
"ಗುರು-ಶಿಷ್ಯರ ಸಂಬಂಧ" ಅನ್ನುವ ಶೀರ್ಷಿಕೆಯ ಹಿಂದಿನ ಒಂದು ಸಂಚಿಕೆಯಲ್ಲಿ (ಆಗಸ್ಟ್ 22, 2025) ಗುರು-ಶಿಷ್ಯ ಸಂಬಂಧದ ಅನೇಕ ರೂಪಗಳಲ್ಲಿ ಕೆಲವು ಪದರಗಳನ್ನು ನೋಡುವ ಪ್ರಯತ್ನ ಮಾಡಿದ್ದೆವು. "ಅದೊಂದು ವ್ಯವಹಾರದಂತಲ್ಲದ ಕೊಡು-ಕೊಳ್ಳುವ ವಿನಿಮಯ. ಇದರಲ್ಲಿ ಒಬ್ಬರು ಇನ್ನೊಬ್ಬರಿಂದ ಕಲಿಯುತ್ತಾರೆ. ದೊಡ್ಡವನು-ಚಿಕ್ಕವನು ಎನ್ನುವ ಭೇದವಿಲ್ಲ. ಜ್ಞಾನದ ವಿಕಾಸ ಹೇಗಾದರೂ ಅದು ಸೋಲಲ್ಲ. ಆದ್ದರಿಂದ ಗುರು-ಶಿಷ್ಯ ಇಬ್ಬರೂ ಬೆಳೆಯಬಹುದು. ಇದು ಒಮ್ಮುಖದ ಕಲಿಕೆ ಅಲ್ಲ" ಮುಂತಾಗಿ ಚರ್ಚಿಸಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.  
ಜ್ಞಾನಾರ್ಜನೆಗಾಗಿ ಗುರುವಿನ ಬಳಿ ಬಂದ ಶಿಷ್ಯ, ಮತ್ತು ಅವರ ಗುರು-ಶಿಷ್ಯ ಸಂಬಂಧದಲ್ಲಿ ಕೂಡ ಇಬ್ಬರೂ ಕಲಿಯುವ ಅವಕಾಶಗಳು ಹೇರಳವಾಗಿರುತ್ತವೆ. ವಿಶಾಲ ಮನಸ್ಸಿನ ಹಿರಿಯ ಗುರುಗಳೂ ಸಹ ಕೆಲವು ಸಂದರ್ಭಗಳಲ್ಲಿ ಅನೇಕ ವರುಷಗಳ ಅಧ್ಯಯನದಲ್ಲಿ ತಮಗೆ ಹೊಳೆಯದಿದ್ದ ಸೂಕ್ಷ್ಮಗಳನ್ನು ತಮ್ಮ ಶಿಷ್ಯರು ಮೊದಲ ನೋಟದಲ್ಲೇ ಕಂಡುದು, ಮತ್ತು ಅದರಿಂದ ತಾವು ಕಲಿತ ಘಟ್ಟಗಳನ್ನು ನೆನಪು ಮಾಡಿಕೊಳ್ಳುವುದನ್ನು ನಾವು ಕಂಡಿದ್ದೇವೆ. ಹೀಗೆ ಒಪ್ಪಿಕೊಳ್ಳುವ ಮನೋಧರ್ಮ ಅನೇಕ ಗುರುಗಳಿಗೆ ಇರುವುದಿಲ್ಲ. ಅಂತಿದ್ದರೂ ಹತ್ತಾರು ಜನ ಸೇರಿರುವ ಸಂದರ್ಭಗಳಲ್ಲಿಯೂ ಯಾವುದೇ ಸಂಕೋಚವಿಲ್ಲದೆ ಹೀಗೆ ಗುರುತಿಸಿ ಕೃತಜ್ಞತೆ ವ್ಯಕ್ತಪಡಿಸುವ ಗುರುಗಳೂ ಅಲ್ಲಲ್ಲಿ ಕಾಣಸಿಗುತ್ತಾರೆ. 
