ಹಿಂದೊಮ್ಮೆ "ಹೂವು-ಹುಲ್ಲು ಮತ್ತು ಶ್ರೀಕೃಷ್ಣ" ಅನ್ನುವ ಶೀರ್ಷಿಕೆಯಡಿ ಶ್ರೀ ಪುರಂದರದಾಸರ ಜನಪ್ರಿಯ ಕೃತಿ "ಹೂವ ತರುವರ ಮನೆಗೆ ಹುಲ್ಲ ತರುವ, ಅವ್ವ ಲಕುಮಿರಮಣ ಇವಗಿಲ್ಲ ಗರುವ" ಬಗ್ಗೆ ವಿಚಾರ ಮಾಡಿದ್ದೆವು. ಇಲ್ಲಿ ಕ್ಲಿಕ್ ಮಾಡಿ ಅದನ್ನು ಓದಬಹುದು.
ಅನೇಕ ಕೃತಿಗಳಲ್ಲಿ ಹೊರನೋಟಕ್ಕೆ ಕಾಣುವ ಅರ್ಥಕ್ಕೂ, ಒಳಗಿನ ಅಂತರಾರ್ಥಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಒಟ್ಟಿನಲ್ಲಿ ಮೂರು ವಿಧದ ಅರ್ಥಗಳು ಉಂಟು. ಇವನ್ನು ಬಾಹ್ಯಾರ್ಥ, ಅಂತರಾರ್ಥ ಮತ್ತು ಗೂಡಾರ್ಥ ಅನ್ನುತ್ತಾರೆ. ಇದರ ಬಗ್ಗೆ ವಿವರಗಳನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು.
ಇದೇ ಸಂದರ್ಭದಲ್ಲಿ "ಬಿಂದು ಗಂಗೋದಕ" ಎನ್ನುವ ವಿಷಯದ ಚರ್ಚೆಯಲ್ಲಿ ವಾರಣಾಸಿಯಲ್ಲಿರುವ ಬಿಂದುಮಾಧವ ದೇವಾಲಯ, ದೇಶದಲ್ಲಿರುವ ಇತರೆ ಮಾಧವ ದೇವಾಲಯಗಳು ಮತ್ತು ಕಾಶಿಯ ಬಿಂದುಮಾಧವ ಘಟ್ಟ ಮುಂತಾದ ವಿವರಗಳನ್ನು ನೋಡಿದ್ದೆವು. ಓದುಗರೊಬ್ಬರು "ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ" ಕೃತಿಯಲ್ಲಿ ಬರುವ "ಬಿಂದು ಮಾಧವನ ಘಟ್ಟಕ್ಕೆ ಹೋಗುವೆ ತಾರೇ ಬಿಂದಿಗೆಯ" ಅಂತರಾರ್ಥ ಮತ್ತು ಗೂಡಾರ್ಥಗಳ ಬಗ್ಗೆ ಕೇಳಿದ್ದಾರೆ. ಈಗ ಅದನ್ನು ಸ್ವಲ್ಪ ನೋಡೋಣ.
*****
"ತಾರಕ್ಕ ಬಿಂದಿಗೆ.." ಕೃತಿಯಲ್ಲಿ ಒಬ್ಬರು (ಪುರುಷ ಅಥವಾ ಸ್ತ್ರೀ) ಮತ್ತೊಬ್ಬರನ್ನು (ಸ್ತ್ರೀ) ನೀರು ತರಲು ಒಂದು ಬಿಂದಿಗೆ ಕೊಡಲು ಕೇಳುವಂತೆ ಇದೆ. ಇದನ್ನು ನರ್ಸರಿ ಶಾಲೆಯಲ್ಲಿ ಪುಟ್ಟ ಮಕ್ಕಳಿಗೆ ಚೆನ್ನಾಗಿ ಅಲಂಕಾರ ಮಾಡಿ ಶಾಲಾ ವಾರ್ಷಿಕೋತ್ಸವದಂದು ನೃತ್ಯ ಮಾಡಲು ವಿಶೇಷವಾಗಿ ಬಳಸುತ್ತಾರೆ. ಸಂಗೀತ ಕಲಿಯುವ ಮಕ್ಕಳಿಗೆ ಪ್ರಾರಂಭದಲ್ಲಿ ಹೇಳಿಕೊಡುವ ಹಾಡುಗಳಲ್ಲಿ ಇದೂ ಒಂದು. ಸರಳವಾದ ಪದಗಳ ಬಳಕೆಯ ಮೂರು ನುಡಿಗಳ ಪುಟ್ಟ ಹಾಡು. ಕಲಿಯಲು ಸುಲಭ. ನೆನಪಿಡಲು ಸರಳ. ಹಾಡಲು ಸುಗಮ. ಆದರೆ ಅರ್ಥ ಬಹಳ ಗಹನ. ಇದೇ ಇದರ ವಿಶೇಷ.
