಿಗಳು, ಕಲಾವಿದರು ಭಾಗವಹಿಸಲಾರಂಭಿಸಿದರು. 

ಒಂದು ಸರ್ಕಾರಿ ಕಾರ್ಯಕ್ರಮದ ಉದ್ಘಾಟನೆಯ ನಂತರ ಚಹಾಕೂಟ ನಡೆಯುತ್ತಿತ್ತು. ಕಾರ್ಯಕ್ರಮಕ್ಕೆ ಸಂಬಂಧಿಸಿದ  ಮಂತ್ರಿಗಳಾದ ಶ್ರೀ ಎ. ಜಿ. ರಾಮಚಂದ್ರ ರಾವ್ ಅಂದು ಬಂದಿದ್ದ ಪತ್ರಕರ್ತರ ಜೊತೆಯಲ್ಲಿ ಮಾತನಾಡುತ್ತಿದ್ದರು. ಪತ್ರಿಕಾ ಪ್ರತಿನಿಧಿಯಾಗಿ ಅಲ್ಲಿ ಬಂದಿದ್ದ ಶ್ರೀ ಸಿ. ಕೆ. ನಾಗರಾಜ ರಾವ್ ಅವರ ಕಣ್ಣಿಗೆ ಬಿದ್ದರು. ರಾಮಚಂದ್ರರಾಯರು ಅವರನ್ನು ಕರೆದು ಕುಶಲೋಪರಿ ವಿಚಾರಿಸಿದರು. 

"ಸರ್ಕಾರ "ಸಂಸ್ಕೃತಿ ಪ್ರಸಾರ" ಕಾರ್ಯಕ್ರಮ ನಡೆಸುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆಯಲ್ಲವೇ?"
"ಬಂದಿದೆ. ನಮ್ಮ ಪತ್ರಿಕೆಯಲ್ಲಿ ವರದಿಗಳನ್ನೂ ಮಾಡುತ್ತಿದ್ದೇವಲ್ಲ"
"ಅನೇಕರು ಕ್ರಮವಾಗಿ ಅರ್ಜಿ ಹಾಕಿಕೊಂಡು, ಅನುಮೋದನೆ ಪಡೆದು ಕಾರ್ಯಕ್ರಮ ನಡೆಸುತ್ತಿದ್ದಾರೆ"
"ಹೌದು. ಗೊತ್ತು"
"ನೀವು ಅನೇಕ ವಿಷಯಗಳ ಬಗ್ಗೆ ಉಪನ್ಯಾಸ ಮಾಡಬಲ್ಲಿರಿ. ಹಳಗನ್ನಡ ಸಾಹಿತ್ಯದ ಬಗ್ಗೆ ಅಧಿಕಾರಯುತವಾಗಿ ಮಾತನಾಡುತ್ತೀರಿ. ಬಿ. ಎಂ. ಶ್ರೀ ಅವರ "ಗದಾಯುದ್ಧ" ನಾಟಕ ಆಡುವಂತಹ "ಯುನೈಟೆಡ್ ಆರ್ಟಿಸ್ಟ್ಸ್" ತಂಡ ಕಟ್ಟಿದ್ದೀರಿ. ಸಾಹಿತಿ ಎಂದು ಸಮಾಜ ನಿಮ್ಮನ್ನು ಗುರುತಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಆಗಿದ್ದೀರಿ. ಹೀಗಿದ್ದೂ ನೀವೇಕೆ ಈ ಕಡೆ ಆಸಕ್ತಿ ತೋರಿಸಿಲ್ಲ?"
"ಪ್ರಯಾಣ ಮಾಡಿ ಕಾರ್ಯಕ್ರಮ ಕೊಡುವಷ್ಟು ಬಿಡುವಿಲ್ಲ. ಮತ್ತೆ ಸರ್ಕಾರಕ್ಕೆ ಅರ್ಜಿ ಹಾಕಿ ಓಡಾಡುವಷ್ಟು ವ್ಯವಧಾನವೂ ಇಲ್ಲ"

"ನಿಮ್ಮ ಶ್ರೀಮತಿ ರಾಜಾಮಣಿಯವರು ಭಾರತದ ಬಿಂದೂರಾಯರ ಗಮಕ ಶಾಲೆಯಲ್ಲಿ ಪ್ರಥಮ ಶಿಷ್ಯೆಯರ ಗುಂಪಿಗೆ ಸೇರಿದವರು. ಮಕ್ಕಳಿಗೆ ಸಂಗೀತ ಹೇಳಿಕೊಡುವವರು. ವೀಣಾ ರಾಜರಾಯರಲ್ಲಿ ಹೆಚ್ಚಿನ ವೀಣಾವಾದನ ಕಲಿತವರು.  ಅವರಿಂದ ಗಮಕ ವಾಚನವಾದರೂ ಮಾಡಿಸಬಹುದಲ್ಲ?"
"ಮನೆಯಲ್ಲಿ ಹಿರಿಯರ ಯೋಗಕ್ಷೇಮ ನೋಡಬೇಕು. ನನ್ನ ಕಾರ್ಯಬಾಹುಳ್ಯದಿಂದ ಮನೆಗೆ ಬಂದು-ಹೋಗುವವರು ಹೆಚ್ಚು. ಮೂರು ಸಣ್ಣ ಮಕ್ಕಳು. ಬಿಡುವೆಲ್ಲಿ?"

"ನೀವು ಹೇಳುವುದೆಲ್ಲಾ ಸರಿ ಎಂದು ಒಪ್ಪುತ್ತೇನೆ. ಆದರೆ ರಾಜಧಾನಿಯಿಂದ ದೂರದಲ್ಲಿ, ಸಣ್ಣ ಸಣ್ಣ ಊರಿನಲ್ಲಿರುವ ಜನರಿಗೆ ಒಳ್ಳೆಯ ವಿದ್ವಾಂಸರ ಕಾರ್ಯಕ್ರಮದ ಅವಕಾಶ ಆಗಬೇಡವೇ? ಅದಿಲ್ಲದೆ ಇಂತಹ ಕಾರ್ಯಕ್ರಮಗಳು ಸಿದ್ಧಿಸುವುದಾದರೂ ಹೇಗೆ?"
"ನಿಮ್ಮ ಮಾತಿನ ಒಟ್ಟು ಅರ್ಥವನ್ನು ಒಪ್ಪುತ್ತೇನೆ. ಆದರೆ ನಮಗೆ ಕಷ್ಟ"
"ಹಾಗೆಂದು ಬಿಡುವುವಂತಿಲ್ಲ. ಆಗಾಗ ಬಿಡುವು ಮಾಡಿಕೊಳ್ಳಿ. ಎಲ್ಲರೂ ಅರ್ಜಿ ಹಾಕಿ ಕಾಯಬೇಕಿಲ್ಲ. ಕೆಲವರನ್ನು ನಾವೇ ನೇರವಾಗಿ ಆಹ್ವಾನಿಸಬಹುದು. ನಿಮಗೆ ಹೀಗೆ ಆಹ್ವಾನ ಬರುತ್ತದೆ. ಕೆಲವು ಕಾರ್ಯಕ್ರಮ ಮಾಡಿಕೊಡಿ. ಅದರ ಅನುಭವದಲ್ಲಿ ನಿಮಗೇ ಇನ್ನಷ್ಟು ಉತ್ಸಾಹ ಬರಬಹುದು!"

