ಚ್ಯವನ ಮಹರ್ಷಿಗಳ ಮಗಳಾದ ಸುಮನಾ ಮತ್ತು ಅವಳ ಪತಿ ಸೋಮಶರ್ಮ ನಡುವೆ ನಡೆದ ಸಂವಾದ, ಮತ್ತು ಆ ಸಂದರ್ಭದಲ್ಲಿ ಸುಮನಾ "ಐದು ರೀತಿಯ ಮಕ್ಕಳು" ಮತ್ತು ಅವರ ಲಕ್ಷಣ, ಜನನದ ಕಾರಣಗಳನ್ನು ವಿವರಿಸುದುದನ್ನು ಹಿಂದಿನ ಅದೇ ಹೆಸರಿನ ಸಂಚಿಕೆಯಲ್ಲಿ ನೋಡಿದೆವು. ಹೇಗೆ ಹಿಂದಿನ ಜನ್ಮಗಳಲ್ಲಿ ಸಾಲಕೊಟ್ಟವರು, ಬೇರೆಯವರಿಂದ ಮೋಸ ಹೋಗಿ ಆಸ್ತಿ-ಪಾಸ್ತಿ ಕಳೆದುಕೊಂಡವರು, ಹಿಂದೆ ಪಡೆದ ಉಪಕಾರಗಳನ್ನು ತೀರಿಸುವವರು ಮತ್ತು ಯಾವುದೇ ಕಾರಣವಿಲ್ಲದೆ ಅವರ ಕರ್ಮಗಳ ಪರಿಪಾಕದಿಂದ ಹುಟ್ಟುವ ನಾಲ್ಕು ವಿಧದ ಮಕ್ಕಳ ಲಕ್ಷಣಗಳನ್ನು ನೋಡಿದೆವು. ಅದೇ ರೀತಿ ಸತ್ಕರ್ಮಗಳನ್ನು ಮಾಡಿದ ಪ್ರಯುಕ್ತ ಹುಟ್ಟುವ ಯೋಗ್ಯ ಮಕ್ಕಳನ್ನು ಪಡೆಯುವ ಸಾಧ್ಯತೆ ಬಗ್ಗೆಯೂ ನೋಡಿದ್ದೆವು. (ಈ "ಐದು ರೀತಿಯ ಮಕ್ಕಳು" ಎನ್ನುವ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ).
ಸೋಮಶರ್ಮನಿಗೆ ಎರಡು ಚಿಂತೆಗಳು ಕಾಡುತ್ತಿದ್ದವು. ಮೊದಲನೆಯದು ದಾರಿದ್ರ್ಯ ಅನುಭವಿಸುತ್ತಿರುವುದು. ಎರಡನೆಯದು ಮಕ್ಕಳಿಲ್ಲ ಎಂಬ ಕೊರಗು. ಮಕ್ಕಳ ಸಂಬಂಧ ಸುಮನಾ ನೀಡಿದ ವಿವರಣೆಯನ್ನು ನೋಡಿದೆವು. ದರಿದ್ರತೆ ಮತ್ತು ಒಟ್ಟಿನಲ್ಲಿ ಚಿಂತೆಯ ಬಗೆಗೂ ಅವಳು ಬಹಳ ಸಮರ್ಥವಾದ ವಿವರಣೆಯನ್ನು ನೀಡಿರುವುದು ಪದ್ಮ ಪುರಾಣದಲ್ಲಿ ಕಂಡುಬರುತ್ತದೆ. ಅದರ ಸ್ವಲ್ಪ ತಿರುಳನ್ನು ಈಗ ನೋಡೋಣ.
