Showing posts with label Shishya. Show all posts
Showing posts with label Shishya. Show all posts

Thursday, October 30, 2025

ಪರಸ್ಪರ ಗುರು-ಶಿಷ್ಯರು


"ಗುರು-ಶಿಷ್ಯರ ಸಂಬಂಧ" ಅನ್ನುವ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ (ಆಗಸ್ಟ್ 22, 2025) ಗುರು-ಶಿಷ್ಯ ಸಂಬಂಧದ ಅನೇಕ ರೂಪಗಳಲ್ಲಿ ಕೆಲವು ಪದರಗಳನ್ನು ನೋಡುವ ಪ್ರಯತ್ನ ಮಾಡಿದ್ದೆವು. "ಅದೊಂದು ವ್ಯವಹಾರದಂತಲ್ಲದ ಕೊಡು-ಕೊಳ್ಳುವ ವಿನಿಮಯ. ಇದರಲ್ಲಿ ಒಬ್ಬರು ಇನ್ನೊಬ್ಬರಿಂದ ಕಲಿಯುತ್ತಾರೆ. ದೊಡ್ಡವನು-ಚಿಕ್ಕವನು ಎನ್ನುವ ಭೇದವಿಲ್ಲ. ಜ್ಞಾನದ ವಿಕಾಸ ಹೇಗಾದರೂ ಅದು ಸೋಲಲ್ಲ. ಆದ್ದರಿಂದ ಗುರು-ಶಿಷ್ಯ ಇಬ್ಬರೂ ಬೆಳೆಯಬಹುದು. ಇದು ಒಮ್ಮುಖದ ಕಲಿಕೆ ಅಲ್ಲ" ಮುಂತಾಗಿ ಚರ್ಚಿಸಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಜ್ಞಾನಾರ್ಜನೆಗಾಗಿ ಗುರುವಿನ ಬಳಿ ಬಂದ ಶಿಷ್ಯ, ಮತ್ತು ಅವರ ಗುರು-ಶಿಷ್ಯ ಸಂಬಂಧದಲ್ಲಿ ಕೂಡ ಇಬ್ಬರೂ ಕಲಿಯುವ ಅವಕಾಶಗಳು ಹೇರಳವಾಗಿರುತ್ತವೆ. ವಿಶಾಲ ಮನಸ್ಸಿನ ಹಿರಿಯ ಗುರುಗಳೂ ಸಹ ಕೆಲವು ಸಂದರ್ಭಗಳಲ್ಲಿ ಅನೇಕ ವರುಷಗಳ ಅಧ್ಯಯನದಲ್ಲಿ ತಮಗೆ ಹೊಳೆಯದಿದ್ದ ಸೂಕ್ಷ್ಮಗಳನ್ನು ತಮ್ಮ ಶಿಷ್ಯರು ಮೊದಲ ನೋಟದಲ್ಲೇ ಕಂಡುದು, ಮತ್ತು ಅದರಿಂದ ತಾವು ಕಲಿತ ಘಟ್ಟಗಳನ್ನು ನೆನಪು ಮಾಡಿಕೊಳ್ಳುವುದನ್ನು ನಾವು ಕಂಡಿದ್ದೇವೆ. ಹೀಗೆ ಒಪ್ಪಿಕೊಳ್ಳುವ ಮನೋಧರ್ಮ ಅನೇಕ ಗುರುಗಳಿಗೆ ಇರುವುದಿಲ್ಲ. ಅಂತಿದ್ದರೂ ಹತ್ತಾರು ಜನ ಸೇರಿರುವ ಸಂದರ್ಭಗಳಲ್ಲಿಯೂ ಯಾವುದೇ ಸಂಕೋಚವಿಲ್ಲದೆ ಹೀಗೆ ಗುರುತಿಸಿ ಕೃತಜ್ಞತೆ ವ್ಯಕ್ತಪಡಿಸುವ ಗುರುಗಳೂ ಅಲ್ಲಲ್ಲಿ ಕಾಣಸಿಗುತ್ತಾರೆ. 

ಜೀವನದ ಕೆಲವು ಘಟ್ಟಗಳಲ್ಲಿ ಹೀಗೆ ಒಬ್ಬನು ಗುರು ಮತ್ತು ಮತ್ತ್ತೊಬ್ಬ ಶಿಷ್ಯ ಅಲ್ಲದಿದ್ದರೂ, ಇಬ್ಬರೂ ಸಮಾಜದಲ್ಲಿ ತಮ್ಮ ಜ್ಞಾನಾರ್ಜನೆಯಿಂದ ತಮ್ಮದೇ ಆದ ಸ್ಥಾನ ಗಳಿಸಿಕೊಂಡಿದ್ದರೂ, ಪರಸ್ಪರರಿಂದ ಕಲಿಯುವುದೂ ಉಂಟು. ಇಂತಹ ಪ್ರಸಂಗಕ್ಕೆ ಒಂದು ಶ್ರೇಷ್ಠ ಉದಾಹರಣೆ ನಳಚರಿತ್ರೆಯಲ್ಲಿ ಕಾಣಬಹುದು. ಕನ್ನಡದ ದಾಸಶ್ರೇಷ್ಠರೂ, ಕವಿವರೇಣ್ಯರೂ ಆದ ಭಕ್ತ ಕನಕದಾಸರ "ನಳ ಚರಿತ್ರೆ" ಕೃತಿಯಲ್ಲಿ ಬರುವ ಬಾಹುಕನ ರೂಪದ ನಳ ಮಹಾರಾಜ ಮತ್ತು ಋತುಪರ್ಣ ಮಹಾರಾಜ ಪರಸ್ಪರ ಅಶ್ವಹೃದಯ ಮತ್ತು ಅಕ್ಷಹೃದಯ ವಿದ್ಯೆಗಳನ್ನು ಹೀಗೆ ಒಬ್ಬರಿಂದ ಇನ್ನೊಬ್ಬರು ಕಲಿತದ್ದು ಚೆನ್ನಾಗಿ ನಿರೂಪಿತವಾಗಿದೆ. 
*****

ದುರ್ಯೋಧನನ ಸಂಗಡ ಶಕುನಿಯ ಮೂಲಕವಾಗಿ ಕಪಟ ದ್ಯೂತದಲ್ಲಿ ರಾಜ್ಯ-ಕೋಶಾದಿಗಳನ್ನು ಕಳೆದುಕೊಂಡು ಧರ್ಮರಾಯನು ದ್ರೌಪದಿ ಮತ್ತು ತಮ್ಮಂದಿರೊಡನೆ ಕಾಡಿನಲ್ಲಿ ವಾಸವಾಗಿರುತ್ತಾನೆ. ಅರ್ಜುನನು ದಿವ್ಯಾಸ್ತ್ರಗಳ ಸಂಪಾದನೆಗಾಗಿ ಹೋಗಿರುವಾಗ ಧರ್ಮಜನು ಬಹಳ ಬೇಸರದಿಂದಿರುತ್ತಾನೆ. ಆಗ ಬೃಹದಶ್ವ ಎಂಬ ಒಬ್ಬ ಮುನಿ ಅಲ್ಲಿಗೆ ಬಂದು ಧರ್ಮರಾಯನಿಗೆ ಸಮಾಧಾನ ಮಾಡುವ ಸಲುವಾಗಿ ನಳ ಮಹಾರಾಜನ ಕಥೆ ಹೇಳುತ್ತಾನೆ. "ಕಪಟ ಜೂಜಿನ ಕಾರಣ ರಾಜ್ಯ-ಕೋಶಗಳನ್ನು ಕಳೆದುಕೊಂಡವನು ನೀನು ಮಾತ್ರ ಅಲ್ಲ. ನಳ ಮಹಾರಾಜನೂ ಹೀಗೆ ರಾಜ್ಯ ಕಳೆದುಕೊಂಡು, ಹೆಂಡತಿಯನ್ನೂ ಕಳೆದುಕೊಂಡು, ಬಹಳ ವ್ಯಥೆಪಟ್ಟು ಕಡೆಗೆ ಎಲ್ಲವನ್ನೂ ಮತ್ತೆ ಸಂಪಾದಿಸಿದನು. ನೀನೂ ಕೂಡ ಹೀಗೆ ಎಲ್ಲವನ್ನೂ ಮತ್ತೆ ಪಡಯುತ್ತೀಯೆ. ವ್ಯಥೆ ಪಡಬೇಡ" ಎಂದು ನಳನ ಕಥೆ ಹೇಳುತ್ತಾರೆ. 

ಮಹಾಭಾರತದ ಅರಣ್ಯಪರ್ವದಲ್ಲಿ ಇಪ್ಪತ್ತೆಂಟು ಅಧ್ಯಾಯಗಳಲ್ಲಿ ವಿಸ್ತಾರವಾಗಿ ಹೇಳಿರುವ ನಳನ ವೃತ್ತಾಂತವನ್ನು ಶ್ರೀ ಕನಕದಾಸರು ತಮ್ಮ "ನಳಚರಿತ್ರೆ" ಗ್ರಂಥದಲ್ಲಿ ಭಾಮಿನೀ ಷಟ್ಪದಿಯಲ್ಲಿ ಸೊಗಸಾದ ಕನ್ನಡದಲ್ಲಿ ನಮಗೆ ಕೊಟ್ಟಿದ್ದಾರೆ. ಮಹಾಭಾರತದಲ್ಲಿನ ಮೂಲ ಕಥೆಗೆ ಕೆಲವು ಸಣ್ಣ-ಪುಟ್ಟ ಮಾರ್ಪಾಡುಗಳನ್ನು ಮಾಡಿಕೊಂಡು ಒಟ್ಟಿನ ಹಂದರವನ್ನು ಇನ್ನೂ ಆಕರ್ಷಕವಾಗಿ ಮಾಡಿದ್ದಾರೆ. 

ನಳಮಹಾರಾಜನ ಕಥೆ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವುದೇ ಆಗಿದೆ. ನಿಷಧ ನಗರದ ರಾಜ ಶೂರಸೇನನ ಮಗ ನಳ ಚಕ್ರವರ್ತಿ. ವಿದರ್ಭದ ಅರಸು ಭೀಮರಾಜನ ಮಗಳು ದಮಯಂತಿ. ದಮಯಂತಿಯ ರೂಪ-ಗುಣಗಳನ್ನು ಕೇಳಿದ ನಳನೂ, ನಳನ ರೂಪ-ಗುಣಗಳನ್ನು ತಿಳಿದ ದಮಯಂತಿಯೂ ಪರಸ್ಪರ ಅನುರಕ್ತರಾಗುತ್ತಾರೆ. ಹಂಸ ಪಕ್ಷಿಯ ಮೂಲಕ ಸಂಪರ್ಕ ಏರ್ಪಟ್ಟು, ದೇವತೆಗಳ ಅನೇಕ ಪರೀಕ್ಷೆಗಳ ಮಧ್ಯೆಯೂ ನಳ-ದಮಯಂತಿ ವಿವಾಹ ಆಗುತ್ತಾರೆ. ಕಲಿಯ ಕಾರಣ ನಳನು ತಮ್ಮ ಪುಷ್ಕರನೊಡನೆ ಜೂಜಿನಲ್ಲಿ ಎಲ್ಲವನ್ನೂ ಕಳೆದುಕೊಂಡು ಹೆಂಡತಿಯ ಜೊತೆ ಕಾಡುಪಾಲಾಗುತ್ತಾನೆ. ಕಾಡಿನಲ್ಲಿ ನಳನ ಬಟ್ಟೆಗಳನ್ನು ಜಗನ್ಮೋಹನ ಪಕ್ಷಿಗಳು ಅಪಹರಿಸುತ್ತವೆ. ದಮಯಂತಿ ತನ್ನ ಸೀರೆಯನ್ನು ಹರಿದು ಅರ್ಧವನ್ನು ನಳನಿಗೆ ಉಡಲು ಕೊಡುತ್ತಾಳೆ. ಮಧ್ಯರಾತ್ರಿ ಅವಳು ಮಲಗಿರುವಾಗ ನಳನು ಅವಳನ್ನು ತೊರೆದು ಬೇರೆ ಹೋಗುತ್ತಾನೆ. 

