Showing posts with label Sankalpa. Show all posts
Showing posts with label Sankalpa. Show all posts

Friday, August 8, 2025

ಸಂತಾನ ಸೃಷ್ಟಿಯ ವಿಧಗಳು


ಹಿಂದಿನ ಒಂದು ಸಂಚಿಕೆಯಲ್ಲಿ "ಸತ್ಪುತ್ರ ಪ್ರಾಪ್ತಿ" ಎನ್ನುವ ಶೀರ್ಷಿಕೆಯಡಿ ಒಳ್ಳೆಯ ಮಕ್ಕಳು ಜನಿಸಲು ಮಾಡಬೇಕಾದ ಕೆಲವು ಸತ್ಕರ್ಮಗಳ ಬಗ್ಗೆ ಚರ್ಚೆ ಮಾಡಿದ್ದೆವು. ಅದಕ್ಕೂ ಹಿಂದೆ "ಐದು ರೀತಿಯ ಮಕ್ಕಳು" ಎನ್ನುವ ಸಂಚಿಕೆಯಲ್ಲಿ ಮಕ್ಕಳ ಜನನಕ್ಕೆ ವಿವಿಧ ಕಾರಣಗಳನ್ನೂ ನೋಡಿದ್ದೆವು. (ಇಲ್ಲಿ ಕ್ಲಿಕ್ ಮಾಡಿ ಆ ಸಂಚಿಕೆಗಳನ್ನು ಓದಬಹುದು).

ಓದುಗರೊಬ್ಬರು ಇವುಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. "ಕೆಲವು ಕಥೆಗಳಲ್ಲಿ ಯಾರೋ ದೊಡ್ಡವರು ವರಗಳನ್ನು ಕೊಟ್ಟಿದ್ದರಿಂದ ಮಕ್ಕಳಾದರು, ಯಜ್ಞ-ಯಾಗಾದಿಗಳನ್ನು ಮಾಡಿ ಪಡೆದ ಯಜ್ಞಫಲದಿಂದ ಸಂತಾನವಾಯಿತು, ಈ ರೀತಿಯ ಸಂಗತಿಗಳನ್ನು ಕೇಳಿದ್ದೇವೆ. ಇದು ಹೇಗೆ ಸಾಧ್ಯ? ಸಂತಾನ ಸೃಷ್ಟಿಗೆ ಬೇರೆ ಬೇರೆ ವಿಧಗಳಿವೆಯೇ?" ಎನ್ನುವ ಪ್ರಶ್ನೆ ಎದ್ದಿದೆ. ಹೀಗೆಯೇ, "ಒಂದು ವರದಿಂದ ಅನೇಕ ಮಂದಿ ಮಕ್ಕಳು ಹುಟ್ಟುವುದು ಹೇಗೆ?" ಎಂದೂ ಪ್ರಶ್ನಿಸಿದ್ದಾರೆ. ಇದರ ಬಗ್ಗೆ ಈಗ ಸ್ವಲ್ಪ ನೋಡೋಣ. 

*****

ಪ್ರಾಣಿ ಪ್ರಪಂಚದಲ್ಲಿ ಸಂತಾನೋತ್ಪತ್ತಿಯ ವಿವಿಧ ರೀತಿಗಳನ್ನು ಕಾಣುತ್ತೇವೆ. ಏಕಕೋಶ ಜೀವಿಗಳ ವಿಷಯದಲ್ಲಿ ಗಂಡು ಹೆಣ್ಣು ಎನ್ನುವ ಭೇದ ಅಥವಾ ಸಂಬಂಧ ಇಲ್ಲ. ಒಂದು ಜೀವಿಯೇ ಎರಡಾಗಿ ಮುಂದಿನ ಸೃಷ್ಟಿ ನಡೆಯುತ್ತಿದೆ. ಕೆಲವು ಪ್ರಾಣಿಗಳಲ್ಲಿ ಮೊಟ್ಟೆಯ ಮೂಲಕ ಮರಿಗಳಾಗಿ ಮುಂದಿನ ತಲೆಮಾರು ರೂಪುಗೊಳ್ಳುತ್ತದೆ. ಸಸ್ತನಿಗಳಲ್ಲಿ ಹೆಣ್ಣು ಪ್ರಾಣಿ ಗರ್ಭ ಧರಿಸಿ, ಕಾಲ ತುಂಬಿದ ಮೇಲೆ ಮರಿ ಹಾಕಿ ಮುಂದಿನ ಜನಾಂಗ ಹುಟ್ಟುತ್ತದೆ. 

ನಮ್ಮ ಸುತ್ತ-ಮುತ್ತಲಿನ ಸಸ್ಯರಾಶಿಗಳಲ್ಲಿ ಅನೇಕ ವಿಧದ ರೀತಿಯ ಬೆಳವಣಿಗೆಗಳನ್ನು ಕಾಣಬಹುದು. ಕೆಲವು ಸಸ್ಯಗಳು ಪರಾಗ ಸ್ಪರ್ಶದಿಂದ ಧಾನ್ಯ, ಹೂವು, ಹಣ್ಣುಗಳನ್ನು ಕೊಡುತ್ತವೆ. ಕುಂಬಳ, ಸೋರೆ ಮುಂತಾದ ಬಳ್ಳಿಗಳಲ್ಲಿ ಹೆಣ್ಣು ಹೂವು ಮತ್ತು ಗಂಡು ಹೂವು ಎನ್ನುವುದನ್ನು ನಾವು ಕಾಣಬಹುದು. ಹೆಣ್ಣು ಹೂವುಗಳು ಪರಾಗ ಸ್ಪರ್ಶದ ನಂತರ ಕಾಯಿ, ಹಣ್ಣುಗಳಾಗುತ್ತವೆ. 

