ಕಳೆದ ತಿಂಗಳಿನ ಒಂದು ಸಂಚಿಕೆಯಲ್ಲಿ "ರಾಗಿ ಮೂಟೆಯ ಮೇಲೆ ಸಾವೇರಿ ರಾಗ" ಅನ್ನುವ ಶಿರೋನಾಮೆಯಡಿಯಲ್ಲಿ ನಮ್ಮ ನಾಡಿನ ಹೆಮ್ಮೆಯ ಸಂಗೀತ ವಿದ್ವಾಂಸರು ಮತ್ತು ಗಾಯಕರಲ್ಲಿ ಒಬ್ಬರಾದ ಭೈರವಿ ಕೆಂಪೇಗೌಡ ಅವರನ್ನು ಕುರಿತು ಕೆಲವು ಸಂಗತಿಗಳನ್ನು ನೋಡಿದ್ದೆವು. ಇದರಲ್ಲಿ ಬೆಂಗಳೂರಿನ ಬದಲಾದ ರೂಪದ ಬಗ್ಗೆ ಕೆಲವು ವಿಷಯಗಳನ್ನು ನೆನಪಿಸಿಕೊಂಡಿದ್ದೆವು. ಈ ಕುರಿತ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.
ಅಲ್ಲಿ ನೋಡಿದ ವಿವರಗಳಲ್ಲಿ ಪ್ರಾಸ್ತಾವಿಕವಾಗಿ "ಧರ್ಮಾ೦ಬುಧಿ ಕೆರೆ" ಎನ್ನುವ ಹೆಸರು ಬಂದಿತ್ತು. ನಗರದ ಮಧ್ಯೆ ಇದ್ದ ಒಂದು ಸುಂದರ ಕೆರೆ ಅದು. ಅದರ ನೀರು ಕುಡಿದು ಬೆಳೆದ ನಾವು ಕಡೆಗೆ ನಮ್ಮ ನಗರೀಕರಣದ ಪಿಶಾಚಿಯ ಪ್ರೀತಿಗಾಗಿ ಅದನ್ನೇ ನುಂಗಿ ನೀರು ಕುಡಿದಿದ್ದೇವೆ. ಈಗ ಆ ಕೆರೆ ಇತ್ತು ಅನ್ನುವ ಕುರುಹೂ ಉಳಿದಿಲ್ಲ. ಒಂದು ಕಾಲದಲ್ಲಿ ಅದಕ್ಕೆ ಸ್ವತಂತ್ರ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ನೆನಪಿನಲ್ಲಿ "ಸುಭಾಷ್ ನಗರ" ಅನ್ನುವ ಹೆಸರಿತ್ತು. ಕೆರೆಯಲ್ಲಿ ನೀರು ನಿಲ್ಲುವುದು ತಪ್ಪಿದ ಮೇಲೆ ಅದಕ್ಕೆ "ಸುಭಾಷ್ ನಗರ ಕೆರೆಯ ಅಂಗಳ" ಅನ್ನುತ್ತಿದ್ದರು. ವೃತ್ತಿ ನಾಟಕರಂಗದ ಮರೆಯಲಾಗದ ತಂಡ "ಹಿರಣ್ಣಯ್ಯ ಮಿತ್ರ ಮಂಡಳಿ" ಅವರ ಪ್ರಸಿದ್ಧ ನಾಟಕಗಳಾದ "ದೇವದಾಸಿ", "ಸದಾರಮೆ", "ಲಂಚಾವತಾರ" ಮತ್ತು ಇತರ ನಾಟಕಗಳು ಇಲ್ಲಿಯೇ ನಡೆಯುತ್ತಿದ್ದವು. ಈಗ ಅವೆಲ್ಲಾ ನೆನಪು ಮಾತ್ರ. ಇನ್ನು ಕೆಲವೇ ವರ್ಷಗಳಲ್ಲಿ ಅದನ್ನು ನೆನಪಿಸಿಕೊಳ್ಳುವ ತಲೆಮಾರೂ ಇಲ್ಲವಾಗುತ್ತದೆ.
