ನಮ್ಮ ಆಚರಣೆಗಳಲ್ಲಿ ದೇವರು-ದೇವತೆಗಳನ್ನು ಪ್ರಾರ್ಥಿಸುವಾಗ "ಸಕಲ ಭೋಗ-ಭಾಗ್ಯ ಸಿಧ್ಯರ್ಥಂ" ಎಂದು ಸಂಕಲ್ಪಿಸಿ ಬೇಡುವುದು ಬಹಳ ಹಿಂದಿನಿಂದ ಬಂದ ಒಂದು ಕ್ರಮ. ಅನೇಕ ವೇಳೆ ಅಭಿವಾದನ ಮಾಡಿದ ಕಿರಿಯರಿಗೆ ಗುರು-ಹಿರಿಯರು ಆಶೀರ್ವಾದ ನೀಡುವಾಗ "ಸಕಲ ಭೋಗ-ಭಾಗ್ಯ ಸಿದ್ಧಿರಸ್ತು" ಎಂದು ಹೇಳುವುದೂ ಹೀಗೆಯೇ ನಡೆದು ಬಂದಿದೆ.
ಸಾಮಾನ್ಯವಾಗಿ "ಅಷ್ಟ ಭೋಗಗಳು" ಮತ್ತು "ಅಷ್ಟ ಭಾಗ್ಯಗಳು" ಎಂಬುದಾಗಿ ವ್ಯವಹರಿಸುವುದು ವಾಡಿಕೆ. ಈ ಭೋಗಗಳು ಮತ್ತು ಭಾಗ್ಯಗಳು ಯಾವುವು? ಹೀಗೆಂದು ಮಿತ್ರರೊಬ್ಬರು ಕೇಳಿದ್ದರು.
ಈ ಸಂಚಿಕೆಯಲ್ಲಿ ಎಂಟು ಭಾಗ್ಯಗಳ ಬಗ್ಗೆ ಚರ್ಚೆ ಮಾಡೋಣ.
*****
ಈಗ್ಗೆ ಸುಮಾರು ಅರವತ್ತು ವರುಷಗಳ ಹಿಂದಿನ ಸಮಯ. ಆಗ ನಾನು ಹೈಸ್ಕೂಲ್ ಸೇರಿ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಊರಿನಲ್ಲಿ ಸುಬ್ಬರಾಯರು ಎಂಬ ಹೆಸರಿನ ನಿವೃತ್ತ ಉಪಾಧ್ಯಾಯರು ವಾಸವಾಗಿದ್ದರು. ನಮ್ಮ ಮನೆಯ ಬೀದಿಯಲ್ಲಿಯೇ ಅವರ ಮನೆ. ಅವರ ಕುಟುಂಬದ ಸದಸ್ಯರೆಲ್ಲ ಮೈಸೂರಿನಲ್ಲಿದ್ದರು. ಇವರಿಗೂ ಅಲ್ಲಿಗೆ ಬಂದಿರಲು ಮನೆಮಂದಿಯ ಒತ್ತಡವಿತ್ತು. ಆದರೆ ಅವರಿಗೆ ನಮ್ಮ ಊರಿನಲ್ಲಿ ಸ್ವಂತ ಮನೆ, ಮನೆಯ ಸುತ್ತ ದೊಡ್ಡ ತೋಟ, ಮತ್ತು ಸ್ವಲ್ಪ ಜಮೀನು ಇದ್ದವು. ಇವುಗಳನ್ನು ಬಿಟ್ಟು ಹೋಗಲು ಅವರಿಗೆ ಮನಸ್ಸಿಲ್ಲ, ಆದ್ದರಿಂದ ಒಬ್ಬರೇ ಇಲ್ಲಿ ವಾಸವಾಗಿದ್ದರು. ಬಹಳ ಚಟುವಟಿಕೆಯ ವ್ಯಕ್ತಿ. ಬಾಯಿತುಂಬಾ ಮಾತು. ವಿನೋದದ ಸ್ವಭಾವ. ಜನಪ್ರಿಯರು.
