ಶ್ರೀಹರ್ಷೋ ನಿಪುಣಃ ಕವಿ: ಪರಿಷದಪ್ಯೇಷಾ ಗುಣಗ್ರಾಹಿಣೀಲೋಕೇಹಾರಿಚ ಬೋಧಿಸತ್ವಚರಿತಂ ನಾಟ್ಯೇಚ ದಕ್ಷಾ ವಯಂವಸ್ತ್ವೇಕೈಕಮಪೀಹ ವಾಂಛಿತಫಲಪ್ರಾಪ್ತೇ: ಪದಂ ಕಿಂ ಪುನರ್ಮದ್ಭಾಗ್ಯೋಪಚಯಾದಯಂ ಸಮುದಿತಃ ಸರ್ವೇ ಗುಣಾನಾo ಗಣಃ
"ಶ್ರೀಹರ್ಷ ಕವಿ ನಾಟಕ ರಚಿಸುವುದರಲ್ಲಿ ನಿಪುಣನು. ನಾಟಕ ನೋಡಲು ಬಂದಿರುವ ಸಜ್ಜನರಾದರೋ ಗುಣಗ್ರಾಹಿಗಳು. ಕಥಾವಸ್ತುವು ಎಲ್ಲರ ಮನಸ್ಸು ಗೆಲ್ಲುವ ಬೋಧಿಸತ್ವನ ಕಥೆಯು. ನಮ್ಮ ತಂಡವು ನಾಟಕ ಪ್ರದರ್ಶನ ಕಲೆಯಲ್ಲಿ ಎತ್ತಿದಕೈ. ಇವು ನಾಲ್ಕರಲ್ಲಿ ಒಂದಿದ್ದರೂ ನಾಟಕ ಗೆದ್ದುಬಿಡುವುದು. ನನ್ನ ಪುಣ್ಯ ನೋಡಿ! ಇಂದು ಈ ನಾಲ್ಕೂ ಒಟ್ಟಿಗೆ ಬಂದು ಸೇರಿವೆ! ಇದಕ್ಕಿಂತ ಹೆಚ್ಚಿನ ಸಂಯೋಗ ಬೇರೆ ಇನ್ನೆಲ್ಲುಂಟು?"
ಇದೇ ಕಡೆಯ ಮಾತು ಎಂದೇನಿಲ್ಲ. ಆದರೆ ಬಹಳ ಹಿಂದಿನಿಂದಲೂ ಈ ನಾಲ್ಕು ಅಂಶಗಳಿಗೆ ವಿಶೇಷ ಸ್ಥಾನ ಉಂಟು ಎನ್ನುವುದು ಇದರಿಂದ ತಿಳಿಯಬಹುದು.
*****
ಈ ಹಿನ್ನೆಲಿಯಲ್ಲಿ ನಿನ್ನೆ ನಾವು ನೋಡಿದ "ಮುಖ್ಯಮಂತ್ರಿ" ನಾಟಕದ ಅಪೂರ್ವ ಯಶಸ್ಸಿನ ಕಾರಣಗಳು ಏನೆಂದು ನೋಡಬಹುದು.
1976ರ ಶ್ರೀ ಚಾಣಕ್ಯ ಸೆನ್ ಅವರ ಕಾದಂಬರಿ ಆಧರಿಸಿ ಶ್ರೀ ರಣಜಿತ್ ಕಪೂರ್ ಅವರು ಹಿಂದಿ ನಾಟಕವಾಗಿ ರೂಪಾಂತರಗೊಳಿಸಿದರು. ಶ್ರೀ ಟಿ. ಎಸ್. ಲೋಹಿತಾಶ್ವ ಅದನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಭಾಷಾಂತರ ಸಮಯದಲ್ಲಿ ಕೌಶಲ್, ದುಬೆ, ತ್ರಿಪಾಠಿ, ದೇಸಾಯಿ ಮೊದಲಾದ ಹೆಸರುಗಳನ್ನೇ ಉಳಿಸಿಕೊಂಡಿದ್ದಾರೆ. ಇದರಿಂದ ಕನ್ನಡನಾಡಿನ ಪ್ರೇಕ್ಷಕರು ಈ ಪಾತ್ರಗಳಲ್ಲಿ ಸಮಾನಾಂತರವಾದ ನಮ್ಮ ನಾಡಿನ ರಾಜಕೀಯ ವ್ಯಕ್ತಿಗಳನ್ನು ಸುಲಭವಾಗಿ ಕಂಡರೂ, ಯಾವುದೇ ನಿರ್ದಿಷ್ಟ ರಾಜಕಾರಣಿಯನ್ನು ಗುರಿ ಮಾಡಿದಂತೆ ಇಲ್ಲ. 1980ರಿಂದ ಈವರೆಗೆ ನಲವತ್ತೈದು ವರುಷಗಳು ಕಳೆದಿದ್ದರೂ, ಪ್ರತಿ ಪ್ರದರ್ಶನದಲ್ಲೂ ಕಥಾವಸ್ತು ನಿತ್ಯನೂತನ. ಹೀಗಾಗಿ ಕಥಾವಸ್ತುವಿನ ಅಂಶದಲ್ಲಿ ನಾಟಕ ಗಟ್ಟಿಯಾಗಿ ಉಳಿದಿದೆ.
