ಹಿಂದಿನ "ಎಂಜಲು ಮತ್ತು ಪ್ರಸಾದ" ಎಂಬ ಶೀರ್ಷಿಕೆಯ ಸಂಚಿಕೆಯಲ್ಲಿ ಎಂಜಲು, ಶೇಷಾನ್ನ, ಪಿತೃಶೇಷ, ಮಾತೃ ಭೋಜನ ಮತ್ತು ಪ್ರಸಾದ ಇವುಗಳ ಬಗ್ಗೆ ಸ್ವಲ್ಪಮಟ್ಟಿಗೆ ಚರ್ಚೆ ಮಾಡಿದೆವು. ಈ ಸಂಚಿಕೆ ಬಗ್ಗೆ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಹೆಚ್ಚಿನ ವಿವರಣೆಗಾಗಿ ಪ್ರಶ್ನೆಗಳನ್ನೂ ಕೇಳಿದ್ದಾರೆ. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ).
ಕನ್ನಡದ ಕವಿವರೇಣ್ಯರೂ, ನಮ್ಮ ನಾಡು ಕಂಡ ಹಿರಿಯ ಸಂತರೂ, ಸಮಾಜ ಸುಧಾರಕರೂ ಆದ ಶ್ರೀ ಕನಕದಾಸರು "ಭಕ್ತ ಕನಕದಾಸ" ಎಂದೇ ಹೆಸರಾದವರು. ತಮ್ಮ ಜೀವಮಾನವಿಡೀ ಮಡಿವಂತರ ತಾತ್ಸಾರಕ್ಕೆ ಗುರಿಯಾಗಿ ಅನೇಕ ಕಷ್ಟಗಳನ್ನು ಅನುಭವಿಸಿದರೂ, ಜೀವನದಲ್ಲಿ ಕಹಿಯನ್ನು ಆರೋಪಿಸಿಕೊಳ್ಳದೇ ಸಮಭಾವದಿಂದ ಸಮಾಜ ಸುಧಾರಣೆ ಮಾಡಿದ ಮಹಾನುಭಾವರವರು. ಈ "ಎಂಜಲು" ಎನ್ನುವುದರ ಬಗ್ಗೆ ಅವರು ಕೆಲವು ಮುತ್ತಿನಂತಹ ಮಾತುಗಳನ್ನು ತಮ್ಮ ಕೃತಿಗಳಲ್ಲಿ ಅಲ್ಲಲ್ಲಿ ಪೋಣಿಸಿದ್ದಾರೆ. ಅವರ ಒಂದು ಹಿರಿಮೆಯ ಕೃತಿಯಾದ "ಹರಿಹಾಕ್ತಿಸಾರ" ಈ ವಿಷಯದ ಬಗ್ಗೆ ಅವರ ಆಲೋಚನೆಯ ತಿರುಳನ್ನು ನಮಗೆ ನೀಡುತ್ತದೆ. ಅದನ್ನೂ ಮತ್ತು ಇದೇ ವಿಷಯಕ್ಕೆ ಸಂಬಂಧಿಸಿದ ಕೆಲವು ಇತರ ವಿವರಗಳನ್ನೂ ಈ ಸಂಚಿಕೆಯಲ್ಲಿ ನೋಡೋಣ.