*****
"ಚಿತೆ" ಮತ್ತು "ಚಿಂತೆ" ಇವೆರಡಕ್ಕೂ ಒಂದು ಸೊನ್ನೆ ಮಾತ್ರ ವ್ಯತ್ಯಾಸ ಎನ್ನುವ ಮಾತು ಬಹಳ ಜನಜನಿತವಾದದ್ದು. ಇದು ಎಲ್ಲರಿಗೂ ಗೊತ್ತಿರುವ ಸಂಗತಿಯಾದರೂ ಈ ಚಿಂತೆ ಅನ್ನುವುದು ಯಾರನ್ನೂ ಬಿಡದು. ಜೀವನದಲ್ಲಿ ಕೆಲವು ವಿಷಯಗಳ ಬಗ್ಗೆ ಯೋಚಿಸಬಾರದೆಂದು ಎಷ್ಟು ಪ್ರಯತ್ನ ಪಟ್ಟರೂ ಚಿಂತೆ ಎನ್ನುವುದು ನಮ್ಮ ಬೆನ್ನು ಬಿಡುವುದಿಲ್ಲ. ಏನಾದರೂ ಕೆಲಸ ಕಾರ್ಯಗಳಲ್ಲಿ ತೊಡಗಿರುವಾಗ ಮತ್ತು ಬೇರೆಯವರ ಸಂಗವಿದ್ದಾಗ ಈ ಚಿಂತೆ ಎನ್ನುವ ಭೂತ ಸ್ವಲ್ಪ ಬಾಲ ಮುದುರಿಕೊಂಡು ಕುಳಿತಿರುತ್ತದೆ. ಒಂಟಿಯಾಗಿ ಸುಮ್ಮನೆ ಕೂತಾಗ ಅಥವಾ ರಾತ್ರಿ ನಿದ್ದೆ ಮಾಡಲು ಯತ್ನಿಸಿದಾಗ ಅದು ಹೆಡೆ, ಬಾಲಗಳನ್ನು ಬಿಚ್ಚಿ ವಿಜೃಂಭಿಸುತ್ತದೆ. ಎಂಥ ತಿಳಿದವರಿಗೂ, ಜ್ಞಾನಿಗಳಿಗೂ ಸಹ ಈ ರೀತಿಯ ಚಿಂತೆಗಳು ಬಾಧಿಸದೆ ಬಿಡುವುದಿಲ್ಲ.
"ನಾಸ್ತಿ ಚಿಂತಾ ಸಮಂ ದುಃಖಂ ಕಾಯ ಶೋಷಣಮೇವಹಿ" ಎಂದು ಚಿಂತೆಯ ವಿಷಯದಲ್ಲಿ ಹೇಳುತ್ತಾರೆ. ಚಿಂತೆಯಂತಹ ದುಃಖ ಬೇರೆ ಇಲ್ಲ. ಅದರಿಂದ ತಿಂದ ಆಹಾರ ಮೈಗೆ ಹತ್ತುವುದಿಲ್ಲ. ಮನಸ್ಸು ಸರಿಯಾಗಿ ಕೆಲಸ ಮಾಡುವುದಿಲ್ಲ. ಇವುಗಳ ಪರಿಣಾಮದಿಂದ ದೇಹವು ದುರ್ಬಲವಾಗುತ್ತದೆ. ಬಡತನವಂತೂ ಮನುಷ್ಯನನ್ನು ಅಸಂತುಷ್ಟನನ್ನಾಗಿ ಮಾಡುತ್ತದೆ. ಅಂತಹ ವ್ಯಕ್ತಿ ಪ್ರಪಂಚದಲ್ಲಿ ಕಾಣುವ ಎಲ್ಲದರಲ್ಲಿಯೂ ತಪ್ಪನ್ನೇ ಹುಡುಕುತ್ತಾನೆ. ಚಿಂತಾಕ್ರಾಂತನಾದವನಿಗೆ ತನ್ನ ಹಿತೈಷಿಗಳು ಹೇಳುವ ಒಳ್ಳೆಯ ಮಾತುಗಳೂ ಕಹಿ ಎನಿಸುತ್ತವೆ. ಬೇರೆಯವರು ಮತ್ತೇನೋ ವಿಷಯ ಮಾತನಾಡಿಕೊಳ್ಳುತ್ತಿದ್ದರೂ ತನ್ನನ್ನೇ ಕುರಿತು ಅಪಹಾಸ್ಯ ಮಾಡುತ್ತಿರುವರು ಎಂದು ಅನುಮಾನಿಸುತ್ತಾನೆ.
