Showing posts with label santana. Show all posts
Showing posts with label santana. Show all posts

Tuesday, March 11, 2025

ದ್ವಿತೀಯ ವಿವಾಹ ಮತ್ತು ಮರು ಮದುವೆಗಳು


ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಲು ಮಳೆಯ ಬರುವಿಕೆಯನ್ನು ಖಚಿತವಾಗಿ ತಿಳಿಯಲು ವಾದ್ಯಾರ್ ಬಳಿ ಬಂದ ರೈತ ಪ್ರತಿನಿಧಿ ಮತ್ತು ವಾದ್ಯಾರ್ ನಡುವೆ ನಡೆದ ಸಂಭಾಷಣೆ ಮತ್ತು ಅದರಿಂದ ನಾವು ತಿಳಿಯಬೇಕಾದ ಪಾಠಗಳನ್ನೊಳಗೊಂಡ "ಶ್ರದ್ದೆ ಮತ್ತು ನಂಬಿಕೆ" ಎನ್ನುವ ಶೀರ್ಷಿಕೆಯ ಸಂಚಿಕೆಯು ಓದುಗರ ಬಹಳ ಆಸಕ್ತಿಯ ಪ್ರತಿಕ್ರಿಯೆಗಳನ್ನು ತಂದಿತು. (ಇದನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ.)

ಆ ಸಂಚಿಕೆಯ ಪ್ರತಿಕ್ರಿಯೆಗಳಲ್ಲಿ "ಜನಿವಾರ ಮತ್ತು ನೀರು ಸೇದುವ ಹಗ್ಗ" ಇವುಗಳ ಹೋಲಿಕೆ ಬಗ್ಗೆ ಹೆಚ್ಚಿನ ವಿವರಣೆ ಕೊಟ್ಟ "ಬ್ರಹ್ಮಚಾರಿ, ಗೃಹಸ್ಥ ಮತ್ತು ಸನ್ಯಾಸಿ" ಎಂಬ ಶೀರ್ಷಿಕೆಯ ಸಂಚಿಕೆ ಮತ್ತೂ ಹೆಚ್ಚಿನ ಪ್ರತಿಕ್ರಿಯೆಗಳನ್ನು ತಂದಿತು. (ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.) 

ಎರಡನೇ ಮದುವೆಯಲ್ಲಿ "ಕಾಶಿಯಾತ್ರೆ" ಇರುವುದಿಲ್ಲ ಎನ್ನುವ ವಿಷಯದಲ್ಲಿ ಅನೇಕ ಓದುಗರಿಂದ ಪ್ರಶ್ನೆಗಳು ಮತ್ತು ಹೆಚ್ಚಿನ ವಿವರಣೆಗೆ ಬೇಡಿಕೆ ಬಂದಿದೆ. ಈ ಹಿನ್ನೆಲಿಯಲ್ಲಿ ಎರಡನೆಯ ವಿವಾಹ, ಮರು ಮದುವೆಗಳು ಮತ್ತು ಇವಕ್ಕೆ ಸಂಬಂಧಿಸಿದಂತಹ ವಿಷಯಗಳ ಬಗ್ಗೆ ಸ್ವಲ್ಪ ಚರ್ಚೆ ಮಾಡೋಣ. 

