ಮದುವೆಯ ಮನೆಯಲ್ಲಿ ಬಲು ಸಂಭ್ರಮ. ಸಭಾಂಗಣ ತುಂಬಿದೆ. ಪ್ರತಿಯೊಬ್ಬರಿಗೂ ಅವರದೇ ಆದ ಕೆಲಸ. ಮುಖ್ಯ ಕೆಲಸ ಮಾಡುವವರಿಗೆ ಅವುಗಳ ಚಿಂತೆ. ಅವರ ಸಹಾಯಕರಿಗೆ ಅವರ ಪಾಲಿಗೆ ಹಂಚಿಕೊಟ್ಟ ಕೆಲಸಗಳು. ಅಡಿಗೆಯ ಮನೆಯಂತೂ ತುಂಬು ಚಟುವಟಿಕೆಯಿಂದ ಓಡುತ್ತಿದೆ. ಪುರೋಹಿತರ ತಂಡಕ್ಕೆ ಬಂದ ಕೆಲಸ ಸುಗಮವಾಗಿ ಮುಗಿಸಿ ಮತ್ತೊಂದೆಡೆ ಇರುವ ಸಂಜೆಯ ಕಾರ್ಯಕ್ರಮಕ್ಕೆ ಹೋಗುವ ತವಕ. ವಾದ್ಯದವರಿಗೆ ಹೀಗೆಯೇ ಚಿಂತೆ. ಬಂದ ಅತಿಥಿ-ಅಭ್ಯಾಗತರನ್ನು ಗಮನಿಸುವವರಿಗೆ ಬಾಗಿಲ ಕಡೆಯೇ ಗಮನ. ಉಡುಗೊರೆ ಪೆಟ್ಟಿಗೆಗಳ ಕೀಲಿಕೈ ಹಿಡಿದವರಿಗೆ ಅದರ ಮೇಲೆ ಒಂದು ಕಣ್ಣಾದರೆ ಮತ್ತೊಂದು ಅವನ್ನು ಪಡೆಯಲು ಅರ್ಹರಾದವರ ಮೇಲೆ. ಹೀಗೆ ನಡೆಯುತ್ತಿದೆ.
ಅಂದ ಮಾತ್ರಕ್ಕೆ ಬೇರೆ ಯಾವುದೇ ಕೆಲಸ ಇಲ್ಲದವರು ಇಲ್ಲವೆಂದಲ್ಲ. ಅವರೂ ಬಂದು ಕುಳಿತಿದ್ದಾರೆ. ಬೆಳಗ್ಗೆ ಗಡತ್ತಾಗಿ ತಿಂಡಿಯ ಸೇವನೆ ಆಗಿದೆ. ಇನ್ನು ಸಮಾರಂಭದ ಮಧ್ಯೆ ಸ್ವಲ್ಪ ಪಾನಕ ಬರಬಹುದು. ಅದೇನೂ ಅಷ್ಟು ದೊಡ್ಡದಲ್ಲ. ಲಗ್ನದ ಸಮಯದ ನಂತರ, ಮಾಂಗಲ್ಯಧಾರಣೆ ಕಳೆದ ಮೇಲೆ ಭೂರಿ ಭೋಜನ ಬರುವವರೆಗೂ ಏನು ಮಾಡುವುದು? ನಾಲಿಗೆ ಸುಮ್ಮನಿರುವುದಿಲ್ಲ. ಅದು ಏನಾದರೂ ತಿನ್ನುತ್ತಿರಬೇಕು. ಇಲ್ಲವೇ ಇನ್ನೇನಾದರೂ ಅನ್ನುತ್ತಿರಬೇಕು. ವಿಮಲಮ್ಮ ಅಂತಹ ನಾಲಗೆಯುಳ್ಳ ಒಬ್ಬ ವ್ಯಕ್ತಿ.
ವಿಮಲಮ್ಮನ ಕಣ್ಣಿಗೆ ಕಮಲಮ್ಮ ಬಿದ್ದರು. ಸುಮ್ಮನಿರುವುದು ಸಾಧ್ಯವೇ? ಸಾಧ್ಯವಿದ್ದರೂ ಅದು ಸಾಧುವೇ? ಬಾಯಿತುಂಬಾ ಮಾತಿಗೆ ಅವಕಾಶ ಇರುವಾಗ ಸುಮ್ಮನೆ ಇದ್ದರೆ ಅದೊಂದು ಅನ್ಯಾಯವೇ ಅಲ್ಲವೇ? ಸರಸರನೆ ನಡೆದು ಕಮಲಮ್ಮ ಕುಳಿತಿರುವ ಕಡೆ ನುಗ್ಗಿದರು. ಉಭಯ ಕುಶಲೋಪರಿ ಪ್ರಾರಂಭವಾಯಿತು.
