ಹಿಂದಿನ ಒಂದು ಸಂಚಿಕೆಯಲ್ಲಿ, "ಅನಘ ನಿನ್ನ ನೋಡಿ ಮೋಹಿಸಿ" ಎನ್ನುವ ಶೀರ್ಷಿಕೆಯಡಿ ಶ್ರೀ ವಿಜಯದಾಸರ "ನಿನ್ನನಗಲಿ ಪೊಗಲಾರೆವೋ, ನೀರಜಾಕ್ಷ" ಎನ್ನುವ ಪದದ ಬಗ್ಗೆ ಸ್ವಲ್ಪ ವಿಚಾರ ಮಾಡಿದ್ದೆವು. ಈ ಸಂಚಿಕೆಯನ್ನು ಇಲ್ಲಿ ಕ್ಲಿಕ್ ಮಾಡಿ ಓದಬಹುದು ಮತ್ತು ಶ್ರೀ ವಿದ್ಯಾಭೂಷಣರು ಹಾಡಿರುವ ಈ ಪದವನ್ನು ಕೇಳಬಹುದು. ಇದೇ ಹಿನ್ನೆಲೆಯ ಶ್ರೀ ಪು. ತಿ. ನ. ಅವರ "ಕೃಷ್ಣನ ಕೊಳಲಿನಾ ಕರೆ" ಗೀತೆಯನ್ನೂ ಕೇಳಬಹುದು.
ಶ್ರೀ ವಿಜಯದಾಸರ ನೇರ ಶಿಷ್ಯರು ಶ್ರೀ ಗೋಪಾಲದಾಸರು. ಅವರ "ನಾಳೆ ಬರುತೇನೆಂದು ಹೇಳಿ ಮಧುರೆಗೆ ಪೋಗಿ ಬಹಳದಿನ ಆಯಿತಲ್ಲೋ, ಉದ್ಧವಾ" ಅನ್ನುವ ಹಾಡು ಇದರ ಮುಂದಿನ ಭಾಗ ಅನ್ನುವಂತೆ ಇದೆ. ಅದರ ಬಗ್ಗೆ ಈಗ ಸ್ವಲ್ಪ ವಿಚಾರ ಮಾಡೋಣ.
*****
ಮೊದಲಿಗೆ ಈ ಉದ್ಧವ ಯಾರು? ಅವನು ಈ ಗೋಪಿಯರನ್ನು ಕಂಡದ್ದು ಏಕೆ ಮತ್ತು ಎಲ್ಲಿ? ಇದರ ಹಿನ್ನೆಲೆ ತಿಳಿಯುವುದು ಬಹಳ ಅವಶ್ಯಕ. ಮಹಾಭಾರತ ಮತ್ತು ಶ್ರೀಮದ್ಭಾಗವತ ಮುಂತಾದ ಗ್ರಂಥಗಳಲ್ಲಿ ಬರುವ ಅನೇಕ ಶ್ರೀಕೃಷ್ಣ ಭಕ್ತರಲ್ಲಿ ಉದ್ಧವನೂ ಒಬ್ಬ. ಶ್ರೀಕೃಷ್ಣನ ಭಕ್ತರು ಅನೇಕ ಹಿನ್ನೆಲೆಯವರು. ಒಂದೆಡೆ ಭೀಷ್ಮ, ದ್ರೋಣ ಮುಂತಾದ ಹಿರಿಯರು ಉಂಟು. ಮತ್ತೊಂದೆಡೆ ವಿದುರ, ಅಕ್ರೂರ ಮೊದಲಾದವರೂ ಉಂಟು. ಸೋದರತ್ತೆಯ ಮಕ್ಕಳಾದ ಪಾಂಡವರು ಸೇರಿದ್ದಾರೆ. ಉದ್ಧವ, ಸಾತ್ಯಕಿ ಮುಂತಾದ ಯಾದವರೂ ಉಂಟು. ಸುದಾಮನಂತಹ ಸಹಪಾಠಿಯೂ ಉಂಟು. ಕುಬ್ಜೆಯಂತಹ ಕಂಸನ ದಾಸಿಯೂ ಹೌದು. ಬೃಂದಾವನದ ವಾಸಿಗಳಾದ ಗೋಪಿಕೆಯರ ಭಕ್ತಿಯಂತೂ ಜನಜನಿತ. ಹೀಗೆ ಶ್ರೀಕೃಷ್ಣನ ಭಕ್ತರ ಬಳಗ ಬಹಳ ದೊಡ್ಡದು.
