Showing posts with label Pandava. Show all posts
Showing posts with label Pandava. Show all posts

Friday, September 19, 2025

ಯಯಾತಿಯ ಮೊಮ್ಮಕ್ಕಳು


ಐವತ್ತೈದು ವರುಷಗಳ ಹಿಂದೆ (1971) ಈಶ್ವರಿ ಪ್ರೊಡಕ್ಷನ್ಸ್  ಅವರ "ಕುಲ ಗೌರವ" ಎನ್ನುವ ಹೆಸರಿನ ಕನ್ನಡ ಚಲನಚಿತ್ರವೊಂದು ತೆರೆ ಕಂಡಿತ್ತು. ನಟ ಸಾರ್ವಭೌಮ ದಾಜಕುಮಾರ್ ಮೂರು ಪಾತ್ರಗಳಲ್ಲಿ ಅಭಿನಯಿಸಿದ್ದ ಚಲನಚಿತ್ರ. ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯ ಮಾಲೀಕ ಎನ್. ವೀರಾಸ್ವಾಮಿ ಅವರ ಮಗ ರವಿಚಂದ್ರನ್ ಮೊದಲ ಬಾರಿಗೆ ಅದರಲ್ಲಿ ಬಾಲಕಲಾವಿದನಾಗಿ ಅಭಿನಯಿಸಿದ್ದರು. ಮೂರು ತಲೆಮಾರಿನ ಸಂಘರ್ಷವನ್ನು ತೋರಿಸುವ ಕಥೆಯ ಚಿತ್ರವದು. ತಾತ, ಅಪ್ಪ ಮತ್ತು ಮಗ ಅನ್ನುವ ಮೂರು ಪಾತ್ರಗಳು ರಾಜಕುಮಾರ್ ಪಾಲಿಗೆ. 

ತಾತ-ಅಪ್ಪ-ಮಗ ಮತ್ತು ಅಪ್ಪ-ಮಗ-ಮೊಮ್ಮಗ ಎನ್ನುವ ಮೂರು ತಲೆಮಾರುಗಳನ್ನು ಒಟ್ಟಾಗಿ ಸೂಚಿಸುವ ಪದಪ್ರಯೋಗವನ್ನು ನಾವು ಆಗಾಗ್ಗೆ ಕೇಳಬಹುದು. ಅನೇಕ ತಂದೆ-ತಾಯಿಯರಿಗೆ ಹಿಂದೆಲ್ಲ ಅನೇಕ ಮಕ್ಕಳಿರುತ್ತಿದ್ದರು. (ಈಗ ಇದ್ದರೆ ಒಂದೋ ಅಥವಾ ಎರಡೋ ಇರಬಹುದು). ಹೀಗೆ ಇರುತ್ತಿದ್ದ ಅನೇಕ ಮಕ್ಕಳಲ್ಲಿ ಕೆಲವು ಗಂಡು; ಕೆಲವು ಹೆಣ್ಣು. ಗಂಡು ಸಂತಾನಕ್ಕೆ "ಮಗ" ಎಂದೂ ಹೆಣ್ಣು ಸಂತಾನಕ್ಕೆ "ಮಗಳು" ಎಂದೂ ಹೇಳುವುದು. ಈಗಲೂ ಹಾಗೆಯೇ ನಡೆಯುತ್ತಿದೆ. ಎಲ್ಲರನ್ನೂ ಸೇರಿಸಿ ಒಟ್ಟಾಗಿ ನಿರ್ದೇಶಿಸುವಾಗ ಅದು "ಮಕ್ಕಳು" ಎಂದಾಗುತ್ತದೆ. ಇದೇ ರೀತಿ ಮಕ್ಕಳ ಮಕ್ಕಳನ್ನು "ಮೊಮ್ಮಕ್ಕಳು" ಎಂದು ಹೇಳುವುದು. ಈಗಲೂ ಇದು ಹೀಗೆಯೇ ಇದೆ. 

ಮೊಮ್ಮಕ್ಕಳು ಅವರ ತಂದೆ-ತಾಯಿಯರ ತಂದೆ-ತಾಯಿಯರನ್ನು ಏನೆಂದು ಕರೆಯಬೇಕು? ಸಾಮಾನ್ಯವಾಗಿ ನಾವು ಕೇಳುವ ಪದ "ತಾತ" ಮತ್ತು "ಅಜ್ಜಿ" ಎಂದು. ಕೆಲವೊಮ್ಮೆ "ಅಜ್ಜ" ಮತ್ತು "ಅಜ್ಜಿ" ಎಂದು ಹೇಳಬಹುದು. ನಾವು ಚಿಕ್ಕವರಿದ್ದಾಗ ತಂದೆಯ ತಂದೆಯನ್ನು "ತಾತ" ಎಂದೂ, ತಾಯಿಯ ತಂದೆಯನ್ನು "ಅಜ್ಜ" ಎಂದೂ ಕರೆಯುತ್ತಿದ್ದೆವು. ಆದರೆ ಎರಡೂ ಕಡೆಯವರು ಅಜ್ಜಿಯರು. ತೆಲುಗಿನಲ್ಲಿ ತಾಯಿಯ ತಾಯಿಯನ್ನು "ಅಮ್ಮಮ್ಮ" ಅನ್ನುತ್ತಾರೆ. ಈಗಲೂ ಪ್ರಾಯಶಃ ಕರಾವಳಿಯಲ್ಲಿ ಮತ್ತು ಮಲೆನಾಡಿನಲ್ಲಿ "ಅಜ್ಜ" ಅನ್ನುವ ಪದ ಹೆಚ್ಚು ಬಳಕೆಯಲ್ಲಿದೆ ಅನ್ನಿಸುತ್ತದೆ. ಈಗಂತೂ ತಾತ, ಅಜ್ಜ, ಅಜ್ಜಿ ಎಲ್ಲರೂ ಮರೆಯಾಗಿ "ಗ್ರಾಂಡ್ ಪಾ" ಮತ್ತು "ಗ್ರಾಂಡ್ ಮಾ" ಬಂದಿದ್ದಾರೆ. 

