Showing posts with label Youvana. Show all posts
Showing posts with label Youvana. Show all posts

Wednesday, September 17, 2025

ಒಂದು ದೇಹದಲ್ಲಿ ಅನೇಕ ದೇಹಗಳು!

ಶ್ರೀಮದ್ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ವಿವರಿಸಿರುವ ಬಹಳ ವಿಷಯಗಳು ಅನೇಕ ಸಾಂದರ್ಭಿಕ  ಕಾರಣಗಳಿಂದ ಮತ್ತೆ ಮತ್ತೆ ನಮ್ಮ ಗಮನಕ್ಕೆ ಬರುತ್ತಿರುತ್ತವೆ. ಹುಟ್ಟು ಮತ್ತು ಸಾವು, ಅವುಗಳ ತಪ್ಪಿಸಲಾಗದ ಚಕ್ರ, ಅವುಗಳ ವಿಷಯದಲ್ಲಿ ಅತಿಯಾಗಿ ದುಃಖಿಸಬಾರದೆಂಬುದು, ಇವುಗಳ ಚರ್ಚೆ ಬೇರೆ ಬೇರೆ ಸಂವಾದಗಳಲ್ಲಿ ಆಗಾಗ ನಡೆಯುತ್ತಿರುತ್ತದೆ. ಇದೇ ಭಗವದ್ಗೀತೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಹೇಳಿರುವ ಇನ್ನೊಂದು ವಿಷಯವು ಹೆಚ್ಚಾಗಿ ಚರ್ಚಿತವಾಗುವುದಿಲ್ಲ.

ಕಳೆದ ತಿಂಗಳು ಹಿಂದಿನ ಒಂದು ಸಂಚಿಕೆಯಲ್ಲಿ, "ಸಾವು ಎದುರಲ್ಲಿ ಬಂದು ನಿಂತಾಗ" ಎನ್ನುವ ಶೀರ್ಷಿಕೆಯಡಿಯಲ್ಲಿ, ಈ ಸಂಬಂಧದ ಕೆಲವು ಪದರಗಳನ್ನು ಚರ್ಚಿಸಿದ್ದೆವು. (ಇಲ್ಲಿ ಕ್ಲಿಕ್ ಮಾಡಿ ಈ ಸಂಚಿಕೆಯನ್ನು ಓದಬಹುದು).  

ಸಾವಿನ ಕಾಲದಲ್ಲಿ ಜೀವನು ಈಗ ಪಡೆದಿರುವ ದೇಹವು ಕೊನೆಗೊಂಡು ಮತ್ತೆ ಮುಂದೆ ಬೇರೊಂದು ದೇಹ ಪಡೆಯುವ ಜನನ-ಮರಣ ಚಕ್ರದ ಜೊತೆಯಲ್ಲಿಯೇ, ಈಗಿನ ಒಂದು ಜೀವಿತಕಾಲದಲ್ಲಿಯೇ ಜೀವಿಯು ಪಡೆದ ದೇಹವೊಂದರಲ್ಲಿ ಅನೇಕ ದೇಹಗಳು ಅಡಗಿರುವ ಗುಟ್ಟನ್ನು ಶ್ರೀಕೃಷ್ಣನು ಹೇಳಿದ್ದಾನೆ. ಇದೇನೂ ಅಂತಹ ಗುಟ್ಟಿನ ವಿಷಯವಲ್ಲ. ಅದು ಎಲ್ಲರಿಗೂ ಚೆನ್ನಾಗಿ ತಿಳಿದಿದ್ದರೂ, ಅದರ ಸುಪ್ತವಾಗಿ ಉಳಿಯುವ ಗುಣದಿಂದ,  ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. 

*****

ಯಾವುದೇ ಪ್ರಾಣಿಯಿರಲಿ, ಅದರಲ್ಲಿ ವಿಶೇಷವಾಗಿ ಮನುಷ್ಯ, ಹುಟ್ಟುವಾಗ ಇದ್ದ ದೇಹಕ್ಕೂ ಜೀವನದ ಕೊನೆಯ ಕಾಲದಲ್ಲಿ ಇರುವ ದೇಹಕ್ಕೂ ಅಜ-ಗಜಾಂತರ (ಆಡು-ಆನೆ) ವ್ಯತ್ಯಾಸ. ತಾಯಿಯ ಗರ್ಭದಿಂದ ಮಗು ಅಥವಾ ಪ್ರಾಣಿಯ ಮರಿ ಹೊರಬಂದಾಗ, ಅಥವಾ ಮೊಟ್ಟೆಯೊಡೆದು ಮರಿ ಹೊರಗೆ ಬಂದಾಗ ಅದರ ಗಾತ್ರ ಬಹಳ ಸಣ್ಣದಿರುತ್ತದೆ. ನಂತರ ಕಾಲಕ್ರಮದಲ್ಲಿ ಅದರ ಗಾತ್ರ ದೊಡ್ಡದಾಗುತ್ತ ಹೋಗುತ್ತದೆ. ಇನ್ನೂ ಮುಂದೆ ಅದು ಮೊದಲಿನಂತೆ ಪೂರ್ತಿ ಚಿಕ್ಕದಾಗದೇ ಇದ್ದರೂ ಸಾಮಾನ್ಯವಾಗಿ ಕುಗ್ಗಿ ಅಥವಾ ಕೃಶವಾಗಿ ಹೋಗುತ್ತದೆ. ಇದು ಎಲ್ಲರಿಗೂ ದಿನಂಪ್ರತಿ ಕಣ್ಣಿಗೆ ಕಾಣುವ ವಾಸ್ತವ ಸಂಗತಿ. 

