Showing posts with label aayussu. Show all posts
Showing posts with label aayussu. Show all posts

Monday, July 14, 2025

ಸಂಪತ್ತು ಕಳೆಯುವ ಕಾರಣಗಳು


ಹಿಂದೊಂದು ಸಂಚಿಕೆಯಲ್ಲಿ "ದೇವರಲ್ಲಿ ಬೇಡುವ ಅಷ್ಟ ಐಶ್ವರ್ಯಗಳು" ಎನ್ನುವ ಶೀರ್ಷಿಕೆಯ ಅಡಿಯಲ್ಲಿ "ಅಷ್ಟ ಐಶ್ವರ್ಯಗಳು" ಮತ್ತು ಅವನ್ನು ಬೇಡುವ ಯುಕ್ತಾಯುಕ್ತತೆಯ ಬಗ್ಗೆ ಸ್ವಲ್ಪಮಟ್ಟಿಗೆ ಚರ್ಚಿಸಿದ್ದೆವು. (ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಈ ಎಂಟು ಐಶ್ವರ್ಯಗಳಲ್ಲಿ ಆಯುಸ್ಸು, ಆರೋಗ್ಯ ಮತ್ತು ಐಶ್ವರ್ಯಗಳು ಎಲ್ಲಕ್ಕಿಂತ ಮೊದಲು ಮತ್ತು ಅತಿ ಮುಖ್ಯವಾದವು ಎಂದು ನೋಡಿದ್ದೆವು. ಇವುಗಳನ್ನು ಒಟ್ಟಾಗಿ ಕೋರುವುದು ಸಂಪ್ರದಾಯವಾಗಿ ಬಂದಿದೆ. "ಆಯುರಾರೋಗ್ಯ ಐಶ್ವರ್ಯಾದಿಗಳು" ಎಂದು ಹೇಳುವ  ವಾಡಿಕೆ ಇದೆ. ಆಯುಸ್ಸು ಮತ್ತು ಆರೋಗ್ಯ ಅವಳಿ ಕೋರಿಕೆಗಳು. ಆರೋಗ್ಯವಿಲ್ಲದ ದೀರ್ಘ ಆಯುಸ್ಸು, ಮತ್ತು ಆಯುಷ್ಯ ಇಲ್ಲದ ಒಳ್ಳೆಯ ಆರೋಗ್ಯ ಎರಡೂ ಪ್ರಯೋಜನಕ್ಕೆ ಬಾರದವು. ಇವೆರಡು ಚೆನ್ನಾಗಿದ್ದು ಐಶ್ವರ್ಯ ಇಲ್ಲ ಎಂದರೂ ಪರವಾಗಿಲ್ಲ. ಹಾಗಾಗಬೇಕೆಂದು ಯಾರೂ  ಆಶಿಸುವುದಿಲ್ಲ ಎನ್ನುವುದು ನಿಜವಾದರೂ, ಈ ಮೂರರಲ್ಲಿ ಎರಡು ಮಾತ್ರ ಕೊಡುತ್ತೇವೆ ಎಂದರೆ ಆಯುಸ್ಸು ಮತ್ತು ಆರೋಗ್ಯವನ್ನೇ ಕೋರಿಕೊಳ್ಳುವುದು ಅಷ್ಟೇ ಸತ್ಯ.  

ಅನೇಕರಿಗೆ ಜೀವನದಲ್ಲಿ ಇವುಗಳು ಯುಕ್ತ ಪ್ರಮಾಣದಲ್ಲಿ ಸಿಗುವುದಿಲ್ಲ. ಕೆಲವರಿಗೆ ಅಕಾಲ ಮೃತ್ಯು ಬಂದು ಜೀವನ ಯಾತ್ರೆ ಚಿಕ್ಕ ವಯಸ್ಸಿನಲ್ಲೇ ಮುಗಿದುಹೋಗುತ್ತದೆ. ಮತ್ತೆ ಕೆಲವರಿಗೆ ಆಯುಸ್ಸು ಇದ್ದು ಸುಮಾರಾದ ಕಾಲ ಬದುಕಿದರೂ ಜೀವನ ಪೂರ್ತಿ ಅನಾರೋಗ್ಯದಿಂದ ನರಳುವುದೇ ಆಗುತ್ತದೆ. ಮೂರನೆಯ ಗುಂಪಿಗೆ ಆಯುಸ್ಸು ಮತ್ತು ಆರೋಗ್ಯ ಇದ್ದರೂ ಕಡು ಬಡತನ ಕಾಡುವುದರಿಂದ ಜೀವನ ಬಹಳ ಕಷ್ಟಕರವಾಗಿ ಸಾಗುತ್ತದೆ.  ಮೂರೂ ಚೆನ್ನಾಗಿ ಇರುವುದು ಒಂದು ಸೌಭಾಗ್ಯವೇ ಸರಿ. 

ಸಂಪತ್ತುಗಳಲ್ಲಿ ಅತಿ ಮುಖ್ಯವಾದ ಈ ಮೂರು ಏಕೆ ಎಲ್ಲರಿಗೂ ಸಿಗುವುದಿಲ್ಲ, ಮತ್ತು ಕೆಲವರಿಗೆ ಸಿಕ್ಕರೂ ಏಕೆ ಮಧ್ಯದಲ್ಲಿ ಹಾಳಾಗುತ್ತದೆ ಎನ್ನುವುದನ್ನು ಈಗ ಸ್ವಲ್ಪಮಟ್ಟಿಗೆ ನೋಡೋಣ. 

*****

ನಮ್ಮ ವೈದಿಕ ವಾಂಗ್ಮಯದಲ್ಲಿ ಇವುಗಳ (ಅಂದರೆ ಆಯುಸ್ಸು, ಅರೋಗ್ಯ ಮತ್ತು ಐಶ್ವರ್ಯ) ಹ್ರಾಸ ಆಗುವಿಕೆಗೆ ಕಾರಣಗಳನ್ನು ಕೊಟ್ಟಿದ್ದಾರೆ. (ಕಡಿಮೆ ಆಗುವುದು, ಮೊಟಕಾಗುವುದು ಅಥವಾ ಸೋರಿಕೆ ಆಗುವುದಕ್ಕೆ "ಹ್ರಾಸ" ಎನ್ನುತ್ತಾರೆ). ಇವನ್ನು ನಂಬುವುದೂ ಬಿಡುವುದೂ ಅವರವರಿಗೆ ಸೇರಿದ್ದು. ಕೆಲವರಿಗೆ ಪುನರ್ಜನ್ಮದಲ್ಲಿ ನಂಬಿಕೆ ಇರುವುದಿಲ್ಲ. ಆದರೂ ಈ ಸಂಪತ್ತುಗಳ ಹಾನಿ ಆಗುವ ಕಾರಣಗಳನ್ನು ತಿಳಿದು ಅವನ್ನು ಬಿಟ್ಟು ಬದುಕುವುದರಿಂದ ಈಗಿನ ಜೀವನವಾರರೂ ಹಸನಾಗುತ್ತದೆ ಅನ್ನುವುದು ಒಪ್ಪಬೇಕಾದ ವಿಷಯ. 