*****

ಎರಡನೇ ವಿವಾಹ ಮತ್ತು ಮರು ಮದುವೆಗಳ ಕುರಿತು ವಿಚಾರ ಮಾಡುವ ಮೊದಲು "ವಿವಾಹದ ಅವಶ್ಯಕತೆ" ಬಗ್ಗೆ ಮೊದಲು ಯೋಚಿಸಬೇಕು. ವಿವಾಹ ಏಕೆ? ಈ ವ್ಯವಸ್ಥೆ ಇಲ್ಲದಿದ್ದರೆ ಸಮಾಜದಲ್ಲಿ ಹೇಗೆ ಅವ್ಯವಸ್ಥೆ ಇರುತ್ತಿತ್ತು ಎನ್ನುವುದು ಬಹಳ ಕುತೂಹಲಕಾರಿ ವಿಷಯ. ವಿವಾಹ ಒಂದು ಸಾಮಾಜಿಕ ವ್ಯವಸ್ಥೆಯ ಕೂಸು. ಸೃಷ್ಟಿಯ ಒಡಲಿನಲ್ಲಿ ಗಂಡು ಹೆಣ್ಣು ಎಂಬ ಭೇದ ಹುಟ್ಟಿತು. ಏಕಕೋಶ ಜೀವಿಗಳಲ್ಲಿ (ಅಮೀಬಾ ಮುಂತಾದುವು) ಕೋಶಗಳೇ ವಿಭಜನೆಗೊಂಡು ಸೃಷ್ಟಿಯ ಸರಪಳಿ ಮುಂದುವರೆಯುತ್ತಿದೆ. ಪ್ರಾಣಿಗಳಲ್ಲಿ ವಿವಾಹ ಅನ್ನುವ ವ್ಯವಸ್ಥೆ ಇಲ್ಲ. ಸಂತಾನ ಉತ್ಪತ್ತಿ ಕಾಲದಲ್ಲಿ ಗಂಡು ಪ್ರಾಣಿ ಮತ್ತು ಹೆಣ್ಣು ಪ್ರಾಣಿ ಕೂಡಿಕೊಂಡು ಸೃಷ್ಟಿ ಮುಂದುವರೆಯುತ್ತದೆ. ಹುಟ್ಟಿದ ಮರಿಗಳು ತಕ್ಷಣ ತಮ್ಮ ತಮ್ಮ ಪಾಡಿಗೆ ಜೀವನ ನಡೆಸಲು ಶುರುಮಾಡುತ್ತವೆ. ಹಸು, ಕುದುರೆ, ಆನೆ ಮೊದಲಾದ ಪ್ರಾಣಿಗಳ ಕರುಗಳೂ ಹುಟ್ಟಿದ ಕೆಲವೇ ನಿಮಿಷಗಳಲ್ಲಿ ತಮ್ಮ ಕಾಲ ಮೇಲೆ ತಾವು ನಿಲ್ಲುತ್ತವೆ. ಮುಂದೆ ಸ್ವಲ್ಪ ದಿನ ತಾಯಿಯ ಜೊತೆ ಮರಿಗಳಿದ್ದರೂ ಮನುಷ್ಯರಂತೆ ಹುಟ್ಟಿದ ಮಕ್ಕಳ ಲಾಲನೆ-ಪಾಲನೆ ಅನೇಕ ವರುಷ ನಡೆಯಬೇಕಾದ್ದಿಲ್ಲ. ಪ್ರಾಣಿಗಳಲ್ಲಿ ತಂದೆಯ ಪಾತ್ರ ಮಹತ್ವದ್ದಿಲ್ಲ. 

ಮನುಷ್ಯರಲ್ಲಿ ಹಾಗಿಲ್ಲ. ಹುಟ್ಟಿದ ಕೂಸು ತನ್ನನ್ನು ತಾನು ನೋಡಿಕೊಳ್ಳಬೇಕಾದರೆ ಕೆಲವು ವರ್ಷಗಳೇ ಬೇಕು. ಮಾನಸಿಕ ಮತ್ತು ಬೌದ್ಧಿಕ ವಿಕಾಸ ಬೇರೆ ಪ್ರಾಣಿಗಳಿಗಿಂತ ಹೆಚ್ಚಾಗಿ ಆಗಬೇಕಾದುದರಿಂದ ತಾಯಿಯ ಪಾತ್ರ ದೊಡ್ಡದು. ಸಮಾಜ ವಿಕಸಿತವಾದಂತೆ ಒಂದು ಗಂಡು ಮತ್ತು ಒಂದು ಹೆಣ್ಣು ನಿರ್ದಿಷ್ಟವಾಗಿ ಜೊತೆಯಾಗಿ ಬದುಕುವ ವ್ಯವಸ್ಥೆ ಬಂತು. ಇಂತಹ ವ್ಯವಸ್ಥೆ ಇಲ್ಲದಿದ್ದರೆ ಸಾಮಾಜಿಕ ವಿಪ್ಲವ, ಅಶಾಂತಿ ಆಗುತ್ತದೆ. ಆದ್ದರಿಂದ ವಿವಾಹವು ಕ್ರಮವಾದ ಸಂತಾನೋತ್ಪತ್ತಿ ಮತ್ತು ನಿಖರವಾದ ಸಾಮಾಜಿಕ ವ್ಯವಸ್ಥೆಗೆ ಒಂದು ಭದ್ರವಾದ ತಳಹದಿ ಕೊಟ್ಟಿದೆ. ಬೇರೆ ಪ್ರಾಣಿಗಳಲ್ಲಿ ನನ್ನದು, ನನ್ನ ಅಸ್ತಿ, ನನ್ನ ಕುಟುಂಬ ಇತ್ಯಾದಿ ಸಂಬಂಧಗಳೇ ಇಲ್ಲ. ಮನುಷ್ಯರಲ್ಲಿ ಇವೆಲ್ಲವೂ ಇರುವುದರಿಂದ ಮೊದಲು ಸಮಾಜದಲ್ಲಿ ವ್ಯವಸ್ಥಿತವಾದ ಬದುಕು, ನಂತರ ಸಂತಾನೋತ್ಪತ್ತಿ, ಮುಂದೆ ಸಂಪತ್ತಿನ ಬೆಳವಣಿಗೆ-ರಕ್ಷಣೆ ಇತ್ಯಾದಿ ಕಾರಣಗಳಿಂದ ಮದುವೆ ಮುಖ್ಯವಾಗುತ್ತದೆ. ಸಮಾಜದಲ್ಲಿ ಕಾನೂನು-ಸುವ್ಯವಸ್ಥೆ ಕಟ್ಟುಪಾಡುಗಳು ಬೆಳೆದಂತೆ ಮತ್ತು ಬಿಗಿಯಾದಂತೆ ಮದುವೆಯು ಇನ್ನೂ ಪ್ರಾಮುಖ್ಯತೆ ಪಡೆಯುತ್ತಾ ಹೋಯಿತು. 

