Showing posts with label Kamadhenu. Show all posts
Showing posts with label Kamadhenu. Show all posts

Saturday, May 10, 2025

ಹರೆಯವೆಂಬ ಮಾಂತ್ರಿಕನ ಮಾಟ


ಹಿಂದಿನ ಒಂದು ಸಂಚಿಕೆಯಲ್ಲಿ "ಅನ್ನದ ಹಾಹಾಕಾರ" ಎನ್ನುವ ಶೀರ್ಷಿಕೆಯಡಿ 1965 ಮತ್ತು 1971 ಇಸವಿಗಳಲ್ಲಿ ನಡೆದ ಭಾರತ-ಪಾಕಿಸ್ತಾನದ ಯುದ್ಧಗಳ ಪ್ರಸ್ತಾಪ, ಆ ಕಾಲದ ಹಸಿದವರ "ಅನ್ನದ ಹಾಹಾಕಾರ", ಮತ್ತು "ಸಮಬಗೆಯ ಸಮ ಸುಖದ ಸಮ ದುಃಖದ, ಸಾಮರಸ್ಯದ ಸಾಮಗಾನ ಲಹರಿಯ ಮೇಲೆ ತೇಲಿ ಬರಲಿರುವ ಹೊಸ ನಾಡಿನ ಕಟ್ಟುವಿಕೆ" ಬಗ್ಗೆ ಖ್ಯಾತ ನವ್ಯ ಕವಿ ಪ್ರೊ. ಎಂ. ಗೋಪಾಲಕೃಷ್ಣ ಅಡಿಗರ "ಕಟ್ಟುವೆವು ನಾವು ಹೊಸ ನಾಡೊಂದನು" ಏನುವ ಕವನದ ಬಗ್ಗೆ ಸ್ವಲ್ಪ ವಿಚಾರ ಮಾಡಿದ್ದೆವು. ಇದನ್ನು ಮೆಲಕು ಹಾಕಿ ಓದಲು ಇಲ್ಲಿ ಕ್ಲಿಕ್ ಮಾಡಿ, 

ಎಲ್ಲಾ ಚೆನ್ನಾಗಿ ನಡೆಯುತ್ತಿರುವಾಗ ಯಾರಾದರೂ ಒಂದು ವಿಷಯ ಪ್ರಸ್ತಾಪ ಮಾಡಿ, ಸ್ವಲ್ಪ ಸಮಯದಲ್ಲಿಯೇ ಅದು ಎಡವಟ್ಟಾದರೆ "ನೀನು ಹೇಳಿದೆಯಪ್ಪಾ. ನೋಡು, ಹೇಗಾಯಿತು!" ಎಂದು ಉದ್ಗರಿಸುವುದು ವಾಡಿಕೆ. ಅದರಂತೆ ಅಂದೇ (22 ಏಪ್ರಿಲ್ 2025) ಕಾಶ್ಮೀರದ ಪಹಲ್ಗಮ್ ದುರಂತ ಉದ್ಭವಿಸಿ ಎರಡು ದೇಶಗಳ ನಡುವೆ ಮತ್ತೊಮ್ಮೆ ಕದನ ನಡೆದು, ಇಂದು "ಕದನವಿರಾಮ" ಘೋಷಣೆ ಆಗಿದೆ. ಘೋಷಣೆ ಆದರೂ ಅದು ಸ್ಥಿರವಾಗಿ ನಿಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ. ಒಂದು ಶಾಶ್ವತ ಪರಿಹಾರ ಸಿಕ್ಕಿ ಶಾಂತಿಯುತ ಬಾಳ್ವೆಗೆ ಅವಕಾಶವಾಗಲಿ ಎಂದು ಪ್ರಾರ್ಥಿಸೋಣ. 

ಆರೋಗ್ಯವಂತ ಸಮಾಜ ನಿರ್ಮಾಣ ಎಲ್ಲರಿಗೂ ಬೇಕಾಗಿರುವ ಸ್ಥಿತಿ. ಅಡಿಗರ ಕವನದ ಸಾಲುಗಳನ್ನು ಮತ್ತೆ ನೆನಪು ಮಾಡಿಕೊಳ್ಳೋಣ. 

ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ 
ಹರೆಯದೀ ಮಾಂತ್ರಿಕನ  ಮಾಟ ಮಸಳುವ ಮುನ್ನ 
ಉತ್ಸಾಹ ಸಾಗರದ ಉತ್ತುಂಗ ವೀಚಿಗಳ 
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ 

ಕಟ್ಟುವೆವು ನಾವು ಹೊಸ ನಾಡೊಂದನು 
ರಸದ ಬೀಡೊಂದನು; ಸುಖದ ಬೀಡೊಂದನು

ಇಲ್ಲಿ ಬರುವ "ಹರೆಯದ ಮಾಂತ್ರಿಕನ ಮಾಟ" ಎನ್ನುವುದರ ಬಗ್ಗೆ ಸ್ವಲ್ಪ ವಿಚಾರ ಮಾಡೋಣ. 

*****

ಸುಮಾರು ಎರಡು ದಶಕಗಳಿಗೂ ಹಿಂದಿನ ಮಾತು. ಜೊತೆಯಲ್ಲಿ ಉದ್ಯೋಗದಲ್ಲಿದ್ದ ಮಿತ್ರರೊಬ್ಬರ ಮನೆಗೆ ಯಾವುದೋ ಕಾರ್ಯ ನಿಮಿತ್ತ ಹೋಗಬೇಕಾಯಿತು. ಅನೇಕ ವರ್ಷಗಳ ಪರಿಚಯದಿಂದ ಬಂದಿದ್ದ ಸಲುಗೆ. ಅವರ ಮನೆ ಮಂದಿಯೆಲ್ಲಾ ಚೆನ್ನಾಗಿ ಗೊತ್ತು. ಅವರ ಮನೆಯ ಗೇಟ್ ಬಳಿ ಹೋಗುತ್ತಿದ್ದಾಗಲೇ ಮನೆಯ ಒಳಗಡೆ ನಡೆಯುತ್ತಿದ್ದ ವಾಗ್ವಾದ ಕೇಳಿಸುತ್ತಿತ್ತು. ಅವರ ಕುಟುಂಬದ ಎಲ್ಲರಿಗೂ ಗಂಟಲು ಸ್ವಲ್ಪ ದೊಡ್ಡದೇ. ಪ್ರೀತಿಯಿಂದ ಮಾತಾಡುತ್ತಿದ್ದರೂ ಜಗಳದಂತೆಯೇ ಇರುತ್ತಿತ್ತು. "ನಮ್ಮ ಮನೆಯಲ್ಲಿ ಗುಟ್ಟು ಅನ್ನುವುದೇ ಇಲ್ಲ ಸ್ವಾಮಿ. ನಮ್ಮ ಕುಟುಂಬದವರ ಮಾತೇ ಹಾಗೆ. ಏನು ಮಾತಾಡಿದರೂ ಬೀದಿಯವರಿಗೆಲ್ಲಾ ಗೊತ್ತು." ಎಂದು ಅವರೇ ತಮಾಷೆಗೆ ಹೇಳುತ್ತಿದ್ದರು.

ಅವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು. ಇಬ್ಬರೂ ಮದುವೆಯ ವಯಸ್ಸಿಗೆ ಬಂದಿದ್ದರು. ಅವರಿಗೋ ಇನ್ನೆರಡು ವರ್ಷದಲ್ಲಿ ಉದ್ಯೋಗದಿಂದ ನಿವೃತ್ತಿ ಆಗುವುದಿತ್ತು. ಅದರೊಳಗೆ ಇಬ್ಬರಿಗೂ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಬೇಕು ಎಂದು ಅವರ ಆಸೆ. (ಮಕ್ಕಳಿಗೆ ಮದುವೆ ಮಾಡಿದರೆ ಒಂದು ಜವಾಬದ್ದಾರಿ ಕಳೆಯಿತು ಅನ್ನುವುದು ಒಂದು ಭ್ರಾಂತಿ. ಅನೇಕ ಸಲ ಅದು ಇನ್ನೂ ಹೆಚ್ಚಿನ ಜವಾಬ್ದಾರಿಗಳಿಗೆ ಹೆದ್ದಾರಿ ಆಗುವುದೂ ಉಂಟು. ಎಲ್ಲೊ ಕೆಲವರಿಗೆ ಸ್ವಲ್ಪ ನಿರಾಳ ಆಗಿರಬಹುದು). ಮಗಳು ಯಾವ ವರ ಬಂದರೂ ಒಂದಲ್ಲ ಒಂದು ಕಾರಣ ಹೇಳಿ ನಿರಾಕರಿಸುತ್ತಿದ್ದಳು. ಮಗನು ಯಾವ ಹುಡುಗಿ ಬಂದರೂ "ಸರಿ, ಒಪ್ಪಿದೆ." ಎನ್ನುತ್ತಿದ್ದ.  ಮನೆಯಲ್ಲಿ ನಡೆಯುತ್ತಿದ್ದ ಮಾತು-ಕತೆಯ ಹಿನ್ನೆಲೆ ಹೀಗಿತ್ತು. 

ಮನೆಯೊಳಗೆ ಹೋದ ಕೂಡಲೇ ವಿಷಯ ಗೊತ್ತಾಯಿತು. ಹಿಂದಿನ ದಿನ ಮಗನಿಗೆ ನೋಡಿದ್ದ ಹುಡುಗಿ ವಿಷಯ ಮಾತಾಡುತ್ತಿದ್ದರು. ಅಪ್ಪ-ಅಮ್ಮ-ತಂಗಿ ಮೂವರಿಗೂ ಹುಡುಗಿ ಇಷ್ಟವಿಲ್ಲ. ಮಗ ಮಾತ್ರ ಎಂದಿನಂತೆ ಈಗಲೂ ಒಪ್ಪಿದ್ದ. ನನ್ನನ್ನು ಹೊರಗಿನವನು ಎಂದು ಭಾವಿಸದೆ ಅವರ ಚರ್ಚೆ ಮುಂದುವರೆಯಿತು. "ಇವನು ಯಾವ ಹುಡುಗಿ ಬಂದರೂ ಒಪ್ಪಿದ್ದೇನೆ ಆನ್ನುತ್ತಾನೆ. ವಯಸ್ಸಿಗೆ ಬಂದರೆ ಕತ್ತೆಯೂ ಚನ್ನಾಗಿ ಕಾಣುತ್ತದೆ" ಎಂದರು ಅಪ್ಪ. ಮಗನಿಗೆ ನ್ಯಾಯವಾಗಿಯೇ ಕೋಪ ಬಂತು. ಘರ್ಷಣೆ ಆಗುವ ಹಂತಕ್ಕೆ ಮಾತು ಬೆಳೆಯುವ ಸೂಚನೆ ಕಂಡಿತು. ವಾತಾವರಣ ತಿಳಿಗೊಳಿಸಲು ನಾನು ಮಿತ್ರರನ್ನು ಕೇಳಿದೆ: "ನೀವು ಹೇಳಿದ್ದು ಅರ್ಥವಾಗಲಿಲ್ಲ. ವಯಸ್ಸಿಗೆ ಬಂದರೆ ಕತ್ತೆಯೂ ಚೆನ್ನಾಗಿ ಕಾಣುತ್ತದೆ ಎಂದಿರಿ. ಅಂದರೆ ಏನು ಅರ್ಥ? ಹುಡುಗ ಅಥವಾ ಹುಡುಗಿಗೆ ವಯಸ್ಸು ಬಂದರೆ ಕತ್ತೆ ಚೆನ್ನಾಗಿ ಕಾಣುತ್ತದೆ ಎಂದೋ, ಅಥವಾ ಕತ್ತೆಗೆ ವಯಸ್ಸು ಬಂದಾಗ ಅದು ಅದನ್ನು ನೋಡುವವರಿಗೆಲ್ಲಾ ಚೆನ್ನಾಗಿ ಕಾಣುತ್ತದೆ ಎಂದೋ? ನನಗೆ ತಿಳಿದಂತೆ ಕತ್ತೆಯ ಮರಿ ನೋಡಲು ಚೆನ್ನಾಗಿರುತ್ತದೆ" ಎಂದೆ. 

ವಾತಾವರಣ ತಿಳಿ ಆಯಿತು. "ನೀವು ಬಿಡಿ ಮಾರಾಯರೆ. ಎಲ್ಲದರಲ್ಲೂ ಹಾಸ್ಯ ಹುಡುಕುತ್ತೀರಿ" ಅಂದರು ಹುಡುಗನ ತಾಯಿ. ಕಾಫಿ ಮತ್ತು ಕೋಡುಬಳೆ ಹಿಡಿದು ಬಂದಿದ್ದರು. ಎಲ್ಲರ ಗಮನ ಅವುಗಳ ಕಡೆ ಹೋಯಿತು. ಕದನವಿರಾಮ ಬಂದಂತಾಯಿತು. ನನ್ನ ಕೆಲಸ ಮುಗಿಸಿ ಹೊರಟು ಬಂದೆ. ನಾನು ಹೊರಬಂದ ನಂತರ ಮಾತಿನ ಗುದ್ದಾಟ ಮುಂದುವರೆದಿರಬಹುದು. ಏನಾಯಿತು ಎಂದು ನಾನು ಅಕ್ಕ-ಪಕ್ಕದ ಮನೆಯವರನ್ನು ಕೇಳಲಿಲ್ಲ. 

