Showing posts with label Nala. Show all posts
Showing posts with label Nala. Show all posts

Saturday, November 1, 2025

ನನಗೇ ಏಕೆ ಹೀಗಾಗುತ್ತದೆ?


ಈಗಿನ ದಿನಗಳಲ್ಲಿ "ಕರೆಂಟ್ ಹೋಯಿತು" ಅಥವಾ "ಪವರ್ ಫೇಲ್ಯೂರ್" ಆಯಿತು ಅನ್ನುವ ಮಾತುಗಳು ಕೇಳಿಬರುವುದು ಬಹಳ ಕಡಿಮೆ. ಅನೇಕರ ಮನೆಗಳಲ್ಲಿ "UPS" ಸೌಲಭ್ಯ ಇರುತ್ತದೆ. ಕಣ್ಣ ರೆಪ್ಪೆ ಅಲುಗಾಡುವ ಸಮಯದಲ್ಲಿ ಅದು ಕೆಲಸ ಮಾಡಲು ಪ್ರಾರಂಭಿಸುತ್ತದೆ. ಸ್ವಲ್ಪ ಮುಂದುವರಿದ ರೀತಿಯ ವ್ಯವಸ್ಥೆ ಇದ್ದರಂತೂ ವ್ಯತ್ಯಾಸ ಗೊತ್ತೇ ಆಗದಂತೆ ವಿದ್ಯುತ್ ಸರಬರಾಜು ಹಸ್ತಾಂತರವಾಗುತ್ತದೆ. ಇಂತಹ ಸೌಲಭ್ಯ ದುಬಾರಿ ಅನ್ನುವ ಸ್ಥಿತಿಯ ಮನೆಗಳಲ್ಲಿ ಈಗಲೂ "ಕರೆಂಟ್ ಹೋಯಿತು" ಅನ್ನುವುದು ಕೇಳಿ ಬರುತ್ತದೆ. ಅನೇಕ ದಿನಚರಿಯ ಕೆಲಸ-ಕಾರ್ಯಗಳು ಅಲ್ಲಲ್ಲೇ ನಿಲ್ಲುತ್ತವೆ. ಬಾವಿಯಲ್ಲಿ ಅಥವಾ ನೆಲದಡಿಯ ಸಂಪಿನಲ್ಲಿ ನೀರುಂಟು. ಆದರೆ ಸ್ನಾನವಿಲ್ಲ. ಅಡಿಗೆಗೆ ಬೇಕಾದ ಪದಾರ್ಥ ರುಬ್ಬುವಂತಿಲ್ಲ. ಹೊಲಗಳ ಪಂಪುಸೆಟ್ಟುಗಳು ಹಗಲೆಲ್ಲಾ ನಿದ್ರೆ ಮಾಡುತ್ತವೆ. ಹೀಗೆ ನಡೆಯುತ್ತದೆ. 

ಒಮ್ಮೆ ಒಬ್ಬ ಸ್ನೇಹಿತರ ಮನೆಯಲ್ಲಿ ಕುಳಿತಿದ್ದಾಗ ಹೀಗೇ ವಿದ್ಯುತ್ ನಿಲುಗಡೆ ಆಯಿತು. ದೂರದರ್ಶನದಲ್ಲಿ ಬಹಳ ಮುಖ್ಯವಾದ ಕ್ರಿಕೆಟ್ ಪಂದ್ಯ ನೋಡುತ್ತಿದ್ದ ಮಗನಿಗೆ ಬಹಳ ಕೋಪ ಬಂತು. "ಹಾಳಾದ್ದು, ಯಾವಾಗಲೂ ನಮ್ಮ ರಸ್ತೆಯಲ್ಲಿಯೇ ಹೀಗಾಗುತ್ತೆ. ಹಿಂದಿನ ರಸ್ತೆಯಲ್ಲಿ ಯಾವಾಗಲೂ ವಿದ್ಯುತ್ ಇರುತ್ತೆ" ಎಂದು ಕೂಗಾಡಿದ. ಅಲ್ಲಿಯೇ ಇದ್ದ ತಂದೆ "ಹೌದೇ? ಅದು ಹೇಗೆ ಗೊತ್ತು?" ಎಂದು ಕೇಳಿದರು. "ನಮ್ಮ ಮನೆಯಲ್ಲಿ ಹೀಗಾದಾಗ ಹೊರಗೆ ಹೋಗಿ ನೋಡಿದರೆ ಹಿಂದಿನ ರಸ್ತೆಯಲ್ಲಿ ಯಾವಾಗಲೂ ವಿದ್ಯುತ್ ಇರುತ್ತೆ" ಅಂದ ಮಗ. "ಒಂದು ಕೆಲಸ ಮಾಡು. ನಮ್ಮ ಮನೆಯಲ್ಲಿ ವಿದ್ಯುತ್ ಇದ್ದಾಗ ಆಗಾಗ ಹೊರಗೆ ಹೋಗಿ ನೋಡು. ಆಗ ಗೊತ್ತಾಗುತ್ತೆ" ಅಂದರು ತಂದೆ.

ನಮ್ಮ ಕಷ್ಟಗಳು ನಮಗೆ ಗೊತ್ತಾಗುತ್ತವೆ. ಅಂತೆಯೇ ಬೇರೆಯವರ ಕಷ್ಟಗಳು ಅವರಿಗೆ ಗೊತ್ತಾಗುತ್ತವೆ. ಎದುರುಗಡೆಯವನಿಗೆ ಹೊಟ್ಟೆನೋವು. ನಮ್ಮ ಕಣ್ಣಿಗೆ ಅವನು ಸರಿಯಾಗಿಯೇ ಇದ್ದಾನೆ. ನಮಗೂ ಒಮ್ಮೊಮ್ಮೆ ಹೊಟ್ಟೆ ನೋವು ಬರುತ್ತದೆ. ಆಗ ಎದುರುಗಡೆಯವರಿಗೆ ನಾವೂ ಸರಿಯಾಗಿಯೇ ಕಾಣುತ್ತೇವೆ. ಇಷ್ಟು ಸಾಮಾನ್ಯ ಜ್ಞಾನ ಇದ್ದರೂ, "ನೋಡು, ಯಾವಾಗಲೂ ನನಗೇ ಹೀಗಾಗುತ್ತದೆ!" ಎಂದು ಪರಿತಪಿಸುವುದು ಮನುಷ್ಯನ ಅಭ್ಯಾಸ. 

*****

ಹಿಂದಿನ ಸಂಚಿಕೆಯಲ್ಲಿ "ಪರಸ್ಪರ ಗುರು-ಶಿಷ್ಯರು" ಅನ್ನುವ ಶೀರ್ಷಿಕೆಯ ಅಡಿಯಲ್ಲಿ ಬೃಹದಶ್ವ ಮುನಿ ಪಾಂಡವಾಗ್ರಜ ಧರ್ಮರಾಯನಿಗೆ ನಳ ಮಹಾರಾಜನ ವೃತ್ತಾಂತ ಹೇಳಿದುದನ್ನು ನೋಡಿದೆವು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಯುಧಿಷ್ಠಿರನೂ ಹೀಗೆಯೇ "ನನಗೇ ಏಕೆ ಹೀಗಾಯಿತು?" ಅಂದುಕೊಂಡಿರಬೇಕು! 