ಮನುಷ್ಯನಿಗೆ ಬರುವ ಕಷ್ಟ-ಕಾರ್ಪಣ್ಯಗಳಿಗೆ ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪಕರ್ಮಗಳೇ ಕಾರಣ ಎಂದು ನಂಬಿಕೆ. ಕೆಲವು ಪಾಪ ಕರ್ಮಗಳು ಮುಂದಿನ ಯಾವುದೋ ಜನ್ಮದಲ್ಲಿ ಕಾಡುವುದು ಎಂದರೂ, ಕೆಲವು ಪ್ರಬಲ ಕರ್ಮಗಳು ಇದೇ ಜನ್ಮದಲ್ಲಿ ಹಿಂಸಿಸುವುದೂ ಉಂಟು. ಇದೇ ರೀತಿ ಈ ಜನ್ಮದ ಪುಣ್ಯ ಕರ್ಮಗಳು ಮುಂದೆ ಫಲ ಕೊಡಬಲ್ಲವಾದರೂ ಕೆಲವು ಪ್ರಬಲ ಪುಣ್ಯ ಕರ್ಮಗಳೂ ಕೂಡ ಇದೇ ಜನ್ಮದಲ್ಲಿ ಫಲಪ್ರದವಾಗುವುದೂ ಉಂಟು. ಇದರಲ್ಲಿಯೂ, ದೊಡ್ಡವರ ಆಶೀರ್ವಾದ ಪೂರ್ವಕವಾಗಿ ಬರುವಂತಹ ಪುಣ್ಯ ಕಾರ್ಯಗಳ ಯೋಗಗಳು ಅತಿ ಶೀಘ್ರವಾಗಿ ಒಳ್ಳೆಯ ಪರಿಣಾಮಗಳನ್ನು ಮಾಡುವುದು ಅನೇಕ ಉದಾಹರಣೆಗಳ ಮೂಲಕ ನಮ್ಮ ಅನುಭವಗಳಲ್ಲೇ ಕಂಡು ಬಂದಿರುವುದೂ ಉಂಟು. ಅನೇಕ ವಿಷ ಪದಾರ್ಥಗಳು ಬಹಳ ನಿಧಾನವಾಗಿ ಪರಿಣಾಮ ಮಾಡುವಂತೆ (ಸೀಸ ಅಥವಾ ಲೆಡ್, ಪಾದರಸ ಅಥವಾ ಮರ್ಕ್ಯುರಿ ಮುಂತಾದ ವಿಷಕಾರಿಗಳಂತೆ), ಮತ್ತೆ ಕೆಲವು ವಿಷ ಪದಾರ್ಥಗಳು (ಸಯನೈಡ್ ಮುಂತಾದುವು)  ಕ್ಷಣಾರ್ಧದಲ್ಲಿ ಮಾರಕವಾಗುವಂತೆ ಇವುಗಳ ಪರಿಣಾಮ. 

ಆರೋಗ್ಯ ಹಾನಿಗೆ ವ್ಯಭಿಚಾರ, ಆಯುಷ್ಯ ಹ್ರಾಸಕ್ಕೆ ಪರನಿಂದೆ, ಐಶ್ವರ್ಯ ನಾಶಕ್ಕೆ ಪರವಿತ್ತಾಪಹಾರ ಕಾರಣಗಳೆಂದು ವಿವರಣೆಗಳಿವೆ. ಅನಾರೋಗ್ಯದ ನೇರ ಕಾರಣ ವ್ಯಭಿಚಾರ ಕ್ರಿಯೆಗಳು. ಅನವಶ್ಯಕ ಪರನಿಂದೆ ಆಯುಸ್ಸನ್ನು ಕೊಡಲಿಯ ಏಟು ಮರವನ್ನು ಕಡಿಯುವಂತೆ ತುಂಡಿರಿಸುವ ಕೆಲಸ ಮಾಡುತ್ತದೆ. ಇನ್ನೊಬ್ಬರ ಗಂಟು ಹೊಡೆದು ಸಂತೋಷಿಸುವುದು ಮುಂದೆ ನಮ್ಮ ಸಂಪತ್ತಿನ ನಾಶದ ದುಃಖದ ಮೂಲಕ ಸಮ ಮಾಡುತ್ತದೆ. 
***** 

"ಪೂರ್ವ ಜನ್ಮ ಕೃತಂ ಪಾಪಂ ವ್ಯಾಧಿ ರೂಪೇಣ ಪೀಡ್ಯತೇ" ಎಂದು ಅನೇಕ ಕಡೆಗಲ್ಲಿ, ವಿಶೇಷವಾಗಿ ಆಯುರ್ವೇದದ ಗ್ರಂಥಗಳ ಚರ್ಚೆಗಳಲ್ಲಿ ಹೇಳಿದೆ. ವ್ಯಭಿಚಾರ ಅನ್ನುವುದು ಸಮಾಜದಲ್ಲಿ ಮನುಷ್ಯನನ್ನು ಕೀಳಾಗಿ ಬದುಕುವಂತೆ ಮಾಡುತ್ತದೆ. ಕೆಲವು ವ್ಯಭಿಚಾರ ಪ್ರಸಂಗಗಳು ಯಾರಿಗೂ ಗೊತ್ತಾಗದಂತೆ ನಡೆಯುತ್ತವೆ. ಮತ್ತೆ ಕೆಲವು ಜಗಜ್ಜಾಹೀರಾಗುತ್ತವೆ. ಆರೋಗ್ಯದ ಮೇಲೆ ಇದರ ಪರಿಣಾಮ ಮಾತ್ರ ಒಂದೇ ರೀತಿ. ಅನೇಕ ವ್ಯಭಿಚಾರಗಳನ್ನು ಒಂದೇ ಜನ್ಮದಲ್ಲಿ ಮಾಡಿದವರು ಮುಂದೆ ಒಂದೇ ಜೀವಿತ ಕಾಲದಲ್ಲಿ ಅನೇಕ ರೋಗಗಳನ್ನು ಅನುಭವಿಸಬೇಕಾದ ಪ್ರಮೇಯವನ್ನು ತಂದೊಡ್ಡುತ್ತದೆ. 