*****
ನಮ್ಮ ಕುಟುಂಬದ ಹಿತೈಷಿಗಳೂ, ಸಮಾಜದ ಹಿರಿಯರೂ ಮತ್ತು ಕುಟುಂಬದ ಸದಸ್ಯರೆಲ್ಲರ ಮನ್ನಣೆಗೆ ಪಾತ್ರರಾದವರೊಬ್ಬರು ಈ ದಿನ ನಮ್ಮ ಮನೆಗೆ ಬರುವವರಿದ್ದಾರೆ ಎನ್ನೋಣ. ಮಧ್ಯಾನ್ಹದ ಹೊತ್ತಿಗೆ ಬರುವವರಾದ್ದರಿಂದ ಈ ದಿನ ಅವರ ಭೋಜನ ನಮ್ಮಲ್ಲೇ ಆಗಬೇಕೆಂದು ಕೇಳಿದ್ದೇವೆ. ಅವರೂ ಒಪ್ಪಿದ್ದಾರೆ. ಅವರಿಗೆ ಬೇಕೋ ಬೇಡವೋ ಅದು ಮುಖ್ಯವಲ್ಲ. ನಮ್ಮ ಮನಸ್ಸು ಕೇಳುವಂತೆ ಅವರಿಗೆ ಒಳ್ಳೆಯ ಅಡಿಗೆ ಮಾಡಿ ಬಡಿಸಬೇಕೆಂದು ನಮ್ಮ ಅಪೇಕ್ಷೆ. ಊಟ ಷಡ್ರಸೋಪೇತವಾಗಿ ಇರಬೇಕೆಂದು ನಮ್ಮ ಇಚ್ಛೆ. ಕಟು, ಆಮ್ಲ, ಲವಣ, ತಿಕ್ತ, ಮಧುರ ಮತ್ತು ಕಷಾಯ ಎನ್ನುವ ಈ ಆರು ರಸಗಳಲ್ಲಿ ಕಹಿಯೂ ಸೇರಿದೆ. ಆದರೆ ಆ ಕಹಿ ನಾವು ಬೇಕೆಂದು ಹಾಕಿದ ಪದಾರ್ಥದಲ್ಲಿ ಇರಬೇಕು. ಹಾಗಲಕಾಯಿ ಕಹಿ ಆಗಬಹುದು. ಆದರೆ ನಮಗೆ ಬೇಡದಂತೆ ಎಲ್ಲಿಂದಲೋ ಬಂದು ಸೇರುವುದಲ್ಲ.
ಹೆಸರುಬೇಳೆ ಕೋಸಂಬರಿಗೆ ಸೌತೆಕಾಯಿ ಹಾಕಿದರೆ ಚೆನ್ನಾಗಿರುತ್ತದೆ ಎಂದು ಅವರು ಯಾವುದೋ ಸಂದರ್ಭದಲ್ಲಿ ವಿನೋದಕ್ಕೆ ಹೇಳಿದ್ದು ನೆನಪು ಬಂತು. ಸೌತೆಕಾಯಿ ತಂದಾಗಿದೆ. ಆದರೆ ನೂರು ಸೌತೆಕಾಯಿಯಲ್ಲಿ ಯಾವುದೊ ಒಂದು ಕಹಿ ಇರುತ್ತದೆ. "ಕಹಿ ಸೌತೆ (ಸೋರೆ) ಕುಡಿಯಾದರೇನು? ಮಿಡಿಯಾದರೇನು?" ಎಂದು ಕವಿವಾಣಿಯೇ ಇದೆಯಲ್ಲ. ಎಲ್ಲ ಪದಾರ್ಥ ಚೆನ್ನಾಗಿ ಮಾಡಿ ಈ ಸೌತೆಕಾಯಿ ಕಹಿ ಆದರೆ ಏನು ಮಾಡುವುದು? ಊಟಕ್ಕೆ ಕುಳಿತಾಗ ಎಡವಟ್ಟಾಗುವುದಲ್ಲ! ಸೌತೆಕಾಯಿ ಹೆಚ್ಚುವಾಗ ಮೊದಲು ಒಂದು ಸಣ್ಣ ಚೂರು ತಿಂದು ಪರೀಕ್ಷೆ ಮಾಡುವುದು. ನಂತರ ಕೋಸಂಬರಿಗೆ ಹಾಕುವುದು. ಅಷ್ಟೇ. ಇದರಿಂದ ಏನೂ ತೊಂದರೆಯಿಲ್ಲ.