ಸಂಸ್ಕೃತದಲ್ಲಿ ಮಗನಿಗೆ ಮತ್ತು ಮಗಳಿಗೆ ನಿರ್ದೇಶಿಸಲು ಅನೇಕ ಪದಗಳು ಇವೆ. ಮಗನಿಗೆ "ಪುತ್ರ" ಎನ್ನುವ ಪದ ಹೆಚ್ಚು ಬಳಕೆಯಲ್ಲುಂಟು. ಹಾಗೆಯೇ ಮಗಳಿಗೆ "ಪುತ್ರೀ" ಎಂದುಂಟು. "ಸುತ" ಮತ್ತು "ಸುತಾ" ಎಂದೂ ಉಂಟು. ಹಾಗೆಯೇ ಉಪಯೋಗಿಸುವ ಅನೇಕ ಪದಗಳಲ್ಲಿ ಮಗಳಿಗೆ "ದುಹಿತಾ" ಎಂದು ಒಂದು ಪದ ಉಂಟು. ತಂದೆಯ ತಂದೆಯನ್ನು "ಪಿತಾಮಹ" ಎಂದು ಸಂಬೋಧಿಸುತ್ತಾರೆ. ಕನ್ನಡದಲ್ಲಿಯೂ ಹೀಗುಂಟು. ತಾಯಿಯ ತಂದೆಯನ್ನು "ಮಾತಾಮಹ" ಎನ್ನುತ್ತಾರೆ. ಹೀಗೆಯೇ ಮಗನ ಮಗನಾದ  ಮೊಮ್ಮಗನಿಗೆ "ಪೌತ್ರ" ಎಂದೂ, ಮಗಳ ಮಗನಾದ ಮೊಮ್ಮಗನಿಗೆ "ದೌಹಿತ್ರ" (ದುಹಿತಾಳ ಮಗ) ಎಂದೂ ಹೇಳುವುದು.  

ಈ ಪಿತಾಮಹ, ಮಾತಾಮಹ, ಪೌತ್ರ ಮತ್ತು ದೌಹಿತ್ರ ಎನ್ನುವ ಪದಗಳಿಂದ ಸಂಬಂಧಗಳು ಖಚಿತವಾಗಿ ತಿಳಿಯುತ್ತವೆ. ಈ ಸಂಚಿಕೆಯ ಹೆಸರು "ಯಯಾತಿಯ ಮೊಮ್ಮಕ್ಕಳು" ಎಂದು. ಮುಂದೆ "ದೌಹಿತ್ರ" ಎನ್ನುವ ಪದ ಬರುತ್ತದೆ. ಆದ್ದರಿಂದ ಇಷ್ಟು ಪೀಠಿಕೆ. 

*****

ಪರೀಕ್ಷಿತ್ ಮಾಹಾರಾಜನಿಗೆ ಏಳು ದಿನದೊಳಗೆ ಸಾವು ಸಂಭವಿಸುವುದು ಎಂದು ತಿಳಿದಿದೆ. ಸಾಧನೆಯ ಒಂದು ರೀತಿಯಾಗಿ ಶುಕಾಚಾರ್ಯರಿಂದ "ಶ್ರೀಮದ್ಭಾಗವತ" ಕೇಳುತ್ತಿದ್ದಾನೆ. ಎಂಟು ಸ್ಕಂದಗಳು ಮುಗಿದಿವೆ. ಪರೀಕ್ಷಿತನಿಗೆ ತಾನು ತಾಯಿಯ ಗರ್ಭದಲ್ಲಿದ್ದಾಗ ಅಶ್ವತ್ಥಾಮಾಚಾರ್ಯರ  ಬ್ರಹ್ಮಾಸ್ತ್ರದಿಂದ ತನ್ನನ್ನು ಕಾಪಾಡಿದ ಶ್ರೀಕೃಷ್ಣನ ಕಥೆ ಕೇಳಬೇಕೆಂದು ಆಸೆ. ತಾನೂ ಚಂದ್ರವಂಶದವನು. ಶ್ರೀಕೃಷ್ಣನೂ ಚಂದ್ರವಂಶದವನು. ಚಂದ್ರವಂಶದವರ ಕಥೆಯನ್ನು ವಿವರವಾಗಿ ಹೇಳಬೇಕೆಂದು ಶುಕಾಚಾರ್ಯರನ್ನು ಕೇಳುತ್ತಾನೆ. ಶುಕರು ಒಂಭತ್ತನೆಯ ಸ್ಕಂದದಲ್ಲಿ ಚಂದ್ರವಂಶದವರ ವೃತ್ತಾಂತವನ್ನೂ, ನಂತರ ಹತ್ತನೆಯ ಸ್ಕಂದದಲ್ಲಿ ವಿಸ್ತಾರವಾಗಿ ಶ್ರೀಕೃಷ್ಣನ ಕಥೆಯನ್ನೂ ಹೇಳುತ್ತಾರೆ. 

ಹೀಗೆ ಹೇಳುವಾಗ ಯಯಾತಿಯ ಮತ್ತು ಅವನ ಮಕ್ಕಳ, ಮೊಮ್ಮಕ್ಕಳ ಪ್ರಸಂಗಗಳು ಬರುತ್ತವೆ. ಮಹಾಭಾರತದಲ್ಲೂ ಯಯಾತಿಯ, ಅವನ ಸಂತತಿಯ ವಿವರಗಳು ಸಿಕ್ಕುತ್ತವೆ. 

