ಹಿಂದಿನ ಸಂಚಿಕೆಗಳಲ್ಲಿ ಅಷ್ಟ ಭೋಗಗಳು, ಅಷ್ಟ ಭಾಗ್ಯಗಳು ಮತ್ತು ಅಷ್ಟ ಐಶ್ವರ್ಯಗಳು ಎಂಬ ವಿಷಯಗಳ ಬಗ್ಗೆ ಸ್ವಲ್ಪಮಟ್ಟಿಗೆ ನೋಡಿದ್ದೆವು. ಅಷ್ಟ ಐಶ್ವರ್ಯಗಳಲ್ಲಿ ಸಂತಾನವೂ ಒಂದು ಎಂದು ಚರ್ಚಿಸಿದ್ದೆವು. (ಈ ಕೊನೆಯ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ). ಅನೇಕ ದಂಪತಿಗಳಿಗೆ ಎಲ್ಲ ಭೋಗ-ಭಾಗ್ಯ-ಐಶ್ವರ್ಯಗಳು ದೊರಕಿದ್ದರೂ ಸಂತಾನ ಇಲ್ಲ ಎನ್ನುವ ಒಂದು ಕೊರತೆ ಕಾಡುವುದು ಉಂಟು. ಅನೇಕ ಪುರಾಣದ ಕಥೆಗಳು ಪ್ರಾರಂಭವಾಗುವುದು ಈ ಕೊರತೆಯ ಕಾರಣದಿಂದಲೇ. ಮತ್ತೆ ಕೆಲವು ಕಥೆಗಳು ಪ್ರಾರಂಭವಾಗುವುದು ಈ ಸಂತಾನದ ಕಾರಣದಿಂದ ಉದ್ಭವವಾಗುವ ಸಮಸ್ಯೆಗಳಿಂದಲೂ ಹೌದು. ಹೀಗೆ, ಇದ್ದರೂ ಸಮಸ್ಯೆ, ಇಲ್ಲದಿದ್ದರೂ ಸಮಸ್ಯೆ ಸೃಷ್ಟಿಸುವುದು ಈ ಸಂತಾನವೆಂಬ ಒಂದು ಆಸ್ತಿಯ ವಿಶೇಷತೆ. ಕೆಲವೊಮ್ಮೆ ಈ ಆಸ್ತಿ ಭಾದ್ಯತೆ ಆಗುವುದೂ ಸಾಧ್ಯ. ಹೀಗೂ ಉಂಟು. ಹಾಗೂ ಉಂಟು!
ನಮ್ಮ ಎರಡು ಮಹಾಕಾವ್ಯಗಳು ಮತ್ತು ವಾಂಗ್ಮಯದ ಎರಡು ಕಣ್ಣುಗಳಾದ ರಾಮಾಯಣ ಮತ್ತು ಮಹಾಭಾರತ ನಿಜವಾಗಿ ಪ್ರಾರಂಭವಾಗುವುದು ಈ ಸಮಸ್ಯೆಯಿಂದಲೇ. ರಾಮಾಯಣದ ತಿರುಳು ದಶರಥನ ಮಕ್ಕಳಿಲ್ಲವೆಂಬ ಕೊರಗು ಮತ್ತು ಪುತ್ರಕಾಮೇಷ್ಟಿಯಿಂದ ಹುಟ್ಟುತ್ತದೆ. ಮಹಾಭಾರತದ ಅಸಲಿ ಪ್ರಾರಂಭ ಧೃತರಾಷ್ಟ್ರನ ನೂರಾಒಂದು ಮಕ್ಕಳಿಂದ!
