Showing posts with label Jala. Show all posts
Showing posts with label Jala. Show all posts

Thursday, July 17, 2025

ಪಾರ್ಥಿವ ಶರೀರ


ಚಿತ್ರರಂಗದ ಹಿರಿಯ ನಟಿ, "ಚತುರ್ಭಾಷಾ ತಾರೆ" ಎಂದು ಹೆಸರಾದ ಶ್ರೀಮತಿ ಬಿ. ಸರೋಜಾ ದೇವಿ ಅವರ ನಿಧನ ಕಳೆದ ವಾರ ಸಂಭವಿಸಿ ಕಲಾಲೋಕವನ್ನು ಬಡವಾಗಿಸಿತು.  ಅನೇಕ ದಶಕಗಳ ಕಾಲ ವಿವಿಧ ರೀತಿಯ ಚಲನಚಿತ್ರಗಳ ವಿಶಿಷ್ಟ ಪಾತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿ, ಕಲಾಸೇವೆ ಸಲ್ಲಿಸಿ, ಕೀರ್ತಿ ಸಂಪಾದಿಸಿದವರು ಅವರು. ಅವರ ಅಂತ್ಯ ಸಂಸ್ಕಾರಗಳು ತಮ್ಮ ಹುಟ್ಟೂರಾದ ರಾಮನಗರ ಜಿಲ್ಲೆ, ಚನ್ನಪಟ್ಟಣ ಬಳಿಯ ದಶಾವರ ಗ್ರಾಮದಲ್ಲಿ ಎರಡು ದಿನಗಳ ಹಿಂದೆ, ಮಂಗಳವಾರ ನಡೆಯಿತು. 

ಈ ಸಂದರ್ಭದಲ್ಲಿ ಕರ್ನಾಟಕ ಮುಖ್ಯ ಮಂತ್ರಿಗಳ ಕಚೇರಿ ನೀಡಿದ ಕನ್ನಡ ಪ್ರಕಟಣೆಯೊಂದು ಅದೇ ಕಚೇರಿಯಿಂದ ಇಂಗ್ಲಿಷಿನಲ್ಲಿ (ಪ್ರಾಯಶಃ ಗೂಗಲ್ ಮೂಲಕ) ತರ್ಜುಮೆಗೊಂಡು "ಮುಖ್ಯ ಮಂತ್ರಿಗಳು ಶ್ರೀಮತಿ ಸರೋಜಾ ದೇವಿಯವರ earthly body ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು" ಎಂದು ತಿಳಿಸಿತು. 

ಕನ್ನಡದಲ್ಲಿ "ಪಾರ್ಥಿವ ಶರೀರ" ಎಂದು ಹೇಳುವ ರೀತಿ ಇಂಗ್ಲೀಷಿನಲ್ಲಿ ಸಾಮಾನ್ಯವಾಗಿ "mortal remains" ಅನ್ನುತ್ತಾರೆ. ಇಂಗ್ಲಿಷಿಗೆ ಹೀಗೆ "earthly body" ಆಗಿ  ಭಾಷಾಂತರಗೊಂಡ ಸಂದರ್ಭದಲ್ಲಿ ಮಿತ್ರರೊಬ್ಬರು "ಹೀಗೆ ಪಾರ್ಥಿವ ಶರೀರ ಎಂದು ಏಕೆ ಹೇಳುತ್ತಾರೆ?" ಎಂದು ಪ್ರಶ್ನಿಸಿದ್ದಾರೆ. ಅದನ್ನಷ್ಟು ನೋಡೋಣ. 

ಪಾರ್ಥಿವ ಅನ್ನುವ ಪದದ ಮೂಲ "ಪೃಥ್ವಿಯಿಂದ ಆದದ್ದು" ಎನ್ನುವುದರಿಂದ ಬಂದದ್ದು. ಈ ಭೂಮಿಗೆ "ಪೃಥ್ವಿ" ಎಂದು ಹೆಸರು ಬಂದದ್ದು "ಪೃಥು ಚಕ್ರವರ್ತಿ" ಕಡೆಯಿಂದ. ಜೀವ ಕೊಟ್ಟವನು ತಂದೆ. ಹಾಗೆಯೇ ಜೀವ ಉಳಿಸಿದವನೂ ತಂದೆಯೇ. ಹಸುವಿನ ರೂಪದಲ್ಲಿ ತಪ್ಪಿಸಿಕೊಂಡು ಓಡುತ್ತಿದ್ದ ಭೂದೇವಿಯ ಸಂಹಾರ ಮಾಡಲು ಹೊರಟ ಪೃಥು, ಅವಳ  ಮನವಿಯ ಮೇರೆಗೆ ಜೀವದಾನ ಮಾಡಿದ. ಆದ್ದರಿಂದ ಭೂದೇವಿಯು ಪೃಥುವಿನ ಮಗಳಾಗಿ, "ಪೃಥ್ವಿ" ಎಂದು ಹೆಸರು ಪಡೆದಳು. ಈ ಪೃಥು ಚಕ್ರವರ್ತಿ ಯಾರು? ನಾವು ವಾಸಿಸುವ ಭೂಮಿಗೆ "ಪೃಥ್ವಿ" ಎಂದು ಹೆಸರು ಏಕೆ ಬಂದಿತು? ಈ ಪ್ರಶ್ನೆಗಳಿಗೆ ಉತ್ತರಕ್ಕೆ ಇಲ್ಲಿ ಕ್ಲಿಕ್ ಮಾಡಿ ಓದಿ ತಿಳಿಯಬಹುದು. 

*****

"ಮಣ್ಣಿಂದ ಕಾಯ ಮಣ್ಣಿಂದ" ಎನ್ನುವುದು ಶ್ರೀ ಪುರಂದರದಾಸರ ಒಂದು ದೇವರನಾಮ. ಅದರಲ್ಲಿ "ಸತ್ತವರನ್ನು ಹೂಳಿ ಸುಡುವುದೇ ಮಣ್ಣು" ಎಂದು ಹೇಳಿದ್ದಾರೆ. "ಪಂಚಭೂತಗಳಿಂದ ಆದ ದೇಹ ಪಂಚಭೂತಗಳಲ್ಲಿ ಲೀನವಾಯಿತು" ಎಂದು ಕಥೆ, ಕಾದಂಬರಿಗಳಲ್ಲಿ ಬರೆಯುತ್ತಾರೆ. "ನುಡಿನಮನ" ನೀಡುವಾಗಲೂ ಈ ರೀತಿ ಹೇಳುತ್ತಾರೆ. ಹಾಗಾದರೆ "ಪಾರ್ಥಿವ ಶರೀರ" ಎಂದರೆ ಏನು? ಇದೇ ರೀತಿ ಬೇರೆಯ ಶರೀರಗಳೂ ಇವೆಯೇ? ಇವೆಲ್ಲ ಕೇಳಬಹುದಾದ, ಕೇಳಬೇಕಾದ ಪ್ರಶ್ನೆಗಳೇ. 