ಮತ್ತೆ ಕೆಲವು ಸಸ್ಯಗಳಲ್ಲಿ ಅವುಗಳ ಒಂದು ಭಾಗವನ್ನು ಮಣ್ಣಿನಲ್ಲಿ ನೆಟ್ಟು ಮುಂದಿನ ಬೆಳೆ ತೆಗೆಯುವುದನ್ನು ಕಾಣುತ್ತೇವೆ. ಕಬ್ಬು, ಬಾಳೆ, ಶುಂಠಿ, ಸುವರ್ಣ ಗೆಡ್ಡೆ ಮುಂತಾದುವುಗಳನ್ನು ಅವುಗಳ ಗೆಡ್ಡೆಯ ತುಂಡುಗಳು ಅಥವಾ ಕಂದುಗಳ ಮೂಲಕ ಬೆಳೆಯುವುದು ಸರ್ವೇ ಸಾಮಾನ್ಯ. ಈ ರೀತಿಯ ಬೆಳವಣಿಗೆಗಳಲ್ಲಿ ಪರಾಗ ಸ್ಪರ್ಶ ಇರುವುದಿಲ್ಲ. ಈ ಕ್ರಮ ಇಲ್ಲದೆಯೇ ಮುಂದಿನ ಋತುವಿನ ಬೆಳೆ ತೆಗೆಯುವುದು ಸಾಧ್ಯ.

ಹೀಗೆ ನಮ್ಮ ಕಣ್ಣ ಮುಂದೆ ಇರುವ ಸಸ್ಯ ಮತ್ತು ಪ್ರಾಣಿಗಳಲ್ಲೇ ಮುಂದಿನ ತಲೆಮಾರಿನ ಸೃಷ್ಟಿ ಬೇರೆ ಬೇರೆ ರೀತಿ ನಡೆಯುವುದು ನಮ್ಮ ಅನುಭವದಿಂದ ಗೊತ್ತಾಗುವುದು. ಹಾಗಿದ್ದರೆ ಮನುಷ್ಯರ ವಿಷಯದಲ್ಲಿ ವಿವಿಧ ರೀತಿಯ ಸೃಷ್ಟಿ ಇದ್ದಲ್ಲಿ ಅದೇನೂ ಆಶ್ಚರ್ಯದ ಸಮಾಚಾರವಲ್ಲ. 

***** 

ನಮ್ಮ ವೈದಿಕ ವಾಂಗ್ಮಯದ ಅನೇಕ ಮೂಲಗಳ ಪ್ರಕಾರ ಪರಮಾತ್ಮನ ನಿಯಮನದಲ್ಲಿ ಮಹಾಪ್ರಳಯದ ನಂತರ ಸಂತಾನೋತ್ಪತ್ತಿ ನಾಲ್ಕು ರೀತಿಗಳಿಂದ ಆಗಿರುವುದು ಗೊತ್ತಾಗುತ್ತದೆ. ಮೊದಲನೆಯದು "ಸಂಕಲ್ಪ ಸೃಷ್ಟಿ". ಎರಡನೆಯದು "ದೃಷ್ಟಿ ಸೃಷ್ಟಿ". ಮೂರನೆಯದು "ಸ್ಪರ್ಶ ಸೃಷ್ಟಿ". ನಂತರದ ನಾಲ್ಕನೆಯದು "ದೈಹಿಕ ಸೃಷ್ಟಿ". ಹೀಗಂದರೆ ಏನು?

ಸೃಷ್ಟಿಯಲ್ಲಿಯ ಮೊಟ್ಟ ಮೊದಲನೆಯ ಜನನವಾದದ್ದು ಎಲ್ಲರನ್ನೂ ಸೃಷ್ಟಿಸುವ ಚತುರ್ಮುಖ ಬ್ರಹ್ಮನದ್ದು. ಅವನು ಹುಟ್ಟಿದ ಪರಿ ಹೇಗೆ? "ಮರಳು ಮಾಡಿಕೊಂಡೆಯಲ್ಲೇ, ಮಾಯಾದೇವಿಯೇ!" ಎನ್ನುವ ಪದದಲ್ಲಿ (ಇಲ್ಲಿ ಕ್ಲಿಕ್ ಮಾಡಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬಹುದು) ಪುರಂದರದಾಸರು ಲಕ್ಷ್ಮಿ ದೇವಿಯನ್ನು ಲಲಿತ ಹಾಸ್ಯದ ಧಾಟಿಯಲ್ಲಿ ಹೀಗೆ ಹೇಳುತ್ತಾರೆ: 

ಮಕ್ಕಳ ಪಡೆದರೆ ನಿನ್ನ ಚೊಕ್ಕತನವು ಪೋಪುದೆಂದು 
ಪೊಕ್ಕುಳಲಿ ಮಗನ ಪಡೆದು ಕಕ್ಕುಲಾತಿ ಮೆರೆವಂತೆ 
ಮರುಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ!

ಮಕ್ಕಳು ಹುಟ್ಟಿದರೆ ತನ್ನ ಹೆಂಡತಿಯ ಅಂಗ ಸೌಷ್ಟವ ಹಾಳಾಗುವುದು ಎಂದು ತನ್ನ ಹೊಕ್ಕುಳಿನಿಂದಲೇ ಬ್ರಹ್ಮನನ್ನು ನಾರಾಯಣನು ಪಡೆದ! ಈ ಜನನಕ್ಕೆ ಕಾರಣ ಪರಮಾತ್ಮನ ಸಂಕಲ್ಪವೊಂದೇ. ಮುಂದೆ ಚತುರ್ಮುಖನೂ ಸನಕಾದಿಗಳನ್ನು, ರುದ್ರನನ್ನು, ನಾರದಾದಿ ಋಷಿಗಳನ್ನೂ, ಮತ್ತನೇಕ ದೇವತೆಗಳನ್ನೂ ಸೃಷ್ಟಿಸಿದ್ದು ಹೀಗೆಯೇ. (ಇವರು ನಾಭಿಯಿಂದ ಹುಟ್ಟದಿದ್ದರೂ ಕೇವಲ ಸಂಕಲ್ಪದಿಂದ ಹುಟ್ಟಿದವರು). ಇಲ್ಲಿ ಗಂಡು-ಹೆಣ್ಣುಗಳ ಸಂಪರ್ಕವಿಲ್ಲ. ಇದೇ ರೀತಿ ಅನೇಕ "ಮಾನಸ ಪುತ್ರರು" ಆಯಾಯಾ ದೇವತೆಗಳ ಮನಸ್ಸಿನಲ್ಲಿ ಮೂಡಿದ ಇಚ್ಛೆಯಿಂದ ಹುಟ್ಟಿದವರು. ಇವೆಲ್ಲವೂ ಸಂಕಲ್ಪ ಸೃಷ್ಟಿ. 