ಈ ಸುಭಾಷ್ ನಗರ ಕೆರೆಯ ಅಂಗಳದಲ್ಲಿ ಪ್ರತಿವರ್ಷ "ಕಾಂಗ್ರೆಸ್ ವಸ್ತುಪ್ರದರ್ಶನ" ಏರ್ಪಡುತ್ತಿತ್ತು. ವಸ್ತು ಪ್ರದರ್ಶನಕ್ಕೆ ನೋಡಲು ಬಂದ ಜನಜಂಗುಳಿಯಲ್ಲಿ ಕೆಲವರು, ವಿಶೇಷವಾಗಿ ಮಕ್ಕಳು, ತಪ್ಪಿಸಿಕೊಳ್ಳುವುದು ನಡೆಯುತ್ತಿತ್ತು. ವಸ್ತುಪ್ರದರ್ಶನದಲ್ಲಿ ಒಂದು "ಪೊಲೀಸ್ ಔಟ್ ಪೋಸ್ಟ್" ಕೂಡ ಇದ್ದು ಹೀಗೆ ತಪ್ಪಿಸಿಕೊಂಡವರು ಮತ್ತು ಕಳೆದು ಹೋದ ಮತ್ತು ಸಿಕ್ಕಿದ ವಸ್ತುಗಳ ಬಗ್ಗೆ ಆಗಾಗ ಧನಿವರ್ಧಕಗಳ ಮೂಲಕ ಪ್ರಕಟಿಸುತ್ತಿದ್ದರು. ಟಿವಿ ಇಲ್ಲದ ಕಾಲದಲ್ಲಿ ಕುಟುಂಬದ ಸದಸ್ಯರು ಒಟ್ಟಾಗಿ ಒಂದು ಸಂಜೆ ಕಳೆಯಲು ಈ ವಸ್ತುಪ್ರದರ್ಶನ ಸಹಕಾರಿಯಾಗಿತ್ತು.
ಈಗ ಸುಭಾಷ್ ನಗರ ಅನ್ನುವ ಹೆಸರೇ ಕೇಳಿಬರುವುದಿಲ್ಲ. ದೊಡ್ಡ ಬಸ್ ನಿಲ್ದಾಣ ತಲೆಯೆತ್ತಿ ನಿಂತಿದೆ. ಸುಭಾಷ್ ನಗರ ಮರೆಯಾದರೂ ಹತ್ತಿರವಿದ್ದ "ಮೆಜೆಸ್ಟಿಕ್" ಚಿತ್ರಮಂದಿರದ ಹೆಸರನ್ನು ಜನ ಮರೆತಿಲ್ಲ. ಆ ಸುತ್ತಮುತ್ತಲಿನ ಪ್ರದೇಶಕ್ಕೆ ಈಗಲೂ "ಮೆಜೆಸ್ಟಿಕ್" ಏರಿಯಾ ಅನ್ನುವುದು ನಡೆದೇ ಇದೆ.
*****
ಹಳ್ಳಿಗಳಲ್ಲಿ ಜನಗಳು ತಪ್ಪಿಸಿಕೊಳ್ಳುವುದು ನಡೆಯದಿದ್ದರೂ ಜಾನುವಾರುಗಳು (ದನಗಳು) ತಪ್ಪಿಸಿಕೊಳ್ಳುವುದು ಅಲ್ಲಲ್ಲಿ ಆಗಾಗ ನಡೆಯುತ್ತಿತ್ತು. ಈಗಿನಂತೆ ಹಳ್ಳಿಗಳಲ್ಲಿ ಆಗ ಹೆಚ್ಚಾಗಿ ರಸ್ತೆಗಳಿರಲ್ಲ. ಮೋಟಾರ್ ಸೈಕಲ್ಗಳಲ್ಲಿ ಓಡಾಡುವವರಿರಲಿಲ್ಲ. ಜಮೀನಿನಲ್ಲಿ ಬೆಳೆ ತೆಗೆಯುವುದರ ಜೊತೆಗೆ ರೈತರ ಜೀವನದ ಮುಖ್ಯ ಭಾಗ "ಹೈನುಗಾರಿಕೆ" ಆಗಿತ್ತು. (ಹಯನು ಅಂದರೆ ಹಾಲು ಕರೆಯುತ್ತಿರುವ ಪ್ರಾಣಿ. ಮುಖ್ಯವಾಗಿ ಹಸು. ಬರಡು ಹಸು ಅಂದರೆ ಹಾಲು ಕೊಡದಿರುವ ಹಸು. "ನೀನೊಲಿದರೆ ಬರಡು ಹಯನಹುದಯ್ಯ" ಎನ್ನುವ ಶರಣರ ವಚನವನ್ನು ನೆನಪಿಸಿಕೊಳ್ಳಬಹುದು). ತಮ್ಮ ಕುಟುಂಬದ ಹಾಲು, ಮೊಸರು, ಮಜ್ಜಿಗೆ, ತುಪ್ಪ ಇವುಗಳ ಪೂರೈಕೆಗಲ್ಲದೇ ಹತ್ತಿರದ ಪಟ್ಟಣಗಳಿಗೆ ಹೆಚ್ಚಿನ ಈ ಪದಾರ್ಥಗಳನ್ನು ಸರಬರಾಜು ಮಾಡುವುದರಿಂದ ರೈತಾಪಿ ಜನ ಕೆಲವು ಪುಡಿಗಾಸು ಸಂಪಾದಿಸುತ್ತಿದ್ದರು. ಹೀಗೆ ತಮ್ಮ ಜೀವನಕ್ಕೆ ಆಧಾರವಾಗಿದ್ದ ಹಸುಗಳು ಕಳೆದುಹೋದರೆ ರೈತರಿಗೆ ಬಲು ಕಷ್ಟ. ಇವುಗಳ ಜೊತೆ, ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಜನ ಕೆಲವು ಬೆಲೆ ಬಾಳುವ ಅವಶ್ಯಕ ಪದಾರ್ಥಗಳನ್ನು ಆಗಾಗ ಕಳೆದುಕೊಳ್ಳುತ್ತಿದ್ದರು.