ಊರು ದೊಡ್ಡದಾಗಿ ಬೆಳೆಯುತ್ತಿದ್ದಂತೆ ಅವರು ಮನೆಯ ಸುತ್ತವಿದ್ದ ತೋಟವನ್ನು ಮನೆ ಕಟ್ಟುವ ನಿವೇಶನಗಳಾಗಿ ಪರಿವರ್ತಿಸಿ, ಒಂದೊಂದಾಗಿ ಮಾರಲು ತೊಡಗಿದ್ದರು. ಎಲ್ಲಾ ಮಾರಿ ಮುಗಿದಮೇಲೆ ಮೈಸೂರಿಗೆ ಹೋಗಿ ಕುಟುಂಬದವರ ಜೊತೆ ಇರಬೇಕೆಂಬುದು ಅವರ ಇರಾದೆ. ಈ ಕೆಲಸಕ್ಕೆ ನಮ್ಮ ತಂದೆಯವರ ಸಹಾಯ ಪಡೆಯುತ್ತಿದ್ದರು. ಮೊದಲಿಗೆ ಜಮೀನು ಅಳತೆ ಮಾಡಿ ಸೈಟುಗಳು ಮಾಡಿದರು. ನಂತರ ಒಂದೊಂದಾಗಿ ಸುತ್ತಮುತ್ತಲಿದ್ದವರಿಗೆ ಮಾರಾಟದ ವ್ಯವಹಾರ. ಮಾರಾಟಕ್ಕೆ ಕ್ರಯಪತ್ರಗಳನ್ನು ಬರೆದು ಕೊಡಲು ನಮ್ಮ ತಂದೆಯವರ ಬಳಿ ಬರುತ್ತಿದ್ದರು.
ಈಗ ಎಲ್ಲವೂ ಕಂಪ್ಯೂಟರ್ ಮಯವಾಗಿದೆ. ಆಗ ಕ್ರಯಪತ್ರ, ಭೋಗ್ಯಪತ್ರ ಮುಂತಾದುವನ್ನು ಛಾಪಾಕಾಗದದ ಮೇಲೆ (ಸ್ಟ್ಯಾಂಪ್ ಪೇಪರ್) ಕೈಬರಹದಲ್ಲಿ ಬರೆದು, ಕೊಳ್ಳುವವರು ಮತ್ತು ಮಾರುವವರು ಸಾಕ್ಷಿಗಳ ಸಮ್ಮುಖ ಸಹಿ ಮಾಡಿ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೋಗಿ ರಿಜಿಸ್ಟರ್ ಮಾಡಿ ಕೊಡುತ್ತಿದ್ದರು. ಈ ರೀತಿ ಪತ್ರಗಳನ್ನು ಬರೆದು ಕೊಡುವವರಿಗೆ "ಬಿಕ್ಕಲಂ" ಎನ್ನುತ್ತಿದ್ದರು. ಪತ್ರದ ಕೊನೆಯಲ್ಲಿ "ಬಿಕ್ಕಲಂ" ಎಂದು ಬರೆದವರ ಹೆಸರು ನಮೂದಿಸಿ ಸಹಿ ಮಾಡುತ್ತಿದ್ದರು. ಇಂತಹವರು ಕಚೇರಿಗಳ ಮುಂದೆ ಒಂದು ಹಳೆಯ ಮೇಜು, ಕುರ್ಚಿಗಳನ್ನು ಇಟ್ಟುಕೊಂಡು ಕುಳಿತಿರುತ್ತಿದ್ದರು. ಪ್ರತಿ ಪತ್ರಕ್ಕೂ ಬರೆದವರಿಗೆ ಸ್ವಲ್ಪ ಸಂಭಾವನೆ ಸಿಗುತ್ತಿತ್ತು. ಹೀಗೆ ಬಂದ ಹಣದಿಂದ ಅವರು ಜೀವನ ನಡೆಸುತ್ತಿದ್ದರು. ಸುಬ್ಬರಾಯರಿಗೆ ಅವರ ಬಳಿ ಹೋಗಿ ಕಾಯಲು ಇಷ್ಟವಿರಲಿಲ್ಲ. ಆದ್ದರಿಂದ ನಮ್ಮ ತಂದೆಯವರ ಬಳಿ ಬಂದು ಪತ್ರಗಳನ್ನು ಬರೆಸುತ್ತಿದ್ದರು.