ಅರ್ಜುನಂತೆ ಉದ್ಧವನೂ ಶ್ರೀಕೃಷ್ಣನಿಗೆ ಹತ್ತಿರದ ನೆಂಟ. ಅವನು ಶ್ರೀಕೃಷ್ಣನಿಗೆ ಎರಡೂ ಕಡೆಯ ಬಂಧು. ಒಂದು ಕಡೆ ಶ್ರೀಕೃಷ್ಣನ ಚಿಕ್ಕಪ್ಪನ ಮಗ. ಇನ್ನೊಂದು ಕಡೆ ಅರ್ಜುನನಂತೆ ಸೋದರತ್ತೆಯ ಮಗ. ಉದ್ಧವನ ಅಪ್ಪ ಕೃಷ್ಣನ ತಂದೆ ವಸುದೇವನ ತಮ್ಮನಾದ ದೇವಭಾಗ. ಉದ್ಧವನ ತಾಯಿ ದೇವಕಿಯಂತೆ ಕೃಷ್ಣನ ಸೋದರಮಾವ ಕಂಸನ ತಂಗಿ ಕಂಸೆ. ಈ ಕಾರಣಗಳಿಂದ ಉದ್ಧವನಿಗೂ ಶ್ರೀಕೃಷ್ಣನಿಗೂ ನೋಡಲು ಬಹಳ ಹೋಲಿಕೆ ಇತ್ತಂತೆ. ಅವನು ಶ್ರೀಕೃಷ್ಣನಿಗಿಂತ ಒಂದೋ ಎರಡೋ ವರುಷ ದೊಡ್ಡವನಂತೆ. ವಯಸ್ಸಿನಲ್ಲೂ ಹೆಚ್ಚು ವ್ಯತ್ಯಾಸವಿಲ್ಲ. ಶ್ರೀಕೃಷ್ಣನ ರೀತಿಯಲ್ಲಿಯೇ ವೇಷ-ಭೂಷಣ ತೊಡುತ್ತಿದ್ದನಂತೆ. (ಮೇಲಿನ ಚಿತ್ರ ಈ ರೀತಿಯ ಹೋಲಿಕೆಯ ಮೇಲೆಯೇ ಚಿತ್ರಿಸಿದ್ದಾರೆ).