ಹುಲ್ಲು ಮೇಯಲು ಹೊರಗಡೆ ಹೋದ ದನಗಳು ಅಲ್ಲಿ-ಇಲ್ಲಿ ಕಂಡ ಹುಲುಸಾದ ಹಸಿರು ಪೈರಿನ ಆಸೆಯಲ್ಲಿ ಅವರಿವರ ಹೊಲ, ತೋಟಗಳಿಗೆ ನುಗ್ಗಿ ಪೈರುಗಳನ್ನು ತಿನ್ನುವುದು ಕೆಲವೊಮ್ಮೆ ನಡೆಯುತ್ತಿತ್ತು. ಆ ಜಮೀನಿನ ಮಾಲೀಕರಿಗೆ ಅವು ಯಾರ ದನಗಳು ಎಂದು ಗೊತ್ತಾಗುತ್ತಿರಲಿಲ್ಲ. ಮೇಲಾಗಿ, ತಮ್ಮ ಹೊಲಗಳ ಪೈರು ತಿಂದ ದನಗಳ ಮೇಲೆ ಅವರಿಗೆ ಸಹಜವಾಗಿಯೇ ಸ್ವಲ್ಪ ಅಸಹನೆ ಇರುತ್ತ್ತಿತ್ತು. ಪುರಸಭೆಗಳು ಅಲ್ಲಲ್ಲಿ "ತೊಂಡಿನ ಮನೆ" ಎನ್ನುವ ವ್ಯವಸ್ಥೆ ಮಾಡಿರುತ್ತಿದ್ದರು. ಅವು ಹೆಸರಿಗೆ ಮನೆ. ವಾಸ್ತವವಾಗಿ ನಾಲ್ಕು ಗೋಡೆಗಳು ಮತ್ತು ಒಂದು ಬಾಗಿಲು ಇದ್ದು ಬೀಗ ಹಾಕುವ ವ್ಯವಸ್ಥೆ ಇರುತ್ತಿತ್ತು. ದನಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಇರುತ್ತಿತ್ತು. "ತೊಂಡು" ಅನ್ನುವ ಪದಕ್ಕೆ "ದಾರಿ ತಪ್ಪಿದ", "ಹೇಳುವವರು-ಕೇಳುವವರು ಇಲ್ಲದ" ಅಥವಾ "ಅಂಕೆಯಿಲ್ಲದ" ಎಂದು ಅರ್ಥ. ಇಂಗ್ಲೀಷಿನಲ್ಲಿ "ವೈಲ್ಡ್" ಅಥವಾ "ಆನ್-ಕಂಟ್ರೊಲ್ಡ್" ಎನ್ನಬಹುದು. ಯಾರಾದರೂ ಹುಡುಗರು ಮನೆಯಲ್ಲಿ ಹೇಳಿದ ಮಾತು ಕೇಳದಿದ್ದರೆ "ಇವನೇನು, ತೊಂಡು ಬಿದ್ದಿದ್ದಾನೆ" ಎಂದು ಗದರುತ್ತಿದ್ದರು.
ಜಮೀನಿನ ಮಾಲೀಕರು ತಮ್ಮ ಭೂಮಿಗೆ ನುಗ್ಗಿದ ಹಸುಗಳನ್ನು ಹೊಡೆದುಕೊಂಡು ಹೋಗಿ ತೊಂಡಿನ ಮನೆಗೆ ದಬ್ಬುತ್ತಿದ್ದರು. ದನ ಕಳೆದುಕೊಂಡವರು ಮೊದಲು ತೊಂಡಿನ ಮನೆಗೆ ಹೋಗಿನೋಡಿ, ತಮ್ಮ ಹುಸುಗಳು ಅಲ್ಲಿದ್ದರೆ ಪುರಸಭೆಗೆ ದಂಡ ಕಟ್ಟಿ ಅವನ್ನು ಬಿಡಿಸಿಕೊಂಡು ತಮ್ಮೊಡನೆ ಕರೆದೊಯ್ಯುತ್ತಿದ್ದರು. ಅಲ್ಲಿಯೂ ತಮ್ಮ ಹಸುಗಳು ಇಲ್ಲದಿದ್ದರೆ ಹುಡುಕುವ ಕೆಲಸ ನಡೆಯುತ್ತಿತ್ತು.