ಸೃಷ್ಟಿಯು ಹೇಗಾಯಿತು? ಅದರ ಕ್ರಮವೇನು? ಈ ಮುಂತಾದ ಪ್ರಶ್ನೆಗಳಿಗೆ ನಮ್ಮ ವೈದಿಕ ವಾಂಗ್ಮಯದಲ್ಲಿ ಅನೇಕ ಕಡೆ ವಿವರಣೆಗಳನ್ನು ಕೊಟ್ಟಿದ್ದಾರೆ. ಉಪನಿಷತ್ತುಗಳು ಮತ್ತು ಪುರಾಣಗಳಲ್ಲಿ ಈ ವಿವರಗಳು ಲಭ್ಯವಿವೆ. ಪದ್ಮ ಪುರಾಣದ ಪ್ರಾರಂಭದಲ್ಲಿಯೇ ಸವಿಸ್ತಾರವಾಗಿ ಇದನ್ನು ನೋಡಬಹುದು. 

ಬ್ರಹ್ಮರ್ಷಿ ವಸಿಷ್ಠರ ಮಗ ಶಕ್ತಿ. ಶಕ್ತಿಯ ಮಗ ಪರಾಶರರು. ಪರಾಶರರ ಮಗ ವೇದವ್ಯಾಸರು. ವೇದವ್ಯಾಸರಿಂದ ಈ ಗ್ರಂಥಗಳೆಲ್ಲ ರಚನೆ ಆದವು. ಶುಕಾಚಾರ್ಯರು ವೇದವ್ಯಾಸರ ಮಗ. ಅವರ ಮೂಲಕ ಶ್ರೀಮದ್ ಭಾಗವತ ಪರೀಕ್ಷಿತ್ ಮಹಾರಾಜನಿಗೆ ಹೇಳಲ್ಪಟ್ಟಿರು. ರೋಮಹರ್ಷಣ ಋಷಿ ವೇದವ್ಯಾಸರ ಮತ್ತೊಬ್ಬ ಮಗ. ಉಗ್ರಶ್ರವಸ್ ರೋಮಹರ್ಷಣರ ಮಗ. ಈ ರೋಮಹರ್ಷಣ ಮತ್ತು ಉಗ್ರಶ್ರವಸ್ ಸಾಕ್ಷಾತ್ ವೇದವ್ಯಾಸರ ಬಳಿ ಅಧ್ಯಯನ ಮಾಡಿದ್ದರಿಂದ ಅವರ ಶಿಷ್ಯರೂ ಹೌದು. ಅನೇಕ ಪುರಾಣಗಳಲ್ಲಿ ಇವರ ಹೆಸರು ಬರುತ್ತದೆ. "ಸೂತಿ" ಅನ್ನುವ ತಾಯಿಯ ಮಗನಾದುದರಿಂದ ಉಗ್ರಶ್ರವಸ್ಸಿಗೆ "ಸೂತ" ಎಂದೂ ಹೆಸರಾಯಿತು. ಪುರಾಣಗಳನ್ನು ಪ್ರಚುರಪಡಿಸಿದ್ದರಿಂದ "ಪುರಾಣೀಕರು" ಎಂದು ವೃತ್ತಿನಾಮ (ಶಾಸ್ತ್ರವನ್ನು ತಿಳಿದು, ಅದನ್ನು ತಿಳಿಸಿ ಹೇಳುವರಿಗೆ ಶಾಸ್ತ್ರೀ ಎನ್ನುವಂತೆ) ಬಂದಿತು. "ಸೂತ ಪುರಾಣೀಕರು" ಎಂದು ಕಥೆಗಳಲ್ಲಿ ಬರುವ ಹೆಸರು ಇವರದೇ. 

"ನೈಮಿಷಾರಣ್ಯ" ಅನ್ನುವುದು ಈಗಿನ ಉತ್ತರ ಪ್ರದೇಶ ರಾಜ್ಯದ ಸೀತಾಪುರ ಜಿಲ್ಲೆಯಲ್ಲಿದೆ. ಗೋಮತಿ ನದಿಯ ತೀರದ ಕ್ಷೇತ್ರ. ಇದು ಹಿಂದೆ ಒಂದು ದಟ್ಟವಾದ ಕಾಡು ಪ್ರದೇಶ. ಇಲ್ಲಿ "ನಿಮಿಷ" ಅನ್ನುವ ಹಣ್ಣು ಕೊಡುವ ಮರಗಳಿದ್ದವಂತೆ. ಈ ಮರದ ಹಣ್ಣುಗಳು ತಪಸ್ವಿಗಳಿಗೆ ಆಧಾರವಾಗಿದ್ದುದರಿಂದ ಮತ್ತು ದಟ್ಟವಾಗಿ ಈ ಮರಗಳು ಆ ಕಾಡಿನಲ್ಲಿ ಬೆಳೆದಿದ್ದುದರಿಂದ ಅದಕ್ಕೆ "ನೈಮಿಷಾರಣ್ಯ" ಎನ್ನುವ ಹೆಸರು ಬಂದಿತು. "ನಿಮಿಷ" ಅನ್ನುವ ಪದಕ್ಕೆ ಬೇರೆ ಬೇರೆ ವಿವರಣೆಗಳೂ ಉಂಟು. ಅಲ್ಲಿ ಶೌನಕರು ಎನ್ನುವ ಹೆಸರಿನ ಋಷಿಗಳು ಒಂದು ಗುರುಕುಲವನ್ನು ನಡೆಸುತ್ತಿದ್ದರು. ಬಹಳ ತಿಳಿದವರೂ, ಜ್ಞಾನಿಗಳೂ ಆದುದರಿಂದ ಈ ಶೌನಕರನ್ನು ಕಾಣಲು ಮತ್ತು ಅವರಿಂದ ಜ್ಞಾನ ಸಂಪಾದಿಸಲು ಅನೇಕ ಋಷಿ-ಮುನಿಗಳು ದೇಶದ ಎಲ್ಲಕಡೆಗಳಿಂದ ನೈಮಿಷಾರಣ್ಯದಲ್ಲಿ ಬಂದು ಸೇರುತ್ತಿದ್ದರು.  ಆ ಪುಣ್ಯಕ್ಷೇತ್ರದಲ್ಲಿ ಅನೇಕ ಯಜ್ಞ-ಯಾಗಾಡಿಗಳೂ ನಡೆಯುತ್ತಿದ್ದುವು. 