ಶ್ರೀ ಪುರಂದರದಾಸರು ಮಾಧ್ವ ಸಂಪ್ರದಾಯದ ಕವಿಗಳು ಮತ್ತು ತತ್ವಜ್ಞರು. "ಸುಮಧ್ವ ವಿಜಯ" ಅನ್ನುವ ಗ್ರಂಥದಲ್ಲಿ (ಅದ್ವೈತದಲ್ಲಿ "ಶ್ರೀ ಶಂಕರ ದಿಗ್ವಿಜಯ" ಗ್ರಂಥವಿದ್ದಂತೆ ದ್ವೈತದಲ್ಲಿ ಈ "ಸುಮಧ್ವ ವಿಜಯ ಗ್ರಂಥ) ಆಚಾರ್ಯ ಮಧ್ವರ ಭಾಷ್ಯಗಳ ಮತ್ತು ಪ್ರವಚನಗಳ ಪರಿಣಾಮಗಳನ್ನು ವರ್ಣಿಸುವ ಪ್ರಸಂಗವಿದೆ. ಈ ಗ್ರಂಥದ ಒಂಭತ್ತನೆಯ ಸರ್ಗದ ಹತ್ತನೆಯ ಶ್ಲೋಕದಲ್ಲಿ "ಬಾಲಸಂಗಮಪಿ ಬೋಧಯದ್ ಭೃಶಂ ದುರ್ನಿರೂಪವಚನಂ ಚ ಪಂಡಿತೈ:" ಎನ್ನುವ ಒಂದು ಹೇಳಿಕೆಯಿದೆ. "ಚಿಕ್ಕಮಕ್ಕಳಿಗೂ ಅರ್ಥವಾಗುವುದು. ಆದರೆ ಘನ ಪಂಡಿತರಿಗೂ ಗೊತ್ತಾಗದು!" ಎಂದು ಅದರ ಅರ್ಥ. ಈ ಹಾಡೂ ಅಂತೆಯೇ. ಬಾಹ್ಯಾರ್ಥ ಪುಟ್ಟ ಮಕ್ಕಳಿಗೂ ಗೊತ್ತಾಗುವುದು. ನೀರು ತರಲು ಬಿಂದಿಗೆ ಕೊಡು ಎನ್ನುವುದು. ಅಂತರಾರ್ಥ-ಗೂಡಾರ್ಥಗಳು ತಿಳಿಯಲು ಅನೇಕ ಗ್ರಂಥಗಳ ಆಳವಾದ ಅಭ್ಯಾಸ ಬೇಕಾಗುವುದು. ಇದು ಏಕೆ ಎನ್ನುವುದನ್ನು ಸ್ವಲ್ಪಮಟ್ಟಿಗೆ ನೋಡೋಣ.