*****
ಒಂದು ಭಾನುವಾರ ಬೆಳಿಗ್ಗೆ ಸುಬ್ಬರಾಯರು ನಮ್ಮ ಮನೆಗೆ ಬಂದರು. ಬಾಗಿಲಬಳಿ ನನ್ನನ್ನು ಕಂಡರು.
"ಅಪ್ಪನನ್ನು ಕರಿ. ಸ್ವಲ್ಪ ಕೆಲಸ ಇತ್ತು"
"ಅಪ್ಪ ಊರಲ್ಲಿಲ್ಲ. ಬೆಂಗಳೂರಿಗೆ ಹೋಗಿದ್ದಾರೆ"
"ಯಾವಾಗ ಬರುವುದು?"
"ಮೂರು ನಾಲ್ಕು ದಿನಗಳಾಗಬಹುದು"
ಸುಬ್ಬರಾಯರು ಹಿಂದಿರುಗಿ ಹೊರಟರು. ಹತ್ತು ಹೆಜ್ಜೆ ಹೋಗಿದ್ದವರು ಮತ್ತೆ ಹಿಂದಿರುಗಿ ಬಂದರು.
"ನಿನಗೆ ಚೆನ್ನಾಗಿ ಕನ್ನಡ ಬರೆಯಲು ಬರುತ್ತದಲ್ಲವೇ?"
"ಸುಮಾರಾಗಿ ಬರೆಯುತ್ತೇನೆ"
"ನನಗೆ ಗೊತ್ತು. ನಿನ್ನ ಬರವಣಿಗೆಯೂ ನಿಮ್ಮಪ್ಪನ ಬರಹದಂತೆ ಚೆನ್ನಾಗಿದೆ"
"......."
"ಒಂದು ಕ್ರಯಪತ್ರ ಬರೆಯಬೇಕಿತ್ತು. ನೀನೇ ಬರೆದುಕೊಡು"
"ನನಗೆ ಅಷ್ಟೆಲ್ಲಾ ಬರುವುದಿಲ್ಲ. ತಪ್ಪಾದರೆ ಛಾಪಾಕಾಗದ ಹಾಳಾಗುತ್ತೆ. ತಂದೆಯವರಿಗೂ ಕೋಪ ಬರುತ್ತೆ"
"ಪರವಾಗಿಲ್ಲ. ನಾನು ನಿಧಾನವಾಗಿ ಹೇಳುತ್ತೇನೆ. ನೀನು ಬರೆಯುತ್ತಾ ಹೋಗು"
"..........."
"ಅಪ್ಪನಿಗೆ ನಾನು ಹೇಳುತ್ತೇನೆ. ನನ್ನ ಜವಾಬ್ದಾರಿ. ತಪ್ಪಾದರೆ ಕಾಟು ಹೊಡೆದು ಬರೆಯಬಹುದು. ಒಂದು ಮಾದರಿ ಪತ್ರ ತಂದಿರುತ್ತೇನೆ. ನೋಡಿಕೊಂಡು ಬರಿ. ಆ ಸೀನಪ್ಪನ ಹತ್ತಿರ ಕಾದು ಕುಳಿತುಕೊಳ್ಳಬೇಕು. ಅದು ನನಗೆ ಆಗದು. ನೀನೇ ಬರೆದುಕೊಡು"
ಸ್ವಲ್ಪ ಸಮಯದ ನಂತರ ಮತ್ತೆ ಬಂದು ಬಲವಂತವಾಗಿ ಕೂಡಿಸಿಕೊಂಡು ಬರೆಸಿದರು. ಉತ್ಸಾಹದಲ್ಲಿ ನಾನೂ ಕ್ರಯ ಪತ್ರ ಬರೆದೆ.