*****

ಹರೆಯವೆಂಬ ಮಾಂತ್ರಿಕನ ಮಾಯಾಜಾಲ ಅಂತಹುದು. ಅದು ನಿಜಕ್ಕೂ ಮಾಟವೇ ಹೌದು. ಹಿಂದೆಲ್ಲ ಕೆಲವರು ಮಾಟ-ಮಂತ್ರಗಳನ್ನು ಬಹಳವಾಗಿ ನಂಬಿದ್ದರು. ಅಮಾವಾಸ್ಯೆಯ ಮಾರನೆಯ ದಿನ ಬೆಳಿಗ್ಗೆ ರಸ್ತೆಯಲ್ಲಿ ನಡೆದು ಹೋದರೆ ನಾಲ್ಕು ರಸ್ತೆಗಳು ಸೇರುವ ಕಡೆ ಕೆಂಪು ಹೆಚ್ಚಿದ ನಿಂಬೆಹಣ್ಣು ಹೋಳುಗಳು ಕಾಣುತ್ತಿದ್ದವು. ಓಡಾಡುವವರು ಕಷ್ಟಪಟ್ಟು ರಸ್ತೆಯ ಕೊನೆಯಲ್ಲಿ ಹಾದು ಅವುಗಳ ಮಧ್ಯೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದರು. ಊರಿನಲ್ಲಿ ಕೆಲವರು ಮದ್ದು ಹಾಕುವುದರಲ್ಲಿ ನಿಸ್ಸೀಮರು ಎಂದು ಪಿಸುಮಾತು ಕೇಳಿಬರುತ್ತಿತ್ತು. "ಅವರ ಮನೆಯಲ್ಲಿ ಏನನ್ನಾದರೂ ತಿಂದೀಯೆ, ಜೋಕೆ. ಮೊಸರನ್ನವನ್ನಂತೂ ನೋಡಲೂಬೇಡ" ಎಂದು ಮಕ್ಕಳಿಗೆ ತಾಯಂದಿರು ಎಚ್ಚರಿಸುತ್ತಿದ್ದರು. ಮದ್ದು ಹಾಕುವವವರಂತೆ ಊರಿನಲ್ಲಿ ಅದನ್ನು ತೆಗೆಯುವ ಪ್ರವೀಣರೂ ಇರುತ್ತಿದ್ದರು. 

ಮಾಂತ್ರಿಕನ ಮಾಟ ಮಕ್ಕಳಾಗಿದ್ದಾಗ ನಮಗೆ ನಿಜದಲ್ಲಿ ಕಂಡುಬರುತ್ತಿದ್ದುದು "ಮ್ಯಾಜಿಕ್ ಶೋ" ನಡೆದಾಗ. ಯಾರದೋ ಉಂಗುರ ಮಾಂತ್ರಿಕನ ಕೈಯಲ್ಲಿ ಕಂಡಾಗ, ಪಾತ್ರೆಯಲ್ಲಿ  ತೆಗೆದುಕೊಂಡು ಹಾಕಿದ ನೀರು ಪಾರಿವಾಳವಾಗಿ ಹಾರಿಹೋದಾಗ, ಬುಟ್ಟಿಯಲ್ಲಿ ಹಾಕಿದ ಒಂದು ಬಿಳಿಯ ಕರ್ಚೀಪು ಅನೇಕ ಬಣ್ಣಬಣ್ಣದ ಬಟ್ಟೆಗಳಾದಾಗ, ಮುಂತಾದ ಸಂದರ್ಭಗಳಲ್ಲಿ. ನಾವೂ ಮ್ಯಾಜಿಕ್ ಮಾಡುವುದು ಕಲಿಯಬೇಕು ಅನ್ನಿಸುವುದು ಆಗ. ಅವನು ಬಹಳ ಸುಲಭವಾಗಿ ಗಾಳಿಯಲ್ಲಿ ರೂಪಾಯಿ ನೋಟು ತೆಗೆದಾಗಲಂತೂ ಮ್ಯಾಜಿಕ್ ಕಲಿತರೆ ಎಷ್ಟು ಬೇಕಾದರೂ ದುಡ್ಡು ಮಾಡಬಹುದು ಎಂದು ಕನಸು. ಇಂತಹ ಮಾಂತ್ರಿಕ ಹೀಗೆ ಷೋಗಳನ್ನು ಮಾಡಿ ಯಾಕೆ ಜೀವಹ ಹೊರೆಯುತ್ತಾನೆ ಎಂದು ಯೋಚಿಸುವಷ್ಟು ಪ್ರಬುದ್ಧತೆ ಇರಲಿಲ್ಲ ಆ ದಿನಗಳಲ್ಲಿ. 

ಸ್ವಲ್ಪ ದೊಡ್ಡವರಾದ ಮೇಲೆ, ಹರೆಯ ಬಂದಾಗ, ಹೊಸ ನೆತ್ತರು ಉಕ್ಕಿದಾಗ, ಅನೇಕ ಸಾಧನೆಗಳನ್ನು ಮಾಡುವ ಕನಸುಗಳು ಹರಡಿದಾಗ, ಇವೆಲ್ಲದರ ಸಮಾಗಮ. ಏನನ್ನಾದರೂ ಸಾಧಿಸುತ್ತೇನೆ ಅನ್ನುವ ವಿಶ್ವಾಸ, ಛಲ, ಹಂಬಲ. ಅಡಿಗರು ಇವು ಮೂರನ್ನೂ ಸೇರಿಸುತ್ತಾರೆ. ಅನೇಕ ಕನಸುಗಳು ಕಾಮಧೇನುವಿನ ಹಾಲು ಹನಿಗಳಾಗಿ, ಹೊಸ ರಕ್ತ ಉಕ್ಕುತ್ತಿದ್ದಾಗ, ಇಂತಹ ಹರೆಯದ ಮಾಂತ್ರಿಕನ ಮಾಟ ಪೂರ್ತಿ ಆವರಿಸಿದಾಗ, ಆದರ್ಶಗಳ ಸೆಳೆತ ಕೈಬೀಸಿ ಕರೆದಾಗ, ಹೊಸ ಸಮಾಜ ಸೃಷ್ಟಿಸುವ ಹುಮ್ಮಸ್ಸು ತಾನೇತಾನಾಗಿ ಆವರಿಸುತ್ತದೆ. ಉತ್ಸಾಹ, ಸಾಹಸಗಳ ತರಂಗಗಳ ಮೇಲೆ ಇಂತಹ ಹೊಸ ನಾಡನ್ನು ಕಟ್ಟುವ ಹುರುಪು ಆಗ. ಇವೆಲ್ಲ ಆರುವಮುನ್ನ ಆ ಕೆಲಸ ಆಗಬೇಕು. ತಡಮಾಡುವಂತಿಲ್ಲ. 