ಉದ್ಧವ ಐದು ವರುಷದ ಚಿಕ್ಕ ಮಗುವಾಗಿದ್ದಾಗ ಅವನ ತಾಯಿ ಊಟದ ಸಮಯದಲ್ಲಿ ಭೋಜನಕ್ಕೆ ಕರೆದರೆ, "ಅಮ್ಮಾ, ಕೃಷ್ಣನ ಪೂಜೆ ಇನ್ನೂ ಮುಗಿದಿಲ್ಲ. ನನಗೆ ಹಸಿವಿಲ್ಲಾ ಅಮ್ಮ" ಅನ್ನುತ್ತಿದ್ದನಂತೆ. ಐದು ವರುಷದ ಉದ್ಧವನಿಗೆ ಮೂರು-ನಾಲ್ಕು ವರುಷದ ಕೃಷ್ಣನ ಪೂಜೆ ಹೇಗೆ? ಅದೂ ಕೃಷ್ಣ ಇದ್ದದ್ದು ಗೋಕುಲದಲ್ಲಿ. ಉದ್ಧವ ಇದ್ದದ್ದು ಮಧುರೆಯಲ್ಲಿ. ಹೀಗೆಂದು ಅನೇಕ ಪ್ರಶ್ನೆಗಳನ್ನು ಮಾಡಬಹುದು. ಲೌಕಿಕ ದೃಷ್ಟಿಯಿಂದ ಈ ಪ್ರಶ್ನೆಗಳು ಸಮಂಜಸವೇ. ಕೌರವ-ಪಾಂಡವರಿಗೆ ಅಜ್ಜನಾದ ಭೀಷ್ಮರಿಗೆ ಅವರ ಮೊಮ್ಮಕ್ಕಳ ಜೊತೆಯ ಕೃಷ್ಣನಲ್ಲಿ ಹೇಗೆ ಭಕ್ತಿ? ತಂದೆಯ ವಯಸ್ಸಿನವನಾದ ವಿದುರನಿಗೆ ಹೇಗೆ? ಭಕ್ತಿಯ ಸೆಲೆ ಮತ್ತು ಸೆಳೆತ, ಇವೆರಡೂ ಯಾವುದೇ ತರ್ಕಕ್ಕೆ ನಿಲುಕುವುದಿಲ್ಲ ಅನ್ನುವುದು ಅವರವರ ಅನುಭವದಿಂದ ತಿಳಿದುಕೊಳ್ಳಬೇಕಾದ ವಿಷಯ.
*****
ಶ್ರೀಕೃಷ್ಣನಿಗೆ ಉದ್ಧವ ತನ್ನಲ್ಲಿಟ್ಟಿರುವ ಭಕ್ತಿಯ ಆಳ ಚೆನ್ನಾಗಿ ಗೊತ್ತಿತ್ತು. ಆದ್ದರಿಂದ ತಾನು ದೇಹತ್ಯಾಗ ಮಾಡುವ ಬಹಳ ಮೊದಲೇ ಉದ್ಧವನು ತನ್ನ ವಿರಹ ಸಹಿಸಲಾರನು ಎಂದು ತಿಳಿದು ಅವನನ್ನು ಹರಿದ್ವಾರಕ್ಕೆ ಕಳಿಸಿದ್ದನು ಎಂದು ಭಾಗವತ ಹೇಳುತ್ತದೆ. ಮಹಾಭಾರತದಲ್ಲಿ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ, ಎರಡು ಸೈನ್ಯಗಳ ನಡುವೆ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶ ಮಾಡಿದ "ಭಗವದ್ಗೀತೆ" ಲೋಕ ಪ್ರಸಿದ್ಧ. ಹೀಗೆಯೇ ಶ್ರೀಮದ್ಭಾಗವತದ ಹನ್ನೊಂದನೆಯ ಸ್ಕಂಧದಲ್ಲಿ ಶ್ರೀಕೃಷ್ಣನು ಉದ್ಧವನಿಗೆ ಉಪದೇಶಿದ ಭಾಗವು "ಉದ್ಧವ ಗೀತೆ" ಎಂದು ಹೆಸರಾಗಿದೆ. ಗಾತ್ರದಲ್ಲಿ ಇದು ಭಗವದ್ಗೀತೆಯ ಸುಮಾರು ಎರಡರಷ್ಟಿದೆ. ಸುಮಾರು ಸಾವಿರದ ಎರಡುನೂರು ಶ್ಲೋಕಗಳು. ಇದು ಶ್ರೀಕೃಷ್ಣನು ದೇಹತ್ಯಾಗ ಮಾಡುವ ಮೊದಲು ಜಗತ್ತಿಗೆ ನೀಡಿದ ಕೊನೆಯ ಸಂದೇಶ ಎನ್ನಬಹುದು.