"ಏನು ಕಮಲಮ್ಮ? ಚೆನ್ನಾಗಿದ್ದೀರಾ? ಮೂರು ವರುಷ ಆಯಿತು ನಿಮ್ಮನ್ನು ನೋಡಿ"
"ಹೌದು ವಿಮಲಮ್ಮ. ತುಂಬಾ ದಿನ ಆಯಿತು. ಚೆನ್ನಾಗಿದ್ದೇವೆ. ನೀವು ಹೇಗೆ?"
"ಏನೋ, ನೋಡಿ. ಹೀಗಿದ್ದೇನೆ. ನಿಮ್ಮನ್ನು ಕಂಡು ಬಹಳ ಸಂತೋಷ ಆಯಿತು"
"ನನಗೂ ಅಷ್ಟೇ. ಈ ರೀತಿ ಸಮಾರಂಭಗಳಿಗೆ ಬಂದರೆ ಒಬ್ಬರನ್ನೊಬ್ಬರು ನೋಡಲು ಅವಕಾಶ"
"ಹೌದು, ನೋಡಿ. ಅಂದಹಾಗೆ ನಿಮ್ಮ ಮಗಳು ಸರಸು ಎಲ್ಲಿ? ಅವಳ ಮದುವೆ ಆಯಿತೇ?"
"ಇಲ್ಲ ವಿಮಲಮ್ಮ. ಒಂದೇ ಸಮ ವರ ಹುಡುಕುತ್ತಿದ್ದೇವೆ. ಆದರೆ ಯಾವುದೂ ಕೂಡಿಬರುತ್ತಿಲ್ಲ"
"ಅಯ್ಯೋ, ಹೌದೇ? ಅಲ್ಲಿ ನೋಡಿ. ನಿಮ್ಮ ಮಗಳ ಜೊತೆಗಾತಿ ಸರಳ"
"ಆಗಲೇ ನೋಡಿ ಮಾತನಾಡಿಸಿದೆ"
"ಅವಳಿಗೆ ಕಂಕಳಲ್ಲೊಂದು, ಕೈಯಲ್ಲೊಂದು. ನೋಡಿದರೆ ಇನ್ನೊಂದೂ ಬರುವಂತಿದೆ"
"ಹೌದು. ಕಳೆ ಕಳೆಯಾಗಿದ್ದಾಳೆ"
"ನೀವು ನೋಡಿದರೆ ಸರಸುಗೆ ಮದುವೆಯೇ ಆಗಲಿಲ್ಲ ಅನ್ನುತ್ತೀರಿ"
"ಏನು ಮಾಡುವುದು? ನಮಗೆ ಅದೇ ಚಿಂತೆಯಾಗಿದೆ"
"ಹೋಗಲಿ ಬಿಡಿ. ಅವಳಿಗೂ ಆಗುತ್ತೆ. ಯಾವುದಕ್ಕೂ ಋಣಾನುಬಂಧ ಕೂಡಿಬರಬೇಕು"
"ನಿಮ್ಮ ಹಾರೈಕೆಯಿಂದ ಬೇಗ ಹಾಗಾಗಲಿ ಅನ್ನುತ್ತೇನೆ"
"ಚಿಂತಿಸಬೇಡಿ. ಬ್ರಹ್ಮನು ಗಂಟು ಹಾಕಿಯೇ ಕಳಿಸಿರುತ್ತಾನೆ. ಕಂಕಣಬಲ ಕೂಡಿದರೆ ಎಷ್ಟು ಹೊತ್ತು?"