ನಳಮಹಾರಾಜನ ಕಥೆಯಲ್ಲಿ ಧರ್ಮಜನಿಗಾದದ್ದು ಎಲ್ಲವೂ ನಳನಿಗೂ ಆಗಿತ್ತು. ಅವನೂ ತಮ್ಮನಿಗೆ ಜೂಜಿನಲ್ಲಿ ಎಲ್ಲವನ್ನೂ ಸೋತನು. ಕಾಡು ಪಾಲಾದನು. ಧರ್ಮಜನಿಗೆ ಹೆಂಡತಿ ದೂರವಾಗಲಿಲ್ಲ. ನಳನು ಹೆಂಡತಿಯನ್ನೂ ಬಿಟ್ಟು ಹೋಗಬೇಕಾಯಿತು. ಧರ್ಮಜನು ಕಂಕಭಟ್ಟನಾಗಿ ವಿರಾಟ ಮಹಾರಾಜನ ಸೇವೆ ಮಾಡಿದನು. ನಳನೋ ಕಾರ್ಕೋಟಕನ ಕೈಲಿ ಕಚ್ಚಿಸಿಕೊಂಡು ವಿರೂಪ ಪಡೆದು, ಬಾಹುಕನಾಗಿ ಋತುಪರ್ಣ ಮಹಾರಾಜನ  ಸಾರಥಿಯಾಗಿ ದುಡಿದನು. ಹೀಗೆ ಕೆಲವು ಸಂಗತಿಗಳಲ್ಲಿ ಅವನು ಧರ್ಮರಾಯನಿಗಿಂತ ಹೆಚ್ಚಿನ ದುಃಖ ಪಟ್ಟನು. 

ಧರ್ಮರಾಯನ ಕಷ್ಟ ದೊಡ್ಡದೋ ಅಥವಾ ನಳ ಮಹಾರಾಜನ ಕಷ್ಟ ದೊಡ್ಡದೋ ಎಂದು ಚರ್ಚೆ ಮಾಡಬಹುದು. ಕೆಲವರು ಅದು ದೊಡ್ಡದು ಎನ್ನಬಹುದು. ಮತ್ತೆ ಕೆಲವರು ಇದು ದೊಡ್ಡದು ಅನ್ನಬಹುದು. ಬೃಹದಶ್ವ ಮುನಿ ಬಂದು ನಳನ ವಿಷಯ ಹೇಳುವವರೆಗೆ ಧರ್ಮರಾಯನಿಗೆ ತನ್ನ ವ್ಯಥೆಯೇ ದೊಡ್ಡದಾಗಿತ್ತು. ಇವರಿಬ್ಬರೂ ತಾವು ಸ್ವತಃ ಜೂಜಾಡಿ ರಾಜ್ಯ ಕಳೆದುಕೊಂಡವರು. ಶ್ರೀರಾಮಚಂದ್ರನು ಯಾವ ತಪ್ಪನ್ನೂ ಮಾಡದೆ, ತನಗೆ ನ್ಯಾಯವಾಗಿ ಬರಬೇಕಾಗಿದ್ದ ರಾಜ್ಯ ತಪ್ಪಿ, ಕಾಡುಪಾಲಾಗಿ, ಹೆಂಡತಿಯನ್ನು ಕಳೆದುಕೊಂಡು, ಏನೆಲ್ಲಾ ಕಷ್ಟಗಳನ್ನು ಅನುಭವಿಸಿದನು! ಯಾವ ರೀತಿಯಲ್ಲಿ ಕಂಡರೂ ಶ್ರೀರಾಮನ ಕಷ್ಟಗಳು ಇನ್ನೂ ದೊಡ್ಡವಲ್ಲವೇ?

ದ್ರೌಪದಿಗೆ ಬಂದ ಕಷ್ಟಗಳೇನು ಕಡಿಮೆಯೇ? ತುಂಬಿದ ಸಭೆಯಲ್ಲಿ ಚಕ್ರವರ್ತಿಯ ಧರ್ಮಪತ್ನಿ ಮಹಾರಾಣಿಯಾದವಳಿಗೆ ವಸ್ತ್ರಹರಣದ ಪ್ರಯತ್ನವಾಯಿತು. ಅದಕ್ಕಿಂತ ಕಷ್ಟ ಬೇರೆ ಇದೆಯೇ? ಕುಮಾರವ್ಯಾಸ ಹೇಳುವುದಿದು:

ಜನನವೇ ಪಾಂಚಾಲ ರಾಯನ
ರಮನೆ ಮನೋವಲ್ಲಭರದಾರೆನೆ  
ಮನುಜಗಿನುಜರು ಗಣ್ಯವೇ ಗೀರ್ವಾಣರಿಂ ಮಿಗಿಲು 
ಎನಗೆ ಬಂದೆಡರೀ ವಿರಾಟನ 
ವನಿತೆಯರ ಮುಡಿಯ ಕಟ್ಟುವ 
ತನುವ ತಿರುಗುವ ಕಾಲನೊತ್ತುವ ಕೆಲಸದುತ್ಸಾಹ 

ಮಹಾರಾಜ ದ್ರುಪದನ ಪ್ರೀತಿಯ ಮಗಳು. ಬೆಂಕಿಯಲ್ಲಿ ಹುಟ್ಟಿದವಳು. ಅವಳ ಕಾಲದ ಅಪ್ರತಿಮ ಸುಂದರಿ. ದೇವತೆಗಳನ್ನು ಮೀರಿಸಿದ ಐವರು ಗಂಡಂದಿರು. ರಾಜಸೂಯ ಯಾಗದಲ್ಲಿ ಧರ್ಮರಾಯನ ಜೊತೆಗೆ ಕುಳಿತಾಗ ಬಾಗಿ ವಂದಿಸಿದ ರಾಜಕುಲಸ್ತೋಮ. ಹುಟ್ಟಿದಂದಿನಿಂದ ಕೈಗೊಂದು, ಕಾಲ್ಗೊಂದು ಸೇವಕರು. "ಯಾರಲ್ಲಿ?" ಎಂದರೆ ನಾಲ್ಕು ಜನ ಓಡಿ ಬರುತ್ತಿದ್ದರು. ಈಗ ವಿರಾಟ ಮಹಾರಾಜನ ಅಂತಃಪುರದಲ್ಲಿ ಯಾವ ಹೆಂಗಸು ಕರೆದರೂ ಓಡೋಡಿ ಹೋಗಬೇಕು. ಅವರ ತಲೆ ಬಾಚಿ ಹೆರಳು ಕಟ್ಟಬೇಕು. ಅವರ ಹಿಂದೆ ತಿರುಗಬೇಕು. ಅವರು ಕಾಲು ನೀಡಿದರೆ ಕಾಲೊತ್ತಬೇಕು! ಹುಟ್ಟಿದಂದಿನಿಂದ ಬಡತನವಿತ್ತಪ್ಪ. ಇದೇ ಜೀವನದ ಕೆಲಸ ಅಂದರೆ ಅದೊಂದು ತರಹ. ಇಲ್ಲಿ ಹಾಗಲ್ಲ. ಅವಳ ಕಷ್ಟವೇನು ಎಂದು ಅವಳೇ ಹೇಳಿಕೊಳ್ಳಬೇಕಾದ ಪರಿಸ್ಥಿತಿ! ಇದು ತನ್ನ ತಪ್ಪಿನಿಂದ ಬಂದದ್ದಲ್ಲ. ಈ ಕಷ್ಟಗಳು ಎದುರು ಬಂದು ನಿಲ್ಲುವವರೆಗೂ ಹೀಗಾಗಿದೆ ಅಥವಾ ಹೀಗಾಗಬಹುದು ಎಂದು ಗೊತ್ತೂ ಇಲ್ಲ. 

