ಹಿಂದಿನ ಸಂಚಿಕೆಯಲ್ಲಿ "ಹದಿನಾರು ಮತ್ತು ಇಪ್ಪಂತ್ತೊಂದು" ಅನ್ನುವ ಶೀರ್ಷಿಕೆಯ ಅಡಿಯಲ್ಲಿ ಭಾರತೀಯ ಸಂಖ್ಯಾಶಾಸ್ತ್ರ ಹುಟ್ಟಿ ಬೆಳೆದ ರೀತಿಯ ಮತ್ತು ಅದರ ಜನ್ಮದಾತ ಎಂದು ಹೇಳುವ ಕಪಿಲ ಮುನಿ ಬಗ್ಗೆ ಸ್ವಲ್ಪ ವಿಚಾರ ಮಾಡಿದೆವು. ಕರ್ದಮ ಪ್ರಜಾಪತಿ ಮತ್ತು ದೇವಹೂತಿ ದೇವಿಯರ ಮಗನಾದ ಕಪಿಲನಾಗಿ ಶ್ರೀ ಮಹಾವಿಷ್ಣುವು ಅವತರಿಸಿದ ಸಮಾಚಾರವನ್ನು ನೋಡಿದೆವು. ಪ್ರಜಾಪತಿ ಕರ್ದಮ-ದೇವಹೂತಿ-ಕಪಿಲ ಮುನಿಗಳ ಕಾರ್ಯಕ್ಷೇತ್ರವಾದ ಗುಜರಾತು ರಾಜ್ಯದ ಪಾಟನ್ ಜಿಲ್ಲೆಯಲ್ಲಿರುವ ಸಿದ್ಧಿಪುರ, ಅಲ್ಲಿನ ಪ್ರಸಿದ್ಧ ಬಿಂದು ಸರೋವರ ಮತ್ತು "ಮಾತೃಗಯಾ" ಕ್ಷೇತ್ರದ ಬಗ್ಗೆ ನೋಡಿದ್ದೆವು.
"I Salute You, Dear Mother" ಎಂಬ ಶೀರ್ಷಿಕೆಯ ಸಂಚಿಕೆಯಲ್ಲಿ ಹೆತ್ತ ತಾಯಿ ನೆನಪಿನಲ್ಲಿ ತಾಯಿಯನ್ನು ಉದ್ದೇಶಿಸಿ ಮಾಡುವ ಹದಿನಾರು ಸಂಖ್ಯೆಯ ಪಿಂಡಪ್ರದಾನ ಮತ್ತು ಪ್ರತಿ ಪಿಂಡ ಕೊಡುವ ಸಂದರ್ಭದಲ್ಲಿ ಹೇಳುವ ಶ್ಲೋಕಗಳು, ಅವುಗಳಲ್ಲಿರುವ ಭಾವ ತುಂಬಿದ ಅರ್ಥಗಳನ್ನೂ ನೋಡಿದೆವು.
ಇದೇ ವಿಷಯಕ್ಕೆ ಸಂಬಂಧಿಸಿದ ಈ ಹಿಂದಿನ ಎರಡು ಸಂಚಿಕೆಗಳನ್ನು (ಒಂದು ಇಂಗ್ಲೀಷಿನಲ್ಲಿದೆ) ಇಲ್ಲಿ ಕ್ಲಿಕ್ ಮಾಡಿ ಓದಬಹುದು.