ಜೀವನದ ಕೆಲವು ಘಟ್ಟಗಳಲ್ಲಿ ಹೀಗೆ ಒಬ್ಬನು ಗುರು ಮತ್ತು ಮತ್ತ್ತೊಬ್ಬ ಶಿಷ್ಯ ಅಲ್ಲದಿದ್ದರೂ, ಇಬ್ಬರೂ ಸಮಾಜದಲ್ಲಿ ತಮ್ಮ ಜ್ಞಾನಾರ್ಜನೆಯಿಂದ ತಮ್ಮದೇ ಆದ ಸ್ಥಾನ ಗಳಿಸಿಕೊಂಡಿದ್ದರೂ, ಪರಸ್ಪರರಿಂದ ಕಲಿಯುವುದೂ ಉಂಟು. ಇಂತಹ ಪ್ರಸಂಗಕ್ಕೆ ಒಂದು ಶ್ರೇಷ್ಠ ಉದಾಹರಣೆ ನಳಚರಿತ್ರೆಯಲ್ಲಿ ಕಾಣಬಹುದು. ಕನ್ನಡದ ದಾಸಶ್ರೇಷ್ಠರೂ, ಕವಿವರೇಣ್ಯರೂ ಆದ ಭಕ್ತ ಕನಕದಾಸರ "ನಳ ಚರಿತ್ರೆ" ಕೃತಿಯಲ್ಲಿ ಬರುವ ಬಾಹುಕನ ರೂಪದ ನಳ ಮಹಾರಾಜ ಮತ್ತು ಋತುಪರ್ಣ ಮಹಾರಾಜ ಪರಸ್ಪರ ಅಶ್ವಹೃದಯ ಮತ್ತು ಅಕ್ಷಹೃದಯ ವಿದ್ಯೆಗಳನ್ನು ಹೀಗೆ ಒಬ್ಬರಿಂದ ಇನ್ನೊಬ್ಬರು ಕಲಿತದ್ದು ಚೆನ್ನಾಗಿ ನಿರೂಪಿತವಾಗಿದೆ. 
*****
ದುರ್ಯೋಧನನ ಸಂಗಡ ಶಕುನಿಯ ಮೂಲಕವಾಗಿ ಕಪಟ ದ್ಯೂತದಲ್ಲಿ ರಾಜ್ಯ-ಕೋಶಾದಿಗಳನ್ನು ಕಳೆದುಕೊಂಡು ಧರ್ಮರಾಯನು ದ್ರೌಪದಿ ಮತ್ತು ತಮ್ಮಂದಿರೊಡನೆ ಕಾಡಿನಲ್ಲಿ ವಾಸವಾಗಿರುತ್ತಾನೆ. ಅರ್ಜುನನು ದಿವ್ಯಾಸ್ತ್ರಗಳ ಸಂಪಾದನೆಗಾಗಿ ಹೋಗಿರುವಾಗ ಧರ್ಮಜನು ಬಹಳ ಬೇಸರದಿಂದಿರುತ್ತಾನೆ. ಆಗ ಬೃಹದಶ್ವ ಎಂಬ ಒಬ್ಬ ಮುನಿ ಅಲ್ಲಿಗೆ ಬಂದು ಧರ್ಮರಾಯನಿಗೆ ಸಮಾಧಾನ ಮಾಡುವ ಸಲುವಾಗಿ ನಳ ಮಹಾರಾಜನ ಕಥೆ ಹೇಳುತ್ತಾನೆ. "ಕಪಟ ಜೂಜಿನ ಕಾರಣ ರಾಜ್ಯ-ಕೋಶಗಳನ್ನು ಕಳೆದುಕೊಂಡವನು ನೀನು ಮಾತ್ರ ಅಲ್ಲ. ನಳ ಮಹಾರಾಜನೂ ಹೀಗೆ ರಾಜ್ಯ ಕಳೆದುಕೊಂಡು, ಹೆಂಡತಿಯನ್ನೂ ಕಳೆದುಕೊಂಡು, ಬಹಳ ವ್ಯಥೆಪಟ್ಟು ಕಡೆಗೆ ಎಲ್ಲವನ್ನೂ ಮತ್ತೆ ಸಂಪಾದಿಸಿದನು. ನೀನೂ ಕೂಡ ಹೀಗೆ ಎಲ್ಲವನ್ನೂ ಮತ್ತೆ ಪಡಯುತ್ತೀಯೆ. ವ್ಯಥೆ ಪಡಬೇಡ" ಎಂದು ನಳನ ಕಥೆ ಹೇಳುತ್ತಾರೆ. 