ಏಕೆ ಹೀಗೆ? ಇದು ಪ್ರಸವ ಅಥವಾ ಮೊಟ್ಟೆಯೊಡೆದು ಮರಿ ಸುಖವಾಗಿ ಹೊರಬರಲು ಪ್ರಕೃತಿ ಮಾಡಿರುವ ಒಂದು ಉಪಾಯ. ಇದರಿಂದ ಮರಿ ಮತ್ತು ತಾಯಿ ಇಬ್ಬರಿಗೂ ಕ್ಷೇಮ. ಒಂದು ಆನೆಯ ಮರಿ ಆನೆಯ ಗಾತ್ರದ್ದೇ ಆಗಿ ಹುಟ್ಟುವ ಪರಿಯನ್ನು ನೆನೆಸಿಕೊಂಡರೆ ಮೊದಲು ನಗು ಬರುತ್ತದೆ. ಇದೇನು, ಇಂತಹ ಹಾಸ್ಯಾಸ್ಪದ ವಿಷಯ ಎನಿಸುತ್ತದೆ. ಕೆಲವೊಮ್ಮೆ ನಾಕೂವರೆ ಅಡಿ ಎತ್ತರವಿರುವ ತಾಯಿ ಮತ್ತು ಆರೂವರೆ ಅಡಿ ಎತ್ತರ ಇರುವ ಮಗನನ್ನು ಜೊತೆಯಾಗಿ ನೋಡಿದಾಗ ಇದರ ವಾಸ್ತವತೆ ಅರಿವಾಗುತ್ತದೆ. 

ಶಿಶುಪಾಲನೆ ಅನೇಕ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಒಂದು ದೊಡ್ಡ ಕೆಲಸವೇ. ಕೆಲವು ಪ್ರಾಣಿಗಳಲ್ಲಿ ಜನನವಾದ ನಂತರ ತಾಯಿ ಮತ್ತು ಮಗುವಿಗೆ ಯಾವುದೇ ಸಂಬಂಧವಿರುವುದಿಲ್ಲ. ಇನ್ನು ಕೆಲವು ಪ್ರಾಣಿಗಳಲ್ಲಿ ಸ್ವಲ್ಪ ಕಾಲ ಮರಿ ತಾಯಿಗೆ ಅಂಟಿಕೊಂಡಂತೆ ಇರುತ್ತದೆ. ಮನುಷ್ಯರಲ್ಲಿ ಪ್ರಾಯಶಃ ಇದರ ಅವಧಿ ಅತ್ಯಂತ ಹೆಚ್ಚು. ಮಗು ಎಷ್ಟು ದೊಡ್ಡದಾದರೂ ತಾಯಿ-ಮಗ ಅಥವಾ ತಾಯಿ-ಮಗಳ ಸಂಬಂಧ ಕೊಂಚವೂ ಮಾಸುವುದಿಲ್ಲ. 

ಸುಮಾರು ಇಪ್ಪತ್ತು ವರುಷಗಳ ಹಿಂದಿನ ಮಾತು. ನಮ್ಮ ಹಿರಿಯ ಸ್ನೇಹಿತರೊಬ್ಬರಿಗೆ ಎಂಭತ್ತರ ವಯಸ್ಸು. ಅವರ ನಿವೃತ್ತಿಯ ನಂತರ ಪರಸ್ಪರ ಈಮೈಲ್ ಮುಖಾಂತರ ಸಂಪರ್ಕ ಇದ್ದರೂ ಮುಖಾಮುಖಿ ಆಗಿರಲಿಲ್ಲ. ಅಪರೂಪಕ್ಕೆ ಅಮೆರಿಕೆಯ ಸಿಯಾಟಲ್ ನಗರದಲ್ಲಿ ಸಿಕ್ಕರು. ಅದು ಒಂದು ಅವಸರದ ಭೇಟಿ ಆಗಿತ್ತು. ಸಿಕ್ಕಾಗ ಬಹಳ ಉಲ್ಲಸಿತರಾಗಿದ್ದರು. "ಏನು, ಇಷ್ಟು ಸಂತೋಷದಲ್ಲಿದ್ದೀರಿ?" ಎಂದೆ. "ಹೌದಪ್ಪ, ಬಹಳ ಆನಂದದ ದಿನ. ನಾಳೆ ಬೆಂಗಳೂರು ಮಾರ್ಗವಾಗಿ ನನ್ನ ದಕ್ಷಿಣ ಕನ್ನಡದ ಹಳ್ಳಿಗೆ ಹೋಗುತ್ತಿದ್ದೇನೆ. ಅಲ್ಲಿ ನನ್ನ ತಾಯಿಯಿದ್ದಾಳೆ. ಅವಳನ್ನು ನೋಡಿ ಹತ್ತು ವರುಷವಾಗಿದೆ. ಕೆಲವು ತಿಂಗಳಲ್ಲಿ ಅವಳಿಗೆ ಶತಮಾನೋತ್ಸವ. ಕುಟುಂಬದ ಎಲ್ಲರೂ ಅಲ್ಲಿ ಸೇರುತ್ತಾರೆ. ಅವಳನ್ನು ನೋಡುವುದೇ ಒಂದು ಪುಳಕ. ಅದರಿಂದ ಈ ಸಂತೋಷ" ಅಂದರು. ಇವರಿಗೆ ಸ್ವಲ್ಪದರಲ್ಲಿ ಸಹಸ್ರ ಪೂರ್ಣ ಚಂದ್ರ ದರ್ಶನ! ಆಕೆಗೆ ಅದರ ಜೊತೆಯಲ್ಲಿ ಶತಮಾನೋತ್ಸವ! ತಾಯಿ-ಮಕ್ಕಳ ಸಂಬಂಧ ಅಂತಹುದು. 

