"ವಿದುರ, ಯುಧಿಷ್ಠಿರ ಮತ್ತು ವೀರಬಾಹು" ಎನ್ನುವ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ ದೂರ್ವಾಸ ಮಹರ್ಷಿಗಳು ಧರ್ಮ ದೇವತೆಯನ್ನು ಕುರಿತು ತಪಸ್ಸು ಮಾಡಿದ್ದು, ಧರ್ಮ ದೇವತೆ ಪ್ರತ್ಯಕ್ಷವಾಗಲು ತಡಮಾಡಿದ್ದು, ಮತ್ತು ಅದರಿಂದ ಕುಪಿತರಾದ ದೂರ್ವಾಸ ಮಹರ್ಷಿಗಳು ಧರ್ಮ ದೇವತೆಗೆ ಮೂರು ಶಾಪಗಳನ್ನು ಕೊಟ್ಟಿದ್ದು, ಇವುಗಳ ಬಗ್ಗೆ ಸ್ವಲ್ಪಮಟ್ಟಿಗೆ ನೋಡಿದ್ದೆವು. ಈ ಸಂಚಿಕೆಯ ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.
ಸಂಚಿಕೆಯ ಕೊನೆಯಲ್ಲಿ ಕೆಲವು ಪ್ರಶ್ನೆಗಳನ್ನು ಹಾಕಿಕೊಂಡಿದ್ದೆವು. "ದೂರ್ವಾಸರು ಧರ್ಮ ದೇವತೆಗೆ ಶಾಪ ಕೊಟ್ಟಿದ್ದು ಸರಿಯೇ? ಧರ್ಮ ದೇವತೆ ಅದನ್ನು ಯಾಕೆ ಒಪ್ಪಿಕೊಂಡನು? ಧರ್ಮ ದೇವತೆಗೆ ಅದನ್ನು ತಪ್ಪಿಸಲು ಆಗಲಿಲ್ಲವೇ?" ಎಂಬುವು ಆ ಪ್ರಶ್ನೆಗಳು. ನಮ್ಮ ಪುರಾಣ-ಪುಣ್ಯ ಕಥೆಗಳಲ್ಲಿ ಈ ರೀತಿ ಅನೇಕ ಶಾಪ ಕೊಡುವ ಪ್ರಸಂಗಗಳನ್ನು ಕಾಣಬಹುದು. ಅನೇಕ ಬಾರಿ ಶಾಪ ಕೊಡುವವರು ಅದಕ್ಕೆ ಗುರಿಯಾಗುವವರಿಗಿಂತ ಯೋಗ್ಯತೆಯಲ್ಲಿ ಚಿಕ್ಕವರು. ಮನಸ್ಸು ಮಾಡಿದರೆ ಶಾಪಗ್ರಸ್ತ ದೊಡ್ಡವರು ಆ ಶಾಪಗಳನ್ನು ಧಿಕ್ಕರಿಸಿ ಅವುಗಳಿಂದ ಆಗುವ ಕೆಟ್ಟ ಪರಿಣಾಮಗಳನ್ನು ಮೆಟ್ಟಿ ನಿಲ್ಲಬಹುದು. ಹೀಗಿದ್ದರೂ ಯೋಗ್ಯತೆಯಲ್ಲಿ ದೊಡ್ಡವರಾದ ದೇವತೆಗಳು, ದೇವರ್ಷಿಗಳು ಮುಂತಾದವರು ಈ ಶಾಪಗಳನ್ನು ಮನ್ನಿಸಿ ಅವುಗಳ ಪರಿತಾಪಗಳನ್ನು ಅನುಭವಿಸುವುದನ್ನು ನೋಡಬಹುದು.