ವ್ಯಭಿಚಾರದ ವಿಷಯದಲ್ಲಿ ಬಹಳ ಜನಗಳಿಗೆ ತಪ್ಪು ಅಭಿಪ್ರಾಯ ಇರುವುದು. ಇಡೀ ಪ್ರಪಂಚದಲ್ಲಿ ಕೇವಲ ಹದಿನೈದು-ಇಪ್ಪತ್ತು ಶೇಕಡಾ ಮಂದಿ ಹೀಗೆ ತೊಡಗುತ್ತಾರೆ ಎಂದು ಒಂದು ಅಂದಾಜು. ಆದರೆ ಪಾಪ ಕರ್ಮಗಳು ಕೇವಲ ದೈಹಿಕವಲ್ಲ. ಈ ಅಂದಾಜು ಕೇವಲ ದೈಹಿಕ ವ್ಯಭಿಚಾರಕ್ಕೆ ಸಂಬಂಧಿಸಿದ್ದು. ಅನೇಕರಿಗೆ ವಾಚಿಕ ವ್ಯಭಿಚಾರದ ದೊಡ್ಡ ಗೀಳು ಇರುತ್ತದೆ. ಮಾತು ಪ್ರಾರಂಭಿಸಿದರೆ ಈ ರೀತಿಯ ಕೆಟ್ಟ ಮಾತುಗಳಷ್ಟೇ ಬರುವುದು ಉಂಟು. ಇದೂ ವ್ಯಭಿಚಾರವೇ. ಮಾನಸಿಕ ವ್ಯಭಿಚಾರವಂತೂ ಅಳತೆಗೆ ಸಿಗದು. ಅದು ಅವರವರಿಗೇ ಗೊತ್ತಾಗಬೇಕು. ಈ ಕಾರಣದಿಂದಲೇ ಕಾಯೇನ, ವಾಚಾ ಮತ್ತು ಮನಸಾ ಎಂದು ತ್ರಿಕರಣ ಶುದ್ಧಿಯನ್ನು ಹೇಳುವುದು. 

ಅದು ದೈಹಿಕ ವ್ಯಭಿಚಾರ ಇರಬಹುದು, ವಾಚಿಕ ಅಥವಾ ಮಾನಸಿಕ ವ್ಯಭಿಚಾರ ಇರಬಹುದು, ಕುಕರ್ಮಗಳ ಸಾಲಿನಲ್ಲಿ ಸೇರುತ್ತವೆ. ಅರೋಗ್ಯ ಹ್ರಾಸವಾಗುವುದಕ್ಕೆ ಬೀಜ ರೂಪವಾಗಿ ಕಾಯುತ್ತ ಕುಳಿತುಕೊಳ್ಳುತ್ತವೆ. 
***** 

"ಪರನಿಂದೆ" ಎನ್ನುವ ಪಾಪವನ್ನು ಮಾಡದವರೇ ಪ್ರಾಯಶಃ ಕಾಣಸಿಗರು. ಅನೇಕ ವೇಳೆ ಕಂಡ ಅಥವಾ ಕೇಳಿದ ಪ್ರಸಂಗಗಳ ಸತ್ಯಾಸತ್ಯತೆ ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡದೆ ಇನ್ನೊಬ್ಬರನ್ನು ಜರೆಯುವ ಕೆಲಸ ಮಾಡುತ್ತಿರುತ್ತೇವೆ. ಯಾರೋ ಹೇಳಿದ ಮಾತನ್ನು ನಂಬಿ ನಾವೂ ಪರನಿಂದೆಯಲ್ಲಿ ಭಾಗಿಯಾಗುವುದೂ ಉಂಟು. ಇನ್ನು ಕೆಲವು ಸಂದರ್ಭಗಳಲ್ಲಿ ನಮ್ಮ ವೈಯುಕ್ತಿಕ ಹಿತಾಸಕ್ತಿಗಳ ರಕ್ಷಣೆಗೆ ಅನವಶ್ಯಕ ಕಾರಣಗಳನ್ನು ಕಂಡುಹಿಡಿದು ಪರನಿಂದೆ ಮಾಡುವುದೂ ಉಂಟು. ಸಾಮೂಹಿಕ ಪರನಿಂದೆಯಂತೂ ಒಂದು ಸಾಂಕ್ರಾಮಿಕದಂತೆ. ಗುಂಪು ಸೇರಿದಾಗ ಇದು ಸಾಮಾನ್ಯವಾಗುತ್ತದೆ. 

ಪರನಿಂದೆಯ ಗುರಿ ಉತ್ತಮ ಜೀವಿಗಳಾದರೆ ಅದರ ಪರಿಣಾಮ ಇನ್ನೂ ಘೋರ. ನಮ್ಮ ಕ್ರಿಮಿನಲ್ ಕಾಯ್ದೆಗಳಲ್ಲಿ "ಪ್ರೇಮೆಡಿಟೇಟೆಡ್ ಕೋಲ್ಡ್ ಬ್ಲಡೆಡ್ ಮರ್ಡರ್" ಎನ್ನುವಂತೆ ಇದು. ಈ ಕಾನೂನುಗಳಂತೆ ಇದಕ್ಕೆ ಪರಿಣಾಮಕಾರಿಯಾದ ಹ್ರಾಸವೂ ಅತ್ಯಧಿಕ ಆಗುತ್ತದೆ. ಉತ್ತಮ ಜೀವಿಗಳು ನಮ್ಮ ನಿಂದೆಯಿಂದ ನೊಂದುಕೊಂಡರಂತೂ ಅದರ ಪರಿಣಾಮ ಬಹಳ ಬೇಗ ಆಗುತ್ತದೆ. 

ಪರನಿಂದೆಯ ಫಲ ಆಯುಷ್ಯ ಹಾನಿ. ಮನುಷ್ಯ ಜೀವಮಾನದ ಕಾಲದಲ್ಲಿ ಪರನಿಂದೆಗೆ ಮೀಸಲಿಟ್ಟಷ್ಟು ಕಾಲವೂ ನೇರವಾಗಿ ಆಯುಷ್ಯ ಪ್ರಮಾಣದಲ್ಲಿ ಕಳೆದಂತೆ. ಜೀವನದಲ್ಲಿ ಸಿಕ್ಕ ಕಾಲವನ್ನು ಪರನಿಂದೆಯಲ್ಲಿ ಅಪವ್ಯಯ ಮಾಡಿದ್ದು ಒಂದು ಕಡೆ. ನಮ್ಮ ಆಯುಸ್ಸಿನಲ್ಲಿ ಅಷ್ಟನ್ನು ಕಳೆದುಕೊಂಡದ್ದು ಇನ್ನೊಂದು ಕಡೆ. ದ್ವಿವಿಧ ಹೊಡೆತ ಈ ಪರನಿಂದೆಯ ಕಾರಣ. 