*****

ಮಗು ಪುಟ್ಟದಿರುವಾಗ ಬಲು ಚೆಂದ. ಸ್ವಲ್ಪ ದೊಡ್ಡದಾಗಿ ಓಡಾಡಲು ಪ್ರಾರಂಭಿಸಿದರೆ ಎಲ್ಲರಿಗೂ ಸಂತಸ. ಹುಟ್ಟಿದ ದೇಹ ಈಗ ಹೋಗಿದೆ. ಬೇರೆ ದೇಹ ಬಂದಿದೆ. ಒಂದು ಕಡೆ ಬಿದ್ದುಕೊಂಡಿರುವ ಕೂಸೆಲ್ಲಿ? ಈಗ ಹಿಡಿಯಲು ಕಷ್ಟಪಡುವ ಈ ಮಗುವೆಲ್ಲಿ? ಆದರೆ ನಮ್ಮ ಮಗುವಿನ ಹಳೆಯ ದೇಹ ಹೋಯಿತಲ್ಲಾ ಎಂದು ಯಾರೂ ಗೋಳಾಡುವುದಿಲ್ಲ. ಒಮ್ಮೆಮ್ಮೆ "ಮಗು ಬೆಳೆಯಿತು. ಮೊದಲಿನಂತೆ ಕೈಗೆ ಸಿಗುವುದಿಲ್ಲ" ಎಂದು ಸ್ವಲ್ಪ ಬೇಜಾರಾಗಬಹುದು. ಆದರೆ ಅದರಿಂದ ದುಃಖವಿಲ್ಲ. ಮುಂದೆ ಯುವಕನಾದಾಗ ಅಥವಾ ಯುವತಿಯಾದಾಗ ಬಾಲಕ ಅಥವಾ ಬಾಲಕಿಯ ದೇಹ ಹೋಗಿದೆ. ಬೇರೆ ದೇಹ ಬಂದಿದೆ. ಹಳೆಯ ದೇಹ ಹೋಯಿತು ಎಂದು ದುಃಖವಿಲ್ಲ. ಹೊಸತು ಬಂದಿತು ಎಂದು ಉತ್ಸಾಹ. ವಿವಾಹ ಮಾಡುವ ಚಿಂತೆ. ನಂತರ ಮುಪ್ಪಿನಲ್ಲಂತೂ ಸರಿಯೇ ಸರಿ. ಬೇರೆ ದೇಹವಾಗಿರುವುದು ಕಣ್ಣು ಮುಚ್ಚಿಕೊಂಡವರಿಗೂ ಕಾಣುವುದು. 

ಹೀಗೆ ಪ್ರತಿ ಹಂತದಲ್ಲೂ ಹೊಸ ದೇಹವೇ ಬಂದಿರುತ್ತದೆ. ಹಿಂದೆ ಕನ್ನಡದಲ್ಲಿ "ಕೊರವಂಜಿ' ಎಂದೊಂದು ಹಾಸ್ಯಪತ್ರಿಕೆ ಬರುತ್ತಿತ್ತು. ಅದರಲ್ಲಿ ಒಂದು ನಗೆಹನಿ. ತಾಯಿಯು ನಾಲ್ಕೈದು ವರುಷದ ಮಗನ ಜೊತೆ ತನ್ನ ಹದಿನೈದು ವಷಗಳ ಹಿಂದಿನ ಮದುವೆಯ ಫೋಟೋ ಆಲ್ಬಮ್ ನೋಡುತ್ತಿದ್ದಾಳೆ. ಆರತಕ್ಷತೆಯ ಸುಂದರ ಫೋಟೋ. ಮಗುವಿಗೆ ತಾಯಿಯ ಗುರುತು ಥಟ್ಟೆ೦ದು ಸಿಕ್ಕಿತು. ಅವಳ ಪಕ್ಕದಲ್ಲಿದ್ದ ಗುಂಗುರು ಕೂದಲಿನ ಸುಂದರ ವ್ಯಕ್ತಿಯ ಗುರುತು ಸಿಗಲಿಲ್ಲ. "ಅಮ್ಮ, ಇವನು ಯಾರು?" ಅಂದಿತು ಮಗು. "ಅಯ್ಯೋ ಮರೀ, ಗೊತ್ತಾಗಲಿಲ್ಲವೇ? ಇದು ನಿಮ್ಮಪ್ಪ ಕಾಣೋ" ಅಂದಳು. ತಕ್ಷಣ ಮಗು, "ಹಾಗಿದ್ದರೆ ನಮ್ಮ ಜೊತೆಯಲ್ಲಿದ್ದಾನಲ್ಲ ಬೋಡಮುಂಡ, ಅವನು ಯಾರು?" ಅಂದಿತು. (ಭಾಷೆಗೆ ಕ್ಷಮೆ ಇರಲಿ. ಕೊರವಂಜಿಯಲ್ಲಿ ಇದ್ದಂತೆ ಹೇಳದಿದ್ದರೆ ಅದರ ನಿಜವಾದ ಮೋಜು ಸಿಗದು).   

ಹೀಗೆ ಬೆಳೆಯುವ ಕಾಲದಲ್ಲಿ ಆಗಾಗ ಹಳೆಯ ದೇಹ ಹೋಗಿ ಹೊಸದು ಬರುತ್ತಿದ್ದರೂ ಅದು ಅಷ್ಟಾಗಿ ನಮಗೆ ಭಾಸವಾಗುವುದಿಲ್ಲ. ಮುಂದೆ ಕಾಲಕ್ರಮದಲ್ಲಿ ಯೌವನ ಮತ್ತು ಮಧ್ಯ ಕಾಲಗಳು ಕಳೆದು ವೃದ್ಧಾಪ್ಯ ಬಂದಾಗ ಅದು ಮಾತ್ರ ಚೆನ್ನಾಗಿ ಕಂಡುಬರುತ್ತದೆ. "ಏನಿದು? ಇಷ್ಟು ಮುದುಕನೇ? ಹಲ್ಲೆಲ್ಲಾ ಬಿದ್ದು ಹೋಗಿವೆ. ಕೂದಲು ನರೆತು ಹೋಗಿದೆ" ಎನ್ನಬಹುದು. "ಎಲಬು ಸೊಟ್ಟಗಾಗಿದೆ. ಬೊಕ್ಕತಲೆ ಆಗಿದೆ" ಎಂದು ಆಶ್ಚರ್ಯಪಡಬಹುದು. ನೆಟ್ಟಗೆ ನಡೆಯುತ್ತಿದ್ದವರಿಗೆ ಈಗ ಕೋಲು ಹಿಡಿಯುವಂತಾಗಿದೆ. ಜೀವನದಲ್ಲಿ ಮುಖ್ಯ ಕಾರ್ಯಕ್ರಮವೆಂದರೆ ಮುಂದಿನ ವೈದ್ಯರ ಸಂದರ್ಶನದ ಸಮಯ ನಿಗದಿಮಾಡುವುದು. ಬೇಜಾರಾದಾಗಲೆಲ್ಲಾ ಒಂದು ಗುಳಿಗೆ ನುಂಗುವುದು. ಜೊತೆಗಾರರ ಸಕ್ಕರೆಯ ಅಂಶ ಎಷ್ಟಿದೆ ಎಂದು ಕೇಳಿ, ಅದು ನಮಗಿಂತ ಕಡಿಮೆ ಇದ್ದಾಗ ಸಮಾಧಾನ ಪಟ್ಟುಕೊಳ್ಳುವುದು.  ಹೀಗೆ. 

ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ 'ಒಂದು ದೇಹದಲ್ಲಿ ಅನೇಕ ದೇಹಗಳು" ಎನ್ನುವುದು. 

*****

ಹಾಗಿದ್ದರೆ ಭಗವದ್ಗೀತೆಯಡ್ನಲ್ಲಿ ಶ್ರೀಕೃಷ್ಣನು ಇದರ ಬಗ್ಗೆ ಹೇಳಿರುವುದು ಏನು? ಎರಡನೆಯ ಅಧ್ಯಾಯದ ಹದಿಮೂರನೆಯ ಶ್ಲೋಕ ಹೀಗಿದೆ:

देहिनोऽस्मिन्यथा देहे कौमारं यौवनं जरा |
तथा देहान्तरप्राप्तिर्धीरस्तत्र न मुह्यति ||  

ದೇಹಿನೋಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ
ತಥಾ ದೇಹಾಂತರಪ್ರಾಪ್ತಿ: ಧೀರಸ್ತತ್ರ ನ ಮುಹ್ಯತಿ 


ಹೇಗೆ ಆತ್ಮನು ತನ್ನ ದೇಹದಲ್ಲಿಯೇ ಬಾಲ್ಯ, ಯೌವನ ಮತ್ತು ಮುಪ್ಪಿನಲ್ಲಿ ದೇಹ ಬಲಾವಣೆಗಳನ್ನು ಕಾಣುತ್ತಾನೋ, ಹಾಗೆ  ಸಾವಿನ ನಂತರ ಮತ್ತೊಂದು ದೇಹವನ್ನು ಪಡೆಯುತ್ತಾನೆ. ಆದ್ದರಿಂದ ತಿಳಿದವರು ಇದರ ಬಗ್ಗೆ ಚಿಂತಿಸುವುದಿಲ್ಲ. 


"ಬದುಕಿರುವಾಗ ಹಂತ ಹಂತಗಳಲ್ಲಿ ಹೇಗೆ ಇದೇ ದೇಹದಲ್ಲಿ ಬದಲಾವಣೆಗಳಾಗುವುದೋ, ಹಾಗೆಯೇ ಸಾವಿನ ನಂತರ ಬರುವ ಬೇರೆ ದೇಹವೂ ಒಂದು ಬಲಾವಣೆಯೇ ಆಗಿರುತ್ತದೆ. ಆದ್ದರಿಂದ ಜ್ಞಾನಿಗಳು ಸಾವಿನ ವಿಷಯದಲ್ಲಿ ಯಾವ ದುಃಖವನ್ನೂ ಹೊಂದುವುದಿಲ್ಲ" ಎನ್ನುವುದು ಇದರ ಭಾವ. 

*****

"ಹೆರಾಕ್ಲಿಟಸ್" ಎನ್ನುವ ಗ್ರೀಕ್ ತತ್ವಜ್ಞಾನಿಯೊಬ್ಬ ಸುಮಾರು ಎರಡು ಸಾವಿರದ ಐದು ನೂರು ವರುಷಗಳ ಹಿಂದೆ "No man ever steps into a river twice" ಎಂದು ಹೇಳಿರುವುದೂ ಹೀಗೆ ಸಮಯದಿಂದ ಆಗುವ ಬದಲಾವಣೆಗಳ ಬಗ್ಗೆಯೇ. ಆಸಕ್ತರು ಇಂಗ್ಲೀಷಿನಲ್ಲಿರುವ ಬ್ಲಾಗ್ ಪೋಸ್ಟನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು. 

Saturday, May 10, 2025

ಹರೆಯವೆಂಬ ಮಾಂತ್ರಿಕನ ಮಾಟ


ಹಿಂದಿನ ಒಂದು ಸಂಚಿಕೆಯಲ್ಲಿ "ಅನ್ನದ ಹಾಹಾಕಾರ" ಎನ್ನುವ ಶೀರ್ಷಿಕೆಯಡಿ 1965 ಮತ್ತು 1971 ಇಸವಿಗಳಲ್ಲಿ ನಡೆದ ಭಾರತ-ಪಾಕಿಸ್ತಾನದ ಯುದ್ಧಗಳ ಪ್ರಸ್ತಾಪ, ಆ ಕಾಲದ ಹಸಿದವರ "ಅನ್ನದ ಹಾಹಾಕಾರ", ಮತ್ತು "ಸಮಬಗೆಯ ಸಮ ಸುಖದ ಸಮ ದುಃಖದ, ಸಾಮರಸ್ಯದ ಸಾಮಗಾನ ಲಹರಿಯ ಮೇಲೆ ತೇಲಿ ಬರಲಿರುವ ಹೊಸ ನಾಡಿನ ಕಟ್ಟುವಿಕೆ" ಬಗ್ಗೆ ಖ್ಯಾತ ನವ್ಯ ಕವಿ ಪ್ರೊ. ಎಂ. ಗೋಪಾಲಕೃಷ್ಣ ಅಡಿಗರ "ಕಟ್ಟುವೆವು ನಾವು ಹೊಸ ನಾಡೊಂದನು" ಏನುವ ಕವನದ ಬಗ್ಗೆ ಸ್ವಲ್ಪ ವಿಚಾರ ಮಾಡಿದ್ದೆವು. ಇದನ್ನು ಮೆಲಕು ಹಾಕಿ ಓದಲು ಇಲ್ಲಿ ಕ್ಲಿಕ್ ಮಾಡಿ, 