*****

ಆಗ ಆಗಲಿಲ್ಲ. ಮುಂದೆ ಏನಾಗುತ್ತದೆ? ಹಿಂದೆಲ್ಲ ಆಯುರ್ವೇದ ಪಂಡಿತರು ಕಣ್ಣು, ಉಗುರು ನೋಡಿ "ರಕ್ತಪುಷ್ಠಿ ಕಡಿಮೆ ಆಗಿದೆ" ಅನ್ನುತ್ತಿದ್ದರು. ಈಗ ಅದನ್ನೇ ಹೆಚ್ಚು ದುಡ್ಡು ತೆಗೆದುಕೊಂಡು, ರಕ್ತ ಹೀರುವ ಕೊಳವೆಯಿಂದ ತೆಗೆದು, ಲ್ಯಾಬೊರೇಟರಿಗಳಲ್ಲಿ ಅಳೆದು-ಸುರಿದು, ಹಿಮೋಗ್ಲಾಬಿನ್ ಕಡಿಮೆ ಆಗಿದೆ ಅನ್ನುತ್ತಾರೆ. ಹೊಸ ನೆತ್ತರು ಉಕ್ಕಿದ್ದು ಈಗ  ಆರುತ್ತಿದೆ. "ಒಂದೆ ನೆಗೆತಕೆ ನೆಗೆವೆವೋ ಕಂದಕವನು, ಕುಟ್ಟಿ ಪುಡಿ ಮಾಡುವೆವು ಕೋಟೆಗಳನು" ಎನ್ನುತ್ತಿದ್ದವ ಈಗ ದವಡೆಯಲ್ಲಿ "ಪುಳ್ಳಂಗಾಯಿ ಉಂಡೆ" ಕೂಡ ಪುಡಿ ಮಾಡಲಾರ. ಹರೆಯದ ಮಾಂತ್ರಿಕನ ಮಾಟ ಎಲ್ಲೂ ಕಾಣದೆ, ಮಧ್ಯ ವಯಸ್ಸಿನ ಸುತ್ತಲಿನ ಪ್ರಪಂಚದ ವಾಸ್ತವದ ಅರಿವು ಹೆಚ್ಚಾದಂತೆ ಕನಸುಗಳು ಬತ್ತುತ್ತವೆ. ಹೊಸ ಸಮಾಜ ಕಟ್ಟುವುದರ ಬದಲಾಗಿ ಇರುವ ಅವ್ಯವಸ್ಥೆಗೇ ಹೊಂದಿಕೊಂಡು ಬಾಳುವುದೇ ಉತ್ತಮ ಎಂಬ ಸಿದ್ಧಾಂತ ಗುದ್ದಲು ಬರುತ್ತದೆ. 

ಮತ್ತೂ ಸ್ವಲ್ಪ ವಯಸ್ಸಿನಲ್ಲಿ ಮುಂದೆ ಹೋದಾಗ, "ಇನ್ನೊಬ್ಬರ ಉಸಾಬರಿ ನಮಗೇಕೆ? ನಮ್ಮದು ನಮಗೆ ಸಾಕು. ತಲೆತಲಾಂತರದಿಂದ ಬಂದಿದ್ದು ನಾವು ಬದಲಿಸುವುದು ಸಾಧ್ಯವೇ?" ಎನ್ನುವ ಅನುಮಾನ ಕಾಡುತ್ತದೆ. ಹೊಸ ಸಮಾಜ ಕಟ್ಟುವುದು ಇರಲಿ; ಇರುವ ಸಮಾಜದಲ್ಲಿ ಬದುಕುವುದೂ ಒಂದು ಹೋರಾಟವೇ ಆಗುತ್ತದೆ. ಜೀವನದ ವಾಸ್ತವ ಇದೇ ಅನ್ನುವ ಕಡೆ ಮನಸ್ಸು ವಾಲತೊಡಗುತ್ತದೆ. 

*****

ಹಾಗಿದ್ದರೆ ಹೊಸ ಸಮಾಜ ಕಟ್ಟುವುದೇ ಬೇಡವೇ? ಕಾಲಕಾಲಕ್ಕೆ ಸಮಾಜ ಬದಲಾಗಿದೆಯಲ್ಲ. ಅದನ್ನು ಯಾರಾದರೂ ಕಟ್ಟಿರಲೇಬೇಕಲ್ಲ? ಅನೇಕ ರೀತಿಗಳಲ್ಲಿ ಬದಲಾವಣೆಗಳು ಸರಿ ದಾರಿಯಲ್ಲಿಯೇ ಆಗಿವೆಯಲ್ಲ? ಹೌದು. ಇವೆಲ್ಲಾ ಆಗಲೇಬೇಕು. ನಿಲ್ಲಬಾರದು. ಕನಸುಗಳು ಕಾಣಲೇಬೇಕು. ತಿರುವುಗಳು ದಾಟಲೇಬೇಕು. ಅದು ಹೇಗೆ? ಅದು ಸಾಧ್ಯವೇ? ಅವನ್ನು ಮಾಡುವವರು ಯಾರು?

ಪುಣ್ಯಕ್ಕೆ ಯಾವ ಕಾಲಮಾನ ಘಟ್ಟದಲ್ಲೂ ಕೇವಲ ಯುವಕರೇ ಇರಲಿಲ್ಲ; ಇರುವುದಿಲ್ಲ. ಎಲ್ಲ ವಯೋಮಾನದವರೂ ಒಂದೇ ಕಾಲದಲ್ಲಿ ಇರುತ್ತಾರೆ.  ಕವಿವಾಣಿ ಹೇಳುವಂತೆ "ಹೊಸ ಚಿಗುರು - ಹಳೆ ಬೇರು ಕೂಡಿರಲು ಮರ ಸೊಗಸು".  ಹರೆಯದವರ ಉತ್ಸಾಹ-ಹುಮ್ಮಸ್ಸುಗಳು ಮತ್ತು  ಹಿರಿಯರ ಅನುಭವ-ಸಮತೋಲನ ಒಂದೆಡೆ ಸೇರಿದರೆ ಹೊಸ ಸಮಾಜದ ನಿರ್ಮಾಣ ಇಂದಿಗೂ ಸಂಭವವೇ. ಹಿಂದೆಲ್ಲಾ ಸಮಾಜಗಳು ಬದಲಾದದ್ದು ಹೀಗೆಯೇ. ಈಗಲೂ ಅದು ಸಾಧ್ಯವೇ. 

ಹಿರಿಯರಿಗೆ ಕಿರಿಯರಲ್ಲಿ ಭರವಸೆ, ಕಿರಿಯರಿಗೆ ಹಿರಿಯರಲ್ಲಿ ನಂಬಿಕೆ. ಹೀಗೆ ಇರುವ ತಂಡಗಳು ಒಟ್ಟಿಗೆ. ಪರಸ್ಪರ ಗಾಢವಾದ ಸಹಬಾಳ್ವೆ. ಆಗ ಹರೆಯದ ಮಾಂತ್ರಿಕನ ಮಾಟ ಮಸಳದೆ, ಸರಿದಾರಿಯಲ್ಲಿ ಸಮಾಜದಲ್ಲಿ ಮುಂದುವರೆಯಬಹುದು. 