ಅಷ್ಟರಲ್ಲಿ ವಿಮಲಮ್ಮನಿಗೆ ಕನಕಮ್ಮ ಕಣ್ಣಿಗೆ ಬಿದ್ದರು. ಇನ್ನೊಂದು ಸುವರ್ಣ ಅವಕಾಶ. ಆ ಕಡೆ ನುಗ್ಗಿದರು. ಕಮಲಮ್ಮನಿಗೆ ಬಿಡುಗಡೆ ಆಯಿತು. ಈ ಪ್ರಶ್ನೆ ಬರುತ್ತದೆ ಎಂದು ಗೊತ್ತಿತ್ತು. ಅದಕ್ಕೇ ಈ ಮದುವೆಗೆ ಬರುವುದಕ್ಕೆ ಅನುಮಾನಿಸಿ, ಯೋಚಿಸಿ, ತಪ್ಪಿಸಬಾರದ ಮದುವೆ ಅಂತ ಬಂದಿದ್ದರು. ಈ ಪ್ರಶ್ನೆ ಯಾರಾದರೂ ಕೇಳಿದರೆ "ಇನ್ನೂ ಆಗಿಲ್ಲ" ಎಂದು ಹೇಳಲು ಸಂಕೋಚ. ಅದೊಂದು ಲಜ್ಜೆಗೆ ಕಾರಣವಾದ ಪರಿಸ್ಥಿತಿ.
ಹೆಣ್ಣು ಹೆತ್ತವರಿಗೆ ಈ ರೀತಿ ಸಂದರ್ಭಗಳು ಎದುರಾಗುತ್ತಿದ್ದ ಕಾಲವೊಂದಿತ್ತು. ಐವತ್ತು-ಅರವತ್ತು ವರುಷಗಳ ಹಿಂದೆ ಅದು ಸರ್ವೇಸಾಮಾನ್ಯವಾಗಿತ್ತು. ಈಗಲೂ ಈ ಪ್ರಶ್ನೆ ಬರುವುದೇ ಆದರೂ ಅದರ ತೀವ್ರತೆ ಆಷ್ಟಿರುವುದಿಲ್ಲ. ಹೆಣ್ಣು-ಗಂಡುಗಳು ಪರಸ್ಪರ ಜೊತೆ ಹಾಕಿಕೊಳ್ಳುವುದು ಹೆಚ್ಚಾದ ಕಾಲ ಇದಾದುದರಿಂದ ಪರಿಸ್ಥಿತಿಯೂ ಬದಲಾಗಿದೆ.
ಏನೇ ಆದರೂ ಹೆಣ್ಣು ಮಕ್ಕಳ ತಾಯಂದಿರಿಗೆ ಈ ರೀತಿಯ ತೊಳಲಾಟ ಎಲ್ಲ ಕಾಲಕ್ಕೂ ಇರುತ್ತದೆ. ಒಂದು ಸರಿಯಾದ ವರ ಸಿಕ್ಕಿ ಮಗಳು ವಿವಾಹಿತಳಾಗಲಿ ಎನ್ನುವ ಆಸೆ ಹೆತ್ತ ಕರುಳಿಗೆ ಎಂದೂ ಇರುವುದೇ. ಇದು ಮಗಳ ಮದುವೆ ಆಗುವ ಮುಂಚಿನ ಕಥೆ.
*****
ಧಾರೆ, ನಾಗೋಲಿ ಮುಂತಾದುವೆಲ್ಲಾ ಸಾಂಗವಾಗಿ ನಡೆದವು. ಈಗ ಸಂಜೆಯ ಸಮಯ. ಕೆಲವರಿಗೆ ಮುಂದಿನ ಆರತಕ್ಷತೆಯ ಗಡಿಬಿಡಿ. ಆಗಿನ ಅಲಂಕಾರಕ್ಕೆ ಹೂವಿನ ರಾಶಿಯೇ ಬಂದು ಬಿದ್ದಿದೆ. ಸಂಬಂಧಿಸಿದ ಕೆಲಸಗಾರರು ಬೇಗ ಬೇಗ ತಯಾರಿ ನಡೆಸುತ್ತಿದ್ದಾರೆ. ಹೆಣ್ಣು ಮತ್ತು ಗಂಡು, ಈಗ ಗಂಡ-ಹೆಂಡತಿ, ಅವರ ಮನೆಯವರಿಗೆ ಮುಂದಿನ ನಡವಳಿಕೆ ಒಂದು ದೊಡ್ಡ ಹಂತ. ಗಂಡಿನವರು ಹೆಣ್ಣನ್ನು ಮನೆ ತುಂಬಿಸಿಕೊಳ್ಳಲು ಉತ್ಸುಕರು. ಹೆಣ್ಣಿನ ಕಡೆಯವರು ಒಪ್ಪಿಸಿಕೊಡಬೇಕು. ಈ ಕೋಣೆಯಲ್ಲಿ ಒಂದು ರೀತಿಯ ಸಂಭ್ರಮ. ಆ ಕೋಣೆಯಲ್ಲಿ ಒಂದು ವಿಧದ ದುಗುಡ.