ಇಂತಹ ಸಂದರ್ಭಗಳಲ್ಲಿ ಸೇರಿದ ಎಲ್ಲ ಋಷಿ-ಮುನಿಗಳು ಮತ್ತು ಜಿಜ್ಞಾಸು ಮಹನೀಯರು "ಜ್ಞಾನ ಸಭೆ" ನಡೆಸುತ್ತಿದ್ದರು. ಯಾರಿಗಾದರೂ ಅನುಮಾನ, ಪ್ರಶ್ನೆಗಳಿದ್ದರೆ ಆ ಸಭೆಯಲ್ಲಿ ಪ್ರಸ್ತಾಪ ಮಾಡಬಹುದಿತ್ತು. ಸೂಕ್ತ ಉತ್ತರ, ಸಮಾಧಾನ ತಿಳಿದ ಮತ್ತೊಬ್ಬರು ಅವಕ್ಕೆ ಉತ್ತರ ಕೊಡುತ್ತಿದ್ದರು. ಹೀಗೆ  ನಡೆಯುತ್ತಿದ್ದಾಗ ಅಲ್ಲಿಗೆ ಸೂತ ಪುರಾಣೀಕರು ಬಂದರು. ಅವರ ಜ್ಞಾನಪ್ರಭೆಯ ಬಗ್ಗೆ ತಿಳಿದಿದ್ದ ಎಲ್ಲಾ ಸಜ್ಜನರು ಅವರನ್ನು ಆದರದಿ೦ದ ಬರಮಾಡಿಕೊಂಡು ಸತ್ಕರಿಸಿದರು. ನಂತರ ಅವರ ಮುಂದೆ ತಮ್ಮ ತಮ್ಮ ಪ್ರಶ್ನೆ, ಅನುಮಾನಗಳನ್ನು ಇಡುತ್ತಾ ಪರಿಹಾರ ಕಂಡುಕೊಂಡರು. ಅನೇಕ ಪುರಾಣಗಳು ಮೊದಲ ಬಾರಿಗೆ ಅಲ್ಲಿ ಪ್ರವಚನಗೊಂಡವು. ಪ್ರಶ್ನೆ ಕೇಳುವವರು ಶೌನಕರೇ ಮುಂತಾದ ಜ್ಞಾನಿಗಳು. ಆದ್ದರಿಂದ "ಶೌನಕಾದಿಗಳು" ಎಂದು ಸಂಬೋಧನೆ. ಉತ್ತರ ಹೇಳುವವರು ಸೂತ ಪುರಾಣೀಕರು. ಆದ್ದರಿಂದ ಅನೇಕ ಕಥೆಗಳಲ್ಲಿ "ನೈಮಿಷಾರಣ್ಯವಾಸಿಗಳಾದ ಶೌನಕಾದಿ ಋಷಿಗಳಿಗೆ ಸೂತ ಪುರಾಣೀಕರು ಹೀಗೆ ಹೇಳಿದರು....." ಎಂಬ ವಾಕ್ಯದಿಂದ ಪ್ರಾರಂಭ! 

*****

ಐದರ ಐದು ಗುಂಪುಗಳು ಸೇರಿ ಇಪ್ಪತ್ತೈದು ತತ್ವಗಳಾದುವು. ಐದು ಜ್ಞಾನೇಂದ್ರಿಯಗಳು. ಐದು ಕರ್ಮೇಂದ್ರಿಯಗಳು. ಐದು ಪಂಚಭೂತಗಳು. ಐದು ಪಂಚತನ್ಮಾತ್ರಗಳು. ಮನಸ್ಸು-ಬುದ್ಧಿ-ಅಹಂಕಾರ-ಚಿತ್ತ-ಚೇತನ ಇವು ಮತ್ತೈದು. ಇವುಗಳ ವಿವರವನ್ನು ಮತ್ತೆಂದಾದರೂ ನೋಡೋಣ. 

ಪೃಥ್ವಿ-ಅಪ್ಪು-ತೇಜಸ್ಸು-ವಾಯು-ಆಕಾಶ ಇವು ಪಂಚಭೂತಗಳೆಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಇವನ್ನೇ ಕ್ರಮವಾಗಿ ಮಣ್ಣು-ನೀರು-ಬೆಂಕಿ-ಗಾಳಿ-ಆಕಾಶ ಎನ್ನುವುದು. ತೇಜಸ್ಸು ಅಥವಾ ಬೆಂಕಿ ಎಂದರೆ ಕೇವಲ ಉರಿಯುವ ಅಗ್ನಿಯಲ್ಲ. ಎಲ್ಲ ರೀತಿಯ ಶಕ್ತಿ ಸ್ರೋತಗಳೂ ಅಗ್ನಿಯ ರೂಪಗಳೇ. ಆಕಾಶವೆಂದರೆ ನಮ್ಮ ತಲೆಯ ಮೇಲೆ ಎಲ್ಲೋ ಮೇಲೆ ಇದೆ ಎಂದಲ್ಲ. ಆಕಾಶ ಎಂದರೆ ಚಲನೆಗೆ ಅವಕಾಶ. ಇಂಗ್ಲಿಷಿನಲ್ಲಿ ಸ್ಪೇಸ್ ಅನ್ನಬಹುದು. ಆಕಾಶ ಇಲ್ಲದಿದ್ದರೆ ನಮ್ಮ ಕೈ-ಕಾಲುಗಳು ಆಡಲೂ ಸಾಧ್ಯವಿಲ್ಲ. 

ಏನಾದರೂ ವಸ್ತು ತಯಾರು ಮಾಡಬೇಕಾದರೆ ಅದಕ್ಕೆ ಸೂಕ್ತವಾದ "ಪದಾರ್ಥ" ಬೇಕು. ಇದನ್ನು "ದ್ರವ್ಯ' ಅನ್ನುತ್ತಾರೆ. (ದ್ರವ್ಯ ಅಂದರೆ ಕೇವಲ ಹಣ-ಕಾಸು ಅಲ್ಲ). ಇಂಗ್ಲಿಷಿನಲ್ಲಿ ರಾ ಮಟೇರಿಯಲ್ ಅನ್ನಬಹುದು. ಈ  ದ್ರವ್ಯಗಳ ಮಿಶ್ರಣದಿಂದ ಪದಾರ್ಥಗಳು ತಯಾರಾಗುತ್ತದೆ. ಮಿಶ್ರಣದ ಪ್ರಮಾಣ ಮತ್ತು ಮಾಡುವ ವಿಧಾನ ಬದಲಾದಂತೆ ತಯಾರಾಗುವ ಪದಾರ್ಥವೂ ಬದಲಾಗುತ್ತದೆ. ಅಡಿಗೆ ಮಾಡುವವರಿಗೆ ಇದು ಚೆನ್ನಾಗಿ ಗೊತ್ತು. ಒಂದೇ ರೀತಿಯ ಅಡಿಗೆ ಸಾಮಾನುಗಳನ್ನು ಬಳಸಿ, ಬೇರೆ ಬೇರೆ ಪ್ರಮಾಣದಲ್ಲಿ ಸೇರಿಸಿ, ಮಾಡುವ ಕ್ರಮ, ಕಾಲ ಮತ್ತು ಉಷ್ಣಾ೦ಶ ಬದಲಿಸಿ ವಿವಿಧ ತಿಂಡಿ-ತಿನಿಸುಗಳನ್ನು ತಯಾರಿಸುವಂತೆ. 