*****
ಬಿಹಾರ ರಾಜ್ಯದಲ್ಲಿರುವ "ಗಯಾ" ಕ್ಷೇತ್ರದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಶ್ರದ್ದಾಳು ಜನಗಳು ಈ ಗಯಾ ಕ್ಷೇತ್ರ ಯಾತ್ರೆ ಮಾಡಿ ಅಲ್ಲಿರುವ "ಗದಾಧರ" ದೇವಾಲಯದಲ್ಲಿ ಪಿತೃಶ್ರಾದ್ಧ ಮಾಡಿ, ಗದಾಧರನ ವಿಗ್ರಹದ ಮುಂದುಗಡೆ ಇರುವ ಕಲ್ಲಿನ "ವಿಷ್ಣುಪಾದ" ಸ್ಥಳದಲ್ಲಿ ಪಿಂಡಗಳನ್ನು ವಿಸರ್ಜನೆ ಮಾಡಿದರೆ ಪಿತೃಗಳಿಗೆ ಉತ್ತಮ ಗತಿ ಸಿಗುವುದೆಂದು ನಂಬಿಕೆ. ಸಾಮಾನ್ಯವಾಗಿ ಕಾಶಿಯಾತ್ರೆ ಮಾಡುವ ಯಾತ್ರಿಕರು ಮೊದಲು ಪ್ರಯಾಗ ತಲುಪಿ, ಅಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ (ಕೆಲವರು "ವೇಣೀದಾನ" ಸಹ ಮಾಡುತ್ತಾರೆ), ನಂತರ ಕಾಶಿಯ ವಿಶ್ವೇಶ್ವರ ಮತ್ತು ಬಿಂದುಮಾಧವ ದರ್ಶನ ಮಾಡಿ, ಆಮೇಲೆ ಗಯಾ ತಲುಪಿ ಅಲ್ಲಿ "ಸರ್ವ ಪಿತೃ ಶ್ರಾದ್ಧ" ಮಾಡುತ್ತಾರೆ. ಅಲ್ಲಿಗೆ "ಕಾಶಿಯಾತ್ರೆ" ಎಂದು ಹೇಳುವ ಸಂಪ್ರದಾಯ ಪದ್ಧತಿ ಪೂರ್ತಿ ಆಯಿತು ಎಂದು ನಂಬುತ್ತಾರೆ.
ಈ ಗದಾಧರ ಅಂದರೆ ಯಾರು? ಗದಾಧರ ಅನ್ನುವ ಶ್ರೀ ಮಹಾವಿಷ್ಣುವನ್ನು ಹೀಗೆ ವರ್ಣಿಸಿ ಹೇಳುತ್ತಾರೆ:
ಬ್ರಹ್ಮಾಂಡ ಭುವನಾರಂಭ ಮೂಲಸ್ತoಭೋ ಗದಾಧರಃ
ಕೌಮೋದಕೀ ಕರೇ ಯಸ್ಯ ತಂ ನಮಾಮಿ ಗದಾಧರಮ್
ಕೈಯಲ್ಲಿ "ಕೌಮೋದಕೀ" ಹೆಸರಿನ ಗದೆ ಹಿಡಿದು ಈ ಬ್ರಹ್ಮಾಂಡಕ್ಕೆ ಆಧಾರವಾದ ಕಂಭದಂತೆ ನಿಂತಿರುವ ಶ್ರೀ ಮಹಾವಿಷ್ಣುವೇ ಗದಾಧರ.
ಪಕ್ಕದಲ್ಲಿ ಕೊಟ್ಟಿರುವ ಗಯಾ ದೇವಾಲಯದ ಮೂಲ ಮೂರ್ತಿ ಚಿತ್ರವನ್ನು ನೋಡಿದರೆ ಕೌಮೋದಕಿ ಗದೆಯನ್ನು ಕಾಣಬಹುದು.
ಭೂಮಿಯ ಯಾವ ಪ್ರದೇಶದಲ್ಲಿ ಶ್ರಾದ್ಧ ಮಾಡಿ "ಪಿಂಡಪ್ರದಾನ" ಮಾಡಿದರೂ ಅದು ಭೂಲೋಕದಲ್ಲಿ ಮಾಡಿದಂತೆ ಆಗುತ್ತದೆ. ಆದರೆ ಗಯಾದಲ್ಲಿರುವ ಗದಾಧರನ ಪಾದದ ಮೇಲೆ ಅದನ್ನು ಅರ್ಪಿಸಿದಾಗ ಅದು ಅನಂತ ವಿಶ್ವದ ಮೂಲ ಕಂಭದಂತೆ ನಿಂತಿರುವ ಶ್ರೀಹರಿಯ ಪದತಲದಲ್ಲಿ ಅರ್ಪಿಸಿದಂತೆ. ಈ ಕಾರಣಕ್ಕಾಗಿ ಗಯಾ ಪಿಂಡಪ್ರದಾನಕ್ಕೆ ವಿಶೇಷ ಮಹತ್ವ.
ಗಯಾ ದೇವಾಲಯದ ಈ ಗದಾಧರ ಮೂರ್ತಿಯ ಮುಂಭಾಗದಲ್ಲಿ ಇರುವ ಅವನ ಪಾದವನ್ನು ಸ್ವಲ್ಪ ಕೆಳಗಡೆ ಕೊಟ್ಟಿರುವ ಚಿತ್ರದಲ್ಲಿ ಕಾಣಬಹುದು. ಈ ಚಿತ್ರದಲ್ಲಿ ಮಹಾವಿಷ್ಣುವಿನ ಪಾದದಲ್ಲಿರುವ ಧ್ವಜ, ವಜ್ರ, ಅಂಕುಶ ಮುಂತಾದ ರೇಖಾ ಲಕ್ಷಣಗಳನ್ನು ಕಾಣಬಹುದು. ಇವುಗಳ ವಿಶೇಷವನ್ನು ಮುಂದೆ ಸ್ವಲ್ಪ ಮಟ್ಟಿಗೆ ನೋಡೋಣ.