ಅದೆಲ್ಲಾ ಹೋಗಲಿ ಎಂದು ಬಿಟ್ಟರೂ, ಸಭೆಯಲ್ಲಿ ದುಃಶಾಸನನ ಕೋಟಲೆ. ದುರ್ಯೋಧನ, ಕರ್ಣ, ಶಕುನಿಯರ ಚುಚ್ಚುಮಾತು. ಕಾಡಿನಲ್ಲೂ ನೆಮ್ಮದಿಯಿಲ್ಲ. ಅಲ್ಲಿಗೂ ಬಂದ ಮೈದುನನಾದ ಸೈ೦ಧವ. ಮತ್ತೆ ವಿರಾಟನ ಮನೆಯಲ್ಲಿ ಕೀಚಕ. ದಿನವೆಲ್ಲ ಮೈಮುರಿದು ದುಡಿದೆ ಎಂದರೂ ನೆಮ್ಮದಿಯ ಬದುಕಿಲ್ಲ. 
*****

ಮಹಾರಾಣಿಯಾಗಿದ್ದವಳು ಸೈರಂಧ್ರಿ ಆದದ್ದು ದ್ರೌಪದಿ ಒಬ್ಬಳೇ ಏನು? ಹಿಂದೆ ಹೀಗಾಗಿದ್ದು ಉಂಟೋ? ಅವಳಂತೆ, ಅವಳಷ್ಟು ಕಷ್ಟ ಪಟ್ಟವರು ಮತ್ಯಾರಾದರೂ ಇದ್ದಾರೋ?

ದಮಯಂತಿಯೂ ದ್ರೌಪದಿಯಂತೆ ರಾಜಪುತ್ರಿ. ವಿದರ್ಭ ರಾಜನ ಮಗಳು. ಮಕ್ಕಳಿಲ್ಲದ ಭೀಮರಾಜ ದಮ ಎಂಬ ಋಷಿಯನ್ನು ಆಶ್ರಯಿಸಿ, ಅವರ ಸಲಹೆಯಂತೆ ಪುತ್ರಕಾಮೇಷ್ಟಿ ಯಾಗಮಾಡಿ ಪಡೆದ ಮಗಳಿಗೆ ದಮಯಂತಿ ಎಂದು ಹೆಸರಿಟ್ಟ. ಅವಳೂ ದ್ರೌಪದಿಯಂತೆ ವರ ಪ್ರಸಾದವೇ. ಅವಳೂ ಅವಳ ಕಾಲದ ಅಪ್ರತಿಮ ಸುಂದರಿ. ಗುಣದಲ್ಲಿ, ನಯ-ವಿನಯದಲ್ಲಿ ಎಲ್ಲ ಕಾಲದ ಶ್ರೇಷ್ಠರ ಸಾಲಿನಲ್ಲಿ ಎದ್ದು ಕಾಣುವವಳು. ದೇವತೆಗಳೂ ಅವಳನ್ನು ವಿವಾಹವಾಗಲು ಬಯಸಿ ಸ್ವಯಂವರಕ್ಕೆ ಬಂದಿದ್ದರು. ದ್ರೌಪದಿಯಂತೆಯೇ ಅವಳ ಬಾಲ್ಯ ಕಳೆದಿತ್ತು. ಗಂಡನಾದವನು ನಳ ಚಕ್ರವರ್ತಿ. ದ್ರೌಪದಿಯಂತೆಯೇ ಸುತ್ತ ಮುತ್ತ ನೌಕರ-ಚಾಕರರು. ಜೂಜಿನಲ್ಲಿ ರಾಜ್ಯ ಕಳೆದುಕೊಂಡ ಗಂಡನ ಜೊತೆ ಕಾಡು ಸೇರಿದಳು. ಹಕ್ಕಿಗಳನ್ನು ಹಿಡಿಯಲು ಗಂಡ ತನ್ನ ಬಟ್ಟೆಯನ್ನೇ ಬಲೆಯಾಗಿ ಎಸೆದ. ಆ ಹಕ್ಕಿಗಳೋ ಆ ಬಟ್ಟೆಯನ್ನೇ ಎತ್ತಿಕೊಂಡು ಹಾರಿಹೋದವು. ತಾನು ಉಟ್ಟ ಸೀರೆಯನ್ನು ಹರಿದು ಅರ್ಧ ಗಂಡನಿಗೆ ಕೊಟ್ಟಳು. (ದ್ರೌಪದಿಯಂತೆ ಮತ್ತೊಬ್ಬ ವಸ್ತ್ರಹರಣ ಮಾಡಲಿಲ್ಲ ಅನ್ನುವುದು ಮಾತ್ರ ವ್ಯತ್ಯಾಸ.) ಗಂಡ ಮಧ್ಯರಾತ್ರಿಯಲ್ಲಿ ಅವಳನ್ನು ಬಿಟ್ಟು ಹೊರಟುಹೋದ. (ದ್ರೌಪದಿಗೆ ಈ ಕಷ್ಟ ಇರಲಿಲ್ಲ). 

ಕಾಡಿನಲ್ಲಿ ಒಂದು ಹೆಬ್ಬಾವು ಅವಳನ್ನು ನುಂಗಲು ಪ್ರಾರಂಭಿಸಿತು. ಅವಳ ಕೂಗು ಕೇಳಿ ಬಂದ ಬೇಡನೊಬ್ಬ ಅವಳನ್ನು ಉಳಿಸಿದ. ಆದರೆ ಅವಳನ್ನು ಕಾಡಲು ತಯಾರಾದ. ಧೈರ್ಯದಿಂದ ಅವನನ್ನು ಹೆದರಿಸಿ ಓಡಿಸಿದಳು. ಯಾರೋ ವ್ಯಾಪಾರಿಗಳ ಗುಂಪಿನ ಜೊತೆ ಪ್ರಯಾಣ ಮುಂದುವರೆಸಿದಳು. ಕಾಡಾನೆಗಳು ಬಂದು ಅವರನ್ನೆಲ್ಲಾ ಮುತ್ತಿದ್ದವು. ಹೇಗೋ ಪಾರಾಗಿ ಚೈದ್ಯ ರಾಜನ ಅರಮನೆ ತಲುಪಿದಳು. ಅಲ್ಲಿಯಾದರೋ,  ತನ್ನ ತಾಯಿಯ ತಂಗಿಯ ಮನೆ ಎಂದು ಗೊತ್ತಿಲ್ಲ. ಆ ಚಿಕ್ಕಮ್ಮನು ದಮಯಂತಿಯನ್ನು ತನ್ನ ಮಗಳ ಸೈರ೦ಧ್ರಿಯನ್ನಾಗಿ ನೇಮಿಸಿದಳು. ಮುಂದೆ ಅನೇಕ ಬೆಳವಣಿಗೆಗಳು ನಡೆದು, ತಂದೆಯ ಮನೆ ಸೇರಿ, ಇನ್ನೊಂದು ಸ್ವಯಂವರದ ನೆಪ ಹೂಡಿ, ಕಡೆಗೆ ಗಂಡನ ಜೊತೆ ಸೇರಿದಳು. ನಳನು ಪುಷ್ಕರನೊಡನೆ ಮತ್ತೆ ಜೂಜಿಗೆ ಕುಳಿತಾಗ ಪುಷ್ಕರನು ಕೇಳಿದ್ದೇನು? ನಳನು ಗೆದ್ದರೆ ರಾಜ್ಯ ನಳನಿಗೆ. ಪುಷ್ಕರನು ಗೆದ್ದರೆ? ನಳನ ಬಳಿ ಪಂಥವಿಡಲು ರಾಜ್ಯವಿಲ್ಲ. ದಮಯಂತಿಯನ್ನು ನಳ ಪುಷ್ಕರನಿಗೆ ಒಪ್ಪಿಸಬೇಕು! ನಳನು ಪುಣ್ಯಕ್ಕೆ ಗೆದ್ದ. ನಳನು ಮತ್ತೆ ರಾಜ್ಯ-ಕೋಶಗಳನ್ನು ಪಡೆದ ನಂತರ ದಮಯಂತಿ ಮತ್ತೆ ರಾಣಿಯಾಗಿ ಬದುಕಿದಳು. 