*****
ಬಿಂದಿಗೆ ಕೊಡು ಎಂದು ಕೇಳುತ್ತಿರುವುದು ಅಕ್ಕನನ್ನು. ಅಕ್ಕ ಯಾರು? ಒಂದು ಮನೆಯಲ್ಲಿ ಹುಟ್ಟಿದ ಹುಡುಗಿ ತನ್ನ ನಂತರ ಹುಟ್ಟಿದ ತಮ್ಮ-ತಂಗಿಯರಿಗೆ ಅಕ್ಕ. ಇದು ಲೋಕಾರೂಢಿ. ತಮ್ಮ-ತಂಗಿಯರು ಏನಾದರೂ ಬೇಕಾದರೆ ತಮಗಿಂತ ದೊಡ್ಡವಳಾದ, ಮತ್ತು ಆ ಕಾರಣದಿಂದ ಮನೆಯಲ್ಲಿ ಸ್ವಲ್ಪ ಹೆಚ್ಚಿನ ಅಧಿಕಾರ ಹೊಂದಿರುವ ಅಕ್ಕನನ್ನು ಕೇಳುವುದು ಸಹಜ. ಅದಲ್ಲದೆ ಅಕ್ಕ ಎಂದರೆ ಸ್ವಲ್ಪ ಸಲಿಗೆಯೂ ಹೆಚ್ಚಾಗಿ ಉಂಟು. ಅಣ್ಣನಿಗಿಂತ ಅಕ್ಕನಲ್ಲಿ ಕೇಳುವುದು ಸುಲಭ. ಅವಳದ್ದು ಹೆಂಗರುಳು. ತುಂಬಿದ ಮನೆಯಲ್ಲಿ ಬೆಳೆದವರಿಗೆ ಇದು ಗೊತ್ತು. ವಯಸ್ಸಿನ ಅಂತರ ಹೆಚ್ಚಿದ್ದರೆ ಕೇಳುವವರು ರಾಗವಾಗಿ ಬೇಡುವುದು ಸಾಮಾನ್ಯ. ಇಲ್ಲಿ ಕೇಳುವುದು ಹಾಗೆ ಇದೆ. "ಕೊಡೇ ಅಕ್ಕಾ...." ಎಂದು ಪ್ರೀತಿಯಿಂದ ಮನವೊಲಿಸುವ ರೀತಿ. ಆದ್ದರಿಂದ "ತಾರೇ ಬಿಂದಿಗೆಯಾ" ಎಂದು ದೀರ್ಘ! ಇದು ಇಲ್ಲಿನ ಸಾಮಾನ್ಯ ಅರ್ಥ.
ಕೆಲವು ಕುಟುಂಬಗಳಲ್ಲಿ ತಾಯಿಗೆ "ಅಮ್ಮ" ಎಂದು ಸಂಬೋಧಿಸುವ ಪದ್ಧತಿ ಉಂಟು. ಹೆಚ್ಚಿನ ಕುಟುಂಬಗಳಲ್ಲಿ ಹೀಗೆಯೇ ಅಭ್ಯಾಸ. ಕೆಲವು ಪ್ರದೇಶಗಳಲ್ಲಿ (ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ) "ಅವ್ವ" ಎಂದೂ ಕರೆಯುತ್ತಾರೆ. ಗಂಡ-ಹೆಂಡತಿ ಮದುವೆಯ ನಂತರ ಹೊಸದಾಗಿ ಸಂಸಾರ ಹೂಡಿದಾಗ ಇನ್ನೂ ಸಂತಾನ ಇರುವುದಿಲ್ಲ. ಅವರ ಜೊತೆ ಗಂಡನ ತಮ್ಮ-ತಂಗಿಯರು ವಾಸವಿದ್ದರೆ ಅವರು ಅವನನ್ನು "ಅಣ್ಣ" ಎಂದು ಕರೆಯುತ್ತಾರೆ. ನಂತರ ಆ ದಂಪತಿಗಳ ಸಂತಾನವಾಗಿ ಹುಟ್ಟಿದ ಮಕ್ಕಳು ತಂದೆಯನ್ನು "ಅಣ್ಣ" ಎಂದು ಈ ಕಾರಣದಿಂದ ಕರೆಯುವುದು ಉಂಟು. ಇದೇ ರೀತಿ ಹೆಂಡತಿಯ ತಮ್ಮ-ತಂಗಿಯರು ಅವರೊಡನಿದ್ದರೆ ಆಕೆಯನ್ನು "ಅಕ್ಕ" ಎಂದು ಕರೆಯುತ್ತಾರೆ. ಮುಂದೆ ಹುಟ್ಟಿದ ಮಕ್ಕಳು ಇದನ್ನೇ ಅನುಸರಿಸಿ ತಾಯಿಯನ್ನೂ "ಅಕ್ಕ" ಎಂದೇ ಕರೆಯುತ್ತಾರೆ. ಮಹಾಲಕ್ಷ್ಮಿ ಎಲ್ಲರಿಗೂ ತಾಯಿಯಾದರೂ ಈ ಹಿನ್ನೆಲೆಯಲ್ಲಿ ಅಕ್ಕನೂ ಆಗುತ್ತಾಳೆ.