ಮಹಾಭಾರತದ ಅರಣ್ಯಪರ್ವದಲ್ಲಿ ಇಪ್ಪತ್ತೆಂಟು ಅಧ್ಯಾಯಗಳಲ್ಲಿ ವಿಸ್ತಾರವಾಗಿ ಹೇಳಿರುವ ನಳನ ವೃತ್ತಾಂತವನ್ನು ಶ್ರೀ ಕನಕದಾಸರು ತಮ್ಮ "ನಳಚರಿತ್ರೆ" ಗ್ರಂಥದಲ್ಲಿ ಭಾಮಿನೀ ಷಟ್ಪದಿಯಲ್ಲಿ ಸೊಗಸಾದ ಕನ್ನಡದಲ್ಲಿ ನಮಗೆ ಕೊಟ್ಟಿದ್ದಾರೆ. ಮಹಾಭಾರತದಲ್ಲಿನ ಮೂಲ ಕಥೆಗೆ ಕೆಲವು ಸಣ್ಣ-ಪುಟ್ಟ ಮಾರ್ಪಾಡುಗಳನ್ನು ಮಾಡಿಕೊಂಡು ಒಟ್ಟಿನ ಹಂದರವನ್ನು ಇನ್ನೂ ಆಕರ್ಷಕವಾಗಿ ಮಾಡಿದ್ದಾರೆ. 
ನಳಮಹಾರಾಜನ ಕಥೆ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವುದೇ ಆಗಿದೆ. ನಿಷಧ ನಗರದ ರಾಜ ಶೂರಸೇನನ ಮಗ ನಳ ಚಕ್ರವರ್ತಿ. ವಿದರ್ಭದ ಅರಸು ಭೀಮರಾಜನ ಮಗಳು ದಮಯಂತಿ. ದಮಯಂತಿಯ ರೂಪ-ಗುಣಗಳನ್ನು ಕೇಳಿದ ನಳನೂ, ನಳನ ರೂಪ-ಗುಣಗಳನ್ನು ತಿಳಿದ ದಮಯಂತಿಯೂ ಪರಸ್ಪರ ಅನುರಕ್ತರಾಗುತ್ತಾರೆ. ಹಂಸ ಪಕ್ಷಿಯ ಮೂಲಕ ಸಂಪರ್ಕ ಏರ್ಪಟ್ಟು, ದೇವತೆಗಳ ಅನೇಕ ಪರೀಕ್ಷೆಗಳ ಮಧ್ಯೆಯೂ ನಳ-ದಮಯಂತಿ ವಿವಾಹ ಆಗುತ್ತಾರೆ. ಕಲಿಯ ಕಾರಣ ನಳನು ತಮ್ಮ ಪುಷ್ಕರನೊಡನೆ ಜೂಜಿನಲ್ಲಿ ಎಲ್ಲವನ್ನೂ ಕಳೆದುಕೊಂಡು ಹೆಂಡತಿಯ ಜೊತೆ ಕಾಡುಪಾಲಾಗುತ್ತಾನೆ. ಕಾಡಿನಲ್ಲಿ ನಳನ ಬಟ್ಟೆಗಳನ್ನು ಜಗನ್ಮೋಹನ ಪಕ್ಷಿಗಳು ಅಪಹರಿಸುತ್ತವೆ. ದಮಯಂತಿ ತನ್ನ ಸೀರೆಯನ್ನು ಹರಿದು ಅರ್ಧವನ್ನು ನಳನಿಗೆ ಉಡಲು ಕೊಡುತ್ತಾಳೆ. ಮಧ್ಯರಾತ್ರಿ ಅವಳು ಮಲಗಿರುವಾಗ ನಳನು ಅವಳನ್ನು ತೊರೆದು ಬೇರೆ ಹೋಗುತ್ತಾನೆ. 