ಉದಾಹರಣೆಗೆ, "ನೀನು ಭೂಮಿಯಲ್ಲಿ ಮನುಷ್ಯನಾಗಿ ಜನಿಸು. ನಿನಗೆ ಆಗ ಪತ್ನಿವಿಯೋಗ ಬಂದೊದಗಲಿ. ನೀನು ನಿನ್ನ ಹೆಂಡತಿಯನ್ನು ಕಳೆದುಕೊಂಡು ಕಾಡು-ಮೇಡುಗಳಲ್ಲಿ ಅಲೆಯುವಂತೆ ಆಗಲಿ!" ಎಂದು ಶ್ರೀ ಮಹಾವಿಷ್ಣುವಿಗೆ ಬಂದ ಶಾಪಗಳು. ಅದರ ಪರಿಣಾಮವಾಗಿ ಶ್ರೀಮನ್ನಾರಾಯಣನು ಶ್ರೀರಾಮನಾಗಿ ತ್ರೇತಾಯುಗದಲ್ಲಿ ಹುಟ್ಟಿ ಸೀತಾವಿಯೋಗದಿಂದ ಪರಿತಪಿಸಿದ್ದು. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಶಾಪಗಳನ್ನು ಕೊಟ್ಟವರೆಲ್ಲರೂ ಮಹಾವಿಷ್ಣುವಿಗಿಂತ ಯೋಗ್ಯತೆಯಲ್ಲಿ ಕಡಿಮೆಯವರೇ. ಹೀಗಿರುವಾಗ ಮಹಾವಿಷ್ಣುವು ಇವುಗಳನ್ನು ಏಕೆ ಮಾನ್ಯ ಮಾಡಿದನು? ಅವುಗಳನ್ನು ಲೆಕ್ಕಿಸದಿದ್ದರೆ ಏನಾಗುತ್ತಿತ್ತು? ಏಕೆ ಅವುಗಳಿಗೆ ತಲೆ ಬಾಗಬೇಕಾಯಿತು? ಈ ರೀತಿ ಶಾಪ ಕೊಡುವವರು ಕೆಲವು ವೇಳೆ ತಮ್ಮ ಯೋಗ್ಯತೆಯ ಮಿತಿಗಳನ್ನು ತಿಳಿದಿದ್ದರೂ ಏಕೆ ಶಾಪ ಕೊಡುತ್ತಾರೆ? ಇವೆಲ್ಲವೂ ಸಾಧುವಾದ ಪ್ರಶ್ನೆಗಳೇ.
ಇವಕ್ಕೆ ಸಾಧ್ಯವಾದ ಮಟ್ಟಿಗೆ ಉತ್ತರಗಳನ್ನು ಈಗ ಹುಡುಕೋಣ.
*****
ಬೆಂಗಳೂರಿನ ಬಸವನಗುಡಿ ಬಡಾವಣೆಯ ಪರಿಚಯ ಇರುವವರಿಗೆಲ್ಲಾ ಎಂ. ಏನ್. ಕೃಷ್ಣರಾವ್ ಪಾರ್ಕ್ ಬಗ್ಗೆ ಗೊತ್ತು. ರಾಜಕಾರ್ಯಪ್ರಸಕ್ತ ದಿವಾನ್ ಬಹದ್ದೂರ್ ಸರ್ ಎಂ. ಏನ್. ಕೃಷ್ಣ ರಾವ್ ಅವರು ಮೈಸೂರು ಸಂಸ್ಥಾನದ ದಿವಾನರಾಗಿದ್ದವರು. ಅವರೇ "ಕೃಷ್ಣರಾವ್ ಪಾರ್ಕ್" ಕಾರಣಕರ್ತರು. ಉದ್ಯಾನ ವನದ ರಕ್ಷಣೆ ಮತ್ತು ಸುಪರ್ದಿಗಾಗಿ ಒಬ್ಬ ಕಾವಲುಗಾರನಿದ್ದನು. ಪಾರ್ಕಿನ ಉತ್ತರದ ಕಡೆ ರಾಯರ ಮನೆ. (ಸುಮಾರು ನೂರಾ ಇಪ್ಪತ್ತು ವರ್ಷಗಳ ಕಾಲದ ಹಿಂದಿನ ಮನೆ ಈಗಲೂ ಅಲ್ಲಿದೆ. ಅವರ ವಂಶೀಕರು ವಾಸಿಸುತ್ತಿದ್ದಾರೆ. ಆಸಕ್ತರು ಗಮನಿಸಬಹುದು). ಉದ್ಯಾನವನದ ದಕ್ಷಿಣದ ಕಡೆ ಅವರ ಇಬ್ಬರು ಹೆಣ್ಣು ಮಕ್ಕಳ ಮನೆಗಳು. ಆಗಾಗ ರಾಯರು ಎಲ್ಲರಂತೆ ಮಕ್ಕಳ ಮನೆಗೆ ಹೋಗುತ್ತಿದ್ದರು. ಪಾರ್ಕಿನ ಒಳಗಡೆಯಿಂದ ಹೋದರೆ ಅವರ ಮನೆಗಳಿಗೆ ಹತ್ತಿರದ ದಾರಿ. ಇಲ್ಲದಿದ್ದರೆ ಪಾರ್ಕಿನ ಸುತ್ತ ನಡೆದು ಹೋಗಬೇಕು. ಅದು ಸ್ವಲ್ಪ ದೂರದ ಹಾದಿ.