ಹೀಗೆ ಕಳೆದುಹೋದ ಜಾನುವಾರು ಮತ್ತು ಪದಾರ್ಥಗಳನ್ನು ಹಿಂಪಡೆಯಲು ಸಾಮಾನ್ಯವಾಗಿ ಮೊದಲು ಮಾಡುತ್ತಿದ್ದ ಕೆಲಸ "ಶಾಸ್ತ್ರ ಕೇಳುವುದು". ಅಲ್ಲಲ್ಲಿ ಇದ್ದ ಜೋಯಿಸರು, ಅಯ್ಯನೋರು, ಶಾಸ್ತ್ರಿಗಳು ಮುಂತಾದವರ ಬಳಿ ಹೋಗುವುದು. ಅವರ ಬತ್ತಳಿಕೆಯಲ್ಲಿ ಅನೇಕ ಉಪಾಯಗಳಿದ್ದವು. ಪ್ರಶ್ನೆ ಕೇಳುವುದು, "ಕವಡೆ ಶಾಸ್ತ್ರ", ಚೀಟಿ ಎತ್ತುವುದು ಮುಂತಾದುವು. ಹೀಗೆ ಮಾಡಿ "ನಿಮ್ಮ ಹಸು ಉತ್ತರ ದಿಕ್ಕಿನಲ್ಲಿ ಇದೆ. ಅಲ್ಲಿ ಹುಡುಕಿ" ಮುಂತಾಗಿ ಅವರು ಹೇಳುತ್ತಿದ್ದರು. ಕೆಲವೊಮ್ಮೆ "ಏನೂ ಮಾಡಬೇಡಿ. ಅದೇ ನಿಮ್ಮ ಮನೆಯ ಮುಂದೆ ಬಂದು ನಿಲ್ಲುತ್ತದೆ" ಎಂದೂ ಹೇಳಬಹುದಿತ್ತು. ಇವು ನಿಜವಾದಷ್ಟೂ ಆಯಾ ಶಾಸ್ತ್ರ ಹೇಳುವವರಿಗೆ ಬೆಲೆ ಹೆಚ್ಚುತ್ತಿತ್ತು.
*****
ಬೆಲೆಬಾಳುವ ವಸ್ತುಗಳು ಕಳೆದು ಹೋದಾಗ ಕಳವಳ ಮತ್ತಷ್ಟು ಹೆಚ್ಚುತ್ತಿತ್ತು. ಹೊಟ್ಟೆ-ಬಟ್ಟೆ ಕಟ್ಟಿ ಆಸೆಯಿಂದ ಸಂಪಾಸಿದ ಬೆಳ್ಳಿ-ಬಂಗಾರದ ಒಡವೆಗಳು ಮುಂತಾದವು ಹೀಗೆ ಕಳೆದುಹೋದರೆ ಅಥವಾ ಕಳವಾದರೆ ಸಹಜವಾದ ನೋವು ಇರುತ್ತಿತ್ತು. ಇವು ದನಗಳನ್ನು ಹುಡುಕಿದಂತೆ ಅಲ್ಲ. ಕವಡೆ ಶಾಸ್ತ್ರ ಮುಂತಾದುವು ಇವುಗಳ ಹುಡುಕುವಿಕೆಗೆ ಸಾಲವು. ಆಗ ಜನಗಳು "ಅಂಜನ" ಹಾಕುವವರ ಮೊರೆಹೋಗುತ್ತಿದ್ದರು.
ಅಂಜನ ಹಾಕುವವರು ತಮ್ಮ ಬಳಿ ಬಂದವರ ಸಮಸ್ಯೆ ವಿಚಾರಿಸಿ ಅಂಜನ ಹಾಕುತ್ತಿದ್ದರು. "ಅಂಜನ ಹಾಕುವುದು" ಎಂದರೇನು? ಒಂದು ಇಷ್ಟದೈವದ ಪೂಜೆ ಮಾಡುವುದು. ನಂತರ ಒಂದು ಹರಿವಾಣದಲ್ಲಿ (ತಟ್ಟೆ ಅಥವಾ ಬಾಂಡಲೆ) ತಿಳಿಯಾದ ಎಣ್ಣೆ ತುಂಬಿಸುವುದು. ತಮ್ಮ ಬಳಿ ಇರುವ ಕಾಡಿಗೆಯಂತಹ ಒಂದು ಮುಲಾಮು ಕಣ್ಣಿಗೆ ಹಚ್ಚಿಕೊಳ್ಳುವುದು. ನಂತರ ಬಂದವರನ್ನು ಪ್ರಶ್ನೆ ಕೇಳುತ್ತಾ ಆ ಎಣ್ಣೆಯಲ್ಲಿ ನೋಡುತ್ತಾ ಹೋಗುವುದು. ಹೀಗೆ ನೋಡುತ್ತಿರುವಾಗ ಕಳೆದಿರುವ ಪದಾರ್ಥ ಎಲ್ಲಿದೆ ಎಂದು ಅವರಿಗೆ ಕಾಣುವುದು. ಕಂಡದ್ದನ್ನು ಬಂದವರಿಗೆ ಹೇಳುವುದು. ಈ ಸುಳಿವಿನ ಮೇರೆಗೆ ಅವರು ತಮ್ಮ ಹುಡುಕಾಟ ಮುಂದುವರೆಸುವುದು. ಹೀಗೆ ವ್ಯವಸ್ಥೆ.