ಅನೇಕ ತೊಂದರೆಗಳ ಮೂಲಕ ಹಾದು ದಮಯಂತಿ ಕಡೆಗೆ ಚಿಕ್ಕಪ್ಪ ಚೈದ್ಯರಾಜ ಸುಬಾಹುವಿನ ಅರಮನೆ ಸೇರುತ್ತಾಳೆ. ಸುಬಾಹುವಿನ ಹೆಂಡತಿ ಮಹಾರಾಣಿ ಸುಮತಿ ದಮಯಂತಿಯ ತಾಯಿಯ ತಂಗಿ. ಇದು ಗೊತ್ತಿಲ್ಲದೇ ಕಾಲ ಕಳೆಯುತ್ತದೆ. ಈ ಸಂಗತಿ ತಿಳಿದ ಮೇಲೆ ಮಹಾರಾಣಿ ಸುಮತಿ ಮತ್ತು ಸುಬಾಹು ದಮಯಂತಿಯನ್ನು ತಮ್ಮ "ಮಗಳು ಸುನಂದೆಗೆ ನೀನು ಸಮ ಮಗಳೇ. ಎಷ್ಟು ಕಷಪಟ್ಟೆ ನೀನು" ಎಂದು ಪ್ರೀತಿ ತುಂಬಿದ ಕರುಣೆಯಿಂದ ಸಂಬೋಧಿಸುತ್ತಾರೆ. ಅಲ್ಲಿಂದ ದಮಯಂತಿ ಅಪ್ಪನ ಮನೆ ತಲುಪುತ್ತಾಳೆ. ನಳನು ಕಾಡಿನಲ್ಲಿ ಅಲೆಯುವಾಗ ಕಾಳ್ಗಿಚ್ಚಿನಲ್ಲಿ ಸಿಕ್ಕಿಕೊಂಡಿದ್ದ ಕಾರ್ಕೋಟಕ ಎಂಬ ನಾಗರಾಜನನ್ನು ಕಾಪಾಡುತ್ತಾನೆ. ಕಾರ್ಕೋಟಕನೋ ನಳನನ್ನು ಕಚ್ಚಿಬಿಡುತ್ತಾನೆ. ಸುರಸುಂದರನಾದ ನಳನು ಆ ವಿಷದ ಪರಿಣಾಮವಾಗಿ ವಿಕಾರ ರೂಪ ಪಡೆದುಬಿಡುತ್ತಾನೆ. ಕನಕದಾಸರು ನಳನ ಕುರೂಪವನ್ನು ಹೀಗೆ ವರ್ಣಿಸುತ್ತಾರೆ:

ದೊಡ್ಡ ಹೊಟ್ಟೆಯ ಗೂನು ಬೆನ್ನಿನ 
ಅಡ್ಡ ಮೋರೆಯ ಗಂಟು ಮೂಗಿನ 
ದೊಡ್ಡ ಕೈಕಾಲುಗಳ ಉದುರಿದ ರೋಮ ಮೀಸೆಗಳ 

ಜಡ್ಡು ದೇಹದ ಗುಜ್ಜುಗೊರಲಿನ 
ಗಿಡ್ಡ ರೂಪಿನ ಹರಕುಗಡ್ಡದ 
ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ 

ಹೀಗೆ ಬದಲಾದ ನಳನು ಬಾಹುಕ ಎನ್ನುವ ಹೆಸರಿನಿಂದ ಅಯೋಧ್ಯೆಯ ರಾಜನಾದ ಋತುಪರ್ಣನ ಬಳಿ ಸಾರಥಿಯ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಗಂಡನನ್ನು ಹುಡುಕಿಸಿ ಮತ್ತೆ ಅವನನ್ನು ಸೇರಲು ದಮಯಂತಿಯು ತನಗೆ ಇನ್ನೊಂದು ಸ್ವಯಂವರ ನಡೆಯುತ್ತಿದೆ ಎನ್ನುವ ಸುದ್ದಿ ಹಬ್ಬಿಸಿ ಅದು ಋತುಪರ್ಣ ಮಹಾರಾಜನಿಗೆ ತಲುಪುವಂತೆ ಮಾಡುತ್ತಾಳೆ. 

*****

ದಮಯಂತಿಯ ಮತ್ತೊಂದು ಸ್ವಯಂವರದ ಸುದ್ದಿ ಕೇಳಿದ ಋತುಪರ್ಣನು ಸಮಯಕ್ಕೆ ಸರಿಯಾಗಿ ವಿದರ್ಭ ನಗರ ತಲುಪಲು ರಥವನ್ನು ತಯಾರು ಮಾಡಲು ಸಾರಥಿ ಬಾಹುಕನಿಗೆ ಹೇಳುತ್ತಾನೆ. ಇಂತಹ ಸುದ್ದಿ ಕೇಳಿದ ದುಃಖದಲ್ಲೂ ಬಾಹುಕನ ರೂಪದ ನಳನು ರಥವನ್ನು ಸಿದ್ಧಪಡಿಸುತ್ತಾನೆ. ಪ್ರಯಾಣದ ಕಾಲದಲ್ಲಿ ಗಾಳಿಯಿಂದ ಋತುಪರ್ಣನ ಮೇಲುಹೊದಿಕೆ ಹಾರಿಹೋಗುತ್ತದೆ. ರಥ ನಿಲ್ಲಿಸಿ ಉತ್ತರೀಯವನ್ನು ತರುವಂತೆ ಋತುಪರ್ಣ ಬಾಹುಕನಿಗೆ ಹೇಳುತ್ತಾನೆ. ಬಾಹುಕನು "ಮಹಾರಾಜ, ಈ ಕುದುರೆಗಳು ಸಾಮಾನ್ಯವಲ್ಲ. ನಾಗಾಲೋಟದಲ್ಲಿ ಓಡುತ್ತಿವೆ. ನಿಮ್ಮ ಉತ್ತರೀಯ ಬಿದ್ದ ಕಡೆಯಿಂದ ಎಷ್ಟೋ ಯೋಜನ ದಾಟಿ ಬಂದಿದ್ದೇವೆ. ಅದನ್ನು ಮರೆತುಬಿಡಿ" ಅನ್ನುತ್ತಾನೆ. ಋತುಪರ್ಣನಿಗೆ ಆಶ್ಚರ್ಯ. 

ಮುಂದೊಂದು ಕಡೆ ವಿಶ್ರಾಂತಿಗೆ ನಿಲ್ಲಿಸಿದಾಗ ಅಲ್ಲಿ ಕಂಡ ತಾರೆಯ ಮರದಲ್ಲಿರುವ ಎಲೆಗಳು ಮತ್ತು ಹಣ್ಣುಗಳ ನಿಖರವಾದ ಸಂಖ್ಯೆಯನ್ನು ಋತುಪರ್ಣ ಬಾಹುಕನಿಗೆ ಹೇಳುತ್ತಾನೆ. ಈಗ ಬಾಹುಕನಿಗೆ ಆಶ್ಚರ್ಯ. ಮರದ ಬಳಿ ಹೋಗಿ ಎಣಿಸಿದರೆ ಋತುಪರ್ಣನು ಹೇಳಿದ ಸಂಖ್ಯೆ ಸರಿಯಾಗಿದೆ. "ಈ ವಿದ್ಯೆ ತನಗೆ ಗೊತ್ತಾದರೆ ತಮ್ಮ ಪುಷ್ಕರನನ್ನು ಮತ್ತೆ ಜೂಜಿನಲ್ಲಿ ಸೋಲಿಸಿ ರಾಜ್ಯ ಹಿಂದೆ ಪಡೆಯಬಹುದು" ಎಂದು ನಳನು ಚಿಂತಿಸುತ್ತಾನೆ.

ಋತುಪರ್ಣನಿಗೆ ಕುದುರೆಗಳ ಬಗ್ಗೆ ತಿಳಿಯುವ ಹಂಬಲ. ಆ ವಿದ್ಯೆಗೆ "ಅಶ್ವ ಹೃದಯ" ಎಂದು ಹೆಸರು. ನಳನಿಗೆ ಋತುಪರ್ಣನ "ಅಕ್ಷ ಹೃದಯ" ವಿದ್ಯೆ ಕಲಿಯುವ ಆಸೆ. ಇಬ್ಬರೂ ಪರಸ್ಪರ ಒಪ್ಪಿಕೊಂಡು ಒಂದು ವಿದ್ಯೆ ಕಲಿಯಲು ಇನ್ನೊಬ್ಬನ ಶಿಷ್ಯರಾಗುತ್ತಾರೆ. ಕಲಿಸಿಕೊಡಲು ಗುರುವಾಗುತ್ತಾರೆ. ಹೀಗೆ ಪರಸ್ಪರ ಗುರು-ಶಿಷ್ಯ ಆಗಿ ವಿದ್ಯೆಗಳ ವಿನಿಮಯ ಮಾಡಿಕೊಳ್ಳುತ್ತಾರೆ. 

ಮುಂದೆ ಕಲಿಯು ನಳನನ್ನು ಕಾಡುವುದನ್ನು ನಿಲ್ಲಿಸಿ, ಜಗನ್ಮೋಹನ ಪಕ್ಷಿಗಳು ನಳನ ಅಪಹರಿಸಿದ ಬಟ್ಟೆಯನ್ನು ತಂದುಕೊಡುತ್ತವೆ. ಅದನ್ನು ಉಟ್ಟ ನಂತರ ಬಾಹುಕನಿಗೆ ಕಾರ್ಕೋಟಕನು ಹೇಳಿದ್ದಂತೆ ಕುರೂಪ ಹೋಗಿ ಮತ್ತೆ ನಳನ ಸುರಸುಂದರ ರೂಪ ಬರುತ್ತದೆ. ನಳ-ದಮಯಂತಿ ಒಂದಾಗುತ್ತಾರೆ. ಅಕ್ಷಹೃದಯದ ಬಲದಿಂದ ನಳನು ಪುಷ್ಕರನನ್ನು ಸೋಲಿಸಿ ರಾಜ್ಯ-ಕೋಶಗಳನ್ನು ಹಿಂದೆ ಪಡೆಯುತ್ತಾನೆ. ನಳಚರಿತ್ರೆ ಹೀಗೆ ಮುಕ್ತಾಯವಾಗುತ್ತದೆ. 

*****

ಅಶ್ವಹೃದಯದ ಪರಿಣಾಮವಾಗಿ ಕುದುರೆಗಳು ಹೇಗೆ ಓಡಿದುವೆಂದು ಶ್ರೀ ಕನಕದಾಸರು ಹೇಳುವ ರೀತಿ:

ಕರದ ವಾಘೆಯ ಸಡಿಲ ಬಿಡೆ ಮುಂ
ಬರಿದು ಚಿಮ್ಮಿದವಡಿಗಡಿಗೆ ರಥ
ತುರಗ ಹಾಯ್ದುದು ತೇರು ಮುಂದಕೆ ಪವನ ವೇಗದಲಿ 


ಅಕ್ಷಹೃದಯದ ಕಾರಣ ತಾರೆಯ ಮರದ ಎಲೆ-ಹಣ್ಣುಗಳ ಲೆಕ್ಕ ತೋರಿದ ರೀತಿ:

ಇಳಿದು ರಥವನು ಬಂದು ವೃಕ್ಷದ 
ಬಳಿಗೆ ನಿಂದಾ ಶಾಖೆಗಳಲಿಹ 
ಫಲವದರ ಪರ್ಣಂಗಳೆಣಿಸಿದ ಪದ್ಮಸಂಖ್ಯೆಯಲಿ

ದಮಯಂತಿಯ ರೂಪ-ಲಾವಣ್ಯ, ದೇವತೆಗಳ ಪರೀಕ್ಷೆಗಳು, ನಳ-ಕಾರ್ಕೋಟಕ ಮತ್ತು ನಳ-ಕಲಿ ಇವರ ಸಂವಾದ, ನಳ ಮತ್ತು ದಮಯಂತಿಯರ ಪರಿತಾಪ ಇನ್ನೂ ಮುಂತಾದ ಅನೇಕ ರಸಘಟ್ಟಗಳನ್ನು "ನಳಚರಿತ್ರೆ" ಓದಿ ಸವಿಯಬಹುದು.