ಪ್ರತಿದಿನ ಸಾವಿರಾರು ಯಾತ್ರಿಕರು ಈ "ವಿಷ್ಣುಪಾದ" ಇರುವ ಕಲ್ಲಿನ ಮೇಲೆ ಪಿಂಡಪ್ರದಾನ ಮಾಡುತ್ತಾರೆ. ಈ ಕಾರಣದಿಂದ ಅಲ್ಲಿ ರಾಶಿ ರಾಶಿ ಪಿಂಡಗಳು ಬಿದ್ದಿರುತ್ತವೆ. ಕೆಲವು ನಿಮಿಷಗಳಿಗೊಮ್ಮೆ ದೇವಾಲಯದ ಕಾರ್ಯಕರ್ತರು ಈ ಪ್ರದೇಶವನ್ನು ಸ್ವಚ್ಛ ಮಾಡುತ್ತಾರೆ. ಕೆಲವರು ಈ ಸಮಯಕ್ಕಾಗಿ ಕಾದುಕೊಂಡಿದ್ದು ಆ ಚಿನ್ಹೆಯಮೇಲೆ ಪಿಂಡಗಳನ್ನು ಹಾಕಿ ಧನ್ಯತಾ ಭಾವ ಹೊಂದುತ್ತಾರೆ.
ಕೆಲವು ಕುಟುಂಬಗಳಲ್ಲಿ, ವಿಶೇಷವಾಗಿ ವೈಷ್ಣವರಲ್ಲಿ, ಮನೆ-ಮಠಗಳಲ್ಲಿ ಮಾಡುವ ಶ್ರಾದ್ಧ ಸಮಯದಲ್ಲಿ ಹೀಗೆ ಗಯಾಯಾತ್ರೆಯ ಸಮಯದಲ್ಲಿ ಅಲ್ಲಿಂದ ತಂದಿರುವ ತಾಮ್ರದ ವಿಷ್ಣು ಪಾದ ಇಟ್ಟು ಪೂಜಿಸಿ, ಅದರ ಮೇಲೆ ಪಿಂಡಪ್ರದಾನ ಮಾಡುವ ಪದ್ಧತಿ ಈಗಲೂ ನಡೆದುಬಂದಿದೆ.
******
ಹಿಂದಿನ ಸಂಚಿಕೆಯಲ್ಲಿ ತಾಯಿ ದೇವಹೂತಿ ಮತ್ತು ಮಗ ಕಪಿಲ ಮುನಿಯ ಸಂವಾದವನ್ನು ಸ್ವಲ್ಪ ನೋಡಿದೆವು. ಜೀವನ-ಮರಣ ಚಕ್ರದಿಂದ ಬಿಡುಗಡೆ ಹೊಂದಲು ಯಾವ ದಾರಿ ಹಿಡಿಯಬೇಕೆಂಬ ಬಗ್ಗೆ ದೇವಹೂತಿ ಕೇಳಿದ ಪ್ರಶ್ನೆಗಳಿಗೆ ಮಗನಾದ ಕಪಿಲ ಮುನಿ ನೀಡಿದ ಉತ್ತರರೂಪದ ಉಪದೇಶ ಶ್ರೀಮದ್ ಭಾಗವತದ ಮೂರನೆಯ ಸ್ಕಂಧದಲ್ಲಿ "ಕಪಿಲ ಗೀತೆ" ಎಂದು ಪ್ರಸಿದ್ಧವಾಗಿದೆ. ಮಹಾಭಾರತದ ಮಧ್ಯದಲ್ಲಿ ಕುರುಕ್ಷೇತ್ರದ ಯುದ್ಧ ಪ್ರಾರಂಭವಾಗುವ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ತಿಳಿಸಿದ "ಶ್ರೀಮದ್ ಭಗವದ್ಗೀತೆ" ಗೀತೆ ಎಂಬ ಹೆಸರಿಂದ ಪ್ರಸಿದ್ಧವಾಗಿದೆ. ಭಾಗವತದ ಮೂರನೆಯ ಸ್ಕಂಧದ ಈ "ಕಪಿಲ ಗೀತೆ" ಮತ್ತು ಹನ್ನೊಂದನೆಯ ಸ್ಕಂಧದ ಶ್ರೀಕೃಷ್ಣ ಉದ್ಧವನಿಗೆ ಮಾಡಿದ ಉಪದೇಶದ "ಉದ್ಧವ ಗೀತೆ" ಇವುಗಳು ಕೂಡ ಭಗವದ್ಗೀತೆಯಂತೆಯೇ ಅನೇಕ ಸಾರಯುತ ವಿಷಯಗಳನ್ನು ಒಳಗೊಂಡಿವೆ.