ಇಂತಹ ಸೃಷ್ಟಿ ಎಲ್ಲರಿಂದಲೂ ಸಾಧ್ಯವಿಲ್ಲ. ವಿಶಾಲ ಸೃಷ್ಟಿ ಕಾರ್ಯದಲ್ಲಿ ಮೊದಲ ಹಂತದಲ್ಲಿ ಮಾತ್ರ ಈ ರೀತಿ ಸಂಕಲ್ಪ ಸೃಷ್ಟಿಗಳಾದವು. 

*****

ಮೊದಲ ಸೃಷ್ಟಿಗಲ್ಲಿ ಹೆಚ್ಚಿನ ಸಂಖ್ಯೆಯ ಪ್ರಜಾಸೃಷ್ಟಿ ಬೇಗ ಬೇಗ ಆಗಬೇಕಾಗಿದ್ದರಿಂದ ಅನೇಕ "ಪ್ರಜಾಪತಿ" ಎಂಬ ಕರ್ತವ್ಯದ ದೇವತೆಗಳ ಸೃಷ್ಟಿಯಾಯಿತು. ಸಂತಾನ ಜನಿಸಲು ಬೇಕಾದ ಕ್ರಿಯೆಯನ್ನು ಕೇವಲ ಅವರ ದರ್ಶನದಿಂದ ನಡೆಸಿದಾಗ "ದೃಷ್ಟಿ ಸೃಷ್ಟಿ" ಆಯಿತು. ಸಂತಾನ ಪ್ರಾಪ್ತಿಗಾಗಿ ಅನೇಕ ದೇವತೆಗಳನ್ನು ಅರ್ಚಿಸಿ, ಆರಾಧಿಸಿದಾಗ ಹೀಗೆ ಅವರ ವರರೂಪದ ಕರುಣಾ ದೃಷ್ಟಿಯಿಂದಲೇ ಸಂತತಿಗಳು ಉಂಟಾದುವು. 

ಇದೇ ರೀತಿ ತಮ್ಮನ್ನು ಸತ್ಸಂತಾನಕ್ಕಾಗಿ ಆರಾಧಿಸಿದ ಸುಜೀವಿಗಳಿಗೆ ಕೇವಲ ಸ್ಪರ್ಶದಿಂದ ಅಥವಾ ಯಜ್ಞಫಲ, ಇತರ ಫಲ-ಪಾಯಸ ರೂಪದಿಂದ ಅನುಗ್ರಹಿಸಿ 'ಸ್ಪರ್ಶ ಸೃಷ್ಟಿ" ನಡೆಯಿತು. ಇಂತಹ ಸಂದರ್ಭಗಳಲ್ಲಿ ಸತ್ಪಾತ್ರರ ಕೋರಿಕೆಯಂತೆ ಒಂದೇ ವರದ ಪ್ರಭಾವದಿಂದ ಅನೇಕ ಮಕ್ಕಳ ಜನನಗಳೂ ನಡೆದವು. 

ಕಾಲಕ್ರಮದಲ್ಲಿ ಪ್ರಜೋತ್ಪತ್ತಿ ಅಭಿವೃದ್ಧಿಯಾದುದರಿಂದ ಈ ರೀತಿಯ ಸೃಷ್ಟಿಕಾರ್ಯಗಳು ನಿಂತವು. ಅಸಂಖ್ಯ ಸ್ತ್ರೀ-ಪುರುಷರ ಸೃಷ್ಟಿಯಿಂದ ಇವುಗಳ ಅವಶ್ಯಕತೆಯೂ ಇಲ್ಲವಾಯಿತು. ಗಂಡು-ಹೆಣ್ಣುಗಳ ದೈಹಿಕ ಸಮಾಗಮದ ಫಲವಾಗಿ ನಡೆಯುವ "ದೈಹಿಕ ಸೃಷ್ಟಿ" ಕಾಲ ಇದಾಗಿದೆ. 

ಈಗಲೂ ಅನೇಕರು ವ್ರತಾದಿಗಳನ್ನು ಮಾಡಿ, ಪ್ರಾರ್ಥಿಸಿದ ದೇವತೆಗಳ, ದೇವದೂತರ ಅನುಗ್ರಹವನ್ನು ಸ್ವಪ್ನರೂಪದಲ್ಲಿ ಪಡೆದು ಸಂತಾನ ಆದುವೆಂದು ನಂಬುತ್ತಾರೆ. 

*****

ಹಿಂದೆ ಅನೇಕ ಸಂದರ್ಭಗಳಲ್ಲಿ ಹೇಳಿದಂತೆ ಇವುಗಳನ್ನು ನಂಬುವುದೂ, ಬಿಡುವುದೂ ಅವರವರಿಗೆ ಸೇರಿದ ವಿಷಯ.  ವೈದಿಕ ವಾಂಗ್ಮಯದ ಅಧ್ಯಯನದ ಮೂಲಕ ತಿಳಿದವರು ನಮಗೆ ಹೇಳಿರುವ ರೀತಿಗಳು ಇವು. 