ದ್ರೌಪದಿಗಿಂತ ಎಷ್ಟೋ ಮುಂಚೆ, ಅವಳಂತೆ ಕಷ್ಟಪಟ್ಟು, ಕಾಡುಪಾಲಾಗಿ, ಸೈರ೦ಧ್ರಿಯಾಗಿ, ಅದೇ ರೀತಿ ಪಾಡುಪಟ್ಟವಳು ದಮಯಂತಿ. 
*****

ಕರ್ಣನು ಒಮ್ಮೆ ತನ್ನ ಹೆತ್ತ ತಾಯಿ ಆಗತಾನೇ ಹುಟ್ಟಿದ ತನ್ನನ್ನು ನದಿಯಲ್ಲಿ ತೇಲಿಬಿಟ್ಟು, ತಾನು ಸೂತಪುತ್ರನೆಂದು ಬದುಕಬೇಕಾಯಿತು ಎಂದು ಕೃಷ್ಣನ ಬಳಿ ಹೇಳಿಕೊಂಡು ಕೊರಗುತ್ತಾನೆ. ಕೃಷ್ಣ ಹೇಳುತ್ತಾನೆ: "ನಿನ್ನದು ಅಷ್ಟೇ ಕಥೆ. ನನ್ನನ್ನು ನೋಡು. ನಾನು ಹುಟ್ಟಿದ್ದೇ ಸೆರೆಮನೆಯಲ್ಲಿ. ಹುಟ್ಟುವ ಮೊದಲೇ ನನ್ನನ್ನು ಕೊಲ್ಲಲು ಸೋದರಮಾವನೇ ಹೊರಗಡೆ ಕಾದಿದ್ದ. ಹುಟ್ಟಿದ ತಕ್ಷಣ ನನ್ನ ತಂದೆಯೇ ನನ್ನನ್ನು ಬೇರೆಲ್ಲೋ ಕೊಂಡೊಯ್ದ. ಮಹಾರಾಜ ಉಗ್ರಸೇನನ ಮೊಮ್ಮಗನಾದ ನಾನು ಹಸುಕಾಯುವ ಗೊಲ್ಲನಾಗಿ ಬೆಳೆದೆ. ಹಾಲು ಕುಡಿಯುವ ಕಂದನಿಗೆ ಹಾಲಿನಲ್ಲೇ ವಿಷವುಣಿಸಲು ಒಬ್ಬಳು ರಕ್ಕಸಿ ಬಂದಳು. ಮಗುವಾಗಿದ್ದಾಗ ನನ್ನನ್ನು ಮುಗಿಸಲು ಸರತಿಯಮೇಲೆ ರಕ್ಕಸರ ಗುಂಪೇ ಬಂತು. ನಂತರ ಜರಾಸಂಧನ ಕಾಟ. ಯುದ್ಧಗಳ ಮೇಲೆ ಯುದ್ಧ. ಗೋಕುಲದಿಂದ ಮಧುರೆಗೆ. ಮಧುರೆಯಿಂದ ದ್ವಾರಕೆಗೆ. ನಿನಗಾದರೆ ಒಬ್ಬರು ಸಾಕುವ ದಂಪತಿಗಳು ಸಿಕ್ಕಿದರು. ನಂತರ ಅಂಗರಾಜನಾದೆ. ಈಗ ಹೇಳು. ನಿನ್ನ ಕಷ್ಟ ಹೆಚ್ಚೋ, ನನ್ನ ಕಷ್ಟ ಹೆಚ್ಚೋ?". 

ಕರ್ಣ ಏನು ಹೇಳಬೇಕು?
*****

ಒಳ್ಳೆಯ ಆರೋಗ್ಯದಲ್ಲಿದ್ದ ಸ್ನೇಹಿತರೊಬ್ಬರು ಕರೋನ ಸಮಯದಲ್ಲಿ ವಿಚಿತ್ರ ಖಾಯಿಲೆಗೆ ತುತ್ತಾದರು. ಎರಡು ತಿಂಗಳು ಆಸ್ಪತ್ರೆ ವಾಸದ ನಂತರ ಇಪ್ಪತ್ತೈದು ಕೆಜಿ ತೂಕ ಕಳೆದುಕೊಂಡು ಕುಂಬಳಕಾಯಿಯಂತೆ ಇದ್ದವರು ನುಗ್ಗೆಕಾಯಿಯಂತೆ ಆದರು. ನಡೆದಾಡಲೂ ಆಗದು. ಭೋಕ್ತಾಪುರುಷ ಆಗಿದ್ದವರಿಗೆ ಎರಡು ಚಮಚ ಆಹಾರ ತಿನ್ನಲೂ ಕಷ್ಟ. ಆಸ್ಪತ್ರೆಯಿಂದ ವೈದ್ಯರು ಅವರನ್ನು ಪುನರ್ವಸತಿ ಕೇಂದ್ರಕ್ಕೆ (ರಿಹ್ಯಾಬಿಲಿಟೇಷನ್ ಸೆಂಟರ್) ಕಳಿಸಿದರು. 