ಎಲ್ಲಾ ಚೆನ್ನಾಗಿ ನಡೆಯುತ್ತಿರುವಾಗ ಯಾರಾದರೂ ಒಂದು ವಿಷಯ ಪ್ರಸ್ತಾಪ ಮಾಡಿ, ಸ್ವಲ್ಪ ಸಮಯದಲ್ಲಿಯೇ ಅದು ಎಡವಟ್ಟಾದರೆ "ನೀನು ಹೇಳಿದೆಯಪ್ಪಾ. ನೋಡು, ಹೇಗಾಯಿತು!" ಎಂದು ಉದ್ಗರಿಸುವುದು ವಾಡಿಕೆ. ಅದರಂತೆ ಅಂದೇ (22 ಏಪ್ರಿಲ್ 2025) ಕಾಶ್ಮೀರದ ಪಹಲ್ಗಮ್ ದುರಂತ ಉದ್ಭವಿಸಿ ಎರಡು ದೇಶಗಳ ನಡುವೆ ಮತ್ತೊಮ್ಮೆ ಕದನ ನಡೆದು, ಇಂದು "ಕದನವಿರಾಮ" ಘೋಷಣೆ ಆಗಿದೆ. ಘೋಷಣೆ ಆದರೂ ಅದು ಸ್ಥಿರವಾಗಿ ನಿಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ. ಒಂದು ಶಾಶ್ವತ ಪರಿಹಾರ ಸಿಕ್ಕಿ ಶಾಂತಿಯುತ ಬಾಳ್ವೆಗೆ ಅವಕಾಶವಾಗಲಿ ಎಂದು ಪ್ರಾರ್ಥಿಸೋಣ. 

ಆರೋಗ್ಯವಂತ ಸಮಾಜ ನಿರ್ಮಾಣ ಎಲ್ಲರಿಗೂ ಬೇಕಾಗಿರುವ ಸ್ಥಿತಿ. ಅಡಿಗರ ಕವನದ ಸಾಲುಗಳನ್ನು ಮತ್ತೆ ನೆನಪು ಮಾಡಿಕೊಳ್ಳೋಣ. 

ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ 
ಹರೆಯದೀ ಮಾಂತ್ರಿಕನ  ಮಾಟ ಮಸಳುವ ಮುನ್ನ 
ಉತ್ಸಾಹ ಸಾಗರದ ಉತ್ತುಂಗ ವೀಚಿಗಳ 
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ 

ಕಟ್ಟುವೆವು ನಾವು ಹೊಸ ನಾಡೊಂದನು 
ರಸದ ಬೀಡೊಂದನು; ಸುಖದ ಬೀಡೊಂದನು

ಇಲ್ಲಿ ಬರುವ "ಹರೆಯದ ಮಾಂತ್ರಿಕನ ಮಾಟ" ಎನ್ನುವುದರ ಬಗ್ಗೆ ಸ್ವಲ್ಪ ವಿಚಾರ ಮಾಡೋಣ. 

*****

ಸುಮಾರು ಎರಡು ದಶಕಗಳಿಗೂ ಹಿಂದಿನ ಮಾತು. ಜೊತೆಯಲ್ಲಿ ಉದ್ಯೋಗದಲ್ಲಿದ್ದ ಮಿತ್ರರೊಬ್ಬರ ಮನೆಗೆ ಯಾವುದೋ ಕಾರ್ಯ ನಿಮಿತ್ತ ಹೋಗಬೇಕಾಯಿತು. ಅನೇಕ ವರ್ಷಗಳ ಪರಿಚಯದಿಂದ ಬಂದಿದ್ದ ಸಲುಗೆ. ಅವರ ಮನೆ ಮಂದಿಯೆಲ್ಲಾ ಚೆನ್ನಾಗಿ ಗೊತ್ತು. ಅವರ ಮನೆಯ ಗೇಟ್ ಬಳಿ ಹೋಗುತ್ತಿದ್ದಾಗಲೇ ಮನೆಯ ಒಳಗಡೆ ನಡೆಯುತ್ತಿದ್ದ ವಾಗ್ವಾದ ಕೇಳಿಸುತ್ತಿತ್ತು. ಅವರ ಕುಟುಂಬದ ಎಲ್ಲರಿಗೂ ಗಂಟಲು ಸ್ವಲ್ಪ ದೊಡ್ಡದೇ. ಪ್ರೀತಿಯಿಂದ ಮಾತಾಡುತ್ತಿದ್ದರೂ ಜಗಳದಂತೆಯೇ ಇರುತ್ತಿತ್ತು. "ನಮ್ಮ ಮನೆಯಲ್ಲಿ ಗುಟ್ಟು ಅನ್ನುವುದೇ ಇಲ್ಲ ಸ್ವಾಮಿ. ನಮ್ಮ ಕುಟುಂಬದವರ ಮಾತೇ ಹಾಗೆ. ಏನು ಮಾತಾಡಿದರೂ ಬೀದಿಯವರಿಗೆಲ್ಲಾ ಗೊತ್ತು." ಎಂದು ಅವರೇ ತಮಾಷೆಗೆ ಹೇಳುತ್ತಿದ್ದರು.

ಅವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು. ಇಬ್ಬರೂ ಮದುವೆಯ ವಯಸ್ಸಿಗೆ ಬಂದಿದ್ದರು. ಅವರಿಗೋ ಇನ್ನೆರಡು ವರ್ಷದಲ್ಲಿ ಉದ್ಯೋಗದಿಂದ ನಿವೃತ್ತಿ ಆಗುವುದಿತ್ತು. ಅದರೊಳಗೆ ಇಬ್ಬರಿಗೂ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಬೇಕು ಎಂದು ಅವರ ಆಸೆ. (ಮಕ್ಕಳಿಗೆ ಮದುವೆ ಮಾಡಿದರೆ ಒಂದು ಜವಾಬದ್ದಾರಿ ಕಳೆಯಿತು ಅನ್ನುವುದು ಒಂದು ಭ್ರಾಂತಿ. ಅನೇಕ ಸಲ ಅದು ಇನ್ನೂ ಹೆಚ್ಚಿನ ಜವಾಬ್ದಾರಿಗಳಿಗೆ ಹೆದ್ದಾರಿ ಆಗುವುದೂ ಉಂಟು. ಎಲ್ಲೊ ಕೆಲವರಿಗೆ ಸ್ವಲ್ಪ ನಿರಾಳ ಆಗಿರಬಹುದು). ಮಗಳು ಯಾವ ವರ ಬಂದರೂ ಒಂದಲ್ಲ ಒಂದು ಕಾರಣ ಹೇಳಿ ನಿರಾಕರಿಸುತ್ತಿದ್ದಳು. ಮಗನು ಯಾವ ಹುಡುಗಿ ಬಂದರೂ "ಸರಿ, ಒಪ್ಪಿದೆ." ಎನ್ನುತ್ತಿದ್ದ.  ಮನೆಯಲ್ಲಿ ನಡೆಯುತ್ತಿದ್ದ ಮಾತು-ಕತೆಯ ಹಿನ್ನೆಲೆ ಹೀಗಿತ್ತು. 