ಕಳೆದ ಒಂದೆರಡು ದಶಕಗಲ್ಲಿ ವಿವಾಹೇತರ ಸಹಜೀವನ (ಲಿವಿಂಗ್ ಟುಗೆದರ್) ಯುವಜನಾಂಗಕ್ಕೆ ಹೆಚ್ಚು ಹೆಚ್ಚು ಪ್ರಿಯವಾಗಿದೆ. ಡಜನ್ ಲೆಕ್ಕದಲ್ಲಿ ಮಕ್ಕಳು ಪಡೆಯುವುದು ಬದಲಾಗಿ, "ಎರಡು ಬೇಕು, ಮೂರು ಸಾಕು"  ದಾಟಿ, "ಆರತಿಗೊಂದು, ಕೀರುತಿಗೊಂದು" ಹಾದು, "ಒಂದೇ ಮುತ್ತು ಸಾಕು" ಕೂಡ ಬಿಟ್ಟು ಈಗ ಮಕ್ಕಳೇ ಬೇಡ ಅನ್ನುವ ಪರಿಸ್ಥಿತಿ ಬಂದಿದೆ. ಕೆಲವೆಡೆ ಇದನ್ನೂ ದಾಟಿ "ಮದುವೆಯೇ ಬೇಡ" ಅನ್ನುವುದೂ ಬಂದಿದೆ. ಇದು ಸರಿ ಅಥವಾ ತಪ್ಪಿನ ಪ್ರಶ್ನೆ ಅಲ್ಲ. "ಅವರವ ಜೀವನ ಅವರವರಿಗೆ" ಎಂದು ಸಮಾಜ ಒಪ್ಪಿಕೊಂಡ ಮೇಲೆ ಮುಗಿಯಿತು. ಸಂಬಂಧಪಟ್ಟವರ ಇಷ್ಟ. ಆದರೆ ಈ ವ್ಯವಸ್ಥೆಯಲ್ಲೂ ಹೊಸ ಹೊಸ ಸಮಸ್ಯೆಗಳು ಬರುತ್ತಿವೆ. ಹಿಂದೆ ಹಂತ ಹಂತವಾಗಿ ಆದಂತೆ ಈಗಲೂ ಒಂದು ಹೊಸ ಸಮತೋಲನ ಸ್ಥಿತಿಗೆ ಸಮಾಜ ಕಾಲಕ್ರಮದಲ್ಲಿ ತಲುಪುತ್ತದೆ. 