ಚತುರ್ಮುಖ ಬ್ರಹ್ಮನ ಅನೇಕ ಮಕ್ಕಳಲ್ಲಿ ಅತ್ರಿ ಋಷಿಗಳೂ ಒಬ್ಬರು. ಅನಸೂಯ-ಅತ್ರಿಯರ ಮಗ ಚಂದ್ರ. ಚಂದ್ರನ ಮಗ ಬುಧ. ಬುಧ ಮತ್ತು ಇಳಾ ದಂಪತಿಗಳ ಮಗ ಪುರೂರವ. ಪುರೂರವ ಮತ್ತು ಆಯುಷ್ ದಂಪತಿಗಳ ಮಗ ನಹುಷ ಚಕ್ರವರ್ತಿ. ನಹುಷ ಚಕ್ರವತಿಯು ಕೆಲವು ಕಾಲ ದೇವೇಂದ್ರನ ಪದವಿಯನ್ನೂ ಹೊಂದಿದ್ದವನು. 

ನಹುಷನಿಗೆ ಪಿತೃ ದೇವತೆಗಳ ಮಗಳಾದ ವಿರಜಾ ಎನ್ನುವವಳು ಹೆಂಡತಿ. ಇವರ ಮಗನೇ ಯಯಾತಿ. ಯಯಾತಿಗೆ ಶುಕ್ರಾಚಾರ್ಯರ ಮಗಳಾದ ದೇವಯಾನಿ ಮತ್ತು ವೃಷಪರ್ವ ರಾಜನ ಮಗಳಾದ ಶರ್ಮಿಷ್ಠೆ ಪತ್ನಿಯರು. "ರಾಜಾನೋ ಬಹುವಲ್ಲಭಾ:" ಎನ್ನುವಂತೆ ಬೇರೆ ಹೆಂಡತಿಯರೂ ಇದ್ದರು. 

ಯಯಾತಿಗೆ ದೇವಯಾನಿಯಿಂದ ಯದು ಮತ್ತು ತುರ್ವಸು ಎಂದು ಮಕ್ಕಳು. ಈ ಯದು ಮಹಾರಾಜನ ಸಂತತಿಯವರೇ ಮುಂದೆ "ಯಾದವರು" ಎಂದಾದರು. 

ಯಯಾತಿಗೆ ಶರ್ಮಿಷ್ಠೆಯಿಂದ ದೃಹ್ಯು, ಅನುದೃಹ್ಯು ಮತ್ತು ಪುರು ಎಂದು ಮೂವರು ಮಕ್ಕಳು. ಈ ಪುರು ಮಹಾರಾಜನ ಸಂತತಿಯಲ್ಲಿ ಬಂದ ಕುರು ಮಹಾರಾಜನ ಹೆಸರಿನಿಂದ, ಮುಂದೆ ಕೌರವರು ಮತ್ತು ಪಾಂಡವರು ಎಂದಾಯಿತು. 

ಹೀಗೆ ಯಾದವರು, ಕೌರವರು ಮತ್ತು ಪಾಂಡವರು, ಈ ಮೂರೂ ಸಂತತಿಗಳಿಗೆ ಯಯಾತಿಯು ಮೂಲಪುರುಷ. 
*****

ತನ್ನ ಪಿತಾಮಹನಾದ ಪುರೂರವ ಮತ್ತು ತಂದೆಯಾದ ನಹುಷ ಚಕ್ರವರ್ತಿಗಳಂತೆ ಯಯಾತಿ ಸಹ ಬಹಳ ಪ್ರತಾಪಿಯೂ ಮತ್ತು ಧರ್ಮಿಷ್ಟನೂ ಆಗಿದ್ದನು. ಬಹು ಸಂಖ್ಯಾತ ಯಜ್ಞ-ಯಾಗಾದಿಗಳನ್ನು ಮಾಡಿ, ನ್ಯಾಯವಾಗಿ ರಾಜ್ಯಪಾಲನೆ ಮಾಡಿ ಬಹಳ ಪುಣ್ಯವನ್ನು ಸಂಪಾದಿಸಿದ್ದನು. ಕಾಲಕ್ರಮದಲ್ಲಿ ಅವನಿಗೆ ತನ್ನ ಯೋಗ್ಯತೆಗೆ ಅನುಗುಣವಾಗಿ ಸ್ವರ್ಗ ಪ್ರಾಪ್ತಿಯಾಯಿತು. ಅವನಿಗೆ ಸ್ವರ್ಗದಲ್ಲಿ ವಿಶೇಷ ಗೌರವಗಳಿದ್ದವು. ಅನೇಕ ದೇವತೆಗಳು "ಇಂತಹ ಪುಣ್ಯವಂತನ ದರ್ಶನ ಸಿಗುವುದೇ ದುರ್ಲಭ" ಎಂದು ಪ್ರತಿದಿನ ಅವನನ್ನು ನೋಡಿಹೋಗುತ್ತಿದ್ದರಂತೆ!

ಆಗಾಗ ದೇವೇಂದ್ರನು "ಯಯಾತಿ, ನಿನ್ನಂತೆ ಅನೇಕ ಯಜ್ಞ-ಯಾಗಗಳನ್ನು ಮಾಡಿರುವವರು ಭೂಲೋಕದಲ್ಲಿ ಬೇರೆ ಯಾರಾದರೂ ಇದ್ದಾರೆಯೇ?" ಎಂದು ಕೇಳುವನು. ಯಯಾತಿಯು "ಅಯ್ಯೋ, ನನ್ನದೇನು ದೊಡ್ಡದು. ನನಗಿಂತ ಎಷ್ಟೋ ದೊಡ್ಡ ಮಹಾತ್ಮರು ಇರುವರು" ಎನ್ನುವನು. ಹೀಗೆಯೇ ಅನೇಕ ಬಾರಿ ನಡೆಯಿತು. 

ಒಮ್ಮೆ ಯಯಾತಿಗೆ ದೇವೇಂದ್ರನು ಹೀಗೆ ಮತ್ತೆ ಮತ್ತೆ ಕೇಳುವುದರಿಂದ ಅಹಂಕಾರ ಉಂಟಾಯಿತು. ದೇವೇಂದ್ರನು ಮತ್ತೆ ಕೇಳಿದಾಗ "ನನ್ನಷ್ಟು ಮಾಡಿರುವವರು ಯಾರಿದ್ದಾರು? ನಾನೇ ಹೆಚ್ಚು" ಎಂದುಬಿಟ್ಟನು. ದೇವೇಂದ್ರನು ಅವನನ್ನು ಸ್ವರ್ಗದಿಂದ ಕೆಳಗೆ ತಳ್ಳಿಸಿಬಿಟ್ಟನು. 