ಎಲ್ಲರಿಗಿಂತ ಹೆಚ್ಚು ಕಳವಳ ಪಡುತ್ತಿರುವವಳು ಹುಡುಗಿಯ ಹೆತ್ತತಾಯಿ. ತನ್ನ ಕಣ್ಣ ಮುಂದಿನ ಕೂಸು ಇಂದು ಮನೆ ಬಿಟ್ಟು ಹೋಗುತ್ತಿದ್ದಾಳೆ. ಮುಂದೆ ಅವಳ ಜೀವನ ಹೇಗೋ, ಏನೋ? ಅಳೆದು-ಸುರಿದು ಸಂಬಂಧ ಗೊತ್ತು ಮಾಡಿದ್ದಾಯಿತು. ಗಂಡಿನ ಕಡೆಯವರು ಒಳ್ಳೆಯವರೆಂದೇ ನಂಬಿಕೆ. ಹತ್ತು ಜನ ಹಾಗೆ ಹೇಳಿದ್ದು ಕೇಳಿದಮೇಲೆ ತಾನೇ ಮದುವೆ ಗೊತ್ತು ಮಾಡಿದ್ದು. ಮದುವೆ ಮಾಡುವುದರಲ್ಲಿ ಏನೂ ಕೊರತೆಯಿಲ್ಲ. ಕೊಡುವುದೆಲ್ಲ ಕೊಟ್ಟಾಯಿತು. ಸಾಲ-ಸೋಲ ಮಾಡಿದ್ದು ಹೇಗಾದರೂ ಮಾಡಿ ತೀರಿಸಬಹುದು. ಆದರೆ ಮುಂದಿನ ದಿನಗಳಲ್ಲಿ ಮಗಳು ಅತ್ತೆಯ ಮನೆಯಲ್ಲಿ ಹೇಗಿರುತ್ತಾಳೋ, ಏನೋ? ಅತ್ತೆ-ಅತ್ತಿಗೆ-ನಾದಿನಿಯರು ಹೇಗೆ ನಡೆದುಕೊಂಡಾರೋ? ಮಾವ ಒಳ್ಳೆಯವರಂತೆ ಕಾಣುತ್ತಾರೆ. ಆದರೂ ಏನೂ ಹೇಳುವಂತಿಲ್ಲ.
"ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ಬಂದಿರುವೆವು....." ಎಂದು ಯಾರೋ ಹಾಡಲು ಶುರು ಮಾಡಿದ್ದಾರೆ. ವಿ. ಸೀತಾರಾಮಯ್ಯನವರ ಈ ಹಾಡಿಲ್ಲದೆ ಹೆಣ್ಣು ಒಪ್ಪಿಸಿಕೊಡುವುದು ಮುಗಿಯುವಂತಿರಲಿಲ್ಲ. ಬೇರೆ ಹಂತಗಳಲ್ಲಿ ಕೆಲಸ ತೂಗಿಸಲು ಮಂತ್ರಗಳು ಉಂಟು. ಈ ಹಂತದಲ್ಲಿ ಅವರ ಹಾಡೇ ಆಗಬೇಕು. ಹಾಡುತ್ತಿರುವವರಿಗೆ ಅವರ ಹಾಡುವಿಕೆಯ ಮೇಲೆ ಅಭಿಮಾನ. ತಾಯಿಗಾದಾರೋ ಆ ಹಾಡಿನ ಒಂದೊಂದು ಪದವೂ ಮೊದಲೇ ಬೆದರಿರುವ ಹೃದಯದ ಮೇಲೆ ಒಂದೊಂದು ಏಟು ಹಾಕುತ್ತಿದೆ. ಎಷ್ಟು ಸಮಾಧಾನ ಪಟ್ಟುಕೊಂಡರೂ ದುಃಖ ನುಗ್ಗುತ್ತಾ ಬರುತ್ತಿದೆ. ಕಣ್ಣುಗಳಲ್ಲಿ ನೀರು ತುಂಬಿಕೊಂಡು ದೃಷ್ಟಿ ಮಂಜಾಗಿದೆ. ಮುಂದೆ ಮಗಳ ಜೀವನ ಹೇಗೋ ಎಂದು ಆತಂಕ ಆವರಿಸಿದೆ.