ಇದು ನಿಜವೇ? ಹೀಗೆ ಕಾಣಿಸುತ್ತದೆಯೇ? ಈ ರೀತಿಯ ಪ್ರಶ್ನೆಗಳು ಬರುತ್ತವೆ. ಇವೆಲ್ಲಾ ಅವರವರ ನಂಬಿಕೆಯ ಸಮಾಚಾರ. ಹೀಗೆ ಅಂಜನ ಹಾಕಿ ಕೇಳಿ ಪದಾರ್ಥಗಳು ಸಿಕ್ಕಿದ್ದೂ ಉಂಟು. ಸಿಗದಿದ್ದದ್ದೂ ಉಂಟು. ಸಿಕ್ಕಿದ್ದು ಕಾಕತಾಳೀಯ ನ್ಯಾಯ ಇರುವಂತೆ ಇರಬಹುದು. (ಒಬ್ಬ ವ್ಯಕ್ತಿ ಒಂದು ತಾಳೆಯ ಮರದ ಕೆಳಗೆ ಹೋಗಿ ಕುಳಿತುಕೊಂಡ. ಅದೇ ಸಮಯಕ್ಕೆ ಒಂದು ಕಾಗೆ ಆ ಮರದ ಮೇಲೆ ಬಂದು ಕುಳಿತುಕೊಂಡಿತು. ಮರ ಅವನ ಮೇಲೆ ಬಿದ್ದಿತು. ಕಾಗೆಯ ಭಾರಕ್ಕೆ ಮರ ಮುರಿದು ಅವನ ಮೇಲೆ ಬಿತ್ತು ಎನ್ನುವುದು ಕಾಕ-ತಾಳೀಯ ನ್ಯಾಯ ಎಂದು ಹೇಳುವುದು. ಇಂಗ್ಲೀಷಿನಲ್ಲಿ coincidence ಅನ್ನಬಹುದು). ಏನಾದರೂ ಮಾಡಿ ಬೆಲೆಬಾಳುವ ವಸ್ತು ಮರಳಿ ಪಡೆಯಬೇಕೆಂಬ ಆಸೆ ಇರುವ ವ್ಯಕ್ತಿ ಏನು ಬೇಕಾದರೂ ಮಾಡುತ್ತಾನೆ. ಇದು ಮನುಷ್ಯ ಸಹಜ ವ್ಯವಹಾರ.
*****
ವಿದ್ಯಾರ್ಥಿಗಳಿಗೆ ವಿಜ್ಞಾನದ ತರಗತಿಗಳಲ್ಲಿ, ವಿಶೇಷವಾಗಿ ರಸಾಯನ ಶಾಸ್ತ್ರ ಕಲಿಸುವ ಸಂದರ್ಭದಲ್ಲಿ, ಆಮ್ಲಜನಕ (oxygen) ತಯಾರಿಸುವುದನ್ನು ಕಲಿಸುತ್ತಾರೆ. ಇದಕ್ಕೆ ಅನೇಕ ವಿಧಾನಗಳಿವೆ. (ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ ಹೈಡ್ರೋಜನ್ ಪರಾಕ್ಸೈಡ್ ಉಪಯೋಗಿಸುವುದು ಒಂದು ವಿಧಾನ). ಸಾಮಾನ್ಯವಾಗಿ ಪೊಟ್ಯಾಸಿಯಂ ಕ್ಲೋರೇಟ್ (Potassium Chlorate - KClO3)) ಹೆಸರಿನ ರಾಸಾಯನಿಕ ಪುಡಿಯನ್ನು ಕಾಯಿಸಿದರೆ ಅದು ಪೊಟ್ಯಾಸಿಯಂ ಕ್ಲೋರೈಡ್ (KCl) ಆಗಿ ರೂಪಾಂತರಗೊಂಡು ಆಮ್ಲಜನಕ (O2) ಬಿಡುಗಡೆ ಆಗುತ್ತದೆ. ಆದರೆ ಈ ಕ್ರಿಯೆ ಬಹಳ ನಿಧಾನ. ಇದು ಬೇಗ ಆಗುವುದಕ್ಕೆ ಪೊಟ್ಯಾಸಿಯಂ ಕ್ಲೋರೇಟ್ ಜೊತೆಗೆ ಸ್ವಲ್ಪ ಮ್ಯಾಂಗನೀಸ್ ಡೈ ಆಕ್ಸೈಡ್ (Mn O2) ಬೆರೆಸುತ್ತಾರೆ. ಹೀಗೆ ಮಾಡುವುದರಿಂದ ಆಮ್ಲಜನಕ ಬೇಗ ಬಿಡುಗಡೆ ಆಗುತ್ತದೆ. ಈ ಮ್ಯಾಂಗನೀಸ್ ಡೈ ಆಕ್ಸೈಡ್ ಅನ್ನುವುದು ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಆದರೆ ಅದರ ಇರುವುಕೆ ಆಗಬೇಕಾದ ಕೆಲಸವನ್ನು ಬೇಗ ನಡೆಯುವಂತೆ ಮಾಡುತ್ತದೆ.