ಒಂದು ದಿನ ಸ್ವಲ್ಪ ತಡವಾದ ವೇಳೆಯಲ್ಲಿ ಅವರು ದಕ್ಷಿಣದ ಕಡೆಯಿಂದ ಬಂದು ಪಾರ್ಕಿನ ಒಳಗಡೆಯಿಂದ ಹಾದು ಉತ್ತರದಲ್ಲಿದ್ದ ಅವರ ಮನೆಯ ಕಡೆ ಹೊರಟಿದ್ದರು. ಅದನ್ನು ಕಂಡ ಕಾವಲುಗಾರ ಅಡ್ಡಗಟ್ಟಿದ. "ಇದು ಸಾರ್ವಜನಿಕರು ಓಡಾಡುವ ರಸ್ತೆ ಅಲ್ಲ, ಸ್ವಾಮಿ. ನೀವು ಆ ಕಡೆ ಹೋಗಬೇಕಾದರೆ ಪಕ್ಕದ ರಸ್ತೆಯಲ್ಲಿ ಹೋಗಬೇಕು. ಪಾರ್ಕ್ ಒಳಗಡೆಯಿಂದ ಅಲ್ಲ", ಎಂದ. ರಾಯರು "ಸರಿ" ಎಂದು ಹೊರಗಡೆ ಬಂದು ಪಕ್ಕದ ರಸ್ತೆಯಲ್ಲಿ ಮನೆಗೆ ಹೋದರು. ಮಾರನೆಯ ದಿನ ಕಾವಲುಗಾರನನ್ನು ಕರೆಸಿದರು. ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದುದಕ್ಕೆ ಅವನನ್ನು ಅಭಿನಂದಿಸಿ ಭಕ್ಷೀಸು ಕೊಟ್ಟು ಕಳಿಸಿದರು.
ಕಾವಲುಗಾರ ಅಡ್ಡಗಟ್ಟಿದಾಗ ರಾಯರು ತನ್ನ ಪರಿಚಯ ಹೇಳಿದ್ದರೆ ಕಾವಲುಗಾರ ಅವರಿಗೆ ಪ್ರಾಯಶ: ಸಲ್ಯೂಟ್ ಹೊಡೆದು ಮನೆಯವರೆಗೆ ಜೊತೆಯಲ್ಲಿ ಹೋಗಿ ಬಿಟ್ಟು ಬರುತ್ತಿದ್ದ. ಬೇಕಿದ್ದರೆ ಅವರು ಕಾವಲುಗಾರನನ್ನೇ ಬದಲಿಸಬಹುದಿತ್ತು. ಆದರೆ ಅವರಿಗೆ "ನಿಯಮ ಎಲ್ಲರಿಗೂ ಒಂದೇ. ಅದನ್ನು ಪಾಲಿಸಬೇಕಾದದ್ದು ಎಲ್ಲರ ಕರ್ತವ್ಯ" ಎನ್ನುವುದನ್ನು ಮಾದರಿಯಾಗಿ ತೋರಿಸಬೇಕಿತ್ತು . "ಸಂವಿಧಾನ" ಎಂದು ಒಂದು ಕಟ್ಟಳೆಗೆ ಒಪ್ಪಿಕೊಂಡರೆ ಅದರ ಕರ್ತೃಗಳೂ ಸಹ ಅದಕ್ಕೆ ಬದ್ಧರು. "ತನ್ನ ಕೃತಿಗೆ ಮಹಾಕವಿ ತಾ ಮಣಿಯುವಂತೆ" ಎಂದು ಹೇಳುತ್ತಾರೆ. ಕೃತಿರಚನೆ ಆದಮೇಲೆ ತಾನೇ ರಚಿಸಿದ ಕೃತಿ "ಮಹಾಕಾವ್ಯ" ಎಂದು ಎಲ್ಲರೂ ಗುರುತಿಸಿದಾಗ ಅದನ್ನು ರಚಿಸಿದ ಕವಿಯೂ ಅದನ್ನು ಗೌರವಿಸುತ್ತಾನೆ. ಶಿಲ್ಪಿ ಕಲ್ಲಿನಲ್ಲಿ ದೇವರ ಮೂರ್ತಿ ಕಡೆದಿದ್ದಾನೆ. ನಿಜ. ಆದರೆ ಈಗ ಅದು ದೇವಾಲಯದ ಮೂರ್ತಿ. ಅದಕ್ಕೆ ಅದನ್ನು ಕಡೆದ ಶಿಲ್ಪಿಯೂ ತಲೆ ಬಾಗುತ್ತಾನೆ.