Wednesday, April 30, 2025

ಹಿಂದು-ಮುಂದಾದ "ಅಕ್ಷಯ ತೃತೀಯಾ"

ಕಾಮಧೇನು ಮತ್ತು ಕಲ್ಪವೃಕ್ಷಗಳು ದೇವರಾಜನಾದ ಇಂದ್ರನ ಅಧೀನದಲ್ಲಿ ಸ್ವರ್ಗದಲ್ಲಿರುತ್ತವೆ ಎಂದು ನಂಬಿಕೆ. ತಮ್ಮನ್ನು ಆರಾಧಿಸಿ ಬೇಡುವವರಿಗೆ ಕೇಳಿದ್ದನ್ನು ಕೊಡುತ್ತವೆ ಎಂದು ಪ್ರತೀತಿ. 

ಇವು ಎರಡರಲ್ಲಿ ಮುಖ್ಯ ವ್ಯತ್ಯಾಸ ಏನು? ನಾವು ಅವನ್ನು ಕಂಡವರಲ್ಲ. ಅಲ್ಲಿ ಇಲ್ಲಿ ಓದಿ-ಕೇಳಿ ತಿಳಿದದ್ದು. ಕಲ್ಪವೃಕ್ಷವು ಈಗ ನಮ್ಮ ಸುತ್ತ-ಮುತ್ತ ಇರುವ ಎಟಿಎಂ ಇದ್ದಂತೆ. ಅದು ಒಂದು ದಿವ್ಯವಾದ ಮರ. ಒಂದು ಕಡೆ ನೆಟ್ಟು ಬೆಳಿಸಿದಂತೆ. ನಮ್ಮ ಸುತ್ತಲಿನ ಎಟಿಎಂಗಳು ನಗದು ರೂಪದಲ್ಲಿ ಹಣ ಕೊಡುತ್ತವೆ. (ಈಗ ಇಡ್ಲಿ-ವಡೆ ಮುಂತಾದುವನ್ನು ಕೊಡುವ ಎಟಿಎಂಗಳು ಕೂಡ ಬಂದಿವೆಯಂತೆ. ಅವನ್ನು ಇಲ್ಲಿ ಸೇರಿಸುವುದು ಬೇಡ). ಆದರೆ ಅದು ಇರುವಲ್ಲಿಗೆ ಹೋಗಬೇಕು. ಕಾಮಧೇನು ಒಂದು ದಿವ್ಯವಾದ ಹಸು. ಅದು ಓಡಾಡಬಹುದು. ಆದ್ದರಿಂದ ಕಾಮಧೇನು ಒಂದು ಮೊಬೈಲ್ಎಟಿಎಂ ಇದ್ದಂತೆ. ಅದು ನಾವಿರುವಲ್ಲಿಗೇ ಬಂದು ಕೇಳಿದ್ದನ್ನು ಕೊಡುತ್ತದೆ. 

ಹೀಗೆ ಅಲ್ಲಿ ಇಲ್ಲಿ ಓಡಾಡುತ್ತಿದ್ದ ಕಾಮಧೇನು ನಮ್ಮ ಮನೆ ಬೀದಿಯಲ್ಲಿ ಬಂದಿದೆ. ಈಗ ನಮ್ಮ ಮನೆಯ ಮುಂದೆಯೇ ನಿಂತಿದೆ. ಏನು ಕೇಳಿದರೂ ಕೊಡುವ ಕಾಮಧೇನು. ಅದರ ಬಳಿ ಹೋಗಿ ಕೇಳಿಕೊಳ್ಳಬೇಕು. ಅಷ್ಟೇ. 

ಈ ದಿನ ಯಾಕೋ ಪ್ರತಿದಿನ ಬೆಳಿಗ್ಗೆ ನಮ್ಮ ಮನೆಗೆ ಹಾಲು ತಂದು ಕೊಡುವ  ಹುಡುಗ ಬಂದಿಲ್ಲ. ಬೆಳಗಾಗಿ ಎದ್ದು ಕಾಫಿ ಕುಡಿಯುವ ಅಭ್ಯಾಸ. ಕಾಫಿ ಸ್ವಲ್ಪ ತಡವಾದರೆ ಬುದ್ಧಿಯೇ ಓದುವುದಿಲ್ಲ. ಹೇಗೂ ಕಾಮಧೇನು ಮನೆಮುಂದೆ ಬಂದು ನಿಂತಿದೆ. ಹತ್ತಿರ ಹೋಗಿ "ಒಂದು ಅರ್ಧ ಲೀಟರ್ ಹಾಲು ಕೊಡು ತಾಯಿ" ಎಂದು ಕೇಳಿದೆವು. ಆಹಾ! ಕೊಟ್ಟಿತು! ಏನು ಸಂತೋಷ! ಎಂಥ ಉತ್ಸಾಹ!

*****

ಏನಾದರೂ ಒಳ್ಳೆಯ ಕೆಲಸ ಮಾಡಬೇಕಾದರೆ ಏನು ಮಾಡಬೇಕು? ಮಾಡಬೇಕು. ಅಷ್ಟೇ. "ಮಂತ್ರಿಸಿದರೆ ಮಾವಿನಕಾಯಿ ಬೀಳುವುದಿಲ್ಲ. ಅದು ಬೀಳಬೇಕಾದರೆ ಕಲ್ಲು ಹೊಡೆಯಬೇಕು. ಇಲ್ಲವೇ, ಮರ ಹತ್ತಿ ಕೀಳಬೇಕು". ಹೀಗೊಂದು ಪಾಠವಿತ್ತು, ನಾವು ಶಾಲೆಯಲ್ಲಿ ಓದುತ್ತಿದ್ದಾಗ. ಕೆಲಸ ಆಗಬೇಕಾದರೆ ಮೀನ-ಮೇಷ ಎಣಿಸುವುದಲ್ಲ. ಕೆಲಸ ಪ್ರಾರಂಭ ಮಾಡಬೇಕು. ಆದರೆ ನಮ್ಮಲ್ಲಿ ಒಂದು ಒಳ್ಳೆಯ ದಿನ, ಸರಿಯಾದ ಸಮಯ ನೋಡಿ ಪ್ರಾರಂಭ ಮಾಡಬೇಕು ಎನ್ನುವ ಒಂದು ಪದ್ಧತಿ. ಒಳ್ಳೆಯ ದಿನ ನೋಡಿದೆವು. ಸರಿಯಾದ ಸಮಯಕ್ಕೇ ಪ್ರಾರಂಭಿಸಿದೆವು. ಕೆಲಸವಾಗುತ್ತದೆಯೇ? ಸರಿಯಾಗಿ ಪರಿಶ್ರಮ ಪಟ್ಟು ಮಾಡಿದರೆ ಆಗುತ್ತದೆ. ಸುಮ್ಮನೆ ಒಳ್ಳೆಯ ದಿನ, ಸರಿಯಾದ ಸಮಯದಲ್ಲಿ ಪ್ರಾರಂಭ ಮಾಡಿದರೆ ಕೆಲಸ ಆಗುವುದಿಲ್ಲ. "ಪುರುಷ ಪ್ರಯತ್ನ" ಬೇಕೇ ಬೇಕು. "ದೈವದಿಂದ ಆಗುತ್ತದೆ" ಎನ್ನುವವರು ಕೆಲವರು. "ಪುರುಷ ಪ್ರಯತ್ನದಿಂದಲೇ ಆಗುವುದು" ಎನ್ನುವರು ಇನ್ನು ಕೆಲವರು. "ಪುರುಷ ಪ್ರಯತ್ನಕ್ಕೆ ದೈವ ಸಹಾಯವೂ ಸೇರಬೇಕು" ಎನ್ನುವುದು ಇನ್ನೊಂದು ಮಾರ್ಗ. 