ಕ್ರೀಡಾಂಗಣಗಳಲ್ಲಿ ಭಾಗವಹಿಸುವ ಆಟಗಾರರಂತೆ ಅವರ ಸಮರ್ಥಕರೂ, ಅಭಿಮಾನಿಗಳೂ, ಸಾಮಾನ್ಯ ಪ್ರೇಕ್ಷಕರೂ ಸೇರಿರುತ್ತಾರೆ. "ಹೊಡಿ, ಹಿಡಿ, ನುಗ್ಗು, ಓಡು, ಎಗರು" ಮುಂತಾಗಿ ಆಟಗಾರರನ್ನು ಅವರು ಹುರಿದುಂಬಿಸುತ್ತಾರೆ. ಆಡುವವರು, ಗೆಲ್ಲುವವರು ಮತ್ತು ಸೋಲುವವರು ಆಟಗಾರರೇ. ಪ್ರೇಕ್ಷಕರಿಗೆ ಅದರಿಂದ ನೋಡಿದ ಸಂತೋಷ ಅಷ್ಟೇ. ಬಹುಮಾನ, ಮನ್ನಣೆ, ಟ್ರೋಫಿ, ಹಣ, ಇವು ಯಾವುವೂ ಪ್ರೇಕ್ಷಕರಿಗೆ ಸಿಗುವುದಿಲ್ಲ. ಅವೆಲ್ಲಾ ಆಟಗಾರರಿಗೆ ಮಾತ್ರ. ಆದರೂ ಕ್ರೀಡಾಂಗಣ ಪ್ರೇಕ್ಷಕರಿಲ್ಲದೆ ಕೋವಿಡ್ ಮಾರಿಯ ಸಮಯದಂತೆ ಬರಿದಾಗಿದ್ದರೆ ಆಟಗಾರರಿಗೆ ಎಲ್ಲ ನೀರಸವಾಗುತ್ತದೆ.
ಇದು ನಾನ್-ಸ್ಟಿಕ್ ಪಾತ್ರೆಗಳ ಯುಗ. ಸೌದೆ ಒಲೆಯ ಮಸಿಯಿಲ್ಲ. ಎಣ್ಣೆಯ ಜಿಡ್ಡಿಲ್ಲ. ತಂಗಳಿನ ವಾಸನೆಯಿಲ್ಲ. ಸುಮ್ಮನೆ ಸ್ವಲ್ಪ ನೀರು ಹಾಕಿ ಒರೆಸಿದರೆ ಆಯಿತು. ಹಿಂದಿನ ದಿನಗಳಂತೆ ತಿಕ್ಕಿ-ತಿಕ್ಕಿ ತೊಳೆಯುವ ಕೆಲಸವಿಲ್ಲ. ತೊಳೆದರೂ ಮಸಿ ಉಳಿಯಿತೆಂಬ ಕಸಿವಿಸಿ ಇಲ್ಲ. ಮತ್ಯಾರೋ ಏನಾದರೂ ಅನ್ನುತ್ತಾರೆ ಅನ್ನುವ ಅಳುಕಿಲ್ಲ.
*****
ಪರಮಾತ್ಮನನ್ನು ಅನೇಕ ಹೆಸರುಗಳಿಂದ ಕರೆಯುತ್ತೇವೆ. ಅವುಗಳಲ್ಲಿ "ನಿರಂಜನ" ಅನ್ನುವುದೂ ಒಂದು. ಹೀಗೆ ನಿರಂಜನ ಎಂದು ಕರೆಯುವುದರ ಕಾರಣವೇನು?
"ಅಂಜನ" ಅಂದರೆ ಏನು ಅನ್ನುವುದರ ವಿವರವನ್ನು ಮೇಲೆ ನೋಡಿದೆವು. ಅಂಜನ ಹಾಕುವವರು ಕಣ್ಣಿಗೆ ಹಚ್ಚಿಕೊಳ್ಳುವ ಮುಲಾಮಿನಂತಹ ವಸ್ತುವಿಗೆ ಅಂಜನ ಎನ್ನುವುದೇಕೆ? ಅದು ಕಣ್ಣಿಗೆ ಅಂಟಿಕೊಂಡು ಕೂಡುತ್ತದೆ. "ಅಂಜನ" ಪದಕ್ಕೆ "ಅಂಟಿಕೊಳ್ಳುವುದು" ಎಂದು ಅರ್ಥ.