*****

ಇನ್ನೊಬ್ಬರ ಸ್ವತ್ತನ್ನು ಅಪಹರಿಸುವುದು "ಪರವಿತ್ತಾಪಹಾರ" ಆಗುತ್ತದೆ. ಇದು ಭೌತಿಕವಾಗಿ ಮತ್ತೊಬ್ಬರ ಆಸ್ತಿಯನ್ನು ಲಪಟಾಯಿಸುವುದು ಮಾತ್ರವಲ್ಲ. ಬೇರೆಯವರಿಗೆ ಬರಬೇಕಾದ ಆಸ್ತಿ, ಹೆಸರು, ಮನ್ನಣೆ ಮುಂತಾದುವನ್ನು ತಪ್ಪು ಕಾರಣಗಳನ್ನು ಕೊಟ್ಟು ಬರದಂತೆ ಮಾಡುವುದೂ ಪರವಿತ್ತಾಪಹಾರವೇ ಆಗುತ್ತದೆ. ಹೀಗೆ ಮಾಡಿ ಸುಖ ಅನುಭವಿಸುವುದು ಮತ್ತು ಆ ಕಾಲದಲ್ಲಿ ಇಲ್ಲದ ಹಿಗ್ಗನ್ನು ಆಸ್ವಾದಿಸುವುದು ಕ್ಷಣಿಕ. 

ಚಿಕ್ಕ ವಯಸ್ಸಿನಲ್ಲಿ ಅನೇಕ ಲೌಕಿಕ ಸುಖ ಪ್ರಾಪ್ತಿಗೆ ಎಲ್ಲರೂ ಅವರವರ ಮಟ್ಟದಲ್ಲಿ ಇಂತಹ ಕೆಲಸಗಳನ್ನು ಮಾಡಿರುತ್ತೇವೆ. ಯೌವನದ ಭರದಲ್ಲಿ ಇದು ಅನ್ಯಾಯ ಅನ್ನುವುದೂ ಹೊಳೆಯುವುದಿಲ್ಲ. ಸ್ವಲ್ಪ ವಯಸ್ಸಾದ ಮೇಲೆ, ನಿಧಾನವಾಗಿ ಕುಳಿತು ಯೋಚಿಸುವ ಕಾಲ ಬಂದಾಗ, ಹೀಗೆ ಮಾಡಿದುದಕ್ಕೆ ನಾವೇ ನಾಚಿಕೊಳ್ಳುತ್ತೇವೆ. ಆದರೆ ಆಗ ಕಾಲ ಮಿಂಚಿರುತ್ತದೆ. 

ಪರವಿತ್ತಾಪಹಾರದ ನೇರ ಫಲ ನಮ್ಮ ಸಂಪತ್ತುಗಳ ನಾಶ. ಈ ಸಂಪತ್ತು ಹಣಕಾಸು, ಮನೆ-ಮಠ, ಒಡವೆ-ವಸ್ತುವೇ ಆಗಬೇಕೆಂದಿಲ್ಲ. ಉದ್ಯೋಗದಲ್ಲಿ ಬಡ್ತಿ, ಸಮಾಜದಲ್ಲಿ ಮನ್ನಣೆ, ಸಿಗಬೇಕಾದ ಗೌರವಗಳು ಕೈ ತಪ್ಪುವುದು ಮುಂತಾದುವು ಸಹ ನಮ್ಮ ನಮ್ಮ ಸಂಪತ್ತು ನಾಶದ ರೂಪಗಳೇ ಅಲ್ಲವೇ?

*****

ನಮ್ಮ ವಾಂಗ್ಮಯದಲ್ಲಿ ಅಲ್ಲಲ್ಲಿ ಹೇಳಿರುವ ಈ ಎಲ್ಲ ಮೇಲಿನ ವಿಷಯಗಳನ್ನೂ ಶ್ರೀ ಗೋಪಾಲದಾಸರು ತಮ್ಮ "ಎನ್ನ ಬಿನ್ನಪ ಕೇಳೋ, ಧನ್ವಂತ್ರಿ ದಯಮಾಡೋ" ಎನ್ನುವ ದೇವರನಾಮದಲ್ಲಿ ಸಂಗ್ರಹಿಸಿದ್ದಾರೆ. ತಮ್ಮ ಗುರುಗಳಾದ ಶ್ರೀ ವಿಜಯದಾಸರ ವಿಷಯದಲ್ಲಿ ಶ್ರೀ ಶ್ರೀನಿವಾಸಾಚಾರ್ಯರು (ಮುಂದೆ ಶ್ರೀ ಜಗನ್ನಾಥದಾಸರು ಎಂದು ಹೆಸರಾದವರು) ಮಾಡಿದರೆನ್ನಲಾದ ಅಪಚಾರದ ಕಾರಣ ಅರೋಗ್ಯ ಮತ್ತು ಆಯಸ್ಸನ್ನು ಕಳೆದುಕೊಂಡ ಸಂದರ್ಭದಲ್ಲಿ, ಅದೇ ಗುರುಗಳ ಆಣತಿಯಂತೆ ಈ ದೇವರನಾಮದ ಮೂಲಕ ಧನ್ವಂತರಿಯನ್ನು ಒಲಿಸಿಕೊಂಡು ಅವರನ್ನು ಪಾರುಮಾಡಿದರೆಂದು ಪ್ರತೀತಿ. ಮುಂದೆ ತಮ್ಮ ಆಯುಷ್ಯದಲ್ಲಿ ನಲವತ್ತು ವರುಷಗಳನ್ನು ಶ್ರೀ ಜಗನ್ನಾಥದಾಸರಿಗೆ ಧಾರೆ ಎರೆದುಕೊಟ್ಟರೆಂದು ಹೇಳುತ್ತಾರೆ. 

ಈ ಹಾಡನ್ನು ಕೆಳಗೆ ಕ್ಲಿಕ್ ಮಾಡಿ ಕೇಳಬಹುದು:


ಈ ವಿಷಯಕ್ಕೆ ಸಂಬಂಧಿಸಿದ ಇನ್ನೂ ಕೆಲವು ವಿವರಣೆಗಳನ್ನು ಹಾಡಿನಲ್ಲಿ ಕಾಣಬಹುದು. 

*****

"ಕೆಸರಿನಿಂದ ಕೆಸರ ತೊಳೆದಂತೆ ಕರ್ಮದ ಪಥವು" ಮತ್ತು "ದುಷ್ಕರ್ಮ ಪರಿಹರಿಸೋ" ಎನ್ನುವ ವಿಷಯಗಳನ್ನು ಮುಂದೊಮ್ಮೆ ನೋಡೋಣ. 