ಹೀಗೆ ಮಾಡಿದರೆ, ಒಂದು ಸಣ್ಣ ತುಂಡು ಸೌತೆಕಾಯಿ ತಿಂದು ಪರೀಕ್ಷಿಸಿದರೆ, ಮಿಕ್ಕ ಸೌತೆಕಾಯಿ ಮತ್ತು ಆಮೇಲೆ ಅದನ್ನು ಹಾಕಿ ಮಾಡಿದ ಕೋಸಂಬರಿ ಎಂಜಲಾಯಿತೇ? ಅಂತಹ ಹಿರಿಯರಿಗೆ ಅದನ್ನು ಬಡಿಸಬಹುದೇ?
*****
ಊಟವಾದ ಮೇಲೆ ಹಣ್ಣು ತಿನ್ನುವುದು ಒಳ್ಳೆಯ ಅಭ್ಯಾಸ. ಹೊಟ್ಟೆಯಲ್ಲಿ ಜಾಗ ಇರುತ್ತದೆಯೋ ಇಲ್ಲವೋ, ಅವರು ತಿನ್ನುತ್ತಾರೋ ಇಲ್ಲವೋ, ಅದು ಆಮೇಲಿನ ವಿಷಯ. ಕೊಡುವುದು ನಮ್ಮ ರೀತಿ. ತೆಗೆದುಕೊಳ್ಳುವುದು ಅಥವಾ ಬಿಡುವುದು ಅವರಿಗೆ ಸೇರಿದ್ದು. ಒಂದು ಸಣ್ಣ ತುಂಡು ಅವರು ತೆಗೆದುಕೊಂಡರೂ ನಮಗೆ ಸಂತೋಷವೇ. ಅವರು ಬೇಡವೆಂದರೆ ಬಿಡೋಣ. ಅಷ್ಟು ಜನ ಸೇರಿರುವಾಗ ಯಾರಾದರೂ ತೆಗೆದುಕೊಂಡಾರು. ಅದೂ ಒಳ್ಳೆಯದೇ.
ಅಂಗಡಿಯಲ್ಲಿ ಹೊಸ ದ್ರಾಕ್ಷಿ ರಾಶಿಯೇ ಇತ್ತು. ತಂದಿದ್ದಾಗಿದೆ. ಆದರೆ ಕೆಲವೊಮ್ಮೆ ನೋಡಲು ಚೆನ್ನ್ನಾಗಿರುವ ದ್ರಾಕ್ಷಿ ಹುಳಿ ಇರುವುದೂ ಉಂಟು. ಸೊಗಸಾದ ಊಟ ಮಾಡಿ ದ್ರಾಕ್ಷಿಗೆ ಕೈ ಹಾಕಿದರೆ, ಅದು ಹುಳಿ ಇದ್ದರೆ ಏನು ಚೆನ್ನ? ಒಂದು ಕೆಲಸ ಮಾಡೋಣ. ಒಂದೊಂದು ಗೊಂಚಲಿನಿಂದ ಒಂದು ದ್ರಾಕ್ಷಿ ತೆಗೆದು ತಿಂದು ನೋಡುವುದು. ಸಿಹಿ ಇರುವ ಗೊಂಚಲಿನ ಹಣ್ಣುಗಳನ್ನು ಗುರುತಿಸಿ ತೆಗೆದಿಡುವುದು. ಹೇಗಿದೆ ಈ ಉಪಾಯ?
ಒಂದು ಗೊಂಚಲಿನಲ್ಲಿ ಒಂದು ಹಣ್ಣು ತಿಂದು ಅತಿಥಿ-ಅಭ್ಯಾಗತರಿಗೆ ಒಳ್ಳೆಯದನ್ನು ಕೊಡುವುದು ಎಂಜಲು ಕೊಟ್ಟಂತೆಯೇ?
