Wednesday, July 30, 2025

ಪುರಾಣಗಳ ವಿಸ್ತಾರ


ಕಳೆದ ಕೆಲವು ಸಂಚಿಕೆಗಳಲ್ಲಿ, ಅನೇಕ ವಿಷಯಗಳ ಸಂದರ್ಭಗಳಲ್ಲಿ "ಪದ್ಮ ಪುರಾಣ" ಮತ್ತು "ನಾರದೀಯ ಪುರಾಣ" ಇವುಗಳ ಕೆಲವು ಅಂಶಗಳನ್ನು ಚರ್ಚೆಯಲ್ಲಿ ಕಂಡಿದ್ದೆವು. ಇವುಗಳನ್ನು ಗಮನಿಸಿದ ಮಿತ್ರರೊಬ್ಬರು ಈ ಪುರಾಣಗಳ ವಿಸ್ತಾರ, ಮತ್ತು ಆಸಕ್ತರು ಇವುಗಳನ್ನು ಓದಬೇಕಾದರೆ ಎಲ್ಲಿ ಹುಡುಕಬೇಕು ಎನ್ನುವ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇವುಗಳನ್ನು  ಕುರಿತು ಸ್ವಲ್ಪ ಈಗ ನೋಡೋಣ. 

ಪುರಾಣಗಳ ಸಂದರ್ಭದಲ್ಲಿ ಸಾಮಾನ್ಯವಾಗಿ "ಅಷ್ಟಾದಶ ಪುರಾಣಗಳು" ಎಂದು ಹೇಳುವ ಪರಿಪಾಠ ಇದೆ. ಈ "ಹದಿನೆಂಟು ಪುರಾಣಗಳು" ಭಗವಾನ್ ವೇದವ್ಯಾಸರಿಂದ ರಚಿತವಾಗಿವೆ ಎಂದು ನಂಬಿಕೆ. ಇವುಗಳಲ್ಲದೇ ಬೇರೆ ಪುರಾಣಗಳು ಮತ್ತು ಇವುಗಳ ಜೊತೆಗೆ ಅನೇಕ ಉಪ-ಪುರಾಣಗಳೂ ಇವೆ. ಅನೇಕ ಜೈನ ಪುರಾಣಗಳೂ ಪ್ರಸಿದ್ಧವಾಗಿವೆ. ಅನೇಕರು ಇವುಗಳಲ್ಲಿ ಕೆಲವನ್ನು ಮಾನ್ಯ ಮಾಡುವುದಿಲ್ಲ. ಕೆಲವರು ವೈಷ್ಣವ ಪುರಾಣಗಳನ್ನು ಒಪ್ಪುವುದಿಲ್ಲ. ಮತ್ತೆ ಕೆಲವರು ಶೈವ ಪುರಾಣಗಳನ್ನು ಒಪ್ಪುವುದಿಲ್ಲ. "ಅಯ್ಯೋ, ಈ ಪುರಾಣಗಳ ಪುರಾಣವೇ ಬೇಡಪ್ಪ" ಅನ್ನುವವರಿಗೂ ಕಡಿಮೆಯಿಲ್ಲ. 

ಪುರಾಣಗಳಿಗೆ ವೈದಿಕ ವಾಂಗ್ಮಯದಲ್ಲಿ ವಿಶಿಷ್ಟ ಸ್ಥಾನವಿದೆ. ರಾಮಾಯಣ, ಮಹಾಭಾರತಗಳ ಜೊತೆ ಜೊತೆಯಾಗಿ ಇವುಗಳ ಉಲ್ಲೇಖ ಬರುತ್ತದೆ. ಅನೇಕ ಸಂದರ್ಭಗಳು, ಕಥೆಗಳು, ವಿವರಗಳು ಇವುಗಳೆಲ್ಲದರಲ್ಲೂ ಸಿಗುತ್ತವೆ. ಕೆಲವು ವಿವರಗಳು ಒಂದೇ ರೀತಿ ಇವೆ. ಮತ್ತೆ ಕೆಲವು ಅಲ್ಲಲ್ಲಿ ವ್ಯತ್ಯಾಸಗಳನ್ನೂ ಹೊಂದಿವೆ. 
*****