ಈಗಿನ ಸಮಾಜದಲ್ಲಿ ವೈಜ್ಞಾನಿಕ ಬೆಳವಣಿಗಳ ಪರಿಣಾಮವಾಗಿ "ಪ್ರನಾಳ ಶಿಶುಗಳು" ಜನಿಸಿವುದನ್ನು ನೋಡುವ ನಾವುಗಳು ಇವನ್ನು ಏಕೆ ನಂಬಬಾರದು?

Thursday, May 1, 2025

ರಾಹುಕಾಲ ಮತ್ತು ಬಲಿ ಪಾಡ್ಯಮಿ


ಹಿಂದಿನ ಸಂಚಿಕೆಯಲ್ಲಿ "ಹಿಂದು-ಮುಂದಾದ ಅಕ್ಷಯ ತೃತೀಯಾ" ಎನ್ನುವ ಶೀರ್ಷಿಕೆಯಡಿ ಅಕ್ಷಯ ತೃತೀಯಾ ದಿನದ ಹಿಂದಿರುವ ಅರ್ಥವ್ಯಾಪ್ತಿ ಮತ್ತು ಈಗಿನ ಮಾರ್ಕೆಟಿಂಗ್ ಯುಗದಲ್ಲಿ ಅದು ಹೇಗೆ ರೂಪಾಂತರಗೊಂಡು ಆಚರಿಸಲ್ಪಡುತ್ತಿದೆ ಎಂದು ನೋಡಿದೆವು. ಈ ಸಂಚಿಕೆಯ ಬಗ್ಗೆ ಅನೇಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಕೆಲವರು ಒಂದೆರಡು ಸಂದೇಹಗಳನ್ನೂ ಕೇಳಿದ್ದಾರೆ. ಇವುಗಳಲ್ಲಿ ಒಂದು ಮುಖ್ಯ ಸಂದೇಹ ಎಂದರೆ "ಮೊದಲ ಮೂರು ದಿನಗಳು (ಯುಗಾದಿ, ಅಕ್ಷಯ ತೃತೀಯಾ, ಮತ್ತು ವಿಜಯದಶಮಿ) ಇಡೀ ದಿನ ಸ್ವಯಂಸಿದ್ಧ ಮುಹೂರ್ತ ಎಂದು ಲೆಕ್ಕಿಸುವಾಗ ಬಲಿ ಪಾಡ್ಯಮಿ ಮಾತ್ರ ಅರ್ಧ ದಿನ ಎಂದು ಏಕಾಯಿತು?" ಎನ್ನುವುದು. ಇದು ಅತ್ಯಂತ ಸಾಧುವಾದ ಪ್ರಶ್ನೆಯೇ. ಇದಕ್ಕೆ ಈ ಸಂಚಿಕೆಯಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡೋಣ. ಈ ಚರ್ಚೆ ಸರಿಯಾಗಿ ತಿಳಿಯಬೇಕಾದರೆ ಹಿಂದಿನ ಸಂಚಿಕೆಯ ವಿಷಯ ಮೆಲಕು ಹಾಕುವುದು ಅವಶ್ಯಕ. ಅದಕ್ಕೆ  ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು. 
*****

ಹಿಂದಿನ ಸಂಚಿಕೆಯಲ್ಲಿ "ಕಾಮ್ಯಕರ್ಮ" ಎನ್ನುವ ಪದ ಬಳಸಿದೆ. ಇದರ ಬಗ್ಗೆ ಕೆಲವು ಪ್ರಶ್ನೆಗಳು ಬಂದಿವೆ. ಕಾಮ್ಯ ಕರ್ಮಗಳು ಎಂದರೆ ನಮಗೆ ಇಂತಹ ಫಲ ಬೇಕು ಎಂದು ಉದ್ದೇಶಿಸಿ ಆಚರಿಸುವ ಪೂಜೆಗಳು, ಹವನ-ಹೋಮಗಳು, ಜಪ-ತಪಗಳು ಇತ್ಯಾದಿ. ನಾವು ಮಾಡುವುದೆಲ್ಲಾ ಸಾಮಾನ್ಯವಾಗಿ ಕಾಮ್ಯ ಕರ್ಮಗಳೇ. ಪ್ರಾಂಭದಲ್ಲಿ ಸಂಕಲ್ಪ ಮಾಡುವಾಗ ಹೇಳುವುದೇನು? ಮೊದಲಿಗೆ "ಸಂಕಲ್ಪ" ಎಂದರೇನು? "ಇಂತಹ ಕೆಲಸ ಮಾಡಲು ಉದ್ದೇಶಿಸಿ ಈಗ ಮಾಡುತ್ತೇವೆ" ಎಂದು ಮನಸ್ಸು ಗಟ್ಟಿ ಮಾಡುವುದೇ ಸಂಕಲ್ಪ. ಸಂಕಲ್ಪ ಸಮಯದಲ್ಲಿ ಏನು ಹೇಳುತ್ತೇವೆ? ಯಾವುದಾದರೂ ಒಂದು ಪತ್ರ ಬರೆಯುವಾಗ ಅಥವಾ ದಾಖಲೆ ತಯಾರು ಮಾಡಬೇಕಾದರೆ ಸ್ಥಳ ಮತ್ತು ದಿನಾಂಕ ಮೊದಲು ಬರೆಯುವಂತೆ, ಈ ಕಾರ್ಯ ಮಾಡುವ ದಿನ ಮತ್ತು ಸ್ಥಳದ ವಿವರ ಹೇಳುವುದು. ನಂತರ "ಅಸ್ಮಾಕಂ ಸಹಕುಟುಂಬಾನಾ೦ ಕ್ಷೇಮ, ಸ್ಥೈರ್ಯ, ವಿಜಯ, ವೀರ್ಯ, ಆಯು, ಆರೋಗ್ಯ, ಐಶ್ವರ್ಯಾಡಿ ಅಭಿವ್ರುಧ್ಯರ್ಥಂ, ಧರ್ಮಾರ್ಥ, ಕಾಮ, ಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಯರ್ಥಂ, ಇಷ್ಟ ಕಾಮ್ಯಾರ್ಥ ಸಿಧ್ಯರ್ಥಂ ....." ಮುಂತಾಗಿ ನಮಗೆ ಬೇಕಾದ ಎಲ್ಲ ಇಷ್ಟಗಳ ದೊಡ್ಡ ಪಟ್ಟಿಯನ್ನೇ ಕೊಡುತ್ತೇವೆ. ಮಾಡುವುದು ಇಷ್ಟು. ಅದರಿಂದ ನಮಗೆ ಆಗಬೇಕಾದದ್ದು ಅಷ್ಟೊಂದು. ನಮಗೆ ಹೀಗೆ ಹೇಳುವಾಗ ಅದರ ಅರ್ಥ ಗೊತ್ತಿಲ್ಲದೇ ಇರುವುದೇ ಒಳ್ಳೆಯದು. ಇಲ್ಲದಿದ್ದರೆ ತುಂಬಾ ನಾಚಿಕೆಯಾದೀತು. 