Sunday, March 16, 2025

ಜೀವನದ "ಸ್ಲೋ ಸೈಕಲ್ ರೇಸ್"


ಶಾಲಾ-ಕಾಲೇಜುಗಲ್ಲಿ, ವಾರ್ಷಿಕ ಸಮಾರಂಭಗಳ ಮುನ್ನಾದಿನಗಳಲ್ಲಿ, ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿ, ಗೆದ್ದವರಿಗೆ ಬಹುಮಾನಗಳನ್ನು ಘೋಷಿಸಿ, ಸಮಾರಂಭದ ದಿನ ಮುಖ್ಯ ಅತಿಥಿಗಳಿಂದ ಅವರಿಗೆ ಬಹುಮಾನ ಕೊಡಿಸುವುದು ಬಹಳ ಹಿಂದಿನಿಂದಲೂ ಬಂದಿರುವ ಪದ್ದತಿ. ಅವು ಸಾಂಸ್ಕೃತಿಕ ಕಾರ್ಯಕ್ರಮ ಇರಬಹುದು ಅಥವಾ ಕ್ರೀಡಾಸ್ಪರ್ಧೆಗಳು ಕೂಡ ಆಗಿರಬಹುದು. ಈ ರೀತಿಯ ಸ್ಪರ್ಧೆ ಮತ್ತು ಬಹುಮಾನಗಳಿಲ್ಲದೆ ನಡೆಸುವ ಸಮಾರಂಭಗಳು ನೀರಸ ಅನಿಸುತ್ತವೆ. ಅನೇಕರು ಈ ರೀತಿಯ ಸ್ಪರ್ಧೆಗಳಿಗೆ ಕಾದಿರುತ್ತಾರಲ್ಲದೆ ಬಹಳ ತಯಾರಿ ಕೂಡ ನಡೆಸಿರುತ್ತಾರೆ. ಕೆಲವರಿಗೆ ಕೇವಲ ಸ್ಪರ್ಧಿಸುವುದು ಮುಖ್ಯವಾದರೆ ಮತ್ತೆ ಕೆಲವರಿಗೆ ಗೆಲ್ಲುವುದೂ ಅತಿ ಮುಖ್ಯ. ಅನೇಕ ಸ್ಪರ್ಧೆಗಳಲ್ಲಿ  ಕೆಲವರು ಮಾತ್ರ ಬಹುಮಾನ ಗಳಿಸಬಹುದು. ಆದರೆ ಕೆಲವು ರೀತಿಯ ಸ್ಪರ್ಧೆಗಳಲ್ಲಿ ಅನೇಕರು ಬಹುಮಾನ ಗಳಿಸಬಹುದು. 

ಕೆಲವು ಸ್ಪರ್ಧೆಗಳಲ್ಲಿ ಅನೇಕರು ಬಹುಮಾನ ಗಳಿಸಬಹುದು ಅನ್ನುವುದು ಸ್ವಲ್ಪ ಆಶ್ಚರ್ಯ ಹುಟ್ಟಿಸಬಹುದು. ಸಾಮಾನ್ಯವಾಗಿ ಮೊದಲ ಮೂರು ಸ್ಥಾನ ಗೆದ್ದವರಿಗೆ ಬಹುಮಾನಗಳನ್ನೂ, ತುಂಬಾ ಚೆನ್ನಾಗಿ ಪ್ರದರ್ಶನಗಳನ್ನು ನೀಡಿದ್ದರೂ ಕೂಡ ಬಹುಮಾನ ಗೆಲ್ಲಲಾಗದವರಿಗೆ ಸಮಾಧಾನಕರ ಬಹುಮಾನಗಳನ್ನೂ (ಕನ್ಸೋಲೇಷನ್ ಪ್ರೈಜ್) ಕೊಡುವುದು ಸಾಮಾನ್ಯ ರೀತಿ, ಕೆಲವು ಸ್ಪರ್ಧೆಗಳಲ್ಲಿ ಅನೇಕರು ನೂರಕ್ಕೆ ನೂರು ಅಂಕ ಪಡೆಯಬಹುದು. ಒಂದು ಪ್ರಶ್ನೋತ್ತರ ಪರೀಕ್ಷೆ ಅನ್ನೋಣ. ಹತ್ತು ಪ್ರಶ್ನೆ ಕೇಳಲಾಗುವುದು. ಅನೇಕರು ಹತ್ತಕ್ಕೆ ಹತ್ತು ಸರಿ ಉತ್ತರ ಕೊಡಬಹುದು. ಆಗ ಈ ರೀತಿ ಎಲ್ಲಕ್ಕೂ ಸರಿ ಉತ್ತರ ಕೊಟ್ಟವರು ಎಷ್ಟು ಮಂದಿಯಾದರೂ ಅವರೆಲ್ಲರೂ ಗೆದ್ದಂತೆ! 

ನಮ್ಮ ಚಿಕ್ಕ ವಯಸ್ಸಿನಲ್ಲಿ ಶಾಲೆಗಳಲ್ಲಿ ಓಟದ ಸ್ಪರ್ಧೆಗಳು ಇರುತ್ತಿದ್ದವು. ಬೇಗ ಓಡಿ ಮೊದಲು ಗುರಿ ಮುಟ್ಟಿದವರಿಗೆ ಬಹುಮಾನಗಳು ಸಿಗುತ್ತಿದ್ದವು. ಆದರೆ ನಿಧಾನವಾಗಿ ಸೈಕಲ್ ನಡೆಸುವ ಪಂದ್ಯ ಕೂಡ ಇರುತ್ತಿತ್ತು. ಇದಕ್ಕೆ ಸ್ಲೋ ಸೈಕಲ್ ರೇಸ್ ಅನ್ನುತ್ತಿದ್ದರು. (ಈಗಲೂ ಈ ರೀತಿ ಪಂದ್ಯಗಳಿರಬಹುದು) ಈ ಪಂದ್ಯದಲ್ಲಿ ಯಾರು ಅತಿ ನಿಧಾನವಾಗಿ ಸೈಕಲ್ ಚಲಿಸಿ ಕಡೆಯಲ್ಲಿ ಗೆರೆ ದಾಟುವರೋ ಅವರಿಗೆ ಬಹುಮಾನ! ಇಲ್ಲಿ ವೇಗಕ್ಕಿಂತ ಸಮತೋಲನ (ಬ್ಯಾಲನ್ಸ್) ಮತ್ತು ಸಹಿಷ್ಣುತೆ (ಎಂಡ್ಯೂರನ್ಸ್) ಮುಖ್ಯ. ಇದೇನು ಸುಲಭದ ಕೆಲಸವಲ್ಲ. ಈ ಪಂದ್ಯಕ್ಕೇ ತಯಾರಿ ನಡೆಸಿ ಬಹುಮಾನ ಗಿಟ್ಟಿಸುತ್ತಿದ್ದ ಸ್ಪರ್ಧಿಗಳೂ ಇರುತ್ತಿದ್ದರು.
*****

ಪಂದ್ಯಗಳಲ್ಲಿ ಹೀಗಿದ್ದರೆ ಜೀವನ ಯಾತ್ರೆಯಲ್ಲಿ ಹೇಗೆ? ಇದೇ ತತ್ವವನ್ನು ಜೀವನಕ್ಕೂ ವಿಸ್ತರಿಸಬಹುದೇ? ಅವಶ್ಯವಾಗಿ ವಿಸ್ತರಿಸಬಹುದು. ಜೀವನವೂ ಒಂದು ರೀತಿಯ ಓಟದ ಸ್ಪರ್ಧೆ ತಾನೆ? ಇಲ್ಲಿಯೂ ದೂರ ಮತ್ತು ಸಮಯದ ಎರಡು ಲೆಕ್ಕಗಳು. ಎಷ್ಟು ಸಮಯದಲ್ಲಿ ಕೊಟ್ಟ ದೂರ ಸಾಗುತ್ತಾರೆ ಎನ್ನುವುದು. ಹಾಗಿದ್ದರೆ, ಇದರ ವಿಚಾರ ಸ್ವಲ್ಪ ನೋಡೋಣ. 