ಈಗ ಕಾಲ ಬದಲಾಗಿದೆ. "ಅಷ್ಟ ವರ್ಷಾ ಭವೇತ್ ಕನ್ಯಾ" ಅನ್ನುವುದಿಲ್ಲ. "ಆದಷ್ಟು ವರ್ಷ ಭವೇತ್ ಕನ್ಯಾ" ಎಂದಾಗಿದೆ. ಮಗಳೂ ತಿಳಿದವಳು. ವಿದ್ಯಾವಂತೆ. ಸಮಾಜವೂ ಎಷ್ಟೋ ಬದಲಾಗಿದೆ. ಆದರೂ ಮಾತೃ ಹೃದಯ ಚೀರುತ್ತಲೇ ಇದೆ. ಇದು ಮಗಳ ಮದುವೆಯ ನಂತರದ ಕಥೆ.
*****
ಮೇಲಿನ ಸಂಗತಿಗಳು ಕೇವಲ ಐವತ್ತು-ಅರವತ್ತು ವರುಷಗಳ ಸಂಗತಿಯಲ್ಲ. ಎರಡು ಸಾವಿರ ವರುಷಗಳ ಹಿಂದೆಯೂ ಇದೇ ಪರಿಸ್ಥಿತಿ ಇತ್ತು. "ಸ್ವಪ್ನ ವಾಸವದತ್ತಮ್" ನಾಟಕ ಚಿರಪರಿಚಿತ. ಭಾಸ ಮಹಾಕವಿಯ ಈ ನಾಟಕ ಎರಡು ಸಾವಿರ ವರುಷಗಳ ಹಿಂದಿನದು ಎನ್ನುವ ಅಭಿಪ್ರಾಯವಿದೆ. ಮಹಾಕವಿ ಕಾಳಿದಾಸ ತನ್ನ "ಮಾಳವಿಕಾಗ್ನಿಮಿತ್ರ" ನಾಟಕದ ಪ್ರಾರಂಭದಲ್ಲಿ ಭಾಸ, ಸೌಮಿಲ್ಲ, ಕವಿಪುತ್ರ ಮೊದಲಾದ ತನಗಿಂತ ಹಿಂದಿನ ಪ್ರಸಿದ್ಧ ಕವಿಗಳ ನಾಟಕಗಳನ್ನು ನೆನೆಸಿಕೊಳ್ಳುತ್ತಾನೆ. ಆರು ಅಂಕಗಳ ಈ ನಾಟಕದ ಹಿಂದಿನ ಭಾಗ ನಾಲ್ಕು ಅಂಕಗಳ ಇನ್ನೊಂದು ನಾಟಕ "ಪ್ರತಿಜ್ನಾಯೌಗಂಧರಾಯಣಮ್". ಯೌಗಂಧರಾಯಣ ವತ್ಸರಾಜನಾದ ಉದಯನನ ಪ್ರಧಾನ ಮಂತ್ರಿ.
ಈ ಪ್ರತಿಜ್ನಾಯೌಗಂಧರಾಯಣಮ್ ನಾಟಕದ ಎರಡನೇ ಅಂಕದಲ್ಲಿ ವಾಸವದತ್ತೆಯ ತಂದೆಯಾದ ಪ್ರದ್ಯೋತ ಮಹಾರಾಜನ ಪಾತ್ರ ರಂಗದ ಮೇಲೆ ಹೇಳುವ ಒಂದು ಶ್ಲೋಕವು ಹೀಗಿದೆ:
ಅದತ್ತೇತಿ ಆಗತಾ ಲಜ್ಜಾ ದತ್ತೇತಿ ವ್ಯಥಿತಂ ಮನಃ
ಧರ್ಮಸ್ನೇಹಾಂತರೇ ನ್ಯಸ್ತಾ ದುಃಖಿತಾಃ ಖಲು ಮಾತರಃ
(ವಿವಾಹಯೋಗ್ಯ ವಯಸ್ಸು ತಲುಪಿದ ತನ್ನ ಒಬ್ಬ ಮಗಳು ಮನೆಯಲ್ಲಿದ್ದಾಗ) ಮೊದಲು ಮದುವೆ ಮಾಡಿಕೊಡಲಿಲ್ಲವಲ್ಲಾ ಎಂದು ನಾಚಿಕೆಯಿಂದ ಕೊರಗು. ವಿವಾಹದ ನಂತರ ಮಗಳು ಮನೆ ಬಿಟ್ಟು ಹೋಗುವಳಲ್ಲಾ ಎಂದು ಕೊರಗು. ಹೀಗೆ, ತಾಯಿಯರು ಅತ್ತ ಕಡೆ ತಾಯಿಯಾಗಿ ಮಾಡಬೇಕಾದ ಕರ್ತವ್ಯ ಮತ್ತು ಇತ್ತ ಕಡೆ ಮಗಳ ಮೇಲಿನ ಅತಿಶಯವಾದ ಪ್ರೀತಿ, ಇವೆರಡರ ನಡುವೆ ತೊಳಲಿ ಬಳಲುವರು.