ಮನೆಯೊಳಗೆ ಹೋದ ಕೂಡಲೇ ವಿಷಯ ಗೊತ್ತಾಯಿತು. ಹಿಂದಿನ ದಿನ ಮಗನಿಗೆ ನೋಡಿದ್ದ ಹುಡುಗಿ ವಿಷಯ ಮಾತಾಡುತ್ತಿದ್ದರು. ಅಪ್ಪ-ಅಮ್ಮ-ತಂಗಿ ಮೂವರಿಗೂ ಹುಡುಗಿ ಇಷ್ಟವಿಲ್ಲ. ಮಗ ಮಾತ್ರ ಎಂದಿನಂತೆ ಈಗಲೂ ಒಪ್ಪಿದ್ದ. ನನ್ನನ್ನು ಹೊರಗಿನವನು ಎಂದು ಭಾವಿಸದೆ ಅವರ ಚರ್ಚೆ ಮುಂದುವರೆಯಿತು. "ಇವನು ಯಾವ ಹುಡುಗಿ ಬಂದರೂ ಒಪ್ಪಿದ್ದೇನೆ ಆನ್ನುತ್ತಾನೆ. ವಯಸ್ಸಿಗೆ ಬಂದರೆ ಕತ್ತೆಯೂ ಚನ್ನಾಗಿ ಕಾಣುತ್ತದೆ" ಎಂದರು ಅಪ್ಪ. ಮಗನಿಗೆ ನ್ಯಾಯವಾಗಿಯೇ ಕೋಪ ಬಂತು. ಘರ್ಷಣೆ ಆಗುವ ಹಂತಕ್ಕೆ ಮಾತು ಬೆಳೆಯುವ ಸೂಚನೆ ಕಂಡಿತು. ವಾತಾವರಣ ತಿಳಿಗೊಳಿಸಲು ನಾನು ಮಿತ್ರರನ್ನು ಕೇಳಿದೆ: "ನೀವು ಹೇಳಿದ್ದು ಅರ್ಥವಾಗಲಿಲ್ಲ. ವಯಸ್ಸಿಗೆ ಬಂದರೆ ಕತ್ತೆಯೂ ಚೆನ್ನಾಗಿ ಕಾಣುತ್ತದೆ ಎಂದಿರಿ. ಅಂದರೆ ಏನು ಅರ್ಥ? ಹುಡುಗ ಅಥವಾ ಹುಡುಗಿಗೆ ವಯಸ್ಸು ಬಂದರೆ ಕತ್ತೆ ಚೆನ್ನಾಗಿ ಕಾಣುತ್ತದೆ ಎಂದೋ, ಅಥವಾ ಕತ್ತೆಗೆ ವಯಸ್ಸು ಬಂದಾಗ ಅದು ಅದನ್ನು ನೋಡುವವರಿಗೆಲ್ಲಾ ಚೆನ್ನಾಗಿ ಕಾಣುತ್ತದೆ ಎಂದೋ? ನನಗೆ ತಿಳಿದಂತೆ ಕತ್ತೆಯ ಮರಿ ನೋಡಲು ಚೆನ್ನಾಗಿರುತ್ತದೆ" ಎಂದೆ. 

ವಾತಾವರಣ ತಿಳಿ ಆಯಿತು. "ನೀವು ಬಿಡಿ ಮಾರಾಯರೆ. ಎಲ್ಲದರಲ್ಲೂ ಹಾಸ್ಯ ಹುಡುಕುತ್ತೀರಿ" ಅಂದರು ಹುಡುಗನ ತಾಯಿ. ಕಾಫಿ ಮತ್ತು ಕೋಡುಬಳೆ ಹಿಡಿದು ಬಂದಿದ್ದರು. ಎಲ್ಲರ ಗಮನ ಅವುಗಳ ಕಡೆ ಹೋಯಿತು. ಕದನವಿರಾಮ ಬಂದಂತಾಯಿತು. ನನ್ನ ಕೆಲಸ ಮುಗಿಸಿ ಹೊರಟು ಬಂದೆ. ನಾನು ಹೊರಬಂದ ನಂತರ ಮಾತಿನ ಗುದ್ದಾಟ ಮುಂದುವರೆದಿರಬಹುದು. ಏನಾಯಿತು ಎಂದು ನಾನು ಅಕ್ಕ-ಪಕ್ಕದ ಮನೆಯವರನ್ನು ಕೇಳಲಿಲ್ಲ. 

*****

ಹರೆಯವೆಂಬ ಮಾಂತ್ರಿಕನ ಮಾಯಾಜಾಲ ಅಂತಹುದು. ಅದು ನಿಜಕ್ಕೂ ಮಾಟವೇ ಹೌದು. ಹಿಂದೆಲ್ಲ ಕೆಲವರು ಮಾಟ-ಮಂತ್ರಗಳನ್ನು ಬಹಳವಾಗಿ ನಂಬಿದ್ದರು. ಅಮಾವಾಸ್ಯೆಯ ಮಾರನೆಯ ದಿನ ಬೆಳಿಗ್ಗೆ ರಸ್ತೆಯಲ್ಲಿ ನಡೆದು ಹೋದರೆ ನಾಲ್ಕು ರಸ್ತೆಗಳು ಸೇರುವ ಕಡೆ ಕೆಂಪು ಹೆಚ್ಚಿದ ನಿಂಬೆಹಣ್ಣು ಹೋಳುಗಳು ಕಾಣುತ್ತಿದ್ದವು. ಓಡಾಡುವವರು ಕಷ್ಟಪಟ್ಟು ರಸ್ತೆಯ ಕೊನೆಯಲ್ಲಿ ಹಾದು ಅವುಗಳ ಮಧ್ಯೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದರು. ಊರಿನಲ್ಲಿ ಕೆಲವರು ಮದ್ದು ಹಾಕುವುದರಲ್ಲಿ ನಿಸ್ಸೀಮರು ಎಂದು ಪಿಸುಮಾತು ಕೇಳಿಬರುತ್ತಿತ್ತು. "ಅವರ ಮನೆಯಲ್ಲಿ ಏನನ್ನಾದರೂ ತಿಂದೀಯೆ, ಜೋಕೆ. ಮೊಸರನ್ನವನ್ನಂತೂ ನೋಡಲೂಬೇಡ" ಎಂದು ಮಕ್ಕಳಿಗೆ ತಾಯಂದಿರು ಎಚ್ಚರಿಸುತ್ತಿದ್ದರು. ಮದ್ದು ಹಾಕುವವವರಂತೆ ಊರಿನಲ್ಲಿ ಅದನ್ನು ತೆಗೆಯುವ ಪ್ರವೀಣರೂ ಇರುತ್ತಿದ್ದರು. 