ಪರಮಾತ್ಮನ ಸೃಷ್ಟಿಯಲ್ಲಿ "ಅಷ್ಟ ಕರ್ತೃತ್ವ" ಎನ್ನುವ ಎಂಟು ಕ್ರಿಯೆಗಳಲ್ಲಿ "ನಿಯಮನ" ಎನ್ನುವ ನಾಲ್ಕನೆಯದೂ ಒಂದು. ಎಲ್ಲರೂ ಅದಕ್ಕೆ ತಕ್ಕಂತೆ ನಡೆಯಬೇಕು. ಅದನ್ನು ಪಕ್ಕಕ್ಕಿಡುವುದು ಕೂಡದು. ಹಾಗೆ ಮಾಡಿದರೆ ಇಡೀ ವ್ಯವಸ್ಥೆಯೇ ಕುಸಿದು ಬೀಳುತ್ತದೆ.
ಇಡೀ ಸೃಷ್ಟಿಯ ಕರ್ತೃವಾದರೂ ಶ್ರೀಮಹಾವಿಷ್ಣುವೂ ನಿಯಮಗಳನ್ನು ಪಾಲಿಸುತ್ತಾನೆ. ಶಾಪ ಕೊಡುವವರು ಪಡೆದುಕೊಳ್ಳುವವರಿಗಿಂತ ಚಿಕ್ಕವರೇ ಇರಬಹುದು. ಆದರೆ ಶಾಪ ಕೊಡುವವರಿಗೆ ಅದನ್ನು ನೀಡುವ ಅಧಿಕಾರವಿದ್ದರೆ ಎಲ್ಲರೂ ಅದನ್ನು ಸ್ವೀಕರಿಸಲೇಬೇಕು. ಒಬ್ಬರು ಅದನ್ನು ಧಿಕ್ಕರಿಸಿದರೆ ಎಲ್ಲರೂ ಅದನ್ನು ಮುಂದುವರೆಸಿ ಇಡೀ ಸೃಷ್ಟಿಯ ನಿಯಮಗಳೇ ಪ್ರಯೋಜನವಿಲ್ಲವಾಗುತ್ತವೆ. ಸರ್ವಕರ್ತನೇ ಅವನ್ನು ಪಾಲಿಸಿದಾಗ ಇನ್ನೆಲ್ಲರೂ ಅದನ್ನು ಅನುಸರಿಸಲೇಬೇಕಷ್ಟೆ!
ಉತ್ತಮರಾದ ದೇವತೆಗಳೂ ಅವರಿಗಿಂತ ಯೋಗ್ಯತೆಯಲ್ಲಿ ಕೆಳಗಿನವರು ಶಾಪಗಳನ್ನು ಕೊಟ್ಟರೂ ಇದೇ ಕಾರಣಕ್ಕೆ ಸ್ವೀಕರಿಸುತ್ತಾರೆ. ಪರಮಾತ್ಮನು ಮತ್ತು ದೇವತೆಗಳಿಗೆ ಅನೇಕ ರೂಪಗಳ ಧಾರಣ ಶಕ್ತಿ ಉಂಟು. ಒಂದು ರೂಪದಿಂದ ಆ ಶಾಪಗಳನ್ನು ಅನುಭವಿಸುತ್ತಾರೆ. ಈ ರೀತಿಯ ಶಾಪಗಳನ್ನು ತಮ್ಮದೇ ಆದ ರೀತಿಯಿಂದ ಲೋಕಕಲ್ಯಾಣ ಕಾರ್ಯಗಳಿಗೆ ಉಪಯೋಗಿಸಿಕೊಳ್ಳುತ್ತಾರೆ!