*****

ಬ್ರಹ್ಮಚರ್ಯ ಅಂದರೆ ಏನು? ಸಾಮಾನ್ಯವಾದ ಅಭಿಪ್ರಾಯದಲ್ಲಿರುವಂತೆ ಗಂಡು-ಹೆಣ್ಣು ಪರಸ್ಪರ ಕೊಡದೇ ಇರುವುದು ಮಾತ್ರವಲ್ಲ. ಪತಿ-ಪತ್ನಿಯರು ಅತಿಯಾದ ಭೋಗಲಾಲಸೆ ಇಲ್ಲದೆ ಕೇವಲ ಸತ್ಸಂತಾನ ಪಡೆಯುವ ಸಲುವಾಗಿ ದಾಂಪತ್ಯದಲ್ಲಿದ್ದರೆ ಅದೂ ಸಹ ಬ್ರಹ್ಮಚರ್ಯವೇ. ಇದು ಅನೇಕರಿಗೆ ಆಶ್ಚರ್ಯವಾಗುವ ಸಂದರ್ಭ ಉಂಟು. ಮಹಾಭಾರತದ ಪ್ರಸಂಗ ನೆನಪಿಸಿಕೊಳ್ಳಿ. ಅಶ್ವತ್ತಾಮರು ಬ್ರಹ್ಮಾಸ್ತ್ರ ಪ್ರಯೋಗಿಸಿದರು. ವಿಧಿಯಿಲ್ಲದೇ ಅರ್ಜುನನೂ ಬ್ರಹ್ಮಾಸ್ತ್ರ ಪ್ರಯೋಗಿಸಿದನು. ಎರಡು ಬ್ರಹ್ಮಾಸ್ತ್ರಗಳು ಸೃಷ್ಟಿಯನ್ನೇ ನುಂಗಲು ಹೋರಟವು. ಆಗ ಭಗವಾನ್ ವೇದವ್ಯಾಸರು ಮಧ್ಯೆ ನಿಂತು ಇಬ್ಬರಿಗೂ ಅಸ್ತ್ರವನ್ನು ಉಪಸಂಹಾರ (ಹಿಂಪಡೆಯುವುದು) ಮಾಡಲು ಹೇಳಿದರು. "ನಾನು ಬ್ರಹ್ಮಚರ್ಯ ಪಾಲನೆ ಮಾಡಿದ್ದರೆ ಅಸ್ತ್ರ ಶಾಂತವಾಗಲಿ" ಎಂದು ಹೇಳಿ ಅರ್ಜುನನು ಬ್ರಹ್ಮಾಸ್ತ್ರ ಹಿಂಪಡೆದನು. ಅಶ್ವತ್ತಾಮರಿಗೆ ಅಸ್ತ್ರ ಹಿಂಪಡೆಯಲು ಆಗಲಿಲ್ಲ. ವ್ಯಾಸರ ಆಣತಿಯಂತೆ ಆ ಅಸ್ತ್ರವನ್ನೂ ಅರ್ಜುನನೇ ಹಿಂಪಡೆದನು!

ದ್ರೌಪದಿಯಲ್ಲದೆ ಸುಭದ್ರೆ, ಉಲೂಪಿ, ಚಿತ್ರಾಂಗದೆ ಮುಂತಾದ ಪತ್ನಿಯರಿದ್ದರೂ ಅರ್ಜುನನು ಬ್ರಹ್ಮಚಾರಿ ಎನಿಸಿದನು. ವಿವಾಹವೇ ಇಲ್ಲದ ಅಶ್ವತ್ತಾಮಚಾರ್ಯರು "ದುರ್ಯೋಧನನ ಪತ್ನಿಯಲ್ಲಿ ಮಗನನ್ನು ಪಡೆದು ರಾಜ್ಯಕ್ಕೆ ವಾರಸುದಾರನನ್ನು ಕೊಡುತ್ತೇನೆ" ಎಂದು ದುರ್ಯೋಧನನಿಗೆ ಮಾತು ಕೊಟ್ಟು ಬ್ರಹ್ಮಚರ್ಯ ಕಳೆದುಕೊಂಡರು. ಊರ್ವಶಿಯಂತಹ ಅಪ್ಸರೆ ಎದುರು ನಿಂತರೂ ಅವಳಲ್ಲಿ ತಾಯಿಯನ್ನು ಕಂಡು ಅರ್ಜುನನು ಬ್ರಹ್ಮಚರ್ಯ ಉಳಿಸಿಕೊಂಡನು. ಹೀಗೆ ಬ್ರಹ್ಮಚರ್ಯದ ಅರ್ಥ ಬಹು ವಿಶಾಲವಾದದ್ದು. 

*****

ಮದುವೆಯಾದರೂ ಸತಿ-ಪತಿಯರು ಇಬ್ಬರು ವ್ಯಕ್ತಿಗಳೇ. ಅವರವರ ಆಯಸ್ಸು ಅವರವರಿಗೆ. ಒಬ್ಬರು ಇನ್ನೊಬ್ಬರ ಮುಂದೆ ಹೋಗಲೇಬೇಕಲ್ಲ. ಈ ಕಾರಣದಿಂದ ವಿಧವೆ ಮತ್ತು ವಿಧುರ ಎಂಬ ಪದಗಳು ಹುಟ್ಟಿದವು. ಪುರುಷಪ್ರಧಾನ ಸಮಾಜದಲ್ಲಿ ವಿಧವೆಯರಿಗೆ ಹೆಚ್ಚಿನ ಕಷ್ಟ ಬಂದಿತು. "ಸತಿ ಪದ್ಧತಿ" ಚಾಲ್ತಿಯಲ್ಲಿದ್ದಾಗ ಅನೇಕ ಹೆಣ್ಣು ಮಕ್ಕಳನ್ನು ಜೀವಂತ ಸುಡಲಾಯಿತು. ಒಂದು ಹಂತದಲ್ಲಿ ವಿಧವೆಯರಿಗೆ ತಲೆ ಬೋಳಿಸಿ, ತಣ್ಣೀರ ಸ್ನಾನ, ಒಂದು ಹೊತ್ತಿನ ಊಟ ಇತ್ಯಾದಿ ಕಟ್ಟುಪಾಡು ವಿಧಿಸಿದರು. ಈಗ ಈ ಪದ್ಧತಿಗಳಿಲ್ಲದಿದ್ದರೂ ವಿಧವೆಯರ ಜೀವನ ಕಷ್ಟವೇ. ಪುನರ್ವಿವಾಹಗಳು ಹೆಚ್ಚು ಚಾಲ್ತಿಯಲ್ಲಿ ಬಂದಿದ್ದರಿಂದ ಕಳೆದ ಎರಡು-ಮೂರು ದಶಕಗಳಿಂದ ಕೆಲಮಟ್ಟಿಗೆ ಈ ಸಮಸ್ಯೆಗೆ ಪರಿಹಾರ ಒದಗಿದೆ. 