ಒಳ್ಳೆಯ ದಿನ, ಸರಿಯಾದ ಸಮಯ ಅಂದರೆ ಏನು? ಅದು ಹೇಗೆ ಸಿಗುತ್ತದೆ? ಇದು ಒಂದು ಮುಖ್ಯ ಪ್ರಶ್ನೆ. ನಂಬಿಕೆ ಇದ್ದವರು ಜೋಯಿಸರ ಬಳಿ ಹೋಗಿ ಕೇಳಬಹುದು. ಈಗಿನ ಕಂಪ್ಯೂಟರ್ ಪರಿಣತರು ಯಾವುದೋ ಸಾಫ್ಟ್ ವೇರ್ ಸಹಾಯದಿಂದ ಅದನ್ನು ಹಿಡಿಯಬಹುದು. ಮೊಬೈಲ್ ಕೈಗೇ ಅಂಟಿಕೊಂಡಿರುವವರು ಅದಕ್ಕೊಂದು "ಅಪ್ಪ" ಹುಡುಕಿ ಅದರಲ್ಲಿ ತೆಗೆಯಬಹುದು. ಇದಕ್ಕೆ ಇಷ್ಟೆಲ್ಲಾ ಮಾಡದೆ ಏನಾದರೂ ಸುಲಭ ಉಪಾಯ ಇದೆಯೇ? 

"ಸಾಡೆತೀನ್ ಮುಹೂರ್ತ" ಎಂದು ಹಿರಿಯರು ಹೇಳುತ್ತಿದ್ದರು. ಮೂರು ದಿನಗಳು ಮತ್ತು ಅದರ ಮೇಲೆ ಅರ್ಧ ದಿನ. "ಈ ದಿನಗಳು ಸ್ವಯಂಸಿದ್ಧ ಮಹೂರ್ತಗಳು. ಈ ದಿನಗಳಲ್ಲಿ ಯಾವುದೇ ಕೆಲಸ ಪ್ರಾರಂಭ ಮಾಡಬಹುದು. ಈ ದಿನಗಳಲ್ಲಿ ಆದರೆ ಅದಕ್ಕೆ ಒಳ್ಳೆ ದಿನ, ಸರಿಯಾದ ಸಮಯ ನೋಡಬೇಕಿಲ್ಲ" ಎಂದು ಬಲವಾದ ನಂಬಿಕೆ.  ಯಾವುವು ಈ ದಿನಗಳು?

ಮೊದಲನೆಯದು ಉಗಾದಿ. ಎರಡನೆಯದು ಅಕ್ಷಯ ತೃತೀಯ. ಮೂರನೆಯದು ವಿಜಯದಶಮಿ. ಇವುಗಳ ಜೊತೆಗೆ ಬಲಿಪಾಡ್ಯಮಿಯಲ್ಲಿ ಮೊದಲ ಅರ್ಧ ದಿನ. ಮೂರೂವರೆ ದಿನ ಆಯಿತಲ್ಲ? 

*****

ಇದರಲ್ಲಿ "ಅಕ್ಷಯ ತೃತೀಯ" ವಿಶೇಷವೇನು? ಚತುರ್ಮುಖ ಬ್ರಹ್ಮದೇವರು ತಮ್ಮ ಸೃಷ್ಟಿಕಾರ್ಯ ಪ್ರಾರಂಭಿಸಿದ ದಿನ ಇದು. ಅವರ ಸೃಷ್ಟಿ ಕಾರ್ಯಕ್ಕಿಂತ ದೊಡ್ಡ ಕೆಲಸ ಮತ್ತೊಂದಿಲ್ಲ. ಅದು ಪ್ರಾರಂಭವಾದದ್ದು ಚೆನ್ನಾಗಿ ನಡೆದೇ ಇದೆ. ನಾವು ಏನೇ ಕೆಲಸ ಹೊಸದಾಗಿ ನಡೆಸಿದರೂ ಅದು ಸೃಷ್ಟಿಯ ಮಿತಿಯಲ್ಲಿ ತಾನೇ ಆಗುವುದು? ಆದ್ದರಿಂದ ಇದೊಂದು ಸ್ವಯಂಸಿದ್ಧ ಮಹೂರ್ತ. 

ಇದೇ ದಿನ "ಪರುಶುರಾಮ ಜಯಂತಿ". ಜೈನರ ಮೊದಲ ತೀರ್ಥಂಕರನಾದ ಋಷಭದೇವನು ತನ್ನ ಮರಿಮಗನಿಂದ ಆಹಾರ ಪಡೆದು ನಾಲ್ಕು ನೂರು ದಿನದ ಉಪವಾಸಡಾ ಕೊನೆ ಮಾಡಿದನೆಂದು ಇನ್ನೊಂದು ವಿಶೇಷ, ಹೀಗೆ ಮತ್ತೆ ಕೆಲವು.

ಇದರಲ್ಲಿ "ಅಕ್ಷಯ" ಅನ್ನುವುದರ ವಿಶೇಷ ಏನು? 

ಕಾಲವು ಎಂದೂ ನಿಲ್ಲದು. ಅದು ಚಲಿಸುತ್ತಲೇ ಇರುತ್ತದೆ. ಆದರೆ ಕೆಲವು ಪ್ರಕೃತಿ ವಿಶೇಷಗಳ ಕಾರಣ ಈ ಚಲಿಸುತ್ತಲೇ ಇರುವ ಸಮಯದಲ್ಲಿ ಕೆಲವು ಸಂಧಿಕಾಲಗಳು, ವಿಶೇಷ ಸಂದರ್ಭಗಳು ಒದಗುತ್ತವೆ. ಹುಣ್ಣಿಮೆ ಒಂದು ವಿಶೇಷ. ಅಂದು ಪೂರ್ಣ ಚಂದ್ರನಿದ್ದಾನೆ. ಅಮಾವಾಸ್ಯೆ ಒಂದು ವಿಶೇಷ. ಮಕರ ಸಂಕ್ರಾಂತಿ, ಕರ್ಕಾಟಕ ಸಂಕ್ರಾಂತಿ ವಿಶೇಷ ಕಾಲಗಳು. ಶ್ರಾದ್ಧಗಳ ದೃಷ್ಟಿಯಿಂದ "ಪಕ್ಷ ಮಾಸ' ಒಂದು ಪರ್ವ ಕಾಲ. ಇವೆಲ್ಲ ಸಾರ್ವತ್ರಿಕ ಪರ್ವ ಕಾಲಗಳು. 