ಶ್ರೀಕೃಷ್ಣನು ತನ್ನ ಬಗ್ಗೆ ಗೋಕುಲದ ಗೋಪಿಯರ ಉತ್ಕಟ ಪ್ರೀತಿಯನ್ನು ಉದ್ಧವನಿಗೆ ಪರಿಚಯ ಮಾಡಿಸುವ ಸಲುವಾಗಿ ಅವನ ಮೂಲಕ ಗೋಪಿಯರಿಗೆ ಸಂದೇಶವೊಂದನ್ನು ಕಳಿಸಿಕೊಡುತ್ತಾನೆ. ಸಂದೇಶ ಕೊಂಡೊಯ್ದ ಉದ್ಧವನಿಗೆ ಗೋಕುಲದ ಪರಿಸರ, ಗೋಪಿಕೆಯರು ಶ್ರೀಕೃಷ್ಣನನ್ನು ಕಳೆದುಕೊಂಡು ಪರಿತಪಿಸುತ್ತಿರುವುದು, ಅವರ ಎಣೆಯಿಲ್ಲದ ಕೃಷ್ಣ ಭಕ್ತಿ, ಮುಂತಾದುವು ದಿವ್ಯವಾದ ಅನುಭವವನ್ನು ಕೊಡುತ್ತವೆ. ಅಕ್ರೂರ "ಬಿಲ್ಲು ಹಬ್ಬ" ನಿಮಿತ್ತ ಶ್ರೀಕೃಷ್ಣನನ್ನು ಕಂಸನ ಆದೇಶದ ಪ್ರಕಾರ ಕರೆತರಲು ಹೋದಾಗ ಗೋಕುಲದ ಹತ್ತಿರ ಹತ್ತಿರ ಬರುತ್ತಿದ್ದಂತೆ ಎಲ್ಲೆಲ್ಲೂ ಶ್ರೀಕೃಷ್ಣನ ಹೆಜ್ಜೆ ಗುರುತುಗಳನ್ನು ಕಂಡನಂತೆ. ಅವನ ಹೆಜ್ಜೆ ಮೇಲೆ ತಾನು ಹೆಜ್ಜೆಯಿಟ್ಟು ನಡೆಯುವುದು ಹೇಗೆ? ಅದು ಸಾಧ್ಯವಿಲ್ಲ. ಆದ್ದರಿಂದ ಅಲ್ಲಿಂದ ಮುಂದೆ ಮೊಣಕಾಲ ಮೇಲೆ ತೆವಳುತ್ತಾ ಹೋದನಂತೆ! ಉದ್ಧವನಿಗೂ ಅದೇ ಅನುಭವ ಆಯಿತು.
ಶ್ರೀಕೃಷ್ಣ ಗೋಪಿಯರಿಗೆ "ಚಿಂತೆ ಮಾಡಬೇಡಿ. ಬಿಲ್ಲು ಹಬ್ಬಕ್ಕೆ ಹೋಗುತ್ತಿದ್ದೇನೆ. ಒಂದೇ ದಿನ. ನಾಳೆ ಬಂದುಬಿಡುತ್ತೇನೆ" ಎಂದು ಹೇಳಿ ಹೋದವನು. ಅವನು ಮತ್ತೆ ಗೋಕುಲಕ್ಕೆ ಬರಲೇ ಇಲ್ಲ. ಕಂಸನ ವಧೆಯ ನಂತರ ಮಥುರೆ ನಗರದಲ್ಲಿಯೇ ಉಳಿದನು. ನಂತರ ಜರಾಸಂಧನ ಕಾಟದ ಕಾರಣ ಸಮುದ್ರ ಮಧ್ಯದ ದ್ವಾರಕಾ ನಗರ ನಿರ್ಮಿಸಿ ಯಾದವರ ಸಹಿತ ಅಲ್ಲಿಗೆ ಹೊರಟು ಹೋದನು. ಸಂದೇಶ ತಂದ ಉದ್ಧವನನ್ನು ಕಂಡು ಗೋಪಿಯರಿಗೆ ಒಂದು ರೀತಿ ಶ್ರೀಕೃಷ್ಣನನ್ನು ಕಂಡಂತೆಯೇ ಆಯಿತು. ಕ್ಷಣ ಕಾಲ ಇಬ್ಬರಲ್ಲಿದ್ದ ಸಾಮ್ಯ ಕೆಲಸ ಮಾಡಿತು. ತಕ್ಷಣವೇ ವ್ಯತ್ಯಾಸ ಮುಂದೆ ಕಂಡಿತು. ಅವನಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ಅದನ್ನೇ ಶ್ರೀ ಗೋಪಾಲದಾಸರು "ನಾಳೆ ಬರುತೇನೆಂದು" ಕೃತಿಯಲ್ಲಿ ವಿವರಿಸಿದ್ದಾರೆ.