ಅಂಟಿಕೊಳ್ಳುವ ಪದಾರ್ಥ ಅಂಜನ ಎಂದಾದರೆ ಅಂಟಿಕೊಳ್ಳದ ವಸ್ತು "ನಿರಂಜನ". ಆದ್ದರಿಂದ ಪರಮಾತ್ಮನು "ನಿರಂಜನ".
ಆಮ್ಲಜನಕದ ತಯಾರಿಕೆಯಲ್ಲಿ ಉಪಯೋಗಿಸುವ ಮ್ಯಾಂಗನೀಸ್ ಡೈ ಆಕ್ಸೈಡ್ ಎಂಬ ವಸ್ತುವಿಗೆ "ವೇಗವರ್ಧಕ" (Catalyst) ಅನ್ನುತ್ತಾರೆ. ಅದು ತಯಾರಿಕೆಯಲ್ಲಿ ಸುಮ್ಮನೆ ಇರುವುದೇ ಹೊರತು ಆ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಕ್ರಿಯೆಯ ಮೊದಲು ಹೇಗೆ ಇತ್ತೋ ಕ್ರಿಯೆಯ ನಂತರವೂ ಹಾಗೆಯೇ ಉಳಿಯುವುದು. ಕ್ರೀಡಾಂಗಣದಲ್ಲಿ ಸೇರಿದ ಪ್ರೇಕ್ಷಕರೂ ಹಾಗೆಯೇ. ಅವರಿಗೆ ಆಟದ ನೇರ ಲಾಭ ಏನೂ ಇಲ್ಲ. ನಾನ್-ಸ್ಟಿಕ್ ಪಾತ್ರೆಯೂ ಹೀಗೆಯೇ.
ಪರಮಾತ್ಮನು ನಮ್ಮ ಎಲ್ಲ ಕ್ರಿಯೆಗಳ ಅಂತಃಶಕ್ತಿಯಾಗಿ ಜೊತೆಗಿರುತ್ತಾನೆ. ಅವನಿಗೆ ಈ ಕ್ರಿಯೆಗಳ ಯಾವುದೇ ವಿಕಾರಗಳೂ ಆಗುವುದಿಲ್ಲ. ಮ್ಯಾಂಗನೀಸ್ ಡೈ ಆಕ್ಸೈಡ್ ಆದರೂ ಬೇರೆ ಪದಾರ್ಥಗಳ ಜೊತೆ ಕಾದು, ನಂತರ ತಣ್ಣಗಾಗುತ್ತದೆ. ಪರಮಾತ್ಮನಿಗೆ ಈ ರೀತಿ ವಿಕಾರಗಳೂ ಇಲ್ಲ. ಪ್ರೇಕ್ಷಕರಿಗೆ ಕೂಗಿದುದರಿಂದ ಆಯಾಸ, ತಮ್ಮ ನೆಚ್ಚಿನ ತಂಡ ಗೆದ್ದರೆ ಆನಂದ, ಸೋತರೆ ದುಃಖ ಆಗುತ್ತವೆ. ಪರಮಾತ್ಮನಿಗೆ ಈ ರೀತಿ ಆಗುವುದಿಲ್ಲ. ಅವನಿಗೆ ಲಾಭದ ಆಸೆಯಿಲ್ಲ. ನಷ್ಟದ ಭೀತಿಯಿಲ್ಲ. ಕೆಲಸ ಮಾಡಿದ ಆಯಾಸವಿಲ್ಲ. ನಾನ್-ಸ್ಟಿಕ್ ಪಾತ್ರೆಯಂತೆ ಬಿಸಿಯಾಗುವುದಿಲ್ಲ. ಒಮ್ಮೆ ತೊಳೆದು ಒರೆಸಬೇಕಾದದ್ದೂ ಇಲ್ಲ. ಅವನು ಯಾವುದಕ್ಕೂ ಅಂಟಿಕೊಂಡವನಲ್ಲ. ಆದ್ದರಿಂದ ಪರಮಾತ್ಮ ನಿರಂಜನ.