*****

ಒಂದು ಮಡಿಕೆ ಮಾಡುವುದನ್ನೇ ನೋಡೋಣ. ಮಡಿಕೆ ಮಾಡಲು ಮೂಲ ದ್ರವ್ಯ ಮಣ್ಣು. ಕೇವಲ ಮಣ್ಣಿನಿಂದ ಮಡಿಕೆ ಮಾಡಲಾಗುವುದಿಲ್ಲ. ಮಣ್ಣು ಪುಡಿ ಪುಡಿಯಾದ ದ್ರವ್ಯ. ಕೈಯಲ್ಲಿ ಹಿಡಿದುಕೊಂಡು ಕೆಳಗೆ ಬಿಟ್ಟರೆ ಒಂದು ಗುಡ್ಡೆಯಾಗಿ ಬೀಳುತ್ತದೆ. ಅದಕ್ಕೆ ಒಂದು ಆಕಾರ ಕೊಡಬೇಕಾದರೆ ಅದಕ್ಕೆ ನೀರು ಸೇರಿಸಬೇಕು. ಮಣ್ಣನ್ನು ನೀರಿನಿಂದ ಕಲೆಸಿದರೆ ಆ ಮಿಶ್ರಣದಿಂದ ಮಡಿಕೆ ಮಾಡಬಹುದು. ಮಡಿಕೆಯನ್ನೇನೋ ಮಾಡಬಹುದು. ಆದರೆ ಅದು ಉಳಿಯುವುದಿಲ್ಲ. ಅದನ್ನು ಬಿಸಿಲಿನಲ್ಲಿ ಒಣಗಿಸಿದರೆ ಸ್ವಲ್ಪಮಟ್ಟಿಗೆ ಉಳಿಯುತ್ತದೆ. ಆದರೆ ಅದರಲ್ಲಿ ನೀರು ಶೇಖರಿಸಬೇಕಾದರೆ, ಅದು ಪ್ರಯೋಜನಕ್ಕೆ ಬರಬೇಕಾದರೆ, ಅದನ್ನು ಬೆಂಕಿಯಲ್ಲಿ ಕಾಯಿಸಬೇಕು. ಇಷ್ಟೆಲ್ಲಾ ಆದ ನಂತರ ಮಡಿಕೆ ಕೆಲವು ಕಾಲ ಇರಬಲ್ಲದು. 

ಮಡಿಕೆಯ ಖಾಲಿ ಇರುವ ಜಾಗದಲ್ಲಿ ಗಾಳಿ ತುಂಬಿಕೊಳ್ಳುತ್ತದೆ. ಅದು ಈಕಡೆ-ಆಕಡೆ ಚಲಿಸಲು ಅವಕಾಶ (ಆಕಾಶ) ಬೇಕು. ತಯಾರು ಮಾಡಲು ಮೂರು ದ್ರವ್ಯಗಳು. ಮತ್ತೆ ಉಪಯೋಗಕ್ಕೆ ಬರಲು ಇನ್ನೆರಡು ದ್ರವ್ಯಗಳು. 

ನಾಲ್ಕು ಭಾಗ ಮಣ್ಣು, ಮೂರು ಭಾಗ ನೀರು ಮತ್ತು ಒಂದು ಭಾಗ ಬೆಂಕಿಯಿಂದ ಆದ ದೇಹಕ್ಕೆ "ಪಾರ್ಥಿವ" ಎನ್ನುತ್ತಾರೆ. ನಮ್ಮಗಳ ದೇಹವೂ ಇದೇ ಪ್ರಮಾಣದ್ದು. ಮಣ್ಣು-ನೀರುಗಳ ಮಿಶ್ರಣವನ್ನು ಶಕ್ತಿ (ಎನರ್ಜಿ) ಹಿಡಿದಿಟ್ಟಿದೆ. ಅದು ಕೆಲಸಮಾಡಲು ವಾಯು ಮತ್ತು ಆಕಾಶಗಳೂ ಬೇಕು. ಮಣ್ಣಿನ (ಪೃಥ್ವಿ) ಪ್ರಮಾಣ ಎಲ್ಲಕ್ಕೂ ಹೆಚ್ಚು ಇರುವುದರಿಂದ ಅದು "ಪಾರ್ಥಿವ ಶರೀರ" ಎಂದಾಯಿತು. 

ನಾಲ್ಕು ಭಾಗ ನೀರು, ಮೂರು ಭಾಗ ಮಣ್ಣು ಮತ್ತು ಒಂದು ಭಾಗ ಬೆಂಕಿಯಿಂದ ಆದ ಶರೀರಕ್ಕೆ "ಜಲೀಯ" ಶರೀರ ಎಂದು ಹೆಸರು. ಹೆಚ್ಚಿನ ಜಲಚರಗಳು ಈ ಗುಂಪಿಗೆ ಸೇರಿದವು. ನೀರಿನ (ಜಲ) ಪ್ರಮಾಣ ಹೆಚ್ಚಿರುವುದರಿಂದ ಅದು "ಜಲೀಯ ಶರೀರ" ಎಂದಾಯಿತು. 

ನಾಲ್ಕು ಭಾಗ ಶಕ್ತಿ , ಮೂರು ಭಾಗ ನೀರು ಮತ್ತು ಒಂದು ಭಾಗ ಮಣ್ಣು, ಇವುಗಳಿಂದ ಆದ ಶರೀರಕ್ಕೆ "ತೈಜಸ" ಎಂದು ಕರೆಯುವರು. ತೇಜಸ್ಸು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಅದು "ತೈಜಸ ಶರೀರ" ಆಯಿತು. ಅನೇಕ ದೇವತೆಗಳು ಈ ರೀತಿಯ ತೈಜಸ ರೂಪದಲ್ಲಿ ದರ್ಶನ ಕೊಡುತ್ತಾರಂತೆ. ಆಗ ಹೆಚ್ಚಿನ ಶಕ್ತಿಯ ಅನುಭವ ಆಗುತ್ತದಂತೆ. 

ಈ ಪಾರ್ಥಿವ ಶರೀರ, ಜಲೀಯ ಶರೀರ ಮತ್ತು ತೈಜಸ ಶರೀರ ಅಲ್ಲದೆ ಮತ್ತೊಂದು ಉಂಟು. ಅದು "ದಿವ್ಯ ಶರೀರ".  ಅದು ಪೂರ್ಣವಾಗಿ ಬೆಳಕಿನ ರೂಪ. ಆ ರೂಪದಲ್ಲಿ ಅಗಾಧವಾದ ಬೆಳಕು. ಅಂದರೆ ಸೂರ್ಯನಂತೆ ಪ್ರಖರತೆ. ಆದರೆ ಅಂತಹ ತಡೆಯಲಾರದ ಶಾಖವಿಲ್ಲ. ಚಂದ್ರನ ಬೆಳಕಿನಂತೆ ಹಿತಕರ. ಎರಡೂ ಗುಣವುಳ್ಳದ್ದು. ಸೂರ್ಯನ ಪ್ರಖರವಾದ ಕಾಂತಿ. ಆದರೆ ಚಂದ್ರನ ಬೆಳಕಿನ ಶಾಂತವಾದ ಅನುಭವ. ಪರಮಾತ್ಮನು ಮತ್ತು ಕೆಲವು ಹಿರಿಯ ದೇವತೆಗಳು ಹೀಗೆ ದರ್ಶನ ಕೊಡುತ್ತಾರಂತೆ. 