ಅನೇಕ ತೊಂದರೆಗಳ ಮೂಲಕ ಹಾದು ದಮಯಂತಿ ಕಡೆಗೆ ಚಿಕ್ಕಪ್ಪ ಚೈದ್ಯರಾಜ ಸುಬಾಹುವಿನ ಅರಮನೆ ಸೇರುತ್ತಾಳೆ. ಸುಬಾಹುವಿನ ಹೆಂಡತಿ ಮಹಾರಾಣಿ ಸುಮತಿ ದಮಯಂತಿಯ ತಾಯಿಯ ತಂಗಿ. ಇದು ಗೊತ್ತಿಲ್ಲದೇ ಕಾಲ ಕಳೆಯುತ್ತದೆ. ಈ ಸಂಗತಿ ತಿಳಿದ ಮೇಲೆ ಮಹಾರಾಣಿ ಸುಮತಿ ಮತ್ತು ಸುಬಾಹು ದಮಯಂತಿಯನ್ನು ತಮ್ಮ "ಮಗಳು ಸುನಂದೆಗೆ ನೀನು ಸಮ ಮಗಳೇ. ಎಷ್ಟು ಕಷಪಟ್ಟೆ ನೀನು" ಎಂದು ಪ್ರೀತಿ ತುಂಬಿದ ಕರುಣೆಯಿಂದ ಸಂಬೋಧಿಸುತ್ತಾರೆ. ಅಲ್ಲಿಂದ ದಮಯಂತಿ ಅಪ್ಪನ ಮನೆ ತಲುಪುತ್ತಾಳೆ. ನಳನು ಕಾಡಿನಲ್ಲಿ ಅಲೆಯುವಾಗ ಕಾಳ್ಗಿಚ್ಚಿನಲ್ಲಿ ಸಿಕ್ಕಿಕೊಂಡಿದ್ದ ಕಾರ್ಕೋಟಕ ಎಂಬ ನಾಗರಾಜನನ್ನು ಕಾಪಾಡುತ್ತಾನೆ. ಕಾರ್ಕೋಟಕನೋ ನಳನನ್ನು ಕಚ್ಚಿಬಿಡುತ್ತಾನೆ. ಸುರಸುಂದರನಾದ ನಳನು ಆ ವಿಷದ ಪರಿಣಾಮವಾಗಿ ವಿಕಾರ ರೂಪ ಪಡೆದುಬಿಡುತ್ತಾನೆ. ಕನಕದಾಸರು ನಳನ ಕುರೂಪವನ್ನು ಹೀಗೆ ವರ್ಣಿಸುತ್ತಾರೆ:
ದೊಡ್ಡ ಹೊಟ್ಟೆಯ ಗೂನು ಬೆನ್ನಿನ 
ಅಡ್ಡ ಮೋರೆಯ ಗಂಟು ಮೂಗಿನ 
ದೊಡ್ಡ ಕೈಕಾಲುಗಳ ಉದುರಿದ ರೋಮ ಮೀಸೆಗಳ 
ಜಡ್ಡು ದೇಹದ ಗುಜ್ಜುಗೊರಲಿನ 
ಗಿಡ್ಡ ರೂಪಿನ ಹರಕುಗಡ್ಡದ 
ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ 
ಹೀಗೆ ಬದಲಾದ ನಳನು ಬಾಹುಕ ಎನ್ನುವ ಹೆಸರಿನಿಂದ ಅಯೋಧ್ಯೆಯ ರಾಜನಾದ ಋತುಪರ್ಣನ ಬಳಿ ಸಾರಥಿಯ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಗಂಡನನ್ನು ಹುಡುಕಿಸಿ ಮತ್ತೆ ಅವನನ್ನು ಸೇರಲು ದಮಯಂತಿಯು ತನಗೆ ಇನ್ನೊಂದು ಸ್ವಯಂವರ ನಡೆಯುತ್ತಿದೆ ಎನ್ನುವ ಸುದ್ದಿ ಹಬ್ಬಿಸಿ ಅದು ಋತುಪರ್ಣ ಮಹಾರಾಜನಿಗೆ ತಲುಪುವಂತೆ ಮಾಡುತ್ತಾಳೆ. 
*****
ದಮಯಂತಿಯ ಮತ್ತೊಂದು ಸ್ವಯಂವರದ ಸುದ್ದಿ ಕೇಳಿದ ಋತುಪರ್ಣನು ಸಮಯಕ್ಕೆ ಸರಿಯಾಗಿ ವಿದರ್ಭ ನಗರ ತಲುಪಲು ರಥವನ್ನು ತಯಾರು ಮಾಡಲು ಸಾರಥಿ ಬಾಹುಕನಿಗೆ ಹೇಳುತ್ತಾನೆ. ಇಂತಹ ಸುದ್ದಿ ಕೇಳಿದ ದುಃಖದಲ್ಲೂ ಬಾಹುಕನ ರೂಪದ ನಳನು ರಥವನ್ನು ಸಿದ್ಧಪಡಿಸುತ್ತಾನೆ. ಪ್ರಯಾಣದ ಕಾಲದಲ್ಲಿ ಗಾಳಿಯಿಂದ ಋತುಪರ್ಣನ ಮೇಲುಹೊದಿಕೆ ಹಾರಿಹೋಗುತ್ತದೆ. ರಥ ನಿಲ್ಲಿಸಿ ಉತ್ತರೀಯವನ್ನು ತರುವಂತೆ ಋತುಪರ್ಣ ಬಾಹುಕನಿಗೆ ಹೇಳುತ್ತಾನೆ. ಬಾಹುಕನು "ಮಹಾರಾಜ, ಈ ಕುದುರೆಗಳು ಸಾಮಾನ್ಯವಲ್ಲ. ನಾಗಾಲೋಟದಲ್ಲಿ ಓಡುತ್ತಿವೆ. ನಿಮ್ಮ ಉತ್ತರೀಯ ಬಿದ್ದ ಕಡೆಯಿಂದ ಎಷ್ಟೋ ಯೋಜನ ದಾಟಿ ಬಂದಿದ್ದೇವೆ. ಅದನ್ನು ಮರೆತುಬಿಡಿ" ಅನ್ನುತ್ತಾನೆ. ಋತುಪರ್ಣನಿಗೆ ಆಶ್ಚರ್ಯ. 