"ನಮಗೆ ಎಂದು ಏನೂ ಬೇಕಾಗಿಲ್ಲ. ಈ ಮಾಡುತ್ತಿರುವುದು ಎಲ್ಲವೂ ಕೇವಲ ಪರಮಾತ್ಮನ ಪ್ರೀತಿಗಾಗಿ. ಅವನು ಇದನ್ನು ಒಪ್ಪಿಸಿಕೊಂಡು ಪ್ರೀತನಾದರೆ ಅಷ್ಟೇ ಸಾಕು" ಎಂದು  ಕೇವಲ "ಪರಮೇಶ್ವರ ಪ್ರೇರಣೀಯಾ, ಪರಮೇಶ್ವರ ಪ್ರೀತ್ಯರ್ಥಂ" ಎಂದು ಮಾಡುವುದು ನಿಷ್ಕಾಮ ಕರ್ಮ. ಇಲ್ಲಿ ನಮಗೆ ಬೇಕಾದದ್ದು ಒಂದೇ ಒಂದು. ಅವನು ಪ್ರೇರಣೆ ಮಾಡಿದ್ದರಿಂದ ಮಾಡುತ್ತೇವೆ ಅನ್ನುವ ಪ್ರಜ್ಞೆ  ಇದೆ, ಅವನೇ ಮಾಡಿಸುತ್ತಾನೆ ಎನ್ನುವ ಅರಿವು ಇದೆ. ಇದರಿಂದ ಅವನು ಸಂತುಷ್ಟನಾದರೆ ಸಾಕು ಅನ್ನುವ ಅಭಿಲಾಷೆ ಇದೆ. ಇಷ್ಟಿದ್ದರೆ ಅದು ನಿಷ್ಕಾಮ ಕರ್ಮ ಆಗುತ್ತದೆ.

ಪ್ರೀತಿಗೆ  ಮೂರು ಮುಖಗಳು ಉಂಟು. ನಮಗಿಂತ ಕಿರಿಯರಲ್ಲಿ ಮಾಡುವ ಪ್ರೀತಿಗೆ "ಕೃಪೆ" ಅನ್ನುತ್ತಾರೆ. ನಮ್ಮ ಸಮಾನರಲ್ಲಿ ಅದೇ "ಪ್ರೀತಿ" ಎಂದಾಗುತ್ತದೆ. ನಮಗಿಂತ ದೊಡ್ಡವರಲ್ಲಿ, ಗುರು ಹಿರಿಯರಲ್ಲಿ ಮತ್ತು ದೇವರಲ್ಲಿ, ಮಾಡುವ ಅದೇ ಉತ್ಕಟವಾದ ಪ್ರೀತಿಯನ್ನು  "ಭಕ್ತಿ" ಎನ್ನುತ್ತಾರೆ.  

ಕಾಮ್ಯ ಕರ್ಮಗಳನ್ನು ಮಾಡಬಾರದೆಂದೇನೂ ಇಲ್ಲ. ಆದರೆ ಅದು ನಿಷ್ಕಾಮ ಕರ್ಮಕ್ಕಿಂತ ಕೆಳಗಿನದು. ನಮಗೆ ಮೈಸೂರುಪಾಕು ತಿನ್ನಬೇಕೆಂದು ಆಸೆ. ಮಾಡಿಕೊಂಡು ತಿಂದೆವು. ಇದು ಕಾಮ್ಯವಾಯಿತು. ದೇವರ ನೈವೇದ್ಯಕ್ಕೆ ಎಂದು ಮಾಡಿದೆವು. ನಮಗೆ ತಿನ್ನಲು ಎಂದಲ್ಲ. ಮಾಡಿದಾಗ "ನಮಗೆ ತಿನ್ನಲು ಸಿಗುತ್ತದೆ" ಎನ್ನುವ ಆಸೆ ಇರಲಿಲ್ಲ. ಇದು ನಿಷ್ಕಾಮವಾಯಿತು. ನೈವೇದ್ಯದ ನಂತರ ಅದೇ ಮೈಸೂರುಪಾಕು ತಿನ್ನುವುದೇ. ಆದರೆ ಈಗ ಮೈಸೂರುಪಾಕು ತಿನ್ನುತ್ತಿಲ್ಲ. ಪ್ರಸಾದ ತಿನ್ನುತ್ತಿದ್ದೇವೆ. ಇದು "ನಿಷ್ಕಾಮ" ಆಯಿತು! ಭಾವದಲ್ಲಿ ವ್ಯತ್ಯಾಸ. ಅದರಿಂದ ಇಷ್ಟು ಭೇದ. ಕೆಲವರು ಇದನ್ನು "ಇದೇನು? ಕೂದಲು ಸೀಳುವಂತೆ (ಹೇರ್ ಸ್ಪ್ಲಿಟ್ಟಿಂಗ್) ಇದೆಯಲ್ಲಾ" ಎನ್ನಬಹುದು. ಅಂದುಕೊಳ್ಳಲಿ. "ಭಕುತಿಯ ಭಾವದ ಪ್ರಭಾವ" ಅಂತಹುದು. 