ರಾಮಚಂದ್ರರಾಯರ ಮಾತಿನ ಧಾಟಿಯಲ್ಲಿ ಮರುಮಾತಿಗೆ ಅವಕಾಶ ಇರಲಿಲ್ಲ. ಮುಂದಿನ ವಾರವೇ ಸರ್ಕಾರದ ಇಲಾಖೆಯಿಂದ ಕಾರ್ಯಕ್ರಮ ನಿಗದಿ ಮಾಡಿ ಪತ್ರ ಬಂದೇ ಬಿಟ್ಟಿತು. ಮೊದಲ ಗಮಕವಾಚನ ಕಾರ್ಯಕ್ರಮ ರಾಮಚಂದ್ರರಾಯರ ನೇರ ಕಾರ್ಯಕ್ಷೇತ್ರ ಹಾಸನ ಜಿಲ್ಲೆಯ ಹಳ್ಳಿ ಒಂದರಲ್ಲಿ ನಿಯೋಜಿಸಿತ್ತು. 
*****

ಇಂತಹ ಕಾರ್ಯಕ್ರಮಗಳು ಸಂಜೆ ಐದು ಗಂಟೆಯ ಹಾಗೆ ಪ್ರಾರಂಭವಾಗಿ ಸೂರ್ಯಾಸ್ತದ ಸ್ವಲ್ಪ ಸಮಯಕ್ಕೆ ಮುಗಿದುಬಿಡಬೇಕಿತ್ತು. ಇಲ್ಲದಿದ್ದರೆ ಬೆಳಕಿನ ತೊಂದರೆ. ಜೊತೆಗೆ ಕಾರ್ಯಕ್ರಮಕ್ಕೆ ಬಂದ ಆಹ್ವಾನಿತರು ಕಡೆಯ ಬಸ್ಸು ಹಿಡಿದು ಹಿಂದಿರುಗಬೇಕಾಗಿತ್ತು. ಕಡೆಯ ಬಸ್ಸು ತಪ್ಪಿದರೆ ಅಂದು ರಾತ್ರಿ ಹಳ್ಳಿಯಲ್ಲಿಯೇ ಕಾಲಕಳೆಯಬೇಕು. ತಂಗಲು ಅನುಕೂಲಗಳು ಇರುತ್ತಿರಲಿಲ್ಲ. ಊರಿನ ಶಾನುಭೋಗರೋ, ಪಟೇಲರೋ ಅಥವಾ ಇನ್ಯಾರೋ ಗಣ್ಯ ವ್ಯಕ್ತಿಗಳು ಕಾರ್ಯಕ್ರಮಕ್ಕೆ ಸಹಕಾರ ಕೊಟ್ಟು ನಡೆಸಿಕೊಡಬೇಕು. ಊರಿನ ಅರಳಿ ಕಟ್ಟೆ ಬಳಿಯೋ ಅಥವಾ ದೊಡ್ಡ ಮನೆಯ ಅಂಗಳದಲ್ಲೋ, ಇದ್ದರೆ ರಾಮಮಂದಿರ ಅಥವಾ ಭಜನ ಮಂದಿರದಲ್ಲೋ ಕಾರ್ಯಕ್ರಮ. ಹೀಗೆ ನಡೆಯಬೇಕು. 

ಕಾರ್ಯಕ್ರಮ ನಿಗದಿಯಾದ ದಿನ ಬೆಳಿಗ್ಗೆ ನಾಗರಾಜರಾವ್ ದಂಪತಿಗಳು ಬೆಂಗಳೂರಿನಿಂದ ಬಸ್ಸಿನಲ್ಲಿ ಹೊರಟು ಹಾಸನ ತಲುಪಿ, ಸ್ನೇಹಿತರ ಮನೆಯಲ್ಲಿ ಊಟ ಮುಗಿಸಿ, ಮತ್ತೊಂದು ಬಸ್ಸಿನಲ್ಲಿ ಕಾರ್ಯಕ್ರಮ ಇರುವ ಊರು ತಲುಪಿದಾಗ ಮಧ್ಯಾನ್ಹ ಮೂರು ಗಂಟೆಯ ಸಮಯ. ಸಿಕ್ಕಿದ್ದ ಸೂಚನೆಯಂತೆ ಶಾನುಭೋಗ ಚನ್ನಪ್ಪನವರ ಮನೆ ವಿಚಾರಿಸಿಕೊಂಡರು ತಲುಪಿದರು. ಮನೆಯ ಮುಂದೆ ಎಂಟು-ಹತ್ತು ವರುಷದ ಬಾಲಕಿಯೊಬ್ಬಳು ಕುಂಟೆಬಿಲ್ಲೆ ಆಡುತಿದ್ದಳು. ಇವರನ್ನು ನೋಡಿದವಳು ಮನೆಯ ಬಾಗಿಲ ಬಳಿ ಹೋಗಿ "ಅಮ್ಮಾ, ಯಾರೋ ಬಂದಿದ್ದಾರೆ. ನೋಡು" ಎಂದು ಕೂಗಿ ತನ್ನ ಆಟ ಮುಂದುವರೆಸಿದಳು. 

ಹೊರಗಡೆ ಬಂದು ನೋಡಿದ ಗೃಹಿಣಿ ಪಡಸಾಲೆಯಲ್ಲಿ ಸುತ್ತಿಟ್ಟಿದ್ದ ಚಾಪೆ ಹಾಸಿ "ಕುಳಿತುಕೊಳ್ಳಿ. ಅವರು ಹೊಲದ ಕಡೆ ಹೋಗಿದ್ದಾರೆ. ಇನ್ನೇನು ಬರುವ ಹೊತ್ತು" ಎಂದು ಹೇಳಿ ಮನೆಯ ಒಳಗಡೆ ಹೊರಟುಹೋದರು. 

ಸುಮಾರು ಕಾಲು ಗಂಟೆ ಸಮಯ ಕಳೆಯಿತು. ಮನೆಯ ಒಳಗಡೆಯಿಂದ "ರತ್ನಾ, ಇಲ್ಲಿ ಬಾ" ಎಂದು ಕೂಗು ಬಂತು. ಕುಂಟೆಬಿಲ್ಲೆ ಆಡುತ್ತಿದ್ದ ಹುಡುಗಿ ಒಳಗೆ ಹೋದಳು. ಒಂದೊಂದಾಗಿ ಎರಡು ಲೋಟ ಕಾಫಿ ತಂದು ಪಡಸಾಲೆಯಲ್ಲಿ ಕುಳಿತಿದ್ದವರ ಮುಂದೆ ಇಟ್ಟು ತನ್ನ ಆಟ ಮುಂದುವರೆಸಿದಳು. ಗಂಟಲು ಒಣಗಿತ್ತು. ಕಾಫಿ ಕುಡಿದರು. ಇನ್ನರ್ಧ ಗಂಟೆ ಕಳೆಯಿತು. ಸುಮಾರು ನಲವತ್ತು-ನಲವತ್ತೈದು ವರುಷದ ವ್ಯಕ್ತಿ ಬಂದರು. ಕುಳಿತಿದ್ದವರನ್ನು ನೋಡಿದರು. 