ಉದ್ಧವನಿಗೆ ಗೋಪಿಯರು ಶ್ರೀಕೃಷ್ಣನಲ್ಲಿ ಇರಿಸಿದ್ದ ಅಪಾರ ಭಕ್ತಿ-ಪ್ರೇಮಗಳನ್ನು ಕಂಡು ಆಶ್ಚರ್ಯವೂ, ಹೀಗೂ ಇರಬಹುದೇ ಎನ್ನುವ ದಿಗ್ಭ್ರಮೆಯೂ ಆಯಿತಂತೆ. "ನನಗೆ ಇನ್ನೊಂದು ಜನ್ಮದಲ್ಲಿ ಗೋಕುಲದಲ್ಲಿ ಒಂದು ಮರವಾಗಿ, ಗಿಡವಾಗಿ ಅಥವಾ ಈ ಗೋಪಿಯರು ನಡೆದಾಡುವ ನೆಲದಲ್ಲಿ ಅವರ ಕಾಲ ಕೆಳಗೆ ಸಿಗುವ ಹುಲ್ಲಾಗಿ ಹುಟ್ಟಿಸು, ಕೃಷ್ಣಾ" ಅಂದನಂತೆ. ಗೋಪಿಯರ ಅಲೌಕಿಕ ಭಕ್ತಿ-ಪ್ರೇಮಗಳ ಪರಾಕಾಷ್ಠತೆ ಅಂತಹುದು. ಕೃಷ್ಣ-ಗೋಪಿಕೆಯರದು ಒಂದು ರೀತಿಯ ಚೆಲ್ಲಾಟ ಅನ್ನುವವರಿಗೆ ಅದು ಅರ್ಥವಾಗುವುದಿಲ್ಲ.
*****
"ನಾಳೆ ಬರುತೇನೆಂದು ಹೇಳಿ ಮಧುರೆಗೆ ಪೋಗಿ ಬಹಳ ದಿನ ಆಯಿತಲ್ಲೋ, ಉದ್ಧವಾ" ಅನ್ನುವ ಕೃತಿ ಐದು ನುಡಿಗಳದ್ದು. ದುಃಖಿತ ಮನಸ್ಸುಗಳ ಓಟ ಯಾವುದೇ ತರ್ಕಬದ್ಧ ವ್ಯವಹಾರಕ್ಕೆ ಒಗ್ಗುವುದಿಲ್ಲ. ಅಂತಹ ವ್ಯಕ್ತಿಯ ಚಿಂತನೆ ಹೀಗೊಮ್ಮೆ-ಹಾಗೊಮ್ಮೆ ಲೋಲಕದಂತೆ ತೂಗಾಡುತ್ತದೆ. ಒಮ್ಮೆ ವಾಸ್ತವ ವಿಷಯಗಳ ನೆಲೆಗಟ್ಟಲ್ಲಿ ನಿಂತಿರುತ್ತದೆ. ಮರು ಕ್ಷಣ ಕಲ್ಪನೆಯಲ್ಲಿ ಓಡುತ್ತದೆ. ಮತ್ತೊಂದು ಕ್ಷಣ ಜ್ಞಾನಿಯಂತೆ ಚಿಂತಿಸುತ್ತದೆ. ತಕ್ಷಣವೇ ಹುಚ್ಚನಂತೆ ಅಲೆದಾಡುತ್ತದೆ. ಗೋಪಿಯರ ಉದ್ಧವನ ಬಳಿ ಗೋಳಾಟ ಇದೆಲ್ಲವನ್ನೂ ಪ್ರತಿನಿಧಿಸುತ್ತದೆ.