ಯಾರಾದರೂ ದೊಡ್ಡವರಿಗೆ ನಮಸ್ಕಾರ ಮಾಡಿದರೆ ಆಶೀರ್ವಾದ ಮಾಡುತ್ತಾರೆ. "ಧೀರ್ಘಾಯುಷ್ಮಾನ್ ಭವ" ಅಂದರೆ "ದೀರ್ಘಾಯುಸ್ಸು ಹೊಂದು" ಎನ್ನುವುದು ಅನೇಕ ಬಾರಿ ಕೇಳುವ ಆಶೀರ್ವಾದ. ವೈದಿಕ ಸಂಪ್ರದಾಯದಲ್ಲಿ "ಶತಮಾನಂ ಭವತಿ ಪುರುಷಃ" ಎನ್ನುತ್ತಾರೆ. "ನೂರು ವರ್ಷ ಬಾಳು" ಎಂದು. ಯಾವ ನೂರು ವರ್ಷ? ಇದೇನು ಪ್ರಶ್ನೆ ಎನ್ನಬಹುದು. ನಾವು ಸಾಮಾನ್ಯವಾಗಿ ಲೆಕ್ಕಕ್ಕೆ ತೆಗೆದುಕೊಳ್ಳುವುದು ಒಂದೇ ಕಾಲ. ಅದು ಬಾಹ್ಯ ಅಂದರೆ ಹೊರಗಿನ ಕಾಲ. ಅದನ್ನು ಅಳೆಯುವುದು ಸೆಕೆಂಡು, ನಿಮಿಷ, ಗಂಟೆ, ದಿನ ಮತ್ತು ವರ್ಷಗಳ ಲೆಕ್ಕದಲ್ಲಿ. ಇದರ ಲೆಕ್ಕದಲ್ಲಿ ನೂರು ವರುಷ ಬಾಳು ಎಂದು. ನೂರೇ ಏಕೆ? ಸಾವಿರ ಏಕೆ ಆಗಬಾರದು? ಅದು ಸಾಧ್ಯವಿಲ್ಲ. ಭೌತಿಕ ದೇಹಕ್ಕೆ ಅದರದೇ ಆದ ಇತಿ-ಮಿತಿಗಳಿವೆ. ಸುಮ್ಮನೆ ಸಾವಿರ ವರುಷ ಬಾಳು ಎಂದರೆ ಅರ್ಥವಿಲ್ಲ. ಹೇಳಿದ ಮಾತಿಗೆ ಒಂದು ಬೆಲೆ, ತೂಕ ಬೇಕು. ಈ ದೇಹಕ್ಕೆ ನೂರು ವರುಷ ಬದುಕಲು ಸಾಧ್ಯ. ಆದ್ದರಿಂದ "ನೂರು ವರುಷ ಬಾಳು" ಎಂದು ಆಶೀರ್ವಾದ.

ಈ ದೇಹಕ್ಕೆ ಹೊರಗಿನ ಕಾಲದಂತೆ ಒಂದು ಒಳಗಿನ ಕಾಲವೂ ಇದೆ! ಅದು ಹೇಗೆ? ಕೆಲವರು ಚಿಕ್ಕ ವಯಸ್ಸಿಗೇ ಮುದುಕರಂತೆ ಕಾಣುತ್ತಾರೆ. ಇನ್ನು ಕೆಲವರು ತುಂಬಾ ವಯಸ್ಸಾದರೂ ಯುವಕರಂತೆ ಕಾಣುತ್ತಾರೆ. ಅದು ಹೇಗೆ? ಇಬ್ಬರು ಒಂದೇ ದಿನ, ಐವತ್ತು ವರುಷದ ಹಿಂದೆ ಹುಟ್ಟಿದವರು. ಇಬ್ಬರಿಗೂ ಹೊರಗಿನ ಕಾಲದಲ್ಲಿ ಈಗ ಐವತ್ತು ವರುಷ ವಯಸ್ಸು. ಆದರೆ ಒಬ್ಬ ಅರವತ್ತೈದು ವಯಸ್ಸಿನವನಂತೆ ಕಾಣುತ್ತಾನೆ. ಇನ್ನೊಬ್ಬ ಮೂವತ್ತೈದು ವಯಸ್ಸಿನವಂತಿದ್ದಾನೆ. ಇದಕ್ಕೆ ಕಾರಣ ದೇಹದ ಒಳಗಿನ ವಯಸ್ಸು. ಮಕ್ಕಳಲ್ಲಿ "ಬೆಳವಣಿಗೆಯ ಬಿರುಸು" (ಗ್ರೋತ್ ಸ್ಪರ್ಟ್) ಇದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. "ಎಲಾ ಇವನೇ! ಒಂದು ವರುಷದಲ್ಲಿ ಎಷ್ಟು ಬೆಳೆದಿದ್ದಾನೆ!" ಎನ್ನುತ್ತೇವೆ. ಹಾಗೆಯೇ ವಯಸ್ಕರಲ್ಲಿ "ವೃದ್ಧಾಪ್ಯದ ಬಿರುಸು" ಉಂಟಂತೆ. (ಇದರ ಬಗ್ಗೆ ಇನ್ನೊಂದು ಸಂಚಿಕೆಯಲ್ಲಿ ನೋಡೋಣ). "ಏನಿದು? ಒಂದು ವರುಷದಲ್ಲಿ ಎಷ್ಟು ಕುಗ್ಗಿಹೋಗಿದ್ಧಾರೆ!" ಅನ್ನುತ್ತೇವೆ. ಅಂದರೆ ಹೊರಗಿನ ವಯಸ್ಸಿನ ಹಾಗೆ (ಬಾಹ್ಯ ವಯಸ್ಸು) ದೇಹದಲ್ಲಿ ಸಹ (ಆಂತರಿಕ ವಯಸ್ಸು) ಒಂದು ಗಡಿಯಾರ ಇದೆ ಎಂದಾಯಿತು.   