ಇನ್ನು ಕೆಲವು ಪರ್ವ ಕಾಲಗಳು ವ್ಯಕ್ತಿಗತ. ನಾವು ಕಾಶಿಗೆ ಹೋದೆವು. ಬದರಿನಾಥಕ್ಕೆ ಹೋದೆವು. ರಾಮೇಶ್ವರಕ್ಕೆ ಹೋದೆವು. ಗಯಾದಲ್ಲಿ ಗದಾಧರನ ದರ್ಶನ ಮಾಡಲು ಹೋದೆವು. ಈ ರೀತಿ ಕ್ಷೇತ್ರಗಳ ದರ್ಶನಕ್ಕೆ ಹೋದದ್ದು. ಇದೇನು ನಾವು ಬೇಕೆಂದಾಗ್ಗೆ ಹೋಗುವಂಥದಲ್ಲ. ಆದ್ದರಿಂದ ನಮ್ಮ ಮಟ್ಟಿಗೆ ಇದು ಪರ್ವ ಕಾಲವೇ. ಆದ್ದರಿಂದ "ಕ್ಷೇತ್ರ ಶ್ರಾದ್ದ" ಎಂದು ಒಂದು ಪದ್ಧತಿ ಇದೆ. ಇಂತಹ ಕ್ಷೇತ್ರಗಳಿಗೆ ಹೋದಾಗ ಅಂದು ಪಿತೃ  ಶ್ರಾದ್ಧ ಮಾಡಬಹುದು. ಅದು ಯಾವ ದಿನವಾದರೂ ಪರವಾಗಿಲ್ಲ. ಹೀಗೆ.  

ಒಳ್ಳೆಯ ಕೆಲಸ ಯಾವಾಗ ಮಾಡಿದರೂ ಪುಣ್ಯ ಸಂಪಾದನೆಗೆ ದಾರಿ. ಪರ್ವ ಕಾಲಗಳಲ್ಲಿ ಮಾಡಿದರೆ ಅದಕ್ಕೆ ಅಧಿಕ ಪುಣ್ಯ.  ತಿಂಗಳಿಗೊಮ್ಮೆ ಬರುವ ಪರ್ವ ಕಾಲದಲ್ಲಿ ಹೆಚ್ಚು ಪುಣ್ಯ. ಆರು ತಿಂಗಳಿಗೊಮ್ಮೆ ಬರುವ ಪರ್ವಕಾಲದಲ್ಲಿ ಅದಕ್ಕಿಂತ ಹೆಚ್ಚು ಪುಣ್ಯ. ವರ್ಷಕ್ಕೊಮ್ಮೆ ಬರುವ ದಿನವಾದರೆ? ಗ್ರಹಣ-ಸಂಕ್ರಮಣಗಳಾದರೆ? ಇನ್ನೂ ಹೆಚ್ಚು ಪುಣ್ಯ.  ಹೀಗೆ ನಂಬಿಕೆ. 

ಚತುರ್ಮುಖ ಬ್ರಹ್ಮ ದೇವರು ಸೃಷ್ಟಿ ಕಾರ್ಯ ಪ್ರಾರಂಭ ಮಾಡಿದ ದಿನ ಒಂದು ದೊಡ್ಡ ವಿಶೇಷ. ಆದ್ದರಿಂದ ಅಂದು ಮಾಡಿದ ಪುಣ್ಯ ಕಾರ್ಯಗಳಿಗೆ, ದಾನ-ಧರ್ಮಗಳಿಗೆ, ಪರೋಪಕಾರಗಳಿಗೆ, ಅಶಕ್ತರು-ವೃದ್ಧರಿಗೆ ಮಾಡಿದ ಸಹಾಯ-ಒತ್ತಾಸೆಗೆ ಹೇಳಲಾಗದಷ್ಟು, ಅಕ್ಷಯ ಅನ್ನುವಷ್ಟು, ಕ್ಷಯವಾಗದಷ್ಟು, ಪುಣ್ಯ. ಆದ್ದರಿಂದ ಅಕ್ಷಯ ತೃತೀಯ ಬಹಳ ಶ್ರದ್ಧೆ-ಭಕ್ತಿಗಳಿಂದ ದಾನ ಮಾಡಬೇಕೆಂದು ವಿಶೇಷವಾಗಿ ಕಟ್ಟಲೆ. 

*****

"ನ ಕರ್ಮಣಾ, ನ ಪ್ರಜಾಯಾ, ನ ಧನೇನ, ತ್ಯಾಗೇನೈಕೇನ ಅಮೃತತ್ವಮಾನಶು:" ಎನ್ನುವುದು ಒಂದು ಶ್ರುತಿವಚನ. ಜೀವನ-ಮರಣ ಚಕ್ರದಿಂದ ಬಿಡುಗಡೆ ಸಿಗಬೇಕಾದರೆ ಕಾಮ್ಯಕರ್ಮಗಳಿಂದಲ್ಲ (ನಮಗೆ ಇವು ಬೇಕು ಎಂದು ಮಾಡುವ ಕೆಲಸಗಳು ಕಾಮ್ಯಕರ್ಮಗಳು), ಮಕ್ಕಳು ಮುಂತಾದ ಸಂತತಿಯಿಂದಲ್ಲ, ಧನ-ಕನಕಗಳಿಂದಲ್ಲ, ತ್ಯಾಗದಿಂದ ಮಾತ್ರ ಮುಕ್ತಿ ಸಿಗುತ್ತದೆ ಎಂದು ಇದರ ಅರ್ಥ. ನಮ್ಮ ಸಂಸ್ಕೃತಿಯಲ್ಲಿ ಪಡೆಯುವುದಕ್ಕಿಂತ ಕೊಡುವುದಕ್ಕೆ ಹೆಚ್ಚು ಬೆಲೆ. ದೊಡ್ಡ ಪುರಸ್ಕಾರ. "ಇದ್ದುದರಲ್ಲಿ ಜೀವನ ಮಾಡು. ಅಷ್ಟೇ ಅಲ್ಲ. ಇರುವುದರಲ್ಲಿಯೇ ಸ್ವಲ್ಪವನ್ನಾದರೂ ಬೇರೆಯವರಿಗೆ ಕೊಡು" ಅನ್ನುವುದು ಮೂಲಭೂತ ಸಿದ್ಧಾಂತ. 