ಪುರಾಣಗಳನ್ನು "ಧರ್ಮ ಗ್ರಂಥಗಳು" ಎಂದು ಓದುವವರಿದ್ದಾರೆ. ಇವುಗಳನ್ನು ಕೇವಲ ಒಂದು ಸಾಹಿತ್ಯ ಪ್ರಕಾರ ಎಂದೂ ಓದಬಹುದು. ಅನೇಕ ಪುರಾಣಗಳ ಭಾಗಗಳು ಒಳ್ಳೆಯ ಕಾವ್ಯವೂ ಹೌದು. ನಮ್ಮ ದೈನಂದಿನ ಜೀವನದಲ್ಲಿ ಕಂಡುಬರುವ ಅನೇಕ ವಿಷಯಗಳ ಚರ್ಚೆ ಇವುಗಳಲ್ಲಿ ಕಾಣಬಹುದು. ಜೀವನವನ್ನು ಹಸನು ಮಾಡಿಕೊಳ್ಳಲು ಬೇಕಾದ ಅಂಶಗಳನ್ನು ಹೇರಳವಾಗಿ ಇವುಗಳಲ್ಲಿ ನೋಡಬಹುದು. ನಮಗೆ ಅರ್ಥವಾಗದ ಅನೇಕ ಗೋಜಲು ಪ್ರಶ್ನೆಗಳಿಗೆ ಇವುಗಳಲ್ಲಿ ಉತ್ತರವನ್ನೂ ಕಂಡುಕೊಳ್ಳಬಹುದು. 

ಅನೇಕ ಪುರಾಣಗಳ ಶ್ಲೋಕಗಳು ನಮ್ಮಲ್ಲಿ ಅನೇಕರು ದೈನಂದಿನ ಜೀವನದಲ್ಲಿ ಪೂಜೆ-ಪುನಸ್ಕಾರಗಳಲ್ಲಿ ಹೇಳುವ ಅಭ್ಯಾಸವೂ ಇದೆ. ಇವು ಪುರಾಣಗಳ ಶ್ಲೋಕಗಳು ಎಂದು ಅನೇಕರಿಗೆ ಗೊತ್ತಿಲ್ಲ. ಅಷ್ಟೇ. ಹಿಂದಿನ "ಏಕಾದಶಿ ಮತ್ತು ರುಕ್ಮಾ೦ಗದ ಮಹಾರಾಜ" ಅನ್ನುವ ಸಂಚಿಕೆಯಲ್ಲಿ "ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮಃ" ಎನ್ನುವ ಶ್ಲೋಕದ ಮೂಲ "ನಾರದ ಪುರಾಣ"ದಲ್ಲಿದೆ ಎಂದು ನೋಡಿದೆವು. (ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು).  ಸರ್ವಸಮರ್ಪಣ ಕಾಲದಲ್ಲಿ ಹೇಳುವ "ಕಾಯೇನ ವಾಚಾ, ಮನಸಾ ಇಂದ್ರಿಯೈರ್ವಾ, ಬುಧ್ಯಾತ್ಮನಾವಾ"  ಅನ್ನುವುದೂ ಶ್ರೀಮದ್ ಭಾಗವತದಿಂದ ಬಂದಿರುವುದು. ಹೀಗೆ ಅನೇಕ ಉದಾಹರಣೆಗಳು ಉಂಟು. 