ವಿಧುರರಿಗೆ ಯಾವುದೇ ಕಟ್ಟುಪಾಡುಗಳಿಲ್ಲ ಎಂದು ಬಹಳ ಮಂದಿ ನಂಬಿದ್ದಾರೆ. ವಾಸ್ತವವಾಗಿ ಅವರಿಗೂ ಕಟ್ಟುಪಾಡುಗಳಿದ್ದವು. ಹವನ-ಹೋಮ-ಯಾಗಾದಿಗಳು ಹೆಂಡತಿಯಿಲ್ಲದವರು ಮಾಡುವಂತಿಲ್ಲ. ಶ್ರೀರಾಮನು ಅಶ್ವಮೇಧ ಮಾಡುವಾಗ ಹೆಂಡತಿ ಹತ್ತಿರದಲ್ಲಿ ಇಲ್ಲದ್ದರಿಂದ ಸೀತಾದೇವಿಯ ಮೂರ್ತಿ ಪಕ್ಕದಲ್ಲಿಟ್ಟು ಯಾಗ ಮಾಡಿಸಿದರು ಎಂದು ಉತ್ತರ ರಾಮಾಯಣದಲ್ಲಿ ನೋಡಿದ್ದೇವೆ. ತಮ್ಮ ಸಾಧನೆಗಾಗಿ ದೇವತಾರ್ಚನೆ, ತಪ-ಜಪ ಮಾತ್ರ ಮಾಡಲು ಅವರಿಗೆ ಅಧಿಕಾರವಿರುತ್ತದೆ. ಹಿಂದೆ ಅನೇಕರು "ಸ್ತ್ರೀಪಾಕ ನೇಮ", "ಸ್ವಪಾಕ ನೇಮ" ಇತ್ಯಾದಿ ವ್ರತಗಳನ್ನು ಹಿಡಿದು ತಾವೇ ಅಡಿಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ವಿಧುರರಿಗೆ ಶ್ರಾದ್ಧಾದಿಗಳಿಗೆ ಆಹ್ವಾನ ಇರುತ್ತಿರಲಿಲ್ಲ. ಸಮಾರಂಭಗಳಲ್ಲಿ ಅವರಿಗೆ ಪಾದಪೂಜೆ ಮಾಡಬೇಕಾದರೂ, ಅವರು ಎಷ್ಟೇ ಹಿರಿಯರಿದ್ದಾಗಲೂ, ಮೊದಲು ಬೇರೊಂದು ದಂಪತಿ ಪೂಜೆ ಮಾಡಿ ನಂತರ ಅವರಿಗೆ ಪಾದಪೂಜೆ ಮಾಡುತ್ತಿದ್ದರು. ಇದು ಸಾಮಾನ್ಯವಾಗಿ ಇಂದಿಗೂ ಮುಂದುವರಿದಿದೆ. ಆದರೂ ವಿಧವೆಯರಷ್ಟು ಕಷ್ಟ ಜೀವನ ಸಮಾಜ ವಿಧುರರಿಗೆ ಕೊಟ್ಟಿರಲಿಲ್ಲ. 