ಬಿಂದಿಗೆ ಒಂದು ದಿನಬಳಕೆಯ ಜಡ ಪದಾರ್ಥ. ಸ್ವಲ್ಪ ಅನುಕೂಲವಂತರಾದ ಜನರ ಮನೆಯಾದರೆ ಅಲ್ಲಿ ಹಿತ್ತಾಳೆ ಅಥವಾ ತಾಮ್ರದ ಬಿಂದಿಗೆ ಉಂಟು. ಬಡವರ ಮನೆಯಾದರೆ ಮಣ್ಣಿನ ಮಡಕೆ ಮಾತ್ರ ಇರುವುದು. ಚಿಕ್ಕವರಿಗೆ ಕೊಟ್ಟಾಗ, ಅವರು ಕಳೆದುಕೊಂಡರೆ ಬೆಲೆಬಾಳುವ ವಸ್ತು ಹೋಯಿತು. ಮಣ್ಣಿನದಾದರೆ, ಅವರು ಬಲು ಬೇಗ ಒಡೆದುಹಾಕಿ ಅದು ಹಾಳಾಗಬಹುದು. ಆದ್ದರಿಂದ ಎರಡು ರೀತಿಯಲ್ಲೂ ನಷ್ಟವೇ ಹೌದು. ಈ ಕಾರಣಕ್ಕಾಗಿ ದೊಡ್ಡವರನ್ನು ಕೇಳಿ ಪಡೆದುಕೊಳ್ಳಬೇಕಾಗುತ್ತದೆ.
ಒಂದೆಡೆ ಒಬ್ಬ ಪರಮಾತ್ಮ. ಇನ್ನೊಂದೆಡೆ ಅನೇಕ ಜೀವರುಗಳು. ಮೂರನೆಯವು ಜಡ ವಸ್ತುಗಳು. ಜಡ ಪ್ರಕೃತಿಗಳಿಗೆ ಅಭಿಮಾನಿ ದೇವತೆ ಮಹಾಲಕ್ಷ್ಮೀದೇವಿ. ಇಲ್ಲಿ ಜೀವಿಗಳು ಮಹಾಲಕ್ಷ್ಮೀದೇವಿಯನ್ನು ತಮಗೊಂದು ದೇಹವನ್ನು ಕೊಡು ಎಂದು ಕೇಳುತ್ತಿರುವುದು ಅಂತರಾರ್ಥ. ನಮ್ಮ ದೇಹವೂ ಒಂದು ಬಿಂದಿಗೆಯಂತೆ ಅಥವಾ ಮಡಕೆಯಂತೆಯೇ ಇದೆ. ಅವುಗಳಿಗೂ ಕತ್ತು ಅಥವಾ ಕಂಠ ಪ್ರದೇಶ ಉಂಟು. ನಮ್ಮ ದೇಹಗಳಿಗೂ ಹೀಗೆಯೇ ಕತ್ತು ಇದೆ. ನದಿಯಲ್ಲೋ, ಜಲಾಶಯದಲ್ಲೋ ಬೇಕಾದಷ್ಟು ನೀರುಂಟು. ಆದರೆ ನೀರು ತರಬೇಕಾದರೆ ಬಿಂದಿಗೆ ಬೇಕು. ಬಿಂದಿಗೆಗಳಲ್ಲಿ ನೀರು ತುಂಬಬಹುದು. ಜೀವನಿಗೆ ಸಾಧನೆ ಮಾಡಲು ಅನೇಕ ಅವಕಾಶಗಳಿವೆ. ಆದರೆ ಸಾಧನೆ ಮಾಡಲು ಒಂದು ದೇಹ ಬೇಕು! ನಮ್ಮ ದೇಹಗಳಿಂದ ಅನೇಕ ರೀತಿಯ ಸಾಧನೆಕ್ರಿಯೆಗಳನ್ನು ಮಾಡಿ ಸಾಧನೆಯ ಫಲವನ್ನು ಜೀವಿಯು ತುಂಬಿಕೊಳ್ಳಬಹುದು. ದೇಹವಿಲ್ಲದಿದ್ದರೆ ಜೀವನು ಏನೂ ಸಾಧನೆ ಮಾಡಲು ಸಾಧ್ಯವಿಲ್ಲ.
"ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ" ಅನ್ನುವಲ್ಲಿ ಜೀವನು ಜಡ ಪ್ರಕೃತಿಯ ಅಭಿಮಾನಿ ದೇವತೆ ಮಹಾಲಕ್ಷ್ಮಿಯನ್ನು ಸಾಧನೆ ಮಾಡುವ ಸಲುವಾಗಿ ನಮಗೆ ಒಂದು ದೇಹವನ್ನು ಕೊಡು ಎಂದು ಬೇಡುವುದು ಅಂತರಾರ್ಥ.
*****
ಇನ್ನು "ಬಿಂದಿಗೆ ಒಡೆದರೆ ಒಂದೇ ಕಾಸು" ಎಂದರೇನು? ತಾಮ್ರದ ಅಥವಾ ಹಿತ್ತಾಳೆ ಬಿಂದಿಗೆ ಒಡೆಯುವುದಿಲ್ಲ. ಅವು ಕಳೆದುಹೋಗಬಹುದು ಅಥವಾ ಚಿಕ್ಕವರನ್ನು ಹೆದರಿಸಿ ಮತ್ಯಾರೋ ಧಾಂಡಿಗರು ಕಿತ್ತುಕೊಂಡು ಹೋಗಬಹುದು. ಒಡೆಯಬೇಕಾದರೆ ಅದು ಮಣ್ಣಿನ ಬಿಂದಿಗೆ (ಮಡಕೆ) ಆಗಿರಬೇಕು. ಇದು ನೇರವಾಗಿ ದೇಹವನ್ನೇ ಸೂಚಿಸುತ್ತದೆ. ಯಾರಾದರೂ ಸತ್ತ ಸುದ್ದಿ ಕೇಳಿದಾಗ ಹಿಂದಿನ ದಿನಗಳಲ್ಲಿ "ಒಂದು ಘಟ ಬಿತ್ತು" ಎಂದು ಸೂಚ್ಯವಾಗಿ ಹೇಳುತ್ತಿದ್ದರು. ಘಟ ಸಂಸ್ಕೃತ ಪದ. ಕನ್ನಡಲ್ಲಿ ಮಡಕೆ.
ಸ್ಮಶಾನದಲ್ಲಿ ಮೃತ ದೇಹಗಳ ಅಂತ್ಯ ಸಂಸ್ಕಾರ ಮಾಡುವಾಗ, ಸಂಸ್ಕಾರ ಮಾಡುತ್ತಿರುವ ವ್ಯಕ್ತಿಯ ಹೆಗಲ ಮೇಲೆ ಒಂದು ನೀರು ತುಂಬಿದ ಮಣ್ಣಿನ ಘಟ (ಮಡಕೆ) ಹೊರಿಸುತ್ತಾರೆ. ಮೃತ ದೇಹದ ಸುತ್ತ ಅವನು ಸುತ್ತುವಾಗ ಒಂದು ಸಣ್ಣ ಕಲ್ಲಿನಿಂದ ಅದಕ್ಕೆ ಮತ್ತೊಬ್ಬರು ಒಂದು ರಂಧ್ರ ಮಾಡುತ್ತಾರೆ. ಮೂರು ಸುತ್ತು. ಒಂದು ಸುತ್ತಿಗೆ ಒಂದರಂತೆ ಮೂರು ರಂಧ್ರಗಳು. ಈ ತೂತುಗಳಿಂದ ನೀರು ಹೊರಗೆ ಸೋರಿಹೋಗುತ್ತಿರುತ್ತದೆ. ಮೂರನೆಯ ಸುತ್ತು ಬಂದ ಮೇಲೆ ಮಡಕೆ ಹೊತ್ತುಕೊಂಡಿರುವ ವ್ಯಕ್ತಿ ಅದನ್ನು ಹಿಮ್ಮುಖವಾಗಿ ಬೀಳಿಸುತ್ತಾನೆ. ಈಗ ಮಡಕೆ ಪೂರ್ತಿ ಒಡೆದು ಚೂರುಗಳಾಗಿ ಬೀಳುತ್ತದೆ. ಹೀಗೆ ಬಿದ್ದ ಒಂದು ದೊಡ್ಡ ಮಡಕೆಯ ಚೂರಿನಲ್ಲಿ ಇರುವ ಸ್ವಲ್ಪ ನೀರನ್ನು ಮುಂದಿನ ಕರ್ಮದ ಕೆಲಸಗಳಿಗೆ ಬಳಸುತ್ತಾರೆ. "ಒಂದು ಘಟ ಬಿತ್ತು" ಎನ್ನುವ ಪದಪ್ರಯೋಗ ಈ ಕಾರಣದಿಂದ ಬಂದದ್ದು.
ಹಿಂದೆಲ್ಲಾ ಸುಡುಗಾಡಿಗೆ ಅಥವಾ ಸ್ಮಶಾನಕ್ಕೆ ಹೋಗಿ ಇದನ್ನು ನೋಡಿದವರಿಗೆ ಮಾತ್ರ ಇವು ಗೊತ್ತಾಗುತ್ತಿತ್ತು. ಸುಡುವ ಕಾಡು ಸುಡುಗಾಡು. ಈಗ ಟಿವಿ ಕಾರ್ಯಕ್ರಮಗಳಲ್ಲಿ ಮತ್ತು ಸಿನಿಮಾಗಳಲ್ಲಿ ವೈಭವದಿಂದ ತೋರಿಸುವುದರಿಂದ ಹೆಚ್ಚಿನ ಜನಕ್ಕೆ ಗೊತ್ತು.
ಉಳಿದಿದ್ದು "ಒಂದೇ ಕಾಸು" ಅನ್ನುವುದು. ಒಬ್ಬ ವ್ಯಕ್ತಿ ಸತ್ತ ಮೇಲೆ ಆ ದೇಹವನ್ನು ಏನು ಮಾಡಬೇಕು? ಎಷ್ಟೇ ಪ್ರೀತಿಯ ವ್ಯಕ್ತಿಯಾದರೂ ಆ ದೇಹವನ್ನು ಇಟ್ಟುಕೊಳ್ಳುವಂತಿಲ್ಲ. ಸಂಸ್ಕಾರ ಮಾಡಬೇಕು. ಹಾಗೆ ಮಾಡಿ ದೇಹದ ಕೆಲಸ ಮುಗಿಸಬೇಕು. ಇದು ಲೋಕದಲ್ಲಿ ಎರಡು ರೀತಿಯಲ್ಲಿ ನಡೆಯುತ್ತದೆ. ಕೆಲವರು ಭೂಮಿಯಲ್ಲಿ ಹೂಳುತ್ತಾರೆ. ಮತ್ತೆ ಕೆಲವರು ಬೆಂಕಿಯಲ್ಲಿ ಸುಡುತ್ತಾರೆ. ಬೆಂಕಿಯಲ್ಲಿ ಸುಡುವುದಕ್ಕೆ "ಕಾಯಿಸುವುದು" ಎಂದೂ ಹೇಳುತ್ತಾರೆ. ಆಡು ಭಾಷೆಯಲ್ಲಿ "ಕಾಯಿಸು" ಅನ್ನುವುದು "ಕಾಸು" ಆಗುತ್ತದೆ. "ಇನ್ನೇನು, ಕಾಫಿ ಕಾಸು" ಎಂದು ಹಿಂದೆಲ್ಲಾ ಹೇಳುತ್ತಿದ್ದರು. "ಸ್ನಾನಕ್ಕೆ ನೀರು ಕಾಸು" ಅನ್ನುತ್ತಿದ್ದರು. ದಾಸರು ಇದನ್ನೇ "ಬಿಂದಿಗೆ ಒಡೆದರೆ ಒಂದೇ ಕಾಸು" ಎಂದಿದ್ದಾರೆ. ಒಂದೇ ಕಾಸು. ಏಕೆಂದರೆ "ಮತ್ತೆ ಮತ್ತೆ ಕಾಸುವಂತಿಲ್ಲ". ಇದು ಕಡೆಯ ಕಾಸುವಿಕೆ. ಅಲ್ಲಿಗೆ ಎಲ್ಲ ಮುಗಿಯಿತು. ಹೀಗೆ.
*****
ಕೇವಲ ಎರಡು ಸಾಲಿನ ಪಲ್ಲವಿಗೇ ಇಷ್ಟಾಯಿತು. ಇದರಲ್ಲೂ "ನೀರು" ಪದದ ವಿಶೇಷಾರ್ಥ ಉಳಿದಿದೆ. ಈಗಿನ ಪೀಳಿಗೆಗೆ ಇಂತಹ ಹೆಚ್ಚು ವಿಷಯಗಳು ಗೊತ್ತಿರುವುದಿಲ್ಲ. ಪ್ರಶ್ನೆಗಳನ್ನು ಕೇಳುವವರು ಬಹುತೇಕ ಈಗಿನ ತಲೆಮಾರಿನವರು. ಆದ್ದರಿಂದ ವಿವರಗಳು ಜಾಸ್ತಿ. ಲೇಖನದ ಉದ್ದವೂ ದೊಡ್ಡದು.
ಮುಂದಿನ ಸಂಚಿಕೆಯಲ್ಲಿ ಈ ಕೃತಿಯ ಇತರೆ ಅಂತರಾರ್ಥ, ಗೂಡಾರ್ಥಗಳನ್ನು ಹುಡುಕುವ ಪ್ರಯತ್ನ ಮಾಡೋಣ.
Familiar song, we used to dance for its tune, thanks for the beautiful explanation.
ReplyDelete