*****
ಮತಂಗ ಋಷಿಗಳು ಮಹಾ ತಪಸ್ವಿಗಳು. ಶಬರಿ ಅವರ ಅನುಯಾಯಿ. ಆಶ್ರಮದ ಕೆಲಸ ಮತ್ತು ಅವರ ಸೇವೆಯಲ್ಲಿಯೇ ಜೀವನ ಸವೆಸಿದವಳು. ಕಾಲಚಕ್ರದಲ್ಲಿ ಇಬ್ಬರಿಗೂ ಮುಪ್ಪು ಬಂತು. ಮತಂಗರಿಗೆ ತಮ್ಮ ಜೀವಿತ ಕಾಲ ಮುಗಿಯುತ್ತಿರುವುದು ಗೊತ್ತಾಯಿತು. (ವೃದ್ಧಾಪ್ಯ ಬಂದಾಗ ನಮಗೂ ಗೊತ್ತಾಗುತ್ತದೆ. ಆದರೆ ನಾವು ಅದನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ!) ಶ್ರೀರಾಮಚಂದ್ರನು ಈ ದಾರಿಯಲ್ಲಿ ಬರುವುದು ಖಚಿತವಾದರೂ ಇನ್ನೂ ಸ್ವಲ್ಪ ಕಾಲ ಕಾಯಬೇಕು. "ಶ್ರೀರಾಮನು ಬಂದೇ ಬರುತ್ತಾನೆ. ಅವನನ್ನು ನೋಡುವ ಭಾಗ್ಯ ನಿನಗಿದೆ. ನೀನು ಆ ದಿನಕ್ಕಾಗಿ ಕಾಯುತ್ತಿರು" ಎಂದು ಅವಳಿಗೆ ಹೇಳಿ ದೇಹ ತ್ಯಾಗ ಮಾಡಿದರು.
ಶಬರಿಯು ಪ್ರತಿದಿನ ಕಾಡಿನಲ್ಲಿ ಹುಡುಕಿ ಹುಡುಕಿ ಚೆನ್ನಾದ ಹಣ್ಣು ತಂದಿಡುವಳು. ಸಂಜೆಯಾದರೂ ರಾಮನು ಬರಲಿಲ್ಲ. ಹಣ್ಣುಗಳನ್ನು ಬಿಸಾಡುವಳು. ಮತ್ತೆ ಮಾರನೆಯ ದಿನ ಹೊಸ ಹಣ್ಣು, ಕಡೆಗೆ ಒಂದು ದಿನ ಅವನು ಬಂದೇ ಬಂದ. ಲಕ್ಷ್ಮಣನ ಜೊತೆ. ಅವನನ್ನು ನೋಡಿ, ಹಣ್ಣು ಕೊಟ್ಟು ಧನ್ಯಳಾದಳು. ಅನೇಕ ವರುಷ ಕಾದಿದ್ದು ಸಾರ್ಥಕವಾಯಿತು.
ನಮ್ಮಲ್ಲಿಗೆ ಬಂದವರಿಗೆ ಮೊದಲು ನೀರು ಕೊಡುವುದು ವಾಡಿಕೆ. ಅದು ಸೌಜನ್ಯವೂ ಹೌದು; ಸತ್ಕಾರವೂ ಹೌದು. ಅಂತೆಯೇ ದೇವರಿಗೆ ನೈವೇದ್ಯಕ್ಕೆ ಎಷ್ಟೆಲ್ಲಾ ಪದಾರ್ಥಗಳನ್ನು ಮಾಡಿಟ್ಟರೂ ಒಂದು ಸ್ವಲ್ಪ ನೀರು ಇಡಲೇಬೇಕು. ಇಲ್ಲದಿದ್ದರೆ ನೈವೇದ್ಯ ಅಪೂರ್ಣವೇ.