ಕಥಾವಸ್ತುವಿನ ರೂಪಾಂತರ ಮತ್ತ್ತು ಭಾಷಾಂತರದಲ್ಲಿ ಇರುವ ಬಿಗಿ, ಹಾಸ್ಯಮಿಶ್ರಿತ ಸಂಭಾಷಣೆಗಳು, ಸಮಕಾಲೀನ ಸೊಗಡು, ಇವುಗಳಿಂದ ಕೃತಿ ರಚನಕಾರರ ಚತುರತೆ (ಮೂಲ ಕೃತಿಕಾರರು, ಹಿಂದಿ ರೂಪಾಂತರಕಾರರು, ಮತ್ತು ಕನ್ನಡದ ಭಾಷಾಂತರಕಾರರು) ಎದ್ದು ಕಾಣುತ್ತದೆ. ರಂಗದ ಮೇಲೆ ಬಂದಾಗ ನುರಿತ ನಟರು ಮತ್ತು ನಿರ್ದೇಶಕರ ರಸ ಪೋಷಣೆಯಿಂದ ಈ ಅಂಶವು ಇನ್ನಷ್ಟು ಸ್ಫುಟವಾಗಿ ತೋರುತ್ತದೆ. ಹೀಗೆ ಈ ಅಂಶದಲ್ಲಿಯೂ ನಾಟಕ ಸುಲಭವಾಗಿ ಗೆಲ್ಲುತ್ತದೆ.
"ಕಲಾಗಂಗೋತ್ರಿ" ತಂಡವು ಸುವರ್ಣ ಮಹೋತ್ಸವ ಆಚರಿಸಿ ಮುನ್ನಡೆಯುತ್ತಿರುವ ಕಲಾತಂಡ. ಈ ನಾಟಕದ ಪ್ರದರ್ಶನದಲ್ಲಿ ಅಭಿನಯಿಸುವ ನಟ-ನಟಿಯರು ಎರಡು ರೀತಿಯವರು. ಮೊದಲಿನಿಂದಲೂ ಭಾಗವಹಿಸುತ್ತಿರುವ ಹಿರಿಯ ಕಲಾವಿದರು ಮತ್ತು ಈಗ ಚಿಗುರುತ್ತಿರುವ ಪ್ರತಿಭೆಗಳು, ಎರಡು ರೀತಿಯೂ ಸೇರಿ "ಹೊಸ ಚಿಗುರು - ಹಳೆ ಬೇರು" ಎನ್ನುವಂತೆ ಸೊಗಸಾದ ಅನುಭವವನ್ನು ಕೊಡುತ್ತದೆ. ಡಾ. ಬಿ.ವಿ. ರಾಜಾರಾಂ ಅವರ ನಿರ್ದೇಶನದಲ್ಲಿ ಪ್ರತಿ ಪ್ರದರ್ಶನವೂ "ರಂಗಮಂದಿರ ತುಂಬಿದೆ" ಎಂದು ನಡೆಯುತ್ತಿದೆ.
ನಾಟಕ ನೋಡಲು ಬಂದಿದ್ದ ಪ್ರೇಕ್ಷಕರ ಬಗ್ಗೆ ಒಂದು ಮಾತು. ಅನೇಕ ನಾಟಕ ಪ್ರದರ್ಶನಗಳಲ್ಲಿ ಒಂದು ವರ್ಗದ ಅಥವಾ ಒಂದು ವಯೋಮಾನದ ಜನರನ್ನು ಕಾಣಬಹುದು. ಆದರೆ ನಿನ್ನಿನ ಪ್ರದರ್ಶನದಲ್ಲಿ ಕಂಡಂತೆ ಎಲ್ಲ ವಯಸ್ಸಿನ, ಎಲ್ಲ ಹಿನ್ನೆಲೆಯ ಪ್ರೇಕ್ಷಕರೂ ತುಂಬಿದ್ದರು. ಹಿತೈಷಿಗಳೊಬ್ಬರು ಮೊದಲೇ ಎಚ್ಚರಿಸಿದ್ದರಿಂದ ಮುಂಗಡ ಬುಕಿಂಗ್ ಮಾಡಿದ್ದುದು ಒಳಿತಾಯಿತು. ಇಲ್ಲದಿದ್ದಲ್ಲಿ ನಿರಾಶರಾಗಿ ಹೊರಬರಬೇಕಿತ್ತು.