ಹಾಡನ್ನು ಕೇಳುವಾಗ ಈ ಕೆಳಗಿನ ಅಂಶಗಳನ್ನು ಗಮನಿಸಬಹುದು:
- "ನಾವು ಹಳ್ಳಿಯ ಹೆಣ್ಣುಮಕ್ಕಳು. ದನ ಕಾಯುವವರು. ಚೆನ್ನಾಗಿ ಅಲಂಕರಿಸಿಕೊಳ್ಳಲು ತಿಳಿಯೆವು. ಅವನೋ ಮಥುರಾ ಪಟ್ಟಣಕ್ಕೆ ಹೋದ. ನಗರದ ಸ್ತ್ರೀಯರ ಥಳಕು-ಬಳುಕಿನ ಮುಂದೆ ನಾವೆಲ್ಲಿ? ಅವರ ಮಧ್ಯದಲ್ಲಿ ಸೇರಿ ಅವನು ಅವನು ಮರೆತನು" ಅನ್ನುವರು. ಹೀಗೆ ಹೇಳಿದರೂ ಮರು ಕ್ಷಣವೇ "ಅವನ ಮಹಿಮೆ ತಿಳಿಯಲಿಲ್ಲ" ಎಂದು ಹಲಬುವರು.
- ಅವನು ಪರಮಾತ್ಮನು ಎಂಬ ಅರಿವು ತಕ್ಷಣವೇ ಮೂಡುತ್ತದೆ. "ಅವನು ನಮ್ಮ ಒನಪು-ವಯ್ಯಾರಗಳಿಗೆ ಸಿಗುವವನಲ್ಲ. ಅವನು ನಿತ್ಯ ತೃಪನಾದ ಆನಂದರೂಪ. ಅಂತಹವನು ನಮ್ಮ ಬೆಣ್ಣೆ ಕದ್ದ ಕಳ್ಳ ಎಂದು ಆರೋಪಿಸಿ ತಪ್ಪು ಮಾಡಿದೆವಲ್ಲಾ" ಎಂದು ಕೊರಗುತ್ತಾರೆ.
- "ಅನಾದಿ ಮೂರ್ತಿಯನ್ನು ನಮ್ಮ ಜೊತೆಯವನು ಎಂದುಕೊಂಡೆವು. ನಾವು ದರಿದ್ರರು. ಅವನೋ ಲಕ್ಷ್ಮೀರಮಣ. ಚತುರ್ಮುಖ ಬ್ರಹ್ಮನ ತಂದೆ. ನಮಗೆ ಹೇಗೆ ಕೈವಶನಾದಾನು?". ಹೀಗೆನ್ನುವಾಗ ಅವರ ಜ್ಞಾನದ ಮಜಲು ತಿಳಿಯುತ್ತದೆ. ಅದು ಒಂದು ಕ್ಷಣ ಕಾಲ ಜ್ಞಾನ. ಮತ್ತೆ ಅಜ್ಞಾನ ಆವರಿಸುತ್ತದೆ.