ಅಕ್ಷಯ ತೃತೀಯ ಪರ್ವಕಾಲದಲ್ಲಿಯೂ ಅಷ್ಟೇ. ಕೊಡುವುದಕ್ಕೆ ಇದು ಅತ್ಯಂತ ಪ್ರಶಸ್ತವಾದ ಕಾಲ. ಇಂತಹ ಕಾಲ ಬರಲಿ ಎಂದು ಕಾತುರದಿಂದ ಕಾದುಕೊಂಡು ಕೊಡಬೇಕು. ಅದೇ ಅಕ್ಷಯ ತೃತೀಯದ ವೈಶಿಷ್ಟ್ಯ. 

*****

ಇದು "ಸೇಲ್ಸ್ ಮತ್ತು ಮಾರ್ಕೆಟಿಂಗ್" ಕಾಲ. ಪೀಟರ್ ಡ್ರಕರ್ ಎನ್ನುವ ಮ್ಯಾನೇಜ್ಮೆಂಟ್ ಗುರು ಹೇಳುತ್ತಾನೆ: "ಇನ್ನೋವೇಷನ್ ಮತ್ತು ಮಾರ್ಕೆಟಿಂಗ್" ಅನ್ನುವುದು ಯಾವುದೇ ವ್ಯವಹಾರ (ಬಿಸನೆಸ್ಸ್} ಸಫಲವಾಗಲು ಮೂಲ ಕಾರಣಗಳು ಎನ್ನುವ ಮಂತ್ರ. ಪ್ರತಿಯೊಂದಕ್ಕೂ ಒಂದು ಮಾರಾಟದ ತಂತ್ರ. ವರುಷದ ಪ್ರತಿ ದಿನವೂ ಒಂದೊಂದು ಆಚರಣೆ. ತಾಯಿಗೆ ಒಂದು ದಿನ. ತಂದೆಗೆ ಒಂದು ದಿನ. ಪ್ರೇಯಸಿಗೆ ಅಥವಾ ಪ್ರಿಯಕರನಿಗೆ ಒಂದು ದಿನ. ಕಂಡರೆ ಆಗದವರಿಗೆ ಒಂದು ದಿನ. (ಇದು ಇದೆ ಎಂದು ನಂಬಿಕೆ). ಹೀಗೆ. 

ಈಗಿನ ಮಾರಾಟಗಾರರು, ಅದರಲ್ಲೂ ಚಿನ್ನ-ವಜ್ರ ಮುಂತಾದುವುಗಳ ಮಾರಾಟಗಾರರು "ಅಕ್ಷಯ ತೃತೀಯ" ಪರ್ವಕಾಲವನ್ನು "ಹೈಜಾಕ್" ಮಾಡಿದ್ದಾರೆ. ಕೊಡುವುದರ ಬದಲು ಕೊಳ್ಳುವುದು ಮುಖ್ಯ ಮಾಡಿದ್ದಾರೆ. ಕೊಡುವುದು ಹಿಂದೆ ಉಳಿಯಿತು. ಈಗ ಕೊಳ್ಳುವುದು ಮುಖ್ಯ. ಅದರಲ್ಲೂ ಬೆಲೆ ಹೆಚ್ಚಿರುವ ಪದಾರ್ಥಗಳು. ಒಡವೆ-ಆಭರಣಗಳು. ಇತ್ಯಾದಿ. ಮೊದಲೇ ಹುಡುಕಿ, ಆರಿಸಿಟ್ಟು, ಬಿಲ್ ಮಾಡಿಸಿ, ದುಡ್ಡು ತೆತ್ತು ಈ ದಿನ ಮನೆಗೆ ತಂದರೆ ಅದು ಅಕ್ಷಯವಾಗುತ್ತದೆ ಅನ್ನುವ ಪ್ರಚಾರ. ತಂದ ಪದಾರ್ಥ ಮೈಮೇಲೆ ಧರಿಸುವಹಾಗಿಲ್ಲ. ಹಾಕಿಕೊಂಡರೆ ಜೀವಭಯ. ಪೆಟ್ಟಿಗೆಯಲ್ಲಿಟ್ಟರೆ ಕಳ್ಳ-ಕಾಕರ ಭಯ. ಅದಕ್ಕೆ ಬ್ಯಾಂಕಿನಲ್ಲಿ ಒಂದು ಲಾಕರ್. ಅದಕ್ಕೆ ವರ್ಷಕ್ಕೆ ಬಾಡಿಗೆ. ಅದರ ಬೀಗದಕೈ ಕೈಲಿ ಹಿಡಿದು ಸಂಭ್ರಮ! 

ಮಗುವಿನ ಜಾತಕ ಚೆನ್ನಾಗಿರಲಿ ಎಂದು ಗ್ರಹಗತಿ ಶೋಧಿಸಿ, ನೋಡಿಸಿ, ಮೊದಲೇ ಜನನದ ದಿನ, ಸಮಯ ನಿರ್ಧರಿಸಿ ಸಿಸೇರಿಯನ್ ಹೆರಿಗೆ ಮಾಡಿಸಿದಂತೆ. 

*****

ಕೊಡಬೇಕು ಅನ್ನುವ "ನ ಕರ್ಮಣಾ, ನ ಪ್ರಜಾಯಾ, ನ ಧನೇನ, ತ್ಯಾಗೇನೈಕೇನ ಅಮೃತತ್ವಮಾನಶು:" ಹಿಂದೆ ಹೋಯಿತು. ತರಬೇಕು ಅನ್ನುವ "ಇನ್ನೋವೇಷನ್ ಮತ್ತು ಮಾರ್ಕೆಟಿಂಗ್" ಮುಂದೆ ಬಂತು. 

ಭತ್ತ ಬೆಳೆಯುವವನಿಗೆ ಹುಲ್ಲು ತಾನಾಗಿಯೇ ಸಿಕ್ಕುತ್ತದೆ. ಕೇವಲ ಹುಲ್ಲು ಬೆಳೆಯುವವನಿಗೆ ಭತ್ತ ಸಿಗುವುದಿಲ್ಲ. ಮೋಕ್ಷ ಸಾಧಿಸುವವನಿಗೆ ಅರ್ಥ, ಕಾಮಗಳು ತಾವಾಗಿಯೇ ಸಿಗುತ್ತವೆ. ಈಗಿನ ಮಾರಾಟ ತಂತ್ರ ಇದನ್ನು ಪೂರ್ತಿ ಮರೆಸಿತು. 

ಮನೆಯಮುಂದೆ ಬಂದಿರುವ ಕಾಮಧೇನು ಬಳಿ ಅರ್ಧ ಲೀಟರ್ ಹಾಲು ಕೇಳಿದಂತಾಯಿತು. 

ಒಟ್ಟಿನಲ್ಲಿ "ಅಕ್ಷಯ ತೃತೀಯಾ"  ದಿನದ ವಿಶೇಷತೆ ಹಿಂದು-ಮುಂದಾಯಿತು.