ಹೀಗೆ ಕೆಳಗೆ ಬೀಳುವಾಗ ಯಯಾತಿಯು ಚತುರ್ಮುಖ ಬ್ರಹ್ಮರನ್ನು ಪ್ರಾರ್ಥಿಸಿದನು. ಅವರ ದರ್ಶನವಾಯಿತು. "ನನಗೆ ಏಕೆ ಈ ಗತಿ ಬಂತು?" ಎಂದು ಕೇಳಿದನು. ಬ್ರಹ್ಮರು "ಸ್ವರ್ಗದಲ್ಲಿ ಅಹಂಕಾರಿಗಳಿಗೆ ಜಾಗ ಇಲ್ಲ. ಆದ್ದರಿಂದ ಹೀಗಾಯಿತು" ಎಂದರು. "ಹೋಗಲಿ. ಈಗ ಬೀಳುತ್ತಿರುವುದಂತೂ ನಿಜ. ನನ್ನನ್ನು ಯಾರಾದರೂ ಯೋಗ್ಯರ ಮಧ್ಯದಲ್ಲಿ ಬೀಳುವಂತೆ ಮಾಡಿ" ಎಂದು ಕೇಳಿಕೊಂಡನು. ಅವರು "ಆಗಲಿ" ಎಂದರು. 

*****

ನೈಮಿಷಾರಣ್ಯದಲ್ಲಿ (ಈಗಿನ ಉತ್ತರಪ್ರದೇಶದಲ್ಲಿ ಇದೆ) ನಾಲ್ವರು ಮಹಾ ತೇಜಸ್ವಿಗಳಾದ ಅಣ್ಣ-ತಮ್ಮಂದಿರು ಒಂದು ಯಜ್ಞವನ್ನು ನಡೆಸುತ್ತಿದ್ದರು. ಸ್ವರ್ಗದಿಂದ ಕೆಳಗೆ ಬೀಳುತ್ತಿದ್ದ ಯಯಾತಿಯು ಚತುರ್ಮುಖ ಬ್ರಹ್ಮರ ಕರುಣೆಯಿಂದ ಆ ನಾಲ್ವರ ಮಧ್ಯದಲ್ಲಿ ಬಿದ್ದನು. ಅಣ್ಣ-ತಮ್ಮಂದಿರು ಅವನನ್ನು ಉಪಚರಿಸಿ, ಮಾತನಾಡಿಸಿದರು. 

"ಮಹಾತ್ಮರೇ, ನೀವು ಯಾರು?" 
"ನಾನು ಯಯಾತಿ. ಚಂದ್ರವಂಶದ ಚಕ್ರವರ್ತಿಯಾಗಿದ್ದವನು"
"ಹೀಗೆ ಬೀಳಲು ಕಾರಣವೇನು?"
"ನಾನು ಸ್ವರ್ಗದಲ್ಲಿದ್ದೆ. ಕಾರಣಾಂತರದಿಂದ ಪುಣ್ಯಕ್ಷಯವಾಯಿತು"
"ನಮ್ಮ ಪುಣ್ಯಗಳನ್ನು ನಿಮಗೆ ಧಾರೆ ಎರೆಯುತ್ತೇವೆ. ತಾವು ಮತ್ತೆ ಅಲ್ಲಿಗೆ ಹೋಗಿರಿ"
"ನಾನು ಕ್ಷತ್ರಿಯ. ದಾನ ಕೊಡಬಹುದೇ ಹೊರತು ದಾನ ತೆಗೆದುಕೊಳ್ಳುವಂತಿಲ್ಲ"
"ನಮ್ಮಿಂದ ತೆಗೆದುಕೊಳ್ಳಬಹುದು"
"ಅದು ಹೇಗೆ?"
"ನಾವು ಬೇರೆಯವರಲ್ಲ. ನಿಮ್ಮ ದೌಹಿತ್ರರು. ಆದ್ದರಿಂದ ಇದು ಆಗಬಹುದು"
"ದೌಹಿತ್ರರೇ? ನೀವು ಯಾರು?"
"ನಾವು ನಾಲ್ವರೂ ನಿನ್ನ ಮಗಳು ಮಾಧವಿ ಪಡೆದ ಮಕ್ಕಳು. ನೀನು ನಮ್ಮ ಮಾತಾಮಹ! ನೀನು ನಮ್ಮ ನಡುವೆ ಬಂದದ್ದು ನಮ್ಮ ಭಾಗ್ಯ"
*****

ಮಾಧವಿಯ ನಾಲ್ಕು ಮಕ್ಕಳೂ ಪ್ರಚಂಡರು. ವಿಶೇಷ ಸಾಧನೆಗಳನ್ನು ಮಾಡಿ ಬಹಳ ಪುಣ್ಯ ಸಂಪಾದನೆ ಮಾಡಿದವರು. 