ಮಹಾವಿಷ್ಣುವೂ ಶ್ರೀರಾಮನಾದ. ಶಾಪಗಳಿಗೆ ಸಿಕ್ಕಿಬಿದ್ದ ಮನುಷ್ಯರಂತೆ ವ್ಯವಹರಿಸಿದ. ಅನೇಕ ಸಾಧನೆಗಳನ್ನು ಮಾಡಿದ್ದ ಭಕ್ತರಿಗೆ ತನ್ನನ್ನು ನೋಡುವ ಅವಕಾಶ ಕೊಟ್ಟ. ಅಹಲ್ಯೆ, ಗುಹ, ಜಟಾಯು, ಶಬರಿ, ಮುಂತಾದ ಅನೇಕ ಶತ ಶತಮಾನಗಳು ಕಾದಿದ್ದವರಿಗೆ ಈ ನೆಪದಿಂದ ದರ್ಶನವಾಯಿತು. ರಾವಣಾದಿ ಲೋಕಕಂಟಕರ ಸಂಹಾರವಾಯಿತು. ಶಾಪಗ್ರಸ್ತನಾದಂತೆ, ಅವುಗಳಿಂದ ನರಳಿದವನಂತೆ ತೋರಿಸಿ ಅನೇಕ ಲೋಕಕಲ್ಯಾಣ ಕೆಲಸಗಳನ್ನು ಮಾಡಿದ.
*****
"ಕನ್ನಂಬಾಡಿ ಕಟ್ಟೆ" ಎಂದು ಜನಪ್ರಿಯವಾಗಿರುವ "ಕೃಷ್ಣ ರಾಜ ಸಾಗರ ಜಲಾಶಯ" ಅಥವಾ ಕೆ. ಆರ್. ಎಸ. ಡ್ಯಾಮ್ ಕಟ್ಟಿಸಿದವರು ಯಾರು ಎನ್ನುವ ಅನವಶ್ಯಕ ಚರ್ಚೆಯೊಂದು ಕೆಲವು ದಿನಗಳಿಂದ ನಡೆದು ಬಂದಿದೆ. ಈ ಜಲಾಶಯದ ಅಣೆಕಟ್ಟಿನ ಎತ್ತರ 131 ಅಡಿಗಳು. ಭರ್ತಿಯಾದಾಗ 124.8 ಅಡಿಗಳಷ್ಟು ಎತ್ತರ, 49.45 ಟಿ. ಎಂ. ಸಿ. ಗಾತ್ರದಷ್ಟು ನೀರು ನಿಲ್ಲುತ್ತದೆ. ಲಕ್ಷಾ೦ತರ ಎಕರೆ ಭೂಮಿಯನ್ನು ಸಮೃದ್ಧ ಮಾಡಿ ಭತ್ತ, ಕಬ್ಬು ಮುಂತಾದ ಅನೇಕ ಬೆಳೆ ಕೃಷಿಗೆ ಇಂಬು ಕೊಡುತ್ತದೆ.