ಚಾಣಕ್ಯ ನೀತಿಯು "ವರಂ ವನಂ ವ್ಯಾಘ್ರ ಗಜೇಂದ್ರ ಸೇವಿತಂ, ನ ಬಂಧು ಮಧ್ಯೇ ಧನ ಹೀನ ಜೀವನಮ್" ಮುಂತಾಗಿ ಹೇಳುತ್ತದೆ. ಹುಲಿ, ಆನೆ ಮೊದಲಾದ ಪ್ರಾಣಿಗಳಿರುವ ಕಾಡಿನಲ್ಲಿದ್ದರೂ ಸರಿಯೇ; ನೆಂಟರಿಷ್ಟರ ಬಳಿಯಲ್ಲಿ ಬಡತನದ ಜೀವನ ಬೇಡಪ್ಪಾ ಬೇಡ" ಎಂದು ಅನ್ನಿಸುತ್ತದೆ. "ಏನಾದರೂ ಮಾಡಿ ಹಣವನ್ನು ಕೂಡಿಹಾಕಬೇಕು. ಈ ಬಂಧುಗಳ ನಡುವೆ ನೆಮ್ಮದಿಯಿಂದ ಬಾಳಬೇಕು" ಎಂದು ಮನುಷ್ಯ ಪರಿತಪಿಸುತ್ತಾನೆ. (ಈ ರೀತಿ ನೆಂಟರಿಷ್ಟರ ಮಧ್ಯೆ ಬಡತನದ ಜೀವನ ಮಾಡುವುದು ಪ್ರಾಯಶಃ ಈಗಿನ ತಲೆಮಾರು ಕಾಣದು. ಈಗ ಎಲ್ಲ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಎಷ್ಟೋ ಸುಧಾರಿಸಿದೆ). ಸ್ವಲ್ಪ ಸ್ವಲ್ಪ ಹಣ ಸೇರುತ್ತಿದ್ದಂತೆ ಇನ್ನಷ್ಟು ಬೇಕೆಂಬ ಲೋಭ ಕಾಡಲು ತೊಡಗುತ್ತದೆ.
*****
ಈ ಲೋಭವೆನ್ನುವುದು ಎಲ್ಲ ಮುಂದಿನ ತೊಂದರೆಗಳಿಗೂ ತಾಯಿಬೇರು. ಸಮಸ್ತ ಅನಿಷ್ಟ ಬೆಳವಣಿಗೆಗಳೂ ಅಲ್ಲಿಂದಲೇ ಪ್ರಾರಂಭ. ಸುಮನಾ ಈ ಮುಂದಿನ ಎಲ್ಲ ಬೆಳವಣಿಗೆಗಳನ್ನೂ ಒಂದು ಸೂತ್ರದ ರೂಪದಲ್ಲಿ ಹೇಳುತ್ತಾಳೆ:
ಲೋಭ: ಪಾಪಶ್ಚ ಬೀಜಂಹಿ ಮೋಹೋ ಮೂಲ೦ಚ ತಸ್ಯಹಿ
ಅಸತ್ಯಂ ತಸ್ಯವೈ ಸ್ಕಂಧಃ ಮಾಯಾ ಶಾಖಾ ಸುವಿಸ್ತರಃ
ದಂಭ ಕೌಟಿಲ್ಯ ಪತ್ರಾಣಿ ಕುಬುಧ್ಯಾ ಪುಷ್ಪಿತಃ ಸದಾ
ಅನೃತಂ ತಸ್ಯವೈ ಸೌಗಂಧ: ಫಲಾ ಅಜ್ನ್ಯಾನಮೇವ ಚ
"ಪಾಪ" ಅನ್ನುವ ಹೆಮ್ಮರಕ್ಕೆ ಈ "ಲೋಭ" ಅನ್ನುವುದೇ ಬೀಜರೂಪವು. ಈ ಲೋಭವು ಮನಸ್ಸು ಎಂಬ ಮಣ್ಣಿನಲ್ಲಿ ಬಿದ್ದ ತಕ್ಷಣ ಬೇರು ಬಿಡಲಾರಂಭಿಸುತ್ತದೆ. ಲೋಭವು ಹೆಚ್ಚಿದಷ್ಟೂ ಬೇರುಗಳು ಆಳ ಮತ್ತು ವಿಶಾಲ ಆಗುತ್ತವೆ. "ಮೋಹ" ಎನ್ನುವುದೇ ಅದರ ಬೇರು. ಈ ಮರಕ್ಕೆ "ಅಸತ್ಯ" ಎನ್ನುವ ಒಂದು ದೊಡ್ಡದಾದ ಕಾಂಡವಿದೆ. "ಕಪಟತನ" (ಮಾಯಾ) ಅನ್ನುವುದು