*****

ಬಲಿಚಕ್ರವರ್ತಿಯು ತೊಂಬತ್ತೊಂಬತ್ತು ಅಶ್ವಮೇಧಗಳನ್ನು ಮಾಡಿ ಮುಗಿಸಿ ನೂರನೆಯದನ್ನು ಪ್ರಾರಂಭಿಸಿದನು. ಇಂದ್ರನಿಗೆ "ಶತಕ್ರತು" ಅನ್ನುತ್ತಾರೆ. ಅಂದರೆ ನೂರು ಅಶ್ವಮೇಧ ಯಾಗಗಳನ್ನು ಪೂರ್ಣವಾಗಿ ಮಾಡಿದವನು ಎಂದು. ಅದರ ಫಲವಾಗಿ ಅವನಿಗೆ ಇಂದ್ರ ಪದವಿ ಸಿಕ್ಕಿತು. ಬಲಿ ಚಕ್ರವರ್ತಿ ಇದನ್ನು ಮಾಡಿ ಮುಗಿಸಿದರೆ ಅವನು ಇಂದ್ರನಾಗುತ್ತಾನೆ. ಅದು ಆಗಬಹುದು. ಆದರೆ ಅವನು ಅದು ಮಾಡಿ ಮುಗಿಸುವ ಮುನ್ನವೇ ತನ್ನ ಪ್ರಭಾವದಿಂದ ಬಲವಂತವಾಗಿ ದೇವೇಂದ್ರನ ಸ್ಥಾನವನ್ನು ಆಕ್ರಮಿಸಿದ್ದನು. ತನ್ನ ಮಗನು ಇದ್ದ ಸ್ಥಾನವನ್ನು ಇನ್ನೊಬ್ಬನು ಬಲವಂತವಾಗಿ ಕಿತ್ತುಕೊಂಡದ್ದರಿಂದ ತಾಯಿ ಅದಿತಿದೇವಿಗೆ ಬಹಳ ನೋವಾಯಿತು. ತನ್ನ ಪತಿ ಕಶ್ಯಪರಲ್ಲಿ ದುಃಖ ಹೇಳಿಕೊಂಡಳು. ಅವರು "ಪಯೋವ್ರತ" ಅನ್ನುವ ಒಂದು ವ್ರತ ಮಾಡಲು ಹೇಳಿದರು. ಅದಿತಿಯು ಅದನ್ನು ಭಕ್ತಿ-ಪ್ರೀತಿಗಳಿಂದ ಮಾಡಿದಳು. ಮಹಾವಿಷ್ಣುವು ಬಂದನು. "ಈಗ ಬಲಿ ಪ್ರಬಲನಾಗಿದ್ದಾನೆ. ಅವನಿಂದ ಸ್ಥಾನ ತೆರವು ಮಾಡಿಸುವುದು ಆಗುವುದಿಲ್ಲ. ಆದರೆ ನಿನ್ನ ಪಯೋವ್ರತದಿಂದ ಪ್ರೀತನಾಗಿದ್ದೇನೆ. ಆದ್ದರಿಂದ ನಿನ್ನ-ಕಶ್ಯಪರ ಮಗನಾಗಿ ಹುಟ್ಟುತ್ತೇನೆ. ಇಂದ್ರನ ತಮ್ಮನಾಗುವ ಕಾರಣ ಉಪೇಂದ್ರ ಆಗಿ ಹುಟ್ಟುತ್ತೇನೆ. ಬಲಿಯ ಬಳಿ ಭಿಕ್ಷ ಬೇಡಿ ನಿನ್ನ ಮಗನಿಗೆ ಇಂದ್ರ ಪದವಿ ಮತ್ತೆ ಕೊಡಿಸುತ್ತೇನೆ" ಎನ್ನುತ್ತಾನೆ. ಹಾಗೆಯೇ ಮಾಡುತ್ತಾನೆ. (ಇದರ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ ಓದಿ.) 

ಯಾಗ ನಡೆಯುತ್ತಿದ್ದಾಗ ಉಪೇಂದ್ರನು ವಾಮನರೂಪದಿಂದ ಬಲಿಯ ಬಳಿಗೆ ಬಂದನು. ಮೂರು ಹೆಜ್ಜೆ ಭೂಮಿ ಬೇಡಿದನು. ಬಲಿ ಹಾಸ್ಯ ಮಾಡಿದನು. "ನಾನು ಚಕ್ರವರ್ತಿ. ಸರಿಯಾದ್ದನ್ನು ಬೇಡು. ನನ್ನ ಯೋಗ್ಯತೆಗೆ ಸರಿಯಾದುದನ್ನು ಕೇಳು" ಎಂದನು. ಕಡೆಗೆ ಮೂರು ಹೆಜ್ಜೆ ಭೂಮಿ ಇಲ್ಲದೆ ತನ್ನ ತಲೆಯ ಮೇಲೆಯೇ ಮೂರನೆಯ ಹೆಜ್ಜೆಗೆ ಜಾಗ ಕೊಟ್ಟು ಪಾತಾಳಕ್ಕೆ ಹೋಗಬೇಕಾಯಿತು. ಬಲಿಯ ಪತ್ನಿ ವಿಂಧ್ಯಾವಳೀ ವಾಮನನ (ಈಗ ತ್ರಿವಿಕ್ರಮನಾಗಿದ್ದಾನೆ) ಕ್ಷಮೆ ಕೇಳುತ್ತಾಳೆ. "ಎಲ್ಲವೂ ನಿನ್ನದೇ ಎಂದು ಅರಿಯದೆ ನನ್ನ ಗಂಡ 'ನಾನು ಚಕ್ರವತಿಯಾಗಿ  ಕೊಡುತ್ತೇನೆ' ಎಂದು ಹೇಳಿದನು.  ಅವನನ್ನು  ಕ್ಷಮಿಸು" ಎನ್ನುತ್ತಾಳೆ. 