"ಮುಖ್ಯಮಂತ್ರಿ ಚಂದ್ರು" ಮುಖ್ಯಮಂತ್ರಿ ಕೆ. ಡಿ. ಕೌಶಲ್ (ಕೇಡಿ ಕೌಶಲ್?) ಪಾತ್ರದಲ್ಲಿ ಎಂದಿನಿಂದಲೋ ಮನೆಮಾತಾಗಿದ್ದಾರೆ. ನಾಟಕ ಮುಗಿದನಂತರ ಅವರೊಡನೆ ಫೋಟೋ ತೆಗೆಸಿಕೊಳ್ಳಲು ಒಂದು ಸರತಿಯ ಸಾಲೇ ಇರುತ್ತದೆ. (ಹೀಗೆ ಅವರೊಡನೆ ನಾವು ತೆಗೆಸಿಕೊಂಡ ಫೋಟೋವನ್ನು ಮೇಲೆ ನೋಡಬಹುದು). ರಾತ್ರಿ ಕಾಲ, ಸಮಯ ಮೀರಿದ್ದರೂ ತಮ್ಮನ್ನು ಮಾತನಾಡಿಸಲು ಬಂದ ಪ್ರತಿಯೊಬ್ಬರೊಡನೆ ಅವರು ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದ ರೀತಿ ಇತರರಿಗೆ ಒಂದು ಮಾದರಿ.
ಹೀಗೆ ನೋಡಿದಾಗ ನಾಗಾನಂದ ನಾಟಕದ ಸೂತ್ರಧಾರನು ಹೇಳುವ ನಾಲ್ಕು ಅಂಶಗಳಲ್ಲೂ "ಮುಖ್ಯಮಂತ್ರಿ" ನಾಟಕ ಗೆಲ್ಲುವುದೇ ಅದರ ಯಶಸ್ಸಿನ ರಹಸ್ಯ.
*****
ಕಲಾಗಂಗೋತ್ರಿ ತಂಡವು ತನ್ನ ಸುವರ್ಣ ಮಹೋತ್ಸವ ಕಾಲದಲ್ಲಿ ಡಾ. ಕೆ. ವೈ. ನಾರಾಯಣಸ್ವಾಮಿ ಅವರಿಂದ "ಮತ್ತೆ ಮುಖ್ಯಮಂತ್ರಿ" ಎಂದು ಮತ್ತೊಂದು ನಾಟಕವನ್ನು ಬರೆಸಿದೆ. ಈ ನಾಟಕವೂ ಕಳೆದ ಎರಡು-ಮೂರು ವರುಷಗಳಲ್ಲಿ ಕೆಲವು ಪ್ರದರ್ಶನಗಳನ್ನು ಕಂಡಿದೆ. ಅಧಿಕಾರ ಉಳಿಸಿಕೊಳ್ಳಲು ಏನೇನೋ ಕಸರತ್ತು ಮಾಡುವ ಮುಖ್ಯಮಂತ್ರಿಯ ಬದಲಾಗಿ ಇಲ್ಲಿ ಆದರ್ಶ, ಸಿದ್ಧಾಂತಗಳಿಗಾಗಿ ತನ್ನ ಅಧಿಕಾರವನ್ನು, ಮತ್ತು ಕಡೆಗೆ ಪ್ರಾಣವನ್ನೂ ಬಲಿಕೊಡುವ "ಮುಖ್ಯಮಂತ್ರಿ ಶೀಲವಂತ" ಎನ್ನುವ ವ್ಯಕ್ತಿಯ ಚಿತ್ರಣ ಇಲ್ಲುಂಟು. ಈ ನಾಟಕ ನೋಡುವ ಸುಯೋಗ ಇನ್ನೂ ನಮಗೆ ಸಿಕ್ಕಿಲ್ಲ.
"ಮುಖ್ಯಮಂತ್ರಿ" ನಾಟಕ ಇನ್ನು ಕೆಲವೇ ದಿನಗಳಲ್ಲಿ ತನ್ನ 900 ಪ್ರದರ್ಶನಗಳನ್ನು ದಾಟಲಿದೆ. ಅದರ "ಸಹಸ್ರ ಪ್ರದರ್ಶನ" ನಡೆವ ದಿನವೂ ಹತ್ತಿರದಲ್ಲಿಯೇ ಇದೆ.

No comments:
Post a Comment