"ನಮಸ್ಕಾರ. ಇಂದಿನ ಕಾರ್ಯಕ್ರಮ ನಡೆಸಲು ಬಂದವರೋ?"
"ಹೌದು. ಶಾನುಭೋಗ ಚನ್ನಪ್ಪನವರನ್ನು ಕಾಣುವಂತೆ ಸೂಚನೆಯಿತ್ತು. ಬಂದಿದ್ದೇವೆ"
"ನಾನೇ ಚನ್ನಪ್ಪ. ನನಗೆ ಬೆಳಿಗ್ಗೆ ತಾನೇ ಪತ್ರ ಬಂದಿತು. ಇದೇನು, ಇಲ್ಲೇ ಕುಳಿತಿರಿ. ರತ್ನಾ, ಒಳಗಡೆ ಕೂಡಿಸಬಾರದಿತ್ತೇ ಪುಟ್ಟ"

ಮನೆಯ ಒಳಗಡೆ ಕರೆದುಕೊಂಡು ಹೋದರು.

*****

ಕೈ ಕಾಲು ಮುಖ ತೊಳೆದು ದಣಿವಾರಿಸಿಕೊಂಡ ಮೇಲೆ ಚನ್ನಪ್ಪ ಮಾತು ಮುಂದುವರೆಸಿದರು. 

"ನೀವು ಎರಡು ವರುಷದ ಹಿಂದೆ ಬೇಲೂರು ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಬಂದಿದ್ದಿರಲ್ಲವೇ? ಅಲ್ಲಿ ನಿಮ್ಮನ್ನು ನೋಡಿದಹಾಗಿದೆ"
"ಹೌದು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಪರ್ಕದಿಂದ ಸಮ್ಮೇಳನ ಆಯೋಜಿಸುವ ಹೊಣೆ ನನ್ನ ಮೇಲೆ ಇತ್ತು. ಹೀಗಾಗಿ ಆಗ ಕೆಲವು ದಿನಗಳು ಬೇಲೂರಿನಲ್ಲಿಯೇ ಇದ್ದೆ. ಅಲ್ಲಿ ನೋಡಿರಬಹುದು"
"1952ರ ಬೇಲೂರು ಸಮ್ಮೇಳನವನ್ನು ಈ ಸುತ್ತಲಿನ ಜನ ಆಗಾಗ ನೆನೆಸಿಕೊಳ್ಳುತ್ತಾರೆ"
"ಸಮ್ಮೇಳನ ಚೆನ್ನಾಗಿ ಆಯಿತು ಅಂದು ಬಂದವರು ಅಂದರೆ ನಮ್ಮ ಕೆಲಸ ಸಾರ್ಥಕವಾಯಿತು"
"ಅಷ್ಟೇ ಅಲ್ಲ. ನಿಮ್ಮನ್ನು ಅದಕ್ಕೂ ಮುಂಚೆ ನೋಡಿದ ಹಾಗಿದೆ. ಸುಮಾರು ಹತ್ತು ವರುಷಗಳ ಹಿಂದೆ ಬೇಲೂರು ದೇವಸ್ಥಾನದ ಅರ್ಚಕ ಮಂಡಲಿಯ ಪ್ರಧಾನರು ಶ್ರೀ ಮುತ್ತು ಭಟ್ಟರ ಮನೆಗೆ ಡಿ.ವಿ.ಜಿ. ಅವರು ಬಂದಿದ್ದಾಗ ನೀವು ಅವರ ಜೊತೆ ಬಂದಿದ್ದೀರಾ?"
"ಹೌದು. ಡಿ.ವಿ.ಜಿ. ಅವರ "ಅಂತಃಪುರ ಗೀತೆ" ಮುದ್ರಣದ ಪುಸ್ತಕಕ್ಕೆ ಚನ್ನಕೇಶವನ ದೇವಾಲಯದ ಶಿಲಾಬಾಲಿಕೆಯರ ಫೋಟೋಗಳನ್ನು ಹಾಕುವ ಕೆಲಸವಿತ್ತು. ಗುಂಡಪ್ಪನವರು ಆ ಜವಾಬ್ದಾರಿ ನನಗೆ ವಹಿಸಿದ್ದರು. ಆ ಸಂದರ್ಭದಲ್ಲಿ ಬಂದಿದ್ದೆ. ನಿಟ್ಟೂರು ಶ್ರೀನಿವಾಸರಾಯರು, ಮಾನ್ವಿ ನರಸಿಂಗರಾಯರೂ ಬಂದಿದ್ದರು"

ಚನ್ನಪ್ಪನವರು ಉಂಡೆ ಮತ್ತು ಹುರಿಗಾಳು ತಂದರು. 

"ನಾನು ಗುಂಡಪ್ಪನವರ ಜೊತೆ ಬಂದಿದ್ದುದು ನಿಮಗೆ ಹೇಗೆ ಗೊತ್ತು?"
"ನನ್ನ ತಾಯಿಯ ತೌರು ಮನೆ ಅದೇ ಬೀದಿಯಲ್ಲಿದೆ. ಸೋದರಮಾವಂದಿರು ಈಗಲೂ ಅಲ್ಲಿದ್ದಾರೆ. ಆಗಾಗ ಅಲ್ಲಿ ಹೋಗುತ್ತಿರುತ್ತೇನೆ. ಹೀಗಾಗಿ ಡಿ.ವಿ.ಜಿ. ಅವರು ಬಂದಾಗ ನಾವೆಲ್ಲಾ ಅವರನ್ನು ನೋಡಲು ಮುತ್ತುಭಟ್ಟರ ಮನೆಗೆ ಬಂದಿದ್ದೆವು. ನನ್ನಮ್ಮ ನನಗೆ "ಚನ್ನಕೇಶವ" ಎಂದೇ ಹೆಸರಿಟ್ಟಿದ್ದಾಳೆ!"
"ಮತ್ತೆ "ಚನ್ನಪ್ಪ" ಎಂದು ಕರೆಯುತ್ತಾರಲ್ಲ?"
"ಇಲ್ಲಿ ಕೇಶವಯ್ಯ ಎಂದು ಹಿರಿಯರೊಬ್ಬರಿದ್ದರು. ಎರಡು ಕೇಶವ ಆಗಬಾರದು ಎಂದು ಚನ್ನಕೇಶವನಾದ ನನ್ನನು ಚನ್ನಪ್ಪ ಮಾಡಿಬಿಟ್ಟರು!"

ಎಲ್ಲರೂ ಘೊಳ್ಳೆಂದು ನಕ್ಕರು. ಮತ್ತೊಮ್ಮೆ ಕಾಫಿ ಆಯಿತು. ಕಾರ್ಯಕ್ರಮದ ಸಮಯವೂ ಆಯಿತು. 

*****

ರಾಮಮಂದಿರದಲ್ಲಿ ಶ್ರೀಮತಿ ರಾಜಾಮಣಿಯವರ ಕಾವ್ಯವಾಚನ. ಕುಮಾರವ್ಯಾಸ ಭಾರತದ ಪ್ರಸಂಗ. ವಿರಾಟಪರ್ವ ಮೂರನೆಯ ಸಂಧಿ. ಕೀಚಕನ ಕೋಟಲೆ ತಾಳಲಾರದೆ ಬೇಸತ್ತ ಸೈರಂಧ್ರಿ (ದ್ರೌಪದಿ) ಅಡಿಗೆಭಟ್ಟ ವಲಲ (ಭೀಮಸೇನ) ಇರುವೆಡೆ ಬಂದು ಕೀಚಕನ ವಧೆಗೆ ಅವನನ್ನು ಒಪ್ಪಿಸುವ ಸಂದರ್ಭ. ಪದ್ಯ ವಾಚನದ ನಂತರ ನಾಗರಾಜರಾಯರ ವ್ಯಾಖ್ಯಾನ. 