ಅವಳು "ಯ೦ಜಲ ಫಲ" ಕೊಟ್ಟಳು ಎಂದರು ಕೆಲವರು. ಅವಳು "ಎಂಜಲ ಹಣ್ಣು" ಕೊಟ್ಟಳು ಎಂದರು ಮತ್ತೆ ಕೆಲವರು. ಸಂಸ್ಕೃತದಲ್ಲಿ ಯಂ ಎಂದರೆ ಒಳ್ಳೆಯ ಅಥವಾ ಶ್ರೇಷ್ಠವಾದದ್ದು ಎಂದು ಅರ್ಥ. ಜಲ ಎಂದರೆ ನೀರು ಎಂದು ಗೊತ್ತೇ ಇದೆ. ಭಕ್ತಿಯಿಂದ ತುಂಬಿದ ಒಳ್ಳೆಯ ನೀರು ಮತ್ತು ಹಣ್ಣು ಕೊಟ್ಟಳು ಎಂದರು ಕೆಲವರು. ಮಾತಂಗ ಋಷಿಗಳ ಶಿಷ್ಯೆಯಾಗಿ ಅದು ಸರಿ ಅಂದರು ಅವರು. ಇಲ್ಲ, ಹಣ್ಣುಗಳನ್ನು ರುಚಿ ನೋಡಿ ಎಂಜಲ ಹಣ್ಣು ಕೊಟ್ಟಳು ಎಂದರು ಇನ್ನು ಕೆಲವರು. ಶ್ರೀರಾಮನು ಅವಳ ಭಕ್ತಿ ನೋಡಿ ಎಂಜಲ ಹಣ್ಣು ಎಂದು ಲೆಕ್ಕಿಸದೆ ಸ್ವೀಕರಿಸಿದ ಎಂದು ಅರ್ಥೈಸಿದರು ಆವರು. ವರ್ಗ ಸಂಘರ್ಷದ ಹಿನ್ನೆಲೆಯಲ್ಲಿ ಇದೇ ಚೆನ್ನ. ಸಿನಿಮಾದಲ್ಲಿ ತೋರಿಸುವುದಕ್ಕಂತೂ ಇನ್ನೂ ಚೆನ್ನ.
ಎರಡರಲ್ಲಿ ಯಾವುದು ಸರಿ? ಹಣ್ಣು ಕೊಟ್ಟ ಶಬರಿಗೆ ಗೊತ್ತು. ಆ ಹಣ್ಣು ತಿಂದ ಶ್ರೀರಾಮನಿಗೆ ಗೊತ್ತು. ಇದನ್ನು ನೋಡಿದ ಲಕ್ಷ್ಮಣನಿಗೆ ಗೊತ್ತು. ನಾಲ್ಕನೆಯವರಿಗೇನು ಗೊತ್ತು?
*****
"ಅದು ಎಂಜಲು" ಎಂದು ಒಬ್ಬರು ಹೇಳುತ್ತಾರೆ. ಈ ಹೇಳುವ "ಎಂಜಲು' ಎನ್ನುವ ಪದ ಬಾಯಿಯಲ್ಲಿರುವ ನಾಲಿಗೆಯಿಂದಲೇ ಬರಬೇಕು. ನಾಲಿಗೆ ತಾಕಿದರೆ, ಬಾಯಲ್ಲಿ ಬಿದ್ದರೆ ಎಂಜಲು. ಆದ್ದರಿಂದ ಈ 'ಎಂಜಲು" ಎನ್ನುವ ಪದವೇ ಎಂಜಲಲ್ಲವೇ?