*****
ನಮ್ಮ ಬಾಲ್ಯದ ಕಾಲದಲ್ಲಿ ಹಿರಿಯರು ಸಂವಾದದಲ್ಲಿ ತೊಡಗಿದಾಗ ಮೊದಲನೇ ಪ್ರಶ್ನೆ "ಮಕ್ಕಳೆಷ್ಟು?" ಎನ್ನುವುದೇ ಆಗಿರುತ್ತಿತ್ತು. ಕೆಲವರಿಗೆ ಹೆಚ್ಚು ಮಕ್ಕಳು. ನಾಲ್ಕು, ಆರು, ಎಂಟು ಮಕ್ಕಳಿರುತ್ತಿದ್ದುದು ಸಾಮಾನ್ಯವಾಗಿರುತ್ತಿತ್ತು. ಹೆಚ್ಚು ಮಕ್ಕಳಿರುವವರಿಗೆ ಕಡಿಮೆಯಿರುವವರು ಸಮಾಧಾನ ಹೇಳುವಂತೆ "ಇರಲಿ ಬಿಡಿ. ಯಾರಾದರೂ ಕೇಳುವುದು 'ಎಷ್ಟು ಮಕ್ಕಳು?' ಎಂದಲ್ಲವೇ? 'ಎಷ್ಟು ಆಸ್ತಿ?' ಎಂದು ಯಾರೂ ಕೇಳುವುದಿಲ್ಲವಲ್ಲ?" ಎನ್ನುತ್ತಿದ್ದರು. ಯಾರಿಗಾದರೂ ಮಕ್ಕಳಿಲ್ಲದಿದ್ದರೆ ಇದ್ದವರು ಇದೇ ರೀತಿ "ಆಗುತ್ತವೆ ಬಿಡಿ. ದೇವರು ಕಣ್ಣು ಬಿಟ್ಟು ನೋಡಿದರೆ ಎಷ್ಟು ಹೊತ್ತು?" ಅನ್ನುತ್ತಿದ್ದರು. ಈಗ ಮಕ್ಕಳ ವಿಷಯ ಮಾತಾಡುವುದೇ ಒಂದು ಕಷ್ಟದ ಕೆಲಸ. ಅದರ ಪ್ರಸ್ತಾಪ ಮಾಡಬೇಕೋ ಮಾಡಬಾರದೋ ಗೊತ್ತಾಗುವುದಿಲ್ಲ. ರಾಜಕೀಯ ವಿಷಯಗಳು ಮತ್ತು ಹವಾಮಾನ ವಿವರದಿಂದ ಮಾತುಕತೆ ಪ್ರಾರಂಭಿಸುವುದು ಉಭಯತ್ರರಿಗೂ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತು.
ನಮ್ಮ ದೇಶ ಸ್ವಾತಂತ್ರ್ಯ ಪಡೆದಾಗಿನಿಂದ "ಅತಿಸಂತಾನ" ಒಂದು ದೊಡ್ಡ ಸಮಸ್ಯೆ ಎಂದು ಗುರುತಿಸಿದ ಸರ್ಕಾರ "ಮಿತಸಂತಾನ" ಎನ್ನುವ ಕಾರ್ಯಕ್ರಮ ರೂಪಿಸಿತು. ಅರವತ್ತರ ದಶಕದಲ್ಲಿ "ಒಂದು ಎರಡು ಬೇಕು; ಮೂರು ಸಾಕು" ಎನ್ನುವ ಘೋಷಣೆ ಚಾಲ್ತಿಯಲ್ಲಿತ್ತು. ಎಪ್ಪತ್ತರ ದಶಕದಲ್ಲಿ ಅದು "ಆರತಿಗೊಬ್ಬ ಮಗಳು; ಕೀರುತಿಗೊಬ್ಬ ಮಗ" ಎಂದು ಬದಲಾಯಿತು. ಎಲ್ಲಾ ಸರ್ಕಾರೀ ಕಟ್ಟಡಗಳ ಮೇಲೆ ಈ ಘೋಷವಾಕ್ಯಗಳು ರಾರಾಜಿಸಿದವು. "ಸ್ತ್ರೀ ಸ್ವಾತಂತ್ಯವಾದಿಗಳು" ಎರಡನೆಯ ಘೋಷಣೆಗೆ ನ್ಯಾಯವಾಗಿಯೇ ಆಕ್ಷೇಪಿಸಿದರು. "ಮಗಳಿಂದ ಕೀರ್ತಿ ಇಲ್ಲವೇ?" ಎಂದು ಪ್ರಬಲವಾಗಿ ಪ್ರತಿರೋಧ ಬಂತು. "ಆರೋಗ್ಯ ಮತ್ತು ಕುಟುಂಬ ಯೋಜನೆ" ಇಲಾಖೆ ತನ್ನ ಹೆಸರು ಬದಲಾಯಿಸಿಕೊಂಡು "ಆರೋಗ್ಯ ಮತ್ತು ಕುಟುಂಬ ಕಲ್ಯಾಣ" ಇಲಾಖೆ ಆಯಿತು. ಎಂಭತ್ತರ ದಶಕದಲ್ಲಿ ಸರ್ಕಾರ ಕಷ್ಟ ಪಡುವ ಕಾಲ ಕಳೆದು ಜನರೇ "ಒಂದು ಮಗು ಸಾಕು" ಎನ್ನತೊಡಗಿದರು. ತೊಂಬತ್ತರ ದಶಕದಲ್ಲಿ "ಇರುವುದಕ್ಕಿಂತ ಇಲ್ಲದಿರುವುದೇ ಒಳ್ಳೆಯದು" ಎಂದು ಬಾಯಲ್ಲಿ ಹೇಳದಿದ್ದರೂ ಆಚರಣೆಯಲ್ಲಿ ತಂದರು.
ಹೊಸ ಶತಮಾನದಲ್ಲಿ ಇನ್ನೂ ಪ್ರಚಂಡ ಬದಲಾವಣೆಗಳಾದುವು. ಸಮಸ್ಯೆಯ ಮೂಲಕ್ಕೇ ಕೊಡಲಿ ಪೆಟ್ಟು ಬೀಳತೊಡಗಿತು. ಮದುವೆಯೆನ್ನುವುದು ಇದ್ದರೆ ತಾನೇ ಮಕ್ಕಳು ಎನ್ನುವ ಸಮಸ್ಯೆ? ಮದುವೆಯೇ ಬೇಡ. ಹಾಗೆಯೇ ಜೊತೆಯಲ್ಲಿ ಇರೋಣ. ಜೊತೆ ಬೇಡ ಎಂದಾಗ ಸುಮ್ಮನೆ ಬೇರೆ ಹೋದರಾಯಿತು. ಇದರಿಂದ ವಿವಾಹ ವಿಚ್ಚೇದನ ಮತ್ತು ಅದರಿಂದಾಗುವ ಸಮಸ್ಯೆಗಳೇ ರದ್ದು ಎಂದು ಯುವ ಜನಾಂಗ ತೀರ್ಮಾನಿಸಿತು. ಆದರೂ ಕೆಲವೆಡೆ ಅಪಘಾತಗಳಾಗಿ ಮದುವೆಯಿಲ್ಲದೇ ಮಕ್ಕಳಾಗತೊಡಗಿದವು. ಕಳೆದ ದಶಕದಲ್ಲಿ ಈ ಎಲ್ಲ ರೀತಿಯ ಮಕ್ಕಳ ಸಮಸ್ಯೆಗೆ ಅತಿ ದೊಡ್ಡ ಪರಿಹಾರ ಸಿಕ್ಕಿದೆ. ಗಂಡು-ಹೆಣ್ಣು ಮದುವೆಯಾದರೆ ಅಥವಾ ಜೊತೆಯಲ್ಲಿದ್ದರೆ ತಾನೇ ಮಕ್ಕಳ ಸಮಸ್ಯೆ? ಸಲಿಂಗ ವಿವಾಹದಿಂದ ಈ ತೊಂದರೆಯೇ ಇರುವುದಿಲ್ಲವಲ್ಲ. ಗಂಡು-ಗಂಡು ಮತ್ತು ಹೆಣ್ಣು-ಹೆಣ್ಣು ಮದುವೆಯಾದರೆ ಮಕ್ಕಳಾಗುವ ಸಂಭವವೇ ಇಲ್ಲವಲ್ಲ! ಈಗ ಇದರ ಕಾಲ ನಡೆಯುತ್ತಿದೆ.