ಜಲಾಶಯ ಎಷ್ಟೇ ದೊಡ್ಡದಿದ್ದರೂ ಅದರ ನೀರು ಹಿಡಿದಿಡುವ ಶಕ್ತಿಗೆ ಒಂದು ಮಿತಿ ಇದ್ದೇ ಇದೆ. ಆ ಮಿತಿಗಿಂತ ಹೆಚ್ಚಿನ ನೀರನ್ನು ಅದು ಸಂಗ್ರಹಿಸಿ ಇಟ್ಟುಕೊಳ್ಳಲಾರದು. ಹೆಚ್ಚಿನ ನೀರು ಸೋರಿ ಹೊರಗೆ ಹೋಗಲೇಬೇಕು. ಹಾಗೆ ಸೋರಿ ಹೋಗದಿದ್ದರೆ ಜಲಾಶಯಕ್ಕೇ ಅಪಾಯ. ಅಷ್ಟೇ ಅಲ್ಲ; ಜಲಾಶಯದ ಕೆಳಗಿನ ಭಾಗಗಳಿಗೆ ನೀರೇ ಸಿಗುವುದಿಲ್ಲ. ಹೆಚ್ಚಿನ ನೀರು ಕಡೆಗೆ ಸಮುದ್ರಕ್ಕೆ ಹರಿದು ಆವಿಯಾಗಬೇಕು. ಅವುಗಳಿಂದ ಮೋಡವಾಗಿ ಮಳೆ ಬರಬೇಕು. ಇದೇ ಸೃಷ್ಟಿ ಚಕ್ರ. ಇದಕ್ಕೆ ಅಡ್ಡ ಬಂದರೆ ಮೇಲೆ ಹೇಳಿದ "ನಿಯಮನ" ಮೀರಿದಂತೆ. ಅದು ಕೂಡದು. ಜಲಾಶಯಗಳಿಗೆ ಕ್ರೆಸ್ಟ್ ಗೇಟುಗಳು ಎಂದು ಬಾಗಿಲುಗಳು ಉಂಟು. ಹೆಚ್ಚಿನ ನೀರನ್ನು ಇವುಗಳ ಮೂಲಕ ಹೊರಬಿಡುವ ವ್ಯವಸ್ಥೆ ಇದೆ. ಇದು ಜಲಾಶಯಗಳಿಗೂ, ಇತರರಿಗೂ ಅತ್ಯಂತ ಅವಶ್ಯಕ.
ಇದೆ ರೀತಿ ಎಲ್ಲ ಜೀವಿಗಳಿಗೂ, ತಪಸ್ವಿಗಳಿಗೂ ಅವರು ಮಾಡುವ ಸಾಧನೆಗಳಿಗೆ, ಅವುಗಳಿಂದ ಸಂಪಾದಿಸುವ ಪುಣ್ಯಗಳಿಗೆ ಅವರವ ಯೋಗ್ಯತೆಗೆ ತಕ್ಕಂತೆ ಒಂದು ಮಿತಿ ಇದೆ. ಅದಕ್ಕಿಂತ ಹೆಚ್ಚಿದ್ದರೆ ಅದು ಸರಿಯಲ್ಲ. ಆಣೆಕಟ್ಟೆಯಲ್ಲಿ ಅದರ ಯೋಗ್ಯತೆಗಿಂತ ಹೆಚ್ಚಿನ ನೀರು ನಿಲ್ಲದಂತೆ ತಪಸ್ವಿಗಳಿಗೂ ಅವರ ಯೋಗ್ಯತೆಗಿಂತ ಹೆಚ್ಚಿನ ತಪಃಶಕ್ತಿ ಇಟ್ಟುಕೊಳ್ಳುವಂತಿಲ್ಲ. ಅದು ಹ್ರಾಸವಾಗಬೇಕಾದರೆ ಒಂದು ನಿಮಿತ್ತ ಬೇಕು. ತಮಗಿಂತ ಉತ್ತಮರಿಗೆ ಶಾಪ ಕೊಟ್ಟಾಗ ಹೀಗೆ ಅವರ ತಪ:ಶಕ್ತಿ ಹ್ರಾಸವಾಗುತ್ತದೆ. ಈ ಕಾರಣಕ್ಕೆ ಅವರಿಗೆ ಶಾಪ ಕೊಡುವ ಮನಸ್ಸಾಗುತ್ತದೆ. ನಿಯಮನದ ಪಾಲನೆ ಆಗುತ್ತದೆ. ಹಣ ಹೆಚ್ಚಿದ್ದವರಿಗೆ ತೆರಿಗೆ ಮೂಲಕ ಸರ್ಕಾರ ವಸೂಲಿ ಮಾಡುವಂತೆ, ತಪಸ್ವಿಗಳಿಗೆ ಹೀಗೆ ಯೋಗ್ಯತೆಗೆ ಮೀರಿದ ತಪಸ್ಸು ಸೋರಿಹೋಗುತ್ತದೆ!