ನೀರಿಲ್ಲದೆ ಅಡಿಗೆ ಪದಾರ್ಥಗಳಿಲ್ಲ. ಉಪಯೋಗಿಸಿದ ಪದಾರ್ಥಗಳನ್ನು ತೊಳೆಯಲಾದರೂ ನೀರು ಬೇಕು. ಹಣ್ಣು-ಹಂಪಲಾದರೂ ತೊಳೆಯಲಿಕ್ಕೆ ನೀರು ಬೇಕೇ ಬೇಕು. ಯಾವುದೋ ಮಹಾನದಿಯ ಅಥವಾ ಜಲಾಶಯದ ನೀರು. ಅಥವಾ ಬಾವಿಯಿಂದ ಸೇದಿದ ನೀರು. ಈಗಿನ ಕಾಲದ ಮನೆಯ ನಲ್ಲಿಯ ನೀರಾದರೂ ಅಂತಹ ಕಡೆಯಿಂದಲೇ ಬರಬೇಕು. ನದಿಯಲ್ಲಿ, ಜಲಾಶಯದಲ್ಲಿ, ಬಾವಿಯಲ್ಲಿ ಅಸಂಖ್ಯ ಜಲಚರಗಳಿವೆ. ಮೀನುಂಟು. ಕಪ್ಪೆಯುಂಟು. ಆಮೆಗಳಿವೆ. ಮೊಸಳೆಗಳು ಉಂಟು. ಮತ್ತನೇಕ ನೀರಿನಲ್ಲಿ ಬದುಕುವ ಪ್ರಾಣಿಗಳು ಇವೆ. (ರನ್ನನ ಕೃತಿ ಆಧರಿಸಿದ ಬಿ. ಎಂ. ಶ್ರೀ. ಅವರ ಗದಾಯುದ್ಧ೦ ನಾಟಕದಲ್ಲಿ, ವೈಶಂಪಾಯನ ಸರೋವರದಲ್ಲಿ ಜಲಸ್ತ೦ಭನ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ದುರ್ಯೋಧನನಿಗೆ ಭೀಮ ಹೇಳುವ ಮಾತಿದು - "ಮತ್ತೀನೀರೊಳಗೆ ಮೀನಿರ್ಕು೦, ಎಸಡಿರ್ಕು೦, ಕಪ್ಪೆಯಿರ್ಕು೦; ಇರ್ಪರೇ ಗಂಡರ್?"). ನೆಲದ ಮೇಲಿನ ಅನೇಕ ಪ್ರಾಣಿಗಳೂ ಮನುಷ್ಯರೂ ಅದರಲ್ಲಿ ನೀರು ಕುಡಿಯುತ್ತಾರೆ. ಎಲ್ಲ ನೀರೂ ಇದರಿಂದ ಎಂಜಲೇ ಅಲ್ಲವೇ?
ಎಲ್ಲ ಪೂಜಾದಿಗಳಿಗೆ ಹಾಲು ಬೇಕು. ಹಾಲಿಲ್ಲದೆ ಮೊಸರಿಲ್ಲ. ಮೊಸರಿಲ್ಲದೆ ಬೆಣ್ಣೆ ಇಲ್ಲ. ಬೆಣ್ಣೆ ಇಲ್ಲದೆ ತುಪ್ಪವಿಲ್ಲ. ಹಾಲು, ಮೊಸರು, ತುಪ್ಪವಿಲ್ಲದೆ ಪಂಚಾಮೃತವಿಲ್ಲ. ಶಿಶುಗಳಿಗೆ ಹಸುವಿನ ಹಾಲು ಬೇಕು. ದೊಡ್ಡವರಿಗೂ ಬೇಕು. ರುಚಿ-ರುಚಿಯಾದ ಅಡಿಗೆ ಮಾಡಲು, ಅನೇಕ ಸಿಹಿ ತಿಂಡಿ ಮಾಡಲು, ಮತ್ತನೇಕ ಸಿಹಿ ತಿಂಡಿ ಜೊತೆಯಾಗಿ ಹಾಲು ಬೇಕೇ ಬೇಕು.