"ಪುರಾಣಗಳನ್ನು ಓದದಿದ್ದರೆ ಏನಾಗುತ್ತದೆ?" ಎಂದು ಯಾರಾದರೂ ಕೇಳಬಹುದು. ಅದಕ್ಕೆ ಪ್ರಾಯಶಃ ಸರಿಯಾದ ಉತ್ತರ "ಏನೂ ಆಗುವುದಿಲ್ಲ" ಎಂದೇ ಇರಬೇಕು! ಪುರಾಣಗಳು ಎಂದು ಒಂದು ಇದೆ ಅನ್ನುವುದೇ ಗೊತ್ತಿಲ್ಲದವರೂ ಸುಖವಾಗಿ ಜೀವನ ಮಾಡಿಕೊಂಡಿದ್ದಾರೆ ಅನ್ನುವುದು ನಮ್ಮ ಕಣ್ಣ ಮುಂದೆ ಇದೆ. ಓದು-ಬರಹ ಗೊತ್ತಿಲ್ಲದೇ ಅನೇಕರು ಇಡೀ ಜೀವನವನ್ನೇ ಕಳೆಯುವುದೂ ಉಂಟು. ಸುಖ ಅನ್ನುವುದರ ಪರಿಭಾಷೆ ಏನು ಅನ್ನುವುದರ ಮೇಲೆ ಇದರ ಉತ್ತರವನ್ನು ಅವರವರು ತಮಗೆ ಸರಿಬಂದಂತೆ ಕಂಡುಕೊಳ್ಳಬಹುದು. 

*****

"ಗ್ರಂಥ" ಅನ್ನುವ ಪದವನ್ನು ಅನೇಕ ಸಂದರ್ಭಗಳಲ್ಲಿ ಉಪಯೋಗಿಸುತ್ತೇವೆ. "ಗ್ರಂಥಾಲಯ" (ಲೈಬ್ರರಿ), "ಗ್ರಂಥಪಾಲಕ" (ಲೈಬ್ರರಿಯನ್), "ಗ್ರಂಥ ಸಂಪತ್ತು" (ಲಿಟರೇಚರ್) ಮುಂತಾಗಿ ಮಾತಿನಲ್ಲಿ ಪ್ರಯೋಗಿಸುವುದರ ಜೊತೆಗೆ ಅಲ್ಲಲ್ಲಿ ಫಲಕಗಳನ್ನೂ (ಬೋರ್ಡುಗಳು) ಕಾಣಬಹುದು. ಈ "ಗ್ರಂಥ" ಅಂದರೇನು? ಗ್ರಂಥ ಅನ್ನುವುದಕ್ಕೆ ಅನೇಕ ಅರ್ಥಗಳಿವೆ. ದಾರಗಳಿಂದ ಕಟ್ಟಿಟ್ಟದ್ದು ಎನ್ನುವುದೂ ಒಂದು ಅರ್ಥ. ತಾಳೆಗರಿಯ ಮೇಲೆ ಬರೆದಿರುವ ಕೃತಿಗಳನ್ನು ದಾರಗಳಿಂದ ಸೇರಿಸಿ ಕಟ್ಟಿಡುತ್ತಿದ್ದುದರಿಂದ ಹೀಗೆ ಪ್ರಯೋಗ ಬಂದಿರಬಹುದು. ಸಿಖ್ಖರ ಧರ್ಮಗ್ರಂಥ "ಗುರು ಗ್ರಂಥ್ ಸಾಹಿಬ್" ಅಂದು ಕರೆಯಲ್ಪಡುತ್ತದೆ. ಅದರ ರಕ್ಷಣೆ ಮಾಡುವ ಪಾಲಕರಿಗೆ "ಗ್ರಂಥಿ" ಅನ್ನುತ್ತಾರೆ. ಯೋಗ ಮತ್ತು ಆಯುರ್ವೇದಗಳಲ್ಲಿ "ಗ್ರಂಥಿ" ಅನ್ನುವುದಕ್ಕೆ ಬೇರೆ ಅರ್ಥಗಳಿವೆ. 