*****
ದಂಪತಿಗಳಿಗೆ ಮಕ್ಕಳು ಏಕೆ ಹುಟ್ಟುತ್ತಾರೆ? ಹುಟ್ಟುವ ಮಕ್ಕಳು ಯಾವ ರೀತಿಯವು? ಜನ್ಮ-ಜನ್ಮಗಳ ಸಂಬಂಧಗಳು ಉಂಟೋ? ಈ ರೀತಿಯ ಪ್ರಶ್ನೆಗಳಿಗೆ "ಪದ್ಮ ಪುರಾಣ" ತನ್ನ ಒಂದು ಪ್ರಸಂಗದಲ್ಲಿ ಉತ್ತರ ಕೊಡುತ್ತದೆ.
ನರ್ಮದಾ ನದಿಯ ತೀರದ "ವಾಮನ ತೀರ್ಥ" ಎನ್ನುವ ಪ್ರದೇಶದಲ್ಲಿ ಸೋಮಶರ್ಮ ಎಂಬ ಒಬ್ಬ ಸಾತ್ವಿಕನು ವಾಸವಾಗಿರುತ್ತಾನೆ. ಅವನ ವಿವಾಹ ಚ್ಯವನ ಋಷಿಗಳ ಮಗಳಾದ ಸುಮನಾ ಎನ್ನುವ ಯುವತಿಯೊಡನೆ ಆಗುತ್ತದೆ. ("ಸತಿ ಸುಕನ್ಯ" ಚಲನಚಿತ್ರ ನೋಡಿದವರಿಗೆ ಸುಕನ್ಯಳ ಗಂಡ ಚ್ಯವನ ಋಷಿ ಎಂದು ನೆನಪಿಗೆ ಬರಬಹುದು. "ಚ್ಯವನಪ್ರಾಶ" ಅನ್ನುವುದನ್ನು ಅಶ್ವಿನಿ ದೇವತೆಗಳ ಕಡೆಯಿಂದ ಭೂಮಿಗೆ ತಂದ ತಪಸ್ವಿಗಳು ಅವರು. ಭೃಗು ಋಷಿಗಳ ವಂಶಜರು). ತಂದೆಗೆ ತಕ್ಕ ಮಗಳಾದ ಸುಮನಾ ಬಹಳ ತಿಳುವಳಿಕೆಯುಳ್ಳ ಹೆಣ್ಣು ಮಗಳು. ಹೆಸರಿಗೆ ತಕ್ಕಂತೆ ಒಳ್ಳೆಯ ಮನಸ್ಸಿನವಳು. ಸೋಮಶರ್ಮನೂ ಜ್ಞಾನಿಯೇ. ಚೆನ್ನಾಗಿ ಸಂಸಾರ ಮಾಡುತ್ತಿದ್ದ ಈ ದಂಪತಿಗಳಿಗೆ ಮಕ್ಕಳಿರುವುದಿಲ್ಲ. ಸೋಮಶರ್ಮನಿಗೆ ಎರಡು ಚಿಂತೆಗಳು. ಮೊದಲನೆಯದು ದಾರಿದ್ರ್ಯ. ಎರಡನೆಯದು ಮಕ್ಕಳಿಲ್ಲ ಎನ್ನುವುದು. ಹೀಗೆ ಚಿಂತಾಕ್ರಾಂತನಾಗಿರುವ ಸೋಮಶರ್ಮನನ್ನು ಗಮನಿಸಿದ ಸುಮನಾ ಒಂದು ದಿನ ಅವನಿಗೆ ಸಮಾಧಾನ ಹೇಳುತ್ತಾಳೆ. ದಾರಿದ್ರ್ಯದ ವಿಷಯದಲ್ಲಿ ಹೇಳಿದ ಸಮಾಧಾನದ ವಿಷಯ ಮುಂದೊಮ್ಮೆ ನೋಡೋಣ. ಈಗ ಮಕ್ಕಳ ಸಮಸ್ಯೆ ಪ್ರಸ್ತಾಪ ಬಂದಿರುವುದರಿಂದ ಅದನ್ನು ಗಮನಿಸೋಣ.