ಸಂಚಿಕೆ ದೀರ್ಘವಾಯಿತು. ಮಾಧವಿಯ ಮಕ್ಕಳ ಸಂಗತಿಯನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

Thursday, December 5, 2024

ಹೂವು - ಹುಲ್ಲು ಮತ್ತು ಶ್ರೀಕೃಷ್ಣ


ಶ್ರೀಕೃಷ್ಣನ ಶಾಂತಿ ದೂತ ಪ್ರಯತ್ನ ದುರ್ಯೋಧನನ ಮೊಂಡುತನದ ಕಾರಣ ವಿಫಲವಾಗಿದೆ. "ಇಡೀ ಸಾಮ್ರಾಜ್ಯ ನನ್ನದು. ಪಾಂಡವರಿಗೆ ಕೊಡಲು ಏನೂ ಇಲ್ಲ. ಅವರು ಮತ್ತೆ ವನವಾಸ, ಅಜ್ಞಾತವಾಸಗಳಿಗೆ ಮಾತ್ರ ಅಧಿಕಾರಿಗಳು. ಅವರಿಗೆ ಸೂಜಿಮೊನೆಯ ಜಾಗವೂ ಇಲ್ಲ" ಎಂದು ಅವನು ಘೋಷಿಸಿ ಶ್ರೀಕೃಷ್ಣನನ್ನು ಬಂಧಿಸಲು ಆಗದ ಪ್ರಯತ್ನ ನಡೆಸಿಯೂ ಆಯಿತು. ಇನ್ನು ಉಳಿದದ್ದು ಒಂದೇ ದಾರಿ. ಅದು ಧರ್ಮಕ್ಷೇತ್ರ ಕುರುಕ್ಷೇತ್ರದ ಹಾದಿ. ಒಂದು ಕಡೆ ಹನ್ನೊಂದು ಅಕ್ಷೋಹಿಣಿ ಸೈನ್ಯ. ಮತ್ತೊಂದು ಕಡೆ ಏಳು ಅಕ್ಷೋಹಿಣಿ ಸೈನ್ಯ. ಎರಡು ಸೈನ್ಯಗಳ ಮಧ್ಯೆ ನಿಂತು ಅರ್ಜುನ ಗಾಡೀವ ಬಿಸಾಡಿ ಮಂಕನಾಗಿ ನಿಂತೂ ಆಯಿತು. ಗೀತೋಪದೇಶ ನಡೆದು ಮೊದಲ ದಿನದ ಯುದ್ಧ ಪ್ರಾರಂಭವಾಯಿತು. ಮೊದಲ ದಿನದ ಸಂಗ್ರಾಮದಲ್ಲಿ ಎರಡೂ ಕಡೆ ಅನೇಕ ಸಾವು-ನೋವು ಉಂಟಾಗಿ ಸೂರ್ಯಾಸ್ತದಲ್ಲಿ ಕಾಳಗ ನಿಂತಿದೆ. ಯುದ್ಧದಲ್ಲಿ ದಣಿದ, ಆದರೆ ಬದುಕುಳಿದ ವೀರ ಸೈನಿಕರೆಲ್ಲ ತಮ್ಮ ತಮ್ಮ ಬಿಡಾರಗಳ ಕಡೆ ಹೊರಟಿದ್ದಾರೆ. 

ಡೇರೆಗಳನ್ನು ತಲುಪಿದ ನಂತರ ಅವರೆಲ್ಲರ ಮೊದಲ ಕೆಲಸ ತಮ್ಮ ತಮ್ಮ ಶಸ್ತ್ರಗಳನ್ನು ಪಕ್ಕಕ್ಕಿಟ್ಟು, ಭಾರವಾದ ಪೋಷಾಕುಗಳನ್ನು ಕಳಚಿ, ಒಣಗಿದ ಬಾಯಿಗಳಿಗೆ ಸ್ವಲ್ಪ ನೀರು ಕುಡಿಸಿ, ಸಿಕ್ಕಿದ ಆಸನಗಳಿಗೆ ಕುಸಿಯುವುದು. ಈಗ ಸೈನ್ಯದ ಜೊತೆಯಲ್ಲಿ ಬಂದಿದ್ದ ವೈದ್ಯರು ಮತ್ತು ಅವರ ಸಹಾಯಕರಿಗೆ ದಣಿದು ಕುಳಿತ ಈ ವೀರರಿಗೆ ಆಗಿರುವ ಗಾಯಗಳ ರಕ್ತ ಒರೆಸಿ, ಮುಲಾಮು ಹಚ್ಚಿ, ಪಟ್ಟಿ ಕಟ್ಟುವುದು. ಇದಾದ ನಂತರ ಎರಡನೆಯ ಕೆಲಸ ಸುಖೋಷ್ಣವಾದ ನೀರಿನಲ್ಲಿ ಸ್ನಾನಾದಿಗಳು. ಅದೂ ಆದ ಮೇಲೆ ಅವರವರ ಪದ್ಧತಿಯಂತೆ ಅಹ್ನಿಕಾದಿಗಳು. ಹಾಸಿಗೆ ಕಂಡರೆ ಸಾಕೆನಿಸಿದ ವಿಪರೀತ ದಣಿದ ದೇಹಗಳು. ಆದರೆ ಪವಡಿಸುವ ಮುಂಚೆ ಹೊಟ್ಟೆಗೆ ಆಹಾರ ಬೇಕಲ್ಲ. ಸೇನೆಯ ಕ್ರಮಕ್ಕೆ ತಕ್ಕಂತೆ ಆರೋಗಣೆಗೆ ವ್ಯವಸ್ಥೆಗಳು ಆಗಿವೆ. ಬಾಣಸಿಗರು ಅಡುಗೆ ಸಿದ್ಧಪಡಿಸಿದ್ದಾರೆ. ಪರಿಚಾರಿಕರು ಬಡಿಸಲು ತಯಾರಿದ್ದಾರೆ. ಭೋಜನಕ್ಕೆ ಕುಳಿತಿದ್ದರೂ ಎಲ್ಲರ ಮನಸ್ಸು ಅಂದಿನ ಯುದ್ಧದ ಸೋಲು-ಗೆಲವು ಮತ್ತು ಸಾವು-ನೋವುಗಳ ಚಿಂತನೆಯಲ್ಲಿ ತೊಡಗಿವೆ. 