ಇನ್ನೊಬ್ಬ ಸ್ನೇಹಿತರು ಅವರನ್ನು ನೋಡಲು ಪುನರ್ವಸತಿ ಕೇಂದ್ರಕ್ಕೆ ಹೋದರು. ಅವರ ಪರಿಸ್ಥಿತಿ ನೋಡಿ ಇವರಿಗೆ ಕಣ್ಣೀರು. "ಇದೇನು? ಹೀಗಾಯಿತು!" ಎಂದರು. ಅವರು ಹೇಳಿದರು: "ಆಂಬ್ಯುಲೆನ್ಸ್ ವಾಹನದಲ್ಲಿ ಮಲಗಿ ಆಸ್ಪತ್ರೆಯಿಂದ ಇಲ್ಲಿಗೆ ಬರುವ ದಾರಿಯಲ್ಲಿ ನಾನೂ ಹಾಗೆ ಯೋಚಿಸುತ್ತಿದ್ದೆ. ನನಗೇ ಏಕೆ ಹೀಗಾಯಿತು? ಎಂದು. ಇಲ್ಲಿ ಬಂದ ಮೇಲೆ, ಇಲ್ಲಿರುವ ಇತರರನ್ನು ನೋಡಿದ ಮೇಲೆ, ನಾನೇ ಭಾಗ್ಯವಂತ ಅನ್ನಿಸುತ್ತಿದೆ. ಸುತ್ತ ನೋಡಿ. ಮಧುಮೇಹದಿಂದ ಕಾಲು ಕತ್ತರಿಸಿ ಕಳೆದುಕೊಂಡಿರುವವರು ಕೆಲವರು. ಅಪಘಾತದಲ್ಲಿ ಕೈ ಹೋದವರು ಕೆಲವರು. ಬೆನ್ನು ಮೂಳೆ ಮುರಿದಿರುವವರು ಇಲ್ಲುಂಟು. ಹೀಗೆ ನಾನಾ ರೀತಿ ಕಷ್ಟಪಡುತ್ತಿರುವವರು ಅನೇಕರು. ನಾನಾದರೋ, ಕಷ್ಟವಾದರೂ ನಿಧಾನವಾಗಿ ಓಡಾಡಬಲ್ಲೆ. ಸ್ವಲ್ಪವಾದರೂ ಮೊದಲಿನಂತೆ ಆಗಬಲ್ಲೆ ಅನ್ನುವ ಅವಕಾಶ ಇದೆ. ಇಲ್ಲಿರುವ ಕೆಲವರಿಗೆ ಅದೂ ಕಷ್ಟ ಅನಿಸುವುದಿಲ್ಲವೇ?"

ಇವರು ಸುತ್ತ ಕಣ್ಣಾಡಿಸಿದರು.  ಅವರು ಹೇಳಿದುದರಲ್ಲಿ ಸ್ವಲ್ಪವೂ ಉತ್ಪ್ರೇಕ್ಷೆ ಇರಲಿಲ್ಲ. 

***** 

ಕೇವಲ ನಮ್ಮ ಕಷ್ಟಗಳನ್ನೇ ನೋಡಿಕೊಳ್ಳುತ್ತಾ, ನಮ್ಮ ಹಣೆಬರಹ ಎಂದು ಪರಿತಪಿಸುತ್ತಾ, "ನನಗೇ ಏಕೆ ಹೀಗಾಗುತ್ತದೆ?" ಎಂದು ಹೇಳಿಕೊಳ್ಳುತ್ತಾ ಇದ್ದರೆ ಕಷ್ಟಗಳ ತೀವ್ರತೆ ಇನ್ನೂ ಹೆಚ್ಚಾಗುವುದು. (ಅದು ಹೇಗೆ ಸಾಧ್ಯ ಎಂದು ಕೇಳಬಹುದು. ಕಷ್ಟಗಳು ಹೆಚ್ಚಾಗುವುದಿಲ್ಲ. ಇರುವ ಕಷ್ಟಗಳ ಅನುಭವ ಮಾನಸಿಕವಾಗಿ ಮತ್ತಷ್ಟು ಹೆಚ್ಚಾಗುತ್ತದೆ.) ನಮಗಿಂತಲೂ ಹೆಚ್ಚು ಕಷ್ಟ ಪಟ್ಟವರು, ಪಡುತ್ತಿರುವವರು ಅನೇಕರಿದ್ದಾರೆ. ಇದು ಕೇವಲ ನಮ್ಮ ಕಥೆಗಳಲ್ಲ. ಅಥವಾ ಕೇವಲ ಇಂದಿನ ಕಥೆಯಲ್ಲ!

Thursday, October 30, 2025

ಪರಸ್ಪರ ಗುರು-ಶಿಷ್ಯರು


"ಗುರು-ಶಿಷ್ಯರ ಸಂಬಂಧ" ಅನ್ನುವ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ (ಆಗಸ್ಟ್ 22, 2025) ಗುರು-ಶಿಷ್ಯ ಸಂಬಂಧದ ಅನೇಕ ರೂಪಗಳಲ್ಲಿ ಕೆಲವು ಪದರಗಳನ್ನು ನೋಡುವ ಪ್ರಯತ್ನ ಮಾಡಿದ್ದೆವು. "ಅದೊಂದು ವ್ಯವಹಾರದಂತಲ್ಲದ ಕೊಡು-ಕೊಳ್ಳುವ ವಿನಿಮಯ. ಇದರಲ್ಲಿ ಒಬ್ಬರು ಇನ್ನೊಬ್ಬರಿಂದ ಕಲಿಯುತ್ತಾರೆ. ದೊಡ್ಡವನು-ಚಿಕ್ಕವನು ಎನ್ನುವ ಭೇದವಿಲ್ಲ. ಜ್ಞಾನದ ವಿಕಾಸ ಹೇಗಾದರೂ ಅದು ಸೋಲಲ್ಲ. ಆದ್ದರಿಂದ ಗುರು-ಶಿಷ್ಯ ಇಬ್ಬರೂ ಬೆಳೆಯಬಹುದು. ಇದು ಒಮ್ಮುಖದ ಕಲಿಕೆ ಅಲ್ಲ" ಮುಂತಾಗಿ ಚರ್ಚಿಸಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಜ್ಞಾನಾರ್ಜನೆಗಾಗಿ ಗುರುವಿನ ಬಳಿ ಬಂದ ಶಿಷ್ಯ, ಮತ್ತು ಅವರ ಗುರು-ಶಿಷ್ಯ ಸಂಬಂಧದಲ್ಲಿ ಕೂಡ ಇಬ್ಬರೂ ಕಲಿಯುವ ಅವಕಾಶಗಳು ಹೇರಳವಾಗಿರುತ್ತವೆ. ವಿಶಾಲ ಮನಸ್ಸಿನ ಹಿರಿಯ ಗುರುಗಳೂ ಸಹ ಕೆಲವು ಸಂದರ್ಭಗಳಲ್ಲಿ ಅನೇಕ ವರುಷಗಳ ಅಧ್ಯಯನದಲ್ಲಿ ತಮಗೆ ಹೊಳೆಯದಿದ್ದ ಸೂಕ್ಷ್ಮಗಳನ್ನು ತಮ್ಮ ಶಿಷ್ಯರು ಮೊದಲ ನೋಟದಲ್ಲೇ ಕಂಡುದು, ಮತ್ತು ಅದರಿಂದ ತಾವು ಕಲಿತ ಘಟ್ಟಗಳನ್ನು ನೆನಪು ಮಾಡಿಕೊಳ್ಳುವುದನ್ನು ನಾವು ಕಂಡಿದ್ದೇವೆ. ಹೀಗೆ ಒಪ್ಪಿಕೊಳ್ಳುವ ಮನೋಧರ್ಮ ಅನೇಕ ಗುರುಗಳಿಗೆ ಇರುವುದಿಲ್ಲ. ಅಂತಿದ್ದರೂ ಹತ್ತಾರು ಜನ ಸೇರಿರುವ ಸಂದರ್ಭಗಳಲ್ಲಿಯೂ ಯಾವುದೇ ಸಂಕೋಚವಿಲ್ಲದೆ ಹೀಗೆ ಗುರುತಿಸಿ ಕೃತಜ್ಞತೆ ವ್ಯಕ್ತಪಡಿಸುವ ಗುರುಗಳೂ ಅಲ್ಲಲ್ಲಿ ಕಾಣಸಿಗುತ್ತಾರೆ. 