ಎರಡು ಸಾವಿರ ವರುಷ ಹಿಂದೆ ವಾಸವದತ್ತೆಯ ಕಾಲದಲ್ಲಿದ್ದಂತೆ, ಕೆಲವು ದಶಕಗಳ ಹಿಂದೆಯೂ ಇತ್ತು. ಈಗ ಅದರ ತೀವ್ರತೆ ಇಳಿದಿದ್ದರೂ ಅದರ ಒಟ್ಟಾರೆ ಪರಿಣಾಮ ತಾಯಿಯರ ಮೇಲೆ ಅದೇ ರೀತಿ ಇರುವುದು. ಇದು ಮಾತೆಯರಿಗೆ ಚೆನ್ನಾಗಿ ಗೊತ್ತು. ಇತರರಿಗೆ ಅಷ್ಟು ವಿಶದವಾಗಿ ಗೊತ್ತಾಗದಿರಬಹುದು.
*****
ಮನುಷ್ಯನ ಜೀವನದಲ್ಲಿ ಅನೇಕ ಮುಖ್ಯ ಘಟ್ಟಗಳಿರುತ್ತವೆ. ಆಯುಪ್ರಮಾಣದ ದೃಷ್ಟಿಯಿಂದ ನಮ್ಮ ಸಂಪ್ರದಾಯಗಳಲ್ಲಿ ಐದು ಪ್ರಮುಖ ಘಟ್ಟಗಳನ್ನು ಗುರುತಿಸಿದ್ದಾರೆ. ಹುಟ್ಟಿನಿಂದ ಅರವತ್ತು ವರುಷಗಳ ಉಗ್ರರಥ ಶಾಂತಿ, ಎಪ್ಪತ್ತು ವರುಷಗಳ ಭೀಮರಥ ಶಾಂತಿ, ಸಹಸ್ರ (ಒಂದು ಸಾವಿರ) ಪೂರ್ಣ ಚಂದ್ರ (ಹುಣ್ಣಿಮೆ ಚಂದ್ರ) ದರ್ಶನ ಶಾಂತಿ, ಪ್ರಪೌತ್ರ ದರ್ಶನ ಶಾಂತಿ (ಮೊಮ್ಮಗನ ಮಗನ ಜನನ), ಮತ್ತು ಶತಮಾನ (ಒಂದು ನೂರು ವರುಷಗಳ ಜೀವನ) ಶಾಂತಿ. ಇವುಗಳ ಬಗ್ಗೆ ಈ ಹಿಂದೆ (2012 ಫೆಬ್ರವರಿಯಲ್ಲಿ) ಈ ಬ್ಲಾಗಿನಲ್ಲಿ ನೋಡಿದ್ದೇವೆ. ಸಹಸ್ರ ಪೂರ್ಣಚಂದ್ರ ದರ್ಶನ ಶಾಂತಿಯ ಬಗ್ಗೆ ಇಲ್ಲಿ ಕ್ಲಿಕ್ ಮಾಡಿ ಓದಬಹುದು. ಸುಮಾರು 81 ವರ್ಷ 2 ತಿಂಗಳುಗಳಿಗೆ ಈ ಘಟ್ಟ ಬರುತ್ತದೆ.