ತಯಾರಿ ಮತ್ತು ಪ್ರಚಾರ ಇಲ್ಲದ, ತರಾತುರಿಯಲ್ಲಿ ಜನ ಸೇರಿಸಿದ ಕಾರ್ಯಕ್ರಮ. ಹೆಚ್ಚು ಜನ ಬಂದಿರಲಿಲ್ಲ. ಬಂದಿದ್ದವರು ಕೆಲವರು ಹೆಚ್ಚು ವಿದ್ಯಾವಂತರಲ್ಲದಿದ್ದರೂ ವಿಷಯ ತಿಳಿದವರು. "ಕುರಿತೋದದೆಯುo ಕಾವ್ಯಪ್ರಯೋಗ ಪರಿಣತಮತಿಗಳ್" ಅನ್ನುವ ಕವಿರಾಜಮಾರ್ಗ ನುಡಿಯ ರೀತಿಯವರು. ಕಾರ್ಯಕ್ರಮ ನಡೆಯುತ್ತಿದ್ದಂತೆ ಇನ್ನಷ್ಟು ಜನ ಸೇರಿದರು. ಒಂದೂವರೆ ಗಂಟೆಗಳ ವಾಚನ ನಡೆಯಿತು.

ಚನ್ನಪ್ಪನವರ ವಂದನಾರ್ಪಣೆ ಮೊದಲು ಹಿರಿಯರೊಬ್ಬರು ನಿಂತುಕೊಂಡರು. "ಭೀಮ ಕಷ್ಟವನೆಸಗಿದನು ಹಾಎಂದರಾದೊಡೆ ಮುಸುಡನಮರಾದ್ರಿಯಲಿ ತೇವೆನು ದೇವ ಸಂತತಿಯ" ಅನ್ನುವ ಪದ್ಯದ ಬಗ್ಗೆ "ಭೀಮ ಹಾಗೆ ಹೇಳಿದುದು ಸರಿಯೇ" ಎಂದು ಪ್ರಶ್ನೆ ಮಾಡಿದರು. ನಾಗರಾಜರಾಯರು ಸ್ವಲ್ಪ ವಿವರವಾಗಿಯೇ ಉತ್ತರಿಸಿದರು. "ಇಂತಹ ಕಾರ್ಯಕ್ರಮ ನಡೆಯುವುದು ನಮಗೆ ಸರಿಯಾಗಿ ಗೊತ್ತಾಗಲಿಲ್ಲ. ಅನೇಕ ಆಸಕ್ತರು ಬರಲಾಗಲಿಲ್ಲ" ಅಂದರು ಆ ಹಿರಿಯರು. "ಹೌದು, ಹೌದು" ಎಂದು ಸ್ವಲ್ಪ ಗುಸು ಗುಸು ಮಾತುಗಳಾದವು.

***** 

ಚನ್ನಪ್ಪನವರ ವಂದನಾರ್ಪಣೆ. "ಕಾರ್ಯಕ್ರಮ ಹೇಗಿತ್ತು ಅಂತ ನಾನೇನು ಹೇಳಬೇಕಾಗಿಲ್ಲ. ಎಲ್ಲರಿಗೂ ಗೊತ್ತಾಗಿದೆ. ಈ ದಿನ ಅನೇಕರಿಗೆ ಬರಲಾಗಿಲ್ಲ. ಬೆಳಕಿನ ವ್ಯವಸ್ಥೆ ಇಲ್ಲ. ಧ್ವನಿವರ್ಧಕ ಇಲ್ಲ. ಆದ ಕಾರಣ ನಾಳೆಯೂ ಕಾರ್ಯಕ್ರಮ ಇರುತ್ತದೆ. ಸುತ್ತಮುತ್ತಲ ಹಳ್ಳಿಯವರಿಗೆ ತಿಳಿಸಿ. ನಾಳೆ ಪೆಟ್ರೋಮ್ಯಾಕ್ಸ್ ದೀಪಗಳ ಮತ್ತು ಧ್ವನಿವರ್ಧಕದ ವ್ಯವಸ್ಥೆ ಮಾಡಿಸುತ್ತೇವೆ. ಊರಹಬ್ಬಕ್ಕೆ ಈ ವ್ಯವಸ್ಥೆ ಮಾಡುವ ಪಾರ್ಟಿಗೇ ಹೇಳಿಕಳಿಸುತ್ತೇನೆ. ಈದಿನ ವಂದನಾರ್ಪಣೆ ಇಲ್ಲ. ಅದು ಏನಿದ್ದರೂ ನಾಳೆಯೇ" ಎಂದು ಹೇಳಿ ಮುಗಿಸಿಬಿಟ್ಟರು.

ಮನೆಗೆ ಬರುವ ದಾರಿಯಲ್ಲಿ ರಾಯರು ಚನ್ನಪ್ಪರನ್ನು ಕೇಳಿದರು. "ಇದೇನು? ಹೀಗೆ ಮಾಡಿಬಿಟ್ಟಿರಿ? ನಮ್ಮನ್ನು ಕೇಳಲೂ ಇಲ್ಲ. ನಮಗೆ ನಾಳೆ ಇರಲು ಅನುಕೂಲವಿಲ್ಲ. ನಾವು ಇಂದೇ ಹಿಂದಿರುಗುವುದು ಎಂದು ಬಂದವರು. ಈ ದಿನ ತಡವಾಯಿತು. ನಾವು ಬೆಳಿಗ್ಗೆ ಬೇಗಲೇ ಹೊರಡಬೇಕು" ಅಂದರು. 

"ಸ್ವಾಮಿ, ಬಡವರ ಮನೆಯಲ್ಲಿ ಆದಷ್ಟೂ ಅನುಕೂಲ ಮಾಡಿ ಕೊಡುತ್ತೇನೆ. ಒಂದು ದಿನ ಸುಧಾರಿಸಿಕೊಳ್ಳಿ. ನೀವು ಮತೊಮ್ಮೆ ನಮ್ಮ ಊರಿಗೆ ಬರುವುದು ಸಾಧ್ಯವಿಲ್ಲ. ಬಂದಿರುವಾಗ ನಿಮಗೆ ಕಷ್ಟವಾದರೂ ನಮ್ಮ ಜನಗಳಿಗೆ ಒಂದು ಒಳ್ಳೆಯ ಕಾರ್ಯಕ್ರಮ ಆಗಲಿ" ಅಂದರು ಚನ್ನಪ್ಪನವರು. 