ಜೀವನದ ಕೆಲವು ಘಟ್ಟಗಳಲ್ಲಿ ಹೀಗೆ ಒಬ್ಬನು ಗುರು ಮತ್ತು ಮತ್ತ್ತೊಬ್ಬ ಶಿಷ್ಯ ಅಲ್ಲದಿದ್ದರೂ, ಇಬ್ಬರೂ ಸಮಾಜದಲ್ಲಿ ತಮ್ಮ ಜ್ಞಾನಾರ್ಜನೆಯಿಂದ ತಮ್ಮದೇ ಆದ ಸ್ಥಾನ ಗಳಿಸಿಕೊಂಡಿದ್ದರೂ, ಪರಸ್ಪರರಿಂದ ಕಲಿಯುವುದೂ ಉಂಟು. ಇಂತಹ ಪ್ರಸಂಗಕ್ಕೆ ಒಂದು ಶ್ರೇಷ್ಠ ಉದಾಹರಣೆ ನಳಚರಿತ್ರೆಯಲ್ಲಿ ಕಾಣಬಹುದು. ಕನ್ನಡದ ದಾಸಶ್ರೇಷ್ಠರೂ, ಕವಿವರೇಣ್ಯರೂ ಆದ ಭಕ್ತ ಕನಕದಾಸರ "ನಳ ಚರಿತ್ರೆ" ಕೃತಿಯಲ್ಲಿ ಬರುವ ಬಾಹುಕನ ರೂಪದ ನಳ ಮಹಾರಾಜ ಮತ್ತು ಋತುಪರ್ಣ ಮಹಾರಾಜ ಪರಸ್ಪರ ಅಶ್ವಹೃದಯ ಮತ್ತು ಅಕ್ಷಹೃದಯ ವಿದ್ಯೆಗಳನ್ನು ಹೀಗೆ ಒಬ್ಬರಿಂದ ಇನ್ನೊಬ್ಬರು ಕಲಿತದ್ದು ಚೆನ್ನಾಗಿ ನಿರೂಪಿತವಾಗಿದೆ. 
*****

ದುರ್ಯೋಧನನ ಸಂಗಡ ಶಕುನಿಯ ಮೂಲಕವಾಗಿ ಕಪಟ ದ್ಯೂತದಲ್ಲಿ ರಾಜ್ಯ-ಕೋಶಾದಿಗಳನ್ನು ಕಳೆದುಕೊಂಡು ಧರ್ಮರಾಯನು ದ್ರೌಪದಿ ಮತ್ತು ತಮ್ಮಂದಿರೊಡನೆ ಕಾಡಿನಲ್ಲಿ ವಾಸವಾಗಿರುತ್ತಾನೆ. ಅರ್ಜುನನು ದಿವ್ಯಾಸ್ತ್ರಗಳ ಸಂಪಾದನೆಗಾಗಿ ಹೋಗಿರುವಾಗ ಧರ್ಮಜನು ಬಹಳ ಬೇಸರದಿಂದಿರುತ್ತಾನೆ. ಆಗ ಬೃಹದಶ್ವ ಎಂಬ ಒಬ್ಬ ಮುನಿ ಅಲ್ಲಿಗೆ ಬಂದು ಧರ್ಮರಾಯನಿಗೆ ಸಮಾಧಾನ ಮಾಡುವ ಸಲುವಾಗಿ ನಳ ಮಹಾರಾಜನ ಕಥೆ ಹೇಳುತ್ತಾನೆ. "ಕಪಟ ಜೂಜಿನ ಕಾರಣ ರಾಜ್ಯ-ಕೋಶಗಳನ್ನು ಕಳೆದುಕೊಂಡವನು ನೀನು ಮಾತ್ರ ಅಲ್ಲ. ನಳ ಮಹಾರಾಜನೂ ಹೀಗೆ ರಾಜ್ಯ ಕಳೆದುಕೊಂಡು, ಹೆಂಡತಿಯನ್ನೂ ಕಳೆದುಕೊಂಡು, ಬಹಳ ವ್ಯಥೆಪಟ್ಟು ಕಡೆಗೆ ಎಲ್ಲವನ್ನೂ ಮತ್ತೆ ಸಂಪಾದಿಸಿದನು. ನೀನೂ ಕೂಡ ಹೀಗೆ ಎಲ್ಲವನ್ನೂ ಮತ್ತೆ ಪಡಯುತ್ತೀಯೆ. ವ್ಯಥೆ ಪಡಬೇಡ" ಎಂದು ನಳನ ಕಥೆ ಹೇಳುತ್ತಾರೆ. 

ಮಹಾಭಾರತದ ಅರಣ್ಯಪರ್ವದಲ್ಲಿ ಇಪ್ಪತ್ತೆಂಟು ಅಧ್ಯಾಯಗಳಲ್ಲಿ ವಿಸ್ತಾರವಾಗಿ ಹೇಳಿರುವ ನಳನ ವೃತ್ತಾಂತವನ್ನು ಶ್ರೀ ಕನಕದಾಸರು ತಮ್ಮ "ನಳಚರಿತ್ರೆ" ಗ್ರಂಥದಲ್ಲಿ ಭಾಮಿನೀ ಷಟ್ಪದಿಯಲ್ಲಿ ಸೊಗಸಾದ ಕನ್ನಡದಲ್ಲಿ ನಮಗೆ ಕೊಟ್ಟಿದ್ದಾರೆ. ಮಹಾಭಾರತದಲ್ಲಿನ ಮೂಲ ಕಥೆಗೆ ಕೆಲವು ಸಣ್ಣ-ಪುಟ್ಟ ಮಾರ್ಪಾಡುಗಳನ್ನು ಮಾಡಿಕೊಂಡು ಒಟ್ಟಿನ ಹಂದರವನ್ನು ಇನ್ನೂ ಆಕರ್ಷಕವಾಗಿ ಮಾಡಿದ್ದಾರೆ. 