ಸುಮನಾ ಹೇಳುವ ಸೂತ್ರರೂಪವಾದ ಮಕ್ಕಳ ನಾಲ್ಕು ವಿಧಗಳ ವಿವರಣೆ ಹೀಗಿದೆ:
ಋಣಸಂಬಂಧಿನಃ ಕೇಚಿತ್ ಕೇಚಿತ್ ನ್ಯಾಸಾಪಹಾರಕಾ:ಲಾಭಪ್ರದಾ ಭವಂತೇ ಕೇ ಉದಾಸೀನಾ ತಥಾಪರೇ
- ಮೊದಲನೆಯ ವರ್ಗದ ಮಕ್ಕಳು "ಸಾಲ ವಸೂಲಿಗೆ ಬಂದವರು". ಹಿಂದಿನ ಜನ್ಮಗಳಲ್ಲಿ ನಾವು ಯಾರಿಂದಲಾದರೂ ಹಣ-ಕಾಸು, ವಸ್ತುಗಳನ್ನು ಸಾಲ ಪಡೆದು ಹಿಂದಿರುಗಿಸದಿದ್ದರೆ ಹಾಗೆ ಸಾಲಕೊಟ್ಟವರು ಈ ಜನ್ಮದಲ್ಲಿ ನಮ್ಮ ಮಕ್ಕಳಾಗಿ ಹುಟ್ಟಿ ನಮ್ಮಿಂದ ಅದನ್ನು ಬಡ್ಡಿ ಸಹಿತ ವಸೂಲಿ ಮಾಡಲು ಹುಟ್ಟಿದ ಮಕ್ಕಳು ಇವರು. ಇವರಿಂದ ತಂದೆ-ತಾಯಿಗಳಿಗೆ ಯಾವುದೇ ಪ್ರಯೋಜನ ಇರುವುದಿಲ್ಲ. ತಮ್ಮ ಸಾಲ ವಸೂಲಾಗುವವರೆಗೂ ಜೊತೆಯಲ್ಲಿದ್ದು, ಅದು ಮುಗಿದ ಕೂಡಲೇ ಹೊರಟು ಹೋಗುತ್ತಾರೆ. ಇವರು "ಋಣಸಂಬಂಧಿ ಮಕ್ಕಳು".
- ಎರಡನೆಯ ವರ್ಗದ ಮಕ್ಕಳು "ತಿಂದದ್ದು ಕಕ್ಕಿಸುವವರು". ಯಾವುದೋ ಜನ್ಮದಲ್ಲಿ ಇನ್ನೊಬ್ಬರ ಹಣವನ್ನು ಅಥವಾ ವಸ್ತು-ಆಸ್ತಿಗಳನ್ನು ಅನ್ಯಾಯವಾಗಿ ತಿಂದುಹಾಕಿದ್ದರೆ ಆ ರೀತಿ ಕಳೆದುಕೊಂಡವರು ಈ ಜನ್ಮದಲ್ಲಿ ಮಕ್ಕಳಾಗಿ ಬಂದು ಅದನ್ನು ಹಿಂಪಡೆಯುವವರು. ಮೊದಲನೆಯ ವರ್ಗದವರಿಗೂ ಇವರಿಗೂ ಏನು ವ್ಯತ್ಯಾಸ? ಮೊದಲನೆಯದು ನಾವು ಸಾಲ ಕೇಳಿ ಅವರು ಒಪ್ಪಿ ಕೊಟ್ಟವರು. ಎರಡನೆಯವರು ಅವರಿಂದ ನಾವು ಅನ್ಯಾಯವಾಗಿ ಕಿತ್ತುಕೊಂಡುದರಿಂದ ನಷ್ಟ ಅನುಭವಿಸಿದವರು. ಆದುದರಿಂದ ಇವರ ವ್ಯವಹಾರ ಮೊದಲನೆಯ ವರ್ಗಕ್ಕಿಂತ ಹೆಚ್ಚು ಕಠಿಣವಾಗಿರುತ್ತದೆ.