*****

ಮಾರನೆಯ ದಿನ ಎಲ್ಲಾ ವ್ಯವಸ್ಥೆಗಳೊಂದಿಗೆ ಭರ್ಜರಿ ಕಾರ್ಯಕ್ರಮ ನಡೆಯಿತು. ಊರಿನವರ ಬೇಡಿಕೆಯಂತೆ "ಕುಂತಿ-ಕರ್ಣ" ಪ್ರಸಂಗದ ವಾಚನ ಮಾಡಲಾಯಿತು. ಸುತ್ತ-ಮುತ್ತಲಿನ ಹಳ್ಳಿ ಜನರೆಲ್ಲಾ ಸೇರಿದ್ದರು. ಕಾರ್ಯಕ್ರಮ ನಡೆದ ನಂತರ ದಂಪತಿಗಳಿಗೆ ಔತಣದ ಊಟ ತಯಾರಾಗಿತ್ತು. ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ ಮಾಡಲು ಉಪಕರಣ ತಂದಿದ್ದ ವ್ಯಾನಿನಲ್ಲಿ ಅವರನ್ನು ಉಡುಗೊರೆಗಳ ಸಮೇತ ಹಾಸನಕ್ಕೆ ಕಳಿಸಿಕೊಟ್ಟರು. ಹೊರಡುವ ಸಮಯದಲ್ಲಿ ತಡ ರಾತ್ರಿಯಾಗಿದ್ದರೂ ಅನೇಕರು ಕಾದಿದ್ದು ಬೀಳ್ಕೊಟ್ಟರು. ಮತ್ತೊಮ್ಮೆ ಬನ್ನಿ ಎಂದು ಎಷ್ಟೋವರ್ಷದ ಬಂಧುಗಳನ್ನು ಕೇಳುವಂತೆ ಪ್ರೀತಿಯಿಂದ ಆಹ್ವಾನಿಸಿದರು.  ದಂಪತಿಗಳು ಹಾಸನದಿಂದ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿಗೆ ಬಂದು ತಲುಪಿದರು.  

ನಂತರ ನಾಗರಾಜರಾವ್ ದಂಪತಿಗಳು ಅನೇಕ "ಸಂಸ್ಕೃತಿ ಪ್ರಸಾರ" ಕಾರ್ಯಕ್ರಮಗಳನ್ನು ರಾಜ್ಯದ ಅನೇಕ ಕಡೆಗಳಲ್ಲಿ ನಡೆಸಿಕೊಟ್ಟಿರುವುದು ಹಿಂದಿನ ತಲೆಮಾರಿನವರಿಗೆ ಗೊತ್ತಿರುವ ವಿಷಯವೇ.

Wednesday, June 11, 2025

ದೊಡ್ಡವರ ಅನುಗ್ರಹ


ಇಂದಿಗೆ ಸರಿಯಾಗಿ ನಲವತ್ತು ವರುಷಗಳ ಹಿಂದಿನ ಮಾತು. ಆಗ ಇಸವಿ 1985, ಜೂನ್ ತಿಂಗಳ ಮೊದಲ ಭಾಗ. 

ಕನ್ನಡದ ಖ್ಯಾತ ಸಾಹಿತಿ ಶ್ರೀ ಸಿ. ಕೆ. ನಾಗರಾಜ ರಾವ್ ಅವರ ಪ್ರಸಿದ್ಧ ಬೃಹತ್ ಚಾರಿತ್ರಿಕ ಕಾದಂಬರಿ (2,200 ಪುಟಗಳ ವಿಸ್ತಾರ) "ಪಟ್ಟಮಹಾದೇವಿ ಶಾಂತಲದೇವಿ" ಕೃತಿಗೆ "ಭಾರತೀಯ ಜ್ಞಾನಪೀಠ" ಹೊಸದಾಗಿ ಸ್ಥಾಪಿಸಿದ್ದ "ಮೂರ್ತಿದೇವಿ ಸಾಹಿತ್ಯ ಪ್ರಶಸ್ತಿ" ಲಭಿಸಿತ್ತು. 1983ರಲ್ಲಿ ಪ್ರಾರಂಭಿಸಿದ ಈ ಪ್ರಶಸ್ತಿಯ ಮೊದಲ ಕೊಡುಗೆ ಕನ್ನಡಕ್ಕೆ ಸಂದಿತ್ತು. ಪ್ರಶಸ್ತಿ 1983ನೆಯ ವರುಷದ್ದಾದರೂ, ಅದನ್ನು ಘೋಷಿಸಿ, ನಂತರ ಸಮಾರಂಭ ನಡೆಸಿ, ಪ್ರಶಸ್ತಿ ಪ್ರದಾನ ನಡೆದುದು ಮೇ 12, 1985 ರಂದು, ನವದೆಹಲಿಯಲ್ಲಿ. ಅಂದಿನ ಭಾರತ ಕೇಂದ್ರ ಸರ್ಕಾರದ "ವಾರ್ತಾ ಮಾತು ಪ್ರಸಾರ" ಖಾತೆಯ ಮಂತ್ರಿಗಳಾಗಿದ್ದ ಶ್ರೀ ವಿ.ಏನ್. ಗಾಡ್ಗಿಲ್ ಅವರು ಆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದರು. ನಂತರದ ದಿನಗಳಲ್ಲಿ ಖ್ಯಾತ ಸಾಹಿತಿ ಮತ್ತು ಪ್ರಾಧ್ಯಾಪಕರಾಗಿದ್ದ ಪ್ರೊ. ಎಲ್. ಎಸ. ಶೇಷಗಿರಿ ರಾವ್ ಅವರು ಕನ್ನಡ ಪತ್ರಿಕೆಯೊಂದರಲ್ಲಿ "ಮೂರ್ತಿದೇವಿಯ ಪ್ರಥಮಾನುಗ್ರಹ" ಎನ್ನುವ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಬರೆದಿದ್ದರು. 

ಭಾತತೀಯ ಉದ್ಯಮ ಕ್ಷೇತ್ರದಲ್ಲಿ ಮತ್ತು ಸಾಂಸ್ಕೃತಿಕ-ಸಾಮಾಜಿಕ ದತ್ತಿ-ಪುದುವಟ್ಟುಗಳಲ್ಲಿ "ಸಾಹು ಜೈನ ಕುಟುಂಬ" ಒಂದು ದೊಡ್ಡ ಹೆಸರು. ಸಾಹು ಶ್ರೇಯಾಂಸ್ ಪ್ರಸಾದ್ ಜೈನ್ ಮತ್ತು ಸಾಹು ಶಾಂತಿ ಪ್ರಸಾದ್ ಜೈನ್ ಅಣ್ಣ-ತಮ್ಮಂದಿರು. ಶ್ರೇಯಾಂಸ್ ಪ್ರಸಾದ್ ಜೈನ್ ರಾಜ್ಯಸಭಾ ಸದಸ್ಯರಾಗಿದ್ದರು (1952-58) ಮತ್ತು ಕೆಲವು ಕಾಲ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧ್ಯಕ್ಷರಾಗಿಯೂ ಇದ್ದರು (1953-54). ಶಾಂತಿ ಪ್ರಸಾದ್ ಜೈನ್ ಅವರೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧ್ಯಕ್ಷರಾಗಿದ್ದರು (1954-59). "ಟೈಮ್ಸ್  ಆಫ್ ಇಂಡಿಯಾ" ಸಮೂಹಕ್ಕೆ ಶಾಂತಿ ಪ್ರಸಾದ್ ಜೈನ್ ಒಡೆಯರಾಗಿದ್ದರು. ಇವರಿಬ್ಬರ ತಾಯಿಯವರ ಹೆಸರು "ಮೂರ್ತಿ ದೇವಿ" ಎಂದು. ತಮ್ಮ ತಾಯಿಯ ನೆನಪಾಗಿ ಶಾಂತಿ ಪ್ರಸಾದ್ ಜೈನ್ ಅವರು ತಮ್ಮ ಭಾರತೀಯ ಜ್ಞಾನಪೀಠ ಸಂಸ್ಥೆಯ ಮೂಲಕ "ಮೂರ್ತಿ ದೇವಿ ಸಾಹಿತ್ಯ ಪ್ರಶಸ್ತಿ" ಪ್ರಾರಂಭಿಸಿದರು. "ಮೂರ್ತಿ ದೇವಿ" ಅಂದರೆ ಜೈನ ಸಂಪ್ರದಾಯದಲ್ಲಿ ವಿಶೇಷವಾಗಿ ಆರಾಧಿಸುವ ಸರಸ್ವತಿ. ("ಮೂರ್ತಿ ದೇವಿ ಗ್ರಂಥಮಾಲಾ" ಎನ್ನುವ ಹೆಸರಿನಲ್ಲಿ ಅನೇಕ ಪುಸ್ತಕಗಳ ಪ್ರಕಟಣೆ ಕೂಡ ಉಂಟು). ಈ ಸರಸ್ವತಿಯ ಮೊದಲ ಅನುಗ್ರಹ ಸಿ. ಕೆ. ನಾಗರಾಜ ರಾಯರಿಗೆ ದೊರಕಿತು. 