ಪಾಂಡವರ ಬಿಡಾರದಲ್ಲಿ ಐವರು ಅಣ್ಣ-ತಮ್ಮಂದಿರು ಸಾಲಾಗಿ ಊಟಕ್ಕೆ ಕುಳಿತಿದ್ದಾರೆ. ಆರು ಎಲೆಗಳಿಗೆ ಬಡಿಸಿ ಆಗಿದೆ. ಆದರೆ ನಾಲ್ವರು ಸಹೋದರರು ಮತ್ತು ಪಾರ್ಥ ಬಂದಿದ್ದರೂ ಊಟ ಮಾಡುವಹಾಗಿಲ್ಲ. ಆರನೆಯವನಾದ ಪಾರ್ಥಸಾರಥಿ ಏಕೋ ಇನ್ನೂ ಬಂದಿಲ್ಲ. ಕೇಶವನಿಲ್ಲದೆ ಭೋಜನವೆಲ್ಲಿ? ಮಾಧವನನ್ನು ಕರೆತರಲು ದೂತರನ್ನು ಕಳಿಸಿದ್ದಾಯಿತು. ಅವನೇನು ಮಾಡುತ್ತಿದ್ದಾನೆ? ಏಕೆ ತಡವಾಯಿತು? ಅವನು ಎಂದೂ ಸಮಯ ಮೀರುವವನಲ್ಲವಲ್ಲ!

****

ಪಾಂಡವರ ಬಿಡಾರ ತಲುಪಿದ ನಂತರ ಪಾರ್ಥಸಾರಥಿ ಅರ್ಜುನನ ಡೇರೆಯ ಮುಂದೆ ರಥ ನಿಲ್ಲಿಸಿ, ಕ್ರಮದಂತೆ ರಥದಿಂದ ಕೆಳಗಡೆ ಇಳಿದು, ಬಲಗೈ ನೀಡಿ ಪಾರ್ಥನನ್ನು ಕೆಳಗಿಳಿಯಲು ಸಹಾಯ ಮಾಡಿದ್ದಾನೆ. ಪಾರ್ಥ ತನ್ನ ಬಿಡಾರದ ಒಳಗೆ ಹೊರಟ ನಂತರ ತಾನು ಮತ್ತೆ ರಥವೇರಿ ಕುದುರೆಗಳ ಲಾಯದ ಬಳಿ ಬಂದಿದ್ದಾನೆ. ರಥ ನಿಲ್ಲಿಸಿ, ನಾಲ್ಕು ಕುದುರೆಗಳನ್ನು ಅವುಗಳ ಬಂಧನದಿಂದ ಬಿಡುಗಡೆ ಮಾಡಿ, ಲಾಯದ ಒಳಗಡೆ ತಂದಿದ್ದಾನೆ. ಅವುಗಳ ನಿಗದಿತ ಸ್ಥಾನದಲ್ಲಿ ಕಟ್ಟಿ ಒಂದೊಂದಾಗಿ ಅವುಗಳ ಸಣ್ಣ ಗಾಯಗಳಿಗೆ ಮುಲಾಮು ಹಚ್ಚಿ ಮೈದಡವಿದ್ದಾನೆ. ಶ್ರೀಕೃಷ್ಣನ ಚಾಕಚಕ್ಯತೆ ಮತ್ತು ಪಾರ್ಥನ ಗಾಂಡೀವದ ಕಾರಣ ಹೆಚ್ಚು ಗಾಯಗಳಾಗಿಲ್ಲ. ಆದರೂ ಭೀಷ್ಮ, ದ್ರೋಣ, ಅಶ್ವತ್ಥಾಮ ಮತ್ತಿತರ ಕೌರವ ವೀರರ ಸೈನ್ಯ ಸಾಮಾನ್ಯವೇ? "ದಂಡಿನಲ್ಲಿ ಸೋದರಮಾವನೇ?" ಎಂದು ಗಾದೆಯೇ ಇದೆಯಲ್ಲ! ಸಣ್ಣ-ಪಣ್ಣ ಆದರೂ ಗಾಯಗಳು ಗಾಯಗಳು ತಾನೇ? ಕುದುರೆಗಳ ಮುಂದೆ ನೀರಿನ ವ್ಯವಸ್ಥೆ ಮಾಡಿದ್ದಾನೆ. ನೀರು ತಂದು ಅವುಗಳ ಮೈ ತೊಳೆದಿದ್ದಾನೆ. ಅವನನ್ನು ಹುಡುಕಿಕೊಂಡು ಬಂದ ಪಾಂಡವರ ದೂತರು ಅವನ ಕೆಲಸದ ಮಧ್ಯೆ ಮಾತನಾಡಲು ಧೈರ್ಯವಿಲ್ಲದೆ ಸ್ವಲ್ಪ ದೂರದಲ್ಲಿ ಭಯ-ಭಕ್ತಿಯಿಂದ ನಿಂತಿದ್ದಾರೆ. ಮುಂದೇನು?


ಇದೇನು? ಅಷ್ಟೊಂದು ಮಂದಿ ಆಳು-ಕಾಳುಗಳಿದ್ದರೂ ಕೇಶವನು ತಾನೇ ಹುಲ್ಲು ಹೊತ್ತು ತರುತ್ತಿದ್ದಾನೆ! ಎಲ್ಲ ಕುದುರೆಗಳ ಮುಂದೆ ಅಷ್ಟಷ್ಟು ಹಾಕುತ್ತಿದ್ದಾನೆ. ಅವುಗಳು ಹುಲ್ಲು ತಿನ್ನುವಾಗ ಸರದಿಯಂತೆ ಅವುಗಳ ಮೈದಡವುತ್ತಿದ್ದಾನೆ. ಆ ಕುದುರೆಗಳಾದರೋ ಶ್ರೀಕೃಷ್ಣನ ಕೈ ನೆಕ್ಕಿ ತಮ್ಮ ಪ್ರೀತಿ ತೋರಿಸುತ್ತಿವೆ. ಆ ಎಲ್ಲ ಕುದುರೆಗಳು ಸ್ವಲ್ಪ ಹುಲ್ಲು ತಿಂದು, ನೀರು ಕುಡಿದ ನಂತರ ತೃಪ್ತಿಯಿಂದ ಪಾಂಡವರ ಡೇರೆಯ ಕಡೆ ಹೊರಟಿದ್ದಾನೆ. ನೋಡುತ್ತಿದ್ದ ದೂತರು ಮುಂದೆ ಹೋಗಿ ಧರ್ಮರಾಯನಿಗೆ ಎಲ್ಲಾ ವಿಷಯ ತಿಳಿಸಿದ್ದಾರೆ. 