ಮಾಂತ್ರಿಕನ ಮಾಟ ಮಕ್ಕಳಾಗಿದ್ದಾಗ ನಮಗೆ ನಿಜದಲ್ಲಿ ಕಂಡುಬರುತ್ತಿದ್ದುದು "ಮ್ಯಾಜಿಕ್ ಶೋ" ನಡೆದಾಗ. ಯಾರದೋ ಉಂಗುರ ಮಾಂತ್ರಿಕನ ಕೈಯಲ್ಲಿ ಕಂಡಾಗ, ಪಾತ್ರೆಯಲ್ಲಿ  ತೆಗೆದುಕೊಂಡು ಹಾಕಿದ ನೀರು ಪಾರಿವಾಳವಾಗಿ ಹಾರಿಹೋದಾಗ, ಬುಟ್ಟಿಯಲ್ಲಿ ಹಾಕಿದ ಒಂದು ಬಿಳಿಯ ಕರ್ಚೀಪು ಅನೇಕ ಬಣ್ಣಬಣ್ಣದ ಬಟ್ಟೆಗಳಾದಾಗ, ಮುಂತಾದ ಸಂದರ್ಭಗಳಲ್ಲಿ. ನಾವೂ ಮ್ಯಾಜಿಕ್ ಮಾಡುವುದು ಕಲಿಯಬೇಕು ಅನ್ನಿಸುವುದು ಆಗ. ಅವನು ಬಹಳ ಸುಲಭವಾಗಿ ಗಾಳಿಯಲ್ಲಿ ರೂಪಾಯಿ ನೋಟು ತೆಗೆದಾಗಲಂತೂ ಮ್ಯಾಜಿಕ್ ಕಲಿತರೆ ಎಷ್ಟು ಬೇಕಾದರೂ ದುಡ್ಡು ಮಾಡಬಹುದು ಎಂದು ಕನಸು. ಇಂತಹ ಮಾಂತ್ರಿಕ ಹೀಗೆ ಷೋಗಳನ್ನು ಮಾಡಿ ಯಾಕೆ ಜೀವಹ ಹೊರೆಯುತ್ತಾನೆ ಎಂದು ಯೋಚಿಸುವಷ್ಟು ಪ್ರಬುದ್ಧತೆ ಇರಲಿಲ್ಲ ಆ ದಿನಗಳಲ್ಲಿ. 

ಸ್ವಲ್ಪ ದೊಡ್ಡವರಾದ ಮೇಲೆ, ಹರೆಯ ಬಂದಾಗ, ಹೊಸ ನೆತ್ತರು ಉಕ್ಕಿದಾಗ, ಅನೇಕ ಸಾಧನೆಗಳನ್ನು ಮಾಡುವ ಕನಸುಗಳು ಹರಡಿದಾಗ, ಇವೆಲ್ಲದರ ಸಮಾಗಮ. ಏನನ್ನಾದರೂ ಸಾಧಿಸುತ್ತೇನೆ ಅನ್ನುವ ವಿಶ್ವಾಸ, ಛಲ, ಹಂಬಲ. ಅಡಿಗರು ಇವು ಮೂರನ್ನೂ ಸೇರಿಸುತ್ತಾರೆ. ಅನೇಕ ಕನಸುಗಳು ಕಾಮಧೇನುವಿನ ಹಾಲು ಹನಿಗಳಾಗಿ, ಹೊಸ ರಕ್ತ ಉಕ್ಕುತ್ತಿದ್ದಾಗ, ಇಂತಹ ಹರೆಯದ ಮಾಂತ್ರಿಕನ ಮಾಟ ಪೂರ್ತಿ ಆವರಿಸಿದಾಗ, ಆದರ್ಶಗಳ ಸೆಳೆತ ಕೈಬೀಸಿ ಕರೆದಾಗ, ಹೊಸ ಸಮಾಜ ಸೃಷ್ಟಿಸುವ ಹುಮ್ಮಸ್ಸು ತಾನೇತಾನಾಗಿ ಆವರಿಸುತ್ತದೆ. ಉತ್ಸಾಹ, ಸಾಹಸಗಳ ತರಂಗಗಳ ಮೇಲೆ ಇಂತಹ ಹೊಸ ನಾಡನ್ನು ಕಟ್ಟುವ ಹುರುಪು ಆಗ. ಇವೆಲ್ಲ ಆರುವಮುನ್ನ ಆ ಕೆಲಸ ಆಗಬೇಕು. ತಡಮಾಡುವಂತಿಲ್ಲ. 