*****
ಪತ್ರ ಬರೆದ ದಿನಾಂಕ, ಸ್ವತ್ತು ಕೊಳ್ಳುವವರು ಮತ್ತು ಮಾರುವವರ ವಿವರಗಳನ್ನು ಬರೆದ ನಂತರ ಸ್ವತ್ತಿನ ಸ್ವಲ್ಪ ವಿವರ ಬರೆದು (ಪೂರ್ತಿ ವಿವರ ಚಕ್ಕುಬಂದಿ (ಬೌಂಡರಿ) ಸಮೇತ ಷೆಡ್ಯೂಲಿನಲ್ಲಿ ಬರೆದಿರುತ್ತೆ) ನಂತರದ ಒಕ್ಕಣೆ ಹೀಗಿತ್ತು:
"......... ಈ ಸ್ವತ್ತನ್ನು ಈ ದಿನ ಗವರ್ನಮೆಂಟು ಹತ್ತು ಸಾವಿರ ರೂಪಾಯಿಗಳಿಗೆ ಶುದ್ಧ ಕ್ರಯ ಮಾಡಿಕೊಟ್ಟಿರುತ್ತೇನೆ. ಈ ಸ್ವತ್ತಿಗೆ ಯಾವುದೇ ಕ್ರಯ, ಭೋಗ್ಯ, ಆಧಾರ, ಜೀವನಾಂಶ, ಭಾಗಾಂಶ, ಲಾಭಾಂಶ, ಮೈನರು ಹಕ್ಕುಗಳು ಮುಂತಾದ ಬಾಧ್ಯತೆಗಳಿರುವುದಿಲ್ಲ. ಮುಂದೆ ಎಂದಾದರೂ ಈ ರೀತಿ ತೊಂದರೆಗಳು ಕಂಡುಬಂದರೆ ನನ್ನ ಸ್ವಂತ ಖರ್ಚಿನಿಂದ ಪರಿಹರಿಸಿಕೊಡುವುದು ನನ್ನ ಜವಾಬ್ದಾರಿ.
ಈ ಸ್ವತ್ತನ್ನು ಇಂದೇ ನಿಮ್ಮ ಸುಪರ್ದಿಗೆ ಬಿಟ್ಟುಕೊಟ್ಟಿರುತ್ತೇನೆ. ಇಂದಿನಿಂದ ಈ ಸ್ವತ್ತನ್ನು ಮತ್ತು ಅದರಲ್ಲಿ ಇರುವ ಮತ್ತು ಕಂಡುಬರುವ ಜಲ, ತರು, ಅಕ್ಷೀಣ, ಪಾಷಾಣ, ನಿಧಿ, ನಿಕ್ಷೇಪ, ಮುಂತಾದ ಅಷ್ಟ ಭಾಗ್ಯಗಳಿಗೂ ನೀವೇ ವಾರಸುದಾರರಾಗಿ ನಿಮ್ಮ ವಂಶ ಪಾರಂಪರ್ಯವಾಗಿ ಸುಖದಿಂದ ಅನುಭವಿಸಿಕೊಂಡು ಬರತಕ್ಕದ್ದು. ........."
ತಪ್ಪಿಲ್ಲದೆ, ಬಹಳ ಜಾಗರೂಕನಾಗಿ, ಮೈಯೆಲ್ಲಾ ಕಣ್ಣಾಗಿ ಪತ್ರ ಬರೆಯುವುದು ಮುಗಿಯಿತು.