ಮುಂದೊಂದು ಕಡೆ ವಿಶ್ರಾಂತಿಗೆ ನಿಲ್ಲಿಸಿದಾಗ ಅಲ್ಲಿ ಕಂಡ ತಾರೆಯ ಮರದಲ್ಲಿರುವ ಎಲೆಗಳು ಮತ್ತು ಹಣ್ಣುಗಳ ನಿಖರವಾದ ಸಂಖ್ಯೆಯನ್ನು ಋತುಪರ್ಣ ಬಾಹುಕನಿಗೆ ಹೇಳುತ್ತಾನೆ. ಈಗ ಬಾಹುಕನಿಗೆ ಆಶ್ಚರ್ಯ. ಮರದ ಬಳಿ ಹೋಗಿ ಎಣಿಸಿದರೆ ಋತುಪರ್ಣನು ಹೇಳಿದ ಸಂಖ್ಯೆ ಸರಿಯಾಗಿದೆ. "ಈ ವಿದ್ಯೆ ತನಗೆ ಗೊತ್ತಾದರೆ ತಮ್ಮ ಪುಷ್ಕರನನ್ನು ಮತ್ತೆ ಜೂಜಿನಲ್ಲಿ ಸೋಲಿಸಿ ರಾಜ್ಯ ಹಿಂದೆ ಪಡೆಯಬಹುದು" ಎಂದು ನಳನು ಚಿಂತಿಸುತ್ತಾನೆ.
ಋತುಪರ್ಣನಿಗೆ ಕುದುರೆಗಳ ಬಗ್ಗೆ ತಿಳಿಯುವ ಹಂಬಲ. ಆ ವಿದ್ಯೆಗೆ "ಅಶ್ವ ಹೃದಯ" ಎಂದು ಹೆಸರು. ನಳನಿಗೆ ಋತುಪರ್ಣನ "ಅಕ್ಷ ಹೃದಯ" ವಿದ್ಯೆ ಕಲಿಯುವ ಆಸೆ. ಇಬ್ಬರೂ ಪರಸ್ಪರ ಒಪ್ಪಿಕೊಂಡು ಒಂದು ವಿದ್ಯೆ ಕಲಿಯಲು ಇನ್ನೊಬ್ಬನ ಶಿಷ್ಯರಾಗುತ್ತಾರೆ. ಕಲಿಸಿಕೊಡಲು ಗುರುವಾಗುತ್ತಾರೆ. ಹೀಗೆ ಪರಸ್ಪರ ಗುರು-ಶಿಷ್ಯ ಆಗಿ ವಿದ್ಯೆಗಳ ವಿನಿಮಯ ಮಾಡಿಕೊಳ್ಳುತ್ತಾರೆ. 
ಮುಂದೆ ಕಲಿಯು ನಳನನ್ನು ಕಾಡುವುದನ್ನು ನಿಲ್ಲಿಸಿ, ಜಗನ್ಮೋಹನ ಪಕ್ಷಿಗಳು ನಳನ ಅಪಹರಿಸಿದ ಬಟ್ಟೆಯನ್ನು ತಂದುಕೊಡುತ್ತವೆ. ಅದನ್ನು ಉಟ್ಟ ನಂತರ ಬಾಹುಕನಿಗೆ ಕಾರ್ಕೋಟಕನು ಹೇಳಿದ್ದಂತೆ ಕುರೂಪ ಹೋಗಿ ಮತ್ತೆ ನಳನ ಸುರಸುಂದರ ರೂಪ ಬರುತ್ತದೆ. ನಳ-ದಮಯಂತಿ ಒಂದಾಗುತ್ತಾರೆ. ಅಕ್ಷಹೃದಯದ ಬಲದಿಂದ ನಳನು ಪುಷ್ಕರನನ್ನು ಸೋಲಿಸಿ ರಾಜ್ಯ-ಕೋಶಗಳನ್ನು ಹಿಂದೆ ಪಡೆಯುತ್ತಾನೆ. ನಳಚರಿತ್ರೆ ಹೀಗೆ ಮುಕ್ತಾಯವಾಗುತ್ತದೆ. 