ಮೇಲೆ ಕೊಟ್ಟಿರುವ ಚಿತ್ರ ನಾಗರಾಜ ರಾಯರಿಗೆ ಆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಿದ "ಪ್ರಶಸ್ತಿ ಮೂರ್ತಿ" ಛಾಯಾಚಿತ್ರ.  ಇದರೊಂದಿಗೆ ಪಂಚಲೋಹದ "ಉಲ್ಲೇಖ" (Citation) ಸಹ ಇತ್ತು. 

*****

ಅಂದು, ನಲವತ್ತು ವರುಷಗಳ ಹಿಂದೆ, ನಾಗರಾಜ ರಾಯರ ಬನಶಂಕರಿ ಮೂರನೆಯ ಹಂತದ ಮನೆಗೆ ಹೋದಾಗ ಅವರು ತಮ್ಮ ಮನೆಯ ಗ್ಯಾರೇಜ್ ಪುಸ್ತಕಾಲಯದ ಮೂಲೆಯಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಮಾಡುತ್ತಿದ್ದರು. ತಮ್ಮ ಬಾಲ್ಯದಿಂದಲೂ ಅವರು ಪ್ರತಿ ವರುಷ ಹೀಗೆ ತಾವೇ ಮಣ್ಣಿನ ಮೂರ್ತಿಗಳನ್ನು ಮಾಡಿ ಪೂಜಿಸುತ್ತಿದ್ದುದು ಅವರ ಮನೆಯಲ್ಲಿ ನಡೆದು ಬಂದ ಸಂಪ್ರದಾಯ. ಕೆಲವು ದಿನಗಳ ಹಿಂದೆ ಕಗ್ಗಲೀಪುರದ ಕೆರೆಯ ಅಂಗಳದಿಂದ ಮೂರ್ತಿಗಳ ತಯಾರಿಕೆಗಾಗಿ ಬೇಕಾದ ಮಣ್ಣು ತಂದಿದ್ದೆವು. ಸರಿಯಾದ ಮಣ್ಣಿನ ಮೂರ್ತಿಗಳನ್ನು ಮಾಡುವುದು ಕಡಬು-ಒಬ್ಬಟ್ಟು ಮಾಡುವುದಕ್ಕಿಂತ ಪ್ರಯಾಸದ ಕೆಲಸ! ಮೊದಲು ಮಣ್ಣು ಕುಟ್ಟಿ, ಹದಮಾಡಿ, ಜರಡಿ ಹಿಡಿದು ಸೋಸಬೇಕು. ನಂತರ ಹಿತಪ್ರಮಾಣದಲ್ಲಿ ನೀರು ಮತ್ತು ಹತ್ತಿ ಸೇರಿಸಿ ಸಂಸ್ಕರಿಸಬೇಕು. ಪೀಠ ಹುಡುಕಿ ಕ್ರಮೇಣ ಅದರ ಮೇಲೆ ಮಣ್ಣಿನ ಉಂಡೆಗಳಿಂದ ತಿದ್ದಿ ತಿದ್ದಿ ಆಕಾರ ಕೊಡಬೇಕು. ಒಮ್ಮೆಲೇ ಮಾಡಿ ಮುಗಿಸುವ ಹಾಗಿಲ್ಲ. ಹಾಗೆ ಮಾಡಿದರೆ ಬಿರುಕುಗಳು ಬಂದುಬಿಡುತ್ತವೆ. ನೆರಳಿನಲ್ಲಿ ಇಟ್ಟು ನಿಧಾನವಾಗಿ ಒಣಗಿಸುತ್ತಾ ಮುಂದುವರೆಸಬೇಕು. ಮುಂದೆ ಸೂಕ್ತವಾದ ಬಣ್ಣಗಳನ್ನು ಹಚ್ಚಬೇಕು. ಆಮೇಲೆ ಬಣ್ಣ-ಬಣ್ಣದ ವರ್ತಿ, ಲಕ್ಕಿ ಮುಂತಾದುವುಗಳಿಂದ ಅಲಂಕರಿಸಬೇಕು. ಹೀಗೆ, ಹಂತ ಹಂತವಾಗಿ ಮಾಡಬೇಕು. 

ಗೌರಿಯ ಮೂರ್ತಿ ಮಾಡುವುದು ಹೆಚ್ಚು-ಕಡಿಮೆ ಮುಗಿದಿತ್ತು. ಕಿರೀಟ, ಒಲೆಗಳು, ಮೂಗುತಿ, ಮಾಂಗಲ್ಯ, ಸರಗಳು, ಬಳೆಗಳು, ತುರುಬಿನ ಕೂದಲ ಶೃಂಗಾರ, ಸೀರೆ, ರವಿಕೆ ಇವುಗಳ ಆಕಾರ ಮುಗಿದಿತ್ತು. ಮುಂದೆ ಕ್ರಮವಾಗಿ ಸೂಕ್ತವಾದ ಬಣ್ಣಗಳನ್ನು ಹಚ್ಚಿ ಸಿಂಗರಿಸುವುದು ಬಾಕಿ. ಗಣೇಶನ ಮೂರ್ತಿ ಇನ್ನೂ ಪ್ರಾರಂಭದ ಹಂತದಲ್ಲಿತ್ತು. 

"ಗೌರಮ್ಮ ಚೆನ್ನಾಗಿದ್ದಾಳೆ. ಎದ್ದು ಬರುವಂತಿದ್ದಾಳೆ" ಎಂದೆ. 
"ಹೌದು. ಈ ಸಲ ಹೊಸ ಫ್ಯಾಷನ್ನಿನ ಜರಿ ಸೀರೆ ಉಟ್ಟಿದ್ದಾಳೆ. ಬಣ್ಣ ಹಾಕಿದ ಮೇಲೆ ಗೊತ್ತಾಗುತ್ತದೆ" ಅಂದರು. ಮಾತು ಮುಂದುವರೆಯಿತು. 