*****

ನಳ ಮಹಾರಾಜ ಮತ್ತು ಋತುಪರ್ಣ ಮಹಾರಾಜರು ಗುರು-ಶಿಷ್ಯ ಭಾವದಲ್ಲಿ ಒಬ್ಬರಿಗೊಬ್ಬರು ಕಲಿಸಿ-ಕಲಿತದ್ದು ತಮ್ಮ ತಮ್ಮ ಜ್ಞಾನದ ಮತ್ತು ಸಾಧನೆಯ ಕಾರಣ ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿರುವವರೂ ಹೇಗೆ ಪರಸ್ಪರ ಗುರು-ಶಿಷ್ಯರಾಗಬಹುದು ಎನ್ನುವುದಕ್ಕೆ ಸೊಗಸಾದ ಉದಾಹರಣೆ. ಅಲ್ಲವೇ?

Saturday, September 6, 2025

ನಾನು ಶಾಲಿಗಾಗಿ ಬಂದವನು, ಗುರುಗಳೇ!


ಗುರು-ಶಿಷ್ಯರ ಸಂಬಂಧದ ಬಗ್ಗೆ "ಗುರು ಪೂರ್ಣಿಮಾ" ಸಮಯದಲ್ಲಿ ಒಂದು ಸಂಚಿಕೆಯಲ್ಲಿ ಸ್ವಲ್ಪ ವಿಚಾರ ಮಾಡಿದ್ದೆವು. ಯೋಗ್ಯನಾದ ಶಿಷ್ಯನು ಸಿಗಲಿ ಎಂದು ಗುರುವು ಕಾಯುತ್ತಿರುವುದು ಮತ್ತು ಸರಿಯಾದ ಗುರು ದೊರೆಯಲಿ ಎಂದು ಜಿಜ್ಞಾಸು ಶಿಷ್ಯನು ಅರಸುವುದು, ಇವುಗಳ ಬಗ್ಗೆ ಕೆಲವು ವಿಷಯಗಳನ್ನು ನೋಡಿದ್ದೆವು. (ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು). 

ಈ ವಿಷಯದ ಕುರಿತಂತೆ ಬಹಳ ಹಿಂದೆ ತಿಳಿದವರೊಬ್ಬರು ಸಾಂದರ್ಭಿಕವಾಗಿ ಹೇಳಿದ್ದ ಸಂಗತಿಯೊಂದನ್ನು ನೆನಪಿಸಿಕೊಳ್ಳಬಹುದು. ಇದರ ಬಗ್ಗೆ ಹೆಚ್ಚಿನ ವಿಚಾರಗಳು ತಿಳಿದಿಲ್ಲ. ತಿಳಿಯುವ ಪ್ರಯತ್ನ ಮಾಡಿದರೂ ಅವು ಸಫಲವಾಗಲಿಲ್ಲ. ಆದರೆ ಅದನ್ನು ಹೇಳಿದವರು ಸ್ವತಃ ಘನ ವಿದ್ವಾಂಸರು. ಅನೇಕ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ಮಾತಾಡಬಲ್ಲವರು. ಅದಕ್ಕಿಂತ ಹೆಚ್ಚಾಗಿ ಈ ಪ್ರಸಂಗ ಜ್ಞಾನದಾಹ ಮತ್ತು ಗುರುಗಳ ಶಿಷ್ಯ ವಾತ್ಸಲ್ಯವನ್ನು ತೋರಿಸುವ ಒಂದು ಉತ್ತಮ ಉದಾಹರಣೆ. ಆದ್ದರಿಂದ ಅದನ್ನು ಅದರ ಇತಿ-ಮಿತಿಗಳಲ್ಲೇ ನೋಡೋಣ. 

ತುಂಗಭದ್ರಾ ನದಿಯ ಆಣೆಕಟ್ಟು ಈಗ ತುಂಬಿ ತುಳುಕುತ್ತಿದೆ. ಜಲಾಶಯದ ಎಲ್ಲ ಗೇಟುಗಳನ್ನೂ ತೆಗೆದು ನದಿಯ ಪಾತ್ರಕ್ಕೆ ನೀರು ಬಿಡುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಗೇಟುಗಳಲ್ಲಿ ತೊಂದರೆ ಉಂಟಾಗಿ ನೀರು ಸೋರಿಹೋಗುತ್ತಿದ್ದುದು, ಮತ್ತು ಬಲು ಕಠಿಣ ಪರಿಸ್ಥಿತಿಯಲ್ಲೂ ಕೆಲವು ಎಂಜಿನಿಯರುಗಳು ಕಷ್ಟಪಟ್ಟು ಅದನ್ನು ಸರಿಪಡಿಸಿ ನೀರು ಪೋಲಾಗುವುದನ್ನು ನಿಲ್ಲಿಸಿದುದನ್ನೂ ಕೇಳಿದ್ದೆವು. ಈ ಜಲಾಶಯವು ನೀರು ತುಂಬಿದ್ದಾಗ ನೋಡಲು ಬಹಳ ಸುಂದರ. ಅದಕ್ಕೆ ಸೇರಿದಂತೆ "ಪಂಪಾವನ" ಎನ್ನುವ ಉದ್ಯಾನವಿದೆ. ರಾಮಾಯಣದ ಪ್ರಸಿದ್ಧ "ಋಷ್ಯಮೂಕ" ಬೆಟ್ಟವೂ ಅದರ ಒಂದು ಬದಿಯಲ್ಲಿದೆ. 

ತುಂಗಭದ್ರಾ ಜಲಾಶಯವು ಹೊಸಪೇಟೆಯಿಂದ ಸುಮಾರು ಐದು ಮೈಲು ದೂರದ, ಈಗಿನ ಕೊಪ್ಪಳ ಜಿಲ್ಲೆಗೆ ಸೇರಿದ ಮುನಿರಾಬಾದ್ ಪಟ್ಟಣಕ್ಕೆ ಹೊಂದಿಕೊಂಡಿದೆ. ಹುಲಿಗಿ ಎನ್ನುವ ಸಣ್ಣ ಊರು ಈಗ ಹೆಚ್ಚು-ಕಡಿಮೆ ಈ ಪಟ್ಟಣದಲ್ಲಿ ಸೇರಿಹೋಗಿದೆ. "ಹುಲಿಗೆಮ್ಮ" ಎನ್ನುವ ಇತಿಹಾಸ ಪ್ರಸಿದ್ಧ ದೇವಸ್ಥಾನ ಇಲ್ಲಿನ ಹೆಗ್ಗುರುತು. 

*****

ಹುಲಿಗಿ ಶ್ರೀಪತ್ಯಾಚಾರ್ಯರು ಒಂದು ಕಾಲಘಟ್ಟದಲ್ಲಿ ಅದ್ವಿತೀಯ ತರ್ಕ ಶಾಸ್ತ್ರ ವಿದ್ವಾಂಸರು. ಅವರನ್ನು ಅರಸಿಕೊಂಡು ನಾಡಿನ ಮೂಲೆ ಮೂಲೆಗಳಿಂದ ತರ್ಕ ಶಾಸ್ತ್ರ ಕಲಿಯಬೇಕೆಂದು ಆಸೆಪಡುವ ವಿದ್ಯಾರ್ಥಿಗಳು ಬರುತ್ತಿದ್ದರಂತೆ. ಅವರ ಮನೆಯೇ ಒಂದು ಗುರುಕುಲ. ಆಗ ತಮ್ಮ ಬಳಿ ವಿದ್ಯಾರ್ಜನೆಗೆ ಬರುವವರಿಗೆ ಊಟ-ವಸತಿ ಕೊಟ್ಟು ಪಾಠ ಹೇಳುವ ಕಾಯಕ ಅವರದು. ಹತ್ತು-ಹನ್ನೆರಡು ವಿದ್ಯಾರ್ಥಿಗಳವರೆಗೆ ಒಪ್ಪಿಕೊಳ್ಳುತ್ತಿದ್ದರು. ಅದಕ್ಕಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಸಂಭಾಳಿಸುವುದು ಆಗದ ಕೆಲಸ. 

ಶ್ರೀಪತಿ ಆಚಾರ್ಯರು ತರ್ಕ ಶಾಸ್ತ್ರದ ಜೊತೆಯಲ್ಲಿ ಬೇರೆ ಇತರ ಶಾಖೆಗಳಲ್ಲೂ ಪಂಡಿತರೇ. ಅವರಿಗೆ ಅನೇಕ ಕಡೆಗಳಿಂದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನಗಳು ಬರುತ್ತಿದ್ದವು. ವಿದ್ವತ್ ಗೋಷ್ಠಿಗಳನ್ನು ನಿರ್ವಹಿಸುವುದು, ಉಪನ್ಯಾಸಗಳನ್ನು ನೀಡುವುದು, ಮತ್ತು ಪರೀಕ್ಷೆಗಳಲ್ಲಿ ನಿರ್ಣಾಯಕರಾಗಲು ಅಲ್ಲಲ್ಲಿ ಅವರಿಗೆ ಕರೆಗಳು ಬರುತ್ತಿದ್ದವು. ಹೀಗೆ ಹೋದ ಸಂದರ್ಭಗಳಲ್ಲಿ ಅವರಿಗೆ ಸನ್ಮಾನ ಮಾಡುವುದು ಸರ್ವೇಸಾಮಾನ್ಯವಾಗಿತ್ತು. ಈ ಮನ್ನಣೆಗಳ ಅಂಗವಾಗಿ ಶಾಲುಗಳನ್ನು ಹೊದ್ದಿಸಿ, ಫಲ-ತಾಂಬೂಲಗಳನ್ನು ನೀಡುವುದು ನಡೆಯುತ್ತಿತ್ತು. ಈ ಕಾರಣಗಳಿಂದ ಅವರ ಬಳಿ ಶಾಲುಗಳ ಒಂದು ಸಂಗ್ರಹವೇ ಇರುತ್ತಿತ್ತು. 

ಹೀಗೆ ತಮಗೆ ಕೊಟ್ಟಿರುವ ಶಾಲುಗಳನ್ನು ವಿದ್ಯಾರ್ಥಿಗಳಿಗೆ ಹಂಚುವುದು ಆಚಾರ್ಯರ ಹವ್ಯಾಸ. ಯಾವುದೇ ಪದಾರ್ಥವನ್ನು ಸುಮ್ಮನೆ ಕೊಟ್ಟರೆ ಅದಕ್ಕೆ ಅಷ್ಟು ಬೆಲೆ ಇರುವುದಿಲ್ಲ. ಈ ಕಾರಣದಿಂದ ಆಚಾರ್ಯರು ಆಗಿಂದಾಗ್ಗೆ ವಿದ್ಯಾರ್ಥಿಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಈ ಸ್ಪರ್ಧೆಗಳು ಬೇರೆ ಬೇರೆ ಶಾಖೆಯ ವಿಷಯಗಳ ಮೇಲೆ ಇರುತ್ತಿದ್ದವು. ತಮ್ಮ ಶಿಷ್ಯರ ಜೊತೆಯಲ್ಲಿ ಬೇರೆ ಯಾವುದೇ ವಿದ್ಯಾರ್ಥಿ ಭಾಗವಹಿಸಲು ಅವಕಾಶ ಇರುತ್ತಿತ್ತು. ಒಂದು ವಿಷಯವನ್ನು ಆರಿಸಿ ನಿಗದಿತ ದಿನಾಂಕದಂದು ಸ್ಪರ್ಧೆ. ಅಂದು ಬಂದು ಭಾಗವಹಿಸಿದ ವಿದ್ಯಾರ್ಥಿಗಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಶಾಲುಗಳ ಬಹುಮಾನ. ಈ ರೀತಿಯಿಂದ ವಿದ್ಯಾರ್ಥಿಗಲ್ಲಿ ಸ್ಪರ್ಧಾಮನೋಭಾವದಿಂದ ಕಲಿಕೆಯೂ ನಡೆದು ಶಾಲುಗಳ ವಿತರಣೆಯೂ ಆಗುತ್ತಿತ್ತು. 