*****
ಅಶ್ವಹೃದಯದ ಪರಿಣಾಮವಾಗಿ ಕುದುರೆಗಳು ಹೇಗೆ ಓಡಿದುವೆಂದು ಶ್ರೀ ಕನಕದಾಸರು ಹೇಳುವ ರೀತಿ:
ಕರದ ವಾಘೆಯ ಸಡಿಲ ಬಿಡೆ ಮುಂ
ಬರಿದು ಚಿಮ್ಮಿದವಡಿಗಡಿಗೆ ರಥ
ತುರಗ ಹಾಯ್ದುದು ತೇರು ಮುಂದಕೆ ಪವನ ವೇಗದಲಿ 
ಅಕ್ಷಹೃದಯದ ಕಾರಣ ತಾರೆಯ ಮರದ ಎಲೆ-ಹಣ್ಣುಗಳ ಲೆಕ್ಕ ತೋರಿದ ರೀತಿ:
ಇಳಿದು ರಥವನು ಬಂದು ವೃಕ್ಷದ 
ಬಳಿಗೆ ನಿಂದಾ ಶಾಖೆಗಳಲಿಹ 
ಫಲವದರ ಪರ್ಣಂಗಳೆಣಿಸಿದ ಪದ್ಮಸಂಖ್ಯೆಯಲಿ
ದಮಯಂತಿಯ ರೂಪ-ಲಾವಣ್ಯ, ದೇವತೆಗಳ ಪರೀಕ್ಷೆಗಳು, ನಳ-ಕಾರ್ಕೋಟಕ ಮತ್ತು ನಳ-ಕಲಿ ಇವರ ಸಂವಾದ, ನಳ ಮತ್ತು ದಮಯಂತಿಯರ ಪರಿತಾಪ ಇನ್ನೂ ಮುಂತಾದ ಅನೇಕ ರಸಘಟ್ಟಗಳನ್ನು "ನಳಚರಿತ್ರೆ" ಓದಿ ಸವಿಯಬಹುದು.
*****
ನಳ ಮಹಾರಾಜ ಮತ್ತು ಋತುಪರ್ಣ ಮಹಾರಾಜರು ಗುರು-ಶಿಷ್ಯ ಭಾವದಲ್ಲಿ ಒಬ್ಬರಿಗೊಬ್ಬರು ಕಲಿಸಿ-ಕಲಿತದ್ದು ತಮ್ಮ ತಮ್ಮ ಜ್ಞಾನದ ಮತ್ತು ಸಾಧನೆಯ ಕಾರಣ ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿರುವವರೂ ಹೇಗೆ ಪರಸ್ಪರ ಗುರು-ಶಿಷ್ಯರಾಗಬಹುದು ಎನ್ನುವುದಕ್ಕೆ ಸೊಗಸಾದ ಉದಾಹರಣೆ. ಅಲ್ಲವೇ?
 
ಒಂದು ಉತ್ತಮವಾದ ಕಥೆ. ಪರಸ್ಪರ ಗುರು ಶಷ್ಯರಾಗಿ, ಕಲಿತ ವಿದ್ಯೆಯ ವಿವರಣೆ ಸೊಗಸಾಗಿದೆ.
ReplyDelete( ಈ ಪ್ರಸಂಗ ತಿಳಿದಿರಲಿಲ್ಲ).
In Nala Dhamayanthi's romantic story, I had not given importance to know, about this teacher student relationship of Rithuparna and Nala, now in this article of yours you have specifically written about that and narrated the concept very well, thanks for the wonderful write-up
ReplyDeleteಪರಸ್ಪರ ಗುರು ಶಿಷ್ಯರಾಗಿರುವುದು ಬಹುಶಃ ಅಪರೂಪದ ಉದಾಹರಣೆ
ReplyDelete