*****

ಹಿಂದಿನ ಶತಮಾನದಲ್ಲಿ ಅನೇಕ ವಿವಾಹಿತ ಸ್ತ್ರೀಯರು ಶಿಶು ಜನನ ಕಾಲದಲ್ಲಿ ಸಾವಿಗೀಡಾಗುತ್ತಿದ್ದರು. ಈಗಿನಂತೆ "ಸಿಸೇರಿಯನ್" ಹೆರಿಗೆಗಳು ಇರಲಿಲ್ಲವಾಗಿ ಗರ್ಭಕೋಶದಲ್ಲಿ ಮಗು ಅಡ್ಡಡ್ಡವಾದಾಗ ಹೆರಿಗೆ ಕಷ್ಟವಾಗಿ ಸಾವು ಸಂಭವಿಸುತ್ತಿತ್ತು. ಇಂತಹ ಸಂದರ್ಭಗಳಲ್ಲಿ ಅನೇಕ ಕುಟಿಂಬಗಳಲ್ಲಿ ಆಕೆಯ ತಂಗಿಯನ್ನೇ ಅಳಿಯನಿಗೆ ಕೊಟ್ಟು ಮದುವೆ ಮಾಡುವ ಪದ್ಧತಿ ನಡೆಯುತ್ತಿತ್ತು. ಆಗ ತಂದೆ-ತಾಯಿ ಹೇಳಿದಂತೆ ತಂಗಿಯರು ಭಾವನನ್ನೇ ಮಾಡುವೆ ಆಗುತ್ತಿದ್ದರು. ಬಹಳ ಚಿಕ್ಕ ವಯಸ್ಸಿನಲ್ಲಿ ಈರೀತಿ ಮದುವೆಗಳು ನಡೆಯುತ್ತಿದ್ದುದರಿಂದ ಅವರ ಇಷ್ಟಾನಿಷ್ಟಗಳಿಗೆ ಬೆಲೆಯಿರಲಿಲ್ಲ. ಪುರುಷರಿಗೆ ಸುಲಭವಾಗಿ ಮರು ಮದುವೆ ನಡೆಯುತ್ತಿತ್ತು. ಅಲ್ಲೊಂದು ಇಲ್ಲೊಂದು ವಿಧವಾವಿವಾಹ ನಡೆದರೂ ಅವು ಅತಿ ವಿರಳವಾಗಿದ್ದವು. ಈಗಿನಂತೆ ಕಾನೂನಿನ ಪ್ರಕಾರ ವಿಧವಾವಿವಾಹ ಸರಳವಾಗಿರಲಿಲ್ಲ. 

"ಸಮಾವರ್ತನ ಹೋಮ" ಮಾಡುವಾಗ ಜನಿವಾರ ಧರಿಸುವ ಪದ್ಧತಿ ಇದ್ದ ಕುಟುಂಬಗಳಲ್ಲಿ ಎರಡನೆಯ ಜನಿವಾರ ಹಾಕುತ್ತಿದ್ದರು. ಈಗ ಗುರುಕುಲ ಪದ್ಧತಿ ಇಲ್ಲದಿದ್ದುದರಿಂದ ಮದುವೆಯ ದಿನವೇ ಸಮಾವರ್ತನ ಮಾಡಿ ಎರಡನೆಯ ಜನಿವಾರ ಹಾಕುತ್ತಾರೆ. ಹೋಮ ಮಾಡಿ, ವಿದ್ಯೆ ಪೂರ್ತಿ ಆಗಿ, ಕಾಶಿಗೆ ಹೋಗುವ ದಾರಿಯಲ್ಲಿ ಮದುವೆ ಆಗುತ್ತಿದ್ದರು. ಡಿಗ್ರಿ ಪಡೆದವರೆಲ್ಲಾ ಕೆಲಸಕ್ಕೆ ಸೇರಬೇಕಾಗಿಲ್ಲ. ಸಮಾವರ್ತನ ಆದವರೆಲ್ಲ ವಿವಾಹವಾಗಬೇಕಿಲ್ಲ ಎಂದು ತಮಾಷೆಯಾಗಿ ಹೇಳಬಹುದು. ಒಟ್ಟಿನಲ್ಲಿ ಎರಡನೇ ಜನಿವಾರ ಗೃಹಸ್ಥಾಶ್ರಮ ಯೋಗ್ಯತೆ ಬರಲು ಎಂದು ಉಂಟು. 