ಸಂಸ್ಕೃತ ಸಾಹಿತ್ಯದ ಸಂದರ್ಭದಲ್ಲಿ "ಗ್ರಂಥ" ಎಂದರೆ ಮೂವತ್ತೆರಡು ಅಕ್ಷರಗಳು (32 ಅಕ್ಷರಗಳು) ಉಳ್ಳ ಒಂದು ಶ್ಲೋಕ. ಹೀಗೆ ನೋಡಿದಾಗ ರಾಮಾಯಣ 24,000 ಶ್ಲೋಕಗಳುಳ್ಳದ್ದು. ಮಹಾಭಾರತ ಅದರ ಐದುಪಟ್ಟು ದೊಡ್ಡದು. ಮಹಾಭಾರತದ ವಿಸ್ತಾರ 1,25,000 ಶ್ಲೋಕಗಳು. ಹೆಸರಾಂತ ಗ್ರೀಕ್ ಮಹಾಕೃತಿಗಳಾದ, ಹೋಮರ್ ಮಹಾಕವಿಯ "ಇಲಿಯಡ್" ಮತ್ತು "ಒಡಿಸ್ಸಿ" ಇವುಗಳ ಒಟ್ಟು ಗಾತ್ರಕ್ಕಿಂತ ಸುಮಾರು ಹತ್ತು ಪಟ್ಟು ದೊಡ್ಡದು ಮಹಾಭಾರತ. (ಇಲಿಯಡ್ ಸುಮಾರು 15,700 ಸಾಲುಗಳ ಕೃತಿ. ಒಡಿಸ್ಸಿ ಸುಮಾರು 12,100 ಸಾಲುಗಳುಳ್ಳದ್ದು. ಇವುಗಳ ಒಟ್ಟು ಗಾತ್ರ 27,800 ಸಾಲುಗಳು). ಮಹಾಭಾರತದ ಗಾತ್ರ (ಹರಿವಂಶವನ್ನೂ ಸೇರಿಸಿದರೆ) ಸುಮಾರು 2,50,000 ಸಾಲುಗಳಿಗಿಂತಲೂ ಹೆಚ್ಚು. ಹೀಗೆ ಲೆಕ್ಕಾಚಾರ. 

"ಸುಮಾರು" ಎಂದು ಏಕೆ ಹೇಳುತ್ತಾರೆ? ಸಂಸ್ಕೃತ ಕೃತಿಗಳಲ್ಲಿ ಎರಡು ಸಾಲಿನ ಮತ್ತು ನಾಲ್ಕು ಸಾಲಿನ ಶ್ಲೋಕಗಳಿರುತ್ತವೆ. ಅನೇಕ ವೇಳೆ ಮಧ್ಯೆ ಮಧ್ಯೆ ಗದ್ಯವೂ ಸೇರಿರುತ್ತದೆ. ಈ ಕಾರಣಗಳಿಗಾಗಿ. ಇದರ ಜೊತೆಗೆ ಅಚ್ಚು ಮತ್ತು ಕಾಗದದ ಮೇಲೆ ಮುದ್ರಣ ಇಲ್ಲದ ಕಾಲದಲ್ಲಿ, ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ಕೇವಲ ಬಾಯಿಪಾಠದ ಮೂಲಕ ವರ್ಗಾವಣೆ ಆಗುತ್ತಿದ್ದ ಸಮಯದಲ್ಲಿ, ಶ್ಲೋಕಗಳ ರೂಪ ಬಹಳ ಅನುಕೂಲಕರವಾಗಿತ್ತು. ಇದೇ ಕಾರಣಕ್ಕೆ ಒಂದು ಕಡೆಯ ಪಾಠದಿಂದ (ವರ್ಷನ್) ಮತ್ತೊಂದು ಕಡೆಯ ಪಾಠಕ್ಕೆ ವ್ಯತ್ಯಾಸಗಳಾಗಿ "ಪಾಠಾ೦ತರ" ಏನುವ ಕ್ರಮ ನಡೆದು ಬಂತು. 