*****
ಪತ್ರ ಪೂರ್ತಿ ಬರೆದನಂತರ "ಮೇಷ್ಟ್ರೇ, ಈ ಅಷ್ಟಭಾಗ್ಯಗಳು ಅಂದರೇನು?' ಎಂದು ಕೇಳಿದೆ. ಸುಬ್ಬರಾಯ ಮೇಷ್ಟ್ರು ವಿವರಿಸಿದರು.
ಜಲ, ತರು, ಅಕ್ಷೀಣ, ಪಾಷಾಣ, ನಿಧಿ, ನಿಕ್ಷೇಪ, ಸಂಚಿತ ಮತ್ತು ಆಗಮಿ ಎನ್ನುವ ಎಂಟು ರೀತಿಯ ಸಂಪತ್ತುಗಳು ಸ್ಥಿರ ಸ್ವತ್ತುಗಳಲ್ಲಿ (ಇಮ್ಮೂವಬಲ್ ಪ್ರಾಪರ್ಟಿ) ಸೇರಿರುತ್ತವೆ.
- "ಜಲ" ಅಂದರೆ ನೀರು ಮತ್ತು ಅದರ ಮೂಲಗಳಾದ ಬಾವಿ, ಕುಂಟೆ (ಸಣ್ಣ ಕೆರೆ), ಕೆರೆ, ಸರೋವರ ಮುಂತಾದುವುಗಳು. ಕೆಲವು ದೊಡ್ಡ ಸ್ವತ್ತುಗಳಲ್ಲಿ (ನೂರಾರು ಎಕರೆ ಹರಡಿರುವ ಪ್ರದೇಶಗಳು) ಸಣ್ಣ ತೊರೆ ಅಥವಾ ನದಿಗಳೂ ಇರಬಹುದು. ಇದರಲ್ಲಿ ನೆಲದ ಮೇಲೆ ಕಾಣಿಸದಿದ್ದು ಬೋರ್ವೆಲ್ ಮುಂತಾದುವು ಕೊರೆದಾಗ ಸಿಗುವ ಅಂತರ್ಜಲವೂ ಸೇರುತ್ತದೆ. ಜಲದ ಜೊತೆಯಲ್ಲಿ ಇವುಗಳಲ್ಲಿರುವ ಜಲಚರಗಳೂ (ಮೀನು ಮುಂತಾದುವು) ಕೂಡಿರುತ್ತವೆ.
- "ತರು" ಅಂದರೆ ಮರ ಅಥವಾ ಮರ-ಗಿಡಗಳು. ಮರಗಳಲ್ಲಿ ಪ್ರತಿವರುಷ ಬಿಡುವ ಹೂವು-ಹಣ್ಣುಗಳು, ಎಲೆ ಮುಂತಾದುವು ಸೇರಿದವು. ಮರಗಳನ್ನು ಕತ್ತರಿಸಿದರೆ ಅದರಲ್ಲಿ ಬರುವ ಮರದ ದಿಮ್ಮಿಗಳು, ಸೌದೆ ಮುಂತಾದುವು ಕೂಡ ಒಳಗೊಂಡಿರುತ್ತವೆ. ಮರದಲ್ಲಿ ಜೇನುಗೂಡಿದ್ದರೆ ಅದೂ ಸಹ.
- "ಅಕ್ಷೀಣ" ಅಂದರೆ ಕೊನೆಯಿಲ್ಲದ ಪದಾರ್ಥಗಳು. ಇಂಗ್ಲಿಷಿನಲ್ಲಿ ಪರ್ಮನೆಂಟ್ ಅಥವಾ ಎವೆರ್ಲಾಸ್ಟಿಂಗ್ ಅನ್ನುತ್ತಾರೆ. ತೆಗೆದರೆ ಅಥವಾ ಕತ್ತರಿಸಿದರೆ ಮತ್ತೆ ಬರುವ ಪದಾರ್ಥಗಳು ಇರಬಹುದು. (ಕೆಲವರು ಅಕ್ಷೀಣ ಅನ್ನುವ ಕಡೆ "ತೃಣ" ಎಂದು ಹೇಳುತ್ತಾರೆ. ತೃಣ ಅಂದರೆ ಹುಲ್ಲು ಮತ್ತು ಅದರಂತಹವು).