ನಳಮಹಾರಾಜನ ಕಥೆ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವುದೇ ಆಗಿದೆ. ನಿಷಧ ನಗರದ ರಾಜ ಶೂರಸೇನನ ಮಗ ನಳ ಚಕ್ರವರ್ತಿ. ವಿದರ್ಭದ ಅರಸು ಭೀಮರಾಜನ ಮಗಳು ದಮಯಂತಿ. ದಮಯಂತಿಯ ರೂಪ-ಗುಣಗಳನ್ನು ಕೇಳಿದ ನಳನೂ, ನಳನ ರೂಪ-ಗುಣಗಳನ್ನು ತಿಳಿದ ದಮಯಂತಿಯೂ ಪರಸ್ಪರ ಅನುರಕ್ತರಾಗುತ್ತಾರೆ. ಹಂಸ ಪಕ್ಷಿಯ ಮೂಲಕ ಸಂಪರ್ಕ ಏರ್ಪಟ್ಟು, ದೇವತೆಗಳ ಅನೇಕ ಪರೀಕ್ಷೆಗಳ ಮಧ್ಯೆಯೂ ನಳ-ದಮಯಂತಿ ವಿವಾಹ ಆಗುತ್ತಾರೆ. ಕಲಿಯ ಕಾರಣ ನಳನು ತಮ್ಮ ಪುಷ್ಕರನೊಡನೆ ಜೂಜಿನಲ್ಲಿ ಎಲ್ಲವನ್ನೂ ಕಳೆದುಕೊಂಡು ಹೆಂಡತಿಯ ಜೊತೆ ಕಾಡುಪಾಲಾಗುತ್ತಾನೆ. ಕಾಡಿನಲ್ಲಿ ನಳನ ಬಟ್ಟೆಗಳನ್ನು ಜಗನ್ಮೋಹನ ಪಕ್ಷಿಗಳು ಅಪಹರಿಸುತ್ತವೆ. ದಮಯಂತಿ ತನ್ನ ಸೀರೆಯನ್ನು ಹರಿದು ಅರ್ಧವನ್ನು ನಳನಿಗೆ ಉಡಲು ಕೊಡುತ್ತಾಳೆ. ಮಧ್ಯರಾತ್ರಿ ಅವಳು ಮಲಗಿರುವಾಗ ನಳನು ಅವಳನ್ನು ತೊರೆದು ಬೇರೆ ಹೋಗುತ್ತಾನೆ. 

ಅನೇಕ ತೊಂದರೆಗಳ ಮೂಲಕ ಹಾದು ದಮಯಂತಿ ಕಡೆಗೆ ಚಿಕ್ಕಪ್ಪ ಚೈದ್ಯರಾಜ ಸುಬಾಹುವಿನ ಅರಮನೆ ಸೇರುತ್ತಾಳೆ. ಸುಬಾಹುವಿನ ಹೆಂಡತಿ ಮಹಾರಾಣಿ ಸುಮತಿ ದಮಯಂತಿಯ ತಾಯಿಯ ತಂಗಿ. ಇದು ಗೊತ್ತಿಲ್ಲದೇ ಕಾಲ ಕಳೆಯುತ್ತದೆ. ಈ ಸಂಗತಿ ತಿಳಿದ ಮೇಲೆ ಮಹಾರಾಣಿ ಸುಮತಿ ಮತ್ತು ಸುಬಾಹು ದಮಯಂತಿಯನ್ನು ತಮ್ಮ "ಮಗಳು ಸುನಂದೆಗೆ ನೀನು ಸಮ ಮಗಳೇ. ಎಷ್ಟು ಕಷಪಟ್ಟೆ ನೀನು" ಎಂದು ಪ್ರೀತಿ ತುಂಬಿದ ಕರುಣೆಯಿಂದ ಸಂಬೋಧಿಸುತ್ತಾರೆ. ಅಲ್ಲಿಂದ ದಮಯಂತಿ ಅಪ್ಪನ ಮನೆ ತಲುಪುತ್ತಾಳೆ. ನಳನು ಕಾಡಿನಲ್ಲಿ ಅಲೆಯುವಾಗ ಕಾಳ್ಗಿಚ್ಚಿನಲ್ಲಿ ಸಿಕ್ಕಿಕೊಂಡಿದ್ದ ಕಾರ್ಕೋಟಕ ಎಂಬ ನಾಗರಾಜನನ್ನು ಕಾಪಾಡುತ್ತಾನೆ. ಕಾರ್ಕೋಟಕನೋ ನಳನನ್ನು ಕಚ್ಚಿಬಿಡುತ್ತಾನೆ. ಸುರಸುಂದರನಾದ ನಳನು ಆ ವಿಷದ ಪರಿಣಾಮವಾಗಿ ವಿಕಾರ ರೂಪ ಪಡೆದುಬಿಡುತ್ತಾನೆ. ಕನಕದಾಸರು ನಳನ ಕುರೂಪವನ್ನು ಹೀಗೆ ವರ್ಣಿಸುತ್ತಾರೆ:

ದೊಡ್ಡ ಹೊಟ್ಟೆಯ ಗೂನು ಬೆನ್ನಿನ 
ಅಡ್ಡ ಮೋರೆಯ ಗಂಟು ಮೂಗಿನ 
ದೊಡ್ಡ ಕೈಕಾಲುಗಳ ಉದುರಿದ ರೋಮ ಮೀಸೆಗಳ 

ಜಡ್ಡು ದೇಹದ ಗುಜ್ಜುಗೊರಲಿನ 
ಗಿಡ್ಡ ರೂಪಿನ ಹರಕುಗಡ್ಡದ 
ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ 

ಹೀಗೆ ಬದಲಾದ ನಳನು ಬಾಹುಕ ಎನ್ನುವ ಹೆಸರಿನಿಂದ ಅಯೋಧ್ಯೆಯ ರಾಜನಾದ ಋತುಪರ್ಣನ ಬಳಿ ಸಾರಥಿಯ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಗಂಡನನ್ನು ಹುಡುಕಿಸಿ ಮತ್ತೆ ಅವನನ್ನು ಸೇರಲು ದಮಯಂತಿಯು ತನಗೆ ಇನ್ನೊಂದು ಸ್ವಯಂವರ ನಡೆಯುತ್ತಿದೆ ಎನ್ನುವ ಸುದ್ದಿ ಹಬ್ಬಿಸಿ ಅದು ಋತುಪರ್ಣ ಮಹಾರಾಜನಿಗೆ ತಲುಪುವಂತೆ ಮಾಡುತ್ತಾಳೆ. 

*****

ದಮಯಂತಿಯ ಮತ್ತೊಂದು ಸ್ವಯಂವರದ ಸುದ್ದಿ ಕೇಳಿದ ಋತುಪರ್ಣನು ಸಮಯಕ್ಕೆ ಸರಿಯಾಗಿ ವಿದರ್ಭ ನಗರ ತಲುಪಲು ರಥವನ್ನು ತಯಾರು ಮಾಡಲು ಸಾರಥಿ ಬಾಹುಕನಿಗೆ ಹೇಳುತ್ತಾನೆ. ಇಂತಹ ಸುದ್ದಿ ಕೇಳಿದ ದುಃಖದಲ್ಲೂ ಬಾಹುಕನ ರೂಪದ ನಳನು ರಥವನ್ನು ಸಿದ್ಧಪಡಿಸುತ್ತಾನೆ. ಪ್ರಯಾಣದ ಕಾಲದಲ್ಲಿ ಗಾಳಿಯಿಂದ ಋತುಪರ್ಣನ ಮೇಲುಹೊದಿಕೆ ಹಾರಿಹೋಗುತ್ತದೆ. ರಥ ನಿಲ್ಲಿಸಿ ಉತ್ತರೀಯವನ್ನು ತರುವಂತೆ ಋತುಪರ್ಣ ಬಾಹುಕನಿಗೆ ಹೇಳುತ್ತಾನೆ. ಬಾಹುಕನು "ಮಹಾರಾಜ, ಈ ಕುದುರೆಗಳು ಸಾಮಾನ್ಯವಲ್ಲ. ನಾಗಾಲೋಟದಲ್ಲಿ ಓಡುತ್ತಿವೆ. ನಿಮ್ಮ ಉತ್ತರೀಯ ಬಿದ್ದ ಕಡೆಯಿಂದ ಎಷ್ಟೋ ಯೋಜನ ದಾಟಿ ಬಂದಿದ್ದೇವೆ. ಅದನ್ನು ಮರೆತುಬಿಡಿ" ಅನ್ನುತ್ತಾನೆ. ಋತುಪರ್ಣನಿಗೆ ಆಶ್ಚರ್ಯ. 