ಎಂಭತ್ತು ವರುಷಗಳ ಹುಟ್ಟು ಹಬ್ಬ ಆಚರಿಸುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅಂದಾಜುಗಳ ಪ್ರಕಾರ ನೂರಕ್ಕೆ ಐದಾರು ಮಂದಿ ಮಾತ್ರ ಈ ಘಟ್ಟ ತಲಪುತ್ತಾರೆ. ಎಂಭತ್ತರ ಹುಟ್ಟು ಹಬ್ಬ ಈ ಕಾರಣದಿಂದ ಒಂದು ವಿಶೇಷವೇ. ಇದೇ ರೀತಿ ಒಂದು ಪುಸ್ತಕವನ್ನು ಬರೆಯಲು ಪ್ರಾರಂಭಿಸಿ, ಮುಗಿಸಿ, ಮುದ್ರಿಸಿ, ಪ್ರಕಟಿಸುವ ಯಶಸ್ಸು ನೂರಕ್ಕೆ ಒಬ್ಬರಿಗಿಂತಲೂ (ಶೇಕಡಾ ೦.4 ಎಂದು ಒಂದು ಅಂದಾಜು) ಕಡಿಮೆ ಜನರಿಗೆ ಸಿಕ್ಕುವುದು. ಪುಸ್ತಕ ಬಿಡುಗಡೆ ಒಂದು ಸಾಧನೆ. ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿ ಮನುಷ್ಯನೂ ಒಬ್ಬ ಕವಿಯೇ. ಹೆಚ್ಚಿನವರಿಗೆ ಅದು ಒಂದು ಮಿಂಚಿನಂತೆ ಬಂದು ಮಾಯವಾಗುವುದು. ಅದು ಬೌದ್ಧಿಕವಿರಬಹುದು ಅಥವಾ ಭಾವನಾತ್ಮಕ ಇರಬಹುದು. ಬುದ್ಧಿಯಲ್ಲಿ ಅಥವಾ ಮನಸ್ಸಿನಲ್ಲಿ ಬಂದ ಹೊಳಹುಗಳನ್ನು ಕಾಗದದ ಮೇಲೆ ಇಳಿಸುವುದು ಅಪರೂಪ. ಅವೆಲ್ಲವನ್ನೂ ಒಂದೆಡೆ ಸೇರಿಸಿ, ಪರಿಷ್ಕರಿಸಿ, ಪ್ರಕಟಿಸುವುದು ಅನೇಕರಿಗೆ ಸಾಧ್ಯ ಆಗುವುದಿಲ್ಲ. ಇದಕ್ಕೆ ಮತ್ತೆ ಕೆಲವರ ಒತ್ತಾಸೆಯೂ ಬೇಕಾಗುತ್ತದೆ. ಇದು ಇನ್ನೊಂದು ರೀತಿಯ ಭಾಗ್ಯ.
ಈ ಎರಡೂ ರೀತಿಯ ಭಾಗ್ಯಗಳು ಒಟ್ಟಾಗಿ ಸಿಗುವುದು ಎಷ್ಟು ಅಪರೂಪ ಎಂದು ಇನ್ನೊಮ್ಮೆ ಹೇಳಬೇಕಾಗಿಲ್ಲ. ಕಳೆದ ಭಾನುವಾರ (18 ಜನವರಿ 2026) ಇಂತಹ ಸುಂದರ ಸಮಾರಂಭವೊಂದು ಬೆಂಗಳೂರಿನಲ್ಲಿ ನಡೆಯಿತು. "ಸಮನ್ವಯ" ಅನ್ನುವ ಕವನ ಸಂಕಲನ ಬಿಡುಗಡೆ ಆಯಿತು.
ಶೈಲಾ ಬಿ. ಅಗಡಿ ಅವರು ಕನ್ನಡ ಮತ್ತು ಹಿಂದಿಯಲ್ಲಿ ಆಗಾಗ ಬರೆದು ಜೋಪಾನವಾಗಿಟ್ಟಿದ್ದ ಕವನಗಳನ್ನು ಅವರ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಒಟ್ಟುಗೂಡಿಸಿ, ಮುದ್ರಿಸಿ ಅಂದು ಬಿಡುಗಡೆ ಮಾಡಿದರು. ಪುಸ್ತಕದ ಚಿತ್ರವನ್ನು ಮೇಲುಗಡೆ ನೋಡಬಹುದು.
*****
"ಸಮನ್ವಯ" ಕವನ ಸಂಕಲದಲ್ಲಿ ಇರುವ ಕವನಗಳಲ್ಲಿ "ಮಡಿಲ ಅಳಲು" ಮತ್ತು "ಸ್ವ-ಸಾಂತ್ವನ" ಎನ್ನುವ ಎರಡು ಕವನಗಳು ಮೇಲೆ ಚರ್ಚಿಸಿದ ಒಬ್ಬ "ತಾಯಿಯ ತೊಳಲಾಟ" ಕುರಿತಾದ ವಸ್ತುವನ್ನು ಬಿಂಬಿಸುವುವು.