ಬಲಿಯ ನೂರನೆಯ ಅಶ್ವಮೇಧದ ಕಥೆ ಏನು? ಅದು ಪೂರ್ತಿಯಾಯಿತೇ? ಇಲ್ಲ. ಅದರ "ಪೂರ್ಣಾಹುತಿ" ಆಗುವ ಮುನ್ನವೇ ಅವನು ಪಾತಾಳಕ್ಕೆ ಹೋಗಬೇಕಾಯಿತು. ಆದ್ದರಿಂದ ಯಾಗ ಅಪೂರ್ಣವಾಯಿತು. ಇದು ಒಂದು ಕಡೆ. ಎಲ್ಲಾ ಯಾಗಗಳೂ ಕಡೆಗೆ ತಲುಪುವುದು ಆ ಪರಮಾತ್ಮನನ್ನೇ. ಅವನು ದೇವತೆಗಳ ಮೂಲಕ ಅದನ್ನು ಸ್ವೀಕರಿಸಬೇಕು. ಇಲ್ಲಿ ಅವನೇ ಸ್ವತಃ ವಾಮಾನನಾಗಿ ಬಂದು ತೆಗೆದುಕೊಂಡಿದ್ದಾನೆ.  ಯಾಗದ ಪೂರ್ಣ ಫಲ ಬಲಿಗೆ ಬಂದೇ ಬಂದಿತು. ಅಷ್ಟೇ ಅಲ್ಲ; ಪೂರ್ಣವಾದ ಫಲ ಸ್ವರೂಪವಾಗಿ ಮುಂದಿನ ಮನ್ವಂತರದ ಇಂದ್ರಪಟ್ಟ ಕೂಡ ಕಾದಿರಿಸಲಾಯಿತು! ಆದ್ದರಿಂದ ಅದು ಇನ್ನೊಂದು ಕಡೆಯಲ್ಲಿ ಪೂರ್ಣವಾದಂತೆಯೂ ಆಯಿತು! 

ಇಂತಹ ಅಪರೂಪದ ಅವಕಾಶದ ದಿನ ಇದು. ಆದ್ದರಿಂದ ಅದೊಂದು ಸ್ವಯಂಸಿದ್ಧ ಮುಹೂರ್ತ ಆಯಿತು. ಒಂದು ದೃಷ್ಟಿಯಲ್ಲಿ ಅಪೂರ್ಣವಾದುದರಿಂದ ಅದು ಅರ್ಧ ದಿನಕ್ಕೇ ನಿಂತಿತು. 

*****

ರಾಹುಕಾಲ ಪ್ರತಿ ದಿನ ಬರುತ್ತದೆ. ಅದರ ವಿಷಯ ಎಲ್ಲರಿಗೂ ಗೊತ್ತು. ಅದೇಕೆ ಒಂದು ದಿನ ಪೂರ್ತಿ ಇಲ್ಲ? ಎಲ್ಲ ಗ್ರಹಕ್ಕೂ ಒಂದು ದಿನವಾದ ಮೇಲೆ ಅದಕ್ಕೆ ಯಾಕೆ ಇಲ್ಲ? ಕೇತುವಿಗೆ ಯಾಕೆ ಇಲ್ಲ? ರಾಹು-ಕೇತು ಒಬ್ಬನೇ ಎಂದರೂ ಒಂದು ದಿನ ಪೂರ್ತಿ ಇರಬೇಕಲ್ಲ? ಪ್ರತಿ ದಿನ ಒಂದೂವರೆ ಘಂಟೆಯ ಕಾಲವೇ ಏಕೆ? ಅದು ಬರುವ ಸರದಿಗೆ (ಸೀಕ್ವೆನ್ಸ್) ಏನಾದರೂ ತರ್ಕವುಂಟೆ? ಈರೀತಿ ಅನೇಕ ಪ್ರಶ್ನೆಗಳು. 

ಒಂದು ಉದಾಹರಣೆ ತೆಗೆದುಕೊಳ್ಳೋಣ. ಒಂದು ಮನೆಯಲ್ಲಿ ಏಳು ಜನರಿದ್ದಾರೆ. ಏಳು ಕಿತ್ತಳೆ ಹಣ್ಣುಗಳಿವೆ.  ಪ್ರತಿ ಹಣ್ಣಿನಲ್ಲೂ ಎಂಟೆಂಟು ತೊಳೆಗಳಿವೆ. ಎಲ್ಲರಿಗೂ  ಕೊಟ್ಟಿದ್ದಾಯಿತು. ಎಲ್ಲರೂ ಬಿಡಿಸಿದ್ದಾಯಿತು. ಇನ್ನೇನು ತಿನ್ನಬೇಕು. ಅಷ್ಟರಲ್ಲಿ ಎಂಟನೆಯವರು ಒಬ್ಬರು ಬಂದರು! ಬೇರೆ ಹಣ್ಣಿಲ್ಲ. ಈ ರೀತಿ ಆಗುವುದು ನಾವು ಕಂಡಿದ್ದೇವೆ. ಆಗ ಎಲ್ಲರೂ ತಮ್ಮ ಕೈಲಿರುವುದರಲ್ಲಿ ಸ್ವಲ್ಪ ಕೊಟ್ಟು ಎಲ್ಲರೂ ಹಂಚಿಕೊಳ್ಳುತ್ತಾರೆ. ಆಗ ಇದ್ದ ಏಳು ಹಣ್ಣುಗಳು ಎಂಟೂ ಜನರಿಗೆ ಸಿಕ್ಕಂತಾಯಿತು! 