- ಮೂರನೆಯ ವರ್ಗದ ಮಕ್ಕಳು "ಲಾಭಪ್ರದರು". ಕಳೆದ ಜನ್ಮಗಳಲ್ಲಿ ನಾವು ಮತ್ತೊಬ್ಬರಿಗೆ ಉಪಕಾರ ಮಾಡಿದ್ದರೆ ಅದರ ಸ್ಮರಣೆಯಿಂದ ಈ ಜನ್ಮದಲ್ಲಿ ನಮಗೆ ಉಪಕಾರ ಮಾಡಲು ಹುಟ್ಟಿದವರು. ಇವರು ತಂದೆ-ತಾಯಿಯರಿಗೆ ಬಹಳ ಅನುಕೂಲ ಮಾಡಿಕೊಡುವ ಮಕ್ಕಳಾಗುತ್ತಾರೆ. ಕೆಲವೊಮ್ಮೆ ಮಕ್ಕಳು ತಾಯಿ ಮತ್ತು ತಂದೆ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅನುಕೂಲರಾಗಿರಬಹುದು. ಇದು ಮಕ್ಕಳಾಗಿ ಹುಟ್ಟಿದವರು ಯಾರಿಂದ ಹಿಂದೆ ಉಪಕೃತರಾಗಿದ್ದರೋ ಅದರ ಮೇಲೆ ಅವಲಂಬಿಸುತ್ತದೆ.
- ನಾಲ್ಕನೆಯ ವರ್ಗದ ಮಕ್ಕಳು "ಉದಾಸೀನ ಪುತ್ರರು". ಇವರು ಮೇಲಿನ ಮೂರೂ ಕಾರಣಗಳಿಲ್ಲದ ಮಕ್ಕಳು. ಇವರು ಅವರ ಹಿಂದಿನ ಜನ್ಮಗಳ ಫಲಗಳನ್ನು ಅನುಭವಿಸಲು ಹುಟ್ಟಿದವರು. ಜನ್ಮ ಪಡೆಯುವುದಕ್ಕಾಗಿ ಮಾತ್ರವೇ ತಾಯಿ-ತಂದೆಯರ ಆಶ್ರಯ ಪಡೆದವರು. ಇಂತಹವರು ತಮ್ಮ ಪಾಡು ತಾವು ನೋಡಿಕೊಂಡು ತಂದೆ-ತಾಯಿಯರ ವಿಷಯದಲ್ಲಿ ಉದಾಸೀನರಾಗಿರುತ್ತಾರೆ.