ಜೀವನ-ಮರಣ ಚಕ್ರದಿಂದ ಬಿಡುಗಡೆಗಾಗಿ ಮಾಡುವ ಸಾಧನೆಯ ಮೊದಲ ಮೆಟ್ಟಿಲು ನಮ್ಮ ಮನಸ್ಸನ್ನು ನಿಯಂತ್ರಿಸಿ ಗಟ್ಟಿ ಮಾಡುವ ಕೆಲಸ. ನಮ್ಮ ಮನಸ್ಸು ಇಡೀ ಪ್ರಪಂಚದಲ್ಲಿ ಅತಿ ವೇಗವಾಗಿ ಓಡುವ ವಸ್ತು. ಅದಕ್ಕೇ ವೇಗದ ಸುದ್ದಿ ಬಂದಾಗಲೆಲ್ಲಾ ವಾಯುವೇಗ, ಮನೋವೇಗ ಅನ್ನುವುದು. ವಾಯುವೇಗಕ್ಕೂ ಮೀರಿದುದು ಮನೋವೇಗ. ಒಂದೇ ಕ್ಷಣದಲ್ಲಿ ವಿಶ್ವವನ್ನೆಲ್ಲಾ ಸುತ್ತಿ ಬರುವುದು ಅದು. ಯಾವುದೇ ಸಾಧನೆಯ ಕೆಲಸ ಮಾಡಲು ತೊಡಗಿದಾಗ ಈ ಮನಸ್ಸನ್ನು ನಿಯಂತ್ರಿಸುವುದೇ ದೊಡ್ಡ ಕಷ್ಟದ ಕಾರ್ಯ.
ಕಪಿಲ ಮುನಿಯ ಉಪದೇಶದಲ್ಲಿ ಇದಕ್ಕೆ ಪರಿಹಾರ ಸಿಕ್ಕುತ್ತದೆ. ಪ್ರಾರಂಭದಲ್ಲಿ ಎಲ್ಲ ಕೆಲಸಗಳೂ ಕಷ್ಟವೇ. ಹುಟ್ಟಿದ ಮಗು ವರುಷ ತುಂಬುವ ವೇಳೆಗೆ ನಡೆಯಲು ಪ್ರಾರಂಭಿಸುತ್ತದೆ. ಅನೇಕ ಸಲ ಬೀಳುತ್ತದೆ. ಮೊದಲು ಗೋಡೆ ಹಿಡಿದು ನಡೆಯುತ್ತದೆ. ನಂತರ ತಾಯಿಯ ಕೈಬೆಟ್ಟು ಹಿಡಿದು ನಡೆಯುತ್ತದೆ. ಕ್ರಮೇಣ ತಾನೇ ಮೆಲ್ಲಮೆಲ್ಲನೆ ನಡೆಯುತ್ತದೆ. ಬಿದ್ದಾಗ ಮತ್ತೆ ಮೇಲೇಳುತ್ತದೆ. ಹೀಗೆ ಮಾಡುತ್ತ ಮಾಡುತ್ತಾ ಕಲಿಯುತ್ತದೆ. ಮನಸ್ಸಿನ ಹತೋಟಿಯೂ ಹೀಗೆಯೇ.