"ಮೂರ್ತಿದೇವಿಯ ಪ್ರಥಮಾನುಗ್ರಹ ಲೇಖನ ಓದಿದೆ. ಚೆನ್ನಾಗಿ ಬರೆದಿದ್ದಾರೆ" 
"ಶೇಷಗಿರಿ ರಾಯರಿಗೆ ನನ್ನ ಕಾದಂಬರಿ ರಚನೆಯ ವಿವರಗಳೆಲ್ಲ ಗೊತ್ತು. ಅದರ ರಚನೆಯ ಹಿಂದಿನ ಶ್ರಮ ತಿಳಿದವರು ಅವರು. ಸಹೃದಯರು. ಪುಸ್ತಕದ ಮೇಲಿನ ವಿಚಾರ ಸಂಕಿರಣ ಸಮಾರಂಭಗಳಲ್ಲಿ ಭಾಷಣ ಮಾಡಿರುವವರು. ಅಭಿಮಾನದಿಂದ ಬರೆದಿದ್ದಾರೆ"
"ಅನುಗ್ರಹ" ಅನ್ನುವ ಪದದ ಬಳಕೆ, ಈ ಹಿನ್ನೆಲೆಯಲ್ಲಿ ಸರಸ್ವತಿಯ ಅನುಗ್ರಹದ ಸಂಕೇತವೋ?"
"ಹಾಗೆ ಅಂದುಕೊಳ್ಳಬಹುದು. ಸರಸ್ವತಿ ಅನುಗ್ರಹ ಸಿಕ್ಕಿತು. ಹಿಂದೊಮ್ಮೆ ತಾಯಿ ಶಾರದೆಯ ಅನುಗ್ರಹ ಸ್ವಲ್ಪದರಲ್ಲಿ ತಪ್ಪಿತ್ತು. ಈಗ ಸರಸ್ವತಿಯ ರೂಪದಲ್ಲಿ ಬಂದಿದೆ ಅನ್ನಬಹುದು"
"ಹಿಂದೆ ಹೇಗೆ ತಪ್ಪಿತು? ಅದರ ವಿವರವೇನು?'

ನಾಗರಾಜರಾಯರು ತಮ್ಮ ಜೀವನದ (ಅಂದಿಗೆ) ಮೂವತ್ತು ವರುಷಗಳ ಹಿಂದಿನ ಪ್ರಸಂಗವನ್ನು ವಿವರಿಸಿದರು. ಅವರದೇ ಮಾತಿನಲ್ಲಿ ವಿವರಣೆ ಹೀಗಿತ್ತು. 

***** 

"ನನಗೂ ಬೇಲೂರು-ಹಳೇಬೀಡಿಗೂ ಒಂದು ವಿಶೇಷ ಸಂಬಂಧ. ಬೇಲೂರು-ಹಳೇಬೀಡು ದೇವಾಲಯಗಳನ್ನು ಹಿಂದೆ ನೋಡಿದ್ದರೂ ಹೆಚ್ಚಿನ ಗಮನ ಹರಿಸಿದ್ದು ಮಾನ್ಯ ಡಿ. ವಿ. ಗುಂಡಪ್ಪ ಅವರ "ಅಂತಃಪುರ ಗೀತೆಗಳು" ಪ್ರಕಟಣೆಯ ಸಂದರ್ಭದಲ್ಲಿ. ಆ ಪುಸ್ತಕ ಅಚ್ಚಾಗುವಾಗ ಅದರಲ್ಲಿ ಸಂಬಂಧಿಸಿದ ಶಿಲಾಬಾಲಿಕೆಯರ ಪಡಿಯಚ್ಚು (ಫೋಟೋ) ಹಾಕಬೇಕಿತ್ತು. ಫೋಟೋಗ್ರಫಿಯಲ್ಲಿ ನನಗೆ ಹೆಚ್ಚಿನ ಆಸಕ್ತಿ ಇದ್ದ ವಿಷಯ ತಿಳಿದಿದ್ದ ಗುಂಡಪ್ಪನವರು ನನಗೆ ಆ ಕೆಲಸ ವಹಿಸಿದರು. ಆಗ ಎರಡು ಮೂರು ದಿನ ಬೇಲೂರಿನಲ್ಲೇ ವಾಸ್ತವ್ಯ ಹೂಡಿ ಚಿತ್ರಗಳನ್ನು ಬೇರೆ ಬೇರೆ ಕೋಣಗಳಿಂದ ತೆಗೆಯಬೇಕಾಯಿತು. ನಂತರ ನನಗೆ "ಕನ್ನಡ ಸಾಹಿತ್ಯ ಪರಿಷತ್ತು" ಗೌರವ ಕಾರ್ಯದರ್ಶಿ ಆಗಿ ಕೆಲಸ ಮಾಡುವ ಸುಯೋಗ ಕೊಟ್ಟಿತು. ಹಾಸನ-ಚಿಕ್ಕಮಗಳೂರುಗಳಲ್ಲಿ "ಕರ್ನಾಟಕ ಸಂಘ" ಅಷ್ಟು ಕಾರ್ಯಶೀಲವಾಗಿರಲಿಲ್ಲ. ಈ ಕೆಲಸ ನಿಮಿತ್ತವಾಗಿ ಅನೇಕ ಸಲ ಬೇಲೂರು ಸುತ್ತಮುತ್ತ ಓಡಾಡಬೇಕಾಯಿತು. ನಾನು ಗೌರವ ಕಾರ್ಯದರ್ಶಿಯಾದ ಎರಡು-ಮೂರು ವರ್ಷಗಳಲ್ಲಿ, 1952 ಇಸವಿಯಲ್ಲಿ "ಕನ್ನಡ ಸಾಹಿತ್ಯ ಸಮ್ಮೇಳನ" ಬೇಲೂರಿನಲ್ಲಿ ನಡೆಯಿತು. ಆಗಂತೂ ಕೆಲವು ದಿನ ಬೇಲೂರಿನಲ್ಲೇ ಇದ್ದು ಕೆಲಸ ಮಾಡಬೇಕಾಗಿತ್ತು."

"ಶೃಂಗೇರಿ ನಮ್ಮ ನಾಡಿನ ಹೆಮ್ಮೆಯ ಧಾರ್ಮಿಕ-ಶೈಕ್ಷಣಿಕ-ಸಾಂಸ್ಕೃತಿಕ ಕೇಂದ್ರ. ಆಗ ಶ್ರೀ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು ಪೀಠಾಧಿಪತಿಗಳು. ಅವರು ಮಹಾತಪಸ್ವಿಗಳು ಮತ್ತು ಶಿಷ್ಯವತ್ಸಲರು ಎಂದು ಗುರುತಿಸಲ್ಪಟ್ಟವರು. ಹೀಗೆ ಬೇಲೂರು-ಚಿಕ್ಕಮಗಳೂರು ಸುತ್ತಮುತ್ತ ಓಡಾಡುವಾಗ ಸಾಧ್ಯವಾದಾಗಲೆಲ್ಲ ಅವರ ಸಂದರ್ಶನ ಪಡೆಯುವ ಅವಕಾಶವಿತ್ತು. 1912ರಲ್ಲಿ ಪೀಠಾರೋಹಣ ಮಾಡಿದ ಅವರು ಮುಂದಿನ 42 ವರ್ಷಕಾಲ ಪೀಠವನ್ನು ನಡೆಸಿದವರು."