ಏಳು ಜನರೂ ಎಂಟನೆಯವನಿಗೆ ಒಂದೊಂದು ತೊಳೆ ಕಿತ್ತಳೆ ಕೊಟ್ಟರು. ಈಗ ಎಲ್ಲರ ಕೈಲೂ ಏಳು ಕಿತ್ತಳೆ ತೊಳೆ ಉಳಿಯಿತು. ಎಂಟನೆಯವನಾಗಿ ಬಂದವನಿಗೂ ಏಳು ತೊಳೆ ಸಿಕ್ಕಿತು. ಎಲ್ಲರಿಗೂ ಸಮಪಾಲು ಸಿಕ್ಕಿತು. ಹಿಂದಿನವರು ಹೇಳುತ್ತಿದ್ದಂತೆ, "ತಂಟೆ ಫೈಸಲು"! ವಿಶೇಷವೇನೆಂದರೆ, ಮೊದಲ ಏಳು ಜನಕ್ಕೆ ಒಂದೇ ಹಣ್ಣಿನ ಏಳು ತೊಳೆಗಳು ಸಿಕ್ಕವು. ಕಡೆಯವನಾದ ಎಂಟನೆಯವನಿಗೆ ಏಳು ಹಣ್ಣಿನಲ್ಲೂ ಒಂದೊಂದು ತೊಳೆ ಸಿಕ್ಕೇ ಒಟ್ಟು ಏಳಾಯಿತು!

ಚಾಂದ್ರಮಾನ ಮಾಸದಲ್ಲಿ ಇಪ್ಪತ್ತೆಂಟು ದಿನ. ವಾರಗಳಾಗಿ ವಿಭಜಿಸುವಾಗ ಏಳು ದಿನದ ವಾರ ಮಾಡಿದರೆ ನಾಲ್ಕು ವಾರವಾಯಿತು. ಎಂಟು ದಿನದ ವಾರ ಮಾಡಿದರೆ ಲೆಕ್ಕ ತಾಳೆ ಆಗುವುದಿಲ್ಲ. ಎಲ್ಲಾ ಗೋಜಲಾಗುತ್ತದೆ. ಏಳು ದಿನಗಳ ವಾರವನ್ನೇ ಇಟ್ಟುಕೊಂಡು ದಿನಗಳಾಗಿ ವಿಭಜಿಸಬೇಕು. 

ಪ್ರತಿ ದಿನದ ಪ್ರಮಾಣ ಹನ್ನೆರಡು ಗಂಟೆ. ಎಂಟು ಭಾಗ ಮಾಡಿದರೆ ಒಂದು ಭಾಗದ ಪ್ರಮಾಣ ಒಂದೂವರೆ ಘಂಟೆ. ಒಂದೂವರೆ ಘಂಟೆ ಹಗಲಿನ ಹನ್ನೆರಡು ಘಂಟೆಯಲ್ಲಿ ತೆಗೆದರೆ ಪ್ರತಿದಿನ ಉಳಿದಿದ್ದು ಹತ್ತೂವರೆ ಘಂಟೆ. ಏಳು ದಿನದ ಒಂದೂವರೆ ಘಂಟೆ ಸೇರಿಸಿದರೆ ರಾಹುವಿಗೂ ಹತ್ತೂವರೆ ಘಂಟೆಯೇ! ಆದರೆ ರಾಹುವಿಗೆ ಏಳೂ ದಿನಗಳಲ್ಲಿ ಭಾಗ ಸಿಕ್ಕಿತು. 

ಯಾವ ಸರದಿಯಲ್ಲಿ ರಾಹುವಿಗೆ ಭಾಗ ಸಿಕ್ಕಿತೋ ಆಯಾ ದಿನ ಅದೇ ಸರತಿಯಲ್ಲಿ ರಾಹುಕಾಲ ಬಂತು. ಇದನ್ನು ಸುಲಭವಾಗಿ ನೆನಪಿಡಲು ನಮ್ಮ ದೊಡ್ಡಪ್ಪ ಒಂದು ಸೂತ್ರ ಹೇಳುತ್ತಿದ್ದರು. "Mother Saw Father Wearing The Turban Suddenly" ಎಂದು. ಬೆಳಿಗ್ಗೆ ಏಳೂವರೆಯಿಂದ ಒಂದೂವರೆ ಘಂಟೆ ಪ್ರಮಾಣ. (ಆರು ಗಂಟೆಗೆ ಏಕಿಲ್ಲ? ಎಲ್ಲವೂ ಬೇರೆಯವರಿಂದ ಬಂದದ್ದು. ಆದ್ದರಿಂದ ಮೊದಲಿನದಿಲ್ಲ!) ಸಂಜೆ ಆರಕ್ಕೆ ಮುಗಿಯಿತು. ಸೋಮವಾರ, ಶನಿವಾರ, ಶುಕ್ರವಾರ, ಬುಧವಾರ, ಗುರುವಾರ, ಮಂಗಳವಾರ ಮತ್ತು ಭಾನುವಾರ. ಹೀಗೆ ವಿಂಗಡಣೆ. 

*****

ಈ ರೀತಿ ಬಲಿಪಾಡ್ಯಮಿ ಮತ್ತು ರಾಹುಕಾಲಗಳಿಗೆ ಸಮಸ್ಯೆ ಪರಿಹಾರ ಮಾಡುವುದು ಸರಿಯೇ? ಇದಕ್ಕೆ ಏನು ಆಧಾರ? ಒಹೋ! ಈಗ ಹೊಸ ಪ್ರಶ್ನೆಗಳು ಬಂದವು. ಅವಕ್ಕೆ ಪರಿಹಾರ ಮುಂದಿನ ಸಂಚಿಕೆಯಲ್ಲಿ ಹುಡುಕೋಣ.