- "ಪಾಷಾಣ" ಅಂದರೆ ಕಲ್ಲು. ಈಗಂತೂ ಕಲ್ಲಿನ ಗಣಿಗಳಿಗಾಗಿಯೇ ಭೂಮಿ ಕೊಳ್ಳುತ್ತಾರೆ. ಪಾಷಾಣ ಕ್ಷೀಣವಾಗುವ ಭಾಗ್ಯ. ಅಂದರೆ ಒಮ್ಮೆ ತೆಗೆದರೆ ಹೋಯಿತು. ಅಷ್ಟು ಕಮ್ಮಿ ಆಯಿತು. ಮೇಲೆ ಹೇಳಿದ ಅಕ್ಷೀಣ ಹಾಗಲ್ಲ.
- "ನಿಧಿ" ಅಂದರೆ ಭೂಮಿಯಲ್ಲಿ ಹೂತಿಟ್ಟ ಹಣ. ಇಂಗ್ಲಿಷಿನಲ್ಲಿ "ಟ್ರೆಷರ್" ಅನ್ನುತ್ತಾರೆ. ಹಿಂದೆ ಭೂಮಿಯಲ್ಲಿ ಪಾತ್ರೆಗಳಲ್ಲಿ, ಕೊಪ್ಪರಿಗೆಗಳಲ್ಲಿ ಹಣ ಹೂತಿಡುತ್ತಿದ್ದರು. ಅಂತಹ ನಾಣ್ಯಗಳು ಅಥವಾ ಬೆಳ್ಳಿ-ಬಂಗಾರದ ಒಡವೆಗಳು ಸಿಕ್ಕರೆ ಅದು ನಿಧಿ.
- "ನಿಕ್ಷೇಪ" ಅನ್ನುವುದು ಭೂಮಿಯಲ್ಲಿ ಹುದುಗಿರುವ ಲೋಹದ ಅದಿರುಗಳು ಮುಂತಾದುವನ್ನು ಸೂಚಿಸುತ್ತದೆ. ಇಂಗ್ಲಿಷಿನಲ್ಲಿ "ಮೈನಿಂಗ್" ಮಾಡುವ ಪದಾರ್ಥಗಳು.
- "ಸಂಚಿತ" ಅಂದರೆ ಹಿಂದಿನಿಂದ ಕೂಡಿಕೊಂಡು ಬಂದಿರುವ ಪದಾರ್ಥಗಳು. ಭೂಮಿಯಲ್ಲದೆ ಬೇರೆ ಪದಾರ್ಥ ಭೂಮಿಗೆ ಹೊಂದಿಕೊಂಡು ಬಂದಿರುವುದು.
- "ಆಗಮಿ" ಅಂದರೆ ಮುಂದೆ ಬರುವ ಪದಾರ್ಥಗಳು. ಇದು ಈಗ ಇಲ್ಲ. ಮುಂದೆಂದೋ ಆ ಭೂಮಿಯಲ್ಲಿ ಉಂಟಾಗಬಹುದು. ಕೆಲವುಕಡೆ ಭೂಮಿಯ ಆಂತರಿಕ ಪರಿಣಾಮಗಳ, ಮಳೆ ಮುಂತಾದ ಕಾರಣ ಆಗುವ ಬದಲಾವಣೆಗಳು. ಭೂಗರ್ಭದಲ್ಲಿ ಆಗುವ ಒತ್ತಡಗಳಿಂದ ಚಿಮ್ಮಿ ಬರಬಹುದಾದ ಸಂಪತ್ತು.