ಹಾಗಿದ್ದರೆ ಐದನೆಯ ಗುಂಪಿನ ಮಕ್ಕಳು ಯಾರು? ಹಿಂದಿನ ಯಾವುದೂ ಸಂಬಂಧಗಳಿರದೆ ಈ ಜನ್ಮದಲ್ಲಿ ಮಾಡಿದ ಸತ್ಕರ್ಮಗಳಿಂದ ತಂದೆ-ತಾಯಿಯರ ಮಕ್ಕಳಾಗಿ ಹುಟ್ಟಿದವರು ಈ ಗುಂಪಿಗೆ ಸೇರಿದವರು. ಹಿಂದಿನ ಜನ್ಮಗಳ ಸತ್ಕರ್ಮಗಳ ಕಾರಣವಾಗಿ ವರರೂಪವಾಗಿ ಈಗ ಹುಟ್ಟಿದವರೂ ಆಗಬಹುದು. ವಿವಾಹ ಪೂರ್ವದಲ್ಲಿ ಮಾಡಿದ ಒಳ್ಳೆಯ ಕೆಲಸಗಳ ಕಾರಣ ವಿವಾಹದ ನಂತರ ಶೀಘ್ರದಲ್ಲಿ ಹುಟ್ಟಬಹುದು. ಇಲ್ಲವೇ, ಮಕ್ಕಳಿಲ್ಲವೆಂದು ಕೊರಗುವಾಗ ಮಾಡುವ ಒಳ್ಳೆಯ ಕಾರ್ಯಗಳ ಫಲಸ್ವರೂಪವಾಗಿ ತಡವಾಗಿ ಹುಟ್ಟಿದವರು ಇರಬಹುದು. ಇಂತಹ ಮಕ್ಕಳಿಂದ ಮಾತಾ-ಪಿತೃಗಳಿಗೆ ಅತ್ಯಂತ ಸುಖವೂ, ಕೀರ್ತಿಯೂ, ಸಮಾಜದಲ್ಲಿ ಮನ್ನಣೆಯೂ ದೊರೆಯುವುದು.
*****
ನಾವು ನಮ್ಮ ತಂದೆ-ತಾಯಿಯರಿಗೆ ಎಂತಹ ಮಕ್ಕಳಾಗಿದ್ದೆವು? ನಮ್ಮ ಮಕ್ಕಳು ಮೇಲಿನ ಯಾವ ಗುಂಪಿಗೆ ಸೇರಿದವರು? ಈ ಪ್ರಶ್ನೆಗಳಿಗೆ ಉತ್ತರ ಅವರವರೇ ಕಂಡುಕೊಳ್ಳಬೇಕು.
ಜನ್ಮ-ಜನ್ಮಾಂತರಗಳು, ಪುನರ್ಜನ್ಮ, ಪಾಪ-ಪುಣ್ಯಗಳು, ವರ ಪಡೆಯುವುದು ಮುಂತಾದುವನ್ನು ನಂಬುವವರೂ ಇದ್ದಾರೆ. ನಂಬದವರೂ ಇದ್ದಾರೆ. ನಂಬಿದವರು ಮೇಲಿನ ವರ್ಗೀಕರಣವನ್ನು ಒಪ್ಪಿಕೊಳ್ಳಬಹುದು. ನಂಬದವರು ಅಪಹಾಸ್ಯ ಮಾಡಬಹುದು. ಆದರೆ, ಮೇಲಿನ ವರ್ಗೀಕರಣ ಒಂದು ಬಲವಾದ ತರ್ಕದ ತಳಹದಿಯ ಮೇಲೆ ನಿಂತಿದೆ ಎನ್ನುವುದನ್ನು ಖಂಡಿತವಾಗಿ ಒಪ್ಪಬಹುದು.
Very nice analysis as it is happening in these day
ReplyDeleteGood analysis of what is taking place
ReplyDeleteNice
ReplyDeleteಈ ಲೇಖನದಲ್ಲಿ ವಿವರಿಸಿರುವ ಒಂದೊಂದು ಸಾಲು ಅರ್ಥ ಪೊರ್ಣವಾಗಿದೆ.
ReplyDeleteಮಕ್ಕಳಿರಲವ್ವ ಮನೆ ತುಂಬಾ ಎಂಬ ಕಾಲದಿಂದ , ಮಕ್ಕಳೇ ಬೇಡ ಎನ್ನುವ ಎಂದು ತೀರ್ಮನಿಸಿರುವ ತನಕ ನೀಡಿರುವ ವಿವರಣೆ ಸೊಗಸಾಗಿದೆ.
ಐದು ರೀತಿಯ ಮಕ್ಕಳ ವರ್ಗಾವಣೆ ಅನೇಕರು ತಮ್ಮ ಜೀವನದಲ್ಲಿ ಅನುಭವಿಸಿರುತ್ತಾರೆ.