***** 

ಹೀಗೆ ಒಂದು ದಿನ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಮೀಮಾಂಸಾ ಶಾಸ್ತ್ರದ "ಮಂಗಳವಾದ" ಎನ್ನುವ ವಿಷಯ. ವೈದಿಕ ಕಾರ್ಯಗಳಲ್ಲಿ ಪ್ರಾರಂಭದಲ್ಲಿ "ಮಂಗಳ" ಎಂಬ ಒಂದು ಪ್ರಾರಂಭಿಕ ಕ್ರಿಯೆ ಬೇಕೇ ಅಥವಾ ಬೇಡವೇ ಎನ್ನುವ ವಿಷಯದಮೇಲೆ ಚರ್ಚೆ. ಅನೇಕ ವಿದ್ಯಾರ್ಥಿಗಳು ಬಂದು ಭಾಗವಹಿಸಿದರು. ತಮಗೆ ಪರಿಚಯವಿಲ್ಲದ ಒಬ್ಬ ವಿದ್ಯಾರ್ಥಿಯ ಪ್ರಖರವಾದ ವಿಷಯ ಮಂಡನೆಯ ರೀತಿ ಶ್ರೀಪತಿ ಆಚಾರ್ಯರಿಗೆ ಬಹಳ ಹಿಡಿಸಿತು. ತೀರ್ಪುಗಾರರ ಮನ್ನಣೆ ಗಳಿಸಿ ಆ ವಿದ್ಯಾರ್ಥಿ ಬಹುಮಾನವಾಗಿ ಶಾಲನ್ನೂ ಗೆದ್ದುಕೊಂಡ. ಶ್ರೀಪತ್ಯಾಚಾರ್ಯರು ಶಾಲನ್ನು ಹೊದಿಸಿ ಅವನನ್ನು ಸ್ವಲ್ಪ ಕಾಲ ಇರುವಂತೆ ಹೇಳಿದರು. 

ಕಾರ್ಯಕ್ರಮ ಎಲ್ಲ ಮುಗಿದ ನಂತರ ಆಚಾರ್ಯರು ಆ ವಿದ್ಯಾರ್ಥಿಯನ್ನು ಕರೆದರು. 

"ನೀನು ಬಹಳ ಚೆನ್ನಾಗಿ ವಿಷಯ ಮಂಡನೆ ಮಾಡಿದಿ"
"ತಮ್ಮ ಅನುಗ್ರಹವಾಯಿತು. ನನ್ನ ಪುಣ್ಯ"
"ಮೀಮಾಂಸಾ ಶಾಸ್ತ್ರವನ್ನು ಎಲ್ಲಿ ಅಧ್ಯಯನ ಮಾಡಿದೆ?"
"ನಾನು ಮೀಮಾಂಸಾ ಶಾಸ್ತ್ರದ ವಿದ್ಯಾರ್ಥಿಯಲ್ಲ. ತರ್ಕದ ವಿದ್ಯಾರ್ಥಿ"
"ಮತ್ತೆ ಈ ವಿಷಯದ ಸ್ಪರ್ಧೆಗೆ ಬಂದಿದ್ದು ಹೇಗೆ?"
"ನಾನು ಬಡವ. ಚಳಿಗಾಲದಲ್ಲಿ ಹೊದೆಯಲು ನನ್ನ ಬಳಿ ಶಾಲಿಲ್ಲ. ತಾವು ಆಗಾಗ ಸ್ಪರ್ಧೆ ಏರ್ಪಡಿಸಿ ಗೆದ್ದವರಿಗೆ ಶಾಲು ಕೊಡುವುದು ತಿಳಿಯಿತು. ಅದಕ್ಕೇ ಈ ವಿಷಯಕ್ಕೆ ತಯಾರಿ ಮಾಡಿಕೊಂಡು ಸ್ಪರ್ಧೆಗೆ ಬಂದೆ. ಕ್ಷಮಿಸಬೇಕು. ನಾನು ಶಾಲಿಗಾಗಿ ಬಂದವನು, ಗುರುಗಳೇ"
"ಸ್ಪರ್ಧೆಗೆ ವಿಷಯ ಸಂಗ್ರಹಣೆಗೆ ಗ್ರಂಥ ಹೇಗೆ ಸಂಪಾದಿಸಿದೆ?"
"ಮೀಮಾಂಸಾ ಶಾಸ್ತ್ರದ ವಿದ್ಯಾರ್ಥಿಯೊಬ್ಬನಿಂದ ಒಂದು ವಾರದ ಮಟ್ಟಿಗೆ ಪಡೆದುಕೊಂಡು, ಅಭ್ಯಸಿಸಿ ಸ್ಪರ್ಧೆಗೆ ಬಂದೆ"
"ಈಗ ಎಲ್ಲಿ ವಾಸವಾಗಿದ್ದೀ"
"ಒಬ್ಬರು ದೂರದ ಬಂಧುಗಳು ಅವರ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲಿ ಉಳಿದುಕೊಂಡಿದ್ದೇನೆ"
"ತರ್ಕ ಶಾಸ್ತ್ರದಲ್ಲಿ ಆಸಕ್ತಿಯಿದ್ದರೆ ನಮ್ಮ ಬಳಿಯೇ ಕಲಿಯಲು ಬರಬಹುದಿತ್ತಲ್ಲ"

ವಿದ್ಯಾರ್ಥಿಗೆ ಮಾತನಾಡಲಾಗಲಿಲ್ಲ. ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು.

"ಏಕೆ? ಏನಾಯಿತು?" 
"ಕೆಲವು ತಿಂಗಳ ಹಿಂದೆ ತಮ್ಮ ಬಳಿ ಬಂದು ಪ್ರಾರ್ಥಿಸಿದೆ. ಈಗ ನನ್ನ ಬಳಿ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅವಕಾಶ ಇಲ್ಲ. ಬೇರೆಯವರ ಬಳಿ ಪ್ರಯತ್ನಿಸು ಎಂದಿರಿ. ನಾನು ನತದೃಷ್ಟ"
"ಈಗ ಅವಕಾಶವಾದರೆ ನಮ್ಮಲ್ಲಿ ಕಲಿಯಲು ಬರುವಿಯಾ?"
"ಅದಕ್ಕಿಂತ ಬೇರೆ ಭಾಗ್ಯವಿಲ್ಲ ನನಗೆ"

ಮಾರನೆಯ ದಿನದಿಂದ ಅವನು ಆಚಾರ್ಯರ ಗುರುಕುಲದ ವಿದ್ಯಾರ್ಥಿಯಾದ. ಆಚಾರ್ಯರಿಗೆ ಬಹಳ ಕಾಲದಿಂದ ಹುಡುಕುತ್ತಿದ್ದ ಯೋಗ್ಯ ಶಿಷ್ಯ ಸಿಕ್ಕ. ಅವನಿಗೆ ತನ್ನ ಕನಸಿನ ನಿಧಿ ಸಿಕ್ಕಂತೆ ಆಗಿ ಹಾತೊರೆಯುತ್ತಿದ್ದ ಗುರುಗಳು ದೊರಕಿದರು!

*****

ದೇವರ್ಷಿ ನಾರದರಿಗೆ ಪ್ರಹ್ಲಾದನಂತಹ ಶಿಷ್ಯ ಸಿಕ್ಕ ಸಂದರ್ಭದಲ್ಲಿ ಈ ಮೇಲೆ ಹೇಳಿದ ಸಂಗತಿ ಕೇಳಿದಂತೆ ನೆನಪು. 

ಯೋಗ್ಯರಾದ ಶಿಷ್ಯರು ಸಿಗುವುದು ಗುರುಗಳಿಗೆ ಆನಂದ. ಮನಬಿಚ್ಚಿ ಜ್ಞಾನ ಧಾರೆ ಎರೆಯುವ ಗುರುಗಳು ದೊರಕುವುದು ಶಿಷ್ಯರ ಸುಯೋಗ. 

Sunday, August 24, 2025

ಅನುಭವ ಮತ್ತು ಅನುಭಾವ


ಹಿಂದಿನ ಸಂಚಿಕೆಯಲ್ಲಿ "ಗುರು-ಶಿಷ್ಯರ ಸಂಬಂಧ" ಅನ್ನುವ ಶೀರ್ಷಿಕೆಯಡಿಯಲ್ಲಿ ಗುರುವು ತನ್ನ ಬಳಿ ಬಂದ ಜ್ಞಾನಾರ್ಥಿಯನ್ನು ಹೇಗೆ ಪರೀಕ್ಷಿಸಿ, ನಂತರ ಶಿಷ್ಯನನ್ನಾಗಿ ಸ್ವೀಕರಿಸುತ್ತಾನೆ ಎನ್ನುವುದನ್ನು  ನೋಡಿದೆವು. ಈಗಿನ ಕಾಲದ ಶಿಕ್ಷಕ-ವಿದ್ಯಾರ್ಥಿ ನಡುವಿನ ಬಾಂಧವ್ಯಕ್ಕೂ ಗುರು-ಶಿಷ್ಯರ ನಡುವಿನ ಹೊಂದಾಣಿಕೆ, ಸಾಮ್ಯ-ವಿರುದ್ಧಗಳ ಸಣ್ಣ ನೋಟದ ಪ್ರಯತ್ನ ಮಾಡಿದೆವು. ಈ ಹಿಂದಿನ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಹಿಂದಿನ ಸಂಚಿಕೆಯ ಒಂದು ಕಡೆಯಲ್ಲಿ "ಶಿಷ್ಯನಿಗೆ ಉತ್ತರ ಗೊತ್ತಿಲ್ಲ. ಆದದ್ದರಿಂದ ಪ್ರಶ್ನೆ ಕೇಳುತ್ತಾನೆ. ಗುರುವಿಗೆ ಉತ್ತರ ಗೊತ್ತಿದ್ದರೆ ಹೇಳುತ್ತಾನೆ. ಅವನಿಗೂ ಗೊತ್ತಿಲ್ಲದಿದ್ದರೆ ಇಬ್ಬರೂ ಸೇರಿ ಉತ್ತರ ಹುಡುಕುತ್ತಾರೆ. ಇಲ್ಲಿ ಸೋಲು-ಗೆಲವುಗಳ ಜಂಜಾಟವಿಲ್ಲ" ಎಂದಿದ್ದೆವು. ಹಿರಿಯ ಸ್ನೇಹಿತರೊಬ್ಬರು "ಗುರುವು ಪ್ರತಿ ಶಿಷ್ಯನೊಂದಿಗೆ, ಅವನ ಪ್ರತಿ ಸಂಶಯಕ್ಕೆ ಅವನ ಜೊತೆಯಲ್ಲಿ ಉತ್ತರ ಹುಡುಕಲು ಹೋಗುತ್ತಾನೆಯೇ? ಇದು ಸಾಧ್ಯವೇ?" ಎಂದು ಕೇಳಿದ್ದಾರೆ. ಹೌದು. ಇದು ಸಾಧ್ಯವಿಲ್ಲದ ಮಾತು. ಅನವಶ್ಯಕವೂ ಹೌದು. ಜಿಜ್ಞಾಸುವು ತನ್ನ ಅನೇಕ ಪ್ರಶ್ನೆಗಳಿಗೆ ತಾನೇ ಉತ್ತರ ಹುಡುಕಿಕೊಳ್ಳಬೇಕು. ಗುರುವು ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬಹುದು. ಮಾರ್ಗದರ್ಶನ ನೀಡಬಹುದು. ಪರಮಸತ್ಯದ ಅನ್ವೇಷಣೆಯಲ್ಲಿ ಜೊತೆ-ಜೊತೆಯಾಗಿ ಉತ್ತರ ಹುಡುಕುವ ಅನೇಕ ನಿದರ್ಶನಗಳಿವೆ. ಆದರೆ ಪ್ರತಿಯೊಬ್ಬ ಶಿಷ್ಯನ ಪ್ರತಿಯೊಂದು ಸಂಶಯದ ಪರಿಹಾರ ಇಬ್ಬರೂ ಜೊತೆಯಲ್ಲಿ ಹುಡುಕುವುದು ಸಾಧ್ಯವಿಲ್ಲ. 

ಒಂದು ವಿಷಯದ ಬಗ್ಗೆ ಹೊರಗಿನಿಂದ ತಿಳಿಯುವುದು ಅನುಭವ. ಒಳಗಿನಿಂದ ತಿಳಿಯುವುದು ಅನುಭಾವ. ಲೌಕಿಕದ ಅನೇಕ ವಿಷಯಗಳು ಅನುಭವದ ಮಟ್ಟದಲ್ಲಿಯೇ ನಿಲ್ಲುತ್ತವೆ. ಪಾರಮಾರ್ಥಿಕ ವಿಷಯಗಳಲ್ಲಿ ಇನ್ನೊಬ್ಬರ ಅನುಭವದಿಂದ ನಮಗೆ ತೃಪ್ತಿಯಾಯಿತು ಎನ್ನುವಂತಿಲ್ಲ. ನಾವೇ ನಮ್ಮ ಅನುಭವದಿಂದ ತಿಳಿಯಬೇಕು. ಆಗ ಅನುಭವದ ಮಟ್ಟದಿಂದ ಅನುಭಾವಕ್ಕೆ ಏರುವ ಅವಶ್ಯಕತೆ ಇದೆ. ಇಲ್ಲಿ ಗುರುವು ಮಾರ್ಗದರ್ಶಕನಾಗಬಹುದೇ ಹೊರತು ಉತ್ತರ ಹುಡುಕಲು ಶಿಷ್ಯನ ಜೊತೆಯಲ್ಲಿ ಸೇರುವಹಾಗಿಲ್ಲ. 

*****

"ನಿನಗೆ ಮೈಮೇಲೆ ಪ್ರಜ್ಞೆ ಇದೆಯೇ?" ಎಂದು ದೊಡ್ಡವರು ಚಿಕ್ಕವರನ್ನು ಗದರುವುದು ಕೇಳಿದ್ದೇವೆ. "ಪ್ರಜ್ಞೆ" ಅಂದರೆ ಏನು? "ಅಪಘಾತದಿಂದ ಅವನಿಗೆ ಪ್ರಜ್ಞೆ ಹೋಯಿತು" ಅನ್ನುತ್ತೇವೆ. ಪ್ರಜ್ಞೆ ಅನ್ನುವ ಪದವನ್ನು ಸಾಮಾನ್ಯವಾಗಿ "ಎಚ್ಚರ" (conciousness) ಅನ್ನುವ ಅರ್ಥದಲ್ಲಿ ಪ್ರಯೋಗಿಸುತ್ತೇವೆ. ಪ್ರಜ್ಞೆ ಪದದ ಸರಿಯಾದ ಅರ್ಥವೆಂದರೆ "ಒಂದು ವಿಷಯವನ್ನು ಹೇಳಿದರೆ ಅದಕ್ಕೆ ಸಂಬಂಧಿಸಿದ ಬೇರೆಲ್ಲ ಹಿಂದೆ ಕಲಿತ ವಿಷಯಗಳನ್ನೂ ಸೇರಿಸಿಕೊಂಡು ಒಟ್ಟಾರೆ ಅರ್ಥ ತಿಳಿಯುವ ಶಕ್ತಿ". ಈ ಪ್ರಜ್ಞಾಶಕ್ತಿಯ ವಿಕಾಸ ಮಾಡಿಕೊಂಡು ಬೆಳೆಯುವುದು "ಪ್ರತಿಭೆ". 

ಆಚಾರ್ಯ ಅಭಿನವ ಗುಪ್ತನು ತನ್ನ ಗುರುಗಲ್ಲೊಬ್ಬ ಎಂದು ಹೇಳಿಕೊಂಡಿರುವ ಭಟ್ಟತೌತ (ಭಟ್ಟತಾತ) ತನ್ನ "ಕಾವ್ಯ ಕೌತುಕ" ಅನ್ನುವ ಗ್ರಂಥದಲ್ಲಿ ಈ "ಪ್ರತಿಭೆ" ಅನ್ನುವ ಪದಕ್ಕೆ ವಿವರಣೆ ಕೊಡುತ್ತಾನೆ. ದುರ್ದೈವಕ್ಕೆ ಈ "ಕಾವ್ಯ ಕೌತುಕ" ಅನ್ನುವ ಗ್ರಂಥವೂ, ಅದಕ್ಕೆ ಅಭಿನವ ಗುಪ್ತ ರಚಿಸಿಕೊಟ್ಟ "ವಿವರಣ" ಎನ್ನುವ ಟೀಕಾಗ್ರಂಥವೂ ಈಗ ಸಿಕ್ಕುವುದಿಲ್ಲ. ಆದರೆ ಈ ಗ್ರಂಥದ ಒಂದು ಶ್ಲೋಕ ಬೇರೆ ಕಡೆಗಳಲ್ಲಿ ಮುಂದಿನ ಕವಿಗಳು ಉಲ್ಲೇಖಿಸಿರುವುದರಿಂದ ಸಿಗುತ್ತದೆ. ಅದು ಹೀಗಿದೆ: 

ಪ್ರಜ್ಞಾ ನವನವೋಲ್ಲೇಖಶಾಲಿನೀ ಪ್ರತಿಭಾ ಮತಾ
ತದನುಪ್ರಾಣನಾಜೀವದ್ ವರ್ಣಾನಾನಿಪುಣಃ  ಕವಿ: 

"ಹೊಸಹೊಸದಾಗಿ ಉಲ್ಲೇಖಿಸುವ ಸಾಮರ್ಥ್ಯವುಳ್ಳ ಪ್ರಜ್ಞಾಶಕ್ತಿಗೆ "ಪ್ರತಿಭೆ" ಎಂದು ಹೆಸರು. ಆ ಪ್ರತಿಭೆಯನ್ನವಲಂಬಿಸಿ ಜೀವಂತವಾದ ವರ್ಣನೆಯನ್ನು ಮಾಡುವುದರಲ್ಲಿ ನೈಪುಣ್ಯವುಳ್ಳವನು ಕವಿ" ಎನ್ನುವುದು ಇದರ ಅರ್ಥ. ಸುಮಾರು ಒಂದು ಸಾವಿರದ ಎರಡು ನೂರು ವರುಷಗಳ ಹಿಂದೆ (ಎಂಟನೆಯ ಶತಮಾನ) ಈ ಮಟ್ಟದ ಖಚಿತವಾದ ಲಕ್ಷಣ (ಅರ್ಥ ನಿರೂಪಣೆ) ನಮ್ಮ ಹಿರಿಯರು ಮಾಡಿದ್ದಾರೆ ಎಂದು ಹೆಮ್ಮೆ ಪಡಬಹುದು. ಇಂತಹ ನುಡಿಮುತ್ತುಗಳುಳ್ಳ ಗ್ರಂಥಗಳು ಪರಕೀಯರ ಧಾಳಿಗಳಲ್ಲಿ ಸುಟ್ಟು ಬೂದಿಯಾದುವು ಎಂದು ವಿಷಾದಿಸಲೂಬಹುದು. 

ಒಳ್ಳೆಯ ಗುರುವನ್ನು ಆರಿಸಿಕೊಂಡು ಅವನಿಂದ ಕಲಿಯುವ ಶಿಷ್ಯನಿಗೆ ಈ "ಪ್ರಜ್ಞಾಶಕ್ತಿ" ಇರುವುದು ಅತಿ ಅವಶ್ಯಕ. 
*****

ಈಗಿನ ಶಾಲಾ-ಕಾಲೇಜುಗಳ ಮಾದರಿಯ ವಿದ್ಯಾಭ್ಯಾಸ ನಡೆಯುವ ಸಂದರ್ಭದಲ್ಲಿ ಗುರು-ಶಿಷ್ಯರ ಸಂಬಂಧದ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಚರ್ಚಿಸಿದ್ದೆವು. ಇದಕ್ಕೆ ಒಂದು ಉದಾಹರಣೆ ನೋಡುವುದು ಸೂಕ್ತ. ಇದೇನೂ ಇಂದಿನ ವೃತ್ತಾಂತವಲ್ಲ. ಸುಮಾರು ಆರೇಳು ದಶಕಗಳ ಹಿಂದಿನದು. ಈಗಂತೂ ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವ ಏಕಮೇವ ಗುರಿಯಿಂದ ಓದುವ ವಿದ್ಯಾರ್ಥಿಗಳ ಪರಿ ಹೇಳುವುದೇ ಬೇಡ. 

ಪ್ರಾಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಅವರಿಗೆ ಮುಂಬಡ್ತಿ (ಪ್ರಮೋಷನ್) ಕೊಡುವ ಸಂದರ್ಭ. ಆಗ ಅಕ್ಸಫರ್ಡ್ ಅಥವಾ ಕೇಂಬ್ರಿಜ್ ವಿದ್ಯಾಲಯಗಳಲ್ಲಿ ಡಿಗ್ರಿ ಪಡೆದವರಿಗೆ ಮಾತ್ರವೇ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನೇಮಕ ಮಾಡಲಾಗುತ್ತಿತ್ತಂತೆ. ಶ್ರೀಕಂಠಯ್ಯನವರು ಅಲ್ಲಿಗೆ ಹೋಗಿ ಡಿಗ್ರಿ ಪಡೆದವರಲ್ಲ. ಅವರಿಗೆ ಒಂದು ಆಯ್ಕೆಯನ್ನು ಕೊಟ್ಟರಂತೆ. ಹೆಚ್ಚು ಸಂಬಳದ ಕನ್ನಡ ಪ್ರಾಧ್ಯಾಪಕನ ಕೆಲಸ ಅಥವಾ ಕಡಿಮೆ ಸಂಬಳದ ಇಂಗ್ಲಿಷ್ ಪ್ರಾಧ್ಯಾಪಕನ ಕೆಲಸ. ಆಯ್ಕೆ ಶ್ರೀಯವರಿಗೆ ಬಿಟ್ಟದ್ದು. ಅವರ ಎರಡೂ ಭಾಷೆಗಳ ಮೇಲಿನ ಅಪಾರ ಪಾಂಡಿತ್ಯ ತಿಳಿದಿದ್ದ ಮೇಲಧಿಕಾರಿಗಳಿಂದ ಈ ಅವಕಾಶ. "ನಾನು ಕನ್ನಡದ ಕೆಲಸವನ್ನು ಹೇಗಾದರೂ ಮಾಡುತ್ತೇನೆ. ವಿದೇಶೀಯರಿಗಿಂತ, ಅಲ್ಲಿನ ಡಿಗ್ರಿ ಪಡೆದವರಿಗಿಂತ ಇಲ್ಲಿನವರು ಏನೂ ಕಡಿಮೆ ಇಲ್ಲ ಎಂದು ತೋರಿಸಬೇಕು" ಎನ್ನುವ ಛಲದಿಂದ ಕಡಿಮೆ ಸಂಬಳದ ಇಂಗ್ಲಿಷ್ ಪ್ರೊಫೆಸರ್ ಹುದ್ದೆ ಆರಿಸಿಕೊಂಡರು. 

ಶೇಕ್ಸಪೀಯರ್ ಮಹಾಕವಿಯ "ಒಥೆಲೋ" ನಾಟಕ ಒಂದು ತರಗತಿಗೆ ಪಠ್ಯಪುಸ್ತಕ. ಶ್ರೀಯವರು ಕೇವಲ ಪರೀಕ್ಷೆಗೆ ಪಾಠ ಹೇಳಿದವರಲ್ಲ. ಆಯಾಗೋ ಪಾತ್ರ ಚಿತ್ರಣ ವಿವರಿಸುವಾಗ ಬೇರೆ ಬೇರೆ ಭಾಷೆಗಳ ಮುಖ್ಯ ಕೃತಿಗಳಲ್ಲಿ ಬರುವ ಖಳನಾಯಕರ ಪಾತ್ರಗಳ ಜೊತೆ ಆಯಾಗೋವಿನ ಸಾಮ್ಯ-ಭೇದಗಳನ್ನು ಒಂದು ವಾರದವರೆಗೂ ವಿವರಿಸಿದರಂತೆ. ಅನೇಕ ವಿದ್ಯಾರ್ಥಿಗಳಿಗೆ ಇಷ್ಟೆಲ್ಲಾ ಬೇಡವಾಯಿತು. ಕಡೆಗೆ ಉಪಕುಲಪತಿಗಳಾದ ಏನ್. ಎಸ. ಸುಬ್ಬ ರಾವ್ ಅವರಿಗೆ ದೂರೊಂದು ಹೋಯಿತು. "ಪರೀಕ್ಷೆಗೆ ಪಾಠ ಹೇಳದೆ ಏನೇನೋ ಹೇಳುತ್ತಾ ಕಾಲಹರಣ ಮಾಡುತ್ತಾರೆ" ಎಂದು ದೂರು. ಶ್ರೀಯವರ ಬಗ್ಗೆ ಗೊತ್ತಿದ್ದ ಉಪಕುಲಪತಿಗಳು ದೂರಿನ ಮೇಲೆ ಏನೂ ಕ್ರಮ ಕೈಗೊಳ್ಳಲಿಲ್ಲ ಅನ್ನುವುದು ಬೇರೆ ಮಾತು. ವಿದ್ಯಾರ್ಥಿಗಳು ಪಾಠವನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನುವುದಕ್ಕೆ ಈ ಉದಾಹರಣೆ. ಇದನ್ನು ಶ್ರೀಯವರ ಜೀವನಚರಿತ್ರೆಯಲ್ಲಿ ಕಾಣಬಹುದು. 

*****

ಒಂದು ವಿಷಯವನ್ನು ಓದಿದರೆ ಅಥವಾ ಮತ್ತೊಬ್ಬರಿಂದ ಕೇಳಿದರೆ ಅದು ಪೂರ್ತಿಯಾಗಿ ಅರ್ಥವಾಗುತ್ತದೆ ಅನ್ನುವಂತಿಲ್ಲ. ಸ್ಥೂಲವಾಗಿ ಕೆಲಮಟ್ಟಿಗೆ ತಿಳಿಯಬಹುದು. ಆಳವಾದ ತಿಳಿವಿಗೆ ಅದರ ಸಂಬಂಧಿಸಿದ ವಿಷಯಗಳ ಮನನ-ಮಂಥನ ಬೇಕಾಗುತ್ತದೆ. ಓದಿ, ಕೇಳಿ, ಮನನ ಮಾಡಿ, ಪೂರ್ಣವಾಗಿ ಅರ್ಥವಾಗಿವೆ ಅನ್ನುವ ಅನೇಕ ವಿಷಯಗಳು ಒಂದು ಹಂತದಲ್ಲಿ ಮತ್ತೊಮ್ಮೆ ಅಧ್ಯಯನ ಮಾಡಬೇಕು ಅನ್ನುವ ಪರಿಸ್ಥಿತಿ ಬರುವುದೂ ಉಂಟು. 

ಪ್ರಾಚಾರ್ಯ ತಿ. ನಂ. ಶ್ರೀಕಂಠಯ್ಯನವರು ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ದೊಡ್ಡ ಹೆಸರು. ತತ್ವಶಾಸ್ತ್ರದ ಪರಮ ಗುರುಗಳಾದ ಪ್ರಾಚಾರ್ಯ ಎಂ. ಹಿರಿಯಣ್ಣನವರ ಶಿಷ್ಯರು. ಹಿರಿಯಣ್ಣನವರು ಮತ್ತು ಇತರ ಪಂಡಿತೋತ್ತಮರ ಶಿಷ್ಯರಾಗಿ ಅಧ್ಯಯನ ಮಾಡಿ ಮುಂದೆ ತಾವೇ ದೊಡ್ಡ ಮಟ್ಟದ ಗುರುವರ್ಯರಾದವರು ತಿ. ನಂ. ಶ್ರೀಕಂಠಯ್ಯನವರು. "ಭಾರತದ ಸಂವಿಧಾನ" ಕನ್ನಡದಲ್ಲಿ ಹೊರಬರಲು ಕಾರಣಕರ್ತರು. "ಪ್ರೆಸಿಡೆಂಟ್" ಅನ್ನುವದಕ್ಕೆ ಪರ್ಯಾಯವಾಗಿ "ರಾಷ್ಟ್ರಪತಿ" ಅನ್ನುವ ಪದವನ್ನು ಕೊಟ್ಟವರು. ಅವರು ಜೀವಿಸಿದ್ದುದು ಕೇವಲ ಅರವತ್ತು ವರ್ಷ. ಅಷ್ಟು ಕಾಲದಲ್ಲೇ ಅನೇಕ ಸಾಧನೆಗಳನ್ನು ಮಾಡಿದ ಮಹನೀಯರು. 

ಅವರ ಮೇರು ಕೃತಿ "ಭಾರತೀಯ ಕಾವ್ಯಮೀಮಾಂಸೆ" ರಚನೆಯ ಸಂದರ್ಭ. ಆನಂದವರ್ಧನನ "ಧ್ವನ್ಯಾಲೋಕ" ಮೇರು ಕೃತಿಯನ್ನು ಅನೇಕ ಬಾರಿ ತಾವು ಅಧ್ಯಯನ ಮಾಡಿದುದಲ್ಲದೇ ಅನೇಕ ವಿದ್ಯಾರ್ಥಿಗಳಿಗೆ ಪಾಠ ಹೇಳಿದವರು. "ಭಾರತೀಯ ಕಾವ್ಯಮೀಮಾಂಸೆ" ಕೃತಿ ರಚನೆಯ ಸಂದರ್ಭದಲ್ಲಿ ಅವರಿಗೆ ಅದನ್ನು ಮತ್ತೊಮ್ಮೆ ಗುರುಮುಖೇನ ಅಧ್ಯಯನ ಮಾಡಬೇಕೆನ್ನಿಸಿತಂತೆ! ಆ ವೇಳೆಗೆ ಅವರ ಗುರುಗಳಾದ ಹಿರಿಯಣ್ಣನವರಿಗೆ ಹತ್ತಿರ ಹತ್ತಿರ ಎಂಭತ್ತರ ವಯಸ್ಸು. ಅವರು ಬೇರೆ ಚಟುವಟಿಕೆಗಳನ್ನು ನಿಲ್ಲಿಸಿ ಕೇವಲ ತಮ್ಮ ಅಧ್ಯಯನ ಮಾತ್ರ ನಡೆಸುತ್ತಿದ್ದರಂತೆ. ಆದರೂ ಶಿಷ್ಯನ ಕೋರಿಕೆ ಮನ್ನಿಸಿ ಶಿಷ್ಯ ವಾತ್ಸಲ್ಯದಿಂದ ಮತ್ತೊಮ್ಮೆ ಪಾಠ ಹೇಳಿದರಂತೆ! 

"ಭಾರತೀಯ ಕಾವ್ಯಮೀಮಾಂಸೆ" ಕೃತಿಯ ಮುನ್ನುಡಿಯಲ್ಲಿ ಶ್ರೀಕಂಠಯ್ಯನವರು ಈ ವಿಷಯವನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸಿದ್ದಾರೆ. 

ಒಂದು ಕಡೆ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳು. ಮತ್ತೊಂದೆಡೆ ಎಷ್ಟು ತಿಳಿದರೂ ಇನ್ನೂ ತಿಳಿಯುವುದು ಇದೆ ಎನ್ನುವ ಘನಪಾಠಿ ಗುರು-ಶಿಷ್ಯರು. ಗುರು-ಶಿಷ್ಯ ಬಾಂಧವ್ಯಕ್ಕೆ ಸೊಗಸಾದ ಉದಾಹರಣೆಗಳು. 

***** 

ಜ್ಞಾನದ ಒಂದು ಶಾಖೆಯನ್ನು ಒಬ್ಬರು ಮತ್ತೊಬ್ಬರಿಂದ ಶಿಷ್ಯರಾಗಿ ಕಲಿತು, ಅವರಿಗೆ ಗುರುವಾಗಿ ಮತ್ತೊಂದು ಜ್ಞಾನದ ಶಾಖೆಯನ್ನು ಕಲಿಸಿರುವ ಉದಾಹರಣೆಗಳಿವೆ. ಇದೆ ರೀತಿ ಗುರು-ಶಿಷ್ಯರಿಬ್ಬರೂ ಜೊತೆಯಾಗಿ ಪರಮ ಸತ್ಯದ ಅನ್ವೇಷಣೆ ಮಾಡಿರುವುದೂ ಇದೆ. ಇವುಗಳನ್ನು ಮುಂದೆ ಎಂದಾದರೂ ಅವಕಾಶವಾದಾಗ ನೋಡೋಣ. 

Friday, August 22, 2025

ಗುರು-ಶಿಷ್ಯರ ಸಂಬಂಧ


"ಗುರು ಪೂರ್ಣಿಮಾ" ಸಂದರ್ಭಗಳಲ್ಲಿ ಕಂಡುಬಂದ ಅನೇಕ ವಿಚಾರಗಳ ಹಿನ್ನೆಲೆಯಲ್ಲಿ ಆಸಕ್ತರು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. "ಒಬ್ಬ ಗುರುವು ತನ್ನ ಶಿಷ್ಯನಾಗಲು ಯೋಗ್ಯನಾದವನನ್ನು ಹೇಗೆ ಗುರುತಿಸುತ್ತಾನೆ? ಅಥವಾ ತನ್ನ ಬಳಿ ಬಂದವರನ್ನು ಹೇಗೆ ಪರೀಕ್ಷಿಸಿ, ಶೊಧಿಸಿ, ನಂತರ ಶಿಷ್ಯರನ್ನಾಗಿ ಸ್ವೀಕರಿಸುತ್ತಾನೆ?" ಎನ್ನುವುದು ಇದರಲ್ಲಿ ಒಂದು. ಮತ್ತನೇಕ ಪ್ರಶ್ನೆಗಳು ಇದೊಂದು ದೊಡ್ಡ ಪ್ರಶ್ನೆಯಲ್ಲಿ ಅಡಕವಾಗಿವೆ. ಇಂತಹ ಪ್ರಶ್ನೆಗಳಿಗೆ ಚೆನ್ನಾಗಿ ತಿಳಿದವರು ಮಾತ್ರ ಉತ್ತರ ಕೊಡಲು ಶಕ್ತರು. ಆದರೂ, ನಮ್ಮಮಟ್ಟಿಗೆ ಮತ್ತು ನಮ್ಮ ಪರಿಧಿಯಲ್ಲಿ ಇದರ ಬಗ್ಗೆ ಸ್ವಲ್ಪ ವಿಚಾರ ಮಾಡುವುದು ತಪ್ಪೇನೂ ಅಲ್ಲ. ಆದುದರಿಂದ ಈ ಪ್ರಶ್ನೆಯ ಅನೇಕ ಮಜಲುಗಳಲ್ಲಿ  ಕೆಲವನ್ನು ಈಗ ನೋಡೋಣ. 

******

ಗುರು ಮತ್ತು ಶಿಷ್ಯ ಅನ್ನುವ ಪದಗಳ ಉಗಮ ಪ್ರಾಯಶ: ವೈದಿಕ ವಾಂಗ್ಮಯದ ಕೊಡುಗೆ. ಅಲ್ಲಿನ ಗುರು-ಶಿಷ್ಯರ ಸಂಬಂಧ ಇಂದಿನ ಶಿಕ್ಷಕ-ವಿದ್ಯಾರ್ಥಿ ಸಂಬಂಧಗಳಿಗಿಂತ ಬಹಳ ಆಳವಾದದ್ದು. ಶಿಕ್ಷಕ ಮಾಡುವುದು ಒಂದು ಉದ್ಯೋಗ. ಜೀವನ ನಿರ್ವಹಣೆಗೆ ಅದೊಂದು ದಾರಿ. ವಿದ್ಯಾರ್ಥಿಯೂ ಹೀಗೆಯೇ. ಕಲಿಯಲು ಒಂದು ವ್ಯವಸ್ಥೆ ಇದೆ. ಅಲ್ಲಿ ಹೋಗಿ ಸೇರಿಕೊಂಡರೆ ವ್ಯವಸ್ಥೆಯೇ ಮುಂದಿನ ಕಲಿಕೆ ನೀಡುತ್ತದೆ. ಈ ವ್ಯವಸ್ಥೆಯಲ್ಲಿ ಶಿಕ್ಷಕನೂ ವಿದ್ಯಾರ್ಥಿಗಳನ್ನು ಆರಿಸುವುದಿಲ್ಲ. ವಿದ್ಯಾರ್ಥಿಯೂ ಗುರುವನ್ನು ಹುಡುಕಿಕೊಂಡು ಹೋಗುವುದಿಲ್ಲ. ತನ್ನ ತರಗತಿಗಳಲ್ಲಿ ಯಾವ ವಿದ್ಯಾರ್ಥಿಗಳು ಬಂದು ಕೂಡುತ್ತಾರೆ ಎನ್ನುವುದು ಶಿಕ್ಷಕನ ಅಂಕೆಯಲಿಲ್ಲ. ಅಂತೆಯೇ, ಯಾವ ಶಿಕ್ಷಕನು ತನಗೆ ಪಾಠ ಹೇಳುತ್ತಾನೆ ಎನ್ನುವುದು ವಿದ್ಯಾರ್ಥಿಗೂ ಗೊತ್ತಿಲ್ಲ. 

ಈಗಿನ ಶಿಕ್ಷಕ-ವಿದ್ಯಾರ್ಥಿ ಸಂಬಂಧಗಳಲ್ಲಿ ಗುರು-ಶಿಷ್ಯ ಸಂಬಂಧ ಇಲ್ಲ ಎಂದು ಹೇಳುವಹಾಗಿಲ್ಲ. ಈಗಲೂ ಇಂತಹ ವ್ಯಾವಹಾರಿಕ ಸಂಬಂಧಗಳ ಮಧ್ಯೆ ಅಲ್ಲೊಂದು-ಇಲ್ಲೊಂದು ಗುರು-ಶಿಷ್ಯ ಬಾಂಧವ್ಯ ಹುಟ್ಟಿಕೊಳ್ಳುವುದೂ ಉಂಟು. ಆದರೆ ಅದು ಮೊಸರು ಕಡೆದಾಗ ಬರುವ ಮಜ್ಜಿಗೆಯಂತೆಯೇ ಹೊರತು ಹೆಚ್ಚಿನ ಅಪೇಕ್ಷೆಯ ಬೆಣ್ಣೆಯಂತೆ ಎಂದು ಹೇಳುವಂತಿಲ್ಲ. 

ಗುರುಕುಲ ಪದ್ದತಿಯಲ್ಲಿ ಜಿಜ್ಞಾಸು ತಾನು ಕಲಿಯಬೇಕೆನ್ನುವ ವಿಷಯದಲ್ಲಿ ಪ್ರಾವೀಣ್ಯತೆ ಸಾಧಿಸಿದ ಗುರುವನ್ನು ಹುಡುಕಿಕೊಂಡು ಹೋಗುತ್ತಿದ್ದ. ಇಂದಿನ ದಿನಗಳಂತೆ ಒಂದು ನಿಯಮಿತ ಸಮಯದಲ್ಲಿ ಕಲಿಯುವಂತೆ ವ್ಯವಸ್ಥೆ ಇರಲಿಲ್ಲ. ಒಮ್ಮೆ ಶಿಷ್ಯನೆಂದು ಗುರುವು ಸ್ವೀಕರಿಸಿದ ಮೇಲೆ ಅವನ ಸಕಲ ಜವಾಬ್ದಾರಿಗಳೂ ಗುರುವಿನ ಮೇಲೆಯೇ. ಅಲ್ಲಿ ಸಂಬಳ-ಸಾರಿಗೆ ಅಥವಾ ಫೀಸು-ಭತ್ಯಗಳ ಲೆಕ್ಕವಿರಲಿಲ್ಲ. ಅಲ್ಲಿ ಪ್ರಾಯಶಃ ಪ್ರಾರಂಭದಲ್ಲಿ ಅನೇಕ ಮಂದಿ ಸಹಪಾಠಿಗಳು ಕೆಲಮಟ್ಟಿಗೆ ಒಟ್ಟಾಗಿ ಕಲಿಯುವಂತಿದ್ದರೂ, ದಿನ ಕಳೆದಂತೆ ಪ್ರತಿ ಶಿಷ್ಯನೂ ಗುರುಗಳಿಂದ ನೇರ ಕಲಿಯುವಂತಿತ್ತು. ಎಲ್ಲಾ ಕಲಿಕೆ ಮುಗಿದ ನಂತರ ಶಿಷ್ಯನು "ಗುರುದಕ್ಷಿಣೆ" ಕೊಡುತ್ತಿದ್ದ. ಅವರು ಏನು ಕೇಳಿದರು, ಇವನು ಏನು ಕೊಟ್ಟ ಎನ್ನುವುದು ಅವರಿಬ್ಬರಿಗೇ ಗೊತ್ತು. 

ಈಗಲೂ ಕೆಲವು ಸಂದರ್ಭಗಳಲ್ಲಿ ಒಂದು ವಿಷಯದಲ್ಲಿ ಪರಿಣತಿ ಪಡೆಯುವ ಆಸೆಯುಳ್ಳ ವಿದ್ಯಾರ್ಥಿಗಳು ಕೆಲವು ಶಿಕ್ಷಣ ಸಂಸ್ಥೆಗಳನ್ನು ವಿಶೇಷವಾಗಿ ಹುಡುಕಿಕೊಂಡು ಹೋಗುವುದು ಉಂಟು. ಅಲ್ಲಿ ಅವಕಾಶ ಸಿಗದಿದ್ದರೆ ಮತ್ತೆ ಅದಕ್ಕಿಂತ ಸ್ವಲ್ಪ ಕೆಳಗಿನ ಶ್ರೇಣಿಯ ಸಂಸ್ಥೆ. ಹೀಗೆ. ವೈಯುಕ್ತಿಕವಾಗಿ ಒಬ್ಬ ವಿದ್ಯಾರ್ಥಿ ಗುರುವನ್ನು ಹುಡುಕಿಕೊಂಡು ಹೋಗಿ ಕಲಿಯುವ ವ್ಯವಸ್ಥೆ ಲಲಿತಕಲೆಗಳ ಸಂದರ್ಭದಲ್ಲಿ ಈಗಲೂ ಉಂಟು.  ನಾಟ್ಯ, ಸಂಗೀತ, ಶಿಲ್ಪ, ಚಿತ್ರಕಲೆ, ಗಮಕ ಮುಂತಾದವುಗಳಲ್ಲಿ ಇದು ಈಗಲೂ ಮುಂದುವರೆದಿರುವುದನ್ನು ಕಾಣಾಬಹುದು.  

"ಸಂಧ್ಯಾರಾಗ' ಕನ್ನಡ ಚಲನ ಚಿತ್ರದಲ್ಲಿ ಸಂಗೀತವೇ ಜೀವನವೆಂದು ನಂಬಿದ ಲಕ್ಷ್ಮಣ ಎನ್ನುವ ಯುವಕ (ರಾಜಕುಮಾರ್) ಮುಳುಬಾಗಿಲು ಚನ್ನಪ್ಪ ಎನ್ನುವ ಅಪರೂಪದ ಸಂಗೀತಗಾರರು ಎಲ್ಲಿದ್ದಾರೆ ಎನ್ನುವುದು ಪತ್ತೆಯಾಗದುದರಿಂದ ತಂಜಾವೂರು ಕೃಷ್ಣ ಅಯ್ಯರ್ ಅನ್ನುವವರ ಬಳಿ ಕಲಿಯಲು ಹೋಗುವ ಸುಂದರವಾದ ಚಿತ್ರಣವಿದೆ. "ದೀನ ನಾ ಬಂದಿರುವೆ, ಬಾಗಿಲಲಿ ನಿಂದಿರುವೆ" ಎನ್ನುವ ಹಾಡಿನ ಮೂಲಕ ಕಲಿಯುವ ತುಡಿತದ ಶಿಷ್ಯ ಮತ್ತು ಕಲಿಸಬೇಕೆಂಬ ಬಲವಾದ ಇಚ್ಛೆ ಇರುವ ಗುರುವಿನ ಪರಸ್ಪರ ಹುಡುಕಾಟದ ಕೊನೆ ಹೇಗಿರಬಹುದು ಎನ್ನುವ ಒಂದು ಉದಾಹರಣೆ ಇಲ್ಲಿ ಕಾಣಬಹುದು.  ಇದೇ ರೀತಿ "ಹಂಸಗೀತೆ" ಚಲನ ಚಿತ್ರದಲ್ಲಿ ಯುವಕ ವೆಂಕಟಸುಬ್ಬಯ್ಯ (ಅನಂತನಾಗ್) ಅವಧೂತನೊಬ್ಬನ (ಬಿ. ವಿ. ಕಾರಂತ್) ಹಿಂದೆ ಬಿದ್ದು ಸಂಗೀತ ಕಲಿತು ಮುಂದೆ ಚಿತ್ರದುರ್ಗದ ಮದಕರಿ ನಾಯಕನ ಆಡಳಿತದಲ್ಲಿ "ಆಸ್ಥಾನ ವಿದ್ವಾನ್ ಭೈರವಿ ವೆಂಕಟಸುಬ್ಬಯ್ಯ" ಎಂದು ಪ್ರಖ್ಯಾತನಾಗುವುದನ್ನು ಕಾಣಬಹುದು. 