ಕಪಿಲ ಮುನಿಯು ಇದಕ್ಕೆ ಉಪಾಯವಾಗಿ "ಸಜ್ಜನರ ಸಹವಾಸ" ಎನ್ನುವ ಪರಿಹಾರ ಹೇಳುತ್ತಾನೆ. ನಾವು ಚಿಕ್ಕವರಿದ್ದಾಗ ನಮ್ಮ ಹಿರಿಯರು "Tell me who is your friend; I will tell you who you are" ಎಂದು ಒಂದು ಗಾದೆ ಹೇಳುತ್ತಿದ್ದರು. ಜೊತೆಯವರು ಸೋಮಾರಿಗಳಾದರೆ ನಾವೂ ಸೋಮಾರಿಗಳಾಗುತ್ತೇವೆ. ಅವರು ದುರಭ್ಯಾಸಗಳ ದಾಸರಾಗಿದ್ದಾರೆ ನಾವೂ ಹಾಗಾಗುತ್ತೇವೆ. ಅವರು ನಡೆಯುವ ರೀತಿಯೇ ನಮಗೆ ಮಾದರಿ ಆಗುತ್ತದೆ. ಸಾಧನೆಯಲ್ಲಿಯೂ ಹೀಗೆಯೇ. ಆದ್ದರಿಂದ ಮೊದಲು ಸಜ್ಜನರನ್ನು ಹುಡುಕಿ ಅವರ ಸಂಗದಲ್ಲಿ ಆದಷ್ಟೂ ಹೆಚ್ಚು ಕಾಲ ಕಳೆಯಬೇಕು. ಶ್ರೀ ಮೋಹನದಾಸರ ಕೋಲೆ ಪದದಲ್ಲಿ "ಸಜ್ಜನರ ಸಹವಾಸ ಮಲ್ಲಿಗೆ ಮುಡಿದಂತೆ, ದುರ್ಜನರ ಸಂಗ ಮುಲ್ಲಂಗಿ ತಿಂದು ತೇಗಿದಂತೆ ಕೋಲೆ" ಎಂದು ಹೇಳುತ್ತಾರೆ. ಮಲ್ಲಿಗೆ ಹೂವು ಮುಡಿದು ಮಾರನೆಯ ದಿನ ಅದನ್ನು ಬಿಸಾಡಿದರೂ ತಲೆಯಲ್ಲಿ ಮಲ್ಲಿಗೆ ಸುವಾಸನೆ ಇರುವುದು. ಮೂಲಂಗಿಯೂ ಹಾಗೆ. ತಿಂದು ಎಷ್ಟೋ ಹೊತ್ತಿನಮೇಲೆ ತೇಗಿದರೂ ಅದೇ ಕಮಟು ವಾಸನೆಯೇ!
ಆಯಿತು. ಒಪ್ಪೋಣ. ಸಜ್ಜನರ ಸಂಗ ಪ್ರಾರಂಭಿಸಿದೆವು. ಅವರು ದಿನಕ್ಕೆ ಇಪ್ಪತ್ತುನಾಲ್ಕು ಗಂಟೆಯೂ ಹತ್ತಿರವಿರುವುದಿಲ್ಲ. ಮೇಲಾಗಿ, ನಾವು ಒಂಟಿಯಾಗಿದ್ದಾಗ ಮನಸ್ಸು ಹಿಡಿದಿಡುವುದು ಇನ್ನೂ ಕಷ್ಟ. ಅದಕ್ಕೆ ಏನು ಉಪಾಯ?
ಈ ಕಠಿಣ ಮತ್ತು ಜಟಿಲ ಸಮಸ್ಯೆಗೆ ಕಪಿಲ ಮುನಿ ಹೇಳಿ ಕೊಡುವ ಉಪಾಯವೆಂದರೆ ಒಂಟಿಯಾಗಿದ್ದಾಗಲೆಲ್ಲಾ ಪರಮಾತ್ಮನ ಪಾದದ ಬಗ್ಗೆ ಚಿಂತನೆ ಮಾಡುವುದು:
ಸಂಚಿಂತಯೇತ್ ಭಗವತಃ ಚರಣಾರವಿಂದಮo
ವಜ್ರಾoಕುಶ ಧ್ವಜ ಸರೋರುಹ ಲಾಂಛನಾಡ್ಯo
ಉತ್ತುಂಗರಕ್ತವಿಲಸನ್ ನಖಚಕ್ರವಾಳ
ಜ್ಯೋತ್ಸ್ನಾಭಿರಾಹತಾಮಹದ್ ಹೃದಯಾಂಧಕಾರಂ
ಇದು ಭಾಗವತದ ಅತ್ಯಂತ ಪ್ರಸಿದ್ಧವಾದ ಶ್ಲೋಕಗಳಲ್ಲಿ ಒಂದು.