"ಮಡಿಲ ಅಳಲು" ಕವನದ ಕೆಲವು ಸಾಲುಗಳು:
ತುತ್ತು ಉಣುವ ಪುಟ್ಟ ಹಕ್ಕಿಗೆ
ಹೊಂಬಣ್ಣದ ರೆಕ್ಕೆ ಮೂಡಿರಲು
ಹೆತ್ತೊಡಲು ಬರಿದು ಮಾಡುವ
ಸಂಚು ಹೂಡಿರಲು, ಪಣ ತೊಟ್ಟಿರಲು
ಕಂದಾ, ನೀ ಮಡಿಲ ತೊರೆದು ಪೊದೆಯಾ?
ಹೀಗೆ ದುಃಖಿಸುವ ಮಾತೃಹೃದಯ ತನಗೆ ತಾನೇ ಕೊಡುವ ಉತ್ತರ "ಸ್ವ-ಸಾಂತ್ವನ" ಕವನ. ಅದರ ಕೆಲವು ಸಾಲುಗಳು:
ಮರಳಿ ಪಡೆಯುವ ಅತಿಯಾಸೆ ಬೇಡ ನಿನಗೆ
ಕುಸುಮಕೆ ಪ್ರೀತಿಯ ಧಾರೆಯೆರೆಯನೆರೆವವರು
ಮತ್ತೂ ಇಹರೆಂಬುದ ನೀ ಮರೆಯದಿರು
ನೀ ನಡೆದು ಬಂದ ಪಥವ ಮರೆತೆಯಾ?
ಹೀಗೆ ತೊಳಲಾಡುವ ಪ್ರತಿ ತಾಯಿಯೂ ಹಿಂದೆ ಒಂದು ದಿನ ಇದೇ ರೀತಿ ತನ್ನ ಹುಟ್ಟಿನ ಗೂಡನ್ನು ತೊರೆದು ಬಂದವಳೇ ಅಲ್ಲವೇ? ಈಗ ಗೂಡು ಬಿಟ್ಟು ಹಾರುತ್ತಿರುವ ಹಕ್ಕಿಯೂ ಮುಂದೆ ಒಂದು ದಿನ ಇದೇ ಹಂತ ತಲುಪುವವಳಲ್ಲವೇ? ಇದೇ ತಾನೇ ಸೃಷ್ಟಿಯ ಮತ್ತು ಸಮಾಜದಲ್ಲಿ ಜೀವನ ನಡೆಸುವ ಸೊಬಗು?
*****
ಎರಡು ಹಿರಿಮೆಯ ಘಟ್ಟಗಳನ್ನು ದಾಟಿ, ಎಂಭತ್ತರ ವಿಶೇಷ ಹುಟ್ಟುಹಬ್ಬದ ಆಚರಣೆ ಮತ್ತು ಕವನ ಸಂಕಲನದ ಬಿಡುಗಡೆ ಸುಸಂದರ್ಭದಲ್ಲಿ ಶ್ರೀಮತಿ ಶೈಲಾ ಅವರಿಗೆ ಅನೇಕ ಸಾದರ ಶುಭಾಶಯಗಳು.
ಈ ಕತೆ ಎಲ್ಲಾ ಹೆಣ್ಣು ಮಕ್ಕಳ ತಾಯಿಯರಿಗೂ ಇರುವುದೇ. ಎಂಭತ್ತರ ಆಚರಣೆಗೆ ಇಷ್ಟು ಪೀಠಿಕೆ ಕೊಟ್ಟು ಶೈಲಳಿಗೆ ನೀವು ಅಭಿನಂದಿಸಿರುವುದು ಶ್ಲಾಘನೀಯ. ನಿಮಗೆ ನನ್ನ ವಂದನೆಗಳು.
ReplyDeleteಬಹಳ ನುಂದರ ರಚನೆ ಹೃದಯನ್ಪರ್ಷಿ ರಚನಕಾರರು ಯಾರೆಂದು ತಿಳಿಸಿದ್ದಕ್ಕೆ ಧನ್ಯವಾದಗಳು
ReplyDelete