*****

ಈ ಹಿನ್ನೆಲೆಯಲ್ಲಿ ಪುರಾಣಗಳ ವಿಸ್ತಾರವೇನು? ಇವುಗಳ ಲೆಕ್ಕ ಎಲ್ಲಿ ಸಿಗುತ್ತದೆ? ಇವು ಬಹಳ ಆಸಕ್ತಿ ಹುಟ್ಟಿಸುವ ಪ್ರಶ್ನೆಗಳು. ಹದಿನೆಂಟು ಪುರಾಣಗಳ ಖಚಿತವಾದ ಲೆಕ್ಕ ನಮಗೆ ಸಿಗುವುದು "ನಾರದ ಪುರಾಣ" ಪ್ರಾರಂಭದ ಶ್ಲೋಕಗಳಲ್ಲಿ. ಚತುರ್ಮುಖ ಬ್ರಹ್ಮನು ತನ್ನ ಮಗ ಮರೀಚಿಗೆ ತಿಳಿಸಿದಂತೆ ಹದಿನೆಂಟು ಪುರಾಣಗಳು ಮತ್ತು ಅವುಗಳ ಗಾತ್ರ ಈ ರೀತಿ ಇದೆ:

01.  ಬ್ರಹ್ಮ ಪುರಾಣ              10,000
02.  ಪದ್ಮ ಪುರಾಣ               55,000
03.  ವಿಷ್ಣು ಪುರಾಣ               23,000
04.  ವಾಯು ಪುರಾಣ            24,000 
05.  ಭಾಗವತ ಪುರಾಣ          18,000
06.  ನಾರದೀಯ ಪುರಾಣ       25,000
07.  ಮಾರ್ಕಂಡೇಯ ಪುರಾಣ    9,000
08.  ಆಗ್ನೇಯ ಪುರಾಣ           15,000
09.  ಭವಿಷ್ಯ ಪುರಾಣ             14,000
10.  ಬ್ರಹ್ಮವೈವರ್ತ ಪುರಾಣ    18,000
11.  ಲಿಂಗ ಪುರಾಣ               11,000
12.  ವರಾಹ ಪುರಾಣ             24,000
13.  ಸ್ಕಾ೦ದ ಪುರಾಣ             81,000
14.  ವಾಮನ ಪುರಾಣ            10,000
15.  ಕೂರ್ಮ ಪುರಾಣ             17,000
16.  ಮತ್ಸ್ಯ ಪುರಾಣ               14,000
17.  ಗರುಡ ಪುರಾಣ               19,000
18.  ಬ್ರಹ್ಮಾಂಡ ಪುರಾಣ          12,000

ಹದಿನೆಂಟು ಪುರಾಣಗಳು       3,99,000   

ಹದಿನೆಂಟು ಪುರಾಣಗಳ ಒಟ್ಟು ಗಾತ್ರ ನಾಲ್ಕು ಲಕ್ಷ ಶ್ಲೋಕಗಳು ಎಂದು ಹೇಳುವುದಕ್ಕೆ ಆಧಾರ ಇದು. ಇದರ ಪ್ರಕಾರ ಹದಿನೆಂಟು ಪುರಾಣಗಳ ಒಟ್ಟು ಗಾತ್ರ ರಾಮಾಯಣದ ಗಾತ್ರಕ್ಕಿಂತ ಹದಿನಾರರಷ್ಟು! ಮಹಾಭಾರತಕ್ಕಿಂತ ಮೂರುಪಟ್ಟಿಗೂ ಹೆಚ್ಚು. ಮಹಾಕವಿ ಹೋಮರನ ಕೃತಿಗಳ ಸುಮಾರು ಮೂವತ್ತೈದರಷ್ಟು. ಇಷ್ಟು ಅಗಾಧ ಹರವು ಅಷ್ಟಾದಶ ಪುರಾಣಗಳದ್ದು. 