*****

ಹಿಂದಿನ ಇತಿಹಾಸಗಳಲ್ಲಿ ರಾಜ-ಮಹಾರಾಜರು ಅನೇಕ ಮದುವೆಗಳಾಗುವುದು ಸರ್ವೇ ಸಾಮಾನ್ಯವಾಗಿತ್ತು. ಸಾಮ್ರಾಜ್ಯ ವಿಸ್ತಾರ ಮಾಡಲು, ಸಂಧಿಯ ಕರಾರಿನಂತೆ ಮತ್ತು ಸ್ನೇಹ ಹಸ್ತ ಚಾಚಲು ವಿವಾಹಗಳು ಒಂದು ರೀತಿಯ ಆಯುಧಗಳಾಗಿದ್ದುವು. ಪುರಾಣ-ಪುಣ್ಯಕಥೆಗಲ್ಲಿಯೂ ಅನೇಕ ಮರು ವಿವಾಹಗಳು ಕಂಡುಬಂದರೂ, ಸ್ತ್ರೀ ಮರು ವಿವಾಹ ಸಂದರ್ಭಗಳು ಅತಿ ವಿರಳ. ಮಲತಾಯಿ ಹಿಂಸಿಸಿದಳು ಎನ್ನುವುದು ಕೇಳಿ ಬರುತ್ತದೆಯೇ ವಿನಃ ಮಲ ತಂದೆ ಹಿಂಸಿಸಿದ ಎನ್ನುವುದು ಕಾಣದು. ಈಗಲೂ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಬಹುಪತಿತ್ವ (ಒಂದೇ ಹೆಣ್ಣು ಒಂದಕ್ಕಿಂತ ಹೆಚ್ಚು ಗಂಡುಗಳನ್ನು ಮದುವೆಯಾಗುವುದು, ಸಾಮಾನ್ಯವಾಗಿ ಅಣ್ಣ-ತಮ್ಮಂದಿರು) ಮತ್ತು ಚಿಕ್ಕ ವಯಸ್ಸಿನಲ್ಲಿ ಅಣ್ಣ ಸತ್ತ ಮೇಲೆ ಅತ್ತಿಗೆಯನ್ನು ತಮ್ಮ ಮದುವೆಯಾಗುವುದೂ ಉಂಟೆಂದು ಕೇಳಿಬರುತ್ತದೆ. 

ಎರಡನೆಯ ಮದುವೆಯಲ್ಲಿ ಕಾಶಿಯಾತ್ರೆ ಇಲ್ಲ ಎನ್ನುವುದು ಬಹಳ ಆಶ್ಚರ್ಯಕ್ಕೆ ಎಡೆ ಮಾಡಿಕೊಟ್ಟಿದೆ. ಸ್ನಾತಕನು ಕಾಶೀಯಾತ್ರೆಗೆ ಹೋಗುವಾಗ ಮದುವೆ ಆಗುವುದು ಸರಿ. ಒಮ್ಮೆ ಮದುವೆ ಆದಮೇಲೆ ಅವನು ಸ್ನಾತಕನಲ್ಲ. ವಿಧುರ. ಆದ್ದರಿಂದ ಮತ್ತೆ ಕಾಶಿಯಾತ್ರೆ ಇಲ್ಲ. ಅಷ್ಟೇ ಅಲ್ಲ. ಸಾಮಾನ್ಯವಾಗಿ ಇಂತಹ ವಿವಾಹಗಳಲ್ಲಿ ಮೊದಲ ಮದುವೆಯ ಆಡಂಬರ, ಸಂಭ್ರಮ, ಉತ್ಸಾಹಗಳೂ ಇರುವುದಿಲ್ಲ. ಹಿಂದೆಲ್ಲ ಎರಡನೇ ಮದುವೆಗೆ ಸಾಮಾನ್ಯವಾಗಿ ಬಡ ಹೆಣ್ಣುಮಕ್ಕಳು ಅಥವಾ ಮದುವೆ ವಯಸ್ಸು ದಾಟಿದ/ದಾಟುತ್ತಿರುವ (ಸಮಾಜದ ದೃಷ್ಟಿಯಲ್ಲಿ) ಹೆಣ್ಣುಮಕ್ಕಳು ಸಿಕ್ಕಿ ಬೀಳುತ್ತಿದ್ದರು. ಈಗ ಹಾಗೆ ಹೇಳುವಂತಿಲ್ಲ. ಪರಸ್ಪರ ಒಪ್ಪಿ ಇಂತಹ ವಿವಾಹ ನಡೆಯುವುದು ನಾವು ಕಾಣಬಹುದು. 