ಮುಂದೊಂದು ಕಡೆ ವಿಶ್ರಾಂತಿಗೆ ನಿಲ್ಲಿಸಿದಾಗ ಅಲ್ಲಿ ಕಂಡ ತಾರೆಯ ಮರದಲ್ಲಿರುವ ಎಲೆಗಳು ಮತ್ತು ಹಣ್ಣುಗಳ ನಿಖರವಾದ ಸಂಖ್ಯೆಯನ್ನು ಋತುಪರ್ಣ ಬಾಹುಕನಿಗೆ ಹೇಳುತ್ತಾನೆ. ಈಗ ಬಾಹುಕನಿಗೆ ಆಶ್ಚರ್ಯ. ಮರದ ಬಳಿ ಹೋಗಿ ಎಣಿಸಿದರೆ ಋತುಪರ್ಣನು ಹೇಳಿದ ಸಂಖ್ಯೆ ಸರಿಯಾಗಿದೆ. "ಈ ವಿದ್ಯೆ ತನಗೆ ಗೊತ್ತಾದರೆ ತಮ್ಮ ಪುಷ್ಕರನನ್ನು ಮತ್ತೆ ಜೂಜಿನಲ್ಲಿ ಸೋಲಿಸಿ ರಾಜ್ಯ ಹಿಂದೆ ಪಡೆಯಬಹುದು" ಎಂದು ನಳನು ಚಿಂತಿಸುತ್ತಾನೆ.

ಋತುಪರ್ಣನಿಗೆ ಕುದುರೆಗಳ ಬಗ್ಗೆ ತಿಳಿಯುವ ಹಂಬಲ. ಆ ವಿದ್ಯೆಗೆ "ಅಶ್ವ ಹೃದಯ" ಎಂದು ಹೆಸರು. ನಳನಿಗೆ ಋತುಪರ್ಣನ "ಅಕ್ಷ ಹೃದಯ" ವಿದ್ಯೆ ಕಲಿಯುವ ಆಸೆ. ಇಬ್ಬರೂ ಪರಸ್ಪರ ಒಪ್ಪಿಕೊಂಡು ಒಂದು ವಿದ್ಯೆ ಕಲಿಯಲು ಇನ್ನೊಬ್ಬನ ಶಿಷ್ಯರಾಗುತ್ತಾರೆ. ಕಲಿಸಿಕೊಡಲು ಗುರುವಾಗುತ್ತಾರೆ. ಹೀಗೆ ಪರಸ್ಪರ ಗುರು-ಶಿಷ್ಯ ಆಗಿ ವಿದ್ಯೆಗಳ ವಿನಿಮಯ ಮಾಡಿಕೊಳ್ಳುತ್ತಾರೆ. 

ಮುಂದೆ ಕಲಿಯು ನಳನನ್ನು ಕಾಡುವುದನ್ನು ನಿಲ್ಲಿಸಿ, ಜಗನ್ಮೋಹನ ಪಕ್ಷಿಗಳು ನಳನ ಅಪಹರಿಸಿದ ಬಟ್ಟೆಯನ್ನು ತಂದುಕೊಡುತ್ತವೆ. ಅದನ್ನು ಉಟ್ಟ ನಂತರ ಬಾಹುಕನಿಗೆ ಕಾರ್ಕೋಟಕನು ಹೇಳಿದ್ದಂತೆ ಕುರೂಪ ಹೋಗಿ ಮತ್ತೆ ನಳನ ಸುರಸುಂದರ ರೂಪ ಬರುತ್ತದೆ. ನಳ-ದಮಯಂತಿ ಒಂದಾಗುತ್ತಾರೆ. ಅಕ್ಷಹೃದಯದ ಬಲದಿಂದ ನಳನು ಪುಷ್ಕರನನ್ನು ಸೋಲಿಸಿ ರಾಜ್ಯ-ಕೋಶಗಳನ್ನು ಹಿಂದೆ ಪಡೆಯುತ್ತಾನೆ. ನಳಚರಿತ್ರೆ ಹೀಗೆ ಮುಕ್ತಾಯವಾಗುತ್ತದೆ. 

*****

ಅಶ್ವಹೃದಯದ ಪರಿಣಾಮವಾಗಿ ಕುದುರೆಗಳು ಹೇಗೆ ಓಡಿದುವೆಂದು ಶ್ರೀ ಕನಕದಾಸರು ಹೇಳುವ ರೀತಿ:

ಕರದ ವಾಘೆಯ ಸಡಿಲ ಬಿಡೆ ಮುಂ
ಬರಿದು ಚಿಮ್ಮಿದವಡಿಗಡಿಗೆ ರಥ
ತುರಗ ಹಾಯ್ದುದು ತೇರು ಮುಂದಕೆ ಪವನ ವೇಗದಲಿ 


ಅಕ್ಷಹೃದಯದ ಕಾರಣ ತಾರೆಯ ಮರದ ಎಲೆ-ಹಣ್ಣುಗಳ ಲೆಕ್ಕ ತೋರಿದ ರೀತಿ:

ಇಳಿದು ರಥವನು ಬಂದು ವೃಕ್ಷದ 
ಬಳಿಗೆ ನಿಂದಾ ಶಾಖೆಗಳಲಿಹ 
ಫಲವದರ ಪರ್ಣಂಗಳೆಣಿಸಿದ ಪದ್ಮಸಂಖ್ಯೆಯಲಿ

ದಮಯಂತಿಯ ರೂಪ-ಲಾವಣ್ಯ, ದೇವತೆಗಳ ಪರೀಕ್ಷೆಗಳು, ನಳ-ಕಾರ್ಕೋಟಕ ಮತ್ತು ನಳ-ಕಲಿ ಇವರ ಸಂವಾದ, ನಳ ಮತ್ತು ದಮಯಂತಿಯರ ಪರಿತಾಪ ಇನ್ನೂ ಮುಂತಾದ ಅನೇಕ ರಸಘಟ್ಟಗಳನ್ನು "ನಳಚರಿತ್ರೆ" ಓದಿ ಸವಿಯಬಹುದು.

*****

ನಳ ಮಹಾರಾಜ ಮತ್ತು ಋತುಪರ್ಣ ಮಹಾರಾಜರು ಗುರು-ಶಿಷ್ಯ ಭಾವದಲ್ಲಿ ಒಬ್ಬರಿಗೊಬ್ಬರು ಕಲಿಸಿ-ಕಲಿತದ್ದು ತಮ್ಮ ತಮ್ಮ ಜ್ಞಾನದ ಮತ್ತು ಸಾಧನೆಯ ಕಾರಣ ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿರುವವರೂ ಹೇಗೆ ಪರಸ್ಪರ ಗುರು-ಶಿಷ್ಯರಾಗಬಹುದು ಎನ್ನುವುದಕ್ಕೆ ಸೊಗಸಾದ ಉದಾಹರಣೆ. ಅಲ್ಲವೇ?