*****

ಈ ಪುರಾಣಗಳ ಆಳ-ಅಗಲಗಳನ್ನು ಪ್ರವೇಶಿಸಿದರೆ ಧಾರ್ಮಿಕ, ಆಧ್ಯಾತ್ಮಿಕ ವಿಷಯಗಳನ್ನು ಬಿಟ್ಟೂ ಸಹ, ಜೀವನದ ಅನೇಕ ಆಯಾಮಗಳ ಬಗ್ಗೆ ಸಾವಿರಾರು ವರುಷಗಳ ಹಿಂದೆಯೇ ನಮ್ಮ ಹಿರಿಯರು ಎಷ್ಟು ಆಳವಾದ ಅಧ್ಯಯನ ನಡೆಸಿ, ಅವುಗಳ ಸಂಚಿತ ಜ್ಞಾನವನ್ನು ಹೇಗೆ ಕೂಡಿಟ್ಟಿದ್ದಾರೆ ಎಂದು ತಿಳಿಯಬಹುದು. ಒಮ್ಮೆ ಇವುಗಳನ್ನು ಓದುವುದೇ ಒಂದು ಪ್ರಯಾಸದ ಕೆಲಸ. ಇಂತಹ ಕೃತಿಗಳನ್ನು ಹೇಗೆ ರಚಿಸಿದರು, ಅವುಗಳು ಅನೇಕ ಕಠಿಣ ಸಂದರ್ಭಗಳಲ್ಲಿಯೂ ಉಳಿದುಕೊಂಡು ಇಂದಿಗೂ ನಮಗೆ ಲಭ್ಯವಿವೆ ಎನ್ನುವುದು ಒಂದು ದೊಡ್ಡ ವಿಸ್ಮಯವೇ ಸರಿ. 

ಈ ಪುರಾಣಗಳ ರಚನೆಯ ಬಗ್ಗೆ ಇರುವ ಅಭಿಪ್ರಾಯಗಳು, ಆಸಕ್ತರು ಓದಲು ಇರುವ ಅನುಕೂಲಗಳು ಮುಂತಾದ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. 

3 comments:

  1. ಅಬ್ಬಾ, ಇಷ್ಟೊಂದು ಪುರಾಣಗಳು ಇದೆ, ಎಂಬುದರ ಬಗ್ಗೆ ಗೊತ್ತಿರಲಿಲ್ಲ, ಅದೂ ಒಂದು ವಿಷಯ ಎಂಬ ಕಲ್ಪನೆ ಯೂ ಇರಲಿಲ್ಲ, ವಿವರ ವಾಗಿ ಅರ್ಥೈಸಿ ತಿಳಿಸಿರುವುದಕ್ಕೆ ಧನ್ಯವಾದಗಳು

    ReplyDelete
  2. ನಮ್ಮ ಪುರಾಣಗಳ ಆಳ, ವಿಸ್ತಾರ, ಅಗಲ ಬಹಳ ಪ್ರಭಾವಿ, ಹಾಗಾಗಿಯೇ ನಮ್ಮದು ವಿಶಿಷ್ಟವಾಗಿಯೇ ಕಾಣುತ್ತೆ.

    ಓದು ಬರಹ ಇಲ್ಲದವನು / ಇಲ್ಲದವಳು ವೇದ ಶಾಸ್ತ್ರ ಪುರಾಣಗಳ ಸಾರವನ್ನು ಯಾವುದಾದರೂ ರೀತಿಯಲ್ಲಿ ಕೇಳಿ, ಆಚರಣೆಗೆ ತಂದುಕೊಂಡಿರುತ್ತಾರೆ, ತಮಗರಿವಿಲ್ಲದೆ. ವಿಮರ್ಶೆ ವಿಶ್ಲೇಷಣೆಗಳ ಗೊಡವೆಗೂ ಹೋಗದೆ ಇರುತ್ತಾರೆ, ಹಾಗಾಗಿ ಅವರು ಸಂತೃಪ್ತರು.

    🙏🤝💐👏👌🚩

    ReplyDelete
  3. ಪುರಾಣಗಳ ಪುರಾಣ ಅದ್ಭುತ, ಅಗಾಧ, ಕಲ್ಪನೆ ಗೆ ಮೀರಿದ ಸಾಧನೆ
    Namo Namaha 🙏🙏🙏🙏

    ReplyDelete