ಹಾಗಿದ್ದಲ್ಲಿ ಈ ಬಾಹ್ಯ ವಯಸ್ಸು ಮತ್ತು ಆಂತರಿಕ ವಯಸ್ಸಿನ ಸಮನ್ವಯ ಅಥವಾ ಹೊಂದಾಣಿಕೆ ಹೇಗೆ? ಇದಕ್ಕೆ ನಮ್ಮ ಹಿರಿಯರು ಸೊಗಸಾಗಿ ತಾಳೆ (ಮ್ಯಾಚಿಂಗ್) ಹಾಕುವ ವಿಧಿ ಹೇಳಿಕೊಟ್ಟಿದ್ದಾರೆ. 

*****

ಏನೂ ಕೆಲಸ ಮಾಡದೇ ಒಂದು ಕಡೆ ಸುಮ್ಮನೆ ಕುಳಿತುಕೊಳ್ಳಿ. ನಿಮ್ಮ ಉಸಿರಾಟದ ಮೇಲೆ ಗಮನವಿಡಿ. ಒಂದು ಸಲ ಶ್ವಾಸದಲ್ಲಿ ಗಾಳಿ ಒಳಗೆ ತಗೆದುಕೊಂಡು ಹೊರಗೆ ಬಿಡಿ. ಸಮಯ ನೋಡಿ. ಸರಿಯಾಗಿ ಉಸಿರು ತೆಗೆದುಕೊಳ್ಳಲು ಎರಡು ಸೆಕೆಂಡ್ ಸಮಯ ಬೇಕು. ಹಾಗೆ, ಪೂರ್ತಿ ಗಾಳಿ ಹೊರಬಿಡಲು ಮತ್ತೆರಡು ಸೆಕೆಂಡ್ ಬೇಕು. ಅಂದರೆ ಒಂದು ಸಾರಿ ಉಸಿರಾಡಲು ನಾಲ್ಕು ಸೆಕೆಂಡ್ ಬೇಕು. 

  • ಉಸಿರು ಒಳಗಡೆ ತೆಗೆದುಕೊಳ್ಳಲು ಎರಡು ಸೆಕೆಂಡುಗಳು. 
  • ಉಸಿರು ಬಿಡಲು ಎರಡು ಸೆಕೆಂಡುಗಳು. 
  • ಒಂದು ಸಲ ಉಸಿರಾಡಲು (ಒಂದು ಶ್ವಾಸ) ನಾಲ್ಕು (4) ಸೆಕೆಂಡುಗಳು. 
  • ಅಂದರೆ, ಒಂದು ನಿಮಿಷಕ್ಕೆ (ಅರವತ್ತು ಸೆಕೆಂಡುಗಳು) ಹದಿನೈದು (15) ಶ್ವಾಸಗಳು. 
  • ಒಂದು ಗಂಟೆಗೆ (60x15) 900 ಶ್ವಾಸಗಳು. 
  • ಒಂದು ದಿನಕ್ಕೆ (24 ಗಂಟೆಗಳು) (900x24) 21,600 ಶ್ವಾಸಗಳು. 
  • ಒಂದು ವರುಷಕ್ಕೆ (360 ದಿನ ಸರಾಸರಿ) (21,600 x 360) 77, 76,000 ಶ್ವಾಸಗಳು. 
  • ನೂರು ವರುಷಕ್ಕೆ (77,76,000 x 100) 77,76,00,000 ಶ್ವಾಸಗಳು! 

ವೈದಿಕ ಕಾಲದಲ್ಲಿ ಲೆಕ್ಕ ಹಾಕುವಾಗ ಚಾಂದ್ರಮಾನ, ಸೌರಮಾನ ವರುಷಗಳ ಪದ್ಧತಿ ಇದೆ. ಎರಡರಲ್ಲಿ ಸ್ವಲ್ಪ ವ್ಯತ್ಯಾಸ  ಉಂಟು. ಆದ ಕಾರಣ ಒಂದು ಸ್ಥೂಲ ಲೆಕ್ಕವಾಗಿ 360 ದಿನಕ್ಕೆ ಒಂದು ವರುಷ. (ಈಗಲೂ ಕೆಲವು ಅನಿವಾಸಿ ಠೇವಣಿಗಳಿಗೆ ಬ್ಯಾಂಕಿನವರು ಬಡ್ಡಿ ಕೊಡುವಾಗ ವರುಷಕ್ಕೆ 360 ದಿನವೆಂದೇ ಲೆಕ್ಕಹಾಕುತ್ತಾರೆ!). 

ಮೇಲಿನ ಸೂತ್ರದಂತೆ ದೇಹದ ಒಳಗಿನ ಲೆಕ್ಕದ ಎಪ್ಪತ್ತೇಳು ಕೋಟಿ ಎಪ್ಪತ್ತಾರು ಲಕ್ಷ ಸಂಖ್ಯೆಯ ಶ್ವಾಸದ ಸಮಯ ಹೊರಗಿನ ಒಂದು ನೂರು ವರುಷಕ್ಕೆ ಸಮವಾಯಿತು. "ನೂರು ವರುಷ ಬಾಳು ಅಂದರೆ ಎಪ್ಪತ್ತೇಳು ಕೋಟಿ ಎಪ್ಪತ್ತಾರು ಲಕ್ಷ ಸಲ ಶ್ವಾಸ ತೆಗೆದು ಕೊಳ್ಳುವ ಕಾಲದವರೆಗೆ ಬದುಕು" ಎಂದ ಹಾಗೆ. 

*****

ಮಹಾಪಂಡಿತ ಕವಿಗಳಾದ ಶ್ರೀನಿವಾಸಾಚಾರ್ಯರು (ಶ್ರೀ ಜಗನ್ನಾಥ ದಾಸರೆಂದು ಪ್ರಸಿದ್ದರಾದವರು) ತಮ್ಮ "ಹರಿಕಥಾಮೃತಸಾರ" ಎಂಬ ಮೇರು ಕೃತಿಯಲ್ಲಿ "ಮಂಗಳಾಚರಣ ಸಂಧಿ" ನಾಲ್ಕನೆಯ ಪದ್ಯದಲ್ಲಿ ಶ್ವಾಸಕ್ರಿಯೆಯ ಮೂಲ ದೇವತೆಯಾದ ಮುಖ್ಯಪ್ರಾಣ ದೇವರನ್ನು ಕುರಿತಾಗಿ ಪ್ರಾರ್ಥಿಸುವಾಗ ಈ ಮೇಲಿನ ಲೆಕ್ಕವನ್ನು ಸೂತ್ರ ರೂಪದಲ್ಲಿ ಹೀಗೆ ಕೊಟ್ಟಿದ್ದಾರೆ: 

ಆರು ಮೂರೆರಡೊಂದು ಸಾವಿರ 
ಮೂರೆರಡು ಶತ ಶ್ವಾಸಜಪಗಳ 
ಮೂರುವಿಧ ಜೀವರೊಳಗಬ್ಜಜಕಲ್ಪ ಪರ್ಯಂತ 
ತಾರಚಿಸಿ ಸಾತ್ವರಿಗೆ ಸುಖ ಸಂಸಾರ
ಮಿಶ್ರರಿಗೆ ಅಧಮ ಜನರಿಗಪಾರ 
ದುಃಖಗಳೀವ ಗುರು ಪವಮಾನ ಸಲಹೆಮ್ಮ 