- ರಾಸಕ್ರೀಡೆ, ಜಲಕ್ರೀಡೆಯ ಕಡೆ ಮನಸ್ಸು ಕೊಟ್ಟು ನಮ್ಮ ಹತ್ತಿರದಲ್ಲೇ ಇದ್ದ ಪರಮಾತ್ಮನನ್ನು ನಾವು ತಿಳಿಯಲಿಲ್ಲ. ನಮ್ಮನು ಬಿಟ್ಟು ಇವನೆಲ್ಲಿ ಹೋದಾನು? ಹೀಗೆ ಯೋಚಿಸಿ ಅಹಂಕಾರದಿಂದ ವ್ಯವಹರಿಸಿದೆವು. ಕಾಲ ವ್ಯರ್ಥ ಆಯಿತು. ಮೋಸ ಹೋದೆವು" ಎಂದು ಮರುಗುತ್ತಾರೆ.
- "ಎಲ್ಲ ಗೋಪಿಯರು ಸೇರಿ ಅವನ ರಥದ ಸುತ್ತ ಮಲಗಿ ರಥ ನಿಲ್ಲಿಸಿ, ಅವನನ್ನು ಕಳಿಸಬಾರದಿತ್ತು. ಹಾಗೆ ಮಾಡಲಿಲ್ಲ" ಎಂದು ದುಃಖಿಸುತ್ತಾರೆ. ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಗೊತ್ತು. ಆದರೆ ದುಃಖ ಹಾಗೆ ಹೇಳಿಸುತ್ತದೆ. ಉದ್ಧವನನ್ನೇ ಮುಂದಿನ ದಾರಿ ತೋರಿಸಲು ಕೇಳುತ್ತಾರೆ.
ಕೃಷ್ಣ ಹೋದಂದಿನಿಂದ ಗೋಪಿಯರಿಗೆ ಜೀವನದಲ್ಲಿ ಉತ್ಸಾಹವೇ ಹೋಯಿತು. ಆಮೇಲೆ ಹೇಗೆ ಬದುಕಿದರೋ ಅವರಿಗೇ ಗೊತ್ತಿಲ್ಲ. ಇದು ಅವರ ಪರಿಸ್ಥಿತಿ. (ಮೇಲಿನ ಚಿತ್ರದಲ್ಲಿ ಉದ್ಧವನು ಅವರನ್ನು ನೋಡಿದಾಗ ಅವರು ಇದ್ದ ರೀತಿಯನ್ನು ಚಿತ್ರಿಸಿದ್ದಾರೆ). ಇದು ಉದ್ಧವನು ಗೋಕುಲದಲ್ಲಿ ಕಂಡ ನೋಟ.
*****
ಎಂತಹ ತಪಸ್ವಿಗಳಿಗೂ, ಸಾಧಕರಿಗೂ ಪರಮಾತ್ಮನ ನೋಟ, ಸಾನ್ನಿಧ್ಯ ಸದಾಕಾಲವೂ ಇರುವುದಿಲ್ಲ ಎನ್ನುವುದು ಒಂದು ಪ್ರಮೇಯ. ಅವರವರ ಸಾಧನೆಗೆ ತಕ್ಕಂತೆ ಅದು ಸಿಗುತ್ತದಂತೆ. ಬಹುತೇಕ ಅದು ಮಿಂಚಿನಂತೆ ಒಂದು ಕ್ಷಣ ಕಂಡು ಮಾಯಾವಾಗುತ್ತದೆ ಅನ್ನುತ್ತಾರೆ, ತಿಳಿದವರು. ಗೋಪಿಕೆಯರಿಗೆ ಅಷ್ಟು ಕಾಲ ಶ್ರೀಕೃಷ್ಣನು ಸಿಕ್ಕಿದ್ದೇ ಹೆಚ್ಚು. ಆದ್ದರಿಂದ ಅವರು ಧನ್ಯರು!
ಶ್ರೀ ಅನಂತ ಕುಲಕರ್ಣಿ ಅವರು ಹಾಡಿರುವ ಈ ಗೀತೆಯನ್ನು ಕೆಳಗೆ ಕ್ಲಿಕ್ ಮಾಡಿ ಕೇಳಬಹುದು:
