Showing posts with label Anubhava. Show all posts
Showing posts with label Anubhava. Show all posts

Wednesday, July 1, 2026

ಅಂತರಂಗದ ಮಾತುಗಳು


ಅಣ್ಣ-ತಮ್ಮಂದಿರು ಆಸ್ಪತ್ರೆಯ ಕೋಣೆಯೊಂದರಲ್ಲಿ ಸಂಧಿಸಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡ ಒಂದು ಸಂದರ್ಭದ ನೆನಪನ್ನು ಹಿಂದಿನ ಸಂಚಿಕೆಯಲ್ಲಿ ಮಾಡಿಕೊಂಡೆವು. "ಯಾರು ಮೊದಲು ಪ್ರಯಾಣ?" ಅನ್ನುವ ಶೀರ್ಷಿಕೆಯ ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

ಈ ಸಂಚಿಕೆಯನ್ನು ಕುರಿತು ಅನೇಕ ಪ್ರತಿಕ್ರಿಯೆಗಳು ಬಂದಿವೆ. ಜ್ಯೋತಿಷ್ಯದ ಬಗ್ಗೆ ನಂಬಿಕೆ ಸರಿಯೇ? ನಂಬಬೇಕೇ ಅಥವಾ ಬೇಡವೇ? ನಂಬಿದರೆ ಎಷ್ಟು ಮಟ್ಟಕ್ಕೆ ನಂಬಬೇಕು? ಸಾವಿನ ಬಗ್ಗೆ ಮುಕ್ತ ಚರ್ಚೆ ಒಳ್ಳೆಯದೇ? "ಸಾವಿನ ಬಗ್ಗೆ ಮಾತನಾಡಬಾರದು" ಅನ್ನುತ್ತಾರಲ್ಲಾ? ಜ್ಯೋತಿಷ್ಯ ಶಾಸ್ತ್ರ ನಂಬುವವರೂ ಸಾವಿನ ಬಗ್ಗೆ ತಿಳಿದುಕೊಂಡು ಬದುಕಬಹುದೇ? ತನ್ನ ಕುಂಡಲಿಯನ್ನು ತಾನೇ ಅಭ್ಯಾಸ ಮಾಡಬಾರದು, ಅಲ್ಲವೇ? ಹೀಗೆ ಮಾಡುವುದರಿಂದ ಉಳಿದ ಮುಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಆಗುವುದಿಲ್ಲವೇ? ಹೀಗೆ ಅನೇಕ ಸಂದೇಹಗಳು, ಪ್ರಶ್ನೆಗಳು ಬಂದು ನಿಂತಿವೆ. ಇವುಗಳ ಬಗ್ಗೆ ಈಗ ಸ್ವಲ್ಪ ನೋಡೋಣ.

ಜ್ಯೋತಿಷ್ಯ ಶಾಸ್ತ್ರ ಕೇವಲ ಹೊಟ್ಟೆ ತುಂಬಿಸಿಕೊಳ್ಳಲು ಕೆಲವರು ಬಳಸುವ ಒಂದು ಜೀವನ ವಿಧಾನ ಎಂದು ನಂಬುವವರು ಕೆಲವರು. ಅದನ್ನು ಜೀವನದ ಪರಮ ಧ್ಯೇಯ ಎಂದು ನಂಬಿ ಅದರ ಆಚರಣೆಯಿಂದ ಜೀವನ ಹಾಳು ಮಾಡಿಕೊಂಡವರೂ ಉಂಟು. ಅನುಕೂಲವಿದ್ದಾಗ ನಂಬಿ, ಬೇಡವಾದಾಗ ಬಿಟ್ಟು ಎಡಬಿಡಂಗಿ ಆದವರಿಗೂ ಕಮ್ಮಿಯಿಲ್ಲ!

*****

ಆಸ್ಪತ್ರೆಯಲ್ಲಿ ಮಾತುಕತೆ ಮುಗಿದ ನಂತರ ಅಣ್ಣ ಮತ್ತು ಅವರನ್ನು ಅಲ್ಲಿಗೆ ಕರೆದುಕೊಂಡು ಬಂದಿದ್ದ ಅವರ ಮಗ ಮನೆಗೆ ಹೊರಟರು. ಜೊತೆಯಲ್ಲಿ ಬಂದಿದ್ದ ಮಗನಿಗೆ ವಿಚಾರ ವಿನಿಮಯದ ಅಲ್ಪ-ಸ್ವಲ್ಪ ಭಾಗ ಅರ್ಥ ಆಯಿತು. ಆದರೆ ಹೀಗೆ ಆಸ್ಪತ್ರೆಯಲ್ಲಿ ವಿಚಾರ ಮಾಡಿದುದು ಸರಿಯಲ್ಲ ಎಂದೂ ಮನಸ್ಸಿನಲ್ಲಿ ಒಂದು ಕಡೆ ಅನಿಸಿತು. ಏನೋ, ದೊಡ್ಡವರ ವಿಚಾರ ಎಂದು ಬಿಟ್ಟುಬಿಟ್ಟರೂ "ಪಂಚಾಂಗ ನೋಡಿ, ಹೀಗೆ ಲೆಕ್ಕಾಚಾರ ಮಾಡಿದುದು ನಂಬಿ ಮುಂದಿನ ಹೆಜ್ಜೆಗಳನ್ನು ಇಡುವುದು ಎಷ್ಟು ಸರಿ?" ಎನ್ನುವ ಪ್ರಬಲವಾದ ಸಂದೇಹ ಕಾಡಿತು. ಮುಂದಿನ ವಿಷಯ ತಂದೆಯೊಂದಿಗೆ ಹೇಗೆ ಪ್ರಸ್ತಾಪ ಮಾಡಬೇಕು ಅನ್ನುವುದನ್ನು ಹಿಂದಿರುಗುವ ದಾರಿಯಲ್ಲಿ ನಿರ್ಧರಿಸಿ ಮನೆ ಸೇರಿದ್ದಾಯಿತು. 

ಜೀವನದ ಅನುಭವದಲ್ಲಿ ಮಾಗಿದ ತಂದೆಗೆ ಮಗನ ಮನಸ್ಸಿನಲ್ಲಿ ನಡೆಯುತ್ತಿದ್ದ ಈ ತುಮಲದ ಅರಿವು ಆಯಿತು. ಉಪಾಧ್ಯಾಯ ವೃತ್ತಿಯಲ್ಲಿ ಪಳಗಿದವರಿಗೆ ಎದುರಿಗಿದ್ದವರ ಮನಸ್ಸಿನಲ್ಲಿ ಸಂದೇಹ ಬಂದುದು ಅವರ ಮುಖ ನೋಡಿಯೇ ತಿಳಿಯುತ್ತದೆ. ಇದು ನುರಿತ ಶಿಕ್ಷಕರ ಶಸ್ತ್ರಾಗಾರದ ಪ್ರಬಲ ಅಸ್ತ್ರಗಳಲ್ಲಿ ಒಂದು. ರಾತ್ರಿಯ ಊಟವಾದ ನಂತರ ಅಪ್ಪ ಮಗನನ್ನು ಕರೆದರು. 

"ಏನು? ಆಸ್ಪತ್ರೆಯಿಂದ ಬಂದ ಮೇಲೆ ನಿನ್ನ ಮನಸ್ಸಿನಲ್ಲಿ ಏನೋ ಸಂದೇಹ ಇದ್ದಂತಿದೆ"
"ಸಂದೇಹ ಎಂದಲ್ಲ. ಏನೋ ಕೆಲವು ಅನುಮಾನಗಳು"
"ಭಯವೇನೂ ಇಲ್ಲ. ಸ್ವಲ್ಪ ಅಂಜಿಕೆ" ಅಂದಂತೆ. "ಏನು ಕೇಳಬೇಕೋ ಕೇಳಿಬಿಡು"
"ಏನಿಲ್ಲ. ಸಾವಿನ ಬಗ್ಗೆ ಮಾತಾಡಬಾರದು ಅನ್ನುತ್ತಾರಲ್ಲ. ನೀವಿಬ್ಬರು ಮಾತಾಡಿದ್ದು ಅದೇ ಅಲ್ಲವೇ?"
"ಅದರ ಬಗ್ಗೆ ಮಾತಾಡಬಾರದು ಅನ್ನುವವರು ಯಾರು?"
"ಅನೇಕರು. ನೀವೇ ಹಾಗೆ ಕೆಲವು ವೇಳೆ ಹೇಳಿಲ್ಲವೇ?'
"ಹೌದು. ಹಾಗೆ ಹೇಳುವುದರ ಅರ್ಥ ಮತ್ತು ಔಚಿತ್ಯ ಏನು?"
"ಎಲ್ಲರೂ ಹಾಗೆ ಹೇಳುತ್ತಾರೆ. ಬಹಳ ಜನರಿಗೆ ಅದರ ಬಗ್ಗೆ ಮಾತಾಡಲು ಭಯ"

"ವೈದ್ಯರು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು ಆಗಾಗ ಸಾವು ನೋಡುತ್ತಿರುತ್ತಾರೆ. ಅಲ್ಲವೇ?'
"ಹೌದು. ಅದು ಅವರ ವೃತ್ತಿಯ ಒಂದು ಬಾಗ"
"ಸ್ಮಶಾನದಲ್ಲಿ ಕೆಲಸ ಮಾಡುವ ಕೆಲವರು?"
"ಅವರ ಕೆಲಸವೇ ಅದಲ್ಲವೇ?"
"ಹಾಗಿದ್ದರೆ ಅವರು ಇದರ ಬಗ್ಗೆ ಮಾತಾಡಬಹುದು ಎಂದಂತಾಯಿತು"
"ಆಡದಿದ್ದರೆ ಅವರ ಕೆಲಸ ನಡೆಯುವುದಾದರೂ ಹೇಗೆ?"
"ಹುಟ್ಟಿದವರಲ್ಲಿ ಎಷ್ಟು ಜನ ಸಾವು ಕಾಣದೇ ಉಳಿಯುತ್ತಾರೆ?"
"ನಾವು ಕೇಳಿದಂತೆ ಚಿರಂಜೀವಿಗಳು ಅನಿಸಿಕೊಂಡವರು. ಮಾರ್ಕಂಡೇಯರು ಮತ್ತೊಬ್ಬರು"
"ಅಂದರೆ ಹುಟ್ಟಿದವರೆಲ್ಲ ಒಂದು ದಿನ ಸಾಯಲೇಬೇಕಲ್ಲವೇ?'
"ಹೌದು. ಆದರೆ ಅದರ ಬಗ್ಗೆ ಯಾಕೆ ಮಾತಾಡಬೇಕು?"
"ಮಾತನಾಡದಿದ್ದರೆ ಸಾವು ದೂರ ಹೋಗುವುದೋ?"
"ಮಾತಾಡಿದರೆ ದೂರ ಹೋಗುವುದೋ?"
"ಎರಡೂ ಇಲ್ಲ. ಆಡಿದ್ದರಿಂದ ಹತ್ತಿರ ಬರುವುದೂ ಇಲ್ಲ"

ಇನ್ನೂ ಸ್ವಲ್ಪ ಯೋಚನೆ ಮಾಡಬೇಕಾದ ಪ್ರಸಂಗ ಬಂತು!

******

"ಸಾವು ಜೀವನದ ಪರಮ ಸತ್ಯ ಅನ್ನುವುದು ನಿಜ. "ಜಾತಸ್ಯ ಹಿ ಧ್ರುವಂ ಮೃತ್ಯು: ತಸ್ಮಾದಪರಿಹಾರ್ಯೇರ್ಥೇ ನ ತ್ವಂ ಶೋಚಿತುಮರ್ಹಸಿ" ಅಂತ ಗೀತಾಚಾರ್ಯನೇ ಹೇಳಿದ್ದಾನೆ. ಜೀವನ ಇರುವುದು ಬದುಕುವುದಕ್ಕೆ. ಸಾರ್ಥಕವಾಗಿ ಜೀವಿಸುವುದಕ್ಕೆ. ಸಾಯುವುದಕ್ಕಲ್ಲ. ಇದು ಒಪ್ಪಲೇಬೇಕಾದ ಮಾತು. ಆದರೆ ಎಲ್ಲಕಾಲಕ್ಕೂ ನಾನು ಬದುಕಿರುತ್ತೇನೆ ಎಂದು ನಂಬುವುದು ಸರಿಯಲ್ಲ. ನಮಗೆ ಇಷ್ಟ ಇರಲಿ, ಬಿಡಲಿ. ಪ್ರತಿ ಕ್ಷಣ ನಾವು ಸಾವಿನ ಹತ್ತಿರ ಹೋಗುತ್ತಲೇ ಇರುತ್ತೇವಲ್ಲ!"
"ಹಾಗಂತ ಅದರ ಬಗ್ಗೆ ಏಕೆ ಚಿಂತಿಸಬೇಕು?"

"ಹಾಗೆ ಚಿಂತಿಸಲು ಎರಡು ಕಾರಣಗಳು ಉಂಟು. ಮೊದಲನೆಯದು, ನಾವು ಒಂದು ದಿನ ಇಲ್ಲಿಂದ ಹೋಗಬೇಕು ಎನ್ನುವುದು ಯೋಚಿಸಿದಾಗ ವಯಸ್ಸಾಗುತ್ತಿದ್ದಂತೆ ಲೌಕಿಕ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿ, ಹೊಣೆಗಳನ್ನು ದಾಟಿ, ಮುಂದಿನ ವ್ಯವಸ್ಥೆಗಳನ್ನು ಮಾಡುವ ಮನಸ್ಸು ಮತ್ತು ಕರ್ತೃತ್ವ ಶಕ್ತಿ ಬರುತ್ತವೆ"
"ಎರಡನೆಯದು?"
"ಸದಾ ಇಲ್ಲಿರುವುದಿಲ್ಲ ಎನ್ನುವ ಪರಿಜ್ಞಾನದಿಂದ ಅಡ್ಡ ದಾರಿ ಹಿಡಿಯದೇ ನೇರ ಜೀವನ ನಡೆಸುವ ಇರಾದೆ ಪಕ್ವವಾಗುತ್ತದೆ"

"ಹೌದು ಅನ್ನೋಣ. ಆದರೆ ಅದರ ಬಗ್ಗೆ ಚಿಂತಿಸುವುದರಿಂದ ಮತ್ತು ಮಾತನಾಡುವುದರಿಂದ, ಹೇಗಿದ್ದರೂ ಹೋಗಬೇಕು ಎನ್ನುವ ಯೋಚನೆ ಪ್ರಬಲವಾಗಿ ಜೀವನದಲ್ಲಿ ನಿರಾಸಕ್ತಿ ಮೂಡಿದರೆ?"
"ಇಲ್ಲಿಯೇ ಮನುಷ್ಯನ ನಿಜವಾದ ಯೋಗ್ಯತೆ ಒರೆ ಹಚ್ಚುವುದು. ಈ ಜೀವನ ಒಂದು ದಿನ ಕೊನೆ ಆಗುತ್ತದೆ ಅನ್ನುವ ಎಚ್ಚರ ಇರಬೇಕು. ಇರುವವರೆಗೂ ಕರ್ತವ್ಯಗಳನ್ನು ಮಾಡುತ್ತಲೇ ಇರಬೇಕೆಂಬ ಪ್ರಜ್ಞೆ ಜಾಗೃತವಾಗಿರಬೇಕು. ಇದೇ ಅಲ್ಲವೇ ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ ಕರ್ಮಯೋಗ?"
"ತಾವರೆ ಎಲೆಯ ಮೇಲಿನ ನೀರನ ಹನಿಯಂತೆ ಅನ್ನುವುದಕ್ಕೆ ಈ ವಿಶಾಲ ಅರ್ಥವೇ?"
"ಕರ್ತವ್ಯಗಳನ್ನು ಮಾಡುತ್ತಿರುವಾಗ ಅವುಗಳಿಗೆ ಸಂಬಂಧಿಸಿದವರ ಮತ್ತು ಸಾಧನಗಳ ಮೇಲೆ ಅತಿಯಾದ ಮೋಹ ಇರಬಾರದು ಅನ್ನುವುದನ್ನು ಅದಕ್ಕೆ ಸೇರಿಸಿಕೊಳ್ಳಬೇಕು"

ಸಾವಿನ ಬಗ್ಗೆ ಮಾತನಾಡುವುದು ತಪ್ಪಲ್ಲ. ಅದರ ಬಗ್ಗೆಯೇ ಮಾತನಾಡುತ್ತ ಬೇರೆಲ್ಲ ಬಿಡುವುದು ತಪ್ಪು ಎಂದಾಯಿತು. ಗಮನವಿರಬೇಕು. ಅತಿಯಾದ ಗಮನವಿರಬಾರದು. ಇಲ್ಲಿಯೂ ಕತ್ತಿಯ ಅಲುಗಿನ ಮೇಲೆ ನಡೆದಂತೆ!

******

"ನೀವು ಹೇಳಿದುದರಂತೆ ಸಾವಿನ ಬಗ್ಗೆಯೇ ಮಾತನಾಡುತ್ತಿರಬಾರದು. ಅದರೊಡನೆ ಎಲ್ಲರ ಕೂಡ ಮಾತನಾಡುತ್ತಿರಬಾರದು. ಹಾಗಿದ್ದರೆ ಯಾರೊಡನೆ ಮಾತಾಡಬೇಕು? ಯಾವಾಗ ಮಾತಾಡಬೇಕು? ಈ ಎರಡು ಪ್ರಶ್ನೆಗಳು ಉಳಿದವು"
"ಇವುಗಳ ಮೊದಲು ಇನ್ನೊಂದು ವಿಚಾರವಿದೆ"
"ಏನದು?"
"ತಂದೆ ಬದುಕಿರುವವರು (ಜೀವಿತಪಿತೃಗಳು) ಸ್ಮಶಾನಘಟ್ಟಕ್ಕೆ ಹೋಗಬಾರದು ಅನ್ನುವುದು"
"ಅದನ್ನು ಈಗಲೂ ಎಲ್ಲರೂ ಪಾಲಿಸುತ್ತಾರಲ್ಲ"
"ಹಿಂದೆ ಇದನ್ನು ಕಟ್ಟುನಿಟಾಗಿ ಪಾಲಿಸುತ್ತ್ತಿದ್ದರು. ಕೆಲವು ಪಂಗಡಗಳಲ್ಲಿ ಎಲ್ಲರೂ ಹೋಗುತ್ತಾರೆ. ಕೆಲವರಲ್ಲಿ ಇಲ್ಲ"
"ಹೀಗೆ ನಿಬಂಧನೆ ಮಾಡಲು ಕಾರಣ?"
"ಚಿಕ್ಕ ವಯಸ್ಸಿನಲ್ಲಿ ರುದ್ರಭೂಮಿ ಅಂದರೆ ಒಂದು ರೀತಿಯ ಭಯ ಇರುತ್ತದೆ. ಆಗ ಅಲ್ಲಿಗೆ ಹೋಗಲೇಬೇಕಾದ ಪರಿಸ್ಥಿತಿ ಇರುವುದಿಲ್ಲ. ಈ ಕಾರಣಗಳು"
"ಹಾಗಿದ್ದರೆ ತಂದೆ ಬದುಕಿದ್ದಾಗಲೂ ಹೋಗಬಹುದೋ?"
"ಯಾರಾದರೂ ತೀರಿಕೊಂಡಾಗ ಅವರ ಅಂತ್ಯ ಸಂಸ್ಕಾರಕ್ಕೆ ಸಹಕಾರ ಕೊಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ. ಅಗಲಿದ ವ್ಯಕ್ತಿಗೆ ನಮ್ಮ ಗೌರವದ ಸೂಚಕ"

"ಅಂದರೆ?"
"ಈಗ ಕೊನೆಯಯಾತ್ರೆಗೆ ವಾಹನಗಳು ಬಂದಿವೆ. ಮೊದಲೆಲ್ಲ ಹೆಗಲ ಮೇಲೆ ಹೊತ್ತುಕೊಂಡು ಹೋಗಬೇಕಾಗಿತ್ತು. ಶವಸಂಸ್ಕಾರದ ಅನುಕೂಲಗಳಿರಲಿಲ್ಲ. ಹೀಗಾಗಿ ಸಹಕಾರ ಕೊಡುವುದು ಅತ್ಯವಶ್ಯಕ ಆಗಿತ್ತು. ತಂದೆ ಅನಾರೋಗ್ಯದಿಂದಲೋ, ವೃದ್ಧಾಪ್ಯದಿಂದಲೋ ಹೋಗಲಾಗದಿದ್ದರೆ ವಯಸ್ಕ ಮಕ್ಕಳಿಗೆ ಹೋಗುವಂತೆ ಅನುಮತಿ ಕೊಡುವುದು ನಾನು ನೋಡಿದ್ದೇನೆ. ಈಗ ಅದರ ಅವಶ್ಯಕತೆ ಅಷ್ಟಾಗಿ ತೋರಿಬರುತ್ತಿಲ್ಲ. ಚಲನಚಿತ್ರಗಳಲ್ಲಿ ಚಿತಾದಹನದ ದೃಶ್ಯಗಳನ್ನು ದೊಡ್ಡದಾಗಿ ತೋರಿಸುತ್ತಾರೆ. ಕೆಲವು ಗಣ್ಯ ವ್ಯಕ್ತಿಗಳು, ರಾಜಕೀಯ ನಾಯಕರು ಕಾಲವಾದಾಗ ಗಂಟೆಗಟ್ಟಲೆ ದೂರದರ್ಶನದಲ್ಲಿ ನೇರ ಪ್ರಸಾರ ತೋರಿಸುತ್ತಾರೆ. ಪುಟ್ಟ ಮಕ್ಕಳೂ ಇದನ್ನು ನೋಡುತ್ತವೆ. ಈಗ ಈ ದೃಶ್ಯಗಳಿಗೆ ಘನತೆಯೂ ಉಳಿದಿಲ್ಲ; ಭಯವೂ ಇಲ್ಲ"
"ಅಂದರೆ ತಂದೆಯ ಅನುಮತಿ ಪಡೆದು ಹೋಗಬಹುದು ಎಂದಾಯಿತು"
"ಹೋಗಬಾರದು ಎಂದು ಪದ್ಧತಿ ಇರುವ ಕುಟುಂಬಗಳಿಗೆ ಹೀಗೆ. ಎಲ್ಲರೂ ಹೋಗುವ ಕುಟುಂಬಗಳಿಗೆ ಇದರ ಅವಶ್ಯಕತೆ ಇಲ್ಲವಲ್ಲ"
*****

"ಮುಂದಿನ ಪ್ರಶ್ನೆ ಯಾವುದು?"
"ಆಸ್ಪತ್ರೆಯಲ್ಲಿ ಈ ವಿಷಯದಲ್ಲಿ ಮಾತುಕತೆ ಮಾಡಿದುದು"
"ಅದು ಬೇಕೆಂದೇ ಮಾಡಿದುದಲ್ಲ. ಈ ರೀತಿಯ ವಿಚಾರಗಳನ್ನು ನಾವು ಈ ಹಿಂದೆಯೂ ಅನೇಕ ಬಾರಿ ಚರ್ಚೆ ಮಾಡಿದ್ದೇವೆ. ಸಾಮಾನ್ಯವಾಗಿ ಹೀಗೆ ಪ್ರಸ್ತಾಪ ಮಾಡುವಾಗ ನಾವಿಬ್ಬರೇ ಇರುತ್ತಿದ್ದುದು. ಈ ಸಾರಿ ಮಾತ್ರ ಅದು ಬಹಿರಂಗವಾಗಿ ಆಸ್ಪತ್ರೆಯಲ್ಲಿ ಆಗಬೇಕಾಯಿತು. ಹಿಂದಿನ ಸಂದರ್ಭಗಳಲ್ಲಿ ಅದು ಮತ್ಯಾರದೋ ವಿಷಯ ಆಗಿರುತ್ತಿತ್ತು. ಈ ಬಾರಿ ನಮ್ಮದೇ ಆಯಿತು. ಅಷ್ಟೇ!"
"ಆದರೂ ಆಸ್ಪತ್ರೆಯಲ್ಲಿ ಅಷ್ಟು ಜನರಿದ್ದರಲ್ಲ"
"ಅದಕ್ಕೆ ನಾವೇನು ಮಾಡುವುದು? ನಮ್ಮಿಬ್ಬರ ಜೀವನದ ಕಾಲಘಟ್ಟವನ್ನು ನೋಡು. ವಯಸ್ಸಾದ ಮೇಲೆ ಆಸ್ಪತ್ರೆಯಿಂದ ಪೂರ್ಣ ಗುಣವಾಗಿ ಬರುವುದು ಅಷ್ಟು ಸುಲಭವಲ್ಲ. ಗುಣವಾಗಿ ಬಂದರೂ ಮೊದಲಿನ ಚೈತನ್ಯ ಉಳಿಯುವುದು ಬಹಳ ಅಪರೂಪ. ಆಗಿನ ಚಿಕಿತ್ಸೆ ಏನಿದ್ದರೂ ಬಹುತೇಕ ಹರಿದ ಬಟ್ಟೆಗೆ ತೇಪೆ ಹಾಕಿದಂತೆ. ಭೌತಿಕ ದೇಹಕ್ಕೆ ತನ್ನದೇ ಆದ ಇತಿ-ಮಿತಿಗಳಿವೆ. ನಾವಿಬ್ಬರೂ ಪೂರ್ಣ ಆರೋಗ್ಯವಂತರಾಗಿ ಮತ್ತೆ ಭೇಟಿಯಾಗುವ ಸಾಧ್ಯತೆ ಇದ್ದಿದ್ದರೆ ಅಲ್ಲಿ ಈ ವಿಷಯ ಪ್ರಸ್ತಾಪ ಮಾಡುತ್ತಿರಲಿಲ್ಲ. ಇದು ಹೀಗೆ ಆಗದು ಎಂದು ನನಗೂ ಗೊತ್ತು; ಅವನಿಗೂ ಗೊತ್ತು. ಆದ್ದರಿಂದ ಸಮಯ ಸಿಕ್ಕಾಗ ಮಾತಾಡಬೇಕಾಯಿತು"

ಇದೂ ಒಂದು ಸಮರ್ಥನೆಯೇ.
*****

"ಅಲ್ಲಿ ಸಂವಾದ ನಡೆದದ್ದು ಅನಿವಾರ್ಯ ಎಂದು ಒಪ್ಪಿಕೊಂಡರೂ ಅವರೊಡನೆ, ಆಸ್ಪತ್ರೆಯಲ್ಲಿ ದಾಖಲಾಗಿರುವವರೊಡನೆ ಏಕೆ ಬೇಕಾಗಿತ್ತು?"
"ನಮಗೆ ಬೇಕಾದ ವಿಷಯಗಳನ್ನು ಯಾರೊಡನೆ ಚರ್ಚಿಸಬೇಕು?'
"ನಮಗೆ ಬೇಕಾದವರೊಡನೆ"
"ಅದೇ ಅಲ್ಲವೇ ನಾವಿಬ್ಬರೂ ಮಾಡಿದ್ದು?"
"ಆದರೂ ಅದು ಸರಿ ಎಂದು ಒಪ್ಪುವುದು ಕಷ್ಟ"

"ನಾನು ಎರಡನೇ ಮಹಾಯುದ್ಧ ಕಾಲದಲ್ಲಿ (1939-45) ಸೈನ್ಯದಲ್ಲಿ ಸೇರಿ ಆ ಯುದ್ಧದಲ್ಲಿ ಭಾಗಿಯಾಗಿದ್ದುದು ನಿನಗೆ ಗೊತ್ತು"
"ಕೇಳಿ ಬಲ್ಲೆ. ಫೋಟೋಗಳನ್ನು ನೋಡಿದ್ದೇನೆ. ನೀವು ಆಗಾಗ ಹೇಳಿದ ಅಲ್ಲಿನ ಅನುಭವಗಳನ್ನು ಕೇಳಿದ್ದೇನೆ"
"ಆಗ ನನಗೆ ಇನ್ನೂ ಇಪ್ಪತ್ತು ವರುಷ ವಯಸ್ಸು. ವಿವಾಹವಾಗಿ ಇಬ್ಬರು ಮಕ್ಕಳು. ನನ್ನ ಭಾಗಕ್ಕೆ ಕುಟುಂಬದಿಂದ ಬಂದ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದೆ. ಖಾಯಂ ಕೆಲಸವಿರಲಿಲ್ಲ. ಒಂದು ದಿನ ತಾಲ್ಲೋಕು ಆಫೀಸಿಗೆ ಯಾವುದೊ ಕೆಲಸಕ್ಕೆ ಹೋದೆ. ಸೈನ್ಯಕ್ಕೆ ಯುವಕರ ಭರ್ತಿ ನಡೆಯುತ್ತಿತ್ತು. ಸಾಲಿನಲ್ಲಿ ನಿಂತೆ. ಮನೆಯವರಿಗೆ ಹೇಳಲೂ ಅವಕಾಶ ಇರಲಿಲ್ಲ. ಸಂಜೆಗೆ ಲಾರಿ ಹತ್ತಿಸಿಕೊಂಡು ಬೆಂಗಳೂರು ರೈಲು ನಿಲ್ದಾಣಕ್ಕೆ ಕರೆದುಕೊಂಡು ಹೋದರು. ಅಲ್ಲಿಂದ ಪೂನಾ. ನಂತರ ಬರ್ಮಾ ಗಡಿಗೆ. ಯುದ್ಧದಲ್ಲಿ ವರ್ಷಗಳು ಕಳೆದವು"
"ಅದು ಸರಿ. ಅದಕ್ಕೂ ಇಂದು ನಡೆದದ್ದಕ್ಕೂ ಸಂಬಂಧ?"
"ಕೆಲವರು ಸೈನ್ಯ ಸೇರಿ ನಿವೃತ್ತರಾಗಬಹುದು. ಒಂದೂ ಯುದ್ಧದಲ್ಲಿ ಭಾಗಿಯಾಗುವ ಕಾಲ ಬಾರದಿರಬಹುದು. ಅದು ಅಪರೂಪ ಆದರೂ ಸಾಧ್ಯ. ನಾನಿದ್ದುದು ಅಷ್ಟೂ ಕಾಲ ಯುದ್ಧ ಭೂಮಿಯಲ್ಲೇ. ಮೊದಲಿಂದ ಕಡೆಯವರೆಗೆ"
"ಏಕೆ ಹಾಗೆ?"
"ಸೇರಿದುದು ಯುದ್ಧ ಪ್ರಾರಂಭವಾದ ದಿನಗಳಲ್ಲಿ. ಯುದ್ಧ ಮುಗಿದ ನಂತರ ಚೀನಾ ಗಡಿಗೆ ವರ್ಗಾಯಿಸಿದರು. ನಾನು ಬೇಡ ಎಂದೆ. ನಿವೃತ್ತಿ ಕೊಟ್ಟು ಉಪಾಧ್ಯಾಯನ ಕೆಲಸ ಕೊಟ್ಟರು"
"ಸರಿ"
"ಯುದ್ಧಭೂಮಿಯಲ್ಲಿ, ಬರ್ಮಾ ಗಡಿಯಲ್ಲಿ ಕಾಲ ಕಳೆಯುವಾಗ ಯಾವ ವಿಷಯದ ಬಗ್ಗೆ ಮಾತಾಡಬೇಕು? ಪ್ರತಿದಿನ ಜೊತೆಯಲ್ಲಿದ್ದವರ ಸಾವಿನ ಸುದ್ದಿಯೇ! ಸಾವಿನ ಭಯ ಹೊರಟುಹೋಯಿತು"
"..............."

"ನಮ್ಮ ಅಂತರಂಗದ ಮಾತುಗಳನ್ನು ಹೇಳಿಕೊಳ್ಳಲು ಪ್ರತಿಯೊಬ್ಬರೂ ಕೆಲವರನ್ನು ಆರಿಸಿಕೊಳ್ಳುತ್ತೇವೆ. ಎಲ್ಲರೊಡನೆ ಎಲ್ಲ ವಿಷಯಗಳನ್ನೂ ಚರ್ಚಿಸಲಾಗುವುದಿಲ್ಲ. ಹಾಗೆ ಆರಿಸಿಕೊಂಡ ವ್ಯಕ್ತಿಗಳು ನಮಗೆ ನಂಬಿಕಸ್ಥರಾಗಬೇಕು. ಗುಟ್ಟುಗಳನ್ನು ಹಿಡಿದಿಟ್ಟುಕೊಳ್ಳುವವರಾಗಬೇಕು. ಮುಕ್ತ ಮನಸ್ಸಿನಿಂದ ಸಲಹೆ-ಸೂಚನೆ ಕೊಡುವವರಾಗಬೇಕು. "ಗುಹ್ಯo ನಿಗೂಹಯತಿ, ಗುಣಾನ್ ಪ್ರಕಟೀಕರೋತಿ" ಎಂದು ಭರ್ತೃಹರಿ ನೀತಿಶತಕದಲ್ಲಿ ಹೇಳಿರುವುದು ಓದಿದ್ದೀಯೆ. ಇಂತಹವರು ಜೀವನದಲ್ಲಿ ಒಬ್ಬರೋ, ಇಬ್ಬರೋ ಸಿಕ್ಕರೆ ಅದು ಭಾಗ್ಯವೇ. ಹತ್ತಾರು ಜನ ಯಾರಿಗೂ ಸಿಗುವುದಿಲ್ಲ"
"ಅದು ಸರಿ"
"ಯುದ್ಧಭೂಮಿಯಲ್ಲಿ ಯಾರಾದರೂ ಸಿಕ್ಕರೆ ಸಾಕು ಅನಿಸುತ್ತದೆ! ಅಲ್ಲಿ ಸಿಕ್ಕವನೇ ಅತಿ ಆಪ್ತ ಆಗುತ್ತಾನೆ!"
"ಊಹೆಯಿಂದ ತಿಳಿಯಬೇಕು"
"ಅಷ್ಟೇ ಅಲ್ಲ. ಅವನು ಯುದ್ಧದಲ್ಲಿ ಬದುಕಿ ಉಳಿಯಬೇಕು"
".........."

"ಹೀಗೆ ನಾವು ಆರಿಸಿಕೊಳ್ಳುವ ಆಪ್ತರು ನಮ್ಮ ಹತ್ತಿರದವರೇ ಆಗಬಹುದು. ಒಡಹುಟ್ಟಿದವರೇ ಆಗಬಹುದು. ಜೊತೆಯಲ್ಲಿ ಬೆಳೆದವರೇ ಆಗಬಹುದು."
"ಹೌದು"
"ನಾವು ಮೂವರು ಅಣ್ಣ-ತಮ್ಮಂದಿರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡವರು. ಮಧ್ಯದವನು ಮಧ್ಯ ವಯಸ್ಸಿನಲ್ಲಿಯೇ ತೀರಿಹೋದ. ಮತ್ತೆ ಉಳಿದವರು ನಾವಿಬ್ಬರೇ"
"ಒಡಹುಟ್ಟಿದವರು, ಸಹಪಾಠಿಗಳು ಆದರೆ ಕೆಲವು ಅನುಕೂಲಗಳು ಉಂಟು. ಅವರ ಎಲ್ಲ ವಿಷಯಗಳು ನಮಗೆ ತಿಳಿದಿರುತ್ತವೆ. ನಮ್ಮ ವಿಷಯಗಳೂ ಅವರಿಗೆ ತಿಳಿದಿರುತ್ತವೆ"
"ನಿನ್ನೆ ಆಗಿದ್ದೂ ಅದೇ"

ಆಸ್ಪತ್ರೆಯಲ್ಲಿಯೇ ಏಕೆ ಮಾತು-ಕತೆ ಆಯಿತು? ಅವರೊಡನೆಯೇ ಏಕೆ ಆಯಿತು? ಅಂದೇ ಏಕೆ ಆಯಿತು? ಈ ವಿಷಯಗಳಿಗೆ ಸ್ಪಷ್ಟನೆ ಸಿಕ್ಕಿತು. 

"ಅನುಮಾನಗಳು ಪರಿಹಾರ ಆಯಿತೇ? ಇನ್ನೂ ಏನಾದಾರೂ ಬಾಕಿ ಇದೆಯೋ?"
"ನಿನ್ನಿನ ವಿಚಾರ ತಿಳಿಯಾಯಿತು. ಜ್ಯೋತಿಷ್ಯದ ವಿಷಯ ಕೆಲವಿವೆ"
"ಇಂದು ತಡವಾಯಿತು. ನಾಳೆ ನಿನಗೆ ಆಫೀಸಿಗೆ ಹೋಗಬೇಕಿದೆ. ನಾಳೆ ಸಂಜೆ ಮುಂದುವರೆಸೋಣ"

*****

ಅನುಭವದಿಂದ ಕಲಿತ ಪಾಠಗಳು ಅನುಗಾಲ ನೆನಪಿನಲ್ಲಿ ಇರುತ್ತವೆ. ಅಂತಹ ಸಂದರ್ಭಗಳು ಜೀವನದಲ್ಲಿ ಮತ್ತೆ ಪುನರಾವರ್ತನೆ ಆದಾಗ ಮನಸ್ಸು ಅವನ್ನು ಗಾಢವಾಗಿ ಮೆಲಕು ಹಾಕುತ್ತದೆ.  

Sunday, August 24, 2025

ಅನುಭವ ಮತ್ತು ಅನುಭಾವ


ಹಿಂದಿನ ಸಂಚಿಕೆಯಲ್ಲಿ "ಗುರು-ಶಿಷ್ಯರ ಸಂಬಂಧ" ಅನ್ನುವ ಶೀರ್ಷಿಕೆಯಡಿಯಲ್ಲಿ ಗುರುವು ತನ್ನ ಬಳಿ ಬಂದ ಜ್ಞಾನಾರ್ಥಿಯನ್ನು ಹೇಗೆ ಪರೀಕ್ಷಿಸಿ, ನಂತರ ಶಿಷ್ಯನನ್ನಾಗಿ ಸ್ವೀಕರಿಸುತ್ತಾನೆ ಎನ್ನುವುದನ್ನು  ನೋಡಿದೆವು. ಈಗಿನ ಕಾಲದ ಶಿಕ್ಷಕ-ವಿದ್ಯಾರ್ಥಿ ನಡುವಿನ ಬಾಂಧವ್ಯಕ್ಕೂ ಗುರು-ಶಿಷ್ಯರ ನಡುವಿನ ಹೊಂದಾಣಿಕೆ, ಸಾಮ್ಯ-ವಿರುದ್ಧಗಳ ಸಣ್ಣ ನೋಟದ ಪ್ರಯತ್ನ ಮಾಡಿದೆವು. ಈ ಹಿಂದಿನ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಹಿಂದಿನ ಸಂಚಿಕೆಯ ಒಂದು ಕಡೆಯಲ್ಲಿ "ಶಿಷ್ಯನಿಗೆ ಉತ್ತರ ಗೊತ್ತಿಲ್ಲ. ಆದದ್ದರಿಂದ ಪ್ರಶ್ನೆ ಕೇಳುತ್ತಾನೆ. ಗುರುವಿಗೆ ಉತ್ತರ ಗೊತ್ತಿದ್ದರೆ ಹೇಳುತ್ತಾನೆ. ಅವನಿಗೂ ಗೊತ್ತಿಲ್ಲದಿದ್ದರೆ ಇಬ್ಬರೂ ಸೇರಿ ಉತ್ತರ ಹುಡುಕುತ್ತಾರೆ. ಇಲ್ಲಿ ಸೋಲು-ಗೆಲವುಗಳ ಜಂಜಾಟವಿಲ್ಲ" ಎಂದಿದ್ದೆವು. ಹಿರಿಯ ಸ್ನೇಹಿತರೊಬ್ಬರು "ಗುರುವು ಪ್ರತಿ ಶಿಷ್ಯನೊಂದಿಗೆ, ಅವನ ಪ್ರತಿ ಸಂಶಯಕ್ಕೆ ಅವನ ಜೊತೆಯಲ್ಲಿ ಉತ್ತರ ಹುಡುಕಲು ಹೋಗುತ್ತಾನೆಯೇ? ಇದು ಸಾಧ್ಯವೇ?" ಎಂದು ಕೇಳಿದ್ದಾರೆ. ಹೌದು. ಇದು ಸಾಧ್ಯವಿಲ್ಲದ ಮಾತು. ಅನವಶ್ಯಕವೂ ಹೌದು. ಜಿಜ್ಞಾಸುವು ತನ್ನ ಅನೇಕ ಪ್ರಶ್ನೆಗಳಿಗೆ ತಾನೇ ಉತ್ತರ ಹುಡುಕಿಕೊಳ್ಳಬೇಕು. ಗುರುವು ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬಹುದು. ಮಾರ್ಗದರ್ಶನ ನೀಡಬಹುದು. ಪರಮಸತ್ಯದ ಅನ್ವೇಷಣೆಯಲ್ಲಿ ಜೊತೆ-ಜೊತೆಯಾಗಿ ಉತ್ತರ ಹುಡುಕುವ ಅನೇಕ ನಿದರ್ಶನಗಳಿವೆ. ಆದರೆ ಪ್ರತಿಯೊಬ್ಬ ಶಿಷ್ಯನ ಪ್ರತಿಯೊಂದು ಸಂಶಯದ ಪರಿಹಾರ ಇಬ್ಬರೂ ಜೊತೆಯಲ್ಲಿ ಹುಡುಕುವುದು ಸಾಧ್ಯವಿಲ್ಲ. 

ಒಂದು ವಿಷಯದ ಬಗ್ಗೆ ಹೊರಗಿನಿಂದ ತಿಳಿಯುವುದು ಅನುಭವ. ಒಳಗಿನಿಂದ ತಿಳಿಯುವುದು ಅನುಭಾವ. ಲೌಕಿಕದ ಅನೇಕ ವಿಷಯಗಳು ಅನುಭವದ ಮಟ್ಟದಲ್ಲಿಯೇ ನಿಲ್ಲುತ್ತವೆ. ಪಾರಮಾರ್ಥಿಕ ವಿಷಯಗಳಲ್ಲಿ ಇನ್ನೊಬ್ಬರ ಅನುಭವದಿಂದ ನಮಗೆ ತೃಪ್ತಿಯಾಯಿತು ಎನ್ನುವಂತಿಲ್ಲ. ನಾವೇ ನಮ್ಮ ಅನುಭವದಿಂದ ತಿಳಿಯಬೇಕು. ಆಗ ಅನುಭವದ ಮಟ್ಟದಿಂದ ಅನುಭಾವಕ್ಕೆ ಏರುವ ಅವಶ್ಯಕತೆ ಇದೆ. ಇಲ್ಲಿ ಗುರುವು ಮಾರ್ಗದರ್ಶಕನಾಗಬಹುದೇ ಹೊರತು ಉತ್ತರ ಹುಡುಕಲು ಶಿಷ್ಯನ ಜೊತೆಯಲ್ಲಿ ಸೇರುವಹಾಗಿಲ್ಲ. 

*****

"ನಿನಗೆ ಮೈಮೇಲೆ ಪ್ರಜ್ಞೆ ಇದೆಯೇ?" ಎಂದು ದೊಡ್ಡವರು ಚಿಕ್ಕವರನ್ನು ಗದರುವುದು ಕೇಳಿದ್ದೇವೆ. "ಪ್ರಜ್ಞೆ" ಅಂದರೆ ಏನು? "ಅಪಘಾತದಿಂದ ಅವನಿಗೆ ಪ್ರಜ್ಞೆ ಹೋಯಿತು" ಅನ್ನುತ್ತೇವೆ. ಪ್ರಜ್ಞೆ ಅನ್ನುವ ಪದವನ್ನು ಸಾಮಾನ್ಯವಾಗಿ "ಎಚ್ಚರ" (conciousness) ಅನ್ನುವ ಅರ್ಥದಲ್ಲಿ ಪ್ರಯೋಗಿಸುತ್ತೇವೆ. ಪ್ರಜ್ಞೆ ಪದದ ಸರಿಯಾದ ಅರ್ಥವೆಂದರೆ "ಒಂದು ವಿಷಯವನ್ನು ಹೇಳಿದರೆ ಅದಕ್ಕೆ ಸಂಬಂಧಿಸಿದ ಬೇರೆಲ್ಲ ಹಿಂದೆ ಕಲಿತ ವಿಷಯಗಳನ್ನೂ ಸೇರಿಸಿಕೊಂಡು ಒಟ್ಟಾರೆ ಅರ್ಥ ತಿಳಿಯುವ ಶಕ್ತಿ". ಈ ಪ್ರಜ್ಞಾಶಕ್ತಿಯ ವಿಕಾಸ ಮಾಡಿಕೊಂಡು ಬೆಳೆಯುವುದು "ಪ್ರತಿಭೆ". 

ಆಚಾರ್ಯ ಅಭಿನವ ಗುಪ್ತನು ತನ್ನ ಗುರುಗಲ್ಲೊಬ್ಬ ಎಂದು ಹೇಳಿಕೊಂಡಿರುವ ಭಟ್ಟತೌತ (ಭಟ್ಟತಾತ) ತನ್ನ "ಕಾವ್ಯ ಕೌತುಕ" ಅನ್ನುವ ಗ್ರಂಥದಲ್ಲಿ ಈ "ಪ್ರತಿಭೆ" ಅನ್ನುವ ಪದಕ್ಕೆ ವಿವರಣೆ ಕೊಡುತ್ತಾನೆ. ದುರ್ದೈವಕ್ಕೆ ಈ "ಕಾವ್ಯ ಕೌತುಕ" ಅನ್ನುವ ಗ್ರಂಥವೂ, ಅದಕ್ಕೆ ಅಭಿನವ ಗುಪ್ತ ರಚಿಸಿಕೊಟ್ಟ "ವಿವರಣ" ಎನ್ನುವ ಟೀಕಾಗ್ರಂಥವೂ ಈಗ ಸಿಕ್ಕುವುದಿಲ್ಲ. ಆದರೆ ಈ ಗ್ರಂಥದ ಒಂದು ಶ್ಲೋಕ ಬೇರೆ ಕಡೆಗಳಲ್ಲಿ ಮುಂದಿನ ಕವಿಗಳು ಉಲ್ಲೇಖಿಸಿರುವುದರಿಂದ ಸಿಗುತ್ತದೆ. ಅದು ಹೀಗಿದೆ: 

ಪ್ರಜ್ಞಾ ನವನವೋಲ್ಲೇಖಶಾಲಿನೀ ಪ್ರತಿಭಾ ಮತಾ
ತದನುಪ್ರಾಣನಾಜೀವದ್ ವರ್ಣಾನಾನಿಪುಣಃ  ಕವಿ: 

"ಹೊಸಹೊಸದಾಗಿ ಉಲ್ಲೇಖಿಸುವ ಸಾಮರ್ಥ್ಯವುಳ್ಳ ಪ್ರಜ್ಞಾಶಕ್ತಿಗೆ "ಪ್ರತಿಭೆ" ಎಂದು ಹೆಸರು. ಆ ಪ್ರತಿಭೆಯನ್ನವಲಂಬಿಸಿ ಜೀವಂತವಾದ ವರ್ಣನೆಯನ್ನು ಮಾಡುವುದರಲ್ಲಿ ನೈಪುಣ್ಯವುಳ್ಳವನು ಕವಿ" ಎನ್ನುವುದು ಇದರ ಅರ್ಥ. ಸುಮಾರು ಒಂದು ಸಾವಿರದ ಎರಡು ನೂರು ವರುಷಗಳ ಹಿಂದೆ (ಎಂಟನೆಯ ಶತಮಾನ) ಈ ಮಟ್ಟದ ಖಚಿತವಾದ ಲಕ್ಷಣ (ಅರ್ಥ ನಿರೂಪಣೆ) ನಮ್ಮ ಹಿರಿಯರು ಮಾಡಿದ್ದಾರೆ ಎಂದು ಹೆಮ್ಮೆ ಪಡಬಹುದು. ಇಂತಹ ನುಡಿಮುತ್ತುಗಳುಳ್ಳ ಗ್ರಂಥಗಳು ಪರಕೀಯರ ಧಾಳಿಗಳಲ್ಲಿ ಸುಟ್ಟು ಬೂದಿಯಾದುವು ಎಂದು ವಿಷಾದಿಸಲೂಬಹುದು. 

ಒಳ್ಳೆಯ ಗುರುವನ್ನು ಆರಿಸಿಕೊಂಡು ಅವನಿಂದ ಕಲಿಯುವ ಶಿಷ್ಯನಿಗೆ ಈ "ಪ್ರಜ್ಞಾಶಕ್ತಿ" ಇರುವುದು ಅತಿ ಅವಶ್ಯಕ. 
*****

ಈಗಿನ ಶಾಲಾ-ಕಾಲೇಜುಗಳ ಮಾದರಿಯ ವಿದ್ಯಾಭ್ಯಾಸ ನಡೆಯುವ ಸಂದರ್ಭದಲ್ಲಿ ಗುರು-ಶಿಷ್ಯರ ಸಂಬಂಧದ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಚರ್ಚಿಸಿದ್ದೆವು. ಇದಕ್ಕೆ ಒಂದು ಉದಾಹರಣೆ ನೋಡುವುದು ಸೂಕ್ತ. ಇದೇನೂ ಇಂದಿನ ವೃತ್ತಾಂತವಲ್ಲ. ಸುಮಾರು ಆರೇಳು ದಶಕಗಳ ಹಿಂದಿನದು. ಈಗಂತೂ ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವ ಏಕಮೇವ ಗುರಿಯಿಂದ ಓದುವ ವಿದ್ಯಾರ್ಥಿಗಳ ಪರಿ ಹೇಳುವುದೇ ಬೇಡ. 

ಪ್ರಾಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಅವರಿಗೆ ಮುಂಬಡ್ತಿ (ಪ್ರಮೋಷನ್) ಕೊಡುವ ಸಂದರ್ಭ. ಆಗ ಅಕ್ಸಫರ್ಡ್ ಅಥವಾ ಕೇಂಬ್ರಿಜ್ ವಿದ್ಯಾಲಯಗಳಲ್ಲಿ ಡಿಗ್ರಿ ಪಡೆದವರಿಗೆ ಮಾತ್ರವೇ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನೇಮಕ ಮಾಡಲಾಗುತ್ತಿತ್ತಂತೆ. ಶ್ರೀಕಂಠಯ್ಯನವರು ಅಲ್ಲಿಗೆ ಹೋಗಿ ಡಿಗ್ರಿ ಪಡೆದವರಲ್ಲ. ಅವರಿಗೆ ಒಂದು ಆಯ್ಕೆಯನ್ನು ಕೊಟ್ಟರಂತೆ. ಹೆಚ್ಚು ಸಂಬಳದ ಕನ್ನಡ ಪ್ರಾಧ್ಯಾಪಕನ ಕೆಲಸ ಅಥವಾ ಕಡಿಮೆ ಸಂಬಳದ ಇಂಗ್ಲಿಷ್ ಪ್ರಾಧ್ಯಾಪಕನ ಕೆಲಸ. ಆಯ್ಕೆ ಶ್ರೀಯವರಿಗೆ ಬಿಟ್ಟದ್ದು. ಅವರ ಎರಡೂ ಭಾಷೆಗಳ ಮೇಲಿನ ಅಪಾರ ಪಾಂಡಿತ್ಯ ತಿಳಿದಿದ್ದ ಮೇಲಧಿಕಾರಿಗಳಿಂದ ಈ ಅವಕಾಶ. "ನಾನು ಕನ್ನಡದ ಕೆಲಸವನ್ನು ಹೇಗಾದರೂ ಮಾಡುತ್ತೇನೆ. ವಿದೇಶೀಯರಿಗಿಂತ, ಅಲ್ಲಿನ ಡಿಗ್ರಿ ಪಡೆದವರಿಗಿಂತ ಇಲ್ಲಿನವರು ಏನೂ ಕಡಿಮೆ ಇಲ್ಲ ಎಂದು ತೋರಿಸಬೇಕು" ಎನ್ನುವ ಛಲದಿಂದ ಕಡಿಮೆ ಸಂಬಳದ ಇಂಗ್ಲಿಷ್ ಪ್ರೊಫೆಸರ್ ಹುದ್ದೆ ಆರಿಸಿಕೊಂಡರು. 

ಶೇಕ್ಸಪೀಯರ್ ಮಹಾಕವಿಯ "ಒಥೆಲೋ" ನಾಟಕ ಒಂದು ತರಗತಿಗೆ ಪಠ್ಯಪುಸ್ತಕ. ಶ್ರೀಯವರು ಕೇವಲ ಪರೀಕ್ಷೆಗೆ ಪಾಠ ಹೇಳಿದವರಲ್ಲ. ಆಯಾಗೋ ಪಾತ್ರ ಚಿತ್ರಣ ವಿವರಿಸುವಾಗ ಬೇರೆ ಬೇರೆ ಭಾಷೆಗಳ ಮುಖ್ಯ ಕೃತಿಗಳಲ್ಲಿ ಬರುವ ಖಳನಾಯಕರ ಪಾತ್ರಗಳ ಜೊತೆ ಆಯಾಗೋವಿನ ಸಾಮ್ಯ-ಭೇದಗಳನ್ನು ಒಂದು ವಾರದವರೆಗೂ ವಿವರಿಸಿದರಂತೆ. ಅನೇಕ ವಿದ್ಯಾರ್ಥಿಗಳಿಗೆ ಇಷ್ಟೆಲ್ಲಾ ಬೇಡವಾಯಿತು. ಕಡೆಗೆ ಉಪಕುಲಪತಿಗಳಾದ ಏನ್. ಎಸ. ಸುಬ್ಬ ರಾವ್ ಅವರಿಗೆ ದೂರೊಂದು ಹೋಯಿತು. "ಪರೀಕ್ಷೆಗೆ ಪಾಠ ಹೇಳದೆ ಏನೇನೋ ಹೇಳುತ್ತಾ ಕಾಲಹರಣ ಮಾಡುತ್ತಾರೆ" ಎಂದು ದೂರು. ಶ್ರೀಯವರ ಬಗ್ಗೆ ಗೊತ್ತಿದ್ದ ಉಪಕುಲಪತಿಗಳು ದೂರಿನ ಮೇಲೆ ಏನೂ ಕ್ರಮ ಕೈಗೊಳ್ಳಲಿಲ್ಲ ಅನ್ನುವುದು ಬೇರೆ ಮಾತು. ವಿದ್ಯಾರ್ಥಿಗಳು ಪಾಠವನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನುವುದಕ್ಕೆ ಈ ಉದಾಹರಣೆ. ಇದನ್ನು ಶ್ರೀಯವರ ಜೀವನಚರಿತ್ರೆಯಲ್ಲಿ ಕಾಣಬಹುದು. 

*****

ಒಂದು ವಿಷಯವನ್ನು ಓದಿದರೆ ಅಥವಾ ಮತ್ತೊಬ್ಬರಿಂದ ಕೇಳಿದರೆ ಅದು ಪೂರ್ತಿಯಾಗಿ ಅರ್ಥವಾಗುತ್ತದೆ ಅನ್ನುವಂತಿಲ್ಲ. ಸ್ಥೂಲವಾಗಿ ಕೆಲಮಟ್ಟಿಗೆ ತಿಳಿಯಬಹುದು. ಆಳವಾದ ತಿಳಿವಿಗೆ ಅದರ ಸಂಬಂಧಿಸಿದ ವಿಷಯಗಳ ಮನನ-ಮಂಥನ ಬೇಕಾಗುತ್ತದೆ. ಓದಿ, ಕೇಳಿ, ಮನನ ಮಾಡಿ, ಪೂರ್ಣವಾಗಿ ಅರ್ಥವಾಗಿವೆ ಅನ್ನುವ ಅನೇಕ ವಿಷಯಗಳು ಒಂದು ಹಂತದಲ್ಲಿ ಮತ್ತೊಮ್ಮೆ ಅಧ್ಯಯನ ಮಾಡಬೇಕು ಅನ್ನುವ ಪರಿಸ್ಥಿತಿ ಬರುವುದೂ ಉಂಟು. 

ಪ್ರಾಚಾರ್ಯ ತಿ. ನಂ. ಶ್ರೀಕಂಠಯ್ಯನವರು ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ದೊಡ್ಡ ಹೆಸರು. ತತ್ವಶಾಸ್ತ್ರದ ಪರಮ ಗುರುಗಳಾದ ಪ್ರಾಚಾರ್ಯ ಎಂ. ಹಿರಿಯಣ್ಣನವರ ಶಿಷ್ಯರು. ಹಿರಿಯಣ್ಣನವರು ಮತ್ತು ಇತರ ಪಂಡಿತೋತ್ತಮರ ಶಿಷ್ಯರಾಗಿ ಅಧ್ಯಯನ ಮಾಡಿ ಮುಂದೆ ತಾವೇ ದೊಡ್ಡ ಮಟ್ಟದ ಗುರುವರ್ಯರಾದವರು ತಿ. ನಂ. ಶ್ರೀಕಂಠಯ್ಯನವರು. "ಭಾರತದ ಸಂವಿಧಾನ" ಕನ್ನಡದಲ್ಲಿ ಹೊರಬರಲು ಕಾರಣಕರ್ತರು. "ಪ್ರೆಸಿಡೆಂಟ್" ಅನ್ನುವದಕ್ಕೆ ಪರ್ಯಾಯವಾಗಿ "ರಾಷ್ಟ್ರಪತಿ" ಅನ್ನುವ ಪದವನ್ನು ಕೊಟ್ಟವರು. ಅವರು ಜೀವಿಸಿದ್ದುದು ಕೇವಲ ಅರವತ್ತು ವರ್ಷ. ಅಷ್ಟು ಕಾಲದಲ್ಲೇ ಅನೇಕ ಸಾಧನೆಗಳನ್ನು ಮಾಡಿದ ಮಹನೀಯರು. 

ಅವರ ಮೇರು ಕೃತಿ "ಭಾರತೀಯ ಕಾವ್ಯಮೀಮಾಂಸೆ" ರಚನೆಯ ಸಂದರ್ಭ. ಆನಂದವರ್ಧನನ "ಧ್ವನ್ಯಾಲೋಕ" ಮೇರು ಕೃತಿಯನ್ನು ಅನೇಕ ಬಾರಿ ತಾವು ಅಧ್ಯಯನ ಮಾಡಿದುದಲ್ಲದೇ ಅನೇಕ ವಿದ್ಯಾರ್ಥಿಗಳಿಗೆ ಪಾಠ ಹೇಳಿದವರು. "ಭಾರತೀಯ ಕಾವ್ಯಮೀಮಾಂಸೆ" ಕೃತಿ ರಚನೆಯ ಸಂದರ್ಭದಲ್ಲಿ ಅವರಿಗೆ ಅದನ್ನು ಮತ್ತೊಮ್ಮೆ ಗುರುಮುಖೇನ ಅಧ್ಯಯನ ಮಾಡಬೇಕೆನ್ನಿಸಿತಂತೆ! ಆ ವೇಳೆಗೆ ಅವರ ಗುರುಗಳಾದ ಹಿರಿಯಣ್ಣನವರಿಗೆ ಹತ್ತಿರ ಹತ್ತಿರ ಎಂಭತ್ತರ ವಯಸ್ಸು. ಅವರು ಬೇರೆ ಚಟುವಟಿಕೆಗಳನ್ನು ನಿಲ್ಲಿಸಿ ಕೇವಲ ತಮ್ಮ ಅಧ್ಯಯನ ಮಾತ್ರ ನಡೆಸುತ್ತಿದ್ದರಂತೆ. ಆದರೂ ಶಿಷ್ಯನ ಕೋರಿಕೆ ಮನ್ನಿಸಿ ಶಿಷ್ಯ ವಾತ್ಸಲ್ಯದಿಂದ ಮತ್ತೊಮ್ಮೆ ಪಾಠ ಹೇಳಿದರಂತೆ! 

"ಭಾರತೀಯ ಕಾವ್ಯಮೀಮಾಂಸೆ" ಕೃತಿಯ ಮುನ್ನುಡಿಯಲ್ಲಿ ಶ್ರೀಕಂಠಯ್ಯನವರು ಈ ವಿಷಯವನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸಿದ್ದಾರೆ. 

ಒಂದು ಕಡೆ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳು. ಮತ್ತೊಂದೆಡೆ ಎಷ್ಟು ತಿಳಿದರೂ ಇನ್ನೂ ತಿಳಿಯುವುದು ಇದೆ ಎನ್ನುವ ಘನಪಾಠಿ ಗುರು-ಶಿಷ್ಯರು. ಗುರು-ಶಿಷ್ಯ ಬಾಂಧವ್ಯಕ್ಕೆ ಸೊಗಸಾದ ಉದಾಹರಣೆಗಳು. 

***** 

ಜ್ಞಾನದ ಒಂದು ಶಾಖೆಯನ್ನು ಒಬ್ಬರು ಮತ್ತೊಬ್ಬರಿಂದ ಶಿಷ್ಯರಾಗಿ ಕಲಿತು, ಅವರಿಗೆ ಗುರುವಾಗಿ ಮತ್ತೊಂದು ಜ್ಞಾನದ ಶಾಖೆಯನ್ನು ಕಲಿಸಿರುವ ಉದಾಹರಣೆಗಳಿವೆ. ಇದೆ ರೀತಿ ಗುರು-ಶಿಷ್ಯರಿಬ್ಬರೂ ಜೊತೆಯಾಗಿ ಪರಮ ಸತ್ಯದ ಅನ್ವೇಷಣೆ ಮಾಡಿರುವುದೂ ಇದೆ. ಇವುಗಳನ್ನು ಮುಂದೆ ಎಂದಾದರೂ ಅವಕಾಶವಾದಾಗ ನೋಡೋಣ.