ಡೇರೆಯ ಒಳಗೆ ಬಂದ ಶ್ರೀಕೃಷ್ಣ ಈಗ ತನ್ನ ಸ್ನಾನ-ಆಹ್ನಿಕಗಳನ್ನು ಮುಗಿಸಿ ಭೋಜನಕ್ಕೆ ಒಳಗೆ ಬಂದ. ಶ್ರೀಕೃಷ್ಣನಿಗೆ ಐವರು ಸಹೋದರರು ಎದ್ದು ಗೌರವ ಸೂಚಿಸಿ ಅವನ ಜೊತೆ ಊಟಕ್ಕೆ ಕೂಡುತ್ತಾರೆ. ಯುಧಿಷ್ಠಿರ ಹೇಳುತ್ತಾನೆ:

"ಕುದುರೆಗಳ ಯೋಗಕ್ಷೇಮಕ್ಕೆ ಲಾಯದಲ್ಲಿ ಸೇವಕರಿದ್ದರಲ್ಲ, ಕೃಷ್ಣ. ಅವರು ಮುಂದಿನ ಕೆಲಸ ನೋಡುತ್ತಿದ್ದರು. ಕುದುರೆಗಳಿಗೆ ಹುಲ್ಲು-ಹುರಳಿ-ನೀರು ಕೊಡುವುದು ಅವರ ಕೆಲಸ. ಗಾಯಗಳಿಗೆ ಶುಶ್ರೂಷೆ ಮಾಡಲು ಪಶುವೈದ್ಯರಿದ್ದಾರೆ. ನೀನೇಕೆ ಅದೆಲ್ಲಾ ಮಾಡಿದೆ? ಇಲ್ಲಿ ಬಂದು ನಮ್ಮ ಜೊತೆ ಭೋಜನ ಮಾಡಬಾರದೇ?"

ತನ್ನ ಎಂದಿನ ಮುಗುಳ್ನಗೆಯ ಮಾತಿನಿಂದ ಶ್ರೀಕೃಷ್ಣ ಹೇಳುತ್ತಾನೆ:

"ಬೆಳಗ್ಗಿನಿಂದ ಇಲ್ಲಿವರೆಗೆ ಯುದ್ಧದಲ್ಲಿ ನಮಗೆ ಸಹಾಯ ಮಾಡಲು ಕುದುರುಗಳು ಬೇಕು. ಈಗ ಕುದುರೆಗಳ ಕ್ಷೇಮ ನೋಡಲು ನಮಗೆ ಐದು ನಿಮಿಷ ಪುರಸೊತ್ತಿಲ್ಲವೆಂದರೆ ಹೇಗೆ? ಇದು ಸಾರಥಿಯ ಕರ್ತವ್ಯ. ಕುದುರೆಗಳು ಮೂಕ ಪ್ರಾಣಿಗಳಾದರೂ ಅವಕ್ಕೆ ಎಲ್ಲ ಅರ್ಥವಾಗುತ್ತದೆ. ಸಾರಥಿಯ ಜೊತೆ ಕುದುರೆಗಳ ಬಾಂಧವ್ಯ ಚಕ್ರವತಿಯಾದ ನಿನಗೆ ಗೊತ್ತಾಗುವುಲ್ಲ. ಆಳುಗಳನ್ನು ನಂಬಿ ನನ್ನ ಕರ್ತವ್ಯ ನಾನು ಬಿಡಲಾರೆ. ನಾಳಿನಿಂದ ನೀವು ನನಗೆ ಕಾಯಬೇಡಿ. ನಾನು ಬರುವುದು ತಡವಾಗುತ್ತದೆ. ನಿಮ್ಮ ಪಾಡಿಗೆ ನೀವು ಭೋಜನ ಮುಗಿಸಿ. ನನ್ನ ಸಮಯದಲ್ಲಿ ನಾನು ಬಂದು ಭೋಜನ ಮಾಡುತ್ತೇನೆ. ಚಿಂತೆ ಬೇಡ. "

ಶ್ರೀಕೃಷ್ಣನ ಕಾರ್ಯನಿಷ್ಠೆಗೆ ತಲೆದೂಗುತ್ತಾ ಧರ್ಮಜ ಹೇಳುತ್ತಾನೆ:

"ಶ್ರೀಕೃಷ್ಣನಿಲ್ಲದೆ ಪಾಂಡವರು ಊಟ ಮಾಡುವುದು ಹೇಗೆ? ಅದು ಸಾಧ್ಯವೇಇಲ್ಲ. ನಾಳಿನಿಂದ ನೀನು ಬರುವವರೆಗೆ ನಾವೂ ಬಿಡಾರ ಸುತ್ತಿ ಸೈನಿಕರ ಯೋಗಕ್ಷೇಮ ವಿಚಾರಿಸುತ್ತೇವೆ. ನಂತರ ಆರು ಜನವೂ ಒಟ್ಟಿಗೆ ಭೋಜನ ಮಾಡೋಣ."