ಹಾಗಿದ್ದರೆ ಕರ್ಮಗಳನ್ನು ಮಾಡುವುದರಲ್ಲಿ ಕೆಲವರಿಗೆ ಪಾಪ, ಮತ್ತೆ ಕೆಲವರಿಗೆ ಪುಣ್ಯ ಏಕೆ? ಎಲ್ಲರೂ ಅವನ ಮಕ್ಕಳಲ್ಲವೇ? ಕೆಲವರಿಗೆ ಯಾಕೆ ಕಷ್ಟ? ಮತ್ತೆ ಕೆಲವರಿಗೆ ಯಾಕೆ ಸುಖ? ಅವನು ಒಬ್ಬ ನ್ಯಾಯಾಧೀಶನಂತೆ. ಒಬ್ಬನಿಗೆ ಶಿಕ್ಷೆ. ಮತ್ತೊಬ್ಬನಿಗೆ ಮನ್ನಣೆ. ಅವರವರು ಮಾಡಿದ ಕೆಲಸಗಳಂತೆ ತೀರ್ಪು. ಇದೇ ಅವನ "ಸಂವಿಧಾನ".
*****
ಭಗವದ್ಗೀತೆ ಮೂರನೆಯ ಅಧ್ಯಾಯ, ಇಪ್ಪತ್ತೆರಡನೆಯ ಶ್ಲೋಕದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ:
ನ ಮೇ ಪಾರ್ಥಾಸ್ತಿ ಕರ್ತವ್ಯಮ್ ತ್ರಿಷು ಲೋಕೇಷು ಕಿಂಚನನಾನಾವಾಪ್ತಮವಾಪ್ತವ್ಯಮ್ ವರ್ತ ಏವ ಚ ಕರ್ಮಣಿ
ಪಾರ್ಥ, ನನಗೆ ಎಲ್ಲಿಯೂ (ಮೂರು ಲೋಕಗಳಲ್ಲಿಯೂ) ಯಾವುದೇ ಕರ್ತವ್ಯಗಳಿಲ್ಲ.(ಇಂಥದು ಮಾಡಲೇಬೇಕೆಂಬ ಬಂಧವಿಲ್ಲ).ಸಂಪಾದಿಸಬೇಕು, ಗೆಲ್ಲಬೇಕು ಅಥವಾ ಪಡೆಯಬೇಕು ಎನ್ನುವುದು ಯಾವುದೂ ಇಲ್ಲ.ಆದರೂ ನಾನು ಕೆಲಸಗಳನ್ನು (ಕರ್ತವ್ಯ ಎನ್ನುವಂತೆ) ಮಾಡುತ್ತಲೇ ಇರುತ್ತೇನೆ.
ಇದೇ ಅವನ ನಿರಂಜನತ್ವದ ಲಕ್ಷಣ.
ನಾವು ಮೇಲೆ ಮಾಡಿದ ಚರ್ಚೆಯೆಲ್ಲವೂ ಇದನ್ನೇ ಸೂಚಿಸುತ್ತದೆ. ಪರಮಾತ್ಮನ ಪರಿಪೂರ್ಣ ಜ್ಞಾನ, ಪರಿಪೂರ್ಣ ಆನಂದ, ಮೊದಲಾದ ಗುಣಗಳಂತೆ ಅವನ ನಿರಂಜನ ಗುಣವೂ ಅವನ ಉಪಾಸನೆಯಲ್ಲಿ ಬಹಳ ಮುಖ್ಯವಾದುದು.
ಉತ್ತಮ ವಿಚಾರಗಳು.ರಂಜಿಸದೇ ಇರುವುದೇ ನಿರಂಜನ.
ReplyDeleteಕನಕಪುರದ ಕೋಟೆ ಬಾಗಿಲಿನಿಂದ ಸ್ವಲ್ಪ ಮುಂದೆ ವೀರಸೇನ/ಆಚಾರಿ ಅಂಗಡಿ ದಾಟಿ ಹೋದರೆ ಬಲಭಾಗದಲ್ಲಿ ಒಂದು ತೊಂಡಿನ ಮನೆ ಇದ್ದದ್ದು ನೆನಪು
Next to Mithai Seshappa's house
ReplyDeleteNicely explained the meaning of Niranjana. UR…..
ReplyDeleteನಮ್ಮ ಬರಲ್ಲಿ ಕೆಲವರು ಹಸು ಗಳನ್ನು ಮೇಯಲು ಕಳಿಸುತ್ತಾರೆ ನಮ್ಮ ಮನೆಗೆ ಬರುತ್ತಿದ್ದವ ದೊಡ್ಡ ಅವನಿಗೆ ತಿಂಗಳಿಗೆ ಒಂದುರೂ ಕೊುತ್ತಿದ್ದೆವು ಕೊಡಲಾರದವರು ರಸ್ತೆಗೆಬಿಡುತ್ತಿದ್ದರು ರಸ್ತೆಯಲ್ಲಿ ಅದರ ಕಾಟ ತಡಿಯದವರು ದೊಡ್ಡಿಯಲ್ಲಿ ಬಿಡುತ್ತಿದ್ದರು ಬಿಡಿಸಿಕೊಳ್ಳಲು ೩ ರೂ ಕೊಡಬೇಕಾಗಿತ್ತು
ReplyDelete