*****

ಪಾರ್ಥಿವ ಶರೀರದಿಂದ ಜೀವನು ನಿರ್ಗಮಿಸಿದ ಮೇಲೆ, ಮಡಿಕೆ ಒಡೆದು ಚೂರಾದಾಗ ಹೇಗೆ ಅದು ಮಣ್ಣು, ನೀರು ಮತ್ತು ವಿಶಾಲ ಶಕ್ತಿಯ ಸ್ರೋತದಲ್ಲಿ ಸೇರುತ್ತದೋ ಹಾಗೆ ಪಾರ್ಥಿವ ದೇಹವೂ ಮತ್ತೆ ಪಂಚಭೂತಗಳಲ್ಲಿ ಸೇರುತ್ತದೆ. ಸುಟ್ಟಾಗ ಬೂದಿ. ಅದೂ ಮಣ್ಣೇ. ಹೂಳಿದಾಗ ಮಣ್ಣಂತೂ ಸರಿಯೇ ಸರಿ. ಹೀಗೂ ಮಣ್ಣು. ಹಾಗೂ ಮಣ್ಣು.  ನೀರಿನ ಅಂಶ ಸುಟ್ಟಾಗ ಆವಿಯಾಗಿ ಗಾಳಿಗೆ ಹೋಯಿತು. ಹೂತಾಗ ಮಣ್ಣಿನಲ್ಲಿ ತೇವವಾಗಿ ಸೇರಿತು. ಹೀಗಾದಾಗ ವಾಯುವೂ ಇಲ್ಲ; ಆಕಾಶವೂ ಇಲ್ಲ. ಪಾರ್ಥಿವ ದೇಹ ಪಂಚ ಭೂತಗಳಲ್ಲಿ ಲೀನವಾಯಿತು ಎನ್ನುತ್ತೇವೆ. 

ಪಾರ್ಥಿವ ಶರೀರ ಮತ್ತು ಅದು ಪಂಚ ಭೂತಗಳಲ್ಲಿ ಹೇಗೆ ಲೀನವಾಗುತ್ತದೆ ಎಂದು ತಿಳಿದಂತಾಯಿತು. ಇಪ್ಪತ್ತೈದು ತತ್ವಗಳ ಬಗ್ಗೆ ಮತ್ತೆಂದಾದರೂ ಯೋಚಿಸೋಣ.  

Sunday, June 22, 2025

ಅಷ್ಟ ಭಾಗ್ಯಗಳು


ನಮ್ಮ ಆಚರಣೆಗಳಲ್ಲಿ ದೇವರು-ದೇವತೆಗಳನ್ನು ಪ್ರಾರ್ಥಿಸುವಾಗ "ಸಕಲ ಭೋಗ-ಭಾಗ್ಯ ಸಿಧ್ಯರ್ಥಂ" ಎಂದು ಸಂಕಲ್ಪಿಸಿ ಬೇಡುವುದು ಬಹಳ ಹಿಂದಿನಿಂದ ಬಂದ ಒಂದು ಕ್ರಮ. ಅನೇಕ ವೇಳೆ ಅಭಿವಾದನ ಮಾಡಿದ ಕಿರಿಯರಿಗೆ ಗುರು-ಹಿರಿಯರು ಆಶೀರ್ವಾದ ನೀಡುವಾಗ "ಸಕಲ ಭೋಗ-ಭಾಗ್ಯ ಸಿದ್ಧಿರಸ್ತು" ಎಂದು ಹೇಳುವುದೂ ಹೀಗೆಯೇ ನಡೆದು ಬಂದಿದೆ. 

ಸಾಮಾನ್ಯವಾಗಿ "ಅಷ್ಟ ಭೋಗಗಳು" ಮತ್ತು "ಅಷ್ಟ ಭಾಗ್ಯಗಳು" ಎಂಬುದಾಗಿ ವ್ಯವಹರಿಸುವುದು ವಾಡಿಕೆ. ಈ ಭೋಗಗಳು ಮತ್ತು ಭಾಗ್ಯಗಳು ಯಾವುವು? ಹೀಗೆಂದು ಮಿತ್ರರೊಬ್ಬರು ಕೇಳಿದ್ದರು. 

ಹಿಂದಿನ "ಅಷ್ಟ ಭೋಗಗಳು" ಎಂಬ ಶೀರ್ಷಿಕೆಯ ಸಂಚಿಕೆಯಲ್ಲಿ  ಭೋಗಗಳ ಬಗ್ಗೆ ಚರ್ಚೆ ಮಾಡಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). 

ಈ ಸಂಚಿಕೆಯಲ್ಲಿ ಎಂಟು ಭಾಗ್ಯಗಳ ಬಗ್ಗೆ ಚರ್ಚೆ ಮಾಡೋಣ. 

*****

ಈಗ್ಗೆ ಸುಮಾರು ಅರವತ್ತು ವರುಷಗಳ ಹಿಂದಿನ ಸಮಯ. ಆಗ ನಾನು ಹೈಸ್ಕೂಲ್ ಸೇರಿ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಊರಿನಲ್ಲಿ ಸುಬ್ಬರಾಯರು ಎಂಬ ಹೆಸರಿನ ನಿವೃತ್ತ ಉಪಾಧ್ಯಾಯರು ವಾಸವಾಗಿದ್ದರು. ನಮ್ಮ ಮನೆಯ ಬೀದಿಯಲ್ಲಿಯೇ ಅವರ ಮನೆ. ಅವರ ಕುಟುಂಬದ ಸದಸ್ಯರೆಲ್ಲ ಮೈಸೂರಿನಲ್ಲಿದ್ದರು. ಇವರಿಗೂ ಅಲ್ಲಿಗೆ ಬಂದಿರಲು ಮನೆಮಂದಿಯ ಒತ್ತಡವಿತ್ತು. ಆದರೆ ಅವರಿಗೆ ನಮ್ಮ ಊರಿನಲ್ಲಿ ಸ್ವಂತ ಮನೆ, ಮನೆಯ ಸುತ್ತ ದೊಡ್ಡ ತೋಟ, ಮತ್ತು ಸ್ವಲ್ಪ ಜಮೀನು ಇದ್ದವು. ಇವುಗಳನ್ನು ಬಿಟ್ಟು ಹೋಗಲು ಅವರಿಗೆ ಮನಸ್ಸಿಲ್ಲ, ಆದ್ದರಿಂದ ಒಬ್ಬರೇ ಇಲ್ಲಿ ವಾಸವಾಗಿದ್ದರು. ಬಹಳ ಚಟುವಟಿಕೆಯ ವ್ಯಕ್ತಿ. ಬಾಯಿತುಂಬಾ ಮಾತು. ವಿನೋದದ ಸ್ವಭಾವ. ಜನಪ್ರಿಯರು. 

ಊರು ದೊಡ್ಡದಾಗಿ ಬೆಳೆಯುತ್ತಿದ್ದಂತೆ ಅವರು ಮನೆಯ ಸುತ್ತವಿದ್ದ ತೋಟವನ್ನು ಮನೆ ಕಟ್ಟುವ ನಿವೇಶನಗಳಾಗಿ ಪರಿವರ್ತಿಸಿ, ಒಂದೊಂದಾಗಿ ಮಾರಲು ತೊಡಗಿದ್ದರು. ಎಲ್ಲಾ ಮಾರಿ ಮುಗಿದಮೇಲೆ ಮೈಸೂರಿಗೆ ಹೋಗಿ ಕುಟುಂಬದವರ ಜೊತೆ ಇರಬೇಕೆಂಬುದು ಅವರ ಇರಾದೆ. ಈ ಕೆಲಸಕ್ಕೆ ನಮ್ಮ ತಂದೆಯವರ ಸಹಾಯ ಪಡೆಯುತ್ತಿದ್ದರು. ಮೊದಲಿಗೆ ಜಮೀನು ಅಳತೆ ಮಾಡಿ ಸೈಟುಗಳು ಮಾಡಿದರು. ನಂತರ ಒಂದೊಂದಾಗಿ ಸುತ್ತಮುತ್ತಲಿದ್ದವರಿಗೆ ಮಾರಾಟದ ವ್ಯವಹಾರ. ಮಾರಾಟಕ್ಕೆ ಕ್ರಯಪತ್ರಗಳನ್ನು ಬರೆದು ಕೊಡಲು ನಮ್ಮ ತಂದೆಯವರ ಬಳಿ ಬರುತ್ತಿದ್ದರು. 