ಈಗ ಎಲ್ಲರ ಊಟ ಪ್ರಾರಂಭವಾಗುತ್ತದೆ. 
*****

ಶ್ರೀಕೃಷ್ಣನಲ್ಲಿ ಪಾಂಡವರಿಗೆ, ಪಾಂಚಾಲಿಗೆ ಅಚಲವಾದ ಶ್ರದ್ದೆ-ಭಕ್ತಿ. ಶ್ರೀಕೃಷ್ಣನಿಗೆ ಪಾಂಡವ-ದ್ರೌಪದಿಯರಲ್ಲಿ ಎಲ್ಲಿಲ್ಲದ ಪ್ರೀತಿ-ಗೌರವ. ಪಾಂಡವರು ಶ್ರೀಕೃಷ್ಣನನ್ನು ಅವನು ಬಂದಾಗಲೆಲ್ಲ ಹೂವುಗಳಿಂದ ಸ್ವಾಗತಿಸಿದರು. ಅರಣ್ಯವಾಸದಲ್ಲಿದ್ದಾಗ ಅವನಿಗಾಗಿ ಕಾಡೆಲ್ಲಾ ಹುಡುಕಿ ಸೊಗಸಾದ ಹೂವುಗಳನ್ನು ತಂದರು. ಈಗ ಸಮಯ ಬಂದಾಗ ಶ್ರೀಕೃಷ್ಣನು ಅವರ ಕುದುರೆಗಳಿಗೆ ಹುಲ್ಲನ್ನು ತಂದಿದ್ದಾನೆ. ಅವನಿಗೆ ಚಿಕ್ಕ ಕೆಲಸ, ದೊಡ್ಡ ಕೆಲಸ ಎನ್ನುವ ಭೇದವಿಲ್ಲ. ಹೂವು ತಂದವರ ಮನೆಗೆ ಹುಲ್ಲು ತಂದ, ಶ್ರೀಕೃಷ್ಣ!

ಮಹಾನುಭಾವರಾದ ಶ್ರೀ ಪುರಂದರ ದಾಸರು ಈ ಪ್ರಸಂಗವನ್ನು ವರ್ಣಿಸುವ ರೀತಿ:

ಒಂದುದಳ ಶ್ರೀತುಳಸಿ ಬಿಂದು ಗಂಗೋದಕ 
ಇಂದಿರಾರಮಣನಿಗೆ ಅರ್ಪಿತವೆನುತ 
ಒಂದೇಮನದಲಿ ಸಿಂಧುಶಯನ ಮುಕುಂದಾ ಎನೆ 
ಎಂದೆಂದೂ ವಾಸಿಪನು ಮಂದಿರದ ಒಳಗೆ 

ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ 
ಪರಿಪೂರ್ಣನೆಂದು ಪೂಜೆಯನು ಮಾಡೆ 
ಸರಸಿಜಾಕ್ಷನು ತನ್ನ ಸಕಲ ಸ್ವಾತಂತ್ರ್ಯದಲಿ 
ಸರೀಭಾಗ ಕೊಡುವ ತನ್ನ ಅರಮನೆಯ ಒಳಗೆ 

ಪಾಂಡವರ ಮನೆಯಲ್ಲಿ ಕುದುರೆಗಳ ತಾ ತೊಳೆದು 
ಪುಂಡರೀಕಾಕ್ಷ ತಾ ಹುಲ್ಲನು ತಿನಿಸಿದ 
ಅಂಡಜಾವಾಹನ ಶ್ರೀ ಪುರಂದರ ವಿಠಲನು 
ತೊಂಡರಿಗೆ ತೊಂಡನಾಗಿ  ಸಂಚರಿಸುತಿಹನು 

ಹೂವ ತರುವರ ಮನೆಗೆ ಹುಲ್ಲ ತರುವ 
ಅವ್ವ ಲಕುಮಿರಮಣ ಇವಗಿಲ್ಲ ಗರುವ 

ಎಷ್ಟು ಸೊಗಸಾಗಿ ಹೂವಿಗೂ, ಹುಲ್ಲಿಗೂ ಇರುವ ಸಂಬಂಧ ಹೇಳಿದ್ದಾರೆ! 

*****

ದೊಡ್ಡವರ ಕೃತಿಗಳಲ್ಲಿ, ವೇದ-ಪುರಾಣ-ಕಾವ್ಯಗಳಲ್ಲಿ ಪ್ರತಿ ಪದಕ್ಕೂ ಅನೇಕ ಅರ್ಥಗಳಿರುತ್ತವೆ. ಕೇವಲ ಭಾಷೆ ಬರುತ್ತದೆ ಎನ್ನುವ ಕಾರಣದಿಂದ ಓದಿದರೆ ಮೇಲ್ನೋಟದ ಅರ್ಥ ಮಾತ್ರ ತಿಳಿಯುತ್ತದೆ. ಮತ್ತೆ ಮತ್ತೆ ಓದಿ ಮನನ ಮಾಡಿದರೆ ವಿಶೇಷ ಅರ್ಥಗಳು ಹೊಳೆಯುತ್ತವೆ. ತಿಳಿದವರ ಒಡನಾಟದಿಂದ ಗುಹ್ಯಾರ್ಥಗಳು (ಶಬ್ದಗಳಲ್ಲಿ ಕಾಣದಂತೆ ಹುದುಗಿರುವ ಅತಿ ವಿಶೇಷಾರ್ಥಗಳು) ತಿಳಿಯಬಹುದು. ಅದಕ್ಕೆ ಹೆಚ್ಚಿನ ಆಸಕ್ತಿ ಮತ್ತು ಶ್ರಮ ಬೇಕು. ತಿಳಿಯಲೇಬೇಕೆನ್ನುವ ಹಠ ಬೇಕು. ತಿಳಿದವರನ್ನು ಹುಡುಕಿ, ಹಿಡಿದು, ಕಾಡಿ, ಬೇಡಿ ತಿಳಿಯಬೇಕು. 

ಮೇಲಿನ ಪದದಲ್ಲಿ ದಾಸರು ಉಪಯೋಗಿಸಿರುವ ಅನೇಕ ಪದಗಳಿಗೆ, ಸಂದರ್ಭಗಳಿಗೆ ವಿಶೇಷ ಅರ್ಥ, ಗೂಡಾರ್ಥಗಳಿವೆ. ಮುಂದಿನ ಎರಡು-ಮೂರು ಅಥವಾ ನಾಲ್ಕು ಸಂಚಿಕೆಗಳಲ್ಲಿ ಈ ಅರ್ಥಗಳನ್ನು ತಿಳಿಯುವ ಪ್ರಯತ್ನ ಯಥಾಶಕ್ತಿ ಮಾಡೋಣ.