ಈ ಅಸತ್ಯ ಎನ್ನುವ ಭಾರಿ ಕಾಂಡದಿಂದ ಹೊರಡುವ ಅನೇಕ ಕೊಂಬೆಗಳು. "ದಂಭ" ಮತ್ತು "ಕುಟಿಲತೆ" ಅನ್ನುವುವು ಈ ಅಸತ್ಯವೆಂಬ ಕೊಂಬೆಗಳಲ್ಲಿ ಬೆಳೆಯುವ ಅಸಂಖ್ಯಾತ ಎಲೆಗಳು. ಆ ಅನೇಕ ಕೊಂಬೆಗಳ ಮೇಲೆ, ಎಲೆಗಳ ನಡುವೆ, "ಕುಬುದ್ಧಿ" ಎನ್ನುವ ಹೂವು ಸದಾ ಬಿಡುತ್ತದೆ. ಹೂವುಗಳಲ್ಲಿ ಸಾಮಾನ್ಯವಾಗಿ ಸುವಾಸನೆ ಇದ್ದರೆ ಈ ಕುಬುದ್ಧಿ ಅನ್ನುವ ಹೂವಿನಲ್ಲಿ "ಸುಳ್ಳು ಮಾತುಗಳು" ಎನ್ನುವ ಅನೇಕ ರೀತಿಯ ದುರ್ವಾಸನೆಗಳು ಹರಡಲು ತಯಾರು. ಒಂದು ಮರದಲ್ಲಿ ಇಷ್ಟೆಲ್ಲಾ ಇರುವಾಗ ಕಡೆಗೆ ಅದರಲ್ಲಿ ಹಣ್ಣುಗಳು ಬಲೇಬೇಕಲ್ಲ? ಈ ಪಾಪವೆಂಬ ಮರಕ್ಕೆ "ಅಜ್ಞಾನ" ಎನ್ನುವುದೇ ಹಣ್ಣುಗಳಾಗಿ ತೋರುತ್ತವೆ. ಇಂತಹ ಮರದಲ್ಲಿ ಈ ಅಜ್ಞಾನ ಅನ್ನುವ ಹಣ್ಣಿನ ಆಸೆಯಿಂದ ಕಪಟತನ, ಪಾಖಂಡತನ, ಕ್ರೌರ್ಯ, ಅಸೂಯೆ, ಮುಂತಾದ ಇತರ "ದುರ್ಗುಣ" ರೂಪಗಳ ಹಕ್ಕಿಗಳು ಬಂದು ಸೇರುತ್ತವೆ!
ಮರಗಿಡಗಳಿಗೆ ಸಾಮಾನ್ಯವಾಗಿ ವರ್ಷದಲ್ಲಿ ಕೆಲವು ತಿಂಗಳುಗಳು ಹೂವು ಮತ್ತು ಹಣ್ಣು ಬಿಡುವ ಕಾಲ. ಆದರೆ ಈ ಪಾಪವೆಂಬ ಮರದಲ್ಲಿ ವರುಷಕ್ಕೆ ಹನ್ನೆರಡು ತಿಂಗಳೂ ಕುಬುದ್ಧಿ ಎನ್ನುವ ಹೂವು ಅರಳುತ್ತದೆ! ಸದಾಕಾಲವೂ ಅಜ್ಞಾನವೆಂಬ ಹಣ್ಣು ತುಂಬಿರುತ್ತದೆ.
"ಜಂಭ" ಮತ್ತು "ದಂಭ" ಇವುಗಳಿಗೆ ವ್ಯತ್ಯಾಸವಿದೆ. ಇರುವುದನ್ನು ಹೆಚ್ಚಾಗಿ ಹೇಳಿಕೊಳ್ಳುವುದು ಜಂಭ. ಇಲ್ಲದೆ ಇರುವುದನ್ನು ಹೇಳಿಕೊಳ್ಳುವುದು ದಂಭ. ಉದಾಹರಣೆಗೆ: ಒಬ್ಬನ ಜೇಬಿನಲ್ಲಿ ಒಂದು ಸಾವಿರ ರೂಪಾಯಿ ಇದೆ. ಅವನು ಹತ್ತು ಸಾವಿರ ರೂಪಾಯಿ ಇದೆ ಎಂದು ಹೇಳಿದರೆ ಅದು ಜಂಭ ಕೊಚ್ಚಿಕೊಳ್ಳುವುದು. ಇನ್ನೊಬ್ಬನ ಜೇಬಿನಲ್ಲಿ ಒಂದು ರೂಪಾಯಿಯೂ ಇಲ್ಲ. ಅವನು ತನ್ನ ಜೇಬಿನಲ್ಲಿ ಒಂದು ಸಾವಿರ ರೂಪಾಯಿ ಇದೆ ಎಂದು ಹೇಳಿದರೆ ಅದು ದಂಭ.