ಈಗ ಎಲ್ಲವೂ ಕಂಪ್ಯೂಟರ್ ಮಯವಾಗಿದೆ. ಆಗ ಕ್ರಯಪತ್ರ, ಭೋಗ್ಯಪತ್ರ ಮುಂತಾದುವನ್ನು ಛಾಪಾಕಾಗದದ ಮೇಲೆ (ಸ್ಟ್ಯಾಂಪ್ ಪೇಪರ್) ಕೈಬರಹದಲ್ಲಿ ಬರೆದು, ಕೊಳ್ಳುವವರು ಮತ್ತು ಮಾರುವವರು ಸಾಕ್ಷಿಗಳ ಸಮ್ಮುಖ ಸಹಿ ಮಾಡಿ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೋಗಿ ರಿಜಿಸ್ಟರ್ ಮಾಡಿ ಕೊಡುತ್ತಿದ್ದರು. ಈ ರೀತಿ ಪತ್ರಗಳನ್ನು ಬರೆದು ಕೊಡುವವರಿಗೆ "ಬಿಕ್ಕಲಂ" ಎನ್ನುತ್ತಿದ್ದರು. ಪತ್ರದ ಕೊನೆಯಲ್ಲಿ "ಬಿಕ್ಕಲಂ" ಎಂದು ಬರೆದವರ ಹೆಸರು ನಮೂದಿಸಿ ಸಹಿ ಮಾಡುತ್ತಿದ್ದರು. ಇಂತಹವರು ಕಚೇರಿಗಳ ಮುಂದೆ ಒಂದು ಹಳೆಯ ಮೇಜು, ಕುರ್ಚಿಗಳನ್ನು ಇಟ್ಟುಕೊಂಡು ಕುಳಿತಿರುತ್ತಿದ್ದರು. ಪ್ರತಿ ಪತ್ರಕ್ಕೂ ಬರೆದವರಿಗೆ ಸ್ವಲ್ಪ ಸಂಭಾವನೆ ಸಿಗುತ್ತಿತ್ತು. ಹೀಗೆ ಬಂದ ಹಣದಿಂದ ಅವರು ಜೀವನ ನಡೆಸುತ್ತಿದ್ದರು. ಸುಬ್ಬರಾಯರಿಗೆ ಅವರ ಬಳಿ ಹೋಗಿ ಕಾಯಲು ಇಷ್ಟವಿರಲಿಲ್ಲ. ಆದ್ದರಿಂದ ನಮ್ಮ ತಂದೆಯವರ ಬಳಿ ಬಂದು ಪತ್ರಗಳನ್ನು ಬರೆಸುತ್ತಿದ್ದರು. 

*****

ಒಂದು ಭಾನುವಾರ ಬೆಳಿಗ್ಗೆ ಸುಬ್ಬರಾಯರು ನಮ್ಮ ಮನೆಗೆ ಬಂದರು. ಬಾಗಿಲಬಳಿ ನನ್ನನ್ನು ಕಂಡರು. 

"ಅಪ್ಪನನ್ನು ಕರಿ. ಸ್ವಲ್ಪ ಕೆಲಸ ಇತ್ತು"
"ಅಪ್ಪ ಊರಲ್ಲಿಲ್ಲ. ಬೆಂಗಳೂರಿಗೆ ಹೋಗಿದ್ದಾರೆ"
"ಯಾವಾಗ ಬರುವುದು?"
"ಮೂರು ನಾಲ್ಕು ದಿನಗಳಾಗಬಹುದು"

ಸುಬ್ಬರಾಯರು ಹಿಂದಿರುಗಿ ಹೊರಟರು. ಹತ್ತು ಹೆಜ್ಜೆ ಹೋಗಿದ್ದವರು ಮತ್ತೆ ಹಿಂದಿರುಗಿ ಬಂದರು. 

"ನಿನಗೆ ಚೆನ್ನಾಗಿ ಕನ್ನಡ ಬರೆಯಲು ಬರುತ್ತದಲ್ಲವೇ?"
"ಸುಮಾರಾಗಿ ಬರೆಯುತ್ತೇನೆ"
"ನನಗೆ ಗೊತ್ತು. ನಿನ್ನ ಬರವಣಿಗೆಯೂ ನಿಮ್ಮಪ್ಪನ ಬರಹದಂತೆ ಚೆನ್ನಾಗಿದೆ"
"......." 
"ಒಂದು ಕ್ರಯಪತ್ರ ಬರೆಯಬೇಕಿತ್ತು. ನೀನೇ ಬರೆದುಕೊಡು"
"ನನಗೆ ಅಷ್ಟೆಲ್ಲಾ ಬರುವುದಿಲ್ಲ. ತಪ್ಪಾದರೆ ಛಾಪಾಕಾಗದ ಹಾಳಾಗುತ್ತೆ. ತಂದೆಯವರಿಗೂ ಕೋಪ ಬರುತ್ತೆ"
"ಪರವಾಗಿಲ್ಲ. ನಾನು ನಿಧಾನವಾಗಿ ಹೇಳುತ್ತೇನೆ. ನೀನು ಬರೆಯುತ್ತಾ ಹೋಗು"
"..........."
"ಅಪ್ಪನಿಗೆ ನಾನು ಹೇಳುತ್ತೇನೆ. ನನ್ನ ಜವಾಬ್ದಾರಿ. ತಪ್ಪಾದರೆ ಕಾಟು ಹೊಡೆದು ಬರೆಯಬಹುದು.  ಒಂದು ಮಾದರಿ ಪತ್ರ ತಂದಿರುತ್ತೇನೆ. ನೋಡಿಕೊಂಡು ಬರಿ. ಆ ಸೀನಪ್ಪನ ಹತ್ತಿರ ಕಾದು ಕುಳಿತುಕೊಳ್ಳಬೇಕು. ಅದು ನನಗೆ ಆಗದು. ನೀನೇ ಬರೆದುಕೊಡು"

ಸ್ವಲ್ಪ ಸಮಯದ ನಂತರ ಮತ್ತೆ ಬಂದು ಬಲವಂತವಾಗಿ ಕೂಡಿಸಿಕೊಂಡು ಬರೆಸಿದರು. ಉತ್ಸಾಹದಲ್ಲಿ ನಾನೂ ಕ್ರಯ ಪತ್ರ ಬರೆದೆ. 
*****

ಪತ್ರ ಬರೆದ ದಿನಾಂಕ, ಸ್ವತ್ತು ಕೊಳ್ಳುವವರು ಮತ್ತು ಮಾರುವವರ ವಿವರಗಳನ್ನು ಬರೆದ ನಂತರ ಸ್ವತ್ತಿನ ಸ್ವಲ್ಪ ವಿವರ ಬರೆದು (ಪೂರ್ತಿ ವಿವರ ಚಕ್ಕುಬಂದಿ (ಬೌಂಡರಿ) ಸಮೇತ ಷೆಡ್ಯೂಲಿನಲ್ಲಿ ಬರೆದಿರುತ್ತೆ) ನಂತರದ ಒಕ್ಕಣೆ ಹೀಗಿತ್ತು:

"......... ಈ ಸ್ವತ್ತನ್ನು ಈ ದಿನ ಗವರ್ನಮೆಂಟು ಹತ್ತು ಸಾವಿರ ರೂಪಾಯಿಗಳಿಗೆ ಶುದ್ಧ ಕ್ರಯ ಮಾಡಿಕೊಟ್ಟಿರುತ್ತೇನೆ. ಈ ಸ್ವತ್ತಿಗೆ ಯಾವುದೇ ಕ್ರಯ, ಭೋಗ್ಯ, ಆಧಾರ, ಜೀವನಾಂಶ, ಭಾಗಾಂಶ, ಲಾಭಾಂಶ, ಮೈನರು ಹಕ್ಕುಗಳು ಮುಂತಾದ ಬಾಧ್ಯತೆಗಳಿರುವುದಿಲ್ಲ. ಮುಂದೆ ಎಂದಾದರೂ ಈ ರೀತಿ ತೊಂದರೆಗಳು ಕಂಡುಬಂದರೆ ನನ್ನ ಸ್ವಂತ ಖರ್ಚಿನಿಂದ ಪರಿಹರಿಸಿಕೊಡುವುದು ನನ್ನ ಜವಾಬ್ದಾರಿ. 

ಈ ಸ್ವತ್ತನ್ನು ಇಂದೇ ನಿಮ್ಮ ಸುಪರ್ದಿಗೆ ಬಿಟ್ಟುಕೊಟ್ಟಿರುತ್ತೇನೆ. ಇಂದಿನಿಂದ ಈ ಸ್ವತ್ತನ್ನು ಮತ್ತು ಅದರಲ್ಲಿ ಇರುವ ಮತ್ತು ಕಂಡುಬರುವ ಜಲ, ತರು, ಅಕ್ಷೀಣ, ಪಾಷಾಣ, ನಿಧಿ, ನಿಕ್ಷೇಪ, ಮುಂತಾದ ಅಷ್ಟ ಭಾಗ್ಯಗಳಿಗೂ ನೀವೇ ವಾರಸುದಾರರಾಗಿ ನಿಮ್ಮ ವಂಶ ಪಾರಂಪರ್ಯವಾಗಿ ಸುಖದಿಂದ ಅನುಭವಿಸಿಕೊಂಡು ಬರತಕ್ಕದ್ದು. ........."

ತಪ್ಪಿಲ್ಲದೆ, ಬಹಳ ಜಾಗರೂಕನಾಗಿ, ಮೈಯೆಲ್ಲಾ ಕಣ್ಣಾಗಿ ಪತ್ರ ಬರೆಯುವುದು ಮುಗಿಯಿತು. 

*****

ಪತ್ರ ಪೂರ್ತಿ ಬರೆದನಂತರ "ಮೇಷ್ಟ್ರೇ, ಈ ಅಷ್ಟಭಾಗ್ಯಗಳು ಅಂದರೇನು?' ಎಂದು ಕೇಳಿದೆ. ಸುಬ್ಬರಾಯ ಮೇಷ್ಟ್ರು ವಿವರಿಸಿದರು. 
 