"1954ನೆಯ ಇಸವಿ ಆಗಸ್ಟ್ ತಿಂಗಳ ಕೊನೆಯ ದಿನ ಹೀಗೆ ಶೃಂಗೇರಿ ತಲುಪಿದಾಗ ರಾತ್ರಿಯಾಗಿತ್ತು. ಜೊತೆಯಲ್ಲಿ ಸ್ನೇಹಿತರಿದ್ದರು. ಮಾರನೆಯ ಬೆಳಿಗ್ಗೆ ಬೇಗ ಶಾರದಾ-ಚಂದ್ರಮೌಳೇಶ್ವರರ ದರ್ಶನ ಮಾಡಿದ ನಂತರ ಶ್ರೀಗಳ ಸಂದರ್ಶನ ಸಿಕ್ಕಿತು. ಹೊರಡಲು ಅನುಮತಿ ಬೇಡಿದಾಗ "ಏನು ಆತುರ? ಮಧ್ಯಾನ್ಹದವರೆಗೆ ಇದ್ದು ಪೂಜೆಯ ನಂತರ ಪ್ರಸಾದ ಸ್ವೀಕರಿಸಿ ಹೊರಡಬಹುದಲ್ಲ" ಅಂದರು. "ಇಲ್ಲ. ಬೆಳಗಾದರೆ ಗೌರಿ-ಗಣೇಶ ಹಬ್ಬಗಳು. ಮನೆಗೆ ಹೊರಊರುಗಳಿಂದ ಅತಿಥಿಗಳು ಬರುವವರಿದ್ದಾರೆ. ಸಂಜೆಯೊಳಗೆ ಬೆಂಗಳೂರು ಸೇರಬೇಕು. ನವರಾತ್ರಿ ಉತ್ಸವ ಸಂದರ್ಭದಲ್ಲಿ ಮತ್ತೆ ದರ್ಶನ ಪಡೆಯುತ್ತೇವೆ" ಎಂದೆವು. "ನವರಾತ್ರಿ ಉತ್ಸವಕ್ಕೆ ಬರುವುದೇನೋ ಒಳ್ಳೆಯದೇ. ಅಮಾವಾಸ್ಯೆಗೆ ಮುಂಚೆ ಬರುತ್ತೀರೋ ಅಥವಾ ಆಚೆಗೂ?' ಅಂದರು. "ಆದಷ್ಟೂ ಬೇಗ ತಮ್ಮ ದರ್ಶನ ಪಡೆಯುತ್ತೇವೆ" ಎಂದೆವು. ನಸುನಕ್ಕು ಫಲಗಳನ್ನು ಕೊಟ್ಟು ಆಶೀರ್ವದಿಸಿದರು."

"ಸೆಪ್ಟೆಂಬರ್ 25ನೆಯ ತಾರೀಖು ಭಾನುವಾರ. ತುಂಗೆಯು ತುಂಬಿ ಹರಿಯುತ್ತಿದ್ದಳು. ಶ್ರೀಗಳು ಶಿಷ್ಯನ ಜೊತೆ ಬೆಳಿಗ್ಗೆ ನದಿಸ್ನಾನಕ್ಕೆ ಹೊರಟರಂತೆ. ನದಿಯ ಮಧ್ಯೆ ನಡೆದ ಶ್ರೀಗಳು ಒಮ್ಮೆ ಮುಳುಗು ಹಾಕಿ ಮತ್ತೊಮ್ಮೆ ನೀರಿನಲ್ಲಿ ಹೋದವರು ಮೇಲೆ ಬರಲಿಲ್ಲ. ಶಿಷ್ಯನೂ ಅವರನ್ನು ಹುಡುಕುತ್ತ ಮುಳುಗು ಹಾಕಿದನು. ಇದನ್ನು ನೋಡಿದ ಮತ್ಯಾರೋ ನದಿಗೆ ಧುಮಿಕಿದರು. ಸ್ವಲ್ಪ ಕೆಳಗೆ ಶ್ರೀಗಳ ದೇಹ ಸಿಕ್ಕಿತು. ಪದ್ಮಾಸನ ಹಾಕಿ ಧ್ಯಾನಮುದ್ರೆಯಲ್ಲಿದ್ದ ಶರೀರ. ನೀರಲ್ಲಿ ಮುಳುಗಿದಂತೆ, ನೀರು ಕುಡಿದು ದೇಹತ್ಯಾಗವಾಗಿರಲಿಲ್ಲ. ನೀರಿಂದ ಹೊರಬರಲು ಪ್ರಯಾಸ  ಇರಲಿಲ್ಲ. ಯಾವ ಹೊಡೆದಾಟವೂ ಇಲ್ಲ. ಧ್ಯಾನಮಗ್ನರಾಗಿ ಸ್ವಇಚ್ಛೆಯಿಂದ ಜೀವನ್ಮುಕ್ತಿ ಪಡೆದಂತೆ ಇತ್ತಂತೆ."

"ಅಮಾವಾಸ್ಯೆಗೆ ಮೊದಲು ಶೃಂಗೇರಿಗೆ ಹೋಗಿದ್ದರೆ ಅವರ ಸಾನ್ನಿಧ್ಯದಲ್ಲಿ ಶಾರದೆಯ ಅನುಗ್ರಹ ಸಿಗುತ್ತಿತ್ತು. ಸ್ವಲ್ಪದರಲ್ಲಿ ತಪ್ಪಿಹೋಯಿತು."

"ಶ್ರೀಗಳವರಿಗೆ ಭಾನುವಾರ ಬಹಳ ವಿಶೇಷವಂತೆ. ಭಾನುವಾರ ಜನನ. ಭಾನುವಾರ ಉಪನಯನ. ಭಾನುವಾರ ಸನ್ಯಾಸ ಸ್ವೀಕಾರ. ಮಹಾಲಯ ಅಮಾವಾಸ್ಯೆಯಂದು (ನವರಾತ್ರಿ ಉತ್ಸವ ಪ್ರರಂಭದ ಹಿಂದಿನ ದಿನ) ಭಾನುವಾರವೇ ಜೀವನ್ಮುಕ್ತಿ."

*****

"ದೊಡ್ಡವರು ಕೆಲವೊಂದು ವಿಚಾರಗಳನ್ನು ಸೂಕ್ಷ್ಮವಾಗಿ ಹೇಳುತ್ತಾರೆ. ನಾವು ಅದನ್ನು ತಿಳಿದುಕೊಂಡು ವ್ಯವಹರಿಸಬೇಕು." ಎಂದು ಅಂದು ನಾಗರಾಜರಾಯರು ಹೇಳಿದ ಮಾತು ಅನೇಕ ವೇಳೆ ನಮ್ಮಗಳ ಜೀವನದ ಅನುಭವದಲ್ಲಿ ಬಂದಿರುತ್ತದೆ. ಆದರೆ ಬಹಳ ಬೇಗ ಅದರ ಪ್ರಾಮುಖ್ಯತೆ ಮರೆತೂ ಹೋಗುತ್ತದೆ!