"ಕುಟಿಲ" ಅಂದರೆ "ನೆಟ್ಟಗಿಲ್ಲದ್ದು" ಎಂದು ಅರ್ಥ. ಸೊಟ್ಟಗಿದೆ ಎನ್ನಬಹುದು. ಶ್ರೀಕೃಷ್ಣನ ವರ್ಣನೆಯಲ್ಲಿ "ಕುಟಿಲ ಕುಂತಲಂ ಕುವಲಯ ದಳ ನೀಲಂ" ಎನ್ನುತ್ತೇವೆ. ಇಲ್ಲಿ ಕುಟಿಲ ಕುಂತಲಂ ಅಂದರೆ "ಗುಂಗುರು ಕೂದಲು" ಎಂದು ಅರ್ಥ. ಕೆಲವರಿಗೆ, ಅದರಲ್ಲೂ ಮಕ್ಕಳಿಗೆ, ಗುಂಗುರು ಕೂದಲು ಇದ್ದರೆ ಸುಂದರ. ಆದರೆ ನಡೆ-ನುಡಿ ನೇರವಾಗಿರಬೇಕು. ವಕ್ರವಾಗಿರಬಾರದು. ಹೇಳುವುದು, ತೋರಿಸುವುದು ಒಂದು ರೀತಿ. ಆದರೆ ಅದರ ಅರ್ಥ, ಆಚರಣೆ ಇನ್ನೊಂದು ರೀತಿ. ಹೀಗಿದ್ದರೆ ಇದನ್ನೇ "ಕುಟಿಲ ನೀತಿ" ಅನ್ನುವುದು. ಕುಟಿಲ ಸ್ವಭಾವ ಇರುವವರನ್ನು ನಂಬಬಾರದು. ಮಹಾಭಾರತದ ಶಕುನಿ ಇದಕ್ಕೆ ಅತ್ಯುತ್ತಮ ಉದಾಹರಣೆ.
*****
ಸುಮನಾ ಹೇಳಿರುವ ಮೇಲಿನ ಪಾಪ ಎಂಬ ಮರದ ವಿವರಗಳು ಬಹಳ ಅರ್ಥವತ್ತಾಗಿದ್ದು ಮೊದಲ ನೋಟದಲ್ಲಿ ಅಷ್ಟು ಸುಲಭವಾಗಿ ಗೊತ್ತಾಗುವುದಿಲ್ಲ. ಆದರೆ ನಿಧಾನವಾಗಿ ಓದಿ, ನಮ್ಮ ನಮ್ಮ ಅನುಭವದ ಹಿನ್ನೆಲಿಯಲ್ಲಿ ಮೆಲಕು ಹಾಕಿದಾಗ ಅದರ ಸತ್ಯವು ನಿಚ್ಚಳವಾಗಿ ಗೋಚರಿಸುತ್ತದೆ.
"ಪದ್ಮ ಪುರಾಣ" ಸುಮಾರು ಐವತ್ತಾರು ಸಾವಿರ (56,000) ಶ್ಲೋಕಗಳಿರುವ ಒಂದು ಗ್ರಂಥ. ಇಷ್ಟು ವಿಶಾಲ ಗ್ರಂಥದಲ್ಲಿರುವ ವಿಷಯಗಳ ಹರವನ್ನು ನೋಡಿದರೆ ವಿಸ್ಮಯವಾಗುತ್ತದೆ. "ವ್ಯಾಸ ಪೂರ್ಣಿಮಾ" ಸಂದರ್ಭದಲ್ಲಿ ಇಂತಹ ಅನೇಕ ಗ್ರಂಥಗಳ ಕರ್ತೃವಾದ ಭಗವಾನ್ ವೇದ ವ್ಯಾಸರಿಗೆ ನಮ್ಮ ಅತ್ಯಂತ ಕೃತಜ್ಞತಾ ಪೂರ್ವಕವಾದ ಗೌರವಾದರ, ನಮನಗಳು ಸಲ್ಲಬೇಕು.
Very apt tributes to greatest Rishi for all times Poojya Shree Veda vyasa
ReplyDelete