ಪರಮಾತ್ಮನ ಕಮಲಗಳಂತಿರುವ ಪಾದಗಳನ್ನು ಯಾವಾಗಲೂ ನೆನೆಯುತ್ತಿರಬೇಕು. ಅದರಲ್ಲಿ ಮಿಂಚು, ಅಂಕುಶ, ಧ್ವಜ, ಕಮಲ ಮುಂತಾದ ರೇಖೆಗಳಿವೆ. ಆ ಪಾದದ ಬೆರಳುಗಳ ಉಗುರುಗಳಿಂದ ಸದಾಕಾಲವೂ ಚಂದ್ರನ ಬೆಳದಿಂಗಳಿಗಿಂತಲೂ ಅಧಿಕವಾದ (ಬೆಳಕು ಬೆಳದಿಂಗಳಿಗಿಂತ ಕೋಟಿ ಕೋಟಿ ಬಹುಪಾಲು ಹೆಚ್ಚು. ಆದರೆ ಸೂರ್ಯನ ಬೆಳಕಿನಂತೆ ಕಣ್ಣು ಕುಕ್ಕುವುದಲ್ಲ. ಹೀಗೆ) ಆದರೆ ಹಿತವಾದ ಪ್ರಕಾಶ ಹೊರಹೊಮ್ಮುತ್ತಿರುತ್ತದೆ. ಈ ಬೆಳದಿಂಗಳ ಬೆಳಕು ನಮ್ಮ ಹೃದಯ, ಮನಸ್ಸುಗಳಲ್ಲಿರುವ ಕತ್ತಲನ್ನು ಹೊರದೋಡಿಸುತ್ತದೆ. (ಒಮ್ಮೆ ಆ ಕತ್ತಲೆ ಹೋದರೆ ಮುಂದೆ ಎಲ್ಲವೂ ಸುಗಮವಾಗುವುದು ಎಂದು ಭಾವ).
ಕೊಟ್ಟಿರುವ ಚಿತ್ರವನ್ನು ಹಿಗ್ಗಿಸಿ ನೋಡಿದರೆ ಅಥವಾ ಪಕ್ಕದಲ್ಲಿ ಕೊಟ್ಟ್ಟಿರುವ ತಾಮ್ರದ ವಿಷ್ಣುಪಾದವನ್ನು ನೋಡಿದರೆ ಈ ರೇಖೆಗಳನ್ನು ಚೆನ್ನಾಗಿ ಕಾಣಬಹುದು.
*****
ನಮ್ಮ ಮನಸ್ಸುಗಳೂ ಮದವೇರಿದ ಆನೆಗಳಂತೆ. ದಿಕ್ಕಾಪಾಲಾಗಿ ಓಡುತ್ತಿರುತ್ತವೆ. ಎಂತಹ ಮದಿಸಿದ ಆನೆಯಾದರೂ ಮಾವುತನ ಅಂಕುಶ ಅದನ್ನು ಒಂದು ನಿಮಿಷದಲ್ಲಿ ಹಿಡಿತಕ್ಕೆ ತರಬಲ್ಲದು. ಪರಮಾತ್ಮನ ಪಾದಗಳ ಚಿಂತನೆಯಿಂದ ಅದರಲ್ಲಿರುವ ಅಂಕುಶ ನಮ್ಮ ಮನಸ್ಸೆಂಬ ಆನೆಗಳನ್ನು ಹಿಡಿತಕ್ಕೆ ತರುತ್ತದೆ ಎಂದು ಪರ್ಯಾಯವಾದ ಅರ್ಥ.
ಇದೇ ವಿಷಯವನ್ನು ಶ್ರೀ ಕನಕದಾಸರು ತಮ್ಮ "ಕೇಶವನಾಮ" ಕೃತಿಯಲ್ಲಿ (ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನೋ) ಹೀಗೆ ಹೇಳುತ್ತಾರೆ:
ಹಿಂದನೇಕ ಯೋನಿಗಳಲಿ ಬಂದುಬಂದು ನೊಂದೆನಯ್ಯಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದಾಭಷ್ಟನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸೋ ವಿಷ್ಣುವೇ
ಈ ಸಜ್ಜನರ ಸಂಗವನ್ನೇ "ಸತ್ಸಂಗ" ಎಂದು ಪ್ರೀತಿಯಿಂದ ಕರೆಯುವುದು. ಮನಸ್ಸು ನಿಲ್ಲಿಸುವುದು ಬಲು ಕಷ್ಟ. ಆದರೂ ಸತತ ಪ್ರಯತ್ನದಿಂದ ಮತ್ತು ಸಜ್ಜನರ ಸಹವಾಸದಿಂದ ಅದನ್ನು ಸಾಧಿಸಬೇಕು.
It’s highly informative!
ReplyDeleteNice to know about the significance and important aspects of Gadaadhara(Vishnu) deity in Gaya.
ReplyDelete