ಇಂದಿನ ಸಮಾಜದಲ್ಲಿ ವಿವಾಹದಿಂದ ವಿಚ್ಛೇದನ ಪಡೆದ ಗಂಡು ಹೆಣ್ಣುಗಳು ಮದುವೆ ಆಗುವುದು ನೋಡಬಹುದು. ಹಿಂದೆಲ್ಲ ವಿಚ್ಛೇದನ ಅನ್ನುವುದು ಅಷ್ಟಾಗಿ ಇರಲಿಲ್ಲ. ಸಮಾಜ ಬದಲಾದಂತೆ ಹಾಗೂ ಲಿಖಿತ ಕಾನೂನಿನಂತೆ ನಡೆಯುವ ಮದುವೆಗಳು ಎಲ್ಲ ರೀತಿಯ ಗಂಡು ಹೆಣ್ಣುಗಳಿಗೂ ಅನ್ವಯ. ಇವೆಲ್ಲವೂ ಕಾನೂನಿನ ಚೌಕಟ್ಟಿನಲ್ಲಿ ನಡೆಯುವುವು. ಈಗ ಗಂಡು ಮೊದಲ ಮದುವೆಯವನಿರಬಹುದು, ಎರಡನೆಯ ಅಥವಾ ನಂತರದವನಿರಬಹುದು ಅಥವಾ ವಿಧುರನೂ. ವಿಚ್ಛೇದಿತನೂ ಇರಬಹುದು. ಹಾಗೆಯೇ ಸ್ತ್ರೀಸಹ ಮೊದಲ, ನಂತರದ, ವಿಧವೆ ಅಥವಾ ವಿಚ್ಛೇದಿತೆ ಇರಬಹುದು. ಒಟ್ಟಿನಲ್ಲಿ ಕಾನೂನಿನ ಪ್ರಕಾರ ಪ್ರಾಪ್ತ ವಯಸ್ಕರಿರಬೇಕು ಮತ್ತು ಇನ್ಯಾವುದೇ ವಿವಾಹಕ್ಕೆ ಅಡ್ಡ ಬರುವ (ಕಾನೂನಿನಂತೆ) ಕಾರಣಗಳಿರಬಾರದು. ಅಷ್ಟೇ. ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ವಿಷಮ ವಿವಾಹಗಳು ನಡೆಯುವುದು ಕಾಣಬರುತ್ತಿದೆ. 

ಈಗಿನ ಮೀಡಿಯಾದಲ್ಲಿ ಆಗಿಂದಾಗ್ಗೆ ಕೆಲವು ರೋಚಕ ಪ್ರಕರಣಗಳು ವರದಿ ಆಗುವುದನ್ನು ನೋಡುತ್ತೇವೆ. "ಮೂರನೆಯ ಹೆಂಡತಿಯ ಎರಡನೇ ಗಂಡನ ಮೊದಲ ಮಗಳನ್ನು ಮೊದಲ ಗಂಡನ ಎರಡನೇ ಹೆಂಡತಿಯ ಮೂರನೆಯ ಮಗನು ಕೊಲೆ ಮಾಡಿದ" ಎಂದು ವಿವರಿಸುವಾಗ ಏನೂ ಅರ್ಥವಾಗುವುದಿಲ್ಲ. ಹಾಗೆ ಅರ್ಥ ಆಗಲಿಲ್ಲ ಎಂದು ವ್ಯಥೆ ಪಡಬೇಕಾದುದೂ ಇಲ್ಲ. 

*****

ಇಂದಿನ ಪ್ರಪಂಚದಲ್ಲಿ ನಡೆಯುವ ವಿವಾಹಗಳನ್ನು ಹಿಂದಿನ ಕಾಲದ ಭೂತಗನ್ನಡಿಯಲ್ಲಿ ನೋಡುವುದು ಅರ್ಥವಿಲ್ಲದ ಮಾತು. (ಇಬ್ಬರು ಗಂಡಸರು ಅಥವಾ ಇಬ್ಬರು ಹೆಂಗಸರು ಪರಸ್ಪರ ಮದುವೆಯಾಗುವುದೂ ಈಗ ಉಂಟು, ತನ್ನನ್ನು ತಾನೇ ಮದುವೆ ಆದ ಪ್ರಕರಣವೂ ನಡೆದಿದೆ. ಕುಬ್ರಾ ಆಯುಕುಟ್ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ,)  ಒಟ್ಟಿನಲ್ಲಿ ಜೊತೆಯಲ್ಲಿ ಬಾಳು ಸಾಗಿಸಲು ಸೇರುವ ಇಬ್ಬರು ತಮ್ಮ ಹಿಂದಿನ ಬಾಳಿನಲ್ಲಿ ನಡೆದ ಘಟನೆಗಳನ್ನು ಪಕ್ಕಕ್ಕಿಟ್ಟು, ಪರಸ್ಪರ ಪ್ರೀತಿ-ಗೌರವಗಳಿಂದ ಬಾಳಿದರೆ ಮದುವೆಯ ಒಟ್ಟಾರೆ ಉದ್ದೇಶ ಈಡೇರಿದಂತೆ ಆಗಿ ಇಹದಲ್ಲಾದರೂ ಸುಖ ಸಿಗಬಹುದು. ಪರದ (ಪರಲೋಕದ) ವಿಚಾರ ಅಲ್ಲಿ ಹೋದ ಮೇಲೆ ವಿರಾಮವಾಗಿ ಯೋಚಿಸಬಹುದು.