ಕೆಲವರು ಸಂಚಿತ ಮತ್ತು ಆಗಮಿ ಪದಗಳ ಬದಲು "ತೇಜ" ಮತ್ತು "ಸೌಮ್ಯ" ಎಂದು ಪ್ರಯೋಗಿಸುತ್ತಾರೆ. ಆಗ ಅಷ್ಟ ಭಾಗ್ಯಗಳು "ಜಲ, ತರು, ಅಕ್ಷೀಣ, ಪಾಷಾಣ, ನಿಧಿ, ನಿಕ್ಷೇಪ, ತೇಜ, ಸೌಮ್ಯ" ಎಂದಾಗುತ್ತದೆ.
ಒಟ್ಟಿನಲ್ಲಿ "ನಿಮಗೆ ಇದನ್ನು ಕೊಟ್ಟಿದ್ದೇನೆ. ಇದರಲ್ಲಿ ಇರಬಹುದಾದ, ಬೆಳೆಯಬಹುದಾದ, ಹುದುಗಿರಬಹುದಾದ, ಹಿಂದಿನಿಂದ ಬಂದಿರಬಹುದಾದ, ಮುಂದೆ ಬರಬಹುದಾದ, ಎಲ್ಲ ರೀತಿಯ ಸಂಪತ್ತುಗಳೂ ನಿಮಗೆ ಸೇರಿದ್ದು. ಮುಂದೆ ಕಂಡು ಬಂತು ಅಂದು ಅದರಮೇಲೆ ನಾನು ಹಕ್ಕು ಸ್ಥಾಪಿಸುವುದಿಲ್ಲ" ಎಂದು ಹೇಳುವ ರೀತಿ ಈ ಒಕ್ಕಣೆಗಳು.
*****
ಮೂರು ದಿನಗಳ ನಂತರ ತಂದೆಯವರು ಊರಿಗೆ ಬಂದಿದ್ದರು. ಸುಬ್ಬರಾಯರು ಅವರನ್ನು ಕಾಣಲು ಬಂದರು. ನಾನೂ ಮನೆಯಲ್ಲಿದ್ದೆ. ಸಂಭಾಷಣೆ ಹೀಗಿತ್ತು:
"ಏನು, ನೀವು ಹೇಳದೇ ಕೇಳದೇ ಪರಊರಿಗೆ ಹೋಗುವುದು? ಇದರಿಂದ ನಿಮಗೇ ನಷ್ಟ. ಸೀನಪ್ಪ, ನೀವು ಇಬ್ಬರನ್ನೂ ಬಿಟ್ಟು ಇಲ್ಲಿ ಮೂರನೆಯವನೊಬ್ಬ ಬಿಕ್ಕಲಂ ಹುಟ್ಟಿಕೊಂಡಿದ್ದಾನೆ. ಇನ್ನು ಮುಂದೆ ಅವನಿಗೇ ಚೆನ್ನಾಗಿ ಸಂಪಾದನೆ ಆಗುತ್ತದೆ"
"ಯಾರು ಸ್ವಾಮಿ, ಅವನು?"
"ಇವನೇ, ನಿಮ್ಮ ಕುಮಾರ ಕಂಠೀರವ. ಬಹಳ ತುರ್ತಿತ್ತು. ಒಂದು ಕ್ರಯ ಪತ್ರ ಬರೆಸಿದೆ. ಚೆನ್ನಾಗಿ ಬರೆದಿದ್ದಾನೆ. ಆದರೆ ತುಂಬಾ ಪ್ರಶ್ನೆ ಕೇಳುತ್ತಾನೆ"
ಇಬ್ಬರೂ ನಕ್ಕರು. ಅವರ ಬೇರೆ ವಿಷಯದ ಸಂಭಾಷಣೆ ಮುಂದುವರೆಯಿತು. ನಾನು ಶಾಲೆಗೆ ಹೊರಟೆ.