*****

ಆಗ ಆಗಲಿಲ್ಲ. ಮುಂದೆ ಏನಾಗುತ್ತದೆ? ಹಿಂದೆಲ್ಲ ಆಯುರ್ವೇದ ಪಂಡಿತರು ಕಣ್ಣು, ಉಗುರು ನೋಡಿ "ರಕ್ತಪುಷ್ಠಿ ಕಡಿಮೆ ಆಗಿದೆ" ಅನ್ನುತ್ತಿದ್ದರು. ಈಗ ಅದನ್ನೇ ಹೆಚ್ಚು ದುಡ್ಡು ತೆಗೆದುಕೊಂಡು, ರಕ್ತ ಹೀರುವ ಕೊಳವೆಯಿಂದ ತೆಗೆದು, ಲ್ಯಾಬೊರೇಟರಿಗಳಲ್ಲಿ ಅಳೆದು-ಸುರಿದು, ಹಿಮೋಗ್ಲಾಬಿನ್ ಕಡಿಮೆ ಆಗಿದೆ ಅನ್ನುತ್ತಾರೆ. ಹೊಸ ನೆತ್ತರು ಉಕ್ಕಿದ್ದು ಈಗ  ಆರುತ್ತಿದೆ. "ಒಂದೆ ನೆಗೆತಕೆ ನೆಗೆವೆವೋ ಕಂದಕವನು, ಕುಟ್ಟಿ ಪುಡಿ ಮಾಡುವೆವು ಕೋಟೆಗಳನು" ಎನ್ನುತ್ತಿದ್ದವ ಈಗ ದವಡೆಯಲ್ಲಿ "ಪುಳ್ಳಂಗಾಯಿ ಉಂಡೆ" ಕೂಡ ಪುಡಿ ಮಾಡಲಾರ. ಹರೆಯದ ಮಾಂತ್ರಿಕನ ಮಾಟ ಎಲ್ಲೂ ಕಾಣದೆ, ಮಧ್ಯ ವಯಸ್ಸಿನ ಸುತ್ತಲಿನ ಪ್ರಪಂಚದ ವಾಸ್ತವದ ಅರಿವು ಹೆಚ್ಚಾದಂತೆ ಕನಸುಗಳು ಬತ್ತುತ್ತವೆ. ಹೊಸ ಸಮಾಜ ಕಟ್ಟುವುದರ ಬದಲಾಗಿ ಇರುವ ಅವ್ಯವಸ್ಥೆಗೇ ಹೊಂದಿಕೊಂಡು ಬಾಳುವುದೇ ಉತ್ತಮ ಎಂಬ ಸಿದ್ಧಾಂತ ಗುದ್ದಲು ಬರುತ್ತದೆ. 

ಮತ್ತೂ ಸ್ವಲ್ಪ ವಯಸ್ಸಿನಲ್ಲಿ ಮುಂದೆ ಹೋದಾಗ, "ಇನ್ನೊಬ್ಬರ ಉಸಾಬರಿ ನಮಗೇಕೆ? ನಮ್ಮದು ನಮಗೆ ಸಾಕು. ತಲೆತಲಾಂತರದಿಂದ ಬಂದಿದ್ದು ನಾವು ಬದಲಿಸುವುದು ಸಾಧ್ಯವೇ?" ಎನ್ನುವ ಅನುಮಾನ ಕಾಡುತ್ತದೆ. ಹೊಸ ಸಮಾಜ ಕಟ್ಟುವುದು ಇರಲಿ; ಇರುವ ಸಮಾಜದಲ್ಲಿ ಬದುಕುವುದೂ ಒಂದು ಹೋರಾಟವೇ ಆಗುತ್ತದೆ. ಜೀವನದ ವಾಸ್ತವ ಇದೇ ಅನ್ನುವ ಕಡೆ ಮನಸ್ಸು ವಾಲತೊಡಗುತ್ತದೆ. 

*****

ಹಾಗಿದ್ದರೆ ಹೊಸ ಸಮಾಜ ಕಟ್ಟುವುದೇ ಬೇಡವೇ? ಕಾಲಕಾಲಕ್ಕೆ ಸಮಾಜ ಬದಲಾಗಿದೆಯಲ್ಲ. ಅದನ್ನು ಯಾರಾದರೂ ಕಟ್ಟಿರಲೇಬೇಕಲ್ಲ? ಅನೇಕ ರೀತಿಗಳಲ್ಲಿ ಬದಲಾವಣೆಗಳು ಸರಿ ದಾರಿಯಲ್ಲಿಯೇ ಆಗಿವೆಯಲ್ಲ? ಹೌದು. ಇವೆಲ್ಲಾ ಆಗಲೇಬೇಕು. ನಿಲ್ಲಬಾರದು. ಕನಸುಗಳು ಕಾಣಲೇಬೇಕು. ತಿರುವುಗಳು ದಾಟಲೇಬೇಕು. ಅದು ಹೇಗೆ? ಅದು ಸಾಧ್ಯವೇ? ಅವನ್ನು ಮಾಡುವವರು ಯಾರು?

ಪುಣ್ಯಕ್ಕೆ ಯಾವ ಕಾಲಮಾನ ಘಟ್ಟದಲ್ಲೂ ಕೇವಲ ಯುವಕರೇ ಇರಲಿಲ್ಲ; ಇರುವುದಿಲ್ಲ. ಎಲ್ಲ ವಯೋಮಾನದವರೂ ಒಂದೇ ಕಾಲದಲ್ಲಿ ಇರುತ್ತಾರೆ.  ಕವಿವಾಣಿ ಹೇಳುವಂತೆ "ಹೊಸ ಚಿಗುರು - ಹಳೆ ಬೇರು ಕೂಡಿರಲು ಮರ ಸೊಗಸು".  ಹರೆಯದವರ ಉತ್ಸಾಹ-ಹುಮ್ಮಸ್ಸುಗಳು ಮತ್ತು  ಹಿರಿಯರ ಅನುಭವ-ಸಮತೋಲನ ಒಂದೆಡೆ ಸೇರಿದರೆ ಹೊಸ ಸಮಾಜದ ನಿರ್ಮಾಣ ಇಂದಿಗೂ ಸಂಭವವೇ. ಹಿಂದೆಲ್ಲಾ ಸಮಾಜಗಳು ಬದಲಾದದ್ದು ಹೀಗೆಯೇ. ಈಗಲೂ ಅದು ಸಾಧ್ಯವೇ. 

ಹಿರಿಯರಿಗೆ ಕಿರಿಯರಲ್ಲಿ ಭರವಸೆ, ಕಿರಿಯರಿಗೆ ಹಿರಿಯರಲ್ಲಿ ನಂಬಿಕೆ. ಹೀಗೆ ಇರುವ ತಂಡಗಳು ಒಟ್ಟಿಗೆ. ಪರಸ್ಪರ ಗಾಢವಾದ ಸಹಬಾಳ್ವೆ. ಆಗ ಹರೆಯದ ಮಾಂತ್ರಿಕನ ಮಾಟ ಮಸಳದೆ, ಸರಿದಾರಿಯಲ್ಲಿ ಸಮಾಜದಲ್ಲಿ ಮುಂದುವರೆಯಬಹುದು.