ಈ ಸೂತ್ರದಲ್ಲಿ ಸ್ವಲ್ಪ ಒಗಟಿದೆ. ಮೊದಲ ಸಾಲಿನಲ್ಲಿ ಆರು ಮೂರು ಎನ್ನುವುದನ್ನು ಗುಣಿಸಬೇಕು. ಆಗ ಹದಿನೆಂಟು ಬರುತ್ತದೆ. ಎರಡೊಂದು ಎನ್ನುವುದನ್ನು ಕೂಡಬೇಕು. ಆಗ ಮೂರು ಸಿಗುತ್ತದೆ. ಹದಿನೆಂಟು + ಮೂರು = ಇಪ್ಪತ್ತೊಂದು ಸಾವಿರ ಆಯಿತು. ಎರಡನೆಯ ಸಾಲಿನ ಮೂರೆರಡು ಅನ್ನುವಲ್ಲಿ ಮೂರನ್ನು ಎರಡರಿಂದ ಗುಣಿಸಬೇಕು. ಆಗ ಆರು ನೂರು ಬಂತು. ಒಟ್ಟು ಇಪ್ಪತ್ತೊಂದು ಸಾವಿರದ ಆರು ನೂರು ಆಯಿತು!

ಈ ಪದ್ಯದಲ್ಲಿ ಇನ್ನೊಂದು ವಿಶೇಷವಿದೆ. ಇದು "ಭಾಮಿನಿ ಷಟ್ಪದಿ" ಪದ್ಯ. ಭಾಮಿನಿ ಷಟ್ಪದಿಯಲ್ಲಿ ಒಟ್ಟು ಆರು ಸಾಲುಗಳು. ಮೊದಲ ಸಾಲಿನಲ್ಲಿ ಏಳು ಮತ್ತು ಏಳು ಒಟ್ಟು ಹದಿನಾಲ್ಕು ಮಾತ್ರೆಗಳು. ಎರಡನೆಯ ಸಾಲಿನಲ್ಲಿಯೂ ಹೀಗೆ ಹದಿನಾಲ್ಕು ಮಾತ್ರೆಗಳು. ಮೂರನೆಯ ಸಾಲಿನಲ್ಲಿ ಏಳು, ಏಳು ಮತ್ತು ಎಂಟು ಮಾತ್ರೆಗಳು. ಅಂದರೆ ಇಪ್ಪತ್ತೆರಡು ಮಾತ್ರೆಗಳು. ಮೂರು ಸಾಲು ಸೇರಿದರೆ ಐವತ್ತು ಮಾತ್ರೆಗಳು. ನಾಲ್ಕು, ಐದು ಮತ್ತು ಆರನೆಯ ಸಾಲಿನಲ್ಲಿ ಹೀಗೆಯೇ ಮತ್ತೆ ಐವತ್ತು ಮಾತ್ರೆಗಳು. ಒಟ್ಟಿನಲ್ಲಿ ಎಲ್ಲ ಸೇರಿ ನೂರು ಮಾತ್ರೆಗಳು! ನೂರು ವರುಷದ ಲೆಕ್ಕಕ್ಕೆ ನೂರು ಮಾತ್ರೆಗಳ ಛಂದಸ್ಸು! ಆದಕಾರಣ ಹೀಗೆ ಗುಣಿಸುವ ಮತ್ತು ಕೂಡುವ ಲೆಕ್ಕದ ಒಗಟಿನ ಸೂತ್ರ ಕೊಟ್ಟಿದ್ದಾರೆ.

ಭಾರತೀಯ ತತ್ವಶಾಸ್ತ್ರದಲ್ಲಿ "ಸಂಖ್ಯಾ ಶಾಸ್ತ್ರ" ಬಹಳ ಮಹತ್ವದ್ದು. ಕೆಲವು ವಿಷಯಗಳು ಸುಲಭವಾಗಿ ಅರ್ಥ ಆಗುವುದಿಲ್ಲ. ಬಹುಶ್ರುತ ವಿದ್ವಾಂಸರಾದ ಕೀರ್ತಿಶೇಷ ಬನ್ನಂಜೆ ಗೋವಿಂದಾಚಾರ್ಯರು ಇಂತಹ ವಿಷಯಗಳನ್ನು ವಿವರಿಸುವುದರಲ್ಲಿ ಎತ್ತಿದ ಕೈ ಆಗಿದ್ದರು. ಅವರನ್ನು ಇಂತಹ ಸಂದರ್ಭಗಳಲ್ಲಿ ಖಂಡಿತ ನೆನೆಯಬೇಕು. 

***** 

ಮನುಷ್ಯನು ದೇಹದ ಒಳಗಿನ ಲೆಕ್ಕದಲ್ಲಿ ಒಟ್ಟು 77,76,00,000 ಬಾರಿ ಉಸಿರಾಡಿದರೆ ನೂರು ವರುಷ ಆಗುತ್ತದೆ. ಪ್ರಾಣಾಯಾಮಾದಿಗಳನ್ನು ಅಭ್ಯಾಸ ಮಾಡಿ ಶ್ವಾಸದ ಮೇಲೆ ಹಿಡಿತ ಸಾಧಿಸಿದರೆ, ಉಸಿರು ಬಿಗಿ ಹಿಡಿದು ಎಂಟು ಸೆಕೆಂಡಿಗೆ ಒಂದರಂತೆ ಉಸಿರಾಡಿದರೆ ಹೊರಗಿನ ಕಾಲ ಎರಡು ನೂರು ವರುಷ ಬದುಕಬಹುದು! ಸ್ಲೋ ಸೈಕಲ್ ರೇಸಿನಂತೆ.  ಅದೇ ರೀತಿ ಆರು ಸೆಕೆಂಡಿಗೆ ಒಮ್ಮೆ ಉಸಿರಾಡಿದರೆ ನೂರೈವತ್ತು ವರ್ಷ. ಮೂರು ಸೆಕೆಂಡಿಗೊಮ್ಮೆ ಆದರೆ, ಏದುಸಿರು ಬಿಟ್ಟರೆ ಎಪ್ಪತ್ತೈದೇ ವರ್ಷ. ಹೀಗೆಯೇ ಲೆಕ್ಕ. 

ಮೇಲಿನ ಪದ್ಯದಲ್ಲಿ ಶ್ವಾಸಜಪದ ಬಗ್ಗೆ ಹೇಳಿದ್ದಾರೆ. ಮೂರುವಿಧ ಜೀವರು ಎಂದಿದ್ದಾರೆ. 

ಇವುಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ವಿವರವಾಗಿ ನೋಡೋಣ.