ಜಲ, ತರು, ಅಕ್ಷೀಣ, ಪಾಷಾಣ, ನಿಧಿ, ನಿಕ್ಷೇಪ, ಸಂಚಿತ ಮತ್ತು ಆಗಮಿ ಎನ್ನುವ ಎಂಟು ರೀತಿಯ ಸಂಪತ್ತುಗಳು ಸ್ಥಿರ ಸ್ವತ್ತುಗಳಲ್ಲಿ (ಇಮ್ಮೂವಬಲ್ ಪ್ರಾಪರ್ಟಿ) ಸೇರಿರುತ್ತವೆ.
  1. "ಜಲ" ಅಂದರೆ ನೀರು ಮತ್ತು ಅದರ ಮೂಲಗಳಾದ ಬಾವಿ, ಕುಂಟೆ (ಸಣ್ಣ ಕೆರೆ), ಕೆರೆ, ಸರೋವರ ಮುಂತಾದುವುಗಳು. ಕೆಲವು ದೊಡ್ಡ ಸ್ವತ್ತುಗಳಲ್ಲಿ (ನೂರಾರು ಎಕರೆ ಹರಡಿರುವ  ಪ್ರದೇಶಗಳು) ಸಣ್ಣ ತೊರೆ ಅಥವಾ ನದಿಗಳೂ ಇರಬಹುದು. ಇದರಲ್ಲಿ ನೆಲದ ಮೇಲೆ ಕಾಣಿಸದಿದ್ದು ಬೋರ್ವೆಲ್ ಮುಂತಾದುವು ಕೊರೆದಾಗ ಸಿಗುವ ಅಂತರ್ಜಲವೂ ಸೇರುತ್ತದೆ. ಜಲದ ಜೊತೆಯಲ್ಲಿ  ಇವುಗಳಲ್ಲಿರುವ ಜಲಚರಗಳೂ (ಮೀನು ಮುಂತಾದುವು) ಕೂಡಿರುತ್ತವೆ. 
  2. "ತರು" ಅಂದರೆ ಮರ ಅಥವಾ ಮರ-ಗಿಡಗಳು. ಮರಗಳಲ್ಲಿ ಪ್ರತಿವರುಷ ಬಿಡುವ ಹೂವು-ಹಣ್ಣುಗಳು, ಎಲೆ ಮುಂತಾದುವು ಸೇರಿದವು. ಮರಗಳನ್ನು ಕತ್ತರಿಸಿದರೆ ಅದರಲ್ಲಿ ಬರುವ ಮರದ ದಿಮ್ಮಿಗಳು, ಸೌದೆ ಮುಂತಾದುವು ಕೂಡ ಒಳಗೊಂಡಿರುತ್ತವೆ. ಮರದಲ್ಲಿ ಜೇನುಗೂಡಿದ್ದರೆ ಅದೂ ಸಹ. 
  3. "ಅಕ್ಷೀಣ" ಅಂದರೆ ಕೊನೆಯಿಲ್ಲದ ಪದಾರ್ಥಗಳು. ಇಂಗ್ಲಿಷಿನಲ್ಲಿ ಪರ್ಮನೆಂಟ್ ಅಥವಾ ಎವೆರ್ಲಾಸ್ಟಿಂಗ್ ಅನ್ನುತ್ತಾರೆ. ತೆಗೆದರೆ ಅಥವಾ ಕತ್ತರಿಸಿದರೆ ಮತ್ತೆ ಬರುವ ಪದಾರ್ಥಗಳು ಇರಬಹುದು. (ಕೆಲವರು ಅಕ್ಷೀಣ ಅನ್ನುವ ಕಡೆ "ತೃಣ" ಎಂದು ಹೇಳುತ್ತಾರೆ. ತೃಣ ಅಂದರೆ ಹುಲ್ಲು ಮತ್ತು ಅದರಂತಹವು). 
  4. "ಪಾಷಾಣ" ಅಂದರೆ ಕಲ್ಲು. ಈಗಂತೂ ಕಲ್ಲಿನ ಗಣಿಗಳಿಗಾಗಿಯೇ ಭೂಮಿ ಕೊಳ್ಳುತ್ತಾರೆ. ಪಾಷಾಣ ಕ್ಷೀಣವಾಗುವ ಭಾಗ್ಯ. ಅಂದರೆ ಒಮ್ಮೆ ತೆಗೆದರೆ ಹೋಯಿತು. ಅಷ್ಟು ಕಮ್ಮಿ ಆಯಿತು. ಮೇಲೆ ಹೇಳಿದ ಅಕ್ಷೀಣ ಹಾಗಲ್ಲ. 
  5. "ನಿಧಿ" ಅಂದರೆ ಭೂಮಿಯಲ್ಲಿ ಹೂತಿಟ್ಟ ಹಣ. ಇಂಗ್ಲಿಷಿನಲ್ಲಿ "ಟ್ರೆಷರ್" ಅನ್ನುತ್ತಾರೆ. ಹಿಂದೆ ಭೂಮಿಯಲ್ಲಿ ಪಾತ್ರೆಗಳಲ್ಲಿ, ಕೊಪ್ಪರಿಗೆಗಳಲ್ಲಿ ಹಣ ಹೂತಿಡುತ್ತಿದ್ದರು. ಅಂತಹ ನಾಣ್ಯಗಳು ಅಥವಾ ಬೆಳ್ಳಿ-ಬಂಗಾರದ ಒಡವೆಗಳು ಸಿಕ್ಕರೆ ಅದು ನಿಧಿ.
  6. "ನಿಕ್ಷೇಪ" ಅನ್ನುವುದು ಭೂಮಿಯಲ್ಲಿ ಹುದುಗಿರುವ ಲೋಹದ ಅದಿರುಗಳು ಮುಂತಾದುವನ್ನು ಸೂಚಿಸುತ್ತದೆ. ಇಂಗ್ಲಿಷಿನಲ್ಲಿ "ಮೈನಿಂಗ್" ಮಾಡುವ ಪದಾರ್ಥಗಳು.  
  7. "ಸಂಚಿತ" ಅಂದರೆ ಹಿಂದಿನಿಂದ ಕೂಡಿಕೊಂಡು ಬಂದಿರುವ ಪದಾರ್ಥಗಳು. ಭೂಮಿಯಲ್ಲದೆ ಬೇರೆ ಪದಾರ್ಥ ಭೂಮಿಗೆ ಹೊಂದಿಕೊಂಡು ಬಂದಿರುವುದು. 
  8. "ಆಗಮಿ" ಅಂದರೆ ಮುಂದೆ ಬರುವ ಪದಾರ್ಥಗಳು. ಇದು ಈಗ ಇಲ್ಲ. ಮುಂದೆಂದೋ ಆ ಭೂಮಿಯಲ್ಲಿ ಉಂಟಾಗಬಹುದು. ಕೆಲವುಕಡೆ ಭೂಮಿಯ ಆಂತರಿಕ ಪರಿಣಾಮಗಳ, ಮಳೆ ಮುಂತಾದ ಕಾರಣ ಆಗುವ ಬದಲಾವಣೆಗಳು. ಭೂಗರ್ಭದಲ್ಲಿ ಆಗುವ ಒತ್ತಡಗಳಿಂದ ಚಿಮ್ಮಿ ಬರಬಹುದಾದ ಸಂಪತ್ತು. 
ಕೆಲವರು ಸಂಚಿತ ಮತ್ತು ಆಗಮಿ ಪದಗಳ ಬದಲು "ತೇಜ" ಮತ್ತು "ಸೌಮ್ಯ" ಎಂದು ಪ್ರಯೋಗಿಸುತ್ತಾರೆ. ಆಗ ಅಷ್ಟ ಭಾಗ್ಯಗಳು "ಜಲ, ತರು, ಅಕ್ಷೀಣ, ಪಾಷಾಣ, ನಿಧಿ, ನಿಕ್ಷೇಪ, ತೇಜ, ಸೌಮ್ಯ" ಎಂದಾಗುತ್ತದೆ.

ಒಟ್ಟಿನಲ್ಲಿ "ನಿಮಗೆ ಇದನ್ನು ಕೊಟ್ಟಿದ್ದೇನೆ. ಇದರಲ್ಲಿ ಇರಬಹುದಾದ, ಬೆಳೆಯಬಹುದಾದ, ಹುದುಗಿರಬಹುದಾದ, ಹಿಂದಿನಿಂದ ಬಂದಿರಬಹುದಾದ, ಮುಂದೆ ಬರಬಹುದಾದ, ಎಲ್ಲ ರೀತಿಯ ಸಂಪತ್ತುಗಳೂ ನಿಮಗೆ ಸೇರಿದ್ದು. ಮುಂದೆ ಕಂಡು ಬಂತು ಅಂದು ಅದರಮೇಲೆ ನಾನು ಹಕ್ಕು ಸ್ಥಾಪಿಸುವುದಿಲ್ಲ" ಎಂದು ಹೇಳುವ ರೀತಿ ಈ ಒಕ್ಕಣೆಗಳು.  

*****

ಮೂರು ದಿನಗಳ ನಂತರ ತಂದೆಯವರು ಊರಿಗೆ ಬಂದಿದ್ದರು. ಸುಬ್ಬರಾಯರು ಅವರನ್ನು ಕಾಣಲು ಬಂದರು. ನಾನೂ ಮನೆಯಲ್ಲಿದ್ದೆ. ಸಂಭಾಷಣೆ ಹೀಗಿತ್ತು:

"ಏನು, ನೀವು ಹೇಳದೇ ಕೇಳದೇ ಪರಊರಿಗೆ ಹೋಗುವುದು? ಇದರಿಂದ ನಿಮಗೇ ನಷ್ಟ. ಸೀನಪ್ಪ, ನೀವು ಇಬ್ಬರನ್ನೂ ಬಿಟ್ಟು ಇಲ್ಲಿ ಮೂರನೆಯವನೊಬ್ಬ ಬಿಕ್ಕಲಂ ಹುಟ್ಟಿಕೊಂಡಿದ್ದಾನೆ. ಇನ್ನು ಮುಂದೆ ಅವನಿಗೇ ಚೆನ್ನಾಗಿ ಸಂಪಾದನೆ ಆಗುತ್ತದೆ"
"ಯಾರು ಸ್ವಾಮಿ, ಅವನು?"
"ಇವನೇ, ನಿಮ್ಮ ಕುಮಾರ ಕಂಠೀರವ. ಬಹಳ ತುರ್ತಿತ್ತು. ಒಂದು ಕ್ರಯ ಪತ್ರ ಬರೆಸಿದೆ. ಚೆನ್ನಾಗಿ ಬರೆದಿದ್ದಾನೆ. ಆದರೆ ತುಂಬಾ ಪ್ರಶ್ನೆ ಕೇಳುತ್ತಾನೆ"

ಇಬ್ಬರೂ ನಕ್ಕರು. ಅವರ ಬೇರೆ ವಿಷಯದ ಸಂಭಾಷಣೆ ಮುಂದುವರೆಯಿತು. ನಾನು ಶಾಲೆಗೆ ಹೊರಟೆ.