ಇದು ತಪಸ್ವಿಗಳಿಗೆ ಅನ್ಯಾಯವಲ್ಲವೇ? ಇದೂ ಒಂದು ಒಳ್ಳೆಯ ಪ್ರಶ್ನೆಯೇ. ತೆರಿಗೆ ಹಾಕದಿದ್ದರೆ ವ್ಯವಸ್ಥೆ ನಡೆಯುವುದು ಹೇಗೆ? ದುಡ್ಡಿದ್ದವಿರಿಗೆ ತೆರಿಗೆ ಹಾಕದೇ ಇಲ್ಲದವರಿಗೆ ಹಾಕುವುದು ಸಾಧ್ಯವೇ? ಅನೇಕ ನಿಯಮಗಳು ಮೊದಲ ನೋಟಕ್ಕೆ ಸರಿಯಿಲ್ಲ ಎಣಿಸಬಹುದು. ಆದರೆ, ಒಟ್ಟಾರೆ ವ್ಯವಸ್ಥೆಯಲ್ಲಿ ಇವುಗಳಿಗೆ ಅವುಗಳದೇ ಆದ ಅವಶ್ಯಕತೆ ಮತ್ತು ಮಹತ್ವ ಇವೆ. ಅನೇಕ ಶಾಪಗಳಿಂದ ಮುಂದೆ ಲೋಕಕಲ್ಯಾಣದ ಹಾದಿ ತೆರೆಯುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.
*****
ದೂರ್ವಾಸರು ಧರ್ಮದೇವತೆಗೆ ಶಾಪ ಕೊಟ್ಟಿದ್ದು ಈ ರೀತಿ ತಪಸ್ಸು ಹ್ರಾಸವಾಗಲು ಒಂದು ಕಾರಣವಾಗಿ. ಹಾಗೆ ಶಪಿಸಲು ಅವರಿಗೆ ಪ್ರೇರಣೆ ಆಯಿತು. ಧರ್ಮದೇವತೆ ಇದೇ ಕಾರಣಕ್ಕೆ ಆ ಶಾಪ ಪ್ರಭಾವವನ್ನು ಒಪ್ಪಿಕೊಂಡದ್ದು. ಅದನ್ನು ಮುಂದೆ ನಡೆಯಬೇಕಾದ ಪ್ರಸಂಗಗಳಿಗೆ ಭೂಮಿಕೆಯಾಗಿ ಉಪಯೋಗವಾಯಿತು. ಹಿಂದಿನ ಸಂಚಿಕೆಯನ್ನು ಗಮನಿಸಿದರೆ ಈ ಶಾಪಗಳನ್ನು ಕೊಡು ಎಂದು ಪರೋಕ್ಷವಾಗಿ ಧರ್ಮದೇವತೆಯೇ ಕೇಳಿದ್ದು. ಧರ್ಮದೇವತೆ ಅದೇ ಕಾರಣಕ್ಕೆ ಅದನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ.
ನಾವು ಹಾಕಿಕೊಂಡಿದ್ದ ಪ್ರಶ್ನೆಗಳಿಗೆ ಸುಮಾರಾಗಿ ಉತ್ತರ ಹುಡುಕಿಕೊಂಡಂತೆ ಆಯಿತು.
ಮೇಲಿನ ಚರ್ಚೆಯಲ್ಲಿ "ಅಷ್ಟ ಕರ್ತೃತ್ವ" ಎನ್ನುವ ವಿಷಯ ಬಂದಿದೆ. ಅದರ ಬಗ್ಗೆ ಮತ್ತೊಂದು ದಿನ ನೋಡೋಣ.
"ಅನೇಕ ಶಾಪಗಳಿಂದ ಮುಂದೆ ಲೋಕಕಲ್ಯಾಣದ ಹಾದಿ ತೆರೆಯುವುದು . "
ReplyDeleteThis is the gist of the entire reasoning for the questionnaire there in.
Bringing in the present life situations to make us relate and understand the complex narrative is the hallmark of your writings.
Thanks so much for your unstinted efforts in that direction.
Meaning of ‘Niyamana’ is given with many examples for greater understanding for us. The rule applies to the one who makes them including the Almighty. Thanks Keshav. UR…
ReplyDelete