***** 

ನಮ್ಮ ವೈದಿಕ ವಾಂಗ್ಮಯದಲ್ಲಿ, ಅದರಲ್ಲೂ ವಿಶೇಷವಾಗಿ ಉಪನಿಷತ್ತುಗಳಲ್ಲಿ ಗುರು-ಶಿಷ್ಯ ಸಂಬಂಧದ ಗಾಢವಾದ ವಿಶೇಷತೆಗಳನ್ನು ಕಾಣಬಹುದು. ಯಾಜ್ಞವಲ್ಕ್ಯ- ಉಶಸ್ಥ ಚಾಕರಾಯಣ ಸಂವಾದ, ಷಟ್ ಪ್ರಶ್ನೋಪನಿಷತ್ತಿನಲ್ಲಿ ಬರುವ ಆರು ಪ್ರಶ್ನೆಗಳನ್ನು ಕೇಳುವ ಜಿಜ್ಞಾಸುಗಳ ಹಿನ್ನೆಲೆ, ಇವು ಉದಾಹರಣೆಗಳಾಗಿ ನೋಡಬಹುದು. ತನ್ನ ಬಳಿ ಜ್ಞಾನ ದಾಹದಿಂದ ಬಂದ ಶಿಷ್ಯನನ್ನು ಗುರುವು ಸ್ವೀಕರಿಸುವ ದಾರಿ ಹೀಗೆ ಇತ್ತು ಎಂದು ತಿಳಿಯಬಹುದು:
  • ಮೊದಲಿಗೆ ಬಂದವನನ್ನು ಈಗ ಸಾಧ್ಯವಿಲ್ಲ ಎಂದು ಹಿಂದೆ ಕಳಿಸುವುದಿತ್ತು. ಕಲಿಕೆಯ ದಾಹ ತೀವ್ರವಾಗಿಲ್ಲದಿದ್ದಲ್ಲಿ, ಅವನು ಸೋಮಾರಿಯಾಗಿದ್ದಲ್ಲಿ, ಹಾಗೆ ಹಿಂದೆ ಹೋದವನು ಮತ್ತೆ ಮರಳಿ ಬರುತ್ತಿರಲಿಲ್ಲ. ಕೆಲವೊಮ್ಮೆ ಅವನಿಗೆ ಮತ್ಯಾರೋ ಗುರುಗಳು ಸಿಕ್ಕಬಹುದು. ಹೀಗೆ ಒಂದು ರೀತಿಯ ಸೋಸುವ ಕೆಲಸ ನಡೆಯುತ್ತಿತ್ತು. 
  • ಮತ್ತೆ ಮತ್ತೆ ಹಿಂದೆ ಕಳಿಸಿದರೂ ಎಡಬಿಡದೆ ಬರುವ ಜ್ಞಾನದಾಹಿ ಜಿಜ್ಞಾಸು ಈಗ ಶಿಷ್ಯನಾಗಲು ಸ್ವಲ್ಪಮಟ್ಟಿಗೆ ಯೋಗ್ಯನಾದ. ಇಂತಹವನನ್ನು ಗುರುವು ಗುರುಕುಲದಲ್ಲಿ ಇರಲು ಬಿಡುತ್ತಿದ್ದರು. ಅಂದಮಾತ್ರಕ್ಕೆ ಮಾರನೆಯ ದಿನದಿಂದ ಪಾಠ ಶುರುವಾಯಿತೆಂದಲ್ಲ. ಕೆಲವು ಕಾಲ, ಪ್ರಾಯಶಃ ಒಂದು ವರ್ಷ (ಇಷ್ಟೇ ಇರಬೇಕೆಂಬ ನಿಯಮವಿಲ್ಲ), ಗುರುಕುಲದ ಸಕಲ ಕೆಲಸಗಳನ್ನೂ ಮಾಡಿಕೊಂಡಿರಬೇಕಿತ್ತು. ಹೀಗೆ ಕೆಲಸ ಮಾಡಲು ಇಷ್ಟವಿಲ್ಲದವನು ಒಂದು ದಿನ ಹೋಗಬಹುದು. ಇವನು ಈಗ ಒಂದು ಹದಕ್ಕೆ ಬಂದಿದ್ದಾನೆ ಎನ್ನುವುದು ಗುರುವಿಗೆ ಮನವರಿಕೆ ಆಗಬೇಕು. ಅಲ್ಲಿಯವರೆಗೂ ಹೀಗೆ. 
  • ಈ ರೀತಿ ಇರಲು ಮನಸ್ಸಿಲ್ಲದವನು ಒಂದು ದಿನ ಬಿಟ್ಟು ಹೋಗಬಹುದು. ಅಂತಹವರಿಗೆ ಬಂದ ಕೆಲಸ ಅಲ್ಲಿಗೇ ಮುಗಿಯಿತು. 
  • ಹೀಗೆ ಒಂದು ಕಾಲದವರೆಗೆ ನಿರೀಕ್ಷೆಯಲ್ಲಿಯೇ ಕಾಲ ಕಳೆಯುವಾಗ, ವಿದ್ಯಾರ್ಥಿಗೆ ತಾನು ಕಲಿಯಲು ಬಂದ ವಿಷಯದ ಮೇಲೆ ಚಿಂತಿಸುತ್ತಾ ಇರುವಾಗ, ಬಂದ ಉದ್ದೇಶ್ಯ ಇನ್ನಷ್ಟು ಸ್ಪುಟ (ಕ್ಲಿಯರ್) ಆಗುವುದು. ಮನಸ್ಸಿನಲ್ಲಿ ಇದ್ದ ಕೆಲವು ಗೊಂದಲಗಳಿಗೆ ಅವನೇ ಉತ್ತರ ಕಂಡುಕೊಳ್ಳಬಹುದು. ಮೊದಲು ಬಂದಾಗ ಕೇಳಬೇಕು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮಟ್ಟದ ಪ್ರಶ್ನೆಗಳು ಈಗ ಹೊಳೆಯಬಹುದು. ಇದು ಒಂದು ಹಂತದ ಪೂರ್ವಭಾವಿ ಕಲಿಕೆಯೇ ಆಯಿತು!
  • ಈಗ "ಏನನ್ನು ಕೇಳಬೇಕು? ಏನನ್ನು ಕಲಿಯಬೇಕು?" ಎನ್ನುವುದು ಅವನಿಗೆ ಖಚಿತವಾಯಿತು. ಕೇಳಬೇಕಾದ ಪ್ರಶ್ನೆ ಸರಿಯಾದ ಶಬ್ದಗಳಲ್ಲಿ, ಕ್ರಮವಾಗಿ, ಹಂತ-ಹಂತಗಳಲ್ಲಿ, ಕೇಳುವ ಕೌಶಲ್ಯ ಬಂದಿತು. 
  • ಪ್ರಶ್ನೆ ಸರಿಯಾದ ರೂಪದಲ್ಲಿ ಬಂದರೆ ಅದಕ್ಕೆ ಉತ್ತರವೂ ಸರಿಯಾಗಿ ಸಿಗುವುದು! ಈಗ ನಿಜವಾದ ಆಳದ ಕಲಿಕೆ ಸಾಧ್ಯ. 
  • ಗುರು-ಶಿಷ್ಯ ಸಂಬಂಧದ ಕಲಿಕೆ ಒಂದು ಕಬ್ಬಿಣದ ಚೌಕಟ್ಟಿನಲ್ಲಿ ಇರುವುದಿಲ್ಲ. ಅದು "ಗುರು ಹೇಳಿದ-ಶಿಷ್ಯ ಕೇಳಿದ" ಎನ್ನುವಂತೆ ಇರುವುದಿಲ್ಲ. ಅದು ಒಂದು ಸಂವಾದ. ವಾದದಲ್ಲಿ ಸೋಲು-ಗೆಲವು ಎನ್ನುವ ಫಲಿತಾಂಶದ ಮೇಲೆ ಗಮನ. ಸಂವಾದ-ವಿವಾದಗಳಲ್ಲಿ ಹೀಗಲ್ಲ. ಅದೊಂದು ಪರಸ್ಪರ ಕೊಡು-ಕೊಳ್ಳುವ, ಆದರೆ ವ್ಯವಹಾರದಂತಲ್ಲದ, ವಿನಿಮಯ. 
  • ಇಲ್ಲಿ ಒಬ್ಬರು ಇನ್ನೊಬ್ಬರಿಂದ ಕಲಿಯುತ್ತಾರೆ. ದೊಡ್ಡವನು-ಚಿಕ್ಕವನು ಎನ್ನುವ ಭೇದವಿಲ್ಲ. ಪರಸ್ಪರ ಗೌರವ-ಆದರ ಉಂಟು. ಒಂದು ಕಡೆ ಗುರುಭಕ್ತಿ. ಇನ್ನೊಂದು ಕಡೆ ಶಿಷ್ಯ ವಾತ್ಸಲ್ಯ. ಹೀಗುಂಟು. 
  • ಜ್ಞಾನದ ವಿಕಾಸ ಹೇಗೆ ಬಂದರೂ ಅದು ಸೋಲಲ್ಲ. ಆದ್ದರಿಂದ ಗುರು-ಶಿಷ್ಯ ಇಬ್ಬರೂ ಬೆಳೆಯಬಹುದು. ಇದು ಒಮ್ಮುಖದ ಕಲಿಕೆ ಅಲ್ಲ. 
  • ತಿಳಿಸಿಕೊಡುವನು ಗುರು. ತಿಳಿಯುತ್ತಿರುವವನು ಶಿಷ್ಯ. ಶಿಷ್ಯ ಪೂರ್ತಿ ತಿಳಿದ ಮೇಲೆ ಇಬ್ಬರೂ ಶಿಷ್ಟರು. ಪ್ರಶ್ನೆ ಕೇಳುವುದು ಶಿಷ್ಯನ ಹಕ್ಕು. ಉತ್ತರ ಗೊತ್ತಿದರೆ ಕೊಡಬೇಕಾದದ್ದು ಗುರುವಿನ ಕರ್ತವ್ಯ. 
  • ಶಿಷ್ಯನಿಗೆ ಉತ್ತರ ಗೊತ್ತಿಲ್ಲ. ಆದದ್ದರಿಂದ ಪ್ರಶ್ನೆ ಕೇಳುತ್ತಾನೆ. ಗುರುವಿಗೆ ಉತ್ತರ ಗೊತ್ತಿದ್ದರೆ ಹೇಳುತ್ತಾನೆ. ಅವನಿಗೂ ಗೊತ್ತಿಲ್ಲದಿದ್ದರೆ ಇಬ್ಬರೂ ಸೇರಿ ಉತ್ತರ ಹುಡುಕುತ್ತಾರೆ. ಇಲ್ಲಿ ಸೋಲು-ಗೆಲವುಗಳ ಜಂಜಾಟವಿಲ್ಲ. 
ಗುರು-ಶಿಷ್ಯರ ಸಂಬಂಧ ಇನ್ನಷ್ಟು ಗಾಢವಾಯಿತು. ಅದು ಒಂದು ದೃಷ್ಟಿಯಲ್ಲಿ ತಂದೆ-ಮಕ್ಕಳ ಸಂಬಂಧಕ್ಕಿಂತ ಮಿಗಿಲಾಯಿತು. ಇದು ಈಗ "ಜ್ಞಾನ ಸಂತಾನ" ಎಂದಾಯಿತು. "ಯಾವ ಗುರುಗಳ ಶಿಷ್ಯ?" ಎನ್ನುವುದರಿಂದ ಶಿಷ್ಯನಿಗೆ ಗೌರವ. "ಇಂತಹವನ ಗುರು" ಎಂದು ಗುರುವಿಗೆ ಮಾನ್ಯತೆ. ಒಟ್ಟಿನಲ್ಲಿ ಜ್ಞಾನದ ವಿಕಾಸ ಎರಡೂ ಕಡೆಗಳಿಂದ ಸಾಧ್ಯವಾಯಿತು. 

*****

ಇಂಗ್ಲೀಷಿನಲ್ಲಿ "ಮೆಂಟರ್" ಅನ್ನುವ ಪದ ಇಂತಹ ಸಂದರ್ಭಗಳಲ್ಲಿ ಬಳಸುತ್ತಾರೆ. ಕನ್ನಡದಲ್ಲಿ "ಮಾರ್ಗದರ್ಶಕ" ಎನ್ನಬಹುದು. ಈ "ಮೆಂಟರ್-ಮೆಂಟೀ" ಸಂಬಂಧವೂ ಒಂದು ರೀತಿಯ "ಗುರು-ಶಿಷ್ಯ" ಸಂಬಂಧವೇ. ಈ ಮೆಂಟರ್ ಪದ ಹೇಗೆ ಹುಟ್ಟಿತು, ಮತ್ತು ಅದರ ಬಗ್ಗೆ ಕೆಲವು ವಿಚಾರಗಳನ್ನು ಇಂಗ್ಲೀಷಿನಲ್ಲಿರುವ ಬ್ಲಾಗ್ ಪೋಸ್ಟಿನಲ್ಲಿ ಇಲ್ಲಿ ಕ್ಲಿಕ್ ಮಾಡಿ ಓದಬಹುದು.  

ಗುರು-ಶಿಷ್ಯ ಸಂಬಂಧದ ಮತ್ತೆ ಕೆಲವು ಪದರಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.