ದೇವತೆಗಳು ಅಮೃತ ಕುಡಿಯುತ್ತಾರಂತೆ. ಹೀಗೆ ಕೇಳಿ ಗೊತ್ತು. ನಾವು ನೋಡಿಲ್ಲ. ನಾವು ನೋಡಿರುವ, ಸೇವಿಸಿರುವ, ಜೀವನಾಧಾರವಾಗಿ ನಂಬಿರುವ ಅಮೃತವೆಂದರೆ ಹಾಲು. ಶುದ್ಧತೆಗೆ ಇನ್ನೊಂದು ಹೆಸರು ಹಾಲು. "ಅವನದು ಹಾಲಿನಂತಹ ಮನಸ್ಸು" ಎನ್ನುತ್ತೇವೆ. ಸುಖ ಸಂಸಾರ ಕೆಡಿಸುವವರನ್ನು "ಹಾಲಿಗೆ ಹುಳಿ ಹಿಂಡಿದರು" ಅನ್ನುತ್ತೇವೆ. ಇಂತಹ ಹಾಲು ಆ ಹಸುವಿನ ಕರು ಕುಡಿದ ಮೇಲೆ ತಾನೇ ಕರೆದರೆ ಚೆನ್ನಾಗಿ ಬರುವುದು. ಹಾಲುಕರೆಯುವ ಹಸುವಿನ ಕರು ಇಲ್ಲದಿದ್ದರೆ ಮತ್ಯಾವುದೋ ಕರುವನ್ನಾದರೂ ಕೆಚ್ಚಲಿನ ಬಳಿ ಸ್ವಲ್ಪ ಕುಡಿಯಲು ಬಿಟ್ಟು ನಂತರ ಹಾಲು ಕರೆದುಕೊಳ್ಳುತ್ತಾರೆ. ಆದ್ದರಿಂದ ಹಾಲೂ ಕರುವಿನ ಎಂಜಲು ತಾನೇ?
ಶ್ರೀ ಕನಕದಾಸರು ತಮ್ಮ "ಹರಿಭಕ್ತಿಸಾರ" 101ನೆಯ ಪದ್ಯದಲ್ಲಿ ಹೀಗೆ ಹೇಳುತ್ತಾರೆ:
ಎಂಜಲೆಂಜಲು ಎಂಬರಾನುಡಿಎಂಜಲಿಲ್ಲವೆ ವಾರಿ ಜಲಚರದೆಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆಎಂಜಲೆಲ್ಲಿಯದೆಲ್ಲಿಯು೦ ಪರರೆಂಜಲಲ್ಲದೆ ಬೇರೆ ಭಾವಿಸಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ
ಇದನ್ನು ಅತಿರೇಕಕ್ಕೆ ತೆಗೆದುಕೊಂಡು ಹೋಗಬಾರದು ಎನ್ನುವುದು ಇದರ ಭಾವಾರ್ಥ.
*****
ನೈವೇದ್ಯಾದಿಗಳಿಗೆ, ಹವನ-ಹೋಮಾದಿಗಳಿಗೆ, ಶ್ರಾದ್ಧಾದಿಗಳಿಗೆ, ಇಂತಹ ಸಂಬಂಧಿತ ಕಾರ್ಯಗಳಿಗೆ ಪದಾರ್ಥ ತಯಾರಿಸುವಾಗ ಯಾವುದೇ ಪದಾರ್ಥದ, ಅವಕ್ಕೆ ಉಪಯೋಗಿಸಿದ ಪರಿಕರಗಳ ರುಚಿ ನೋಡುವ ಪರಿಪಾಠವಿಲ್ಲ. ಬೇರೆ ಸಂದರ್ಭದಲ್ಲಿ ಉದ್ದೇಶಪೂರ್ವಕ ಎಂಜಲು ಮಾಡಬಾರದು ಮತ್ತು ಕೊಡಬಾರದು. ಅದು ಆರೋಗ್ಯ ಮತ್ತು ಶುಚಿತ್ವದ ಸೂಚಕವೂ ಅಲ್ಲ. ಆದರೆ ಎಂಜಲಿನ ಹೆಸರಿನಲ್ಲಿ ಜೀವನವನ್ನೇ ದುರ್ಭರ ಮಾಡಿಕೊಳ್ಳಬಾರದು ಅನ್ನುವುದು ಇಷ್ಟೆಲ್ಲಾ ಚರ್ಚೆಗಳ ತಾತ್ಪರ್ಯ.